ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

“ಗಡುವಿರುವುದೆಲ್ಲಕಂ ಮಂಕುತಿಮ್ಮ” – ಗುಂಡಪ್ಪನವರ ಮಾತು. ಎಲ್ಲಕ್ಕೂ ಒಂದು ಮಿತಿ ಇದೆ. ಆ ಮಿತಿಯವರೆಗೂ ಸರಿ. ಅದನ್ನು ದಾಟಿದಾಗ ಹಗ್ಗ ಹರಿಯುವುದು ಖಂಡಿತ. ವಿಭೀಷಣ ಯುಗ ಯುಗಗಳ ಕಾಲ ಸಹಿಸಿದ್ದ. ಅಣ್ಣನ ಆಲೋಚನೆ, ಅಣ್ಣನ ನಡತೆ, ಅಣ್ಣ ಮಾಡಿದ ಅನ್ಯಾಯಗಳು ಅವನಿಗೆ ಸಮ್ಮತವಲ್ಲ. ರಾಜ್ಯವನ್ನು ಅಣ್ಣ ನಡೆಸಿದ ರೀತಿ ಅವನಿಗೆ ಒಪ್ಪಿಗೆಯಿಲ್ಲ. ರಾಜನ ಕರ್ತವ್ಯ – ರಕ್ಷಣೆ! ಲಂಕೆ ನನ್ನದು ಎಂದರೆ ಅರ್ಥ ಲಂಕೆಯ ರಕ್ಷಣೆ ನನ್ನದು ಹೊರತು ಲಂಕೆಯ ಉಪಭೋಗವಲ್ಲ. ಲಂಕೆ ಮಾತ್ರವೇನು, ಪ್ರಪಂಚದ ಸಮಸ್ತ ವಸ್ತುವೂ ತನ್ನ ಭೋಗವಸ್ತು ಎಂದು ಭಾವಿಸಿದವನು ರಾವಣ. ಇದನ್ನೆಲ್ಲ ಸಹಿಸ್ತಾ ಬಂದಿದ್ದಾನೆ ವಿಭೀಷಣ. ತನ್ನ ಕರ್ತವ್ಯ ಮಾಡ್ತಾ ಇದ್ದರೂ ಕೂಡ ಉಪಯೋಗವೇನೂ ಇಲ್ಲ. ಅನ್ಯಾಯ ನಡಿಯುವುದು ನಡೀತಾನೆ ಇದೆ. ಆದರೆ ಎಲ್ಲಿ ಹಗ್ಗ ಹರಿಯಿತು ಅಂದರೆ, ರಾವಣನ ಈ ಮಾತು, ‘ ಶತ್ರುವಿನ ಜೊತೆಗೆ ವಾಸ ಮಾಡಬಹುದು, ಬುಸುಗುಡುವ ಸರ್ಪದ ಜೊತೆಗೆ ವಾಸ ಮಾಡಬಹುದು, ನಿನ್ನಂಥವನ ಜೊತೆಗಲ್ಲ. ನಿನ್ನಂಥವನನ್ನು ಒಟ್ಟಿಗೆ ಇಟ್ಟುಕೊಳ್ಳಬಾರದು’ ಎಂದಾಗ ಎದ್ದು ಹೊರಟ. ಕೆಡು ಮಾತು.

ಹಾಗೆ ನೋಡಿದರೆ ವಿಭೀಷಣ ಅಲ್ಲಿಯವರೆಗೂ ಎಡೆಬಿಡದೆ ಅಣ್ಣನ ಕ್ಷೇಮವನ್ನು ಹಾರೈಸಿದ್ದ, ಅಣ್ಣನಿಗೆ ಒಳ್ಳೆಯದಾಗಬೇಕು ಎನ್ನುವ ಪ್ರಯತ್ನವನ್ನು ಮಾಡಿ ಅದಕ್ಕಾಗಿಯೇ ಸಾಕಷ್ಟು ಕಷ್ಟವನ್ನೂ ಪಟ್ಟಿದ್ದ. ಯಾಕಂದ್ರೆ, ವಿಭೀಷಣನ ಮಾತುಗಳು, ಸಲಹೆಗಳು ಪ್ರಿಯವಲ್ಲ; ಅಲ್ಲಿ ಅದಕ್ಕೆ ಸ್ವಾಗತವಿಲ್ಲ. ಆದರೂ ಕೂಡ ಅಲ್ಲಿದ್ದ; ದೊರೆಗೆ ಬೇಡದವನಾಗಿ ಒಂದರ್ಥದಲ್ಲಿ.
ಆದರೆ ಬಿಡುವಂತೆಯೂ ಇಲ್ಲ ಅವನಿಗೆ! ಅಣ್ಣ-ತಮ್ಮಂದಿರು ಅಂತಹ ಇರುಸು-ಮುರುಸಿನಲ್ಲಿಯೇ ಬಹಳ ಕಾಲ ಬಾಳಿದ್ದರು ಒಟ್ಟಿಗೆ.

ಆದರೆ ಅವನು ಯಾವುದಲ್ಲವೋ, ಅದನ್ನೇ ಅವನ ಮೇಲೆ ಆರೋಪಿಸಿದಾಗ, ‘ಶತ್ರು‌ ನೀನು, ಮಿತ್ರನ ರೂಪದಲ್ಲಿ‌ದ್ದೀಯೆ, ನನ್ನ ಉತ್ಕರ್ಷ ನಿನಗೆ ಸಹ್ಯ ಅಲ್ಲ’ ಹಾಗೆಲ್ಲ ಹೇಳಿದಾಗ, ‘ಸರಿ ಬಿಡು, ಹಾಗೆಯೇ ಇರ್ತೇನೆ ಹಾಗಾದರೆ’. ಜೀವನವಿಡೀ ಪ್ರಾಮಾಣಿಕವಾಗಿ ಇದ್ದವನನ್ನು ಅವನು ಯಾವುದಲ್ಲವೋ ಅದನ್ನೇ ಅವನ ಮೇಲೆ ಆರೋಪ ಮಾಡಿದಾಗ ಕೊನೆಗೆ ಅದರ ಪರಿಣಾಮ ಅದೇ ಆಗುವಂತೆ ಆಯಿತು. ವಿಭೀಷಣನು ಲಂಕೆಯನ್ನು ಬಿಟ್ಟು ಹೋಗಿದ್ದಲ್ಲ, ರಾವಣನು ನೂಕಿದ್ದು! ಅದು ಆ ಕ್ಷಣದ ಸ್ಫೋಟ! ಇಷ್ಟು ಕಾಲ ಅವನಿಗೆ ಬೇರೆ ಪರ್ಯಾಯವೂ ಇರಲಿಲ್ಲ. ಈಗ ಹಾಗಲ್ಲ, ಸಾಕ್ಷಾತ್ ಧರ್ಮವೇ ಬಂದು ನಿಂತಿದೆ ಲಂಕೆಯ ಬಾಗಿಲಿಗೆ. ಅವನಿನ್ನು ಕಾಯಲಿಕ್ಕೆ ಸಾಧ್ಯ ಇಲ್ಲ ಅಥವಾ ಇನ್ನು ಸಹಿಸಿಕೊಂಡು ಇರಬೇಕಾದಂತಹ ಅಗತ್ಯವೂ ಇಲ್ಲ. ಲಂಕೆಯನ್ನು ಒಳ್ಳೆಯದು ಮಾಡಬೇಕು. ಲಂಕೆ ಒಳ್ಳೆಯ ರಾಜ್ಯವಾಗಬೇಕು ಎಂಬ ಆಶೆಯೊಂದು
ಅವನ ಹೃದಯದಲ್ಲಿ ನೆಲೆನಿಂತಿದೆ. ಇದು ಅವಕಾಶ. ರಾಮನು ಲಂಕೆಯ ಮೇಲೆ ಯುದ್ಧ ಮಾಡ್ತಾನೆ ಅಂತಾದ್ರೆ ಆ ಯುದ್ಧ ಒಳ್ಳೆಯದಕ್ಕೋಸ್ಕರವೇ ಆಗ್ತದೆ. ಕೊನೆಯಲ್ಲಿ ಲಂಕೆಯನ್ನು ಅನುಗ್ರಹಿಸಿ ಹೋಗ್ತಾನೆ ರಾಮ.

ವಿಭೀಷಣ ಆ ಕಡೆಗೆ ತನ್ನ ಒಲವನ್ನು ತೋರಿದ. ಹೀಗೆ, ಲಂಕೆಯನ್ನು ತೊರೆದು, ಅಣ್ಣ-ತಮ್ಮ ಎನ್ನುವ ಬಂಧವನ್ನು ಕೂಡ ತೊರೆದು ತನ್ನದೆಲ್ಲವನ್ನೂ ತೊರೆದು ವಿಭೀಷಣನು ರಾಮನಿರುವೆಡೆಗೆ ಹೊರಟ. ಹೊರಡುವ ಹೊತ್ತಿನಲ್ಲಿಯೂ ಕೂಡ ಕೊಟ್ಟ ಕೊನೆಯದಾಗಿ ಅಣ್ಣನಿಗೆ ಯಾವ ಸಂದೇಶವನ್ನು ಕೊಡಬೇಕೋ, ಆ ಸಂದೇಶವನ್ನು ಕೊಟ್ಟು ಹೊರಟು ಹೋದ ವಿಭೀಷಣ ಸಮುದ್ರವನ್ನು ದಾಟಿ. ಈಗ ಸಮುದ್ರವನ್ನು ದಾಟಿ ರಾಮನಿರುವಲ್ಲಿಗೆ ವಿಭೀಷಣ ಬಂದಿದ್ದಾನೆ. ಆದರೆ ಅಲ್ಲಿ ರಾಮನ ಜೊತೆ ಬಹಳ ಜನ ಇದ್ದಾರೆ! ಒಂದು ವಿಚಿತ್ರವಾದ ಪರಿಸ್ಥಿತಿ ಅದು. ಗೊತ್ತಿಲ್ಲ, ರಾಮ ಸ್ವೀಕಾರ ಮಾಡ್ತಾನೋ ಇಲ್ಲವೋ!? ರಾಮನೊಟ್ಟಿಗೆ ಇರುವವರು ಸ್ವೀಕಾರ ಮಡ್ತಾರೋ ಇಲ್ಲವೋ ಗೊತ್ತಿಲ್ಲ. ಸ್ವೀಕಾರ ಮಾಡಲಿಕ್ಕೆ ಕಾರಣಗಳು ಕಡಿಮೆ ಇವೆ. ಯುದ್ಧ ಇನ್ನೇನು ಪ್ರಾರಂಭವಾಗುವ ಹೊತ್ತಿನಲ್ಲಿ ಪರಮ ವೈರಿಯ ತಮ್ಮ ಬಂದರೆ ಯಾರು ನಂಬ್ತಾರೆ? ಯಾರು ಸ್ವೀಕಾರ ಮಾಡ್ತಾರೆ ಆತನನ್ನು? ತುಂಬಾ ಕಷ್ಟವಾದ ಪರಿಸ್ಥಿತಿ. ಆದರೆ ಅದು ಯಾವುದನ್ನೂ ಲೆಕ್ಕಿಸದೆ, ಬಂದದ್ದು‌ ಪ್ರಸಾದ ಎಂದು ಎಲ್ಲವನ್ನೂ ತೊರೆದು ಭಗವಂತನ ಬಳಿಗೆ ಹೋದ ವಿಭೀಷಣ. ಅದುವೇ‌ ಸಂನ್ಯಾಸ!

ಅವನು ಗಗನದಲ್ಲಿದ್ದಾನೆ, ವಾನರರು ಭೂಮಿಯಲ್ಲಿದ್ದಾರೆ. ಅವರಿಗಿನ್ನೂ ರಾಕ್ಷಸರ ಪರಿಚಯ, ಅವರ ಬಗ್ಗೆ ಕಲ್ಪನೆ, ಇದೆಲ್ಲ ಕಡಿಮೆ ಇದೆ. ಲಂಕೆಯ ಕಡೆಯಿಂದ ಯಾರೋ‌ ಬರ್ತಾ ಇದ್ದಾರೆ! ಒಂದು ಗುಂಪು ಬರ್ತಾ ಇದೆ. ಅದರಲ್ಲಿ ಒಬ್ಬ ಪ್ರಧಾನವಾಗಿ ಕಂಡು ಬರ್ತಾ ಇದ್ದಾನೆ. ದೊಡ್ಡ ಆಕಾರವೇ ಹೌದು ವಿಭೀಷಣನದ್ದು. ಅವನ ಕೈಯಲ್ಲಿ ಉತ್ತಮಾಯುಧವಿದೆ. ವಿಭೀಷಣ ಗಧಾ ಪಾಣಿ. ಹಾಗೇ ಭೀಮ ವಿಕ್ರಮರಾದ ಅವನ ನಾಲ್ಕು ಅನುಚರರು. ವಾನರರು ನೋಡ್ತಾ ಇದ್ದಾರೆ, ಅದು ದೊಡ್ಡ ಸಮಸ್ಯೆಯಾಗಲಿಲ್ಲ. ಆದರೆ ವಾನರಾಧಿಪತಿ ಸುಗ್ರೀವ ನೋಡಿದ! ಸುಗ್ರೀವನಿಗೆ ‘ರಾಕ್ಷಸ’ ಅಂತಷ್ಟೇ ಗೊತ್ತವನನ್ನು. ಯಾರಿವನು? ಯಾಕೆ ಬಂದ? ಎಂಬುದಾಗಿ ಆಲೋಚನೆ ಶುರುಮಾಡಿದ.
ಯುದ್ಧಕ್ಕೆ ಬಂದುಬಿಟ್ಟರಾ ರಾಕ್ಷಸರು? ಯುದ್ಧಕ್ಕಾದರೆ ಹೀಗೆ ಬರಲಿಕ್ಕಿಲ್ಲ. ಬಂದರೆ ಇಷ್ಟೇ ಜನ ಯಾಕೆ ಬರ್ತಾರೆ? ಸುಮಾರು ಹೊತ್ತು ಆಲೋಚನೆ ಮಾಡಿದ. ಆಮೇಲೆ, ಹನುಮಂತನೇ ಮೊದಲಾದ ವಾನರರನ್ನುದ್ದೇಶಿಸಿ ಹೀಗೆ ಹೇಳಿದನಂತೆ ಸುಗ್ರೀವ, ‘ಯಾರೋ ಇವನು ನಾಲ್ವರು ರಾಕ್ಷಸರನ್ನೊಡಗೂಡಿದ ರಾಕ್ಷಸ ನಾಯಕ. ಸರ್ವಾಯುಧಗಳನ್ನೂ ಕೂಡಿಕೊಂಡು ಬರ್ತಾ ಇದ್ದಾನೆ ನೋಡಿ, ನಮ್ಮನ್ನು ಕೊಲ್ಲಲಿಕ್ಕೆ, ಸಂಶಯವಿಲ್ಲ. ಹಾಲು ಮನಸ್ಸಿಂದ ಬರ್ತಾ ಇದ್ದಾನೆ ವಿಭೀಷಣ. ಆದರೆ ನಮ್ಮನ್ನು ಕೊಲ್ಲಲಿಕ್ಕೆ ಬರ್ತಾ ಇದ್ದಾನೆ, ಇಲ್ಲದಿದ್ದರೆ ಆಯುಧ ಯಾಕೆ?’ ಅಂದಾಗ ಕಪಿಗಳು ಆಯುಧಗಳನ್ನು ತೆಗೆದುಕೊಂಡರು.

ಕೆಲವರು ದೊಡ್ಡ ದೊಡ್ಡ ವೃಕ್ಷಗಳನ್ನು ಕೈಗೆತ್ತಿಕೊಂಡರಂತೆ, ಇನ್ನು ಕೆಲವರು ಪರ್ವತ ಶಿಖರಗಳನ್ನ ಕೈಗೆತ್ತಿಕೊಂಡರಂತೆ, ಸುಗ್ರೀವನಿಗೆ ಹೇಳ್ತಾರೆ ಕಪಿಗಳು, ‘ಕೂಡಲೇ ನಮಗೆ ಆಜ್ಞೆ ಮಾಡು ದೊರೆಯೇ, ಒಂದು ಕ್ಷಣದಲ್ಲಿ ಇವರೆಲ್ಲಾ ಸತ್ತು ಬಿದ್ದಿರ್ತಾರೆ ನೋಡು, ಅಲ್ಪ ತೇಜಸ್ವಿಗಳು’ ಎಂಬುದಾಗಿ ವಾನರರು ಹೇಳ್ತಾರೆ. ಸುಗ್ರೀವನಿಗೆ ಸಂದೇಹ. ವಾನರರಿಗೆ ಹೇಗೆ ಅಂದರೆ ಪ್ರಶ್ನೆ ಉತ್ತರವೆಲ್ಲ ಆಮೇಲೆ, ಪೆಟ್ಟು ಮೊದಲು! ಹಾಗಾಗಿ ಕೊಲ್ಲಲು ಬರುತ್ತಿದ್ದಾರಾ ಎನ್ನುವುದು ಸುಗ್ರೀವನ ಸಂಶಯವಾದರೆ, ಕೊಂದೇ ಬಿಡ್ತೇವೆ ಎನ್ನುವುದು ವಾನರರ ತೀರ್ಮಾನ. ಹಾಗಾಗಿ ವಾನರರು ಆಯುಧಪಾಣಿಗಳಾದರು. ಅಷ್ಟು ಹೊತ್ತಿಗೆ ವಿಭೀಷಣ ತೀರಕ್ಕೆ ಬಂದ. ಆಕಾಶದಲ್ಲಿಯೇ ನಿತ್ತುಕೊಂಡನಂತೆ. ಪದ್ಧತಿ ಪ್ರಕಾರ, ಅನುಮತಿಯನ್ನು ಕೇಳಿದ ಮೇಲೆಯೇ ಭೂಮಿಗೆ ಇಳಿಯತಕ್ಕಂತದ್ದು ಅಂತ. ದೊಡ್ಡ ಸ್ವರವೆತ್ತಿ ಸುಗ್ರೀವ ಮತ್ತು ಎಲ್ಲಾ‌ ವಾನರ ನಾಯಕರನ್ನು ಉದ್ದೇಶಿಸಿ ಬಂದ ಹಿನ್ನೆಲೆಯನ್ನು ವಿವರಿಸಿದನಂತೆ ವಿಭೀಷಣ.

‘ರಾವಣನೆಂಬ ದುರ್ವೃತ್ತ, ರಾಕ್ಷಸೇಶ್ವರನಿಗೆ ನಾನು ತಮ್ಮನಾಗಬೇಕು. ನನ್ನ ಹೆಸರು ವಿಭೀಷಣ’.
ಭಯ ಕೊಡುವವನೂ‌ ಅಲ್ಲ, ಭಯ ಪಡುವವನೂ ಅಲ್ಲ, ಅದು ವಿಭೀಷಣ.
‘ನಮ್ಮಣ್ಣ ರಾವಣನು ಜನಸ್ಥಾನದಿಂದ ಸೀತೆಯನ್ನು ಅಪಹರಿಸಿ ತಂದಿದ್ದಾನೆ. ಗೃದ್ಧರಾಜನಾದ ಜಟಾಯುವನ್ನು ಅನ್ಯಾಯವಾಗಿ ಕೊಂದು ಸೀತೆಯನ್ನು ತಂದು ಅಶೋಕವನದಲ್ಲಿ ಇಟ್ಟಿದ್ದಾನೆ ಅವಳ ಇಷ್ಟಕ್ಕೆ ವಿರುದ್ಧವಾಗಿ. ರಾಕ್ಷಸಿಯರ ಕಾವಲನ್ನು ಇಟ್ಟಿದ್ದಾನೆ ಅಲ್ಲಿ. ನಾನು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದೆ ಆಕೆಯನ್ನು ಬಿಡಿಸುವ ಸಲುವಾಗಿ. ಯುಕ್ತಿಯುಕ್ತವಾದ ಅನೇಕ ಮಾತುಗಳನ್ನು ಅಣ್ಣನಿಗೆ ಆಡಿ ಹೇಳಿ ತೋರಿಸಿದೆ, ‘ಇದು ತಪ್ಪು, ನಾವು ಮಾಡಬಾರದು, ಬಿಟ್ಟುಕೊಡಬೇಕು ಎನ್ನುವುದನ್ನು ಅಣ್ಣನಿಗೆ ಮನಗಾಣಿಸಲು ಬಹಳ‌ ಪ್ರಯತ್ನ ಪಟ್ಟೆ. ಸೀತೆಯನ್ನು ರಾಮನಿಗೆ ಮರಳಿ ಒಪ್ಪಿಸಿಬಿಡು ಎಂಬುದಾಗಿ ಪುನಃ ಪುನಃ ನಮ್ಮಣ್ಣನಿಗೆ ನಾನು ತಿಳಿಸಿ ಹೇಳಿದೆ. ರಾವಣ ನನ್ನ ಮಾತನ್ನು ತಗೊಳ್ಳಲಿಲ್ಲ. ಕಾಲನ ಕರೆ ಬಂದಿದೆ ಅವನಿಗೆ. ಯಾರಿಗೆ ಆಯಸ್ಸು ಮುಗಿದು ಹೋಗಿದೆ, ಅವರಿಗೆ ಔಷಧ ಕೊಟ್ಟರೂ ಅವರು ತೆಗೆದುಕೊಳ್ಳುವುದಿಲ್ಲವಂತೆ. ಕೊನೆಗೆ ನಾನು ಬಹಳ ಹೇಳಿದ್ದರಿಂದ ಅವನು ಕೋಪ ಬಂದು ಕೆಟ್ಟ ಮಾತುಗಳನ್ನು ನನಗೆ ಆಡಿದ. ಕೊನೆಯಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಂಡು ಅಪಮಾನ ಮಾಡಿದ. ಈಗ ನಾನು ಎಲ್ಲವನ್ನೂ ತ್ಯಜಿಸಿ ರಾಮನಿಗೆ ಶರಣಾಗಿದ್ದೇನೆ. ನನ್ನ ತಾಯ್ನಾಡನ್ನು, ನನ್ನ ಸ್ಥಾನಮಾನವನ್ನೂ, ಸಂಬಂಧವನ್ನೂ, ಮನೆಯನ್ನೂ, ಹೆಂಡತಿ-ಮಕ್ಕಳು ಎಲ್ಲ ಬಿಟ್ಟು ಬಂದಿದ್ದೇನೆ. ರಾಮನಿಗೆ‌ ನಾನು ಶರಣಾಗಿದ್ದೇನೆ.”
ಶರಣಾಗತಿಯ ಭಾವ ಹೇಗೆ ಅಂದ್ರೆ ಅಲ್ಲಿ ಯಾವ ತರ್ಕಕ್ಕೂ, ಯಾವ ಯುಕ್ತಿಗೂ ಎಡೆಯಿಲ್ಲ. ಇದ್ದು ಬಿಡು, ಅವನು ನೋಡ್ಕೊಳ್ತಾನೆ.

ಕೊನೆಯಲ್ಲಿ ವಿಭೀಷಣ ಹೇಳ್ತಾನೆ, ‘ ಮಹಾತ್ಮನಾದ ರಾಮನೆಂದರೆ ಸರ್ವಲೋಕಶರಣ್ಯ. ಅವನ ಚರಣಗಳಲ್ಲಿ ಲೋಕದ ಸಮಸ್ತ ಜೀವಿಗಳಿಗೆ ಅವಕಾಶವಿದೆ. ಕೊನೆಗೆ ಎಲ್ಲರೂ ಹೋಗಿ ಎಲ್ಲಿ ಸೇರ್ತಾರೋ ಅಲ್ಲೇ ನಾನೂ ಬಂದೆ, ನನಗಾಶ್ರಯ ಕೊಡು’ ಎನ್ನುವ ಭಾವ. ರಾಮ ಕಣ್ಣಮುಂದೆ ಕಾಣ್ತಾ ಇಲ್ಲ. ಆದರೆ ಸುಗ್ರೀವನೇ ಮೊದಲಾದ ಕಪಿಗಳಿಗೆ ಅವನು ಪ್ರಾರ್ಥನೆ ಮಾಡ್ತಾನೆ, ‘ರಾಮನಿಗೆ ನಿವೇದನೆ ಮಾಡಿಕೊಳ್ಳಿ ವಿಭೀಷಣ ಶರಣಾಗತನಾಗಿ ಬಂದಿದ್ದಾನೆ, ಸರ್ವಲೋಕಶರಣ್ಯನ ಚರಣವನ್ನು ವಿಭೀಷಣ ಹಿಡಿದಿದ್ದಾನೆ’.
ಸುಗ್ರೀವನಿಗೆ ಗಡಿಬಿಡಿ ಆಯಿತು. ಸ್ವಲ್ಪ ಗಾಬರಿ, ತ್ವರೆ, ಆತಂಕ ಎಲ್ಲ ಸೇರಿದೆ.
ಚುರುಕಾಗಿ ರಾಮನಿಗೆ ಸುಗ್ರೀವ ಹೇಳಿದನಂತೆ, ‘ಪ್ರಭೂ, ಇವನು ರಾವಣನ ತಮ್ಮ. ವಿಭೀಷಣನಂತೆ ಹೆಸರು ಇವನದು. ನಾಲ್ವರು ರಾಕ್ಷಸರ ಜೊತೆಯಲ್ಲಿ ಬಂದು ನಿನಗೆ ಶರಣಾಗತನಾಗಿದ್ದಾನೆ. ಈಗ ನೀನು ತುಂಬಾ ಜಾಗರೂಕನಾಗಿ ವ್ಯವಹರಿಸಬೇಕು. ಸರಿಯಾದ ರೀತಿಯಲ್ಲಿ, ಸರಿಯಾದವರ ಜೊತೆ ಸರಿಯಾದ ಸಮಯ ಕೊಟ್ಟು ಆಲೋಚನೆ ಮಾಡಬೇಕಾಗ್ತದೆ. ಸೇನಾ ಸನ್ನಿವೇಶದ ವಿಷಯದಲ್ಲಿ ಹಾಗೇ ರಾಜನೀತಿಯ ವಿಷಯದಲ್ಲಿ, ಹಾಗೆಯೇ ಗುಪ್ತಚರ್ಯೆಯ ವಿಷಯದಲ್ಲಿ, ಈ ನಾಲ್ಕೂ ವಿಷಯದಲ್ಲಿ ನೀನು ಜಾಗೃತನಾಗಬೇಕು. ವಾನರರನ್ನೂ‌ ಮನಸ್ಸಲ್ಲಿಟ್ಟುಕೊಂಡು, ಶತ್ರುಸೈನ್ಯವನ್ನೂ ಮನಸ್ಸಲ್ಲಿಟ್ಟುಕೊಂಡು ನಿರ್ಣಯ ಮಾಡಬೇಕು. ರಾಕ್ಷಸರು ಎಂದರೇ ಮೋಸ, ಅಲ್ಲಿ‌ ಒಳ್ಳೆಯವರು ಅಂತ ಯಾರು ಇರ್ತಾರೆ? ಮಾಯವಾಗುವ ಸ್ವಭಾವ ಅವರಿಗಿರ್ತದೆ. ಬೇಡದ್ದನ್ನು ಮಾಡ್ತಾರೆ ಏನನ್ನೂ. ಬೇರೆ ಯಾವುದೋ ರೂಪ ತಾಳ್ತಾರೆ. ಶೂರರೂ ಆಗಿರ್ತಾರೆ ಅವರು. ಕಪಟದ ಮೂಲಕ ದ್ರೋಹ ಮಾಡ್ತಕ್ಕಂಥವರು. ರಾಕ್ಷಸರಲ್ಲಿ‌ ಎಂದೂ ವಿಶ್ವಾಸವಿಡಬಾರದು.

ತೀರ್ಮಾನ ಕೊಟ್ಟ ಸುಗ್ರೀವ, ‘ರಾವಣನ ಗುಪ್ತಚರನಾಗಿರಬೇಕು ಇವನು. ನಮ್ಮ ಒಳಹೊಕ್ಕು ನಮ್ಮಲ್ಲಿ ಭೇದವನ್ನು ಸೃಷ್ಟಿ ಮಾಡಬಹುದು. ಅಥವಾ, ತಾನೇ ಸಮಯ ಕಾದು ನಮ್ಮನ್ನು ಕೊಲ್ಲಬಹುದು, ಆಕ್ರಮಣ ಮಾಡಬಹುದು. ಸಾಧ್ಯತೆಯಿದೆ. ರಾಜನೀತಿಯ ಮಾತನ್ನು ಹೇಳ್ತಾನೆ, ಯುದ್ಧ ಮಾಡುವಾಗ ಯಾವ ರೀತಿಯ ಸೈನ್ಯವನ್ನು ಬಳಸಬೇಕು ಅಂದರೆ, ನಾವೇ ನಿರ್ಮಾಣ ಮಾಡಿದ ಸೇನೆ ಸರ್ವೋತ್ಕೃಷ್ಟವಾಗಿ ಇರತಕ್ಕಂತದ್ದು ಯುದ್ಧ ಮಾಡುವಾಗ. ಇನ್ನು ಇದರಾಕಡೆಗೆ, ಮಿತ್ರ ಸೇನೆಯನ್ನು ತೆಗೆದುಕೊಳ್ಳಬಹುದು ಅದಕ್ಕೆ ನಂತರದ ಸ್ಥಾನ. ಕಾಡುಜನರನ್ನು ಸ್ವೀಕಾರ ಮಾಡಿ ಯುದ್ಧ ಮಾಡಬಹುದು. ಆದರೆ ಶತ್ರುವಿನ ಸೈನ್ಯವನ್ನು ಯಾವ ಹಂತದಲ್ಲಿಯೂ ಕೂಡ ಸೇರಿಸಿಕೊಳ್ಳಬಾರದು. ಹಾಗಾಗಿ, ರಾಜನೀತಿಯ ದೃಷ್ಟಿಯಿಂದ ಶತ್ರುವನ್ನು ಸೇರಿಸುವ ಹಾಗಿಲ್ಲ’.
ದುರುದ್ದೇಶದಿಂದ ಹೇಳ್ತಾ ಇಲ್ಲ ಸುಗ್ರೀವ. ಅವನ ಬುದ್ಧಿಗೆ ನಿಲುಕಿದಷ್ಟು ಯೋಚನೆ ಮಾಡ್ತಾ ಇದ್ದಾನವನು. ಹುಟ್ಟಾ ರಾಕ್ಷಸ, ಸಾಲದ್ದಕ್ಕೆ ಕಡುವೈರಿಯ ಸೋದರ! ಲಂಕೆಯಿಂದಲೇ ಬಂದಿದ್ದಾನೆ. ಹೇಗೆ ತಾನೇ ವಿಶ್ವಾಸ ಇಡಬಹುದು ಅವನಲ್ಲಿ? ಎಂಥಾ ಕಷ್ಟ ಇದೆ ವಿಭೀಷಣನಿಗೆ, ಎಷ್ಟು ಗಂಭೀರ ಸನ್ನಿವೇಶ! ಯಾವ ಧೈರ್ಯದಲ್ಲಿ ವಿಭೀಷಣ ಬಂದಿರಬಹುದು ರಾಮನ ಸನ್ನಿಧಿಗೆ! ಯಾವ ನಂಬಿಕೆಯದು! ಪರಿಚಯವಿಲ್ಲದ ವ್ಯಕ್ತಿ, ವಿಶ್ವಾಸ, ಸಂಬಂಧವಿಲ್ಲ. ಅಂಥವನಲ್ಲಿ ಶರಣಾಗತಿಯಾಗಬೇಕಾದರೆ ಯಾವ ಮಟ್ಟದವನಾಗಿರಬೇಕು ವಿಭೀಷಣ!? ಅದು ಆತ್ಮ ಕರೆದು ಹೋಗುವಂಥದ್ದು.

‘ನನ್ನ ದೃಷ್ಟಿಯಿಂದ ಇವನನ್ನು ನಿಗ್ರಹಿಸಬೇಕು. ಅದೇ ಸೂಕ್ತವಾಗಿರತಕ್ಕಂತದ್ದು’ ಅಂತ ಸುಗ್ರೀವ ಹೇಳ್ತಾನೆ. ತನ್ನ ವಾದಸರಣಿಗೆ ಪುಷ್ಟಿ ನೀಡಲು ಕಾಗೆಗಳು ಮತ್ತು ಗೂಬೆಯ ಕಥೆಯನ್ನೂ ಹೇಳ್ತಾನೆ ಸುಗ್ರೀವ. ಹಾಗಾಗಿ ತೀವ್ರವಾದ ದಂಡದಿಂದ ದಂಡಿಸಿ ಇವನನ್ನು, ವಧಿಸಿ! ಕ್ರೂರಿ ರಾವಣನ ಸೋದರ ಇವನು.
ಇಷ್ಟು ಹೇಳಿದರೂ ಮುಖದಲ್ಲಿಯಾಗಲಿ, ಹಾವ-ಭಾವದಲ್ಲಿಯಾಗಲೀ, ಮಾತಿನಲ್ಲಾಗಲೀ ರಾಮನ ಕಡೆಯಿಂದ ಉತ್ತರ ಏನೂ ಬರಲಿಲ್ಲ. ಸುಮ್ಮನಾದನಂತೆ ಸುಗ್ರೀವ. ರಾಮ ಏನು ಮಾಡಬೇಕು? ರಾಮನಿಗೆ ಏನು ಮಾಡಲೂ ಸಂದಿಗ್ಧವೇ ಅಲ್ಲಿ. ಯುದ್ಧ ಮಾಡಬೇಕಾದರೆ ಸುಗ್ರೀವನ ಸೈನ್ಯವೇ ಬೇಕು, ಸುಗ್ರೀವನ ಮೂಲಕವೇ ಆಗಬೇಕು ಎಲ್ಲಾ ಕಾರ್ಯಗಳು ಕೂಡ. ಈಗ ತಾನೇ ಶತ್ರುಪಕ್ಷದಿಂದ ಬಂದವನೊಬ್ಬನ ಸಲುವಾಗಿ ಸುಗ್ರೀವನನ್ನು ಬಿಡೋಕ್ಕೆ ಸಾಧ್ಯವಾ? ಮತ್ತು ಸುಗ್ರೀವ ಹಿತೈಷಿಯೇ ಹೌದು. ರಾಮ ತುಂಬ ಜಾಣ್ಮೆಯಿಂದ ಈ ಸನ್ನಿವೇಶವನ್ನು ನಿಭಾಯಿಸ್ತಾನೆ.

ಹನುಮಂತನೇ ಮೊದಲಾದ ಉಳಿದ ವಾನರ ನಾಯಕರನ್ನು ಸಂಭೋದನೆ ಮಾಡಿ ರಾಮನು ಹೀಗೆ ಹೇಳಿದನಂತೆ, ‘ಕೇಳಿದಿರಲ್ವಾ, ಕಪಿರಾಜನ ಮಾತುಗಳು ನೀತಿ, ಯುಕ್ತಿ ಯುಕ್ತವಾದ ಮಾತುಗಳು. ನೋಡಿ, ನಾನು ಏನೋ ತೀರ್ಮಾನ ಮಾಡುವುದಕ್ಕಿಂತ ನೀವೆಲ್ಲ ನಿಮ್ಮ ನಿಮ್ಮ ಅಭಿಪ್ರಾಯ ಹೇಳುವುದು ಒಳ್ಳೆಯದು. ಯಾಕೆ ಹೇಳಬೇಕು ಅಂದರೆ, ಮಿತ್ರನಾದವನು, ಹಿತೈಷಿಯಾದವನು, ಔನ್ನತ್ಯವನ್ನು ಬಯಸುವವನು ಇಂತಹ ಸಂದರ್ಭ ಬಂದಾಗ ಸಲಹೆ ಕೊಡುವ ಸಾಮರ್ಥ್ಯವಿದ್ದರೆ ಸಲಹೆ ಕೊಡಬೇಕು. ಕರ್ತವ್ಯ ಅದು. ಮೌನಿಯಾಗಬಾರದು, ತನ್ನ ಅಭಿಪ್ರಾಯವನ್ನು ಪ್ರಕಟಪಡಿಸದೇ ಇರಬಾರದು. ಹಾಗಾಗಿ ನೀವುಗಳು ನನ್ನ ಹಿತೈಷಿಗಳು, ಅಭಿಪ್ರಾಯ ಕೊಡಲಿಕ್ಕೆ ಸಮರ್ಥರೂ ಕೂಡ ಹೌದು ನೀವು. ಹಾಗಾಗಿ ಈಗ ನೀವು ಸುಮ್ಮನೆ ಕೂರೋದು ಸರಿಯಲ್ಲ. ಕಪಿರಾಜ ಪ್ರಾರಂಭ ಮಾಡಿದ್ದಾನೆ, ನೀವುಗಳು ಮುಂದುವರಿಸಿ ಎಂಬುದಾಗಿ ಹೇಳಿದ.

ಆಗ ಅವರೆಲ್ಲ ಗೌರವಪೂರ್ವಕವಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡನೆ ಮಾಡ್ತಾರೆ. ಮೊಟ್ಟ ಮೊದಲು ಅವರೆಲ್ಲ ರಾಮನಿಗೆ ಹೇಳಿದರಂತೆ,
‘ನಿನಗೆ ತಿಳಿಯದೇ ಇರುವುದು ಯಾವುದಿದೆ? ಮೂರು ಲೋಕದಲ್ಲಿ ನೀನರಿಯದ ಸಂಗತಿ ಯಾವುದಾದರೂ ಇದೆಯಾ? ನೀನು ಗೊತ್ತಿಲ್ಲದೇ ಕೇಳುವುದಲ್ಲ, ಗೊತ್ತಿದ್ದು ಕೇಳುವುದು. ಆದರೆ ಹೀಗೆ ಕೇಳಿ ನಮಗೆ ನೀನು ಬೆಲೆ ಕೊಡ್ತಾ ಇರುವುದು. ರಾಮನು ವಾನರರ ಹತ್ರ ಅಭಿಪ್ರಾಯ ಕೇಳಿದ ಎಂದು ಹೇಳಿದಾಗ ನಮ್ಮ ಗೌರವವನ್ನು ಪ್ರಪಂಚದಲ್ಲಿ ಹೆಚ್ಚು ಮಾಡುವಂತಹದ್ದು. ನೀನು ಸತ್ಯವ್ರತ, ಧರ್ಮಾತ್ಮ, ಶೂರ, ದೃಢ ವಿಕ್ರಮ, ನೀನು ಪರೀಕ್ಷೆಕಾರಿ (ದುಡುಕಿ ಏನೂ ಮಾಡುವಂತಹದ್ದಲ್ಲ, ಚಿಂತಿಸಿಯೇ ಹೆಜ್ಜೆ ಇಡತಕ್ಕಂತವನು), ಸ್ಮೃತಿಮಾನ್, ಒಳ್ಳೆಯ ನೆನಪಿನ ಶಕ್ತಿ ಉಳ್ಳವನು. ಇಷ್ಟೆಲ್ಲ ಇದ್ದರೂ ಕೂಡ, ನಿನ್ನವರು ಎಂದಾಗ ನೀನು ಪರವಶ. ತನ್ನ ಹಿತೈಷಿಗಳಿಗೆ ತನ್ನನ್ನು ತಾನೇ ಕೊಟ್ಟುಬಿಡುವವನು ನೀನು. ನಿನ್ನ ಸಲಹೆಗಾರರು ಒಬ್ಬರಾದ ಮೇಲೆ ಒಬ್ಬರು ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಲಿ. ಇಲ್ಲಿ ಮತಿಸಂಪನ್ನರು, ಸಮರ್ಥರು ಇದ್ದಾರೆ. ಅವರೆಲ್ಲ ಯುಕ್ತಿಯುತವಾಗಿ ಮಾತನಾಡುವುದಾದರೇ, ತರ್ಕಬದ್ಧವಾಗಿ ಮಾತನಾಡುವುದಾದರೆ ಮಾತನಾಡಲಿ’.

ಅಂಗದ, ಯುವರಾಜ, ಮಾತನಾಡುತ್ತಾ,”ವಿಭೀಷಣನ ಪರೀಕ್ಷೆ ಆಗಬೇಕು. ಶತ್ರುವಿನ ಕಡೆಯಿಂದ ಬಂದವನು ಅವನು. ಚಿಕ್ಕಪ್ಪ ಹೇಳಿದ ಹಾಗೆ ಅವನನ್ನು ಶಂಕಿಸಲೇ ಬೇಕು. ದುಡುಕಿ ವಿಶ್ವಾಸಕ್ಕೆ ಯೋಗ್ಯನಾಗಿ ಮಾಡಿಕೊಳ್ಳಬಾರದು. ಯಾಕೆಂದರೆ, ವಂಚನೆಯ ಬುದ್ಧಿಯುಳ್ಳ ಶತ್ರುಗಳು ತಾವು ಯಾರು ಎನ್ನುವುದನ್ನು ಮರೆಸಿ ಸಮಯ ಕಾದು ಕೊಂದುಬಿಡ್ತಾರೆ. ಅದಕ್ಕೆ ಅವಕಾಶ ಕೊಟ್ಟರೆ ಅನರ್ಥವಾದೀತು. ಹಿತೈಷಿಯೋ ಹಿತಶತ್ರುವೋ ಎನ್ನುವುದನ್ನು ಪರೀಕ್ಷೆ ಮಾಡಬೇಕಾಗಿದೆ.” ಅಂಗದನ ಮಾತು ಸುಗ್ರೀವ ಹೇಳಿದಕ್ಕಿಂತ ಸ್ವಲ್ಪ ಬೇರೆ ಅಷ್ಟೇ. ಅಂಗದನ ಪ್ರಕಾರ ವಿಭೀಷಣನನ್ನು ಪರೀಕ್ಷೆ ಮಾಡಿ ಅವನಲ್ಲಿ ಗುಣವನ್ನು ಕಂಡರೆ ಸ್ವೀಕಾರ ಮಾಡೋಣ. ದೋಷ ಕಂಡರೆ ಬಿಟ್ಟುಬಿಡೋಣ.

ಇನ್ನು ಶರಭ ಹೆಳಿದ್ದೇನು, “ಇವನ ಹಿಂದೆ ಗುಪ್ತಚರರನ್ನು ಇಡೋಣ. ಆ ಗುಪ್ತಚರ ತುಂಬಾ ಸೂಕ್ಷ್ಮ ಬುದ್ಧಿಯವನು ಆಗಿರಬೇಕು. ಅವನ ಮೂಲಕವಾಗಿ ಇವನು ಎಂತವನು ಅಂತ ಗೊತ್ತಾದ ಮೇಲೆ ಸ್ವೀಕಾರ ಮಾಡಲಿಕ್ಕೆ ಯೋಗ್ಯನಾದರೆ ಸ್ವೀಕಾರ ಮಾಡೋಣ, ದಂಡನೆಗೆ ಯೋಗ್ಯನಾಗಿದ್ದರೆ ದಂಡನೆ ಕೊಡೋಣ.” ಜಾಂಬವಂತ, ಅದೂ ಪ್ರಧಾನ ಮಂತ್ರಿ, ಹೇಳಿದ, “ಬದ್ಧ ವೈರಿ ರಾವಣ, ಪಾಪಿ ಕೂಡ ಹೌದು, ಮೋಸಗಾರ ಕೂಡ ಹೌದು. ವಿಭೀಷಣ ಅಲ್ಲಿಂದ ಬಂದಿದ್ದಾನೆ, ಅದೂ ಯಾವ ಹೊತ್ತಿನಲ್ಲಿ ಬಂದಿದ್ದಾನೆ. ದೇಶ ಮತ್ತು ಕಾಲ ಸರಿ ಇಲ್ಲ. ಯುದ್ಧ ಭೂಮಿ ಇದು ಈ ಜಾಗದಲ್ಲಿ ಬಂದು ಶರಣಾಗತಿ ಆಗ್ತಾರಾ ಯಾರಾದರೂ? ಈ ಹೊತ್ತಿನಲ್ಲಿ ಸೇರಿಕೊಳ್ತಾರಾ ಯಾರಾದರೂ? ಇನ್ನೇನು ಯುದ್ಧ ಪ್ರಾರಂಭ ಆಗ್ತಾ ಇದೆ, ಈ ಹೊತ್ತಿನಲ್ಲಿ ಇದು ಸಹಜ ಅಲ್ಲ. ಹಾಗಾಗಿ ಅವನು ಬಂದ ಸಮಯವೂ ಸರಿ ಇಲ್ಲ, ಸ್ಥಳವೂ ಸರಿ ಇಲ್ಲ. ಶಂಕೆ ನನಗೆ.” ಜಾಂಬವಂತ ಅಭಿಪ್ರಾಯ ಕೊಟ್ಟರೆ ಬದಲಾಗುವುದು ಕಷ್ಟ. ಹನುಮಂತ, ಸುಗ್ರೀವ, ಅಂಗದ ಇವರಿಗಿಂತ ಹೆಚ್ಚಿನ ತೂಕ ಜಾಂಬುವಂತನ ಮಾತಿಗಿದೆ. ಜಾಂಬವಂತ ಗುರುಸ್ಥಾನದಲ್ಲಿ ಇರುವಂತವನು, ಮಾರ್ಗದರ್ಶನ ಮಾಡುವಂತವನು. ಜಾಂಬವಂತ ಹೇಳಿದ್ದು ರಾಜಶಾಸನದ ದೃಷ್ಟಿಯಲ್ಲಿ ಸರಿ ಇದೆ, ಗುಣವತ್ತಾಗಿ ಇದೆ, ದೋಷವಿಲ್ಲ.

ಮೈಂದ, ಅಶ್ವಿನಿ ದೇವತೆಗಳ ಮಕ್ಕಳಲ್ಲಿ ಒಬ್ಬ, ಹೇಳಿದ, “ಒಂದು ಕೆಲಸ ಮಾಡೋಣ, ಅವನನ್ನು ಕೂರಿಸಿ ಪ್ರಶ್ನೆ ಮಾಡೋಣ, ಮಧುರವಾಗಿ, ಉಪಾಯವಾಗಿ ಮಾತನಾಡಿಸೋಣ. ಅವನ ಮನಸ್ಸು, ಅವನ ಉದ್ದೇಶ ನಮಗೆ ಗೊತ್ತಾಗುತ್ತದೆ. ದುಷ್ಟನೋ ಅದುಷ್ಟನೋ ಅನ್ನೋದು ನಿಶ್ಚಯ ಆದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳೋಣ.” ಹೀಗೆ ಎಲ್ಲರೂ ವಿಭೀಷಣನನ್ನು ಸ್ವೀಕರಿಸಲಿಕ್ಕೆ ಒಪ್ಪಿಗೆ ಕೊಡಲಿಲ್ಲ. ವಿಭೀಷಣನಿಗೆ ಎಲ್ಲ ಪರಿಸ್ಥಿತಿಗಳು ವಿರೋಧವಾಗಿವೆ.

ಆಗ ಸಂಸ್ಕಾರ ಸಂಪನ್ನನಾದ ಹನುಮಂತ ರಾಮನಿಗೆ ಹೇಳಿದ, “ನಿನ್ನನ್ನು ಮೀರಿಸಲಿಕ್ಕೆ ಯಾರಿಗೂ ಸಾಧ್ಯ ಇಲ್ಲ. ಮತಿಶ್ರೇಷ್ಠನೇ, ಸಾಕ್ಷಾತ್ ಬೃಹಸ್ಪತಿ ಬಂದರೂ ನಿನ್ನೆದುರು ಮಾತನಾಡಲಿಕ್ಕೆ ಸಾಧ್ಯ ಇಲ್ಲ ಆದರೂ ಮಾತನಾಡುತ್ತೇನೆ. ನಾನು ಚಪಲಕ್ಕಾಗೋ, ವಾದಕ್ಕಾಗೋ, ಸ್ಪರ್ಧೆಗಾಗೋ ಮಾತನಾಡುತ್ತಾ ಇಲ್ಲ. ಕಾರ್ಯದ ಗೌರವ ನನ್ನನ್ನು ಮಾತನಾಡಿಸುತ್ತಾ ಇದೆ. ಇದ್ದದ್ದನ್ನು ಇದ್ದ ಹಾಗೆ ಮಾತ್ರವಲ್ಲ, ಕಂಡದ್ದನ್ನು ಕಂಡ ಹಾಗೆ ಕೂಡ ಮಾತನಾಡುತ್ತಾ ಇದ್ದಾನೆ. ರಾಮನ ಗೌರವಕ್ಕಾಗಿ ಮಾತನಾಡುತ್ತಾ ಇದ್ದೇನೆ. ಇಲ್ಲಿಯವರೆಗೆ ನಿನ್ನ ಸಚಿವರು, ವಿಭೀಷಣನನ್ನು ಸ್ವೀಕಾರ ಮಾಡಬೇಕೋ ಬೇಡವೋ, ಲಾಭ ಇದೆಯೋ ನಷ್ಟ ಇದೆಯೋ ಎಂಬ ಬಗ್ಗೆ, ವಿಷಯವನ್ನು ಮಂಡನೆ ಮಾಡಿದ್ರೋ ಅದನ್ನು ನಾನು ಒಪ್ಪುವುದಿಲ್ಲ. ಆ ಮತುಗಳಲ್ಲಿ ದೋಷ ಕಾಣ್ತಾ ಇದೆ. ಆ ಮಾತುಗಳು ಹೊಂದಿಕೊಳ್ಳುವುದಿಲ್ಲ. ಆ ಮಾತುಗಳನ್ನು ಕಾರ್ಯನ್ವಯ ಮಾಡಲಿಕ್ಕೆ ಸಾಧ್ಯ ಇಲ್ಲ. ಪರೀಕ್ಷೆ ಹೇಗೆ ಮಾಡೋದು? ಯಾವುದಾದರೂ ಜವಾಬ್ದಾರಿಯನ್ನು ಕೊಟ್ಟರೆ ಮಾತ್ರ ಪರೀಕ್ಷೆ ಮಾಡಲಿಕ್ಕೆ ಸಾಧ್ಯ! ಜವಾಬ್ದಾರಿ ಕೊಡಬೇಕಾದರೆ ಪರೀಕ್ಷೆ ಮಾಡಬೇಕು”

ಪರೀಕ್ಷೆ ಮಾಡಲಿಕ್ಕೆ ಬೇರೆ ದಾರಿಗಳಿಲ್ಲ. ಈಗ ಸನ್ನಿವೇಶ ಯಾವುದು ಅಂದ್ರೆ ಯುದ್ಧ ಮುಂದಿದೆ. ಇಲ್ಲಿ ಸಮಯಾವಕಾಶ ಈಗ ಇಲ್ಲ. ಅಪಾಯ ಇಲ್ಲದ ಜವಾಬ್ದಾರಿಗಳೇ ಇಲ್ಲ. ಹಾಗಿರುವಾಗ ಹೊಣೆಗಾರಿಕೆ ಕೊಡದೇ ಅವನು ಎನು ಅಂತ ಪತ್ತೆ ಮಾಡಲಿಕ್ಕೆ ಸಾಧ್ಯ ಇಲ್ಲ. ಇನ್ನು ಶರಭನ ಸಲಹೆ, ಗುಪ್ತಚರರನ್ನು ಇಟ್ಟು ಪತ್ತೆ ಮಾಡು. ಎಲ್ಲೊ ದೂರದಲ್ಲಿ ಇರುವಾಗ ಗುಪ್ತಚರನನ್ನು ಇಡಬಹುದು. ಇಲ್ಲೇ ಪಕ್ಕದಲ್ಲಿ ಇರುವಾಗ ಹೇಗೆ ಇಡೋದು? ಪತ್ನಿ ಮಕ್ಕಳನ್ನು ಬಿಟ್ಟು ಇಲ್ಲೇ ಬಂದಿದ್ದಾನೆ ಹಾಗಿರುವಾಗ ಗುಪ್ತಚರನನ್ನು ಹೇಗೆ ಇಡೋದು? ಅಷ್ಟು ಸಮಯಾಕಾಶವಿಲ್ಲ. ಅವನು ಬಂದು ನಿಂತಾಗಿದೆ. ಜಾಂಬುವಂತ ಹೇಳಿದ ಪ್ರಕಾರ ಬಂದ ಸಮಯ ಸ್ಥಳ ಸರಿ ಇಲ್ಲ ಅಂತ. ನಮ್ಮ ಜಾಂಬವಂತ ಹೇಳಿದ್ದು ಸರಿ ಆದರೂ ಕೂಡ ನನ್ನ ಮನಸ್ಸು ಬೇರೆ ಹೇಳ್ತಾ ಇದೆ. ಯಾರಿಗೆ ಯಾವ ಸಮಯ ಸರಿ ಯಾವ ಸ್ಥಳ ಯೋಗ್ಯ ಅಂತ ನಿರ್ಣಯ ಮಾಡಲಿಕ್ಕೆ ನಿರ್ದಿಷ್ಟವಾದ ಯಾವುದೇ ಮಾನದಂಡ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ತರಹ ಇರಬಹುದು.” medical shop ಗಳಲ್ಲಿ ಔಷಧಿಗಳೂ ಇರ್ತವೆ. ಅವುಗಳನ್ನು ಹೀಗೆ ಹಂಚಬಹುದಾ? ಸಾಧ್ಯ ಇದೆಯಾ? diabetes ಇದ್ದ ಎಲ್ಲರಿಗೂ ಒಂದೇ ತರಹದ ಔಷಧಿಯನ್ನು ಕೊಡಬಹುದಾ? ಹಾಗೆಯೇ ಯೋಗ ಕೂಡ. ಎಲ್ಲರಿಗೂ ಒಂದೇ ಆಸನ ಲಾಭ ಕೊಡಬಹುದಾ? ಇಲ್ಲ ತಾನೇ. ಮುಂದುವರಿಸ್ತಾ ಹನುಮಂತ ಹೇಳ್ತಾನೆ, “ವಿಭೀಷಣನ ದೃಷ್ಟಿಯಿಂದ ಕಾಲ ದೇಶ ಸರಿ ಇದೆ. ಯಾಕೆ ಸರಿ ಇದೆ ಅಂದ್ರೆ, ಸನ್ನಿವೇಶ ಯಾವುದು? ಯುದ್ಧ ಸನ್ನಿವೇಶ. ವಿಭೀಷಣ ರಾವಣ ದೌರಾತ್ಮ್ಯವನ್ನು ಕಂಡಿದಾನೆ, ದೌಷ್ಟ್ಯವನ್ನು ಕಂಡಿದ್ದಾನೆ. ನಿನ್ನಲ್ಲಿ ರಾವಣನಲ್ಲಿ ಎದುರಿಸುವಂತಹ, ನಿಗ್ರಹ ಮಾಡುವಂತಹ ಚೈತನ್ಯ ಇದೆ. ಅದು ಅರ್ಥ ಆದ ಕಾರಣ ಈಗ ಬಂದಿದ್ದಾನೆ. ಇದೇ ಸರಿಯಾದ ಸಂದರ್ಭ ವಿಭೀಷಣ ಬರಲಿಕ್ಕೆ. ರಾವಣನ ದುಷ್ಟತನ ಮತ್ತು ನಿನ್ನಲ್ಲಿಯ ಪರಾಕ್ರಮ ಎರಡನ್ನೂ ಒಟ್ಟಿಗೆ ನೋಡ್ತಾ ಇದ್ದಾನೆ. ಹಾಗಾಗಿ ಈಗ ಮತ್ತು ಇಲ್ಲಿ ಬಂದಿದ್ದೇ ಸರಿ. ಈಗಲೇ ಉಪಯುಕ್ತ ಅವನು. ಅವನು ಕೊಡುವ ಒಂದೊಂದು ಮಾಹಿತಿ ಕಪಿಸೈನ್ಯಕ್ಕೆ ಅತ್ಯಂತ ಉಪಯೋಗವಾಗುವಂತಹದ್ದು. ಅವನ ಬುದ್ಧಿಯ ದೃಷ್ಟಿಯಿಂದ ಇದು ಸರಿ ಇದೆ.” ಲಂಕೆಯಲ್ಲಿ ಹನುಮಂತ ವಿಭೀಷಣನನ್ನು ನೋಡಿದ್ದಾನೆ. ಮನೆಯಲ್ಲಿ, ರಾವಣನ ಆಸ್ಥಾನದಲ್ಲಿ ರಾವಣ ಮತ್ತು ವಿಭೀಷಣನ ವಾಕ್ ಸಮರವನ್ನು ನೋಡಿದ್ದಾನೆ. ಮಾತ್ರವಲ್ಲ ಇರುವಷ್ಟು ಸಮಯದಲ್ಲಿ ಬೇಕಾದಷ್ಟು ಮಾಹಿತಿಗಳನ್ನು ಸಂಗ್ರಹ ಮಾಡಿದ್ದಾನೆ. ಹಾಗಾಗಿ ವಿಭೀಷಣನ ಚಿಂತನ ಲಹರಿ ಮತ್ತು ಬುದ್ಧಿಯ ಓಟ ಆ ದೃಷ್ಟಿಯಿಂದ ನೋಡಿದರೆ ಹೀಗೆ ಮಾಡುವುದೇ ಸರಿ. ರಾವಣನನ್ನು ಬಿಟ್ಟು, ಧರ್ಮ ಅಧರ್ಮದ ಪ್ರಶ್ನೆ ಬಂದಾಗ, ಅವನು ಇಲ್ಲಿ ಬರುವುದೇ ಸರಿ. ಆಮೇಲೆ ಹನುಮಂತ ಮೈಂದನ ಸಲಹೆಯ ಬಗ್ಗೆ ಹೇಳ್ತಾನೆ.

ಮೈಂದ ಹೇಳಿದ ಪ್ರಕಾರ ವಿಭೀಷಣನಲ್ಲಿ ಪ್ರಶ್ನೆ ಮಾಡೋಣ. ವಿಭೀಷಣನು ಕೂಡ ಬುದ್ಧಿವಂತ. ನಾವು ಅವನಲ್ಲಿ ಪ್ರಶ್ನೆಗಳನ್ನು ಕೇಳಲಿಕ್ಕೆ ಶುರು ಮಾಡಿದರೆ ಅವನಿಗೆ ಏನೆನ್ನಿಸಬಹುದು. ಸಮರ್ಪಣಾ ಭಾವದಿಂದ ಬಂದಾಗ ಇಂತಹ ಪ್ರಶ್ನೆಗಳನ್ನು ಮಾಡಲಿಕ್ಕೆ ಶುರುಮಾಡಿದ್ರೆ ಅವನ ಮನಸ್ಸು ಹಾಳಾಗುವುದಿಲ್ವಾ? ಒಂದು ವೇಳೆ ವಿಭೀಷಣ ಸರಿಯಾದ ಜನ ಆಗಿದ್ದರೆ ಅವನ ಮನಸ್ಸಿಗೆ ಆಘಾತ ಆಗಬಹುದು, ಪರಿಣಾಮ ಬೀರಬಹುದು. ಅದೂ ಅಲ್ಲದೆ ಪರರ ಭಾವ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಅಂತರ್ಭಾವ ಬೇರೆ ಇರಬಹುದು. ಆಡು ಹಾಡು ಪಾಡು ಬೇರೆ ಇರಬಹುದು. ಗುರುತಿಸಲಿಕ್ಕೆ ಕಷ್ಟ ಆಗಬಹುದು. ನಾನು ನೋಡಿದಷ್ಟಿಂದ ಅವನ ಬಗ್ಗೆ ಈಗಲೇ ಹೇಳಬಹುದು. ಈ ವರೆಗೆ ವಿಭೀಷಣ ಮಾತನಾಡಿದಾಗ ನನ್ನ ಕಣ್ಣಿಗೆ ದುಷ್ಟಭಾವ ಗೋಚರಿಸಲಿಲ್ಲ. ಹನುಮಂತ ಈ ಮಾತನ್ನು ಹೇಳಿದ್ದು ತುಂಬಾ ಆತ್ಮವಿಶ್ವಾಸದಿಂದ. ರಾಮ ಹೇಗೆ ಹನುಮಂತನನ್ನು ನೋಡಿದಾಗ, ಇವನು ಏನು ಕಲಿತಿರಬಹುದು ಏನು ಕಲಿತಿಲ್ಲ ಅಂತ ತಿಳಿದುಕೊಂಡ ಹಾಗೇ, ಹಾಗೇ ಅಂತಹ ಮೇಧೆಯಿಂದ ಆತ್ಮವಿಶ್ವಾಸದಿಂದ ಹನುಮಂತ ಹೇಳ್ತಾ ಇದ್ದಾನೆ. ಮುಖವು ಪ್ರಸನ್ನವಾಗಿದೆ, ನಿರ್ಮಲವಾಗಿದೆ ಹಾಗಾಗಿ ನನಗೆ ಸಂಶಯವಿಲ್ಲ. ಒಬ್ಬ ದುಷ್ಟನ ಮುಖ ಹೀಗಿರುವುದಿಲ್ಲ.ಒಳಗೊಳಗೇ ಹುಳುಕು ಕೊಳಕು ಕೊಂಕು ಇದ್ದೇ ಇರ್ತದಲ್ಲವಾ? ಹಾಗಾಗಿ ಅವನಿಗೆ ಶಂಕೆ ಇದ್ದೇ ಇರ್ತದೆ. ಹಾಗಾಗಿ ಅವನು‌ ನಿಶ್ಚಿಂತನಾಗಿ ಈ ಮುಖದಲ್ಲಿ ಇರೋಕ್ಕೆ ಸಾಧ್ಯ ಇಲ್ಲ.

ವಿಭೀಷಣನ ವಾಣಿ ದುಷ್ಟವಲ್ಲ. ವಿಭೀಷಣನ ವಾಣಿಯಲ್ಲಿ ಹುಡುಕಿದರೂ ಕೂಡ ದೋಷವಿಲ್ಲ. ನನಗೆ ಸಂಶಯವಿಲ್ಲ, ವಿಭೀಷಣ ದುಷ್ಟನಲ್ಲ. ಎಷ್ಟೇ ಮುಚ್ಚಿಟ್ಟರೂ, ಈ ಹನುಮನಿಂದ ಮುಚ್ಚಿಡಲಿಕ್ಕೆ ಸಾಧ್ಯ ಇಲ್ಲ. ಹಾಗಾಗಿ ನಾವು ಮಾಡಬೇಕಾದ್ದನ್ನ ಕೂಡಲೇ ಮಾಡಬೇಕು. ಕಾಲ, ದೇಶಗಳಿಗೆ ಸರಿಯಾಗಿ ನಿರ್ಣಯ ತೆಗೆದುಕೊಳ್ಳಬೇಕು. ನನ್ನ ದೃಷ್ಟಿಯಿಂದ, ಪ್ರಭೂ ನಿನ್ನ ಪರಾಕ್ರಮವನ್ನು ಕಂಡು, ಅತ್ತ ಕಡೆ ರಾವಣನ ಮಿಥ್ಯಾವೃತ್ತ, ಅವನ‌ ಪಾಪದ ನಡತೆ ಮತ್ತು ಸುಳ್ಳು ನಡತೆಯನ್ನು ಕೂಡ ಗಮನಿಸಿ ವಾಲಿ ವಧೆಯನ್ನು‌ ಕೂಡ ಕೇಳಿ, ನಿನ್ನ ಸಾಮರ್ಥ್ಯವನ್ನು ತಿಳಿದು ತನ್ನ ರಾಜ್ಯವನ್ನು ಮುಂದೆಯಾದರೂ ಒಳ್ಳೆಯದು ಮಾಡಬೇಕು ಅಂತ, ಲಂಕಾ ರಾಜ್ಯದ ಉತ್ಕರ್ಷವನ್ನು ಬಯಸಿ ಅವನಿಲ್ಲಿಗೆ ಬಂದಿದ್ದಾನೆ. ಇಷ್ಟನ್ನು ಗಮನಿಸಿದಾಗ ವಿಭೀಷಣನನ್ನು ಸ್ವೀಕಾರ ಮಾಡಬೇಕು. ಅದು ನನ್ನ ಅಭಿಪ್ರಾಯ. ವಿಭೀಷಣನು ಕಪಟಿಯಲ್ಲ, ಅವನು‌ ಋಜು ಎನ್ನುವ ಕುರಿತು ಈ ಹನುಮನಿಗೆ ಎಷ್ಟು ಬುದ್ಧಿಯಿದೆಯೋ, ಅದರ ಮೇಲೆ ನನಗನ್ನಿಸಿದ್ದನ್ನು ಹೇಳಿದ್ದೇನ. ಇದು ನನ್ನ ಮತಿಗೆ ತಿಳಿದಿದ್ದು. ಉಳಿದದ್ದು‌ ನಿನ್ನ ಮತಿಗೆ ಸೇರಿದ್ದು. ನನ್ನ ಅಭಿಪ್ರಾಯ ಎಂಬುದಾಗಿ ಹನುಮಂತ ಒಬ್ಬನೇ ವಿಭೀಷಣನ ಪರವಾಗಿ ನಿಂತ. ಅಷ್ಟೂ ಜನರ ಸಂಧಯಗಳಿಗೆ ಉತ್ತರ ಕೊಟ್ಟ, ಖಂಡಿಸಿದ ಅದನ್ನು, ವಿಭೀಷಣನ ಪರವಾಗಿ ನಿಂತ. ರಾಮನಿಗೆ ಸಮಯ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ‌ ಒದಗುತ್ತಿದ್ದವನು ಹನುಮಂತ! ಇವನೊಬ್ಬನಲ್ಲದಿದ್ದರೆ ವಿಭೀಷಣನಿಗೂ ಕಷ್ಟ ಇದೆ, ರಾಮನಿಗೂ ಕಷ್ಟ ಇದೆ. ಎಲ್ಲರೂ ಬೇರೆ ತರಹ ಮಾತನಾಡಿದರೆ ಏನು ಮಾಡಬೇಕು ಪ್ರಭು ಆದವನು!

ವಾಯುಸುತನ ಮಾತನ್ನು ಕೇಳಿ ರಾಮನ ಮನಸ್ಸು ಪ್ರಸನ್ನವಾಯಿತು. ಬಳಿಕ, ಎಲ್ಲರ ಮಾತುಗಳನ್ನು ಕೇಳಿ, ಕೊಟ್ಟಕೊನೆಯಲ್ಲಿ ಹನುಮಂತನ ಮಾತುಗಳನ್ನು ಗಮನವಿಟ್ಟು ಕೇಳಿದಂತಹಾ ರಾಮನು ತನ್ನ ಆತ್ಮದಲ್ಲಿ ಏನಿದೆಯೋ, ಅದನ್ನು ಮಾತನಾಡ್ತಾನೆ. ‘ನನ್ನದೂ ಒಂದು ಅಭಿಪ್ರಾಯವಿದೆ ವಿಭೀಷಣನ ಕುರಿತು. ನೀವೆಲ್ಲಾ ಗಮನವಿಟ್ಟು ಕೇಳಬೇಕು. ಯಾಕಂದ್ರೆ ನೀವೆಲ್ಲ ನನ್ನ ಹಿತವನ್ನು ಬಯಸ್ತಕ್ಕಂತವರು. ಸಾರ್ವಕಾಲಿಕ ಸತ್ಯವನ್ನು ಮಾತಾಡ್ತಾನೆ, ತನ್ನ ಬಗ್ಗೆ ಮಾತಾಡ್ತಾನೆ ರಾಮ, ವಿಭೀಷಣನಿಗೆ ಸೀಮಿತವಾಗಿಯಲ್ಲ.
‘ಮಿತ್ರಭಾವದಿಂದ ಯಾರು ಬಂದು ಸೇರ್ತಾರೋ, ಅವರನ್ನು ನಾನು ಬಿಡಲಾರೆ. ಯಾರೇ ಆಗಲಿ, ಪ್ರೀತಿಯನ್ನು,ಮೈತ್ರಿಯನ್ನು ಬಯಸಿ ಬಂದರೆ, ಆಶ್ರಯವನ್ನು ಕೇಳಿ ಬಂದರೆ ನಾನು‌ ಬಿಡಲಾರೆ. ಅವರಲ್ಲಿ ದೋಷವೇ ಇರಬಹುದು. ಆದರೆ ಈ ರಾಮ ಅವರಲ್ಲಿ ದೋಷವಿದೆ ಎನ್ನುವ ಕಾರಣಕ್ಕೆ ಬಿಡುವವನಲ್ಲ. ಸ್ವೀಕಾರ ಮಾಡ್ತೇನೆ. ಇದು ಸತ್ಪುರುಷರ ಮಾರ್ಗ’.‌ ತನ್ನದೇ ಆದ ಶಾಶ್ವತ ನಿಲುವನ್ನು ಪ್ರಕಟಪಡಿಸ್ತಾನೆ ರಾಮ.
ಸುಗ್ರೀವ ಆ ಮಾತನ್ನು ಪುನಃ ಅವಲೋಕಿಸಿ , ಅವನಿಗೆ ಅದಕಿಂತಲೂ ಇನ್ನೂ ಸರಿಯೆನಿಸಿದ್ದನ್ನು ಹೇಳ್ತಾನೆ. ‘ ಆಯ್ತು ಪ್ರಭು, ಇವನು ಅತ್ಯಂತ ದುಷ್ಟನಾಗಿರಲಿ, ಆಗದೇ ಇರಲಿ. ಆದರೆ ಇಂತಹಾ ಮಹಾಸಂಕಷ್ಟದಲ್ಲಿ ಸಿಕ್ಕಿರುವಂತಹ ಅಣ್ಣನನ್ನು ಬಿಟ್ಟು ಬಂದವನು ಮುಂದೆ ನಮ್ಮನ್ನು ಬಿಡುವುದಿಲ್ಲ ಎಂದು ಏನು ಧೈರ್ಯ?’.

ವಾನರಾಧಿಪತಿಯ ಮಾತನ್ನು ಕೇಳಿಸಿಕೊಂಡ ರಾಮ ಒಮ್ಮೆ ಎಲ್ಲರನ್ನೂ ನೋಡಿದನಂತೆ. ಸುಗ್ರೀವನ ಮಾತಿನಿಂದ ಯಾರ್ಯಾರಿಗೆ ಎಲ್ಲೆಲ್ಲಿ ಏನೇನು ಪರಿಣಾಮ ಆಗಿದೆ ಅಂತ. ಆಮೇಲೆ ಮುಗುಳ್ನಕ್ಕನಂತೆ. ಅವಸರವೇನೂ ಇಲ್ಲ, ಗಾಬರಿಯೂ ಇಲ್ಲ. ಮತ್ತೆ, ಲಕ್ಷ್ಮಣನಿಗೆ ಹೇಳಿದನಂತೆ, ‘ ನೋಡು ಲಕ್ಷ್ಮಣ, ಅನೇಕ ಶಾಸ್ತ್ರಗಳನ್ನು ಅಧ್ಯಯನ ಮಾಡದೇ ಇದ್ದರೆ, ಹಿರಿಯರನ್ನು, ಗುರುಗಳನ್ನು ಸೇವಿಸದೇ ಇದ್ದರೆ ಸುಗ್ರೀವ ಮಾತನಾಡಿದ ಹಾಗೆ ಮಾತನಾಡಲಿಕ್ಕೆ ಸಾಧ್ಯವಾಗೋದಿಲ್ಲ. ಹಾಗಿದ್ರೆ ಮಾತ್ರ, ಈ ಮಾತು ಆಡಲಿಕ್ಕೆ ಸಾಧ್ಯ’ ಅಂತ ಸುಗ್ರೀವನನ್ನು ಸಮಾಧಾನ ಮಾಡಿ, ‘ಆದರೆ ಸುಗ್ರೀವ, ಇದಕ್ಕಿಂತ ಸೂಕ್ಷ್ಮವಾದ ಒಂದು ವಿಷಯವಿದೆ. ಅದು ರಾಜನೀತಿಯಲ್ಲಿಯೂ ಕಾಣಬಹುದು, ಸಾಮಾನ್ಯ ಜನರ ಜೀವನದಲ್ಲಿಯೂ‌ ಕೂಡ ನಾವದನ್ನು ಕಂಡುಕೊಳ್ಳಬಹುದು.

ರಾಜನೀತಿಯಲ್ಲಿ, ಸೋದರರು ಸ್ಪರ್ಧಿಗಳು!ನೋಡು ಸುಗ್ರೀವ, ಹತ್ತಿರದ ದೇಶದವರು ಅಥವಾ ಹತ್ತಿರದ ಬಂಧುಗಳು.. ಇವರಲ್ಲಿ ಮೈತ್ರಿ ವಿಶೇಷ ಹೊರತು ಶತ್ರುತ್ವ ವಿಶೇಷವಲ್ಲ. ಇದು ಹೇಗೆ ಸತ್ಯವೋ ಹಾಗೇ ಮುಂದುವರೆದರೆ, ಕೆಲವು ಬಾರಿ ಏನಾಗ್ತದೆ? ಈಗ ತಮ್ಮನೋ ಅಥವಾ ಮಿಕ್ಕುಳಿದವನೋ, ನಿಜವಾಗಿ ಹಿತೈಷಿಯಾಗಿರ್ತಾನೆ. ಆದರೆ, ದೊರೆ ಕೆಡುಕನಾಗಿದ್ದಾಗ ಅವನು ಅರ್ಥ ಮಾಡಿಕೊಳ್ಳುವುದಿಲ್ಲ ಅದನ್ನು.’
ವಿಭೀಷಣನ ವಿಷಯದಲ್ಲಿ ಯಾವುದು ಸತ್ಯವೋ, ಅದನ್ನೇ ಹೇಳ್ತಾ ಇದ್ದಾನೆ ರಾಮ ಇಲ್ಲಿ! ಆಶ್ಚರ್ಯ!
‘ಎಲ್ಲಾ ತಮ್ಮಂದಿರೂ ದ್ರೋಹ ಬಗೆಯಬೇಕಂದಿಲ್ಲ. ಅಣ್ಣನ ಶ್ರೇಯಸ್ಸನ್ನು ಹಾರೈಸತಕ್ಕಂತವರು ಇರ್ತಾರೆ. ಅವರು ತಮ್ಮ ಅಣ್ಣಂದಿರಿಗೆ ಒಳ್ಳೆಯದು ಮಾಡ್ತಾ ಇರ್ತಾರೆ, ಆದರೆ ದೊರೆಯ ಸ್ಥಾನದಲ್ಲಿರುವ ಅಣ್ಣಂದಿರು ಕೆಟ್ಟವರಾಗಿದ್ದಾಗ, ಸಂಶಯಪಡ್ತಾರೆ ಕೆಲವು ಬಾರಿ. ಆಗ ಉಪಾಯವಿಲ್ಲದೆ ಬಿಟ್ಟು ಬರಬೇಕಾಗ್ತದೆ. ನಂಬಿಕೆ ಇಲ್ಲದಾಗ ತನ್ನ ಮೇಲೆ, ಅಲ್ಲಿ ಸಂಬಂಧ ಕೂಡಿ ಬರದೇ ಇದ್ದಾಗ ಬಿಟ್ಟು ಬರುವಂತೆ ಆಗಬಹುದು! ಇದು ಕೂಡ ಇದೆ ಪ್ರಪಂಚದಲ್ಲಿ’ ಎನ್ನುವಾಗ ಯಥಾವತ್ತಾಗಿ ವಿಭೀಷಣನ ಸ್ಥಿತಿಯನ್ನು ರಾಮನು ಹೇಳಿದ್ದಾನೆ.
‘ಮತ್ತೆ ನೀನಾಗ ಹೇಳಿದೆಯಲ್ಲ, ಶತ್ರುವಿನ ಸೈನ್ಯವನ್ನು ಸ್ವೀಕಾರ ಮಾಡಬಾರದು, ಇದು ಶತ್ರುಬಲ ಅಲ್ಲ. ಸೋದರರು, ಅವರೇ ಪರಸ್ಪರ ಶತ್ರುಗಳಾಗಿರ್ತಾರೆ ಹೆಚ್ಚಿನ ಬಾರಿ. ಹಾಗಾಗಿ ನಮಗಿದು ಮಿತ್ರಬಲವೇ ಆಗ್ತದೆ. ಶತ್ರುವಿನ ಶತ್ರು ಮಿತ್ರ. ಹಾಗಾಗಿ ರಾಜಶಾಸ್ತ್ರದ ದೃಷ್ಟಿಯಿಂದ ನೋಡಿದರೂ ಶತ್ರುಬಲ ಅಲ್ಲ ಅಂತ ಹೇಳೋದಕ್ಕೆ ಕಾರಣವಿದೆ. ಅವನೇನು ಅಯೋಧ್ಯೆಯ/ಕಿಷ್ಕಿಂಧೆಯ ಸಿಂಹಾಸನಕ್ಕೆ ಸ್ಪರ್ಧಿಯಲ್ಲ. ಹಾಗಿರುವಾಗ ವಿಭೀಷಣನನ್ನು ನಾವು ಸ್ವೀಕಾರ ಮಾಡಬೇಕು. ಯಾಕಂದ್ರೆ ಲಂಕಾ ರಾಜ್ಯದ ಉತ್ಕರ್ಷವನ್ನು ಬಯಸಿ ಬಂದಿರಬಹುದು ಅವನು. ಸಾಧ್ಯತೆಯಿದೆ. ಲಂಕೆಗೆ ಭವಿಷ್ಯವಾಗಬೇಕು ಎನ್ನುವ ಕಾರಣಕ್ಕೆ ಅವನು ಬಂದಿರಬಹುದು. ಸ್ವೀಕಾರ ಮಾಡಬೇಕು ಅವನನ್ನು.’ ಎಂಬುದಾಗಿ ಹೇಳಿದ.

ಕೊನೆಯಲ್ಲಿ ಹನುಮಂತನ ಹಾಗೆ ತನ್ನ reading ಕೊಡ್ತಾನೆ ರಾಮ. ಒಂದು ವೇಳೆ ವಿಭೀಷಣ ರಾವಣನ ಪೈಕಿಯವನಾಗಿದ್ದು ರಾವಣನ ಜೊತೆಗೆ ಒಳ್ಳೆಯ ಬಾಂಧವ್ಯವಿದ್ದಿದ್ದರೆ ಯಾವ ಸ್ವರ ಇರಬೇಕಿತ್ತೋ ಆ ಸ್ವರ ಇಲ್ಲಿಲ್ಲ. ಈ ಅವ್ಯಗ್ರತೆ, ಈ ಪ್ರಹರ್ಷ ನಕಲಿಯಲ್ಲ‌. ಕೊಟ್ಟ ಕೊನೆಯದಾಗಿ ಈ ಸ್ವರದಲ್ಲಿ ಬೇರೆ ದೋಷವು ಯಾವುದೂ ಇಲ್ಲ. ಭೀತಿಯಿದೆ ಅಷ್ಟೆ. ಬೇರೇನೂ ಇಲ್ಲ ಇಲ್ಲಿ. ವಿಭೀಷಣನನ್ನು ನಾವು ಸ್ವೀಕಾರ ಮಾಡಬೇಕು. ಎಂಬುದಾಗಿ ಹೇಳಿ ಕೊನೆಯಲ್ಲಿ ಸುಗ್ರೀವ ಮುಟ್ಟಿ ನೋಡ್ತಕ್ಕಂಥಾ ಒಂದು ಮಾತನ್ನಾಡ್ತಾನೆ. ‘ಸುಗ್ರೀವ, ಎಲ್ಲಾ ಸೋದರರೂ ಭರತನಂತೆ ಇರೋದಿಲ್ಲ’
ಸೋದರನಾದ ಮಾತ್ರಕ್ಕೆ ಸೋದರನಿಂದ ಅನ್ಯಾಯವಾಗಬಾರದು ಅಂತ ಇಲ್ಲ, ನೀನೇ ಉದಾಹರಣೆ ಎಂಬುದನ್ನು ಬೇರೆ ರೀತಿಯಲ್ಲಿ ಹೇಳ್ತಾನೆ ರಾಮ.
‘ಎಲ್ಲಾ ಮಿತ್ರರೂ ಸುಗ್ರೀವನಂತಲ್ಲ’ ಅಂತಲೂ ಹೇಳ್ತಾನೆ. ‘ನನಗಾಗಿ ಸರ್ವಾರ್ಪಣೆ ಮಾಡಿ ನೊಇನು ಕಟಿಬದ್ಧನಾಗಿ ನಿಂತಿದ್ದೀಯೋ, ನಿನ್ನಂತಹ ಮಿತ್ರರೂ ಕೂಡ ದುರ್ಲಭ’ ಅಂತ ಮುಟ್ಟಿಸಿದ ಸುಗ್ರೀವನಿಗೆ!!
ಇದರ ಮೇಲೆಯೂ ಸುಗ್ರೀವನು ಎದ್ದು‌ ನಿಂತು, ನಮಸ್ಕಾರ ಮಾಡಿ, ಹೇಳಿದ್ದೇನು ಅಂದರೆ ‘ನನ್ನ ಪ್ರಕಾರ ಅವನು ಗುಪ್ತಚರನೇ ಹೌದು! ನಿಗ್ರಹವೇ ಮಾಡಬೇಕು ಅವನಿಗೆ. ಅದೇ ಸರಿ. ಕ್ರೂರಿ, ರಾವಣನ ತಮ್ಮ!’ ಅಂತ ದಡಕ್ಕನೇ ಹೇಳಿ ಸುಮ್ಮನಾಗಿಬಿಟ್ಟನಂತೆ ಮತ್ತೆ.

ರಾಮ ಏನೂ ಗಡಿಬಿಡಿ ಮಾಡದೇ, ಸಮಾಧಾನವಾಗಿ ಸುಗ್ರೀವ ಹೇಳುವುದನ್ನು ಕೇಳಿಕೊಂಡು ಅದರ ಮೇಲೆ ಏನು ಕೇಳಿದ? ಎನ್ನುವುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments