ರಾಮನಿಗೆ ದಶರಥನು ಹೇಗೆ ತಂದೆಯೋ, ಹಾಗೆಯೇ ದಶರಥರಾಜ್ಯವೂ ರಾಮರಾಜ್ಯಕ್ಕೆ ತಂದೆಯಂತಿತ್ತು! ಒಂದು ಮಹಾಶುಭವು ಇದ್ದಕ್ಕಿದ್ದಂತೆ ಬಂದು ಬಿಡುವುದಿಲ್ಲ; ಇದ್ದಕ್ಕಿದ್ದಂತೆ ಮರದಲ್ಲಿ ಹಣ್ಣು ಪ್ರತ್ಯಕ್ಷವಾಗಿ ಬಿಡುವುದಿಲ್ಲ. ಹಣ್ಣಿನ ಹಿಂದೆ ಕಾಯಿ ಇರಬೇಕು. ಕಾಯಿಯ ಹಿಂದೆ ಮಿಡಿ ಇರಬೇಕು. ಅದರ ಹಿಂದೆ ಹೂವು, ಎಲೆ, ಕೊಂಬೆ, ಕಾಂಡ, ಬೇರುಗಳಿರಬೇಕು. ಅಂತೆಯೇ ಮಹಾಶುಭದ ಹಿಂದೆ ಮಹಾಪೀಠಿಕೆಯೂ ಇರಲೇಬೇಕು. ರಾಮರಾಜ್ಯವೆಂಬ ಮಹಾಶುಭಕ್ಕೆ ದಶರಥರಾಜ್ಯವು ಪೀಠಿಕೆಯಾಗಿತ್ತು.
ಯಾವುದೇ ಮಹಾಶುಭಕ್ಕೆ ಕಾರಣಪುರುಷರು ಒಬ್ಬರೇ ಆಗಿರುವುದಿಲ್ಲ; ತೆರೆಯ ಮುಂದೆ ಕೆಲವರು, ತೆರೆಯ ಹಿಂದೆ ಹಲವರು, ಹೀಗೆ ಅನೇಕಾನೇಕ ಶುಭಜೀವಗಳ ಪ್ರಾಮಾಣಿಕ ಪ್ರಯತ್ನಗಳ ಸಮಾಹಾರವಾಗಿಯೇ ಮಹಾಶುಭವೊಂದು ಮೂಡಿಬರುವುದು! ದಶರಥನ ರಾಜ್ಯವೂ ಇದಕ್ಕೆ ಹೊರತಲ್ಲ. ಸಿಂಹಾಸನದ ಮೇಲೆ ದಶರಥನೋರ್ವನೇ ವಿರಾಜಿಸುತ್ತಿದ್ದರೂ, ಅವನ ಅಷ್ಟ ಮಂತ್ರಿಗಳು ಸಿಂಹಾಸನದ ಕಾಲುಗಳಂತೆ ರಾಜ್ಯವನ್ನೂ, ರಾಜನನ್ನೂ ಎತ್ತಿ ಹಿಡಿದಿದ್ದರು. ಎಲೆಮರೆಯ ಕಾಯಿಗಳಾಗಿ ತಮ್ಮ ಜೀವದ, ಜಾಣಿನ, ದೇಹದ ಸರ್ವಸ್ವವನ್ನೂ ರಾಜ್ಯಕ್ಕಾಗಿ ಧಾರೆಯೆರೆದಿದ್ದರು. ರಾಮರಾಜ್ಯದ ಹಿಂದೆ ದಶರಥರಾಜ್ಯವಿದ್ದರೆ, ದಶರಥರಾಜ್ಯದ ಹಿಂದೆ ಕಾಣದ ಕಾರಣಪುರುಷರಾಗಿ ಅವನ ಅಷ್ಟ ಮಂತ್ರಿಗಳಿದ್ದರು.
ವಾಲ್ಮೀಕಿಗಳು ದಶರಥನ ಮಂತ್ರಿಗಳನ್ನು ‘ಮಂತ್ರಜ್ಞಾಃ – ಮಂತ್ರ ಬಲ್ಲವರು’ ಎಂದು ಕರೆದಿದ್ದಾರೆ.
‘ಮಂತ್ರಿ’ ಪದವು ‘ಮಂತ್ರ’ಪದದಿಂದ ಬಂದಿದೆ.
ಮಂತ್ರಪದವು ಎರಡು ಅರ್ಥಗಳಲ್ಲಿ ಬಳಕೆಯಲ್ಲಿದೆ.
- ದೇವನನ್ನೊಲಿಸಿ ಆತ್ಮಕಲ್ಯಾಣ~ಲೋಕಕಲ್ಯಾಣಗಳನ್ನು ಸಾಧಿಸಲು ಸಾಧನವಾಗುವ ಅಕ್ಷರಗುಚ್ಛಕ್ಕೆ ಮಂತ್ರವೆನ್ನುವರು. ಉದಾಹರಣೆಗೆ ಗಾಯತ್ರೀ ಮಂತ್ರ.
- ಹಾಗೆಯೇ ಸರಿಯಾದ ನಿರ್ಣಯವನ್ನು ಕೈಗೊಳ್ಳಲು ಬಲ್ಲವರೊಡನೆ ನಡೆಸುವ ಸಮಾಲೋಚನೆಯನ್ನೂ ಮಂತ್ರವೆಂದೇ ಕರೆಯುವರು. ಮಥನದಿಂದ ನವನೀತ; ಮಂತ್ರಾಲೋಚನೆಯಿಂದ ಸಮರ್ಪಕ ನಿರ್ಣಯ. ಮೊದಲನೆಯ ಮಂತ್ರವು ದಿವ್ಯತೆ ತುಂಬಿದ ಅಕ್ಷರಗಳ ಗುಚ್ಛವಾದರೆ, ಮಂತ್ರಾಲೋಚನೆಯ ರೂಪದ ಎರಡನೆಯ ಮಂತ್ರವು ಕಳಕಳಿ ತುಂಬಿದ ಚಿಂತನೆಗಳ ಗುಚ್ಛ. ಅಲ್ಲಿ ಒದಗಿ ಬಂದು ರಾಜನ ಬುದ್ಧಿಯಾಗುವನು ಮಂತ್ರಿ.
ಮಂತ್ರಾಲೋಚನೆಗೆ ಮಂತ್ರದಷ್ಟೇ ಮಹತ್ತ್ವವಿದೆ. ಏಕೆಂದರೆ ಬದುಕು ನಿರ್ಣಯಗಳನ್ನು ಅವಲಂಬಿಸಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ಮಾಡುವವನು ಜೀವನದಲ್ಲಿ ಸೋಲುವುದೇ ಇಲ್ಲ! ತಪ್ಪು ನಿರ್ಣಯಗಳು ಬದುಕನ್ನು ಅಸ್ತವ್ಯಸ್ತಗೊಳಿಸುವವು. ಒಮ್ಮೊಮ್ಮೆ ಬದುಕನ್ನೇ ನಾಶಗೊಳಿಸುವವು! ಸರಿಯಾದ ನಿರ್ಣಯಗಳು ಬದುಕಿನಲ್ಲಿ ಮೇಲೇರುವ ಏಣಿಗಳಾಗುವವು. ಸಮರ್ಪಕ ಸಮಾಲೋಚನೆಗಳು ಸೂಕ್ತ ನಿರ್ಣಯಗಳಿಗೆ ದ್ವಾರವಾಗುವವು. Discussion ಎಂಬ ಗಿಡದಲ್ಲಿಯೇ Decision ಎಂಬ ಹಣ್ಣು ಬಿಡುವುದು. ಒಳ್ಳೆಯ ಗಿಡವಾದರೆ ಒಳ್ಳೆಯ ಹಣ್ಣು! ಸೂಕ್ತ ಮಂತ್ರಾಲೋಚನೆಯು ಬದುಕಿನ ಸಫಲತೆಯ ಮೂಲ ಮಂತ್ರ.
ಇದು ವೈಯಕ್ತಿಕ ಜೀವನದ ವಿಷಯವಾಯಿತು. ಒಂದು ರಾಜ್ಯದ ರಾಜನೊಬ್ಬ ಕೈಗೊಳ್ಳುವ ನಿರ್ಣಯಗಳು ರಾಜ್ಯದ ಲಕ್ಷ-ಲಕ್ಷ, ಕೋಟಿ-ಕೋಟಿ ಜನರ ಬದುಕಿನ ಮೇಲೆ ಪರಿಣಾಮ ಬೀರುವವು! ಆದುದರಿಂದಲೇ ಮಹಾನಿರ್ಣಯಗಳನ್ನು ಸಮಾಲೋಚನೆಗಳಿಲ್ಲದೆ ರಾಜನೊಬ್ಬನೇ ಮಾಡಬಾರದು. ಸಮಾಲೋಚನೆಗಳನ್ನು ಬಹಳ ಮಂದಿಯೊಂದಿಗೂ ಮಾಡಬಾರದು. ದುಡುಕಿಯೂ ಮಾಡಬಾರದು! ಮಂತ್ರಜ್ಞರಾದ, ಆಯ್ದ ಕೆಲವೇ ಮಂದಿಯೊಂದಿಗೆ ಸಮಾಲೋಚನೆಗಳನ್ನು ಮಾಡಿಯೇ ನಿರ್ಣಯಗಳನ್ನು ಮಾಡಬೇಕು. ರಾಮನು ಭರತನಿಗೆ ರಾಜನೀತಿಯನ್ನು ಉಪದೇಶಿಸುವಾಗ ‘ಕಚ್ಚಿನ್ಮಂತ್ರಯಸೇ ನೈಕಃ ಕಚ್ಚಿನ್ನ ಬಹುಭಿಃ ಸಹ – ಏಕಾಂಗಿಯಾಗಿ ನಿರ್ಣಯಗಳನ್ನು ಮಾಡದಿರು; ಸಮಾಲೋಚನೆಗಳನ್ನು ಮಾಡಿಯೇ ನಿರ್ಣಯಗಳನ್ನು ಮಾಡು. ಆದರೆ ಸಮಾಲೋಚನೆಗಳನ್ನು ಬಹು ಜನರೊಂದಿಗೂ ಮಾಡದಿರು’ ಎಂದು ಹೇಳುವುದು ಇದೇ ತಾತ್ಪರ್ಯದಲ್ಲಿ. ಆದುದರಿಂದಲೇ ರಾಜ್ಯಶಾಸ್ತ್ರಜ್ಞರು “ರಾಜ್ಯವು ಮಂತ್ರಮೂಲ”ವೆನ್ನುವರು. ಮಂತ್ರವು ಮಂತ್ರಿಮೂಲ! ಎಲ್ಲವನ್ನೂ ಮಾಡುವವನು ರಾಜನೇ ಆದರೂ ಏನು ಮಾಡಬೇಕೆಂದು ಹೇಳುವವನು ಮಂತ್ರಿ. ರಾಜ್ಯಭಾರದ ಭಾರವು ನಿಜವಾಗಿಯೂ ಅವನ ಮೇಲಿದೆ!
ಇಲ್ಲಿ ನಮ್ಮೆಲ್ಲರಿಗೊಂದು ಸಂದೇಶವಿದೆ. ಬದುಕಿನಲ್ಲಿ ಆಪ್ತರು ಬೇಕು. ಏಕೆಂದರೆ ಬದುಕು ದಾರಿ ತಪ್ಪದಿರಲು ಆಪ್ತ ಸಲಹೆಗಳು ಬೇಕು. ಆಪ್ತರಿಲ್ಲದ ಬದುಕೂ ಆಪ್ತವಲ್ಲ! ಪರ್ಯಾಪ್ತವೂ ಅಲ್ಲ!
ಸ್ವಾರಸ್ಯವೆಂದರೆ ದಶರಥನ ಪ್ರಧಾನ ಮಂತ್ರಿಯ ಹೆಸರೇ ಸುಮಂತ್ರ! ಹಾಗೆಂದರೆ ಅತ್ಯಂತ ಸಮುಚಿತವಾದ ಸಲಹೆಗಳನ್ನು ನೀಡುವವನು. ಮತ್ತುಳಿದ ಮಂತ್ರಿಗಳಿಗೆ ಬೇರೆ ಹೆಸರುಗಳಿದ್ದರೂ ಅವರೂ ‘ಸುಮಂತ್ರ’ರೇ ಆಗಿದ್ದರು! ರಾಮನಂತಹ ಸತ್ಪುತ್ರನನ್ನು ದಶರಥನು ಪಡೆದುದು ಹೇಗೆ ಪರಮ ಪುಣ್ಯದ ಫಲವೋ, ಹಾಗೆಯೇ ಸುಮಂತ್ರನ ತೆರನಾದ ಎಂಟು ಮಂತ್ರಿಗಳನ್ನು ಪಡೆದುದೂ ಮಹಾಪುಣ್ಯದ ಫಲವೇ ಸರಿ!
~*~*~
(ಸಶೇಷ…)
August 25, 2017 at 6:50 AM
ಸಮುಚಿತ, ಸಮಯೋಚಿತ!!
ಇಂದಿನ ರಾಜಕಾರಣಿಗಳೆಲ್ಲರೂ ಈಗಲೇ ಓದಲೇಬೇಕಾದ ಆಪ್ತ ಬರಹ. ಜೊತೆಗೆ ಸಕಲ ಪ್ರಜೆಗಳಿಗೂ ಒಂದು ನೀತಿಪಾಠ.
August 25, 2017 at 7:12 AM
ಪ್ರಖರತೆಯ ಪ್ರಥಮರಶ್ಮಿ…
ಇಳಿಯಿತು ಬಿತ್ತು.. ಇದಿನ್ನಿಳೆಯ ಬಿತ್ತು..
August 25, 2017 at 7:51 AM
ಮಂತ್ರಿ ಪದದ ಮೂಲವೇ ಮಂತ್ರ. ಮಥನ ಮಾಡಿ ಬೆಣ್ಣೆ ತೆಗೆವ ಹಾಗೆ ಮಂಥನ ಮಾಡಿ ಸರಿಯಾದ ನಿರ್ಧಾರಕ್ಕೆ ಬರಬೇಕು. ದಿನವೂ ರಾಮರಶ್ಮಿಗೆ ಸೂರ್ಯ ರಶ್ಮಿ ಬರುವ ಸಮಯದಲ್ಲಿ ಕಾಯುತ್ತಿರುತ್ತೇವೆ ಗುರುಗಳೆ .. ಹರೇರಾಮ
August 25, 2017 at 9:31 AM
ಪ್ರತಿ ಗುರುವಾರ ಇರುವುದು..
August 25, 2017 at 8:01 AM
Hare rama
August 25, 2017 at 9:07 AM
Hareraam
August 25, 2017 at 9:07 AM
Harerama
August 25, 2017 at 9:54 AM
ಆತ್ಮವೇ ಅದ್ಭುತ, ಈ ಲೇಖನ ಮಂತ್ರ.
.
ಸುಂದರ ಶ್ಲೋಕಗಳ ಓದುವುದೇ ಚಂದ, ಮಳೆಯಾಗಿ ಬಿಡಿಸಿ ಕೊಳೆಯನು, ಬಿಸಿಲಾಗಿ ಬೆಳಗಿ ಹೃದಯವನು, ಸೂರ್ಯ ಬಂದ ತಂದೆ ತಂದ ಅಂಗಿ ಅಂದ.
.
ಮುಗಿಲು ಕರಗಿ ಮತ್ತೆ ಮುಗಿಲಾಯಿತು ಮನ, ನೀರು ಕರಗಿ ಮುತ್ತು ಕಣ್ಣಿಗೆ ಸುತ್ತ ಎಂಟು, ಬೆಳಗಿತ್ತು ನಯನ ದಿವ್ಯ ಅರ್ಥದಲಿ –
ರಾಜನಲ್ಲಿ ಕುಳಿತ್ತಿದ್ದ. ಅಡಿ ಇಡುವ ದಿಕ್ಕುಗಳಲೆಲ್ಲ ರಾಜಜ್ಞಾನ ಬಿಟ್ಟರೆ ಬೇರಿಲ್ಲ. ಕತ್ತಲಿಲ್ಲದ ರಾಜ್ಯದಲ್ಲಿ ಪ್ರಜೆ ರಾಜ, ರಾಜ ಪ್ರಜೆ – ಇವನವನಿಗೆ ತಂದೆ, ಅವನಿವನಿಗೆ ತಂದೆ. ಆ ಮಹಾಕುಟುಂಬದಲ್ಲಿ ಎಲ್ಲರೂ ಚಿಕ್ಕವರೆ ಎಲ್ಲರೂ ದೊಡ್ಡವರೆ, ಹಬ್ಬಕ್ಕೆ ದಿನ ಕೊಟ್ಟವರಲ್ಲ, ದಿನಕ್ಕೆ ಹಬ್ಬ ಕಟ್ಟಿದವರು, ತೋರಣವಿಲ್ಲದ ಆಕಾಶವೇ ಇರಲಿಲ್ಲ.
.
ಶ್ರೀ ಗುರುಭ್ಯೋ ನಮಃ
August 25, 2017 at 10:59 AM
ಹರೇ ರಾಮ..
August 25, 2017 at 11:10 AM
ಹರೇರಾಮ.
ಜೀವನದಲ್ಲಿ ನಡೆಯುವ ಪ್ರತಿದಿನದ ಪ್ರತಿಘಟನೆಗಳಿಗೂ ಇದು ಅನ್ವಯಿಸುವಂತಿದೆ.
[ಮಥನದಿಂದ ನವನೀತ; ಮಂತ್ರಾಲೋಚನೆಯಿಂದ ಸಮರ್ಪಕ ನಿರ್ಣಯ]
ನಿತ್ಯಬದುಕಿನ ವಿಷಯಗಳನ್ನು ಮಥಿಸಿ ನಮ್ಮ ನಿತ್ಯದ ನಿರ್ಧಾರಗಳಲ್ಲಿ ಬುದ್ಧಿಯನ್ನು ಮಂತ್ರಿಯಾಗಿಸಿದರೆ ಬದುಕು ಸುಗಮ. ವಿಷಯ ಮಥನದಲಿ ವಿಷ ಹೊರಹೋಗಿ ಶುದ್ಧವಿಷಯ ನವನೀತವಾಗಿ ನಮ್ಮೆದುರು ನಿಲ್ಲುತ್ತದೆ.
[ಆಪ್ತರಿಲ್ಲದ ಬದುಕೂ ಆಪ್ತವಲ್ಲ! ಪರ್ಯಾಪ್ತವೂ ಅಲ್ಲ!]
ಬದುಕನ್ನು ಪರ್ಯಾಪ್ತಗೊಳಿಸಲು ನಮ್ಮೊಡನೆ ಒಡನಾಡುವ ಆಪ್ತರು ಸಿಗುವುದು ಪೂರ್ವಜನ್ಮಕೃತ ಪುಣ್ಯಗಳಿಂದಲೇ. ಬಹುತೇಕ ಸಿಗುವವರು ಆಪ್ತರೆಂದೆನಿಸಿ ನಮ್ಮ ಬದುಕಿನ ದಾರಿ ತಪ್ಪಿಸುವವರು. ಆಪ್ತರ ಮುಖವಾಡ ಹೊದ್ದು ಬರುವವರ ನಿಜರೂಪ ಶ್ರೀಗುರುಕಾರುಣ್ಯದಿಂದ ಸ್ವಗೋಚರವಾಗುವಂತಾಗಲಿ..
ಈ ರಾಮರಶ್ಮಿಯಲಿ ಬರುವ ಕಿರಣಗಳು ಸಕಲರ ಬದುಕು ಮಂಗಲಮಾಡಲಿ..
ಹರೇರಾಮ.
August 25, 2017 at 11:53 AM
“Decision making” ಎಂಬುದು ತುಂಬಾ ಕಠಿಣವಾದ ಕೆಲಸ. ಪ್ರತಿದಿನವೂ, ಪ್ರತಿಕ್ಷಣವೂ ಒಂದಿಲ್ಲೊಂದು ನಿರ್ಧಾರಗಳನ್ನು ಬದುಕಿನಲ್ಲಿ ತೆಗೆದುಕೊಳ್ಳುತ್ತಲೇ ಇರುತ್ತೇವೆ.. ಸಹಜ ಜೀವನದಲ್ಲಿ ಇದು ಅತಿ ಸಹಜ..
ಆದರೆ ಕೆಲವೊಂದು ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸಬಲ್ಲದು. ಅಂತಹವುಗಳನ್ನು ತೆಗೆದುಕೊಳ್ಳುವಾಗ “Discussion” ಬೇಕೇ ಬೇಕು. ಸಮಾಲೋಚನೆ ಯಾರೊಂದಿಗೆ? ಆಪ್ತರೊಂದಿಗೆ..
ಆದರೆ, ಇಂತಹವರು ಆಪ್ತರಾಗಿರಲು ಅರ್ಹರು ಎಂದು ಹೇಗೆ ತಿಳಿಯುವುದು?
August 25, 2017 at 1:00 PM
ಅಲೆಮಾರಿ ಜೀವನದಿಂದ ಸಂಘಟಿತವಾಗಿ ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸಲು ಶುರುವಾದ ಪುನರುತ್ಥಾನ ಜೀವನದಿಂದ ಸಹಬಾಳ್ವೆಗೆ ಮುನ್ನುಡಿಯಾಯಿತು. ಮಾನವ ಬುದ್ಧಿಜೀವಿ ಅದರಲ್ಲೂ ಕೆಲವರಂತೂ ಅತೀ ಬುದ್ದಿವಂತರು. ಈ ಕಾರಣದಿಂದಲೇ ಸಹಬಾಳ್ವೆಗಿರುವ ಅರ್ಥ ಕಳೆದು ಕೊಳ್ಳುವಂತಾಯಿತು. ಬದುಕೆಂದರೆ ಕಷ್ಟ~ಸುಖ; ನೋವು~ನಲಿವು ಹಾವು ಏಣಿ ಆಟದಂತೆ ಹೀಗಿರುವಾಗ ಆಪ್ತರೆಂದರೆ ಸುಖದಲ್ಲಿ ಮಾತ್ರ ಪಾಲುದಾರರಲ್ಲ. ಕಷ್ಟಬಂದಾಗ ಕೈ ಹಿಡಿದು ಮೇಲೇತ್ತುವ ಮನೋಭಾವವಿರಬೇಕು;ಕೈ ಕೊಡುವ ತುಚ್ಛ ಕೆಲಸವಿರಬಾರದು. ಆಪತ್ತಿನಲ್ಲಿ ಆಪ್ತರು ಸಿಗದಾಗ ಬದುಕಿನ ಕತ್ತಲೆಗೆ ಜ್ಞಾನದ ಬೆಳಕನೀವ ಗುರುವೇ ನಮ್ಮ ಪರಮಾ(ಪ್ತ )ತ್ಮ!!! ನಮ್ಮ ಪೂರ್ವಜನ್ಮದ ಪುಣ್ಯದ ಫಲವೇ ಸರಿ.
August 25, 2017 at 2:17 PM
ಗುರುವಿರುವ ಬಯಲಲಿ ಆಟ ಹೂದೋಟ.
ಸೂರ್ಯ ಚಂದ್ರ ಬೆಳಗಿದ್ದ ನೆಲದಲ್ಲಿ ಪಾಠ ಹೂದೋಟ.
ಗೃಹ ವಿಶ್ವ ಗ್ರಹ ಮಿತ್ರ.
.
ಸ್ನೇಹಪ್ರೀತಿಪ್ರೇಮಗಳಲ್ಲಿ ಪೂರ್ಣತೆ, ಕೊಡುವಿಕೆ, ಕೊಳ್ಳುವಿಕೆಯಿಲ್ಲ, ಆತ್ಮಕ್ಕಾವಲೆಕ್ಕತೂಕ,
ಬೆಳಗುತ್ತಿರುವ ಪರಮಾತ್ಮನ ಬೆಳಕಲಿ ಕಂಡುಕೊಂಡರು ಬೆಳಕಿನ ನಿಧಿ, ಮುಕ್ತವಾಯಿತು, ಬೆಳಕು ಬೆಳಕಾಯಿತು.
.
ಶ್ರೀ ಗುರುಭ್ಯೋ ನಮಃ
August 25, 2017 at 4:18 PM
Hare Raama
August 25, 2017 at 4:41 PM
ಒಬ್ಬ ರಾಜ ಕೈಗೊಳ್ಳುವ ನಿರ್ಣಯ ಕೋಟ್ಯಾಂತರ ಜೀವರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಇದಂತೂ ಅಕ್ಷರಶಃ ಸತ್ಯ. ನಮ್ಮ ರಾಜ್ಯದ ಆಡಳಿತದ ದುರವಸ್ಥೆಯೇ ಇದಕ್ಕೆ ಸಾಕ್ಷಿ. ಲಕ್ಷಾಂತರ ಗೋವುಗಳ ಬದುಕು ಆಪತ್ತಿನಲ್ಲಿದೆ. ರಾಜ ಪಾಲಿಸುತ್ತಿಲ್ಲ. ಹತ್ಯೆಗೈಯಲು ಬೆಂಬಲವಿತ್ತಿದ್ದಾರೆ. ರಾಜ ಮತ್ತು ರಾಜನ ಆಪ್ತರು ಸರಿಯಾದ ನಿರ್ಧಾರ ಕೈಗೊಳ್ಳದಿದ್ದರೆ ಏನಾಗುತ್ತದೆಂಬುದಕ್ಕೆ ನಮ್ಮ ರಾಜ್ಯದ ಗೋವಳರ ಮೇಲೆ ಉಂಟಾದ ದುಷ್ಪರಿಣಾಮವೇ ಉದಾಹರಣೆ.
August 26, 2017 at 7:36 AM
ಗುರುವಿನಾಲಯದಲ್ಲಿ ದೀಪವಿರಲಿಲ್ಲ, ಬೆಳಕಿತ್ತು,
ಗುರುವಿನಾಲಯದಲ್ಲಿ ಪುಸ್ತಕವಿರಲಿಲ್ಲ ಜ್ಞಾನವಿತ್ತು,
ಗುರುವಿನಾಲಯದಲ್ಲಿ ವಿಗ್ರಹವಿರಲಿಲ್ಲ ಹೆಜ್ಜೆಗಳಿತ್ತು,
ಗುರುವಿನಾಲಯದಲ್ಲಿ ಗುರುವೇ ಇರಲಿಲ್ಲ, ಪರಬ್ರಹ್ಮ ಅತ್ತ ಇತ್ತ ಹೆಜ್ಜೆ ಹಾಕುತ್ತಿದ್ದ.
.
ಗುರುವಿನಾಲಯದ ಬಳಿಯಲ್ಲಿ ಕರುಣೆಯ ಕಡಲಿತ್ತು ಕರಗದ ಹುಣ್ಣಿಮೆ ಇತ್ತು, ಸೂರ್ಯ ಅಲ್ಲಿ ಹಾಗೆ ಪೂರ್ಣನಾಗಿದ್ದ, ಶಿಷ್ಯನ ನಯನ ಮನ ಮುಳುಗಿತ್ತು – ಆತ್ಮ ಒಂದೇ – ಬೆಳಗಿತ್ತು, ಗುರುವಿನಾಲಯ ತೆರೆದಿತ್ತು.
.
ಶ್ರೀ ಗುರುಭ್ಯೋ ನಮಃ
August 26, 2017 at 9:02 AM
ರಾಮರಶ್ಮಿಯ ಈ ಮಹಾಕಿರಣ ಎಲ್ಲೆಡೆಯಲ್ಲೂ ಪಸರಿಸಿ ಜಗತ್ತಿನ ಸಕಲರಲ್ಲೂ ಸಕಲ ಕಣಗಳಲ್ಲೂ ಪುನಶ್ಚೇತನಕ್ಕೆ ಆಮೂಲಕ ಪುನರುತ್ಥಾನಕ್ಕೆ ಕಾರಣವಾಗಲಿ..
#ರಾಮರಶ್ಮಿ #ಹರೇರಾಮ
August 26, 2017 at 9:20 AM
ಹರೇ ರಾಮ. ಎಂತಹ ಸುಂದರ ಪದಗಳು! Discussion -decision….
ಇದನ್ನು ಓದಿದಾಗ ನೆನಪಾದ್ದು…,
ಶ್ರೀಗಳು ಒಮ್ಮೆ ಹೇಳಿದ್ದರು, ‘ನಾನು research ಮಾಡಿದ್ದೇನೆ…’ ‘ ಅಂತ ಹೇಳಿಕೊಳ್ಳುವುದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ, ಹಿರಿಯ ಜ್ಞಾನಿಗಳು ಯಾವಾಗಲೋ search ಮಾಡಿಟ್ಟದ್ದನ್ನ ಈಗ re-search ಮಾಡುವುದರಲ್ಲಿ ಏನಿದೆ ಹೆಚ್ಚುಗಾರಿಕೆ?’
ನಮಗೆ ಗೊತ್ತಿದ್ದೂ ಗೊತ್ತಿಲ್ಲದಂತಹ ಇಂತಹ ಸಂಗತಿಗಳೇ ಅಲ್ಲವೇ ನಮ್ಮೊಳಗಿನ ಕತ್ತಲನ್ನು ಕಳೆಯುವುದು…?
ನಮೋ ನಮಃ
August 26, 2017 at 9:22 AM
Discussion division ಜೊತೆಗೆ search , research ಯಾಕೆ ನೆನಪಾಯ್ತೋ ಗೊತ್ತಿಲ್ಲ. ಅಂತೂ ಅದನ್ನಿಲ್ಲಿ ಹಂಚಿಕೊಳ್ಳಬೇಕೆನಿಸಿತು.
ಹರೇ ರಾಮ
August 26, 2017 at 9:45 AM
ಒ!ಳ್ಳೆಯ ಸುಮಂತ್ರರನ್ನು ಗುರುತಿಸಿ ಆರಿಸಿಕೊಳ್ಳುವ ಪರಿಯೆಂತು ?
August 26, 2017 at 7:26 PM
ಹರೇರಾಮ. ರಶ್ಮಿಯಲ್ಲಿ ಮೊಗೆ ಮೊಗೆದು ಬಗೆ ಬಗೆದು ಬಾಚಿದಷ್ಟೂ ಮುಗಿಯದ ನೀತಿಕಿರಣಗಳು.
ಮಹಿಳೆಯರು ಅರ್ಥೈಸಬಹುದಾದ ಒಂದು ಬಿಂದು
ಪತಿ-ಪತ್ನಿಯರಲ್ಲಿ, ಪತಿಯ ಸುಮಂತ್ರಿಣಿಯರಾಗಿ.
August 27, 2017 at 10:01 AM
ಆತ್ಮವ ಅರಸುತ್ತ, ಆತ್ಮ ಅರಸುತ್ತ, ಇಬ್ಬರಿಗೂ ಸಿಕ್ಕಿದ್ದು ಗುರು.
.
ಬಿದ್ದವ ಏನು ಹುಡುಕುತ್ತಿದ್ದ, ಬಿಟ್ಟವ ಎಲ್ಲಿದ್ದ.
.
ಸುಖವ ನೂರು ಕಡೆ ಹುಡುಕುತ್ತಿದ್ದರು, ಒಂದೇ ಕಡೆ ಆನಂದ ನೂರು ನೂರು ಪಟ್ಟು ಹೆಚ್ಚುತ್ತಿತ್ತು.
.
ದೇಹವ ಮನವ ಹಿಡಿಯಲು ಸಾಧ್ಯವೆ, ಹಿಡಿವ ಆತ್ಮಗುರುವ, ಎರಡಿಲ್ಲದಲ್ಲಿ ಎರಡೆಲ್ಲಿ.
.
ಗೊತ್ತಿಲ್ಲದಿದ್ದರೂ ಒಂದಲ್ಲಿ, ಗೊತ್ತಾದರೆ ______ ಬೀಸುವ ತಂಗಾಳಿ ಅಲ್ಲಿ.
.
ಸಮುದ್ರದಲ್ಲಿ ಬಿದ್ದ ಮೀನು, ಸಮುದ್ರವನ್ನೆ ಮೀರಿ ಬೆಳೆದ ಮೀನು – ಹರಿಬಿಟ್ಟ ಮೀನು.
.
ಶ್ರೀ ಗುರುಭ್ಯೋ ನಮಃ
August 27, 2017 at 9:18 PM
ರಾಮಾಯಣವನ್ನು ಓದುವುದೇ ಖುಷಿ. . .
ಪೂಜ್ಯರ ಬರಹದನ್ನಿ ಓದುವುದು ಇನ್ನೂ ಹೆಚ್ಚಿನ ಖುಷಿ. .
ರಾಮಾಯಣವನ್ನು ಮತ್ತು ರಾಮನನ್ನು ಗುರುದೃಷ್ಟಿಯಲ್ಲಿ ನೋಡುವ ಸುಯೋಗ.
ರಾಮ – ರಾಜ್ಯ – ಶ್ರೀಮುಖಗಳ ನಿರೀಕ್ಷೆಯಲ್ಲಿ. .
August 28, 2017 at 9:01 AM
ಏಕಾಂಗಿಯಾಗಿ ನಿರ್ಣಯಗಳನ್ನು ಮಾಡದಿರು; ಸಮಾಲೋಚನೆಗಳನ್ನು ಮಾಡಿಯೇ ನಿರ್ಣಯಗಳನ್ನು ಮಾಡು. ಆದರೆ ಸಮಾಲೋಚನೆಗಳನ್ನು ಬಹು ಜನರೊಂದಿಗೂ ಮಾಡದಿರು’
These lines r worth reading again nd again.
I / we will definitely practice this.
August 28, 2017 at 11:17 AM
ಹರೇರಾಮ