ಬರವು ಸೃಷ್ಟಿಗೆ ಸಹಜವಲ್ಲ; ಮಳೆಯು ಸಹಜ. ಸಹಜತೆಯು ಸಿದ್ಧಿಸಿದ ಮಹಾಪುರುಷನ ಶುಭಾಗಮನವಾದರೆ ಅಸಹಜವಾದ ಬರ ನೀಗಿ, ಸೃಷ್ಟಿಯು ಮಳೆಯೆಂಬ ತನ್ನ ಸಹಜತೆಗೆ ಮರಳುವುದು!

ಬರವೆಂದರೆ ಮಳೆಯ ಕೊರತೆ. ಪರಿಪೂರ್ಣತೆಯೇ ತಾನಾದವನ ಸಂಗ ಲಭಿಸಿದರೆ ಮತ್ತೆ ಕೊರತೆಯು ಉಳಿಯಲುಂಟೇ? ಋಷ್ಯಶೃಂಗನ ಸಂಗಮಾತ್ರದಿಂದ ಅಂಗರಾಜ್ಯದ ಕೊರತೆಯು ಕಾಣದಂತೆ ಕರಗಿಹೋಯಿತು; ಸಮೃದ್ಧಿಯ ಸಾಧನವಾದ ಮಳೆಯು ಧಾರಾಳವಾಗಿ ಸುರಿಯಿತು!

ಗುರುಗಳಿಲ್ಲದ ತರಗತಿಯು ಗದ್ದಲ-ಗೊಂದಲಗಳ ಗೂಡು; ಒಮ್ಮೆ ಅಲ್ಲಿ ಗುರುಗಳ ಪ್ರವೇಶವಾಯಿತೆಂದರೆ ಎಲ್ಲರೂ ತಮ್ಮ ತಮ್ಮ ಸ್ಥಾನಗಳಿಗೆ ಮರಳುವರು; ಎಲ್ಲವೂ ಅದರದರ ಸಹಜತೆಗೆ ಮರಳುವುದು! ಅಂತೆಯೇ ಋಷ್ಯಶೃಂಗರ ತೆರನಾದ ಲೋಕಗುರುಗಳು ಪಾದವಿರಿಸಿದರೆ ಸಾಕು, ಪಂಚಭೂತಗಳೂ ಸುಸ್ಥಿತಿಗೆ- ಸ್ವಸ್ಥಿತಿಗೆ ಮರಳುವವು! ಪ್ರಕೃತಿಯು ವಿಕೃತಿಯನ್ನು ಕಳೆದು, ಜೀವ~ಕಂದಗಳಿಗೆ ಚೈತನ್ಯ~ಸ್ತನ್ಯವೀಯುವ ತನ್ನ ಸಹಜ ಕಾಯಕವನ್ನು ಅತಿಸಹಜವಾಗಿಯೇ ಮಾಡತೊಡಗುವಳು!

ಋಷ್ಯಶೃಂಗರ ಆಗಮನಮಾತ್ರದಿಂದ, ಅಂಗಾರವಾಗಿದ್ದ ಅಂಗರಾಜ್ಯವು ಬರನೀಗಿ, ಬಂಗಾರವಾದ ಚಮತ್ಕೃತಿ*ಯನ್ನು ಬಿಡಿಸುವುದಾದರೆ ಅದು ಹೀಗೆ!

…..ಹೀಗೆ ಅಂಗರಾಜ್ಯಕ್ಕೆ ಬಹುಕಾಲ ಮಳೆಯು ಬರದ ಕಥೆಯನ್ನು, ಋಷ್ಯಶೃಂಗರು ಬಂದು- ಮಳೆಯನ್ನು ತಂದ ಬಗೆಯನ್ನು ದಶರಥನ ಸಮ್ಮುಖದಲ್ಲಿ ಎಳೆ ಎಳೆಯಾಗಿ ಬಿತ್ತರಿಸಿದನು ಸುಮಂತ್ರ.

“ಪ್ರಭೂ, ಇದು ಯುಗ ಮೊದಲೇ ಸನತ್ಕುಮಾರರು ಋಷಿಶ್ರೇಷ್ಠರಿಗೆ ಬಣ್ಣಿಸಿದ ಋಷ್ಯಶೃಂಗರ ಕಥೆ. ಅವರು ಅಲ್ಲಿಗೆ ನಿಲ್ಲದೆ, ಕೋಸಲದ ಬರವನ್ನೂ ಋಷ್ಯಶೃಂಗರು ಬಗೆಹರಿಸುವ ಬಗೆಯನ್ನು ನಿರೂಪಿಸಿದರು! ಗತಕಾಲದಲ್ಲಿ ನಿಂತು ಅವರು ಅಯೋಧ್ಯೆಯ ಭಾವಿಕಾಲದ ಭವಿತವ್ಯವನ್ನು ತಮ್ಮ ತಪದ ಕಣ್ಣಿಂದ ಕಂಡು ನುಡಿದ ನುಡಿಗಳಿವು:

‘ಋಷಿವರರೇ, ಮುಂದೆ ಸೂರ್ಯಕುಲದಲ್ಲಿ ದಶರಥನೆಂಬ ಚಕ್ರವರ್ತಿಯು ಉದಯಿಸುವನು. ಕರುಳ ಕುಡಿಯಿಲ್ಲದೆ ಕುಲವೇ ಕತ್ತಲಾಗುವ ಹೊತ್ತಿನಲ್ಲಿ ಅವನು ತನ್ನ ಪ್ರಾಣಸಖನಾದ ಅಂಗರಾಜನ ಬಳಿ ಸಾರುವನು. ತನಗೆ ಮಕ್ಕಳಿಲ್ಲದ ಪರಿಣಾಮವಾಗಿ ಮುಳುಗುತ್ತಿರುವ ರವಿಕುಲವನ್ನು ಉಳಿಸಲು ನಿನ್ನ ಅಳಿಯ-ದೇವರನ್ನು ಕಳುಹೆಂದು ಕೇಳುವನು. ಮುನಿಕುಲಮಣಿಯಾದ ಋಷ್ಯಶೃಂಗರು ನಡೆಸುವ ಯಜ್ಞಾಗ್ನಿಯ ಬೆಳಕೇ ಇನ್ನು ಇನಕುಲವನ್ನು ಬೆಳಗುವ ಬೆಳಕೆಂದು ಗೆಳೆಯನಿಗೆ ಕಳಕಳಿಯಲ್ಲಿ ಪೇಳುವನು.

ಮಿತ್ರಕುಲದೀಪಕ*ನಾದ ತನ್ನ ಮಿತ್ರವರ*ನ ಮಾತು ಅಂಗರಾಜನ ಅಂತರಂಗಕ್ಕೆ ತಟ್ಟಿ, ಅವನು ಋಷ್ಯಶೃಂಗರನ್ನು ಅಯೋಧ್ಯೆಗೆ ಕಳುಹಿಕೊಡುವನು. ಋಷ್ಯಶೃಂಗರು ಅಯೋಧ್ಯೆಗೆ ಆಗಮಿಸಿ, ದೊರೆಗೆ ಸಂತತಿಯು ದೊರೆಯುವಂತೆ ಯಜ್ಞಕಾರ್ಯವನ್ನು ನೆರವೇರಿಸುವರು. ತತ್ಫಲವಾಗಿ- ಭುವಿಯ ಭಾಗ್ಯವನ್ನೇ ಬದಲಿಸುವ – ಒಂದಲ್ಲ, ನಾಲ್ಕು ಮಂದಿ ಮಕ್ಕಳು ದಶರಥನಿಗೆ ಜನಿಸುವರು!’

ಆದುದರಿಂದ ಪ್ರಭೂ, ನಾವಿನ್ನು ತಡ ಮಾಡದೆ ಅಂಗರಾಜ್ಯದೆಡೆಗೆ ಸಾಗೋಣ; ಅಲ್ಲಿ ನೆಲೆಸಿರುವ ಋಷ್ಯಶೃಂಗರ ಚರಣಗಳಲ್ಲಿ ಶರಣಾಗೋಣ. ಅಯೋಧ್ಯೆಯ ಹಿತವು ಅವರ ಚರಣಗಳಲ್ಲಿ ನಿಹಿತವಾಗಿದೆ! ಸೂರ್ಯಕುಲದಲ್ಲಿ ಮರಳಿ ಸೂರ್ಯೋದಯವಾಗುವ ಕಾಲವೂ ಸನ್ನಿಹಿತವಾಗಿದೆ! ನಮ್ಮ ಸರ್ವಸೇವೆಗಳು ಋಷ್ಯಶೃಂಗರಿಗೆ ಸಲ್ಲಲಿ; ಅವರ ಪೂರ್ಣಕಾರುಣ್ಯವು ಅಯೋಧ್ಯೆಯನ್ನು ಅರಳಿಸಲಿ”

ಸುಮಂತ್ರನ ಸುವಚನವನ್ನು ಆಲಿಸಿದ ದೊರೆಗೆ ಅಚ್ಚರಿಯೋ ಅಚ್ಚರಿ! ‘ಸಂತಾನಪ್ರಾಪ್ತಿಗಾಗಿ ಅಶ್ವಮೇಧವನ್ನು ಮಾಡುವೆ’ನೆಂದು ಈಗ ತಾನು ಆಲೋಚಿಸುತ್ತಿರುವುದನ್ನು ಎಷ್ಟೋ ಮೊದಲೇ ಸನತ್ಕುಮಾರರು ಹೇಳಿಬಿಟ್ಟಿದ್ದಾರೆ! ಅಷ್ಟು ಮಾತ್ರವಲ್ಲ,ಯಜ್ಞವನ್ನು ಯಾರು ನೆರವೇರಿಸುವರು ಮತ್ತು ಫಲವು ಏನಾಗುವುದೆಂಬುದನ್ನೂ ಅವರು ಆಗಲೇ ನಿರೂಪಿಸಿದ್ದಾರೆ! ಘಟನೆಯು ಘಟಿಸುವ ಮೊದಲೇ ಅದನ್ನು ಕಾಣುವ ಮುನಿಯ ನೇತ್ರಮಹಿಮೆಯು ಮಹಾರಾಜನನ್ನು ಮೂಕಗೊಳಿಸಿತು!

ದಶರಥನಿಗೆ ಒಂದಂತೂ ಬಲು ಚೆನ್ನಾಗಿ ಅರ್ಥವಾಯಿತು. ಅಶ್ವಮೇಧದ ಸಂಕಲ್ಪವನ್ನು ತಾನು ಮಾಡಿದರೂ ಅದು ನಿಜವಾಗಿ ತನ್ನದಲ್ಲ! ಕಾಲಾಂತರಗಳಲ್ಲಿ, ಲೋಕಾಂತರಗಳಲ್ಲಿ ತನ್ನ ಸಂತತಿಯ ವಿಷಯವು ಈಗಾಗಲೇ ಚಿಂತಿತವಾಗಿದೆ, ಮತ್ತು ನಿಶ್ಚಿತವಾಗಿದೆ! ತಾನಲ್ಲಿ ನಿಮಿತ್ತಮಾತ್ರ!

ಸಕಲಪರಿವಾರ ಮತ್ತು ಸತ್ಕಾರದ ಸರ್ವಸಂಭಾರಗಳೊಡನೆ ಕೂಡಲೇ ಅಂಗರಾಜ್ಯಕ್ಕೆ ತೆರಳಿ, ಋಷ್ಯಶೃಂಗರಿಗೆ ಶರಣಾಗುವೆನೆಂದುಕೊಂಡನು ದಶರಥ‌. ಆದರೆ ಸೂರ್ಯಕುಲದ ಸಂಪ್ರದಾಯದಲ್ಲಿ ಗುರುವಿನ ಅನುಮತಿಯಿಲ್ಲದೆ ಸಮ್ರಾಟನ ಅಭಿಪ್ರಾಯವು ಅಪ್ಪಣೆಯಾಗಿ ಮಾರ್ಪಡದು. ಆದುದರಿಂದ ಕುಲೋದ್ಧಾರಕರಾದ ಗುರುಗಳ ಸನ್ನಿಧಿಗೆ ಸಾಗಲು ಕುಲಗುರುಗಳ ಅಪ್ಪಣೆಯನ್ನು ಯಾಚಿಸಿದನು ದಶರಥ..

~*~*~

(ಸಶೇಷ)

ಕ್ಲಿಷ್ಟ-ಸ್ಪಷ್ಟ*:

  • ಚಮತ್ಕೃತಿ = ಚಮತ್ಕಾರ, ಚಮತ್ಕಾರದ ಕೃತಿ
  • ಮಿತ್ರಕುಲದೀಪಕ = ಮಿತ್ರ-ಸೂರ್ಯ; ಸೂರ್ಯವಂಶ. ದಶರಥನು ಸೂರ್ಯಕುಲದೀಪಕ.
  • ಮಿತ್ರವರ =ಗೆಳೆಯ. ದಶರಥನು ಅಂಗರಾಜನ ಸ್ನೇಹಿತ.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ56ನೇ ರಶ್ಮಿ.

 

55 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box