ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಅತ್ತ ರಾವಣನು ತನ್ನ ನೆಲೆಯನು ಸೇರಿದ್ದಾನೆ. ಇತ್ತ ಶೂರ್ಪನಖಿ ತನ್ನ ನೆಲೆಯನು ಬಿಟ್ಟಿದ್ದಾಳೆ.
ಮಾರೀಚನ ಮಾತನ್ನು ಕೇಳಿದ ಬಳಿಕ ಸೀತಾಪಹರಣ ಸುಲಭವಲ್ಲ ; ಎಂಬುದನ್ನು ತಿಳಿದು ಲಂಕೆಯನ್ನು ಸೇರಿದ್ದಾನೆ. ಇತ್ತ ಶೂರ್ಪನಖಿಯು ಮಳೆಗಾಲದ ಮೋಡದಂತೆ ಶೋಕಿಸಿದಳು. ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮನು ಸಂಹಾರ ಮಾಡಿದ್ದನ್ನು ನೋಡಿ ಬೊಬ್ಬಿರಿದಳು. ಗಂಡ ಸತ್ತ ದುಃಖವನ್ನು ಕಳೆಯಲು ಆಕೆ ಪಂಚವಟಿಯಲಿ ಇದ್ದಳು. ಈಗ ರಾಮನು ಮಾಡಿದ ಕಾರ್ಯವನ್ನು ನೋಡಿ ಭೀತಳಾಗಿ ನೇರವಾಗಿ ಲಂಕೆಗೆ ಹೋದಳು.

ಲಂಕೆಯನು ತಲುಪಿದ ಶೂರ್ಪನಖಿಯು ಎತ್ತರವಾದ ಆಸನದಲ್ಲಿ ಬೆಂಕಿ ಉರಿದಂತೆ ಬೆಳಗುತ್ತಿದ್ದ ರಾವಣನ ಸುತ್ತಲೂ ದುರ್ಧರ, ನಿಕುಂಭರರೊಳಗಾದ ನಾಲ್ಕು ಮಂತ್ರಿ ಗಣಗಳು ಇದ್ದವು. ಅವನ ಆಸನವೇ ಸೂರ್ಯನಂತೆ ಇತ್ತು. ಬಂಗಾರದ ವೇದಿಕೆಯಲ್ಲಿ ಜ್ವಲಿಸಿ ಉರಿಯುವ ಬೆಂಕಿಯಂತೆ ರಾವಣನು ಪ್ರಜ್ವಲಿಸುತ್ತಿದ್ದನಂತೆ .
ಆತ ಶೂರನೂ ಹೌದು! ಅಜೇಯನು ಹೌದಾದರೂ ಯಾರನ್ನಾದರೂ ತಿನ್ನಬೇಕೆಂದಿರುವಂತಿತ್ತು.
ಅಷ್ಟಲ್ಲದೇ ತನ್ನ ಮೈಮೇಲೆ ಐರಾವತದಿಂದಾಗಿರುವ ಗಾಯಗಳನ್ನು ಹಾಗೆ ಇಟ್ಟಿದ್ದಾನಲ್ಲದೇ, ಛತ್ರ-ಚಾಮರಗಳಿದ್ದವು. ಆತನಿಗೆ ಇಪ್ಪತ್ತು ಭುಜಗಳು, ಹತ್ತು ಕೊರಳುಗಳು, ಅಪರಂಜಿ ಕುಂಡಲಗಳನ್ನು ಧರಿಸಿದ್ದ ಮತ್ತು ಬೃಹದಾಕಾರ ಶರೀರ, ಮಹಾಭುಜಗಳು, ವೈಢೂರ್ಯದ ಬಣ್ಣ, ಬಿಳುಪಾದ ಹಲ್ಲು, ಶುಕ್ಲವದನ, ದೊಡ್ಡ ಬಾಯಿ.

ಮಹಾಸಂಗ್ರಾಮಗಳಲ್ಲಿ ವಿಷ್ಣು-ಚಕ್ರ ಮೊದಲಾದ ಮಹಾ ಆಯುಧಗಳಿಂದಾದ ಗಾಯಗಳನ್ನು ಉಳಿಸಿಕೊಂಡಿರುವವ, ಕ್ಷಿಪ್ರ ಕಾರ್ಯದವ, ಪರ್ವತಗಳನ್ನು ಕಿತ್ತೊಗೆಯಬಲ್ಲ ಸಾಮರ್ಥ್ಯದವ, ದೇವತೆಗಳನ್ನು ಲೀಲಾಜಾಲವಾಗಿ ಹೊಸಕಿ ಹಾಕಿದವ, ಧರ್ಮವೆಂಬ ವ್ಯವಸ್ತೆಯ ಸದಾ ಭಂಗಕ್ಕೆ ಸಿದ್ಧನಿರುವವ, ನಿರಂತರ ಪರ-ಸ್ತ್ರೀಯರ ಚಾರಿತ್ರ್ಯ ಹಾಳು ಮಾಡುವವ, ವಿಚಿತ್ರ ಅಸ್ತ್ರಗಳ ತಿಳಿದವ, ಯಜ್ಞ ಭಂಗಕಾರಕ, ವಾಸುಕಿಯನು ಯುದ್ಧದಲ್ಲಿ ಸೋಲಿಸಿ; ನಾಗಗಳ ರಾಜನಾದ ತಕ್ಷಕನ ಪ್ರಿಯ ಪತ್ನಿಯ ಅಪಹರಿಸಿ ತಂದವ, ನರವಾಹನನಾದ ಕುಬೇರನನು ಸೋಲಿಸಿ ಪುಷ್ಪಕ ವಿಮಾನ ತಂದವನು, ದೇವೋದ್ಯಾನಗಳನ್ನು ನಾಶಮಾಡುವವ, ಪ್ರಕೃತಿಯನ್ನು ಅಸ್ಥವ್ಯಸ್ಥ ಮಾಡುವವ ಆದರೆ ಇದಕ್ಕಿಂತ ಪೂರ್ವದಲ್ಲಿ ಬ್ರಹ್ಮನನ್ನು ಒಲಿಸುವುದಕ್ಕಾಗಿ ಹತ್ತುಸಾವಿರ ವರುಷಗಳ ಕಾಲ ತಪಸ್ಸನ್ನಾಚರಿಸಿ ಸಂಪೂರ್ಣ ಅಮರತ್ವಕ್ಕಾಗಿ ಕೇಳಿದಾಗ, ಬ್ರಹ್ಮದೇವ ನಿರಾಕರಿಸಿದ ಪರಿಣಾಮವಾಗಿ, ಮನುಷ್ಯ ಮತ್ತು ಮರ್ಕಟಗಳನ್ನು ಹೊರತುಪಡಿಸಿ, ದೇವತೆಗಳು, ಋಷಿ, ನಾಗಗಳಿಂದ, ಯುದ್ಧಗಳಿಂದ ಭಯವಿಲ್ಲ, ಸಂಹಾರ ಮಾಡುವಂತಿಲ್ಲ ಎಂಬ ವರವನ್ನು ಪಡೆದಯಕೊಳ್ಳುವನು ರಾವಣ.

ಯಜ್ಞಗಳಿಗವಶ್ಯವಾದ ಸೋಮರಸವನು ಅಪಹರಿಸಿ ಕೊನೆಹಂತದಲ್ಲಿ ಯಜ್ಞ-ಭಂಗವನ್ನು ಮಾಡುವವ, ಕ್ರೂರ, ಬ್ರಾಹ್ಮಣ ದ್ವೇಷಿ, ದುಷ್ಟಾಚಾರ, ಮೃದುತ್ವದ ಶಬ್ಧವಿಲ್ಲ, ಕರುಣೆಯ ಮಾತಿಲ್ಲ, ಜೀವರಾಶಿಗಳ ಕೇಡಿನಲಿ ಸದಾ ಆಸಕ್ತ, ಅದಕ್ಕಾಗಿಯೇ ಸಂಕಲ್ಪ ಮತ್ತು ನಿರಂತರ ಚಿಂತನಶೀಲ, ರಾಕ್ಷಸ, ದಶಗ್ರೀವ, ದಶಕಂಠ, ತಾನು ಮಾಡಿದ ಅಕಾರ್ಯಗಳಿಂದ, ಮಾಡಿದ ಕೃತ್ಯಗಳಿಂದ ಬಂದ ಹೆಸರು ‘ರಾವಣ’. ಅವನ ಹೆಸರು ಕೇಳಿದರೆ ಸಮಸ್ತಲೋಕ ನಡುಕ, ಭೀತಿಗೊಳ್ಳುತ್ತಿತ್ತು. ಉತ್ತಮ ಆಸನದಲ್ಲಿ ಶೋಭಿಸುತ್ತಿದ್ದ ರಾಕ್ಷಸೇಂದ್ರನನ್ನು ಪುಲಸ್ತ್ಯ ಕುಲದಲ್ಲಿ ಜನಿಸಿದ ರಾವಣನು ಮಂತ್ರಿಪರಿವಾರದ ನಡುವೆ ಕುಳಿತಿದ್ದ ಆ ಸಮಯದಲ್ಲಿ ಶೂರ್ಪನಖಿಯು ಅರಮನೆಯನ್ನು ಪ್ರವೇಶಿಸುವಳು. ಭಯ ವಿಹ್ವಲಳಾಗಿ ಮೊದಲು ಲಕ್ಷ್ಮಣನು ಕತ್ತರಿಸಿ ಹಾಕಿದ ತನ್ನ ಮೂಗು-ಕಿವಿಗಳನ್ನು ಪ್ರದರ್ಶಿಸಿದಳು ಹಾಗೆಯೇ ಭಯ, ಮೋಹ ಸೇರಿದವಳಾಗಿ ಪೂರ್ತಿ ನಡುಗಿ ಹೋಗಿದ್ದಳು ಶೂರ್ಪನಖಿ.

ಅವಳಲ್ಲಿ ದೈನ್ಯ, ಕ್ರೋಧವಿತ್ತು, ಸುತ್ತ-ಮುತ್ತ ಯಾರಿದ್ದಾರೆಂದು ನೋಡದೆ ಶೂರ್ಪನಖಿಯು ರಾವಣನನು ಜರಿದಳು. ಕಾಮಪೂಜಿತನಾದ ನಿನಗೆ ಹೇಳುವವರಿಲ್ಲ, ಕೇಳುವವರಿಲ್ಲ, ಮತ್ತ ಪ್ರಮತ್ತನಾಗಿರುವ ನಿನಗೆ, ಬಂದ ಕಷ್ಟ ಗೊತ್ತಾಗುವುದಾದರೂ ಹೇಗೆ???, ರಾಜನಾದವನಿಗೆ ಸದಾಚಾರರು ಇರಬೇಕು, ತನ್ನ ಕೈಯಲ್ಲಿ ತಾನಿರದ ದೊರೆಯನ್ನು ಜನರು ಬಿಟ್ಟುಬಿಡುತ್ತಾರೆ/ದೂರವಿರುವರು.

ರಾಜರಾದವರು ತಮ್ಮ ತಮ್ಮ ರಾಜ್ಯವನ್ನು ಕಾಪಾಡಬೇಕು. ಆದರೆ ನೀನು ಅಸ್ವಾಧೀನನಾದರೆ ಶೋಭಿಸುವುದು ಹೇಗೆ?, ನೀನು ದೊಡ್ಡವರನ್ನು ದ್ವೇಷಿಸಿದ್ದೀಯ, ನಿನಗಿನ್ನು ಮಕ್ಕಳಾಟಿಕೆ, ರಾಜನಾದವನು ತಿಳಿಯಬೇಕಾದದ್ದನ್ನು ತಿಳಿಯದೇ ಇದ್ದರೆ, ರಾಜನಾಗಲು ಹೇಗೆ ಸಾಧ್ಯ?, ಸರಿಯಾದ ರಾಜ-ನೀತಿ ಇಲ್ಲ, ರಾಜನಿಗೆ ಉತ್ತಮವಾದ ಚಾರರು, ಕೋಶಗಳು ಸರಿ ಇರಬೇಕು. ನೀನು ಹೇಗೋ ನಿನ್ನ ಚಾರರು ಹಾಗೆ. ಇವೆಲ್ಲವೂ ಸರಿಯಾಗಿ ಇಲ್ಲದ ರಾಜ್ಯದ ರಾಜನು ಸಾಮಾನ್ಯ/ಕ್ಷುದ್ರಕ್ಕೆ ಸಮಾನ.

೧೪ ಸಾವಿರ ರಾಕ್ಷಸರನ್ನು ರಾಮನು ಕೊಂದದ್ದರಿಂದ ದಂಡಕಾರಣ್ಯವು ಸುಭಿಕ್ಷವಾಗಿದೆ, ಋಷಿಗಳಿಗೆ ಅಭಯವಾಗಿದೆ. ನಮ್ಮ ಜನಸ್ಥಾನವನ್ನು ರಾಮನು ಆಕ್ರಮಿಸಿದ್ದಾನೆ. ರಾಮನು ಅಕ್ಲಿಷ್ಟ ಕರ್ಮ. ಆದರೆ ನೀನೋ ಇದ್ದೀಯ; ನೀನು ಮಹಾಲೋಭಿ, ಅಮಲೇರಿದೆ ನಿನಗೆ, ಭಯವಾದಾಗ ಭಯ ಪಡಬೇಕು. ರಾಜ್ಯವನು ಕಳೆದುಕೊಂಡ ರಾಜ ನಿರರ್ಥಕನಾಗುವ, ರಾಜನಾದವ ನೀತಿಚಕ್ಷುವಾಗಿರಬೇಕು; ಆದರೆ ನಿನ್ನಲ್ಲಿರುವುದು ದುರ್ಬುದ್ಧಿ, ಹೀಗಾದರೆ ನೀನು ಸರ್ವನಾಶವಾಗಿ ಹೋಗುತ್ತೀಯ ಎಂದೆಲ್ಲಾ ಶೂರ್ಪನಖಿ ಹೇಳಿದಾಗ, ರಾವಣನು ಬಹು ಹೊತ್ತು ಆಲೋಚಿಸಿ, ಚಿಂತಿಸಿದ. ರಾಮನ ಶಕ್ತಿಯ ಬಗ್ಗೆ ಚಿಂತಿಸಿದ.

ಕೊನೆಗೆ ಕೋಪಗೊಂಡು ಶೂರ್ಪನಖಿಯಲ್ಲಿ ಪ್ರಶ್ನೆಗಳನ್ನು ಕೇಳಿದ. ಯಾರು ರಾಮನೆಂದರೆ? ಏನವನ ಪರಾಕ್ರಮ? ದಂಡಕಾರಣ್ಯಕೆ ರಾಮ ಬಂದನೇಕೆ? ರಾಮನ ಆಯುಧ ಯಾವುದು? ಆಗ ಶೂರ್ಪನಖಿಯು ರಾಮನ ಕುರಿತಾಗಿ ಆತ ದೀರ್ಘಬಾಹು, ವಿಶಾಲನೇತ್ರ, ನಾರುಬಟ್ಟೆ ಉಟ್ಟಿದ್ದಾನೆ, ಒಳ್ಳೆಯ ಮನ್ಮಥನಂತಿದ್ದಾನೆ. ಇಂದ್ರ ಧನುಸ್ಸಿನಂತಹ ಬಿಲ್ಲು, ದಶರಥನ ಮಗ, ಎಂಥಾ ಅದ್ಭುತ ಕೌಶಲ್ಯ, ಕ್ಷಿಪ್ರ ಯುದ್ಧವನ್ನು ಮಾಡುವಾಗ ಏನೂ ಗೊತ್ತಾಗದು; ಏಕೆಂದರೆ, ರಾಕ್ಷಸ ಸೈನ್ಯವು ಯುದ್ಧದಲ್ಲಿ ಬೀಳುವುದು ಮಾತ್ರ ತೋರಿದವು, ಹುಲುಸಾದ ಭತ್ತದ ಗದ್ದೆಗೆ ಕಲ್ಲುಗಳು ಬಿದ್ದಂತೆ ರಾಕ್ಷಸರೆಲ್ಲ ಬಿದ್ದರು. ಖರ ದೂಷಣರ ಸೈನ್ಯವು ನಾಶವಾಗಿ, ಋಷಿಗಳಿಗೆ ಅಭಯವಾಯಿತು. ದಂಡಕಾರಣ್ಯವು ಕ್ಷೇಮವಾಯಿತು. ನಾನು ಹೇಗೋ ಬದುಕಿ ಬಂದೆನೆಂದು ಹೇಳಿದಳು. ರಾಮನಲ್ಲದೇ ಅವನ ಅನುರಕ್ತನಾದ ಲಕ್ಷ್ಮಣನಿದ್ದಾನೆ. ಇವನಷ್ಟು ತಾಳ್ಮೆ ಇಲ್ಲ, ದುರ್ಜಯ, ಬಲಶಾಲಿ, ರಾಮನ ಬಲಗೈ, ಅವನು ರಾಮನ ಪ್ರಾಣ, ರಾಮನಿಗೆ ಹತ್ತಿರ ಎಂದು ಲಕ್ಷ್ಮಣನ ಕುರಿತಾಗಿ ಹೇಳುವಳು.

ಅನಂತರ ಸೀತೆಯ ಕುರಿತಾಗಿ; ವಿಶಾಲ ನೇತ್ರಳಾದ ಆಕೆ ಪೂರ್ಣಚಂದ್ರ ಸದೃಶಳಾದ ಅವಳು ರಾಮನ ಧರ್ಮಪತ್ನಿ, ಆಕೆ ಅದ್ಭುತ, ರಾಮನ ಪರಮ ಪ್ರಿಯೆ, ಅವಳ ಕೇಶ-ಪಾಶ, ಅಂಗ ವಿನ್ಯಾಸ, ರೂಪ ಎಂತದ್ದು ಅದ್ಭುತ. ಅವಳಂಥ ಯಾವ ದೇವಿಯನ್ನು, ಗಂಧರ್ವಿಯನ್ನು ನಾನು ನೋಡಿಲ್ಲ. ಆಕೆ ಇಡೀ ವನಕ್ಕೆ ದೇವತೆಯಂತಿದ್ದಾಳೆ. ಇನ್ನೊಂದು ಲಕ್ಷ್ಮಿಯಂತಿರುವಳು, ಅಪರಂಜಿ ಮೈಬಣ್ಣ ಆಕೆಯದು. ಸೀತೆಯನ್ನು ಪ್ರೀತಿಸಿದವ, ಧರ್ಮಪತ್ನಿಯಾಗಿ ಪಡೆದವ ದೇವೇಂದ್ರನ ಸುಖ, ಅದು ನಿಜವಾದ ಸುಖ, ಆಕೆ ಶೀಲವಂತೆ. ಅದೃಶ್ಯಳಾದ ಆ ಸೀತೆ, ನಿನಗೆ ಸರಿಯಾದ ಪತ್ನಿ, ಆಕೆಗೆ ಸರಿಯಾದ ಪತಿ ನೀನೆ. ನಿನಗಾಗಿ, ಎತ್ತಿ ತರಲು ಹೊರಟೆ ಆದರೆ ಆಗ ಲಕ್ಷ್ಮಣ ಬಂದು ಹೀಗೆ ಮಾಡಿ ಬಿಟ್ಟ. ನೀನು ಒಂದು ಬಾರಿ ಆಕೆಯನು ನೋಡಿಬಿಟ್ಟರೆ, ಸಂಪೂರ್ಣ ಆಕೆಯ ವಶವಾಗುತ್ತೀಯ. ಇಂತಹ ಒಂದು ವಿಜಯವು ಪ್ರಾಪ್ತಿಯಾಗಬೇಕೆಂದಾದರೆ, ಬಲಗಾಲೆತ್ತಿ ಮುಂದಿಡು.

ಇದು ಒಂದಾದರೆ ಮುಖ್ಯವಾದ ಇನ್ನೊಂದು ಪ್ರಯೋಜನವಿದೆ ಎಂದು ರಾವಣನ ಮನಸಿನ ದಿಕ್ಕು ತಪ್ಪಿಸುವಳು ಶೂರ್ಪನಖಿ. ನನ್ನ ಮಾತು ಇಷ್ಟವಾಯಿತೇ, ಎಂದೆಲ್ಲಾ ಕೇಳಿದ ಮೇಲೆ, ನೀನು ಸೀತೆಯನ್ನು ಅಪಹರಿಸಿದರೆ ರಾಮನ ಕೈಯಲ್ಲಿ ಸತ್ತ ರಾಕ್ಷಸರ ಆತ್ಮಕ್ಕೆ ಶಾಂತಿ ಸಿಗುವುದು. ಅಪೂರ್ವ ಸದೃಶ್ಯಳಾದ ಅವಳೆಷ್ಟೆಂದರೂ ಅಬಲೆ, ಯಾವುದೇ ವಿಮರ್ಶೆಯನು ಮಾಡದೇ ನಾನು ಹೇಳಿದ್ದನ್ನು ಮಾಡು ಎಂದು ರಾವಣನ ರೋಮ ನಿಮಿರುವಂತೆ ಮಾತಾಡಿ ಶೂರ್ಪನಖಿಯು ತೆರಳುವಳು.

ಅನಂತರ ತನ್ನ ಸಚಿವರನ್ನು ಕಳುಹಿಸಿಕೊಟ್ಟು ಈ ವಿಚಾರವಾಗಿ ಸಾಧಕ-ಭಾದಕಗಳನ್ನು ಚಿಂತಿಸಿದ. ಒಂದು ಯೋಜನೆಯನ್ನು ಹಾಕಿ ದೃಢ ನಿಶ್ಚಯವನ್ನು ಮಾಡಿ ಗುಟ್ಟಾಗಿ, ಯಾರಿಗೂ ತಿಳಿಯದಂತೆ, ಅಡಗಿ ತನ್ನ ಯಾನ ಶಾಲೆಗೆ ಹೋಗಿ, ಸಾರಥಿಯಲ್ಲಿ ರಥವನ್ನು ಸಜ್ಜುಗೊಳಿಸಲು ಹೇಳಿದ. ಸಾರಥಿಯು ಕ್ಷಣಮಾತ್ರದಲ್ಲಿ ರಥವನ್ನು ಸಜ್ಜುಗೊಳಿಸಿದ ಕಾಂಚಾಣ ರಥವನು ರಾವಣನು ಏರಿದ. ರಥಗಳು ಗುಡುಗಿನ ಶಬ್ದಗಳೊಂದಿಗೆ ಹತ್ತು ಶಿಖರಗಳ ಗಿರಿಯಂತೆ ಬೆಳಗಿದ ರಾಕ್ಷಸೇಶ್ವರನಾದ ರಾವಣ ರಥದಲ್ಲಿ ಸಮುದ್ರ ತೀರದತ್ತ ತೆರಳಿದ.

ಸಮುದ್ರದ ಆಚೆ ಬದಿ, ಪುಷ್ಪಗಳು, ಯಜ್ಞವೇದಿಕೆ, ಪರಮ ಮಹರ್ಷಿಗಳು, ಗಂಧರ್ವ-ಕಿನ್ನರರು, ಬಾಳೆ, ತೆಂಗು, ಮುಂತಾದ ಫಲ-ಹಣ್ಣುಗಳಿಂದ ಕೂಡಿದ ಜಾಗ ಆ ಕಡೆಯ ತೀರ. ಮುಂದಕ್ಕೆ ಸಾಗುತ್ತಿದ್ದಂತೆ, ಧೂಪ, ಚಂದನದ ವನಗಳು, ಬೇರೆ ಬೇರೆ ವನಗಳು ಮತ್ತು ಹವಳ, ಶಂಖ ಮುಂತಾದವುಗಳಿದ್ದವು. ಪ್ರಸನ್ನ ಸರೋವರ ಹಾಗೂ ಸಮುದ್ರ ತೀರದಲ್ಲಿ ಬಹುದೊಡ್ಡ ಆಲದ ಮರ, ಅದರಲ್ಲಿ ಗರುಡನ ಚಿಹ್ನೆ.

ಅಲ್ಲಿದ್ದ ಮಾರೀಚನ ಆಶ್ರಮಕ್ಕೆ ಹೋದ ರಾವಣನು, ಆಶ್ರಮವಾಸಿಯಾಗಿ, ಜಟಾಧಾರಿಯಾಗಿ, ಆಹಾರ ನಿಯಮಮಾಡಿ ಮುನಿಯಾಗಿ ಬಿಟ್ಟಿದ್ದ ಮಾರೀಚನು ರಾವಣನು ಬಂದದುದನ್ನು ಗಮನಿಸಿ, ಮತ್ತೆ ಏಕೆ ಬಂದೆ? ಎಂದು ಕೇಳಿದಾಗ ರಾವಣನು ಬಂದಿರುವ ಉದ್ದೇಶವನ್ನು ತಿಳಿಸುವಾಗ ಅವರಿಬ್ಬರ ನಡುವೆ ಸಂವಾದವು ನಡೆಯುವುದು. ಅದನ್ನು ನಾವು ಶ್ರೀಸಂಸ್ಥಾನದವರು ನಡೆಸಿಕೊಡುವ ಮುಂದಿನ ಧಾರಾ ರಾಮಾಯಣ ಪ್ರವಚನದ ಕಥಾ ಭಾಗದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments