ಸೃಷ್ಟಿಸೇವಕರೆಲ್ಲರೂ ಸುಖವಿಲ್ಲದ ಮುಖ ಹೊತ್ತು ಸೃಷ್ಟಿಕರ್ತನ ಮುಂದೆ ನಿಂತಿದ್ದಾರೆ. ಸೃಷ್ಟಿಯು ಸುಖವಾಗಿದ್ದರಲ್ಲವೇ ಸೃಷ್ಟಿಸೇವಕರು ಸುಖವಾಗಿರುವುದು? ಸಮಸ್ತ ಸೃಷ್ಟಿಯೇ ರಾವಣನೆಂಬ ಮಹಾಸಂಕಟದಲ್ಲಿ ಸಿಲುಕಿ ತೊಳಲಾಡುತ್ತಿರುವಾಗ ಸೃಷ್ಟಿಸೇವಕರಾದ ದೇವತೆಗಳಿಗೆಲ್ಲಿಯ ಸುಖ?

ಜೀವಜಾಲದ ಸಹಜ ಸುಖದ ವೈರಿ ರಾವಣ! ಅವನು ಉದಿಸಿದ ಬಳಿಕ ಲೋಕದ ಸುಖವೇ ನಶಿಸಿತು! ರಾಹುವಿನ ಕರಿನೆರಳು ಬಿದ್ದ ಮೇಲೆ ಭೂಮಿಗೆಲ್ಲಿಯ ಬೆಳಕು? ರಾವಣನೆಂಬ ರಾಹುವು ಸುಖದ ಸೂರ್ಯನನ್ನೇ ನುಂಗಿದ ಮೇಲೆ ಜೀವಲೋಕದ ಪಾಡಂತು!

ರಾವಣನೆಂದರೆ ಅದು ಮೈವೆತ್ತು ಬಂದ ನಾಶ! ಅವನ ಗಮನ ಹೋದಲ್ಲಿ ಆತಂಕ; ಆಗಮನವಾದಲ್ಲಿ ಆಪತ್ತು! ಅವನು ಕಣ್ಣಿಟ್ಟಲ್ಲಿ ಕ್ರೌರ್ಯ; ಕಾಲಿಟ್ಟಲ್ಲಿ ಕೊಲೆ!
~
ವಿಪರ್ಯಾಸವೆಂದರೆ, ರಾವಣನೆಂಬ ನಾಶದ ದೂತನು ಜನಿಸಿದುದು ಸೃಷ್ಟಿಕರ್ತನ ಕುಲದಲ್ಲಿ! ಬ್ರಹ್ಮಮಾನಸಪುತ್ರರಾದ ಪುಲಸ್ತ್ಯರ ಪೌತ್ರನೇ ರಾವಣ; ಆದುದರಿಂದಲೇ ಅವನಿಗೆ ಪೌಲಸ್ತ್ಯನೆಂಬ ಅಭಿಧಾನ. ಬ್ರಹ್ಮದೇವನು ರಾವಣನಿಗೆ ಸಂಬಂಧದಲ್ಲಿ ಪ್ರಪಿತಾಮಹನಾಗಬೇಕು! ಆದರೆ, ಬ್ರಹ್ಮದೇವನ ಸಂಬಂಧಕ್ಕೂ – ಅವನ ಸ್ವಭಾವಕ್ಕೂ ಯಾವ ಸಂಬಂಧವೂ ಇಲ್ಲ!

ಬ್ರಹ್ಮದೇವನ ವಂಶವು ರಾವಣನಿಗೆ ಭದ್ರಪೀಠವಾದರೆ, ಅವನದೇ ವರವು ವಜ್ರಕವಚ!
ಶುಭವೃಕ್ಷದಲ್ಲಿ ಬಂದಳಿಕೆ ಜನಿಸುವುದಿಲ್ಲವೇ? ಜನಿಸಿದ ಬಳಿಕ, ಆ ವೃಕ್ಷದ ಸಾರವನ್ನೇ ಹೀರಿ ಬೆಳೆಯುವುದಿಲ್ಲವೇ? ಬೆಳೆದ ಬಳಿಕ, ಆಶ್ರಯವೃಕ್ಷದ ಅವಸಾನಕ್ಕೇ ಕಾರಣವಾಗುವುದಿಲ್ಲವೇ? ಅಂತೆಯೇ, ರಾವಣನೂ ಸೃಷ್ಟಿಕರ್ತನ ವಂಶದಲ್ಲಿಯೇ ಜನಿಸಿ, ಸೃಷ್ಟಿಕರ್ತನ ಅನುಗ್ರಹದ ಸಾರವನ್ನೇ ವರವಾಗಿ ಹೀರಿ ಬೆಳೆದು, ಇದೀಗ ಸೃಷ್ಟಿಕರ್ತನ ಸಮಗ್ರ ಸೃಷ್ಟಿಗೇ ಕಂಟಕಪ್ರಾಯನಾಗಿ ಪರಿಣಮಿಸಿದವನು!
~
ಸಮಸ್ಯೆಯೊಂದನ್ನು ಪರಿಹರಿಸಬೇಕಾದರೆ ಅದರ ಮೂಲಕ್ಕೆ ಹೋಗಬೇಕು. ರೋಗವೊಂದನ್ನು ಗುಣಪಡಿಸಬೇಕಾದರೆ ಅದರ ನಿದಾನದೆಡೆಗೆ- ಎಂದರೆ- ಆದಿಕಾರಣದೆಡೆಗೆ ಸಾಗಬೇಕು. ವಂಶಮೂಲನಾಗಿ, ವರವಿತ್ತವನಾಗಿ, ತನ್ಮೂಲಕ- ರಾವಣರೋಗದ ಆದಿಕಾರಣನಾದ ಬ್ರಹ್ಮದೇವನ ಬಳಿಯೇ- ಪರಿಹಾರಕ್ಕಾಗಿ – ರಾವಣ ಸಂಹಾರಕ್ಕಾಗಿ – ಸಾಗಿದರು ಸರ್ವ ಸುರರು.

‘ನಿನ್ನ ಸೃಷ್ಟಿಯಾದ ಈರೇಳು ಲೋಕಗಳನ್ನು ಉಳಿಸಲು- ನಿನ್ನ ಸೃಷ್ಟಿಯೇ ಆದ ರಾವಣನನ್ನು ಅಳಿಸು!’ ಎಂಬ ಭಾವವು ಸೃಷ್ಟಿಕರ್ತನೆಡೆ ಸಾಗುವ ಸುರರ ಹೆಜ್ಜೆಗಳ ಲಯವಾಗಿತ್ತು; ಮನದ ಮಂತ್ರವೇ ಆಗಿತ್ತು!
~
ದಶರಥನ ಪುತ್ರಕಾಮೇಷ್ಟಿಯ ಯಜ್ಞವೇದಿಕೆಯನ್ನೇ ದೇವತೆಗಳು- ರಾವಣನೆಂಬ ಮಹಾವಿಶ್ವಕಂಟಕದ ಪರಿಹಾರಕ್ಕೆ ಮೊರೆಯಿಡುವ ವೇದಿಕೆಯಾಗಿ ಸ್ವೀಕರಿಸಲು ಪ್ರಬಲ ಪ್ರೇರಣೆಯೇ ಕಾರಣ!

ಕಾಲ~ದೇಶ~ಸನ್ನಿವೇಶಗಳು ಸೇರಿ ಬರದೆ ಏನೊಂದೂ ನಡೆಯದು! ಅಂತೆಯೇ, ರಾವಣಸಂಹಾರದ ಮಹತ್ಕಾರ್ಯಕ್ಕೆ ಬೀಜಾವಾಪಗೈವ ಕಾಲವೀಗ ಸನ್ನಿಹಿತವಾಗಿದೆಯೆಂದೂ, ಅಯೋಧ್ಯೆಯೇ ಅದಕ್ಕೆ ಸೂಕ್ತಸ್ಥಾನವೆಂದೂ, ದಶರಥನ ಪುತ್ರಕಾಮೇಷ್ಟಿಯು ಸಮುಚಿತವಾದ ಸನ್ನಿವೇಶವೆಂದೂ ಅಂತರ್ವಾಣಿಯು ಕೂಗಿ ಹೇಳುತ್ತಿರುವಂತೆ- ಸುರರು ಸರ್ವಪಿತಾಮಹನ ಸಮ್ಮುಖದಲ್ಲಿ ಸರ್ವಜೀವಗಳ ಸಂಕಟವನ್ನು ತೆರೆದಿಟ್ಟರು..

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ72ನೇ ರಶ್ಮಿ.

 

71 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box