ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಮಹಾಸ್ವಾಮಿಗಳ ದಿವ್ಯ ಸಂಕಲ್ಪದಂತೆ, ಕುಂಬಳೆ ಸಮೀಪದ ಮುಜುಂಗಾವು ಎಂಬಲ್ಲಿ ಮೇ-೬-೨೦೦೪ರಂದು ಒಂದು ಸುಸಜ್ಜಿತ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸಾ ಸೌಲಭ್ಯ. ಕೇವಲ ದಾನಿಗಳ ಸುಮಾರು ೧ ಕೋಟಿ ರೂಪಾಯಿ ನೆರವಿನಿಂದ ರೂಪುಗೊಂಡಿದೆ. ಸುಮಾರು ೮,೦೦೦ ಚದರ ಅಡಿ ವಿಸ್ತೀರ್ಣದ ಕಟ್ಟಡದೊಳಗೆ ೩೦ ಹಾಸಿಗೆಗಳುಳ್ಳ ಚಿಕಿತ್ಸಾಲಯ, ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿ, ಆಧುನಿಕ ಪ್ರಯೋಗಾಲಯ, ಕನ್ನಡಕ ಮಳಿಗೆ, ಔಷಧಾಲಯಗಳನ್ನು ಒಳಗೊಂಡಿದೆ. ತಜ್ಞವೈದ್ಯರು, ದಾನಿಗಳು, ಸಿಬಂದಿಗಳ ಸೇವೆ ಸದಾ ಲಭ್ಯವಿದೆ. ಆಂಬ್ಯುಲೆನ್ಸ್ ಸೇವೆ ಇಲ್ಲಿ ನಿರಂತರ ಲಭ್ಯವಿದೆ.

ಇಲ್ಲಿ ಲಭ್ಯವಿರುವ ಚಿಕಿತ್ಸೆಗಳು ಕಣ್ಣಿನ ಪೊರೆ, ಗ್ಲಾಕೋಮ, ಮೆಳ್ಳಿಗಣ್ಣು ವಿಟ್ರಾಕ್ಟಮಿ, ಸ್ಯಾಕ್ ಚಿಕಿತ್ಸೆ, ಫೇಕೋ ಸರ್ಜರಿ ಇತ್ಯಾದಿ. ಕಳೆದ ಐದೂವರೆ ವರ್ಷಗಳಲ್ಲಿ ಇಲ್ಲಿ ಜರಗಿದ ಶಸ್ತ್ರಕ್ರಿಯೆಗಳ ಸಂಖ್ಯೆ ೨,೦೦೦. ಪ್ರತೀ ಆದಿತ್ಯವಾರ ಇತರ ಸೇವಾಸಂಸ್ಥೆಗಳ ಸಹಕಾರದೊಂದಿಗೆ ೧೭೦ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗಿದೆ. ಹಳ್ಳಿ ಪ್ರದೇಶಗಳಲ್ಲಿ ಈ ಶಿಬಿರಗಳನ್ನು ನಡೆಸಿ ರೋಗಿಗಳಿಗೆ ಉಚಿತ ಸಲಹೆ ಶುಶ್ರೂಷೆಗಳನ್ನೂ ನೀಡಲಾಗುತ್ತಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಗತ್ಯವಿರುವ ಬಡರೋಗಿಗಳನ್ನು ಅದೇ ದಿನ ನಮ್ಮ ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಉನ್ನತ ಪರೀಕ್ಷೆಗಳನ್ನು ನಡೆಸಿ ಮರುದಿನ ಉಚಿತ ಶಸ್ತ್ರಕ್ರಿಯೆ ಜರಗಿಸಲಾಗುತ್ತಿದೆ. ಅದರ ಮರುದಿನ ಈ ರೋಗಿಗಳನ್ನು ಶಿಬಿರದ ಸ್ಥಾನಕ್ಕೆ ತಂದು ಬಿಡಲಾಗುವುದು. ಈ ಎರಡು ದಿನಗಳ ಔಷಧೋಪಚಾರ, ಊಟ ಉಪಹಾರ ವ್ಯವಸ್ಥೆ ಆಸ್ಪತ್ರೆಯ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ.

ಇನ್ನು ಶುಲ್ಕ ಪದ್ಧತಿಯ ಹೊರರೋಗಿಗಳ ವಿಭಾಗ, ಸ್ಪೆಷಲ್ ವಾರ್ಡ್, ಶಸ್ತ್ರಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಜರಗಿಸಲಾಗುತ್ತಿದೆ. ಇದಲ್ಲದೆ, ಶಾಲಾಮಕ್ಕಳ ಕಣ್ಣಿನ ತಪಾಸಣಾ ಜವಾಬ್ದಾರಿಯನ್ನು ಸರಕಾರ ನಮಗೆ ವಹಿಸಿದೆ. ನೇತ್ರದಾನ ಮಹತ್ಕಾರ್ಯವನ್ನು ಕೂಡಾ ಮಾಡುತ್ತಾ ಬಂದಿರುತ್ತೇವೆ. ವಿಟಮಿನ್-ಎ ಕೊರತೆಯನ್ನು ನಿವಾರಿಸಲು ಮಾತ್ರೆಗಳನ್ನೂ ವಿತರಿಸಲಾಗುತ್ತಿದೆ.

ಈ ಎಲ್ಲಾ ಮಹತ್ಕಾರ್ಯಗಳಲ್ಲಿ ಕಾಸರಗೋಡು ಅಂಧತ್ವನಿವಾರಣಾ ಸಮಿತಿ, ಲಯನ್ಸ್ ಕ್ಲಬ್‌ಗಳು ಭಾರತೀ ನೇತ್ರ ಚಿಕಿತ್ಸಾಲಯಕ್ಕೆ ಮಾನ್ಯತೆ ನೀಡಿದೆ. ಮತ್ತು ಆರ್ಥಿಕ ಸಹಕಾರವನ್ನು ನೀಡುತ್ತಿದೆ. ಈಗ ಉಪ್ಪಳದ ಡಾ| ಯಂ. ಶ್ರೀಧರ ಭಟ್‌ರನ್ನು ಆಡಳಿತಾಧಿಕಾರಿಯಾಗಿ ಶ್ರೀಗುರುಗಳು ನೇಮಕ ಮಾಡಿರುತ್ತಾರೆ. ಇದರ ಸಹಾಯಕ್ಕೆ ಮತ್ತು ಮಾರ್ಗದರ್ಶನಕ್ಕೆ ಶ್ರೀಗುರುಗಳ ಆಶೀರ್ವಾದ ಹಾಗೂ ಆಡಳಿತ ಸಮಿತಿ ಇದೆ.

Facebook Comments