ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ಹಿಗ್ಗುವುದಕ್ಕೊಂದು ಕಾಲ, ಕುಗ್ಗುವುದಕ್ಕೂ ಒಂದು ಕಾಲ. ಶುಕ್ಲಪ ಕ್ಷವಿಡೀ ಚಂದ್ರನು ಹಿಗ್ತಾ ಇರ್ತಾನೆ. ಕೃಷ್ಣ ಪಕ್ಷ ಬಂದಾಗ ಕುಗ್ಗತೊಡಗುತ್ತಾನೆ. ಕತ್ತಲೆಗೂ ಹಾಗೇ. ಕೊಬ್ಬಲಿಕ್ಕೆ ಒಂದು ಕಾಲವಿರ್ತದೆ. ಕುಗ್ಗಲಿಕ್ಕೆ ಒಂದು ಕಾಲವಿರ್ತದೆ. ಶುಕ್ಲ ಪಕ್ಷದಲ್ಲಿ ಕತ್ತಲೆ ಕುಗ್ಗುತ್ತದೆ. ಇದೆಲ್ಲಾ ಯಾಕೆ ಅಂದ್ರೆ ಇವತ್ತಿನ ಪ್ರವಚನ ಆರಂಭವಾಗುವುದು ಯುದ್ಧಕಾಂಡದ ಸರ್ಗ 11ರ ಒಂದನೇ ಶ್ಲೋಕದಿಂದ. ಆ ಒಂದನೇ ಶ್ಲೋಕ ರಾವಣನು ಸೊರಗಿದನು ಎಂಬುದನ್ನು ಹೇಳ್ತಾಯಿದೆ. ಯುಗ ಯುಗಗಳ ಕಾಲ ಇಡೀ ಪ್ರಪಂಚವನ್ನು ತನ್ನ ಅನ್ಯಾಯಕ್ಕೊಳಪಡಿಸಿರತಕ್ಕಂತಹ ಕೊಬ್ಬಿದ ರಾವಣ ಸೊರಗಿದ. ಹೇಗೆ ಸೊರಗಿದ ಅಂದ್ರೆ ಎರಡು ಕಾರಣಗಳನ್ನ ನಿರೂಪಣೆ ಮಾಡ್ತಾರೆ ವಾಲ್ಮೀಕಿಗಳು. ಒಂದು ಸೀತೆ ತನ್ನನ್ನು ತಿರಸ್ಕರಿಸಿದ್ದರಿಂದಾಗಿ.
ಸೀತೆಯೂ ಸೊರಗಿದಾಳೆ. ರಾಮನಿಗಾಗಿ. ಈಡೇರದ ಕಾಮದಿಂದಾಗಿ ಸೊರಗಿದನು ರಾವಣ. ಇನ್ನೊಂದು ಕಾರಣ ರಾವಣ ಹಿತೈಷಿಗಳು ಅವನ ಮೇಲೆ ಇದ್ದ ಗೌರವವನ್ನೂ ಕಳೆದುಕೊಂಡಿದ್ದರು. ರಾವಣ ಮಾಡಿದ ಅಕೃತ್ಯವನ್ನು ತಾಯಿ ಕೈಕಸಿ, ಪಟ್ಟದರಾಣಿ ಮಂಡೋದರಿ, ತಮ್ಮ ವಿಭೀಷಣ, ಕುಂಭಕರ್ಣನೂ ಸಹ, ಮಂತ್ರಿ ಅವಿಂದ್ಯ, ಅಜ್ಜ ಮಾಲ್ಯವಂತ ಇವರ್ಯಾರೂ ಒಪ್ಪಲಿಲ್ಲ. ರಾವಣನ ಮಿತ್ರರು, ಆಪ್ತರು ಇಲ್ಲಿವರೆಗೆ ಹೇಗೋ ಅವನನ್ನು ಸಹಿಸಿಕೊಂಡು ಇದ್ದವರು ಅವನ ಈ ಅಕಾರ್ಯದ ಬಳಿಕ ಇದ್ದ ಗೌರವವನ್ನೂ ಕಳೆದುಕೊಂಡರು. ಅದವನಿಗೆ ಗೊತ್ತಾಗಿತ್ತು. ಹಾಗಾಗಿ ಒಳಗೆಲ್ಲೋ ಅದು ಚುಚ್ಚುತ್ತಲೇ ಇತ್ತು. ಹಾಗಾಗಿ ಈ ಎರಡು ಕಾರಣಗಳಿಂದ;

ಮೈಥಿಲಿಯಲ್ಲಿ ಕಾಮದ ಅಪೇಕ್ಷೆ ಈಡೇರದಿದ್ದಾಗ ಅದು ಅವನನ್ನು ಸೊರಗಿಸಿತ್ತು, ಅವನ ಹುಹೃದರು ಅವನನ್ನು ಮಾನಿಸಲಿಲ್ಲ. ಗೌರವವನ್ನು ಕಳೆದುಕೊಂಡ. ಇವರೆಲ್ಲ ರಾವಣನಲ್ಲಿ ಹೇಳಿಯೂ ಹೇಳಿದ್ದಾರೆ. ದೃಷ್ಟಿಯಲ್ಲಿ ವ್ಯತ್ಯಾಸ ಅವನಿಗೆ ಅನುಭವಕ್ಕೆ ಬರ್ತಾಯಿದೆ.
ಯಾಕೆಂದರೆ ಸೀತೆಯೆಂದರೆ ಭೂಲೋಕದ ಬೆಳದಿಂಗಳು. ಯಾಕೆ ಅವಳನ್ನು ವೃಥಾ ಪೀಡಿಸ್ಬೇಕು? ರಾಮನು ಈ ಲೋಕದ ಸೂರ್ಯಪ್ರಭೆ. ಇಲ್ಲರೂ ರಾಮನನ್ನು ಸೀತೆಯನ್ನು ಪ್ರೀತಿಸುವಂಥವರು ಇದ್ದಿದ್ದು. ಅವರಿಗೆ ಈ ರೀತಿ ಉಪದ್ರವವನ್ನು ಕೊಟ್ಟಿದ್ದು ಎಲ್ಲರ ಮನಸ್ಸಿನಲ್ಲಿಯೂ ಬೇರೆ ಬೇರೆ ಭಾವಕ್ಕೆ ಕಾರಣವಾಗಲೇಬೇಕು. ಒಟ್ಟು ಏನಾಯಿತು? ಇಲ್ಲದುದು ಬರಲಿಲ್ಲ. ಇದ್ದುದನ್ನು ಕಳೆದುಕೊಂಡ. ಸೀತೆಯ ಒಲವನ್ನು ಗೆಲ್ಲುವ ಪ್ರಯತ್ನ ಸಫಲವಾಗಲಿಲ್ಲ. ತನ್ನ ಆಪ್ತೇಷ್ಟರು ಇಲ್ಲಿಯವರೆಗೂ ಇವನ ಮೇಲಿಟ್ಟಿದ್ದ ಭಾವವನ್ನು ಕಳೆದುಕೊಂಡ. ಹೋಗಬಾರದು ಅಂಥ ಕೆಲಸಕ್ಕೆ.

ಯೋಗ-ಕ್ಷೇಮ ಎರಡು ಜೀವನಕ್ಕೆ ಬೇಕಾಗಿರುವಂಥದ್ದು. ಇಲ್ಲದುದು ಬಂದರೆ ಯೋಗ. ಇರುವುದನ್ನು ಉಳಿಸಿಕೊಳ್ಳುವುದು ಕ್ಷೇಮ. ರಾವಣನ ವಿಷಯದಲ್ಲಿ ಆಗಿದ್ದು ತದ್ವಿರುದ್ಧ. ಇರುವುದೂ ಹೋಯಿತು. ಇಲ್ಲದುದು ಬರಲಿಲ್ಲ. ಯೋಗವೂ ಇಲ್ಲ, ಕ್ಷೇಮವೂ ಇಲ್ಲ. ಇಂಥ ಪಾಪಕಾರ್ಯವನ್ನು ಮಾಡಬಾರದು. ಈ ಮೋಹದ ಸುಳಿ ಅಂಥದ್ದು.
ಸಂಸ್ಕೃತದಲ್ಲಿ ಒಂದು ಪ್ರಸಿದ್ಧವಾದ ಶ್ಲೋಕವೇ ಇದೆ.
ಯಾಂ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ।
ಸಾಪ್ಯನ್ಯಮಿಚ್ಛತಿ ಜನಂ ಸ ಜನೋ ಅನ್ಯಸಕ್ತಃ।।
ಅಸ್ಮಾಕಮಪಿ ಪಾರಿತುಷ್ಯತಿ ಕಂಚಿದನ್ಯ ಅಂತ ಶ್ಲೋಕ ಮಂದುವರೀತದೆ.

ಅದರ ಕನ್ನಡ ಅನುವಾದ ಹೀಗಿದೆ :
ನಿರಂತರ ನಾನು ಯಾರನ್ನು ಮನಸ್ಸಲ್ಲಿ ಇಟ್ಟುಕೊಂಡಿದೇನೋ ಅವಳಿಗೆ ನಾನು ಬೇಡ. ಅವಳಿಗಿನ್ಯಾರೋ ಬೇಕಾಗಿದೆ. ಅವನಿಗೆ ಇವಳಲ್ಲಿ ಆಸಕ್ತಿ ಇಲ್ಲ. ಅವನು ಬೇರೆ ಯಾರನ್ನೋ ಪ್ರೀತಿ ಮಾಡಿದ. ತನ್ನನ್ನು ಯಾರೋ ಒಲಿದು ಬಂದಿದಾಳೆ. ಆದರೆ ತನಗವಳು ಬೇಡ. ಹೀಗೆಲ್ಲಾ ಹೇಳಿ ಕೊನೆಯಲ್ಲಿ ಆ ಶ್ಲೋಕಕಾರ ಏನು ಹೇಳ್ತಾನೆ ಅಂದ್ರೆ ಅವಳಿಗೂ ಧಿಕ್ಕಾರ, ಅವನಿಗೂ ಧಿಕ್ಕಾರ, ಅವಳಿಗೂ ಧಿಕ್ಕಾರ, ತನಗೂ ಧಿಕ್ಕಾರ, ಈ ಮೋಹಪಾಶಕ್ಕೂ ಧಿಕ್ಕಾರ ಅಂತ ಅವ್ನು ಶ್ಲೋಕ ಪೂರ್ತಿ ಮಾಡ್ತಾನೆ. ಹೀಗೆ ಸೊರಗಿದ ರಾವಣನು ಒಂದು ದಿನ ಎಚ್ಚರಗೊಂಡ. ಏನು ಅಂದ್ರೆ ಮಂತ್ರಾಲೋಚನೆ ಮಾಡ್ಬೇಕಿತ್ತು. ‘ಅತೀತ ಸಮಯೇ ಕಾಲೇ’ – ಕಾಲ ಮಿಂಚಿ ಹೋಗಿದೆ. ಮೊದಲೆ ಮಾಡಬೇಕಿತ್ತು. ಸೀತಾಪಹರಣಕ್ಕೆ ಹೊರಡುವ ಮುನ್ನ ಮಂತ್ರಾಲೋಚನೆ ಮಾಡ್ಬೇಕಿತ್ತು. ಸೀತೆಯನ್ನು ತಂದಿಟ್ಟಕೂಡಲೇ ಮಾಡ್ಬೇಕಿತ್ತು ಕೊನೇ ಪಕ್ಷ. ಎಷ್ಟು ಸಮಯ ಕಳೆದ್ಹೋಗಿದೆ ಅಲ್ಲಿಂದ ಈಚೆಗೆ! ಕೊನೆಗೆ ಆ ಒಂದು ಮಂತ್ರಾಲೋಚನೆ ವಿಭೀಷಣ ಎಲ್ಲರಿಗೂ ಮನವರಿಕೆ ಮಾಡಿರತಕ್ಕಂತದ್ದು, ಎಲ್ಲರೂ ನಿರುತ್ತರರಾಗ್ತಾರೆ ಅವನ ಮುಂದೆ. ಅದಾಗಿಯೂ ಎಷ್ಟೋ ದಿನ ಕಳೆದುಹೋಗಿದೆ. ಈಗಂತೂ ಯುದ್ಧಕ್ಕೇ ಕಾಲ ಮಿಂಚಿದೆ. ರಾಮನ ಸೈನ್ಯ ಸಮುದ್ರದಾಚೆ ಬಂದು ನಿಂತಿದೆ. ಹೀಗೆ ಮಿಂಚಿ ಹೋದ ಕಾಲದಲ್ಲಿ ರಾವಣನು ಮಂತ್ರಾಲೋಚನೆಗೆ ಮನಸ್ಸನ್ನು ಮಾಡಿದನು. ತನ್ನ ಅಮಾತ್ಯರೊಡನೆ, ಹಿತೈಷಿಗಳೊಡನೆ ಮಂತ್ರಾಲೋಚನೆಗೆ ಮನಸ್ಸು ಮಾಡ್ತಾನೆ.

ಮತಿಯ ಬಳಿಕ ಕೃತಿ. ಇರಬೇಕಾದ್ದು ಹೀಗೆ. ಅಂತರಂಗ ಮೊದಲು ಬಳಿಕ ಬಹಿರಂಗ. ರಾವಣನ ವಿಷಯದಲ್ಲಿ ಇದು ಹಿಂದೆ ಮುಂದೆ. ಮೊದಲು ಕೃತಿ. ಸೀತೆಯನ್ನು ಕದ್ದು ತಂದಾಗಿದೆ. ಆಮೇಲೆ ಮತಿ. ಎಷ್ಟು ಕಾಲ ಕಳೆದು ಅಂದ್ರೆ, ಕುತ್ತಿಗೆಗೆ ಬಂದ ಮೇಲೆ ಮಂತ್ರಾಲೋಚನೆ ಪ್ರಾರಂಭವಾಯ್ತು. ರಾವಣನು ರಥವನ್ನೇರಿದನು. ಸ್ವರ್ಣಮಯವಾಗಿರತಕ್ಕಂತಹ ರಥ. ವಜ್ರ ಮತ್ತು ಹವಳಗಳಿಂದ ಭೂಷಿತವಾಗಿದೆ. ಅದಕ್ಕೇನು ಕೊರತೆಯಿಲ್ಲ ಲಂಕೆಯಲ್ಲಿ. ಸುಶಿಕ್ಷಿತವಾಗಿರುವಂತಹ ಅಶ್ವಗಳು. ಅಂತಹ ಮಹಾರಥವನ್ನು ಏರಿ, ಆ ಮಹಾರಥವು ಮಹಾಮೇಘದಂತೆ ಗುಡುಗಿನಂತೆ ಸದ್ದು ಮಾಡುತ್ತಿರುವಂತೆಯೇ ಸಭೆಯ ಕಡೆಗೆ, ಆಸ್ಥಾನದ ಕಡೆಗೆ ರಾವಣನು ತೆರಳಿದನು. ಅವನು ಹೊರಟ ಕೂಡಲೇ ರಾಕ್ಷಸರು ಅವನ ಹಿಂದಿನಿಂದ ಬರ್ತಾರೆ. ಕತ್ತಿ ಗುರಾಣಿಗಳನ್ನ ಹಿಡಿದಿದ್ದರು ರಾಕ್ಷಸರು. ಕತ್ತಿ ಗುರಾಣಿಗಳೇನು ಎಲ್ಲಾ ಪ್ರಕಾರದ ಆಯುಧಗಳೂ ಕೂಡ ಆ ತುಕಡಿಯಲ್ಲಿ ಕಾಣಬಹುದಾಗಿತ್ತು. ರಾಕ್ಷಸರಲ್ಲಿ ಹೆಚ್ಚಿನವರು ರಾವಣನ ಮುಂದಕ್ಕೆ ತೆರಳಿದರು. ಹಿಂದೆಯೂ ಕೆಲವರು ಬಂದ್ರು. ವೇಷಗಳು ವಿಚಿತ್ರ ವಿಚಿತ್ರವಾಗಿ ವಿಕೃತವಾಗಿದ್ದವು. ಪರಿಪರಿಯ ವಿಕಾರದ ವೇಷವನ್ನು ತೊಟ್ಟಿರತಕ್ಕಂತಹ ರಾಕ್ಷಸರು. ಹೀಗೆ ಮುಂದಿನಿಂದ, ಇಕ್ಕೆಲಗಳಲ್ಲಿ, ಹಿಂದಿನಿಂದ ಸುತ್ತುವರೆದು ಮುಂದುವರೀತಾ ಇದ್ದಾರೆ ರಾಕ್ಷಸರು. ಕೆಲವರು ರಥಗಳನ್ನೇರಿ, ಕೆಲವರು ಮದಗಜಗಳನ್ನೇರಿ, ಕೆಲವರು ನೆಗೆಯುತ್ತ, ಕುಣಿಯುತ್ತ ಇರುವಂತಹ ಅಶ್ವಗಳ ಮೇಲೆ ಪ್ರಯಾಣ ಮಾಡ್ತಾಯಿದ್ದಾರೆ. ಗದೆ, ಪರಿಘ, ಶಕ್ತಿ, ತೋಮರಗಳು, ಗಂಡುಗೊಡಲಿ, ಶೂಲಗಳು ಅವರ ಕೈಯಲ್ಲಿ.

ಏತನ್ಮಧ್ಯೆ ಸಾವಿರ ತೂರ್ಯಗಳು ( ಕೊಂಬು ) ಒಟ್ಟಿಗೆ ಮೊಳಗಿದವು. ಕಿವಿ ಗಡಚಿಕ್ಕುವಂತೆ. ಅನೇಕಾನೇಕ ಶಂಖಗಳೂ ಸದ್ದು ಮಾಡಿದವು. ಏತನ್ಮಧ್ಯೆ ತನ್ನ ರಥಗಳ ನೇಮಿ ಘೋಷದಿಂದ ರಾಜಮಾರ್ಗಗಳನ್ನು ಪ್ರತಿಧ್ವನಿಸುವಂತೆ ಮಾಡ್ತಾ ಮುಂದಕ್ಕೆ ಹೋಗ್ತಾ ಇದಾನೆ. ಕಾಂತಿಯುಕ್ತವಾದಂತಹ ರಾಜಮಾರ್ಗದಲ್ಲಿ ಮುಹಾರಥವನ್ನೇರಿದ ಮಹಾರತನಾದ ರಾವಣನು ಮುಂದೆ ಹೋಗ್ತಾ ಇದಾನೆ. ವಿಮಲವಾದ ಶ್ವೇತಚ್ಛತ್ರವನ್ನು ಅವನಿಗೆ ಹಿಡಿದಿದ್ದರು. ಚಾಮರ-ವ್ಯಜನಗಳು, ಸ್ಫಟಿಕದ ದಂಡ ಹಿಡಿಕೆ ಸ್ಫಟಿಕದ್ದು, ಅಲ್ಲಲ್ಲಿ ಚಿನ್ನದ ಹೂವುಗಳಿಂದ ಅಲಂಕೃತವಾಗಿದೆ. ರಾವಣನ ಎಡ ಭಾಗದಲ್ಲಿ ಚಾಮರ, ಬಲಭಾಗದಲ್ಲಿ ವ್ಯಜನಗಳು ಶೋಭಿಸ್ತಾ ಇವೆ. ರಥವನ್ನೇರಿ ರಾವಣನು ರಾಜರಸ್ತೆಯಲ್ಲಿ ಹೋಗ್ತಾ ಇದ್ರೆ ನೆಲದಲ್ಲಿ ಇಕ್ಕೆಲಗಳಲ್ಲಿದ್ದಂತಹ ರಾಕ್ಷಸರು ತಲೆಬಾಗಿ ವಂದಿಸಿದರು. ಮತ್ತು ರಾವಣನಿಗೆ ಜಯವಾಗಲಿ ಎಂಬ ಜಯಘೋಷಗಳು ಮೊಳಗಿದಾವೆ. ಹೀಗೆ ಉತ್ಕೃಷ್ಟವಾಗಿರುವಂತಹ ಆಸ್ಥಾನ ಮಂಟಪಕ್ಕೆ ರಾವಣನು ಹೋಗ್ತಾ ಇದ್ದಾನೆ.

ಆಸ್ಥಾನ ಮಂಟಪ ಹೇಗಿತ್ತು? ಬೆಳ್ಳಿ ಬಂಗಾರದ ಕಂಬಗಳು, ಸ್ಫಟಿಕದ ನೆಲ, ಸ್ವರ್ಣಸೂತ್ರದಿಂದ ಪೋಣಿಸಿರುವ ಪಟ್ಟಿಯಿಂದ ಮೇಲ್ಕಟ್ಟನ್ನು ಕಟ್ಟಲಾಗಿದೆ. ಸಭೆಯನ್ನು ರಾವಣ ಪ್ರವೇಶ ಮಾಡ್ತಾ ಇದಾನೆ. ಸಭೆಗೆ ಕಾವಲಿತ್ತು. ಬಹಳ ವಿಶೇಷವಾಗಿದೆ ವಿಷಯ. 600 ಪಿಶಾಚಗಳು ಸಭೆಗೆ ಕಾವಲಿದ್ದವಂತೆ. ಮೂಲತಃ ವಿಶ್ವಕರ್ಮನು ನಿರ್ಮಾಣ ಮಾಡಿದ್ದಾನೆ ಆ ಸಭೆಯನ್ನು. ಸಭಾಮಂಟಪವನ್ನು ಪ್ರವೇಶ ಮಾಡ್ತಾನೆ ರಾವಣ. ವೈಢೂರ್ಯದ ಉನ್ನತಾಸನ. ಅದರ ಮೇಲೆ ಪ್ರಿಯಕ ಎಂಬ ಮೃಗದ ಚರ್ಮವನ್ನು ಹಾಸಲಾಗಿದೆ. ಆ ಉನ್ನತಾಸನದಲ್ಲಿ ಸದ್ಯ ರಾವಣನೆಂಬ ಪೆಡಂಭೂತವು ಕುಳಿತುಕೊಂಡ. ದೊಡ್ಡ ದೊಡ್ಡ ಒರಗು ದಿಂಬುಗಳಿದ್ದವು ಸುತ್ತ. ಉನ್ನತಾಸನವನ್ನು ಏರಿದೊಡನೆಯೇ ದೂತರನ್ನು ಕರೆದು ಪ್ರಭುತ್ವದ ಗತ್ತಿನಲ್ಲಿ ಅಪ್ಪಣೆ ಮಾಡ್ತಾನೆ, ‘ಲಂಕೆಯ ರಾಕ್ಷಸ ಮುಖ್ಯರು ಎಲ್ಲರನ್ನೂ ಬರ ಹೇಳಿ. ದೊಡ್ಡ ಕೆಲಸವಿದೆ ಮತ್ತು ಆ ಕಾರ್ಯಕ್ಕೋಸ್ಕರವಾಗಿ ಭಾರೀ ದೊಡ್ಡ ಮಂತ್ರಾಲೋಚನೆ ಇದೆ’.

ಮೂಲ ವಿಷಯ ಯಾವುದು? ಪರ‌ ಸತಿಯನ್ನು ಕದ್ದಕೊಂಡು ಬಂದಿರುವುದು. ಬಳಸುವ ಶಬ್ದ ಮಾತ್ರ ಭಾರೀ ಮಹತ್ಕಾರ್ಯ ಮತ್ತು ಬಹಳ ದೊಡ್ಡ ಚಿಂತನೆಗೋಸ್ಕರ ಬರಹೇಳಿ! ದೂತ ರಾಕ್ಷಸರು ಎಲ್ಲರನ್ನೂ ಕರೆತರಲು ಲಂಕೆಯ ಬೀದಿ ಬೀದಿಗಳಲ್ಲಿ ಅಡ್ಡಾಡ್ತಾ ಇದ್ದಾರೆ. ಮನೆ ಮನೆಗಳನ್ನು ಹುಡುಕ್ತಾ ಇದ್ದಾರೆ. ಕೆಲವು ರಾಕ್ಷಸರು ವಿಹರಿಸ್ತಾ ಇದ್ದರು, ಕೆಲವರು ಹಾಯಾಗಿ ಮಲಗಿಕೊಂಡಿದ್ದರು, ಇನ್ನು ಕೆಲವರು ಉದ್ಯಾನವನ್ನು ಸೇರಿದ್ದರು. ಎಲ್ಲರೂ ಅವರವರ ಕೆಲಸದಲ್ಲಿ ಅವರಿದ್ದರು. ರಾವಣ ಅವನ ತಲೆಬಿಸಿಯಲ್ಲಿದ್ದಾನೆ, ಅವರೆಲ್ಲ ಅವರ ಅವರ ಪ್ರಪಂಚದಲ್ಲಿದ್ದಾರೆ. ಅವರೆಲ್ಲರಿಗೂ ರಾಕ್ಷಸರು ಸೂಚನೆ ಕೊಟ್ಟರು. ಸಭಾಮಂಟಪವನ್ನು ರಾವಣನು ಪ್ರವೇಶ ಮಾಡಿ, ಸಿಂಹಾಸನವನ್ನು ಏರಿ ನಿಮಗೆಲ್ಲ ಈಗಲೇ ಸಭೆಗೆ ಬರಲಿಕ್ಕೆ ಅಪ್ಪಣೆಯನ್ನು ಮಾಡಿದ್ದಾನೆ..’

ಸರಿ, ಲಂಕೆಯ ಬೀದಿಗಳಲ್ಲಿ ಕೋಲಾಹಲ ಪ್ರಾರಂಭವಾಯ್ತು. ಕೆಲವರು ವಿಚಿತ್ರವಾದ ರಥಗಳನ್ನೇರಿದರು. ಕೆಲವರು ವಿಶಿಷ್ಟವಾದ ಅಶ್ವಗಳನ್ನು ಏರಿದರು. ಕೆಲವರು ದೊಡ್ಡ ದೊಡ್ಡ ಆನೆಗಳನ್ನು ಏರಿದರು. ಕೆಲವರು ನಡ್ಕೊಂಡು ಹೋದರು. ಇಡೀ ಲಂಕೆ ಸಕ್ರಿಯವಾಯಿತು, ಚಟುವಟಿಕೆಯಿಂದ ತುಂಬಿತು. ವಾಹನಗಳನ್ನು ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಕಾಲ್ನಡಿಗೆಯಲ್ಲಿ ರಾವಣನ ಸಭೆಯನ್ನು ರಾಕ್ಷಸರು ಪ್ರವೇಶ ಮಾಡ್ತಾರೆ. ಬಂದು ಎಲ್ಲ ರಾವಣನ ಕಾಲಿಗೆ ಬಿದ್ದರು, ರಾವಣ ಅವರನ್ನು ಆದರಿಸಿದ, ಎಲ್ಲ ಕುಳಿತುಕೊಂಡರು. ಕೆಲವರು ಪೀಠಗಳಲ್ಲಿ, ಕೆಲವರು ಮಣೆಗಳಲ್ಲಿ, ಕೆಲವರು ನೆಲದಲ್ಲಿ; ಅವರವರ ಯೋಗ್ಯತೆಗೆ ತಕ್ಕಂತೆ!
ನಿಶ್ಚಿತವಾದ ವಿಷಯಗಳಲ್ಲಿ ಪಂಡಿತರಾದ ಮಂತ್ರಿಗಳು, ರಾಜ್ಯ ವ್ಯವಹಾರವೆಲ್ಲವನ್ನೂ ಬಲ್ಲವರಾಗಿ‌ ತಮ್ಮ ಬುದ್ಧಿಯಿಂದಲೇ ಪ್ರಪಂಚದ ಆಗುಹೋಗುಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾದ ಅಮಾತ್ಯರು.. ಇವರೆಲ್ಲ ರಾವಣನ ಸಭೆಯಲ್ಲಿ‌ ಬಂದು ಕುಳಿತುಕೊಂಡಿದ್ದಾರೆ.
ನೂರಾರು ಶೂರರು ಬಂದು ಕುಳಿತಿದ್ದಾರೆ. ಬಳಿಕ ಶುಭವಾದ ರಥವನ್ನೇರಿ ಆ ಮಹಾತ್ಮನು ಬಂದ ಸಭೆಗೆ; ಅಣ್ಣನ ಸಭೆಗೆ ವಿಭೀಷಣನು ಬಂದನು. ಬಂದ ವಿಭೀಷಣನು ತನ್ನ‌ ಹೆಸರು ಹೇಳಿ, ಬಳಿಕ ಅಭಿವಾದನ ಮಾಡಿದನು. ಬಳಿಕ ಶುಕ ಮತ್ತು‌ ಪ್ರಹಸ್ತರು ಬರ್ತಾರೆ. ಅವರೆಲ್ಲರಿಗೂ ಉಚಿತಾಸನವನ್ನು ರಾವಣನು ವಿತರಿಸ್ತಾನೆ.

ಸಭೆ ತುಂಬಾ ಪರಿಮಳ! ಒಳ್ಳೊಳ್ಳೆ ಆಭರಣ ಹಾಕ್ಕೊಂಡಿದ್ದಾರೆ, ಒಳ್ಳೊಳ್ಳೆ ಬಟ್ಟೆ ಹಾಕ್ಕೊಂಡಿದ್ದಾರೆ, ಉತ್ತಮೋತ್ತಮವಾದ ಅಗರು, ಚಂದನದ ಪರಿಮಳದ ಮಾಲೆಯನ್ನು‌ ಹಾಕ್ಕೊಂಡಿದ್ದಾರೆ. ಸೂಜಿ ಬಿದ್ದರೂ‌ ಕೇಳುವಂತ ನಿಶ್ಶಬ್ಧ ಸಭೆಯಲ್ಲಿ. ಯಾರೂ ಕೂಗಿಕೊಳ್ಳಲಿಲ್ಲ,‌ ಯಾರೂ ಹರಟಲಿಲ್ಲ, ಯಾರೂ ಗಟ್ಟಿಯಾಗಿ ಮಾತನಾಡಲಿಲ್ಲ, ಯಾರೂ ತಮ್ಮ ಸ್ವರ ಹೊರಗೆ ಬರುವಂತೆ ಮಾತನಾಡಲಿಲ್ಲ. ಅವರೆಲ್ಲ ಸಮರ್ಥರು, ಪರಾಕ್ರಮಿಗಳು, ಸ್ಥಾನಾಕ್ರಂದರು. ಎಲ್ಲರೂ ಏಕಾಗ್ರ ಚಿತ್ತರಾಗಿ ರಾವಣನ ಮುಖವನ್ನೇ ನೋಡ್ತಾ ಇದ್ದಾರೆ. ಏನು ಕಾದಿದೆಯೋ ಗ್ರಹಾಚಾರ ಎಂಬುದಾಗಿ! ಅವರ ಮಧ್ಯದಲ್ಲಿ ಮೆರೆದನು ರಾವಣ. ಉಚ್ಛಾಸನದಲ್ಲಿ ಕುಳಿತು, ಭಾರೀ ಗತ್ತು, ಭಾರೀ ವೈಭವ ರಾವಣನದ್ದು. ಸಭೆ ಶುರು ಮಾಡಬೇಕು‌ ಈಗ. ಶುರು ಮಾಡಬೇಕಾದ್ರೆ ರಾವಣನು ಸೇನಾಪತಿ ಪ್ರಹಸ್ತನನ್ನು‌ ಕರೆದನಂತೆ. ಯಾಕಪ್ಪಾ ಅಂದ್ರೆ, ಇಂದು ಸಾರಿ ಸುರಕ್ಷೆಯೆಲ್ಲಾ ನೋಡಿಬಿಡು ಅಂತ. ಇದೆಲ್ಲಾ ಹೊಸ ಪರಿ ರಾವಣನದ್ದು. ಮೊದಲೆಲ್ಲಾ ರಾವಣನೇ ಸುರಕ್ಷೆ. ಅವನಿಗೆ ಬೇರೆ ರಕ್ಷೆ ಬೇಕಾ?

ಈಗಿನ ಸ್ಥಿತಿ ಹೇಗೆ ಎಂದರೆ ಸೇನಾಪತಿಯಾದ ಪ್ರಹಸ್ತನನ್ನು ಕರೆದು, ‘ಚತುರಂಗ ಬಲವು, ಆನೆ, ಕುದುರೆ, ರಥ ಮತ್ತು ಕಾಲಾಳುಗಳು ಈ ಚತುರ್ವಿಧ ಬಲವನ್ನು ಚೆನ್ನಾಗಿ ರಕ್ಷಿಸುವಂತೆ ವ್ಯವಸ್ಥೆ ಮಾಡಿ‌ ಬಾ. ಆಮೇಲೆ ಶುರು ಮಾಡೋದು ಸಭೆಯನ್ನು’. ಏನಿದು ಅಂದರೆ, ಲಂಕೆಯನ್ನು ಈಗಲೂ ರಾವಣನು ಆಳುತ್ತಿದ್ದಾನೆ; ಆದರೆ ರಾವಣನನ್ನು ಭಯವು ಆಳುತ್ತಿದೆ. ಸಮುದ್ರದ ಆಕಡೆ ಇದ್ದಾರೆ! ರಾಮನ ಸೈನ್ಯ ಮತ್ತು ಈ ರಾವಣನ ಲಂಕೆಯ ಮಧ್ಯೆ ಮಹಾಸಮುದ್ರವಿದೆ. ಆದರೆ ಎಷ್ಟು ಭಯ ಬಂದುಬಿಟ್ಟಿದೆ ಅಂದ್ರೆ ಹನುಮಂತ ಬಂದ ಹಾಗೆ ರಾಮ ಬಂದುಬಿಟ್ಟರೆ? ಯಾವುದಕ್ಕೂ ಇರಲಿ. ಸೇನಾಪತಿ, ಸರಿಯಾದ ರಕ್ಷಣೆಯ ವ್ಯವಸ್ಥೆಯನ್ನು ಮಾಡು.
ಪ್ರಹಸ್ತ ಎದ್ದು ಹೋಗ್ತಾನೆ, ರಾಜನ ಶಾಸನದ ಪ್ರಕಾರ ಆಸ್ಥಾನದ ಒಳಗೂ ಹೊರಗೂ ಸರಿಯಾಗಿ ಸುರಕ್ಷೆಯ ವ್ಯವಸ್ಥೆಯನ್ನು ಮಾಡಿ, ಸೈನ್ಯವನ್ನು ಒಳಗೂ ಹೊರಗೂ ವಿನ್ಯಾಸಗೊಳಿಸಿ, ನಿಲ್ಲಿಸಬೇಕಾದಲ್ಲಿ‌ ನಿಲ್ಲಿಸಿ ಬಳಿಕ ಬಂದು ರಾವಣನಿಗೆ ನಿವೇದನೆ ಮಾಡ್ತಾನೆ. ‘ಒಳಗೂ ಹೊರಗೂ ಸೇನೆಯು ನಿಹಿತವಾಗಿದೆ. ಹಾಗಾಗಿ ಈಗ ನಿಶ್ಚಿಂತೆಯಿಂದ ಏನನ್ನು ಮಾತನಾಡಬೇಕು ಅಂದುಕೊಂಡಿದ್ದೀಯೋ ಅದನ್ನು ಮಾತನಾಡು’. ಇದು ಪರಿಸ್ಥಿತಿ ಲಂಕೆಯಲ್ಲಿ. ಹಾಗಂತ ಅವರೇನು ದುರ್ಬಲರೆನ್ನುವ ಪರಿಸ್ಥಿತಿ‌ ಖಂಡಿತಾ ಇಲ್ಲ. ಆದರೂ ಭಯವು ಅವರನ್ನು ಆವರಿಸಿದೆ.

ರಾವಣನು ತನ್ನ ಭಾಷಣವನ್ನು ಪ್ರಾರಂಭ ಮಾಡ್ತಾನೆ. ತುಂಬಾ ತಯಾರಿ ಮಾಡಿದ್ದಾನೆ ಈ ಸರ್ತಿ, ಯಾಕಂದ್ರೆ ಕಳೆದ ಸಭೆಯನ್ನು ವಿಭೀಷಣನು ಬೇರೆ ಕಡೆಗೆ ತಗೊಂಡು ಹೋಗಿದ್ದ! ವಿರುದ್ಧ ನಿರ್ಣಯಕ್ಕೆ ಹೋಗಿಬಿಟ್ಟಿತ್ತು ಅದು, ಹಾಗಾಗಿ. ಏನು ಹೇಳಿದ? ಅಂತಂದರೆ, ‘ನೀವೆಲ್ಲಾ ಧರ್ಮ ಕಾಮ ಅರ್ಥಗಳಿಗೆ ಸಂಬಂಧ ಪಟ್ಟಂತೆ ಸಂಕಷ್ಟಗಳು ಬಂದಾಗ ಏನು ಮಾಡಬೇಕು ಅಂತ ಬಲ್ಲವರು. ಯಾವುದು ಪ್ರಿಯ, ಯಾವುದು ಅಪ್ರಿಯ, ಯಾವುದು ಸುಖ, ಯಾವುದು ದುಃಖ, ಎಲ್ಲಿ‌ ಲಾಭವಿದೆ, ಇನ್ನೆಲ್ಲಿ ನಷ್ಟವಿದೆ, ಇನ್ಯಾವುದು ಹಿತ, ಯಾವುದು ಅಹಿತ, ಇದೆಲ್ಲವನ್ನೂ ಬಲ್ಲವರು ನೀವು. ನಿಮ್ಮೊಡನೆ ಸಮಾಲೋಚನೆ ಮಾಡಿ ನಾನು ಅದೇನೇನು ಕೆಲಸ ಮಾಡಿದ್ದೇನೋ‌ ಅದೆಲ್ಲಾ ಯಶಸ್ವಿಯಾಗಿದೆ ಇಲ್ಲಿಯವರೆಗೆ. ರಾವಣನ‌ ಮಾತು! ಆದರೆ ಸೀತಾಪಹರಣದಲ್ಲಿ‌ ಮಾತ್ರ ಸಮಾಲೋಚನೆಯೇ ಮಾಡಿಲ್ಲ.
ಕೆಲವು ಸರ್ತಿ ನಡೆಗೂ ನುಡಿಗೂ ತುಂಬಾ ಅಂತರವಿರ್ತದೆ ನೋಡಿ! ಅವನ ಮಾತೇ ಅವನ ವಿರುದ್ಧ ಇದೆ!

ರಾವಣ ಭಾಷಣವನ್ನು ಮುಂದುವರೆಸ್ತಾನೆ. ಚಂದ್ರ, ನಕ್ಷತ್ರಗಳು ಮತ್ತು ಗ್ರಹಗಳಿಂದ ಕೂಡಿರತಕ್ಕಂತಾ ಇಂದ್ರನಂತೆ ನಾನು. ನೀವೆಲ್ಲಾ ಚಂದ್ರ-ತಾರೆಗಳಂತೆ, ಮರುದ್ಗಣದಂತೆ. ನಾವು ನೀವು ಸೇರಿ ಲಂಕೆಯನ್ನು ಬೆಳಗಿದವರು. ಸೀತಾಪಹರಣ ಆಯಿತಲ್ಲ, ಆವಾಗ ಯಾಕೆ ಈ ಸಮಾಲೋಚನೆ ಪ್ರಶ್ನೆ ಬರಲಿಲ್ಲ ಎನ್ನುವುದಕ್ಕೆ ಉತ್ತರ ಕೊಡ್ತಾನೆ ರಾವಣ, ನಾನು‌ ಮೊದಲೇ ನಿಮ್ಮನ್ನು ಕರೆದು ಸಮಾಲೋಚನೆ ಮಾಡಬೇಕು ಅಂತ ಇದ್ದೆ. ನನ್ನ ತಮ್ಮ ಕುಂಭಕರ್ಣ ಮಲಗಿದ್ದ, ಎದ್ದಿರಲಿಲ್ಲ. ಅವನು ಏಳುವುದನ್ನೇ ಕಾಯ್ತಾ ಇದ್ದೆ’.
ಇದು ಸುಳ್ಳು ಅಂತ ಎಲ್ಲರಿಗೂ ಗೊತ್ತಿದೆ. ಕಳ್ಳನಿಗೊಂದು ಪಿಳ್ಳೆ ನೆವ!
‘ಪಾಪ, ಈ ಶಸ್ತ್ರಧಾರಿಗಳಲ್ಲಿ ಅಗ್ರಗಣ್ಯನಾದ, ಮಹಾಬಲಶಾಲಿಯಾದ ಕುಂಭಕರ್ಣನಾದರೂ ಕೂಡ, ಆರಾರು ತಿಂಗಳು ಮಲಗ್ತಾನೆ. ಆರು ತಿಂಗಳ ಹಿಂದೆ ಮಲಗಿದವನು ಈಗ ಎದ್ದಿದ್ದಾನೆ’ [ಸೀತಾಪಹರಣವಾಗಿ ಹತ್ತು‌ ತಿಂಗಳಾಗಿದೆ.] ‘ಅವನಿಲ್ಲದೇ ಸಭೆ ಮಾಡುವುದಕ್ಕೆ ಅರ್ಥವೇನು? ಲಂಕೆಯ ಅಲಂಕಾರ ಅವನು. ಹಾಗಾಗಿ ಅವನ ಅನುಪಸ್ಥಿತಿಯಲ್ಲಿ ಸಭೆ ಮಾಡಿರಲಿಲ್ಲ. ಈಗ ಮಾಡುತ್ತಿದ್ದೇನೆ ಎನ್ನುತ್ತಿದ್ದಾನೆ.

‘ಕುಂಭಕರ್ಣ, ನಿನಗೆ ಗೊತ್ತಿಲ್ಲ, ನೀನು ಮಲಗಿದ್ದಾಗ ಒಂದು ಕಾರ್ಯವಾಗಿದೆ. ಅದೇನೆಂದರೆ, ರಾಮನ ಪಟ್ಟಮಹಿಷಿಯಾದ ಸೀತೆಯನ್ನು ದಂಡಕಾರಣ್ಯದಿಂದ ಅಪಹರಿಸಿ ತಂದಿದ್ದೇನೆ.ಅವಳು ನನ್ನನ್ನು ಒಪ್ಪಿಕೊಳ್ಳುತ್ತಿಲ್ಲ.ಆ ಮಂದಗಮನೆಯು ನನ್ನ ಪರ್ಯಂಕವನ್ನೇರಲು ಸಿದ್ಧಳಿಲ್ಲ’ ಎಂದು ಹೇಳಿ ಆ ಸಭೆಯ ಮಧ್ಯದಲ್ಲಿ ಸೀತೆಯ ಸೌಂದರ್ಯವನ್ನು ವರ್ಣಿಸಿದ. ‘ಮೂರು ಲೋಕದಲ್ಲಿ ಸೀತೆಗೆ ಸಮಾನವಾಗಿರುವ ಮತ್ತೊಬ್ಬ ನಾರಿಯಿಲ್ಲ,ಅಂತಹ ಸುಂದರಿ ಅವಳು’ ಎಂದು ಪ್ರಾರಂಭಿಸಿ ಮುಂದೆ ಅವನ ಮನೋಭಾವಕ್ಕೆ,ದೃಷ್ಟಿಗೆ ತಕ್ಕಂತಹ ವರ್ಣನೆಯನ್ನು ಸಭಾಮಧ್ಯದಲ್ಲಿ ಮಾಡುತ್ತಾನೆ. ಮಯನು ನಿರ್ಮಿಸಿದ ಮಾಯೆಯಂತಿದ್ದಾಳೆ ಎಂದೆಲ್ಲಾ ಹೇಳುತ್ತಾನೆ. ಒಂದೆರಡು ಮಾತುಗಳು ವಿಚಿತ್ರವೆನ್ನಿಸುತ್ತವೆ. ‘ಆಕೆಯ ಪಾದಗಳನ್ನು ಕಂಡಾಗ ನನ್ನಲ್ಲಿ ಕಾಮನೆಯು ಜಾಗೃತವಾಯಿತು’ ಎನ್ನುತ್ತಾನೆ. ಸಾಮಾನ್ಯವಾಗಿ ಪಾದಗಳನ್ನು ಕಂಡಾಗ ಪವಿತ್ರಭಾವವು ಜಾಗೃತವಾಗುತ್ತದೆ, ಆಗಬೇಕು. ಆದರೆ ಇವನ ಮನಸ್ಥಿತಿ ವಿಚಿತ್ರವಾಗಿದೆ.’ಯಜ್ಞೇಶ್ವರನ ಜ್ವಾಲೆಯಂತಿದ್ದಾಳೆ, ಸೂರ್ಯನ ಪ್ರಭೆಯಂತಿದ್ದಾಳೆ. ಅವಳನ್ನು ಕಂಡು ನಾನು ಕಾಮಕ್ಕೆ ವಶನಾದೆ’ ಎಂದ. ತೇಜಸ್ವಿನಿಯನ್ನು ಕಂಡು ಪೂಜ್ಯಭಾವ ಬಂದಿದ್ದಲ್ಲ! ಈ ಭಾವ ಬಂತು ಎಂದು ತುಂಬಿದ ಸಭೆಯಲ್ಲಿ ಹೇಳುತ್ತಿದ್ದಾನೆ. ‘ಈ ಕಾಮವು ನನಗೆ ಒಮ್ಮೊಮ್ಮೆ ಹರ್ಷ,ಒಮ್ಮೊಮ್ಮೆ ಕ್ರೋಧ ಬರುವಂತೆ ಮಾಡಿದೆ’ ಎಂದನು. ಸೀತೆ ಒಲಿದು ಬರಬಹುದೆಂದು ಅವನಿಗೆ ಅನ್ನಿಸಿದಾಗ ಸಂತೋಷ. ಅವಳ ಕಡೆಯಿಂದ ಏನೂ ಪ್ರತಿಕ್ರಿಯೆ ಇಲ್ಲ. ಹೋಗಿ ಸೀತೆಯ ಕಾಲಿಗೆ ಬೀಳುತ್ತಾನೆ. ಹಾಗಾಗಿಯೇ ಅವಳ ಪಾದದ ವರ್ಣನೆಯನ್ನು ಮಾಡಲು ಸಾಧ್ಯವಾಗಿದ್ದು.ಅವಳು ತಿರಸ್ಕರಿಸಿದಾಗ ಸಿಟ್ಟು. ‘ಅವಳನ್ನು ಇಲ್ಲಿಗೆ ತಂದಾಗಿನಿಂದ ನಿತ್ಯವೂ ಶೋಕ ನನಗೆ’ ಎನ್ನುತ್ತಿದ್ದಾನೆ.

ಸೀತೆ ರಾವಣನನ್ನು ಪರಾಭವಗೊಳಿಸಿದ್ದಾಳೆ, ಇಂತಹ ನಿಸ್ಸಹಾಯಕತೆಗೆ ತಂದಿದ್ದಾಳೆ. ‘ಬಣ್ಣವೇ ಕೆಟ್ಟು ಹೋಗಿದೆ ನನ್ನದು. ಮಾಸಿಹೋದೆ, ಕಾಮದಿಂದ ಕಲುಷಿತನಾದೆ’ ಎಂದನು. ರಾವಣನ ಮನಸ್ಸು ಪತಿತವೆಂಬುದು ಸುಸ್ಪಷ್ಟ. ‘ಸೀತೆ ನನ್ನಲ್ಲಿ ಒಂದು ವರ್ಷದ ಅವಕಾಶವನ್ನು ಕೇಳಿದ್ದಾಳೆ’ ಎಂದು ದೊಡ್ಡ ಸುಳ್ಳೊಂದನ್ನು ಹೇಳಿದ. ಇವನೇ ಒಂದು ವರ್ಷದ ಗಡುವನ್ನು ಹಾಕಿದ್ದು. ಅವಳು ಯಾವತ್ತೂ ‘ಶವವಾದೇನು,ನಿನ್ನ ವಶವಾಗಲಾರೆ’ ಎಂದಿದ್ದಾಳೆ. ಸಭೆಯ ಮಧ್ಯದಲ್ಲಿ ತಿರುಗಿಸಿ ಹೇಳುತ್ತಾನೆ. ಒಂದು ವರ್ಷದೊಳಗೆ ರಾಮ ಬಂದರೆ ಎಂದು ಅವನ ಬರುವಿಕೆಗಾಗಿ ಸಮಯವನ್ನು ಕೇಳಿದ್ದು ಎಂದು ಕಾರಣ ಕೊಟ್ಟ. ರಾಮ ಬರದಿದ್ದರೆ ಒಪ್ಪಿಕೊಳ್ಳಬಹುದು ಎಂಬ ಯೋಚನೆಯೂ ಇರಬಹುದು ಅವನಿಗೆ. ‘ಅವಳ ಮಾತನ್ನು ಕೇಳಿ ಒಂದು ವರ್ಷದ ಅವಕಾಶ ಕೊಟ್ಟೆ. ನೂರಾರು ಯೋಜನ ಓಡಿದ ಕುದುರೆಯಂತೆ ಬಳಲಿ ಹೋದೆ. ಅವಳು ಒಪ್ಪುತ್ತಿಲ್ಲ’ ಎಂದು ಸಭಾ ಮಧ್ಯದಲ್ಲಿ ಹೇಳುತ್ತಿದ್ದಾನೆ. ಅಲ್ಲಿ ರಾಮ ಸಮುದ್ರಾಚೆಗೆ ಬಂದಿದ್ದಾನೆ, ಮುಂದೇನು ಎಂಬ ಚಿಂತನೆ ಮಾಡಿದ್ದರೆ ಸಾಕಿತ್ತು. ಅದು ಬಿಟ್ಟು ತನ್ನ ದೌರ್ಬಲ್ಯವನ್ನು ಸಭೆಯೆದುರು ಬಿಚ್ಚಿಡುತ್ತಿದ್ದಾನೆ. ‘ವಾನರರು ಹೇಗೆ ದಾಟಿ ಬರಲು ಸಾಧ್ಯ? ತಿಮಿಂಗಿಲಗಳು, ಮೊಸಳೆಗಳು ಇರುವ ಸಾಗರವನ್ನು ರಾಮ-ಲಕ್ಷ್ಮಣರು ಹೇಗೆ ದಾಟಿ ಬಂದಾರು?’ ಅಂತ ಒಮ್ಮೆ. ಮತ್ತೊಮ್ಮೆ ‘ಒಂದು ಕಪಿ ಸಮುದ್ರವನ್ನು ಹಾರಿ ಬಂತು, ಭಯಂಕರ ಕದನವನ್ನು ಕೊಟ್ಟಿತು. ನಮ್ಮನ್ನು ಸೋಲಿಸಿತು. ಯಾವಾಗ ಯಾರು ಏನು ಮಾಡುತ್ತಾರೆಂದು ಊಹೆ ಮಾಡಲು ಸಾಧ್ಯವಿಲ್ಲ. ಮನುಷ್ಯರಿಂದ ನನಗೆ ಭಯವಿಲ್ಲ ಆದರೂ ನಿಮಗೆ ತಿಳಿದಿದ್ದನ್ನು ನೀವೆಲ್ಲಾ ಹೇಳಿ’ ಎಂದನು. ಸಂಶಯದ ಭೂತವು ಒಳಗಿನಿಂದ ಹೊಕ್ಕಿರಿದಿದೆ ಅವನನ್ನು. ‘ಹಿಂದೆ ದೇವಾಸುರ ಯುದ್ಧದಲ್ಲಿ ನಿಮ್ಮೆಲ್ಲರೊಡಗೂಡಿ ಗೆದ್ದವನು ನಾನು. ಈಗ ಸುಗ್ರೀವನೇ ಮೊದಲಾದ ವಾನರರ ಸೈನ್ಯವನ್ನು ಕೂಡಿಸಿಕೊಂಡು ರಾಮ-ಲಕ್ಷ್ಮಣರು ಸಮುದ್ರ ತೀರದವರೆಗೆ ಬಂದುಬಿಟ್ಟಿದ್ದಾರೆ. ಅವರಿಬ್ಬರನ್ನೂ ಕೊಲ್ಲಬೇಕು. ಅದಕ್ಕನುಗುಣವಾಗಿ ಯೋಚಿಸಿ. ಸೀತೆಯನ್ನು ಮರಳಿ ಕೊಡಬಾರದು.ಇದಕ್ಕೆ ಪೂರಕವಾಗಿರುವ ತರ್ಕಗಳನ್ನು ಮಂಡಿಸಿ. ಯಾರಿಂದಲೂ ಸಮುದ್ರವನ್ನು ದಾಟಿ ಬಂದು ನನ್ನನ್ನು ಗೆಲ್ಲಲು ಸಾಧ್ಯವಿಲ್ಲ.ಖಂಡಿತ ನನ್ನದೇ ಗೆಲುವು’ ಎಂದು ಮಾತು ಮುಗಿಸಿದ.

ಕುಂಭಕರ್ಣ ಈ ಮಾತುಗಳನ್ನು ಕೇಳುತ್ತಿದ್ದ. ಏನಿದು ಕಾಮದಿಂದ ಆವೃತನಾಗಿ ಈ ರೀತಿ ಸಭಾ ಮಧ್ಯದಲ್ಲಿ ಹಲುಬುತ್ತಿದ್ದಾನೆ ಎಂಬುದು ಅವನ ಭಾವ. ಅವನು ಕೋಪಗೊಂಡನು. ವಿಭೀಷಣನಿಗೂ ಅಂದು ಹೀಗೆಯೇ ಆಗಿದ್ದು. ರಾವಣನು ಊರೂರು ಸುತ್ತಿ, ಹಲವರನ್ನು ಕೊಂದು, 5,000 ವರಸ್ರ್ತೀಯರನ್ನು ಪುಷ್ಪಕ ವಿಮಾನದಲ್ಲಿ ತುಂಬಿಕೊಂಡು ಬಂದಿದ್ದ. ವಿಭೀಷಣನಿಗೆ ಗೊತ್ತಿರಲಿಲ್ಲ. ಆ ಸ್ತ್ರೀಯರೆಲ್ಲಾ ಅಳುತ್ತಿದ್ದರು. ಅವರನ್ನು ಕಂಡಾಗ ಅವನಿಗೆ ಸಿಟ್ಟು ಬಂತು. ‘ಎಂತಹ ದುರಾಚಾರ ನಿನ್ನದು. ನಮ್ಮ ವಂಶದ ಕೀರ್ತಿಯನ್ನು ಹಾಳುಮಾಡಿದೆ ನೀನು, ಛೀ’ ಎಂದು ನಿಂದಿಸುತ್ತಾನೆ ರಾವಣನನ್ನು. ‘ಇವರ ಕಡೆಯವರನ್ನು ಹಿಂಸಿಸಿ ಕೊಂದೆಯಲ್ಲ ನಮಗೆ ಪಾಪದ ಫಲ ಬಂತು. ನಮ್ಮ ತಂಗಿಯನ್ನು ದಾನವನಾದ ಮಧು ಅಪಹರಿಸಿಕೊಂಡು ಹೋಗಿದ್ದಾನೆ’ ಎಂದು ಕೋಪದಿಂದ ನಿಂದಿಸುತ್ತಾನೆ. ಹಾಗೆಯೇ ಇಲ್ಲಿ ಕುಂಭಕರ್ಣನು ಕೋಪದಿಂದ ಹೀಗೆಂದನು. ‘ಅಂದು ರಾಮ-ಲಕ್ಷ್ಮಣರ ಜೊತೆಯಿದ್ದ ಸೀತೆಯನ್ನು ಒತ್ತಾಯವಾಗಿ ಅಪಹರಿಸುವಾಗ ನಮ್ಮನ್ನು ಕೇಳಿದ್ದೆಯಾ? ಯಮುನೆ ತನ್ನ ಪಾತ್ರದಲ್ಲೇ ಸಾಗುವಂತೆ ಬುದ್ಧಿಯು ಒಂದು ಸೂತ್ರದಲ್ಲೇ ಸಾಗಬೇಕು.ಈಗ ಯಾಕೆ ನಮ್ಮನ್ನು ಕೇಳುತ್ತಿದ್ದೀಯೆ? ಎಲ್ಲಾ ಮುಗಿದ ಮೇಲೆ. ಒಬ್ಬ ರಾಜನಿಗೆ ಈ ಕಾರ್ಯ ಉಚಿತವೇ? ಅಂದು ನಮ್ಮನ್ನೇಕೆ ಕೇಳಲಿಲ್ಲ? ರಾಜನಾದವನು ಹೇಗಿರಬೇಕು? ಮೊದಲು ಸಮಾಲೋಚನೆ. ನಂತರ ಕಾರ್ಯ. ಆ ರೀತಿ ಇದ್ದರೆ ಮುಂದೆ ನಿನ್ನ ಹಾಗೆ ಒದ್ದಾಡುವುದಿಲ್ಲ. ರಾಜನು ಯಾವುದಾದರೂ ಕಾರ್ಯವನ್ನು ಮಾಡಬೇಕಾದರೆ ಸಾಮ,ದಾನ,ಭೇದ,ದಂಡ ಇವುಗಳನ್ನು ಗಮನಿಸಬೇಕು. ನೀನು ಮಾಡಿರುವುದು ಸರಿಯಿಲ್ಲ. ಪೂರ್ವ ಕಾರ್ಯವನ್ನು ಉತ್ತರದಲ್ಲಿ, ಉತ್ತರ ಕಾರ್ಯವನ್ನು ಪೂರ್ವದಲ್ಲಿ ಮಾಡಿ ಒಳ್ಳೆಯ ಫಲವನ್ನು ನಿರೀಕ್ಷಿಸಲು ಸಾಧ್ಯವೇ?’ ಎಂದು ಹೇಳಿದನು. ಒಂದು ಒಳ್ಳೆಯ ಮಾತನ್ನು ಹೇಳಿದ. ‘ನೋಡು, ನಾವು ಅವಕಾಶವನ್ನು ಕೊಡಬಾರದು. ಬಲಶಾಲಿಯಾದವನು ಎಲ್ಲಿ ತಪ್ಪು ಮಾಡುತ್ತಾನೆಂದು ಕಾಯುತ್ತಿರುತ್ತಾರೆ. ಕ್ರೌಂಚ ಪರ್ವತವನ್ನು ಷಣ್ಮುಖ ತನ್ನ ಶಕ್ತಿಯಿಂದ ಭೇದಿಸಿದ್ದಾನೆ.ಅಲ್ಲೊಂದು ರಂಧ್ರವಾಗಿದೆ. ಅಂತಹ ಅಭೇದ್ಯವಾದ ಕ್ರೌಂಚಪರ್ವತದ ರಂಧ್ರದಲ್ಲಿ ಪಕ್ಷಿಗಳು ಅತ್ತ-ಇತ್ತ ಹಾರುತ್ತಿರುತ್ತಾವೆ. ಹಾಗೆಯೇ ನೀನು ನಿನ್ನ ವೈರಿಗಳಿಗೆ ಅವಕಾಶ ಮಾಡಿಕೊಟ್ಟೆ. ತಪ್ಪು ಮಾಡಿದೆ. ಸದ್ಯ! ನಾನು ಏಳುವ ಮೊದಲು ರಾಮ ನಿನ್ನನ್ನು ಕೊಂದಿಲ್ಲವಲ್ಲ’.

ಕುಂಭಕರ್ಣ ಮುಂದುವರಿಸಿದ, “ಹಿಂದೆ ಮುಂದೆ ನೋಡದೇ ಎಂತಹ ಅನಾಹೂತ ಮಾಡಿದ್ದೀಯಾ ನೀನು. ವಿಷದ ಊಟ ಮಾಡಿದ ಮೇಲೆ, ಸತ್ತಿಲ್ಲ ಅಂದ್ರೆ ಅಶ್ಚರ್ಯ ತಾನೇ? ವಿಷದ ಊಟ ಮಾಡಿದ ಮೇಲೆ, ಬದುಕಿದರೇ ಆಶ್ಚರ್ಯ ಸತ್ರೆ ಆಶ್ಚರ್ಯ ಇಲ್ಲ.” ಇಲ್ಲಿಯವರೆಗೆ ಸರಿ ಇದ್ದ ಕುಂಭಕರ್ಣ. ಅಣ್ಣನಿಗೆ ಬುದ್ಧಿ ಹೇಳ್ತಾ ಇದ್ದ. ರಾವಣನ ಮುಖ ಕೆಂಪಾಯಿತು. ಅದನ್ನು ನೋಡಿ ಕುಂಭಕರ್ಣ ತನ್ನ ಧಾಟಿ ಬದಲಿಸಿದ, “ನಿನ್ನ ವಿಷವನ್ನು ನಾನು ಸಮ ಮಾಡ್ತೇನೆ. ಶತ್ರುಗಳ ಸಂಹಾರ ಮಾಡಿ ನಿನ್ನ ತಪ್ಪು ಸರಿ ಅಂತ ಸ್ಥಾಪಿಸ್ತೇನೆ.”

ಈಗ ದಾರಿ ತಪ್ಪಿದ ಕುಂಭಕರ್ಣ. ತನ್ನ ಪೌರುಷ ಹೇಳಲು ಶುರುಮಾಡಿದ, “ಇಂದ್ರ ಬರಲಿ, ಯಮ ಬರಲಿ, ಅಗ್ನಿ ಬರಲಿ, ವಾಯು ಬರಲಿ, ಕುಬೇರ ಬರಲಿ ನಾನು ಅವರನ್ನ ಎದುರಿಸ್ತೇನೆ. ಬೆಟ್ಟದ ಗಾತ್ರದ ಶರೀರದ ದೊಡ್ದ ಶೂಲವನ್ನು ಹಿಡಿದಿರತಕ್ಕಂತಹ ನಾನು ನನ್ನ ಕೋರೆ ದಾಡನ್ನು ಸುಲಿದು ಬೊಬ್ಬಿರಿದರೆ ಇಂದ್ರನೇ ಹೆದರಿ ಓಡಿಹೋಗ್ತಾನೆ.” ಇದು ಸತ್ಯ. ಕುಂಭಕರ್ಣ ಮತ್ತೆ ಮುಂದುವರಿಸಿದ. “ಹೀಗೆ ನಾನು ದಾಶರಥಿಯೊಡನೆ ಯುದ್ಧ ಮಾಡಿ ನಿನಗೆ ಜಯ ತಂದುಕೊಂಡುವ ಪ್ರಯತ್ನ ಮಾಡ್ತೇನೆ. ಲಕ್ಷ್ಮಣ ಮತ್ತು ಎಲ್ಲ ವಾನರ ವೀರರನ್ನು ತಿಂದು ಬಿಡ್ತೇನೆ ನಾನು. ನೀನು ಸುಖವಾಗಿ ರಮಿಸು ಮತ್ತೆ ಒಳ್ಳೆಯ ಮದ್ಯವನ್ನು ಚೆನ್ನಾಗಿ ಕುಡಿ. ನಾನು ನಿನಗೆ ಜಯ ತಂದು ಕೊಡ್ತೇನೆ. ನಾನು ಇಡೀ ರಾಮಸೈನ್ಯವನ್ನು ಪರಾಭವ ಗೊಳಿಸಿ ನಿನಗೆ ವಿಜಯ ತಂದು ಕೊಟ್ಟ ಮೇಲೆ ಅನಿವಾರ್ಯವಾಗಿ ಸೀತೆ ನಿನ್ನ ವಶವಾಗ್ತಾಳೆ

.” ಪಾಪ ಮಾಡಿದವನು ಹೇಗೆ ದೊಷಿಯೋ ಹಾಗೇ ಪಾಪಕ್ಕೆ ಸಹಕಾರಿಯಾದವನು, ಪಾಪಕ್ಕೆ ರಕ್ಷಕನಾಗಿ ನಿಂತವನು, ಅನುಮೋದನೆ ಮಾಡಿದವನು, ಗೊತ್ತಿದ್ದು ಸುಮ್ಮನಿದ್ದವನು ಕೂಡ ಹಾಗೆಯೇ ದೊಷಿ. ಅವನಿಗೂ ಅದೇ ಫಲ. ರಾವಣ ಮಾಡಿದ ಪಾಪಕ್ಕೆ ಕುಂಭಕರ್ಣನೂ ಭಾಗಿ ಆಗ್ತಾನೆ. ಗೊತ್ತಿದ್ದೂ ಗೊತ್ತಿದ್ದೂ ಅವನು ರಾವಣನಿಗೆ ಸಹಕಾರ ಕೊಡ್ತಾನೆ. ಅಲ್ಲಿಯವರೆಗೆ ಕುಂಭಕರ್ಣನೂ ವಿಭೀಷಣನ ಹಾಗೇ ತಿಳಿ ಹೇಳುವ ಪ್ರಯತ್ನ ಮಾಡ್ತಾನೆ. ಆದರೆ ಯಾವಾಗ ಅಣ್ಣನಿಗೆ ಸಿಟ್ಟು ಬಂತೋ, ಹೋಗಲಿ ನಾನು ನಿನ್ನ ಬಗೆಗಾಗಿ ಯುದ್ಧ ಮಾಡ್ತೇನೆ ಅನ್ನುತ್ತಾನೆ ಕುಂಭಕರ್ಣ. ರಾವಣನಿಗೆ ಕುಂಭಕರ್ಣನ ಮೇಲೆ ಸಿಟ್ಟು ಬಂದಿದೆ ಆದರೆ ಬಾಯಿ ಬಿಡುವ ಹಾಗಿಲ್ಲ ಯಾಕೆಂದ್ರೆ ಕುಂಭಕರ್ಣನನ್ನು ಕಳೆದುಕೊಳ್ಳಲು ರಾವಣ ತಯಾರಿಲ್ಲ.

ಮಹಾಪಾರ್ಶ್ವನು ಆಸ್ಥಾನದಲ್ಲಿ ಎದ್ದು ನಿಂತು ರಾವಣನಿಗೆ ಸಂತೋಷ ಆಗುವ ಧಾಟಿಯಲ್ಲಿ ಮಾತನಾಡ್ತಾನೆ. ಅದೂ ಕೂಡ ಕುತ್ಸಿತ ಶಬ್ದಗಳು, ಕುತ್ಸಿತ ಸಲಹೆಗಳು, ” ಕ್ರೂರ ಸರ್ಪಗಳೋ, ಕಲ್ಲೋ, ಮುಳ್ಳುಗಳೋ ಇರುವಂತಹ ಕಾಡಿಗೆ ಹೋಗಿ, ಅವುಗಳಿಂದ ಕಚ್ಚಿಸಿಕೊಳ್ಳದೇ ಅಥವಾ ಚುಚ್ಚಿಸಿಕೊಂಡು ಅಥವಾ ಹೀಗೆ ಸಾಹಸ ಮಾಡಿ ಜೇನು ಕುಡಿಯದಿದ್ದರೇ ಬಾಲಿಶ ಅಂತ ಅನ್ನಿಸಿಕೊಳ್ತಾನೆ. ಯಾರು ನಿನ್ನನ್ನು ಕೇಳುವವರು. ಈಶ್ವರನಿಗೆ ಈಶ್ವರ ನೀನು. ಬಲಾತ್ಕರಿಸಬಹುದಲ್ಲವೇ ನೀನು ಸೀತೆಯನ್ನು. ಕೋಳಿಯಂತೆ ಹುಂಜದಂತೆ ಬಲಾತ್ಕಾರದಿಂದ ನೀನು ಯಾಕೆ ಸೀತೆಯನ್ನು ವಶಪಡಿಸಿಕೊಳ್ಳಬಾರದು? ಒಂದು ಸಾರಿ ನೀನು ಅಂದುಕೊಂಡಂತೆ ಆದಮೇಲೆ ಮುಂದೇನಾದರೂ ಆಗಲಿ. ನಾನಿದ್ದೇನೆ, ಕುಂಭಕರ್ಣ ಇದ್ದಾನೆ, ನಾವೆಲ್ಲ ಇದ್ದೇವೆ. ಯಾಕೆ ಹೆದರಿಕೆ? ಇನ್ನು ಕೆಲವರು ಸಾಮ ದಾನ ದಂಡ ಭೇದ ಎಲ್ಲ ಅನ್ನಬಹುದು ಅದೆಲ್ಲ ಸುಮ್ಮನೆ. ಅದರ ಮೊದಲು ನೀನು ಯಾವ ಕಾರಣಕ್ಕೋಸ್ಕರ ಸೀತೆಯನ್ನು ತಂದೆಯೋ ಅದನ್ನು ಬಲಾತ್ಕಾರವಾಗಿಯಾದರೂ ಯಾಕೆ ಸಾಧಿಸಬಾರದು?” ಎಂಬ ಮಾತನ್ನು ತುಂಬಿದ ಸಭೆಯಲ್ಲಿ ಚಕ್ರವರ್ತಿಗೆ ಸಚಿವ ಕೇಳ್ತಾ ಇದ್ದಾನೆ. ರಾಕ್ಷಸರು ಎಷ್ಟು ಕೆಟ್ಟಿದ್ದಾರೆ ನೋಡಿ! ಏಕಾಂತದಲ್ಲಿ ಬಂದು ಇಂತಹ ಸಲಹೆ ಕೊಟ್ಟರೆ ಆ ಮಾತು ಬೇರೆ, ಕೊಡಬಾರದು ಆದರೂ ಕೊಟ್ಟರೂ ಏಕಾಂತದಲ್ಲಿ ಕೊಡಬೇಕಿತ್ತು. ಸಭೆಯ ಮಧ್ಯದಲ್ಲಿ ಕೊಡಬೇಕಾದರೆ ಇದು ಅವರ ಸಂವಿಧಾನ, ಇದು ಅವರ ವ್ಯವಸ್ಥೆ ಏಷ್ಟು ಮುಕ್ತವಾಗಿದೆ ಲಂಕೆಯಲ್ಲಿ ನೋಡಿ. ರಾವಣ ಮೊಟ್ಟಮೊದಲು ಮಹಾಪಾರ್ಶ್ವನನ್ನು ಅಭಿನಂದಿಸುತ್ತಾನೆ. ಈ ರಾವಣನ ಪೈಕಿಯವರು ಇವತ್ತು ಕೂಡ ಇದ್ದಾರೆ.

ರಾವಣನ ಪೂಜೆ ಮಾಡುವವರು, ರಾವಣನನ್ನು ಹೊಗಳುವವರು. ವಾಲ್ಮೀಕಿ ರಾಮಾಯಣವೇ ಪ್ರಮಾಣ, ರಾಮ ಎಂಥವನು ಮತ್ತು ರಾವಣ ಎಂತವನು ಎನ್ನುವುದಕ್ಕೆ. ಮೂಲ ಕೃತಿ ಇದೆ. ಮಹಾಪಾರ್ಶ್ವನ ಮಾತನ್ನು ಗೌರವಿಸಿ, ಆದರಿಸಿ ರಾವಣ ಹೇಳ್ತಾನೆ, “ಒಪ್ಪಿಕೊಂಡೆ ನಿನ್ನ ಮಾತನ್ನ, ಆದರೆ, ಅಲ್ಲಿ ಒಂದು ಸೂಕ್ಷ್ಮ ಇದೆ. ಒಂದು ರಹಸ್ಯ ನಡೆದು ಹೋಗಿದೆ ನನ್ನ ಜೀವನದಲ್ಲಿ. ಬಹಳ ಬಹಳ ಹಿಂದೆ ನನ್ನ ಪ್ರಾಯ ಕಾಲದಲ್ಲಿ ಒಂದು ಘಟನೆ ನಡೆದು ಹೋಗಿದೆ. ಇವತ್ತು ಹೇಳ್ತೇನೆ ಅದನ್ನ, ಇಲ್ಲಿಯವರೆಗೆ ಯಾರಿಗೂ ಹೇಳಲಿಲ್ಲ. ದಿಗ್ವಿಜಯದ ಸಮಯದಲ್ಲಿ ಪುಂಜಿಕಸ್ಥಲೆ ಎಂಬ ಅಪ್ಸರೆ ಗಗನದಲ್ಲಿ ಬ್ರಹ್ಮನ ಮನೆಗೆ ಹೋಗ್ತಾ ಇರುವುದನ್ನು ಕಂಡೆ. ಆಕೆಯೂ ನನ್ನನ್ನು ಕಂಡಳು. ನನಗೆ ಆಕೆಯನ್ನು ಕಂಡು ಕಾಮನೆ ಉಂಟಾಯಿತು. ಆಕೆಗೆ ನನ್ನನ್ನು ಕಂಡು ಭಯ ಉಂಟಾಯಿತು. ನನ್ನನ್ನು ಕಂಡೊಡನೆಯೇ ಆಕೆ ನನ್ನಿಂದ ತಪ್ಪಿಸಿಕೊಳ್ಳಲಿಕ್ಕೆ ಪ್ರಯತ್ನಿಸಿದಳು. ಅಂದು ನಾನು ಆಕೆಯನ್ನು ಬಲಾತ್ಕರಿಸಿದೆ. ಬಹುಶ ಅವಳು ಅದೇ ಸ್ಥಿತಿಯಲ್ಲಿ ಬ್ರಹ್ಮನ ಮನೆಗೆ ಹೋಗಿದ್ದಾಳೆ ಅಂತ ಕಾಣ್ತದೆ. ಬ್ರಹ್ಮನಿಗೆ ನಾನು ಮಾಡಿದ ಕಾರ್ಯ ಗೊತ್ತಾಗಿ ಶಾಪ ಕೊಟ್ಟು ಬಿಟ್ಟ ನನಗೆ. ಎಂತ ಶಾಪ ಅಂದ್ರೆ, ಇಂದಿನಿಂದ ಮುಂದೆ, ಎಲೈ ರಾವಣ ಯಾವುದಾದರೂ ಸ್ತ್ರೀಯನ್ನು ಬಲಾತ್ಕರಿಸಿದರೇ, ಅಂದೇ ಮತ್ತು ಅಲ್ಲಿಯೇ ನಿನ್ನ ನೆತ್ತಿಯು ಚೂರು ಚೂರಾಗಿ ಒಡೆದು ಹೋಗಲಿ ಎಂದು ಶಪಿಸಿದ್ದಾನೆ. ಇದಕ್ಕೆ ಸಂಶಯ ಇಲ್ಲ. ಈ ಶಾಪವೇ ಸೀತೆಯ ರಕ್ಷಾ ಕವಚ”. ತನ್ನ ಮಕ್ಕಳು, ವಿವೇಕಿಗಳು ಮತ್ತು ಎಲ್ಲರೂ ಇರುವ ಸಭೆಯಲ್ಲಿ ರಾವಣ ಈ ಮಾತನ್ನು ಹೇಳುತ್ತಿದ್ದಾನೆ. ಎಂತಹ ವಿಕೃತ ಸ್ಥಿತಿ ನೋಡಿ. ಈ ಶಾಪ ಯಾಕೆ ಸೀತೆಗೆ ರಕ್ಷಾ ಕವಚ ಅಂದ್ರೆ, ಪ್ರಾಣದ ಆಸೆಗಿಂತ ದೊಡ್ಡ ಆಸೆ ಬೇರೆ ಯಾವುದೇ ಇಲ್ಲ. ಅದಕ್ಕೆ ಅವನು ಸೀತೆಯನ್ನು ಮನೆಯಲ್ಲಿಟ್ಟಿಲ್ಲ, ಅಶೋಕಾವನದಲ್ಲಿ ಇಟ್ಟಿದ್ದಾನೆ. ಯಾಕೆಂದ್ರೆ ಎಲ್ಲಿಯಾದರೂ ಸಂಯಮ ಕಳೆದುಕೊಂಡರೇ, ಪ್ರಾಣವನ್ನೇ ಕಳೆದುಕೊಳ್ಳಬೇಕಾದೀತು. ರಾವಣ ಸೀತೆಯಲ್ಲಿ ಹೋಗಿ ಕಾಲಿಗೆ ಬಿದ್ದು ಬಿಡಬಹುದು ಆದರೆ ಬಲಾತ್ಕಾರ ಮಾಡಲಿಕ್ಕೆ ಹೋಗಲಿಲ್ಲ. ಹೋದರೇ ಸಾಯ್ತಾನೆ.

ರಾವಣ ಹೇಳ್ತಾನೆ, “ಈ ಶಾಪದ ಕಾರಣದಿಂದ ಸೀತೆಯನ್ನು ನಾನು ಬಲಾತ್ಕರಿಸಲಿಲ್ಲ.” ಇದನ್ನು ನಾವೆಲ್ಲ ಗಮನಿಸಬೇಕು. ಈಗ ನಾವು ಕಾಲ ಕೆಟ್ಟಿದೆ ಅಂತ ಹೇಳ್ತೇವೆ, ಆದರೆ ಲಂಕೆಯ ವಾತಾವರಣ, ರಾವಣನ ಆಸ್ಥಾನ ನೋಡಿದರೇ, ಈಗಿನ ಕಾಲ ಎಷ್ಟು ಕೆಟ್ಟರೂ ಕೂಡ ಇಷ್ಟು ಕೆಟ್ಟಿಲ್ಲ. ರಾಮ ಯಾಕೆ ಪುನಃ ಬಂದಿಲ್ಲ ಅಂದ್ರೆ ಅಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ. ಎಂತಹ ಹೀನ ಮನಸ್ಸು ನೋಡಿ. ರಾಜ ಅಂದ್ರೆ ಕಾನೂನು ಮತ್ತು ಧರ್ಮವನ್ನು ಪಾಲಿಸತಕ್ಕಂತವನು. ಇಲ್ಲಿಯವರೆಗೆ ಸೌಮ್ಯದಿಂದ ಹೇಳುವ ರಾವಣ ಸಿಟ್ಟನ್ನು ಹೊರಗೆ ಹಾಕುತ್ತಾನೆ “ಯಾರು ನಾನು? ರಾವಣ! ನನ್ನ ವೇಗವು ಸಮುದ್ರದಂತೆ, ನನ್ನ ಗತಿಯು ಚಂಡಮಾರುತದಂತೆ. ಗೊತ್ತಿಲ್ಲ ರಾಮನಿಗೆ ಹಾಗಾಗಿ ಇಲ್ಲಿ ಬಂದಿದ್ದಾನೆ. ಗುಹೆಯ ಆಳದಲ್ಲಿ ಮಲಗಿರುವ ಸಿಂಹವನ್ನು ಬಡಿದು ಎಬ್ಬಿಸುತ್ತಿದ್ದಾನೆ. ಕ್ರುದ್ಧನಾದ ಹಂತಕನನ್ನು ಎಬ್ಬಿಸುತ್ತಿದ್ದಾನೆ ರಾಮ. ನನ್ನಿಂದ ಹೊರಹೊಮ್ಮುವ ಬಾಣಗಳು ಎರಡು ಹೆಡೆಯ ಸರ್ಪಗಳಂತೆ. ಅವುಗಳ ಪರಿಚಯ ಅವನಿಗಿಲ್ಲ. ಇದ್ದಿದ್ದರೆ ನನ್ನ ತಂಟೆಗೆ ಬರುತ್ತಿರಲಿಲ್ಲ. ಸಿಡಿಲಿನಂತೆ ಇರುವ ಬಾಣಗಳನ್ನು ಆನೆಯ ಸೊಂಡಿಲಿನಷ್ಟು ದಪ್ಪವಾಗಿರುವ ಧನಸ್ಸಿನಿಂದ ನಾನು ರಾಮನನ್ನು, ಹೇಗೆ ಉಲ್ಕೆಗಳಿಂದ ಆನೆಗಳನು ಓಡಿಸ್ತಾರೋ ಅತ್ತ ಇತ್ತ, ಮೊದಲು ಊರಿಗೆ ಆನೆ ಬಂದ್ರೆ ಅದನ್ನು ಹೆದರಿಸಲು ಬೆಂಕಿಯ ಕೊಳ್ಳಿಗಳನ್ನು ಹಿಡಿದುಕೊಂಡು ಅಟ್ಟಿಸಿಕೊಂಡು ಹೊಗ್ತಿದ್ದರು, ಹಾಗೆಯೇ ನಾನು ರಾಮನನ್ನು ಆಟ್ಟಾಡಿಸಿಬಿಡುತ್ತೇನೆ. ಮತ್ತು ಅವನ ವಾನರ ಸೈನ್ಯವನ್ನು ನಾನೇ ಸ್ವಾಹಾಕಾರ ಮಾಡುತ್ತೆನೆ. ಹೇಗೆ ಅಂದ್ರೆ ಬೆಳಗ್ಗೆ ಸೂರ್ಯ ಉದಯಿಸುತ್ತಿದ್ದಂತೆ ಎಲ್ಲ ನಕ್ಷತ್ರಗಳು ಅಸ್ತವಾಗುವಂತೆ. ಇಂದ್ರ ಬರಲಿ, ವರುಣ ಬರಲಿ ನನ್ನನ್ನು ಗೆಲ್ಲಲಿಕ್ಕೆ ಸಾಧ್ಯ ಇಲ್ಲ. ನಾನು ನನ್ನ ಅಣ್ಣ ವೈಶ್ವಾನರನನ್ನು ಬೆದರಿಸಿ ಲಂಕೆಯನ್ನು ಕಸಿದಿದ್ದೇನೆ.”

ರಾವಣ ತನ್ನ ಮಾತನ್ನು ಮುಗಿಸುತ್ತಿದ್ದಂತೆ ವಿಭೀಷಣ ಎದ್ದು ನಿಂತನಂತೆ. ಅಷ್ಟು ಹೊತ್ತು ವಿಭೀಷಣ, ಕುಂಭಕರ್ಣನ ಘರ್ಜನೆಗಳನ್ನೂ ಕೇಳಿದ್ದ, ರಾವಣನ ಬಡಾಯಿಯನ್ನೂ ಕೇಳಿದ್ದ. ಈಗ ಮಾತ್ರ ಅವನ ಸಹನೆಯ ಕಟ್ಟೆ ಒಡೆಯಿತು. ರಾವಣ ಹೇಳಿದ ಒಂದೂ ಮಾತು ಸತ್ಯ ಅಲ್ಲ. ಆಗೋದೂ ಇಲ್ಲ. ಸಾಯ್ತಾನೆ ಅಷ್ಟೇ ಅಂತ ಅನ್ನಿಸಿತು. ವಿಭೀಷಣನು ರಾವಣನ ಮುಖಕ್ಕೆ ತಿವಿಯುವಂತೆ ನೇರವಾಗಿ ಸತ್ಯವನ್ನು ಹೇಳ್ತಾನೆ. ಇಲ್ಲಿಂದ ಮುಂದೆ ವಿಭೀಷಣ ಪರ್ವ ಅದು. ವಿಭೀಷಣ ರಾವಣ ಪ್ರಹಸ್ತ ಇಂದ್ರಜಿತು ಇವುಗಳ ಮಧ್ಯೆ ನಡೆದಿರತಕ್ಕಂತಹ ವಾಕ್ ಸಂಗ್ರಾಮ. ಇದನ್ನು ಮುಂದೆ ಗಮನಿಸುತ್ತೀರಿ. “ನ್ಯಾಯವಾದಿ” ಎನ್ನುವ ಪದ ರಾಮಾಯಣದ್ದು ಮತ್ತು ಅದು ವಿಭೀಷಣನಿಗಾಗಿ ಬಳಸಿದೆ. ವಿಭೀಷಣನಿಗೆ ಯಾರೂ ವಕಾಲತ್ತು ಕೊಟ್ಟಿಲ್ಲ, fees ಕೊಟ್ಟಿಲ್ಲ ಆದರೆ ತಾನೇ ತಾನಾಗಿ ಸತ್ಯದ ಪರವಾಗಿ ವಾದ ಸರಣಿಯನ್ನು ರಾವಣನ ಮುಂದಿಡುತ್ತಾನೆ. ಎಲ್ಲಿ ಅಂದ್ರೆ ಅದೂ ರಾವಣನ ಆಸ್ಥಾನದಲ್ಲಿ. ರಾವಣನ court ಅದು!

ವಿಭೀಷಣ ವಾಕ್ಯವನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments