ಸುಮನೋಹರವಾದ ಆ ಸಭಾಸ್ಥಾನದಲ್ಲಿ, ಸಮುನ್ನತವಾದ ಸಿಂಹಾಸನದಲ್ಲಿ ಸೂರ್ಯತೇಜಸ್ವಿಯಾದ ರಾಜಾ ರೋಮಪಾದನು ಮಂಡಿಸಿದ್ದನು. ಸಮುಚಿತವಾದ ಅನ್ಯ ಶುಭಾಸನಗಳನ್ನು ಮಹಾತೇಜಸ್ವಿಗಳಾದ ಅನೇಕಾನೇಕ ದಾನವೀರರು, ಜ್ಞಾನವೀರರು, ಸಮರವೀರರು ಅಲಂಕರಿಸಿದ್ದರು. ಸಹಸ್ರ ಗೋವುಗಳ ನಡುವೆಯೂ ಕರುವು ತನ್ನ ತಾಯಿಯನ್ನೇ ಗುರುತಿಸಿ ಸೇರುವಂತೆ, ರತ್ನಸಂಕುಲದಂತಿದ್ದ ಆ ಸಭಾಮಂಟಪದಲ್ಲಿ ದಶರಥನ ದೃಷ್ಟಿಯು ಸರ್ವಪ್ರಥಮವಾಗಿ ಬೇರೆಲ್ಲರನ್ನೂ, ಬೇರೆಲ್ಲವನ್ನೂ ಬಿಟ್ಟು ಋಷ್ಯಶೃಂಗರೆಡೆಗೇ ಹರಿಯಿತು!

ಅದು ಹಾಗೆಯೇ…
ಗ್ರಹಕುಂಡಲಿಯಲ್ಲಿ ಸೂರ್ಯಸಹಿತವಾಗಿ ನವಗ್ರಹಗಳು ಮಂಡಿಸಿದ್ದರೂ ದೈವಜ್ಞನ ದೃಷ್ಟಿಯು ಮೊದಲು ಹೊರಳುವುದು ಗುರುವಿನೆಡೆಗೇ!
ಗುರುತ್ವದ ಆಕರ್ಷಣೆಯು ಅಸಾಧಾರಣವಾದುದು; ತನಗೆ ಸಲ್ಲುವ ಜೀವವನ್ನು ಅದು ತಾನಾಗಿ ಗುರುತಿಸಿ, ತನ್ನೆಡೆಗೆ ಸೆಳೆಯುವ ಪರಿ ಅನನ್ಯ!

‘ಸೆಳೆತ’ ಶಬ್ದಕ್ಕೆ (ಕನ್ನಡದಲ್ಲಿ) ‘ಆಕರ್ಷಣೆ’ ಎಂಬ ಅರ್ಥವಿರುವಂತೆಯೇ ‘ನೋವು’ ಎಂಬ ಇನ್ನೊಂದರ್ಥವೂ ಇದೆ. ಭುವಿಯ ಬದುಕಿನಲ್ಲಿ ಬರುವ ಸೆಳೆತಗಳೆಲ್ಲವೂ ಅಂತತೋ ಗತ್ವಾ* ನೋವುಗಳೇ! ಗುರುವಿನ ಸೆಳೆತವು ಮಾತ್ರ ಅಪವಾದ. ಜೀವಗಳನ್ನು ತನ್ನೆಡೆಗೆ ಸೆಳೆದು ಗುರು ಮಾಡುವುದಾದರೂ ಏನು? ‘ನಿಶ್ಶೇಷದೋಷಹರಣೇ ಶುಭವರ್ಧನೇ ಚ ವೀರ್ಯಂ ಗುರೋಃ ಅಧಿಕಮಸ್ತಿ ಅಖಿಲಗ್ರಹೇಭ್ಯಃ’ (ಫಲದೀಪಿಕಾ – 4,11) – ಜೀವಗತವಾದ ದೋಷವನ್ನು ನಿಶ್ಶೇಷಗೊಳಿಸುವುದು; ಜೀವದೊಳಗಿನ ಒಳಿತನ್ನು ಬಹಳವಾಗಿ ಬೆಳೆಸುವುದು. ಈ ಕಾರ್ಯದಲ್ಲಿ ಗುರುವಿಗಿರುವ ಶಕ್ತಿ ಬೇರಾರಿಗೂ ಇಲ್ಲವೆಂದಿತು ಜ್ಯೋತಿಶ್ಶಾಸ್ತ್ರ.
ಗುರು ಸೆಳೆದರೆ ಅದು ಆ ಜೀವದ ಭಾಗ್ಯವಲ್ಲದೆ ಮತ್ತಿನ್ನೇನು!?

ಗುರುವಿನಲ್ಲಿ ಸೆಳೆಯುವ ಶಕ್ತಿಯಿರುವುದೇ ನಿಜವಾದರೆ ಎಲ್ಲ ಜೀವಗಳನ್ನೂ ಏಕೆ ಸೆಳೆಯಬಾರದು?
= ಕಬ್ಬಿಣವೆಲ್ಲವನ್ನೂ ಲೀಲಾಜಾಲವಾಗಿ ಸೆಳೆಯುವ ಸೂಜಿಗಲ್ಲು ತುಕ್ಕು ಹಿಡಿದ ಕಬ್ಬಿಣವನ್ನು ಮಾತ್ರ ಸೆಳೆಯದು! ಅದು ಕಬ್ಬಿಣದ ದೋಷವೇ ಹೊರತು ಸೂಜಿಗಲ್ಲಿನದಲ್ಲ‌. ಕೆಲ ಜೀವಗಳ (ದುರ್-)ಅವಸ್ಥೆಯಿದು!

ದಶರಥನೇನು ಋಷ್ಯಶೃಂಗರನ್ನು ಮೊದಲು ಕಂಡವನಲ್ಲ; ಬಾಹ್ಯಬಂಧವಿಲ್ಲದಿದ್ದರೂ ಆಂತರ-ಬಂಧವಿದ್ದಾಗ- ಆತ್ಮಬಂಧವಿದ್ದಾಗ ಹಾಗೆ ಆಗುವುದುಂಟು; ಕೆಲವರು ಮೊದಲ ನೋಟದಲ್ಲಿಯೇ ಪರಮಾತ್ಮೀಯರೆನಿಸಿಬಿಡುವುದಿಲ್ಲವೇ!?
ಆ ಆಸ್ಥಾನದಲ್ಲಿರುವವರೆಲ್ಲರನ್ನೂ ಸೇರಿಸಿ ರಾಶಿ ಹಾಕಿದರೂ ಸರಿದೂಗಲಾರದ ಋಷ್ಯಶೃಂಗರೆಂಬ ಆ ತೇಜೋರಾಶಿಯು ದೃಷ್ಟಿಗೋಚರವಾಗುತ್ತಿದ್ದಂತೆಯೇ ದಶರಥನ ಹೆಜ್ಜೆಗಳು ಸ್ತಬ್ಧಗೊಂಡವು; ದೃಷ್ಟಿಯು ಅವರಲ್ಲಿಯೇ ಕೀಲಿಸಿತು; ಅಂತರಾತ್ಮವು ‘ನಿನ್ನ ಶ್ರೇಯಸ್ಸಿನ ದ್ವಾರವು ಇಲ್ಲಿಯೇ ಇದೆ!’ ಎಂದು ಕೂಗಿ ಹೇಳಿತು.

ಇತ್ತ ದಶರಥನ ದೃಷ್ಟಿಯು ಋಷ್ಯಶೃಂಗರಲ್ಲಿ ನೆಟ್ಟಿರುವಂತೆಯೇ ಅತ್ತ ಅಂಗರಾಜನ ದೃಷ್ಟಿಯು ಮಹಾದ್ವಾರದೆಡೆಗೆ ಹರಿಯಿತು. ಅದೋ, ಅಲ್ಲಿ ಸಪರಿವಾರ ದಶರಥ! ಅಂಗರಾಜನ ಅಂಗಳದಲ್ಲಿ ಅಖಂಡ ಭೂಮಂಡಲದ ಚಕ್ರವರ್ತಿ! ರೋಮಪಾದನ ಪಾಲಿಗೆ ದಶರಥನು ಸಮ್ರಾಟ ಮಾತ್ರವಲ್ಲ, ಸಖನೂ ಅಹುದು; ಚಿರಕಾಲದ ಸಖ; ಅಂತರಂಗದ ಸಖ!
ಅತಿ ಎತ್ತರದ, ಆದರೆ ಅತ್ಯಂತ ಹತ್ತಿರದ ಆ ವ್ಯಕ್ತಿತ್ವವನ್ನು ಬಹುಕಾಲದ ಬಳಿಕ ಬಾಗಿಲಿನಲ್ಲಿಯೇ ಕಂಡ ರೋಮಪಾದನ ಎದೆಯೊಳಗೆ ‌ಆಶ್ಚರ್ಯ~ಆನಂದಗಳು ಪುಟಿದೇಳಲು ‘ನಾ ಮುಂದು-ತಾ ಮುಂದು ಎಂದು’ ಸ್ಪರ್ಧಿಸಿದವು!

ಸಖ್ಯವೆಂದರೇ ಹಾಗೆ; ಅಸಮರನ್ನು ಸಮಗೊಳಿಸುವ ಸೇತುವೆಯದು; ಎಲ್ಲ ಅಂತರಗಳನ್ನು ಇಲ್ಲವಾಗಿಸುವ, ಎಂಥವರ ನಡುವೆಯೂ ಸಮತೆಯನ್ನು ತರುವ ಶಕ್ತಿ ಅದಕ್ಕಿದೆ! ಸಖ್ಯವೇರ್ಪಟ್ಟಾಗ ಸಂಪತ್ತಿನ, ಸಾಮರ್ಥ್ಯದ, ಪ್ರಾಯದ, ಅಭಿಪ್ರಾಯದ ಅಂತರಗಳು ನಿರಂತರವಾಗಿಬಿಡುತ್ತವೆ!
ಅದಿಲ್ಲದಿದ್ದರೆ ಸಾಮಾನ್ಯ ದೊರೆಯಾದ ರೋಮಪಾದನೆಲ್ಲಿ? ಅಂಗರಾಜನ ತೆರನಾದ ಅದೆಷ್ಟೋ ಸಾಮಂತರಿಗೆ ಚರಣವಂದನೀಯನಾದ ಚಕ್ರವರ್ತಿ ದಶರಥನೆಲ್ಲಿ?

ಸಮ್ರಾಟನಿಗೆ ಸಲ್ಲಬೇಕಾದ ಸ್ವಾಗತ-ಸತ್ಕಾರ-ಸಮ್ಮಾನಗಳೆಲ್ಲವನ್ನೂ ಸಮುಚಿತವಾಗಿಯೇ ಸಲ್ಲಿಸಿದನು ಅಂಗರಾಜ. ಆದರೆ ಚಕ್ರವರ್ತಿಗೆ ಅವನು ಸಮರ್ಪಿಸಿದ ಸಮ್ಮಾನ-ಸುಮದಲ್ಲಿ ಸಖ್ಯದ ಸುಗಂಧವು ಬೆರೆತಿತ್ತು!

ದೀರ್ಘಕಾಲದ ಬಳಿಕ ಆತ್ಮೀಯರೊಡನೆ ಬೆರೆತಾಗ, ‘ಅಂದು ಇಲ್ಲದ, ಇಂದು ಇರುವ’ ಯಾವುದಾದರೂ ಮಹಾವಿಶೇಷವಿದ್ದರೆ ಅದನ್ನು ತೋರಿಸಿ ಸಂಭ್ರಮ ಪಡಬೇಕಲ್ಲವೇ? ರೋಮಪಾದನು ದಶರಥನಿಗೆ ತೋರಿಸಿ ಸಂಭ್ರಮಿಸಿದ್ದು ಋಷ್ಯಶೃಂಗರನ್ನು; ಏತನ್ಮಧ್ಯೆ ಆತನಿಗಾದ ಬಹು ದೊಡ್ಡ ಲಾಭವೆಂದರೆ ಅದು ಅಳಿಯನಾಗಿ ಲಭಿಸಿದ ಋಷ್ಯಶೃಂಗರು; ಅಂಗಾಧಿಪತಿಯಲ್ಲಿರುವ ಅನರ್ಘ್ಯ ರತ್ನವೆಂದರೆ ಅದು ಅವರೇ!
ಋಷ್ಯಶೃಂಗರಿಗೂ ದಶರಥನ ಪರಿಚಯವನ್ನು -ತೆರೆದ ಹೃದಯದಲ್ಲಿ – ಅಗಲ ಬಾಯಲ್ಲಿ- ಮಾಡಿಸಿದನು ಅಂಗರಾಜ. ದಶರಥನ ದೊರೆತನವನ್ನು ಮಾತ್ರವಲ್ಲ, ಹೃದಯಾಂತರಾಳವನ್ನು ವ್ಯಾಪಿಸಿದ ಪರಸ್ಪರ ಸುಮಧುರ ಸಖ್ಯ~ಸಂಬಂಧವನ್ನೂ ವಿವರಿಸಿ, ಋಷಿಹೃದಯದಲ್ಲಿ ಅಯೋಧ್ಯಾಧಿಪತಿಯ ಕುರಿತು ಸದ್ಭಾವವು ಅಂಕುರಿಸಲು, ಆ ನಿರ್ಮಲನೇತ್ರನ ಪ್ರೇಮದೃಷ್ಟಿಯ ಸ್ಪರ್ಶದಿಂದ ದಶರಥನು ಪುಳಕಿತಗೊಳ್ಳಲು ಕಾರಣನಾದನು ಅಂಗರಾಜ.

ತಾನು ಬಂದ ಮಹದುದ್ದೇಶವನ್ನು ಪ್ರಸ್ತಾಪಿಸಲು ದಶರಥನಿಗೆ ಇದಕ್ಕಿಂತ ಹಿತವಾದ ವಾತಾವರಣವಿರಲು ಸಾಧ್ಯವೇ? ಆದರೆ ದಶರಥನಿಗೇಕೋ ಬಾಯಿಯೇ ಬಾರದು! ‘ತನ್ನ ಕೇಳಿಕೆಯು ಎಲ್ಲಿಯಾದರೂ ಪ್ರತಿಹತ*ವಾದರೆ’ಎನ್ನುವ ಆತಂಕವು ಅವನ ದನಿಯನ್ನೇ ಅಡಗಿಸಿತ್ತು! ಆ ದಿನ ಅಂಗರಾಜನಲ್ಲಿಯೇ ಉಳಿದುಕೊಂಡನು ದಶರಥ; ಬಂದ ಕಾರ್ಯವಾಗದೆ ಮರಳುವುದಾದರೂ ಹೇಗೆ!? ಕೋಸಲೇಶ್ವರನು ಕಾಯುತ್ತಿದ್ದುದು ಅನುಕೂಲ ಸನ್ನಿವೇಶಕ್ಕಾಗಿ; ಹೊರಗಿನ ವಾತಾವರಣವು ಸರ್ವರೀತಿಯಿಂದಲೂ ಅನುಕೂಲವಾಗಿಯೇ ಇದ್ದಿತು; ದೊರೆಯಾಗಲೀ, ಮುನಿಯಾಗಲೀ ದಶರಥನಲ್ಲಿ ಪರಮಪ್ರೇಮವನ್ನು ಸೂಸುತ್ತಲೇ ವ್ಯವಹರಿಸುತ್ತಿದ್ದರು; ಅನುಕೂಲವಿಲ್ಲದುದು ಒಳಗೆ, ಅವನ ಅಂತರಂಗದಲ್ಲಿ! ಅವನೊಳಗಿನ ಆತಂಕವು ಹೊರಗಿನ ಅನುಕೂಲವನ್ನು ಕವಿದು ಕುಳಿತಿತ್ತು! ಆಡಬೇಕಾದ ಮಾತುಗಳು ಆಳದಲ್ಲಿಯೇ ಉಳಿದಿದ್ದವು.

ಸಮಯ ಸರಿಯಿತು; ಅಲ್ಲಲ್ಲ, ದಿನಗಳೇ ಸರಿದವು! ಚಕ್ರವರ್ತಿಯು ಅಂಗರಾಜನಲ್ಲಿ ವಸತಿ ಮಾಡಿ ಏಳೆಂಟು ದಿನಗಳೇ ಕಳೆದಿದ್ದವು! ಇನ್ನೆಷ್ಟು ದಿನ ಸಮ್ರಾಟನು -ಹಾಗೆ ಸುಮ್ಮನೆ ಅಂಗರಾಜ್ಯದಲ್ಲಿರಲು ಸಾಧ್ಯ? ಅಂಗರಾಜ್ಯವಾದರೂ ಅನ್ಯರಾಜ್ಯವೇ ಅಲ್ಲವೇ?

ಪ್ರತಿಪ್ರಸ್ಥಾನ*ದ ಸಮಯವು ಸನಿಹ ಬಂದಿರಲು ಹೇಳಲೇಬೇಕಾದ ಆ ಒಂದು ಮಾತನ್ನು ಹೇಳಲಾರದೇ, ಹೇಳದಿರಲಾರದೇ ತಳಮಳಿಸಿದನು ದಶರಥ!

ದಶರಥನ ತಳಮಳದ ನೆರಳು ರೋಮಪಾದನ ಮೇಲೂ ಬಿದ್ದಿತು; ತತ್ಪರಿಣಾಮವಾಗಿ ಅವನಲ್ಲಿಯೂ ನೆರಳು-ಬೆಳಕುಗಳಾಟ; ಮನದಲ್ಲಿ ಮಿಶ್ರಾನುಭೂತಿ;
ಅದೆಷ್ಟೋ ಕಾಲದ ಬಳಿಕ ಪರಮಸಖನು ತನ್ನ ಮನೆಗೈದಿರುವುದು ಪರಮಸುಖ; ಆದರೆ ‘ಯಾಕೆ? ಏನು?’ ಎಂಬುದರ ಯಾವೊಂದು ಸುಳಿವನ್ನೂ ನೀಡದೆ, ಏಳೆಂಟು ದಿನಗಳಿಂದ ತಂಗಿರುವ ಕೋಸಲೇಶ್ವರನ ಹೊಸ ಪರಿಯು ದೊಡ್ಡ ಪ್ರಶ್ನೆ!

ಹೀಗೆ ಮಿತ್ರವರನ ಹಳೆಪ್ರೀತಿ~ಹೊಸರೀತಿಗಳ ನೀತಿಯರಿಯದೆ ರೋಮಪಾದನ ಹೃದಯವೂ ತೊಟ್ಟಿಲಾಗಿ ತೂಗಿತು!

ರಾಮನ ತೊಟ್ಟಿಲ ತೂಗುವವರೆಗೆ ಸರ್ವರ ಹೃದಯವೂ ತೊಟ್ಟಿಲೇ!!

~*~*~

(ಸಶೇಷ)

*ಕ್ಲಿಷ್ಟ-ಸ್ಪಷ್ಟ:

  • ಅಂತತೋ ಗತ್ವಾ = ಕೊನೆಯ ದಾರಿ / ಪರ್ಯವಸಾನ
  • ಪ್ರತಿಹತ = ತಿರಸ್ಕೃತ / denial
  • ಪ್ರತಿಪ್ರಸ್ಥಾನ= ಪುನಃ ಪ್ರಯಾಣ / ನಿರ್ಗಮನ

*ತಿಳಿವು-ಸುಳಿವು:

  • ಹೀಗೊಂದು ಪ್ರಥೆ: ದಶರಥನಿಗೆ ಶಾಂತಾ ಎಂಬ ಮಗಳಿದ್ದಳು. ಅವಳನ್ನು ಅಂಗರಾಜನಾದ ರೋಮಪಾದನಿಗೆ ದತ್ತಕವಾಗಿ ಕೊಟ್ಟಿದ್ದ ಎಂದು ಒಂದು ಉಪಕಥೆಯು ಪ್ರಚಲಿತದಲ್ಲಿದೆ. ಕೆಲ ವ್ಯಾಖ್ಯಾಕಾರರೂ ಈ ಅಭಿಪ್ರಾಯವನ್ನು ಉಲ್ಲೇಖಿಸಿದ್ದಾರೆ. ಪುರಾಣವೊಂದರ ವಚನವನ್ನು ಇದಕ್ಕೆ ಪೂರಕ ಪ್ರಮಾಣವನ್ನಾಗಿ ನೀಡಿದ್ದೂ ಇದೆ. ಆದರೆ ಮಹರ್ಷಿ ವಾಲ್ಮೀಕಿ ಮಾತ್ರ ಈ ವಿಷಯವನ್ನು ಕಂಠತಃ ಹೇಳಿಲ್ಲ.
    ಶ್ರೀಶ್ರೀ ಸಂಸ್ಥಾನದವರ ರಾಮರಶ್ಮಿ ರಾಮಾಯಣವು ಶ್ರೀಮದ್ವಾಲ್ಮೀಕಿರಾಮಾಯಣವನ್ನು ಯಥಾಮೂಲವಾಗಿ ಅನುಸರಿಸುವುದರಿಂದ, ಇಲ್ಲಿ ಈ ಪ್ರಥೆಯ ಪ್ರಸ್ತಾಪವಿರುವುದಿಲ್ಲ.
  • <ದಶರಥನ ಆತಂಕವು ಹೊರಗಿನ ಅನುಕೂಲವನ್ನು ಕವಿದು ಕುಳಿತಿತ್ತು> – ಇಲ್ಲಿ ದಶರಥನ ಮನದಾಳದ ಆಶಯಕ್ಕೆ ಕೈಗನ್ನಡಿಯಾಗಿದ್ದ ಅನುಕೂಲವನ್ನು ಆತಂಕವೆಂಬ ಗ್ರಹಣವು ಆವರಿಸುವ ಭಾವವನ್ನು ಈ ವಾಕ್ಯದಲ್ಲಿ ಕಾಣಬಹುದು. ಗ್ರಹಣವೆಂಬ ಪದವನ್ನು ಉಲ್ಲೇಖಿಸದೆಯೇ ಆ ಭಾವವನ್ನು ಭಾಸವಾಗಿಸುವ ಈ ಶೈಲಿಯನ್ನು ಸ್ವಭಾವೋಕ್ತಿ ಅಲಂಕಾರವೆಂದು ಗುರುತಿಸುತ್ತಾರೆ.

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಅಕ್ಷರರೂಪದಲ್ಲಿ ಅನುಗ್ರಹಿಸುತ್ತಿರುವ ರಾಮಾಯಣ – #ರಾಮರಶ್ಮಿ59ನೇ ರಶ್ಮಿ.

 

58 ನೇ ರಶ್ಮಿಯನ್ನು ಓದಲು ಇಲ್ಲಿದೆ ಕೊಂಡಿ.

ರಾಮರಶ್ಮಿಯ ಈವರೆಗಿನ ಎಲ್ಲಾ ಲೇಖನಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box