|| ಹರೇರಾಮ ||

ಜೀವಲೋಕದ ಇತಿಹಾಸದಲ್ಲಿ ನಡೆದಿರಬಹುದಾದ ಯುದ್ಧಗಳಿಗೆ ಲೆಕ್ಕವಿಲ್ಲ..
ಆದರೆ ರಾಮ – ರಾವಣಸಂಗ್ರಾಮದ ತೆರನಾದ ಸಂಗ್ರಾಮವಿನ್ನೊಂದಿಲ್ಲ..
ಆ ಯುದ್ಧವನ್ನು ಬಣ್ಣಿಸಹೊರಟ ಕವಿಗಳಿಗೆ ಉಪಮೆಯೇ ಸಿಗಲಿಲ್ಲ..!
ಸಾಗರಕ್ಕೆ ಸಾಟಿಯುಂಟೇ..?
ಅಂಬರವನ್ನು ಹೋಲುವ ವಸ್ತು ಇನ್ನೊಂದುಂಟೇ…?
ಸೃಷ್ಟಿಯ ಅನನ್ಯ ಸಂಗತಿಗಳಿವು..!

ರಾಮಾಯಣ ಯುದ್ಧವೂ ಹಾಗೇ..
ವಿವಾಹವಾಗಲೀ, ವಿವಾದವಾಗಲೀ ಸಮಾನರ ಮಧ್ಯೆ ನಡೆಯಬೇಕೆನ್ನುವುದುಂಟು..
ಆದರೆ, ಇಲ್ಲಿಮಾತ್ರ ಹಾಗಲ್ಲ..
ರಾಮ – ರಾವಣರು ಹೊಂದಿದ್ದ ಯುದ್ಧ ಪರಿಕರಗಳಲ್ಲಿ ಮಹದಂತರವಿದೆ..!
ಒಬ್ಬನ ಬಳಿ ಅಗಾಧವಾದ ಯುದ್ಧೋಪಕರಣಗಳು..!
ಇನ್ನೊಬ್ಬನಬಳಿ ಅಲುಗಾಡದ ಅಂತಃಸತ್ವ..!!

ಸುರಕ್ಷಿತವಾದ, ಸುಸಜ್ಜಿತವಾದ, ಸುಸಂಪನ್ನವಾದ, ಲಂಕಾನಗರಿ ರಾವಣನ ಅಧೀನದಲ್ಲಿ..!!
ಆ ಪುರಿಗೋ ಪರಿ – ಪರಿಯ ರಕ್ಷಣೆಗಳು..!
ದುರ್ಗಮವಾದ ಕೋಟೆಗಳು..!
ಪ್ರಕೃತಿಯೇ ಪ್ರಧಾನ ರಕ್ಷಣೆ ಆ ನಗರಿಗೆ..!
ಸಮುದ್ರಕ್ಕಿಂತ ದೊಡ್ಡ ರಕ್ಷಣೆ ಬೇರೆ ಬೇಕೇ..?
ಸುತ್ತೆಲ್ಲ ಸುತ್ತಿರುವ ನೂರು ಯೋಜನ ವಿಸ್ತಾರದ ಸಾಗರವನ್ನು ಲಂಘಿಸದೇ ಲಂಕೆಗೆ ಪ್ರವೇಶವೇ ಇಲ್ಲ..!
ಸಾಲದ್ದಕ್ಕೆ ಅಲ್ಲಿ ನೌಕಾ ಪಥವೂ ಇಲ್ಲ…!
ಮತ್ತೆ ಗಹನವಾದ ಅರಣ್ಯ..!
ಅರಣ್ಯವನ್ನತಿಕ್ರಮಿಸಿದರೆ ಗಗನದಲ್ಲಿ ಮುಖವಿಟ್ಟ ಮಹೋನ್ನತ ತ್ರಿಕೂಟ ಪರ್ವತ..!
ಅದರ ತುತ್ತ ತುದಿಯಲ್ಲಿ ಲಂಕೆ..!!!
ಸುತ್ತಲೂ ಅಗಾಧ ಕಂದಕ..! ಅಲ್ಲಿ ಹರಿಯುವ – ಕೊರೆಯುವ ಶೀತಜಲದಲ್ಲಿ ಸುಳಿದಾಡುವ ಮೊಸಳೆಯೇ ಮೊದಲಾದ ಕ್ರೂರ ಜಲಜಂತುಗಳು..!
ಮತ್ತೆ ದುರ್ಭೇಧ್ಯವಾದ ವಿಶ್ವಕರ್ಮ ನಿರ್ಮಿತ ಕೋಟೆ..!
ಕೋಟೆಯಮೇಲೆ ಶತಘ್ನಿಯೇ ಮೊದಲಾದ ಶತ್ರುಸಂಹಾರಕವಾದ ವಿವಿಧ ಯಂತ್ರಗಳು….!
ನಾಲ್ಕೂ ದಿಕ್ಕಿಗೆ ಅತ್ಯಂತ ದೃಢವಾದ ಮಹಾದ್ವಾರಗಳು..!
ಪಶ್ಚಿಮದ್ವಾರವನ್ನು ರಕ್ಷಿಸುವ ಅಯುತ(ಹತ್ತುಸಾವಿರ)ಸಂಖ್ಯೆಯ ಮಹಾರಾಕ್ಷಸ ವೀರರು..!
ದಕ್ಷಿಣದ್ವಾರವನ್ನು ಅಹರ್ನಿಶಿ ಕಾಯುವ ನಿಯುತ ಸಂಖ್ಯೆಯ ವೀರರಾಕ್ಷಸರು..!
ಪ್ರಯುತ ಸಂಖ್ಯೆಯಲ್ಲಿ ಪೂರ್ವದ್ವಾರವನ್ನು ಸಂರಕ್ಷಿಸುವ ರಾಕ್ಷಸಸ್ತೋಮ..!
ಶ್ರೀರಾಮನ ಆಗಮನದ ಸಾಧ್ಯತೆಯ ದಕ್ಷಿಣದ್ವಾರದಲ್ಲಿಯಂತೂ ರಾಕ್ಷಸಮಹಾವೀರರು ನ್ಯರ್ಭುದ ಸಂಖ್ಯೆಯಲ್ಲಿ..!!
ಸಾಗರತೀರದ ಮರಳ ಕಣಗಳನ್ನು ಎಣಿಸಲು ಹೇಗೆ ಸಾಧ್ಯವಿಲ್ಲವೋ…
ಹಾಗೆಯೇ,ಲಂಕಾ ಮಧ್ಯದಲ್ಲಿ ರಾವಣನ ಆಜ್ಞೆಗೆ ಕಾದುನಿಂತ ರಾಕ್ಷಸ ಸೈನಿಕರ ಸಂಖ್ಯೆ ಎಣಿಸಿ ಮುಗಿಯದು..!
ದೇಹಬಲ – ಬುದ್ಢಿಬಲ, ಶಸ್ತ್ರಬಲ – ಅಸ್ತ್ರಬಲ, ಸಂಖ್ಯಾಬಲ, ವರಬಲಗಳಿಂದ ದರ್ಪಿತರಾದ ರಾಕ್ಷಸನಾಯಕರು..!
ಚಿತ್ರ – ವಿಚಿತ್ರವಾದ ಮಾಯೆಗಳು..!
ಭೂಮಿತೂಕದ ಭೂರಿಬಲದ ಕುಂಭಕರ್ಣ..!
ಅದೃಶ್ಯನಾಗಿ ಸೆಣೆಸುವ ನಾಗಪಾಶವೇ ಮೊದಲಾದ ಪ್ರತ್ಯುತ್ತರವೇ ಇಲ್ಲದ ಶಕ್ತಿಗಳನ್ನು ಹೊಂದಿದ ಇಂದ್ರಜಿತು..!
ಸಮರ ಸಮರ್ಥವಾದ ರಥಗಳು, ಆನೆಗಳು, ಕುದುರೆಗಳು..!
ಉತ್ಕೃಷ್ಟವಾದ ಧನುಸ್ಸುಗಳು, ಬಾಣಗಳು, ಶೂಲಗಳು,ಖಡ್ಗಗಳು,ಗುರಾಣಿಗಳು, ತೋಮರಗಳು,ಭುಶುಂಡಿಗಳು,ಪರಿಘಗಳು ಋಷ್ಟಿಗಳು, ಶಕ್ತಿಗಳು,ಮುಸಲಗಳು ಇವೇ ಮೊದಲಾದ ಉತ್ತಮೋತ್ತಮ ಆಯುಧಗಳು ಅಸಂಖ್ಯ ಸಂಖ್ಯೆಯಲ್ಲಿ..!!!!

ಎಲ್ಲಕ್ಕಿಂತ ಮಿಗಿಲಾಗಿ ಯಾವಮಟ್ಟಕ್ಕೂ ಇಳಿಯುವ, ಯಾವ ಹೇಯ ಕೃತ್ಯಕ್ಕೂ ಹೇಸದ, ಯಾವದಾರಿಯನ್ನಾದರೂ ಹಿಡಿಯುವ ಕುಬುದ್ಧಿ- ಕುತಂತ್ರಗಳು….!
ತನ್ನ ವಿಕ್ರಮ – ದೌರ್ಜನ್ಯಗಳಿಂದ ಸಕಲಲೋಕಗಳನ್ನೂ ತಲ್ಲಣಗೊಳಿದ್ದ ಸ್ವಯಂ ರಾವಣ..!!!
ಇವೆಲ್ಲಕ್ಕೂ ಬೆಂಬಲವಾಗಿ ತುಂಬಿತುಳುಕುತ್ತಿದ್ದ ಕೋಶಗಾರ..!

ತ್ತ ರಾಮನಬಳಿಯಾದರೋ..

ರಾಜ್ಯವಿಲ್ಲ..!ಯುದ್ಧ ಪರಿಕರಗಳು..!!!
ಕೋಶವಿಲ್ಲ…!
ತನ್ನದೇ ಆದ ಸೈನ್ಯವಿಲ್ಲ..!
ಮಿತ್ರರ ಸೈನ್ಯವಿದ್ದರೂ ಅಲ್ಲಿ ರಥ, ಗಜ, ತುರಗಗಳಿಲ್ಲ..!
ಸೈನ್ಯವೊಂದಕ್ಕೆ ಸರ್ವ ಪ್ರಥಮವಾಗಿ ಬೇಕಾದದ್ದು ಶಿಸ್ತು..!
ಹಾಗೆಂದರೇನೆಂದೇ ಗೊತ್ತಿಲ್ಲದ ಕಪಿಗಳು ಸೈನಿಕರು..!
ಅವರಾದರೋ ಧನುರ್ಬಾಣಗಳು ಖಡ್ಗವೇ ಮೊದಲಾದ ಆಯುಧಗಳನ್ನು ಬಳಸುವ ಅಭ್ಯಾಸವೇ ಇಲ್ಲದವರು..!
ಅವರ ಶರೀರವೇ ಅವರಿಗೆ ಪ್ರಧಾನವಾದ ಆಯುಧ..!
ತಮ್ಮ ನಖ – ದಂತಗಳಿಂದ, ಮುಷ್ಟಿ – ಪಾದಗಳಿಂದಲೇ ಯುದ್ಧಮಾಡುವವರವರು..!
ಶರೀರದ ಹೊರತಾಗಿ ಅವರು ಬಳಸುವ ಆಯುಧವೆಂದರೆ, ಬಂಡೆಗಳು, ವೃಕ್ಷಗಳು, ಗಿರಿ-ಶಿಖರಗಳು..!
ರಾಕ್ಷಸರ ಆಯುಧಗಳ ಸಂಗ್ರಹ ಅವರ ಬಳಿಯೇ ಸದಾ ಸಿದ್ಧವಿದ್ದರೆ..
ಕಪಿಗಳು ತಮ್ಮ ಆಯುಧಗಳಿಗಾಗಿ ಸುತ್ತ ಮುತ್ತ ಹುಡುಕಬೇಕಾಗುತ್ತಿತ್ತು..!
ರಾಕ್ಷಸರ ಆಯುಧಗಳು ಮತ್ತೆ ಮತ್ತೆ ಬಳಸಬಹುದಾದವುಗಳು..
ಕಪಿಗಳ ಆಯುಧಗಳು ಹಾಗಲ್ಲ..!
ಅವುಗಳಿಗೆ ಮರುಬಳಕೆಯೇ ಇಲ್ಲ..!
ಶ್ರೀರಾಮನು ದಾಟಬೇಕಾದುದು ಸಮುದ್ರವನ್ನು… ಸಾಧನ ಬರಿಗಾಲು ಮಾತ್ರ..
ಜಯಿಸಬೇಕಾದುದು ಲಂಕೆಯನ್ನು… ಸಹಾಯಕರು ಕಪಿಗಳು ಮಾತ್ರ..!
ರಾಕ್ಷಸರು ಹೋರಾಡುತ್ತಿದ್ದುದು ತಾಯಿನಾಡಿಗಾಗಿ, ತಮಗೆ ಅನ್ನವಿತ್ತ ಅರಸನ ಅಳಿವು – ಉಳಿವಿನ ಸವಾಲಿಗಾಗಿ..!

ರಾಜನೀತಿಯ ದೃಷ್ಟಿಯಿಂದ ಹೇಳುವುದಾದರೆ ಕಪಿಗಳು ಹೋರಾಡುತ್ತಿದ್ದುದು ತಮ್ಮ ತಾಯ್ನಾಡಿಗಾಗಿಯಾಗಲೀ, ದೊರೆಗಾಗಿಯಾಗಲೀ ಅಲ್ಲವೇ ಅಲ್ಲ..!
ತಮ್ಮ ದೊರೆಯ ಮಿತ್ರನಿಗಾಗಿ…!
ರಾವಣನಿಗದು ಸ್ವಕ್ಷೇತ್ರ..!!
ರಾಮನಿಗೋ ಶತ್ರು ಕ್ಷೇತ್ರ..!
ಯುದ್ಧದಲ್ಲಿ ಸ್ವಕ್ಷೇತ್ರ – ಶತ್ರು ಕ್ಷೇತ್ರಗಳಿಗೆ ಮಹದಂತರವಿದೆ..!
ಸ್ವಾರಸ್ಯದ ಸಂಗತಿಯೆಂದರೆ ‘ವಿಜಯ ಸಾಧನ’ಗಳೆಲ್ಲವೂ ರಾವಣನಲ್ಲಿ..!
“ವಿಜಯ”ಮಾತ್ರ ರಾಮನಲ್ಲಿ..!
ಯಾಕೆ ಹೀಗೆ..??!!
ಇದು ಹೇಗೆ ಸಾಧ್ಯ..!!?

ಅದು ಹೀಗೆ…
ಕಾರ್ಯಸಾಧನೆಗೆ ತೊಡಗುವವರಲ್ಲಿ ವರ್ಗಗಳೆರಡು..!
* ಕಾರ್ಯಸಾಧನೆಗಗಿ ಹೊರಗಿನ ಉಪಕರಣಗಳನ್ನು ಆಶ್ರಯಿಸುವವರು ಹಲವರು..!
* ತಮ್ಮ ಅಂತಃಸತ್ವವನ್ನೇ ನೆಚ್ಚಿ ಕಾರ್ಯಸಾಧನೆಗಿಳಿಯುವವರು ಅಪರೂಪದ ಕೆಲವರು..!!
ಅನ್ಯವೆಂದಿಗೂ ಅನ್ಯವೇ..!!!!
ನಮ್ಮದೆಂದಿಗೂ ನಮ್ಮದೇ..!
ಬದುಕಿಗೆ ಬೇಕಾದ ಪ್ರಧಾನ ಸಾಧನಗಳನ್ನು ತನುವೆಂಬ ಪೆಟ್ಟಿಗೆಯೊಳಗಿಟ್ಟೇ ಸೃಷ್ಟೀಶ ಜೀವಿಗಳನ್ನು ಭೂಮಿಗೆ ಕಳುಹಿಸಿ ಕೊಟ್ಟಿದ್ದಾನೆ..!
ಅವುಗಳನ್ನು ಸಮೀಚೀನವಾಗಿ ಬಳಸದೇ, ಹೊರಗಿನ ವಸ್ತುಗಳ ಮೊರೆಹೋಗುವುದು ಆತನಿಗೆ ಮಾಡುವ ಅಪಚಾರ..!!
ಅಪಚಾರಕ್ಕೆ ತಕ್ಕ ಶಿಕ್ಷೆಯೂ ಇದೆ..!
ಹೊರಗಿನ ವಸ್ತುಗಳನ್ನು ಹೆಚ್ಚು-ಹೆಚ್ಚು ಬಳಸಿದಂತೆ, ಒಳಗಿನ ಸಂಪತ್ತನ್ನು ಹೆಚ್ಚು ಹೆಚ್ಚು ಕಳೆದುಕೊಳ್ಳಬೇಕಾಗುತ್ತದೆ ಉದಾ:- ಅನಗತ್ಯವಾಗಿ ಬೆಳಕನ್ನು ಹೆಚ್ಚಛೆಚ್ಚು ಬಳಸಿದಂತೆ ಕಣ್ಣಿನ ಶಕ್ತಿ ಕ್ಷೀಣಿಸುತ್ತದೆ..!
ಶರೀರದಿಂದ ಮಾಡಬೇಕಾದ ಕಾರ್ಯಗಳಲ್ಲಿಯೂ ಯಂತ್ರಗಳನ್ನೇ ಬಳಸಿದರೆ ಶರೀರಬಲ ಕುಂದುತ್ತದೆ..!
ಕೊಟ್ಟದ್ದನ್ನು ಬಳಸದಿದ್ದರೆ ಕೊಟ್ಟವನು ಮೆಚ್ಚನು ಮಾತ್ರವಲ್ಲ ಕೊಟ್ಟದ್ದನ್ನು ಕಸಿಯುವನು, ಮತ್ತೆ ಕೊಡನು…!!!
ಆತ್ಮಬಲ ಎಲ್ಲಕ್ಕಿಂತ ದೊಡ್ಡದು..!
ಮತ್ತೆ ಮನೋಬಲ, ಇಂದ್ರಿಯಬಲ, ದೇಹಬಲಗಳು..!
ಇದಕ್ಕಿಂತ ಹೊರಗಿನ ಬಲಗಳೆಲ್ಲ ಕೇವಲ ಭ್ರಮೆ..!!
ಬೇರೆಲ್ಲ ಬಲಗಳೂ ಇರುವುದು ಈ ಬಲಗಳಾನ್ನಾಶ್ರಯಿಸಿಯೇ..!!
ಈ ಬಲಗಳನ್ನು ಬಳಸಿಕೊಳ್ಳುವವನಿಗೆ ಬೆಂಬಲವಾಗಿ ಸಮಸ್ತ ಸೃಷ್ಟಿಯೇನಿಲ್ಲುವುದು..!

ಉಪಕರಣಗಳು ಬೇಡವೆಂದೇನೂ ಈ ಲೇಖನದ ತಾತ್ಪರ್ಯವಲ್ಲ..!
ಅಂತಃಕರಣವು ಪ್ರಧಾನವಾದರೆ ಉಪಕರಣವು ಪೂರಕ..
ಹಸುವಿನೊಡನೆ ಹಗ್ಗವಿದ್ದಂತೆ..!

ಅಂದಿನ ರಾಮನ ಅಂತಃಸತ್ವವನ್ನು ಇಂದಿನ ಯುಗದ ಆದಿಶಂಕರಾಚಾರ್ಯರಲ್ಲೂ ಕಾಣಬಹುದು..!
ಶಂಕರಾಚಾರ್ಯರು ಭುವಿಗೆ ಬಂದಾಗ ಭಾರತವೇ ಕತ್ತಲಲ್ಲಿತ್ತು, ಸನಾತನ ಧರ್ಮ ಸಂಕಟದಲ್ಲಿತ್ತು..
ಸಾವಿರ ಸಂಸ್ಥೆಗಳೂ ಮಾಡಲಾರದ ಕಾರ್ಯಗಳನ್ನು ಅಂದು ಏಕಾಂಗಿಯಾಗಿ ಅತ್ಯಲ್ಪ ಸಮಯದಲ್ಲಿ ಸಾಧಿಸಿದರವರು..!
ಏನಿತ್ತು ಅವರಲ್ಲಿ..!!??
ಜನರಿಲ್ಲ..!
ಧನವಿಲ್ಲ..!!
ವಸ್ತು ವಾಹನಗಳಿಲ್ಲ..
ರಾಜಾಶ್ರಯವಿಲ್ಲ..!!
ಹಾಗೆ ನೋಡಿದರೆ ರಾಜ್ಯಾಡಳಿತಗಳು ವಿರೋಧ ಪಕ್ಷದಲ್ಲಿ..!
ಇಷ್ಟೇ ಸಾಲದೆಂಬಂತೆ ಧಾರಾಳವಾಗಿ ಆಯಸ್ಸು ಕೂಡಾ ಇಲ್ಲ..!

ಆದರೆ ಅವರು ಸಾಧಿಸಿದ್ದೆಷ್ಟು..?

” ಅಷ್ಟ ವರ್ಷೇ ಚತುರ್ವೇದಿ ದ್ವಾದಶೇ ಸರ್ವ ಶಾಸ್ತ್ರವಿತ್ |
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||”
ಐದನೇ ವಯಸ್ಸಿನಲ್ಲಿ ಉಪನಯನ…
ಮತ್ತೆ ನಾಲ್ಕೇ ವರ್ಶಗಳಲ್ಲಿ ನಾಲ್ಕೂ ವೇದಗಳ ಸಮಗ್ರ ಅಧ್ಯಯನ..
ಮುಂದಿನ ನಾಲ್ಕು ವರ್ಷಗಳಲ್ಲಿ ಸಕಲ ಶಾಸ್ತ್ರಗಳಲ್ಲಿ ಪರಿಣತಿ..!
ಮತ್ತೆ ನಾಲ್ಕು ವರ್ಷಗಳ ಪ್ರಸ್ಥಾನ ತ್ರಯಗಳಿಗೆ ಭಾಷ್ಯರಚನೆ..!
ಇವು ಪೂರ್ವ ಸಿದ್ಧತೆಯ ಹದಿನಾರು ವರ್ಷಗಳು..!
ಮತ್ತೆ ಹದಿನಾರೇ ವರ್ಷಗಳಲ್ಲಿ ಅಖಂಡ ಭಾರತ ವರ್ಷದ( ಈಗಿನ ಪಾಕಿಸ್ಥಾನ,ಬಾಂಗ್ಲಾ,ಭರ್ಮಾ ದೇಶಗಳು ಸೇರಿದಂತೆ) ಭ್ರಮಣ..!
ಸರ್ವಜ್ಞ ಪೀಠಾರೋಹಣ..

ಇಂದು ಈ ದೇಶದಲ್ಲಿ ಧರ್ಮ ಸಂಸ್ಕೃತಿಗಳೆಂಬ ಶಬ್ಧಗಳಾದರೂ ಉಳಿದಿದ್ದರೆ ಅದಕ್ಕೆ ಆದಿ ಶಂಕರಾಚಾರ್ಯರು ಮಾಡಿದ ಕಾರ್ಯಗಳೇ ಕಾರಣ..!

ಆ ಹದಿನಾರು ವರ್ಷಗಳಲ್ಲಿ ಶಂಕರಾಚಾರ್ಯರು ಮಾಡಿದ ಕಾರ್ಯಗಳು ಇಂದಿಗೂ ಉಳಿದಿವೆ…ಬೆಳೆಯುತ್ತಿವೆ..!

ತ್ರೇತಾಯುಗದ ಶ್ರೀರಾಮಚಂದ್ರ ಮತ್ತು ಕಲಿಯುಗದ ಆದಿಶಂಕರಾಚಾರ್ಯರು ಇವರೀರ್ವರು ಮಹಾಪುರುಷರ ಕಾಲಗಳೆರಡಾದರೂ ಕಾರ್ಯಗಳೆರಡಲ್ಲ..!!
ಕಾರ್ಯ ಸಾಧನೆಯ ಪರಿ ಬೇರಲ್ಲ..!
ಉಪಕರಣಗಳ ಬರವಿದ್ದರೂ, ಜಗವೆಲ್ಲ ಎದುರಾಗಿದ್ದರೂ ಹಿಮಾಲಯವನ್ನು ಹೋಲುವ ತಮ್ಮ ಅಂತಃಸತ್ವದ ಬಲದಿಂದ ಗೆದ್ದವರಿವರು..!
ವಿಶೇಷವೆಂದರೆ ಶ್ರೀರಾಮ ಜನಿಸಿದ್ದು ಪುನರ್ವಸು ನಕ್ಷತ್ರದಲ್ಲಿ..
ಶ್ರೀ ಶಂಕರಾಚಾರ್ಯರು ಜನಿಸಿದ್ದು ಆದ್ರಾ೯ ನಕ್ಷತ್ರದಲ್ಲಿ..
ಆಕಾಶ ಮಂಡಲದಲ್ಲಿ ಜೊತೆ ಜೊತೆಗೇ ಬೆಳಗುವ ನಕ್ಷತ್ರಗಳಿವು..!
ಶ್ರೀರಾಮ ಜನಿಸಿದ್ದು ಚೈತ್ರಮಾಸದಲ್ಲಿ..
ಶಂಕರಾಚಾರ್ಯರು ಜನಿಸಿದ್ದು ವೈಶಾಖ ಮಾಸದಲ್ಲಿ..!
ಒಂದೇ ಋತುವಿನಲ್ಲಿ ಒಂದರ ಪಕ್ಕ ಇನ್ನೊಂದಾಗಿಬರುವ ಎರಡು ಮಾಸಗಳಿವು..!

ನಮಗೊಂದು ಹಿಮಾಲಯದಂಥ ಹೆಮ್ಮೆಯಿದೆ…
ಆಕಾಶದಲ್ಲಿ ನಕ್ಷತ್ರಗಳಾಗಿ ಜೊತೆಗಿರುವ, ಸಂವತ್ಸರದಲ್ಲಿ ಮಾಸಗಳಾಗಿ ಜೊತೆಗಿರುವ ಇವರೀರ್ವರು ಮಹಾಪುರುಷರು ಒಂದುಗೂಡುವ ಇನ್ನೊಂದು ಸ್ಥಾನವೆಂದರೆ
ಅದು ನಮ್ಮಮಠ..!!

ನಮ್ಮ ಆರಂಭ ಶಂಕರಾಚಾರ್ಯರಾದರೆ, ಆರಾಧ್ಯ ಶ್ರೀರಾಮ..!
ಶ್ರೀರಾಮ ನಮ್ಮ ಶಕ್ತಿಯಾದರೆ ಶಂಕರಾಚಾರ್ಯರು ನಮ್ಮ ಬೆಳಕು..!
ಶಂಕರರು ಸರಿಯಾದ ಗುರಿಯತ್ತ ದಾರುತೋರಿದರೆ…ಕೈ ಹಿಡಿದು ನಡೆಸುವವನು ಶ್ರೀರಾಮ…!
ಶ್ರೀರಾಮನವಮಿಯ ಸಂಭ್ರಮವನ್ನು ಮೊನ್ನೆ ಮೊನ್ನೆ ಕಂಡಾಯಿತು ನಾಡಿದ್ದು ವೈಶಾಖ ಶುದ್ಧ ಪಂಚಮಿ…ಶಂಕರ ಜಯಂತಿ…!
ಬಹಿರಂಗದ ಉಪಕರಣಗಳ ಮೇಲಿಟ್ಟ ಭರವಸೆಗಿಂತ ಮಿಗಿಲಾದಭರವಸೆಯನ್ನು ಅಂತರಂಗದ ಆತ್ಮಬಲದ ಮೇಲಿಟ್ಟರೆ ಅದು ಪರಮ ಗುರುವಿಗೂ ಪರಮ ಪುರುಷನಿಗೂ ಸಲ್ಲಿಸುವ ಪರಮಾದರ…!!

ಅದುವೇ ಶಂಕರಜಯಂತಿಯ ಸಾರ್ಥಕ ಆಚರಣೆ..!

|| ಹರೇರಾಮ ||

Facebook Comments