ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಒಳಿತು ಒಳಿತನ್ನು ಆಕರ್ಷಿಸುತ್ತದೆ. ಕೆಡುಕು ಕೆಡುಕನ್ನು. ವಿಜಾತೀಯ ಧೃವಗಳು ಆಕರ್ಷಿಸುತ್ತವೆ ಎನ್ನುವುದಕ್ಕಿಂತ ಹೆಚ್ಚು ಸರಿಯಾಗಿರತಕ್ಕಂತ ಸಂಗತಿ ಇದು. ಸತ್ಪುರುಷರ ಜೊತೆಗೆ ಸತ್ಪುರುಷರ ಕೂಟವು ತಾನಾಗಿಯೇ ಸೇರ್ತದೆ. ಹಾಗೆ ದುರುಳರು ತಾವಾಗಿಯೇ ತಮ್ಮ ಕೂಟವನ್ನ ಕಟ್ಟಿಕೊಳ್ತಾರೆ. ರಾವಣನೊಬ್ಬ ದುರುಳ ತಯಾರಾದ. ಎಲ್ಲೆಲ್ಲಿಂದಲೋ ಎದ್ದುಬಂದು ರಾಕ್ಷಸರು ಕೂಟವನ್ನು ಕಟ್ಟಿದರು. ರಾಕ್ಷಸರ ದೊಡ್ಡ ನಾಡೇ ನಿರ್ಮಾಣವಾಯ್ತು ಲಂಕೆಯಲ್ಲಿ. ಹಾಗೆಯೇ ಈಗ ರಾಮಕಾರ್ಯವಿದೆ. ಇಡೀ ಪ್ರಪಂಚದಲ್ಲಿ ಎಲ್ಲೋ ಪಸರಿಸಿದ್ದ ವಾನರ ನಾಯಕರು ಬಂದು ಸೇರ್ಕೊಳ್ತಾರೆ. ಸತ್ಪುರುಷರ ಸಮಾಗಮವಾಗ್ತದೆ.

ಕೇಡಿಗಳ ನಾಡಿನಲ್ಲಿ ಒಬ್ಬಂಟಿಯಾಗಿ ಸೀತೆ ಇದ್ದಾಳೆ. ಹೇಗೋ ಅಲ್ಲಿ ಬಂದುಬಿಟ್ಟಿದ್ದಾಳೆ ಅವಳು. ಅವಳಿಚ್ಛೆಯಿಂದಲ್ಲ. ಅಂತಹ ಅದ್ಭುತವಾದ ಶಕ್ತಿಶಾಲಿ ಸಾತ್ವಿಕ ವ್ಯಕ್ತಿತ್ವ ಸಾತ್ವಿಕತೆಯನ್ನು ಸೆಳೆಯುವುದು ನಿಶ್ಚಯ. ಹಾಗಾಗಿ ಹನುಮಂತನ ಆಗಮನವಾಯಿತು. ಒಬ್ಬಳೇ ಸೀತೆ. ಈಗ ಹನುಮಂತ ಬಂದ. ಅವನ ಹಿಂದೆ ಇನ್ನು ಕೋಟಿಕೋಟಿ ಸಾತ್ವಿಕರು ಬರ್ತಾರೆ ಲಂಕೆಗೆ. ಕೊನೆಗೆ ಲಂಕೆಯೇ ಕೇಡಿಗರ ನಾಡು ಎಂಬ ಪಟ್ಟವನ್ನು ಕಳೆದುಕೊಂಡು ಸಾತ್ವಿಕರ ನಾಡಾಗಿ ಮಾರ್ಪಡ್ತದೆ. ಸಾತ್ವಿಕ ರಾಕ್ಷಸರ ತಳಿ ಸಿದ್ಧವಾಗ್ತದೆ. ಇನ್ನೊಂದು ಸ್ವಲ್ಪ ಹಿಂದೆ ಹೋಗಿ ಆಲೋಚಿಸಬಹುದು ನಾವು. ವಿಭಿಷಣ ಒಬ್ಬನಿದ್ದ ಲಂಕೆಯಲ್ಲಿ. ಅನಿಲ, ಅನಲ, ಹಲ, ಸಂಪಾತಿ ಎಂಬ ನಾಲ್ವರು ಒಳ್ಳೆಯ ರಾಕ್ಷಸರು ಕೂಡಿಕೊಳ್ತಾರೆ. ಸೀತೆ ಬಂದಳು, ಹನುಮಂತ ಬಂದ, ಮುಂದೆ ರಾಮ ಬರ್ತಾನೆ. ಹೀಗೆ ಒಳಿತು ಒಳಿತನ್ನು ಆಕರ್ಷಿಸುತ್ತದೆ. ಲಂಕೆಯಲ್ಲಿ ನಾಲ್ಕಂಗುಲವನ್ನೂ ಬಿಡದ ಹನುಮಂತ ಕಣ್ಣುಕಟ್ಟಿದ್ದರೂ ಸೀತೆಯನ್ನು ಹುಡುಕ್ತಾನೆ. ಕೊಟ್ಟಕೊನೆಯಲ್ಲಿ ಅವಳನ್ನ ಸೇರ್ತಾನೆ ಮತ್ತು ಅವಳು ಸೀತೆ ಹೌದು ಎಂದು ದೃಢಪಡಿಸಿಕೊಳ್ತಾನೆ. ಅದಕ್ಕೆ ಕಾರಣವಾಗಿದ್ದು ಅವನ ಸ್ಮರಣೆ. ಅಂದು ಆಕೆಯನ್ನು ನೋಡಿದ ನೆನಪು, ಆಕೆ ಎಸೆದ ಆಭರಣಗಳು, ರಾಮ ಮಾಡಿದ ಸೀತೆಯ ವರ್ಣನೆ ಸಹಾಯ ಮಾಡ್ತದೆ. ಮತ್ತು ಆಕೆಯ ಶೋಕ, ದೈನ್ಯ ಎಲ್ಲವನ್ನೂ ನೋಡಿ ಈಕೆ ಸೀತೆ ಹೌದು ಎಂಬ ನಿಶ್ಚಯಕ್ಕೆ ಹನುಮಂತ ಬಂದು ಶಿಂಶಿಪಾ ವೃಕ್ಷದ ಎಲೆಗಳ ನಡುವೆ ಅಡಗಿ ಸಂದರ್ಭಕ್ಕೋಸ್ಕರ ಕಾಯ್ತಾ ಇದಾನೆ.

ಏತನ್ಮಧ್ಯೆ ಹನುಮಂತನಿಗೆ ತಾನು ಕೈದೀಪವಾಗಿ, ಕೈಬೆಳಕಾಗಿ ಪರಿಣಮಿಸಲೋ ಎಂಬಂತೆ ಚಂದ್ರನು ಮುಂದೆ ಬಂದ. ಹನುಮನ ಶ್ರಮವನ್ನು, ತಾಪವನ್ನು ಪರಿಹಾರ ಮಾಡುವ ಸಲುವಾಗಿ ಅವನ ಮೇಲೆ ತಂಪನ್ನು ಚೆಲ್ಲಿದ. ಆ ಬೆಳಕಲ್ಲಿ ಮತ್ತೊಮ್ಮೆ ಸೀತೆಯನ್ನು ಕಂಡ ಹನುಮಂತ. ಅವನಿಗೆ ಒಮ್ಮೆ ಯಾವುದು ಭೂಮಿ ಯಾವುದು ಆಕಾಶ ಅಂತನೇ ಗೊತ್ತಾಗ್ಲಿಲ್ಲ. ಯಾಕಂದ್ರೆ ಭೂಮಿಯಲ್ಲೂ ಕೂಡ ಸೀತೆಯೆಂಬ ಪೂರ್ಣಚಂದ್ರನ ದರ್ಶನ. ಸೀತೆ ಹೇಗಿದಾಳೆ ಅಂದ್ರೆ ಸಹಜವಾದ ಅಲೌಕಿಕ ಕಾಂತಿಯ ದರ್ಶನ ಬೇರೆ. ಈಗಿನ ಸನ್ನಿವೇಶ ಹೇಗಿದೆ ಅಂದ್ರೆ ಸೀತೆಯು ಮುಳುಗುವ ನೌಕೆಯಂತೆ ಇದಾಳೆ. ಶೋಕ ಭಾರವು ಹೆಚ್ಚಿ ಆ ಭಾರದಲ್ಲಿ ಮುಳುಗಿ ಹೋಗ್ತಾ ಇದ್ದಾಳೆ ಸೀತೆ. ಹನುಮಂತ ಗಮನಿಸ್ತಾ ಇದ್ದಾನೆ. ಅವಳ ಸುತ್ತಮುತ್ತ ಇರುವ ರಾಕ್ಷಸಿಯರ ಪರಿವಾರ. ಸೀತೆಯನ್ನು ನೋಡಿದಾಗ ಈ ರಾಕ್ಷಸಿಯರೆಲ್ಲ ಕಣ್ಣಿಗೆ ಬಿದ್ರು.

ಹೇಗಿದಾರೆ ಅವ್ರು? ಸೀತೆ ಅಂದ್ರೇನು? ತ್ರಿಭುವನ ಸುಂದರಿ ಅವಳು. ಸೀತೆಯ ಸುತ್ತಮುತ್ತ, ಅವಳ ಹತ್ತಿರವೇ ಇರುವ ರಾಕ್ಷಸಿಯರನ್ನು ಅನಿವಾರ್ಯವಾಗಿ ಕಂಡ ಹನುಮಂತ. ಸೀತೆಯೂ ತಪ್ಪಿಸಿಕೊಂಡು ಹೋಗಬಾರದು. ಆಕೆಯನ್ನು ಹುಡುಕುವ ಸಲುವಾಗಿ ಯಾರೂ ಅಲ್ಲಿಗೆ ಬರಬಾರದು. ಹೇಗಿದ್ದಾರೆ ಅಂದ್ರೆ ಪೆಡಂಭೂತಗಳ ಹಾಗೆ ಇದ್ದಾರೆ. ಘೋರವಾಗಿರತಕ್ಕಂತ ನೋಟ ಅದು. ಹೇಗಿತ್ತು ಅವರ ರೂಪ ಅಂದ್ರೆ ಒಬ್ಬಳಿಗೆ ಒಂದೇ ಕಣ್ಣು, ಒಂದೇ ಕಿವಿ, ತಲೆಯನ್ನೇ ಮುಚ್ಚಿದ ಕಿವಿ, ಮೈಯೆಲ್ಲ ಮುಚ್ಚಿದ ಕಿವಿ, ಒಂದೂ ಕಿವಿ ಇಲ್ಲದವರು, ಬುಡದಲ್ಲಿ ಅಗಲ ಮುಂದೆಹೋದಂತೆ ಚೂಪು ಇರುವ ಶಂಖುಕಿವಿ, ತಲೆಯ ಮೇಲಿರುವ ಮೂಗು, ಸಪೂರವಾದ ಶರೀರ ಅದಕ್ಕಿಂತ ಎಷ್ಟೋ ದಪ್ಪವಾದ ತಲೆ, ಸಪೂರ ಬಹಳ ಉದ್ದವಾದ ಕುತ್ತಿಗೆ, ಹರಕು ಕೂದಲು, ಕೂದಲಿಲ್ಲದವಳು, ಮೈಗೆ ಕಂಬಳಿಹೊದ್ದಂತಿರುವ ಕೂದಲು, ಜೋತಾಡುತ್ತಿರುವ ಕಿವಿ, ಹಣೆ, ಭಾರೀ ಹೊಟ್ಟೆಯ ಮೇಲೆ ಬಂದು ಮಲಗಿರುವ ಎದೆ, ಜೋಲುತ್ತಿರುವ ತುಟಿ, ಗದ್ದದಲ್ಲಿ ತುಟಿ, ಜೋಲು ಮುಖ, ಉದ್ದದ ಮೊಣಕಾಲು, ಅತೀಗಿಡ್ಡ, ಅತೀ ಉದ್ದ, ನಾಭಿಯಿಂದ ಕೆಳಗೆ ಚಿಕ್ಕ ಆಕಾರ, ನಾಭಿಯಿಂದ ಮೇಲೆ ಉದ್ದ ಆಕಾರ, ಇನ್ನೊಬ್ಬಳಿಗೆ ನಾಭಿಯಿಂದ ಕೆಳಗೆ ಅತೀ ಉದ್ದ ಆಕಾರ, ನಾಭಿಯಿಂದ ಮೇಲೆ ಗಿಡ್ಡ ಆಕಾರ, ಕುಬ್ಜೆ, ಗೂನಿ, ವಿಕಟ, ಮೊಣಕಾಲು ಮತ್ತು ಪಾದದ ನಡುವಿನ ಕಾಲು ದಪ್ಪ, ಪೂರ್ತಿ ಹೊರಗಡೆ ಬಂದಿರುವ ಹಲ್ಲು, ಒಳಗೆ ಹೋಗಿರುವ ಮುಖ, ಸೊಟ್ಟ ಮೋರೆ, ಕೆಟ್ಟ ಮೋರೆ, ತುಟಿ ಮತ್ತು ಮೂಗು ಇಲ್ಲ, ಹಳದಿ ಕಣ್ಣು, ಕಪ್ಪು ಬಣ್ಣದವರು, ಕೋಪಿಷ್ಟೆಯರು, ಜಗಳಗಂಟಿಯರು, ಕಬ್ಬಿಣದ ಮಹಾಶೂಲ, ಕೂಟ, ಮುದ್ಗರಗಳನ್ನು ಹಿಡಿದಿರುವವರು, ಮನುಷ್ಯರ ದೇಹ ಹಂದಿ ಮುಖ, ಜಿಂಕೆ ಮುಖ, ಹುಲಿ ಮುಖ, ಕೋಣನ ಮುಖ, ಮೇಕೆ ಮುಖ, ನರಿ ಮುಖ. ಆನೆ ಕಾಲು, ಕುದುರೆ ಕಾಲು, ಎದೆಯಲ್ಲಿ ಹುಗಿದುಹೋಗಿರುವ ತಲೆ, ಒಂದೇ ಕೈ, ಒಂದೇ ಕಾಲು, ಕತ್ತೆ ಕಿವಿ, ಕುದುರೆ ಕಿವಿ, ಎತ್ತಿನ ಕಿವಿ, ಆನೆ ಕಿವಿ, ಸಿಂಹದ ಕಿವಿ. ಮೂಗೇ ಇಲ್ಲ, ಮುಖವನ್ನು ದಾಟಿರುವ ಮೂಗು, ಅಡ್ಡ ಮೂಗು, ವಿಕೃತ ನಾಸಿಕ, ಆನೆಯ ರೀತಿ ಮೂಗಿನ ಜಾಗದಲ್ಲಿರುವ ಸೊಂಡಿಲು, ಹಣೆಯ ಬಳಿಯಿರುವ ಮೂಗು, ದೊಡ್ಡ ಕಾಲು, ಗೊರಸಿರುವ ಕಾಲು, ತಲೆಯಲ್ಲಿರುವಂತೆ ಕಾಲಿನಲ್ಲಿರುವ ಕೂದಲು, ಒಬ್ಬಳಿಗೆ ಕಣ್ಣು ಮಾತ್ರ ದೊಡ್ಡದು, ಒಬ್ಬಳಿಗೆ ಬಾಯಿ ಮಾತ್ರ ದೊಡ್ಡದು, ಒಬ್ಬಳಿಗೆ ಉದ್ದದ ನಾಲಿಗೆ, ಉದ್ದ ಉಗುರು, ಕುದುರೆ ಮುಖ, ಎತ್ತಿನ ಮುಖ, ಕತ್ತೆ ಮುಖ ಹೀಗೆ ನಾನಾ ಪ್ರಕಾರದ ಮುಖವುಳ್ಳಂತವರು, ಹೊಗೆ ಬಣ್ಣದ ಕೂದಲಿನವರು, ಇಡೀ ದಿನವೂ ಮದ್ಯಪಾನ ಮಾಡುವವರು, ಮಾಂಸ ತಿನ್ನುವವರು, ಇದಿಷ್ಟು ಸಾಲದೆಂಬಂತೆ ಮೈತುಂಬ ರಕ್ತ ಚೆಲ್ಲಿಕೊಂಡಿರುವವರು, ಮಾಂಸವನ್ನು ಹಚ್ಚಿಕೊಂಡಿರುವವರು, ಇಂತಹ ವಿಕೃತಾಂಗಿಯರ ಮಧ್ಯೆ ಸೀತೆ ಇದ್ದಳು. ಮಾಂಸ ತಿನ್ನುವುದು, ರಕ್ತ ಮತ್ತು ಮದ್ಯ ಕುಡಿಯುವುದರ ಹೊರತಾಗಿ ಇನ್ನೇನೂ ಆಹಾರ ಸೇವಿಸದವರು. ಇಂತಹ ರಾಕ್ಷಸಿಯರನ್ನು ಕಂಡ ಹನುಮನಿಗೆ ಹೇಸಿಗೆಯಿಂದ ರೋಮಗಳು ನಿಮಿರಿ ನಿಂತವಂತೆ. ಮರದ ಕೆಳಗೆ ಸೀತೆ ಕುಳಿತಿದ್ದರೆ ಅವಳ ಸುತ್ತುವರೆದಿದ್ದಾರೆ ರಾಕ್ಷಸಿಯರು. ಅಕ್ಷರಶಃ ನರಕ.

ರಾಕ್ಷಸಿಯರು ಅವಳನ್ನು ಸುತ್ತುವರಿದಿದ್ದಾರೆ. ಆ ದುರ್ದರ್ಶನ, ದುರ್ಗಂಧ ಅಕ್ಷರಶಃ ನರಕ. ಇವರ ಮಧ್ಯದಲ್ಲಿ ಅನಿಂದಿತೆಯಾದ ಆ ರಾಜಪುತ್ರಿಯು, ದೇವಿಯು ಸೀತೆ. ಅವಳ ಕಾಂತಿ ಅಡಗಿದೆ. ಹತ್ತು ತಿಂಗಳಿನಿಂದ ಕೂದಲನ್ನು ಮುಟ್ಟಿಯೇ ಇಲ್ಲ. ಕೂದಲಿನ ಬಣ್ಣ ತಿರುಗಿದೆ. ಪುಣ್ಯವು ಮುಗಿದ ಮೇಲೆ ಉದುರಿ ಬೀಳುವ ನಕ್ಷತ್ರದಂತೆ ಕಾಣುತ್ತಿದ್ದಾಳೆ ಸೀತೆ. ಚಾರಿತ್ರ್ಯವೇ ಅವಳ ಆಸ್ತಿ. ತನ್ನ ಪತಿಯನ್ನು ಕಾಣದೇ ದುರ್ಗತಿಯನ್ನು ಹೊಂದಿದ್ದಾಳೆ. ಅವಳ ಮೈಯಲ್ಲಿ ಯಾವ ಒಳ್ಳೆಯ ಆಭರಣವೂ ಇಲ್ಲ. ಕೆಲವು ಆಭರಣಗಳು ಕಂದಿಹೋಗಿದ್ದಾವೆ. ಶೋಭಾಯಮಾನವಾದ ಯಾವ ಆಭರಣವೂ ಅವಳ ಮೈಯಲ್ಲಿಲ್ಲ. ಒಂದು ವಿಶಿಷ್ಟವಾದ ಆಭರಣ ಅವಳ ಸರ್ವಾಂಗದಲ್ಲಿಯೂ ಇತ್ತು. ರಾಮಪ್ರೇಮವೆಂಬ ಆಭರಣವನ್ನು ಮೈಯೆಲ್ಲ ತೊಟ್ಟಿದ್ದಾಳೆ. ಅದರಿಂದ ಅವಳು ಶೋಭಿಸುತ್ತಿದ್ದಾಳೆ. ಹೆಣ್ಣಾನೆಯು ಗಜರಾಜನಿಂದ ಬೇರೆಯಾಗಿದೆ, ಬಂಧನಕ್ಕೊಳಗಾಗಿದೆ. ಮುಂದೆ ಸಿಂಹ ಬಂದು ತಿನ್ನಲು ಕಾಯುತ್ತಿದೆ. ಇದು ಸೀತೆಯ ಸ್ಥಿತಿ. ಮೋಡಗಳ ಹಿಂದೆ ಮರೆಯಾದ ಚಂದ್ರಲೇಖೆಯಂತೆ. ಹನುಮಂತನ ಮನಸ್ಸು ಕೂಗಿ ಕೂಗಿ ಹೇಳಿತು. ಇವಳು ರಾಮನೊಟ್ಟಿಗೆ ಇರಲು ಅರ್ಹಳು, ರಾಕ್ಷಸಿಯರ ಮಧ್ಯದಲ್ಲಿ ಅಲ್ಲ. ರಾವಣನ ರಾಜ್ಯದಲ್ಲಿ ಅಲ್ಲ. ಅಶೋಕವನದ ಮಧ್ಯದಲ್ಲಿ ಶೋಕಸಾಗರದಲ್ಲಿ ಮುಳುಗೇಳುವ ದೇವಿ ಕ್ಷುದ್ರ ಗ್ರಹದಿಂದ ಪೀಡಿತವಾದ ರೋಹಿಣಿಯಂತೆ. ಸುತ್ತ ರಾಕ್ಷಸಿಯರು, ಮಧ್ಯ ಸೀತೆ. ಹೂವಿಲ್ಲದ ಬಳ್ಳಿಯಂತೆ. ಹೂವೆಂದರೆ ಸಂತೋಷ, ನಗು ಶೋಭೆ. ಅದಿಲ್ಲ. ಆಕೆಯ ಮೈಯೆಲ್ಲ ಮಲಿನವಾಗಿದ್ದರಿಂದ ವಸ್ತ್ರವೂ ಮಲಿನವಾಗಿದ್ದರಿಂದ ಅವಳು ಶೋಭಿಸುತ್ತಿರಲಿಲ್ಲ. ಆದರೆ ತನ್ನ ಸಹಜವಾದ ದಿವ್ಯತೇಜಸ್ಸಿನಿಂದ ಶೋಭಿಸುತ್ತಿದ್ದಳು. ಶೋಭೆ ಅಶೋಭೆ ಎರಡೂ ಒಟ್ಟಿಗೆ. ಮುಖ ದೈನ್ಯವಾಗಿದೆ. ಆದರೆ ತನ್ನ ಗಂಡನ ನೆನಪಾದಾಗ ಅವಳಿಗೆ ಕ್ಷಾತ್ರ, ಶಕ್ತಿ ಬರುತ್ತದೆ. ಅವನ ತೇಜಸ್ಸಿನಿಂದಾಗಿ ಅವಳು ಅದೀನೆ. ಅಲ್ಲದಿದ್ದರೆ ದೀನೆ. ಅವಳನ್ನು ಅವಳ ಚಾರಿತ್ರ್ಯಕ್ಕೆ ಧಕ್ಕೆ ಬರದಂತೆ ಆಕೆಯದೇ ಪರಿಶುದ್ಧವಾದ ಶೀಲ ಕಾಯುತ್ತಿತ್ತು. ಅಂತಹ ಕಪ್ಪುಕಂಗಳ ಸೀತೆಯನ್ನು ಕಂಡನು ಹನುಮಂತ. ಚೆಲುವಾದ ಕಣ್ಣುಗಳು ಹೌದು ಆದರೆ ಬೆದರಿದ ಜಿಂಕೆಯ ಕಣ್ಣುಗಳು. ಅತ್ತ-ಇತ್ತ ನೋಡುತ್ತಿದ್ದಾಳೆ. ಅವಳ ನಿಟ್ಟುಸಿರು ಅಶೋಕವನದ ಹೂಚಿಗುರುಗಳನ್ನು ಸುಟ್ಟಿತು. ದುಃಖಕ್ಕೆ ಒಂದು ಆಕಾರ ಬಂದಂತೆ ಆಕೆಯಿದ್ದಳು. ತುಂಬ ಕ್ಷೀಣಳಾಗಿದ್ದಾಳೆ. ಆದರೆ ಸುವಿಭಕ್ತಾಂಗಿ. ಅಂಗಗಳು ಸರಿಯಾಗಿವೆ. ಸಹಜ ಶೋಭೆಯಿಲ್ಲದಿದ್ದರೆ ಆಭರಣ ಹಾಕಿ ಶೋಭೆ ಬರುವುದಿಲ್ಲ. ಸಹಜ ಶೋಭೆ ಇದ್ದರೆ ಆಭರಣ ಹಾಕದಿದ್ದರೂ ಶೋಭೆಯಿರುತ್ತದೆ. ಸೀತೆಗೆ ಯಾವ ಆಭರಣವೂ ಇಲ್ಲದೇ ತಾನೇ ತಾನಾಗಿ ಶೋಭೆಯಿದೆ.

ಇಷ್ಟು ದುಃಖದಲ್ಲಿದ್ದ ಸೀತೆಯನ್ನು ಕಂಡು ಹನುಮಂತ ಅತ್ತರೂ, ಅವಳು ಸಿಕ್ಕಿದಳು ಎಂಬ ಸಂತೋಷ. ಬದುಕಿನಲ್ಲಿ ಆ ವರೆಗೆ ಕಂಡ ಸಂತೋಷವನ್ನು ಸೀತೆಯನ್ನು ಕಂಡು ಹನುಮಂತ ಕಂಡ. ಅದು ಸಾತ್ವಿಕ ವ್ಯಕ್ತಿತ್ವ. ಕಂಡ ಮಾತ್ರಕ್ಕೆ ಅಂತಹ ಪರಿಶುದ್ಧವಾದ ಆನಂದವನ್ನು ಕೊಟ್ಟಳು, ತಾನು ಅಷ್ಟು ದುಃಖದಲ್ಲಿದ್ದರೂ ಕೂಡಾ. ಇದು ದಿವ್ಯ ಸ್ವಭಾವ. ಋಷ್ಯಮೂಕ ಪರ್ವತದಿಂದ ಹನುಮಂತನು ಸೀತೆಯನ್ನು ಮೊದಲು ಕಂಡಾಗಲೇ ಸೇವೆಯನ್ನು ಕೊಟ್ಟಳು. ಆ ಉತ್ತರೀಯದಲ್ಲಿದ್ದ ಆಭರಣಗಳು ಯಾವಾಗ ಹನುಮನ ಕೈಸೇರಿತೋ ಆಗ ಕಪ್ಪೆಚಿಪ್ಪು ಮುತ್ತಾಯಿತು. ಇಲ್ಲಿಂದ ಹನುಮಂತನ ಜೀವನ. ಮುಂದೆ ಸೀತೆಯು ಪಟ್ಟವನ್ನೇರಿದ ಬಳಿಕ ಹನುಮಂತನಿಗೆ ಮುತ್ತಿನ ಮಾಲೆಯನ್ನು ಬಹುಮಾನವಾಗಿ ಕೊಡುತ್ತಾಳೆ. ತುಂಬಾ ಪ್ರೀತಿಯಿಂದ ಆ ಮಾಲೆಯನ್ನಿಟ್ಟುಕೊಳ್ಳುತ್ತಾನೆ ಹನುಮಂತ. ಸೀತೆಯನ್ನು ಕಂಡಿದ್ದು ಸುಗ್ರೀವನಿಗೂ ಕೂಡ ಬದುಕಿನ ಬದಲಾವಣೆ. ಹಾಗೆ ಮಹದಾನಂದವನ್ನು ಹನುಮಂತ ಅನುಭವಿಸಿದ. ಮುಂದೆ ಒಳ್ಳೆಯದಾಗುವುದೆಂದು ಈಗ ಆನಂದದಿಂದ ಕಣ್ಣೀರು ಬಂತು. ನಂತರ ರಾಮನಿಗೆ ಕೈಮುಗಿದ. ಅವನಿಗೆ ಭಾವಪೂಜೆ ನಿರಂತರ. ಅಲ್ಲಿಂದಲೇ ಲಕ್ಷ್ಮಣನಿಗೂ ಕೈಮುಗಿದು ವೃಕ್ಷದ ಎಲೆಯ ಮರೆಯಲ್ಲಿ ಅಡಗಿದನು.

ಬೆಳಗಿನ ಜಾವವಾಯಿತು. ಹನುಮಂತ ಅಶೋಕವನವನ್ನು ಮತ್ತು ಸೀತೆಯನ್ನು ಕಾಣುತ್ತಿದ್ದಾನೆ. ಅಲ್ಲಿ ವೇದಘೋಷ ಕೇಳಿತು. ವೇದಾಂಗಗಳನ್ನು (ಶಿಕ್ಷಾ, ವ್ಯಾಕರಣ, ಛಂಧಸ್ಸು, ಜ್ಯೋತಿಷ್ಯ, ನಿರುಕ್ತ, ಕಲ್ಪ) ಬಲ್ಲವರು, ದೊಡ್ಡ ಯಾಗಗಳನ್ನು ಮಾಡಿಸ ಬಲ್ಲವರ ವೇದಘೋಷ ಕೇಳಿತು. ಹನುಮಂತನಿಗೆ ಆಶ್ಚರ್ಯವಾಯಿತು. ನೋಡಿದರೆ ಬ್ರಹ್ಮರಾಕ್ಷಸರು. ಬ್ರಾಹ್ಮಣರಾಗಿ ಹುಟ್ಟಿ, ಷಡಂಗ ವೇದಜ್ಞಾನವಿದ್ದು ದಾರಿತಪ್ಪಿದರೆ, ಪರರನ್ನು ಪೀಡಿಸಿದರೆ, ಪರಸ್ತ್ರೀಯನ್ನು ಹರಣ ಮಾಡಿದರೆ, ಪರದ್ರವ್ಯಾಪಹರಣ ಮಾಡಿದರೆ ಅವರು ರಾಕ್ಷಸ ಜನ್ಮವನ್ನು ಪಡೆಯುತ್ತಾರೆ. ಇವರು ಸೃಷ್ಟಿಗೆ ಕಂಟಕವಾದ ಬ್ರಹ್ಮರಾಕ್ಷಸರು. ಇಂಥವರ ಕೂಟವಿತ್ತು ಅಲ್ಲಿ. ಅವರಿಗೆ ವೇದ, ಯಾಗಗಳಲ್ಲಿ ಆಸಕ್ತಿಯಿರುತ್ತದೆ. ಆದರೆ ಬಳಕೆಮಾಡುವುದು ಮಾತ್ರ ದುಷ್ಟವಾದ ಉದ್ದೇಶಕ್ಕೆ. ಲಂಕೆಯಲ್ಲಿ ವೇದಜ್ಞರ ನೆಲೆ ತಪ್ಪಿ ತುಂಬಾ ಕಾಲವಾಗಿದೆ. ಕುಬೇರನಿರುವವರೆಗಿತ್ತು.

ಅತ್ತ ರಾವಣನ ಅಂತಃಪುರದಲ್ಲಿ ರಾವಣನನ್ನು ಎಬ್ಬಿಸಲು ಮಂಗಲವಾದ್ಯಗಳ ಘೋಷ. ಆದರೆ ಎದ್ದದ್ದು ಮಾತ್ರ ಅಮಂಗಲವೇ. ಎದ್ದಾಗ ಮೊದಲು ಅವನಿಗೆ ಸೀತೆಯ ನೆನಪಾಯಿತು. ಕಾಮವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕಾಮನನ್ನು ಗೆಲ್ಲದವನು ರಾಮನನ್ನು ಗೆಲ್ಲುವನೇನು?! ರಾಕ್ಷಸರ ಚಕ್ರವರ್ತಿಗೆ ಎಷ್ಟು ಕಾರ್ಯಗಳಿರಬೇಕು. ಅದೆಲ್ಲಾ ಬಿಟ್ಟು ಅಶೋಕವನಕ್ಕೆ ಹೊರಟನು. ಇವನ ಮನಸ್ಸು ಎಷ್ಟು ಕೇಡಾಗಿತ್ತೋ ಅಶೋಕವನ ಅಷ್ಟೇ ಸುಂದರವಾಗಿತ್ತು. ಅಲ್ಲಿ ತೋಳಗಳ ಶಿಲ್ಪಗಳಿದ್ದವು. ರಾವಣನಿಗೆ ಹೊಂದುವಂಥದ್ದು ಅದು. ಅವನನ್ನು ನೂರಾರು ಅಂಗನೆಯರು ಹಿಂಬಾಲಿಸುತ್ತಾರೆ. ಅವರಿಗೆಲ್ಲಾ ಅವನು ಸತಿದರ್ಜೆಯನ್ನು ಕೊಟ್ಟಿದ್ದ. ಅವರು ಅವನ ಸೇವೆಯನ್ನು ಮಾಡುತ್ತಿದ್ದಾರೆ. ದೀಪ, ಚಾಮರಗಳನ್ನು ಹಿಡಿದವರು ಕೆಲವರು. ಕೆಲವರು ಚಿನ್ನದ ಗಿಂಡಿಗಳನ್ನು ಹಿಡಿದುಕೊಂಡಿದ್ದರು. ಅವರು ನೀರನ್ನು ಚೆಲ್ಲುತ್ತಾ ಹೋಗುತ್ತಿದ್ದರು. ದಾರಿಯನ್ನು ಶುದ್ಧ ಮಾಡಲು ಇರುವ ಪದ್ಧತಿ. ಅದು ಈ ಕಲಂಕಿತನಿಗೆ ಉಪಯೋಗವಾಗುತ್ತಿದೆ. ಕೆಲವರ ಕೈಯಲ್ಲಿ ಚಿನ್ನದ ಆಸನಗಳಿದ್ದವು. ಒಬ್ಬಳು ರತ್ನದ ಸ್ಥಾಲಿಯನ್ನು ಬಲಗೈಯಲ್ಲಿ ಹಿಡಿದುಕೊಂಡಿದ್ದಳು. ಅದರಲ್ಲಿ ಮದ್ಯ ತುಂಬಿದೆ. ಮತ್ತೊಬ್ಬಳು ಶ್ವೇತಛತ್ರವನ್ನು ಹಿಡಿದಿದ್ದಳು. ನಿದ್ದೆಯು ಕಡಿಮೆಯಾಗಿ ಮದ್ಯದ ಅಮಲಿನಿಂದ ಅವರಿಗೆ ಕಣ್ಣು ಬಿಡಲು ಕಷ್ಟವಾಗಿತ್ತು.

ಆದರೂ ಪಾಪ, ಅನಿವಾರ್ಯ. ರಾವಣನ ಹಿಂದೆ ಬರ್ತಾ ಇದಾರೆ. ಅವರೂ ಕೂಡ ಹಾಗೆ ಎದ್ದು ಬರ್ತಾ ಇದ್ದದ್ದು. ಅವರ ಹಾರ, ಕೇಯೂರ ಎಲ್ಲ ಅಸ್ತವ್ಯಸ್ತವಾಗಿದೆ. ತಿಲಕ ಒರೆಸಿದೆ, ಕೂದಲು ಕೆದರಿದೆ, ಮೈಬೆವರಿದೆ. ಮತ್ತೆ ತೂಗಾಡ್ತಾ ಇದ್ದಾರೆ. ರಾತ್ರಿಯ ಪಾನಗೋಷ್ಠಿಯ ಅಮಲು ಇನ್ನೂ ಹೋಗಿಲ್ಲ. ಮಾಲೆಗಳೆಲ್ಲ ಅಸ್ತವ್ಯಸ್ತವಾಗಿ ಜೋಲ್ತಾ ಇದೆ. ಅಂತಹ ಸ್ಥಿತಿಯಲ್ಲಿಯೂ ಕೂಡ ಅನಿವಾರ್ಯವಾಗಿ ರಾವಣನನ್ನು ಹಿಂಬಾಲಿಸ್ತಾರೆ. ಇಷ್ಟೂ ಸತಿಯರ ಪತಿ ಸೀತೆ ಕಡೆಗೆ ಕಣ್ಣಿಟ್ಟಿದ್ದಾನೆ. ಅಶೋಕಾವನದ ಕಡೆಗೆ ನಡೆದನು ರಾವಣ.

ಇತ್ತ ಹನುಮಂತ ಮರದ ಎಲೆಯ ಮರೆಯಲ್ಲಿ ಕೂತಿದಾನೆ. ಅವನಿಗೆ ಗೆಜ್ಜೆಯ ಶಬ್ದ, ಸೊಂಟದ ಡಾಬಿನ ಶಬ್ದ ಕೇಳಿತು. ಅತ್ತ ನೋಡಿದಾಗ ಅಶೋಕವನದತ್ತ ರಾವಣ ಪ್ರವೇಶ ಮಾಡ್ತಾ ಇದಾನೆ. ದ್ವಾರದಲ್ಲಿದ್ದಾನೆ. ದೀಪದ ಬೆಳಕಿನಲ್ಲಿ ದೆವ್ವದ ದರ್ಶನವಾಯಿತು….! ರಾವಣನ ಸತಿಯರು ದೀಪವನ್ನು ಹಿಡಿದುಕೊಂಡಿದಾರೆ. ಚಿನ್ನದ ದೀಪಕ್ಕೆ ತೈಲವನ್ನೂ ಹಾಕಿದಾರೆ, ಗಂಧದ ಎಣ್ಣೆಯನ್ನೂ ಹಾಕಿದಾರೆ. ಪರಿಮಳ ಬೀಸುತ್ತಿತ್ತು. ಕಾಮಯುಕ್ತ, ದರ್ಪಯುಕ್ತ, ಮದಯುಕ್ತ ರಾವಣ. ಕಣ್ಣುಕೆಂಪಾಗಿದೆ, ವಕ್ರವಾದ ಕಣ್ಣು. ಕಾಮವೇ ಮೈವೆತ್ತ ರೂಪ ರಾವಣನೆಂದರೆ. ರಾತ್ರಿಯ ಬಟ್ಟೆಯನ್ನೇ ಉಟ್ಟಿದ್ದನಂತೆ. ಶಾಸ್ತ್ರದಲ್ಲಿ ಹೀಗಿದೆ, ಏನನ್ನೋ ಆರಂಭಿಸಬೇಕಾದರೆ, ನಿನ್ನೆ ಹಾಕಿದ ಬಟ್ಟೆಯನ್ನು ಮೊದಲು ತ್ಯಜಿಸಬೇಕು. ನಿನ್ನೆ ಕಳೆಯಿತು, ಬೇರೆ ಬಟ್ಟೆಯನ್ನುಡುವುದು ಶಾಸ್ತ್ರ. ಆತನ ಬಟ್ಟೆ ಆಗ ತಾನೇ ಕರೆದ ಹಾಲಿನ ಬಣ್ಣದ ಬಟ್ಟೆ ಅವನದು. ಸ್ವಲ್ಪವೂ ಧೂಳಿಲ್ಲ, ಸ್ವಚ್ಛ. ಅದು ತೋಳುಬಂದಿಗೆ ಸಿಕ್ಕುಕೊಂಡಿದೆ. ಹಾಗೆ ಬರ್ತಿದಾನೆ ಠೀವಿಯಿಂದ. ಹನುಮಂತ ರಾವಣನಿಗೆ ಕಾಣಬಾರದೆಂದು ಘನಪತ್ರದ ಮರೆಯಲ್ಲಿ ಕುಳಿತಿದ್ದಾನೆ. ಚಿಂತೆಯಾಯ್ತು ಹನುಮನಿಗೆ. ರಾವಣನ ಜೊತೆಗೆ ಅಷ್ಟು ಹೆಂಡತಿಯರ ಜೊತೆ ಬಂದನು. ಹತ್ತಿರ ಬಂದಾಗ ಹನುಮಂತನಿಗೆ ಕಂಡಿದ್ದು ರಾವಣನಲ್ಲಿ ಅಮಲು.

ನೀವು ಇಡೀ ರಾಮಾಯಣದಲ್ಲಿ ರಾಮನ ಬಗ್ಗೆ ಈ ತರ ಒಂದು ಉದಾಹರಣೆಯನ್ನೂ ಕಾಣೋದಿಲ್ಲ. ಕ್ಷತ್ರಿಯರು ಯುದ್ಧಕ್ಕೆ ಹೋಗುವಾಗ ಪಾನ ಮಾಡುವುದು ಇತ್ತು. ಕ್ಷತ್ರಿಯರೂ ಪಾನ ಮಾಡ್ತಿದ್ರು. ಆದರೆ ರಾಮನಲ್ಲಿ ನೀವು ಇದರ ಅಂಶಾಂಶವನ್ನೂ ಕೂಡ ಕಾಣುವುದಿಲ್ಲ.

ಕುಡಿದು ಅಮಲೇರಿದವ ರಾವಣನಿಗೂ ಚೂಪಕಿವಿಯಂತೆ. ವಿಶ್ರವಸರೆಂಬ ಬ್ರಹ್ಮರ್ಷಿಯ ಮಗ ರಾವಣನೆಂಬ ಪಾಪಿ, ಅವನನ್ನು ಹನುಮ ಕಂಡ. ಲಂಕಾನಗರದ ಮಧ್ಯದಲ್ಲಿ, ಪುಷ್ಪಕವಿಮಾನದಲ್ಲಿ ನಿದ್ದೆ ಮಾಡ್ತಿದ್ದದ್ದು ಇವನೇ ತಾನೇ…? ಎಂದು ಅಂದುಕೊಂಡು ಹನುಮಂತ ಮೇಲಿನ ಕೊಂಬೆಯಿಂದ ಕೆಳಗಿನ ಕೊಂಬೆಗೆ ಬಂದನು. ಹನುಮಂತ ಉಗ್ರ ತೇಜಸ್ವಿ. ಆದರೂ ಕೂಡ ರಾವಣ ಹತ್ತಿರ ಬಂದಾಗ ಹನುಮನ ಕಣ್ಣುಕೋರೈಸಿತು. ಅಂತಹ ಪ್ರಭೆ ರಾವಣನಲ್ಲಿಯೂ ಇತ್ತು. ಮತ್ತೆ ಹಿಂದೆ ಹೋಗಿ ಅಡಗಿದ ಹನುಮಂತ. ಆಗ ರಾವಣನು ಸೀತೆಯನ್ನು ಸಮೀಪಿಸಿದನು. ಭೂಷಣೋತ್ತಮ ರಾವಣನನ್ನು ಕಂಡಳು ಸೀತೆ. ಆಗ ಅವಳಿಗೆ ಬಂತು ನಡುಕ. ಜೋರಾಗಿ ಬೀಸುವ ಗಾಳಿಗೆ ಕಂಪಿಸುವ ಬಾಳೆಯಂತಾದಳು ಸೀತೆ. ಮುಖಮಾತ್ರ ಕಾಣುವ ಹಾಗೆ ಮೈಯನ್ನು ಮರೆಮಾಡ್ಕೊಂಡಳು. ಬಿಕ್ಕಿ ಬಿಕ್ಕಿ ಅತ್ತಳು ಸೀತೆ. ರಾವಣನು ಸೀತೆಯನ್ನು ಕಂಡ. ಮುಳುಗುವ ನೌಕೆಯಂತಿದ್ದಳು ಸೀತೆ. ಊಟ ನಿದ್ದೆಯನ್ನು ಬಿಟ್ಟು ಕಠೋರ ವೃತವನ್ನು ಕೈಗೊಂಡಿದಾಳೆ. ಮಲಿನವಾಗಿದೆ ಮೈಯೆಲ್ಲ. ಕೆಸರಾದ ತಾವರೆ ಬಳ್ಳಿಯಂತಿದ್ದಾಳೆ. ಸೀತೆಯು ರಥಕ್ಕೆ ಕುದುರೆಗಳನ್ನು ಕಟ್ಟಿ ರಥವೇರಿ ವಾಯುವೇಗದಲ್ಲಿ ರಾಮನ ಕಡೆಗೆ ಧಾವಿಸ್ತಾ ಇದಾಳೆ. ಮನಸ್ಸೆಂಬ ರಥಕ್ಕೆ ಸಂಕಲ್ಪವೆಂಬ ಕುದುರೆಗಳನ್ನು ಕಟ್ಟಿ, ಕೋಲ್ಮಿಂಚಿನ ವೇಗದಲ್ಲಿ ರಾಮನೆಡೆಗೆ ಹೋಗ್ತಾ ಇದಾಳೆ. ಒಣಗಿ ಹೋಗಿದಾಳೆ, ಅಳ್ತಾ ಇದಾಳೆ, ಕೊನೆಗಾಣದ ದುಃಖದಲ್ಲಿದಾಳೆ. ಆದರೆ ರಾಮನ ಮೇಲಿಟ್ಟ ಮನಸ್ಸನ್ನು ಹಿಂದಿರುಗಿಸಲಿಲ್ಲ. ವಾಲ್ಮೀಕಿಗಳು ಮತ್ತೆ ಮತ್ತೆ ರೋಹಿಣಿಯ ಹೋಲಿಕೆ ಕೊಡ್ತಾರೆ, ರೋಹಿಣಿಗೆ ಧೂಮಕೇತು ಅಡರಿದೆ. ಆಕೆಯ ಬಟ್ಟೆ, ಮೈಯೆಲ್ಲ ಹೇಗಿದೆ ಅಂದ್ರೆ ಅವಳು ರಾಜಕುಲದವಳಲ್ಲ ಎನ್ನುವಂತೆ. ಇಕ್ಷ್ವಾಕುಕುಲಕ್ಕೆ ಸಲ್ಲುವವಳಲ್ಲ ಎನ್ನುವಂತಿದಾಳೆ. ಮಿಥ್ಯಾಪವಾದದಿಂದ ಭುಗ್ನಗೊಂಡ ಕೀರ್ತಿಯಂತೆ, ಅಭ್ಯಾಸವಿಲ್ಲದೇ ಶಿಥಿಲವಾದ ವಿದ್ಯೆಯಂತೆ, ಅವಮಾನಕ್ಕೊಳಗಾದ ಶೃದ್ಧೆಯಂತೆ, ಭಗ್ನಗೊಂಡ ಆಸೆಯಂತೆ, ಭಂಗಗೊಂಡ ಆಜ್ಞೆಯಂತೆ, ಅಪಹೃತವಾದ ಪೂಜಾದೃವ್ಯದಂತೆ, ಕೆರಳಿದ ಕೊಳದಂತೆ, ನಾಯಕನನ್ನು ಕಳೆದುಕೊಂಡ ಸೇನೆಯಂತೆ, ಕತ್ತಲಾವರಿಸುವಾಗ ಸೂರ್ಯನ ಬೆಳಕಂತೆ, ಶುಷ್ಕವಾದ ನದಿಯಂತೆ, ಆರಿಹೋದ ಅಗ್ನಿಜ್ವಾಲೆಯಂತೆ, ಗ್ರಹಣದ ಹುಣ್ಣಿಮೆಯ ರಾತ್ರಿಯಂತೆ, ಕಮಲದ ಕೊಳವನ್ನು ಆನೆ ಬಂದು ಹಾಳುಮಾಡಿದಂತೆ ಅತಿಶೋಕಾಭರವಾದ ಸೀತೆ ಇದ್ದಳು.

ಅಂಗಸಂಸ್ಕಾರ, ವಸ್ತ್ರಸಂಸ್ಕಾರ ಇಲ್ಲದಿರುವುದರಿಂದ ದಿನದಿಂದ ದಿನಕ್ಕೆ ಕುಂದುತ್ತಿದಾಳೆ ಸೀತೆ. ಸುಕುಮಾರಿ, ಸುಜಾತಾಂಗಿ, ಮೋಹನಾಂಗಿ, ರತ್ನಗರ್ಭಸುಲೋಚಿತ, ರತ್ನಗಳಿಂದ ನಿರ್ಮಿತವಾದ ಭವನದಲ್ಲಿರಬೇಕಾದವಳು. ಆದರೆ ಅವಳ ಪರಿಸ್ಥಿತಿ, ತಾವರೆ ಬಳ್ಳಿಯನ್ನು ಕಿತ್ತು ಬಿಸಿಲಿಗೆ ಎಸೆದಂತಿದೆ. ಹತ್ತುತಿಂಗಳಾಯಿತು ಊಟಮಾಡದೆ ಸೀತೆ. ಶೋಕ, ಚಿಂತೆ, ಭಯ ಇವು ಸೀತೆಯನ್ನು ಆವರಿಸಿದೆ. ಆಗ ಸೀತೆ ಕೈಮುಗಿದು ಪ್ರಾರ್ಥಿಸಿದಳಂತೆ, ರಾಘವನಿಗೆ ಜಯವಾಗಲಿ. ರಾವಣನ ಸಾವಾಗಲಿ ಎಂದು ದೇವರಿಗೆ ಪ್ರಾಂಜಲವಾಗಿ ಪ್ರಾರ್ಥಿಸಿದಳು. ಇಂಥಹ ಸೀತೆಗೆ ನಾನಾಪ್ರಕಾರದ ಆಮಿಷಗಳನ್ನು ಒಡ್ಡಿದನು. ಯಾಕೆ ಅಂದರೆ, ಸೀತೆಗಾಗಿ. ಇದೆಲ್ಲ ರಾವಣನ ವಧೆಗಾಗಿ. ಸೀತೆಯ ಮುಂದೆ ಪ್ರಣಯಪ್ರಾರ್ಥನೆ ಮಾಡ್ತಾನೆ. ಅಸಂಬದ್ಧ ಪ್ರಲಾಪ! ಹನುಮಂತ ಇದಕ್ಕೆಲ್ಲ ಸಾಕ್ಷಿ. ರಾವಣ ಹೇಗಿದ್ದ, ಏನು ಹೇಳಿದ ಸೀತೆಗೆ, ಅದಕ್ಕೆ ಸೀತೆ ಏನೆಂದಳು ಇದಕ್ಕೆಲ್ಲ ಹನುಮಂತ ಸಾಕ್ಷಿ. ಕೆಡುಕಿನಲ್ಲಿ ಕೆಡುಕು ಒಳಿತಿನಲ್ಲಿ ಒಳಿತನ್ನು ಎದುರಿಸ್ತಾ ಇದೆ. ಅವರ ಮಧ್ಯ ನಡೆದಿರುವ ಘಟನೆಯನ್ನು ಕಣ್ಣಾರೆ ನೋಡಿದ, ಕಿವಿಯಾರೆ ಕೇಳಿದ ಹನುಮಂತ. ಏನಾಯಿತು ಆ ಘಟನೆಯಲ್ಲಿ, ಮುಂದಿನ ಪ್ರವಚನದಲ್ಲಿ ಕೇಳೋಣ….

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments