ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಒಳ್ಳೆಯವರ ನಡುವೆ ಕೆಟ್ಟವರಿರುವುದು ಸುಲಭವಲ್ಲ. ಒಳ್ಳೆಯತನದ ಗಾಳಿ ಎಲ್ಲೆಡೆಯೂ ಬೀಸುವಾಗ, ಎಲ್ಲರ ಕಣ್ಣು,ಬಾಯಿಯಿಂದ ಒಳಿತೇ ಬರುವಾಗ ತನ್ಮಧ್ಯದಲ್ಲಿ ಕೆಟ್ಟವರಾಗಿ ಇರಲಿಕ್ಕೆ ಸುಲಭವಲ್ಲ. ಕೆಟ್ಟವರು ಅನೇಕರ ನಡುವೆ ಒಳ್ಳೆಯವರು ಇರುವುದು ಸಾಧ್ಯವೇ ಇಲ್ಲ. ಯಾಕಂದ್ರೆ, ಕೆಟ್ಟ ವಾತಾವಾರಣ, ಯಾರ ಮುಖದಲ್ಲಿ ನೋಡಿದ್ರೂ ಕೆಟ್ಟ ಮಾತು, ಕೆಟ್ಟ ದೃಷ್ಟಿ, ಕೆಟ್ಟ ಹಾವ-ಭಾವಗಳು. ಹೀಗಿರುವಾಗ ಒಳಿತು ಉಳಿದುಕೊಳ್ಳುವುದಾದರೂ ಕೂಡ ಹೇಗೆ?
ಮೊದಲನೆಯದಕ್ಕೆ‌ ಮಂಥರೆ ಉದಾಹರಣೆ. ಮಂಥರೆ ಅಯೋಧ್ಯೆಯಲ್ಲಿ ಒಳ್ಳೆಯವರು ಅನೇಕರ ನಡುವೆ ಇರುವ ಕೆಟ್ಟವಳು.
ಸರಮೆ ಎರಡನೆಯ ವರ್ಗಕ್ಕೆ ಉದಾಹರಣೆ. ಕೆಟ್ಟವರು ಅನೇಕರ ಜೊತೆಗೆ ಇರುವ ಒಳ್ಳೆಯ ಬಳ್ಳಿ ಇವಳು. ಬಹಳ ಬಹಳ ಕಷ್ಟದ ವಿಷಯ ಅದು. ಆಕೆಯನ್ನು ರಾವಣ ಆಯ್ಕೆ ಮಾಡಿ ಕಳುಹಿಸಿ ಕೊಟ್ಟಿದ್ದಾನೆ, ‘ಹೇಗಾದ್ರೂ ಮಾಡಿ ಸೀತೆಯ ಮನವೊಲಿಸು, ನನ್ನ ವಶವಾಗುವಂತೆ ಮಾಡು’ ಎಂದು. ಅವಳು ಮಾಡ್ತಾ ಇರುವ ಕೆಲಸವೇ ಬೇರೆ.ಅವಳು ಸೀತೆಯನ್ನು ಸಂತೈಸುವ ಕೆಲಸ ಮಾಡ್ತಾ ಇದ್ದಾಳೆ, ಸೀತೆಯ ದೊಡ್ಡ ಅಭಿಮಾನಿಯಾಗಿ‌ ಬಿಟ್ಟಿದ್ದಾಳೆ. ನಿಜವಾದ ಅರ್ಥದಲ್ಲಿ ಸೀತೆಗೆ ಅವಳು ರಕ್ಷಕಿಯಾಗಿದ್ದಾಳೆ. ಹಾಗಾಗಿ ಅವಳದು ವಿಶೇಷವಾದ ಪಾತ್ರ. ರಾಕ್ಷಸ-ರಾಕ್ಷಸಿಯರಲ್ಲೂ ಒಳ್ಳೆಯ ಮನಸ್ಸಿನವರಿರಬಹುದು ಎನ್ನುವುದಕ್ಕೆ ವಿಭೀಷಣನ ನಂತರ ಇನ್ನೊಂದು ಉದಾಹರಣೆ ಸರಮಾ. ‘ರಮಾ’ ಅಂದ್ರೆ ಲಕ್ಷ್ಮಿ ‘ಸ’ ಅಂದ್ರೆ ಜೊತೆಗೇ ಇರ್ತಕ್ಕಂಥವಳು. ಸೀತೆಯೆಂದರೆ ಲಕ್ಷ್ಮಿ. ಆಕೆಯ ಜೊತೆಗೇ ಇರ್ತಕ್ಕಂಥವಳು ಅವಳು.

‘ಕಾದ ಭೂಮಿಯನ್ನು ಆಕಾಶವು ಮಳೆಯಿಂದ ತಂಪು ಮಾಡುವಂತೆ ಸರಮೆ ತನ್ನ ಮಾತಿನಿಂದ ಜಾತಸಂತಾಪಳಾದ ಸೀತೆಯನ್ನು ಸಂತೈಸಿದಳು’ ಎಂದು ವಾಲ್ಮೀಕಿಗಳು ಹೇಳ್ತಾರೆ.
ಸೀತೆ ರಾವಣನ ಮಾತಿನಿಂದ ಭ್ರಮೆಗೊಂಡಿದ್ದಳು. ಅವಳನ್ನು ಸಮಾಧಾನ ಮಾಡ್ತಾಳೆ. ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಪ್ರಿಯ ಸಖಿಗೆ ಪ್ರಿಯವನ್ನು ಉಂಟು ಮಾಡ್ಬೇಕು‌ ಎಂಬ ಕಾರಣಕ್ಕೆ ನಕ್ಕು ಒಂದು ಮಾತನ್ನು ಹೇಳ್ತಾಳೆ, ‘ನೀನು ಹುಂ ಎಂದರೆ ನಾನು ರಾಮನ ಬಳಿಗೆ ಹೋಗಿ ನಿನ್ನ ಸಂದೇಶವನ್ನು ಮುಟ್ಟಿಸಿ, ನೀನು ಚೆನ್ನಾಗಿದ್ದೀಯೆ ಅಂತ ರಾಮನಿಗೆ ತಿಳಿಸಿ ಯಾರಿಗೂ ಗೊತ್ತಾಗದಂತೆ ಅವನ ಸಂದೇಶವನ್ನು ತೆಗೆದುಕೊಂಡು ಮತ್ತೆ ನಿನ್ನ ಬಳಿಗೆ ಬರಬಲ್ಲೆ’. ನೋಡಿ ಧೈರ್ಯ ಅವಳಿಗೆ! ‘ಆಕಾಶಮಾರ್ಗದಲ್ಲಿ ನಾನು ಚಲಿಸುವಾಗ ನನ್ನ ಹಿಂದೆ ಬರಲಿಕ್ಕೆ ವಾಯುವಿಗೂ ಸಾಧ್ಯವಿಲ್ಲ, ಗರುಡನಿಗೂ ಸಾಧ್ಯವಿಲ್ಲ, ಅಷ್ಟು ವೇಗದಲ್ಲಿ‌ ನಾನು ಹೋಗಬಲ್ಲೆ. ಅದನ್ನು ಬಳಸಿಕೊಂಡು ಕ್ಷಣಮಾತ್ರದಲ್ಲಿ ರಾಮನ ಸಾನಿಧ್ಯವನ್ನು ಸೇರಿ ರಾಮನಿಗೆ ನಿನ್ನ ವಾರ್ತೆನ್ನರುಹಿ ಮರಳಿ ಬರ್ತೇನೆ’
ಸೀತೆಗಾಗಿ ಎಂತಹ ಕಷ್ಟಕ್ಕೂ, ಸಾಹಸಕ್ಕೂ ಸಿದ್ಧ ಸರಮಾ.

ಆಗ ಸೀತೆಯು ಸರಮೆಯನ್ನು ಕುರಿತು ಹೇಳ್ತಾಳೆ. ಈಗ ಮಾತು ಸ್ವಲ್ಪ ಮಧುರವಾಗಿದೆ ಅವಳದ್ದು. ಕೊಂಚ ಮೊದಲು ಶೋಕದಿಂದ ಕುಗ್ಗಿ ಹೋಗಿತ್ತು ಧ್ವನಿ. ಈಗ ಮಧುರ ಮಾತು ಬರ್ತಾ ಇದೆ. ‘ಗೊತ್ತು ನನಗೆ, ನನಗಾಗಿ ನೀನು ಗಗನವನ್ನಾದರೂ ಅಡರಬಲ್ಲೆ, ರಸಾತಲವನ್ನಾದರೂ ಸೇರಬಲ್ಲೆ, ಗೊತ್ತು. ಹಾಗೇ ನನಗಾಗಿ ನೀನು ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವುದನ್ನು ಕೂಡ ನಾನು ಬಲ್ಲೆ. ಮತ್ತು, ಸಾಮಾನ್ಯವಾಗಿ ಬೇರೆಯವರಿಗೆ ಮಾಡ್ಲಿಕ್ಕೆ ಸಾಧ್ಯ ಇಲ್ಲ, ನೀನು ಮಾತ್ರ ಮಾಡಬಲ್ಲೆ ಕೆಲವು ಸಂಗತಿಗಳು. ಅದನ್ನು ಕೂಡ ನಾನು ಬಲ್ಲೆ. ನೋಡು, ನನಗೆ ಪ್ರಿಯವನ್ನುಂಟು ಮಾಡ್ಬೇಕು ಅಂತ ಏನಾದ್ರೂ ನಿನ್ನ ಮನಸ್ಸಲ್ಲಿದ್ರೆ, ನಿನ್ನ ಮನಸ್ಸು ಸ್ಥಿರವಾಗಿದ್ರೆ, ಹೋಗಿ ಆ ಪಾಪಿ ರಾವಣ ಏನ್ಮಾಡ್ತಾ ಇದ್ದಾನೆ ನೋಡ್ಕೊಂಡು ಬಾ. ಮುಂದಿನ ಹೆಜ್ಜೆ ಏನವನದು ಎಂಬುದನ್ನು ತಿಳ್ಕೊಂಡು ಬರ್ತೀಯಾ? ಯಾಕೆಂದ್ರೆ ರಾವಣನೆಂದರೆ ಮಾಯಾವಿ, ಮೋಸವೇ ಅವನ ಬಲ. ಕ್ರೂರ ಅವನು. ತನ್ನ ಶತ್ರುವನ್ನು ಎಷ್ಟು ರೀತಿಯಿಂದ ಹಿಂಸೆ ಕೊಡ್ತಾನೆ ಎನ್ನುವುದಕ್ಕೆ ಲೆಕ್ಕವಿಲ್ಲ. ನೋಡು, ಏನು ಮಾಡಿದ ಈಗ? ಹೆಂಡವನ್ನು ಕುಡಿದವರಿಗೆ ಭ್ರಮೆ ಉಂಟಾಗ್ತದೆಯಂತೆ. ಆದರೆ ಇವನನ್ನು ನೋಡಿದರೆ ಸಾಕು, ಭ್ರಮೆ ಬರುವಂತೆ ಇದೆ ಅಂತ. ಇದು, ಕಂಡಕೂಡಲೇ ಬುದ್ಧಿ ಕೆಡ್ತಕ್ಕಂತೆ ಮಾಡುವ ಒಂದು ಜೀವ. ಪ್ರತಿನಿತ್ಯ ನನ್ನನ್ನು ಗೋಳು ಹೊಯ್ಕೊಳ್ತಾನೆ. ತಾನು ಬಂದು ಕೆಟ್ಟ ಮಾತಾಡೋದು, ಗದರೋದು ಎಲ್ಲಾ ಒಂದು‌ ಕಡೆಗಾದ್ರೆ, ಈ ರಾಕ್ಷಸಿಯರ ಮೂಲಕವಾಗಿ ನಿತ್ಯವೂ ನನಗೆ ಬೈಗುಳವೇ ಬೈಗುಳ, ಕಿರುಕುಳವೇ ಕಿರುಕುಳ. ಹಾಗಾಗಿ ನಾನು ಪ್ರತಿಕ್ಷಣವೂ ಉದ್ವಿಗ್ನಳಾಗಿರ್ತೇನೆ. ಏನು ಕಾದಿದೆಯೋ, ಯಾವಾಗ ಬಂದು ಇನ್ನೇನು ಮಾಡ್ತಾನೋ ಎನ್ನುವ ಉದ್ವೇಗ ನನ್ನನ್ನು ಬಿಡೋದಿಲ್ಲ. ಹೋಗಿ‌ ನೋಡು, ಏನವನ ನಿಶ್ಚಯ? ಮುಂದೇನು ಮಾಡ್ಲಿಕ್ಕೆ ಹೊರಟಿದ್ದಾನೆ? ಅದನ್ನು ತಿಳಿದು ಬಂದು ನನಗೆ ಹೇಳಿದ್ರೆ ದೊಡ್ಡ ಅನುಗ್ರಹ’.

ರಾಮನ ಕುರಿತು ಆಕೆ ಈಗಾಗ್ಲೇ ಹೇಳಿ ಬಿಟ್ಟಿದ್ದಾಳೆ. ಅವನು ಕ್ಷೇಮವಾಗಿದ್ದಾನೆ ಎನ್ನುವುದು ಗೊತ್ತಾಗಿದೆ ಮತ್ತು ಭೇರಿಯ ನಾದ ಕೂಡ ಕೇಳಿದೆ. ಆದರೆ ರಾವಣನ ಕುರಿತು ನಿತ್ಯ ಭಯ ಸೀತೆಗೆ. ಆಗ ಮಧುರಭಾಷಿಣಿ ಸರಮಾ, ಕಣ್ಣೀರಿನಿಂದ ತೋಯ್ದ ಸೀತೆಯ ಮುಖವನ್ನು ಒರೆಸಿದಳಂತೆ. ತನ್ನ ಬೊಗಸೆಯಲ್ಲಿ ಸೀತೆಯ ಮುಖವನ್ನು ಹಿಡಿದುಕೊಂಡು ಹೀಗೆ ಹೇಳ್ತಾಳೆ, ‘ ಇದೇ ನಿನ್ನ ಆಸೇಂತ ಆದ್ರೆ ಇದೋ ಹೊರಟೆ. ಶತ್ರುವಿನ ಅಭಿಪ್ರಾಯ ಏನು ಅಂತ ತಿಳಿದು ಈಗ ಬರ್ತೇನೆ ನೋಡು!’ ನಿನ್ನ ಶತ್ರುವು ನನ್ನ ಶತ್ರು ಎಂಬ ಭಾವದಿಂದ ಇಷ್ಟು ಹೇಳಿದ ಸರಮೆ ಕೂಡಲೇ ಹೊರಟಳು. ಮಾಯವಾಗಿ ಆಕೆ ರಾವಣನ ಬಳಿಗೆ ಹೋಗ್ತಾಳೆ. ರಾವಣ ಹೇಳಿದ್ದು, ಅವನ‌ ಮಂತ್ರಿಗಳು ಹೇಳಿದ್ದು, ಮತ್ತೆ ಏನು ನಡೀತು ಅಲ್ಲಿ, ಎಲ್ಲವನ್ನೂ ಗಮನಿಸಿಕೊಂಡು ಸುರಕ್ಷಿತವಾಗಿ ಮರಳಿ ಬಂದಳು ಸೀತೆಯ‌ ಬಳಿಗೆ. ದೊಡ್ಡ ಸಾಹಸ ಇದು! ಸಿಕ್ಕಿಬೀಳುವ ಸಾಧ್ಯತೆಯೇ ಹೆಚ್ಚು. ಅಂದ್ರೆ, ಅವಳು ತುಂಬ ಕುಶಲೆ! ಬಂದು ಸೀತೆಯನ್ನು ಕಂಡಳು. ಕೈಯಿಂದ ಕಮಲವು ಕಳೆದುಹೋದ ಲಕ್ಷ್ಮಿಯಂತೆ ಗೋಚರಿಸಿದ ಸೀತೆ ಇವಳನ್ನೇ ಕಾಯ್ತಾ ಇದ್ದಳಂತೆ.ಮಲಿನವಾದ ಶರೀರ,ಮಲಿನವಾದ ಬಟ್ಟೆಗಳು, ಕಂದಿದ ಆಭರಣಗಳು, ಉಪವಾಸದಿಂದ ಸೊರಗಿದ ಶರೀರ ಎಲ್ಲಾ ಇದ್ದರೂ ಕೂಡಾ ಅವಳ ಕಾಂತಿಯಿಂದ ಲಕ್ಷ್ಮಿಯಂತೆ ಕಂಡಳು. ತುಂಬಾ ಪ್ರಿಯವೆನ್ನಿಸುವ ಮಾತುಗಳನ್ನಾಡುವ ಸರಮೆ ಬರುತ್ತಿದ್ದಂತೆಯೇ ಸೀತೆ ಅವಳನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ಬಳಿಕ ತಾನೇ ಆಸನ ಕೊಡುತ್ತಾಳೆ. ರಾಕ್ಷಸಿಗೆ ಸೀತೆಯ ಆತಿಥ್ಯ! ಅಪೂರ್ವವಾದ ಪ್ರೇಮವೇ ಇದಕ್ಕೆ ಆಧಾರ. ‘ಇಲ್ಲಿ ಸುಖವಾಗಿ ಕುಳಿತು ಎಲ್ಲಾ ಹೇಳು. ಅಲ್ಲಿ ಏನು ನಡೆಯಿತು? ರಾವಣ ಏನು ಮಾಡಲು ಹೊರಟಿದ್ದಾನೆ ಎಂಬುದನ್ನು ನನಗೆ ಹೇಳು. ಆ ಕ್ರೂರನ ಮುಂದಿನ ನಿಶ್ಚಯವನ್ನು ನನಗೆ ಹೇಳು’ ಎಂದು ಕೇಳುವಾಗ ಸೀತೆ ನಡುಗುತ್ತಿದ್ದಳು. ಏಕೆಂದರೆ ಇನ್ನೇನು ಕಾದಿದೆಯೋ ಎಂಬ ಆತಂಕ. ಎಲ್ಲಾ ವಿವರವನ್ನು ಸರಮೆ ಸೀತೆಗೆ ಹೇಳಿದಳು. ಅವಳು ಒಂದು ವಿಶೇಷ ವಿವರವನ್ನು ಕೊಟ್ಟಳು.

‘ರಾವಣನ ತಾಯಿ ಕೈಕಸಿ ಬಂದು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಳು. ಸೀತೆಯನ್ನು ಮರಳಿ ಕೊಟ್ಟುಬಿಡು ಎಂದು ರಾವಣನ ತಾಯಿ ಅವನಿಗೆ ಹೇಳುತ್ತಿದ್ದಳು. ಮಗನೇ ಇದು ಸರಿಯಲ್ಲ, ಸೀತೆ ಯಾಕೆ ನಿನಗೆ? ದೊಡ್ಡ ಆಪತ್ತು ಇದು ಎಂದು ಅವನಿಗೆ ಮನವರಿಕೆಮಾಡಿಸುವ ಪ್ರಯತ್ನದಲ್ಲಿದ್ದಳು. ಅದಾದ ಮೇಲೆ ಅವಿದ್ಧ ಎಂಬ ವೃದ್ಧ ಮಂತ್ರಿ ಕೂಡಾ ಪ್ರಯತ್ನಮಾಡುತ್ತಿದ್ದ. ರಾಮನನ್ನು ಸತ್ಕರಿಸಿ ಸೀತೆಯನ್ನು ಒಪ್ಪಿಸು ಎಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದ.’ಜನಸ್ಥಾನದಲ್ಲಿ ನಡೆದ ಅದ್ಭುತ ಯುದ್ಧವೇ ನಿದರ್ಶನ ರಾಮನು ಏನು ಎನ್ನುವುದಕ್ಕೆ. ಹನುಮಂತ ರಾಮನ ಸೇವಕ. ಅವನು ಸಮುದ್ರವನ್ನು ಹಾರುತ್ತಾನೆಂದರೆ ಸ್ವಾಮಿಯು ಹೇಗಿರಬಹುದು? ಅಷ್ಟು ರಾಕ್ಷಸರೊಂದಿಗೆ ಯುದ್ಧವನ್ನು ಬರೀ ಮನುಷ್ಯರಿಗೆ ಮಾಡಲು ಸಾಧ್ಯವಿಲ್ಲ. ಸಮುದ್ರಕ್ಕೆ ಸೇತುವೆಯನ್ನು ಯಾರು ಕಟ್ಟಬಲ್ಲರು? ಬೇಡ’ ಎಂದು ಮಂತ್ರಿವೃದ್ಧ ಮತ್ತು ಮಾತೆ ಬಹುಪರಿಯಿಂದ ತಿಳಿಸಿ ಹೇಳಿದ್ದಾರೆ. ರಾವಣ ನಿನ್ನನ್ನು ಬಿಟ್ಟು ಕೊಡಲು ಸಿದ್ಧನಿಲ್ಲ. ಮೈಥಿಲಿ, ಸತ್ತಂತೂ ಅವನು ನಿನ್ನನ್ನು ಬಿಡುವುದಿಲ್ಲ. ಅದು ಆ ಕ್ರೂರನ ನಿಶ್ಚಯ. ಅಮಾತ್ಯರು ಕೂಡಾ ಹೌದು ಎನ್ನುತ್ತಾರೆ. ರಾವಣನಿಗೆ ಮೃತ್ಯು ಬೇಕಾಗಿದೆ. ಹಾಗಾಗಿ ಈ ನಿಶ್ಚಯವನ್ನು ಮಾಡಿದ್ದಾನೆ. ನೋಡು ಸೀತೆ, ರಾವಣನು ನಿನ್ನನ್ನು ಬಿಟ್ಟು ಕೊಡಲು ಭಯವು ಸಾಕಾಗುವುದಿಲ್ಲ. ಅವನಿಗೆ ಸಾವು ಬೇಕು. ಯುದ್ಧ ನಡೆದು, ಯುದ್ಧದಲ್ಲಿ ತಲೆ ಕಡಿದ ಹೊರತು ಬಿಡುವುದಿಲ್ಲ ಎಂಬ ಸ್ಥಿತಿಯಿದೆ. ತಾನೊಬ್ಬನೇ ಅಲ್ಲ, ಲಂಕೆಯ ರಾಕ್ಷಸರೆಲ್ಲರನ್ನೂ ಸಾಯಿಸಿತ್ತಾನೆ. ಆದರೆ ನೀನೇನು ಯೋಚನೆ ಮಾಡಬೇಡ. ಸಾಯಲು ಬಿದ್ದವನಿಗೆ ಔಷಧ ರುಚಿಸದು ಎನ್ನುವಂತೆ ಇವನಿಗೆ ತಾಯಿ ಕೊಟ್ಟ ಔಷಧ ಬೇಕಾಗಿಲ್ಲ. ತನ್ನ ಶರಗಳಿಂದ ರಾವಣನನ್ನು ಸಂಹರಿಸಿ ರಾಮ ನಿನ್ನನ್ನು ಅಯೋಧ್ಯೆಗೆ ಕರೆದೊಯ್ಯುತ್ತಾನೆ. ಕಪ್ಪು ಕಂಗಳ ಚೆಲುವೆಯೇ, ನೀನೇಕೆ ಚಿಂತೆ ಮಾಡುತ್ತೀಯೆ’ ಎಂದು ಸರಮೆ ಸೀತೆಗೆ ಹೇಳಿದಳು.

ಅಷ್ಟು ಹೊತ್ತಿಗೆ ಭೇರಿ-ಶಂಖಗಳ ಸಹಿತವಾದ ಒಂದು ಭಯಂಕರ ಶಬ್ಧ ಕೇಳಿಬಂತು. ಇದು ವಾನರ ಸೈನ್ಯದ್ದು. ಅವರು ಇರುವುದು ಸುವೇಲ ಪರ್ವತ. ಅಲ್ಲಿಂದ ವಾನರ ಸೈನ್ಯದ ಭಯಂಕರ ಶಬ್ಧ. ಇತ್ತ ಲಂಕೆಯಲ್ಲಿ ರಾವಣನ ಸೈನಿಕರು ಆ ಭಯಂಕರ ನಿನಾದವನ್ನು ಕೇಳಿದರು. ಅವರ ಬಲವೆಲ್ಲಾ ಇಳಿದುಹೋಯಿತು. ದೈನ್ಯವೇ ಆವರಿಸಿತು. ಈ ರಾಜನ ಚಪಲದಿಂದಾಗಿ ನಮ್ಮ ಪ್ರಾಣಕ್ಕೆ ಕುತ್ತು ಬಂತು ಎಂದು ಅನ್ನಿಸಿತು. ಅತ್ತ ರಾಮನು ಭೇರಿ-ಶಂಖದ ಶಬ್ಧದೊಡಗೂಡಿ ಲಂಕೆಯತ್ತ ಬರುತ್ತಿದ್ದಾನೆ. ಇತ್ತ ಸಭಾ ಮಧ್ಯದಲ್ಲಿ ಕುಳಿತ ರಾವಣನಿಗೂ ಆ ಶಬ್ಧ ಕೇಳಿತು. ಸ್ವಲ್ಪ ಹೊತ್ತು ಸುಮ್ಮನಾದ. ಅವನೊಳಗೂ ಏನೋ ಆಗುತ್ತಿದೆ, ಬಂದಾಯಿತು ಇಲ್ಲಿಯವರೆಗೆ; ಮುಂದೇನು? ಎಂಬ ಪ್ರಶ್ನೆ. ಆದರೆ ಅವನ ಬಳಿ ವ್ಯವಸ್ಥೆಯಿದೆ. ಆದರೂ ಭಯವೇಕೆ ಎಂದರೆ ನೈತಿಕವಾಗಿ ಅವನು ತುಂಬಾ ಕೆಳಗಿದ್ದಾನೆ. ಅವನ ತಪ್ಪಿದೆ, ಹಾಗಾಗಿ ಭಯ. ಇಡೀ ಲೋಕವನ್ನು ಸಂತಾಪಗೊಳಿಸಿದ, ಕ್ರೂರ ರಾವಣ ಅವನ ಸಚಿವರನ್ನೆಲ್ಲಾ ವ್ಯಂಗ್ಯದ ಮೂಲಕ ನಿಂದಿಸಿದ. ‘ರಾಮನು ಸೇತುವೆ ಕಟ್ಟಿ ಸಮುದ್ರ ದಾಟಿ ಬಂದಿದ್ದು,ಅವನ ವಿಕ್ರಮ, ಬಲ ಸಂಗ್ರಹ ಇದೆಲ್ಲಾ ಕೇಳಿದೆ ನನಗೆ. ನಿಮ್ಮ ಪರಿಚಯವೂ ಇದೆ.ನೀವೆಲ್ಲಾ ಪರಾಕ್ರಮಿಗಳು. ಈಗ ಬಾಯಿ ಬಿಡದೇ ಒಬ್ಬರನ್ನೊಬ್ಬರು ನೋಡುತ್ತಾ ಕುಳಿತಿದ್ದೀರಿ. ಏಕೆಂದರೆ ನಿಮ್ಮ ತಲೆಯೊಳಗೆ ರಾಮನ ಪರಾಕ್ರಮವೇ ತುಂಬಿದೆ. ಆ ಭಯದಲ್ಲಿ ಕುಳಿತಿದ್ದೀರಿ’ ಎಂದು ಗದರಿದ.

ಆಗ ಮಾಲ್ಯವಂತ ಎದ್ದು ನಿಂತ. ಅವನು ಲಂಕೆಯ ಮೂಲಾಧಿಕಾರಿ. ಕುಬೇರನಿಗಿಂತ ಮೊದಲು ಲಂಕೆ ಇವನಿಗೆ ಸೇರಿತ್ತು. ಮೂವರು ಸಹೋದರರು ಅವರು. ಮಾಲ್ಯವಂತ, ಸುಮಾಲಿ, ಮಾಲಿ. ಸುಮಾಲಿಯ ಮಗಳು ಕೈಕಸಿ. ಅವಳ ಮಗ ರಾವಣ. ರಾವಣನ ತಾಯಿಯ ತಂದೆಯ ಅಣ್ಣ(ದೊಡ್ಡಜ್ಜ). ಅವರ ಕಾಲದಲ್ಲಿ ಆ ಸಹೋದರರು ಪ್ರಪಂಚಕ್ಕೆ ಕಾಟ ಕೊಟ್ಟಿದ್ದರು. ಬಳಿಕ ವಿಷ್ಣುವಿನ ಕೈಯಲ್ಲಿ ಸೋಲನ್ನಪ್ಪಿ, ಮಾಲಿ ಸಾಯುತ್ತಾನೆ. ಉಳಿದವರು ಪಾತಾಳ ಸೇರಿ ಬೇರೆ ಬೇರೆ ಕಡೆ ಹೋದರು. ಸುಮಾಲಿ ತನ್ನ ಮಗಳ ಮೂಲಕ ದೇವತೆಗಳನ್ನು ಗೆಲ್ಲುವ ಸಂತಾನ ಪಡೆಯಲು ಪ್ರಯತ್ನಿಸುತ್ತಾನೆ. ಹಾಗಾಗಿ ಹುಟ್ಟಿದವನು ರಾವಣ. ಅದೆಲ್ಲಾ ಆದ ಮೇಲೆ ಮಾಲ್ಯವಂತನ ಬುದ್ಧಿ ಬೇರೆಯಾಗಿದೆ. ಅವನು ರಾವಣನಿಗೆ ಹೇಳಿದ. ‘ದೊರೆಯಾದವನು ಚಿರಕಾಲ ಅಧಿಕಾರವನ್ನು ಅನುಭವಿಸಬೇಕಾದರೆ ರಾಜನೀತಿಯನ್ನು ಅನುಸರಿಸಬೇಕು. ಕಾಲಬಂದಾಗ ಶತ್ರುಗಳೊಡನೆ ಸಂಧಾನವನ್ನು ಮಾಡಿಕೊಳ್ಳಬೇಕು. ಆಗ ಅವನು ಉಳಿದುಕೊಳ್ಳುತ್ತಾನೆ. ಅಧಿಕಾರ ಬೆಳೆಯುತ್ತದೆ. ಯಾರು ಸೋಲಬಹುದೋ ಅವನು ಶತ್ರುಗಳೊಂದಿಗೆ ಸಂಧಿಮಾಡಿಕೊಳ್ಳಬೇಕು. ತಾನು ಶತ್ರುವಿಗಿಂತ ಬಲಶಾಲಿಯಾದರೆ ಯುದ್ಧ ಮಾಡಬೇಕು. ಇದು ರಾಜನೀತಿ’ ಎಂದು ಹೇಳಿ ‘ನನ್ನ ಪ್ರಕಾರ ನೀನು ರಾಮನ ಜೊತೆ ಸಂಧಿ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೆ ಈ ಯುದ್ಧ ನಡೆಯುತ್ತಿದೆಯೋ, ಆ ಸೀತೆಯನ್ನು ಕೊಟ್ಟುಬಿಡು ರಾಮನಿಗೆ. ರಾಮನ ಗೆಲುವನ್ನು ದೇವತೆಗಳು, ಋಷಿಗಳು,ಗಂಧರ್ವರು ಬಯಸುತ್ತಿದ್ದಾರೆ. ರಾಮನ ಹಿಂದೆ ದೈವೀಶಕ್ತಿಗಳು ಇದ್ದಾವೆ. ರಾಮನ ಗೆಲುವು ಅವರೆಲ್ಲರ ಅಪೇಕ್ಷೆ. ನಿನಗೆ ಮೇಲ್ನೋಟಕ್ಕೆ ರಾಮ ಕಾಣಬಹುದು ಆದರೆ ಅವನ ಹಿಂದೆ ದೈವೀಶಕ್ತಿಗಳಿದ್ದಾವೆ. ಈ ಯುದ್ಧ ಬರೀ ಮನುಷ್ಯನ ಜೊತೆ ಎಂದು ತಿಳಿಯಬೇಡ. ಸಮಸ್ತ ಪ್ರಪಂಚದ ಸಕಲ ದಿವ್ಯಶಕ್ತಿಯೊಂದಿಗೆ ಅಂತ ತಿಳಿ. ಹೋಗಿ ಇಂದ್ರ,ಕುಬೇರ,ವರುಣ ಎಲ್ಲರನ್ನು ಗೆದ್ದಿದ್ದು ಈಗ ಅವನ ಹಿಂದಿದೆ.

ಈ ಸೃಷ್ಟಿಯಲ್ಲಿ ಎರಡೇ ಪಕ್ಷಗಳು. ಧರ್ಮ ಮತ್ತು ಅಧರ್ಮ. ದೇವತೆಗಳದ್ದು ಧರ್ಮ ಪಕ್ಷ. ಅಸುರರದ್ದು ಅಧರ್ಮದ ಪಕ್ಷ. ಇಲ್ಲಿ ಧರ್ಮವು ಅಧರ್ಮವನ್ನು ಗೆಲ್ಲುವಾಗ ಅದು ಕೃತಯುಗ. ಯಾವಾಗ ಅಧರ್ಮದಿಂದ ಧರ್ಮಕ್ಕೆ ಬಾಧೆಯುಂಟಾಗುತ್ತದೆ ಅದು ಕಲಿಯುಗ’. ತ್ರೇತಾಯುಗದಲ್ಲಿ 3 ಅಂಶ ಕೃತಯುಗ ಒಂದು ಅಂಶ ಕಲಿಯುಗ. ದ್ವಾಪರದಲ್ಲಿ 2 ಅಂಶ ಕೃತಯುಗ,2 ಕಲಿಯುಗ. ಕಲಿಯುಗದಲ್ಲಿ ಎಲ್ಲವೂ ಅದೇ. ಕೃತಯುಗದ ಆರಂಭದಲ್ಲಿ ಎಲ್ಲವೂ ಧರ್ಮವೇ. ಕಲಿಯುಗ ಆಗ ಪ್ರಾರಂಭ ಆಗತಕ್ಕದ್ದು. ಇದೆಲ್ಲ ಸ್ಥಿತಿ ಹೇಳಿ, ನಾವು ಇರಬೇಕಾದದ್ದು ಧರ್ಮದ ಜೊತೆಯಲ್ಲಿ. ಅದು ಶ್ರೇಯಸ್ಸು ನಮಗೆ. ನಾವು ಕಲಿಯುಗಕ್ಕೆ ಕಾರಣರಾಗಬಾರದು ಮತ್ತು ಕೃತಯುಗಕ್ಕೆ ಕಾರಣರಾಗಬೇಕು. ನೇರವಾಗಿ ಹೇಳಿದ. ಲೋಕಲೋಕಾಂತರ ಸುತ್ತಿ ನೀನು ಮಾಡಿದ್ದೇನು ಅಂದ್ರೆ ಧರ್ಮದ ಹಾನಿ. ಹೋದ ಹೋದಲ್ಲಿ ಧರ್ಮಕ್ಕೆ ನೀನು ಆಘಾತವನ್ನುಂಟು ಮಾಡಿದೆ. ಹೀಗಾಗಿ ನಿನ್ನ ಶತ್ರುಗಳಿಗೆ ಬಲ ಹೆಚ್ಚು ಯಾಕೆಂದ್ರೆ ಧರ್ಮ ಅಲ್ಲಿದೆ. ನಿನ್ನ ಬಲ ಕುಗ್ಗಿದೆ ಯಾಕೆಂದ್ರೆ ನಿನ್ನಲ್ಲಿ ಅಧರ್ಮ ಇದೆ. ಹೀಗೆ, ನಿನೇ ಬೆಳೆಸಿದ ಅಧರ್ಮ ವೆಂಬ ಹೆಬ್ಬಾವು ಈಗ ಬಾಯಿದೆರೆದು ನಿನ್ನನ್ನು ನುಂಗಲು ಬಂದಿದೆ. ಎಚ್ಚೆತ್ತುಕೊ. ಈ ಅಧರ್ಮವೇ ದೇವತೆಗಳ ಬಲ ಹೆಚ್ಚಿಸುತ್ತಾ ಇದೆ. ತಪ್ಪು ಮಾಡಿದೆ ವಿಷಯಸುಖದ ಹಿಂದೆ ಬಿದ್ದು, ಇಂದ್ರಿಯ ಸುಖದ, ಭೋಗದ ಹಿಂದೆ ಬಿದ್ದು ಏನೆಲ್ಲ ಮಾಡಿದೆಯೋ ನೀನು. ಪರಿಣಾಮ ಏನು ಅಂದ್ರೆ ಋಷಿಗಳಿಗೆ ಉದ್ವೇಗ ಉಂಟಾಯಿತು. ಬೆಂಕಿಯಂತಹ ಋಷಿಗಳು, ಅವರು ಸುಡಬಲ್ಲರು. ಬೆಂಕಿಯಾದರೂ ಬಿಡಬಹುದು ಆದರೆ ಋಷಿಗಳ ತಪಸ್ಸು ನಮ್ಮನ್ನು ಸುಟ್ಟೀತು. ಅವರಿಗೆ ನೀನು ದೊಡ್ಡ ಉದ್ವೇಗವನ್ನು ಉಂಟುಮಾಡಿದ್ದೀಯೆ. ಅವರ ಪ್ರಭಾವ, ಯಜ್ಞೇಶ್ವರನ ಪ್ರಭಾವ. ಧರ್ಮಕ್ಕೆ ಬದ್ಧ ದೀಕ್ಷರು, ಬದ್ಧ ಕಂಕಣರು. ಅವರ ತಪಸ್ಸು ನಮ್ಮನ್ನು ನಾಶ ಮಾಡ್ತದೆ. ಮಾತ್ರವಲ್ಲ, ಉತ್ತಮೋತ್ತಮ ಯಜ್ಞಗಳನ್ನು ಮಾಡ್ತಾರೆ ಅವರು, ವೇದಘೋಷಗಳನ್ನು ಮಾಡ್ತಾರೆ. ಅವರು ಮಾಡುವ ವೇದಘೋಷ ನಾವು ರಾಕ್ಷಸರನ್ನು ಚದುರಿಸುತ್ತವೆ. ನಮ್ಮನ್ನು ಮೀರಿದ ಶಕ್ತಿ ಆ ವೇದಘೋಷಕ್ಕಿದೆ, ಅವರ ತಪ್ಪಸ್ಸಿಗಿದೆ, ಅವರ ಯಜ್ಞಕ್ಕಿದೆ.

ಅವರ ತಪಸ್ಸು ನಮ್ಮನ್ನು ಹಾಳುಮಾಡ್ತದೆ. ಅವರ ಅಗ್ನಿಹೋತ್ರದ ಧೂಮ ಮೇಲೆದ್ದರೇ ನಮ್ಮ ರಾಕ್ಷಸರ ತೇಜಸ್ಸನ್ನು ಸ್ವಾಹಾ ಮಾಡ್ತದೆ. ಅದು ದಿಕ್ಕು ದಿಕ್ಕಿಗೆ ವ್ಯಾಪಿಸಿ ನಾವು ಹೋದಲ್ಲೇಲ್ಲ ರಾಕ್ಷಸರ ತೇಜಸನ್ನು ಎಳಿಯುತ್ತದೆ ಅದು. ಅವರು ತಪಸ್ಸು ಮಾಡ್ತಾ ಇರ್ತಾರೆ, ಪುಣ್ಯ ಸಂಚಯ ಮಾಡ್ತಾರೆ ಅದೆಲ್ಲ ನಮಗೆ ಹಾಳು. ನಮ್ಮನ್ನು ನಾಶ ಮಾಡಲಿಕ್ಕೆ ಬೇಕಾದಂತಹ ಎಲ್ಲ ಸಾಮರ್ಥ್ಯ ಅವರಲ್ಲಿದೆ. ಆದರೆ ಅವರ ತಂಟೆಗೆ ಹೋಗದಿದ್ದರೇ ನಮಗೇನೂ ಮಾಡುವುದಿಲ್ಲ ಅವರು. ಅವರ ತಂಟೆಗೆ ಹೋದರೆ ಅವರಿಗೆ ಉಪದ್ರವ ಮಾಡಿದ್ರೆ ಬಿಡ್ತಾರಾ ಸುಮ್ಮನೆ? ನೀನು ಇದನ್ನು ಮಾಡಿಕೊಂಡಿದ್ದೀಯೆ. ನಿನ್ನ ವರ ಕವಚ, ಸದ್ಯ ಅದು ಕೆಲಸ ಮಾಡ್ತಾ ಇಲ್ಲ. ದೇವ ದಾನವ ರಿಂದ ಸೋಲಿಲ್ಲ, ಸಾವಿಲ್ಲ ಎಂಬ ವರ ತಾನೇ ನಿನ್ನದು. ಈಗ ಬಂದವರು ಮನುಷ್ಯರು, ವಾನರರು, ಕರಡಿಗಳು, ಗೋಲಾಂಗುಲರು, ಮಹಾ ಬಲಿಷ್ಠರು, ಧೃಢವಿಕ್ರಮರು. ಇವರೆಲ್ಲ ಲಂಕೆಯ ಬಾಗಿಲಲ್ಲಿ ಘರ್ಜನೆ ಮಾಡ್ತಾ ಇದ್ದಾರೆ. ಇವರಿಂದ ರಕ್ಷಣೆಯ ವರ ಇದೆಯಾ? ಇಲ್ಲ ತಾನೆ! ಈ ಹಿಂದೆ ದೇವ ದಾನವರಿಂದ ಗೆದ್ದಿದೀಯಾ ಯಾಕೆಂದ್ರೆ ರಕ್ಷಣೆಯ ವರ ಇತ್ತು ನಿನಗೆ. ಮನುಷ್ಯರಿಂದಲೂ ಗೆದ್ದೆ ಯಾಕೆಂದ್ರೆ ಶಕ್ತಿ ಇರಲಿಲ್ಲ ಅವರಿಗೆ. ಭವಿಷ್ಯ ತುಂಬಾ ಸ್ಪಷ್ಟ ಯಾಕೆಂದ್ರೆ ಅಪಶುಕನಗಳ ಸರಣಿಯನ್ನು ನೋಡು. ವಿಭೀಷಣ ಆಡಿದ ಮಾತನ್ನೇ ಮಲ್ಯವಂತ ಹೇಳ್ತಾ ಇದ್ದಾನೆ. ನಿತ್ಯ ನಿತ್ಯ ರಾಕ್ಷಸರುಗಳು ನಾಶ ವಾಗ್ತಾದೆ ಎನ್ನುವುದಕ್ಕೆ ಸೂಚಕವಾಗಿರತಕ್ಕಂತಹ ಅನೇಕ ಪ್ರಕಾರದ ಉತ್ಪಾತಗಳು ಆಗ್ತಾ ಇವೆ. ಮೋಡಗಳು ವಿಚಿತ್ರವಾಗಿ ಕರ್ಕಶವಾಗಿ ಘರ್ಜಿಸುತ್ತಾ ಇವೆ. ಕೇಳುವುದಕ್ಕೂ ಅಮಂಗಲಕರವಾಗಿ ಇದ್ದಾವೆ. ಆಗಾಗ ಲಂಕೆಯ ಮೇಲೆ ರಕ್ತದ ಮಳೆಯನ್ನು ಸುರಿಸ್ತಾ ಇದ್ದಾವೆ. ಇನ್ನು ಆನೆ ಕುದುರೆಗಳು ನಿತ್ಯವೂ ಕೆಟ್ಟ ಸ್ವರದಲ್ಲಿ ರೋಧಿಸುತ್ತವೆ, ಕಣ್ಣೀರು ಸುರಿಸ್ತಾ ಇದ್ದಾವೆ. ಧ್ವಜಗಳ ಬಣ್ಣ ಮಾಸಿವೆ. ರಾಷ್ಟ್ರಾವಸಾನ ಮತ್ತು ರಾಜಾವಸಾನದಲ್ಲಿ ಧ್ವಜಗಳು ಮಂಕಾಗ್ತವಂತೆ. ಹಾಗೇ ಕ್ರೂರ ಜಂತುಗಳು, ಹಾವುಗಳು, ನರಿಗಳು, ಹದ್ದುಗಳು ಎಲ್ಲ ಕೆಟ್ಟದಾಗಿ ಸದ್ದು ಮಾಡ್ತಾ ಇವೆ. ಗುಂಪಾಗಿ ಬಂದು ಲಂಕೆಯನ್ನು ಮುತ್ತುತ್ತಾ ಇದ್ದಾವೆ. ಸ್ವಪ್ನದಲ್ಲಿ ಕರಿ ಮೊರೆಯ ಹೆಂಗಳೆಯರು ಬಂದು ತಮ್ಮ ಬಿಳೀಯ ಬಣ್ಣದ ಹಲ್ಲನ್ನು ತೋರಿಸಿ ಅಣಕಿಸುತ್ತಾ ಇದ್ದಾರೆ. ಮತ್ತು ನಮ್ಮ ಮನೆಯ ಮಂಗಲ ವಸ್ತುಗಳನ್ನು ಅಪಹರಿಸಿಕೊಂಡು ಹೋಗ್ತಾ ಇದ್ದಾರೆ. ಇವೆಲ್ಲ ನಾಶ ಸೂಚನೆ.

ಮನೆಯಲ್ಲಿ ಮಾಡುವ ಬಲಿಯನ್ನು ಅಥವಾ ನೈವೇದ್ಯವನ್ನು ನಾಯಿಗಳು ತಿಂದು ಕೊಂಡು ಹೋಗ್ತಾ ಇದ್ದಾರೆ. ಲಂಕೆಯ ಹಸುಗಳಲ್ಲಿ ಕತ್ತೆಗಳು ಹುಟ್ಟಿದ್ದಾವೆ. ಮುಂಗುಸಿಗಳಲ್ಲಿ ಇಲಿಗಳು ಹುಟ್ಟಿದ್ದಾವೆ. ಬೆಕ್ಕುಗಳ ಹುಲಿಗಳ ಸಂಖ್ಯೆ ಏರಿದೆ. ಹಂದಿಗಳು ನಾಯಿಗಳು ಜೊತೆಗೆ ತಿರುಗಾಡುತ್ತಾ ಇದ್ದಾವೆ. ಕಿನ್ನರರು ರಾಕ್ಷಸರು ಮನುಷ್ಯರ ಜೊತೆಗೆ ತಿರುಗಾಡುತ್ತಾ ಇದ್ದಾರೆ. ಇನ್ನು ಬಿಳಿಯ ಬಣ್ಣದ ಕೆಂಪು ಕಾಲುಗಳ ಪಾರಿವಾಳಗಳು ತಿರುಗಾಡುತ್ತಾ ಇದ್ದಾವೆ. ಲಂಕೆಯಲ್ಲಿ ನಾಶದ ಸಂಕೇತವನ್ನು ಪಾರಿವಾಳಗಳು ಕೊಡ್ತಾ ಇದ್ದಾವೆ. ಶಾರಿಕೆ ಎನ್ನುವ ಒಂದು ಜಾತಿ ಪಕ್ಷಿಗಳು “ವಿಚ್ಚಿ ಪೂಚಿ” ಎಂಬ ಶಬ್ದಗಳನ್ನು ಅಕಾರಣವಾಗಿ ಮಾಡ್ತಾ ಇದ್ದಾವೆ. ಬಲ್ಲವರು ಹೆಳ್ತಾರೆ, ಲಂಕೆಯ ನಾಶವನ್ನು ಹೇಳ್ತಾ ಇವೆ ಈ ಪಕ್ಷಿಗಳು. ಇನ್ನು ಇದ್ದಕ್ಕಿದಂತೆ ಒಂದಕ್ಕೊಂದು ಗಂಟು ಹಾಕಿಕೊಂಡು ಗುಂಪಾಗಿ ತಪತಪನೆ ಭೂಮಿಗೆ ಬಂದು ಬೀಳ್ತಾವೆ. ಪಕ್ಷಿಗಳು ಪ್ರಾಣಿಗಳು ದಿನಾ ಸೂರ್ಯನನ್ನು ನೋಡಿ ಅಳುವುದು ಮಾಡ್ತಾ ಇದ್ದಾವೆ. ಕೊನೆಯ ಸೂಚನೆ ಏನು ಅಂದ್ರೆ ಒಂದು ವಿಚಿತ್ರವಾದ, ವಿಕಟವಾದ, ಕರಾಳವಾದ, ಅಂದ್ರೆ ತಲೆ ಬೋಳು ಅಂತಹ ಕಂದು ಬಣ್ಣದ ಒಂದು ಪುರುಷ ಆಕಾರ, ಲಂಕೆಯ ಮನೆ ಮನೆಗೆ ಭೇಟಿ ಕೋಡ್ತಾ ಇದೆಯಂತೆ. ನೀರ್ನಳ್ಳಿಯವರು ಇದನ್ನೇ ಚಿತ್ರದಲ್ಲಿ ಬಿಡಿಸಿದ್ದಾರೆ. ಇಷ್ಟೇ ಅಲ್ಲ, ನಾನು ಕೊಟ್ಟಿದ್ದು ಕೆಲವು ಉದಾಹರಣೆ ಮಾತ್ರ, ಇನ್ನೂ ಅಪಶಕುನ ಉಂಟಾಗ್ತಾ ಇದೆ.” ಇಷ್ಟೇಲ್ಲ ಹೇಳಿ ಮಲ್ಯವಂತ ನಿಶ್ಚಯವನ್ನು ಹೇಳ್ತಾನೆ,”ರಾವಣ! ರಾಮ ಯಾರು? ನನ್ನ ದೃಷ್ಟಿಯಿಂದ ಮತ್ತು ನನ್ನಂತವರ ದೃಷ್ಟಿಯಿಂದ ರಾಮನೆಂದರೆ ವಿಷ್ಣು, ಮನುಷ್ಯ ಮಾತ್ರವಲ್ಲ. ಮಾನುಷ ಶರೀರವನ್ನು ಹೊಂದಿ ಬಂದಂತಹ ಮಹಾವಿಷ್ಣುವೇ ರಾಮ. ಖಂಡಿತವಾಗಿಯೂ ಬರೇ ಮನುಷ್ಯ ಅಲ್ಲ, ದೇವರು ಅವನು. ಮಾಲ್ಯವಂತನಿಗೆ ವಿಷ್ಣುವಿನ ಪರಿಚಯ ಇದೆ. ಹಿಂದೆ ವಿಷ್ಣುವಿನ ಜೊತೆಗೆ ಯುದ್ಧ ಮಾಡಿ ಪೆಟ್ಟುತಿಂದು, ಸೋತು ಪಾತಾಳಕ್ಕೆ ಓಡಿಹೋದವನು ಮಲ್ಯವಂತ ಹಾಗಾಗಿ ಚೆನ್ನಾಗಿ ಗೊತ್ತು ವಿಷ್ಣುವಿನ ಪರಿಚಯ. ಕ್ರಮೇಣ ಬಹುಶಃ ಅವನಿಗೆ ವಿಷ್ಣುಭಕ್ತಿಯೂ ಬಂದಿರಬಹುದು. ರಾಕ್ಷಸರಲ್ಲಿಯೂ ಅನೇಕರಿಗೆ ಈ ಸತ್ಯ ಅರ್ಥ ಆಗಿದೆ.

ತನ್ನ ಮಾತನ್ನು ಮುಂದುವರಿಸುತ್ತಾ ಮಲ್ಯವಂತ ಹೇಳಿದ, “ಅದಲ್ಲದಿದ್ದರೇ ಸಮುದ್ರದಲ್ಲಿ ಸೇತುವೆಯನ್ನು ಕಟ್ಟಲಿಕ್ಕೆ ಸಾಧ್ಯವಾ? ಹಾಗಾಗಿ ನರರಾಜ ಮಾನವ ಭೂಪತಿಯಾಗಿ ಬಂದಂತಹ ಮಹಾವಿಷ್ಣುವಿನಲ್ಲಿ ಸಂಧಿಯನ್ನು ಮಾಡಿಕೊ. ತಿಳಿದು, ಆಲೋಚಿಸಿ ವ್ಯವಹರಿಸು” ಎಂದು ಹೇಳಿ ಸುಮ್ಮನಾದನಂತೆ ಮಲ್ಯವಂತ. ಯಾಕೆ ಸುಮ್ಮನಾದ ಅಂದ್ರೆ ರಾವಣ ಮುಖದ ಬಣ್ಣ ಬದಲಾಗಿತ್ತು. ಪ್ರತಿಕ್ರಿಯೆಯು ಪ್ರತಿಕೂಲವಾಗಿತ್ತು. ರಾವಣನು ಹಿತವಾದಿಯಾದ ಮಲ್ಯವಂತವನ ಮಾತನ್ನು ಸಹಿಸಲಿಲ್ಲ. ಯಾಕೆಂದ್ರೆ ಆ ದುಷ್ಟಾತ್ಮನು ಕಾಲಕ್ಕೆ ವಶನಾಗಿದ್ದನು. ಅವನು ಹುಬ್ಬು ಗಂಟಿಕ್ಕಿದನು. ಕ್ರುದ್ಧನಾದನು. ಅಸಹನೆ ಅವನ ಕಣ್ಣು ತಿರುಗುವಂತೆ ಆಯಿತು. ಅವನು ಮಲ್ಯವಂತನಿಗೆ ಹೇಳಿದ, “ಹಿತ ಅಂತ ಅಹಿತವನ್ನು ಮಾತನಾಡಿದೆ. ಈ ಅಪ್ರಿಯ ಮಾತನ್ನು ಹಿತ ಅಂತ ಹೇಳಬಹುದಾ? ನೀನು ರಾಮನಕಡೆಗೆ ಸೇರಿಕೊಂಡಿದ್ದೀಯೆ. ನನ್ನ ಕಿವಿಗೇ ಕೇಳಿಸ್ತಾಇಲ್ಲ ನಿನ್ನ ಮಾತು. ಆ ಮನುಷ್ಯ, ಕ್ರಪಣ, ಮಂಗಗಳ ಸಂಗಡಿಗ, ತಂದೆಯಿಂದ ತೆಗೆಸಲ್ಪಟ್ಟು ಕಾಡು ಸೇರಿ ಮಂಗಗಳ ಸಂಗ ಮಾಡಿ ಇಲ್ಲಿ ಬಂದ ರಾಮನು ನಿನ್ನ ದೃಷ್ಟಿಯಿಂದ ಸಮರ್ಥನಾ? ನಾನು ರಾಕ್ಷಸರ ಒಡೆಯ, ದೇವತೆಗಳಿಗೆ ಭಯಂಕರ, ಸರ್ವ ವಿಕ್ರಮ ಪರಿಪೂರ್ಣ. ಇಂತಹ ನಾನು ನಿನ್ನ ದೃಷ್ಟಿಯಿಂದ ಹೀನನಾ? ಎಂತಹ ಅಸಂಬದ್ಧ ಮಾತನಾಡುತ್ತಾ ಇದ್ದೀಯೆ. ನೀನು ಮಾತನಾಡಲಿಕ್ಕೆ ಎರಡು ಕಾರಣ ಇರಬೇಕು. ಒಂದು ವೀರದ್ವೇಷ. ನಾನು ವೀರನೆಂದು ನಿನಗೆ ಅಸೂಯೆ ಆಗಿ ಈ ಮಾತನ್ನು ಆಡ್ತಾ ಇದ್ದೀಯೆ ಅಥವಾ ನೀನು ರಾಮನ ಪಕ್ಷ ಸೇರಿದ್ದೀಯಾ. ಹಾಗಾಗಿ ರಾಮನ ಪ್ರೋತ್ಸಾಹದಿಂದ ಇಂತಹ ಮಾತನ್ನು ನೀನು ಆಡಿದೆ. ಅದಲ್ಲ ಅಂದರೆ, ನಾನು ರಾಜ. ನನ್ನ ಮುಂದೆ ಇಂಥ ಮಾತುಗಳನ್ನಾಡಬಹುದೇ? ಶಕ್ತಿಶಾಲಿ ರಾಜನ ಮುಂದೆ ತಿಳಿದವರಾಡ್ತಾರೆ. ಅಂತಹ ಸೀತೆಯನ್ನು ಕಷ್ಟಪಟ್ಟು ತಂದೆನಲ್ಲ. ಹೇ ಮಾಲ್ಯವಂತ, ನಾನು ಬೇಕಾದರೆ ಎರಡು ತುಂಡಾಗಬಹುದು, ಹೊರತು ಬಾಗುವವನಲ್ಲ. ಇದು ನನ್ನ ಸಹಜವಾದ ದೋಷ. ಅವರವರ ಸ್ವಭಾವವನ್ನು ಮೀರಲಿಕ್ಕೆ ಸಾಧ್ಯವಿಲ್ಲ. ಇದು ನನ್ನ ಮೂಲ ಸ್ವಭಾವ. ಆಸಕ್ತಿಯಿಂದ ಸೇತುವೆ ಕಟ್ಟಿದರೆ ರಾಮ, ಅದರಲ್ಲೇನು ವಿಸ್ಮಯ…? ಸಾಗರದಾಟಿ ಬಂದ ರಾಮ ಜೀವಂತವಾಗಿ ಹೋಗುವುದಿಲ್ಲ. ಇದು ನನ್ನ ಪ್ರತಿಜ್ಞೆ” ಎಂದು ವಿಧ ವಿಧವಾಗಿ ಹೇಳಿದನು ರಾವಣ.

ಇದನ್ನೆಲ್ಲ ಕೇಳಿ ಮಾಲ್ಯವಂತನಿಗೆ ಏನೂ ಹೇಳಬೇಕು ಎಂದನಿಸಲಿಲ್ಲ. ಯಾಕೆಂದರೆ ಒಳಿತಿಗೆ ಅಲ್ಲಿ ಬೆಲೆ ಇರಲಿಲ್ಲ. ರಾಜ ಮರ್ಯಾದೆಕೊಟ್ಟು ಅಲ್ಲಿಂದ ಹೊರಟನು ಮಾಲ್ಯವಂತ. ಇಷ್ಟು ಜನ ಹೇಳಿದರೂ, ರಾವಣನಿಗೆ ತಿಳಿಯಲೇ ಇಲ್ಲ. ತನಗೇನು ಭಯವೇ ಇಲ್ಲ ಎನ್ನುವವನು ಇಡೀ ದಿನ ಅದೇ ಮಂತ್ರಾಲೋಚನೆ. ಮಾಡಿದ್ದೇನು ಅಂದರೆ ಇಲ್ಲಿಯವರೆಗೆ ಮಾಡದ ಸುರಕ್ಷೆಯನ್ನು ಮಾಡಿಸಿದ. ಪ್ರಹಸ್ತನನ್ನು ಕರೆದು, ಪೂರ್ವದ್ವಾರಕ್ಕೆ ನೀನು ನಾಯಕ, ಮಹಾಪಾರ್ಶ್ವ ಮಹೋದರರನ್ನು ಕರೆದು ದೊಡ್ಡ ಸೈನ್ಯದೊಂದಿಗೆ, ದಕ್ಷಿಣದ್ವಾರಕ್ಕೆ ಹೋಗಿ. ಮಗ ಇಂದ್ರಜಿತುವನ್ನು ಕರೆದು ಪಶ್ಚಿಮದ್ವಾರದಲ್ಲಿ ನಿನ್ನ ಗುಂಪಿರಲಿ. ಉತ್ತರ ದ್ವಾರಕ್ಕೆ ಶುಕ ಸಾರುಣರನ್ನು ಕಳುಹಿಸಿದನು. ರಾಮ ಬರುತ್ತಿರುವುದು ಉತ್ತರದಿಕ್ಕಿಂದಲೇ. ಅಷ್ಟೇ ಅಲ್ಲ, ನಾನೇ ಇರ್ತೇನೆ ಅಲ್ಲಿ. ನಗರ ಮಧ್ಯದಲ್ಲಿ ವಿರೂಪಾಕ್ಷನ ಸೈನ್ಯ. ಎಂದು ವ್ಯವಸ್ಥೆ ಮಾಡಿದನು.

ಅತ್ತ ರಾಮಸೇನೆಯಲ್ಲೂ ಆಲೋಚನೆ ನಡೆಯುತ್ತಿದೆ. ನರರಾಜ ರಾಮ, ವಾನರರಾಜ ಸುಗ್ರೀವ, ವಾಯುಪುತ್ರ ಹನುಮಂತ, ಋಕ್ಷರಾಜ ಜಾಂಬವಂತ, ರಾಕ್ಷಸ ವಿಭೀಷಣ, ವಾಲಿಪುತ್ರ ಅಂಗದ, ಸೌಮಿತ್ರಿ ಲಕ್ಷ್ಮಣ, ಶರಭ, ಸುಷೇಣ ಮತ್ತು ಅವನ ಸಹೋದರರು, ಮೈಂದ-ದ್ವಿವಿದರು, ಗಜ, ಗವಾಕ್ಷ, ಗವಯ, ನಲ, ಪನಸ ಇವರೆಲ್ಲರೂ ರಾವಣನ ಲಂಕಾನಗರಿಗೆ ಬಂದವರಾಗಿ ಕೂಡಿ ಚಿಂತೆಮಾಡಿದರು. ಯಾರಿಂದಲೂ ಗೆಲ್ಲಲಾಗದ ನಗರಿ ಇದು, ಹಾಗಾಗಿ ಕಾರ್ಯಸಿದ್ಧಿಗೋಸ್ಕರ ನಾವೆಲ್ಲ ಕೂಡಿ ಆಲೋಚನೆ ಮಾಡೋಣ. ಇದರೊಳಗೇ ಆ ದುಷ್ಟ ರಾವಣನಿದ್ದಾನೆ. ಅವನನ್ನು ಹೇಗೆ ಧ್ವಂಸ ಮಾಡೋದು ಎಂದು ಚಿಂತನೆ ಮಾಡೋಣ. ವಿಭೀಷಣ ಹೇಳಿದನು, ನನ್ನ ನಾಲ್ವರು ಮಂತ್ರಿಗಳು ಅನಲ, ಶರಭ, ಸಂಪತಿ ಮತ್ತು ಪ್ರಹಸ. ಈ ನಾಲ್ವರು ಲಂಕೆಗೆ ಪಕ್ಷಿಗಳಾಗಿ ಹೋಗಿ ಬಂದಿದ್ದಾರೆ, ಲಂಕೆಯನ್ನು ಪೂರ್ತಿ ಗಮನಿಸಿದ್ದಾರೆ. ಶತ್ರುಸೈನ್ಯವನ್ನು ಹತ್ತಿರದಲ್ಲಿ ನೋಡಿದ್ದಾರೆ. ಎಂದು ಹೇಳಿ ವಿಭೀಷಣ ಹೇಳಿದನು, ಪೂರ್ವದಿಕ್ಕಿನಲ್ಲಿ ಸೇನಾಸಮೇತನಾಗಿ ಪ್ರಹಸ್ತನಿದ್ದಾನೆ. ದಕ್ಷಿಣದಲ್ಲಿ ಮಹಾಪಾರ್ಶ್ವ ಮಹೋದರರಿದ್ದಾರೆ. ದಕ್ಷಿಣದಲ್ಲಿ ಇಂದ್ರಜಿತು ಇದ್ದಾನೆ. ಉತ್ತರದಲ್ಲಿ ಶುಕಸಾರಣರೊಡಗೂಡಿ ರಾವಣನೇ ಇದ್ದಾನೆ. ಮಧ್ಯದಲ್ಲಿ ವಿರೂಪಾಕ್ಷ ಇದ್ದಾನೆ. ಹೀಗಿದೆ ಲಂಕೆಯ ರಕ್ಷಣೆ. ಒಂದು ಸಾವಿರ ಆನೆಗಳು, ಗಜಯೋಧರು, ಹತ್ತು ಸಾವಿರ ರಥಗಳು, ಇಪ್ಪತ್ತು ಸಾವಿರ ಕುದುರೆಗಳು, ಅಶ್ವಯೋಧರು, ಒಂದು ಕೋಟಿಯಷ್ಟು ಪದಾಧಿಕಾರಿಗಳು ಸಿದ್ಧರಾಗಿ ಸಜ್ಜಾಗಿದ್ದಾರೆ. ಯುದ್ಧದಲ್ಲಿ ಕೊಲ್ಲೋದನ್ನು ಬಿಟ್ಟು, ಬೇರೆನೂ ಗೊತ್ತಿಲ್ಲ ಇವರಿಗೆ, ರಾಕ್ಷಸ ರಾಜನಿಗೆ ಪ್ರಿಯರು ಇವರು. ಇದರಲ್ಲಿ ಒಬ್ಬೊಬ್ರಿಗೂ ಸಾವಿರ ಸಾವಿರ ಅನುಚರರಿದ್ದಾರೆ. ಇಷ್ಟು ಹೇಳಿ, ಸಚಿವರನ್ನು ಕರೆದು ವಿಭೀಷಣ ಮತ್ತೆ ಹೇಳಿಸಿದನು ಎಲ್ಲವನ್ನು.

ಹಿಂದೆ ಕುಬೇರನ ಜೊತೆ ರಾವಣ ಯುದ್ಧ ಮಾಡುವಾಗ ಅರವತ್ತು ಲಕ್ಷ ಯೋಧರಿದ್ದರು ರಾವಣನ ಜೊತೆಗೆ. ರಾವಣನಿಗೆ ಸಲ್ಲುವಂತವರು. ಈಗ ನಾನು ಹೇಳಿದವರೆಲ್ಲ ಇಷ್ಟೇ ಬಲಶಾಲಿ. ರಾಮ, ನಿನಗೊಂದು ವಿವರಣೆ. ನಿನ್ನ ಮುಂದೆ ಯಾರು? ನೀನು ಹೋಗಿ ಎಲ್ಲ ರಾಕ್ಷಸರನ್ನು ಮರ್ದಿಸುತ್ತೀಯ, ಸಂಶಯವಿಲ್ಲ. ಆದರೆ ಮಾಹಿತಿಗಾಗಿ ಎಂದು ವಿಭೀಷಣ ಹೇಳಿದನು. ನೀಲನು ಪೂರ್ವದ್ವಾರ, ಅಂಗದ ದಕ್ಷಿಣದಲ್ಲಿ, ಪಶ್ಚಿಮದಲ್ಲಿ ಹನುಮಂತ, ಉತ್ತರದಲ್ಲಿ ನಾನೇ ಹೋಗ್ತೇನೆ ಎಂದನು. ಕ್ಷುದ್ರ, ಲೋಕದ ಪ್ರಜೆಗಳ ಪೀಡಿಸುವ ರಾವಣನ ವಿರುದ್ಧ ಲಕ್ಷ್ಮಣನೊಡಗೂಡಿ ನಾನೇ ಎದುರಿಸ್ತೇನೆ. ಮತ್ತೆ ಸುಗ್ರೀವ ಜಾಂಬವಂತ, ವಿಭೀಷಣ ಸೇನಾಮಧ್ಯದಲ್ಲಿರಲಿ ಎಂದನು. ಯುದ್ಧಕ್ಕೆ ನಿಯಮವನ್ನು ಹೇಳಿದನು ರಾಮ, ಯಾವುದೇ ವಾನರ ಮನುಷ್ಯಾಕಾರವನ್ನು ತಾಳಬಾರದು. ಯಾಕೆಂದರೆ ನಾವು ಯಾರು ಎನ್ನುವುದಕ್ಕೆ ನಮ್ಮ ಮೂಲರೂಪವೇ ಇರಲಿ. ಭ್ರಮೆ ಯಾರಿಗೂ ಬೇಡ ಯಾರನ್ನು ಹೊಡೆಯಬೇಕು ಎಂದು. ನಮ್ಮವರ ಜೀವವನ್ನು ನಾವೇ ಕೊಲ್ಲುವಂತಾಗಬಾರದು. ಹಾಗಾಗಿ ಈ ನಿಯಮ ಎಂದನು ರಾಮ. ಸುವೇಲ ಪರ್ವತವನ್ನೇರುವ ಮನಸ್ಸು ಮಾಡಿದನು. ಯಾಕೆಂದರೆ ಅಲ್ಲಿಂದ ಲಂಕೆ ಸರಿಯಾಗಿ ಕಾಣುವುದು. ಅಲ್ಲಿ ಒಂದು ವಿಶೇಷ ಘಟನೆ ನಡೆಯುತ್ತದೆ. ಎಲ್ಲ ಕಪಿಗಳೂ ರಾಮನನ್ನು ಅನುಸರಿಸಿ ಬರ್ತಾ ಇದಾವೆ…

ಮುಂದೇನಾಯಿತು, ಮುಂದಿನ ಪ್ರವಚನದಲ್ಲಿ ಕೇಳೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments