ಸೋಮು ನಮ್ಮ ನಿಮ್ಮಂತೆ ಸಾಧಾರಣ ಮನುಷ್ಯ.!

ಆದರೆ, ಅವನಿಗೆ ರಾಜನ ಶಯ್ಯಾಗಾರದಲ್ಲಿ ಕೆಲಸ..


ಸಾಮಾನ್ಯ ಜನರ ಕಲ್ಪನೆಗೂ ಮೀರಿದ ಶಯ್ಯಾಗಾರದ ವೈಭವವನ್ನು ನೋಡಿದಾಗಲೆಲ್ಲಾ..

ಸೋಮುವಿನ ಮನದಲ್ಲಿ ಆಸೆ ಅಸೂಯೆಗಳ ಅಲೆಗಳು ಏಳುತ್ತಿದ್ದವು..!!

ರಾಜನ ಮೃದು ಮೃದು ಸುಪ್ಪತ್ತಿಗೆಯನ್ನು ಕಂಡಾಗಲೆಲ್ಲಾ

ಜೀವನದಲ್ಲಿ ಒಮ್ಮೆಯಾದರೂ ಅದರ ಸೌಖ್ಯವನ್ನು

ಅನುಭವಿಸಬೇಕೆನ್ನುವ ಆಸೆಯಾದರೆ………!

ಸುಪ್ಪತ್ತಿಗೆಯಲ್ಲಿ ರಾಜ ಪವಡಿಸುವುದನ್ನು ಕಂಡಾಗಲೆಲ್ಲಾ

ಅವನು ಅನುಭವಿಸುತ್ತಿರಬಹುದಾದ ಸೌಖ್ಯವನ್ನೆಣಿಸಿ ಅಸೂಯೆ ಉಂಟಾಗುತ್ತಿತ್ತು..!!


ದಿನೇ ದಿನೇ ಸೋಮುವಿನ ಮನಸ್ಸಿನಲ್ಲಿ ಹೇಗಾದರೂ ರಾಜನ ಕಣ್ಣು ತಪ್ಪಿಸಿ

ಒಮ್ಮೆಯಾದರೂ ರಾಜಶಯ್ಯೆಯಲ್ಲಿ ಪವಡಿಸುವ ಆಸೆ ಪ್ರಬಲವಾಗತೊಡಗಿತು..!

ಆದರೆ ರಾಜನೆಲ್ಲಿಯಾದರೂ ನೋಡಿದರೆ ಪ್ರಾಣಕ್ಕೇ ಸಂಚಕಾರ ಬಂದೀತೆಂಬ ಭಯ..!!

ಹೀಗೆ ಆಸೆ – ಭಯಗಳ ಸಮರದಲ್ಲಿ ಆಸೆಯೇ ಗೆದ್ದ ಒಂದು ದಿನ…..

ಸೋಮು ಯಾರಿಗೂ ಗೊತ್ತಾಗದಂತೆ ಕೊಂಚಹೊತ್ತು ರಾಜನ ಹಂಸತೂಲಿಕಾತಲ್ಪದಲ್ಲಿ ಪವಡಿಸಿದ..!!!


ಇಂಥ ತಪ್ಪುಗಳು ಮಾದಕ ವಸ್ತುಗಳಂತೆ..!

ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುವಂತಾಗುತ್ತದೆ..


ಸೋಮುವಿಗೆ ಆಗಾಗ ರಾಜನ ಶಯ್ಯೆಯಲ್ಲ್ಲಿ ಕದ್ದು ಮಲಗುವುದು ಅಭ್ಯಾಸವಾಗಿ ಹೋಯಿತು..!!


ತಪ್ಪು ಮಾಡಲು ಮುಹೂರ್ತಗಳಿರುವಂತೆ ಸಿಕ್ಕಿಬೀಳಲು ಕೂಡ ಮುಹೂರ್ತಗಳಿರುತ್ತವೆ…!


ಒಂದು ದಿನ ಅನಿರೀಕ್ಷಿತವಾಗಿ ತನ್ನ ಶಯ್ಯಾಗಾರವನ್ನು ಪ್ರವೇಶಿಸಿದ ರಾಜ,

ಹಂಸತೂಲಿಕಾತಲ್ಪದಲ್ಲಿ ಸೋಮು ಮಲಗಿರುವುದನ್ನು ಕಂಡು ಚಕಿತಗೊಂಡ..

ಸೇವಕನ ಮನದ ಭಾವವೇನೆಂಬುದು ದೊರೆಗೆ ಅರ್ಥವಾಗಿಹೋಯಿತು..!!


ಅತ್ತ, ಸ್ವಪ್ನಲೋಕದಲ್ಲಿ ಸುಖಿಸುತ್ತಿದ್ದ ಸೋಮು ಕಣ್ಬಿಟ್ಟರೆ..

ಎದುರಿಗೆ ದೊರೆ..!!

ಮುಂದೇನಾಗಬಹುದೆಂದು ಊಹಿಸುತ್ತಿದ್ದಂತೆಯೇ ಸೋಮುವಿನ ನಾಲಗೆಯ ಪಸೆಯಾರಿತು..

ಮೈ ನಡುಗಿತು.. ಮುಖಬಿಳುಚಿತು..ಹೃದಯ ನಿಂತಿತು…..!!!!


ಆದರೆ ಮುಂದಿನ ಕ್ಷಣದಲ್ಲಿ ಅತ್ಯಾಶ್ಚರ್ಯವೇ ಕಾದಿತ್ತು..!!

ಮೃತ್ಯುದಂಡವನ್ನು ವಿಧಿಸುವುದಕ್ಕೆ ಬದಲಾಗಿ ಬೆಳಗಾಗುವವರೆಗೂ ಕದಲದೆ ಹಾಸಿಗೆಯಲ್ಲಿಯೇ

ಮಲಗಿರಬೇಕೆಂದು ರಾಜನು ಅಪ್ಪಣೆ ಮಾಡಿದ..!

ಅಷ್ಟುಮಾತ್ರವಲ್ಲ…

ಕೂದಲೆಳೆಯೊಂದರಲ್ಲಿ ಹರಿತವಾದ ಖಡ್ಗವೊಂದನ್ನು ಕಟ್ಟಿ ಸೋಮುವಿನ ಕೊರಳಿನ ನೇರಕ್ಕೆ ಬರುವಂತೆ

ಮೇಲ್ಛಾವಣಿಯಲ್ಲಿ ತೂಗು ಹಾಕಿಸಿದ…!!


ಮೃತ್ಯು ಉಂಟುಮಾಡುವ ಕ್ಲೇಶಕ್ಕಿಂತಲೂ ಮೃತ್ಯುಭೀತಿ ಉಂಟುಮಾಡುವ ಕ್ಲೇಶ ಬಲುದೊಡ್ಡದು..!!


ಕೊರಳಮೇಲೆ ಯಾವ ಕ್ಷಣದಲ್ಲಿಯೂ ಬೀಳುವಂತೆ ತೂಗಾಡುತ್ತಿರುವ ಕತ್ತಿಯನ್ನು ಕಾಣುವಾಗ

ಸೋಮುವಿಗೆ ಬೇರೆಲ್ಲವೂ ಮರೆತುಹೋಯಿತು..!!


ಸುಸಜ್ಜಿತ ಶಯ್ಯಾಗಾರವಾಗಲಿ ಹಂಸತೂಲಿಕಾತಲ್ಪವಾಗಲಿ

ಅಥವಾ ಅಲ್ಲಿಯ ಬಗೆ ಬಗೆಯ ಸುಖ ಸಾಧನವಾಗಲಿ ಅವನಿಗೆ

ಯಾವಸುಖವನ್ನೂ ನೀಡಲಿಲ್ಲ..!!

ಲಕ್ಷ್ಯಭೇದನಕ್ಕೆ ಸಿದ್ಧನಾಗಿ ನಿಂತ ಅರ್ಜುನನಿಗೆ ಪಕ್ಷಿಯ ಕಣ್ಣಲ್ಲದೇ ಬೇರೇನೂ ಕಾಣದಂತೆ

ಇರುಳಿಡೀ ಚೂಪಾದ ಕತ್ತಿಯ ಮೊನೆಯಲ್ಲದೇ ಆತನಿಗೆ ಬೇರೇನೂ ಕಾಣಲೇ ಇಲ್ಲ..!!


ಹೇಗೋ ಬೆಳಗಾಯಿತು..

ರಾಜನ ಆಗಮನವೂ ಆಯಿತು..

“ಸುಪ್ಪತ್ತಿಗೆಯ ಸುಖ ಹೇಗಿತ್ತು ಸೋಮು..?” ರಾಜ ಪ್ರಶ್ನಿಸಿದ..

ತೆನಾಲಿ ರಾಮನ ಬೆಕ್ಕಿನಂತಾಗಿತ್ತು ಸೋಮುವಿನ ಸ್ಥಿತಿ..!!

ಸುಪ್ಪತ್ತಿಗೆಯ ಬಗೆಗೆ ಮಾತನಾಡುವುದಿರಲಿ, ಸಾಯುವವರೆಗೂ ಆ ಕಡೆ ತಲೆಹಾಕಿ ಮಲಗುವ ಸ್ಥಿತಿಯಲ್ಲೂ ಕೂಡ ಅವನಿರಲಿಲ್ಲ..!


ದೊರೆಯ ಮುಂದಿನ ಮಾತುಗಳು ಸೋಮುವಿನ ಅಂತರಂಗವನ್ನು ಹೊಕ್ಕವು..

” ನೀನು ಕಲ್ಪಿಸಿಕೊಂಡು ಅಸೂಯೆ ಪಟ್ಟಂತೆ ಪರಮ ಸುಖಿಯೇನಲ್ಲ ನಾನು..

ಒಂದು ರಾತ್ರಿ  ನೀನೇನನುಭವಿಸಿದೆಯೋ, ಅದನ್ನು ಜೀವನಪರ್ಯಂತ ಅನುಭವಿಸುವ ಯೋಗ ನನ್ನದು..

ಅಧಿಕಾರವಿರುವಲ್ಲಿ ಸಂಪತ್ತು ಹೇಗಿರುತ್ತದೆಯೋ ಆಪತ್ತುಗಳು ಕೂಡಾ ಹಾಗೇ ಇರುತ್ತವೆ..

ತಲೆಯಮೇಲೆ ತೂಗುಕತ್ತಿ ಇರುವಾಗ ಎಷ್ಟು ಸಂಪತ್ತಿದ್ದೇನು ಯಾವ ಸೌಕರ್ಯವಿದ್ದೇನು..?

ಆಸ್ವಾದಿಸುವ ಸ್ಥಿತಿಯಲ್ಲಿ ಮನಸ್ಸೇ ಇರದಿದ್ದಾಗ ಇವುಗಳಿದ್ದೇನು ಫಲ..?

ನಿನ್ನ ಕಂಬಳಿ ಕೊಡುವ ಸುಖವನ್ನು ನನ್ನ ರತ್ನಗಂಬಳಿ ನನಗೆ ಕೊಡಲಾರದು….!! “


ನಮ್ಮ ರಾಜಕಾರಣಿಗಳಿಗೆ ಪೂರ್ಣವಾಗಿ ಅನ್ವಯವಾಗುವ ಕಥೆ ಇದು..!

ಕಾಣದು ಪ್ರಮುಖರ ನೋವಿನ ಮುಖ..

ಕಾಣದು ಪ್ರಮುಖರ ನೋವಿನ ಮುಖ..

ಸುಖವೆಂಬುದು ದೊಡ್ಡ ಮಿಥ್ಯೆ ಅವರ ಜೀವನದಲ್ಲಿ..

ಒಂದೊಂದು ಸ್ಥಾನಕ್ಕೆ ಹತ್ತತ್ತು ಸ್ಪರ್ಧಿಗಳು..!

ಒಬ್ಬ ಹತ್ತಿ ಕುಳಿತರೆ ಉಳಿದ ಒಂಭತ್ತು ಮಂದಿ ಕಾಲೆಳೆಯುವವರು..!!

ಹೀಗಿರುವಾಗ ಅಧಿಕಾರ – ಸ್ಥಾನಗಳು ಕೊಡುವ ಸುಖವಾದರೂ ಎಂತು..?


ಗಿಡುಗವೊಂದು ಮಾಂಸದ ತುಣುಕೊಂದನ್ನು ಕಚ್ಚಿಕೊಂಡು ಹಾರಿತು..

ಅದರ ಕೊಕ್ಕಿನಲ್ಲಿರುವ ಮಾಂಸದ ತುಣುಕನ್ನು ಕಸಿಯಲು

ಇತರ ನೂರಾರು ಗಿಡುಗಗಳು ಅದರ ಮೇಲೆ ಆಕ್ರಮಣ ನಡೆಸಿದವು..!!

ಕೆಲಹೊತ್ತು ಕಾದಾಟ ನಡೆಯಿತು..

ಕಿತ್ತಾಟದಲ್ಲಿ ಅದುಹೇಗೋ ಮಾಂಸದ ತುಣುಕು ಗಿಡುಗದ ಕೊಕ್ಕಿನಿಂದ ಜಾರಿ ಕೆಳಗೆ ಬೀಳುವಾಗ

ಇತರ ಗಿಡುಗಗಳು ಆ ಗಿಡುಗವನ್ನು ಬಿಟ್ಟು  ಮಾಂಸದ ತುಣುಕಿನೆಡೆಗೆ ಹಾರಿದವು..!

ಈಗ ನಿಜವಾಗಿಯೂ ಅದಕ್ಕೆ ಹಾಯೆನಿಸಿತು..!!


ರಾಜಕಾರಣಿಗಳ ಅವಸ್ಥೆ ಇದಕ್ಕಿಂತಲೂ ಕಳಪೆ..!

ಮೊದಲು ಅಧಿಕಾರ ಪ್ರಾಪ್ತಿಗಾಗಿ ಕಿತ್ತಾಟ..

ಅಧಿಕಾರ ಬಂದಮೇಲೆ ಉಳಿಸಿಕೊಳ್ಳಲು ಕಿತ್ತಾಟ..

ಅಧಿಕಾರ ಹೋದ ಮೇಲೆ ಉಪೇಕ್ಷೆ,ತಿರಸ್ಕಾರ.. ಕೆಲವೊಮ್ಮೆ ಪ್ರತೀಕಾರದ ವಸ್ತುಗಳಾಗಿಬಿಡುತ್ತಾರೆ..!!


ರಾಜಕಾರಣಿಗಳ ಸಮರ್ಥನೆ ಖಂಡಿತವಾಗಿಯೂ ಈ ಲೇಖನದ ಉದ್ದೇಶವಲ್ಲ..!

ಜಗ ನೋಡದ ರಾಜಕಾರಣಿಗಳ ಬದುಕಿನ ಇನ್ನೊಂದು ಮುಖವನ್ನು ನೋಡುವ ಪ್ರಯತ್ನವಿದು..!


ರಾಜಕಾರಣಿಗಳಲ್ಲಿ ತಪ್ಪು ಕಾಣದವರಾರು?

ಅವರನ್ನು ನಿಂದಿಸದವರಾರು..?

ನಾವೂ ಅದನ್ನೇ ಮಾಡುವುದರಲ್ಲಿ ಸಾರ್ಥಕತೆಯೇನಿದೆ..?


ಅರಿತು ಮಾಡಿದ ನಿಂದೆ ತಪ್ಪಲ್ಲ

ಅಜ್ಞಾನದ ನಿಂದೆ ತಪ್ಪು..

ಸಮಾಜದಲ್ಲಿ ರಾಜಕಾರಣಿಗಳ ನಿರಂತರ ನಿಂದೆ ನಡೆಯುವುದು ಕಂಡುಬರುತ್ತದೆ.

ಆದರೆ ಆ ಕುರಿತು ವ್ಯವಸ್ಥಿತವಾದ ಅಧ್ಯಯನ ನಡೆದಂತೆ ಕಂಡುಬರುವುದಿಲ್ಲ..


ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು ? |

ಆತುಮದ ಪರಿಕಥೆಯನರಿತವರೆ ನಾವು..? ||

ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |

ನೀತಿ ನಿಂದೆಯೊಳಿರದು – ಮಂಕುತಿಮ್ಮ ||


ಪಾಪವೆಂಬುದದೇನು ಸುಲಭಸಾಧನೆಯಲ್ಲ |

ತಾಪದಿಂ ಬೇಯದವನ್ ಅದನೆಸಪನಲ್ಲ ||

ವಾಪಿ(ಬಾವಿ)ಯಾಳವ ದಡದಿ ನಿಂತಾತನರಿವನೇಂ..?|

ಪಾಪಿಯೆದೆಯೊಳಕಿಳಿಯೊ – ಮಂಕುತಿಮ್ಮ ||

ತಪ್ಪು ಕಾಣುವುದು ತಪ್ಪಲ್ಲ..

ತಪ್ಪು ಕಂಡಲ್ಲಿ ಖಂಡಿಸುವುದೂ ತಪ್ಪಲ್ಲ..

ಆದರೆ ತಪ್ಪೇಕಾಯಿತೆಂದು ಕಾಣದಿರುವುದು ದೊಡ್ಡ ತಪ್ಪು..!!


ಶರೀರದ ಅಂಗವೊಂದು ರೋಗಗ್ರಸ್ತವಾದರೆ ನಾವದನ್ನು ನಿಂದಿಸುತ್ತಾ ಕುಳಿತಿರುವುದಿಲ್ಲ,

ರೋಗಕ್ಕೆ ಕಾರಣವೇನು ಮತ್ತು ಪರಿಹಾರವೇನು ಎಂಬುದನ್ನು ಅನ್ವೇಷಿಸುತ್ತೇವೆ..!!

ರಾಜಕಾರಣಿಗಳೂ ಕೂಡ ಸಮಾಜದ ಒಂದು ಅಂಗವೇ…


ಗುಂಪಿನಲ್ಲಿ ಒಬ್ಬ ವ್ಯಕ್ತಿ ತಪ್ಪುಮಾಡಿದರೆ ಅದನ್ನು ವ್ಯಕ್ತಿದೋಷ ಎಂದು ಕರೆಯಬಹುದು..

ಆ ವ್ಯಕ್ತಿಯನ್ನು ಬದಲಾಯಿಸಿದರೆ ದೋಷ ಪರಿಹಾರವಾಗಲೂಬಹುದು..

ಇಡಿಯ ವರ್ಗವೇ ಕಲುಷಿತವಾದರೆ ಅದು ವ್ಯಕ್ತಿದೋಷ ಮಾತ್ರವಲ್ಲ, ವ್ಯವಸ್ಥೆಯ ದೋಷವೆಂದೇ ಹೇಳಬೇಕಾಗುತ್ತದೆ..!!

ಒಂದುವೇಳೆ ರಾಜಕಾರಣಿಗಳೆಲ್ಲರನ್ನೂ ಅರಬ್ಬೀಸಮುದ್ರಕ್ಕೆಸೆದರೆ.. ಸಮಸ್ಯೆಗಳು ಮುಗಿಯುವುದಿಲ್ಲ..!

ಎಲ್ಲಿಯವರೆಗೆ ವ್ಯವಸ್ಥೆ ಸರಿಯಾಗುವುದಿಲ್ಲವೋ,

ಅಲ್ಲಿಯವರೆಗೆ ಈ ಸಮಸ್ಯೆ ಪರಿಹಾರವಾಗುವುದಿಲ್ಲ..!

ವ್ಯವಸ್ಥೆ ದೋಷಗ್ರಸ್ತವಾಗಿರುವವರೆಗೆ ಮತ್ತೆ ಹುಟ್ಟಿಬರುವ ರಾಜಕಾರಣಿಗಳೂ ಕೂಡ

ಹಿಂದಿನವರ ಪಡಿಯಚ್ಚಿನಂತೆ ಇರುತ್ತಾರೆ..!!


ಕುಶಲ ಕೃಷಿಕ ಹೊಲದಲ್ಲಿ ಕಳೆ ಕೀಳುವಾಗ ಬೇರುಸಹಿತವಾಗಿಯೇ ಕೀಳುತ್ತಾನೆ..

ಹಾಗೆ ಮಾಡದೇ ಮೇಲೆ ಕಾಣುವ ಭಾಗವನ್ನಷ್ಟೇ ಕತ್ತರಿಸಿದರೆ ಅದು ಮತ್ತೆ ಮತ್ತೆ ಚಿಗುರುತ್ತಲೇ ಇರುತ್ತದೆ.. !!


ರಾಜಕಾರಣಿಗಳೂ ನಮ್ಮವರೇ ,

ರಾಷ್ಟ್ರ vs ರಾಜಕಾರಣ..

ರಾಷ್ಟ್ರ vs ರಾಜಕಾರಣ..

ನಮ್ಮ ಪ್ರತಿನಿಧಿಗಳೇ,

ನಮ್ಮ ಮಧ್ಯದಿಂದ ಹೋದವರೇ..!

ನಾವು ಹೇಗಿರುತ್ತೇವೆಯೋ ನಮ್ಮ ಪ್ರತಿನಿಧಿಗಳೂ ಕೂಡಾ ಹಾಗೆ ತಾನೆ ಇರಲು ಸಾಧ್ಯ..!!

ಒಂದು ವರ್ಗವನ್ನು ನಿರಂತರ ವ್ಯರ್ಥ ಹಳಿಯುವುದಕ್ಕಿಂತ ಸಮಸ್ಯೆಯ ಮೂಲ ಕಾರಣ ಮತ್ತು ಪರಿಹಾರ ಹುಡುಕುವುದೊಳಿತು..!!!


ರಾಮಬಾಣ :- ಅಜ್ಜನ ಕಾಲದಲ್ಲಿ ನಡೆದ ಸ್ವತಂತ್ರತಾ ಆಂದೋಲನ ಸಾರ್ಥಕವಾಗಬೇಕಾದರೆ..ಮೊಮ್ಮಕ್ಕಳ ಕಾಲದಲ್ಲಿಯಾದರೂ ದೇಶಸ್ವಚ್ಛತಾ ಆಂದೋಲನ ನಡೆಯಲೇಬೇಕಲ್ಲವೇ..?

Facebook Comments