ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಬದುಕಿನಲ್ಲಿ ಅನೇಕರು ಬರುತ್ತಾ ಇರುತ್ತಾರೆ, ಹೋಗುತ್ತಾ ಇರುತ್ತಾರೆ. ಕೆಲವರನ್ನು ಗಮನಿಸೋದಕ್ಕೇ ಸಾಧ್ಯವಾಗೋದಿಲ್ಲ. ಕೆಲವರನ್ನು ಉಪೇಕ್ಷೆ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ. ಹೌದು, ಪ್ರಯತ್ನ ಪಟ್ಟರೂ ಕೂಡ ಎಷ್ಟೋ ಸಂಗತಿಗಳನ್ನು ಗಮನಿಸಲಿಕ್ಕೆ ಸಾಧ್ಯವಾಗದೇ ಹಾಗೆಯೇ ಬಂದು ಜಾರಿ ಹೋಗಿಬಿಡ್ತವೆ. ಆದರೆ ಕೆಲವು ಸಂಗತಿಗಳು ಸ್ಪಷ್ಟವಾಗಿ ನಮ್ಮ ಕಣ್ಣಮುಂದೆ ಗೋಚರವಾಗಿ, ಹೃದಯದಲ್ಲಿ ನೆಲೆಸಿ ನಮ್ಮಿಡೀ ಗಮನವನ್ನು, ಮನವನ್ನು ಸೆಳೆದುಕೊಳ್ತದೆ. ಸಮುದ್ರರಾಜನಿಗೆ ಅಂಥ ಪರಿಸ್ಥಿತಿ ಈಗ ಬಂದಿದೆ.

ಸಮುದ್ರದ ಮೇಲೆ ಎಷ್ಟು ಜನ ಬಂದಿಲ್ಲ, ಹೋಗಿಲ್ಲ! ರಾವಣನಂತೂ ಆವಾಗಾವಾಗ ಓಡಾಡ್ತಾ ಇರ್ತಾನೆ ಸಮುದ್ರದ ಮೇಲೆ. ಹಾಗೇ ಅನೇಕರು ಸಂಚಾರ ಮಾಡ್ತಾರೆ. ಎಷ್ಟೋ ಪಕ್ಷಿಗಳು, ಮೋಡಗಳು, ಗ್ರಹ ನಕ್ಷತ್ರಗಳು ಇರ್ತವೆ. ಸಮುದ್ರದಲ್ಲಿ ನೌಕೆಗಳು ಸಂಚಾರ ಮಾಡ್ತವೆ. ಸಮುದ್ರದೊಳಗೆ ಬಗೆಬಗೆಯ ಜಲಚರಗಳು ವಿಹರಿಸ್ತಾ ಇರ್ತವೆ. ಸಮುದ್ರಕ್ಕೆ ಅದರ ಪರಿವೇ ಇಲ್ಲ. ಆದರೆ ಹನುಮಂತನ ಆಗಮನ ಸಮುದ್ರಕ್ಕೆ ಉಪೇಕ್ಷೆ ಮಾಡಲಿಕ್ಕೆ ಸಾಧ್ಯವಿಲ್ಲದೇ ಇರತಕ್ಕಂತದ್ದು. ಬಂದವನೂ ದೊಡ್ಡವನು, ಕಳುಹಿದವನೂ ದೊಡ್ಡವನು, ಅವನ ವಂಶವೂ ದೊಡ್ಡದು, ಬಂದ ಕಾರ್ಯವೂ ದೊಡ್ಡದು.
ದೊಡ್ಡವನೇ ಹೌದಾದರೂ ಕೂಡ ಸಮುದ್ರರಾಜ ಹೇಗೆ ತಾನೇ ಉಪೇಕ್ಷೆ ಮಾಡ್ತಾನೆ?

ಮೊಟ್ಟಮೊದಲು ಸಮುದ್ರರಾಜನ ಮನಸ್ಸಿಗೆ ಬಂದಿದ್ದು ಇಕ್ಷ್ವಾಕು ವಂಶ. ಯಾಕೆ? ಇಕ್ಷ್ವಾಕು ವಂಶದಿಂದ ಬೆಳೆದವನು ತಾನು. ತನಗೆ ಈ ಬೃಹತ್ ರೂಪ ಬರಲಿಕ್ಕೆ, ಪಾವಿತ್ರ್ಯ ಬರಲಿಕ್ಕೆ ಇಕ್ಷ್ವಾಕು ವಂಶ ಕಾರಣ. ಅಂದ್ರೆ?

‘ಸಾಗರ’ ಎಂಬ ಶಬ್ದವೇ ‘ಸಗರ’ ಎಂಭ ಶಬ್ದದಿಂದ‌ ಬಂದಿದೆ. ಸಗರನಿಂದ ಸಾಗರ. ಸಗರ ಚಕ್ರವರ್ತಿ ತಾನೇ ತನ್ನ ಮಕ್ಕಳು ದೊಡ್ಡ ಒಂದು ಬರ್ತವನ್ನು ತೋಡಿ, ಆತನ ಪೀಳಿಗೆಯವರು ಒಬ್ಬೊಬ್ಬರೇ ತಪಸ್ಸು ಮಾಡಿ, ಭಗೀರಥನು ಗಂಗೆಯನ್ನು ತಂದು, ಆ ಗಂಗೆಯಿಂದಾಗಿ ಸಾಗರಕ್ಕೆ ಇಂಥಾದ್ದೊಂದು ವೃದ್ಧಿ ಬಂದಿದ್ದು. ಹಾಗಾಗಿ ಸಗರ ಶಬ್ದದಿಂದ ಸಾಗರ ಶಬ್ದ, ಸಗರನ ಪೀಳಿಗೆಯವರಿಂದ ಸಾಗರದ ನಿರ್ಮಾಣ. ಹಾಗಾಗಿ, ಬಂದವನು ಇಕ್ಷ್ವಾಕು ವಂಶೀಯನಾಗಿರತಕ್ಕಂತ ಶ್ರೀರಾಮನ ಪ್ರತಿನಿಧಿ ಆಂಜನೇಯ ಎಂಬುದನ್ನು ಗಮನಿಸಿ, ಸಾಗರನು ತನ್ನೊಳಗೆ ತಾನೇ ಚಿಂತಿಸಿದನು. ಈ ವಾನರೇಂದ್ರನಿಗೆ ನಾನು ಈ ಹೊತ್ತಿನಲ್ಲಿ ಸಹಾಯ ಮಾಡದೇ ಇದ್ದರೆ ಸಮುದ್ರನು ಕೃತಘ್ನ ಎಂಬುದಾಗಿ ಪ್ರಪಂಚದಲ್ಲಿ ಸಾಬೀತಾಗಿ ಬಿಡುತ್ತದೆ.
ಯಾಕೆಂದರೆ ಇಕ್ಷ್ವಾಕು ವಂಶಕ್ಕೆ ಬಹು ಅಗತ್ಯವಿರುವ ಸಮಯವಿದು, ಇಡೀ ಇಕ್ಷ್ವಾಕು ವಂಶದ ಪ್ರಶ್ನೆ ಇದು. ಸೀತೆಯೆಂದರೆ ಕೇವಲ ಒಂದು ಹೆಣ್ಣಲ್ಲ, ಇಕ್ಷ್ವಾಕು ವಂಶವೇ ಆಕೆಯಲ್ಲಿ ನೆಲೆಸಿದೆ. ಮುಂದಕ್ಕೆ ಇಕ್ಷ್ವಾಕು ವಂಶ ಆಕೆಯ ಮೂಲಕವೇ ಮುಂದುವರೆಯಬೇಕು. ಆಕೆಯೇ ಮಾಧ್ಯಮ. ಹಾಗಾಗಿ ಇಂತಹ ವಿಕಟ ಪ್ರಸಂಗದಲ್ಲಿ ನಾನು ಅವರಿಗೆ ಒದಗದಿದ್ದರೆ ಎಲ್ಲರೂ ನನ್ನ ಬಗ್ಗೆ ಮಾತನಾಡಿ ಬಿಡಬಹುದು. ಹಾಗಾಗಬಾರದು.

ಒಂದು, ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡಬೇಕು.
ಇನ್ನೊಂದು, ಅನಗತ್ಯವಾಗಿ ಕಂಡವರ ಬಾಯಿಗೆ ನಾವು ಆಹಾರವಾಗಬಾರದು ಎನ್ನುವ ಭಾವ.

ಈ ಇಕ್ಷ್ವಾಕು ಸೇವಕನಿಗೆ ಒಂದು ವಿಶ್ರಾಂತಿ ಸ್ಥಾನವನ್ನು ಕಲ್ಪನೆ ಮಾಡೋಣ. ನೂರು ಯೋಜನ ವಿಸ್ತೀರ್ಣದ ದೊಡ್ಡ ಪ್ರಯಾಣ, ಮಾರ್ಗಾಯಾಸವಾಗಬಹುದು. ಕಷ್ಟವಾಗಬಹುದು ಹನುಮಂತನಿಗೆ. ವಿಶ್ರಾಂತಿ ಮಾಡಿ ಬಳಿಕ ಅವನು ಮುಂದಿನ ಪ್ರಯಾಣ ಮಾಡಲಿ ಎಂಬುದಾಗಿ ಸಾಗರನು ಭಾವಿಸಿ, ‘ಏಳು ಮೈನಾಕ’ ಎಂದ. ಮೈನಾಕವೆಂಬ ಪರ್ವತ. ಹಿಮವಂತನ ಪತ್ನಿ ಮೇನೆಯ ಸೋದರ. ಆ ಮೈನಾಕನ ವಿಶೇಷವನ್ನು ಅವನಿಗೇ ಹೇಳ್ತಾನೆ.
ಸಾಗರ ತಳವೆಂದರೆ ಪಾತಾಳದ ದ್ವಾರವದು. ಅದನ್ನು ನೀನು ಮುಚ್ಚಿದ್ದೀಯೆ. ರಾಕ್ಷಸರಿಗೀಗ ಶಕ್ತಿಯಿಲ್ಲ. ಶಕ್ತಿ ಬಂದ ಮೇಲೆ ಮೇಲೆದ್ದು ಬರ್ತಾರೆ. ಹಾಗಾಗಿ ಇಂದ್ರನಿಂದ ಮೈನಾಕ ಪರ್ವತವನ್ನು ಪಾತಾಳದ ಬಾಗಿಲಿಗೆ ಬೀಗವಾಗಿ ಸ್ಥಾಪನೆಯಾಗುವಂತೆ ಏರ್ಪಾಡು ಮಾಡಲಾಗಿತ್ತು. “ನೀನು ದೇವಕಾರ್ಯಕ್ಕಾಗಿ ಸಮುದ್ರ ತಳದಲ್ಲಿರುವೆ. ಈಗ ಸಮುದ್ರದ ಮೇಲೊಂದು ದೇವಕಾರ್ಯವಿದೆ. ನೀನೀಗ ಪಾತಾಳದ ಬಾಗಿಲನ್ನು ಮುಚ್ಚಿಟ್ಟುಕೊಂಡೇ ಮೇಲೆದ್ದು ಬರಲು ಸಾಧ್ಯವಿದೆ. ಶಕ್ತಿಯಿದೆ ನಿನಗೆ, ಬೆಳೆಯ ಬಲ್ಲೆ ನೀನು. ಹಾಗಾಗಿ ನೀನು ಬೆಳೆಯಬೇಕು”.

“ನಿನ್ನಲ್ಲಿ ಇಷ್ಟೆಲ್ಲ ಶಕ್ತಿಗಳಿದೆ. ಹಾಗಾಗಿ‌ ನೀನು ಅತ್ತ ಪಾತಾಳದಿಂದ ಅಸುರರು ಮೇಲೆದ್ದು ಬರದಂತೆ ನೋಡಿಕೊಳ್ಳಬೇಕು, ಹಾಗೆಯೇ ಇತ್ತ ಸಮುದ್ರದ ಮೇಲೆ ನಿನಗೊಂದು ಕೆಲಸವಿದೆ. ಆ ಕೆಲಸವನ್ನು ಮಾಡಲೂ ಮುಂದಾಗಬೇಕು‌ ನೀನೀಗ. ಹಾಗಾಗಿ ನೀನು ಬೆಳೆಯಬೇಕು. ಮೇಲೆದ್ದು ಈ ಕಪಿಸಿಂಹನಿಗೆ ವಿಶ್ರಾಂತಿಯನ್ನು ಕೊಡಬೇಕು. ರಾಮಕಾರ್ಯಕ್ಕಾಗಿ ಅಸಾಧ್ಯ ಕಾರ್ಯಗಳನ್ನು ಸಾಧನೆ ಮಾಡ್ತಕ್ಕಂತಹ ಈ ಹನುಮಂತನು ಆಕಾಶವನ್ನು ಅಡರಿದ್ದಾನೆ. ಅವನಿಗೆ ನಾನು ಸಹಾಯ ಮಾಡಬೇಕಾಗಿದೆ. ನನಗೆ ಋಣವಿದೆ. ಇಕ್ಷ್ವಾಕು ವಂಶಜರು ನನಗೆ ಪೂಜ್ಯರು, ನಿನಗೂ ಪೂಜ್ಯತಮರು. ಹಾಗಾಗಿ ಇದೊಂದು ಕಾರ್ಯವಿದೆ, ತ್ವರೆ ಮಾಡು.
ಮುಹೂರ್ತ ಮೀರುವುದಕ್ಕಿಂತ ಮೊದಲು ಮೇಲೆದ್ದು ಬರಬೇಕಾಗಿದೆ ನೀನು ಹನುಮಂತನಿಗೆ ವಿಶ್ರಾಂತಿಯನ್ನು ಕೊಡಬೇಕಾಗಿದೆ” ಎಂಬುದಾಗಿ ಹೇಳಿ ‘ಮಾಡಬೇಕಾದುದನ್ನು ಮಾಡದಿದ್ದರೆ ಸಜ್ಜನರಿಗೆ ಕೋಪ ಬರ್ತದೆ’ ಎನ್ನುವ ನೀತಿಯನ್ನೂ ಸಮುದ್ರನು ಮೈನಾಕನಿಗೆ ಹೇಳ್ತಾನೆ.

ಏಳು, ನೀರಿನಿಂದ ಮೇಲೇಳು, ಕಪಿಗೆ ವಿಶ್ರಾಂತಿಯನ್ನು ಕೊಡು ಎಂಬುದಾಗಿ ಹೇಳಿ ಇನ್ನೊಂದು ಧರ್ಮವನ್ನು ಚೋದಿಸ್ತಾನೆ ಸಮುದ್ರರಾಜ‌, “ನಮ್ಮ‌ ಅತಿಥಿ ಆಂಜನೇಯ! ಮನೆಗೆ ಬಂದ ಅತಿಥಿಗಳನ್ನು ಉಪೇಕ್ಷೆ ಮಾಡಲಿಕ್ಕೆ ಸಾಧ್ಯವಿಲ್ಲ. ಇವನು ಪೂಜನೀಯನಾದ ಅತಿಥಿ. ನಾವು ಒಳ್ಳೆಯವರಾಗಿದ್ರೆ ಎಲ್ಲಿ‌ ಹೋದರೂ ಬೆಲೆ‌ ಬರ್ತದೆ ನಮಗೆ. ಹನುಮಂತನೇ ಉದಾಹರಣೆ.
ಹನುಮಂತನಿಗೆ ವಿಶ್ರಾಂತಿಗೆ ಅವಕಾಶ ಮಾಡು. ಇದಕ್ಕೆ 3 ಮುಖ್ಯ ಕಾರಣಗಳಿವೆ.
ಒಂದು, ಪ್ರಪಂಚದ ಮೇಲೆ ಕಾಕುತ್ಸ್ಥ(ರಾಮ)ನ ಕರುಣೆ. ಇನ್ನೊಂದು, ಸಾಧ್ವೀ ಶಿರೋಮಣಿ ಮೈಥಿಲಿಯ ಕಷ್ಟ. ಮತ್ತೊಂದು, ಹನುಮಂತನ ನಿಸ್ವಾರ್ಥ ಶ್ರಮ. ಈ ಮೂರರಲ್ಲಿ ಒಂದೊಂದೂ ಕೂಡ ನೀನು ಎದ್ದು ಬರಲು ಪರ್ಯಾಪ್ತವಾಗಿರುವ ಕಾರಣಗಳು. ಏಳಪ್ಪಾ ತಡಮಾಡದೇ” ಎಂದಾಗ ಎದ್ದನು ಮೈನಾಕ.

ಸಮುದ್ರರಾಜನ ಮಾತು ಕೇಳಿ ಆ ಮೈನಾಕನು ಸಾಗರಜಲವನ್ನು ಬೇಧಿಸಿ ಬೆಳೆದು ಬಂದನು. ಕೊಂಚ ಹೊತ್ತಿನಲ್ಲಿಯೆ ತನ್ನ ಶೃಂಗಗಳನ್ನ ಪ್ರಪಂಚಕ್ಕೆ ಪ್ರಕಟಪಡಿಸಿದ. ಚಿನ್ನದ ಬಣ್ಣದಲ್ಲಿ ಕಂಗೊಳಿಸುತ್ತಿವೆ. ಅವುಗಳಲ್ಲಿ ಕಿನ್ನರರು, ಮಹಾಸರ್ಪಗಳು ವಾಸವಾಗಿದಾವೆ. ಮೈನಾಕನು ತನ್ನ ಸ್ವರ್ಣ ಕಾಂತಿಯನ್ನು ಆಕಾಶಕ್ಕೆ ಚೆಲ್ಲಿ ಆಕಾಶವನ್ನು ಸ್ವರ್ಣಪ್ರಭವನ್ನಾಗಿ ಮಾರ್ಪಡಿಸಿದಾನೆ. ಒಮ್ಮೆಲೇ ನೂರು ಸೂರ್ಯರ ಉದಯವಾದಂತೆ.

ಮೈನಾಕನು ಮೇಲೆದ್ದು ಬಂದಾಗ ಗಮನಿಸದೇ ಇರುವುದಕ್ಕೆ ಸಾಧ್ಯವಾಗಲಿಲ್ಲ ಹನುಮಂತನಿಗೆ. ಯಾಕೆಂದರೆ ಅಷ್ಟು ದೊಡ್ಡ ಆಕಾರ ಅಷ್ಟೆಲ್ಲ ಶೃಂಗಗಳು ಮತ್ತು ಆ ಪ್ರಭೆ. ಹನುಮಂತ ಸದಾ ಜಾಗೃತನಾಗಿದಾನೆ. ತನಗೆ ದಾರಿಯಲ್ಲಿ ಯಾರು ಅಡ್ಡ ಬರ್ತಾರೆ ಅಂತ. ಯಾಕೆಂದರೆ ಶ್ರೇಷ್ಠ ಕಾರ್ಯಗಳಿಗೆ ವಿಘ್ನಗಳು ಹಲವು. ಹಾಗಾಗಿ ವಿಘ್ನಗಳ ಪ್ರತೀಕ್ಷೆಯಲ್ಲಿ ಹನುಮಂತನಿದಾನೆ. ಹನುಮಂತ ಗಮನಿಸಿದ ಮೈನಾಕನನ್ನು. ಆದರೆ ಅವನ ನಿಶ್ಚಯ ಇದೊಂದು ವಿಘ್ನ. .

ಜೀವನದಲ್ಲಿ ನಾವು ಒಳಿತಿಗಾಗಿ ಪ್ರಯತ್ನ ಪಡಬೇಕು. ಆದರೆ ಒಳಿತಿನ ನಿರೀಕ್ಷೆ ಮಾಡಬಾರದು. ಕೆಡುಕನ್ನು ನಿರೀಕ್ಷೆ ಮಾಡಬೇಕು ಮತ್ತು ಕೆಡುಕನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಕೆಡುಕನ್ನು ಎದುರಿಸಲು ಸದಾ ಸಿದ್ಧರಿರಬೇಕು ನಾವು.

ಹನುಮಂತ ಪರ್ವತಕ್ಕೆ ಎದೆ ಕೊಟ್ಟನಂತೆ. ಹನುಮಂತನ ಆ ಪೆಟ್ಟಿನಿಂದ ಶಿಖರವು ಮಗುಚಿತು. ಆದರೆ ಮೈನಾಕನಿಗೆ ಸಂತೋಷವಾಯ್ತಂತೆ. ಆ ಪೆಟ್ಟಿನಲ್ಲಿ ಮೈನಾಕನಿಗೆ ಹನುಮನ ವೇಗವೆಷ್ಟು ಎನ್ನುವುದು ಅರ್ಥವಾಯ್ತು. ತನ್ನ ಉದ್ದೇಶವನ್ನು ತಿಳಿಸುವ ಸಲುವಾಗಿ ಕೂಗಿಕೊಂಡನಂತೆ ಮೈನಾಕ. ಹನುಮನಿಗೆ ವಿಶ್ರಾಂತಿ ಕೊಡಬೇಕು ಎನ್ನುವ ಮೈನಾಕನ ಭಾವ ಹನುಮನ ಹೃದಯಕ್ಕೆ ಮುಟ್ಟಿತು ಅಂತ ತಿಳಿದುಕೊಳ್ಳಿ. ಯಾಕೆಂದರೆ ಹನುಮ ಮೈನಾಕನನ್ನು ಎದುರಿಸಿದ್ದು ಹೃದಯದಿಂದಲೇ. ಆಗ ಆಕಾಶ ಮಾರ್ಗದಲ್ಲಿ ಸಂಚರಿಸುವ ಹನುಮಂತನನ್ನು ಕುರಿತು ಸಂಬೋಧಿಸುವ ಸಲುವಾಗಿ ಮೈನಾಕನು ಆಕಾಶದಲ್ಲಿ ಪುರುಷಾಕಾರವಾಗಿ ಕಾಣಿಸಿಕೊಂಡನಂತೆ. ಮತ್ತು ಹನುಮನಿಗೆ ಹೇಳಿದನಂತೆ. ಹೇ ವಾನರ ಶ್ರೇಷ್ಠನೇ, ಇದು ಯಾರಿಗೂ ಸುಲಭ ಸಾಧ್ಯವಲ್ಲದ್ದು. ಮೆಚ್ಚಿದೆ. ಆದರೆ ಸುಮ್ಮನೆ ಏಕೆ ಶ್ರಮ ತೆಗೆದುಕೊಳ್ಳುವುದು? ನನ್ನಲ್ಲಿ ವಿಶ್ರಮಿಸಬಹುದಲ್ಲ. ಇದಕ್ಕೆ ಕಾರಣವೂ ಇದೆ. ನಾನು ನಾನಾಗಿ ಬಂದಿದ್ದಲ್ಲ. ಯಾವ ರಾಮನು ಕಳುಹಿ ನೀನು ಬಂದೆಯೋ ಆ ರಾಮನ ವಂಶಸ್ಥರಿಂದ ಬೆಳೆಸಲ್ಪಟ್ಟವನು ಸಮುದ್ರ. ಸಮುದ್ರವಾಗಿ ಬೆಳೆದಿದಾನೆ ಈಗ. ಆದರೆ ಬೆಳೆಸಿದವರನ್ನು ಮರೆತಿಲ್ಲ. ಈಗ ರಾಮ ಕಾರ್ಯಕ್ಕಾಗಿ ಹೊರಟ ನಿನ್ನನ್ನು ಸೇವಿಸುವ ಮೂಲಕ ಸಣ್ಣ ಪ್ರತ್ಯುಪಕಾರ, ಒಂದು ಋಣ ತೀರಿಸುವ ಕಾರ್ಯಕ್ಕೆ ಸಮುದ್ರ ಬಯಸಿದಾನೆ. ಹಾಗೆ ಬಂದವನು ನಾನು. ಸಮುದ್ರರಾಜನ ಪರವಾಗಿ ಬಂದವನು. ಒಂದು ಧರ್ಮನೀತಿಯನ್ನು ಕೂಡ ಹೇಳ್ತಾನೆ ಮೈನಾಕ. ನಮಗೆ ಉಪಕಾರವಾದರೆ ತಪ್ಪದೇ ನಾವು ಪ್ರತ್ಯುಪಕಾರವನ್ನು ಮಾಡ್ಬೇಕು. ಇದು ಸನಾತನ ಧರ್ಮ. ಋಣವನ್ನು ಇಟ್ಟುಕೊಳ್ಳಬಾರದು. ಹಾಗಾಗಿ ಪ್ರತ್ಯುಪಕಾರವನ್ನು ಮಾಡುವ ಸಲುವಾಗಿ ಮುಂದಾಗಿರುವ ಸಮುದ್ರನನ್ನು ನೀನು ಮಾನಿಸುವುದು ಸರಿ. ನಿನ್ನ ಮೇಲಿನ ಗೌರವಕ್ಕಾಗಿ ಸಮುದ್ರರಾಜನು ನನ್ನನ್ನು ಕಳುಹಿಸಿದ್ದಾನೆ ಹಾಗಾಗಿ ಮಾನಿಸುವೆಯಾ? ವಿಶ್ರಮಿಸು ನನ್ನಲ್ಲಿ. ಮಧುರವಾದ, ಪರಿಮಳಯುಕ್ತವಾದ ಕಂದ ಮೂಲ ಫಲಗಳು ನನ್ನಲ್ಲಿವೆ. ನಿನಗೆ ಈ ಹಗಲು ಮತ್ತು ರಾತ್ರಿಯ ಭೋಜನದ ವ್ಯವಸ್ಥೆ ಮಾಡ್ತೇನೆ. ಹಾಗಾಗಿ ಇಂದು ಇಲ್ಲಿಯೇ ಇದ್ದು ನಾಳೆ ಹೋಗುವಿಯಂತೆ. ಕೇವಲ ಸಮುದ್ರನಿಗೆ ಮಾತ್ರ ನಿನ್ನ ಮೇಲೆ ಗೌರವ ಇರುವುದಲ್ಲ. ಸಮುದ್ರರಾಜನಿಗೋಸ್ಕರ ಬಂದಿದ್ದು ಹೌದು. ಆದರೆ, ನನಗೆ ನನ್ನದೇ ಆದ ಕಾರಣವೂ ಇದೆ. ನನಗೂ ನಿನಗೂ ಒಳ್ಳೆಯ ಬಾಂಧವ್ಯವಿದೆ. ಶ್ರೇಷ್ಠವಾದ, ಪ್ರಖ್ಯಾತವಾದ ಸಂಬಂಧವಿದೆ. ಮಾರುತ ಸಂಭವ ನೀನು. ಆಕಾಶಗಾಮಿಗಳಲ್ಲಿ ಶ್ರೇಷ್ಠ, ಕಪಿಗಳಲ್ಲಿ ಮುಖ್ಯ. ಅತಿಥಿ ಯಾರಾಗಿದ್ದರೂ ಸಹ ನಾವು ಉಪಚರಿಸಬೇಕು. ಅಂಥದ್ದರಲ್ಲಿ ನಿನ್ನಂಥವನನ್ನು ಉಪಚರಿಸದಿರಲು ಸಾಧ್ಯವಾ? ಹಾಗಾಗಿ ಮಾರುತ ಪುತ್ರನೇ, ನಿನ್ನನ್ನು ಪೂಜಿಸಿದರೆ ಮಾರುತನನ್ನು ಪೂಜಿಸಿದಂತೆ ಆಯಿತು. ನೀನು ನನಗೆ ಪೂಜನೀಯ. ಯಾಕೆಂದರೆ ನನಗೆ ವಾಯುದೇವನು ಪೂಜನೀಯ.

ಹನುಮನ್, ಒಂದು ಕಾಲದಲ್ಲಿ ನಾವು ಪರ್ವತಗಳೆಲ್ಲ ಪಕ್ಷಿಗಳಾಗಿದ್ದೆವು. ಇದೇ ಜನ್ಮದಲ್ಲಿ. ವಿಶೇಷವೆಂದರೆ ರೆಕ್ಕೆಗಳಿದ್ದವು. ಪರ್ವತಗಳಿಗೆ ಆಟವಂತೆ. ಬಂದು ದೊಡ್ಡ ಊರಿನ ಮೇಲೆ ಇಳಿದುಬಿಡುವುದು. ಇಡೀ ಊರಿಗೆ ಊರೇ ಸಂಪೂರ್ಣ ಸಮಾಧಿ.

ಯಾವಾಗ ಇವು ಉಪಟಳ ಶುರು ಮಾಡಿದವೋ ಆಗ ಪ್ರಪಂಚವು ಭಯಭೀತವಾಯಿತು. ದೇವತೆಗಳು, ಮಹರ್ಷಿಗಳಿಗೂ ಆತಂಕವಾಯಿತು. ಆಗ ಇಂದ್ರನು ವಜ್ರಾಯುಧವನ್ನು ಕೈಗೆತ್ತಿಕೊಂಡ. ಗರ್ವಪರ್ವತಗಳ ರೆಕ್ಕೆಗಳನ್ನು ಕತ್ತರಿಸಬೇಕಾಗಿದೆ. ಇಂದ್ರನು ವಜ್ರಾಯುಧವನ್ನು ಎತ್ತಿ ಪರ್ವತಗಳನ್ನು ಹುಡುಕಿದ. ಹಾಗೆ ಹೆಚ್ಚಿನ ಪರ್ವತಗಳ ರೆಕ್ಕೆಗಳನ್ನು ಕತ್ತರಿಸಲಾಯಿತು. ಈ ಮೈನಾಕನನ್ನೂ ಇಂದ್ರ ಬೆನ್ನಟ್ಟಿ ಬಂದ. ವಾಯುದೇವನಿಗೂ ಮೈನಾಕನಿಗೂ ಸಖ್ಯವಿತ್ತು. ವಾಯುದೇವ ಅವನಿಗೆ ಸಹಾಯ ಮಾಡಿದನು. ಅವನನ್ನು ಹಾರಿಸಿಕೊಂಡು ಹೋಗಿ ಸಮುದ್ರದಲ್ಲಿ ಮುಳುಗಿಸಿದ. ವಾಯುದೇವ ಈ ಮೂಲಕ ದೇವಕಾರ್ಯವನ್ನೂ ಸಾಧಿಸಿದ. ಅವನು ಮೇಲೆದ್ದು ಬರಬಾರದೆಂದು ಪಾತಾಳದ ಬಾಗಿಲು ಮುಚ್ಚಿದ. ಹಾಗಾಗಿ ಮೈನಾಕನು ಸಪಕ್ಷ (ರೆಕ್ಕೆಯುಳ್ಳವನು). ಹೀಗೆ ನಿನ್ನ ಅಪ್ಪನಿಂದ ಬದುಕಿದವನು ನಾನು. ನಿನ್ನ ಪೂಜೆಯನ್ನು ಮಾಡುತ್ತೇನೆ ಎಂದ.

ಹನುಮಂತ, ಸಮುದ್ರನಿಗೆ ಸೂರ್ಯವಂಶೀಯರ ಉಪಕಾರವಿದೆ. ನನಗೆ ನಿನ್ನ ಉಪಕಾರವಿದೆ. ಹಾಗಾಗಿ ನಮ್ಮ ಸೇವೆಯನ್ನು ಸ್ವೀಕರಿಸು. ನಿನ್ನ ಆಯಾಸವನ್ನು ಪರಿಹಾರ ಮಾಡಿಕೊ. ಆತಿಥ್ಯವನ್ನೂ ಸ್ವೀಕರಿಸು. ನಮ್ಮ ಪ್ರೀತಿಯನ್ನು ಮಾನಿಸು. ನಿನ್ನ ನೋಟವೇ ನನಗೆ ಪ್ರೀತಿಕರ. ಹನುಮಂತನಿಗೆ ಉತ್ತರವನ್ನು ಹೇಳಲು ಸಮಯವಿಲ್ಲ. ಹಾಗೆ ಅವನ ತಲೆಯನ್ನು ಹನುಮಂತನು ಕೈಯಲ್ಲಿ ಮುಟ್ಟಿದನಂತೆ. ಕಾರಣವನ್ನು ಹನುಮಂತನು ಮೈನಾಕನಿಗೆ ಹೇಳಿದ. ಸಂತೋಷವಾಗಿದೆ. ಆತಿಥ್ಯ ಸಂದಿದೆ. ನಿನ್ನ ಪ್ರೀತಿಮಾತಿಗೆ ಬೆಲೆ ಕೊಡಲಿಲ್ಲ ಎಂದು ಬೇಸರ ಮಾಡಬೇಡ. ನನಗೆ ಇದು ಕಾರ್ಯಕಾಲ. ಅದು ನನ್ನನ್ನು ಅವಸರಿಸಿದೆ. ಅಲ್ಲಿ ಸೀತೆ ಕಣ್ಣೀರು ಹಾಕುತ್ತಾ ಲಂಕೆಯಲ್ಲಿ ಕುಳಿತಿರುವಾಗ, ರಾಮನು ಪ್ರಸ್ರವಣ ಪರ್ವತದಲ್ಲಿ ಕಾಯುತ್ತಿರುವಾಗ ಹೇಗೆ ನಾನು ರಾತ್ರಿ ಇಲ್ಲಿ ಉಳಿಯಲಿ? ಹೇಗೆ ಸಂತೋಷವಾಗಿ ಮೂಲ-ಫಲಗಳನ್ನು ಸೇವಿಸಲಿ? ಕಾರ್ಯದ ಕಾಲವು ಕರೆದಿದೆ ನನ್ನನ್ನು. ಹಗಲು ಸರಿಯುತ್ತಿದೆ. ಸಂಜೆಯೊಳಗೆ ನಾನು ಲಂಕೆಯನ್ನು ತಲುಪಬೇಕು. ಮಹೇಂದ್ರ ಪರ್ವತದಿಂದ ಹಾರುವ ಮುನ್ನ ಕಪಿಗಳಿಗೆ ಪ್ರತಿಜ್ಞೆ ಮಾಡಿದ್ದೇನೆ. ರಾಮ ಬಿಟ್ಟ ಬಾಣ ನಾನು ಎಂದು. ಹಾಗಾಗಿ ನಾನಿಲ್ಲಿ ನಿಲ್ಲಲಾರೆ ಎಂದು ಒಂದು ನಗುವನ್ನು ಕೊಟ್ಟು ಹಾಗೆಯೇ ಆಕಾಶವನ್ನೇರಿ ಹೊರಟುಹೋದ ಹನುಮಂತ. ಸಮುದ್ರ, ಪರ್ವತಗಳು ಅವನನ್ನು ಗೌರವದಿಂದ ವೀಕ್ಷಿಸಿದವು. ಕೆಲವರಿಗೆ ಕಾರ್ಯದ ಬದಲಾವಣೆಯೇ ವಿಶ್ರಾಂತಿ. ಇನ್ನು ಕೆಲವರಿಗೆ ವಿಶ್ರಾಂತಿಯೇ ಕಾರ್ಯ! ಹನುಮಂತನಂಥವರಿಗೆ ಕಾರ್ಯವೇ ವಿಶ್ರಾಂತಿ. ಹಾಗಾಗಿ ಅವನು ಆಕಾಶದಲ್ಲಿ ಹಾರಿಹೋದ. ಸಮುದ್ರ, ಪರ್ವತಗಳು ಅವನಿಗೆ ಶುಭವನ್ನು ಹಾರೈಸಿದರು. ಆಗ ಸಿದ್ಧರು, ಮಹರ್ಷಿಗಳು ಅವನ ಎರಡನೇಯ ಕಾರ್ಯವನ್ನು ಹಾಡಿ ಹೊಗಳಿದರು. ಮೊದಲನೆಯದು ಮಹೇಂದ್ರ ಪರ್ವತದಿಂದ ಹಾರಿದ್ದು. ಎರಡನೆಯದು ಇದು. ವಿಶ್ರಾಂತಿಯನ್ನು ಪಡೆಯದೇ ಇದ್ದಿದ್ದು. ಹನುಮಂತನೆಂದರೆ ವಿಶ್ವಾಸ.
ದೇವತೆಗಳಿಗೆಲ್ಲಾ ಸಂತೋಷವಾಯಿತು. ಅವರೆಲ್ಲರ ಜೀವ ಅವನಲ್ಲಿಯೇ ಇದೆ. ಈ ಕಾರ್ಯ ಅವರ ಕಾರ್ಯವೇ. ಈ ವಿಶ್ವಾಸದಿಂದ ದೇವತೆಗಳ ಬುದ್ಧಿ ಬೇರೆಯಾಯಿತು. ಹನುಮಂತನನ್ನು ಪರೀಕ್ಷಿಸಬೇಕೆಂದು ಅವರಿಗೆ ಅನ್ನಿಸಿತು. ಆದರೆ ಮೈನಾಕನಿಗೆ ದೊಡ್ಡ ಅನುಕೂಲವಾಗಿದೆ. ದೇವತೆಗಳೆಲ್ಲರ ಜೊತೆ ಇಂದ್ರನೂ ಬಂದಿದ್ದ. ಹನುಮಂತ ಹೋದ ಮೇಲೆ ಇಂದ್ರನಿಗೂ ಮೈನಾಕನಿಗೂ ಭೇಟಿಯಾಯಿತು. ಆಗ ಇಂದ್ರನು ಮೈನಾಕನಿಗೆ ನೀನೇನು ಯೋಚಿಸಬೇಡ. ನಿನ್ನ ಪರವಾಗಿ ನಾನಿದ್ದೇನೆ. ನಮ್ಮ ವೈರ ಮುಗಿಯಿತು ಎಂದನಂತೆ. ಅಭಯವನ್ನು ಕೊಡುವಾಗ ಖುಷಿಯಿಂದ ಇಂದ್ರನ ಗಂಟಲು ಕಟ್ಟಿತು. ಆಗ ಇಂದ್ರನು ನೀನು ಹನುಮಂತನ ಕುರಿತು ಸಹಾಯ ಮಾಡಿದ್ದೀಯ. ಆ ನಿರ್ಭಯನ ವಿಷಯದಲ್ಲಿ ನಮಗೆಲ್ಲಾ ಭಯವುಂಟಾದಾಗ ನಮ್ಮ ಆತಂಕವನ್ನು ದೂರ ಮಾಡಿದ್ದೀಯ. ರಾಮಕಾರ್ಯಕ್ಕೆ ಹೊರಟವನಿಗೆ ಸತ್ಕಾರಮಾಡಿದ್ದಕ್ಕಾಗಿ ನಿನಗೆ ಅಭಯ ಕೊಟ್ಟೆ ಎಂದನು. ಹನುಮಂತನ ಸೇವೆಯನ್ನು ಮಾಡುತ್ತೇನೆಂದು ಮನಸ್ಸು ಮಾಡಿದರೂ ಒಳ್ಳೆಯದಾಗುತ್ತದೆ. ಮತ್ತೆ ಮುಳುಗಲಿಲ್ಲ ಅವನು.

ಅತ್ತ ದೇವತೆಗಳಿಗೆ ಹನುಮಂತನನ್ನು ಪರೀಕ್ಷಿಸಬೇಕೆಂದು ಮನಸ್ಸಾಯಿತು. ಹೋಗಿ ಸುರಸೆಯನ್ನು ಕಂಡರು. ಆಕೆ ನಾಗಮಾತೆ. ಕಶ್ಯಪರ ಪತ್ನಿ. ಅವಳಲ್ಲಿ ಇಂತೆಂದರು. ಹನುಮಂತನು ಹಾರುತ್ತಿದ್ದಾನೆ. ನೀನವನನ್ನು ಮುಗಿಲುಮುಟ್ಟುವ ರಾಕ್ಷಸ ರೂಪವನ್ನು ತಾಳಿ ಪರೀಕ್ಷೆ ಮಾಡಬೇಕು. ಅವನಿಗೆ ನೀನು ವಿಘ್ನವಾಗಿ ಪರಿಣಮಿಸು. ಅವನೇನು ಮಾಡುತ್ತಾನೆ ನೋಡೋಣ. ಉಪಾಯದಿಂದ ನಿನ್ನನ್ನು ಗೆಲ್ಲುತ್ತಾನೋ ಅಥವಾ ಕಂಗೆಡುತ್ತಾನೋ ಎಂದು. ಇದು ಪರೀಕ್ಷೆ. ಹಿಂದಿನದು ಸತ್ಕಾರ. ಮುಂದೆ ಬರುವುದು ಆಕ್ರಮಣ. ಮೊದಲನೆಯದು ಸಾತ್ವಿಕ. ಇದು ರಾಜಸ. ಸಾತ್ವಿಕವಲ್ಲ. ಸಾಧಕನಿಗೆ ಅಂತರ್ಮಾರ್ಗದಲ್ಲಿ ಹೋಗುವಾಗ ಒಂದೊಂದು ಪರೀಕ್ಷೆಗಳು ಹೇಗೆ ಬರ್ತವೆ ಹಾಗಿದು. ಇದು ಒಳಗಿಂದ ಕೆಡುಕಲ್ಲ, ಹೊರಗಿಂದ ಮಾತ್ರ ಕೆಡುಕು. ಮೊದಲನೆಯದು ಒಳಗಿಂದಲೂ ಹೊರಗಿಂದಲೂ ಒಳಿತು. ಈಕೆಯ ಮೇಲೆ ಹನುಮಂತ ಬಲಪ್ರಯೋಗ ಮಾಡುವಂತಿಲ್ಲ. ಆ ದಾರಿಯಲ್ಲಿ ಯಾರು ಬಂದರೂ ಕೂಡ ಆಕೆ ಆಹಾರವಾಗಿ ತೆಗೆದುಕೊಳ್ಳಬಹುದು. ಬಾಯೊಳಗೆ ತೆಗೆದುಕೊಳ್ಳಬಹುದು. ಸುರಸೆ ಬಾಯ್ದೆರೆದು ನಿಂತರೆ, ಅದನ್ನು ಮೀರಿ ಯಾರು ಹೋಗುವಂತೆ ಇಲ್ಲ. ಉಪಾಯದಿಂದ ಪಾರಾಗಬೇಕೆಂದು ದೇವತೆಗಳು ಹೇಳ್ತಾರೆ. ಇಲ್ಲಿ ಬಲಪ್ರಯೋಗ ಆಗುವಂತದ್ದಲ್ಲ. ಏನು ಮಾಡ್ತಾನೆ ಹನುಮಂತ?

ಆ ದೇವತೆ ರಾಕ್ಷಸರೂಪವನ್ನು ತಾಳಿದಳು. ಸರ್ವರಿಗೂ ಭಯಂಕರವಾದ, ವಿಕೃತವಾದ, ವಿರೂಪವಾದ ರೂಪವನ್ನು ತಾಳಿದಳು. ಹನುಮಂತನ ದಾರಿಯನ್ನು ಅಡ್ಡಗಟ್ಟಿ, ಬಾಯ್ದೆರೆದು, ನಿಂತಳು. ಹೇಳಿದಳು, “ನೀನು ದೇವತೆಗಳು ನನಗಾಗಿ ಕೊಟ್ಟ ತಿಂಡಿ, ಹೋಗು ನನ್ನ ಬಾಯೊಳಗೆ. ನನ್ನ ಭಕ್ಷ್ಯ ನೀನು. ಹಾಗಾಗಿ ನಾನು ನಿನ್ನನ್ನು ತಿನ್ನುತ್ತೇನೆ” ಎಂದಳು. ಆಗ ಹನುಮಂತ ವಿನಯದಿಂದ ಆಕೆಗೆ ಕೈಮುಗಿದು ಹೇಳ್ತಾನೆ ರಾಮಕಥೆಯನ್ನು. ರಾಮನ ವನವಾಸದಿಂದ ಹಿಡಿದು ಎಲ್ಲವನ್ನೂ ಹೇಳ್ತಾನೆ. ದಾಶರಥಿ ರಾಮ ಕಾರಣಾಂತರಗಳಿಂದ ಕಾಡನ್ನು ಸೇರಿದಾನೆ. ಅನುಜನೊಡಗೂಡಿ. ರಾಕ್ಷಸರ ಜೊತೆ ಬದ್ಧ ವೈರನಾಗಿದ್ದಾನೆ. ಅಂತಹ ರಾಮ ಮಾಯಾಮೃಗವನ್ನು ಹುಡುಕಲು ಹೋದಾಗ ರಾವಣ ಸೀತೆಯನ್ನು ಕದ್ದೊಯ್ದಿದ್ದಾನೆ. ಸೀತೆಯ ಬಳಿ ರಾಮನ ಅಪ್ಪಣೆಯ ಮೇರೆಗೆ ಹೋಗುತ್ತಿದ್ದೇನೆ. ಇಡೀ ಭೂಮಂಡಲ ಇಕ್ಷ್ವಾಕು ವಂಶಜರಿಗೆ ಸೇರಿದೆ. ನೀನು ಈಗಿರುವುದು ರಾಮನ ಜಾಗದಲ್ಲಿಯೆ. ನಿನಗೂ ಕರ್ತವ್ಯ ಇದು. ಆ ಸಂದರ್ಭದಲ್ಲಿ ಹನುಮಂತ ಆಕೆ ರಾಕ್ಷಸಿ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಗುರುತಿಸಿದ್ದಾನೆ. ಯಾಕೆಂದರೆ ಈ ಭಾಷೆ ಸಾತ್ವಿಕರಿಗೆ ಸಲ್ಲುವಂಥದ್ದು. ಹಾಗಾಗಿ ಸಹಾಯ ಮಾಡು. ರಾಮಕಾರ್ಯಕ್ಕೆ ನೀನು ಒದಗು ಎಂದಾಗ ಸುರಸೆಯ ಮುಖ ಬದಲಾಗಲಿಲ್ಲ.

ಬಾಯಿ ಮುಚ್ಚಲಿಲ್ಲ ಆಕೆ, ಬಾಯ್ದೆರೆದಿದೆ. ಆಗ ಹನುಮಂತ ಇನ್ನೊಂದು ಪ್ರಸ್ತಾವನೆಯನ್ನು ಮಂಡಿಸ್ತಾನೆ ಅವಳೆದುರು. ಪುಣ್ಯಕೋಟಿಯ ಪ್ರಸ್ತಾವನೆ. ನೀನು ರಾಮಕಾರ್ಯಕ್ಕೆ ಸಹಾಯ ಮಾಡುವುದಿಲ್ಲವಾ, ಸರಿ. ಹಾಗಾದರೆ ನನ್ನನ್ನು ತಿನ್ನು. ಆದರೆ ಈಗಲ್ಲ. ನಾನು ಹೋಗಿ ಸೀತೆಯನ್ನು ಕಂಡು, ರಾಮನನ್ನು ಕಂಡು ಬರಬೇಕು. ಸೀತೆಯ ವಾರ್ತೆಯನ್ನು ರಾಮನಿಗೆ ಹೇಳಿಬರಬೇಕು. ಇಷ್ಟು ಮಾಡಿ, ನಿನ್ನ ಬಾಯಿಗೆ ಬರ್ತೇನೆ. ಇದು ನನ್ನ ಪ್ರತಿಜ್ಞೆ. ಕೊಟ್ಟ ಮಾತಿಗೆ ತಪ್ಪಲಾರೆನು. ಕೆಟ್ಟ ಯೋಚನೆ ಮಾಡಲಾರೆನು. ಹೀಗೆ ಇಲ್ಲಿಂದಲೇ ಪುಣ್ಯಕೋಟಿಯ ಕಥೆ ಬಂದಂತಿದೆ. ಹೀಗೆಂದಾಗಲೂ ಸುರಸೆ ಒಪ್ಪಲಿಲ್ಲವಂತೆ. ಇದು ನನಗೆ ದೈವಕೊಟ್ಟ ವರ. ಅದನ್ನು ಮೀರುವೆಯಾ ನೀನು. ಮೊದಲು ನನ್ನ ಬಾಯೊಳಗೆ ಬಾ, ಉಳಿದುಕೊಂಡರೆ, ಎಲ್ಲಾದರೂ ಹೋಗು ಎನ್ನುವಂತೆ ಹೇಳಿದಳು. ಒಂದು ಪರೀಕ್ಷೆ ಒಡ್ಡಿದಳು. ನೀನು ಬಾಯೊಳಗೆ ಬರಲೇಬೇಕು, ಆದರೆ ನಾನು ನಿನ್ನನ್ನು ಅಗಿಯುವ ಮುನ್ನ ನೀನು ತಪ್ಪಿಸಿಕೊಳ್ಳಬೇಕು. ಮಾಡು ಹೀಗೆ ಎಂದಳು. ನನಗೆ ಬ್ರಹ್ಮನೇ ಕೊಟ್ಟ ವರ. ನೀನು ಮೀರುವಂತಿಲ್ಲ ಎಂದಳು. ಆಗ ಹನುಮಂತನಿಗೆ ಸಿಟ್ಟು ಬಂದಿತಂತೆ. ಹಾಗಿದ್ದರೆ ನಾನು ಹಿಡಿಸುವಂತಹ ಬಾಯಿತೆರೆ ಅಂದನಂತೆ. ಹತ್ತು ಯೋಜನ ವಿಸ್ತಾರವಾದನಂತೆ ಹನುಮಂತ. ಆಗ ಸುರಸೆ 20 ಯೋಜನ ಅಗಲ ಮಾಡಿದಳಂತೆ ಆಕೆಯ ಬಾಯಿಯನ್ನು. ಹನುಮಂತನು ಒಂದು ಲೆಕ್ಕ ಹಾಕಿ, ತನ್ನ ಶರೀರವನ್ನು ಚಿಕ್ಕದಾಗಿ ಮಾಡಿಕೊಂಡು ಹೀಗೆ ಹೋಗಿ ಹಾಗೆ ಬಂದನಂತೆ. ಕೋಪ ಬಂದಾಗಲೂ ಹನುಮಂತನ ತಲೆ ಹೇಗೆ ಕೆಲಸಮಾಡಿತೆಂದರೆ, ಹೀಗೆ…! ಒಂದಂಗುಷ್ಟದ ಗಾತ್ರದಲ್ಲಿ ಒಳಹೋಗಿ ಹೊರಬಂದ ಭಯಂಕರ ವೇಗದಲ್ಲಿ. ಮತ್ತೆ ದೊಡ್ಡ ದೇಹದವನಾಗಿ ಆಕಾಶದಲ್ಲಿ ನಿಂತು, ಹೇ ದಾಕ್ಷಾಯಿಣಿ, ನಿನಗೆ ನಮಸ್ಕಾರವಿರಲಿ. ವಿದಾಯದ ನಮಸ್ಕಾರ. ಸೀತೆಯನ್ನು ನೋಡಲು ಹೊರಟೆ. ನಿನ್ನ ಕೋರಿಕೆಯೂ ಈಡೇರಿತು, ನನ್ನ ದಾರಿಯೂ ಸುಗಮವಾಯಿತು. ರಾಹುವಿನ ದವಡೆಯಿಂದ ಹೊರಬಂದಂತೆ ಕಂಡನು. ಆಗ ಸುರಸೆಯು ತನ್ನ ನಿಜರೂಪ ತಾಳಿದಳು. ಕಾರ್ಯಸಿದ್ಧಿಯಾಗಲಿ, ನಿನಗೆ ಬೇಕಾದಂತೆ ಸಿಗಲಿ. ಸೀತಾರಾಮನನ್ನು ಸೇರಿಸು ಎಂದಳು. ದೇವತೆಗಳು, ಗಂಧರ್ವರೆಲ್ಲರೂ ಹೂಮಳೆ ಸುರಿಸಿ, ಸಾಧು ಸಾಧು ಎಂದರು.

ಹನುಮಂತ ಅತಿಶಯವಾದ ವೇಗದಲ್ಲಿ ಆಕಾಶಮಾರ್ಗದಲ್ಲಿ ಹೋಗ್ತಾ ಇದಾನೆ, ದೇವತೆಗಳು ವಿಮಾನದಲ್ಲಿ ಸಂಚಾರ ಮಾಡ್ತಾ ಇರ್ತಾರೆ. ಅಗ್ನಿದೇವನು ಹವ್ಯವನ್ನು ಸ್ವೀಕರಿಸಿ, ಆ ಮಾರ್ಗದಲ್ಲಿಯೇ ಸ್ವರ್ಗಕ್ಕೆ ಹೋಗ್ತಾ ಇರ್ತಾನೆ. ನಕ್ಷತ್ರಗಳು, ಚಂದ್ರ ಸೂರ್ಯರು ತಾರಾಗಣಗಳಿಂದ ಕೂಡಿದೆ ಆಕಾಶ, ಮಹರ್ಷಿಗಳು, ಗಂಧರ್ವರು, ಯಕ್ಷರು ಸಂಚರಿಸುತ್ತಾರೆ. ಅಂತಹ ಲಕ್ಷಣವಾದ, ವಿಮಲವಾದ, ವಿಶ್ವಾಧಾರವಾದ, ವಿಶ್ವಾವಸು ಸೇವಿತವಾಗಿರುವಂತಹ, ವಿಶ್ವಾವಸು ಅಂದರೆ ಗಂಧರ್ವ ಸೇವಿತವಾಗಿರುವ ಚಂದ್ರಸೂರ್ಯರ ಪಥದಲ್ಲಿ, ಆ ಮಂಗಲ ಮಾರ್ಗದಲ್ಲಿ ಹನುಮ ಸಂಚಾರ ಮಾಡುವನು. ಜೀವಲೋಕಕ್ಕೆ ಮೇಲ್ಛಾವಣಿಯಂತೆ ಇದೆ ಆಕಾಶ. ಅಂಥಹ ಆಕಾಶದಲ್ಲಿ ಹನುಮಂತನು ಸಂಚರಿಸುತ್ತಾನೆ. ಹನುಮಂತನ ಗಮನ ಎಂದರೆ ಸಾಧಕನೊಬ್ಬನ ಅಂತರ್ಮಾರ್ಗದ ಯಾತ್ರೆ. ಈ ವಿಘ್ನಗಳೂ ಅಲ್ಲಿ ಬರುವಂಥಹದ್ದು. ಬಾಹ್ಯ ಯಾತ್ರೆಯೂ ಹೌದು, ಅಂತರ್ಯಾತ್ರೆಯೂ ಹೌದು. ಜೀವವನ್ನು ಹೊತ್ತು ಪ್ರಾಣಶಕ್ತಿಯು ಮೇಲೂ ಕೆಳಗೂ ಅಂತರಾಕಾಶದಲ್ಲಿ ಸಂಚಾರ ಮಾಡುತ್ತದೆ. ಹಾಗೆ ಹನುಮಂತನು ಸಂಚಾರ ಮಾಡ್ತಾ ಇದಾನೆ. ಒಂದು ಹಂತದಲ್ಲಿ ಹನುಮಂತನ ಬೃಹದಾಕಾರದ ರೂಪ ಎಲ್ಲಿ ನೋಡಿದರೂ ಕಾಣುವಂತೆ ಇತ್ತಂತೆ. ಮೇಲಿಂದ ಕೆಳಗಿಂದ ಮುಂದೆ ಹಿಂದೆ ಅತ್ತ ಇತ್ತ ಹೇಗೆ ನೋಡಿದರೂ ಕಾಣುವಂತೆ ಇತ್ತು ಅವನ ರೂಪ.

ಹಾಗಾಗಿ, ಅವಳಿಗೂ ಕಂಡಿತು. ನಿಜವಾಗಿಯೂ ಇಂದೆನಗೆ ಆಹಾರ ಸಿಕ್ಕಿತು ಅಂದುಕೊಂಡಳಂತೆ. ಸುರಸಿ ಪರೀಕ್ಷೆ ಮಾಡಿದ್ದು, ಆದರೆ ಇದು ನಿಜ. ಗಗನದಲ್ಲಿ ಹಾರಿಬರುವ ಮಹಾಕಾಯನನ್ನು ಕಂಡಳು ಸಿಂಹಿಕೆ, ಅವಳು ಬೃಹದ್ರೂಪ ತಾಳಿದಾಳೆ. ಶಕ್ತಿಯಿದೆ ಅವಳಲ್ಲಿ. ಕಾಮರೂಪಿಣಿ ಅವಳು. ಅವಳು ಮನಸ್ಸಿಂದ ಆಲೋಚನೆ ಮಾಡಿದಳು, ಎಷ್ಟು ದಿನವಾಗಿತ್ತು ನಾನು ಉಪವಾಸ ಮಾಡುತ್ತಾ..! ಉಪವಾಸ ವೃತಮಾಡಿದ್ದಲ್ಲ. ಹೊಟ್ಟೆಗೇನು ಸಿಕ್ಕಿಲ್ಲ. ಇಂದೆನಗೆ ಆಹಾರ ಸಿಕ್ಕಿತು!! ಬಹುಕಾಲದ ಬಳಿಕ ಇಂದು ನನಗೆ ಊಟ ಸಿಕ್ಕಿದೆ. ಅದ್ಯೇನು ಎಂದು ಅವಳಿಗೆ ಗೊತ್ತಿಲ್ಲ. ಈ ಬೃಹದಾಕಾರದ ಸತ್ವ ಬಹುಕಾಲದ ಬಳಿಕ ನನ್ನ ವಶವಾಗಿದೆ. ಮನಸ್ಸಿನಲ್ಲಿಯೇ ಭಾವಿಸಿ, ಹನುಮಂತನ ನೆರಳನ್ನು ಹಿಡಿದುಕೊಂಡಳಂತೆ. ಆಕಾಶದಲ್ಲಿ ಹಾರುತ್ತಿರುವವನ ನೆರಳು ಸಮುದ್ರದಲ್ಲಿ ಬಿದ್ದಿದೆ. ನೆರಳನ್ನು ಹಿಡಿದು ಜಗ್ಗಿದಾಳೆ. ಛಾಯಾಗ್ರಾಹಿ..! ಚಂದ್ರಸೂರ್ಯರನ್ನು ನುಗ್ಗುವಂತಹ ರಾಹುವಿನ ತಾಯಿ ಸಿಂಹಿಕೆ. ಹನುಮಂತನಿಗೆ ಒಂದು ಬಾರಿ ಏನು ಎಂದು ಅರ್ಥವಾಗಲಿಲ್ಲ. ಆಕಾಶಮಾರ್ಗದಲ್ಲಿ ಮಹಾವೇಗದಿಂದ ಪ್ರಯಾಣ ಮಾಡ್ತಾ ಇದ್ದಾನೆ, ಇದ್ದಕ್ಕಿದ್ದಂತೆ ಪ್ರಯಾಣ ಸ್ಥಬ್ಧವಾದಂತೆ ಆಗ್ತಾ ಇದೆ. ಯಾರು ಹೇಳಿ ಕೇಳಿದನಂತೆ, ಯಾರು ಇಲ್ಲ..! ಕುಂಟನಂತಾದೆನಲ್ಲಾ, ಯಾರೋ ಹಿಡಿದುಕೊಂಡ ಹಾಗೆ, ಯಾರು ಎಲ್ಲಿ ಹಿಡಿದುಕೊಂಡರು…? ಸಮುದ್ರದಲ್ಲಿ ಹಡಗು ಮುಂದೆ ಹೋಗುತ್ತಿರುವಾಗ ಎದುರಿನಿಂದ ಗಾಳಿ ಬೀಸಿದರೆ, ಗತಿ ಮಂದವಾಗುತ್ತದೆ. ಹಾಗಾಯಿತಲ್ಲ. ಅತ್ತಿತ್ತ, ಮೇಲೆ ಕೆಳಗೆ ಎಲ್ಲೆಡೆ ನೋಡಿದನು ಹನುಮಂತ.

ಆಗ ನೋಡಿದ, ಸಮುದ್ರ ಮಧ್ಯದಿಂದ ಭೂತವೊಂದು ಎದ್ದು ಬಂದಿದೆ. ಅದು ಹೆಣ್ಣು ಎಂದು ಕೂಡ ಕಾಣ್ತಾ ಇಲ್ಲ. ವಿಕೃತ ಮುಖ. ಸುಗ್ರೀವನ ನೆನಪಾಯಿತು ಹನುಮಂತನಿಗೆ, ಸುಗ್ರೀವನ ಸೂಚನೆಯ ಸ್ಮರಣೆ, ಓ ಸುಗ್ರೀವ ಹೇಳಿದ್ದ. ಛಾಯಾಗ್ರಾಹೀ ಭೂತವಿದೆ. ಲಂಕೆಗೆ ಹೋಗುವ ದಾರಿಯಲ್ಲಿ ನೆರಳನ್ನು ಹಿಡಿದು ತಿನ್ನುವ ಭೂತವೊಂದಿದೆ ಎಂದು. ಹಾಗಾಗಿ ಅದೇ ಇದು ಎಂದು ತೀರ್ಮಾನವಾಯಿತು ಹನುಮಂತನಿಗೆ. ಆತ ಅವಳನ್ನು ಸರಿಯಾಗಿ ಅರ್ಥಮಾಡಿಕೊಂಡನಂತೆ. ಯಾರಿದು, ಯಾವ ಶಕ್ತಿಯಿದು, ಏನು ತತ್ವ, ಆಳ ಅಗಲವನ್ನು ಲೆಕ್ಕಾಚಾರ ಹಾಕಿ ತೀರ್ಮಾನ ಮಾಡಿದ ಹನುಮಂತ. ಬೆಳೆದ, ಬೃಹದಾಕಾರನಾದ. ಅವಳೂ ಕೂಡ ಮೋಡದಂತೆ ಗುಡುಗುತ್ತಾ, ಅವನನ್ನು ಅಟ್ಟಿದಳು. ಎರಗಿದಳು ಅಂದರೆ ಅವಳ ಬಾಯಿ ಹತ್ತಿರ ತಂದಳಂತೆ. ದೊಡ್ಡ ಬಾಯಿಯನ್ನು ತೆರೆದಿದ್ದಾಳೆ, ಇಡೀ ಅವಯವಗಳನ್ನು ನೋಡಿದನಂತೆ ಹನುಮಂತ. ಹಾಗೆ ಆಕೆ ಧಾವಿಸಿ ಬರುವಾಗ, ಅಲ್ಲಿಂದ ಇಲ್ಲಿಗೆ ಎಷ್ಟು ಅಂತರ ಎಂದು ನೋಡಿಕೊಂಡನಂತೆ ಹನುಮ. ಹತ್ತಿರ ಬರುತ್ತಿದ್ದಂತೆ, ಆ ವಜ್ರಶರೀರಿಯು ಚಿಕ್ಕ ರೂಪವನ್ನು ತಾಳಿ ಅವನೇ ಹಾರಿದನಂತೆ ಬಾಯಿಯೊಳಗೆ. ಚಂದ್ರಗ್ರಹಣದಂತಿತ್ತು…! ಬಾಯಿಯೊಳಗೆ ಹೋಗಿ ಮಾಡಿದ್ದೇನು ಅಂದರೆ, ತೀಕ್ಷ್ಣವಾದ ನಖಗಳಿಂದ ಅವಳ ಮರ್ಮಸ್ಥಾನಗಳನ್ನು ಭೇದಿಸಿ, ಹೃದಯವನ್ನು ಕೈಯಲ್ಲಿ ಹಿಡಿದುಕೊಂಡು ಹೊರಗೆ ಬಂದ. ಹಾಗೆ ಮನೋವೇಗದಲ್ಲಿ ಆಕೆಯ ಶರೀರವನ್ನು ಒದ್ದು, ಮತ್ತೆ ಗಗನಕ್ಕೆ ನೆಗೆದನಂತೆ ಹನುಮಂತ. ಆಕೆ ಬಿದ್ದಳು. ಮತ್ತೆ ಬೆಳೆದನು ಹನುಮಂತ. ಹನುಮಂತನಿಂದ ಅಪಹರಿಸಲ್ಪಟ್ಟ ಹೃದಯದವಳಾಗಿ ಸಿಂಹಿಕೆಯು ಎಲ್ಲವನ್ನು ಕಳೆದುಕೊಂಡು ಉರುಳಿದಳು ಜಲದಲ್ಲಿ. ಪಾಪದಿಂದ ಹೃದಯವನ್ನು ಅಂದರೆ ಜೀವವನ್ನು ಬೇರೆಮಾಡಿದ್ದಾನೆ ಹನುಮಂತ. ಆಗ ಅದನ್ನು ನೋಡಲಿಕ್ಕೂ ಜನ ಸೇರಿದ್ದರಂತೆ, ಆಕಾಶದಲ್ಲಿ ಸಂಚಾರ ಮಾಡುವಂತಹ ದಿವ್ಯಶಕ್ತಿಗಳು ಹನುಮಂತನನ್ನು ಕುರಿತು ಹೇಳಿದರಂತೆ, ಭಯಂಕರ ಕೆಲಸವಿದು, ದೊಡ್ಡ ಭೂತವನ್ನು ನೀನು ತೆಗೆದೆ. ಎಷ್ಟು ಜನ ಬದುಕಿದರು ಇದರಿಂದ. ಮುಂದೆ ಬರುವವರೆಲ್ಲರಿಗೂ ಒಳ್ಳೆಯದು ಇದು. ನಿನ್ನ ಇಷ್ಟಾರ್ಥವನ್ನು ಸಾಧಿಸು. ನಿನ್ನ ಹಾಗೆ ಯಾರಿಗೆ ಸ್ಮೃತಿ, ಧೃತಿ(ಧಾರಣಶಕ್ತಿ), ಮತಿ, ದಕ್ಷತೆ ಇವೆಯೋ, ಅವರಿಗೆ ಸೋಲಿಲ್ಲ ಎಂದರು.

ವಾಲ್ಮೀಕಿಗಳು ಹೇಳುತ್ತಾರೆ, “ಸಿಂಹಿಕೆಯ ಸಂಹಾರಕ್ಕಾಗಿಯೇ ಹನುಮನ ಸೃಷ್ಟಿ.” ಬ್ರಹ್ಮನ ಸಂಕಲ್ಪವೇ ಹಾಗಿತ್ತು, ಸಿಂಹಿಕೆಯ ಮೋಕ್ಷವೂ ಬ್ರಹ್ಮನೇ ಸಂಕಲ್ಪಿಸಿದ್ದು. ಯಾವ್ಯಾವ ಕಾರ್ಯ ಹನುಮಂತನಿಂದ ಆಗಬೇಕು, ಆ ಪ್ರಕಾರವಾಗಿ ಹೋಗುತ್ತಿದೆ. ಸಿಂಹಿಕೆಗೆ ಮೋಕ್ಷವಾಯಿತು. ಮುನ್ನಡೆದನು ಹನುಮಂತ ಲಂಕೆಯ ಕಡೆಗೆ. ಮುನ್ನಡೆದನು ಮೂರು ವಿಘ್ನಗಳನ್ನು ಮೀರಿ, ಸಾತ್ವಿಕ, ತಾಮಸ, ರಾಜಸ. ಒಂದು ಅಂತರಂಗ ಬಹಿರಂಗವೆರಡೂ ಹಿತ ಮೈನಾಕನದ್ದು. ಎರಡನೆಯದು ಅಂತರಂಗದಲ್ಲಿ ಹಿತ, ಬಹಿರಂಗದಲ್ಲಿ ಹಿತವಲ್ಲ. ಮೂರನೇಯದು ಅಂತರಂಗದಲ್ಲೂ ಬಹಿರಂಗದಲ್ಲೂ ಹಿತವಲ್ಲ. ಈ ಮೂರು ವಿಘ್ನಗಳನ್ನು ಮೆಟ್ಟಿ, ಹನುಮಂತನು ಮುನ್ನಡೆದನು ಲಂಕೆಯ ಕಡೆಗೆ. ಅದೋ ಹಸಿರಾಗಿ ಲಂಕೆಯ ಕಾನನಗಳು ತೋರಿ ಬರುತ್ತಿದೆ ಹನುಮಂತನಿಗೆ. ನೆಲ ಅನತಿದೂರದಲ್ಲಿದೆ. ಹತ್ತಿರದಲ್ಲಿದೆ. ಹನುಮಂತ ಲಂಕೆಯ ನೆಲದಲ್ಲಿ ಇಳಿಯುವುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments