ತನ್ನ ಚಂಚುವಿನಲ್ಲಿರುವ ಆಹಾರವನ್ನು ಮರಿಹಕ್ಕಿಯ ಬಾಯಲ್ಲಿರಿಸುವ ತಾಯಿಹಕ್ಕಿಯನ್ನೊಮ್ಮೆ ಭಾವಿಸಿಕೊಳ್ಳಿ; ನಿಸ್ವಾರ್ಥದ ಪರಾಕಾಷ್ಠೆಯಿದೆ ಅಲ್ಲಿ! ಬಾಯೊಳಗಿನ ಆಹಾರದ ಸವಿ ನೋಡದೆ ಮತ್ತೊಂದು ಬಾಯಿಗೆ ಸ್ಥಾನಾಂತರಿಸುವುದು ಸನ್ಯಾಸಕ್ಕಿಂತ ಮಿಗಿಲಲ್ಲವೇ!?
ಕಾನನದಲ್ಲಿ ಮೂಲ-ಫಲಗಳಿಗಾಗಿ ಅಲೆಯುವ ವಿಭಾಂಡಕರ ಎದೆಯಲ್ಲಿ ನಿರಂತರ ನೆಲೆಸಿದ್ದುದು ಮಗನ ರೂಪವೇ! ಒಂದೊಂದು ಕಂದವನ್ನು ಆಯುವಾಗಲೂ ಹಾಯುತ್ತಿದ್ದುದು ‘ಇದು ತನ್ನ ಕಂದನಿಗಾಗಿ’ ಎಂಬ ಭಾವವೇ! ಒಂದೊಂದು ಫಲವನ್ನು ಕೊಯ್ಯುವಾಗಲೂ ಸುಯ್ಯುತ್ತಿದ್ದುದು ತನ್ನ ಬದುಕಿನ ಪರಮಫಲವೇ ಆಗಿದ್ದ ಪುತ್ರರತ್ನವು ತಂಪಾಗಿರಲಿ, ತೃಪ್ತನಾಗಿರಲಿ ಎಂಬ ತಾಯ್ತನವೇ! ‘ರಾಮರುಚಿಯೇ ತನ್ನ ರುಚಿ! ರಾಮತೃಪ್ತಿಯೇ ತನ್ನ ತೃಪ್ತಿ!’ ಎಂದು ರಾಮನಿಗಾಗಿ ಫಲಗಳನ್ನು ಆಯುವ, ಅನುಕ್ಷಣವೂ ರಾಮನನ್ನೇ ಕಾಯುವ ಶಬರಿಯ ಭಾವದ ಆವಿರ್ಭಾವವಲ್ಲಿ!
ತನ್ನ ಕಂದನಿಗಾಗಿ ಕಂದ-ಮೂಲ-ಫಲಗಳನ್ನು ಉಡಿಯ ತುಂಬಾ ತುಂಬಿಕೊಂಡು, ಗೂಡಿಗೆ ಮರಳುವ ತಾಯಿಹಕ್ಕಿಯ ಚೆಂದದಲ್ಲಿ ಉಟಜಕ್ಕೆ ಮರಳಿದ ಮುನಿಯನ್ನು ಶೂನ್ಯವು ಸ್ವಾಗತಿಸಿತು! ಪೂರ್ಣಕ್ಕೆ ಶೂನ್ಯದ ಸ್ವಾಗತ! ಭಾವಕ್ಕೆ ಅಭಾವದ ಸ್ವಾಗತ! ನಿರೀಕ್ಷೆಗೆ ಆಘಾತದ ಸ್ವಾಗತ! ದೇವರಿಲ್ಲದ ಗುಡಿಯಂತೆ, ಜೀವವಿಲ್ಲದ ಒಡಲಂತೆ, ತಿಲಕವಿಲ್ಲದ ನೊಸಲಂತೆ, ತಂಗದಿರನಿರದ ಇರುಳಂತೆ ಹಾಳುಬಡಿದಿತ್ತು ಮುನಿಯ ಮನೆ! ವನದ ಮನೆಯಲ್ಲಿ ಮನದ ಮನೆಯೊಡತಿಯ- ವನಿತೆ ಸೀತೆಯ ಕಾಣದೆ ಕಂಗೆಟ್ಟ ಕಾಕುತ್ಸ್ಥನಂತಾಯ್ತು ಮುನಿಯ ಮನ!
ಹುಚ್ಚು ಹಿಡಿದವರಂತೆ ಆಶ್ರಮದೊಳಗೂ ಹೊರಗೂ ಹುಡುಕಾಡಿದರು; ಸಾಮಾನ್ಯವಾಗಿ ಸುತನು ಸಂಚರಿಸುವ, ಪರ್ಣಕುಟಿಯ ಪರಿಸರ-ಪ್ರದೇಶಗಳಿಗೆ ಎಡತಾಕಿದರು ವಿಭಾಂಡಕರು ವ್ಯರ್ಥವಾಗಿ..
ಎಲ್ಲವೂ ಅಲ್ಲಲ್ಲಿಯೇ ಇದೆ; ಆದರೆ ಎಲ್ಲಿಯೂ ಮಗನ ಸುಳಿವಿಲ್ಲ! ಬದುಕಿನಲ್ಲಿ ಯಾವುದೋ ಒಂದು ಸಂಗತಿಯೇ ಸರ್ವಸ್ವವಾಗಿದ್ದಾಗ, ಒಂದು ದಿನ ಅದು ಇಲ್ಲವಾದರೆ ಆ ಜೀವವು ಅನುಭವಿಸುವ ವೇದನೆಗೆ ಎಣೆಯಿದೆಯೇ!? ತನ್ನ ಏಕಮಾತ್ರಪುತ್ರನನ್ನು, ತನ್ನೊಲವಿನ ಏಕೈಕ ಸೆಲೆಯನ್ನು, ತನ್ನ ನಲಿವಿನ ಏಕೈಕ ನೆಲೆಯನ್ನು ಕಾಣದ ವಿಭಾಂಡಕರ ವಿರಹವ್ಯಥೆಗೆ ಎಲ್ಲೆಯಿಲ್ಲ!
ಇಲ್ಲದ ಮಗನನ್ನು ಎಣಿಸಿ ಉಮ್ಮಳಿಸುವ ಮುನಿಯ ಶೋಕವು ಕ್ರಮೇಣ ‘ಇರದಂತೆ ಮಾಡಿದವರಾರು?’ ಎಂಬ ಶಂಕೆಯಲ್ಲಿ ಪರಿವರ್ತಿತವಾಯಿತು. ಚಿಂತಿಸಿದಂತೆ ಚಿಂತಿಸಿದಂತೆ ಆ ಶಂಕೆಯು ಅಂಗರಾಜ್ಯಾಧಿಪನಲ್ಲಿ ಸ್ಥಿರವಾಗತೊಡಗಿತು. ಕಾರ್ಯಕಾರಣವಿವೇಚನೆಯು ‘ದೊರೆಯ ಕಾರ್ಯವಿದಾಗಿರಬಹುದು’ ಎಂಬಲ್ಲಿಗೆ ತಂದು ನಿಲ್ಲಿಸುತ್ತಿದ್ದಂತೆಯೇ ಮಗನ ಕುರಿತಾದ ಮಹಾಶೋಕವು ಮಹಾರಾಜನ ಕುರಿತಾದ ಮಹಾಕ್ರೋಧವಾಗಿ ಮಾರ್ಪಟ್ಟಿತು! ತನ್ನ ಪಾಡಿಗೆ ತಾನಿದ್ದರೂ ತನಯನ ಅಪಹರಿಸಿ, ತನ್ನನ್ನು ತೀರದ ಶೋಕಕ್ಕೆ ನೂಕಿದ ದೊರೆಯ ಸುಡುವೆನೆಂದುಕೊಂಡರು ವಿಭಾಂಡಕರು! ಕೊಂಬೆಯೆರಡರ ನಡುವೆ ಕಿಡಿಯಾಗಿ ಹುಟ್ಟುವ ಕಿಚ್ಚು ಕ್ರಮೇಣ ಇಡಿಯ ಕಾಡನ್ನೇ ವ್ಯಾಪಿಸುವಂತೆ ಕ್ಷಣೇ ಕ್ಷಣೇ ಹೆಚ್ಚುತ್ತಲೇ ಇದ್ದ ಮಹರ್ಷಿಯ ಕ್ರೋಧಾಗ್ನಿಯು ಪ್ರಳಯಾಗ್ನಿಯಾಗಿ ಬೆಳೆಯಿತು!
ಭೂಮಂಡಲವನ್ನೇ ನಡುಗಿಸುವ ಹೆಜ್ಜೆಗಳನ್ನಿಟ್ಟು ಚಂಪಾನಗರಿಯೆಡೆಗೆ ನಡೆದರು ವಿಭಾಂಡಕರು. ಅಂಗರಾಜ್ಯಕ್ಕೆ ಅಂಗಾರವಾಗುವೆನೆಂದು ಹೊರಟಿದ್ದ ವಿಭಾಂಡಕರನ್ನು ತಡೆದು ನಿಲ್ಲಿಸುವ ಶಕ್ತಿ ಬ್ರಹ್ಮಾಂಡದಲ್ಲಿ ಯಾರಿಗೂ ಇರಲಿಲ್ಲ! ದಕ್ಷಾಧ್ವರಧ್ವಂಸಕ್ಕಾಗಿ ಮೇಲೆದ್ದ ರುದ್ರಮೂರ್ತಿಯಂತೆ ಆ ಕ್ಷಣದಲ್ಲಿ ತೋರಿ ಬಂದರು ವಿಭಾಂಡಕರು! ಬರದ ಬೇಗೆಯಿಂದ ವಿಭಾಂಡಕರ ಕ್ರೋಧದ ಬೆಂಕಿಗೆ ಬೀಳುವುದರಲ್ಲಿತ್ತು ಅಂಗರಾಜ್ಯ.
ನಿಂತಲ್ಲಿಯೇ ಸುಡುವ ಶಕ್ತಿಯಿದ್ದರೂ ಹಾಗೆ ಮಾಡದೇ ಯಾವುದಕ್ಕೂ ಒಮ್ಮೆ ನೋಡುವೆನೆಂಬಂತೆ ಮುನಿಯು ಅಂಗರಾಜ್ಯದೆಡೆಗೆ ನಡೆತಂದುದು ರೋಮಪಾದನ ಭಾಗ್ಯಶೇಷವೇ ಸರಿ!
ಬಹುದೂರದ ಪ್ರಯಾಣವದು. ಎದೆಯೊಳಗೆ ವಿರಹಾಗ್ನಿ, ಉದರದಲಿ ಜಠರಾಗ್ನಿಗಳು ನಿರತ ಉರಿಯುತಿರೆ, ಎಡೆಬಿಡದೆ ನಡೆದು ಬಳಲಿತು ತಪೋನಿಧಿಯ ತಪ್ತತನು! ತೊಟ್ಟು ನೀರಿಗೇ ಹಾತೊರೆಯುತ್ತಿದ್ದ, ಬರಗೆಟ್ಟ ಅಂಗರಾಜ್ಯದ ಅವತಾರವಾಯಿತೇ ಮುನಿಯ ಅಂಗದೊಳಗೆ? ಅಂಗರಾಜ್ಯವ ತಣಿಸಲು ಋಷ್ಯಶೃಂಗನು ಬಂದಂತೆ ವಿಭಾಂಡಕರ ಹಸಿವು-ತೃಷೆಗಳ ತಣಿಸಲು ಬರುವವರಾರು?
ಆಗ ಋಷಿಯ ಕಣ್ಮುಂದೆ ಗೋಚರಿಸಿದವು ಸಾಲುಸಾಲು-ಸಾವಿರಸಾವಿರ ಗೋವುಗಳ ಹಿಂಡು. ಅವುಗಳ ಹಿಂದೆ ಗೋಪಾಲಕರ ದಂಡು. ಸುತ್ತಮುತ್ತಲೂ ಸದ್ಯದಲ್ಲಿಯೇ ಬಿದ್ದ ಮಳೆಯಿಂದಾಗಿ ನೆನೆದ, ವಿಶಾಲ ಕೃಷಿಭೂಮಿ. ಅಲ್ಲಿ ಉತ್ತನೆ-ಬಿತ್ತನೆಯಲ್ಲಿ ತೊಡಗಿದ್ದ ಕೃಷೀವಲ ವರ್ಗ.
ಮುನಿಯ ಬರವನ್ನೇ ಕಾಯುತ್ತಿರುವವರಂತೆ ತಾವಾಗಿಯೇ ಬಳಿಸಾರಿ, ಚರಣಗಳಲ್ಲಿ ಮಣಿದು, ಮುನಿಯನ್ನು ಮನೆಯೊಳಗೆ ಕರೆದೊಯ್ದರು ಗೋಪಾಲಕರು. ಅಲ್ಲಿ ಮುಗ್ಧಭಕ್ತಿ-ಶುದ್ಧಹಾಲುಗಳ; ವಿನಯವಚನ-ವೈವಿಧ್ಯದ ಭೋಜನಗಳ ಸತ್ಕಾರ ಸಂದಿತು ವಿಭಾಂಡಕರಿಗೆ. ವ್ಯಜನ-ವೀಜನದ ನಡುವೆ ವಿಶ್ರಮಿಸಿದ ಮುನಿಯ ಉದರದ ಜೊತೆಗೆ ಹೃದಯವೂ ಕೊಂಚ ತಂಪಾಯಿತು.
“ಯಾರಪ್ಪ ನೀವು ಪುಣ್ಯಾತ್ಮರು?” ಎಂಬ ತನ್ನ ಜಿಜ್ಞಾಸೆಗೆ “ನಾವು ನಿಮ್ಮವರೇ!” ಎಂಬ ಉತ್ತರ ಬಂದಾಗ ಮುನಿಗೆ ಬೆರಗೋ ಬೆರಗು! “ಹೌದು ಮುನಿವರ್ಯಾ, ನಾವೆಲ್ಲರೂ ಋಷ್ಯಶೃಂಗರ ಸೇವಕರು. ಇಲ್ಲಿ ಕಂಡುಬರುವ ಗೋವುಗಳು ಋಷ್ಯಶೃಂಗರಿಗೆ ಸೇರಿದವುಗಳು. ಕಣ್ಣಿಗೆ ಕಾಣುವಷ್ಟು ದೂರದ ಭೂಮಿಯೆಲ್ಲವೂ ಋಷ್ಯಶೃಂಗರ ಸ್ವಾಮಿತ್ವಕ್ಕೆ ಒಳಪಟ್ಟಿದ್ದು.” ಎಂದು ಗೋಪಾಲಕರು ತಲೆಬಾಗಿ ಕೈಮುಗಿದು ನುಡಿಯುವಾಗ ಮುನಿಗೆ ಸಂತಸವಾಗದಿರಲು ಸಾಧ್ಯವೇ?
ಮುನ್ನಡೆದಂತೆ ಮುನ್ನಡೆದಂತೆ ಮಹರ್ಷಿಗೆ ಮತ್ತೆಮತ್ತೆ ಅದೇ ಅನುಭೂತಿ. ದಾರಿಯುದ್ದಕ್ಕೂ ಅಲ್ಲಲ್ಲಿ ಅಲ್ಲಲ್ಲಿ ಗೋವುಗಳು, ಗೋಪಗೋಪಿಯರು; ಇಕ್ಕೆಲಗಳಲ್ಲಿ ಸದ್ಯೋವೃಷ್ಟಿಯಲ್ಲಿ ನೆನೆದ, ಕೃಷಿಯಿಂದ ಹಸಿರಾಗುತ್ತಿರುವ ಭೂರಮೆ. ಎಲ್ಲೆಡೆ ಸ್ವಾಗತ-ಸತ್ಕಾರ-ಸುಮಧುರ ವ್ಯವಹಾರಗಳು. ಎಲ್ಲವೂ ತನ್ನ ಸುತನಿಗೆ ಸೇರಿದ್ದೆಂಬ ಅಮೃತವಚನಗಳು.
ನಾಡಿನ ಭಾಗ್ಯದಲ್ಲಿಯೇ ಮಾರ್ಪಾಡು ತಂದ ಮುನಿವರನ ಪಿತನ ಕೋಪಶಮನಕ್ಕೆ ರೋಮಪಾದನು ಮಾಡಿದ ಏರ್ಪಾಡು ಅದು.
ಆಶ್ರಮದಿಂದ ಹೊರಡುವಾಗ ಕೆರಳಿ ಕೆಂಡವಾಗಿದ್ದ ವಿಭಾಂಡಕರು ಅರಮನೆ ಸೇರುವಷ್ಟರಲ್ಲಿ ತಣಿದು ತಂಪಾಗಿದ್ದರು. ಅರಮನೆಯಲ್ಲಿ ವಿನಯದ ವಿರಾಟ್ಪುರಷನಂತಿದ್ದ ದೊರೆಯ ಪಾರ್ಶ್ವದಲ್ಲಿ ಪರಮಸಂತೋಷದ ಮೂರ್ತಿಯಾಗಿ ನಿಂತಿದ್ದ ತನ್ನ ಪ್ರೇಮದ ಪುತ್ಥಳಿಯೇ ಆದ ಪುತ್ರ; ಅವನೊತ್ತಿಗೆ ಅಂಗರಾಜನ ಪ್ರೇಮದ ಪುತ್ಥಳಿ ರಾಜಕುಮಾರಿ ಶಾಂತಾ! ಇನ್ನೀಗ ಶಾಂತರಾಗದಿರುವುದಾದರೂ ಹೇಗೆ ವಿಭಾಂಡಕರು?
ಅಹುದೇ ಅಹುದು. ತನ್ನ ನಾಡಿನ ಕ್ಷಾಮವನ್ನು ನೀಗಿ, ಕ್ಷೇಮವನ್ನು ನೀಡಿದ್ದ ಮುನಿಪುತ್ರನಿಗೆ ದೊರೆಯು ರಾಜ್ಯವೆಲ್ಲವನ್ನೂ ಸಮರ್ಪಿಸಿದ್ದು ಮಾತ್ರವಲ್ಲ, ತನ್ನ ಮಗಳನ್ನೇ ಮಂಗಲದಕ್ಷಿಣೆಯಾಗಿ ಸಮರ್ಪಿಸಿ ತ್ಯಾಗವೈಭವವನ್ನು ಮೆರೆದಿದ್ದ! ಮಹಾರಾಜನೊಬ್ಬನು ಮುದ್ದಿನ ಮಗಳನ್ನು ವನವಾಸಿ ತಾಪಸಿಗೆ ನೀಡುವುದು ಸಣ್ಣಸಂಗತಿಯೇನಲ್ಲವಲ್ಲವೇ!
ತನ್ನ ಮಗನಿಗೆ ಸಂದ ಮಹಾಸಮರ್ಪಣೆ, ತನ್ನ ಮಗನಿಂದ ಸಮಸ್ತರಾಜ್ಯಕ್ಕೇ ಸಂದ ಸರ್ವಸುಕ್ಷೇಮ, ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯದೊಳಿತಿಗಾಗಿ ತನ್ನದೆಲ್ಲವನ್ನೂ ತ್ಯಾಗಮಾಡುವ ರಾಜನ ಮಾನೋಭಾವಗಳು ವಿಭಾಂಡಕರನ್ನು ಪರಮಪ್ರಸನ್ನಗೊಳಿಸಿದವು!
ಸಣ್ಣ ಲೋಪವೊಂದು ದೊಡ್ಡ ಪಾಪವಾಗಿ ರಾಜ್ಯಕ್ಕೇ ಕ್ಷಾಮತಂದ, ದೊಡ್ಡ ತ್ಯಾಗವೊಂದು ಮಹಾಪುಣ್ಯವಾಗಿ ರಾಜ್ಯಕ್ಕೆ ಮರಳಿ ಕ್ಷೇಮ ತಂದ, ಅಂಗರಾಜ್ಯದ ತುಂಗಸಂದೇಶದ ಕಥೆಯಿದು! ಒಮ್ಮೆ ಕೊಡುವೆನೆಂದು ಬಳಿಕ ಕೊಡದ ತಪ್ಪಿಗೆ ಪಡಬಾರದ ಪಾಡು ಪಟ್ಟು, ಎಲ್ಲವನ್ನೂ ಕೊಟ್ಟು ಪರಿಹಾರ ಮಾಡಿಕೊಂಡ ರೋಮಪಾದನು ಅಡಿಗಡಿಗೆ ನೆನಪಾದರೆ ಬರಬಾರದ ಬಾಳು ಬರದೆ, ಬರ ಬಾರದ ಬಂಗಾರದ ಬಾಳು ಬಾರದೇ?
~*~*~
(ಸಶೇಷ)
ಕ್ಲಿಷ್ಟ-ಸ್ಪಷ್ಟ:
- ಚಂಚು = ಕೊಕ್ಕು
- ತಂಗದಿರ= ಚಂದ್ರ
- ಉಟಜ = ಪರ್ಣಶಾಲೆ
- ಕಾಕುತ್ಸ್ಥ = ಸೂರ್ಯವಂಶೀಯ / ಶ್ರೀರಾಮಚಂದ್ರ
- ಸದ್ಯೋವೃಷ್ಟಿ = ಕೂಡಲೇ ಬರುವ ಮಳೆ, ತತ್-ಕ್ಷಣದ ಮಳೆ
- ವ್ಯಜನ= ಬೀಸಣಿಕೆ
- ಕೃಷೀವಲ = ಕೃಷಿಕ, ಬೇಸಾಯಗಾರ ಸಮೂಹ
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ ಯ 55ನೇ ರಶ್ಮಿ.
54 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.
ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.
November 30, 2017 at 10:51 AM
ಹಿಂದೊಮ್ಮೆ ಸತ್ಯಕಾಮರೆಂಬ ಬರಹಗಾರರ ಬರಹಗಳನ್ನು ಓದುತ್ತಿದ್ದೆ. ಅವರದ್ದು ವಿಶೇಷ ಶೈಲಿ. ಒಂದು ವಾಕ್ಯವನ್ನು ಒಮ್ಮೆಯೇ ಓದಿದರೆ ಅರ್ಥವಾಗಿಬಿಡುವ ಶೈಲಿಯಲ್ಲವದು! ಪುನರಪಿ ಓದಬೇಕು. ವಾಕ್ಯಗಳನ್ನು ಪದಗಳಲ್ಲಿ, ಹತ್ತಾರು ವಾಕ್ಯಗಳನ್ನು ಒಂದು ವಾಕ್ಯದಲ್ಲಿ, ಒಂದಿಡೀ ಅನುಭವವನ್ನು ಕೆಲವು ವಾಕ್ಯಗಳಲ್ಲಿ ಹರಡಿ ಓದುವವನಿಗೆ ಸವಾಲೆನಿಸುವ ಬರಹಗಳವು. ಇಂದು ಈ ಬರಹವನ್ನು ಓದಿ ಅವರ ನೆನಪಾಯಿತು.
ಪುನಃ ಹೇಳುವ ಆಸೆ. ವಾಲ್ಮೀಕಿಯ ಶೈಲಿಯಿದು. ಎಲ್ಲಿ ಎಷ್ಟು ಬೇಕೋ ಅಷ್ಟೇ! ಹೆಚ್ಚು ಪದಗಳಿಲ್ಲ, ಹೇಳಬೇಕಾದ್ದೆಲ್ಲವನ್ನೂ ಅಳೆದು ತೂಗಿ ಹೇಳುವ ಪರಿ ಕವಿ ವಾಲ್ಮೀಕಿಯದ್ದು. ಇದು ಅದರ ಪಡಿಯಚ್ಚು.
ಈ ಹಿಂದಿನ ಬರಹಗಳಿಗೆ ಹೋಲಿಸಿದರೆ ಇಂದಿನದ್ದು ಓದುಗನಿಗೆ ಸವಾಲ್ ಎನಿಸುವಂತಿದೆ.
November 30, 2017 at 11:13 AM
Dear Reader, I challenge, You would have read below sentences at least twice … 🙂
ವನದ ಮನೆಯಲ್ಲಿ ಮನದ ಮನೆಯೊಡತಿಯ- ವನಿತೆ ಸೀತೆ
ಎದೆಯೊಳಗೆ ವಿರಹಾಗ್ನಿ, ಉದರದಲಿ ಜಠರಾಗ್ನಿಗಳು ನಿರತ ಉರಿಯುತಿರೆ, ಎಡೆಬಿಡದೆ ನಡೆದು ಬಳಲಿತು ತಪೋನಿಧಿಯ ತಪ್ತತನು
ತೊಟ್ಟು ನೀರಿಗೆ ಹಾತೊರೆಯುತ್ತಿದ್ದ, ಬರಗೆಟ್ಟ ಅಂಗರಾಜ್ಯದ ಅವತಾರವಾಯಿತೇ ಮುನಿಯ ಅಂಗದೊಳಗೆ?
ವ್ಯಜನ-ವೀಜನದ ನಡುವೆ ವಿಶ್ರಮಿಸಿದ ಮುನಿಯ ಉದರದ ಜೊತೆಗೆ ಹೃದಯವೂ ಕೊಂಚ ತಂಪಾಯಿತು.
ರೋಮಪಾದನು ಅಡಿಗಡಿಗೆ ನೆನಪಾದರೆ ಬರಬಾರದ ಬಾಳು ಬರದೆ, ಬರ ಬಾರದ ಬಂಗಾರದ ಬಾಳು ಬಾರದೇ?
November 30, 2017 at 1:07 PM
ಅಂಗರಾಜ್ಯದ ಬರ ಕಳೆದು, ಭೂಮಿ ಹಸನಾಯಿತು;
ಋಷ್ಯಶೃಂಗರ ಏಕಾಂತ ಕಳೆದು ಬದುಕು ಹಸನಾಯಿತು.
ಅಂಗ ದೇಶ ಬೆಳಗಲು ಋಷ್ಯಶೃಂಗರ ಮುಗ್ಧತೆ ಹೇಗೆ ಕಾರಣವೋ,
ದೇಶ ಉಳಿಯಲು ವಿಭಾಂಡಕರ ತಾಳ್ಮೆಯೂ ಕಾರಣ!
ಕುತೂಹಲಕಾರೀ ಕಥಾಕಥನ..
November 30, 2017 at 3:43 PM
ತಾಯಿಹಕ್ಕಿ ತನ್ನ ಬಾಯೊಳಗಿನ ಆಹಾರದ ಸವಿಯ ನೋಡದೆ…ತನ್ನ ಪುಟ್ಟ ಮರಿಯ ಬಾಯಿಗೆ ಇಡುವ ಆ ನಿಸ್ವಾರ್ಥದ ಪರಾಕಾಷ್ಠೆ ..ಈ ತರಹದ ಅದ್ಭುತ ಕಾವ್ಯವನ್ನು ನಮಗೂ ಅರ್ಥವಾಗುವ ರೀತಿಯ ವರ್ಣನೆ…..ದೇವರೇ ಅದಾವ ಜನ್ಮದ ಪುಣ್ಯ ಫಲವೋ..ನಮಗೆ ಸಿಕ್ಕಿದೆ… #ರಾಮರಶ್ಮಿ
December 1, 2017 at 10:24 PM
ಎಂತಹ ಅದ್ಭುತ ಕಥೆ .. ಋಷ್ಯಶೃಂಗರ,
ವಿಭಾಂಡಕರ ತ್ಯಾಗದಿಂದ ಬರದ ನಾಡಿಗೆ
ಅಮೃತ ಸಿಂಚನ.. ಹರೇರಾಮ.