ಭಾವಗಳು ಮರಿ ಹಾಕುವುದುಂಟು! ಪ್ರೀತಿಯನ್ನು ಕಂಡು ಒಡಮೂಡುವ ಪ್ರೀತಿ; ತೃಪ್ತಿಯನ್ನು ಕಂಡು ಏರ್ಪಡುವ ತೃಪ್ತಿ; ಕೋಪವನ್ನು ಕಂಡಾಗ ಕುದಿದುಕ್ಕುವ ಕೋಪ; ದ್ವೇಷವನ್ನು ಕಂಡಾಗ ಭುಗಿಲೇಳುವ ದ್ವೇಷ; ಹೀಗೆ ಸಮ್ಮುಖದಲ್ಲಿರುವ ವ್ಯಕ್ತಿಯ ಭಾವಗಳು ನಮ್ಮಲ್ಲಿ ಅದೇ ಭಾವಗಳ ಪ್ರಾದುರ್ಭಾವಕ್ಕೆ ಕಾರಣವಾಗುತ್ತವೆ.

ಅಶ್ವಮೇಧ ಯಾಗಾವಸಾನ‌ದಲ್ಲಿ ಸಂತುಷ್ಟರಾಗಿದ್ದ ಋತ್ವಿಜರನ್ನು ಕಂಡು ಪರಮ ಸಂತುಷ್ಟನಾದನು ದಶರಥ!

ಋತ್ವಿಜರ ಪ್ರಸನ್ನತೆಗೆ ಕಾರಣವು ದೊರೆಯ ಧನವಲ್ಲ, ಮನ! ಏಕೆಂದರೆ, ವಿತ್ತವನ್ನಲ್ಲ, ಅದರ ಹಿಂದಿನ ಚಿತ್ತವನ್ನು ನೋಡುವ ದೃಷ್ಟಿಗಳು ಅವು! ಕೇವಲ ದಕ್ಷಿಣೈಕದೃಷ್ಟಿಗಳಾಗಿದ್ದರೆ, ದೊರೆಯು ಸಾಮ್ರಾಜ್ಯವನ್ನೇ ಸಮರ್ಪಿಸುವೆನೆನ್ನುವಾಗ ಬೇಡವೆನ್ನುವುದಾದರೂ ಹೇಗೆ!? ಮಹಾಯಾಗವನ್ನು ನಡೆಸಿದವರಿಗಾಗಿ ಮಹಾತ್ಯಾಗವನ್ನೇ ಮಾಡುವೆನೆನ್ನುವ ಮಹಾರಾಜನ ಮಹಾಮನವು ಋತ್ವಿಜರಾಗಿ ಬಂದ ಋಷಿಗಳ ಮನಃಪ್ರಸನ್ನತೆಗೆ ಕಾರಣ.

ಅಷ್ಟು ಮಾತ್ರವಲ್ಲ, ಅಶ್ವಮೇಧ ಮಹಾಯಾಗವು ನಿರ್ವಿಘ್ನವಾಗಿ ಮತ್ತು ಸಮರ್ಪಕವಾಗಿ ನೆರವೇರಿತೆಂಬುದು ಅವರ ಸಂತೃಪ್ತಿಯ ಮತ್ತೊಂದು ಮೂಲ. ಚಿತ್ರಕಾರನೋರ್ವನು ತಾನು ಚಿತ್ರಿಸುತ್ತಿರುವ ಚಿತ್ರವು ಚೆಲುವಾದಾಗ ತನ್ನಷ್ಟಕ್ಕೇ ಸಂತೋಷಪಡುವಂತೆ ಅದು; ಚಿಕಿತ್ಸೆಯು ಫಲಕಾರಿಯಾಗಿ, ರೋಗಿಯ ಜೀವವುಳಿದಾಗ ವೈದ್ಯನಿಗಾಗುವ ತೃಪ್ತಿಯದು. ಈ ಬಗೆಯ ತೃಪ್ತಿಯನ್ನು ಕಾರ್ಯತೃಪ್ತಿಯೆಂದು ಕರೆಯಬಹುದು; ಕೈಗೊಂಡ ಕಾರ್ಯವು ಚೆನ್ನಾದಾಗ ಕರ್ತನ ಅಂತಃಕರಣದಲ್ಲಿ ತಾನೇ ತಾನಾಗಿ ಮೂಡಿಬರುವ ಅನಿರ್ವಚನೀಯವಾದ ತೃಪ್ತಿಯದು.

ಹೀಗೆ ವಿಪ್ರವರರ ಮಹಾಸಂತೋಷವು ದಶರಥನಲ್ಲಿ ಮಹತ್ತರವಾದ ಸಂತೋಷವನ್ನೇ ಹುಟ್ಟುಹಾಕಿತು! ಧನ್ಯತೆಯ ಭಾರದಲ್ಲಿ ಮುನಿಮಂಡಲದ ಮುಂದೆ ಮಣಿದು ಮಲಗಿದನು ದಶರಥ. ತಮ್ಮ ಚರಣಧರಣಿಯ ಧೂಳಿನಿಂದ ಧೂಸರಿತನಾದ* ದೊರೆಯನ್ನು ಹೃದಯತಲದಿಂದ ಹರಸಿದರು ದ್ವಿಜವರರು.

ಸಾಮಾನ್ಯ ಜನರ ಮಾತಂತಿರಲಿ, ಸಾಮಾನ್ಯ ಜನಾಧಿಪರ ಕಾರ್ಯಕ್ಷಮತೆಯನ್ನೂ ಮೀರಿದ ಮಹಾಯಾಗವನ್ನು ಸಮರ್ಪಕವಾಗಿ ನೆರವೇರಿಸಿದ ಹೆಮ್ಮೆಯೀಗ ದಶರಥನದು! ಆದರೆ, ಅಷ್ಟು ಮಾತ್ರಕ್ಕೆ ದಶರಥನು ಹೊರಟ ಉದ್ದೇಶವು ಪೂರ್ಣವಾದಂತಾಗಲಿಲ್ಲ; ಏಕೆಂದರೆ ಅಶ್ವಮೇಧವು ಸ್ವರ್ಗಪ್ರದ; ನೇರವಾಗಿ ಪುತ್ರಪ್ರದವಲ್ಲ. ಆದರೆ ಪುತ್ರಪ್ರಾಪ್ತಿಗೆ ಪ್ರತಿಬಂಧಕವಾದ ಪಾಪಗಳನ್ನು ಪರಿಹರಿಸಿ, ತನ್ಮೂಲಕ ಸಂತತಿ-ಸಾಧಕವಾಗಬಲ್ಲ ಮಹಾಕ್ರತುವದು. ಅಶ್ವಮೇಧಗೈದ ದಶರಥನಿಗೆ, ಗತಿಸಿದ ಬಳಿಕ ಸ್ವರ್ಗವು ಸಿದ್ಧವಾಯಿತು; ಸಂತತಿಯೆಂಬ ಇಹದ ಸ್ವರ್ಗಕ್ಕಿರುವ ವಿಘ್ನಗಳೂ ಪರಿಹೃತಗೊಂಡವು. ಆದರೆ, ಅಷ್ಟರಲ್ಲಿ ದಶರಥನ ಮನೋರಥವು ಪರಿಪೂರ್ಣವಾದಂತಾಗಲಿಲ್ಲ; ಪುತ್ರಪ್ರಾಪಕವಾದ* ಯಾವುದಾರೂ ಕರ್ಮವಿಶೇಷವು ನೆರವೇರಿ, ಆ ಪೂರ್ಣತೆಗೆ ಕಾರಣವಾಗಬೇಕಿದ್ದಿತು.

‘ಅನ್ಯಥಾ ಶರಣಂ ನಾಸ್ತಿ’ ಎಂಬಂತೆ ದಶರಥನು ಮತ್ತೆ ಋಷ್ಯಶೃಂಗರಿಗೇ ಶರಣಾಗಿ ಬಿನ್ನವಿಸಿದನು:

‘ಕುಲಸ್ಯ ವರ್ಧನಂ ತ್ವಂ ತು ಕರ್ತುಮರ್ಹಸಿ ಸುವ್ರತ’ – ‘ಭಗವನ್! ಇನ್ನು ಕುಲವರ್ಧನಕರವಾದ ಯಾವುದಾದರೂ ಕರ್ಮವನ್ನು ನೆರವೇರಿಸಿ, ಇಕ್ಷ್ವಾಕು ಕುಲವನ್ನು ಉದ್ಧರಿಸಿ.’

“ಹಾಗೆಯೇ ಆಗಲಿ ರಾಜನ್! ಚಿಂತಿಸದಿರು; ಕುಲೋದ್ಧಾರಕರಾದ ನಾಲ್ವರು ಮುತ್ತಿನಂಥ ಮಕ್ಕಳಿಗೆ ನೀ ತಂದೆಯಾಗುವೆ!” ಎಂದು ದಶರಥನಿಗೆ ಮಾರ್ನುಡಿದ ಋಷ್ಯಶೃಂಗರು ಮರುಕ್ಷಣ, ಧ್ಯಾನ~ತಲ್ಲೀನರಾಗಿ ಕಣ್ಮುಚ್ಚಿದರು. ಋಷಿಗಳೆಂದರೆ ಮುಚ್ಚಿದ ಕಣ್ಣಿನಿಂದ ಜಗತ್ತನ್ನು, ಜೀವನವನ್ನು ಕಾಣುವವರಲ್ಲವೇ? ಅಂತೆಯೇ ಋಷ್ಯಶೃಂಗರು, ಹೊರಗಣ್ಮುಚ್ಚಿ, ಒಳಗಣ್ತೆರೆದು, ವೇದ-ವಿಶ್ವದ ಕರ್ಮಕಾನನದಲ್ಲಿ ದಶರಥನಿಗೆ ಸಂತತಿಫಲದಾಯಕವಾದ ಸತ್ಕರ್ಮ-ಮೂಲಿಕೆಯನ್ನು* ಅನ್ವೇಷಿಸತೊಡಗಿದರು.

ಅನಂತ ವೇದರಾಶಿಯ ಅನವರತ ಅನ್ವೇಷಣೆ; ಮರಳಿನ ರಾಶಿಯಲ್ಲಿ ಹರಳನ್ನು ಹುಡುಕುವಂತೆ, ಮಂತ್ರ-ಮಹಾರ್ಣವದಲ್ಲಿ- ಜಗದೀಶ್ವರನು ಜಗತೀಪತಿಯ ಸುತನಾಗಿ ಅವತರಿಸಿ, ಜಗತ್ ಕಲ್ಯಾಣವನ್ನು ಸಾಧಿಸಲು ಸೋಪಾನವಾಗಬಲ್ಲ ಸತ್ಕರ್ಮವೊಂದರ ಅನ್ವೇಷಣೆ…

ಋಗ್ವೇದದಲ್ಲಲ್ಲ, ಯಜುರ್ವೇದದಲ್ಲಿ ಅಲ್ಲ, ಸಾಮವೇದದಲ್ಲಿಯೂ ಅಲ್ಲ, ಅಥರ್ವವೇದದ ಶಿರಸ್ಸಿನಲ್ಲಿ* ಹುದುಗಿ ಕುಳಿತ ಕೆಲ ಮಂತ್ರಗಳು ಆಗ ಅವರ ಅಂತರಂಗದ ಕಣ್ಮುಂದೆ ಸುಳಿದಾಡಿದವು; ಆ ಮಂತ್ರಗಳನ್ನು ಪ್ರಯೋಗಿಸಿ, ಕಲ್ಪಸೂತ್ರಗಳು ನಿರೂಪಿಸುವ ವಿಧಾನದಿಂದ ನಡೆಸಲ್ಪಡುವ ‘ಪುತ್ರಕಾಮೇಷ್ಟಿ’ಯು ದಶರಥನಿಗೆ ಸಂತಾನ-ಫಲದಾಯಕವಾಗಬಲ್ಲುದೆಂಬುದನ್ನು ಆ ಮಹಾಮೇಧಾವಿಯ ಮೂರನೆಯ ಕಣ್ಣು ಕಂಡುಕೊಂಡಿತು!

ಇತ್ತ ಮುನಿಯ ಮುಚ್ಚಿದ ಕಣ್ಣುಗಳನ್ನು, ತನ್ನ ಬಿಟ್ಟ ಕಣ್ಣುಗಳಿಂದ ಬಿಡದೆ ವೀಕ್ಷಿಸುತ್ತಿದ್ದನು ದಶರಥ! ಆ ಕಣ್ಣುಗಳು ತೆರೆದಾಗ ಜೊತೆಯಲ್ಲಿಯೇ ತನ್ನ ಭಾಗ್ಯದ ಬಾಗಿಲುಗಳೂ ತೆರೆದುಕೊಳ್ಳುವವೆಂಬುದನ್ನು ಚೆನ್ನಾಗಿ ಬಲ್ಲನಾತ! ಕೊಂಚ ಹೊತ್ತು ಕಳೆಯುತ್ತಿದ್ದಂತೆಯೇ ಮತ್ತೆ ಬಾಹ್ಯಪ್ರಜ್ಞೆಗೆ ಮರಳಿದ ಋಷ್ಯಶೃಂಗರು ತಮ್ಮ ಕಣ್ಬೆಳಕಿಂದ ದೊರೆಯ ಕಣ್ಣೊಳಗೆ ಬೆಳಕಿನ ಬಳ್ಳಿಯನ್ನೇ ಬಿತ್ತಿ ನುಡಿದರು: “ಮಹೀಪತಿಯೇ! ನಿನ್ನ ಕಾರ್ಯಸಾಧನೆಗೆ ಕಾರಣವಾಗಬಲ್ಲ ಪುತ್ರಕಾಮೇಷ್ಟಿಯು ನನ್ನ ಮತಿಗೆ ಅವತರಿಸಿದೆ; ಇನ್ನದು ಕೃತಿಗಿಳಿದರೆ ನೀ ಗೆದ್ದೆ!”

~*~*~

(ಸಶೇಷ)

ಕ್ಲಿಷ್ಟ~ಸ್ಪಷ್ಟ:

  • ದಕ್ಷಿಣೈಕದೃಷ್ಟಿ = ದಕ್ಷಿಣೆ ಎಂಬ ಏಕಮಾತ್ರ ದೃಷ್ಟಿ
  • ಧೂಲೀ ಧೂಸರಿತ = ಧೂಳಿನಿಂದ ಆವೃತವಾದ
  • ಪ್ರಾಪಕ = ಪ್ರಾಪ್ತಿಗೆ ಕಾರಣ

ತಿಳಿವು~ಸುಳಿವು:

  • <ವೇದ-ವಿಶ್ವದ ಕರ್ಮಕಾನನದಲ್ಲಿ ಸತ್ಕರ್ಮ-ಮೂಲಿಕೆಯ ಅನ್ವೇಷಣೆ> : ವೇದವೆಂಬ ಇನ್ನೊಂದು ಜಗತ್ತು, ಅಲ್ಲಿ ಕರ್ಮಗಳ ಕಾನನ, ಅದರೊಳಗೆ ಪುತ್ರಪ್ರದವಾದ ಕ್ರತುವೆಂಬ ಮೂಲಿಕೆ.
  • <ಅಥರ್ವವೇದದ ಶಿರಸ್ಸು> : ಅಥರ್ವಶಿಖಾ ಅಥವಾ ಅಥರ್ವಶಿರಸ್ = ಅಥರ್ವವೇದದ ಉಪನಿಷತ್. ಅಂತ್ಯದಲ್ಲಿ = ವೇದಾಂತದಲ್ಲಿ.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ69ನೇ ರಶ್ಮಿ.

 

68 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box