ಜಗವರಿಯದ ಮಗನ ಮಾತುಗಳಲ್ಲಿ, ತನ್ನ ಜಗದೊಳಗೆ ಹೊರಜಗವು ಹೊಕ್ಕ ಕಥೆಯನ್ನು ಕೇಳತೊಡಗಿದರು ವಿಭಾಂಡಕರು:

“ಅಪ್ಪಾ, ಕತ್ತಲರಾತ್ರಿಯಲ್ಲಿ ಕಣ್ಣು ಕೋರೈಸುವಂತೆ ಕೋಲ್ಮಿಂಚೊಂದು ಮಿಂಚಿ ಮರೆಯಾದ ಬಳಿಕ ಮತ್ತೇನೂ ಕಾಣದಂತೆ ನನ್ನ ಸ್ಥಿತಿಯಾಗಿದೆ. ಎಂದೆಂದೂ ಕಾಣದ ಕೌತುಕವೊಂದನ್ನು ಕಂಡು, ಅದರ ಗುಂಗಿನಿಂದ ಹೊರಬರಲಾರದೆ ತೊಳಲಾಡುತ್ತಿದ್ದೇನೆ.”

“ನೀನಿಲ್ಲದ ಸಮಯದಲ್ಲಿ ಇಂದು ನಮ್ಮ ಆಶ್ರಮಕ್ಕೆ ಬ್ರಹ್ಮಚಾರಿಯೋರ್ವನು (!) ಬಂದಿದ್ದನಪ್ಪಾ. ಬೆಳಕೇ ಬಳಿಗೈದಿದಂತೆ, ದೇವಕುಮಾರನೇ ಧರೆಗಿಳಿದಂತೆ ನನಗವನು ಭಾಸವಾದನಪ್ಪ. ಅವನ ಮೊಗದಲ್ಲಿ ಚಂದ್ರನನ್ನು, ಕಂಠದಲ್ಲಿ ಕೋಗಿಲೆಯನ್ನು, ಹೃದಯದಲ್ಲಿ ಅಮೃತವನ್ನು, ಹೆಜ್ಜೆಯಲ್ಲಿ ಹಂಸವನ್ನು ಕಂಡೆನಪ್ಪ.”

“ಆಶ್ಚರ್ಯವೆಂದರೆ ಅವನು (!) ಮನುಷ್ಯನೇ ಹೌದಾದರೂ ನೋಡಲು ನಿನ್ನಂತೆಯೂ ಇಲ್ಲ, ನನ್ನಂತೆಯೂ ಇಲ್ಲ. ನೀನು ವರ್ಣಿಸಿದ ಬೇರೆ ಬ್ರಹ್ಮಚಾರಿಯಂತೆಗಳಂತೆಯೂ ಇಲ್ಲ. ನನ್ನಲ್ಲಿ ನಿನ್ನಲ್ಲಿ ಇಲ್ಲದ ಅತಿಶಯವಾದ ಮಾರ್ದವವನ್ನು ಅವನ ಶರೀರ-ಶಾರೀರಗಳೆರಡರಲ್ಲಿಯೂ ಕಂಡೆನಪ್ಪ, ಅಷ್ಟು ಮಾತ್ರವಲ್ಲ, ತನುವಿನ ಸುಮ-ಸೌಕುಮಾರ್ಯ, ಕಂಠದ ಕೋಕಿಲ-ಮಧುರಿಮೆಗಳೆರಡೂ ಅವನ ಅಂತರಂಗದಲ್ಲಿ ಮೇಳೈಸಿರುವುದನ್ನು ಕಂಡು ಮೂಕನಾದೆನಪ್ಪ.”

“ಅಪ್ಪಾ, ಅವನ ಕಂಗಳು ನಿನ್ನಂತೆ ಪಿಂಗಲವಲ್ಲ. ಕತ್ತಲೆಯಂತೆ ಕಡುಗಪ್ಪಾದ ಅವನ ಕಂಗಳಲ್ಲಿ ಅಮಲಪ್ರೇಮದ ಹೊಳಪಿನ ಹೊಳೆಯೇ ಹರಿಯುವುದನ್ನು ಕಂಡೆನಪ್ಪ. ಕೃಷ್ಣವರ್ಣವು ಕಣ್ಣ ನಡುಬಿಂದುವಿನಲ್ಲಿ ಮಾತ್ರವಲ್ಲ, ರೇಖಾರೂಪದಲ್ಲಿ ಕಣ್ಣಸುತ್ತಲೂ ಸುತ್ತಿರುವುದನ್ನು ಕಂಡು ಅಚ್ಚರಿಗೊಂಡೆನಪ್ಪ. ನನ್ನಂತೆ ಅವನ ಜಟೆಯು ಜಡಕಲ್ಲ-ಒರಟಲ್ಲ, ನೀಳವಾದ, ನೀಲವಾದ ನುಣುಪಾದ ಹೊಳಪಾದ ಕೇಶಪಾಶವು ನನಗೆ ನಾಗನ ನೆನಪು ತಂದಿತಪ್ಪ. ಅವನ ಮೇಲೆ ಬೀಸಿ ಬರುವ ಗಾಳಿಯಲ್ಲಿ ಮಧುಮಾಸದ ಪುಷ್ಪವನದ ಪರಿಮಳ!”

“ಹೊಳೆಹೊಳೆಯುವ, ಬಣ್ಣಬಣ್ಣದ, ಮೃದುಮೃದುವಾದ ಅವನುಟ್ಟ ಬಟ್ಟೆಗಳು, ಕಾಮನಬಿಲ್ಲೇ ಕೆಳಗಿಳಿದು, ಬಳಿ ಸುಳಿದ ಕಳೆಯನ್ನು ನಮ್ಮ ಕುಟೀರಕ್ಕೆ ಕೊಟ್ಟವು. ನಮ್ಮ ಪರ್ಣಕುಟಿಯು ಇಂದು ವರ್ಣಕುಟಿಯಾಯಿತಪ್ಪಾ!”

“ಮಿಂಚಿನ ಬಳ್ಳಿಯನ್ನೇ ಹೋಲುವ ಬಳ್ಳಿಯೊಂದು ಅವನ ಕೊರಳಲ್ಲಿ ಹೊಳೆಯುತ್ತಿತ್ತು; ಅದೇ ಪರಿಯ ವಿಚಿತ್ರ ವಿನ್ಯಾಸಗಳು ಅವನ ಕರಗಳನ್ನು~ ಕರಾಂಗುಲಿಗಳನ್ನು~ ಕರ್ಣಗಳನ್ನು~ ಕಟಿಯನ್ನು~ ಬಳಸಿ, ಬೆಳಗುತ್ತಿದ್ದವು. ಜೀವವಿಲ್ಲದಿದ್ದರೂ, ಅತಿಶಯವಾಗಿ ಶೋಭಿಸುತ್ತಿದ್ದ ಎರಡು ಚಕ್ರವಾಕಗಳು ಅವನೆರಡು ಕಿವಿಗಳಲ್ಲಿ ತೊನೆದಾಡುತ್ತಿದ್ದವು! ಅವನ ಚರಣದ್ವಯವನ್ನೊಪ್ಪಿದ -ಮಿಂಚಿನ ಮಾಲೆಯ ಚೆಲುವಿನ- ಸುವಸ್ತುದ್ವಯವು ಅವನು ನಡೆದಾಡಿದಂತೆ ಮಧುರನಿನಾದಗೈಯುತ್ತಿದ್ದವು; ನನಗಂತೂ ಅಚ್ಚರಿಯೋ ಅಚ್ಚರಿ!”

“ಅವನಂತೆ ಅವನ ವ್ರತಗಳೂ ನನಗೆ ಹೊಸತೆನಿಸಿದವಪ್ಪಾ; ನನ್ನ ಅಭಿವಾದನವನ್ನು ಅವನು ಸ್ವೀಕರಿಸಲೇ ಇಲ್ಲ; ನನಗವನು ನಮಿಸಬಹುದಂತೆ, ಅವನಿಗೆ ನಾನು ನಮಿಸುವಂತಿಲ್ಲವಂತೆ! ಅದು ಅವನ ವ್ರತವಂತೆ! ತರುವನ್ನು ಬಳಸಿ, ಬೆಳೆಯುವ ಬಳ್ಳಿಯಂತೆ ತನುವನ್ನು ಬಳಸುವುದು ಅವನ ಅಭಿವಾದನವಂತೆ!”

“ನಾನವನಿಗೆ ಆತಿಥ್ಯಗೈವ ಬದಲು, ಅವನ ಆತಿಥ್ಯದಲ್ಲಿ ನಾನೇ ಸಂತೃಪ್ತನಾಗುವ ವೈಚಿತ್ರ್ಯವೂ ಇಂದು ನಡೆದುಹೋಯಿತು! ನಾನಿತ್ತ ಫಲಗಳನ್ನು ಅವನು ಸೇವಿಸಲಿಲ್ಲ; ಬರುವಾಗ ಅವನೇ ತಂದಿದ್ದ ಫಲಗಳನ್ನು ನನಗಿತ್ತನಪ್ಪಾ. ನಮ್ಮ ಫಲಗಳಂತೆ ಅವುಗಳಿಗೆ ಸಿಪ್ಪೆಯೇ ಇರಲಿಲ್ಲ! ಹಿತವಾದ ಅವುಗಳ ಪರಿಮಳವೂ ನನಗೆ ಸಂಪೂರ್ಣ ಹೊಸತು! ಎಂದೂ ಕಾಣದ, ಆದರೆ ಅತ್ಯಂತ ಹಿತವಾದ ರುಚಿ ಅವುಗಳಲ್ಲಿ! ಅವನ ಪ್ರೀತಿಯೂ ಬೆರೆತು ಅವು ಮತ್ತಷ್ಟು ರುಚಿಗೊಂಡವು!”

“ಬೇರೆಯೇ ಬಗೆಯ ನೀರುಗಳನ್ನು ಅವನು ತಂದಿದ್ದನು; ಸುಗಂಧ-ಸ್ವಾದಸಂಪನ್ನವಾದ ಅವುಗಳನ್ನು ಸವಿದಾಗ…ಅದೇನು ವಿಚಿತ್ರವೋ‌….ನೆಲವೇ ಚಲಿಸುವಂತೆ ನನಗೆ ಭಾಸವಾಗತೊಡಗಿತು!”

“ಕೌತುಕಗಳ ಸರಣಿಯೇ ಅವನೆಂದರೆ! ತನ್ನ ಕೈಯಲ್ಲಿದ್ದ ವಿಚಿತ್ರವಾದ ಫಲವೊಂದನ್ನು ಅವನು ಬಾರಿಬಾರಿಗೂ ಭೂಮಿಗೆಸೆಯುತ್ತಿದ್ದನಪ್ಪಾ; ಆದರೆ ನೆಲಕ್ಕಪ್ಪಳಿಸಿದರೂ ಆ ವಿಚಿತ್ರಫಲವು ಒಡೆದುಹೋಗುತ್ತಿರಲಿಲ್ಲ! ಮಾತ್ರವಲ್ಲ, ಪುಟಿದೆದ್ದು ಅದು ಮರಳಿ ಅವನ ಕೈ ಸೇರುತ್ತಿತ್ತು!”

“ತನ್ನ ಮನೆಯಿಂದ ತಂದ ಮನೋಜ್ಞವಾದ ಸುಮಮಾಲಿಕೆಗಳಿಂದ ಅವನು ತನ್ನನ್ನು ಅಲಂಕರಿಸಿಕೊಂಡನು; ದೇವರನ್ನು ಅಲಂಕರಿಸುವಂತೆ ನನ್ನನ್ನೂ ಅಲಂಕರಿಸಿದನು; ಈಗ ನೆಲದಲ್ಲಿ ಅಲ್ಲಲ್ಲಿ ಚೆಲ್ಲಾಡಿರುವ ಹೂವುಗಳು ಅವುಗಳ ಅವಶೇಷಗಳಪ್ಪಾ; ಆಗ ಮುದವಿತ್ತ ಆ ಮಾಲೆಗಳು ಈಗೇಕೋ ಅನುಭವಿಸಿ ಗೊತ್ತಿರದ ನೋವನ್ನು ನೀಡುತ್ತಿವೆ!”

“ಅವನು ಮೃದುವಾಗಿ ನುಡಿದರೆ ಸಾಕು, ಮಧುರವಾಗಿ ಮಿಡಿಯುವ ಮನೋಜ್ಞವಾದ ಸುವಸ್ತುವೊಂದನ್ನು ಕಂಡು ಬೆರಗಾದೆನಪ್ಪಾ! ಅದರ ಸ್ವರದೊಡನೆ ಬೆರೆತ ಅವನ ಸ್ವರದಲ್ಲಿ ಅವನದೇ ಸಾಮವೇದ! ನಡುನಡುವೆ ಅಪರೂಪದ ಅಂಗಭಂಗಿಗಳಲ್ಲಿ ಅವನಿಡುವ ಅಚ್ಚರಿಯ ಹೆಜ್ಜೆಗಳು!”

“ಆ ನಾದ ಈಗಲೂ ಕಿವಿಯಲ್ಲಿ… ಆ ದೃಶ್ಯ ಈಗಲೂ ಕಣ್ಣಲ್ಲಿ… ಆ ಭಾವ ಈಗಲೂ ಮನದಲ್ಲಿ…”

“ಅಪ್ಪಾ, ಆಗಸದಲ್ಲಿ ಚಂದ್ರನು ತಾನಿರುವಷ್ಟು ಹೊತ್ತೂ ಬೆಳದಿಂಗಳ ಚೆಲ್ಲುವಂತೆ, ಅವನಿಲ್ಲಿ ಇರುವಷ್ಟು ಹೊತ್ತೂ ಆನಂದ ಚೆಲ್ಲಿದನಪ್ಪಾ! ಅತಿಶಯವಾದ ಪ್ರೀತಿಯ ಮಳೆಯಲ್ಲಿ ನನ್ನನ್ನು ತೋಯಿಸಿದನಪ್ಪಾ‌! ಮೊದಲ ಮಾತಿಗೇ ಮರಳುವುದಿದ್ದರೆ, ಮಳೆಗಾಲದ ಇರುಳಿನಲ್ಲಿ ಮುಗಿಲ ಮಧ್ಯೆ ಮಿಂಚು ಮೈದಳೆದಾಗ ಜಗವೆಲ್ಲ ಜಗಮಗಿಸಿ, ಬಳಿಕ ಮರೆಯಾದಾಗ ಮೊದಲಿಗಿಂತ ಮಿಗಿಲಾದ ಕಾರ್ಗತ್ತಲು ಮುಸುಕುವಂತೆ, ಅವನಿರುವಾಗ ಅನಿರ್ವಚನೀಯವಾದ ಆನಂದ-ಸಂಭ್ರಮಗಳ ಬೆಳಕಲ್ಲಿ ಬೆಳಗಿದ ನನಗೆ ಅವನ ನಿರ್ಗಮನವು ವಿಷಾದದ ಗಾಢಾಂಧಕಾರವಾಗಿಯೇ ಪರಿಣಮಿಸಿದೆ!”

“ಅದಾರಪ್ಪಾ ಆ ಅದ್ಭುತ ಬ್ರಹ್ಮಚಾರಿ? ಅದಾವುದಪ್ಪಾ ಅವನು ಆಚರಿಸುವ ವ್ರತ? ಅವನೊಡನೆ ಸೇರಿ ನಾನೂ ಆ ವ್ರತವನ್ನು ಆಚರಿಸಲೇ? ಅವನನ್ನು ಮತ್ತೆ ಕಾಣುವ ತವಕ! ಅಪ್ಪಾ, ಅವನು ಮತ್ತೆ ಇಲ್ಲಿಗೆ ಬರಲಿ; ಅಥವಾ ನಾನೇ ಅವನಿರುವಲ್ಲಿಗೆ ಹೋಗಿಬಿಡುವೆ! ಇವೆರಡರಲ್ಲಿ ಯಾವುದಾದರೂ ಒಂದು ನೆರವೇರದಿದ್ದರೆ ನನಗೆಲ್ಲಿಯ ಸಂತೋಷ? ಎಲ್ಲಿಯ ಸಮಾಧಾನ?”

“ಅವನನ್ನು ಮತ್ತೆ ಕರೆತಾರಪ್ಪಾ, ಅಥವಾ ನನ್ನನ್ನೇ ಅಲ್ಲಿಗೆ ಕರೆದೊಯ್ಯಪ್ಪಾ”

ಋಷ್ಯಶೃಂಗನ ಮುಗ್ಧತೆಯ ಪರಮೋತ್ತುಂಗದ ಮಾತುಗಳನ್ನು ಕೇಳುತ್ತಿದ್ದಂತೆಯೇ ವಿಭಾಂಡಕರಿಗೆ ‘ತಾನಿಲ್ಲದಾಗ ಆಶ್ರಮಕ್ಕೆ ಯಾರು ಬಂದಿದ್ದರು? ಏನು ನಡೆಯಿತು?’ ಎಂಬುದು ಸ್ಫುಟವಾಗಿ ಅರ್ಥವಾಯಿತು; ಆವರೆಗಿನ ಆತಂಕ-ಆಶ್ಚರ್ಯಗಳು ಆಕ್ರೋಶವಾಗಿ ಮಾರ್ಪಟ್ಟವು!

ಆ ಸ್ಫುಟತೆಯು ಭಾವೀ ಸ್ಫೋಟಕ್ಕೆ ಪೀಠಿಕೆಯಾಗಿ ಪರಿಣಮಿಸತೊಡಗಿತು! ಬ್ರಹ್ಮಾಂಡಭಾಂಡವನ್ನೇ ತುಂಡರಿಸಿಬಿಡುವ ಪ್ರಚಂಡ ಕೋಪದಲ್ಲಿ ಕನಲಿ ಕೆಂಡವಾದರು ವಿಭಾಂಡಕರು!

 

~*~*~

(ಸಶೇಷ)

ತಿಳಿವು-ಸುಳಿವು:

  • ಋಷ್ಯಶೃಂಗನ ಮಾತಿನಲ್ಲಿ – ಬ್ರಹ್ಮಚಾರಿಯೋರ್ವನು, ಅವನು, ಬಂದಿದ್ದನು – ಈ ರೀತಿ ಪುಲ್ಲಿಂಗಯುಕ್ತ ಮಾತುಗಳೇ ಕಾಣುತ್ತಿವೆ. ಇದು ಋಷ್ಯಶೃಂಗನ ಮುಗ್ಧತೆಯ ತೋರಿಸುತ್ತದೆ.
  • ಮುಕ್ತನ ಮುಗ್ಧತೆ – ಋಷ್ಯಶೃಂಗನಲ್ಲಿ, ಸಾಮಾನ್ಯವಾಗಿ ಜೊತೆಯಿರದ ಮುಕ್ತತೆ-ಮುಗ್ಧತೆಯ ಅಪರೂಪದ ಸಂಗಮವನ್ನು ಶೀರ್ಷಿಕೆಯು ತೋರಿಸುತ್ತಿದೆ.
  • <ನನಗೆ ನಾಗನ ನೆನಪು ತಂದಿತಪ್ಪ> – ಈ ವಾಕ್ಯಗುಚ್ಛಗಳನ್ನು  ಬರೆದು ಮುಗಿಸುತ್ತಿರುವಾಗ ಶ್ರೀಸವಾರಿಯು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ತಲುಪಿತ್ತು. ಈ ವಾಕ್ಯದ ಉಲ್ಲೇಖನ ಮಾಡುತ್ತಿರುವಂತೆಯೇ ಶ್ರೀಶ್ರೀಗಳವರು ಸುಬ್ರಹ್ಮಣ್ಯ ಕ್ಷೇತ್ರದ ಮಹಾದ್ವಾರದಲ್ಲಿ ಇಳಿಯುತ್ತಿದ್ದರು.
   ನಾಗನ ಉಲ್ಲೇಖಕ್ಕೂ ನಾಗಾಧಿಪತಿಯ ಕ್ಷೇತಕ್ಕೆ ಆಗಮನಕ್ಕೂ ಅವ್ಯಕ್ತ ಸಂಬಂಧ!

ಕ್ಲಿಷ್ಟ-ಸ್ಪಷ್ಟ:

 • ಸುಮ-ಸೌಕುಮಾರ್ಯ = ಹೂವಿನಂಥಹ ಎಳೆತನ
 • ಕೋಕಿಲ-ಮಧುರಿಮೆ = ಕೋಗಿಲೆಯಂಥಹ ಮಾಧುರ್ಯ
 • ಕೇಶಪಾಶ = ಕೂದಲ ಬಳ್ಳಿ

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ51ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box