ಇಂದಿನ ಮಾತು : ‘ನೀನು ಕೇಳಿದ್ದನ್ನು ಕೊಡುವೆ!’
ನಾಳೆಯ ಮಾತು :‘ನಾನು ಹಾಗೆ ಹೇಳಿಯೇ ಇಲ್ಲ!’

ಸಾಮಾನ್ಯ ಪ್ರಜೆಯು ಹೀಗೆ ಮಾಡಿದರೆ ಅವನ ಬದುಕು ಬರಡಾದೀತು; ನಾಡೇ ಮನೆಯಾದ ದೊರೆಯ ನುಡಿಯು ಎರಡಾದರೆ ನಾಡಿಗೆ ನಾಡೇ ಬರಡಾದೀತು!

ಅಂಗರಾಜ್ಯದ ದೊರೆ ರೋಮಪಾದನಿಗೆ ಇದು ಅರ್ಥವಾಗುವಾಗ ಅನರ್ಥವಾಗಿತ್ತು!

ತಪಸ್ವೀ ವಿಪ್ರನೋರ್ವನಿಗೆ ಕೇಳಿದ್ದನ್ನು ಕೊಡುವೆನೆಂದು ನುಡಿದ ಅಂಗರಾಜ, ಕೇಳಿದಾಗ ಕೊಡಲೇ ಇಲ್ಲ! ವಿಪ್ರನು ಮರುಮಾತಾಡದೇ ರಾಜ್ಯವನ್ನೇ ತೊರೆದು ಹೊರಟುಹೋದ‌. ಅವನ ಹಿಂದೆಯೇ ನಾಡಿನ ಮತ್ತುಳಿದ ತಪಸ್ವಿಗಳೂ ಹೊರಟುಹೋದರು. ಅವರ ಹಿಂದೆಯೇ ಮಳೆ-ಬೆಳೆಗಳೂ ಹೊರಟುಹೋದವು! ಕ್ಷೇಮವು ತೊಲಗಿ, ಕ್ಷಾಮವು ರಾಜ್ಯವನ್ನು ಆವರಿಸಿತು.

‘ಮಾತು ಮನೆ ಕೆಡಿಸಿತು’ ಎನ್ನುವರು; ಇಲ್ಲಿ ಮಾತು ನಾಡನ್ನೇ ಕೆಡಿಸಿತು!

ಅನ್ನವು ಕೃಷಿಯಿಂದ; ಕೃಷಿಯು ವೃಷ್ಟಿಯಿಂದ; ವೃಷ್ಟಿಯು ಯಜ್ಞದಿಂದ; ಯಜ್ಞವು ವಿಪ್ರರಿಂದ. ‘ಅನ್ನಾತ್ ಭವಂತಿ ಭೂತಾನಿ ಪರ್ಜನ್ಯಾತ್ ಅನ್ನ ಸಂಭವಃ | ಯಜ್ಞಾತ್ ಭವತಿ ಪರ್ಜನ್ಯಃ ಯಜ್ಞಃ ಕರ್ಮ ಸಮುದ್ಭವಃ |’ – (ಭಗವದ್ಗೀತೆ ೩.೧೪).
ಕ್ಷೇಮಚಕ್ರದ ಮೊದಲ ಕೊಂಡಿಯೇ ವಿಪ್ರ‌.  ರಾಜದೋಷದಿಂದ ಅಂಗರಾಜ್ಯದಲ್ಲಿ ಕ್ಷೇಮಚಕ್ರದ ಮೊದಲ ಕೊಂಡಿಯು ಕಳಚಿತು. ಅದರೆ ಹಿಂದೆಯೇ ಮತ್ತೆಲ್ಲ ಕೊಂಡಿಗಳೂ ಸಾಲಾಗಿ ಕಳಚಿಕೊಂಡವು! ನಾಡು ಬರಡಾಯಿತು. ಕಾಡಿನ ಹಸಿರೊಣಗಿತು; ನದಿಗಳ ನೀರಾರಿತು; ತುತ್ತನ್ನ-ತೊಟ್ಟು ನೀರಿಗೂ ಗತಿಯಿಲ್ಲದಾಯಿತು. ಜೀವಕೋಟಿಗಳ ಮರಣದ ಮೆರವಣಿಗೆಯು ನಿತ್ಯದ ದೃಶ್ಯವಾಯಿತು.

ನಿತ್ಯ ನೀರು ಹರಿಯುತ್ತಿದ್ದುದು ದೊರೆಯ ಕಣ್ಣಿನಲ್ಲಿ ಮಾತ್ರ!

ಕ್ಲೇಶವೊಂದರ ಕಾರಣ ತಿಳಿದರೆ ಪರಿಹಾರ ತಿಳಿಯುವುದು ಬಲು ಸುಲಭ. ಇಲ್ಲಿ ಬರವು ಬಂದ ಬಗೆಯಾಗಲೀ, ಹೋಗುವ ದಾರಿಯಾಗಲೀ ತಿಳಿಯದೆ ತೊಳಲಾಡಿದನು ಅಂಗೇಶ್ವರ! ಆದರೆ ವಿಚಲಿತನಾಗಲಿಲ್ಲ; ತನ್ನ ಪ್ರಯತ್ನವನ್ನು ಬಿಡಲಿಲ್ಲ. ಬರಿಗಣ್ಣಿಗೆ ಮೀರಿದ ಬರಗಾಲದ ಕಾರಣ ಹುಡುಕಲು ದೂರದೂರುಗಳಿಂದ ದೈವವಿದರನ್ನು ಬರಮಾಡಿಕೊಂಡನು ರೋಮಪಾದ. ಜ್ಞಾನಿಜನರ ಸ್ತೋಮಕ್ಕೆ ಹಣೆಮಣಿದು ರಾಜ್ಯವನ್ನು ಮುತ್ತಿರುವ ಮಹದನರ್ಥದ ಕಾರಣ-ಪರಿಹಾರಗಳನ್ನು ತಿಳಿಸಿಕೊಡಬೇಕೆಂದು ಕೇಳಿಕೊಂಡನು.

ಆ ಮಹಾಸಭೆಯಲ್ಲಿ ಸಮ್ಮಿಳಿತಗೊಂಡ ಅನೇಕ ಮಸ್ತಿಷ್ಕಗಳು ಅನೇಕಾನೇಕ ಅಭಿಮತಗಳನ್ನು ಅಭಿವ್ಯಕ್ತಗೊಳಿಸಿದವು. ಆದರೆ ಅವಾವುವೂ ಭಯಂಕರ ಬರದ ಮೂಲಕಾರಣವನ್ನು ಮುಟ್ಟಲಿಲ್ಲ. ಚರ್ಚೆ ಮುಂದುವರಿಯುತ್ತಲೇ ಇತ್ತು. ಸಮಸ್ಯೆ ಇದ್ದಲ್ಲಿಯೇ ಇತ್ತು!

ಅಲ್ಲಿನ ಪಂಡಿತಮಂಡಲದ ನಡುವೆ ಜ್ಞಾನನೇತ್ರನೊಬ್ಬನು ಮೌನದಲ್ಲಿ ಕುಳಿತಿದ್ದನು. ‘ಯಾರ ಮುಖದಿಂದಲಾದರೂ ಸತ್ಯವು ಹೊರಬಂದೀತೇ?’ ಎಂಬ ಸತ್ಯಪ್ರತೀಕ್ಷೆಯು ಅವನ ಮೌನದ ಮರ್ಮವಾಗಿತ್ತು. ಎಲ್ಲಿಂದಲೂ ನಿಜವು ಪ್ರಕಟವಾಗದಾದಾಗ ಆತನು ಎದ್ದು ನಿಂತು ಕಠೋರವಾದ, ಆದರೆ ಸತ್ಯಸ್ಪರ್ಶಿಯಾದ ಮಾತುಗಳಿಂದ ದೊರೆಯನ್ನು ಸಂಬೋಧಿಸಿದನು.

ರಾಜನ್, ನಾಡು ಬರಡಾಗಲು ನಿಜವಾದ ಕಾರಣ ನಾಡಿನೊಡೆಯನ ನುಡಿಯು ಬರಡಾದುದು. ನೀ ಗೈದ ವಚನಭಂಗವು ವಜ್ರಾಯುಧವಾಗಿ ನಿನ್ನ ನಾಡನ್ನು ನಾಶ ಮಾಡುತ್ತಿದೆ. ಕೇಳಿದ್ದನ್ನು ಕೊಡುವೆನೆಂದು ವಿಪ್ರನಿಗೆ ವಾಗ್ದಾನ ಮಾಡಿ, ಬಳಿಕ ಇಲ್ಲವೆಂದ-ಒಲ್ಲೆನೆಂದ ದುರಿತವ ನೀ ಮರೆತಿರುವೆಯಾ? ಮರೆತಂತಿರುವೆಯಾ? ಆ ವಿಪ್ರನೋ, ವಚನಭಂಗಕ್ಕೆ ಪ್ರತಿಯಾಗಿ ಒಂದೂ ಮಾತಾಡದೇ, ರಾಜ್ಯವನ್ನೇ ತೊರೆದು ಹೊರನಡೆದನಲ್ಲವೇ?

ಸಭೆಯು ನಿಶ್ಶಬ್ದವಾಯಿತು. ಸಾರ್ವಭೌಮನು ಸ್ತಬ್ಧನಾಗಿ ಕೇಳುತ್ತಿದ್ದಂತೆ ಆ ಸುಜ್ಞಾನಿ ಸತ್ಯಸಾಕ್ಷಾತ್ಕಾರದ ತನ್ನ ವಾಣಿಯನ್ನು ಮುಂದುವರಿಸಿದನು.

ದೊರೆಯೇ, ಕಿಡಿಯೊಂದು ಇಡಿಯ ಕಾಡನ್ನು ವ್ಯಾಪಿಸುವಂತೆ ಅಂದು ತಪಸ್ವಿಯೋರ್ವನ ನೋವು ನಾಡಿನ ತಪಸ್ವಿಗಳೆಲ್ಲರನ್ನೂ ವ್ಯಾಪಿಸಿತು. ಆಡಿದ ಮಾತು ಒಡೆಯನಿಗೇ ಇಲ್ಲದ ನಾಡು ಬೇಡವೆಂದು ಅವರೆಲ್ಲರೂ ಅವನನ್ನು ಹಿಂಬಾಲಿಸಿದರು. ಮನೆಯ ಅಗ್ನಿಯಿಂದ ನಾಡಿಗೇ ಮಳೆ ಬರಿಸಬಲ್ಲ ಮಹಾಮಹಿಮರು ಮಹೀಸುರರು. ನಿನ್ನೀ ಕೃತಿಯಿಂದ ಖತಿಗೊಂಡು ರಾಜ್ಯವನ್ನೇ ಬಿಟ್ಟು ಅವರು ಹೊರನಡೆದಾಗ ಸತ್ಕರ್ಮಗಳು ನಿಂತು ಹೋದವು. ಬೇರಿಲ್ಲದೆ ಚಿಗುರೆಲ್ಲಿ? ಸತ್ಕರ್ಮಗಳಿಲ್ಲದೆ ಸುಭಿಕ್ಷವೆಲ್ಲಿ!?

ಇತಿಹಾಸವು ಭೂತವಾಗಿ ಬಂದು ಕಣ್ಮುಂದೆ ಕುಣಿದಿತ್ತು! ಪಶ್ಚಾತ್ತಾಪವು ರೋಮಪಾದನ ಕಣ್ಣಲ್ಲಿ ಕಣ್ಣೀರಾಗಿ ದಳದಳನೆ ಇಳಿದಿತ್ತು!

ಕಠೋರ ಸತ್ಯದ ಕಥನದ ಬಳಿಕ ಆ ಸತ್ಯದರ್ಶಿಯು ವಚನಲೋಪದ ಪಾಪದ ಲೇಪವ ತೊಳೆಯುವ, ಬಾರದ ಮಳೆಯ ಮರಳಿ ಇಳೆಗಿಳಿಸುವ ದಾರಿಯನ್ನು ನಿರೂಪಿಸತೊಡಗಿದ.

ಪರಿಹಾರವಿರುವುದು ಎಲ್ಲಿ ತಪ್ಪಿ ನಡೆದೆಯೋ ಅಲ್ಲಿಯೇ! ಯಾರಲ್ಲಿ ವಚನಭಂಗಗೈದೆಯೋ ಆ ವಿಪ್ರನಲ್ಲಿ ಕ್ಷಮಾಯಾಚನೆ ಮಾಡು‌. ರಾಜ್ಯವನ್ನು ಪರಿತ್ಯಜಿಸಿ ತೆರಳಿದ ತಪಸ್ವಿಗಳೆಲ್ಲರನ್ನೂ ಅನುನಯಿಸಿ ಮರಳಿ ಕರೆ ತಾ. ಕ್ಷಾಮ ನೀಗಿ, ನಾಡಿಗೆ ಕ್ಷೇಮವಾಗುವುದು ಅವರ ಕ್ಷಮೆಯನ್ನವಲಂಬಿಸಿದೆ. ಎಡವಿದ ನೆಲದಲ್ಲಿಯೇ ಅಲ್ಲವೇ ಕೈಯೂರಿ ಮೇಲೇಳಬೇಕಾದುದು!?

~

ಇಲ್ಲಿ ನಮಗೆ ನೆನಪಾಗುವುದು ರಘುಕುಲದ ರೀತಿ: ವಚನವು ಪ್ರಾಣಕ್ಕಿಂತ ದೊಡ್ಡದು! ತಲೆ ಕೊಡಬಹುದು; ಕೊಟ್ಟ ಮಾತಿಗೆ ಎಂದೂ ತಪ್ಪಲಾಗದು!ರಘುಕುಲ ರೀತ್ ಸದಾ ಚಲಿ ಆಯೀ, ಪ್ರಾಣ ಜಾಯೆ ಪರ್ ವಚನ್ ನ ಜಾಯೇ..
(“रघुकुल रीत सदा चली आई; प्राण जाये पर वचन ना जाये”. – ರಾಮಚರಿತಮಾನಸ, ೪-೨-೨೮)

ರಾಮನ ನುಡಿಯಿದು:
ಸತ್ಯಮೇವಾನೃಶಂಸಂ ಚ ರಾಜವೃತ್ತಂ ಸನಾತನಮ್ |
ತಸ್ಮಾತ್ ಸತ್ಯಾತ್ಮಕಂ ರಾಜ್ಯಂ ಸತ್ಯೇ ಲೋಕಃ ಪ್ರತಿಷ್ಠಿತಃ ||(ವಾಲ್ಮೀಕೀರಾಮಾಯಣ, ಅಯೋಧ್ಯಾಕಾಂಡ, ೧೦೯/೧೦)
ಸತ್ಯವು ದೊರೆಗಳ ಸನಾತನವಾದ ನಡೆ;ರಾಜನು ಸತ್ಯವನ್ನು ಬಿಡದೆ ನಡೆದಾಗ ರಾಜ್ಯವೇ ಸತ್ಯಮಯವಾಗುವುದು. ಲೋಕವೆಲ್ಲವೂ ನೆಲೆ ನಿಂತಿರುವುದೇ ಸತ್ಯದಲ್ಲಿ!”

ರಾಜನೇ ಸುಳ್ಳಾಗಿಹೋದರೆ ರಾಜ್ಯವು ಸತ್ಯವಾಗುವುದೆಂತು!?

~#RaamaRashmi blog by @SriSamsthana RaghaveshwaraBharati Swamiji

ತಪ್ಪೊಪ್ಪಿಕೊಳ್ಳಲು ತಡ ಮಾಡಲಿಲ್ಲ ದೊರೆ. ಹೃದಯದಲ್ಲಿ ಶೋಕಾಗ್ನಿ, ನೇತ್ರಗಳಲ್ಲಿ ಶೋಕಜಲದೊಡನೆ ಸತ್ಯಕ್ಕೆ ಪ್ರಾಂಜಲನಾಗಿ ಶರಣಾದನವನು! ಆಗ ಆ ಮಹಾಮನೀಷಿಯು ಹೇಳಲೇಬೇಕಾದ ಕೊನೆಯ ಮಾತನ್ನು ಹೇಳತೊಡಗಿದ.

ಅಂಗರಾಜ, ಕ್ಷಮಾಯಾಚನೆಯಿಂದ, ತಪಸ್ವಿಗಳ ಪುನರಾಗಮನದಿಂದ ನಿನ್ನ ಕರ್ಮ ಕಳೆಯುವುದು. ಆದರೆ ಮಳೆ ಬರಬೇಕಾದರೆ ವಿಭಾಂಡಕರ ಸುತನಾದ ಕುಮಾರ ಋಷ್ಯಶೃಂಗನ ಪಾದಸ್ಪರ್ಶವು ನಿನ್ನ ರಾಜ್ಯಕ್ಕೆ ಆಗಬೇಕು. ಆದರೆ ಅದು ಅಷ್ಟು ಸುಲಭವಲ್ಲ! ಋಷ್ಯಶೃಂಗನನ್ನು ವಿಭಾಂಡಕರ ಕೆಂಡಗಣ್ಗಾವಲಿನಿಂದ ಕರೆದುಕೊಂಡು ಬರುವುದೆಂದರೆ ಅದು ದೇವಗಂಗೆಯನ್ನು ಧರೆಗಿಳಿಸಿದ ಭಗೀರಥನ ಯತ್ನಕ್ಕಿಂತ ಕಡಿಮೆಯದಲ್ಲ! ಯಾವ ತ್ಯಾಗಕ್ಕೂ ಸಿದ್ಧನಿರು. ಅಳತೆಗಳವಡದಷ್ಟು ಭೂಮಿಯನ್ನು, ಬೆಲೆ ಕಟ್ಟಲಾರದ ಮುತ್ತು-ರತ್ನಗಳನ್ನು, ಕೊನೆಗೆ ಮಳೆಗಾಗಿ ಮಗಳನ್ನೂ ಆ ಮುನಿಕುಮಾರನಿಗರ್ಪಿಸಲು ಸಿದ್ಧನಾಗು!
ಏಕೆಂದರೆ ಋಷ್ಯಶೃಂಗ ಬಾರದೇ ಮಳೆ ಬಾರದು! ಬಂದರೆ ಮಳೆ ಬಾರದಿರದು!

ಈಗ ಬರ ನೀಗುವ ವರಮಾರ್ಗವು ದೊರೆಗೆ ದೊರೆತಿತ್ತು; ಆದರೆ ವಿಭಾಂಡಕರೆಂಬ ಪ್ರಳಯಾಗ್ನಿಚಕ್ರದ ನಡುವಿನಿಂದ ಕುಮಾರ ಋಷ್ಯಶೃಂಗನನ್ನು ಕರೆದು ತರುವ ಅತ್ಯಂತ ಅಪಾಯಕಾರಿಯಾದ ಸವಾಲು ಎದುರಿತ್ತು!

ಒಟ್ಟಿಷ್ಟು:

ಆದ ಅನಾಹುತ:
ಮಹಾರಾಜನೋರ್ವನ ಒಂದು ಪಾಪ; ರಾಜ್ಯಕ್ಕೇ ಕ್ಷಾಮ!
ಆಗಲೇಬೇಕಾದ ಅದ್ಭುತ:
ಮಹಾಪುಣ್ಯಶಾಲಿಯೋರ್ವನ ಒಂದು ಪಾದಸ್ಪರ್ಶ; ರಾಜ್ಯಕ್ಕೇ ಕ್ಷೇಮ!

 

~*~

(ಸಶೇಷ..)

ಕ್ಲಿಷ್ಟ-ಸ್ಪಷ್ಟ:

  • ಜ್ಞಾನನೇತ್ರ = ತಿಳಿವಳಿಕೆಯಿಂದ ಕೂಡಿದ ದೃಷ್ಟಿಯುಳ್ಳವನು / ಜ್ಞಾನಿ
  • ಮಹೀಸುರರು = ಬ್ರಾಹ್ಮಣರು

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ ಯ 46ನೇ ರಶ್ಮಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments