ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸಮಯದಲ್ಲಿ ಅರ್ಧದಷ್ಟು ರಾತ್ರಿ, ಅರ್ಧದಷ್ಟು ಹಗಲು. ಹನ್ನೆರಡು ಗಂಟೆ ಹಗಲಿದ್ರೆ ಹನ್ನೆರಡು ಗಂಟೆ ರಾತ್ರಿ. ಹನ್ನೊಂದು ಗಂಟೆ ಹಗಲಿದ್ರೆ ಹದಿಮೂರು ಗಂಟೆ ರಾತ್ರಿ ಅಥವಾ ಹದಿಮೂರು ಗಂಟೆ ಹಗಲಿದ್ರೆ ಹನ್ನೊಂದು ಗಂಟೆ ರಾತ್ರಿ. ಸುಮಾರಾಗಿ ಸರಿಸಮವಾಗಿ ಇರ್ತವೆ ಈ‌ ಹಗಲು-ರಾತ್ರಿಗಳು.
ಆದರೆ ಯುಗ ಯುಗಗಳ ರಾತ್ರಿ ಲಂಕೆಯಲ್ಲಿ!
ಕುಬೇರ ಬಿಟ್ಟು ಹೋದ‌ ಬಳಿಕ ಲಂಕೆಗೆ ರಾತ್ರಿಯೇ. ಕಾಲರಾತ್ರಿ. ಅಲ್ಲಿ‌ ರಾವಣನೆಂಬ ಕತ್ತಲೆ ನಿತ್ಯ ಕವಿದಿದೆ. ಪುಣ್ಯದ ಘಳಿಗೆ ಈಗ ಬರ್ತಾ ಇದೆ‌. ಯಾಕೆಂದರೆ, ಒಂದು‌ ಪುಣ್ಯ ಪಾದಸ್ಪರ್ಶವಾಗಲಿಕ್ಕಿದೆ. ಯಾರೋ ಕೆಲವರು ಬದುಕಿನಲ್ಲಿ ಕಾಲಿಟ್ಟರೆ ಬದುಕು ಬಂಗಾರವಾಗ್ತದೆ, ಜೀವನ ಧನ್ಯವಾಗ್ತದೆ. ಕೆಲವರು ಯಾವುದಾದರು ದೇಶದಲ್ಲಿ ಕಾಲಿಟ್ಟರೆ ಆ ದೇಶವೇ ಉದ್ಧಾರ ಆಗ್ತದೆ. ಯುಗ ಯುಗಗಳ ಕತ್ತಲೆ ತೊಲಗಿ‌ ಹೋಗ್ತದೆ‌. ಅಂಥಾ ಘಳಿಗೆ ಲಂಕೆಗೆ ಹತ್ತಿರವಾಗ್ತಾ ಇದೆ‌.

ಕಾಲಿಡುವ ಮೊದಲು ಕಣ್ಣಿಡಬೇಕು. ಅದು ಆರ್ಯೋಕ್ತಿ. ಹಾಗೇ, ಹನುಮಂತ ತನ್ನ ದೃಷ್ಟಿಯನ್ನಿಟ್ಟ ಲಂಕೆಯಲ್ಲಿ. ಶತಯೋಜನದ ಸಾಗರದ ಕ್ರಮಣದ ಬಳಿಕ ಹನುಮಂತ ಗಗನದಲ್ಲಿ ಹಾರುತ್ತಲೇ ದ್ವೀಪವನ್ನು ಕಂಡ. ಮುಂದೆ ಹೋಗಲಿಲ್ಲ, ಲಂಕೆಯನ್ನು ಒಮ್ಮೆ ಅವಲೋಕನ ಮಾಡ್ತಾನೆ, ಬಳಿಕ ತನ್ನನ್ನೂ ಅವಲೋಕನ ಮಾಡಿಕೊಳ್ತಾನೆ. ಹೇಗಿದ್ದೇನೆ ತಾನು? ಮಹಾಮೇಘದಂತೆ ಇದ್ದೇನೆ. ಆಕಾಶವನ್ನೇ ಮುಚ್ಚುವಂತೆ ದೊಡ್ಡ ಶರೀರ! ಆಗ ಅವನಿಗೆ ಒಂದು ಅನಿಸಿಕೆ ಬಂತಂತೆ, ‘ಸಮಯ ಬಂತು ನಾನು ಸಣ್ಣವನಾಗಲಿಕ್ಕೆ. ಇಲ್ಲದ ಕುತೂಹಲ ಯಾರಿಗೂ ಬರುವುದು ಬೇಡ. ನಾನು ಇಷ್ಟು ದೊಡ್ಡ ಆಕಾರದಲ್ಲಿದ್ದರೆ ಎಲ್ಲಿಂದಲೂ ಯಾರಿಗೂ ಕಂಡೇನು. ರಾಕ್ಷಸರ ಹಿಂಡು ನನ್ನನ್ನು ಕಂಡರೆ ಕುತೂಹಲವಾಗದೇ ಇದ್ದೀತಾ? ಅವರು ಬಂದು ಗುಂಪುಗೂಡಿ ನನ್ನ ಸ್ವಾಗತಕ್ಕೆ‌ ನಿಂತರೆ ಬಂದ ಕೆಲಸ ಹಾಳಾದೀತು’. ಹನುಮಂತನೇನು ಯುದ್ಧಕ್ಕೆ ಬಂದವನಲ್ಲ, ಸೀತೆಯನ್ನು ಹುಡುಕಲಿಕ್ಕೆ ಬಂದವನು. ಹುಡುಕಬೇಕಾದರೆ ಅದಕ್ಕೆ‌ ರಹಸ್ಯ/ಗೌಪತ್ಯೆ ಬೇಕು‌ ಎಂದು ತೀರ್ಮಾನ ಮಾಡಿ ತನ್ನ ಪರ್ವತಾಕಾರವನ್ನು ಸಹಜ ರೂಪಕ್ಕೆ ತರ್ತಾನೆ. ತನ್ನ ಸಹಜ ರೂಪವನ್ನು ತಾಳಿದವನು ಬಂದಿಳಿದನು ತ್ರಿಕೂಟ ಪರ್ವತದ ಲಂಬಶಿಖರದಲ್ಲಿ. ಲಂಕೆ ತ್ರಿಕೂಟ ಪರ್ವತದ ಮೇಲಿದೆ. ಮುಂದೆ ಲಂಕೆಗೆ ಹೋಗಬೇಕು. ಇದು ಲಂಕೆಯಿಂದ ಹೊರಗಿದೆ. ದ್ವೀಪದಲ್ಲಿ ಪರ್ವತ‌, ಪರ್ವತದಲ್ಲಿ ಲಂಕೆ. ಹಾಗಾಗಿ ಈಗ ಬಂದಿಳಿದಿದ್ದು ಹನುಮಂತ ದ್ವೀಪಕ್ಕೆ, ತ್ರಿಕೂಟ ಪರ್ವತದ ಲಂಬ ಶಿಖರಕ್ಕೆ.

ಹನುಮಂತನು ಮೊದಲು ಮಾಡಿದ ಕೆಲಸವೆಂದರೆ ಲಂಕೆಯೆಡೆಗೆ ತನ್ನ ದೃಷ್ಟಿಯನ್ನು ನೆಟ್ಟಿದ್ದು.
ಒಳಿತಿಗೆ ಕೆಡುಕಿನ ದೃಷ್ಟಿಯಾದರೆ ಅದರ ಮೇಲೆ ಕೆಟ್ಟ ಪರಿಣಾಮವು ಆಗಬಹುದು. ಕೆಡುಕಿಗೆ ಒಳಿತಿನ ದೃಷ್ಟಿಯಾದರೆ ಕೆಡುಕು ಕೆಡುಕಾಗಿ ಉಳಿಯಲಿಕ್ಕೆ ಸಾಧ್ಯವಿಲ್ಲ. ಅಲ್ಲಿ ಒಳಿತಿನ ಆವಿರ್ಭಾವವಾಗಲೇಬೇಕು. ಲಂಕೆಗೆ ಈಗಿರುವ ರೂಪ ಹೋಗಿ ಹೊಸರೂಪ ಬರಲೇ ಬೇಕು. ಸ್ವಸ್ಥನಾಗಿ ಲಂಕೆಯನ್ನು ಅವಲೋಕಿಸ್ತಾನೆ ಹನುಮಂತ.
ಏತನ್ಮಧ್ಯೆ ಹನುಮಂತನು ಇಳಿದ ರಭಸಕ್ಕೆ ಅಲುಗಿದ ವೃಕ್ಷಗಳಿಂದ ಪುಷ್ಪವೃಷ್ಟಿಯಾಯಿತು.

ಶತಯೋಜನ ವಿಸ್ತೀರ್ಣವನ್ನು ಲಂಘಿಸಿದ ಬಳಿಕ ಹನುಮಂತನ ಸ್ಥಿತಿ ಹೇಗಿತ್ತು? ಸುಸ್ತಾಯಿತಾ? ಎಂದರೆ, ಒಂದೇ ಒಂದು ಏದುಸಿರೂ ಬಿಡಲಿಲ್ಲ‌ ಹನುಮಂತ. ಅವನಿಗೆ ಆಯಾಸವೆನಿಸಲೇ ಇಲ್ಲ. ತನಗೆ ತಾನೇ ಹೇಳಿಕೊಂಡ, ‘ಇದೇನು? ಇನ್ನೂ ನೂರು, ಮತ್ತೂ ನೂರು, ಎಷ್ಟೋ ನೂರು ಯೋಜನಗಳನ್ನು ಕೂಡ ನಾನು ಕ್ರಮಿಸಬಲ್ಲೆ’.
ಸರಿ, ಮುಂದೆ ಪ್ರಯಾಣ ಆರಂಭವಾಯಿತು ಹನುಮಂತನದು.

ದುರ್ಗಗಳು ಹಲವಾರು ವಿಧ.
ಜಲದುರ್ಗ, ವನದುರ್ಗ, ಗಿರಿದುರ್ಗ ಮತ್ತು ಕೃತ್ರಿಮ ದುರ್ಗ. ನಾಲ್ಕನ್ನು ಮುಖ್ಯವಾಗಿ ಹೇಳ್ತಾರೆ.
ಅಂದ್ರೆ, ಸುತ್ತಲು ನೀರಿದ್ದರೆ ಆ ನೀರನ್ನು ದಾಟಿ ಶತ್ರು ಬರಬೇಕಾಗ್ತದೆ. ಆ ಕಡೆಯಿಂದ ಶತ್ರು ಬರುವುದು ಸುಲಭವಲ್ಲ. ಯಾಕಂದ್ರೆ ನದಿ ದಾಟಿ ಬರಬೇಕಾಗ್ತದೆ, ಕಾಣ್ತದೆ ಬರುವ ಮೊದಲೇ. ನಾವು ತಯಾರಿಗಳನ್ನು ಮಾಡಿಕೊಳ್ಳಬಹುದು.
ಲಂಕೆಗೆ ಜಲದುರ್ಗ ಹೇಗಿದೆ ಅಂದರೆ ಸುತ್ತ 100 ಯೋಜನದ ಸಮುದ್ರ. ಅದನ್ನು ದಾಟಿ ಬಂದಿದ್ದಾನೆ ಹನುಮ.

ಇನ್ನು ಮುಂದೆ ಇರತಕ್ಕಂತದ್ದು ವನದುರ್ಗ. ದೊಡ್ಡ ಕಾಡಿದೆಯಂತೆ. ಅದೂ ಕೂಡ ಅಷ್ಟೇ ದೂರ ಅಂತೆ. ಈ ಕಾಡೂ ಕೂಡ ದುರ್ಗವೇ. ಶತ್ರು ಕಾಡು ದಾಟಿ ಬರಬೇಕು ಅಂದರೆ ಸುಲಭವಿಲ್ಲ. ಆ ಕಾಡು ನಮಗೆ ಚೆನ್ನಾಗಿ ಗೊತ್ತಿರ್ತದೆ. ಆದರೆ ಶತ್ರುವಿಗೆ ಹೊಸತು. ನಮ್ಮ ಸೈನ್ಯವು ಅಡಗಿರಬಹುದು, ಶತ್ರುವನ್ನು ಆಕ್ರಮಿಸಬಹುದು. ಹಾಗಾಗಿ ವನದುರ್ಗವೂ ಕೂಡ ಒಂದು ದುರ್ಗವೇ.
ಬಳಿಕ‌ ಗಿರಿದುರ್ಗ. ಬೆಟ್ಟದ ಮೇಲೆ ನಗರವನ್ನು ಕಟ್ಟಿದರೆ, ಶತ್ರುಗಳು ಕೆಳಗಿಂದ ಮೇಲೆ ಹತ್ತಿ ಬರಬೇಕು. ನಮಗೆ ಆಕ್ರಮಣ ಬಹಳ ಸುಲಭ. ಮೇಲಿಂದ ಕೆಳಗೆ ಆಯುಧಗಳನ್ನು ಕಳಿಸಿಕೊಟ್ಟರಾಯಿತು. ಯುದ್ಧ ಮಾಡುವುದು ಕೂಡ ಸುಲಭ, ಕೋಟೆಯಿಂದ ಹೊರಗೆ ಬಂದು ಯುದ್ದ ಮಾಡುವುದಾದರೂ ಕೂಡ ಆಗ ನಾವು ಮೇಲಿಂದ ಕೆಳಮುಖವಾಗಿರ್ತೇವೆ, ವೇಗ ಹೆಚ್ಚಿರ್ತದೆ. ಶತ್ರು ಕೆಳಗಿಂದ ಮೇಲೆ ಹತ್ತಿ ಬರಬೇಕು. ಹಾಗಾಗಿ ಬಹಳ ಕಷ್ಟ ಇರ್ತದೆ.
ಹೀಗೆ ಜಲದುರ್ಗವನ್ನು ದಾಟಿ ವನದುರ್ಗವನ್ನು ಹನುಮಂತ ಪ್ರವೇಶ ಮಾಡ್ತಾನೆ. ಮೊದಲು ಹಚ್ಚಹಸಿರು ಹುಲ್ಲುಗಾವಲು, ಬಳಿಕ ಪರಿಮಳದ ಕಾಡು, ದೊಡ್ಡ ದೊಡ್ಡ ಬಂಡೆಗಳುಳ್ಳ ಕಾಡು, ಚಿತ್ರ-ವಿಚಿತ್ರವಾದ ವೃಕ್ಷಗಳು, ವೃಕ್ಷವೈವಿಧ್ಯ, ಹಾಗೆಯೇ ಜಲಾಶಯಗಳು, ಕ್ರೀಡಾಸ್ಥಾನಗಳು, ಉದ್ಯಾನಗಳು.. ಅದೆಲ್ಲ ದಾಟಿ‌ ಹನುಮಂತ ಲಂಕೆಯ ಸಮೀಪಕ್ಕೆ ಬಂದ. ಕೋಟೆಯ ಹೊರಗೆ ಸುತ್ತ ಕಂದಕವಿದೆ.

ಲಂಕೆಯ ಸುರಕ್ಷತೆಯನ್ನು ಹಲವು ಪಟ್ಟು ಹೆಚ್ಚು ಮಾಡಲಾಗಿದೆ. ಶತಯೋಜನದ ಸಮುದ್ರ, ಶತಯೋಜನದ ಕಾನನ, ಶತಯೋಜನದ ಪರ್ವತ ಇಷ್ಟೆಲ್ಲದರ ಮಧ್ಯೆಯೂ ಇನ್ನೂ ಹೆಚ್ಚಿದೆ ಸುರಕ್ಷತೆ. ಲಂಕೆಯ ಸುತ್ತ ಕಾಮರೂಪಿಗಳಾದ ರಾಕ್ಷಸರು ಗಸ್ತು ತಿರುಗ್ತಾ ಇದಾರೆ.

ಮರದ ಮರೆಯಲ್ಲಿ ನಿಂತು ಪ್ರಾಕಾರವನ್ನ ನೋಡ್ತಾನೆ ಹನುಮಂತ. ಬಂಗಾರದ ಪ್ರಾಕಾರ. ಗೃಹಗಳನ್ನು ಕಾಣ್ತಾನೆ. ಗೃಹಗಳು ಗ್ರಹಗಳಂತೆ ಕಾಣುತ್ತಿದ್ದವು. ಅಷ್ಟು ದೊಡ್ಡದಾಗಿ. ಹೂವುಗಳು ಚೆಲ್ಲಿದ ರಾಜಮಾರ್ಗವು ಎದ್ದು ತೋರುತ್ತಿತ್ತು. ನೂರಾರು ಗೋಪುರಗಳು, ಪತಾಕಾ ಧ್ವಜಗಳು, ಬಂಗಾರದ ಬಾಗಿಲುಗಳು, ಅದರಲ್ಲಿ ಬಳ್ಳಿಗಳ ಕೆತ್ತನೆ. ದಿವಿಯಲ್ಲಿಯ ದೇವಪುರಿಯಂತೆ ಲಂಕೆಯು ಎತ್ತರದಲ್ಲಿ ಹನುಮಂತನಿಗೆ ಗೋಚರಿಸಿತು. ತ್ರಿಕೂಟ ಶಿಖರದ ನೆತ್ತಿಯಲ್ಲಿ ಬೆಳ್ಳಿಭವನಗಳು, ಹನುಮಂತನ ಕಣ್ಣಿಗೆ ಆ ನಗರವು ಆಕಾಶದಲ್ಲಿದ್ದಂತೆ ಗೋಚರಿಸಿತಂತೆ. ವಿಶ್ವಕರ್ಮ ನಿರ್ಮಿಸಿದ ನಗರಿಯನ್ನು ರಾವಣ ಪಾಲಿಸ್ತಿದಾನೆ. ಇಡೀ ನಗರವೇ ಸ್ತ್ರೀಯಂತೆ ಗೋಚರಿಸಿತು ಹನುಮನಿಗೆ.

ವಿಶ್ವಕರ್ಮ ಮನಸ್ಸಿನಿಂದಲೇ ಮಾಡಿದಂತಿತ್ತು. ದಕ್ಷಿಣದಿಂದ ಬಂದ ಹನುಮಂತ ಲಂಕೆಯ ಉತ್ತರ ದ್ವಾರದ ಬಳಿ ಬಂದು ನೋಡ್ತಾನೆ. ಎತ್ತರವನ್ನು ಕಂಡಾಗ ಕೈಲಾಸದಂತೆ ಅನ್ನಿಸಿತು ಹನುಮನಿಗೆ. ಒಳಗೆ ಘೋರ ರಾಕ್ಷಸರು ತುಂಬಿದಾರೆ ಮಹಾಸರ್ಪಗಳಿಂದ ಆವೃತವಾದ ಭೋಗವತಿ ನಗರಿಯಂತೆ. ಚಿಂತನೆಗೆ ಮೀರಿದ್ದು, ಬಹಳ ಸುಂದರವಾಗಿ ನಿರ್ಮಾಣವಾಗಿದೆ ಲಂಕೆ. ಒಂದು ಕಾಲದಲ್ಲಿ ಕುಬೇರನಾಳಿದ ನಗರಿ ಅದು. ನಿಧಿಯುಳ್ಳ ಗುಹೆಯನ್ನು ಸರ್ಪಗಳು ಕಾದಂತೆ, ಕೋರೆದಾಡೆಗಳು, ಕೈಯಲ್ಲಿ ಶೂಲಪಟ್ಟಿಶಗಳು ಇರುವ ಘೋರರೂಪಿಗಳು ಲಂಕೆಯನ್ನು ಒಳಗಿನಿಂದಲೂ ಹೊರಗಿನಿಂದಲೂ ಕಾಯ್ತಾ ಇದಾರೆ. ಹನುಮಂತನಿಗೂ ಕೂಡ ಒಮ್ಮೆ ದಿಗಿಲಾಯಿತಂತೆ. ಒಂದು ವೇಳೆ ಕಪಿಸೇನೆ ಇಲ್ಲಿಗೆ ಬಂದರೆ ಮಾಡುವುದಾದರೂ ಏನು? ಸಾಗರವನ್ನು ದಾಟಿ ಬರಲಾಗದು. ಕಪಿವೀರರು ಇಲ್ಲಿ ಬಂದರೂ ಕೂಡ ಅದು ನಿರರ್ಥಕ. ಯಾಕೆಂದರೆ ಲಂಕೆಯನ್ನು ಯುದ್ಧದಿಂದ ಗೆಲ್ಲಲು ಸಾಧ್ಯವಿಲ್ಲ. ದೇವತೆಗಳು ಬಂದರೂ ಕೂಡ ಯುದ್ಧ ಮಾಡಿ ಗೆಲ್ಲಲು ಸಾಧ್ಯವಿಲ್ಲದ ನಗರಿಯಿದು ಎಂದು ಹನುಮಂತನಿಗೆ ಅನ್ನಿಸಿತು. ಒಂದು ವೇಳೆ ಈ ವಿಷಮವಾದ ರಾವಣ ಪಾಲಿತ ಲಂಕೆಗೆ ರಾಮನು ಬಂದು ತಲುಪಿಯಾದರೂ ಏನು ಮಾಡಲಿಕ್ಕೆ ಸಾಧ್ಯ? ಎಂದು ಹನುಮನಿಗೇ ಅನ್ನಿಸಿತಂತೆ. ಸಾಮ, ದಾನ, ಭೇದ, ದಂಡ ಇವು ನಾಲ್ಕು ಉಪಾಯಗಳು. ಮೊದಲ ಮೂರು ಸಾಧ್ಯವೇ ಇಲ್ಲ, ಕೊನೆಯ ಭೇದ ಅಂದರೆ ಯುದ್ಧ. ಪೆಟ್ಟಿಗೆ ಮೀರಿದ್ದು ಲಂಕೆ ಎಂದು ಹನುಮನಿಗೆ ಕ್ಷಣಕಾಲ ಅನ್ನಿಸಿತು. ನಾಲ್ಕೇ ನಾಲ್ಕು ವಾನರರು ಇಲ್ಲಿಗೆ ಬಂದು ತಲುಪಿಯಾರು. ಅಂಗದ, ನೀಲ, ನಾನು ಮತ್ತು ರಾಜ ಸುಗ್ರೀವ. ಈ ನಾಲ್ವರು ಹೇಗಾದರೂ ಬಂದು ತಲುಪಿಯಾರು.

ಚಿಂತೆಯನ್ನು ಒಮ್ಮೆ ಬದಿಗಿಟ್ಟು ಮೊದಲು ಸೀತೆ ಇದ್ದಾಳೋ ಇಲ್ಲವೋ ಎಂದು ತಿಳಿದುಕೊಳ್ಳುತ್ತೇನೆ ಎಂದು ಯೋಚಿಸಿದ. ಹಾಗೆ ಗಿರಿಶೃಂಗದಲ್ಲಿ ಕುಳಿತು ಹನುಮಂತ ರಾಮನ ಅಭ್ಯುದಯವನ್ನು ಚಿಂತನೆ ಮಾಡ್ತಾನೆ. ನಾನು ಏನು ಮಾಡಿದರೆ ರಾಮ ಕಾರ್ಯ ಸಾಧಿತವಾದೀತು ಎಂದು ಆಲೋಚಿಸ್ತಾನೆ. ಸೀತೆಯನ್ನು ಹುಡುಕಬೇಕು ನಾನು ಆದರೆ ಈ ರೂಪದಿಂದ ಲಂಕೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ. ಲಂಕೆಗೆ ಕ್ರೂರವಾದ ಬಲಶಾಲಿಗಳಾದ ರಾಕ್ಷಸರ ಭದ್ರವಾದ ಕಾವಲಿದೆ. ಆಲೋಚಿಸ್ತಾನೆ ಹನುಮಂತ. ಉಗ್ರರು, ಮಹಾಬಲಶಾಲಿಗಳು, ಮಹಾವೀರರು, ಬಲವಂತರಾದ ಈ ರಾಕ್ಷಸರನ್ನು ನಾನು ವಂಚಿಸ್ತೇನೆ. ಹೇಗಿರಬೇಕು ನನ್ನ ರೂಪ? ಕಾಣುವ, ಕಾಣದ ರೂಪದಿಂದ ಲಂಕೆಯಲ್ಲಿ ಕಾರ್ಯಸಾಧನೆ ಮಾಡಬೇಕು ಎಂದು ನಿಶ್ಚಯಿಸಿ ಮತ್ತೊಮ್ಮೆ ಲಂಕೆಯನ್ನು ನೋಡ್ತಾನೆ. ದೇವದಾನವರು ಕೂಡಿ ಬಂದರೂ ಲಂಕೆಯನ್ನು ಎದುರಿಸಲು ಸಾಧ್ಯವಿಲ್ಲ. ನಿಟ್ಟುಸಿರು ಬಂತು ಹನುಮಂತನಿಗೆ. ದುರಾತ್ಮಕ ರಾವಣನ ಕಣ್ಣಿಗೆ ಕಾಣದೆ ಯಾವ ಉಪಾಯದಿಂದ ಸೀತೆಯನ್ನು ಕಾಣಲಿ? ಈ ಕಾರ್ಯವು ಹಾಳಾಗಬಾರದು. ಒಬ್ಬಳೇ ಆದ ಸೀತೆಯನ್ನು ಒಬ್ಬನೇ ಆಗಿ ನಾನು ಕಾಣಬೇಕು. ಹೇಗೆ ಸಾಧ್ಯ? ಬಹಳ ಜವಾಬ್ದಾರಿ ಇದೆ ನನಗೆ. ರಾಮದೂತನಾಗಿ ನಾನು ಕಾರ್ಯನಿರ್ವಹಣೆ ಮಾಡಬೇಕು.

ದೂತನು ಸಮರ್ಪಕವಾಗಿ ಕಾರ್ಯ ಮಾಡದಿದ್ದರೆ ಅಂತಹ ದೂತನಿಂದ ಕಾರ್ಯವೇ ಹಾಳಾಗಿ ಹೋಗ್ತದೆ.

ಒಂದು ಒಳ್ಳೆಯ ನಿಶ್ಚಯವನ್ನೇ ಮಾಡಿದರೂ ನಿಜವಾಗಿ ದಡ್ಡ, ತನ್ನನ್ನು ತಾನು ಬುದ್ಧಿವಂತ ಎಂದುಕೊಂಡಿದ್ದಾನೆ ಅಂತಹ ಮೂರ್ಖದೂತ ಕಾರ್ಯವನ್ನು ಹಾಳು ಮಾಡ್ತಾನೆ. ಅಂತಹ ಪಟ್ಟಿಗೆ ನಾನು ಸೇರಬಾರದಲ್ಲ. ರಾಮ ಕಾರ್ಯ ಸಾಧಿತವಾದೀತು ಹೇಗೆ? ಹಾಳಾಗದಿರುವದು ಹೇಗೆ? ಇಷ್ಟು ದೊಡ್ಡ ಸಾಗರೋಲ್ಲಂಘನದ ಮಹತ್ಕಾರ್ಯಗಳು ವ್ಯರ್ಥವಾಗದಿರುವುದು ಹೇಗೆ? ಒಂದು ವೇಳೆ ರಾಕ್ಷಸರು ನನ್ನನ್ನು ನೋಡಿಬಿಟ್ಟರು ಎಂದಾದರೆ, ನಾನಾರೆಂದು ಅವರಿಗೆ ತಿಳಿದರೆ ರಾವಣನನ್ನು ಸಂಹರಿಸುವ ರಾಮಕಾರ್ಯವು ಹಾಳಾದೀತು.

ಏನು ಮಾಡಲಿ? ಹನುಮಂತ ಹೇಳುತ್ತಾನೆ. ರಾಕ್ಷಸನ ರೂಪವನ್ನು ತಾಳಿ ಹೋದರೂ ಕೂಡಾ ಸಿಕ್ಕಿ ಬೀಳಬಹುದು ಇಲ್ಲಿ ನಾನು. ಇಲ್ಲಿ ವಾಯು ಕೂಡ ಅಜ್ಞಾತವಾಗಿ ಸಂಚರಿಸುವುದಕ್ಕೆ ಸಾಧ್ಯವಿಲ್ಲ. ಅಂತ ಭಯಂಕರವಾದ ಊರು. ಬಲಿಷ್ಠ ರಾಕ್ಷಸರಿಗೆ ಎಲ್ಲಾ ತಿಳಿದಿದೆ. ಹೀಗೆಯೇ ಇದ್ದರೆ ನಾನೂ ಉಳಿಯುವುದಿಲ್ಲ, ರಾಮಕಾರ್ಯವೂ ಆಗುವುದಿಲ್ಲ. ಹಾಗಾಗಿ ನಾನು ಸಣ್ಣ ರೂಪವನ್ನು ತಾಳಿ ಹೋಗುತ್ತೇನೆ. ಹಗಲು ಕಳೆದು ರಾತ್ರಿಯಾಗಲಿ. ರಾತ್ರಿಯಾದ ಮೇಲೆ ಸಣ್ಣ ಕಪಿಯಾಗಿ ರಾಮಕಾರ್ಯಕ್ಕಾಗಿ ಲಂಕೆಯನ್ನು ಪ್ರವೇಶಿಸುತ್ತೇನೆ. ಅಲ್ಲಿ ಹೋಗಿ ಒಂದೊಂದೇ ಮನೆಯನ್ನು ಹುಡುಕುತ್ತೇನೆ ಎಂದು ತೀರ್ಮಾನಿಸಿ ಸೂರ್ಯಾಸ್ತವನ್ನು ಪ್ರತೀಕ್ಷೆ ಮಾಡಿದನು ಹನುಮಂತ. ಅವನ ಹೃದಯದಲ್ಲಿ ವೈದೇಹಿಯ ದರ್ಶನದ ಉತ್ಸುಕತೆ.
ಸೂರ್ಯಾಸ್ತವಾಯಿತು. ಒಂದು ಬೆಕ್ಕಿನಷ್ಟು ಚಿಕ್ಕ ಗಾತ್ರದ ಕಪಿ ರೂಪವನ್ನು ತಾಳಿದ. ಲಂಕೆಯೆಡೆಗೆ ಹಾರಿದ. ಲಂಕೆ ಗೋಚರಿಸಿತು. ರಮ್ಯವಾದ ನಗರಿ ಅದು.ರಸ್ತೆಗಳ ಮೂಲಕವಾಗಿ ಚೆನ್ನಾಗಿ ವಿಂಗಡಿಸಲ್ಪಟ್ಟಿದೆ. ಆ ನಗರದ ಒಳಗೆ ಬೆಳ್ಳಿಯ, ಬಂಗಾರದ ಸ್ಥಂಭಗಳು. ಸ್ವರ್ಣಮಯವಾದ ಗವಾಕ್ಷಗಳು. ಏಳು-ಎಂಟು ಉಪ್ಪರಿಗೆಯ ಮನೆಗಳು. ಸ್ಫಟಿಕದ ನೆಲ. ಅದಕ್ಕೆ ಬಂಗಾರದ ಅಲಂಕಾರ. ಮುತ್ತಿನ ಅಲಂಕಾರದ ಕಿಟಕಿಗಳು. ಕಾಂಚನದ ದ್ವಾರಗಳು. ಮೊದಲೇ ಬೆಳಗುವ ಲಂಕೆಯನ್ನು ಬೆಳಗುವ ಲೋಹಗಳು ಬೆಳಗಿಸಿವೆ. ಕಲ್ಪನೆ ಮಾಡಲಾಗದ ಅದ್ಭುತಾಕಾರ. ಲಂಕೆಯನ್ನು ಕಂಡ ಹನುಮಂತನಿಗೆ ಒಟ್ಟಿಗೆ ವಿಷಾದ ಮತ್ತು ಹರ್ಷವಾಯಿತು. ಹರ್ಷವೇಕೆಂದರೆ ಅಲ್ಲಿ ಸೀತೆಯಿದ್ದಾಳೆಂದು. ಸೀತೆಯ ದುಃಖಕ್ಕಾಗಿ ವಿಷಾದ. ನಗರದ ಸೊಬಗು ನೋಡಿ ಹರ್ಷವಾಯಿತು. ಅದು ಸೀತೆಯ ಪಾಲಿಗೆ ಬಂಗಾರದ ಪಂಜರ ಹಾಗಾಗಿ ವಿಷಾದ. ಚಂದ್ರನು ಹನುಮಂತನಿಗೆ ಸಹಾಯ ಮಾಡಿದ. ತಾರಾಗಣಗಳ ನಡುವೆ ಶೋಭಿಸುವ ಚಂದ್ರನು ಬೆಳದಿಂಗಳನ್ನು ಚೆಲ್ಲಿ ಹನುಮಂತನಿಗೆ ಹುಡುಕಲು ಸಹಾಯ ಮಾಡಿದನು. ಚಂದ್ರ ಶಂಖದಂತೆ, ಕ್ಷೀರದಂತೆ ಇದ್ದಾನೆ. ಆಕಾಶದಲ್ಲಿ ಚಂದ್ರ ಸರೋವರದಲ್ಲಿ ಈಜುವ ಹಂಸದಂತೆ ಕಾಣಿಸುತ್ತಿದ್ದಾನೆ. ಹೀಗೆ ಆ ಮಹಾವರನು ರಾತ್ರಿಯಲ್ಲಿ ಲಂಕೆಯನ್ನು ಪ್ರವೇಶಿಸುತ್ತಿದ್ದಂತೆಯೇ ಅದು ವಿಟಪಾವತಿಯಂತೆ (ಕುಬೇರನ ನಗರಿ) ಕಂಡಿತು. ತುಂಬಾ ರಾಕ್ಷಸರು ಅಲ್ಲಿದ್ದರು. ಹಾಗಾಗಿ ದೊಡ್ಡ ಸೈನ್ಯದಿಂದ ಕೂಡಿದ ವಿಟಪಾವತಿಯಂತೆ ಇತ್ತು ಅದು. ಮನೋಹರವಾಗಿರುವ ದ್ವಾರಗಳು,ತೋರಣಗಳು ನಾಗನಗರಿಯಾದ ಭೋಗವತಿಯಂತೆ, ಅಮರಾವತಿಯಂತೆ ಇತ್ತು. ಪತಾಕೆಗಳಿಗೆ ಕಿಂಕಿಣಿಯನ್ನು ಕಟ್ಟಿದ್ದರು. ಹನುಮಂತನಿಗೆ ಅದನ್ನು ಕಂಡು ಸಂತೋಷವಾಯಿತು.
ಪ್ರಾಕಾರವನ್ನು ಸಮೀಪಿಸಿದ. ಅವನಿಗೆ ಬಾಗಿಲಿನ ಮೂಲಕ ಒಳಹೋಗುವ ಮನಸ್ಸಿಲ್ಲ. ಕೋಟೆಯನ್ನು ಹಾರಿಹೋಗಬೇಕೆಂದು. ಇದಕ್ಕೆ ಕಾರಣವಿದೆ. ಶತ್ರುವಿನ ನಗರವನ್ನು ದ್ವಾರದ ಮೂಲಕ ಪ್ರವೇಶ ಮಾಡಬಾರದು. ಲಂಕೆಯನ್ನು ಕಂಡು ವಿಸ್ಮಯವಾಯಿತು ಹನುಮಂತನಿಗೆ. ಎಲ್ಲಿ ನೋಡಿದರೂ ಅದ್ಭುತ. ಚಿನ್ನದ ದ್ವಾರಗಳು, ವಜ್ರ, ಮುತ್ತುಗಳಿಂದ ಮಾಡಿದ ನೆಲ. ಅಪರಂಜಿಯ ಆನೆಗಳು. ಸ್ಫಟಿಕದ ಧೂಳು ಏಳುತ್ತಿತ್ತು ಅಲ್ಲಿ. ಆಕಾಶಕ್ಕೆ ನೆಗೆದಂತೆ ತೋರುತ್ತಿದ್ದ ಭವನಗಳು. ಅಲ್ಲಿ ಕ್ರೌಂಚಗಳು, ರಾಜಹಂಸಗಳು, ನವಿಲುಗಳು ಎಲ್ಲಾ ಇದ್ದವು. ಮಂಗಲವಾದ್ಯಗಳ ನಾದ ಇಡೀ ನಗರದಲ್ಲಿ ಕೇಳಿ ಬರುತ್ತಿತ್ತು. ಹನುಮಂತ ನೋಡಿ ಸಂತೋಷಪಟ್ಟನು. ಮತ್ತೆ ಆಲೋಚಿಸಿದ. ಇಲ್ಲಿ ರಾವಣನ ಸೈನ್ಯ ಕಾಯುತ್ತಿದೆ. ಸುಲಭವಾಗಿ ಯಾರೂ ಬರುವಂತಿಲ್ಲ. ಯಾರೆಲ್ಲ ಬರಬಹುದು ಎಂದರೆ ಕುಮುದ ಎಂಬ ಮಹಾಕಪಿ, ಅಂಗದ, ಸುಷೇಣ, ಅಶ್ವಿನೀ ದೇವತೆಗಳ ಮಕ್ಕಳು, ಸೂರ್ಯನ ಮಗ ಸುಗ್ರೀವ, ಕುಶಪರ್ವ, ಜಾಂಬವಂತ, ಕೇತುಮಾಲ, ನಾನು. ಕುಳಿತು ರಾಮ-ಲಕ್ಷ್ಮಣರ ಪರಾಕ್ರಮದ ಬಗ್ಗೆ ಚಿಂತಿಸಿದ. ತೃಪ್ತಿಯಾಯಿತು ಅವನಿಗೆ. ಮುಗಿಯಿತು ಕಾರ್ಯ ಎನ್ನಿಸಿತು. ಲಂಕೆ ಅವನಿಗೆ ಸ್ತ್ರೀಯಂತೆ ಕಂಡಳು. ಬೆಳಗುವ ಮಹಾಭವನಗಳು, ಅಲ್ಲಿಯ ದೀಪಗಳು ಲಂಕೆಯ ಕತ್ತಲನ್ನು ಓಡಿಸಿದ್ದವು.

ಹೀಗೆ ಹನುಮಂತ ಲಂಕೆಯನ್ನು ನೋಡಿದ. ಲಂಕೆಯೂ ಅವನನ್ನು ನೋಡಿತು. ಲಂಕೆಯಲ್ಲಿ ಯಾರೂ ನೋಡಲಿಲ್ಲ. ಲಂಕೆ ನೋಡಿತು. ಮೀನು ಮಾರುವವಳೊಬ್ಬಳಿಗೆ ಹೂವಿನ ಪರಿಮಳದಿಂದ ನಿದ್ದೆ ಬರದಂತೆ, ಲಂಕೆಗೆ ರಾಕ್ಷಸರ ಸಹವಾಸ ಮಾಡಿ, ಇದು ಹೊಸಸ್ಪರ್ಶ. ಹಾಗಾಗಿ ಎಚ್ಚರಗೊಂಡಳು. ಎದ್ದು ಬಂದಳು. ವಿಕಾರವಾದ ಮುಖ. ನಿಜವಾಗಿ ವಿಶ್ವಕರ್ಮ ಕಟ್ಟಿದ ಲಂಕೆ ಚೆಂದವೇ. ಕುಬೇರನಿರುವಾಗ ದೇವತೆಯೇ. ಆದರೆ ಈಗ ಅಲ್ಲಿ ಆಳುವವನಿಂದ ಆಕೆ ವಿಕೃತವಾಗಿದ್ದಾಳೆ. ಹನುಮಂತನ ಮುಂದೆ ದೊಡ್ಡ ಘರ್ಜನೆಯೊಡನೆ ಪ್ರಕಟವಾದಳು ಲಂಕೆ. ಅವನನ್ನು ಗದರಿದಳು, ಏಕೆ ಬಂದೆ ಇಲ್ಲಿಗೆ ಎಂದು. ಪ್ರಾಣಹೋಗುವ ಮುನ್ನ ಯಾವ ಕಾರ್ಯಕ್ಕೆ ಬಂದೆಯೆಂದು ಹೇಳು. ರಾವಣನ ರಾಕ್ಷಸ ಸೈನ್ಯ ಎಲ್ಲ ಕಡೆಯಿಂದ ಲಂಕೆಯನ್ನು ಕಾಯುತ್ತಿದೆ. ನೀನು ಲಂಕೆಯನ್ನು ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಗದರಿದಾಗ ಹನುಮಂತ ಸೌಜನ್ಯದಿಂದ ಮಾತನಾಡಿದ. ನೀನು ಕೇಳಿದ್ದನ್ನು ಈಗ ಹೇಳುತ್ತೇನೆ. ಆದರೆ ನೀನ್ಯಾರು? ಕಣ್ಣು ವಿಕಾರವಾಗಿದೆ. ಊರಿನ ಬಾಗಿಲಿನಲ್ಲಿ ಏಕಿದ್ದೀಯ? ಬೈಯ್ಯೋದು ಯಾಕೆ ನನ್ನನ್ನು?
ಉಪಾಯವಾಗಿ ಹನುಮಂತ ತನ್ನದೊಂದೂ ಗುಟ್ಟು ಬಿಟ್ಟುಕೊಡದೇ, ನೀನ್ಯಾರು? ಎಂದು ತಿಳಿಯೋ ಪ್ರಯತ್ನ ಮಾಡ್ತಾನೆ ಹೊರತು, ಏನೇನೂ ಹೇಳಲಿಲ್ಲ ತನ್ನ ವಿಷಯವನ್ನು. ಎಷ್ಟು ಜಾಣ್ಮೆ ನೋಡಿ. ಇನ್ನೇನು ಹೇಳಬೇಕು, ಹೇಳ್ದೆ ಅಂತ ಹೇಳಿ ಹನುಮಂತ ನಿನ್ನ ಕಣ್ಣು ಯಾಕೆ ಹೀಗಿದೆ, ಇಲ್ಲಿ ಯಾಕೆ ಬಂದು ನಿಂತುಕೊಂಡೆ, ಯಾರು ನೀನು ತುಂಬ ಭಯವಾಗ್ತಾ ಇದೆಯಲ್ಲ….! ಎಂದು ಅವಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡ್ತಾನೆ. ಪಾಪ, ಅದಕ್ಕೆ ಗೊತ್ತಾಗಲಿಲ್ಲ…! ಹನುಮಂತ ತನ್ನ ವಿಷಯವನ್ನು ತಿಳಿದುಕೊಳ್ತಾ ಇದ್ದಾನೆ ಅಂತ ಅರ್ಥ ಆಗಲಿಲ್ಲ ಅವಳಿಗೆ. ರಾಮದೂತ ಅವನು ಹನುಮಂತ. ಉಪಾಯವಾಗಿ ಲಂಕೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ. ಅವಳಿಗೆ ಸಿಟ್ಟು ಬಂದಿದೆ. ಪರಮಕ್ರೋಧದಿಂದ ತನ್ನ ಪರಿಚಯವನ್ನು ಹೇಳಿದಳು. ರಾವಣನ ಆಣತಿಯನ್ನು ಪಾಲಿಸುವವಳು ನಾನು. ಈ ನಗರವನ್ನು ರಕ್ಷಿಸುವವಳು ನಾನು. ನನ್ನನ್ನು ಅವಗಣಿಸಿ, ಈ ನಗರವನ್ನು ಪ್ರವೇಶ ಮಾಡಲು ಸಾಧ್ಯವಿಲ್ಲ. ನಾನಿದ್ದೇನೆ ಇಲ್ಲಿ, ನನ್ನ ಕೈಯಲ್ಲಿ ಪೆಟ್ಟು ತಿಂದು, ಪ್ರಾಣ ಬಿಡ್ತೀಯಾ ನೀನು…! ಆಯಿತು ಎಂದು ನೀನು ಯಾರು ಎಂದು ಮತ್ತೆ ಹನುಮಂತ ಕೇಳಿದಾಗ ಅವಳು, ನಾನೇ ಲಂಕೆ. ಸ್ವಯಂ ಲಂಕಾನಗರಿ ನಾನು. ಈ ನಗರದ ಒಳಹೊರಗನ್ನು ಕಾಪಾಡುವವಳು ನಾನು.

ಹನುಮಂತ ಲೆಕ್ಕ ಹಾಕ್ತಾ ಇದಾನೆ, ಎಷ್ಟು ಪೆಟ್ಟು ಬೇಕಾಗಬಹುದು… ಇವಳು ದೊಡ್ಡಕ್ಕೆ ಬೊಬ್ಬೆ ಹಾಕಿದರೆ ಇನ್ನೆಷ್ಟು ಜನ ಬರಬಹುದು… ಇಲ್ಲಿಯೇ ಮುಗೀಬೇಕಾಗಿದೆ ವಿಷಯ. ವಿಚಲಿತನಾಗಲಿಲ್ಲ ಹನುಮ, ಮಹಾಪರ್ವತದಂತೆ ಸ್ಥಿರವಾಗಿದ್ದ. ವಿಕೃತ ಸ್ತ್ರೀರೂಪ. ಹನುಮಂತ ಹೀಗೆಂದನು, ನಾನು ಲಂಕೆಯನ್ನು ನೋಡಲೆಂದು ಬಂದೆ. ಲಂಕೆಯ ಪ್ರಾಕಾರ ಏನು ಚೆಂದ, ಎಷ್ಟೆಲ್ಲ ಭವನಗಳಿವೆ ಇಲ್ಲಿ. ಪ್ರಪಂಚದಲ್ಲೇ ಇಲ್ಲ, ಅಷ್ಟು ಚೆನ್ನಾಗಿದೆ. ಹಾಗಾಗಿ ನೋಡಲೆಂದು ಬಂದೆ. ತುಂಬ ಕುತೂಹಲ ನನಗೆ. ಲಂಕೆಯ ವನಗಳು, ಉಪವನಗಳು, ಕಾನನಗಳು ಎಲ್ಲವನ್ನೂ ನೋಡಬೇಕು ನನಗೆ. ಸುಳ್ಳಾ ಸುಳ್ಳಲ್ಲ. ವಿಷಯವನ್ನೂ ಗೊತ್ತುಪಡಿಸಲಿಲ್ಲ. ಜಾಣ್ಮೆ ಅಂದರೆ ಇದು. ಅಂದಾಗ ಲಂಕೆ ಒರಟಾಗಿ ಹೇಳಿದಳಂತೆ. ನನ್ನನ್ನು ಗೆಲ್ಲದೇ, ನೀನು ರಾಕ್ಷಸೇಶ್ವರನಾದ ರಾವಣನ ನಗರವನ್ನು ಪ್ರವೇಶಿಸಲಿಕ್ಕೆ ಸಾಧ್ಯವಿಲ್ಲ, ವಾನರಾಧಮ ಅಂದಳಂತೆ. ಅಂದರೆ ಮೊದಲು ಅವಳನ್ನು ಗೆಲ್ಲಬೇಕು ಎಂದರ್ಥ. ಆದರೆ ಹನುಮಂತ ಮಾತ್ರ ಪರಮವಿನೀತ, ಸೌಜನ್ಯಮೂರ್ತಿ. ಅವಳು ವಾನರಾಧಮ ಅಂದರೆ, ಇವನು ಭದ್ರೆ ಅಂದನಂತೆ. ನೋಡಿ ಹೋಗ್ತೇನೆ ಅಷ್ಟೇ. ಇಲ್ಲಿಯೇ ಇರುವುದಿಲ್ಲ. ಬಂದು ಹಾಗೇ ಹೋಗ್ತೇನೆ ಅಂದನಂತೆ ಹನುಮಂತ. ಒಂದು ಮಾತೂ ಆಡದೇ, ಒಂದು ದೊಡ್ಡ ಪೆಟ್ಟು ಕೊಟ್ಟಳಂತೆ ಹನುಮನಿಗೆ ಹಾಗೂ ಸ್ವಲ್ಪ ಘರ್ಜಿಸಿದಳಂತೆ. ಸಿಟ್ಟುಬಂದಿತು ಹನುಮಂತನಿಗೆ. ಅವನೂ ಘರ್ಜಿಸಿದನಂತೆ. ಹನುಮಂತ ಅವಳಿಗೆ ಗುದ್ದಬೇಕು ಅಂದುಕೊಂಡನಂತೆ, ಆದರೆ ಯಾವ ಕೈಯಲ್ಲಿ ಗುದ್ದಲಿ ಎಂದು ಚಿಂತೆಯಾಯಿತಂತೆ. ಬಲಗೈ ಬೇಡ, ಎಡಗೈ ಮುಷ್ಟಿ ಕಟ್ಟಿದನು ಕೋಪಗೊಂಡವನು. ವೇಗವನ್ನು ಕಡಿಮೆ ಮಾಡಿ, ಹೆಣ್ಣು ಎಂಬ ಕಾರಣಕ್ಕೆ ಮೆಲ್ಲನೆ ಗುದ್ದಿದನು. ಅದನ್ನು ತಾಳಲಾರದೇ, ಬಿದ್ದಳು ಲಂಕೆ. ಅವಳು ಬಿದ್ದ ಮೇಲೆ ಪ್ರಾಜ್ಞನಾದ ಹನುಮಂತ ಗುದ್ದಬಾರದು ಎಂದುಕೊಂಡನಂತೆ ಏಕೆಂದರೆ ಅವಳು ಸ್ತ್ರೀ ಎನ್ನುವ ಕಾರಣಕ್ಕೆ.

ಸ್ತ್ರೀಯರ ಮೇಲೆ ಕ್ರೌರ್ಯವನ್ನು ತೋರಲೇಬಾರದು. ರಾಕ್ಷಸಿಯಾದರೂ ಸೌಜನ್ಯದಿಂದ ಮಾತನಾಡಿದಾನೆ. ಸ್ತ್ರೀತ್ವಕ್ಕೆ ದೊಡ್ಡ ಮರ್ಯಾದೆ ಕೊಟ್ಟಿದಾನೆ. ಲಂಕೆಯ ಗರ್ವ ಇಳಿದಿದೆ. ಮೊರೆಯಿಟ್ಟು ಪ್ರಾರ್ಥಿಸಿದಳಂತೆ ಲಂಕೆ, ಪ್ರಸನ್ನನಾಗು, ಕಾಪಾಡು. ಸತ್ವವುಳ್ಳವರು ಸಮಾಜದ ನಿಯಮವನ್ನು ಮೀರುವುದಿಲ್ಲ. ಶರಣಾಗತರನ್ನು ಕೊಲ್ಲುವುದಿಲ್ಲ. ಕೊಲ್ಲಬೇಡ ಎಂದಳು ಲಂಕೆ. ನೀನು ವಿಕ್ರಮದಿಂದ ನನ್ನನ್ನು ಗೆದ್ದೆ ಎಂದು ಹೇಳಿ ಒಂದು ಕಥೆಯನ್ನು ಹೇಳಿದಳಂತೆ. ಬ್ರಹ್ಮನ ವರದಾನ, ಒಂದು ದಿನ ವಾನರನೊಬ್ಬನು ಬಂದು ನಿನ್ನನ್ನು ಬಂಧಿಸುತ್ತಾನೆ. ಆ ದಿನ ರಾವಣನಿಗೆ ನಾಶಬಂತು, ರಾವಣನ, ರಾಕ್ಷಸರ ಸಂಹಾರ ಆರಂಭವಾಗುವುದೆಂದು ನೀನು ತಿಳಿ ಎಂದು ಬ್ರಹ್ಮ ಕೊಟ್ಟ ವರ ನೆನಪಾಯಿತು ಲಂಕೆಗೆ. ಇದು ಸತ್ಯ. ನಾನು ಕಾಯುತ್ತಿದ್ದ ಆ ಶುಭ ಸಮಯ ಈಗ ಬಂತು. ಬ್ರಹ್ಮನ ಮಾತು ಸುಳ್ಳಾಗದು. ರಾವಣನ ಸರ್ವನಾಶ ಸಿದ್ಧ. ಇಲ್ಲಿ ಗಮನಿಸಬೇಕಾದದ್ದು, ರಾವಣನ ಆಳ್ವಿಕೆಯಲ್ಲಿ ಲಂಕೆ ಸುಖವಾಗಿರಲಿಲ್ಲ. ಒಳ್ಳೆಯ ಸಮಯ ಬಂತು ಎಂದು ಲಂಕೆ ಹೇಳಿದಳು. ಲಂಕೆಯೇ ಬ್ರಹ್ಮನನ್ನು ಕುರಿತು ರಾವಣನ ಹಾಗೂ ರಾಕ್ಷಸರ ನಾಶಕ್ಕೆ ತಪಸ್ಸು ಮಾಡಿದ್ದಳು. ಬ್ರಹ್ಮ ವರವನ್ನೂ ಕೊಟ್ಟಿದಾನೆ. ದುರಾತ್ಮ ಎಂದಳು ರಾವಣನಿಗೆ. ಲಂಕೆಗೆ ಹನುಮನ ಪೆಟ್ಟು ಸಂತೋಷವನ್ನು ಕೊಟ್ಟಿದೆ. ಇಷ್ಟನ್ನೂ ಹೇಳಿ, ಪ್ರವೇಶಿಸು ಲಂಕೆಯನ್ನು. ನಿನಗೇನು ಬೇಕು ಅದನ್ನು ಮಾಡು. ನಿನ್ನಿಚ್ಛೆಯಂತೆ ನಡೆಯಲಿ ಎಂದು ಲಂಕೆ ನಗರಿಯೇ ಹೇಳಿತು ಹನುಮಂತನಿಗೆ. ಶುಭವಾದ ನಗರಿಯಿದು, ರಾವಣನೆಂಬ ಶಾಪದಿಂದ ಉಪಹೃತವಾಗಿದೆ. ನೀನು ಪತಿವ್ರತೆಯಾದ ಸೀತೆಯನ್ನು ಹುಡುಕು. ಎಂಬುದಾಗಿ ಲಂಕಾನಂಗರಿಯೇ ತನ್ನನ್ನು ತಾನು ತೆರೆದುಕೊಂಡಿತು.

ಮುಂದೇನಾಯಿತು…? ಮುಂದಿನ ಪ್ರವಚನದಲ್ಲಿ ಕೇಳೋಣ….

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments