ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಪ್ರವಾಹಕ್ಕೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಿದರೆ, ನೀರು ಮುಂದಕ್ಕೆ ಹರಿಯುವುದಿಲ್ಲ. ಅಥವಾ ಅಲ್ಪ ಪ್ರಮಾಣದಲ್ಲಿ ಹರಿಯುತ್ತದೆ. ಆದರೆ ಆ ನೀರು ಸುಮ್ಮನೇನೂ ಇರುವುದಿಲ್ಲ. ಕಟ್ಟೆಯ ಮೇಲೆ ಒತ್ತಡವನ್ನು ನಿರ್ಮಾಣ ಮಾಡ್ತಾ ಇರ್ತದೆ. ಒಂದು ದಿನ ಕಟ್ಟೆ ಒಡೆದರೆ, ಹಿಂದಿನದೆಲ್ಲವೂ ಸೇರಿ ಪ್ರವಾಹವಾಗಿ ನೀರು ಹೊರಬರ್ತವೆ. ಹಾಗೆ ಸೀತೆಯಿಂದ ಹನುಮಂತನ ಕಡೆಗೆ ವಾತ್ಸಲ್ಯ ಪ್ರವಾಹ ಹರಿತಾ ಇದೆ. ಆದರೆ ಒಂದು ಅಡ್ಡ ಶಂಕೆಯ ಕಟ್ಟೆ ಇದೆ, ಹನುಮನೋ ರಾವಣನೋ ಎಂದು. ಕಪಿರೂಪದಿಂದಾಗಿ… ಈಗ ಆ ಕಟ್ಟೆ ಒಡೆದಿದೆ. ಹನುಮಂತ ತಾನು ಹನುಮಂತ ಎಂಬುದನ್ನು ಸ್ಥಾಪನೆ ಮಾಡಿದಾನೆ. ತಾನು ರಾಮನ ಪಕ್ಷದವನು ಎಂಬುದನ್ನು ವಾದಗಳ ಮೂಲಕ ಸಿದ್ಧಪಡಿಸಿದನು. ನಂತರ ಮುದ್ರೆಯುಂಗುರವನ್ನು ಕೊಟ್ಟ. ಹತ್ತಿರದ ಕೊಂಬೆಯಲ್ಲಿದ್ದಾನೆ. ಕೆಳಗಿಳಿದು ಬಂದಿಲ್ಲ ಇನ್ನೂ. ರಾಮಕಥೆ ಹಾಡುವಾಗ ಮೇಲಿದ್ದ, ಮಾತನಾಡುವಾಗ ಕೆಳಕೊಂಬೆ. ಈಗಂತೂ ಸೀತೆಯ ಹೃದಯಕ್ಕೆ ಸಮೀಪಿಸಿದಾನೆ. ಸೀತೆ ಅವನನ್ನು ಮನಸ್ಸು ಬಿಚ್ಚಿ, ಹಾಡಿ ಹೊಗಳಿದಳು. ತನ್ನ ಪತಿಯ ಸಂದೇಶವನ್ನು ಹೊತ್ತು ತಂದಿದಾನೆ ಎಂಬುದು ಕಾರಣ. ಆ ಬಾಲೆಗೆ ಲಜ್ಜೆಯೂ ಆಗಿದೆ. ಕೈಯಲ್ಲಿ ಉಂಗುರ ಬಂದಾಗ ಲಜ್ಜೆಯಾಗಿದೆ.

ಹನುಮನ ಕುರಿತು ಸೀತೆ ಹೀಗೆಂದು ಹಾಡಿ ಹೊಗಳಿದಳು. ವಿಕ್ರಮಿಯೆಂದರೆ ನೀನು. ಸಮರ್ಥನೆಂದರೆ ನೀನು. ಪ್ರಾಜ್ಞನೆಂದರೆ ನೀನು. ಹೇ ವಾನರೋತ್ತಮನೇ, ಈ ಘೋರವಾದ ರಾಕ್ಷಸರ ನೆಲೆಯನ್ನು ತುಡುಕಿದೆಯಾ ಏಕಾಂಗಿಯಾಗಿ….! ಒಬ್ಬೊಬ್ಬ ರಾಕ್ಷಸನೂ ಲೋಕಭಯಂಕರ. ರಾಕ್ಷಸಕೋಟಿಯನ್ನು ಏಕಾಂಗಿಯಾಗಿ ಬಂದು ತುಡುಕಬೇಕೆಂದರೆ ಆ ಧೈರ್ಯ, ಸ್ಥೈರ್ಯ ಇದ್ದರೆ ಮಾತ್ರ ಸಾಧ್ಯ. ಅದಿಲ್ಲದಿದ್ದರೆ, ಶತ್ರುವಾಗಿ ಏಕಾಂಗಿಯಾಗಿ ಬರುವುದೆಂದರೆ ಕಲ್ಪನಾತೀತ. ಈ ನಿನ್ನ ಕಾರ್ಯಸಾಧನೆಗೆ ನೀನು ಶ್ಲಾಘನೀಯ. ಶತಯೋಜನದ ಸಮುದ್ರ ನಿನಗೆ ಗೋವಿನ ಹೆಜ್ಜೆಯಾಯಿತು. ನನ್ನ ದೃಷ್ಟಿಯಿಂದ ನೀನು ಸಾಮಾನ್ಯ ಕಪಿಯಲ್ಲ. ಯಾಕೆಂದರೆ ರಾವಣನ ಕುರಿತು ನಿನಗೆ ಗಾಬರಿಯೂ ಇಲ್ಲ. ಹೆದರಿಕೆಯೂ ಇಲ್ಲ. ನಿಶ್ಚಿಂತೆಯಾಗಿ ರಾವಣನ ನೆಲೆಯಲ್ಲಿ ನಿಂತು ಇಷ್ಟೆಲ್ಲ ಕೆಲಸವನ್ನು ಮಾಡ್ತಾ ಇದ್ದೀಯಲ್ಲ. ಸಾಮಾನ್ಯ ಮಂಗವು ಇಷ್ಟೆಲ್ಲ ಕೆಲಸ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ನೀನು ಅಸಾಮಾನ್ಯ ವಾನರ ಎಂದು ಪ್ರಶಂಸೆಗಳ ಸುರಿಮಳೆಗರೆದಳು ಸೀತೆ. ನಿನಗೆ ನನ್ನೊಡನೆ ಮಾತನಾಡಲು ಅರ್ಹತೆ ಇದೆ ಯಾಕೆಂದರೆ ರಾಮ ಕಳುಹಿ ಬಂದ ರಾಮದೂತ ನೀನು. ಎಂದು ಅನುಮತಿಯನ್ನು ಕೊಟ್ಟಳು. ರಾಮ ಹಾಗೆ ಯಾರ್ಯಾರನ್ನೋ ಮಾತನಾಡಲು ಕಳುಹಿಸೋದಿಲ್ಲ. ರಾಮ ಯಾರನ್ನಾದರೂ ಕಳಿಸಿದರೆ ಅವನು ರಾಮನ ಯೋಗ್ಯತೆಯುಳ್ಳವನಾಗಿರಬೇಕು ಅಥವಾ ರಾಮನಿಗೆ ಸಲ್ಲುವವನಾಗಿರಬೇಕು. ನಾನು ಈಗ ಸಣ್ಣ ಪುಟ್ಟ ಪರೀಕ್ಷೆ ಮಾಡಿದ್ದಷ್ಟೇ. ರಾಮ ಮೊದಲೇ ಸಾಕಷ್ಟು ಪರೀಕ್ಷೆ ಮಾಡೀ ತೇರ್ಗಡೆಯಾದವನು ನೀನು. ಹಾಗಾಗಿ ನೀನು ಮಾತನಾಡಬಹುದು.

ಇಷ್ಟೆಲ್ಲ ಹೇಳಿ ಸೀತೆ, ರಾಮಲಕ್ಷ್ಮಣರು ಕುಶಲವಾಗಿದ್ದಾರೆ, ಅವರಿಗೇನೂ ಆಗಲಿಲ್ಲ ಎನ್ನುವುದು ನನ್ನ ಭಾಗ್ಯ. ಆದರೆ, ಕ್ಷೇಮವಾಗಿರುವ ರಾಮ ಯಾಕೆ ಕೋಪಗೊಳ್ಳಲಿಲ್ಲ? ಪ್ರಳಯಕಾಲದ ಅಗ್ನಿಯಂತೆ ಸುಡಬೇಕಿತ್ತು. ಕೋಪವೇ ಬರಲಿಲ್ಲವಾ ರಾಮನಿಗೆ. ಪ್ರೀತಿಯಿದ್ದಲ್ಲಿ ಕೋಪವಿರ್ತದೆ. ಅಂದರೆ ಪ್ರೀತಿಯ ವಸ್ತುವಿಗೆ ತೊಂದರೆಯಾದರೆ ಕೋಪ ಬರ್ತದೆ. ಹಾಗೆ ಅತ್ಯಂತ ಪ್ರೀತಿಯಾದ ನನಗೆ ತೊಂದರೆಯಾದಾಗ ಪ್ರಳಯ ಭಯಂಕರ ಕೋಪ ಬರಬೇಕಿತ್ತಲ್ಲಾ ರಾಮನಿಗೆ. ಪ್ರೀತಿ ಏನಾಯಿತು…? ದೇವತೆಗಳು ಯುದ್ಧಕ್ಕೆ ನಿಂತರೂ ರಾಮಲಕ್ಷ್ಮಣರಿಗದೇನೂ ಅಲ್ಲ. ಅಥವಾ ನನ್ನ ದುಃಖಕ್ಕೆ ಕೊನೆಯಿಲ್ಲವಾ ಎಂದಳು. ರಾಮ ಹೇಗಿದ್ದಾನೆ ಹೇಳು, ರಾಮನಿಗೆ ವ್ಯಥೆಯಾಗಲಿಲ್ಲವಾ? ಆ ಆ ದಿನದ ಕರ್ತವ್ಯವನ್ನು ಮಾಡ್ತಾ ಇದ್ದಾನ? ಅಥವಾ ಧೃತಿಗೆಟ್ಟು ಕೈಚೆಲ್ಲಿದಾನ….? ದೊಡ್ಡ ದುಃಖವು ಬಂದಾಗ ಎಲ್ಲ ಕೆಲಸಗಳಲ್ಲಿ ಆಸಕ್ತಿ ಕುಂದುವುದು. ರಾಮ ದೀನನಾಗಲಿಲ್ಲವೇ? ಅನ್ಯಮನಸ್ಕನಾಗಿದಾನೆಯಾ? ಮಹಾಪುರುಷನಾದವನು ಮಾಡುವ ಎಲ್ಲ ಕಾರ್ಯವನ್ನು ರಾಮ ಮಾಡ್ತಾ ಇದಾನ… ಎಂದು ಕೇಳಿದಳು.

ರಾಮ ಎರಡು, ಮೂರು ಉಪಾಯಗಳನ್ನು ಬಳಸುತ್ತಿದ್ದಾನಾ? ಸಾಮ, ದಾನ, ಭೇದ, ದಂಡ ಎಂಬ 4 ಉಪಾಯಗಳು. ಪ್ರೀತಿಯಿಂದ ಹೇಳುವುದು, ಏನನ್ನಾದರೂ ಕೊಟ್ಟು ಕೆಲಸ ಮಾಡಿಸುವುದು, ಬೆದರಿಸಿ ಮಾಡಿಸು ಅಥವಾ ಪೆಟ್ಟು. ಈ ಉಪಾಯಗಳಲ್ಲಿ ಸಾಮ, ದಾನ ಸೌಮ್ಯವಾದವು. ಮತ್ತೆರಡು ಉಗ್ರ. ಮಿತ್ರರಲ್ಲಿ ಎರಡು ಉಪಾಯ, ಸಾಮ ಅಥವಾ ದಾನ. ಶತ್ರುಗಳಲ್ಲಿ ಮೂರು, ದಾನ ಕೆಲವೆಡೆ ಭೇದ ಮತ್ತು ದಂಡಗಳು ಕೆಲವಂದೆಡೆ. ಹೀಗೆ ಇದನ್ನೆಲ್ಲಾ ರಾಮ ಬಳಸುತ್ತಿದ್ದಾನಾ? ಈಗ ಅವನ ಮುಂದೆ ದೊಡ್ಡ ಯುದ್ಧವಿದೆ. ಇದೆಲ್ಲಾ ಬೇಕಾಗುತ್ತದೆ. ರಾಮನಿಗೆ ಯುದ್ಧದ ಹುಮ್ಮಸ್ಸು ಮಾಸಿಲ್ಲ ತಾನೇ? ಅವನು ತನ್ನ ಮಿತ್ರರನ್ನು ಪ್ರೀತಿಯಿಂದ ನೋಡುತ್ತಿದ್ದಾನಲ್ಲವೇ? ರಾಮನಿಗೆ ಮಿತ್ರಲಾಭವಾಗುತ್ತಿದೆಯೇ? ಮಿತ್ರರು ರಾಮನನ್ನು ಬಂದು ಕಾಣುತ್ತಿದ್ದಾರೆಯೇ? ಕೆಲವೊಮ್ಮೆ ಪಾಪಿಗಳು ಕೂಡಾ ಮಿತ್ರರಾಗಿ ಸಿಗುತ್ತಾರೆ. ಹಾಗಾಗಿ ಬರಿಯ ಮಿತ್ರರಲ್ಲ ಒಳ್ಳೆಯ ಮಿತ್ರರು ಬೇಕು. ಮಿತ್ರರು ರಾಮನನ್ನು ಗೌರವಿಸುತ್ತಿದ್ದಾರಾ? ಇದೆಲ್ಲಾ ರಾಜನೀತಿ. ಜೀವನಕ್ಕೂ ಬೇಕು. ರಾಮನು ದೈವಾನುಗ್ರಹವನ್ನು ಆಕಾಂಕ್ಷಿಸುತ್ತಿದ್ದಾನಾ? ದೈವಾನುಗ್ರಹ ತುಂಬಾ ಮುಖ್ಯ. ಪಾಂಡವರಿಗಿಂತ ಕೌರವರ ಬಲ ಹೆಚ್ಚಿತ್ತು ಆದರೂ ಕೂಡಾ ಪಾಂಡವರು ಗೆದ್ದದ್ದು ಏಕೆಂದರೆ ದೈವಬಲ ಪಾಂಡವರಿಗಿತ್ತು. ಜೀವನದ ಬಂಡಿಗೆ ಎರಡು ಚಕ್ರಗಳು ಪುರುಷಕಾರ ಮತ್ತು ದೇವರ ಆಶೀರ್ವಾದ. ಎರಡೂ ಕೂಡಿದಾಗಲೇ ಕಾರ್ಯವಾಗುವಂಥದ್ದು. ದೈವ ಒಂದಿದ್ದರೂ ಕೆಲಸವಾಗುವುದಿಲ್ಲ. ಬರಿಯ ಪುರುಷಪ್ರಯತ್ನವೂ ಪೂರ್ಣವಲ್ಲ. ಹಾಗಾಗಿ ಎರಡನ್ನೂ ರಾಮನು ಆಶ್ರಯಿಸಿದ್ದಾನಾ ಎಂದು ಕೇಳಿದಳು. ರಾಮನು ಸುಖಕ್ಕೆ ಯೋಗ್ಯ. ದುಃಖಕ್ಕೆ ಯೋಗ್ಯನಲ್ಲ. ದುಃಖದ ಮೇಲೆ ದುಃಖ ಬಂತು. ಈಗ ಬಂದಿರುವುದು ದೊಡ್ಡ ಕಷ್ಟ. ರಾಮ ಈ ದೊಡ್ಡ ಕಷ್ಟದಲ್ಲಿ ಕುಸಿದುಹೋಗಿಲ್ಲ ತಾನೇ? ಮುಂದೆ ಅಯೋಧ್ಯೆಯ ಸುದ್ದಿಯನ್ನು ಕೇಳುತ್ತಾಳೆ. ಕೌಸಲ್ಯೆ,ಸುಮಿತ್ರೆ,ಭರತನ ಬಗ್ಗೆ. ಕೈಕೆಯಿಯ ಬಗ್ಗೆ ಕೇಳಿಲ್ಲ. ಅವರ ವಾರ್ತೆ ಏನಾದರೂ ಇದೆಯಾ ಎಂದು.

ಮತ್ತದನ್ನೇ ಕೇಳ್ತಾಳೆ. ‘ನನ್ನ ಕಾರಣಕ್ಕೆ‌ ಏನೊಂದು ಶೋಕ ಬಂತು ರಾಮನಿಗೆ, ಆ ಶೋಕದ ಪರಿಣಾಮವಾಗಿ ಅನ್ಯಮನಸ್ಕನಾಗಿ ರಾಮನು ಕುಸಿದು ಹೋಗಿಲ್ಲ ತಾನೇ? ನನ್ನನ್ನು ದಾಟಿಸ್ತಾನಾ? ನನಗೆ ಬಿಡುಗಡೆ ಇದೆಯಾ ಇಲ್ಲಿಂದ? ಭರತ! ಅವನಿಗೆ ಹೇಗೂ ವಾರ್ತೆ ಹೋಗಿರ್ಬಹುದು. ಹೀಗಾಗಿದೆ, ರಾಮನ ಪತ್ನಿ ಸೀತೆಯ ಅಪಹರಣವಾಗಿದೆ ಎಂದು. ವಾರ್ತೆ ಹೋದ ಭರತ ಬಹುಷಃ ಸೇನಾ ಸಮೇತನಾಗಿ ಬರ್ತಾ ಇರ್ಬಹುದು ಈ ಕಡೆಗೆ’. ಸೀತೆಯ ಕಲ್ಪನೆ! ಧ್ವಜ-ಪತಾಕೆಗಳಿಂದ ಯುಕ್ತವಾಗಿರ್ತಕ್ಕಂಥಾ ಮತ್ತು ಸುಮಂತ್ರನೇ ಮೊದಲಾದ ಮಂತ್ರಿಗಳಿಂದ ರಕ್ಷಿತವಾಗಿರ್ತಕ್ಕಂಥಾ, ಶತ್ರುಗಳ ಎದೆನಡುಗಿಸುವ ಆ ಮಹಾವೀರರನ್ನು ಕೂಡಿಕೊಂಡು ಭರತ ಇತ್ತ ಬರ್ತಾ ಇದ್ದಾನಾ?’

ವಿಷಯ ಏನು ಅಂದ್ರೆ ರಾಮ‌ ಆ ವಿಷಯಕ್ಕೇ ಹೋಗಿಲ್ಲ.‌ ಅಯೋಧ್ಯೆಯಿಂದ ಯಾವ ಸಹಕಾರವನ್ನೂ ರಾಮ‌ ನಿರೀಕ್ಷೆ ಮಾಡೋದಿಲ್ಲ. ರಾಮನದ್ದು ಸ್ವಾರ್ಜಿತವಾಗಿರ್ತಕ್ಕಂತ ಸೇವೆ. ಸುಗ್ರೀವನಿಗೆ ಮಾಡ್ಬೇಕಾದ್ದನ್ನ ಮಾಡ್ಕೊಟ್ಟು, ಅವನನ್ನ ಪಟ್ಟದಲ್ಲಿ ಕೂರಿಸಿ.. ಇಂಥಾ ಒಂದು ಪರಿಸ್ಥಿತಿಯಲ್ಲಿ ಕೂಡ, ಅಯೋಧ್ಯೆಯಿಂದ ಏನನ್ನೂ ಬಯಸಲಾರ ರಾಮ. ಅಪೇಕ್ಷೆಯೇ ಪಡೋದಿಲ್ಲ ಅವನು. ಅವನದ್ದೇ ಸೇನೆ, ಭರತ ಬಂದು ರಾಜ್ಯವನ್ನು ಅವನಿಗೇ ಒಪ್ಪಿಸಿ ಹೋಗಿ ಆಗಿದೆ. ಗೊತ್ತಾದ್ರೆ ಸಾಕು, ಸೇನೆ ಯಾಕೆ? ಉಳಿದ ಜನರೂ ಬರ್ತಾರೆ. ಆದರೆ ಗೆದ್ದು ಅಯೋಧ್ಯೆಗೆ ಹೋಗಿ “ಹೀಗಾಯ್ತು” ಅಂತ ಹೇಳ್ತಾನೆ ಹೊರತು, ಒಂದು ಸಹಕಾರ ಬೇಕು ಅಂತ ಅಯೋಧ್ಯೆಯನ್ನು ಕೇಳೋದಿಲ್ಲ ರಾಮ. ಅದೆಲ್ಲ ತುಂಬ ಶುದ್ಧತೆ. ಎಂಥಾ ಕಷ್ಟದಲ್ಲಿಯೂ ಒಂದು ಚೌಕಟ್ಟಿನೊಳಗೆ ವ್ಯವಹಾರ. ಬೇಡ ಅಂದ್ರೆ ಬೇಡ. ಆದರೆ, ಸೀತೆಗೆ ಆ ಕಲ್ಪನೆಯಿಲ್ಲ. ಹಾಗಾಗಿಯೇ ಭರತನ ಕುರಿತು ಕೇಳ್ತಾಳೆ. ಹಾಗೆಯೇ ವಾನರಾಧಿಪತಿಯಾದ ಶ್ರೀಮಾನ್ ಸುಗ್ರೀವ ತನ್ನ ಬಳಗದವರಾದ ದಂತ ನಖಗಳೇ ಆಯುಧಗಳಾಗಿ‌ ಉಳ್ಳ ವೀರರೊಡಗೂಡಿ ಬರ್ತಾನಾ ನನಗಾಗಿ?
ಲಕ್ಷ್ಮಣ! ಶೂರ ಲಕ್ಷ್ಮಣ, ಸುಮಿತ್ರಾನಂದವರ್ಧನ.‌ ದಿವ್ಯಾಸ್ತ್ರಗಳನ್ನು ಬಲ್ಲ ಲಕ್ಷ್ಮಣ, ತನ್ನ‌ ಬಾಣಗಳ‌ ಜಾಲದಿಂದ‌ ರಾಕ್ಷಸ‌ರನ್ನು ಮರ್ದಿಸ್ತಾನಾ? ಅಲ್ಪಕಾಲದಲ್ಲಿಯೇ ರಾವಣನನ್ನು, ಅವನ‌ ಬಳಗವನ್ನೂ ತನ್ನ ಅಸಾಧಾರಣ ಅಸ್ತ್ರಗಳಿಂದ ರಾಮನು ಕೊಂದಿದ್ದನ್ನು ನಾನು ಕಾಣ್ತೇನಾ? ರಾಮನ ಮುಖ‌ ನೆನಪಾಯಿತು‌ ಸೀತೆಗೆ. ತನ್ನರಸನ‌ ಮುಖ. ಚಿನ್ನದ ಬಣ್ಣದ್ದು, ಕಮಲದ ಪರಿಮಳದ್ದು. ಅಂಥಾ ನನ್ನ ಒಡೆಯನ‌ ಮುಖ ನಾನಿಲ್ಲದೆ ಬಾಡಿದೆಯೇ? ಅಂದಿನ ಸಂದರ್ಭ ಹೇಗಿತ್ತು? ಧರ್ಮಕ್ಕಾಗಿ ರಾಜ್ಯವನ್ನು‌ ಬಿಟ್ಟ. ಕಾಲ್ನಡಿಗೆಯಲ್ಲಿ ಕಾಡಿಗೆ ಬಂದ. ಅವನ‌ ಹೃದಯದಲ್ಲಿ ವ್ಯಥೆಯೂ ಇರಲಿಲ್ಲ, ಭಯವೂ ಇರಲಿಲ್ಲ, ಶೋಕವೂ ಇರಲಿಲ್ಲ. ಉದ್ಯಾನವನಕ್ಕೆ‌ ಹೋದ ಹಾಗೆ ಕಾಡಿಗೆ ಬಂದವನು. ಅಂತಹಾ ವೀರ‌ ಈಗ ಅದೇ ಧೀರತೆಯನ್ನು‌ ಕಾಪಿಟ್ಟುಕೊಂಡಿದ್ದಾನೆ ಅಲ್ವಾ?’

ಒಂದು ಹೆಮ್ಮೆಯ ಮಾತನ್ನು ಹೇಳ್ತಾಳೆ ಸೀತೆ. ‘ಹನುಮಂತ, ನಿನಗೊಂದು ಮಾತು ಹೇಳ್ತೇನೆ ಕೇಳು. ನನಗಿಂತ ಪ್ರಿಯರು ಯಾರೂ ಇಲ್ಲ ರಾಮನಿಗೆ‌. ಅವನಿಗೆಲ್ಲರೂ ಪ್ರೀತಿ, ಆದರೆ ನನ್ನಷ್ಟು ಪ್ರೀತಿ ಯಾರ ಬಳಿಯೂ ಇಲ್ಲ. ಹಾಗೇ, ನನಗೂ ಕೂಡ. ರಾಮನಿಗಿಂತ‌ ಪ್ರಿಯವಾದುದು ನನಗೆ ಯಾವುದೂ ಇಲ್ಲ. ಎಲ್ಲಿಯವರೆಗೆ ರಾಮನ ವಾರ್ತೆಯು ನನ್ನ ಕಿವಿಗೆ ಬೀಳ್ತದೋ ಅಲ್ಲಿವರೆಗೆ ಸೀತೆ ಉಸಿರಾಡ್ತಾಳೆ. ರಾಮನ ವಾರ್ತೆಯೇ ಇಲ್ಲದಿದ್ರೆ ಸೀತೆ ಬದುಕಿರೋದಿಲ್ಲ’. ಹೀಗೇ, ಸ್ವಲ್ಪ ಮಾತುಗಳಲ್ಲಿ ತುಂಬ ವಿಷಯಗಳನ್ನು ಸೀತೆ ಹೇಳಿದ್ದಾಳೆ. ಅವಳ‌ ಮಾತಿನ ಅರ್ಥ ತುಂಬಾ ಮಧುರವಾಗಿತ್ತು. ಅಂಥಾ ಮಾತುಗಳನ್ನಾಡಿದ ಸೀತೆ ವಿರಮಿಸಿದಳು. ಯಾಕೆ? ಹನುಮಂತ ಮಾತಾಡಲಿ‌ ಅಂತ. ರಾಮನ ಬಗ್ಗೆ ಕೇಳ್ಬೇಕು ಇನ್ನೂ, ಹೇಳಲಿ‌ ಹನುಮಂತ. ನಾನು ಹೇಳೋದು ಏನಿದೆ ಇನ್ನು? ಅನ್ನುವ ಕಾರಣಕ್ಕೆ.

ಹನುಮಂತ ಶುರು ಮಾಡ್ತಾನೆ ತಲೆಯ ಮೇಲೆ ಕೈಮುಗಿದು. ‘ನೀನಿಲ್ಲಿ ಇರೋದು ರಾಮನಿಗೆ ಗೊತ್ತಿಲ್ಲ. ಹಾಗಾಗಿ ರಾಮ ನಿನ್ನನ್ನು ಕರ್ಕೊಂಡು ಹೋಗಿಲ್ಲ ಇನ್ನೂ. ಗೊತ್ತಾಗಿದ್ರೆ ರಾಮ ಎಂದೋ ಬಂದು ಕರ್ಕೊಂಡು ಹೋಗ್ತಿದ್ದ ನಿನ್ನನ್ನು ಇಲ್ಲಿಂದ. ಈಗಲೂ ಕೂಡ ಅದೇ ಆಗ್ತದೆ. ನಾನು ಅಲ್ಲಿ ಹೋಗಿ ನೀನಿಲ್ಲಿದೀಯೆ ಅಂತ ಹೇಳ್ತೇನೆ. ಅವನು ಬರ್ತಾನೆ, ನಿನ್ನನ್ನು ಕರೆದೊಯ್ತಾನೆ, ಅವನ ಪಕ್ಕದಲ್ಲಿ ಇಟ್ಟುಕೊಳ್ತಾನೆ…’ ಎಲ್ಲಿ ಸಂಕಟವಿದೆಯೋ, ಅಲ್ಲಿ ಹನುಮಂತ ಅದಕ್ಕೆ ಔಷಧ ಮಾಡ್ತಾನೆ. ನನ್ನ ಮಾತನ್ನು ಕೇಳಿದೊಡನೆಯೇ ರಾಮನು ದೊಡ್ಡ ವಾನರ ಸೇನೆಯನ್ನು ಒಡಗೂಡಿ ಬರ್ತಾನೆ ಇತ್ತ ಕಡೆಗೆ. ತನ್ನ ಬಾಣಗಳ ಜಾಲದಿಂದ ಸಮುದ್ರವನ್ನು ದಾಟಿ ಬರ್ತಾನೆ, ಲಂಕೆಯ ರಾಕ್ಷಸರ ಸೊಲ್ಲಡಗಿಸ್ತಾನೆ. ನಿನ್ನನ್ನು ಮರಳಿ ಪಡೀತಕ್ಕಂತ ರಾಮನ ಈ ಮಹಾಯಾತ್ರೆಯಲ್ಲಿ ಯಾರು ಅಡ್ಡ ಬಂದರೂ ಅವರನ್ನು ವಧಿಸ್ತಾನೆ ರಾಮ. ಸಾಕ್ಷಾತ್ ಮೃತ್ಯು ಬಂದು ಅಡ್ಡ ನಿಲ್ಲಲಿ, ಮೃತ್ಯುವಿಗೇ ಮೃತ್ಯು ಬರ್ತದೆ. ಮೃತ್ಯುವನ್ನು ಸಂಹರಿಸ್ತಾನೆ ರಾಮ. ದೇವತೆಗಳು, ರಾಕ್ಷಸರು ಒಡಗೂಡಿ ಮಧ್ಯ ಬಂದು ನಿಲ್ಲಲಿ, ಅವರ್ಯಾರೂ ಇರೋದಿಲ್ಲ. ಅವರನ್ನೂ ಧ್ವಂಸ ಮಾಡ್ತಾನೆ. ಹಾಗಾಗಿ, ಈ ಒಂದು ಮಹಾಶಕ್ತಿ ಇದೆಯಲ್ಲ, ರಾಮನು ಲಂಕೆಗೆ ಬರ್ತಕ್ಕಂತ ಆ ಪ್ರಚಂಡ ಶಕ್ತಿಯ ಪ್ರವಾಹದ ಮುಂದೆ ಯಾರು ಬಂದರೂ ಅವರು ಇಲ್ಲವಾಗ್ತಾರೆ. ಇನ್ನು, ತುಂಬ ಪ್ರೀತಿ ಇದೆ ನಿನ್ನಲ್ಲಿ ಅವನಿಗೆ. ಪ್ರೀತಿ ಏನೂ ವ್ಯತ್ಯಾಸ ಆಗಿಲ್ಲ. ಹಾಗಾಗಿ, ನಿನ್ನನ್ನು ಕಾಣದೆ ಬಹುವಾದ ಶೋಕವನ್ನು ರಾಮನು ಅನುಭವಿಸ್ತಾ ಇದ್ದಾನೆ. ಸರಿಯಾಗಿ ಹೇಳಬೇಕು ಅಂದ್ರೆ, ಶೋಕಸಾಗರದಲ್ಲಿ ಮುಳುಗಿ, ಮುಳುಗಿ ಏಳ್ತಾ ಇದ್ದಾನೆ ರಾಮ. ಕಿಂಚಿತ್ತೂ ನೆಮ್ಮದಿಯಿಲ್ಲ’. ಮಳೆಗಾಲದ ರಾತ್ರಿಗಳನ್ನು ಪ್ರಸ್ರವಣ ಪರ್ವತದ ಗುಹೆಗಳಲ್ಲಿ ರಾಮನು ಕಳೆದನಲ್ಲಾ, ಅದರ ಬಗ್ಗೆ ವಾಲ್ಮೀಕಿಗಳು ಒಂದೇ ಮಾತಿನಲ್ಲಿ ಹೇಳಿದ್ದಾರೆ, ‘ಆ ಗುಹೆಯಲ್ಲಿ ತುಂಬ ಸುಖಮಯ ವಾತಾವರಣವಿತ್ತು. ವನಜೀವನಕ್ಕೆ ಸಮೃದ್ಧವಾದ ಆಕರಗಳಿದ್ದವು. ಆದರೆ, ಕಿಂಚಿನ್ ಮಾತ್ರವೂ ಸಂತೋಷವನ್ನು‌ ರಾಮ ಕಾಣಲಿಲ್ಲ, ಸೀತೆಗಾಗಿ!’ ಎಂಬುದಾಗಿ ವರ್ಣನೆ‌ ಮಾಡ್ತಾರೆ. ಅದನ್ನೇ ಹೇಳಿದ್ದಾನೆ ಹನುಮಂತ ಇಲ್ಲಿ.

ಆಣೆ ಮಾಡ್ತಾನೆ ಹನುಮಂತ. ‘ಈಗಲೂ ಕೂಡ ನಿನ್ನ ಮೇಲೆ ಮೊದಲಿನಷ್ಟೇ ಪ್ರೀತಿ ಇದೆ ರಾಮನಿಗೆ ಮಲಯ ಪರ್ವತದ ಮೇಲಾಣೆ, ವಿಂಧ್ಯ, ಮೇರು, ಜರ್ಬಲ ಪರ್ವತದ ಮೇಲಾಣೆ. ಹೋಗಲಿ, ನಾನು ತಿನ್ನುವ ಕಂದ-ಮೂಲ-ಫಲಗಳ ಮೇಲಾಣೆ. ರಾಮನಿಗೆ ನಿನ್ನ ಮೇಲೆ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ, ಮಾತ್ರವಲ್ಲ ನಿನ್ನನ್ನು ಮರಳಿ ಪಡೀತಾನೆ. ನೀನು ರಾಮನ ಮುಖವನ್ನು ಕಾಣ್ತೀಯೇ. ನೀನು ಮನಸ್ಸು ಮಾಡಿದರೆ, ಪ್ರಸ್ರವಣ ಪರ್ವತದ ಮೇಲೆ ಸುಖಾಸೀನನಾದ ರಾಮನನ್ನು ನಾನು ತೋರಿಸ್ತೇನೆ. ರಾಮನ ಸ್ಥಿತಿ! ಆಹಾರವೇ ಕ್ಷೀಣಿಸಿದೆ. ರುಚಿರುಚಿಯಾದ ಆಹಾರದ ಕಡೆ ಲಕ್ಷ್ಯವೇ ಇಲ್ಲ. ಕಾಡಿನಲ್ಲಿ ಸಿಗುವ ಆಹಾರವನ್ನೂ ಕೂಡ ಸರಿಯಾಗಿ ತಗೊಳ್ತಾ ಇಲ್ಲ. ಐದನೇ ಕಾಲದಲ್ಲಿ ಸೇವಿಸ್ತಾನೆ ರಾಮ’. ಒಂದು ದಿನ ಆಹಾರ ತೆಗೆದುಕೊಂಡರೆ ನಂತರ 3ನೇ ದಿನ ಆಹಾರ ತೆಗೆದುಕೊಳ್ಳುತ್ತಾನೆ. ನೀನಿಲ್ಲದೇ ರಾಮನದ್ದು ಆಹಾರ ಅಷ್ಟು ಕ್ಷೀಣವಾಗಿದೆ. ಮೈಮೇಲೆ ಕಚ್ಚುವಂತಹ ಪ್ರಾಣಿಗಳು, ಹುಳುಗಳು, ಸೊಳ್ಳೆ ಮತ್ತು ನೊಣಗಳು ಬಂದು ಕಚ್ಚಿದಾಗ ಅದನ್ನು ತೆಗೆಯುವುದು ಸಹ ಇಲ್ಲ. ಅಷ್ಟೂ ರಾಮನ ಮನಸ್ಸು ಎಲ್ಲೋ ಇದೆ ಯಾಕಾಗಿ ಅಂದರೆ ಅಂತರಾತ್ಮವೇ ನಿನ್ನಲ್ಲೇ ನೆಲೆಸಿದೆ. ಚಿಂತೆಯಾದ ಮೇಲೆ ಶೋಕ ; ಶೋಕವಾದ ಮೇಲೆ ಚಿಂತೆ. ಎರಡೇ ಭಾವ. ರಾಮನು ನಿದ್ದೆಯನ್ನೇ ಮಾಡುವುದಿಲ್ಲ. ಅಕಸ್ಮಾತ್ ಕಿಂಚಿತ್ತು ನಿದ್ದೆ ಬಂದತಾಂಗಿ ಎಚ್ಚರವಾದರೆ ತಾನು ಮಧುರವಾಗಿ ಸೀತೆ ಎಂದು ಕರೆಯುತ್ತಾನೆ. ಮನೋಹರವಾದದ್ದು ಯಾವುದೇ ಕಾಣಲಿ ಮಾಡುವುದೇ ನಿನ್ನ ನೆನಪು…! ಹಾ ಪ್ರಿಯೆ.. ಎಂದು ನಿನ್ನದೇ ನೆನಪು. ಒಂದು ನಿಟ್ಟುಸಿರು ಬಿಟ್ಟು, ಸುತ್ತಲೂ ಏನಿದೆ? ಎನ್ನುವುದನೂ ಕೂಡ ಬಿಟ್ಟು ; ನಿನ್ನ ಜೊತೆ ಮಾತನಾಡಲು ಪ್ರಾರಂಭಿಸುತ್ತಾನೆ. ಹೀಗೆ ನಿತ್ಯವೂ ನಿನ್ನ ಬಗ್ಗೆ ಪರಿತಪಿಸುವ ಮತ್ತು ನೀನು ಬಳಿ ಇಲ್ಲದಿದ್ದರೂ ; ನಿತ್ಯವೂ ಸಂಭಾಷಣೆಯನ್ನು ಮಾಡುವ ಆ ಪ್ರಭು ನಿನ್ನ ಮರಳಿ ಪಡೆಯುವ ಶತ ಪ್ರಯತ್ನದಲ್ಲಿದ್ದಾನೆಯೇ ಹೊರತು ಸುಮ್ಮನೆ ಕೂತಿಲ್ಲ. ಯಾಕೆ ಕೋಪವೇ ಬರುತ್ತಿಲ್ಲ ಅಥವಾ ಪ್ರಯತ್ನವೇ ಮಾಡುತ್ತಿಲ್ಲ ಎಂದಲ್ಲ. ಅದರರ್ಥ- ನಿನ್ನನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾನೆ ಎಂದಾಗ ಸೀತೆಗೆ ವಿಚಿತ್ರವಾದ ಅನುಭವವಾಯಿತು. ಅಂದರೆ ಸೀತೆಗೆ ದುಃಖ ಮತ್ತು ಸಂತೋಷವಾಯಿತು. ಮಳೆಗಾಲ ಮುಗಿದು ಶರತ್ ಕಾಲ ಪ್ರಾರಂಭವಾಗುವಾಗ ಉಳಿಯುವ ಸ್ವಲ್ಪ ಮೋಡ ಮತ್ತು ಬೆಳಕಿನಂತೆ ನಿನ್ನ ಮಾತಿನಲ್ಲಿ ಅಮೃತವೂ ಇದೆ, ವಿಷವೂ ಇದೆ ಹನುಮಂತ ಎಂದು ಸೀತೆ ಹೇಳುವಳು.

ನನ್ನನ್ನು ಬಿಟ್ಟು ರಾಮ ಬೇರೆಯವರಲ್ಲಿ ಮನಸ್ಸು ಮಾಡಲಿಲ್ಲ ಎಂಬುದು ಆಕೆಗೆ ಸಂತೋಷವನ್ನು ಕೊಟ್ಟರೆ, ಆತನ ಶೋಕವು ನೋವನ್ನುಂಟು ಮಾಡುತ್ತಿದೆ. ನಂತರ ಸೀತೆಯು ಮುಂದುವರೆದು… ನೋಡು ಹನುಮಾ…, ವಿಧಿಯ ಬರಹವನ್ನು, ವಿಧಿ ಎಷ್ಟು ಬಲವಂತ. ಹಗ್ಗದಲ್ಲಿ ಕಟ್ಟಿ ಮನುಷ್ಯನನ್ನು ಎಳೆದಾಡುವುದು ನೋಡು ; ನಾನು, ರಾಮ ಮತ್ತು ಲಕ್ಷ್ಮಣ ಎಲ್ಲಿದ್ದೆವು, ಎಲ್ಲಿಗೆ ಬಂದವು, ಎಲ್ಲಿಗೆ ಹೋದೆವು, ಏನಾದೆವು ಎಂದು ರಾಮನು ಶೋಕ ಸಾಗರವನು ದಾಟಿ ಅಂದರೆ ನೀರಿನಲ್ಲಿ ನೌಕೆಯು ಭಗ್ನವಾದ ಮೇಲೆ ಈಜಿ ಸಮುದ್ರವು ದಾಟಿ ದಡ ಸೇರುವಂತೆ ; ರಾಮನು ಸಮುದ್ರವನು ಈಜುತ್ತಿದ್ದಾನೆ. ಎಂದು ನನ್ನ ಪತಿ ಲಂಕೆಯನು ಧ್ವಂಸ ಮಾಡಿ, ರಾವಣನನ್ನು ಸಂಹರಿಸಿ ನನ್ನನ್ನು ಇಲ್ಲಿಂದ ಪಾರು ಮಾಡುವನೋ… ಯಾಕೆಂದರೆ ರಾವಣನು ನೀಡಿರುವ ಸಮಯದಲ್ಲಿ ಈಗಾಗಲೇ 10 ತಿಂಗಳುಗಳು ಕಳೆದಿದೆ. ಉಳಿದಿರುವುದು ಕೇವಲ 2 ತಿಂಗಳುಗಳು ನನ್ನ ಆಯುಸ್ಸು. ರಾಮ ಬಂದರೆ ಮುಂದೆ ಆಯುಸ್ಸು ಇದೆ.

ಇಲ್ಲಿ ಒಂದು ವಿಶಿಷ್ಟವಾದ ವಿಚಾರವನ್ನು ಸೀತೆ ತಿಳಿಸುವಳು ಅದೇನೆಂದರೆ – ಲಂಕೆಯಲ್ಲಿ ಯಾರೂ ಒಳ್ಳೆಯವರಿಲ್ಲ ಎಂದೇನಿಲ್ಲ. ರಾಮನ ತಮ್ಮನೊಬ್ಬ ವಿಭೀಷಣನಿದ್ದಾನೆ. ಅವನು ನನಗಾಗಿ ನಿರಂತರ ಪ್ರಯತ್ನ ವನ್ನು ಮಾಡುತ್ತಿದ್ದಾನೆ. ನಿತ್ಯವೂ ರಾವಣನ ಮನವೊಲಿಸಲು ಪ್ರಯತ್ನಿಸುತ್ತಿದ್ದಾನೆ. ನಮಗಿದು ಬೇಡ, ಶ್ರೇಯಸ್ಸಲ್ಲ ಎಂದು ಪ್ರತಿನಿತ್ಯ ಅವನೊಬ್ಬ ಲಂಕೆಯಲ್ಲಿ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ರಾವಣ ಹೇಳಿದಕ್ಕೆ ಒಪ್ಪುತ್ತಿಲ್ಲ. ನನ್ನನ್ನು ಮರಳಿ ರಾಮನಿಗೆ ಕೊಡುವುದು ರಾವಣನಿಗೆ ಇಷ್ಟವಿಲ್ಲ. ಕಾರಣ – ಅವನಿಗೆ ಸಾಯುವ ಕಾಲ ಬಂದಿದೆ ಎಂದಾಗ ಹನುಮನಿಗೆ ಅದು ಹೇಗೆ ನಿನಗೆ ತಿಳಿಯಿತು ಎಂದು ಕೇಳುವ ರೀತಿ ಮುಖ ಭಾವನೆಯನು ವ್ಯಕ್ತಪಡಿಸಿದನು. ವಿಭೀಷಣನ ಮಗಳು ಅನಲೆ. ಇಲ್ಲಿಗೆ ಆಗಾಗ ತನ್ನ ತಾಯಿಯಾದ ಸರಮೆಯ ಮೇರೆಗೆ ಬರುತ್ತಾಳೆ. ಅವಳು ಈ ವಿಚಾರಗಳನ್ನು ತಿಳಿಸುತ್ತಿದ್ದಳು. ಮರಳಿ ನಾನು ರಾಮನನ್ನು ಸೇರುವೆ. ಕಾರಣ – ನನ್ನ ಅಂತರಾತ್ಮ ಶುದ್ದ. ಶುದ್ದಾಂತರಂಗಕ್ಕೆ ತುಂಬಾ ಗುಣಗಳಿದೆ. ಹಾಗೆಯೇ ರಾಮನಲ್ಲಿ ಕೆಲವು ಗುಣಗಳಿವೆ. ಉತ್ಸಾಹ, ಕರುಣೆ, ಪೌರುಷ, ಸತ್ವ, ಪ್ರಭಾವ, ವಿಕ್ರಮ ಇವೆಲ್ಲವೂ ಇರುವುದು ನನ್ನ ರಾಮನಲ್ಲಿ ಮಾತ್ರ. ಪಂಚವಟಿಯಲಿ 14 ಸಾವಿರ ರಾಕ್ಷಸರನ್ನು ಏಕಾಂಗಿಯಾಗಿ ಸದೆ ಬಡಿದವನು, ಅವನನ್ನು ಅಷ್ಟು ಸುಲಭದಲ್ಲಿ ವಿಚಲಿತಗೊಳಿಸುವುದು ಅಸಾಧ್ಯ. ನನಗೆ ಗೊತ್ತು ಅವನ ಸ್ವಭಾವ, ಸ್ಥಿರ ಅವನು.

ರಾಮನೆಂಬ ಸೂರ್ಯ ತನ್ನ ಕಿರಣಗಳಿಂದ ಲಂಕೆಯನ್ನು ಮತ್ತು ರಾಕ್ಷಸರನ್ನು ಹೀರಿ ಒಣಗಿಸುತ್ತಾನೆ. ಎಂದು ಹೇಳಿದಾಗ ಆಕೆಯ ಕಣ್ಣಲ್ಲಿ ನೀರಿತ್ತು. ಶೋಕಿಸುತ್ತಿದ್ದ ಸೀತೆಯನು ಚಿಂತಿಸದಿರು ರಾಮ ಬರುವನು ಎಂದು ಸಮಾಧಾನ ಪಡಿಸುವನು ಹಾಗೂ ಇವತ್ತೇ ಈ ಶೋಕಕ್ಕೆ ಕೊನೆ. ಏನಿಲ್ಲ, ನೀನು ನನ್ನ ಮೇಲೆ ಕುಳಿತು ರಾಮಾ ಎಂದು ಹೇಳಿ ಮುಗಿಸುವಷ್ಟು ಸಮಯದಲ್ಲಿ ನಿನ್ನನ್ನು ರಾಮನ ಎದುರೆ ಕರೆದುಕೊಂಡು ಹೋಗಿ ನಿಲ್ಲಿಸುವೆ. ಇಂದೇ ರಾಮ-ಲಕ್ಷ್ಮಣರು ನಿನ್ನನು ನೋಡುತ್ತಾರೆ. ಹಾಗಾಗಿ ನೀನೇನು ಚಿಂತಿಸದಿರು. ಚಂದ್ರ ರೋಹಿಣಿಯನು ಸೇರಿದಂತೆ ನೀವಿಬ್ಬರು ಸೇರಬೇಕು ನಾವು ನೋಡಬೇಕು. ನೀನು ನನ್ನ ಬೆನ್ನಿನ ಮೇಲೆ ಹತ್ತಿ ಕುಳಿತುಕೊ. ಮತ್ತೆ ಲಂಕೆಯಲ್ಲಿ ನನ್ನ ವೇಗವನ್ನು ಹಿಂಬಾಲಿಸಲು ಯಾವ ರಾಕ್ಷಸರಿಗೂ ಸಾಧ್ಯವಿಲ್ಲ. ಆಗ ಸೀತೆಗೆ ಆಶ್ಚರ್ಯ ಮತ್ತು ಸಂತೋಷವಾಯಿತು. ಆಗ ಸೀತೆಯು ಹನುಮನಿಗೆ ಅದಕ್ಕೆ ಹೇಳುವುದು ನೀನು ಕಪಿ ಎಂದು ಹೇಳಿದಳು. ಇಲ್ಲಿಂದ ಅಲ್ಲಿಗೆ ಅಂದರೆ ಲಂಕೆಯಿಂದ ರಾಮನಿರುವ ಆ ಜಾಗಕ್ಕೆ ತಲುಪಲು ಎಷ್ಟು ದೂರವಿದೆ? ಗೊತ್ತಾ? ಅಷ್ಟು ದೂರ ನೀನು ನನ್ನನ್ನು ಹೊತ್ತುಕೊಂಡು ಹೋಗುವುದಾ? ನಿನ್ನ ಗಾತ್ರ ಬೆಕ್ಕಿನಷ್ಟಿದೆ ಎಂದಳು.

ಆಗ ಹನುಮಂತನಿಗೆ ಜೀವಮಾನದಲ್ಲಿ ಈವರೆಗೆ ಆಗದ ಅವಮಾನ ಆಯಿತಲ್ಲ ಎಂದು ಆಲೋಚಿಸಿ, ಸೀತೆಯ ಮುಂದೆ ತನ್ನ ಪ್ರಭಾವ, ಶಕ್ತಿಯನ್ನು ತೋರಿಸಬೇಕೆಂದು ಆಲೋಚಿಸಿದನು. ಬಹಳ ತಮಾಷೆಯಾಗಿದೆ ಈ ಸಂದರ್ಭ. ಮರ್ಯಾದೆ ಹೋದದ್ರಿಂದ ಸರಿಮಾಡಿಕೊಳ್ಳಬೇಕೆಂದು ಚಿಂತಿಸಿ ತನ್ನ ರೂಪವನ್ನು ತೋರಿಸಬೇಕೆಂದು ಅಂದುಕೊಂಡು, ಮರದಿಂದ ಕೆಳಗೆ ಹಾರಿದ ಹನುಮಂತ. ಇಲ್ಲಿ ತನಕವೂ ಹನುಮಂತ ಮರದ ಮೇಲೇ ಇದ್ದ. ಕೆಳಬಂದು ತನ್ನ ರೂಪವನ್ನು ಸೀತೆಗೆ ತೋರಿಸಿದ. ಮೇರುಪರ್ವತ, ಮಂದರಪರ್ವತದಂತೆ ಬೆಳೆಯತೊಡಗಿದನು. ಅಗ್ನಿಜ್ವಾಲೆಯಿಂದ ಬೆಳಕು ಹೊರಬರುವಂತೆ ಪರ್ವತಾಕಾರನಾಗಿ ಸೀತೆ ಮುಂದೆ ನಿಂತಿದಾನೆ. ಕೆಂಪು ಮುಖದ, ಚಿನ್ನದ ಬಣ್ಣದ ಶರೀರದ, ವಜ್ರದಷ್ಟು ಕಠೋರವಾದ ಹಲ್ಲು, ಉಗುರುಗಳುಳ್ಳ, ಭೀಮವಾನರ ಹನುಮಂತನು ಸೀತೆಯನ್ನು ಕುರಿತು ಹೇಳಿದನಂತೆ. ನಾನು ಹೇಳಲಿಲ್ಲವಾ, ಇಡೀ ಲಂಕೆಯನ್ನು ಹೊರಬಲ್ಲೆ, ನೀನು ಇಲ್ಲೇ ಕುಳಿತಿರು. ನಿನ್ನ ಸಹಿತ, ಅಶೋಕವನಸಹಿತ, ರಾವಣನ ಅರಮನೆಯ ಸಹಿತ ಲಂಕೆಯನ್ನು ಎತ್ತುಕೊಂಡು ಹೋಗ್ತೇನೆ.

ಆಗ ಸೀತೆ ಹೇಳಿದಳಂತೆ, ನಿನ್ನ ಸಾಮರ್ಥ್ಯವನ್ನು, ಶಕ್ತಿಯನ್ನು ಅರಿತೆ. ಅಗ್ನಿಯ ನಿನ್ನ ತೇಜಸ್ಸನ್ನು ಅರಿತೆ. ಸಮುದ್ರ ದಾಟಿ ಇಲ್ಲಿ ಬಂದುದಾದರೂ ಹೇಗೆ… ಅಲ್ವಾ… ಬಂದೆ ಅಂದ ಮೇಲೆ ನಿನಗೆ ಆ ಶಕ್ತಿಯಿದೆ ಎಂದು ನಂಬಿದೆ ಎಂದಳು. ಸ್ವಲ್ಪ ಕಾರ್ಯಾಕಾರವನ್ನು ಚಿಂತನೆ ಮಾಡೋಣ. ನೀನು ಹೇಳಿದೆ, ಒಂದು ಮಾತು ಆಡಿ ಮುಗಿಸುವವರೆಗೆ ನಾನು ರಾಮನ ತಲುಪುವೆ ಎಂದು, ಆದರೆ ಆ ವೇಗವನ್ನು ತಡೆದುಕೊಳ್ಳಲು ನನಗಾಗಬೇಕಲ್ಲ. ಆ ವೇಗ, ಗಾಳಿ, ಭಯಕ್ಕೆ ನಾನು ಸಮುದ್ರದಲ್ಲಿ ಬಿದ್ದು ತಿಮಿಂಗಲಗಳಿಗೆ ಆಹಾರವಾದರೆ… ? ಇದೊಂದು ವಿಚಾರ. ಇನ್ನೊಂದು ಸ್ತ್ರೀಯೋರ್ವಳನ್ನು ಕರೆದೊಯ್ತಾ ಇರುವುದನ್ನ ಕಂಡು ರಾಕ್ಷಸರು ಯುದ್ಧಕ್ಕೆ ಬಂದರೆ, ನೀನು ನನ್ನನ್ನು ಕಾಪಾಡ್ತೀಯೋ ಅಥವಾ ಯುದ್ಧ ಮಾಡ್ತೀಯೋ… ಗೆಲುವಿನ ಸಂದೇಹ ಉಂಟಾಗುವ ಸಂದರ್ಭ ಬರಬಹುದು. ಅಥವಾ ಯುದ್ಧದ ಗಲಾಟೆಯಲ್ಲಿ ನಾನು ಕೆಳಗೆ ಬಿದ್ದುಬಿಟ್ಟರೆ… ಅಥವಾ ರಾಕ್ಷಸರೇ ಗೆದ್ದುಬಿಟ್ಟರೆ… ಅಥವಾ ಮೇಲಿಂದ ನಾನು ಕೆಳಗೆ ಬೀಳುವಾಗ ರಾಕ್ಷಸರು ನನ್ನನ್ನು ಹಿಡಿದು ಇನ್ನೂ ಗೌಪ್ಯವಾದ ಸ್ಥಳದಲ್ಲಿ ಮುಚ್ಚಿಟ್ಟರೆ, ಬೇರೆಲ್ಲಾದರು ಮುಚ್ಚಿಟ್ಟರೆ ಅಥವಾ ನನ್ನನ್ನು ಕೊಂದುಬಿಟ್ಟರೆ ಎಂದಳು. ಅಥವಾ ಅವರು ಗದರಿಸುವಾಗಲೇ ಬಿದ್ದುಬಿಡಬಹುದು ನಾನು. ಸರಿ, ನೀನೊಬ್ಬನೇ ಸಾಕು ರಾಕ್ಷಸರೆಲ್ಲರನ್ನೂ ಕೊಲ್ಲಲು, ಆದರೆ ರಾಮನ ಸಾಮರ್ಥ್ಯ ಕುಂದೀತು. ಈ ಕಾರ್ಯ ರಾಮನಿಂದಾಗಬೇಕು. ರಾಮನ ವೀರತ್ವಕ್ಕೆ ಪ್ರಶ್ನೆ ಬರಬಹುದು. ಅಯೋಧ್ಯೆಯ ರಾಜಕುಲವು, ಸುಗ್ರೀವಾದಿ ವಾನರರೂ ರಾಮನಲ್ಲಿ ಜೀವವನ್ನಿಟ್ಟಿದ್ದಾರೆ. ಈ ಕಾರ್ಯದಿಂದ ಅನರ್ಥ ಪರಂಪರೆಯಾಗಬಹುದು. ಇಷ್ಟೆಲ್ಲ ಕಾರಣಗಳನ್ನು ಹೇಳಿದಳು. ಮತ್ತೆ ಹೇಳಿದಳು ನಾನಾಗಿ ಯಾರನ್ನೂ ಮುಟ್ಟಬಾರದು ಹನುಮಂತ. ಇದು ಭರ್ತೃಪ್ರೇಮ. ನಾನಾಗಿ ಮುಟ್ಟಬಾರದು, ಇದು ನನ್ನ ವೃತ. ರಾಮನು ತನ್ನ ಧನುಸ್ಸನ್ನ ಹಿಡಿದು ನಿಂತರೆ ಅವರಿಗೆ ಸರಿಸಮಾನರಿಲ್ಲ. ಹೋಗು, ಹೇಗಾದರೂ ಮಾಡಿ ರಾಮನನ್ನು ಕರೆತಾ ಇಲ್ಲಿಗೆ. ಈಗ ನಾನು ಕರ್ಷಿತೆ, ಹರ್ಷಿತೆಯಾಗುವಂತೆ ಮಾಡು ಎಂದಳು ಸೀತೆ.

ಆಗ ಹನುಮಂತನಿಗೆ ತುಂಬ ಹರ್ಷವಾಯಿತು. ಎರಡು ವಾಕ್ಯವನ್ನು ಹೇಳೀದನು ಹನುಮಂತ. ಇದು ಸ್ತ್ರೀಸ್ವಭಾವ. ಆ ವೇಗವನ್ನು, ಯುದ್ಧವನ್ನೂ ಹೆಣ್ಣಾಗಿ ನೀನು ಹೇಗೆ ತಡೆದುಕೊಂಡೀಯ.., ಸಾಧ್ಯವಿಲ್ಲ. ಇನ್ನೊಂದು ಪತಿಧರ್ಮ. ಎರಡೂ ಸರಿಯಿದೆ. ಎರಡನೇ ಕಾರಣವನ್ನು, ರಾಮನ ಬಿಟ್ಟು ಬೇರಾರನ್ನೂ ನೀನೇ ಮೊದಲಾಗಿ ಸ್ಪರ್ಶಿಸುವುದಿಲ್ಲ ಎಂದೆಯಲ್ಲಾ, ಈ ಸ್ಥಿತಿಯಲ್ಲಿ ನಿನ್ನನ್ನು ಬಿಟ್ಟು ಜಗತ್ತಿನಲ್ಲಿ ಬೇರಾರೂ ಈ ಮಾತನ್ನು ಹೇಳಲು ಸಾಧ್ಯವಿಲ್ಲ. ರಾಮನ ಪತ್ನಿ ಎಂದರೆ ಹೀಗಿರಬೇಕು. ಇದೆಲ್ಲವನ್ನೂ ನಾನು ರಾಮನಿಗೆ ಹೇಳ್ತೇನೆ. ನಿನ್ನ ಮುಖಭಾವ ಸಹಿತವಾಗಿ ಪೂರ್ತಿ ವರದಿ ಮಾಡ್ತೇನೆ ರಾಮನಿಗೆ, ಎಂದು ಹೇಳಿ ಹೆಮ್ಮೆ ಪಟ್ಟನು. ನಿಮ್ಮಿಬ್ಬರನ್ನು ಈಗಲೇ ಸೇರಿಸಬೇಕೆಂಬ ಮನಸ್ಸು ಬಂದು ಹಾಗೆ ಹೇಳಿದೆ, ಬೇರಿನ್ನೇನೂ ಉದ್ದೇಶ ಇಲ್ಲ. ರಾಮನ ಕುರಿತ ಸ್ನೇಹದಿಂದ ಹಾಗೆ ಹೇಳಿದೆ. ನೀನು ಹೇಳಿದ ಹಾಗೆ ಆಗಲಿ. ಆದರೆ ನನಗೇನಾದರೂ ಕೊಡು! ರಾಮನಿಗೆ ತೋರಿಸಲಿಕ್ಕೆ ಎಂದನು ಹನುಮಂತ. ಗಟ್ಟಿಯಾದ ಸಾಕ್ಷಿ ಕೊಡು ಎಂದನು. ಸೀತೆ ಏನು ಕೊಟ್ಟಳು ಎಂಬುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments