ಅತ್ಯಂತ ಪುರಾತನ ನಾಟಕ ಕಂಪನಿಯೊಂದರ ಹಳೆಯ – ಒಳ್ಳೆಯ ಒಂದು ನಾಟಕದ ಪರಿಚಯ ಪತ್ರ. . :

ಕಂಪನಿಯ ಹೆಸರು: ಬ್ರಹ್ಮಾಂಡ . .
ಕಂಪನಿಯ ಕೇಂದ್ರ ಕಛೇರಿ
: ವೈಕುಂಠ..
ಕಂಪನಿಯ ಯಜಮಾನರು : ನಾರಾಯಣಪ್ಪ . . .

ಜಗದೀಶನಾಡುವಾ . . . ಜಗವೇ ನಾಟಕರಂಗ . . . !

ಕಂಪನಿಯ ಯಜಮಾನಿ: ಮಹಾಲಕ್ಷ್ಮಮ್ಮ . .
ಕಂಪನಿಯ ಇತಿಹಾಸ
: ಎಷ್ಟು ಹಿಂದಿನದೆಂಬುದು ಯಾರಿಗೂ ಗೊತ್ತಿಲ್ಲ…!!
ನಾಟಕ ಪ್ರದರ್ಶನ ಸಮಯ
: ಪ್ರತಿ ಕ್ಷಣ. .!
ನಾಟಕ ಪ್ರದರ್ಶನ ಸ್ಥಳ
: ಎಲ್ಲೆಲ್ಲಿಯೂ. .!!

ಲೆಖ್ಖವೇ ಇಲ್ಲದಷ್ಟು ನಾಟಕಗಳು ಈ ಕಂಪನಿಯ ಕಡೆಯಿಂದ ಪ್ರದರ್ಶಿತಗೊಂಡಿವೆ,
ಆದರೆ, ಯುಗಗಳ ಹಿಂದೆ ಪ್ರದರ್ಶಿತಗೊಂಡ ರಾಮಾಯಣದಂಥ ನಾಟಕ ಮತ್ತೊಂದಿಲ್ಲ…!

ಇದು ಮೊದಲಬಾರಿಗೆ ಪ್ರದರ್ಶನಗೊಂಡಿದ್ದು  ತ್ರೇತಾಯುಗದಲ್ಲಿ, ಭಾರತವರ್ಷವೆಂಬ  ರಂಗಮಂದಿರದಲ್ಲಿ..!
ಸಾಮಾನ್ಯ  ನಾಟಕಗಳು ಹೌಸ್ ಫುಲ್ ಪ್ರದರ್ಶನಗಳನ್ನು ಕಂಡರೆ, ಈ ನಾಟಕ ಕಂಡದ್ದು ಹಾರ್ಟ್ ಫುಲ್ ಪ್ರದರ್ಶನಗಳನ್ನು..!
ಪ್ರಥಮ ಪ್ರದರ್ಶನದಲ್ಲಿಯೇ ಕಂಪೆನಿಗೆ ‘ರಾಮರಾಜ್ಯ’ ಪ್ರಶಸ್ತಿಯನ್ನು  ತಂದುಕೊಟ್ಟುದು ಇದರ ಹೆಗ್ಗಳಿಕೆ..!

ವಿಶೇಷ ಆಕರ್ಷಣೆ: ಕಂಪೆನಿಯ ಮಾಲೀಕರೇ ರಾಮ-ಲಕ್ಷ್ಮಣ-ಭರತ-ಶತ್ರುಘ್ನರೆಂಬ ಚತುಷ್ಪಾತ್ರಗಳಲ್ಲಿ..!
ಸ್ವಾರಸ್ಯವೆಂದರೆ: ಮಾಲೀಕರು ಖುದ್ದಾಗಿ ನಾಯಕನ ಪಾತ್ರವಹಿಸಿದ್ದಲ್ಲದೇ, ಅವರ ಹೆಂಡತಿ, ಮಕ್ಕಳು ಸೇವಕರು ಎಲ್ಲರೂ ನಾಟಕದಲ್ಲಿ ಪಾತ್ರಧಾರಿಗಳಾಗಿದ್ದುದು..!

ನಾರಣಪ್ಪನವರು ನಾಯಕಪಾತ್ರ ವಹಿಸಿದ ಮೇಲೆ ಮಹಾಲಕ್ಷ್ಮಮ್ಮನವರು ಅವರೆದುರು ನಾಯಕಿಯ ಪಾತ್ರವಹಿಸಿದರೆ, ಅದು ಸಹಜ..!
ಮಗ ಬ್ರಹ್ಮಪ್ಪನಿಗೆ ಅವನ ಸಾತ್ವಿಕ ಸ್ವಭಾವಕ್ಕನುಗುಣವಾಗಿ ವಯೋವೃದ್ಧ ಜಾಂಬವಂತನ ಪಾತ್ರ..!
ನಾರಣಪ್ಪನವರ ಮನಸ್ಸು ಬಹಳ ದೊಡ್ಡದು – ಆದುದರಿಂದಲೇ ಮಾಲಿಕರ ಮನೆಯ ಗೇಟ್ ಕೀಪರುಗಳಾದ ಜಯಪ್ಪ – ವಿಜಯಪ್ಪರು ನಾಟಕದಲ್ಲಿ ರಾವಣ – ಕುಂಭಕರ್ಣರೆಂಬ ಖಳನಾಯಕರ ಪ್ರಧಾನ ಪಾತ್ರಗಳನ್ನೇ ಗಿಟ್ಟಿಸಿದ್ದು..!

ನಾರಾಯಣಪ್ಪನವರು ‘ಸ್ವರ್ಗ ‘ ಎಂಬ ಪಂಚತಾರಾ ಹೋಟೇಲನ್ನು ನಡೆಸುತ್ತಾರೆ. . !
ಈ ದುಬಾರಿ ಹೊಟೇಲಿನ ಮ್ಯಾನೇಜರ್ ಇಂದ್ರಕುಮಾರ್. . ಈತನದ್ದು ರಾಮಾಯಣ ನಾಟಕದಲ್ಲಿ ಕಿಷ್ಕಿಂದೆಯ ರಾಜ ವಾಲಿಯ ಪಾತ್ರ. .!
ಸೂರಜ್ ನಾರಯಣಪ್ಪನವರ ಕಂಪೆನಿಯಲ್ಲಿ ಲೈಟ್ ಬಾಯ್ – ವಾಲಿಯ ತಮ್ಮ ಸುಗ್ರೀವನ ಪಾತ್ರ ಇವನದು..

ನೀರಾವರಿ ಇಲಾಖೆಯ ವರುಣಯ್ಯ ಸುಷೇಣನ ಪಾತ್ರದಲ್ಲಿ, ಪುರೋಹಿತ ಬೃಹಸ್ಪತಿ ಶಾಸ್ತ್ರಿಗಳು ತಾರನ ಪಾತ್ರದಲ್ಲಿ..
ನಾರಣಪ್ಪನವರ ಖಾಯಂ ಆರ್ಕಿಟೆಕ್ಟ್ ವಿಶ್ವಕರ್ಮನಿಗೆ ನಾಟಕದಲ್ಲಿಯೂ ಆರ್ಕಿಟೆಕ್ ನಲನ ಪಾತ್ರವೇ. . !
ನಾರಾಯಣಪ್ಪನವರಿಗೆ ತಮ್ಮ ಕಂಪೆನಿಯಲ್ಲಿ ಹವಾನಿಯಂತ್ರಣ ವ್ಯವಸ್ಥೆ ನೋಡಿಕೊಳ್ಳುವ ಪವನ್ ಕುಮಾರ್ ಮೇಲೆ ಅದೇನು ಪ್ರೀತಿಯೋ – ಬಹುಮುಖ್ಯವಾದ ಹನುಮಂತನ ಪಾತ್ರವೇ ಆತನ ಪಾಲಾಗಿದೆ..!

ಹೀಗೆ ನಾರಾಯಣಪ್ಪನವರು ತಮ್ಮ ಹೆಂಡತಿ, ಮಕ್ಕಳು, ಸೇವಕರನ್ನೆಲ್ಲ ಕಟ್ಟಿಕೊಂಡು ನಮ್ಮೂರಿಗೆ ಬಂದರು..
ಎಂಥಾ ನಾಟಕತೋರಿಸಿದರೂಂತೀರಿ..!!?

ಸರಿಯಾಗಿ ನೋಡಿದವರ ಮನಸ್ಸಿನ ಬೇಸರವೆಲ್ಲಾ ಖಾಯಂ ಆಗಿ ಕಳೆದುಹೋಗುವಂತೆ..!!
ನಾಟಕ ನೋಡಿದವರ ಜೀವನದಲ್ಲಿ ಇರಬಹುದಾದ  ಸಮಸ್ಯೆಗಳಿಗೆಲ್ಲಾ ಸಮಾಧಾನ ಸಿಗುವಂತೆ..!

ಪ್ರಪಂಚದ ಎಲ್ಲಾ ಪ್ರಶ್ನೆಗಳಿಗೆ ಒಂದೇಕಡೆ ಉತ್ತರ ಸಿಗುವಂತೆ..!!
ಸಂತೋಷ – ಸಂದೇಶಗಳು ಒಟ್ಟಿಗೇ ಸಿಗುವಹಾಗೆ..!
ನಾಟಕ ನೋಡಿದಾಕ್ಷಣಕ್ಕೆ  ಸಂತೋಷ….!
ಅಲ್ಲಲ್ಲಿ ಜೀವಮಾನಪೂರ್ತಿ ಉಪಯೋಗಕ್ಕೆ ಬರುವ ಸಂದೇಶಗಳು..!

ಸಕಲ ಜೀವಗಳಿಗಿದೋ ಸಪ್ರೇಮ ಸಂದೇಶ..

ನಿಮ್ಮ ಬೇಸರ ಕಳೆಯಬೇಕೇ..?
ದುಃಖ ದೂರಾಗಬೇಕೇ..?
ಖುಷಿ – ಋಷಿಗಳು ತುಂಬಿ ತುಳುಕಬೇಕೇ ನಿಮ್ಮೊಳಗೆ..!!?
ಜೀವನದ ಜಿಜ್ಞಾಸೆಗಳಿಗೆ ಬೇಕೇ ಪರಿಹಾರ..?
ಜೀವನದ ಜಡಕುಗಳಿಗೆ ಬೇಕೇ ಮಾರ್ಗದರ್ಶನ..?

ಆಡಿಸಿ…ಆಡಿಸಿ…
ಮತ್ತೆ ಮತ್ತೆ ಆಡಿಸಿ..!!

ನಿಮ್ಮದೇಹದ ಮನೆಯೊಳಗಿನ ಹೃದಯ ರಂಗ ಮಂದಿರದಲ್ಲಿ ಈ ರಾಮಾಯಣ ಮಹಾನಾಟಕವನ್ನು . . !
ಒಂದುಬಾರಿಗೆ ಎಷ್ಟುಕಡೆಯೂ ಆಡಿಸಲು ಬರುವ ಸೋಜಿಗವಿದು..
ಸಂಪೂರ್ಣ ಉಚಿತ..!
ಉಚಿತವೆಂದರೆ ಬಿಟ್ಟಿಯೆಂದಲ್ಲ, ಉಚಿತವೆಂದರೆ ಸಮುಚಿತವೆಂದೇ ಅರ್ಥ
. . !!

ನೋಡಿರೋ ನೋಡಿರಿ . . !
ತಪ್ಪದೇ ನೋಡಿರಿ . . .!
ಮರೆಯದೇ ನೋಡಿರಿ..
ಮರೆತು ಮೂರ್ಖರಾಗದಿರಿ..
ಆಡಿಸಿ, ನೋಡಿ – ಆನಂದಿಸಿ..

ರಾಮಬಾಣ :-
ವಿ.ಸೂ
: ಈ ನಾಟಕವನ್ನು ಸಮರ್ಪಕವಾಗಿ ಆಡಿಸಿ ನೋಡಿದವರಿಗೆ ವೈಕುಂಠದಲ್ಲಿ ನಡೆಯುವ ಸಂತೋಷ ಕೂಟದಲ್ಲಿ ನಾರಾಯಣಪ್ಪನವರು, ಪರಿವಾರದವರೊಂದಿಗೆ ಭಾಗವಹಿಸುವ ಅವಕಾಶವುಂಟು..!!!

|| ಹರೇ ರಾಮ ||

Facebook Comments Box