ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಹನುಮಂತನ ಸುತ್ತಮುತ್ತಲೂ ಫಲ ತುಂಬಿದೆ. ಹನುಮತ್ ಪೀಠಕ್ಕೆ ಇಂದು ವಿಶೇಷ ಕಳೆ. ನಾನಾ ಪ್ರಕಾರದ ಫಲಗಳು ಹನುಮಂತನನ್ನು ಮುತ್ತಿದಾವೆ. ಕಥೆಯ ಘಟ್ಟ ಕೂಡ ಹಾಗೇ ಇದೆ. ಹನುಮಂತನ ಮಹಾಪ್ರಯತ್ನ ಇದ್ಯಲ್ಲ, ದಕ್ಷಿಣ ದಿಕ್ಕಿನ ಅನ್ವೇಷಣ, ಸಾಗರಾಲಂಘನ, ಲಂಕಾನ್ವೇಷಣ..

ಅದೆಲ್ಲದಕ್ಕೆ ಮತ್ತೆ ಸೀತೆಯನ್ನು ಕಂಡಿದ್ದಕ್ಕೆ ಕೂಡ ಒಂದು ಫಲ ಬರುವ ಸಂದರ್ಭ. ಹನುಮಂತ ಹನುಮಂತನಾಗಿ ಹುಟ್ಟಿದ್ದಕ್ಕೆ ಫಲ ಬರುವ ಒಂದು ಸಂದರ್ಭ. ಮಾತ್ರವಲ್ಲ, ಸೀತೆಯ ತಪಸ್ಸಿಗೆ; 10 ತಿಂಗಳ ಕಾಲ ಸೀತೆಯು ತಪಸ್ಸು ಮಾಡಿದ ಹಾಗೆ ರಾಮನ ಸ್ಮರಣೆ ಮಾಡಿದಳೋ, ರಾಮನ ಸೀತಾ ವಿಷಯವಾದ ನಿರ್ಮಲ ಮನಸ್ಸಿಗೂ ಕೂಡ ಫಲ ಬರುವ ಒಂದು ಸಂದರ್ಭವಾಗಿದ್ದರಿಂದ ಇಂದು ಫಲಾಲಂಕೃತ ಧಾರಾ ರಾಮಾಯಣ.

ನರಕಚತುರ್ದಶಿ ಬೇರೆ. ಸೀತೆಯ ನರಕಕ್ಕೆ ಒಂದು ಮುಕ್ತಾಯ ಆಗುವ ಸಂದರ್ಭ. ನರಕಾಸುರನ ಸಂಹಾರವಾದ ರೀತಿಯಲ್ಲಿ ನರಕದಂಥಾ ಒಂದು ದುಃಖದ ಪರಿಹಾರ ರೂಪದಲ್ಲಿ ನರಕಾಸುರನ ಸಂಹಾರ ಕೂಡ ಈ ಒಂದು ಧಾರಾ ರಾಮಾಯಣದಲ್ಲಿ ಸೀತಾರಾಮರ, ಆಂಜನೇಯನ ಕೃಪೆಯಿಂದ ನೆರವೇರಲಿಕ್ಕಿದೆ.

ಈ ಮನಸ್ಥಿತಿ ಪರಿಸ್ಥಿತಿ ಒಂದೇ ಆಗಿರುವುದಿಲ್ಲ ಎಷ್ಟೋ ಬಾರಿ. ಪರಿಸ್ಥಿತಿಯೇ ಬೇರೆ ರೀತಿ, ಮನಸ್ಥಿತಿಯೇ ಬೇರೆ ರೀತಿ. ಅದೆರಡೂ ಒಂದಾದರೆ ಸ್ವಲ್ಪ ತುಂಬಾ ಇರುತ್ತದೆ. ಅದರಡೂ ಬೇರೆ ಬೇರೆ ಆಗಿಬಿಟ್ಟರೆ ತುಂಬಾ ಸಂಕಟ ಆಗುತ್ತದೆ ಏನನ್ನೋ ಮಾಡಬೇಕು ಅಂತ ಇರುತ್ತದೆ ಆದರೆ ಅದನ್ನು ಮಾಡುವ ಮನಸ್ಥಿತಿ ಇರುವುದಿಲ್ಲ. ಮಾಡಲಿಕ್ಕೆ ಪರಿಸ್ಥಿತಿ ಅವಕಾಶ ಕೊಡುವುದಿಲ್ಲ. ಏನನ್ನೋ ಮಾಡಬಾರದು ಅಂತ ಅಂದುಕೊಳ್ಳುತ್ತೇವೆ ಅದನ್ನು ಮಾಡಲೇಬೇಕಾಗ್ತದೆ. ಪರಿಸ್ಥಿತಿ ಅದು. ಜೀವನದ ಎಷ್ಟೋ ಸಂದರ್ಭಗಳು ಈ ಮನಸ್ಥಿತಿ-ಪರಿಸ್ಥಿತಿ ಬೇರೆಯಾಗಿದ್ದರಿಂದ ನಮಗೆ ಸಂಕಟವನ್ನು ಕೊಡತಕ್ಕಂತದ್ದು. ಈಗ ಪ್ರಕೃತ ಸೀತೆಯದೂ ಅದೇ ಸ್ಥಿತಿ. ಏನಪ್ಪಾ? ಮನಸ್ಥಿತಿ ಬೇರೆ: ಮನಸ್ಥಿತಿ ಹನುಮಂತನನ್ನು ಮಗು ಎಂದು ಕರೆಯುವ ಹಾಗೆ ಮಾಡ್ತಾ ಇದೆ. ಸೀತೆ ಹೇಳ್ತಾಳೆ, ‘ಅದೇಕೋ‌ ಕಾಣೆ, ನಿನ್ನನ್ನು ನೋಡಿದ ಕೂಡಲೇ ಅದ್ಭುತವಾದ ಪ್ರೀತಿ‌ ಉಂಟಾಗ್ತಾ ಇದೆ’ ಎಂಬ ಮಾತು. ‘ನನ್ನ ಮನಸ್ಸನ್ನು ನೀನು ಅಪಹರಿಸ್ತಾ ಇದ್ದೀಯೇ’ ಎನ್ನುವ ಇನ್ನೊಂದು ಮಾತು. ಈ ಎರಡು ಮಾತುಗಳೂ ಸೀತೆಯ ಮನಸ್ಥಿತಿಗೆ ಹಿಡಿದ ಕೈಗನ್ನಡಿ.

ಪರಿಸ್ಥಿತಿ ಬೇರೆಯಿದೆ. ಪರಿಸ್ಥಿತಿ ಅಂದ್ರೆ, ಆದ ಮೋಸ! ರೂಪಾಂತರ ತಾಳಿ ಬಂದು ರಾವಣನು ಮಾಡಿದ ಅನಾಹುತ. ಅದೊಂದು ಕಡೆಗಾದ್ರೆ, ಇನ್ನೊಂದು ಕಡೆಗೆ, ಅವರೆಲ್ಲರೂ ರೂಪಾಂತರ ತಾಳ್ತಕ್ಕಂಥಾ ಶಕ್ತಿಯುಳ್ಳವರು. ರಾಕ್ಷಸರು ಕಾಮರೂಪಿಗಳು, ಬೇಕಾದ ರೂಪ ಧಾರಣೆ ಮಾಡಬಲ್ಲವರು, ಮೋಸವೇ ಬದುಕಾಗಿ ಇರ್ತಕ್ಕಂತವರು. ಹಾಗಾಗಿ ಇನ್ಯಾವ ರೂಪವೋ?‌ ಇನ್ನೇನು ಷಡ್ಯಂತ್ರವೋ? ಎನ್ನುವ ಆತಂಕ ಇನ್ನೊಂದು ಕಡೆಯಿಂದ ಕಾಡಿದೆ. ಹೀಗಾಗಿ, ಅದೆರಡೂ ಬೇರೆ ಬೇರೆಯಾಗಿದ್ದರಿಂದ‌ ಸೀತೆ ಮೌನ ತಾಳುವಂತಾಯಿತು. ಅವಳನ್ನು ಮಾತಾಡಿಸ್ಬೇಕಲ್ಲ, ಹನುಮಂತನಿಗೆ ‌ದಾರಿ ಗೊತ್ತಾಗಿದೆ. ಎಲ್ಲಿ ಅವಳ ಇಷ್ಟ ಇರುವಂಥದ್ದು, ಏನನ್ನು ಮಾಡಿದ್ರೆ ಏನನ್ನು‌ ಹೇಳಿದ್ರೆ ಅವಳು ಮತ್ತೆ ಅಭಿಮುಖಳಾಗ್ತಾಳೆ ಅನ್ನುವ ಗುಟ್ಟನ್ನು ಹನುಮಂತ ಕಂಡುಹಿಡ್ದಿದ್ದಾನೆ. ಹಾಗಾಗಿ ಅವನು ‌ನಿಶ್ಚಯ ಮಾಡ್ಕೊಳ್ಳೋದು ಅದನ್ನೇ. ಕಿವಿಗೆ ಹಿತವಾಗುವ ಮಾತುಗಳಿಂದ ನಾನು ಸೀತೆಯನ್ನು ಹರ್ಷಗೊಳಿಸ್ತೇನೆ ಮೊದಲು. ಅವಳೀಗ ಭಯಗೊಂಡಿದ್ದಾಳೆ. ಕಿವಿಗೆ ಹಿತವಾದ ಮಾತುಗಳು, ಬೇರೇನೂ ಅಲ್ಲ, ರಾಮನ ಗುಣಗಾನ ಮಾಡಿದ್ರೆ ಆಯ್ತು. ಸೀತೆಗೆ ತುಂಬಾ ಸಂತೋಷವಾಗ್ತದೆ.

ಅದನ್ನೇ ಮಾಡ್ತಾನೆ ಹನುಮಂತ. ‘ರಾಮ ಹೇಗಿದ್ದಾನೆ? ಸೂರ್ಯನಂತೆ ತೇಜಸ್ವಿ, ಚಂದ್ರನಂತೆ ಲೋಕಕಾಂತ. ಲೋಕವೆಲ್ಲ ಬಯಸಿದೆ ರಾಮನನ್ನು. ಲೋಕಪ್ರಿಯ, ರಾಜಾ ಕುಬೇರನಂತೆ ಲೋಕಕ್ಕೆಲ್ಲಾ ದೊರೆಯವನು, ಜಗನ್ನಾಥ. ಮಹಾಪರಾಕ್ರಮಿ, ವಿಷ್ಣುವಿನಂತೆ. ರಾಮ ಸತ್ಯವಾದಿ ಮತ್ತು ಮಧುರವಾದಿ. ಸತ್ಯವನ್ನೇ‌ ಮಧುರವಾಗಿ ಹೇಳ್ತಕ್ಕಂಥವನ್ನು ದೇವ ವಾಚಸ್ಪತಿಯಂತೆ. ರೂಪ ಸೌಭಾಗ್ಯ ಸಂಪನ್ನ. ರಾಮ‌ ರೂಪವಂತ, ಹೇಗೆ ಅಂದ್ರೆ, ಆಕಾರವೆತ್ತಿ ಬಂದ ಮನ್ಮಥನಂತೆ. ಎಲ್ಲಿ ಕೋಪಿಸಿಕೊಳ್ಬೇಕೋ, ಅಲ್ಲಿಯೇ ಕೋಪಿಸಿಕೊಳ್ತಾನೆ. ಯಾವಾಗ ಕೋಪಿಸಿಕೊಳ್ಬೇಕೋ, ಆವಾಗಲೇ ಕೋಪಿಸಿಕೊಳ್ತಾನೆ. ಎಲ್ಲಿ ಪ್ರಹರಿಸಬೇಕು ಅಂತ ಗೊತ್ತವನಿಗೆ. ಯಾರ ಮೇಲೆ ದಂಡ ಪ್ರಯೋಗಿಸಬೇಕೆಂದು ಬಲ್ಲವನು. ಯುದ್ಧದಲ್ಲಿಯೂ, ಪ್ರಹಾರ ಮಾಡ್ಬೇಕಾದ ಸ್ಥಾನ ಯಾವುದು? ಶರೀರದಲ್ಲಿ ಎಲ್ಲಿ ಪ್ರಹರಿಸ್ಬೇಕು? ಅಥವಾ ಯಾವ ಹಂತದಲ್ಲಿ ಎಲ್ಲಿ ಬಾಣ ಪ್ರಯೋಗ ಮಾಡ್ಬೇಕು? ಎಂಬ ಬಗ್ಗೆ ಸರಿಯಾದ ಜ್ಞಾನವುಳ್ಳವನು. ಈ ಜಗತ್ತಿನಲ್ಲಿ ಶ್ರೇಷ್ಠವಾದ ಮಹಾರಥನು ಶ್ರೀರಾಮಚಂದ್ರ. ಯಾವನ ಬಾಹುಗಳ ನೆರಳಲ್ಲಿ ಲೋಕವೆಲ್ಲ ನೆಮ್ಮದಿ ಇದೆಯೋ ಅವನು. ಅವನ ಭುಜಬಲದ ನೆರಳಲ್ಲಿ ಲೋಕಕ್ಕೆಲ್ಲ ನೆಮ್ಮದಿ. ಲೋಕರಕ್ಷಣೆಗೆ ಅವನ ಭುಜಬಲ ಮೀಸಲು. ಮಾಯಾಮೃಗದ ರೂಪದಿಂದ ರಾಮನಿಗೆ ವಂಚನೆ; ದೂರಕ್ಕೆ‌ ಕರೆದೊಯ್ದು, ಆಶ್ರಮವು ಶೂನ್ಯವಾದಾಗ ಯಾವ ತರದಿ ನಿನ್ನನ್ನು ಕದ್ದು ಎಳೆದುಕೊಂಡು ಬಂದನೋ, ಆ ದುಷ್ಕೃತ್ಯಕ್ಕೆ ಫಲವನ್ನು ಸದ್ಯದಲ್ಲಿಯೇ ನೋಡುತ್ತೀಯೆ ನೀನು‌’. ಇದೆಲ್ಲ ಸೀತೆಗೆ ಪ್ರೀತಿ, ಈ ಮಾತುಗಳು. ‘ಏನಾಗ್ತದೆ? ಏನ್ಮಾಡ್ತಾನೆ ರಾಮ? ಅಂದ್ರೆ, ರಾಮನು ರೋಷದಿಂದ ಪ್ರಯೋಗಿಸ್ತಕ್ಕಂಥಾ ಹೊತ್ತಿ ಉರಿಯುವ ಬಾಣಗಳಿಂದ ರಾವಣನು ಹತನಾಗಿ ಬೀಳ್ತಾನೆ. ರಾವಣನನ್ನು ವೀರ್ಯವಂತನಾದ ರಾಮನು ತನ್ನ ಪ್ರಜ್ವಲಿಸುವ ಬಾಣಗಳಿಂದ ಕೊಂದು ಕೆಡವ್ತಾನೆ. ಸದ್ಯದಲ್ಲಿಯೇ ಆಗ್ತದಿದು. ಅವನು ಕಳುಹಿ ಬಂದವನು‌ ನಾನು’. ಇಷ್ಟು ಪೂರ್ವಪೀಠಿಕೆಯನ್ನು ಹಾಕಿ, ಅವಳನ್ನು ಪುನಃ ಒಂದು‌ ಒಳ್ಳೆಯ ವಾತಾವರಣಕ್ಕೆ ಕರೆದುಕೊಂಡು ಹೋಗಿ, ಆಮೇಲೆ‌ ವಿಷಯಕ್ಕೆ‌ ಬಂದ‌ ಮತ್ತೆ.

‘ಅಂಥವನು. ಯಾವನನ್ನು ದೂರ ಸೆಳೆದು‌ ನಿನ್ನನ್ನು ಕದ್ದು ತರಲಾಯಿತೋ, ಯಾವನ ಕೋಪಪ್ರಯುಕ್ತವಾದ ಬಾಣಗಳಿಂದ ರಾವಣನು ಸತ್ತು ಬೀಳಲು ಹೆಚ್ಚು ಸಮಯವಿಲ್ಲವೋ, ನಿನ್ನ ಅಪಹರಣದ ದುಷ್ಕೃತ್ಯಕ್ಕೆ ಸರಿಯಾದ ಫಲ ಬರ್ತದೋ, ಅಂತಹ ರಾಮನು ಕಳುಹಿದ ದೂತನು ನಾನು. ನಿನ್ನ ವಿತೋಗದಿಂದ ದುಃಖಾರ್ಥನಾದ ರಾಮನು ನಿನ್ನ ಕುಶಲವನ್ನು ಕೇಳಿದ್ದಾನೆ, ನೀನಿಲ್ಲದೆ ಅವನಿಗೆ ತುಂಬ ದುಃಖ ಆಗಿದೆ’.

‘ಹಾಗೇ, ಸುಮಿತ್ರಾನಂದವರ್ಧನ ಲಕ್ಷ್ಮಣ, ಆ ಮಹಾಬಾಹುವು ನಿನಗೆ ಶಿರಸಾ ಅಭಿವಾದನ ಮಾಡಿ ಕುಶಲಪ್ರಶ್ನೆ ಮಾಡಿದ್ದಾನೆ. ದೇವೀ, ರಾಮನ ಸಖ ಸುಗ್ರೀವನೆಂಬ ವಾನರಶ್ರೇಷ್ಠ. ಅವನು ವಾನರ ಚಕ್ರವರ್ತಿ. ಮುಂದೆ, ನಿನ್ನ ಸೇವೆಗೆ ತನ್ನ ಸೇನೆಯನ್ನು ಆತ ತೊಡಗಿಸ್ತಾನೆ. ಅವನೂ ಕೂಡ, ನಿನಗೀಗ ಪರಿಚಯ ಇಲ್ಲ, ಆಮೇಲೆ ಗೊತ್ತಾಗ್ತದೆ. ಅಂಥಾ ಸುಗ್ರೀವನು ಕೂಡ ನಿನ್ನ ಕುಶಲವನ್ನು ಕೇಳಿದ್ದಾನೆ. ನಿತ್ಯವೂ ರಾಮನು ನಿನ್ನ ಸ್ಮರಣೆ ಮಾಡ್ತಾನೆ. ಒಂದು ಪಕ್ಕದಲ್ಲಿ ಲಕ್ಷ್ಮಣ, ಇನ್ನೊಂದು ಪಕ್ಕದಲ್ಲಿ ಸುಗ್ರೀವ – ಅಲ್ಲಿ ಪ್ರಸ್ರವಣ ಪರ್ವತದಲ್ಲಿ.

ಅಂಥಾ ರಾಮ, ಒಂದು ದಿನವಾದರೂ ಬಿಡದೆ, ಒಂದು ಕ್ಷಣವಾದರೂ ಬಿಡದೆ ನಿನ್ನ ಸ್ಮರಣೆಯನ್ನು ಮಾಡ್ತಾನೆ. ದೇವರು ದೊಡ್ಡವನು. ನೀನಿನ್ನೂ ಬದುಕಿದ್ದೀಯಲ್ಲ! ಏನೂ ಆಗಿಬಿಡ್ಲಿಲ್ಲವಲ್ಲ. ಈ ದುಷ್ಟ ರಾಕ್ಷಸಿಯರ ಮಧ್ಯದಲ್ಲಿ ನೀನಿನ್ನೂ ಜೀವಂತವಾಗಿದ್ದೀಯೆ ಎನ್ನುವುದೇ ನಮಗೆ ತುಂಬಾ ಸಮಾಧಾನದ ಸಂಗತಿ. ಏನೂ ಚಿಂತೆಯಿಲ್ಲ, ಕೆಟ್ಟ ಕಾಲ ಕಳೆಯಿತು. ಹೆಚ್ಚು ಸಮಯ‌ ಬೇಡ ಇನ್ನು, ರಾಮ ಲಕ್ಷ್ಮಣರನ್ನು ನೋಡ್ತೀಯೆ ನೀನು. ವಾನರಕೋಟಿಯ ಮಧ್ಯದಲ್ಲಿ‌ ಶೋಭಿಸುವ ರಾಮ ಲಕ್ಷ್ಮಣರನ್ನು ಮತ್ತು ಸುಗ್ರೀವನನ್ನು ಕಾಣುವೆ ನೀನು. ನಾನು ಆ ಸುಗ್ರೀವನ ಸಚಿವ. ಯಾವ ಸುಗ್ರೀವನು ವಾನರಕೋಟಿಯ ಜೊತೆಗೆ ಬಂದು ಲಂಕೆಯನ್ನು ಮುತ್ತಲಿಕ್ಕಿದ್ದಾನೋ, ಆ ಸುಗ್ರೀವನ ಸಚಿವನಾದ ಹನುಮಂತನೆಂಬ ವಾನರ ನಾನು. ಸಮುದ್ರವನ್ನು‌ ಲಂಘಿಸಿ ಲಂಕೆಯನ್ನು ಪ್ರವೇಶಿಸಿದೆ. ದುರಾತ್ಮ ರಾವಣನ ನೆತ್ತಿಯ ಮೇಲೆ‌ ಕಾಲಿಟ್ಟು ನಿನ್ನನ್ನು ಕಂಡು ಹೋಗಲು ಬಂದೆ. ನನಗೆ ನನ್ನ ಪರಾಕ್ರಮವೇ ಆಶ್ರಯ. ರಾಮನ ದಯೆಯಿಂದಲೇ ಪ್ರಾಪ್ತವಾಗಿರುವ ಪರಾಕ್ರಮ. ನೀನು ಅಂದುಕೊಂಡ ಹಾಗೆ ನಾನಿಲ್ಲ. ನಾನು ರಾವಣನಲ್ಲ. ನಾನೇನೂ ರಾಕ್ಷಸನಲ್ಲ. ನಾನು ವಾನರನೇ ಹೌದು. ರಾಮನ ಪಕ್ಷದವನು, ರಾಮನ ಸೇವಕ‌ ಹೌದು. ಈ‌ ಶಂಕೆಯನ್ನು ಬಿಡು, ನನ್ನ ಮಾತಿನ ಮೇಲೆ ನಂಬಿಕೆಯನ್ನು ಇಡು.’ ಎಂಬುದಾಗಿ ಪುನಃ ರಾಮಕಥೆಯನ್ನು‌ ಹೇಳಿದಾಗ, ಅದನ್ನು ಕೇಳಿದ ಸೀತೆಯ ಧ್ವನಿ ಸೌಮ್ಯವಾಯಿತು, ಮಾತು‌ ಮಧುರವಾಯ್ತು ಮತ್ತೆ.
ಆದರೆ, ಅವಳು ಒಂದು ನಿಶ್ಚಯದಲ್ಲಿದ್ದಾಳೆ. ಒಂದು ಏನು ಅಂತ ಸ್ಪಷ್ಟ ಮಾಡಿಕೊಳ್ಬೇಕು. ಹೌದು/ಅಲ್ಲ ಎನ್ನುವುದನ್ನು ತೀರ್ಮಾನ ಮಾಡ್ಬೇಕು‌ ಅನ್ನುವ ತೀರ್ಮಾನದಲ್ಲಿ ಅವಳು‌ ಇದ್ದಿದ್ದರಿಂದ ಆಕೆ ಹನುಮಂತನನ್ನು ಪ್ರಶ್ನಿಸ್ತಾಳೆ. ಏನೇನು ‌ಪ್ರಶ್ನಿಸ್ತಾಳೆ? ‘ಎಲ್ಲಿ‌ ನಿನಗೆ ರಾಮನ ಪರಿಚಯವಾಯ್ತು? ಹೇಳು. ಲಕ್ಷ್ಮಣ ನಿನಗೆ ಹೇಗೆ ಗೊತ್ತು? ರಾಮ-ಲಕ್ಷ್ಮಣರು ನರರು. ಸುಗ್ರೀವ ಮತ್ತು‌ ನೀನು ಎಲ್ಲ ವಾನರರು. ಈ ವಾನರರು ಮತ್ತು ನರರ ಸಮಾಗಮವು ಹೇಗಾಯ್ತು? ಏಕಾಯ್ತು? ಇದೆಲ್ಲವನ್ನೂ‌ ಹೇಳ್ಬೇಕು ನೀನು‌. ಮಾತ್ರವಲ್ಲ, ರಾಮನ ಚಿಹ್ನೆಗಳನ್ನು ಹೇಳ್ಬೇಕು‌ ನೀನು. ರಾಮನು ರಾಮನೆನಿಸುವುದು ಯಾವ ಚಿಹ್ನೆಗಳಿಂದ? ಗೌಪ್ಯವಾದ, ಪ್ರಕಟವಾದ, ಅತ್ಯಂತ ಸಮೀಪವುಳ್ಳವನಿಗೆ ಮಾತ್ರವೇ ತಿಳಿದಿರ್ತಕ್ಕಂತ ರಾಮನ ಶರೀರದ ಚಿಹ್ನೆಗಳನ್ನು ಹೇಳು. ರಾಮನ ವ್ಯಕ್ತಿತ್ವವನ್ನು‌ ಹೇಳು, ಜೊತೆಯಲ್ಲಿ ರಾಮನ ಸಾಕ್ಷಾತ್ ಚಿಹ್ನೆಗಳನ್ನು ಹೇಳು. ಯಾಕಂದ್ರೆ,‌ ನಿನ್ನ ಮೇಲೆ ಸಂಶಯ ಅನ್ನುವುದಕ್ಕಿಂತ, ನನಗೆ ಮತ್ತೆ ಶೋಕ ಬರಬಾರದಲ್ವ! ನನ್ನ ಸಮಾಧಾನಕ್ಕಾಗಿ. ನೀನಿನ್ನೂ ಹೇಳು, ಮತ್ತೂ ಹೇಳು, ವಿವರವಾಗಿ ‌ಹೇಳು. ಯಾಕಂದ್ರೆ ವಿವರವಾಗಿ ಹೇಳಿದಾಗ ಮನುಷ್ಯನಿಗೆ ಎಷ್ಟು‌ ಗೊತ್ತಿದೆ, ಎಷ್ಟು ಗೊತ್ತಿಲ್ಲ ಎನ್ನುವುದು ಸ್ಪಷ್ಟ ಆಗ್ತದೆ. ಹಾಗಾಗಿ, ವಿವರವಾಗಿ‌ ಹೇಳ್ಬೇಕು. ಮತ್ತೆ ನನಗಿನ್ನು ಬೇಸರವಾಗದಂತೆ ಹೇಳ್ಬೇಕು. ರಾಮನ‌ ಆಕಾರವೇನು? ರಾಮನ ರೂಪವು‌ ಎಂತಹುದು? ಕಾಲುಗಳು, ಕೈಗಳು ಹೇಗಿವೆ? ಲಕ್ಷ್ಮಣನದ್ದೂ ಕೂಡ ಹೇಳ್ಬೇಕು‌ ನೀನು..’ ಎಂದಾಗ ಸಂತೋಷವಾಯ್ತಂತೆ ಹನುಮಂತನಿಗೆ. ಒಂದು ದಾರಿ‌ ಸಿಕ್ತು! ಪರೀಕ್ಷೆ ಬಂದಾಗ ಯಾರು ಚೆನ್ನಾಗಿ‌ ಓದ್ಕೊಂಡಿರ್ತಾರೋ, ಅವರಿಗೆ ಸಂತೋಷವಾಗ್ತದೆ. ಯಾವುದೇ‌ ಪರೀಕ್ಷೆ ಇರಲಿ.

ಹನುಮಂತ ಸರಿಯಾಗಿ‌ ತಿಳ್ಕೊಂಡಿದ್ದಾನೆ. ಸೀತೆ ಏನೇನು ಕೇಳ್ತಾಳೋ, ಅದವನಿಗೆ ಗೊತ್ತು. ಹಾಗಾಗಿ, ಅವನಿಗೆ ಸಮಾಧಾನವಾಯ್ತು. ಹನುಮಂತನ ಮನಸ್ಸಿನಲ್ಲಿ ರಾಮ ತುಂಬಿಕೊಂಡಿದ್ದಾನೆ. ಹನುಮಂತ ಅತಿಶಯವಾಗಿ‌ ಪ್ರೀತಿಸಿದ್ದಾನೆ. ಪ್ರೀತಿ, ಆಸಕ್ತಿ ಇದ್ದರೆ ನಾವು ಎಲ್ಲವನ್ನೂ ಗಮನಿಸ್ತೇವೆ. ಧ್ವನಿ, ಸ್ವಭಾವ, ಎಲ್ಲವೂ‌ ಗೊತ್ತಿರ್ತದೆ. ಹನುಮಂತನಿಗೆ ‌ರಾಮನೆಂದರೆ‌ ಜೀವ, ರಾಮನೆಂದರೆ ಆತ್ಮ,‌ರಾಮನೆಂದರೆ‌ ಸರ್ವಸ್ವ. ರಾಮನೆಂಬುವುದು ಅವನ‌ ಬದುಕಿನ ಒಂದು ಚೈತನ್ಯ ಸಂಚಾರ. ಹಾಗಾಗಿ,‌ ಹೆಚ್ಚು‌ ಸಮಯವಾಗಿಲ್ಲ‌ ಪರಿಚಯವಾಗಿ. ರಾಮನಿಗೂ‌ ಹನುಮಂತನಿಗೂ ಸಂಸರ್ಗ – ಒಂದು ಮಳೆಗಾಲ ಮಾತ್ರವೇ. ಆದರೆ ಎಷ್ಟು ತಿಳ್ಕೊಂಡಿದ್ದಾನೆ‌ ಅವನು‌ ಎನ್ನುವುದನ್ನು‌ ನಾವೀಗ ಮುಂದೆ ಗಮನಿಸ್ತೇವೆ.

ರಾಮನು ಹೇಗಿದ್ದಾನೋ ಹಾಗೆ, ಗೆರೆಯೂ ಬಿಡದೆ ವರ್ಣನೆ ಮಾಡ್ಲಿಕ್ಕೆ ಶುರು ಮಾಡ್ತಾನೆ. ಮೊದಲು ಸೀತೆಗೆ ಹೇಳ್ತಾನೆ, “ದೇವರು ದೊಡ್ಡವನು. ನೀನು ಈ ಪ್ರಶ್ನೆ ಕೇಳಿದೆ. ನಿನಗೆ ಗೊತ್ತಿದೆ ಮೊದಲೇ. ನೀನು ನನ್ನನ್ನು ಕೇಳ್ತಾ ಇದ್ದೀಯೆ. ಇದು ಅದೃಷ್ಟ’. ಆಕೆಗೆ ಗೊತ್ತಿಲ್ದೇ ಇದ್ರೆ ಹನುಮಂತ ಏನು ಹೇಳಿ ಏನು ಪ್ರಯೋಜನ? ಗೊತ್ತಿದ್ದವರು ಪ್ರಶ್ನೆ ಕೇಳಿದಾಗ ನಾವು ಕೊಟ್ಟ ಉತ್ತರ ಎಷ್ಟು ಗಟ್ಟಿ, ಎಷ್ಟು ಆಳ‌ ಇದೆ ಅದಕ್ಕೆ, ಎಷ್ಟು ಸಮರ್ಪಕವಾಗಿದೆ ಅಂತ ಹೇಳ್ಬೇಕಾದ್ರೆ, ಅವರಿಗೆ ಗೊತ್ತಿರ್ಬೇಕು. ಹಾಗಾಗಿ, ಗೊತ್ತಿದ್ದು ನೀನು ಕೇಳ್ತಾ ಇದ್ದೀಯಲ್ಲ, ಇದು ಬಹಳ ಒಳ್ಳೆದಾಯ್ತು. ಹೇ ಕಮಲದಳ ನಯನೆಯೇ, ರಾಮನ ಮತ್ತು ಲಕ್ಷ್ಮಣನ ಆಕೃತಿಯ ವರ್ಣನೆಯನ್ನು ಕೇಳು. ನಾನು ಗಮನಿಸಿದಷ್ಟನ್ನು ನಿನಗೆ ಹೇಳ್ತೇನೆ’.

ಮೊದಲು ಸ್ವಭಾವ ಸಂಪತ್ತನ್ನು ಸ್ವಲ್ಪ ವರ್ಣನೆ ಮಾಡ್ತೇನೆ. ರಾಮನು ಕಮಲದಳ ನಯನ. ರಾಮನ ಕುರಿತಾಗಿ ಅದನ್ನು ಹೇಳದಿದ್ರೆ ಸಮಾಧಾನವಾಗೋದಿಲ್ಲ. ಮತ್ತು ಸಮಸ್ತ ಜೀವಗಳಿಗೆ ಅವನು ಆಕರ್ಷಣೆಯ ಬಿಂದು. ರಾಮನು ರೂಪ-ದಾಕ್ಷಿಣ್ಯ ಸಂಪನ್ನ. ಬಹಿರಂಗವದು ಸರ್ವಗುಣಾನ್ವಿತ. ಅಂತರಂಗದಲ್ಲಿಯೂ ಏನೂ ಕೊರತೆಯಿಲ್ಲ. ತೇಜಸ್ಸಿನಲ್ಲಿ‌ ಆದಿತ್ಯನಂತೆ, ಕ್ಷಮೆಯಲ್ಲಿ‌ ಪೃಥಿವೀ ದೇವಿಯಂತೆ, ಬುದ್ಧಿಯಲ್ಲಿ ಬೃಹಸ್ಪತಿಯಂತೆ, ಕೀರ್ತಿಯಲ್ಲಿ ದೇವರಾಜ ಇಂದ್ರನಂತೆ. ಸಮಸ್ತ ಜೀವಲೋಕಕ್ಕೇ ರಕ್ಷಕನವನು, ತನ್ನವರನ್ನೂ ಕಾಪಾಡುವವನು, ತನ್ನ ನಡತೆಯನ್ನು ಕೂಡ ಕಾಪಾಡ್ತಕ್ಕಂತವನು, ಧರ್ಮವನ್ನು ಕಾಪಾಡುವವನು. ಒಟ್ಟೂ ವ್ಯಕ್ತಿತ್ವವೇ ರಕ್ಷಕ ವ್ಯಕ್ತಿತ್ವ. ಈ ಜಗತ್ತಿನಲ್ಲಿ ಚಾತುರ್ವರ್ಣ್ಯದ ರಕ್ಷಕ ಶ್ರೀರಾಮಚಂದ್ರ. ಲೋಕದ ಮರ್ಯಾದೆ(ಚೌಕಟ್ಟು)ಗಳನ್ನು ಮಾಡುವವನೂ, ಮಾಡಿಸುವವನೂ. ಯಜ್ಞೇಶ್ವರನಂತೆ ಅವನು ಜ್ವಾಲಾಮಾಲಾ ಪರಿವೃತ. ನಿತ್ಯವೂ ಬ್ರಹ್ಮಚರ್ಯ ವ್ರತದಲ್ಲಿದ್ದಾನೆ. ಒಳ್ಳೆಯವರು ಮಾಡಿದ ಒಳಿತನ್ನು ನೆನಪಿಟ್ಟುಕೊಳ್ಳುವವನು. ಒಂದು ಕರ್ಮವನ್ನು ಸಮಾಜದ ಮುಂದೆ ಪ್ರಕಟಪಡಿಸುವ ಬಗೆಯನ್ನು ಸರಿಯಾಗಿ ಬಲ್ಲವನು. ತುಂಬ ಕೇಳಿದವನು, ಶೀಲವಂತ ಮತ್ತು ವಿನೀತ. ಯಜುರ್ವೇದದಲ್ಲಿ ವಿಶೇಷ ಶಿಕ್ಷಣವನ್ನು ಪಡೆದಿದ್ದಾನೆ ಹನುಮಂತ. ವೇದ ಪಾರಂಗತರು ರಾಮನನ್ನು ಬಹುವಾಗಿ ಗೌರವಿಸ್ತಾರೆ. ಧನುರ್ವೇದ, ವೇದಗಳು, ವೇದಾಂಗಗಳಲ್ಲಿ ಪರಿಣತ. ಇದು ಅವನ ವ್ಯಕ್ತಿತ್ವ.

ಇನ್ನು ರಾಮನ ಶರೀರ ಸಂಪತ್ತು. ಜನರಿಗೆಲ್ಲ ಗೊತ್ತು, ರಾಮನ ಮುಖ ಮಂಗಲಕರವಾದುದು. ಅವನ ಕಣ್ಣುಗಳ ಕೊನೆಗಳು ಕೆಂಪಾಗಿವೆ‌. ಹೆಗಲು ವಿಸ್ತಾರವಾಗಿದೆ. ಮುಚ್ಚಿದ ಭುಜ-ತಲೆಗಳ ಸಂಧಿ . ಹಾಗೇ ಶಂಖವನ್ನು ಹೋಲುವ ಧ್ವನಿ, ಶಂಖದಂತೆ ನುಣುಪಾದ ಕೊರಳು, ಆ ಕೊರಳಲ್ಲಿ ಮೂರು ರೇಖೆಗಳು‌. ನೀಳವಾದ ಕೈಗಳು. ಧ್ವನಿಯು ದೇವ ದುಂದುಭಿಯಂತೆ ಗಂಭೀರ. ಮೇಘಶ್ಯಾಮಲ ವರ್ಣ. ಆದರೆ ಅದಕ್ಕೊಂದು ಹೊಳಪಿದೆ. ಜೋಡಿಯಂಗಗಳು ಒಂದಕ್ಕೊಂದು ಸಮಾನ. ಪ್ರಮಾಣಬದ್ಧವಾದ ಅವಯವಗಳು. ಕಂಡೊಡನೆಯೇ ಶತ್ರುಗಳಲ್ಲಿ‌ ಭೀತಿಯನ್ನೂ ಮಿತ್ರರಲ್ಲಿ ಗೌರವವನ್ನೂ ಹುಟ್ಟಿಸುವಂಥಾ ಮಹಾಪ್ರತಾಪ. ಮುಂದಿನದು, ಅತೀ‌ ನಿಕಟವಾಗಿರ್ತಕ್ಕಂತವರು ಮಾತ್ರ ಹೇಳಬಲ್ಲ‌ ಇಡೀ‌ ಶರೀರದ ಎಲ್ಲಾ ಲಕ್ಷಣಗಳನ್ನು ಇಲ್ಲಿ ಹೇಳಿದ್ದಾನೆ ಹನುಮಂತ.

ಮೂರು ಅಂಗಗಳು ಸ್ಥಿರವಂತೆ ರಾಮನಿಗೆ – ಎದೆ, ಮಣಿಕಟ್ಟು, ಮುಷ್ಟಿ. ಇದು ರಾಜಲಕ್ಷಣ.
ಮೂರು ಅಂಗಗಳು ಉದ್ದವಂತೆ – ಹುಬ್ಬು, ತೋಳು, ಹಾಗೆ. ಇದು ಚಿರಜೀವಿತ್ವ ಮತ್ತು ಸಂಪನ್ನತ್ವಕ್ಕೆ ಇರ್ತಕ್ಕಂಥದ್ದು.
ಹಾಗೇ ಮೂರು ಅಂಗಗಳು ಸಮಾನ – ತಲೆಕೂದಲ ಅಗ್ರಭಾಗ , ಮೊಣಕಾಲಗಳು, ವೃಷಣ. ಭೂಪತಿಯ ಲಕ್ಷಣ.
ಮೂರು ಅಂಗಗಳು ಎತ್ತರ – ಎದೆ, ಹೊಟ್ಟೆ, ನಾಭಿ. ಇದೂ ರಾಜ ಲಕ್ಷಣವೇ ಹೌದು.
ಮೂರು ಅವಯವ ಕೆಂಪು – ಕಣ್ಣ ಕೊನೆ, ಉಗುರುಗಳು, ಅಂಗೈ-ಕಾಲು ಕೆಂಪು. ಇದು ಆನಂದಪುರುಷನ ಲಕ್ಷಣವಂತೆ.
ಮೂರು ನುಣುಪು – ಪಾದರೇಖೆಗಳು, ಕೂದಲು, ಹೀಗೆ. ಅದು ಮಹಾಭಾಗ್ಯದ ಲಕ್ಷಣಗಳು.
ಮೂರು‌ ಗಂಭೀರ – ಧ್ವನಿ, ನಡಿಗೆ ಹಾಗೂ ನಾಭಿ(ಗಂಭೀರ = ಆಳ‌). ಮೂರು ರೇಖೆಗಳು – ಕೊರಳಲ್ಲಿ, ಹೊಟ್ಟೆಯಲ್ಲಿ,
ಮೂರು ಕಡೆ ಬಾಗಿದೆ – ಪಾದತಲ, ವಕ್ಷಸ್ಥಳದ ಒಂದು ಭಾಗ. ಅದೂ ಕೂಡ ಸಂಪನ್ನತೆಯ, ಧನ್ಯತೆಯ ಲಕ್ಷಣ. ಇನ್ನು ಕೆಲವಂಗಗಳು‌ ಹ್ರಸ್ವವಂತೆ.
ಉದ್ದ ಕಂಠ, ಮೊಣಕಾಲು ಹೃಸ್ವ, ತಲೆಯಲ್ಲಿ ವಿಶಿಷ್ಟವಾದ ಮೂರು ಸುಳಿ ಇದೆ. ಅಂದರೆ ಅದು ಚಕ್ರವರ್ತಿಗೆ ಇರಬೇಕಾದ ಲಕ್ಷಣ.
ಅಂಗುಷ್ಠದ ಮೂಲೆಯಲಿ ನಾಲ್ಕು ರೇಖೆಗಳಿವೆ ಅಂದರೆ ಆತ ನಾಲ್ಕು ವೇದವನು ಬಲ್ಲವನಾಗಿರುತ್ತಾನೆ.

ಹಣೆಯಲ್ಲಿನ ನಾಲ್ಕು ರೇಖೆಗಳು ಆಯುಷ್ಯ ಸೂಚಕ, ಪಾದದತಲದಲ್ಲಿ ಇರಬೇಕಾದ ವಜ್ರ, ಧ್ವಜ, ಶಂಖ ಮತ್ತು ಅಂಕುಶ ಎಂಬ ನಾಲ್ಕು ರೇಖೆಗಳು ಉಳ್ಳವನು ರಾಮ. ಆತ ಮನುಜೇಂದ್ರ. ಆತ ನಾಲ್ಕು ಕಿಷ್ಕು (ಮೊಳದ ಎತ್ತರ) ಇದ್ದಾನೆ ಮತ್ತು ಆತನ ಧನುಸ್ಸು ಕೂಡ ಅಷ್ಟೇ ಎತ್ತರ. ಹಾಗೆಯೇ ನಾಲ್ಕು ಸಮವಾದ ಆಯವಯಗಳು ಮತ್ತು 14 ಜೋಡಿ ಆಯವಯಗಳು – ಎರಡು ಸಮನಾದ ಮೂಗಿನ ಹೊಳ್ಳೆ, ಹುಬ್ಬುಗಳ, ಎದೆಯ ಪಾರ್ಶ್ವ, ಮಣಿಕಟ್ಟುಗಳು ಹೀಗೆ ಎರಡು ಒಂದಕ್ಕೊಂದು ಸಮ. ನುಣುಪಾದ, ತೀಕ್ಷ್ಣ ಹಾಗೂ ಗಟ್ಟಿಯಾದ ಮತ್ತು ಸಮನಾದ ಮುಂದಿನ ನಾಲ್ಕು ಹಲ್ಲುಗಳು ಮತ್ತು ಸಂದರ್ಭಾನುಸಾರಕ್ಕೆ ತಕ್ಕಂತೆ ನಾಲ್ಕು ಬಗೆಯ ನಡಿಗೆಯುಳ್ಳವನು. ನುಣುಪಾಗಿದ್ದ ಮಾತಿನಲ್ಲಿ ಸ್ನೇಹ, ಮುಖದಲ್ಲಿಯೂ ಇರುವ ಸ್ನೇಹ ಮತ್ತು ನುಣುಪಾಗಿರುವ ರೋಮ, ಉಗುರು, ಕೂದಲುಗಳು, ಕಣ್ಣು, ದಂತಗಳು, ಚರ್ಮ, ಪದತಲ ಇದಕ್ಕೆಲ್ಲ ಫಲವೆಂಬಂತೆ ಕಣ್ಣಿನಲ್ಲಿ ತೇವಾಂಶವಿದ್ದರೆ ಸೌಭಾಗ್ಯ, ಒಳ್ಳೆಯ ದಂತಗಳಿಂದ ಒಳ್ಳೆಯ ಭೋಜನ ದೊರೆಯುವುದು.
ಹಾಗೆಯೇ ಎಂಟು ಆಯವಯಗಳು ದೀರ್ಘ- ಕಣ್ಣು, ಶರೀರ, ಕಿವಿ, ಭುಜ, ಕೈಗಳು, ಮತ್ತು ಕೈ, ಕಾಲು, ಬೆರಳುಗಳು ಉದ್ದವಾಗಿವೆ. ಮುಖ, ನಖ, ವಕ್ಷಸ್ಥಲ, ಬಾಯಿ ತೆರೆದಾಗ, ನಾಲಿಗೆ, ಹನುಪ್ರದೇಶ ಹೀಗೆ ಹತ್ತು ಆಯವಯಗಳಲ್ಲಿ ಕಮಲದ ಛಾಯೆಯಿದೆ. ಹಣೆ, ಕಿವಿ, ತೋಳು, ನಾಭಿ, ಪಾರ್ಶ್ವ, ಬೆನ್ನು ಹೀಗೆ ದಶ ಬೃಹತ್ ಆಯವಯಗಳು. ಅವನ ಪ್ರಭೆ ಎಲ್ಲೆಡೆ ಹರಡಿತ್ತು ಮತ್ತು ತನ್ನ ತೇಜಸ್ಸಿನಿಂದ, ಸಮಾಜವನ್ನು ವ್ಯಾಪಿಸಿದ್ದ, ಸಂಪತ್ತನ್ನು ಹಂಚುವುದರ ಮೂಲಕ ಸಮಾಜದಲ್ಲಿ ವ್ಯಾಪಿಸಿದ್ದ. ಅವನ ತೆಳುವಾದ ಸೂಕ್ಷ್ಮ ವಾದ ತಲೆಕೂದಲು, ತೆಳುವಾದ ಚರ್ಮ, ಗಿಣ್ಣುಗಳು ಸೂಕ್ಷ್ಮ, ಬುದ್ಧಿ ಸೂಕ್ಷ್ಮ, ದೃಷ್ಟಿ ಸೂಕ್ಷ್ಮ ಹೀಗೆ ಒಂಬತ್ತು ಸೂಕ್ಷ್ಮ ಗಳನ್ನು ಹೊಂದಿದ್ದ. ನಾಲ್ಕು ಪುರುಷಾರ್ಥಗಳಲ್ಲಿರುವ ಧರ್ಮ, ಅರ್ಥ, ಕಾಮಗಳನ್ನು ವಿಭಜಿಸಿ, ಎಲ್ಲಿ ಬೇಕೋ ಅಲ್ಲಿ ಉಪಯೋಗವಾಗುವಂತೆ ಮತ್ತು ಸತ್ಯವೇ ಶ್ರೇಷ್ಠ – ಧರ್ಮವೇ ಶ್ರೇಷ್ಠ ಎಂಬ ಸತ್ಯ ವಾಕ್ /ಸತ್ಯವಂತ ಶ್ರೀರಾಮ.

ಸಿರಿ ದೇವಿ ಒಲಿದವ ಮತ್ತು ಸಹಜವಾದ ಶ್ರೀಮಂತ ರಾಮ. ಏಕೆಂದರೆ ಆತನಿಗೆ ಸಂಪತ್ತಿನ ಸಂಗ್ರಹ ಹಾಗು ಅನುಗ್ರಹದ ವಿಷಯಗಳನ್ನು ಅರಿತವ ರಾಮ. ದೇಶ, ಕಾಲದ ವಿಭಾಗಗಳನ್ನು ಬಲ್ಲವ ಮತ್ತು ಸರ್ವಲೋಕ ಪ್ರಿಯಂವದ. ಇವನ ಹಾಗೆಯೇ ಸೌಮಿತ್ರಿಯು ಇದ್ದಾನೆ. ಅನುರಾಗ, ಗುಣ, ರೂಪದಿಂದ ಇವನ ಹಾಗೆಯೇ ಆದರೆ ಬಣ್ಣ ಮಾತ್ರ ಬೇರೆ. ಇವನು ಅಂಗೂರ ವರ್ಣ, ಅವನು ಶ್ಯಾಮಲ ವರ್ಣ ರಾಮ. ಆದುದರಿಂದ ಇಷ್ಟೆಲ್ಲಾ ಹೇಳಬೇಕಾದರೆ ರಾಮನ ಸೇವೆಯನ್ನು ಮಾಡಿರಬೇಕು ಮತ್ತು ಅತ್ಯಂತ ನಿಕಟ ವ್ಯಕ್ತಿ ಯಾಗಿರಬೇಕು. ಆಗ ಮಾತ್ರ ಇದೆಲ್ಲ ಸಾಧ್ಯ. ರಾಮನ ಒಳಗೂ-ಹೊರಗೂ ಅರಿತಿರಬೇಕು. ರಾಮನನ್ನು ಪೂರ್ತಿ ಬಲ್ಲವರು ಮಾತ್ರ ರಾಮನ ದೂತನಾಗಲು ಸಾಧ್ಯ. ದೂತತ್ವವೆಂದರೆ ಅದಕ್ಕೆ ಸಂವಾದ ಮತ್ತು ಭಾವಜ್ಙತೆ ಬೇಕು. ಹೀಗಿರುವ ಮಹಾಪುರುಷರು ನಿನ್ನನ್ನು ಅರಸುತ್ತಾ ಬಂದಾಗ ಆಕಸ್ಮಿಕವಾಗಿ ನಾವು ಸಿಕ್ಕಿದೆವು. ಋಷ್ಯಮೂಕದ ಬೆನ್ನ ಮೇಲೆ ಬಂದಾಗ ನಮ್ಮ ಮುಖ್ಯಸ್ಥನಾದ ಅಂದರೆ ಅಣ್ಣನಿಂದ ರಾಜ್ಯ ಭ್ರಷ್ಟನಾಗಿದ್ದ ಸುಗ್ರೀವ ಕಂಡ.

ನಾವು ಸುಗ್ರೀವನ ಸೇವೆ ಮಾಡುತ್ತಿದ್ದೆವು. ನಾವು ಅವನ ಸೇವಕರು. ಅಲ್ಲಿಗೆ ಈ ಧನುರ್ಧಾರಿಗಳು ಬಂದರು. ಹೀಗೆ ಅಲ್ಲಿ ನಡೆದ ಸಂವಾದ, ವಿಷಯಗಳನ್ನು ಹನುಮಂತನು ಎಳೆ ಎಳೆಯಾಗಿ ಬಿಡಿಸಿ ಹೇಳಿದನು. ಹೇಗೆ ವಾನರರು-ನರರು ಸೇರಿದರು ಎಂಬುದಕ್ಕೆ ಉತ್ತರವನ್ನು ಹೇಳುವನು. ಹನುಮಂತನು ತಾನು ನಕಲಿಯಲ್ಲ ಎನ್ನುವುದಕ್ಕೆ ಇನ್ನೊಂದು ವಿಷಯವನ್ನು ಹೇಳುವನು. ಅದೇನೆಂದರೆ ನೀನು ಅಪಹರಿಸಲ್ಪಟ್ಟಾಗ ನಿನ್ನ ಉತ್ತರೀಯದಲ್ಲಿ ಆಭರಣಗಳನ್ನು ಕಟ್ಟಿ ಎಸೆದೆಯಲ್ಲ ಅದನ್ನು ನಾವು ರಾಮನಿಗೆ ತೋರಿಸಿದೆವು. ಅದನ್ನು ಕಂಡಾಗ ಅವನಲ್ಲಿ ಉಂಟಾದ ಭಾವ, ದುಃಖ ಪಟ್ಟದ್ದು…ಎಲ್ಲವನ್ನೂ ಹೇಳಿದ. ಆಗ ಅವನನ್ನು ಸಮಾಧಾನ ಪಡಿಸಿದವ ನಾನೇ. ಆವತ್ತು ನೀನು ಎಸೆದಿದ್ದ ಆಭರಣಗಳನ್ನು ಸಂಗ್ರಹಿಸಿದ್ದು ಕೊನೆಗೆ ರಾಮನಿಗೆ ತೋರಿಸಿದ್ದು ನಾನೇ ಎಂದು ಹೇಳಿ ಸೀತೆಯ ಪ್ರೀತಿಯನು ಗಳಿಸಿದ.

ಆಭರಣಗಳನ್ನು ನೀನು ಎಸೆದಾಗ ಸಂಗ್ರಹಿಸಿ ತಂದದ್ದು ಮತ್ತು ರಾಮನಿಗೆ ತಂದು ತೋರಿಸಿದ್ದು ನಾನೇ ಎಂದು ಹನುಮಂತನು ಸೀತೆಗೆ ಹೇಳಿದನು. ಆಗ ಸೀತೆಗೆ ಹನುಮಂತನ ಮೇಲೆ ಸಂಪೂರ್ಣ ನಂಬಿಕೆ ಬಂತು. ನಂತರ ಹನುಮಂತನು ರಾಮನ ದುಃಖವನ್ನು ಹೇಳಲು ಆರಂಭಿಸಿದನು. ಈಗ ರಾಮನೆಂದರೆ ಅಗ್ನಿ ಪರ್ವತ. ಪರ್ವತದ ಒಳಗೆ ಅಗ್ನಿಗಳ ಜ್ವಾಲೆ ಇರುವಂತೆ ನೀನಿಲ್ಲದ ದುಃಖ ರಾಮನನ್ನು ಈಗ ಕಾಡುತ್ತಾ ಇದೆ ಎಂದು ಸೀತೆಗೆ ಹೇಳುತ್ತಾನೆ. ರಾಮನಿಗೆ ನಿದ್ದೆ ಎನ್ನುವುದೇ ಇಲ್ಲ, ನಿನ್ನ ಹಾಗೆ ಶೋಕ ಮತ್ತು ಚಿಂತೆ ಮಾತ್ರ ಇರುವಂತಹದ್ದು, ಅಗ್ನಿಹೋತ್ರಿಗಳ ಅಗ್ನಿಭವನದಲ್ಲಿ 3 ಅಗ್ನಿಯಿಂದಾಗಿ ಬಿಸಿ ಬರುವಂತೆ ರಾಮನಿಗೆ ಸಹ ಅನಿದ್ರಾ, ಶೋಕಾ, ಮತ್ತು ಚಿಂತಾ ಎಂಬ 3 ಅಗ್ನಿಗಳು ಎಂದು ಸೀತೆಗೆ ಹನುಮಂತನು ರಾಮನ ದುಃಖವನ್ನು ವರ್ಣಿಸಿದನು. ಪರ್ವತಗಳು ಸಾಮಾನ್ಯವಾಗಿ ಕಂಪಿಸುವುದಿಲ್ಲ ಆದರೆ ಭೂಕಂಪವಾದಾಗ ಕಂಪಿಸುತ್ತದೆ. ರಾಮನು ಏನೇ ಆದರೂ ಕಂಪಿಸುವವನಲ್ಲ, ಆದರೆ ನಿನ್ನ ವಿಯೋಗ ರಾಮನು ವಿಚಲಿತನಾಗುವಂತೆ ಮಾಡಿದೆ, ಯಾವುದೇ ರಮ್ಯವಾದ ದೃಶ್ಯವನ್ನು ಕಂಡಾಗ ರಾಮನು ಸಂತೋಷಕ್ಕಾಗಿ ಸಂಚರಿಸುತ್ತಾನೆ ಆದರೆ ನೀನಿಲ್ಲದೆ ಅದು ಯಾವುದು ಸಹ ಸುಖವನ್ನು ಕೊಡುತ್ತಾ ಇಲ್ಲ ಎಂದು ಹನುಮಂತನು ಸೀತೆಗೆ ಹೇಳಿದನು. ಅಂತಹ ರಾಮ ರಾವಣನನ್ನು ಕೊಂದು ನಿನ್ನನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಿದ ಹನುಮಂತನು ಕಥೆಯನ್ನು ಮುಂದುವರೆಸಿದನು.

ರಾಮ–ಸುಗ್ರೀವರ ಒಪ್ಪಂದ, ಒಪ್ಪಂದದ ಫಲವಾಗಿ ವಾಲಿ ವಧೆ ಮತ್ತು ಸುಗ್ರೀವನಿಗೆ ರಾಜ್ಯ ಸಿಕ್ಕಿತು, ಅಲ್ಲಿಂದ ಮುಂದೆ ಸುಗ್ರೀವ ಎಲ್ಲ ಕಡೆ ಕಪಿಗಳನ್ನು ಕಳುಹಿಸಿಕೊಟ್ಟಿದ್ದು, ಅಂಗದ, ಜಾಂಬವಂತ, ಹನುಮಂತನೇ ಮೊದಲಾದವರು ದಕ್ಷಿಣಕ್ಕೆ ಬಂದಿದ್ದು, ಅಲ್ಲಿ ಸ್ವಯಂ ಪ್ರಭೆಯ ಬಿಲದಲ್ಲಿ ಒಳಗೆ ಹೋಗಿ ಹೊರಗೆ ಬಂದಮೇಲೆ ಸೀತೆಯನ್ನು ಕಾಣದೆ ಪಾಯೋಪ್ರವೇಶಕ್ಕೆ ಕುಳಿತಿದ್ದು, ದೇವರೇ ಪ್ರೇರಿಸಿದಂತೆ ಅಂಗದ ಜಟಾಯುವಿನ ವಾರ್ತೆಯನ್ನು ಹೇಳಿದ್ದು, ಅಲ್ಲಿ ನಡೆದ ಮಾತುಕತೆ, ಸಂಪಾತಿಯ ದೃಷ್ಟಿ, ಕಪಿಗಳಿಗೆಲ್ಲ ಉತ್ಸಾಹ ಬಂದು ಸಮುದ್ರ ತೀರಕ್ಕೆ ಬಂದ ಮೇಲೆ ಸಮುದ್ರ ಹಾರಲಾಗದೆ ಉತ್ಸಾಹ ಹೋಗಿದ್ದು, ಆಗ ಎಲ್ಲ ಭಯವನ್ನು ಬಿಟ್ಟು ಶತಯೋಜನವಾದ ಸಾಗರವನ್ನು ನಾನು ಲಂಘಿಸಿದೆ, ನಿನ್ನೆ ರಾತ್ರಿ ಲಂಕೆಯನ್ನು ಪ್ರವೇಶ ಮಾಡಿದೆ, ರಾತ್ರಿಯಿಡೀ ಲಂಕೆಯನ್ನು ಹುಡುಕಿ ರಾವಣನನ್ನು ನೋಡಿದೆ, ಅಮ್ಮ ಎಲ್ಲವನ್ನು ನೋಡಿದ ನಂತರ ಶೋಕದಲ್ಲಿ ಮುಳುಗಿದ ನಿನ್ನನ್ನು ಕಂಡೆ, ನೋಡು ನಾನು ಎಲ್ಲವನ್ನು ಹೇಳಿದೆ, ಈಗಲಾದರೂ ನಾನು ರಾಮನ ದೂತ ಎಂದು ನಂಬಿಕೆ ಬಂತೋ / ಇಲ್ಲವೋ ? ನಾನು ರಾಮನ ದೂತ, ರಾಮನ ಸೇವಕ, ನನ್ನ ಎಲ್ಲ ಚಟುವಟಿಕೆಗಳು ರಾಮನ ಕುರಿತಾಗಿಯೇ ಇರುವಂತದ್ದು, ನಾನು ಪವನ ತನಯ, ನಾನು ಸುಗ್ರೀವನ ಸಚೀವ, ಶಾಸ್ತ್ರಧಾರಿಯಾಗಿರುವ ಶ್ರೀರಾಮಚಂದ್ರನು ಕುಶಲಿ, ಅಣ್ಣನ ಸೇವೆಯಲ್ಲಿ ತೊಡಗಿದ ಲಕ್ಷ್ಮಣನು ಕುಶಲಿ, ಅವನಿಗೆ ನಿನ್ನ ಆಲೋಚನೆ ಬಿಟ್ಟು ಬೇರೆ ಏನು ಇಲ್ಲ, ನಾನೊಬ್ಬನೇ ಇಲ್ಲಿಗೆ ಬಂದೆ ಎಂದು ಹನುಮಂತನು ಸೀತೆಗೆ ಹೇಳಿದನು. ನಾನೇ ಭಾಗ್ಯಶಾಲಿ, ಮರಳಿ ಹೋಗಿ ಕಪಿ ಸೇನೆಯ ಚಿಂತೆಯನ್ನು ದೂರ ಮಾಡುತ್ತೇನೆ, ಅವರ ಭಯವನ್ನು ದೂರ ಮಾಡಿ ಎಲ್ಲರಿಗೂ ಮನೆ, ಪತ್ನಿ, ಮಕ್ಕಳೆಲ್ಲರೂ ಸಿಗುವ ಹಾಗೆ ಮಾಡಿ ಕಪಿಸೇನೆಯ ವಿಷಾದವನ್ನು ದೂರ ಮಾಡುತ್ತೇನೆ ಎಂದು ಸೀತೆಗೆ ಹೇಳಿದನು.

ನನ್ನ ಬದುಕು ಧನ್ಯ ಹೌದು ಏಕೆಂದರೆ ಸಾಗರವನ್ನು ಲಂಘಿಸಿ ಲಂಕೆಗೆ ಹೋಗಿ ಸೀತೆಯನ್ನು ನೋಡಿದೆನು, ಈ ಕೀರ್ತಿ ಶಾಶ್ವತವಾಗಿ ಉಳಿಯುತ್ತದೆ ಎಂದು ಹನುಮಂತನೇ ಹೇಳಿದನು. ನಂತರ ಹನುಮಂತನು ಅವನ ಕಥೆಯನ್ನು ಮುಂದುವರೆಸಿದನು. ಪರ್ವತಗಳಲ್ಲಿಯೇ ಶ್ರೇಷ್ಠವಾದ ಮಾಲ್ಯವಂತ ಎಂಬ ಪರ್ವತದಿಂದ ನಮ್ಮ ಅಪ್ಪ ಕೇಸರಿ ಗೋಕರ್ಣದ ಚತುಶೃಂಗ ಪರ್ವತಕ್ಕೆ ತೆರಳಿದ್ದನು. ಗೋಕರ್ಣದಲ್ಲಿ ಶಂಬಸಾಧನ ಎಂಬ ರಾಕ್ಷಸನಿದ್ದ ಮತ್ತು ಅವನನ್ನು ಕೊಲ್ಲಲು ಕೇಸರಿಯಿಂದ ಮಾತ್ರ ಸಾಧ್ಯವಿತ್ತು. ದೇವತೆಗಳು ಮತ್ತು ಋಷಿಗಳು ಸೂಚನೆಯನ್ನು ಕೊಟ್ಟಾಗ ನಮ್ಮ ಅಪ್ಪ ಕೇಸರಿಯು ಅಲ್ಲಿಗೆ ಹೋಗಬೇಕಾಯಿತು. ಸಮುದ್ರ ತೀರದ ಗೋಕರ್ಣದ ವರುಣ ತೀರ್ಥದ ಪರಿಸರದಲ್ಲಿ ಶಂಬಸಾಧನನ್ನು ಸಂಹಾರ ಮಾಡಿ, ಅವನ ಪತ್ನಿಯಾಗಿರುವ ಅಂಜನೆಯ ಗರ್ಭದಲ್ಲಿ ವಾಯುದೇವನ ಅಂತಸ್ತ ಚೈತನ್ಯವು ಸೇರಿ ಜನಿಸಿ ಬಂದಿರುವವನು ನಾನು ಎಂದು ಹನುಮಂತನು ಸೀತೆಗೆ ಅವನ ಕಥೆಯನ್ನು ಹೇಳಿದನು. ಈ ಹೆಸರು ಬಂದಿದ್ದು ನನ್ನದೇ ಕರ್ಮದಿಂದ, ಇದು ನನಗೆ ಇಟ್ಟ ಹೆಸರಲ್ಲ ಎಂದು ಹೇಳಿದನು. ಹುಟ್ಟಿದ ಸ್ವಲ್ಪ ದಿನಗಳಲ್ಲೇ ಸೂರ್ಯನು ಬೇಕೆಂದು ಹಠಮಾಡಿ ಹಾರಿ, ಇಂದ್ರನೇ ಮೊದಲಾದವರಿಗೆ ಭಯ ಉಂಟುಮಾಡಿ ಪರ್ವತದ ಮೇಲೆ ಬಿದ್ದು ಹಲ್ಲುಮುರಿದ ಮೇಲೆ ಈ ಹೆಸರು ಬಂದಿದ್ದು ಎಂದು ಸೀತೆಗೆ ವರ್ಣಿಸಿದನು. ಹನುಮಂತನು ಬಿದ್ದಾಗ ಎಚ್ಚರವಿಲ್ಲದ ಸ್ಥಿತಿಯಲ್ಲಿಯೂ ಎಲ್ಲರನ್ನು ಅಲ್ಲಿಗೆ ಬರುವಂತೆ ಮಾಡಿದ್ದನು. ವಾಯುದೇವ ಬೀಸದೆ ಇದ್ದಾಗ ಬ್ರಹ್ಮಾದಿ ಸಕಲ ದೇವತೆಗಳು ಕಾಲಬುಡಕ್ಕೆ ಬಂದು ಕಪ್ಪ ಕಾಣಿಕೆ ಕೊಟ್ಟು ಹೋಗಿದ್ದರು. ನಿನ್ನ ವಿಶ್ವಾಸಕ್ಕಾಗಿ ನಿನ್ನ ಪತಿಯ ಗುಣಗಳೆಲ್ಲವನ್ನು ಹೇಳಿದೆ, ಹೇ ಪಾಪರಹಿತಳೇ ನೀನು ರಾಮನನ್ನು ಪಡೆದುಕೊಳ್ಳುವೆ, ರಾಮನು ನಿನ್ನನ್ನು ಪಡೆದುಕೊಳ್ಳುವನು ಎಂದು ಹನುಮಂತ ಹೇಳಿದಾಗ ಸೀತೆಗೆ ವಿಶ್ವಾಸ ಬಂತು. ಹನುಮಂತನು ಹೇಳಿದ ಕುರುಹುಗಳು ಮತ್ತು ಯುಕ್ತಿಗಳಿಂದಾಗಿ ಸೀತೆಯು ನಂಬಿದಳು. ಆಗ ಸೀತೆಗೆ ಅವಳ ಬದುಕಿನಲ್ಲಿ ಕಷ್ಟದ ಬಳಿಕ ಹೋಲಿಕೆಯಿಲ್ಲದ ಸಂತೋಷವಾಯಿತು. ಸೀತೆಯು ಹರ್ಷದಿಂದಾಗಿ ಬಾಗಿದ ರೆಪ್ಪೆಗಳ ಕಣ್ಣುಗಳಿಂದ ಆನಂದ ಭಾಷ್ಪವನ್ನು ಧಾರಾಕಾರವಾಗಿ ಸುರಿಸಿದಳು. ಕೆಂಪಾದ, ನೀಳವಾದ ನೇತ್ರದಿಂದ ಕೂಡಿರುವಂತಹ ಮುಖವು ಅದ್ಭುತವಾಗಿ ಗ್ರಹಣದಿಂದ ಹೊರಬಂದ ಚಂದ್ರನಂತೆ ಶೋಭಿಸಿತು. ಸೀತೆಗೆ ಹನುಮಂತನು ಕಪಿರೂಪ ತಾಳಿದ ರಾವಣ ಅಲ್ಲ, ಕಪಿಯೇ ಹೌದು ಎಂಬುದು ಸ್ಪಷ್ಟವಾಯಿತು.

ಹನುಮಂತನು ಸೀತೆಯ ಮುಂದೆ ನಿನಗೆ ಎಲ್ಲ ಹೇಳಿದೆ, ಇನ್ನು ನಾನು ಏನು ಮಾಡಲಿ .? ಮರಳಿ ಹೋಗುವುದು ಹೇಗೆ ..? ಏನನ್ನು ಮಾಡಿ ಮರಳಿ ಹೋಗಬೇಕು, ನಿನ್ನ ಅಪೇಕ್ಷೆ ಏನು ? ನನ್ನಿಂದ ಏನು ಸೇವೆ ಆಗಬೇಕು ? ನಿನ್ನ ಮನಸ್ಸಿಲ್ಲಿರುವುದನ್ನು ಹೇಳು, ಅದನ್ನು ಮಾಡಿಯೇ ಹೋಗುತ್ತೇನೆ ಎಂದು ಹೇಳಿದನು. ಶಂಬಸಾಧನ ಎಂಬ ರಾಕ್ಷಸನನ್ನು ಕೇಸರಿಯು ಗೋಕರ್ಣದಲ್ಲಿ ಕೊಂದಮೇಲೆ ಅವನ ಮಡದಿಯಾದ ಅಂಜನಾ ದೇವಿಯಲ್ಲಿ ವಾಯುವಿನ ತೇಜಸ್ಸು ಅಂತರ್ಗತವಾಗಿ ಹುಟ್ಟಿ ಬಂದ ಹನುಮಂತ ನಾನು, ವಾಯುದೇವ ಮತ್ತು ನಾನು ಒಂದೇ, ಏನು ವ್ಯತ್ಯಾಸ ಇಲ್ಲ, ಅವನಿಗಿರುವ ಶಕ್ತಿ ನನಗೂ ಇದೆ ಎಂದು ಮತ್ತೊಮ್ಮೆ ಸೀತೆಗೆ ಹೇಳಿದನು. ಬ್ರಹ್ಮಾಸ್ತ್ರವನ್ನು ಎಲ್ಲಾ ಸಂದರ್ಭದಲ್ಲೂ ಪ್ರಯೋಗ ಮಾಡಬಾರದು ― ಶ್ರೀಸೂಕ್ತಿ.

ಹನುಮಂತನಿಗೆ ಮುದ್ರೆಯುಂಗುರವನ್ನು ಸೀತೆಗೆ ಕೊಡುವ ಅನಿವಾರ್ಯತೆ ಇರಲಿಲ್ಲ. ಆದರೆ ರಾಮನು ಕೊಡಲು ಹೇಳಿದ್ದರಿಂದ ನಾನು ವಾನರನೇ ಹೌದು, ರಾಮನ ದೂತನೇ ಹೌದು, ರಾಮ ಮುದ್ರಾಂಕಿತ ಅಂಗುಲೀಯಕವನ್ನು ನೋಡು ಎಂದು ಮುದ್ರೆಯುಂಗುರವನ್ನು ತೆಗೆದಿಟ್ಟನು. ಉಂಗುರದಿಂದಾಗಿ ಸೀತೆಗೆ ರಾಮನ ಕರಸ್ಮರಣೆ, ಕರಸ್ಮರಣೆಯಿಂದಾಗಿ ಭಾವಗಳ ಸ್ಮರಣೆ, ಭಾವಗಳಿಂದಾಗಿ ದಿವ್ಯಮಂಗಲ ವಿಗ್ರಹದ ಸ್ಮರಣೆ ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ಮುದ್ರೆಯುಂಗುರವನ್ನು ಕೈಯಲ್ಲಿ ಹಿಡಿದುಕೊಂಡು ನೋಡಿದಾಗ ಸೀತೆಗೆ ಸಾಕ್ಷಾತ್ ರಾಮನೇ ಬಂದಂತೆ ಆಯಿತು. ಸೀತೆಯ ಮುಖ ಅತ್ಯಾನಂದದಿಂದ ಬೆಳಗುತ್ತಿತ್ತು. ಅಂತಹ ಪರಮಾನಂದದಲ್ಲಿ ಸೀತೆ ಹನುಮನನ್ನು ಪ್ರಶಂಸೆ ಮಾಡಿದಳು.

ಗುರು ಮಾರುತಿಗೂ ಗುರು ಮೂರುತಿಗೂ ಯಾವ ವ್ಯತ್ಯಾಸವು ಇಲ್ಲ. ದೇವನ ಕಡೆಯಿಂದ ಹನುಮಂತನು ಸೀತೆಯೆಡೆಗೆ ಬಂದನು. ದೇವನ ಕಡೆಯಿಂದ ಜೀವದ ಕಡೆಗೆ ಗುರುವು ಬರುತ್ತಾನೆ. ಗುರು ಎನಿಸಿಕೊಳ್ಳಬೇಕಾದರೆ ಭಗವಂತನ ಗುರುತು ಇರಬೇಕು ― ಶ್ರೀಸೂಕ್ತಿ. ಮುದ್ರೆಯುಂಗುರವನ್ನು ಹೊತ್ತು ಹನುಮಂತ ಬಂದ ಹಾಗೆ ಗುರುವಿಗೂ ಭಗವಂತನ ಗುರುತು ಇರಬೇಕು.

ಮುಂದೇನಾಯಿತು .? ಸೀತೆ ಹನುಮಂತನನ್ನು ಹೇಗೆ ಪ್ರಶಂಸೆ ಮಾಡಿದಳು ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments