ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಇರುವುದು ಇರಬೇಕಾದಂತೆ ಇರದಿದ್ದರೆ, ಆಗಬೇಕಾಗಿದ್ದು ಆಗಬೇಕಾದಂತೆ ಆಗದಿದ್ದರೆ ಬರುವ , ಬರಬಹುದಾದ, ಬರಬೇಕಾದ ಭಾವವೇ ಕ್ರೋಧ.
ಇರುವುದು ಇರಬೇಕಾದ ಹಾಗೆ ಇರಬೇಕು. ಆಗುವುದು ಆಗಬೇಕಾದ ಹಾಗೆ ಆಗಬೇಕು. ಅಯೋಧ್ಯೆಯ ರತ್ನಸಿಂಹಾಸನದಲ್ಲಿ ರಾಮನಿರಬೇಕು. ರಾಮನು ಭವನವಾಸಿಯಾಗದೆ ವನವಾಸಿಯಾಗಬೇಕು ಎಂದು ತಿಳಿದ ಲಕ್ಷ್ಮಣನಿಗೆ ಕೋಪ ಬಂತು. ಸ್ವತಃ ರಾಮನೇ ಸಮಾಧಾನ ಮಾಡಿದರೂ ಲಕ್ಷ್ಮಣನ ಮನಸ್ಸು ಕ್ರೋಧಕ್ಕೆ ಹೆಚ್ಚು ಒಲಿಯಿತು. ಲಕ್ಷ್ಮಣನ ಕ್ರೋಧವು ಬಿಲದೊಳಗಿನ ಸರ್ಪವು ರೋಷದಿಂದ ಬುಸುಗುಟ್ಟುವ ಹಾಗೆ ಇತ್ತು . ಕ್ರುದ್ಧವಾದ ಸಿಂಹದ ಮುಖದಂತಹ ಮುಖ ,ಆನೆ ತನ್ನ ಸೊಂಡಿಲನ್ನು ಕೊಡುಗುವ ಹಾಗೆ ಕೈತುದಿಯನ್ನು ಕೊಡಗುತ್ತಾ , ಒರೆಗಣ್ಣಿನಿಂದ ಅಣ್ಣನನ್ನು ನೋಡುತ್ತಾ ಮಾತಾನಾಡಿದ.
“ಒಳ್ಳೆಯವರಂತೆ ಕಾಣುವವರೆಲ್ಲ ಒಳ್ಳೆಯವರಲ್ಲ. ಮೋಸವು ಇರುತ್ತದೆ ಎಂದು ಏಕೆ ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ರಾಮನನ್ನು ಪ್ರಶ್ನಿಸಿದನು. ಕೊಟ್ಟ ಮಾತು, ವರ ಇದನ್ನೆಲ್ಲ ಅನ್ಯಾಯ ಮಾಡಲು ಬಳಸಿಕೊಳ್ಳುತ್ತಿದ್ದಾರೆ.

ಧರ್ಮ ಎಂದರೆ ಒಳ್ಳೆಯದನ್ನು ಮಾಡಬೇಕು ನಿನ್ನಂತವನ್ನು ಕಾಡಿಗಟ್ಟುವುದು ಧರ್ಮ ಅಲ್ಲ , ಇಂತಹ ಧರ್ಮವನ್ನು ದ್ವೇಷಿಸುತ್ತೇನೆ ಎಂದು ಲಕ್ಷ್ಮಣನು ಹೇಳಿದನು.
ಶತ್ರುಗಳಿಗೆ ಪಿತೃಗಳೆಂದು ಹೆಸರು ಇದೆಯಾ…??
ಇದೆಲ್ಲ ದೈವ, ವಿಧಿ ಎಲ್ಲ ಅಲ್ಲ. ಇದನ್ನು ತನ್ನ ಪೌರುಷದಿಂದ ಹಿಮ್ಮೆಟ್ಟುತ್ತೇನೆ ಎಂದು ಲಕ್ಷ್ಮಣನು ತನ್ನ ಮಾತನ್ನು ಮುಂದುವರೆಸಿದನು.

ಜೀವನದ ಬಂಡಿಗೆ ಎರಡು ಚಕ್ರಗಳು. 1) ವಿಧಿ 2) ಪುರುಷ ಪ್ರಯತ್ನ.
ಯಾವುದು ಮೊದಲೇ ಬರೆಯಲ್ಪಟ್ಟಿದೆಯೋ ಮತ್ತು ಬದಲಾವಣೆ ಮಾಡಲು ಸಾಧ್ಯವಿಲ್ಲವೋ ಅದು ವಿಧಿ /ಹಣೆಬರಹ.
ನಮ್ಮ ಪ್ರಯತ್ನದಿಂದ ನಮ್ಮ ಜೀವನವನ್ನು ರೂಪಿಸಿಕೊಳ್ಳುವಂತಹದ್ದು ಪುರುಷಪ್ರಯತ್ನ.

ಜನತೆಗೆ ಪುರುಷಪ್ರಯತ್ನವೇ ದೊಡ್ಡದು ಹೊರತು ವಿಧಿ ಅಲ್ಲ ಎಂಬುದನ್ನು ತೋರಿಸುತ್ತೇನೆ ಎಂದು ಹೇಳುತ್ತಾ, ಲೋಕಪಾಲರೇ ಬಂದರೂ, ಅವರು ನನ್ನನ್ನು ಎದುರಿಸಿ ಮುಂದುವರೆಯಬೇಕು , ದಶರಥ – ಕೈಕೇಯಿಯರು ಬೇಕಾದರೆ ವನವಾಸವನ್ನು ಮಾಡಲಿ , ಜೀವನ್ನು ಪ್ರಾರಂಭ ಮಾಡುತ್ತಿರುವ ನಿನಗೆ ವನವಾಸ ಬೇಡ ಎಂದನು.

ರಾಮನು ಇದಕ್ಕೆಲ್ಲ ಒಪ್ಪದೆ ಇದ್ದಾಗ , ಲಕ್ಷ್ಮಣನು ರಾಮನಿಗೆ ನೀನು ಬಾಳುವಷ್ಟು ಬಾಳಿ, ಸಹಸ್ರ ಸಹಸ್ರ ವರ್ಷಗಳ ಕಾಲ ಪ್ರಜಾಪಾಲನೆ ಮಾಡಿ, ಮಕ್ಕಳಿಗೆ ರಾಜ್ಯವನ್ನು ಕೊಟ್ಟು ಆದಮೇಲೆ ವನವಾಸ ಬೇಕಾದರೆ ಮಾಡಬಹುದು ಎಂದನು.

ಯಾರು ಧರ್ಮಕ್ಕಾಗಿ ಯುದ್ಧ ಮಾಡುತ್ತಾ ಸಾಯುತ್ತಾರೋ, ಅವರಿಗೆ ವೀರಲೋಕ ಪ್ರಾಪ್ತಿಯಾಗುತ್ತದೆ.
ಕ್ಷತ್ರಿಯನು ಯುದ್ಧದಲ್ಲಿ ಗೆದ್ದರೆ ಇಹಲೋಕದಲ್ಲಿ ರಾಜ್ಯ, ಸೋತರೆ ವೀರಲೋಕ ದೊರಕುತ್ತದೆ.

ಲಕ್ಷ್ಮಣನು ರಾಮನಿಗೆ ಒಂದುವೇಳೆ ದಶರಥನು ವಿಚಲಿತನಾಗಿ ತನ್ನ ಸೈನ್ಯಕ್ಕೆ ಯುದ್ಧದ ಅಪ್ಪಣೆ ಮಾಡಿದರೆ , ತಾನೊಬ್ಬನೇ ಇಡೀ ಸೈನ್ಯ ಸಮುದಾಯವನ್ನು ಎದುರಿಸುತ್ತೇನೆ ಎಂದನು ಲಕ್ಷ್ಮಣ.
ಬಾಹುಗಳು ಇರುವುದು ಶೋಭೆಗಲ್ಲ. ಧನಸ್ಸು ಇರುವುದು ಅಲಂಕಾರಕ್ಕಲ್ಲ. ಕತ್ತಿ ಇರುವುದು ಸೊಂಟಕ್ಕೆ ಕಟ್ಟಲು ಅಲ್ಲ. ಬಾಣಗಳಿರುವುದು ಬತ್ತಳಿಕೆಯಲ್ಲಿ ಇರುವುದಕ್ಕೆ ಅಲ್ಲ.
ಇದೆಲ್ಲದಕ್ಕೂ ಶತ್ರು ಸಂಹಾರದ ಕಾರ್ಯಗಳಿದೆ ಎಂದು ವೀರತನದ ಮಾತುಗಳನ್ನು ಆಡಿದನು ಲಕ್ಷ್ಮಣ.
ಒಬ್ಬ ವ್ಯಕ್ತಿಯ ಮೇಲೆ ಅನೇಕ ಬಾಣಗಳನ್ನ ಪ್ರಯೋಗ ಮಾಡಿ ಹತಗೊಳಿಸುವುದು ಮತ್ತು ಒಂದೇ ಬಾಣದಿಂದ ಅನೇಕ ಯೋಧರನ್ನು , ಆನೆಗಳನ್ನು , ಅಶ್ವಗಳನ್ನು ಹತಗೊಳಿಸುವುದು ಲಕ್ಷ್ಮಣನಿಗೆ ತಿಳಿದಿತ್ತು.

ಲಕ್ಷ್ಮಣನ ಮಾತುಗಳನ್ನು ಆಲಿಸಿದ ರಾಮನು ಲಕ್ಷ್ಮಣನ ಕಣ್ಣೀರನ್ನು ಒರೆಸಿ, ನಾನು ಪಿತೃವಾಕ್ಯ ಪರಿಪಾಪಲನೆ ಮಾಡುತ್ತೇನೆ , ನೀನು ನನ್ನನ್ನು ಅನುಸರಿಸು ಎಂದು ಲಕ್ಷ್ಮಣನಿಗೆ ಹೇಳಿದನು.

ಆಗ ಇದನ್ನೆಲ್ಲ ಕೇಳಿದ ಕೌಸಲ್ಯೆಯು , ದಶರಥನಿಗೆ ನನ್ನಲ್ಲಿ ಜನಿಸಿದ ರಾಮ ಕಾಡಿಗೆ ಹೋಗಬೇಕಾ?? ಹುಟ್ಟಿದ ಮೇಲೆ ದುಃಖವನ್ನು ಕಾಣದವನು , ಎಲ್ಲರಿಗೂ ಪ್ರಿಯ ಮಾತುಗಳನ್ನು ಆಡಿ ಜೀವನ ಮಾಡಿದವನು, ಧರ್ಮಾತ್ಮನಾದ ರಾಮನು ತನ್ನಿಂದ ದೂರವಾಗಬೇಕಾ?? ರಾಮನ ನೌಕರರು (ಆಳುಗಳು) ಮೃಷ್ಟಾನ್ನವನ್ನು ಊಟ ಮಾಡುವಾಗ, ರಾಮನು ಮಾತ್ರ ಕಾಡಿಗೆ ಹೋಗಿ ಗೆಡ್ಡೆ -ಗೆಣಸನ್ನು ತಿಂದು ಜೀವನ ಮಾಡಬೇಕಾ?? ಎಂದು ಪಶ್ಚಾತ್ತಾಪ ಪಟ್ಟಳು.

ಕೌಸಲ್ಯೆಯು ತನ್ನ ಮಾತನ್ನು ಮುಂದುವರಿಸುತ್ತಾ, ತನ್ನ ಹೃದಯದಲ್ಲಿ ಕ್ರೋಧಾಗ್ನಿಯೊಂದು ಹುಟ್ಟಿಕೊಂಡಿದೆ. ಅದಕ್ಕೆ ರಾಮನ ವಿರಹವೇ ಗಾಳಿ. ಅದು ರಾಮನಿಲ್ಲದಿದ್ದಾಗ ತನ್ನನ್ನು ಸುಡುವುದೆಂದು ಶೋಕಿಸಿದಳು.
ಹೇಗೆ ಗೋವು ಕರುವನ್ನು ಬಿಟ್ಟು ಇರುವುದಿಲ್ಲವೋ ಹಾಗೆ ನಾನು ರಾಮನನ್ನು ಬಿಟ್ಟು ಇರುವುದಿಲ್ಲ ಎಂದು ಕೌಸಲ್ಯೆ ಹೇಳಿದಳು.
ರಾಮನು ಕೌಸಲ್ಯೆಯನ್ನು ಸಮಾಧಾನ ಮಾಡುತ್ತಾ ,
ಪತಿವ್ರತೆಯಾದವಳು ಯಾವ ಕಾರಣಕ್ಕೂ ದೊರೆಯನ್ನು ತ್ಯಾಗ ಮಾಡಬಾರದು ಎಂದನು . ರಾಮನ ಈ ಮಾತಿಗೆ ಕೌಸಲ್ಯೆ ಒಪ್ಪಿದಳು.
ಅದೇಕ್ಷಣದಲ್ಲಿ ಕೌಸಲ್ಯೆಗೆ ಕೈಕೆಯಿಯ ನೆನಪಾಗಿ, ಸವತಿಯರ ಮಧ್ಯೆ ಇರಲಾಗದು, ನಾನು ವನವಾಸಕ್ಕೆ ಬರುತ್ತೇನೆ ಎಂದಳು. ಆಗ ರಾಮನು ಅಳುತ್ತಲೇ ಸಮಾಧಾನ ಮಾಡಿದ. ದೊರೆಯ ಮಾತನ್ನು ಮೀರುವ ಹಾಗಿಲ್ಲ . ನಿನಗೆ ಪತಿಯ ಮಾತನ್ನು ಮೀರುವ ಹಾಗಿಲ್ಲ. ನನಗೆ ತಂದೆಯ ಮಾತನ್ನು ಮೀರುವ ಹಾಗಿಲ್ಲ ಎಂದು ರಾಮನು ಸಮಾಧಾನ ಮಾಡಿ , ನಾನು ಮಾಡಬೇಕಾದ್ದನ್ನು ಧರ್ಮಾತ್ಮನಾದ ಭರತನು ಮಾಡುವನು ಎಂದನು.
ನನ್ನ ವಿರಹದ ಶೋಕದಲ್ಲಿ ದೊರೆ ನಶಿಸಿಹೋಗದಂತೆ ಸಮಾಧಾನ ಮಾಡು ಎಂದು ಕೌಸಲ್ಯೆಗೆ ಹೇಳುತ್ತಾ, ಪಾತಿವ್ರತ್ಯದ ಮಹಿಮೆಯನ್ನು ವಿವರಿಸಿದನು.

ಜೀವನದಲ್ಲಿ ಉತ್ಕೃಷ್ಟವಾದದ್ದನ್ನು ಪಡೆಯಲು ಕಾಲಪ್ರತೀಕ್ಷೆಯನ್ನು ತಪಸ್ಸಿನಂತೆ ಮಾಡಬೇಕು
ನಾನು ಮರಳಿ ಬಂದಾಗ ನೂರು ಪಟ್ಟು ಸುಖ ಬರುತ್ತದೆ ಎಂದು ತಾಯಿಯನ್ನು ಸಮಾಧಾನ ಪಡಿಸಿದನು.

ರಾಮನ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿದ ಕೌಸಲ್ಯೆಯು ರಾಮನಿಗೆ ಮಂಗಲಕಾರ್ಯಗಳನ್ನು ಮಾಡಲು ಮುಂದಾದಳು. ನನ್ನಿಂದ ಇದನ್ನು ತಡೆಯಾಗುತ್ತಿಲ್ಲ .ಆದ್ದರಿಂದ ರಘೋತ್ತಮನೇ ಹೋಗಿ ಬೇಗ ಬಾ ಎಂದಳು.
ಯಾವ ಧರ್ಮವನ್ನು ನೀನು ಪಾಲನೆ ಮಾಡುತ್ತಿಯೋ, ಯಾವ ದೇವರಗಳನ್ನು ನೀನು ಪೂಜಿಸುತ್ತಿಯೋ ಅವುಗಳು ನಿನ್ನನ್ನು ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸಿದಳು.
ಬ್ರಹ್ಮಾಂಡದಲ್ಲಿ ಇನ್ನೇನು ಬಾಕಿ ಇಲ್ಲದಂತೆ ಎಲ್ಲರಿಗೂ ಕೈಮುಗಿದು ರಾಮನನ್ನು ರಕ್ಷಿಸಿ ಎಂದು ಪ್ರಾರ್ಥಿಸಿ , ಪೂಜಿಸಿದಳು.
ರಾಮನ ದಾರಿಯು ಮಂಗಲವಾಗಬೇಕೆಂದು ಹೋಮವನ್ನು ಮತ್ತು ಬಲಿಯನ್ನು ಮಾಡಿಸಿದಳು. ಕೊನೆಯಲ್ಲಿ ತಾನು ಮಾಡುವ ಮಂಗಲವನ್ನು ರಾಮನಿಗೆ ಮಾಡಿ ,ವಿಶಲ್ಯಕರ್ಣಿ ಎನ್ನುವ ವಿಶೇಷ ಗಿಡಮೂಲಿಕೆಯನ್ನು ರಾಮನಿಗೆ ಕಟ್ಟಿ ಅಭಿಮಂತ್ರಣೆ ಮಾಡಿದಳು. ಒಳಗುಳಿದ ಆಯುಧದ ಚೂರುಗಳನ್ನು ಹೊರಹಾಕುವ ವಿಶೇಷ ಶಕ್ತಿ ವಿಶಲ್ಯಕರ್ಣಿ ಗಿಡಮೂಲಿಕೆಗೆ ಇತ್ತು. ಇದೆಲ್ಲದರ ನಂತರ ತುಂಬಾ ಸಂತೋಷಗೊಂಡವಳಂತೆ ,ಶಿಥಿಲವಾಕ್ಯಗಳಿಂದ ಮಾತನಾಡುತ್ತಾ ,ತಬ್ಬಿಕೊಂಡು ಸರ್ವಸಿದ್ದಾರ್ಥನಾಗಿ ಹೋಗಿ ಬಾ ಎಂದಳು. ಮಗನನ್ನು ಪ್ರದಕ್ಷಿಣೆ ಬಂದು ಮತ್ತೆ ಮತ್ತೆ ಆಲಂಗಿಸಿದಳು. ರಾಮನು ತಾಯಿಯ ಪಾದವನ್ನು ಒತ್ತಿ ಒತ್ತಿ ನಮಸ್ಕರಿಸಿದನು.

ತಾಯಿಯ ಆಶೀರ್ವಾದ ಜೀವನದಲ್ಲಿ ವ್ಯಕ್ತಿತ್ವಕ್ಕೆ ಶೋಭೆಯನ್ನು ತರುವುದು

ಕಾಡಿನಿಂದ ಮರಳಿ ಬರುವವರೆಗೆ ಬೇಕಾಗುವುಷ್ಟು ಸಮಾಧಾನ ಮಾಡಿ , ಸೀತೆಯ ಮನೆಗೆ ರಾಮನು ರಾಜಮಾರ್ಗದಲ್ಲಿ ನಡೆದುಕೊಂಡು ಹೊರಟಾಗ ರಾಜಮಾರ್ಗವೇ ಶೋಭಿಸಿತು.
18ವರ್ಷದವಳಾದ ಸೀತೆಗೆ ರಾಜತಂತ್ರದ ಜ್ಞಾನವಿತ್ತು. ಸೀತೆಯು ರಾಮನ ಪ್ರತೀಕ್ಷೆಯನ್ನು ಮಾಡುತ್ತಿದ್ದಳು. ತಲೆ ತಗ್ಗಿಸಿದ ರಾಮನನ್ನು ನೋಡಿ ಸೀತೆಯು ಏನೋ ಅಶುಭ ನಡೆದಿದೆ ಎನ್ನುವುದನ್ನು ಗುರುತಿಸಿ ,ರಾಮನ ಹತ್ತಿರ ಧಾವಿಸಿದಳು. ಸೀತೆಯ ಮುಂದೆ ರಾಮ ತನ್ನ ಮನಸ್ಸಿನಲ್ಲಿರುವದನ್ನು ತೋರಿಸದೆ ಇರಲಾರ.
ರಾಮ ಮತ್ತು ಸೀತೆ ಎಂದರೆ ಸೂರ್ಯ ಮತ್ತು ಸೂರ್ಯಪ್ರಭೆ ಇದ್ದ ಹಾಗೆ, ಅದೆರಡು ಬೇರೆ ಆಗಲು ಸಾಧ್ಯವಿಲ್ಲ ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ.
ನಾವು ಅತೀಯಾಗಿ ಕಾಳಜಿ ಮಾಡುವವರ ದುಃಖವು ಕೇವಲ ಅವರ ಮುಖವರ್ಣದಿಂದಲೇ ಅರ್ಥವಾಗುತ್ತದೆ
ತುಂಬಾ ದುಃಖದಿಂದ ಸೀತೆಯು ಈ ಹೊತ್ತಿನಲ್ಲಿ ಯಾಕಿಷ್ಟು ಬೇಸರ ಎಂದು ರಾಮನಿಗೆ ಕೇಳಿದಳು. ಶ್ವೇತ ಛತ್ರಗಳು ವಾಗ್ಮಿಗಳು , ಮಂತ್ರಿಗಳು, ಸೇನಾಪತಿಗಳು, ಪೌರರು, ಜನಪದರು, ರಾಜ ರಥ, ಶತ್ರುಂಜಯವೆಂಬ ಆನೆ ,ಭದ್ರಾಸನ ಎಲ್ಲ ಎಲ್ಲಿ ಹೋಯಿತು ಎಂದು ಸೀತೆಯು ರಾಮನನ್ನು ಪ್ರಶ್ನಿಸಿದಳು.

ಮುಂದೆ ರಾಮನು ಸೀತೆಗೆ ಹೇಗೆ ಉತ್ತರಿಸಿದ ಎನ್ನುವ ಸೀತಾರಾಮ ಸಂವಾದ ಭಾಗವನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:

 

 

ಪ್ರವಚನವನ್ನು ನೋಡಲು:

Facebook Comments