ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

“ಸುಳ್ಳಿನ ಸಾಮ್ರಾಜ್ಯದಲ್ಲಿ ಎರಡು ಸತ್ಯಗಳು ಒಂದನ್ನೊಂದು ಭೇಟಿಯಾದರೂ ಕೂಡ; ಅವು ಪರಸ್ಪರ ನಂಬಲು ಅಷ್ಟು ಸುಲಭವಿಲ್ಲ”. ಸುತ್ತಲೂ ಸುಳ್ಳು ; ಎತ್ತ ನೋಡಿದರತ್ತ ಸುಳ್ಳು. ಇದು ಸೀತೆ ಇದ್ದ ಊರಿನ ಪರಿಸ್ಥಿತಿ.
ಮೋಸದ ಮೇಲೆ ಮೋಸವು ನಡೆದ ಬಳಿಕ ಧರ್ಮವೇ ಎದುರು ಬಂದು ನಿಂತರೂ ; ಇದು ಸುಳ್ಳೇ ಆಗಿರಬಹುದೇನೋ ….ಮಿಥ್ಯೆಯೇ ಆಗಿರಬಹುದೇನೋ ಎಂದೆನಿಸುತ್ತದೆ.

ಇನ್ನು ಹನುಮಂತ ಸೀತೆಯ ಬಳಿ ಹೋಗಿ ಎದುರು ನಿಂತಿಲ್ಲ. ಅದರ ಮೊದಲೇ ತನ್ನನ್ನು ನಂಬುವಳೇ?? ಎಂಬುದಾಗಿ ಹನುಮನಿಗೆ ಪ್ರಶ್ನೆಯು ಉಂಟಾಗಿದೆ. “ನಂಬಿಕೆಯನ್ನೇ ನಂಬುವುದು ಕಷ್ಟ ಎಂಬ ಧರ್ಮಸಂಕಟದಲ್ಲಿ ಹನುಮಂತನಿದ್ದಾನೆ. ಏಕೆಂದರೆ ಆತ ಸುಮಾರು ಬಾರಿ ಸೀತೆಯು ಸಾವಿನ ಬಗೆಗೆ ಆಡುವ ಮಾತುಗಳನ್ನು ನೋಡಿ; ತಾನು ಸೀತೆಯನ್ನು ಕಂಡು ಆಕೆಯನು ಸಂತೈಸದೇ ಹೋದರೆ ಬೆಳಗಾಗುವವರೆಗೆ ಉಳಿಯುವಳೋ ಇಲ್ಲವೋ ಎಂಬಷ್ಟು ಸಂಶಯವು ಹನುಮನಿಗೆ ಉಂಟಾಯಿತು.

ಸಮಸ್ಯೆ ಇದ್ದದ್ದು ಈ ರಾಕ್ಷಸರ ಮಧ್ಯೆ ಇರುವುದರಿಂದ ಹೇಗೆ ಸೀತೆಯ ಬಳಿ ಹೋಗಿ ಮಾತಾಡಲಿ ? ಮಾತಾಡಿದರೆ ಯುದ್ಧ ಪ್ರಾರಂಭವಾದರೆ ಎಂಬುದಾಗಿ ಎಂಬ ಭಯ. ಆದರೆ ಅದೀಗ ರಾಕ್ಷಸರಿಗೆ ನಿದ್ದೆಯು ಬಂದಿರುವ ಕಾರಣ ಕೊಂಚ ದೂರವಾಗಿದೆ. ಆದರೆ ಸೀತೆಯು ನಂಬದಿದ್ದರೆ ಎಂಬ ಸಂಶಯವು ಕಾಡಿದೆ. ಇದಕ್ಕೆ ಹನುಮನೇ ಒಂದು ಪರಿಹಾರವನ್ನು ಕಂಡುಕೊಂಡನು . ಅದೇನೆಂದರೆ- ಸೀತೆಯು ಉದ್ವೇಗಗೊಳ್ಳದಂತೆ ಹನುಮಂತನಲ್ಲಿ ನಂಬಿಕೆ ಬರುವಂತೆ ಮಾತನಾಡುವುದು. ಆಕೆಗೆ ಅತ್ಯಂತ ಪ್ರಿಯವಾದ ವಿಷಯದ ಬಗ್ಗೆ ಮಾತನಾಡುವುದು. ಸಹಜವಾಗಿಯೇ ಸೀತೆಗೆ ರಾಮನೆಂದರೆ ಪ್ರಿಯ. ಆದ್ದರಿಂದ ರಾಮನ ಕಥೆಯನ್ನು ಹೇಳುವುದರ ಮೂಲಕವಾಗಿ ನಾನು ಸೀತೆಗೆ ಉದ್ವೇಗಗೊಳ್ಳದಂತೆ ನಂಬಿಕೆ ಬರುವಂತೆ ಮಧುರವಾಗಿ ರಾಮನ ಕೀರ್ತನೆಯನ್ನು ಮಾಡುವೆ. ಯಾಕೆಂದರೆ ಸೀತೆಗೆ ರಾಮನು ಆತ್ಮ ಬಂಧು. ಆದುದರಿಂದ ಈ ರೀತಿಯಾಗಿ ಮಾಡುವೆನೆಂದು ಹನುಮನು ತೀರ್ಮಾನಿಸಿದ.

ಹೀಗೆ ಆ ಮಹಾನುಭಾವನು ಜಗತೀಪತಿಯ ಮಡದಿಯಾದ ಸೀತೆಯನು ಬಹು ವಿಧವಾಗಿ ನೋಡಿ ; ಆಕೆಯ ಕುರಿತಾಗಿ ಬಹಳವಾಗಿ ಯೋಚಿಸಿ ; ಬಳಿಕ ಮರದ ಮರೆಯಲ್ಲಿ ಕುಳಿತು ಅಲ್ಲಿಂದಲೇ ಪ್ರಿಯವಾದ ಸತ್ಯವನು ನುಡಿದನು. ಈವರೆಗೆ ಕೇಳಿರದ ಮಧುರ ಮತ್ತು ಗಂಭೀರವಾದ ಧ್ವನಿಯು ತೇಲಿ ಬರುತಲಿದೆ. ಆದರೆ ಎಲ್ಲಿಂದ ಅದು ಎಂದು ಸೀತೆಗೆ ತಿಳಿಯದು. ಹೀಗೆ ಹನುಮನು ರಾಮನ ಕೀರ್ತನೆಯನು ಅಯೋಧ್ಯೆಯೆಂಬಲ್ಲಿನ ದಶರಥನೆಂಬ ರಾಜನಿದ್ದ ಎಂಬಲ್ಲಿಂದ ಆರಂಭವನು ಮಾಡಿದ. ಆನೆ , ಕುದುರೆಗಳಿಂದ ಕೂಡಿದ್ದ ಸಮೃದ್ದ ರಾಜ್ಯ. ಆತನು ಪರಮಪ್ರೀತವಾದ ಗುಣವುಳ್ಳವ. ವಂಚನೆ , ಮೋಸವಿಲ್ಲದ ನೇರವಾದ ವ್ಯಕ್ತಿತ್ವ ದಶರಥನದ್ದು; ರಾಜಶ್ರೀಗಳಲ್ಲಿ ಶ್ರೇಷ್ಠನವನು, ತಪಸ್ಸಿನಲ್ಲಿ ಋಷಿಗಳಿಗೆ ಕಡಿಮೆಯಿಲ್ಲ, ಬಲದಲ್ಲಿ ಇಂದ್ರನಿಗೆ ಸಮಾನ, ಅಹಿಂಸೆಯಲ್ಲಿ ಆನಂದವನು ಕಾಣುವವನು. ಕ್ಷುದ್ರನಲ್ಲ, ಸತ್ಯಕ್ಕೆ ತನ್ನ ಮಗನಂತೆಯೇ ಬೆಲೆ ನೀಡುವವನು, ರಾಜ ಲಕ್ಷಣಗಳು ಅವನಲ್ಲಿ ಸಹಜವಾಗಿಯೇ ನೆಲೆಸಿದ್ದವು. ಮೊದಲು ಅವನು ಪ್ರಜೆಗಳಿಗೆ ಸುಖವನ್ನು ನೀಡಿದ ಮತ್ತು ಪ್ರಜೆಗಳು ಅವನಿಗೆ ಸುಖವನ್ನಿತ್ತರು.

ಅವನ ಮೊದಲನೆಯ ಪುತ್ರ ರಾಮ. ಆತನಿಗೆ ಪ್ರಿಯ. ಚಂದ್ರನಂತಹ ಮುಖ, ಆತ ವಿಶೇಷಜ್ಞ. ಧನುರ್ಧಾರಿಗಳ ಪೈಕಿ ಅವನಂತೆ ಯಾರಿಲ್ಲ. ಒಂದೇ ಒಂದು ತಪ್ಪು ನಡೆಯನ್ನು ಇಟ್ಟವನಲ್ಲ, ತನ್ನವರನ್ನು ಸಹ ನಡತೆಯಷ್ಟೇ ಚೆನ್ನಾಗಿ ಕಾಪಾಡುವವನು. ಇದು ಅವನಿಗೆ ಉಸಿರಾಡಿದಷ್ಟೇ ಸಹಜ. ಸಕಲ ಜೀವರಾಶಿಗಳನ್ನು ಮತ್ತು ಧರ್ಮವನ್ನು ಕಾಪಾಡುವವನು. ಇಂತಹ ರಾಮನು ವನವಾಸವನ್ನು ಮಾಡುವಂತಹ ಸಂದರ್ಭ ಬಂತು. ವೃದ್ಧ ತಂದೆಯ ಮಾತನ್ನು ಉಳಿಸುವ ಸಲುವಾಗಿ ತನ್ನ ಸಹೋದರ ಮತ್ತು ಪತ್ನಿಯೊಡನೆ ಕಾಡಿಗೆ ಹೋಗಬೇಕಾಗಿ ಬಂತು. ರಾಮನು ಕಾಡಿನಲ್ಲಿಯೂ ಸಹ ಬೇಕಾದಷ್ಟು ಧರ್ಮ ಕಾರ್ಯವನ್ನು ಮಾಡಿದ್ದಾನೆ. ಆದರೆ ಯಾವಾಗ ‘ಜನಸ್ಥಾನ ವಧೆ’; ಅಂದ್ರೆ 14,000 ರಾಕ್ಷಸರು, ಖರ, ದೂಷಣ, ತ್ರಿಷಿರರ ವಧೆ ರಾಮನಿಂದಾಯಿತೋ, ಅದರಿಂದಾಗಿ ವೈರವು ಬೆಳೆಯಿತು, ರಾವಣನವರೆಗೂ ತಲುಪಿತು. ಇದೇ ವೈರದ ಹಿನ್ನಲೆಯಲ್ಲಿ ರಾವಣನು ಜಾನಕಿಯನ್ನು ಮೋಸದಿಂದ ಅಪಹರಿಸಿದನು’ ಎನ್ನುವಾಗ ಸೀತೆಯ ಕಣ್ಣಲ್ಲಿ ಧರ ಧರ ನೀರಿಳಿದಿರ್ಬೇಕು.
ಆ ಕಥೆಯನ್ನು ಆಪ್ತವಾದ, ರಾಮನ ಪರವಾಗಿ ಮಾತನಾಡುವ ಒಂದು ಧ್ವನಿಯು ಹೇಳುವಾಗ ಸೀತೆಗೆ ಹೇಗನಿಸಿರಬೇಡ? ಸೀತೆಗೆ ಇಷ್ಟೇ ಗೊತ್ತು. ಮುಂದಿನ ಕಥೆಯನ್ನು ಹೇಳ್ತಾ ಇದ್ದಾನೆ ಹನುಮಂತ. ‘ಆ ಬಳಿಕ, ರಾಮನು ಸೀತೆಯನ್ನು ಇನ್ನಿಲ್ಲದಂತೆ ಕಾಡಿನಲ್ಲಿ‌ ಹುಡುಕಿದ’. ಸೀತೆಗೆ ಬೇಕಾದ ಕಥೆಯಿದು. ಕಡಿದ/ ಇನ್ನೂ ಕೂಡದ ಕೊಂಡಿಯನ್ನು ಹನುಮಂತ ಕೂಡಿಸ್ತಾ ಇದ್ದಾನೆ.

‘ಯಾವಳಲ್ಲಿ ಯಾವ ದೋಷವೂ ಇಲ್ಲವೋ ಅಂಥಾ ಸೀತೆಯನ್ನು ಹುಡುಕ್ತಾ ಹುಡುಕ್ತಾ ರಾಮನು ಕಾಡಿನಲ್ಲಿ ಮುನ್ನಡೆದು ಮುನ್ನಡೆದು ಸುಗ್ರೀವನೆಂಬ ವಾನರನನ್ನು ಮಿತ್ರನನ್ನಾಗಿ ಪಡೆದನು ಋಷ್ಯಮೂಕದ ಪರಿಸರದಲ್ಲಿ. ಆ ಮೈತ್ರಿಯ ಮುಂದುವರಿಕೆಯೇ ವಾಲಿ ಸಂಹಾರ. ಲೀಲಾಜಾಲವಾಗಿ ಶತ್ರುವಿನ ನರವನ್ನು ಗೆದ್ದು ಮೆರೆಯುವ ರಾಮನು ವಾಲಿಯನ್ನು ಸಂಹರಿಸಿ ವಾನರ ಸಾಮ್ರಾಜ್ಯವನ್ನು ಸುಗ್ರೀವನಿಗಿತ್ತನು. ಬಳಿಕ ಸುಗ್ರೀವನು ರಾಮನ ಸೇವೆಯಲ್ಲಿ ತೊಡಗಿದನು. ಕಪಿಗಳನ್ನು ದಿಕ್ಕು ದಿಕ್ಕಿಗೆ ಕಳುಹಿದನು. ಪ್ರಪಂಚದಾದ್ಯಂತ ಕೋಟ್ಯಾನುಕೋಟಿ ಕಪಿಗಳು ಹುಡುಕ್ತಾ ಇದ್ದಾರೆ. ಅವರ ನಡುವೆ ಪರಮಭಾಗ್ಯಶಾಲಿಯೊಬ್ಬ ಶತಯೋಜನ ಸಮುದ್ರದಾಚೆಗೆ ಲಂಕಾದ್ವೀಪದ ಮಧ್ಯದಲ್ಲಿ ರಾವಣನ ಮನೆಯಲ್ಲಿ‌ ಸೀತೆ ದುಃಖಿತಳಾಗಿ ರಾಕ್ಷಸಿಯರ ಮಧ್ಯೆ ಇದ್ದಾಳೆ. ಎನ್ನುವ ಸಂಪಾತಿಯ ವಚನದ ಮೇರೆಗೆ ಸಮುದ್ರವನ್ನೇ ಲಂಘಿಸಿ ಲಂಕೆಯನ್ನು ಸೇರಿ ಹುಡುಕಿ, ಹುಡುಕಿ, ಹುಡುಕಿ ಕೊನೆಗೆ ಸೀತೆಯನ್ನು ಕಂಡನು. ಅದು ನಾನು’. ಹನುಮಂತ ನೋಡಿ ಎಲ್ಲಿಂದ ಎಲ್ಲಿಗೆ ಬಂದು ತಲುಪಿದ! ಆಕೆಗೆ ಎಲ್ಲಿ ಪರಮ ವಿಶ್ವಾಸವಿದೆಯೋ; ಅವಳಿಗೆ ಗೊತ್ತಿರುವಲ್ಲಿಂದಲೇ ಕಥೆ ಪ್ರಾರಂಭ ಮಾಡೋದು. ಕೇಳ್ತಾ ಕೇಳ್ತಾ ತನ್ನ ಬುಡಕ್ಕೆ ತಂದು ನಿಲ್ಸಿದ್ದಾನೆ ಅದನ್ನ. ಈಗ ತನ್ನ ಮೇಲೆ ವಿಶ್ವಾಸ ಬರ್ಬೇಕಲ್ವಾ! ಹೇಗೆ ಬರೋದದು? ಅಂದ್ರೆ, ದಾರಿ ಹೀಗೆ ಅಂತ. ಹನುಮಂತನಂಥಾ ತಂತ್ರಜ್ಞರು ಮತ್ಯಾರೂ ಇರ್ಲಿಕ್ಕೆ ಸಾಧ್ಯವಿಲ್ಲ. ಅಂಥಾ ಜಾಣ ಅವನು. ಯಾಕಂದ್ರೆ ಒಂದು ಮನಸ್ಸನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋದು ತುಂಬಾ ಸೂಕ್ಷ್ಮ.

‘ಇವಳು ಸೀತೆಯೇ ಹೌದು ಅಂತ ನನಗೆ ಗೊತ್ತಾಯ್ತು. ಹೇಗೆ ಗೊತ್ತಾಯ್ತು ಅಂದ್ರೆ, ರಾಮನ ಉಪದೇಶದಿಂದಲಾಗಿ. ಸೀತೆಯ ರೂಪ, ವರ್ಣ, ಶೋಭೆ; ಇದನ್ನು ರಾಮನು ಏನೆಂದು ಬಣ್ಣಿಸಿದ್ದನೋ ಅದೇ ರೂಪದ, ಅದೇ ಬಣ್ಣದ, ಅದೇ ಶೋಭೆಯ ಸೀತೆಯನ್ನು ನಾನು ಕಂಡೆ. ಇಲ್ಲೇ‌ ಮರದ‌ ಕೆಳಗಿದ್ದಾಳೆ ಅವಳು’. ಅಲ್ಲಿಯೂ ಮತ್ತೆ ರಾಮನ ಶಿಫಾರಸು! ಒಂದು ಚೂರೂ‌ ಸಂಶಯ ಉಳಿಯದಂತೆಯೇ ಹನುಮಂತ ಇದನ್ನು‌ ನಿಭಾಯಿಸ್ತಾ ಇದ್ದಾನೆ.

ಇದನ್ನು ಕೇಳಿದ ಜಾನಕಿಯು ವಿಸ್ಮಯದ ತುಟ್ಟ ತುದಿಯನ್ನೇ ತಲುಪಿದಳು. ಅವಳಿಗೆ ನಿರೀಕ್ಷೆಯಿಲ್ಲ. ಹತ್ತು ತಿಂಗಳು ಕಳೆದುಹೋಗಿದೆ. ದಿನಾ ಕಂಡಿದ್ದು ಅದೇ ರಾವಣನ ವಿರೂಪ ಮತ್ತೆ ಈ ರಾಕ್ಷಸಿಯರು. ಒಂದು ಒಳ್ಳೆಯದು ಅಂತ ಬೇರೆ ಯಾವುದೂ ಆಕೆ ಕಂಡಿದ್ದಿಲ್ಲ ಅಂತ. ಶಿಂಶುಪಾ ವೃಕ್ಷದ ಕಡೆಯಿಂದ ಬರ್ತಾ ಇದೆ ಧ್ವನಿ. ಭಯದಿಂದ ಕೂಡಿದವಳಾಗಿ ತನ್ನ ಮುಖವನ್ನು ಮೇಲೆತ್ತಿದಳಂತೆ. ಮುಖವನ್ನು‌ ಬಹುತೇಕ ಕೂದಲು ಮುಚ್ಚಿದೆ. ಆ ಕೂದಲ ನಡುವಿಂದ ಸೀತೆ ಮುಖವೆತ್ತಿ ಶಿಂಶುಪಾ ವೃಕ್ಷವನ್ನು ನೋಡ್ತಾ ಇದ್ದಾಳೆ. ಏನೂ ಕಾಣ್ಲಿಲ್ಲ ಅವಳಿಗೆ ಅಲ್ಲಿ. ಯಾಕೆಂದ್ರೆ ಒಂದು ಬೆಕ್ಕಿನಷ್ಟು ಆಕಾರದಲ್ಲಿ ಇವನು ಒಳಗೆ ಅಡಗಿ ಕೂತಿದ್ರೆ, ಇವನಿಗೆ ಕೂಡಲೆ ಹೊರಗೆ ಬರ್ಲಿಕ್ಕೂ ಧೈರ್ಯ ಸಾಲದು. ನೋಡ್ಕೋಳೋಣ ನಿಧಾನಕ್ಕೆ ಅಂತ. ಹಾಗಾಗಿ ಇನ್ನೂ ಮರೆಯಲ್ಲೇ ಇದ್ದಾನೆ ಅವನು. ನೋಡಿದ್ರೆ ಮರವೊಂದೇ ಕಾಣ್ತಾ ಇದೆ. ಆಮೇಲೆ ಪಾಪ ಸಹಜವಾಗಿಯೇ ಅವಳು ಎಲ್ಲಾ ದಿಕ್ಕುಗಳನ್ನು ಸೀತೆ ಹುಡುಕಿದಳು. ಸೀತೆಗೆ ಪರಮ ಹರ್ಷವುಂಟಾಗಿದೆ. ಈ ಮಾತುಗಳು ಸೀತೆಗೆ ಅಮೃತವನ್ನೇ ಎರೆದಿದ್ದಾವೆ ಮರುಭೂಮಿಯಲ್ಲಿ ಮಳೆ ಬಂದಂತೆ.

ಸೀತೆಯ ಸರ್ವಭಾವಗಳು ರಾಮನ ಸ್ಮರಣೆಯನ್ನು ಮಾಡಿತು. ಅದು ಭಾವ. ಒಂದಷ್ಟು ಹೊತ್ತು ಆ ಭಾವದಲ್ಲಿ ಇದ್ಮೇಲೆ ಯಾರು ಅಂತ ನೋಡ್ಬೇಕಲ್ಲ‌ ಆಕೆಗೆ! ಪುನಃ ಹುಡುಕ್ತಾ ಇದ್ದಾಳೆ. ಆಗ ಹನುಮಂತ ಸ್ವಲ್ಪ ದರ್ಶನ ಕೊಡ್ತಾನೆ. ಮುಖ ಮಾತ್ರ ತೋರಿಸಿದ್ದಾನೆ.‌ ಉದಯಸೂರ್ಯನಂತೆ ಕಂಡಿತು ಅವನ ಮುಖ. ಅಂಥಾ ತೇಜಸ್ಸು! ಮತ್ತು ಕೆಂಪು. ಕೊಂಬೆಗಳ ಮಧ್ಯೆ ಅಡಗಿ ಚೂರು ಮಾತ್ರ ಮುಖ ತೋರಿಸಿದ್ದಾನೆ ಸೀತೆಗೆ. ಅದು ಏನೂಂತ ಗೊತ್ತಾಗ್ಬೇಕಲ್ಲ!? ಅವಳ ಮನಸ್ಸು ಚಲಿಸಿತು ಒಂದು ಸರ್ತಿ. ಸ್ವಲ್ಪ ಹೆಚ್ಚು ದರ್ಶನ ಕೊಡ್ತಾನಂತೆ. ಆಗ ಮಿಂಚಿನ ಗೊಂಚಲಿನಂತೆ ಕಂಡನಂತೆ ಹನುಮಂತ. ಹೊಳೆಯುವ ಸ್ವಚ್ಛ ಬಿಳಿ ಬಣ್ಣದ ಬಟ್ಟೆಯನ್ನು ಉಟ್ಕೊಂಡಿದ್ದಾನೆ. ಬಂಗಾರದ ಬಣ್ಣದ ಶರೀರ – ಕಣ್ಣುಗಳು, ಕೆಂಪು ಬಣ್ಣದ ಮುಖ. ಅಲ್ಲಿಯೇ ಬಾಗಿ ಸೀತೆಗೆ ನಮಸ್ಕರಿಸಿದನಂತೆ. ಬಾಯಿಂದ ಪ್ರಿಯವಾದ ಮಾತುಗಳು ಪುಂಖಾನುಪುಂಖವಾಗಿ ಬರ್ತಾ ಇದ್ದಾವೆ. ಸೀತೆ ಸಮಾಧಾನದಲ್ಲಿ ಇದ್ರೆ ಸಾಕೂಂತ, ಮತ್ಯಾರನ್ನೂ ಕರೆಯದಿದ್ರೆ ಸಾಕು ಎನ್ನುವ ಪರಿಸ್ಥಿತಿ. ಮತ್ತೆ ಆಶ್ಚರ್ಯಗೊಂಡಳಂತೆ ಸೀತೆ. ಹೊಸ ಪರಿಚಯ ನೋಡಿ! ಏನಿದು? ಯಾರಿದು? ಹೇಗೆ ಗೊತ್ತು ಇದೆಲ್ಲ? ಹೇಗೆ ಬಂದ ಇಲ್ಲಿಗೆ? ಅಂತ. ಕ್ಷಣ ಭಯವಾಯಿತು ಅವಳಿಗೆ. ರೂಪ ವಾನರನದ್ದು ಆದರೆ ಅದ್ಭುತವಾಗಿರ್ತಕ್ಕಂತ ತೇಜಸ್ಸು. ಇದು ವಿಶೇಷದ ರೂಪ ಎನ್ನುವುದು ಆಕೆಗೆ ಗೊತ್ತಾಯಿತು. ಕಣ್ಣು ಕೋರೈಸ್ತಾ ಇದೆ. ಒಂದು ರೀತಿಯಲ್ಲಿ‌ ಮೈಮರೆವು ಅವಳನ್ನು ಆವರಿಸ್ಲಿಕ್ಕೆ ಶುರುವಾಯ್ತಂತೆ. ಅವಳು ಮತ್ತೆ ರಾಮನನ್ನೇ ನೆನಪು ಮಾಡ್ತಾಳೆ.

‘ರಾಮಾ..ರಾಮಾ..’ ಅಂತ ರಾಮನನ್ನ ಕರೆದಳು. ‘ಲಕ್ಷಣಾ..’ ಅಂತ ಕರೆದಳು ಮತ್ತೆ. ಮಂದ ಸ್ವರದಲ್ಲಿ ಮೆಲ್ಲಗೆ ಅತ್ತಳು. ವಿನೀತನಾಗಿ ಹನುಮಂತ ಮತ್ತೆ ನಮಸ್ಕಾರ ಮಾಡಿದ್ನಂತೆ. ನಂಬಿಕೆ ಬರುವವರೆಗಿನ ಈ ಸನ್ನಿವೇಶ ದಾಟೋದು ತುಂಬಾ ಕಷ್ಟ ನೋಡಿ! ಅಪಾಯದ ಯಾವ ಸುಳಿವೂ ಇಲ್ಲ‌ ಹನುಮಂತನ ಕಡೆಯಿಂದ. ಹಿತವೇ ಕಾಣ್ತಾ ಇದೆ. ಆಕೆಗೆ ಒಮ್ಮೆ ಭ್ರಮೆಯಾಯ್ತಂತೆ.‌ ‘ಬಹುಷಃ ನಾನು ಸ್ವಪ್ನ ನೋಡ್ತಾ ಇದ್ದೇನೆ!’ ಎಂಬುದಾಗಿ ಸೀತೆ ಭಾವಿಸಿದಳು. ಸುಮಾರು‌ ಹೊತ್ತು ಏನೂ ಗೊತ್ತೇ ಆಗ್ಲಿಲ್ಲ ಆಕೆಗೆ. ಬಹು ಹೊತ್ತಿನ ಬಳಿಕ‌ ಎಚ್ಚರಗೊಂಡು ಸೀತೆ ಆಲೋಚಿಸಿದಳಂತೆ, ‘ಸ್ವಪ್ನದಲ್ಲಿ‌ ನನಗೆ ಮಂಗ ಗೋಚರಿಸಿತು ಇವತ್ತು’. ಸ್ವಪ್ನದಲ್ಲಿ ಮಂಗನನ್ನು ನೋಡಿದ್ರೆ ನಮಗೆ ಬೇಕಾದವರಿಗೆ ಏನೋ‌ ತೊಂದ್ರೆ ಬರ್ತದೆ ಅಂತ ಲೆಕ್ಕ. ಹಾಗಾಗಿ ಸೀತೆ ಚಿಂತಿತಳಾಗಿ ‘ರಾಮನಿಗೆ‌ ಮಂಗಲವಾಗಲಿ, ಲಕ್ಷ್ಮಣನಿಗೆ ಮಂಗಲವಾಗಲಿ, ಜನಕರಾಜನಿಗೆ ಮಂಗಲವಾಗಲಿ’ ಅಂತ ಶುರು ಮಾಡ್ಕೊಂಡು ಬಿಟ್ಟಳಂತೆ. ಅವರ್ಯಾರಿಗಾದ್ರೂ ತೊಂದರೆ ಕಾದಿದೆಯೋ ಏನೋ. ಸ್ವಪ್ನದಲ್ಲಿ‌ ವಾನರ ಗೋಚರನಾಗಿದ್ರಿಂದ ಅಂತ ಅವರಿಗೆಲ್ಲ ಶ್ರೇಯಸ್ಸನ್ನು ಪ್ರಾರ್ಥನೆ ಮಾಡೋಕ್ಕೆ ಶುರು ಮಾಡ್ಕೊಂಡಳಂತೆ ಸೀತೆ. ಆಮೇಲೆ ಸ್ವಲ್ಪ ಹೊತ್ತಾಯಿತು. ಸ್ವಪ್ನವೋ ಎಚ್ಚರವೋ‌ ಅಂತ ದೊಡ್ಡ ಜಿಜ್ಞಾಸೆ ಸೀತೆಗೆ.

ಆಮೇಲೆ ಅಂದುಕೊಂಡಳಂತೆ, ಇದು ಸ್ವಪ್ನ ಅಲ್ಲ. ಯಾಕಲ್ಲ? ನಿದ್ರೆ ಬಂದ್ರೆ ತಾನೇ ನನಗೆ‌ ಅಂತ! ಶೋಕ, ದುಃಖಗಳಿಂದ ಪೀಡಿತಳಾದ ನನಗೆ ನಿದ್ದೆ ಇಲ್ಲದೆ ಯಾವುದೋ‌ ಕಾಲವಾಗಿದೆ. ನಿದ್ದೆಯನ್ನೇ ಕಾಣದವಳಿಗೆ ಸ್ವಪ್ನ‌ ಬೀಳುವುದು ಎಲ್ಲಿಂದ? ನಿದ್ದೆ ಬರ್ಬೇಕಾದ್ರೆ ಸುಖವಿರ್ಬೇಕು. ಪೂರ್ಣಚಂದ್ರಮುಖ‌ ರಾಮನಿಂದ ದೂರವಾದ ಮೇಲೆ ನನಗೆಲ್ಲಿಂದ ಸುಖ? ರಾಮನ ಕಥೆಯನ್ನು ಒಬ್ಬ ಕಪಿಯಿಂದ ಕೇಳುವಂತಹ ಸಮಯ ಬಂದಿತು ಎಂಬ ಭ್ರಮೆಯು ನನಗೆ ಬಂದಿತು ಎಂದುಕೊಂಡಳು. ಇದಕ್ಕೆ ಕಾರಣ – ರಾಮನ ಮೇಲಿರುವ ಇನ್ನಿಲ್ಲದ ಪ್ರೀತಿ. ಅದನ್ನೇ ಆಲೋಚಿಸುತ್ತಿರುವ ನನಗೆ ಯಾರೋ ರಾಮನ ಕಥೆ ಹೇಳಿ ಬಿಟ್ಟಂತಾಗಿದೆ. ನನಗೆ ಹುಚ್ಚು ಹಿಡಿದಿದೆಯೇ? ಹಾಗೆಂದ ಮಾತ್ರಕ್ಕೆ ನಾನು ಹಾಗಿಲ್ಲ. ನಾನು ತರ್ಕಿಸುತ್ತಿದ್ದೇನೆ. ಆದರೆ ಮನೋರಾಜ್ಯಕ್ಕೆ ಸ್ಪಷ್ಟ ರೂಪವಿರುವುದಿಲ್ಲ. ಅದು ಮೋಡಗಳಲ್ಲಿ ಆಕಾರಗಳು ಮೂಡಿದಂತೆ ಅಸ್ಪಷ್ಟ ಇರುವುದು. ಆದರೆ ಇಲ್ಲಿ ಹನುಮ ಹೇಳುತ್ತಿರುವುದು ಸ್ಪಷ್ಟ.

ಆದುದರಿಂದ ಸೀತೆಯು ಮೊದಲಿಗೆ ವಾಚಸ್ಪತಿಯನು ನೆನೆದು ಆ ಕಪಿಯು ಹೇಳುತ್ತಿರುವುದೆಲ್ಲವೂ ಸತ್ಯವಾಗಿ ಬಿಡಲಿ ಎಂದು ಸತ್ಯಲೋಕ ವಾಸಿಯಾದ ಬ್ರಹ್ಮನ ಬಳಿ? ಅಗ್ನಿ, ಇಂದ್ರನ ಬಳಿ ಪ್ರಾರ್ಥಸಿ ; ಈ ಮಂಗನು ಹೇಳಿದ್ದು ನಿಜವಾಗಲಿ ಎಂದುಕೊಂಡಳು. ನಂತರ ಸ್ವಲ್ಪ ಹತ್ತಿರದ ಕೊಂಬೆಗೆ ಹನುಮನು ಬಂದಾಗ, ಸೀತೆಯು ಆತನ ಮುಖವನ್ನು ನೋಡುವಳು. ಹವಳದಂತಹ ಮುಖ, ದೈನ್ಯವೇ ಮೈವೆತ್ತ ರೂಪದಲ್ಲಿದ್ದ ಹನುಮ ಕೈ ಮುಗಿದನು. ಅನಂತರ ಪುನಃ ಮಾತನಾಡಲು ಪ್ರಾರಂಭಿಸಿದ.

ಮೊದಲನೆಯದಾಗಿ ಸೀತೆಯನು ವಿಚಾರಿಸುವ – ಯಾರಮ್ಮ ನೀನು ಪದ್ಮದಳ ನಯನೆ?, ಮಾಸಿದ ಕೌಷವನು ಉಟ್ಟಿರುವೆ?, ನಿರ್ದೋಷಳೆ ಯಾರಮ್ಮ ನೀನು? ಕಮಲ ಪತ್ರಗಳಿಂದ ಸ್ಫಟಿಕದಂತಹ ಜಲ ಸುರಿಯುತ್ತಿರುವಂತೆ ಶೋಕದ ಕಣ್ಣಿನಿಂದ ನೀರು ಸುರಿಯುತ್ತಿದೆ, ನೀನು ದೇವರಿಗೆ ಸೇರಿದವಳೇ ಅಥವಾ ಸುರರಿಗೋ ಅಥವಾ ಅಸುರರಿಗೆ? ಯಕ್ಷರಿಗೋ, ಗಂಧರ್ವರಿಗೋ ಸೇರಿದವಳೇ? ಹೇ ಶೋಭನೆಯೇ ಯಾರು ನೀನು?

ಪಾರ್ವತಿ ದೇವಿಯೇ? ಮರುತ್ ಗಣ ಅಥವಾ ಅಷ್ಟ-ವಸುಗಳಿಗೆ ಸೇರಿದವಳೇ? ನನಗಂತೂ ನೀನು ದೇವತೆಯಂತೆ ತೋರುತ್ತಿದ್ದಿ. ಚಂದ್ರನಿಂದ ದೂರವಾಗಿ ಧರೆಗಿಳಿದು ಬಂದ ರೋಹಿಣಿಯೇ ನೀನು? ಸರ್ವಗುಣಾನ್ವಿತೆ ನೀನು, ಶುಭ ಲೋಚನೆಯು ನೀನು, ಕೋಪದಿಂದಲೋ ಅಥವಾ ಬೇಸರದಿಂದಲೋ ವಸಿಷ್ಠರಿಂದ ದೂರವಾಗಿರುವ ಅರುಂಧತಿಯೇ ನೀನು? ಯಾಕೆ ನೀನು ಪುತ್ರ, ಪಿತನೋ ಈ ಲೋಕದಿಂದ ಪರ ಲೋಕವನ್ನು ಸೇರಿ ಹೋಗಿರುವಂತೆ ಶೋಕಿಸುತ್ತಿಯೇ?

ಅನಂತರ ತುಸು ಹತ್ತಿರ ಬಂದು, ನಾನು ನಿನ್ನನ್ನು ದೇವತೆಯೆಂದೇ ಭಾವಿಸಿದ್ದೇನೆ. ಆದರೆ ಕಣ್ಣಲ್ಲಿ ನೀರು ಸುರಿಸುತ್ತಿದ್ದೀಯೆ, ನಿಟ್ಟುಸಿರು ಬಿಡುತ್ತಿದ್ದೀಯೆ, ಭೂಮಿಯನ್ನು ಮುಟ್ಟಿದ್ದೀಯೆ. ಆದ್ದರಿಂದ ನೀನು ದೇವತೆಯಲ್ಲ. ನೀನು ನನ್ನ ದೊರೆಯ ವಿಷಯವನ್ನು ಹೇಳುವಾಗ ನಿನ್ನಲ್ಲಿ ಪ್ರತಿಕ್ರಿಯೆ ಉಂಟಾಯಿತು. ನಿನ್ನ ನಿಲುವು, ನಡೆ, ಶರೀರ ವಿನ್ಯಾಸ ಇದನ್ನೆಲ್ಲಾ ಗಮನಿಸಿದಾಗ ನೀನು ಭೂಮಿ ಪಾಲನ ಪುತ್ರಿ ಮತ್ತು ಭೂಮಿ ಪಾಲನ ಮಹಿಷಿ, ನೀನು ದೊರೆಯೋರ್ವನ ಮಗಳು, ಚಕ್ರವರ್ತಿಯ ಮಡದಿಯಾಗಿರಬೇಕು. ರಾವಣನಿಂದ ಜನಸ್ಥಾನದಿಂದ ಅಪಹೃತಳಾದವಳು ನೀನೆ ಎಂದಾದರೆ ನೀನು ಸೀತೆ. ಅದು ಹೌದಾದರೆ ಹೇಳಿಬಿಡು, ನಿನಗೆ ಮಂಗಲವಾಗಲಿ.
ನಿನ್ನ ದೈನ್ಯವನು ನೋಡಿದರೆ, ಸಾಮಾನ್ಯ ಮನುಷ್ಯರಿಗೆ ಇಲ್ಲದ ಈ ದಿವ್ಯ ರೂಪ, ಈ ತಪೋರೂಪ. ಇವನ್ನೆಲ್ಲವನು ನೋಡಿದಾಗ ನೀನೇ ರಾಮನ ಪಟ್ಟದ ಮಹಿಷಿ ; ಹೌದು ಎಂದು ಹೇಳಿದನು.

ರಾಮನ ಬಗ್ಗೆ ಮಾತನಾಡಿದವರು, ಒಡನಾಟ ಇರತಕ್ಕಂತವರು ಇದುವರೆಗೂ ಯಾರೂ ಇಲ್ಲದಿದುದರಿಂದ ಆಕೆ ಹನುಮಂತನ ಮಾತನು ಕೇಳಿ ಅತ್ಯಂತ ಆನಂದದಿಂದ್ದಾಳೆ. ಹಾಗಾಗಿ ಸೀತೆ ಹನುಮನ ಜೊತೆ ಮಾತನಾಡಲು ಆರಂಭಿಸಿದಳು. ನಾನು ಯಾರು ಗೊತ್ತಾ ನಿನಗೆ; ಈ ಭೂಮಂಡಲದಲ್ಲಿ ರಾಜಸಿಂಹದ ಮಧ್ಯೆ ಮುಖ್ಯನಾಗಿರತಕ್ಕಂತಹ, ಆತಜ್ಙನಾದ, ಶತ್ರು ಸೈನ್ಯ ಸಂಹಾರಕನಾದ, ಧೀರ ದಶರಥನ ಸೊಸೆ. ನಾನು ಜನಕ ರಾಜನ ಕುವರಿ ಸೀತೆ, ಧೀಮಂತನಾದ ರಾಮನ ಮಡದಿ ನಾನು, ಮದುವೆಯಾದ ಬಳಿಕ ಮತ್ತು 12 ವರುಷ ಮನುಷ್ಯರು ಸಾಮಾನ್ಯವಾಗಿ ಸುಖಪಡಬೇಕಾದಂತಹ ಎಲ್ಲಾ ಸುಖವನ್ನು ಕಂಡಿದ್ದೇನೆ. 13 ನೇ ವರುಷ ರಾಮನಿಗೆ ಪಟ್ಟಕಟ್ಟುವ ಏರ್ಪಾಡು ನಡೆಯಿತು. ಆಗ ಕೈಕೇಯಿ ಎಂಬ ದಶರಥನ ಪತ್ನಿ ಅಡ್ಡ ಬಂದಳು. ರಾಮನಿಗೆ ಪಟ್ಟಾಭಿಷೇಕ ಮಾಡುವುದಾದರೆ ನಾನೇನು ತಿನ್ನೋದಿಲ್ಲ, ಕುಡಿಯೋದಿಲ್ಲ ಎಂಬುದಾಗಿ ಹೇಳಿ ; ರಾಮನನ್ನು ಕಾಡಿಗೆ ಕಳುಹಿಸಿ, ಭರತನಿಗೆ ಪಟ್ಟವನು ಕಟ್ಟಿ ಎಂಬುದಾಗಿ ದೊರೆಯನ್ನು ಸತ್ಯ ಮಾತಿನಲ್ಲಿ ಕೈಕೇಯಿ ಬಂಧಿಸಿದಳು. ದಶರಥನು ರಾಜನಾದರು ಸತ್ಯವಾಕ್, ಕೈಕೇಯಿಯ ಮಾತುಕೇಳಿ ದೊರೆಯು ಎಚ್ಚರ ತಪ್ಪಿ ಬಿದ್ದನು. ಅಹಿತವಾದ ಆ ಮಾತನು ಕೇಳಿ, ಕೊನೆಗೆ ಅಳುತ್ತಾ ಕೊಟ್ಟ ರಾಜ್ಯವನು ದಶರಥನು ರಾಮನ ಬಳಿ ಅತ್ತು ಕೇಳಿದ.

ರಾಮನಿಗೆ ರಾಜ್ಯಕ್ಕಿಂತಲೂ ಪಿತೃವಾಕ್ಯವೇ ಪ್ರಿಯವಾಯಿತು, ಮನಸ್ಸಿನಿಂದ ದಶರಥನ ಮಾತನ್ನು ಒಪ್ಪಿ, ಹಾಗೆಯೇ ನಡೆದುಕೊಂಡನು. ಕೊಡುವುದು ರಾಮನ ಗುಣ. ಬೇರೆಯವರಿಂದ ಏನನ್ನು ಸ್ವೀಕರಿಸುವುದಿಲ್ಲ. ಆತ್ಮೀಯರಿಗೆ, ಹಿರಿಯರಿಗೆ, ಗುರುಗಳಿಗೆ ಅಪ್ರಿಯವಾದ ಮಾತನ್ನು ರಾಮನು ಆಡಲಾರ. ರಾಮನು ಬೇಕಾದರೆ ಜೀವವನ್ನೇ ಕೊಟ್ಟಾನು, ಆದರೆ ತಂದೆ ತಾಯಿಗಳಿಗೆ ಕೆಟ್ಟ ಮಾತನ್ನು ಆಡುವವನಲ್ಲ. ಹಾಗಾಗಿ ರಾಜ್ಯವನ್ನು ರಾಮನು ತ್ಯಜಿಸಿ ನನ್ನನ್ನು ಕೌಸಲ್ಯೆಗೆ ಒಪ್ಪಿಸಲು ಪ್ರಯತ್ನ ಮಾಡಿದರೂ ನಾನು ಒಪ್ಪದೇ ಕಾಡಿಗೆ ಬಂದೆ ಎಂದು ಸೀತೆ ಹೇಳಿದಳು. ರಾಮನು ಕಾಡಿಗೆ ಬರುವಾಗ ಅವನಿಗಿಂತ ಮುಂದೆ ಇದ್ದವನು ನಾನು, ಏಕೆಂದರೆ ರಾಮನಿಲ್ಲದ ಸ್ವರ್ಗವೂ ಕೂಡ ನರಕ ಮತ್ತು ಅಣ್ಣನ ಅನುಯಾತ್ರೆಗಾಗಿ ನನಗಿಂತ ಮೊದಲೇ ಲಕ್ಷ್ಮಣನು ನಾರು ಬಟ್ಟೆಯಿಂದ ಅಲಂಕರಿಸಿಕೊಂಡಿದ್ದ ಎಂದು ಸೀತೆ ಹೇಳಿದಳು. ರಾಮನು ವನವಾಸಕ್ಕೆ ಹೋಗುವುದಾದರೂ ಅನುಯಾತ್ರೆ ಎಂದು, ನಾರು ಬಟ್ಟೆ ಧರಿಸಿದ್ದರೂ ಅಲಂಕಾರ ಎಂದು ಸೀತೆ ಲಕ್ಷ್ಮಣನನ್ನು ವರ್ಣಿಸಿದ್ದಾಳೆ. ಹೀಗೆ ದೊರೆಯ ಮಾತನ್ನು ಪಾಲಿಸುತ್ತಾ ನಾವು ಕಾಡಿನಲ್ಲಿ ಬಾಳಿದೆವು. ರಾಮನ ಮಡದಿಯಾದ ನಾನು ಕಾಡಿನಲ್ಲಿ ಈ ದುರಾತ್ಮಕ ರಾವಣನಿಂದ ಅಪಹರಿಸಲ್ಪಟ್ಟೆ ಎಂದು ಹನುಮಂತನಿಗೆ ಸೀತೆಯು ಹೇಳಿದಳು. ಈ ಧುರುಳ ನನಗೆ ಇನ್ನು 2 ತಿಂಗಳು ಜೀವಿತಾವಧಿಯನ್ನು ಕೊಟ್ಟಿದ್ದಾನೆ, ಅವನ ಪ್ರಕಾರ ವರ ಅದು!! 12 ತಿಂಗಳಿನಲ್ಲಿ ಹತ್ತು ತಿಂಗಳು ಕಳೆದಿದೆ, ಇನ್ನೆರಡು ತಿಂಗಳು ಆಯಸ್ಸನ್ನು ಕೊಟ್ಟಿದ್ದಾನೆ. ಎರಡು ತಿಂಗಳು ಆದ ಬಳಿಕ ನಾನು ಸಾಯುವವಳಿದ್ದೇನೆ ಎಂದು ಸೀತೆ ತನ್ನ ಮಾತನ್ನು ಪೂರ್ಣ ಮಾಡಿದಳು. ಇದನ್ನು ಹೇಳುವಾಗ ರಾಮ ಇನ್ನು ಸಿಗುವುದಿಲ್ಲ ಎಂದು ಸೀತೆಗೆ ಬಹಳ ದುಃಖವಾಯಿತು.

ಆಗ ಹನುಮಂತನು ಸೀತೆಯನ್ನು ಸಂತೈಸಿದನು. ಏನು ಚಿಂತೆ ಮಾಡಬೇಡ ದೇವಿ ನೀನು, ನಾನು ರಾಮನ ಸಂದೇಶವನ್ನು ಹೊತ್ತು ತಂದ ದೂತ, ನಿನ್ನ ಬಳಿಗೆ ರಾಮನು ಕಳುಹಿದ ದೂತ ನಾನು, ಹೇ ವೈದೇಹಿ ನಿನ್ನ ವಲ್ಲಭನಾದ ರಾಮನು ಕ್ಷೇಮವಾಗಿದ್ದಾನೆ. ರಾಮನು ನಿನ್ನ ಕ್ಷೇಮ ಸಮಾಚಾರವನ್ನು ಕೇಳಿದ್ದಾನೆ. ಯಾವನು ಬ್ರಹ್ಮಾಸ್ತ್ರವನ್ನು ಬಲ್ಲನೋ, ಯಾವನು ವೇದಗಳನ್ನು ಬಲ್ಲನೋ, ಯಾವನು ವೇದಜ್ಞರಲ್ಲಿ ಶ್ರೇಷ್ಠನೋ ಅಂತಹ ದಾಶರಥಿಯು ನಿನ್ನ ಕುಶಲವನ್ನು ಕೇಳಿದ್ದಾನೆ. ರಾಮನ ಪ್ರಿಯ ಸೇವಕನಾದ ಲಕ್ಷ್ಮಣನು ಕೂಡ ಶೋಕ ಸಂತಪ್ತನಾಗಿ ತನ್ನ ತಲೆಯನ್ನು ನಿನ್ನ ಪಾದದಲ್ಲಿ ಇಟ್ಟು, ಶಿರಸ್ಸಿನಿಂದಲೇ ನಿನಗೆ ಪ್ರಣಾಮವನ್ನು ಸಲ್ಲಿಸಿದ್ದಾನೆ ಎಂದು ಹನುಮಂತನು ಸೀತೆಗೆ ಹೇಳಿದನು. ಇದನ್ನು ಕೇಳಿದ ಸೀತೆಗೆ ಮೈಯೆಲ್ಲ ಸಂತೋಷವಾಯಿತು ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ಆನಂದವು ಅಲೆ–ಅಲೆಯಾಗಿ ತಂಪು–ತಂಪಾಗಿ ಸೀತೆಯ ಮೈಯೆಲ್ಲ ವ್ಯಾಪಿಸಿತು. ಆಗ ಸೀತೆಯು ಹನುಮಂತನಿಗೆ ಒಂದು ಗಾದೇ ಮಾತನ್ನು ಹೇಳಿದಳು. “ಸಾಯಬೇಡ ಬದುಕಿರು, ಎಂದಾದರೂ ಒಂದು ದಿನ ಆನಂದವು ನಿನ್ನನ್ನು ಹುಡುಕಿಕೊಂಡು ಬಂದೀತು, ನಮ್ಮ ಬದುಕಿನಲ್ಲಿ ಯಶಸ್ಸಿಲ್ಲ, ಸಂತೋಷವಿಲ್ಲ, ಕಷ್ಟವಿದೆ, ತೊಳಲಾಟ ಇದೆ ಎಂದು ಆತ್ಮಾಘಾತವನ್ನು ಮಾಡಿಕೊಳ್ಳಬೇಡ, ಬದುಕಿದ್ದರೆ ನೂರು ವರ್ಷ ಬಳಿಕವಾದರೂ ಆನಂದವು ಹುಡುಕಿ ನಮ್ಮೆಡೆಗೆ ಬಂದೀತು” ಎಂದು ಹೇಳಿದಳು. ಈ ಗಾದೆ ನಿಜವಾಗಿಯೂ ಸೀತೆಯ ಪಾಲಿಗೆ ಸತ್ಯವಾಗಿತ್ತು. ಆನಂದವು ಪ್ರಪಂಚವನ್ನೆಲ್ಲ ರಾಮನರಸಿಯನ್ನು ಅರಸಿ ಸಮುದ್ರವನ್ನು ಹಾರಿ ಲಂಕೆಯನ್ನೆಲ್ಲ ಹುಡುಕಿಕೊಂಡು ಸೀತೆಯ ಕಣ್ಮುಂದೆ ಬಂದು ನಿಂತಿತ್ತು ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ನಂತರ ಇಬ್ಬರಲ್ಲಿಯೂ ಪರಸ್ಪರ ಪ್ರೇಮ ಉಂಟಾಯಿತು. ಸೀತೆಗೆ ಹನುಮಂತನಲ್ಲಿ ವಾತ್ಸಲ್ಯ , ಹನುಮಂತನಿಗೆ ಪ್ರಭುವಿನ ಪಟ್ಟದ ಮಹೀಷಿ ಎನ್ನುವ ಪ್ರೀತಿ ಇತ್ತು. ಅದ್ಭುತವಾದ ಪ್ರೀತಿಯು ಅವರ ಮಧ್ಯದಲ್ಲಿ ಉಂಟಾಯಿತು. ಸುಮಾರು ಸಮಯ ಇಬ್ಬರೂ ಬಹಳ ವಿಶ್ವಾಸದಲ್ಲಿ ಮಾತನಾಡಿಕೊಂಡರು. ಹನುಮಂತನಿಗೆ ಸೀತೆಗೆ ವಿಶ್ವಾಸ ಬಂತು ಎಂದು ಇನ್ನು ಹತ್ತಿರಕ್ಕೆ ಒಂದು ಕೊಂಬೆಗೆ ಹಾರಿದನು.

ಮೊದಲು ಆ ಕೋಂಬೆಯಿಂದ ಈ ಕೊಂಬೆಗೆ ಬಂದವನು, ಈಗ ಮತ್ತೊಂದು ಕೊಂಬೆಗೆ ಹಾರಿದನು. ಆಗ ಸೀತೆಗೆ ಸಂಶಯ ಉಂಟಾಯಿತು. ಕಪಿಗಳಿಗೆ ಶಾಖಾ ಮೃಗ ಎಂದು ಹೆಸರಿದೆ. ಏಕೆಂದರೆ ಅವುಗಳಿಗೆ ಒಂದೇ ಕೊಂಬೆಯಲ್ಲಿ ಇರಲು ಸಾಧ್ಯವಿಲ್ಲ, ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಹೋಗಬೇಕಾಗುತ್ತದೆ. ಯಾವಾಗ ಸಮಾಧಾನ ಮಾಡಬೇಕೆಂದು ಮುಂದಿನ ಕೊಂಬೆಗೆ ಬಂದನೋ ಆಗ ಸೀತೆಗೆ ರಾವಣನ ನೆನಪಾಯಿತು. ಹನುಮಂತನು ಹತ್ತಿರ ಬಂದಂತೆ ಸೀತೆಗೆ ಸಂಶಯ ಜಾಸ್ತಿ ಆಯಿತು. ಸೀತೆಯು ತನಗೆ ತಾನೇ ಇವನು ರಾವಣನಿರಬಹುದು, ಬೇಡದ ಕೆಲಸ ಮಾಡಿದಂತೆ ಆಯಿತು, ಇವನಿಗೆ ಎಲ್ಲ ಹೇಳಿದೆನಲ್ಲ, ಬಾರಿ ವಿಶ್ವಾಸದಿಂದ ಮಾತನಾಡಿದೆನಲ್ಲ ಎಂಬ ಚಿಂತೆಯಾಯಿತು. ರೂಪಾಂತರ ಹೊಂದಿ ಬಂದ ಅದೇ ರಾವಣ ಇವನು, ನಾನ್ಯಾಕೆ ಹೀಗೆಲ್ಲಾ ಮಾತನಾಡಿಬಿಟ್ಟೆ ಎಂದು ಸೀತೆಗೆ ಅನ್ನಿಸಿತು. ಆಗ ಸೀತೆಯು ಅಶೋಕ ವೃಕ್ಷದ ಕೊಂಬೆಯನ್ನು ಬಿಟ್ಟು ನೆಲದಲ್ಲಿ ಕುಳಿತುಕೊಂಡಳು. ಹನುಮಂತನಿಗೆ ಸೀತೆಗೆ ಮತ್ತೆ ಸಂಶಯ ಬಂದಿದ್ದರಿಂದ ಮುಂದೆ ಏನು ಮಾಡುವುದು ಎಂಬ ಚಿಂತೆಯಾಯಿತು. ಹನುಮಂತನು ಮತ್ತೊಮ್ಮೆ ಸೀತೆಗೆ ನಮಸ್ಕಾರ ಮಾಡಿದನು. ದುಃಖಾರ್ತಳಾದ, ರಾವಣಭಯ ಮೋಹಿತಳಾದ ಸೀತೆಗೆ ಪ್ರಣಾಮವನ್ನು ಮಾಡಿದನು. ರಾವಣನೆಂಬ ಭಯದಿಂದ ಕೂಡಿದ ಸೀತೆಯು ಹನುಮಂತನ ಕಡೆ ತಿರುಗಿಯೂ ನೋಡಲಿಲ್ಲ. ಹನುಮಂತನು ಮತ್ತೆ ಮೊದಲಿನಿಂದ ಆರಂಭ ಮಾಡಬೇಕಾಯಿತು. ತಿರುಗಿ ನೋಡದಿದ್ದರೂ ಹನುಮಂತನ ಮುಖ ನೋಡದೆ ಮಾತನಾಡಿದಳು. ನಮಸ್ಕರಿಸುವ ಹನುಮನನ್ನು ಕಂಡು ಸುದೀರ್ಘವಾದ ನಿಟ್ಟುಸಿರನ್ನು ಇಟ್ಟಳು. ಮಾಯಾವಿಯಾದ ರಾವಣನೇ ನೀನು ಹೌದಾದರೆ ಮತ್ತೆ ನನಗೆ ಉಪದ್ರವ ಮಾಡುತ್ತಿದ್ದಿಯಲ್ಲ, ಇಷ್ಟು ಹೊತ್ತು ಇಷ್ಟು ಪರಿಯ ಕಷ್ಟ ಕೊಟ್ಟಿದ್ದು ಸಾಲದೆ ಮತ್ತೆ ನನ್ನನ್ನು ಕ್ಲೇಶಕ್ಕೆ ಒಳಪಡಿಸುತ್ತಿಯಲ್ಲ, ಇದು ಚೆಂದವಲ್ಲ. ಅಂದು ನಿನ್ನ ರೂಪವನ್ನು ತ್ಯಾಗ ಮಾಡಿ ಭಿಕ್ಷುರೂಪ ಧಾರಣೆ ಮಾಡಿ ಬಂದೆಯಲ್ಲ, ಈಗ ಕಪಿರೂಪ ಧಾರಣೆ ಮಾಡಿ ಬಂದೆಯಾ ಎಂದು ಹನುಮಂತನು ರಾವಣನೆಂದು ಭಾವಿಸಿ ಸೀತೆಯು ಹೇಳಿದಳು.
ಮಿಥ್ಯೆಯೇ ಸುತ್ತಲೂ ತುಂಬಿರುವಾಗ ಸತ್ಯ ಎದುರಾದರೂ ನಂಬುವುದು ಕಷ್ಟಸಾಧ್ಯ ―ಶ್ರೀಸೂಕ್ತಿ.

ಉಪವಾಸ ಮಾಡಿ ಮಾಡಿ ಸೊರಗಿ ಹೋಗಿ ದೈನ್ಯದ ರೂಪವೇ ಆಗಿದ್ದೇನೆ, ಹೇ ಕಾಮರೂಪ ! ಬೇಕಾದ ರೂಪ ತಾಳಬಲ್ಲವನೆ, ನಿಶಾಚಾರನೆ ಮತ್ತೆ ಮತ್ತೆ ನನ್ನನ್ನು ನೋಯಿಸುವುದು ಏನು ಚೆಂದ? ಎಷ್ಟು ಸರಿ ಇದು …?? ಎಂದು ಸೀತೆಯು ಹೇಳಿದಳು. ಇನ್ನೊಮ್ಮೆ ಸೀತೆಗೆ ಇದು ಹಾಗಿಲ್ಲದೆಯೂ ಇರಬಹುದು. ಸೀತೆಯು ಹನುಮಂತನಿಗೆ ಕೇಳುವ ಹಾಗೆ ಇದನ್ನೆಲ್ಲ ಮಾತನಾಡುತ್ತಿದ್ದಳು. ನಂತರ ಸೀತೆ ಈ ಕಪಿಯು ರಾವಣನಲ್ಲ ಎಂಬುದನ್ನು ಸಮರ್ಥನೆ ಮಾಡುತ್ತಾಳೆ. ಇವನನ್ನು ಕಂಡೊಡನೆ ಏಕೆ ದೊಡ್ಡ ಪ್ರೀತಿ ಉಂಟಾಯಿತು?. ರಾವಣ ಭಿಕ್ಷುರೂಪ ಧರಿಸಿ ಬಂದಾಗಲೂ ಉಂಟಾಗಲಿಲ್ಲ , ಆದರೆ ಕಪಿಯನ್ನು ಕಂಡೊಡನೆಯೇ ಶುದ್ಧವಾದ, ಅನಿರ್ವಚನೀಯವಾದ, ಉತ್ತಮವಾದ ಪ್ರೀತಿ ಉಂಟಾಯಿತು, ಆದ್ದರಿಂದ ಒಳ್ಳೆಯನಿರಬಹುದು ಎಂದು ಭಾವಿಸಿ ನೀನು ರಾಮನ ದೂತನೇ ಹೌದಾದರೆ ನಿನಗೆ ಮಂಗಳವಾಗಲಿ ಎಂದು ಹೇಳಿದಳು. ಹನುಮಂತ! ನನಗೆ ರಾಮಕಥಾವನ್ನು ಕೇಳಬೇಕು, ರಾಮಕಥೆಯು ನನಗೆ ಅತ್ಯಂತ ಪ್ರಿಯವಾಗಿರುವಂತಹದ್ದು, ಮತ್ತೇ ಹೇಳುವೆಯಾ?.. ನನಗೆ ಅತ್ಯಂತ ಪ್ರಿಯನಾದ ರಾಮನ ಗುಣಗಳನ್ನು ಬಣ್ಣಿಸೋ, ಇನ್ನು ಬಣ್ಣಿಸು, ಮತ್ತಷ್ಟು ಬಣ್ಣಿಸು ಕೇಳಿದಷ್ಟೂ ನನಗೆ ತೃಪ್ತಿಯಿಲ್ಲ, ಮಗೂ! ನನ್ನ ಹೃದಯವನ್ನು, ಮನಸ್ಸನ್ನು ಅಪಹರಿಸುತ್ತಿದ್ದಿಯೇ, ನನಗೆ ಗೊತ್ತಿಲ್ಲದಂತೆ ನಿನಗೆ ನಾನು ಅಭಿಮುಖಳಾಗುತ್ತಿದ್ದೇನೆ ಎಂದು ಹನುಮಂತನಿಗೆ ಸೀತೆ ಹೇಳಿದಳು. ಇಷ್ಟು ಹೇಳಿದ ಸೀತೆಗೆ ಇದು ಸೇರಿ ಸ್ವಪ್ನವಿರಬಹುದಾ ಎಂದು ಅನ್ನಿಸಿತು. ಸ್ವಪ್ನವಾದರೂ ಇಷ್ಟು ಚೆನ್ನಾಗಿರಲು ಸಾಧ್ಯವೇ ..? ನನ್ನ ಸ್ವಪ್ನ ಎಷ್ಟು ಚೆನ್ನಾಗಿದೆ, ರಾಮದೂತ ಎಂದು ಹೇಳಿ ವಾನರ ಬಂದು ನನ್ನ ಜೊತೆಯಲ್ಲಿ ಮಾತನಾಡಿದನು, ಎಂತಹ ಅದ್ಭುತವಾದ ಆನಂದದ ಸ್ವಪ್ನ ಎಂದು ಹೇಳಿದಳು. ಸ್ವಪ್ನದಲ್ಲಿಯಾದರೂ ರಾಮನು ಕಂಡಿದ್ದರೆ ಸ್ವಲ್ಪ ನೆಮ್ಮದಿಯಾಗಿರಬಹುದಿತ್ತು, ಸ್ವಪ್ನಕ್ಕೂ ನನ್ನನ್ನು ಕುರಿತು ಹೊಟ್ಟೆಕಿಚ್ಚು!! .. ಎಂದು ಸ್ವಪ್ನವನ್ನೇ ಸೀತೆಯು ಬೈದಳು. ಸೀತೆಯು ಬುದ್ಧಿಯಿಂದ ಇದು ಸ್ವಪ್ನವಲ್ಲ ಎಂದು ತೀರ್ಮಾನ ಮಾಡುತ್ತಾಳೆ. ಸ್ವಪ್ನದಲ್ಲಿ ಕಪಿಯನ್ನು ಕಂಡರೆ ಮುಂದೆ ಒಳ್ಳೆಯದಾಗುವುದಿಲ್ಲ. ಆದರೆ ನನಗೀಗ ಹಾಗೆ ಆಗಿಲ್ಲ, ಹಿತವಾಗಿದೆ ಒಳ್ಳೆಯದೇ ಆಗಿದೆ, ಅದೆಷ್ಟೋ ಕಾಲದ ರಾಮನ ಬಗ್ಗೆ ಕೇಳುವುದೇ ಹಿತ ನನಗೆ ಎಂದು ಸೀತೆಯು ಭಾವಿಸಿದಳು. ಶಾಸ್ತ್ರದ ಪ್ರಕಾರ ಸ್ವಪ್ನದಲ್ಲಿ ಕಪಿಯನ್ನು ಕಂಡರೆ ಒಳ್ಳೆಯದಾಗುವುದಿಲ್ಲ. ಶಾಸ್ತ್ರ ತಪ್ಪಾಗಲು ಸಾಧ್ಯವಿಲ್ಲ . ನನಗೇನು ಚಿತ್ತ ಭ್ರಮೆಯೇ ? ಅಥವಾ ವಾತ ವಿಕಾರವೇ..? ಅಥವಾ ಹುಚ್ಚೇ ಹಿಡಿದಿರಬಹುದಾ..? ಅಥವಾ ಮರೀಚಿಕೆಯೇ ? ರಾಮನನ್ನು ಕಾಣಬೇಕೆಂಬ ತವಕದಲ್ಲಿ ಇದೆಲ್ಲ ಮರೀಚಿಕೆಯಂತೆ ಉಂಟಾಗುತ್ತಿದೆಯೇ ..? ಎಂದು ಚಿಂತಿಸಿದ ಸೀತೆಯು ಕೊನೆಯಲ್ಲಿ ನನಗೆ ಹುಚ್ಚು ಹಿಡಿದಿಲ್ಲ, ನಾನು ಸರಿಯಾಗಿ ಯೋಚನೆ ಮಾಡುತ್ತಿರುವದರಿಂದ ಇದು ಹುಚ್ಚಲ್ಲ, ಹಾಗಾದರೆ ಇನ್ನೇನಿರಬಹುದು ಎಂದು ಯೋಚಿಸಿದಾಗ ರಾಕ್ಷಸರು ಕಾಮರೂಪಿಗಳಾದರಿಂದ ಇವನು ರಾವಣನಿರಬಹುದು ಎಂಬ ಅಭಿಪ್ರಾಯದಿಂದ ಸೀತೆಯು ಮೌನವನ್ನು ತಾಳಿದಳು. ಹನುಮಂತನಿಗೆ ಸೀತೆಯ ಮನಸ್ಸೇ ಕಾಣುತ್ತಿತ್ತು. ಸೀತೆಯ ಭಾವವನ್ನು ಗಮನಿಸುತ್ತಿದ್ದ. ಹೇಗಾದರೂ ಮಾಡಿ ಸೀತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ್ದರಿಂದ ಪ್ರಯತ್ನವನ್ನು ಆರಂಭ ಮಾಡಿದನು.

ಮುಂದೇನಾಯಿತು ..?
ಸೀತೆಯು ಮುದ್ರೆಯುಂಗರವನ್ನು ನೋಡಿ ನಂಬಿದಳೆ? ಸೀತೆ ಹನುಮಂತನಿಗೆ ಎಂತಹ ಪರೀಕ್ಷೆ ಮಾಡಿದಳು ?? ಹನುಮಂತ ಹೇಗೆ ಪ್ರತಿಕ್ರಿಯಿಸಿದ ?? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments