ಆಳಕ್ಕಿಳಿದು ನೋಡಿದರೆ…
ಕತ್ತಲೆಯು ಬೆಳಕಿನ ವಿರೋಧಿಯಲ್ಲ!
ಹಸಿವು ತೃಪ್ತಿಯ ವೈರಿಯಲ್ಲ!
ಮರಣವು ಜನನದ ಶತ್ರುವಲ್ಲ!

ಕತ್ತಲೆಯಲ್ಲಿಯೇ ದೀಪದ ದೀಪ್ತಿ!
ಹಸಿವಿನಿಂದಲೇ ಅನ್ನದ ರುಚಿ!
ಮರಣದಿಂದಲೇ ಮತ್ತೊಂದು ಜನನ!

ಕಾಣದ ಸೊಬಗನ್ನು ಕಂಡಾಗ ಅನಿರ್ವಚನೀಯವಾದ ಸುಖ!
ಕಂಡ ಸೊಬಗು ಕಣ್ಮರೆಯಾದಾಗ ಅಪರಿಮಿತವಾದ ದುಃಖ!
ಕಣ್ಮರೆಯಾಗಿ ಕಾಡುವ ಸೊಬಗು ಮತ್ತೆ ಕಂಡು ಬಂದಾಗ ಎಲ್ಲಿಲ್ಲದ ಆನಂದ!
-ವಾರಾಂಗನೆಯ ಆಗಮನ~ನಿರ್ಗಮನ~ಪುನರಾಗಮನಗಳು ಋಷ್ಯಶೃಂಗನಲ್ಲಿ ತಂದ ಭಾವಾಂತರಗಳ ಅವಾಂತರ*ವನ್ನು ಬಣ್ಣಿಸುವುದಾದರೆ ಅದರ ಭಾಷೆ ಹೀಗೆ.

ವಾರಾಂಗನೆಯ ಕಷ್ಟವೇ ಬೇರೆ! ಋಷ್ಯಶೃಂಗನಿಗೆ ಆಕೆ ಕಾಣಿಸಿಕೊಳ್ಳಲೇ ಬೇಕು; ವಿಭಾಂಡಕರಿಗೆ ಕಾಣಿಸಿಕೊಳ್ಳಲೇಬಾರದು! ಇಬ್ಬರೂ ಒಂದೇ ಆಶ್ರಮದಲ್ಲಿ ಒಡಗೂಡಿಯೇ ಇರುವವರು!

ಋಷ್ಯಶೃಂಗನಿಗೆ ಕಾಣಿಸಿಕೊಳ್ಳದಿದ್ದರೆ ಕಾರ್ಯ ಕೈಗೂಡದು; ವಿಭಾಂಡಕರ ಕಣ್ಣಿಗೆ ಬಿದ್ದರೆ ಕಾರ್ಯನಾಶವಾಗುವುದು ಮಾತ್ರವಲ್ಲ, ಸರ್ವನಾಶವೇ ಆಗುವುದು! ಹೀಗಾಗಿ ಕಣ್ಣಾಮುಚ್ಚಾಲೆಯಾಡುವುದು ಅವಳಿಗೆ ಅನಿವಾರ್ಯ. ಆದರೆ ಋಷ್ಯಶೃಂಗನಿಗೆ ಈ ಕಣ್ಣಾಮುಚ್ಚಾಲೆಯು ಬಲು ಕಷ್ಟಪ್ರದವಾಗಿದ್ದಿತು.

ಆದುದರಿಂದಲೇ, ಮರಳಿದ ವಾರಾಂಗನೆಯನ್ನು ಕಂಡು ಅರಳಿದ ಮೊಗದಲ್ಲಿ ಋಷ್ಯಶೃಂಗನು ನುಡಿದುದು: “ಬೆಳದಿಂಗಳ ಬ್ರಹ್ಮಚಾರಿ! ಮತ್ತೆ ಬಂದೆಯಾ? ಮರಳಿ ಆನಂದ ತಂದೆಯಾ? ಅಂದು ನೀ ಬಿಟ್ಟು ತೆರಳಿದ ಬಳಿಕ ನಾನದೆಷ್ಟು ನೊಂದೆನೋ? ಬೇಡವೇ ಬೇಡ ಆ ಸಂಕಟವಿನ್ನೊಮ್ಮೆ. ಇದೋ ಈಗಲೇ ಹೊರಟೆ ನಿನ್ನೊಡನೆ ನಿನ್ನಾಶ್ರಮಕೆ. ತಂದೆ ಬರುವ ಮೊದಲೇ ಈ ಕಾರ್ಯವಾಗಬೇಕು. ಏಕೆಂದರೆ ಅವರಿಗೆ ನೀನೆಷ್ಟು ಒಳ್ಳೆಯವನೆಂದು ಅರ್ಥವೇ ಆಗಿಲ್ಲ!”

ಈ ಮಾತುಗಳನ್ನು ಕೇಳಿದ ವಾರಾಂಗನೆಗೆ ಹೇಗಾಗಿರಬೇಕು! ರೊಟ್ಟಿಯು ತಾನೇ ಜಾರಿ ತುಪ್ಪಕ್ಕೆ ಬಿದ್ದಂತೆ, ರೋಗಿಯ ಬಯಕೆಯ ಹಾಲನ್ನವನ್ನು ವೈದ್ಯರು ತಾನಾಗಿಯೇ ಸೂಚಿಸಿದಂತೆ ಆಗಿರಬಹುದಲ್ಲವೇ?

ಕಣ್ಣಾಮುಚ್ಚಾಲೆಯಾಟವು ವಾರಾಂಗನೆಯ ಉದ್ದೇಶವಾಗಿರಲಿಲ್ಲ; ದೇಶಕ್ಷೇಮವು ಆಕೆಯ ಉದ್ದೇಶವಾಗಿತ್ತು. ಬಹುಕಾಲದ ಬರದ ಬಾಧೆಯ ನಿರಸನವಾಗಿ, ಅಂಗವು ಮಂಗಲಮಯವಾಗಿ ಮತ್ತೊಮ್ಮೆ ಕಂಗೊಳಿಸಬೇಕಿತ್ತು. ಅದಕ್ಕಾಗಿ ಋಷ್ಯಶೃಂಗನ ಅಂಗಸಂಗವು ಅಂಗರಾಜ್ಯಕ್ಕೆ ಆಗಬೇಕಿತ್ತು.

ಅರೆಕ್ಷಣವೂ ತಡಮಾಡದೇ ಋಷ್ಯಶೃಂಗನನ್ನು ಕರೆದುಕೊಂಡು ನಾವೆಯೆಡೆ ವಾಯುವೇಗದಲ್ಲಿ ಧಾವಿಸಿದಳು ವಾರಾಂಗನೆ.

ಆಶ್ರಮಕ್ಕೆ ಅನತಿದೂರದಲ್ಲಿ ಹರಿಯುತ್ತಿದ್ದ ಹೊಳೆಯಲ್ಲಿ ಆಶ್ರಮಾಕೃತಿಯ ನಾವೆಯು ಸಿದ್ಧವಾಗಿತ್ತು. ವೃದ್ಧವೇಶ್ಯೆಯು ವಾರಾಂಗನೆಯರ ಬಳಗದೊಂದಿಗೆ ಮುನಿಯ ಮಂಗಲಾಗಮನದ ಪ್ರತೀಕ್ಷೆಯಲ್ಲಿ ಅಲ್ಲಿಯೇ ಇದ್ದಳು. ಏನಾಗುವುದೋ ಎಂಬ ಆತಂಕದಲ್ಲಿ ಕುಳಿತಲ್ಲಿ ಕೂರಲಾರದೆ, ನಿಂತಲ್ಲಿ ನಿಲ್ಲಲಾರದೆ, ಕ್ಷಣ ಕ್ಷಣ ಚಡಪಡಿಸುತ್ತಿದ್ದ ಅಂಗರಾಜ್ಯದ ಅಂಗನೆಯರ ಬಳಗಕ್ಕೆ ವೃದ್ಧವೇಶ್ಯೆಯ ಪುತ್ರಿಯೊಡನೆ ಇತ್ತಲೇ ಬರುವ ಋಷ್ಯಶೃಂಗನನ್ನು ಕಂಡೊಡನೆ ಆದ ಸಂಭ್ರಮ-ಸಮಾಧಾನಗಳು ಹೇಳತೀರದು!

ಮುನಿರೂಪದಲ್ಲಿರುವ ನಾಡಿನ ಮಹಾಭಾಗ್ಯವನ್ನು ನಾವೆಯೇರಿಸುವಾಗ ಆ ರಾಷ್ಟ್ರಭಕ್ತ ಹೆಣ್ಣುಮಕ್ಕಳ ಕಣ್ಣಲ್ಲಿ ಸುರಿದ ಕಂಬನಿಯ ಧಾರೆಯು ಅಂಗರಾಜ್ಯದಲ್ಲಿ ಬಹುಕಾಲದ ಬಳಿಕ ಸುರಿಯಲಿರುವ ಮಳೆಯ ಮಂಗಲಧಾರೆಗೆ ಪೀಠಿಕೆಯಾಯಿತು! ಅಂಗರಾಜ್ಯದ ಅಸಂಖ್ಯ ಜೀವಿಗಳಿಗೆ ಜೀವಾತುವಾಗಲಿರುವ ಸಂತನ ಸಂತೋಷಕ್ಕಾಗಿ ಸರ್ವೋಪಾಯಗಳಿಂದ ಪ್ರಯತ್ನಿಸಿದರು ಅಂಗನೆಯರು. ಬಹುಕಾಲದ ಬಳಿಕ ಮತ್ತೊಮ್ಮೆ ಅಂಗರಾಜ್ಯದಲ್ಲಿ ಆನಂದದ ಯುಗವು ಆರಂಭವಾಗುವುದರ ಪೂರ್ವಸೂಚನೆಯೋ ಎಂಬಂತೆ ಕರ್ಣಾನಂದಕರವಾದ ಗೀತ~ವಾದಿತ್ರಗಳು, ನೇತ್ರಾನಂದಕರವಾದ ನೃತ್ಯ~ನಾಟಿಕೆಗಳು, ಘ್ರಾಣತರ್ಪಣವಾದ- ನಾಲಿಗೆಗೆ ನವನವಾನಂದವ ನೀಡುವ ಭಕ್ಷ್ಯ-ಭೋಜ್ಯಗಳು ನಾವ್ಯಾಶ್ರಮವನ್ನು ನಗುನಗುವ ನಾಕವಾಗಿಸಿದವು!

ಹಳತು ಕೆಲವು ಇರಬೇಕು; ಹೊಸತು ಕೆಲವು ಬರಬೇಕು; ಅದು ಬದುಕು ಅರಳುವ ರೀತಿ. ನಾವ್ಯಾಶ್ರಮದ ವಿನ್ಯಾಸವು ಋಷ್ಯಶೃಂಗನಿಗೆ ಆಶ್ರಮದ ಪರಿಸರದ ಆವರೆಗಿನ ಅನುಭವವನ್ನು ಮುಂದುವರೆಸಿದರೆ ಕಲಾ-ಕಲಾಪಗಳ, ಮೃಷ್ಟಾನ್ನ-ಪಾನಗಳ, ವಿನೋದಕಣಿಕೆಗಳ ಆ ಗಣಿಕೆಯರ ಅಗಣಿತ-ಸಂಭ್ರಮದ ವಾತಾವರಣವು ಸಂಪೂರ್ಣ ಹೊಸತಾಯಿತು!

ನೋಡನೋಡುತ್ತಿರುವಂತೆಯೇ ನಾವ್ಯಾಶ್ರಮವೆಂಬ ಆ ಜಲಸ್ವರ್ಗವು ಆಚೆಯ ನೆಲವನ್ನು ಸ್ಪರ್ಶಿಸಿತು. ತನ್ನ ಆಶ್ರಮದ ಹೊರತು ಬೇರೆ ಜಗತ್ತನ್ನೇ ಅರಿಯದ ಮುಗ್ಧಮುನಿಯ ಮನಸ್ಸಿಗೆ ಇನಿತಾದರೂ ಆತಂಕವಾಗಬಾರದೆಂಬ ಕಾರಣಕ್ಕೆ ನಾವ್ಯಾಶ್ರಮದಿಂದ ನೆಲಕ್ಕಿಳಿದ ಬಳಿಕವೂ- ಕಣ್ಣು ಕಾಣುವಷ್ಟು ದೂರದವರೆಗೂ ನಾವ್ಯಾಶ್ರಮದ ವಾತಾವರಣವನ್ನೇ ನಿರ್ಮಿಸಲಾಗಿತ್ತು! ಮುನಿಯು ಅಂಗರಾಜ್ಯದೆಡೆಗೆ ಮುಂದುವರಿದಂತೆ ಅವನಿದ್ದ ವಾತಾವರಣವೂ ಮುಂದುವರಿಯುವಂತೆ ಏರ್ಪಾಡುಗಳನ್ನು ಮಾಡಲಾಗಿತ್ತು!

ಹೀಗೆ ತನ್ನಾಶ್ರಮದಿಂದ ನಾವ್ಯಾಶ್ರಮಕ್ಕೆ, ನಾವ್ಯಾಶ್ರಮದಿಂದ ನಾವ್ಯಾಶ್ರಮವನ*ಕ್ಕೆ, ಅಲ್ಲಿಂದ ಅಂಗರಾಜ್ಯದ ಅಂತರಾಳಕ್ಕೆ ಋಷ್ಯಶೃಂಗನೆಂಬ ಮಂಗಲದ ಪ್ರವೇಶವಾಯಿತು. ಆ ಕ್ಷಣದಲ್ಲಿಯೇ ಚರಣಚಮತ್ಕಾರದ – ಮಳೆಯ ಮಹಾಪರ್ವವು ಮೊದಲಾಯಿತು!

ರಾಮನ ಬರವಿಗಾಗಿ ಕಾದಿದ್ದ ಅಭಿಶಪ್ತ ಅಹಲ್ಯೆಯಂತೆ, ಋಷ್ಯಶೃಂಗನ ಬರವಿಗಾಗಿ ಕಾದಿತ್ತು – ಬರದ ಬೇಗೆಯಲ್ಲಿ ಕಾದ ಕಾವಲಿಯಾಗಿದ್ದ ಅಭಿಶಪ್ತ ಅಂಗದೇಶ! ಬಿಂದು ಜಲಕ್ಕಾಗಿಯೋ ಎಂಬಂತೆ ಬಾಯ್ದೆರೆದಿದ್ದ ಆ ನೆಲದಲ್ಲಿ ಋಷ್ಯಶೃಂಗನ ಚರಣರಜವು ಸೋಕುತ್ತಿದ್ದಂತೆಯೇ ಅನಿರ್ವಚನೀಯವಾದ ಸ್ಪಂದ! ಅನನ್ಯ ಆನಂದ! ಅಂಗಧರೆಯ ಆ ಕಂಪವು ಅನಂತಕಾಲದ ಬಳಿಕ ಲಭಿಸಿದ ಭಗವಂತನ ಅನುಕಂಪದ ಪ್ರತಿಬಿಂಬವಾಗಿತ್ತು! ಅದೆಷ್ಟೋ ಕಾಲದಿಂದ ನಿಂತೇ ಹೋಗಿದ್ದ ಅಂಗಭೂಮಿಯ ಹೃದಯವು ಸಂತ-ಸಂಜೀವಿನಿಯ ಸಂಸ್ಪರ್ಶದಲ್ಲಿ ಮತ್ತೆ ಮಿಡಿದಿತ್ತು!

ಎಂದಿನಂತೆ ಬೀಸುತ್ತಿದ್ದ ಬಿಸಿಗಾಳಿಯು ಅಂದು ಮುನಿಯನ್ನು ಹಾಯುತ್ತಿದ್ದಂತೆಯೇ ಹಾಯೆನಿಸುವಂತೆ ತಂಪಾಯಿತು! ತಂಪಿನ ಮುನಿಯನ್ನು ಮುಟ್ಟುವ ತವಕದಲ್ಲೆಂಬಂತೆ ಮತ್ತೆ ಮತ್ತೆ ಬೀಸಿತು; ಮತ್ತಷ್ಟು ತಂಪಾಯಿತು! ತಂಪಿನ ಸಾಮ್ರಾಜ್ಯದಲ್ಲಿ- ಹಸಿರಿನರಮನೆಯಲ್ಲಿ- ಸಮೃದ್ಧಿ~ಸಿಂಹಾಸನದಲ್ಲಿ ಆ ಸಂತಸಮ್ರಾಟನನ್ನು ಕುಳ್ಳಿರಿಸಿ, ಪಟ್ಟಾಭಿಷೇಕವ ಗೈಯಲೆಂಬಂತೆ ತಂಪುಗಾಳಿಯು ಮಳೆಮೋಡಗಳ ಕರೆಯಿತು!

ಎಲ್ಲಿದ್ದವೋ ಅಲ್ಲಿಯ ತನಕ! ಒಂದರ ಹಿಂದೆ ಒಂದರಂತೆ, ಸಂಖ್ಯೆಯಿಲ್ಲದ ಸಂಖ್ಯೆಯಲ್ಲಿ ಮಳೆಮೋಡಗಳು ಅಂಗರಾಜ್ಯದೆಡೆಗೆ ಮೆರವಣಿಗೆಯಲ್ಲಿ ಬರತೊಡಗಿದವು! ಆ ಜೀವಬಂಧುವ ಕಂಡ ಜಲಬಿಂದುಗಳಿಗೆ ತಾವಿರುವ ದಿವಿಯು ಸಪ್ಪೆಯೆನಿಸಿತು; ಮುನಿಯಿರವಿನ ಭುವಿಯೇ ಸವಿಯೆನಿಸಿತು! ಮುಗಿಲಮನೆಯಿಂದ ಮುನಿಯ ಮುಡಿಯೆಡೆಗೆ, ಮಹಿಯ ಮಡಿಲೆಡೆಗೆ ಧುಮುಕಿ, ಧಾವಿಸಿದವು ಮಳೆಹನಿಗಳು! ಆಗ – ಎಲ್ಲೆಡೆಯಿಂದ ಅಂಗರಾಜ್ಯದ ಆಗಸಕ್ಕೆ ಮಳೆಮೋಡಗಳ ಮೆರವಣಿಗೆ; ಈಗ – ಆಗಸದಿಂದ ಅಂಗದ ಇಳೆಗೆ ಮಳೆಹನಿಗಳ ಮೆರವಣಿಗೆ!

ಋಷ್ಯಶೃಂಗನು ಅಂಗರಾಜ್ಯದ ಅರಮನೆಯ ಅಂಗಳವನ್ನು ತಲುಪುವಷ್ಟರಲ್ಲಿ ಮುಗಿಲೇ ಭುವಿಗಿಳಿದಿತ್ತು; ಪ್ರಜೆಗಳ ಆನಂದ ಮುಗಿಲು ಮುಟ್ಟಿತ್ತು! ಮುನಿ ತಂದ ಅಮೃತವೃಷ್ಟಿಯ ಸಾಗರದಲ್ಲಿ ಜೀವರಾಶಿಗಳ ಆನಂದಾಶ್ರುವೃಷ್ಟಿಯ ಹೊಳೆಯು ಸಂಗಮಿಸಿತ್ತು!

ಪ್ರಳಯಜಲರಾಶಿಯ ನಡುವೆ – ಆಲದೆಲೆಯ ಮೇಲೆ, ತನ್ನ ಕರಕಮಲದಿಂದ ಪದಕಮಲವನ್ನೆತ್ತಿ ಮುಖಕಮಲದಲ್ಲಿರಿಸಿ ಶೋಭಿಸುವ ಶಿಶುರೂಪದ ಭಗವಂತನಂತೆ, ದೊರೆಗೆ ಜಲದ ಜಗದ ನಡುವೆ ಮುನಿಶಿಶುವು ದೃಗ್ಗೋಚರವಾದನು!

ಆದರೆ, ಋಷ್ಯಶೃಂಗಸಾಗರದಲ್ಲಿ ಮುಳುಗೇಳುತ್ತಿದ್ದ ಅಂಗರಾಜ್ಯಕ್ಕೆ ವಿಭಾಂಡಕರೆಂಬ ಅಗ್ನಿಪರ್ವತವು ತನ್ನೆಡೆಗೇ ಬರುತ್ತಿರುವುದು ಅರಿವಿಗೇ ಬರಲಿಲ್ಲ..

~*~*~

(ಸಶೇಷ)

ತಿಳಿವು ಸುಳಿವು:

  • ಅವಾಂತರ ಎಂಬ ಶಬ್ದಕ್ಕೆ ಕನ್ನಡದಲ್ಲಿ ಅವಘಡದ ಸನ್ನಿವೇಶ ಎಂಬರ್ಥವಾದರೆ, ಸಂಸ್ಕೃತದಲ್ಲಿ ಆಂತರಿಕ ವಿಭಾಗಗಳು ಎಂಬರ್ಥ. ಈ ಎರಡೂ ಅರ್ಥಗಳು ಮೇಲೆ ತಿಳಿಸಿದ ಸಂದರ್ಭಕ್ಕೆ ಹೊಂದುತ್ತದೆ.
  • ನಾವ್ಯಾಶ್ರಮವನ : ನಾವೆಯಿಂದ ಇಳಿದು ನಡೆಯುವ ಅಂಗರಾಜ್ಯದ ವನವನ್ನು ನಾವೆಯಂತೆಯೇ ಅಲಂಕರಿಸಿದುದರಿಂದ, ಆ ವನವನ್ನೂ ನಾವ್ಯಾಶ್ರಮವನ ಎಂದು ವ್ಯಾಸ ಮಹರ್ಷಿಗಳು ಗುರುತಿಸಿದ್ದಾರೆ.

ಕ್ಲಿಷ್ಟ-ಸ್ಪಷ್ಟ:

  • ಕಣಿಕೆ = ಕಣ / ಸಣ್ಣ
  • ಗಣಿಕೆ = ನರ್ತಕಿ
  • ಘ್ರಾಣ ತರ್ಪಣ = ಮೂಗಿಗೆ ತಂಪು ಕೊಡುವ / ಆಹ್ಲಾದಕರ ಪರಿಮಳದ
  • ಜೀವಾತು = ಜೀವನೌಷಧ

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ54ನೇ ರಶ್ಮಿ.

 

53 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments