|| ಹರೇರಾಮ ||

“ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

ರಾಜಕಾರಣಿಗಳ ಬದುಕೂ ಹಾಗೆ”

ಜನತೆಯ ಕಣ್ಣಿನಲ್ಲಿ ಇವರು ದೊರೆಗಳು..!!!

ಭೂಲೋಕದ ಕುಬೇರರು….ಪರಮ ಸುಖಿಗಳು…!!


ಬಳಿಸಾರಿ ನೋಡಿದರೆ,

ಒಳಹೊಕ್ಕು ನೋಡಿದರೆ… ಏನಿದೆ ಇವರ ಜೀವನದಲ್ಲಿ..?

ಹೋರಾಟ… ಹೋರಾಟ… ಹೋರಾಟ…

ನೋವು… ನೋವು… ನೋವು…!

ಅತೃಪ್ತಿ… ಅತೃಪ್ತಿ…  ಅತೃಪ್ತಿ…!

ನಿಂದೆ… ನಿಂದೆ… ನಿಂದೆ… !

ಎಲ್ಲವನ್ನೂ ಬಲಿ ಕೊಟ್ಟು ಏನನ್ನೂ ಪಡೆಯಲಾಗದ ಜೀವನ..!ರಾಜಕಾರಣಿ ಮೊದಲು ಬಲಿ ಕೊಡಬೇಕಾಗಿಬರುವುದು

ಕುಟುಂಬ ಜೀವನವನ್ನು..

ಮನೆ  ಅವನ ಪಾಲಿಗೆ ಇದ್ದರೂ ಇಲ್ಲದಂತೆ..!

ಊಟವೆಲ್ಲೋ..ನಿದ್ದೆಯೆಲ್ಲೋ..!!

ಮನೆಗೆ ಬರುವುದು ಯಾವಾಗಲೋ ಒಮ್ಮೆ ನೆಂಟರ ಹಾಗೆ..!!


ಗುಂಡ ರಾಜಕಾರಣಿಯೊಬ್ಬನ ಅಡ್ರೆಸ್ ಕೇಳಿದನಂತೆ..

ಉತ್ತರ ಬಂತು – ಕೇರ್ ಆಫ್ ನ್ಯಾಶನಲ್ ಹೈವೇ..!!!!!!!!!!

ಹೆಚ್ಚು ಸಮಯ ನಾವೆಲ್ಲಿರುತ್ತೇವೆಯೋ ಅದನ್ನೇ ಮನೆಯೆನ್ನುವುದಾದರೆ..

ರಾಜಕಾರಣಿಗೆ ರಸ್ತೆಯೇ ಮನೆಯಲ್ಲವೇ..??


ಜನರ ಕೆಲಸದಲ್ಲಿ ಮನೆ ಉಪೇಕ್ಷಿತ..!

ರಾಜಕಾರಣಿ ಮನೆಯ ಸುಖದಿಂದ ವಂಚಿತ..!!!!


ರಾಜಕಾರಣಿಯ ಜೀವನವೇ ಒಂದು ರಣರಂಗ..!!

ಸಣ್ಣ ಸಣ್ಣ ಸ್ಥಾನ ಪಡೆಯಲೂ ದೊಡ್ಡ ದೊಡ್ಡ ಯುಧ್ಧಗಳನ್ನೇ ಮಾಡಬೇಕು..!!!

ಸ್ಥಾನ ಬಂದ ಮೇಲೆ ಉಳಿಸಿಕೊಳ್ಳಲು ಇನ್ನೂ ದೊಡ್ಡ ಹೋರಾಟ…!!

ಉಳಿಸಿಕೊಳ್ಳುವ ಹೋರಾಟದಲ್ಲಿ ಒಂದು ವೇಳೆ ಸೋತರೆ…ಶವಕ್ಕಿಂತ ಕಡೆ..!!!

ಬಿದ್ದರೆ ಆಳಿಗೊಂದು ಕಲ್ಲು..!!!!!


ಪೂಜ್ಯ ಗುರುಗಳು ಹೇಳುತ್ತಿದ್ದರು..

“ಸಮಾಜವನ್ನು ಆಳುವುದೆಂದರೆ ಹುಲಿ ಸವಾರಿ ಮಾಡಿದ ಹಾಗೆ..

ಹುಲಿ ಸವಾರಿ ಮಾಡುವವನು ಬೀಳುವಂತಿಲ್ಲ- ಇಳಿಯುವಂತೆಯೂ ಇಲ್ಲ”

ಸವಾರಿ ಮಾಡುವಾಗಲೂ ಹುಲಿ ಸುಖವನ್ನೇನೂ ಕೊಡುವುದಿಲ್ಲ…

ಇನ್ನು ಕೆಳಗಿಳಿದರೆ ಅಷ್ಟೇ…!!!!

ಬಿಡುಗಡೆ ಇಲ್ಲದ ಬಂಧನವಿದು..


ಮಿತ್ರರು ಮಿತ್ರರಲ್ಲ..!!

ಶತ್ರುಗಳು ಶತ್ರುಗಳಲ್ಲ..!!

ಎಲ್ಲರೂ ಪ್ರತಿಸ್ಪರ್ದಿಗಳೇ…!!

ಇದುವೇ ಅಲ್ಲವೇ ರಾಜಕಾರಣ..???


ಹೊರಗಿನ ಶತ್ರುಗಳು ಹೇಗೂ ಶತ್ರುಗಳು..

ಜೊತೆಯಲ್ಲಿ- ಮನೆಯವರೂ(ಸ್ವಪಕ್ಷದವರೂ) ಶತ್ರುಗಳೇ…!!!

ಕಾಲು ಜಗ್ಗುವ ಕಬಡ್ಡಿ ಪರಿಣಿತರ ಕೂಟದಲ್ಲಿ..

ಆತನ ಶಕ್ತಿಯೆಲ್ಲಾ ಸ್ಥಾನಉಳಿಸಿಕೊಳ್ಳುವುದರಲ್ಲಿಯೇ ಮುಗಿದುಹೋದ ಮೇಲೆ..

ಜನ ಸೇವೆಯನ್ನು ಮಾಡುವುದಾದರೂ ಹೇಗೆ..!!?ಸುಖೀ ಜೀವನಕ್ಕೆ ಬೇಕೇ ಬೇಕಾದ ಸಂಗತಿಗಳೆರಡು..

ಬಹಿರಂಗದಲ್ಲಿ ಶರೀರಕ್ಕೊಂದು ಆರೋಗ್ಯ……

ಅಂತರಂಗದಲ್ಲಿ ಮನಸ್ಸಿಗೊಂದು ನೆಮ್ಮದಿ…….

ರಾಜಕಾರಣಿಗೆ ಅವನ ಕನಸಿನ ಸ್ಥಾನ ಪ್ರಾಪ್ತಿಯಾಗುವುದೋ.. ಇಲ್ಲವೋ.. ಗೊತ್ತಿಲ್ಲ..

ಆರೋಗ್ಯ ನೆಮ್ಮದಿಗಳನ್ನು ಕಳೆದುಕೊಳ್ಳುವುದಂತೂ ನಿಶ್ಚಿತ..

ಸಮಯ ಸಮಯಕ್ಕೆ ಊಟ – ನಿದ್ದೆ ಇಲ್ಲದೆ ಶರೀರ ಸೊರಗಿತು..

ಸಮಸ್ಯೆಗಳ ಸುಳಿಯಲ್ಲಿ ಮನ ಕೊರಗಿತು…

ನೀವೇ ಹೇಳಿ.. ಜೀವನದಲ್ಲಿ ಮತ್ತೇನು ಉಳಿಯಿತು..???


ಹೋಗಲಿ ಒಳ್ಳೆಯ ಮಾತಾದರೂ ಉಂಟೇ..?

ಊಹೂಂ…! ಇಲ್ಲವೇ ಇಲ್ಲ….!!

ಜನತೆಯೋ… ನಿರೀಕ್ಷೆಯ ಸಾಗರ…

ಅದೆಷ್ಟು ಕೈ ಕಾಲು ಬಡಿದರೂ ಸಿಗದು ತೀರ..

ಮಾಡಿದ ಸಾವಿರ ಕೆಲಸಗಳೂ ಪರಮಾಣು..

ಮಾಡಲಾಗದ ಒಂದೆರಡು ಕೆಲಸಗಳೇ ಪರ್ವತ..!!!


ಸ್ವಚ್ಛ ಬಿಳಿಯ ಬಟ್ಟೆಯಲ್ಲಿ ಒಂದೆರಡು ಕಪ್ಪು ಕಲೆಗಳಿದ್ದರೆ…..

ಬಿಳಿಯರಾಶಿ ಕಣ್ಣಿಗೆ ಕಾಣದು….

ಕಣ್ಣಿಗೆ ರಾಚುವುದು ಕರಿಯ ಕಲೆಗಳು ಮಾತ್ರವೇ..

ರಾಜಕಾರಣಿಯೊಬ್ಬ ಲೋಕಹಿತದ ಕಾರ್ಯಗಳನ್ನು ಎಷ್ಟು ಬೇಕಾದರೂ ಮಾಡಿರಲಿ..

ಎಂದೋ ನಡೆದಿರಬಹುದೆನ್ನಲಾದ ಒಂದು ಚಿಕ್ಕ ತಪ್ಪು ವಿಶ್ವರೂಪತಾಳಿ ಪ್ರಪಂಚಕ್ಕೇ ಪ್ರಸಾರಗೊಳ್ಳುತ್ತದೆ..!!!


ರಾಜಕಾರಣಿಯನ್ನು ಕೆಟ್ಟವರೆಂದು ನಿಂದಿಸುವ ನಮಗೆ,

ಅಲ್ಲಿ ಒಳ್ಳೆಯವರಾಗಿರುವುದು ಅದೆಷ್ಟು ಕಷ್ಟವೆಂಬುದರ  ಅರಿವಿದೆಯೇ..???

ರಾಜಕಾರಣಿಗಳನೇಕರನ್ನು ನಾವು ಸಮೀಪ ದಿಂದ ನೋಡಿದ್ದೇವೆ..

ಅವರಲ್ಲಿ ಹೆಚ್ಚಿನವರಿಗೆ ಒಳ್ಳೆಯವರಾಗಿರುವ ಮನಸ್ಸಿದೆ..

ಸಮಾಜಕ್ಕೆ ಒಳಿತುಮಾಡುವ ಹಂಬಲವಿದೆ..

ಆದರೆ ಅವರಿರುವ ವ್ಯವಸ್ಥೆಯೊಂದು ಚಕ್ರವ್ಯೂಹ – ವಿಷ ವರ್ತುಲ..!!

ಹಣವಿಲ್ಲದೆ ಕ್ಷಣ ಕಳೆಯದ ವಾತಾವರಣವದು…

ಹಣ – ಜನರಿಗೆ..

ಹಣ – ಕಾರ್ಯಕರ್ತರಿಗೆ..

ಹಣ –  ಪತ್ರಕರ್ತರಿಗೆ..

ಹೀಗೆ………….. ಅಂತ್ಯವೇ ಇಲ್ಲದ ಪಟ್ಟಿ..!!!!


ಅಧಿಕಾರ ಗಳಿಸಲು ಹಣ..!

ಉಳಿಸಿಕೊಳ್ಳಲು ಮತ್ತಷ್ಟು ಹಣ..!

ಒಮ್ಮೆ ಅಧಿಕಾರ ಹೋದರೆ ಮತ್ತೆ ಗಳಿಸಲು ಕೂಡಿಡಬೇಕಾದ ಹಣ…..!

ಚೊಕ್ಕ ಚಿನ್ನದಂತಹ ವ್ಯಕ್ತಿತ್ವವನ್ನೂ ಕಲುಷಿತಗೊಳಿಸುವ ವ್ಯವಸ್ಥೆ…!!


ಈ ವ್ಯವಸ್ಥೆಯಲ್ಲಿ ಒಳ್ಳೆಯವರಾಗಿ ಉಳಿದುಕೊಳ್ಳುವುದು ಬಲು ಕಷ್ಟ..!

ಒಂದುವೇಳೆ ಒಳ್ಳೆಯವರಾಗಿದ್ದರೂ ಹಾಗೆಂದು ಜನ ನಂಬುವುದು ಇನ್ನೂ ಕಷ್ಟ…!!

(ಇನ್ನೂ ಇದೆ..)

|| ಹರೇರಾಮ ||

Facebook Comments