ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಸ್ವರ್ಣಗೌರೀ ವ್ರತ, ಗಣೇಶ ಚತುರ್ಥಿಯ ಮಹಾಪರ್ವಕಾಲವಿದು. ಗಣಪತಿ ಎಂದರೇ ವಿಘ್ನಕರ್ತ, ವಿಘ್ನಹರ್ತ. ಈ ಕಥೆ, ‘ಶ್ರೀ’ ಕಥೆಯೂ ಅಂಥದ್ದೇ. ರಾವಣನು ರಾಮನ ಸುಖೀ ಸಂಸಾರಕ್ಕೆ ವಿಘ್ನವೊಂದನ್ನು ತಂದೊಡ್ಡಿದನು. ಆ ವಿಘ್ನವನ್ನೇ ಬಳಸಿಕೊಂಡು ಆ ರಾಮನು ಬ್ರಹ್ಮಾಂಡದ ಮಹಾ ವಿಘ್ನವೊಂದನ್ನು ಪರಿಸಂಹಾರ ಮಾಡಿದನು. ಇದು ರಾಮಾಯಣ. ಇಡೀ ರಾಮಾಯಣವೇ ಇದರಲ್ಲಿ ಬಂತು. ಹಾಗೆಯೇ, ಆ ವಿಘ್ನಕರಣ, ವಿಘ್ನಹರಣದ ಆಟವನ್ನು ಭಾವಿಸ್ತಾ ಆ ವಿಘ್ನೇಶ್ವರನನ್ನು ನಮಿಸಿ ಕಥೆಗೆ ಮುಂದುವರಿಯೋಣ.

ಮನುಷ್ಯ ತಪ್ಪು ಮಾಡಬೇಕಾದರೆ ಅದಕ್ಕೆ ಅನೇಕ ಕಾರಣಗಳಿವೆ. ಮೂರು ಪ್ರಮುಖ ಕಾರಣಗಳು.
ಭಯ, ಆಮಿಷ ಮತ್ತು ಅಹಂ. ಇವುಗಳಿಂದಾಗಿ ಮನುಷ್ಯ ತಪ್ಪು ಮಾಡ್ತಾನೆ.
‘ಅವನು ಹಾಗೆ ಮಾಡ್ತಿರಲಿಲ್ಲ. ಆದರೆ ಅವನಿಗೆ ಒತ್ತಡ ಇತ್ತು, ಭಯ ಇತ್ತು. ಭಯದ ಕಾರಣದಿಂದ ಹಾಗೆ ಮಾಡಿದ..’ ಮಾರೀಚನೇ ಉದಾಹರಣೆ ಇದಕ್ಕೆ.
ಅಥವಾ.. ಆಮಿಷದಿಂದ. ಸಹಜವಾಗಿ ಮಾಡುವವನಲ್ಲ, ಆದರೆ ಆಸೆಗೆ ವಶನಾಗಿ ತಪ್ಪು ಮಾಡುವುದನ್ನು ಕಂಡೇ ಕಾಣ್ತೇವೆ ನಾವು. ಇತಿಹಾಸವೆಲ್ಲ ಇಂತಹ ತಪ್ಪುಗಳಿಂದಲೇ ಕೂಡಿದೆ. ಒಂದು ಅನಿಷ್ಟವನ್ನು ತಪ್ಪಿಸಿಕೊಳ್ಳುವ ಸಲುವಾಗಿ ತಪ್ಪು ಮಾಡುವಂಥದ್ದು, ಒಂದು ಇಷ್ಟ ಪ್ರಾಪ್ತಿಯಾಗುತ್ತದೆ ಎಂದಾಗ ಅದಕ್ಕೆ ಬೇಕಾಗಿ ತಪ್ಪು ಮಾಡುವಂಥದ್ದು.
ಕೊನೆಯದ್ದು ಅಹಂ. ಪ್ರತಿಷ್ಠೆಗೆ ಪೆಟ್ಟು ಬಿದ್ದಾಗ, ಗರ್ವಕ್ಕೆ ಸಂಚಕಾರ ಬಂದಾಗ ಮನುಷ್ಯ ತಪ್ಪು ಮಾಡ್ತಾನೆ‌.

ಶೂರ್ಪಣಖಿ ರಾವಣನ ದಿಕ್ಕು ತಪ್ಪಿಸಲೆಂದೇ ಹೋಗಿದ್ದು ಲಂಕೆಗೆ. ತಪ್ಪು ಮಾಡಿಸಬೇಕೆಂದೇ ಅವನ ಕೈಯಿಂದ. ಅದಕ್ಕಾಗಿ ಆಕೆ‌ ಹೋಗಿದ್ದು. ಈ ಮೂರನ್ನೂ ಆಕೆ ಬಳಸ್ತಾಳೆ. ಶುರು ಮಾಡುವುದು ಎಲ್ಲಿಂದ ಅಂದ್ರೆ, ‘ನಿನ್ನ ಸಾಮ್ರಾಜ್ಯಕ್ಕೆ ಆಪತ್ತು ಬಂದಿದೆ. ಮಹಾ ಭಯವೊಂದು ನಿನ್ನ ಮುಂದೆ ಉಪಸ್ಥಿತವಾಗಿದೆ, ಎಚ್ಚೆತ್ತುಕೋ!’
ಶೂರ್ಪಣಖಿ ಸೀತೆಯನ್ನು ಇನ್ನೇನು ತಿನ್ನುತ್ತಾಳೆ ಎನ್ನುವಾಗ ಶೂರ್ಪಣಖಿಯ ಕಿವಿ ಮೂಗುಗಳನ್ನು ಕತ್ತರಿಸಲು ಹೇಳಿದ್ದು ರಾಮ. ಖರನ ವಧೆಯನ್ನು ರಾಮ ತನ್ನ ಪ್ರಾಣರಕ್ಷಣಾರ್ಥವಾಗಿ ಮಾಡಿದ್ದು. ರಾಮನಿಗೇನು ಲಂಕೆಗೆ ದಂಡೆತ್ತಿ ಹೋಗುವ ಉದ್ದೇಶವಿಲ್ಲ. ಆದರೆ ಶೂರ್ಪಣಖಿ ಹೇಗೆ ಬಿಂಬಿಸ್ತಾಳೆ ಅಂದರೆ, ‘ನಿನ್ನ ಸೀಮಾಂತ ಬಲ ಹತವಾಗಿದೆ, ನಿನಗೇನೂ ಗೊತ್ತಾಗ್ತಾ ಇಲ್ಲ, ನಿನ್ನ ರಾಜ್ಯದ ಮೇಲೆ ಅತಿಕ್ರಮಣವಾಗಿದೆ’ ಎನ್ನುವ ಹಾಗೆ ಅದನ್ನು ರಾವಣನ ಮುಂದೆ ಬಿಂಬಿಸ್ತಾಳೆ, ಭಯವನ್ನು ರಾವಣನ ಮುಂದೆ ತಂದೊಡ್ತಾಳೆ.
ಇನ್ನೊಂದು, ಆಮಿಷ! ‘ಲೋಕೈಕ ಸುಂದರಿ ಸೀತೆ!’ ರಾವಣನ ಸ್ತ್ರೀ ದೌರ್ಬಲ್ಯವನ್ನು ಚೆನ್ನಾಗಿ ಅರಿತು ಹೇಳ್ತಾಳೆ. ಸೀತೆಯನ್ನು ನಿನ್ನವಳಾಗಿಸಬೇಕೆಂದರೆ ನೀನು ರಾಮ ಲಕ್ಷ್ಮಣರ ಜೊತೆ ಯುದ್ಧಕ್ಕೆ ಹೋಗಬೇಕು.
ಮೂರನೆಯದು, ಅಹಂ. ಆವರೆಗೆ ರಾವಣನೆಂದರೆ ಎಲ್ಲರೂ ಗಡಗಡನೆ ನಡುಗುತ್ತಾರೆ. ವಿಲಕ್ಷಣ ತೃಪ್ತಿಯದು, ರಾವಣನಿಗೆ ಭಾರೀ ಪ್ರಮಾಣದಲ್ಲಿತ್ತು. ಏಕೆಂದರೆ, ದೇವತೆಗಳಿಂದ ಹಿಡಿದು ಎಲ್ಲರೂ ರಾವಣನನ್ನು ಕಂಡರೆ ಭಯ ಪಡುವವರೇ. ಈಗ, ನಿನ್ನನ್ನು ಕಂಡರೆ ಭಯ ಪಡದವನು ಒಬ್ಬನಿದ್ದಾನೆ ಎಂದು ಬಂದಾಗ, ಅವನು ನಿನ್ನವರನ್ನು ಕೊಂದಿದ್ದಾನೆ, ನಿನ್ನ ತಂಗಿಯನ್ನು ವಿರೂಪಗೊಳಿಸಿದ್ದಾನೆ ಎಂದಾಗ ಪ್ರತಿಷ್ಠೆಯ ಪ್ರಶ್ನೆ ಬಂತಲ್ಲಿ.

ವಿವೇಕಿಗಳಾದ್ರೆ ಹಾಗೇ ಹೋಗೋದಿಲ್ಲ. ಶೂರ್ಪಣಖಿ ಏನು ತಪ್ಪು ಮಾಡಿದ್ದಳು? ಏಕೆ ರಾಮ ಅವಳ ಮೇಲೆ ಆಯುಧ ಪ್ರಹಾರ ಮಾಡಬೇಕಾಗಿ ಬಂತು? ಎನ್ನುವುದನ್ನು ಆಲೋಚಿಸಿದರೆ ಅಲ್ಲಿಗೇ ಬಿಡಬೇಕು ಆ ವಿಷಯವನ್ನು. ಆದರೆ ಅವನು ಅಂಥಾ ವಿವೇಕಿಯಲ್ಲ. ಹೆದರಿ ಹಿಮ್ಮೆಟ್ಟಿದ್ದ ರಾವಣನನ್ನು ಈ ಮೂರು ಕಾರಣಗಳನ್ನು ಬಳಸಿ ಶೂರ್ಪಣಖಿ ಹೊರಡಿಸ್ತಾಳೆ.

ಮಾರೀಚಾಶ್ರಮಕ್ಕೆ ಬಂದಿದ್ದಾನೆ ರಾವಣ. ಮಾರೀಚ ಮಹರ್ಷಿಯಾಗಿದ್ದಾನೆ! ರಾಮನ ಬಾಣದ ಮಹಿಮೆ! ಇಂತಹ ಪಾತಕಿಯೊಬ್ಬ ತನ್ನ ಪಾಪವನ್ನು ಬಿಟ್ಟು ಧರ್ಮಬುದ್ಧಿಗೆ ಹೊರಡ್ತಾನೆ. ರಾಮ ಕೂತು ಅವನಿಗೆ ಪಾಠ ಮಾಡಿಲ್ಲ‌. ಎರಡು ಪೆಟ್ಟು ಕೊಟ್ಟಿದ್ದಷ್ಟೆ. ಎಷ್ಟು ದೊಡ್ಡ ಬದಲಾವಣೆ ಮಾರೀಚನಲ್ಲಿ! ಮನಃಪರಿವರ್ತನೆಯಾಗಿದೆ ಮಾರೀಚನದು.
ಅಂತಹ ಮಾರೀಚಾಶ್ರಮಕ್ಕೆ ರಾವಣನು ಬಂದ. ಒಂದು ಬಾರಿ ಬುದ್ಧಿ ಹೇಳಿ ಕಳುಹಿಸಿದ್ದಾನೆ. ಕೂಡಲೇ ಪುನಃ ಬಂದರೆ ಪ್ರಶ್ನೆ ಮೂಡುವುದು ಸಹಜ. ಮತ್ತೇನಾಯಿತು? ಮತ್ಯಾಕೆ ಬಂದೆ? ಅಂತ ಅದನ್ನೇ ಮಾರೀಚ ಕೇಳ್ತಾನೆ. ಹಳೆ ಕಥೆಯನ್ನೇ ಹೊಸ ಪಾತ್ರದಲ್ಲಿ ಹಾಕಿ‌ಕೊಟ್ಟ ರಾವಣ. ಸ್ವಲ್ಪ ಬದಲಾವಣೆ ಇದೆ.. ಭಾರೀ ಪ್ರೀತಿಯಿಂದ ಸಂಭೋದಿಸಿದ. ಇದು ಆಸೆಯಿಂದ, ಕೆಲಸಕ್ಕೆ ಬೇಕಾಗಿ ಪ್ರೀತ. ಅವಶ್ಯಕತೆ ಮುಗಿದಾಗ ಮುಗಿಯುವಂಥದ್ದು.
ಪ್ರೀತಿ‌ ನಿಷ್ಕಾರಣವಾಗಿರಬೇಕು ~ #ಶ್ರೀಸೂಕ್ತಿ.

ನಾನಾಡುವ ಮಾತನ್ನು ಹೃದಯವಿಟ್ಟು ಕೇಳು ಎಂಬುದಾಗಿ, ನಿಜವಾಗಿ ಲಂಕೆಗೆ ಏನೂ ಆಗದಿದ್ದರೂ ಕಾರ್ಯಸಾಧನೆಗಾಗಿ ಮಾರೀಚನ ಮುಂದೆ ಬಂದು, ‘ಆರ್ತನಾಗಿದ್ದೇನೆ. ಕಷ್ಟದಲ್ಲಿ ಸಿಕ್ಕಿಕೊಂಡಿದ್ದೇನೆ. ನೀನೇ ಪರಮ ಗತಿ. ಯಾಚನೆಯ ದಾಟಿಯಲ್ಲಿ ಹೇಗಾದರೂ ಮಾಡಿ ‌ಮಾರೀಚನನ್ನು ಒಪ್ಪಿಸುವ ಗುರಿ.
ರಾಮ ಹೀಗಲ್ಲ, ರಾಮನದು ನೇರವಾದ ಗತಿ. ಅಲ್ಲಿ ಇಂತಹ ನಾಟಕ, ಅವೆಲ್ಲ ಇಲ್ಲ.
ಏನಪ್ಪಾ ವಿಷಯ.. ಅಂತ ಮಾರೀಚ ಹುಬ್ಬೇರಿಸಿದಾಗ, ‘ಗೊತ್ತು ನಿನಗೆ, ‘ನನ್ನ ಜನಸ್ಥಾನ ಎಂಬ ಕೇಂದ್ರವೇ ಈ ರಾಕ್ಷಸರ ಸ್ಥಾನ. ಎಲ್ಲಿ ನನ್ನ ತಮ್ಮ ಖರ, ದೂಷಣರಿದ್ದರೋ, ಎಲ್ಲಿ ನನ್ನ ತಂಗಿಯಾದ ಶೂರ್ಪಣಖಿಯು ಆನಂದದಿಂದ ವಿಹರಿಸಿಕೊಂಡಿದ್ದಳೋ, ಮಹಾ ತೇಜಸ್ವಿಯಾದ ತ್ರಿಶಿರನೆಂಬ ರಾಕ್ಷಸ, ಇವರಲ್ಲದೆ ಬೇರೆ ಅನೇಕ ಯುದ್ಧೋತ್ಸಾಹಿ, ನಿಶಾಚರರಾದ ರಾಕ್ಷಸರು ನನ್ನಪ್ಪಣೆಯಂತೆ ವಾಸ ಮಾಡ್ತಿದ್ದರೋ ಆ ಮಹಾರಣ್ಯದಲ್ಲಿ ಧರ್ಮಚಾರಿಗಳಾದ ಮುನಿಗಳನ್ನು ಪೀಡಿಸಿಕೊಂಡು ವಾಸಿಸುತ್ತಿದ್ದ ಹದಿನಾಲ್ಕು ಸಾವಿರ ರಾಕ್ಷಸರು, ಕಾರಣಾಂತರಗಳಿಂದ ಅವರಿಗೆ ರಾಮನೊಡನೆ ಯುದ್ಧವೇರ್ಪಟ್ಟಿತು. ಈ ಹದಿನಾಲ್ಕು ಸಾವಿರ ಉಗ್ರತೇಜಸ್ವಿಗಳಾದ ರಾಕ್ಷಸರೂ ಪದಾತಿಯಾದ ಆ ಒಬ್ಬ ಮನುಷ್ಯನಿಂದ ಹತರಾಗಿ ಹೋದರು. ಈಗ ದಂಡಕಾರಣ್ಯವು ನಿರ್ಭಯವಾಗಿ ‌ಪರಿಣಮಿಸಿದೆ ಎನ್ನುವುದೇ ದೊಡ್ಡ ಚಿಂತೆ‌. ಇಷ್ಟು ಹೇಳಿ ರಾಮನನ್ನು ತನ್ನ ಭಾಷೆಯಲ್ಲಿ ನಿಂದಿಸಲಿಕ್ಕೆ‌ ಶುರು ಮಾಡ್ತಾನೆ ರಾವಣ.

‘ಯಾರವನು? ಕೋಪಗೊಂಡ ತಂದೆ ಇವನನ್ನು ಪತ್ನೀಸಮೇತನಾಗಿ ಮನೆಯಿಂದ ಹೊರನೂಕಿದ್ದಾನೆ. ನಿರಪರಾಧಿಗಳಾದ ರಾಕ್ಷಸರನ್ನು ಕೊಂದಿದ್ದರಿಂದಾಗಿ,‌ ಒಂದು ಸ್ತ್ರೀಯನ್ನು ಅಕಾರಣವಾಗಿ ವಿರೂಪಗೊಳಿಸಿದ್ದರಿಂದಲಾಗಿ ಅವನ ಆಯಸ್ಸು‌ ಮುಗಿದಿದೆ. ಅಂತಹ ರಾಮನು ಈ ಸೈನ್ಯವನ್ನು ಧ್ವಂಸ ಮಾಡಿದನು. ಕ್ಷತ್ರಿಯ ಕುಲದ ಧೂಳು. ದುಃಶೀ, ಕರ್ಕಶನು. ತೀಕ್ಷ್ಣ ಸ್ವಭಾವದವನು, ಮೂರ್ಖ, ಲೋಭಿ, ಜಿತೇಂದ್ರಿಯನಲ್ಲದವನು..’ ಅಂತ ರಾವಣ ಹೇಳೋದು. ಇದೆಲ್ಲ ನಿಜವಾಗಿ ರಾಮನಿಗೆ ಸಂಬಂಧವೇ ಇಲ್ಲ. ‘ಧರ್ಮ ಬಿಟ್ಟವನು, ಅವನ ಮನಸ್ಸು, ಜೀವನ ಎಲ್ಲ ಪೂರ್ತಿ ಅಧರ್ಮವೇ ಆಗಿಹೋಗಿದೆ. ಎಲ್ಲ ಜೀವಲೋಕಗಳ ಕೇಡಿನಲ್ಲಿ ತೊಡಗಿಕೊಂಡಿದ್ದಾನೆ. ಶೂರ್ಪಣಖಿಯೊಂದಿಗೆ ಯಾವ ವೈರವೂ ಇಲ್ಲದೆ ತನ್ನ ಬಲದ ಮೇಲಿನ ಗರ್ವದಿಂದ ಸ್ತ್ರೀ, ದುರ್ಬಲೆಯಾದ ನನ್ನ ತಂಗಿಯನ್ನು ವಿರೂಪಗೊಳಿಸಿದನಲ್ಲ, ಅವನ ಪತ್ನಿಯನ್ನು ಅಪಹರಿಸಬೇಕು ನಾನು. ದೇವಕನ್ನಿಕೆಯ ಚೆಲುವುಳ್ಳ ಸೀತೆಯನ್ನು ನಾನು ವಿಕ್ರಮದಿಂದ ಅಪಹರಿಸಬೇಕು‌. ನನಗೆ ನೀನು ಈ ಕಾರ್ಯದಲ್ಲಿ ಸಹಾಯಕನಾಗಿರಬೇಕು. ನೀನು ಸಮರ್ಥ. ವೀರತನ, ಯುದ್ಧ, ದರ್ಪದಲ್ಲಿ ನಿನಗೆ ಸಮರಿಲ್ಲ. ಉಪಾಯ ಬಲ್ಲವನು ನೀನು. ಮಹಾಶೂರು, ಮಾಯಾ ವಿದ್ಯೆಯಲ್ಲಿ‌ ನಿಪುಣ. ಆದುದರಿಂದ ನಾನು ನಿನ್ನಲ್ಲಿಗೆ ಬಂದೆ‌. ಈಗ ನೀನು, ನನ್ನ ಅಪ್ಪಣೆಯಂತೆ ಬಂಗಾರದ ಮೃಗವಾಗಬೇಕು. ರಾಮಾಶ್ರಮದಲ್ಲಿ‌ ಸೀತೆಗೆ ಕಾಣುವಂತೆ ಸಂಚರಿಸು‌. ಸಂಶಯವೇ ಇಲ್ಲ ಸೀತೆ ಕೂಡಲೇ ರಾಮ ಲಕ್ಷ್ಮಣರಿಗೆ ಹೇಳಿಯಾಳು, ‘ ಆ ಮೃಗವನ್ನು ತನ್ನಿ, ಅದು ಬೇಕು ನನಗೆ’ ಎಂಬುದಾಗಿ. ಆಗ ನಿನ್ನ ಹಿಂದೆ ರಾಮ ಲಕ್ಷ್ಮಣರು ಧಾವಿಸಿದಾಗ ಆಶ್ರಮದಲ್ಲಿ‌ ಅವಳೊಬ್ಬಳೆ ಆದಾಗ ನಾನು ನಿರ್ವಿಘ್ನವಾಗಿ ಸೀತೆಯನ್ನು ಅಪಹರಿಸುತ್ತೇನೆ. ಬಳಿಕ ಸೀತೆಯನ್ನು ಸಂಪೂರ್ಣವಾಗಿ ನನ್ನವಳಾಗಿಸಿಕೊಂಡ‌ ಮೇಲೆ ಪತ್ನಿ ವಿಯೋಗದಿಂದ ದುಃಖಿತನಾದ ರಾಮ ದುರ್ಬಲನಾಗಿ ಕೃಶನಾದ ಮೇಲೆ ಹೋಗಿ ಅವನ ಮೇಲೆ ಆಕ್ರಮಣ ಮಾಡ್ತೇನೆ ಎಂಬುದಾಗಿ ಹೇಳ್ತಾನೆ.

ಮಾರೀಚನ ಮುಖ ಒಣಗಿತು, ಬಾಯಿ ಬತ್ತಿ ಹೋಯಿತು, ತೆರೆದ ಕಣ್ಣು ಮುಚ್ಚದ ಹಾಗೆ ಸ್ತಬ್ಧನಾದ. ಮಾರೀಚ ಶವದಂತಾಗಿ ರಾವಣನನ್ನು ವೀಕ್ಷಿಸಿದ. ಒಳಗೆ ಭಯ ಕುಳಿತಿತ್ತು. ವಿಷಾದ ತುಂಬಿತ್ತು ಮನಸ್ಸಿನಲ್ಲಿ. ರಾಮನ ಪರಾಕ್ರಮವನ್ನು ಪ್ರತ್ಯಕ್ಷ ಕಂಡವನಾದ ಮಾರೀಚನು ಕೊನೆಗೆ ಬಹು ಕಷ್ಟದಿಂದ ಧೈರ್ಯವನ್ನು ಒಗ್ಗೂಡಿಸಿ ಮನಸ್ಸನ್ನು ಒಂದು ಸ್ಥಿತಿಗೆ ತಂದುಕೊಂಡು ಕೈಮುಗಿದು ರಾವಣನಿಗೆ ನಿಜವಾದ ವಿಷಯವನ್ನು ಮಹಾಪ್ರಾಜ್ಞನಾದ, ವಾಕ್ಯ ವಿಶಾರದ ಮಾರೀಚ ಹೇಳಿದ, ‘ದೊರೆಯೇ, ನಿರತವೂ ನಿನಗೆ ಪ್ರಿಯವನ್ನಾಡುವ ಜನರು ಬೇಕಾದಷ್ಟು ಸಿಗುತ್ತಾರೆ. ಆದರೆ ಅಪ್ರಿಯವಾದ ಪಥ್ಯವನ್ನು ಆಡುವವರು ದುರ್ಲಭ, ಕೇಳುವವರೂ ದುರ್ಲಭ. ನೀನರಿಯೆ ರಾಮನನ್ನು. ರಾಮನು ಮಹಾವೀರ ಮತ್ತು ಗುಣೋನ್ನತ. ನಿನಗೇನು ಗೊತ್ತು? ನಿನ್ನ ಚಾರರು ಸರಿ ಇದ್ದಿದ್ದರೆ ರಾಮನೇನು ಅನ್ನುವುದನ್ನು ನಿನಗೆ ಹೇಳುತ್ತಿದ್ದರು. ನಿನ್ನವರು ಮಾಡಿದ ಅಪರಾಧಗಳೇನು? ಅಯುಕ್ತರಾದ ಚಾರರು ಉಳ್ಳವನು ನೀನು, ಚಪಲ ನೀನು. ರಾಮ ಮಹೇಂದ್ರನಂಥವನು‌ , ವರುಣನಂಥವನು. ಭೂಲೋಕದ ಸಮಸ್ತ ರಾಕ್ಷಸರಿಗೆ ಇನ್ನೇನು ಕಾದಿದೆಯೋ? ನಿನ್ನ ಅಕಾರ್ಯದಿಂದ ಕ್ರೋಧಿತನಾದ ರಾಮನು ಈ ಲೋಕವನ್ನು ರಾಕ್ಷಸಶೂನ್ಯವನ್ನಾಗಿ ಮಾಡದಿರಲಿ. ನಿನ್ನ ಸರ್ವನಾಶಕ್ಕಾಗಿಯೇ ಸೀತೆಯು ಹುಟ್ಟಿ ಬಂದಿಲ್ಲ ತಾನೇ!? ನಿನ್ನಂಥ ಕಾಮವೃತ್ತ, ನಿರಂಕುಶ ದೊರೆಯನ್ನು ಪಡೆದ ಈ ಲಂಕೆ ನಿನ್ನೊಟ್ಟಿಗೆ ನಾಶವಾಗುವುದಿಲ್ಲ ತಾನೇ? ನೀನು ಈ ದಾರಿಯಲ್ಲಿ ಮುಂದುವರಿದರೆ ಇದಾದೀತು ಮುಂದೆ..
ನೇರವಾಗಿ, ಸ್ಪಷ್ಟವಾಗಿ, ಸಾವಿಗೂ ಭಯಪಡದೆ ಮಾರೀಚ ರಾವಣನ ಮುಂದೆ ಹೇಳಬೇಕಾದ್ದನ್ನು ಹೇಳಿಬಿಡ್ತಾ ಇದ್ದಾನೆ. ಶೀಲಗೆಟ್ಟವನು, ಕೆಡುಕರ ಜೊತೆಯಲ್ಲೇ ಸಮಾಲೋಚಿಸುವವನು, ಅಂತಹ ದುರ್ಬುದ್ದಿಯಾದ ದೊರೆಯು ತಾನೂ ನಾಶವಾಗ್ತಾನೆ, ತನ್ನವರನ್ನೂ ನಾಶ ಮಾಡ್ತಾನೆ ಎಂಬುದಾಗಿ ನೇರವಾಗಿ ಮುಖಕ್ಕೆ ಹೊಡೆದಂತೆ ರಾವಣನಿಗೆ ಹೇಳ್ತಾನೆ ಮಾರೀಚ.

ಏನೆಲ್ಲ ಅಂದುಬಿಟ್ಟೆ ರಾಮನನ್ನು ನೀನು? ಅದು ಒಂದಾದರೂ ಹೌದಾ? ಗೊತ್ತಾ ನಿನಗೆ? ತಂದೆಯಿಂದ ಪರಿತ್ಯಕ್ತನಾದವನಲ್ಲ ಅವನು. ಮರ್ಯಾದೆ ಇಲ್ಲದವನಲ್ಲ, ಲೋಭಿಯಲ್ಲ, ಶೀಲಗೆಟ್ಟವನಲ್ಲ, ಕ್ಷತ್ರಿಯಕಲಂಕನಲ್ಲ ರಾಮ, ‘ರಾಮೋ ವಿಗ್ರಹವಾನ್ ಧರ್ಮಃ’ ಎಂಬುದಾಗಿ ರಾಮನ ಗುಣವನ್ನು ಎಳೆಎಳೆಯಾಗಿ ರಾವಣನ ಮುಂದೆ ಬಿಚ್ಚಿಡುತ್ತಾನೆ.

“ಸೀತೆಯನ್ನು ನೀನು ಅಪಹರಿಸ ಬಯಸುವೆಯಾ? ಸೀತೆಯೆಂದರೆ ಸೂರ್ಯಪ್ರಭೆಯದು. ಇದು ನಿನಗೆ ಬೇಡ ರಾವಣಾ.. ನೀನು ರಾಮನೆಂದುಕೊಂಡಿರುವುದು ‘ರಾಮಾಗ್ನಿ’. ರಾಮನೆಂದರೆ ಅಂತಕನೇ. ಅವನ ಧನುಸ್ಸು ಮೃತ್ಯುವಿನ ಬಾಯಿ. ಸೀತೆಯು ಯಾರಿಗೆ ಸೇರಿದವಳೋ ಅದಿ ತಿಳಿವಿಗೆ ಮೀರಿದ ಪರಂಜ್ಯೋತಿ. ನಿನ್ನ ಕೈಯ್ಯಲಾಗುವುದಿಲ್ಲ. ರಾಮನಿಗವಳ ಪ್ರಾಣಕ್ಕಿಂತ ಮಿಗಿಲು. ರಾಮನನ್ನು ಎಡೆಬಿಡದೆ ಅನುಸರಿಸಿ ಅವನ ನೆರವಾಗಿರುವವಳು. ಅವಳನ್ನು ಅವಮಾನಿಸಲು, ಕೆಣಕಲು, ಸಾಧ್ಯವಾಗದು. ಒಂದು ವೇಳೆ ಸೀತಾಪಹಾರ ಮಾಡಿದ್ದೇ ಆದರೆ ನಿನ್ನನ್ನು ಸುಟ್ಟೀತದು. ಎಂದಿಗೂ ಸೀತೆ ನಿನ್ನ ಸತಿಯಾಗುವುದಿಲ್ಲ. ನಿನಗೆ ಸುಖ, ಜೀವ, ಲಂಕಾರಾಜ್ಯ ಬೇಕಾದರೆ ರಾಮನ ತಂಟೆಗೆ ಹೋಗಬೇಡ. ನಿನಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ ವಿಭೀಷಣ, ಧರ್ಮಿಷ್ಠರಾದ ಸಚಿವರೊಂದಿಗೆ ಸಮಾಲೋಚಿಸಿ ನಿಶ್ಚಯಿಸು. ನನ್ನ ಅಭಿಪ್ರಾಯವಂತೂ ಸುಸ್ಪಷ್ಟ. ನನ್ನ ಕೋಸಲೇಂದ್ರನ ತಂಟೆಗೆ ನೀನು ಹೋಗುವುದು ನಿನಗೆ ಒಳ್ಳೆಯದಲ್ಲ. ನಿನಗೆ ಕೇಡಾದೀತು” ಎಂದು ಹೇಳಿ ಬಳಿಕ ವಿಶ್ವಾಮಿತ್ರ ಯಜ್ಞದ ಸಂದರ್ಭ ನಡೆದ ತನ್ನದೇ ಕಥೆಯನ್ನು ಮಾರೀಚ ಹೇಳ್ತಾನೆ.

ಬಯಸಿದರೆ ರಾಮ ನನ್ನನ್ನು ಕೊಲ್ಲಬಹುದಿತ್ತು. ಆದರೆ ಯಾಕೋ ಕೊಲ್ಲ ಬಯಸಲಿಲ್ಲ ಅವನು. ಅವನಿಂದ ನಾನು ರಕ್ಷಿತನಾಗಿದ್ದೆ ಆ ಕಾಲದಲ್ಲಿ. ನನ್ನ ಪ್ರಾಣವನ್ನು ಅವತ್ತು ಉಳಿಸಿದನು ರಾಮ‌. ಆದರೆ ನನ್ನ ಜೊತೆಗೆ ಬಂದ ಸುಬಾಹು, ಇತರ ರಾಕ್ಷಸರು, ನನ್ನ ಪರಿದಾವರೆಲ್ಲ ಯಾರೂ ಬದುಕುಳಿಯಲಿಲ್ಲ. ಇದೆಲ್ಲ ರಾಮ ಅಸ್ತ್ರ-ಶಸ್ತ್ರಗಳನ್ನೇ ಪೂರ್ತಿ ಅಭ್ಯಾಸ ಮಾಡಿಲ್ಲ, ಹನ್ನೆರಡೇ ವರ್ಷ ಆಗ ಅವನಿಗೆ. ಈಗ ಅವನಲ್ಲಿ ದಿವ್ಯಾಸ್ತ್ರಗಳಿವೆ. ಶಸ್ತ್ರವಿದ್ಯೆಯಲ್ಲಿ ಪಾರಂಗತನಾಗಿದ್ದಾನೆ. ಹಾಗಾಗಿ ನಾನು ನಿನ್ನನ್ನು ಪರಿಪರಿಯಾಗಿ ಬೇಡ್ತೇನೆ. ಇಷ್ಟಕ್ಕೂ ಮೀರಿ ನೀನು ರಾಮನತ್ತ ಹೋದರೆ ಘೋರವಾದ ಆಪತ್ತಿಗೆ ಹೋಗಿ ಸಿಲುಕಿಕೊಳ್ಳುವೆ ರಾವಣಾ.. ಪಾಪ ರಾಕ್ಷಸರು. ಅವರದೇನು ತಪ್ಪು? ಸುಖವಾಗಿದ್ದಾರೆ, ಸಂತಾಪ ತಂದೊಡ್ಡಬೇಡ. ಶ್ರೀಮಂತರ, ಪ್ರಾಸಾದಗಳಿಂದ ಕೂಡಿದ ಲಂಕೆ ಮೈಥಿಲಿಯ ಸಲುವಾಗಿ ನಾಶವಾಗದಿರಲಿ.
ಎಷ್ಟೋ ಬಾರಿ ನಿರಪರಾಧಿಗಳಾದರೂ ಪಾಪಿಗಳ ಜೊತೆಗಿದ್ದ ಪರಿಣಾಮ ನಾಶವಾಗಿ ಹೋಗ್ತಾರೆ.
ರಾಕ್ಷಸರ ಕಥೆ ಹೀಗಾಗದಿರಲಿ…..!

ಮುಂದೆ ಭವಿಷ್ಯವಾಣಿ ಎಂಬಂತೆ ಮಾರೀಚ ನುಡಿಯುತ್ತಾನೆ, ‘ರಾವಣಾ, ಮುಂದೊಂದು ದಿನ ನೀನು ಎಂಥಾ ಲಂಕೆಯನ್ನು ನೋಡುತ್ತೀಯೆಂದರೆ ಎಲ್ಲೆಲ್ಲಿಯೂ ಅಗ್ನಿಜ್ವಾಲೆ ಲಂಕೆಯಲ್ಲಿ. ಎಲ್ಲೆಲ್ಲಿಯೂ ರಾಮ ಲಕ್ಷ್ಮಣರ ನಾಮಾಂಕಿತವಾದ ಬಾಣಗಳು. ಆ ಬಾಣಗಳಿಗೆ ಸಿಲುಕಿ ಗೋಪುರಗಳು ಕುಸಿದು ಬೀಳುವಂಥದ್ದು, ಲಂಕೆಯು ಸರ್ವನಾಶವಾಗುವಂಥದ್ದು, ಭವನಗಳು ಸುಟ್ಟುಡುಗಿ ಹೋಗುವಂಥದ್ದು. ಇಂಥಾ ಲಂಕೆಯನ್ನು ನೋಡುವೆ. ಸಂಶಯವಿಲ್ಲ’.
ಪರಸತಿಯರನ್ನು ಅಪಹರಿಸುವುದರಷ್ಟು ಪಾಪ ಇನ್ನೊಂದಿಲ್ಲ. ನಿನಗೇನು ಕಡಿಮೆಯಾಗಿದೆ? ಸಾವಿರ ಸಾವಿರ ಸ್ತ್ರೀಯರು ನಿನ್ನ ಅಂತಃಪುರದಲ್ಲಿ, ನಿನ್ನ ಕುಲವನ್ನು ಉಳಿಸಿಕೋ. ನಿನ್ನ‌ ಈವರೆಗಿನ ಮಾನಾಭಿಮಾನ, ಸಮೃದ್ಧಿ, ರಾಜ್ಯ, ಪ್ರಾಣ, ಪತ್ನಿಯರು, ಮಿತ್ರವರ್ಗವೆಲ್ಲ ಚಿರಕಾಲ ಉಳಿಯಬೇಕಿದ್ದರೆ ರಾಮನ ತಂಟೆಗೆ ಹೋಗಬೇಡ ಅಂತ ಹೇಳಿ ತನ್ನದೇ ಇನ್ನೊಂದು‌ ಉದಾಹರಣ ಹೇಳಿ ಮಾರೀಚನು‌ ಪರ್ಯಾವಸಾನ ಮಾಡ್ತಾನೆ.

ರಾಮನು ವನವಾಸದಲ್ಲಿದ್ದ ಒಂದು ಸಂದರ್ಭ, ಹಳೇ ಪೆಟ್ಟಿನ ನೆನಪಿತ್ತು. ಮಾಂಸಭಕ್ಷಕ ಮೃಗದ ರೂಪ ತಾಳಿ ನನ್ನ ಇಬ್ಬರು ಮಿತ್ರರೊಡನೆ ಅವನೆಡೆಗೆ ಧಾವಿಸಿದೆ. ಪ್ರತೀಕಾರಕ್ಕಾಗಿ ಹೊರಟೆ. ಮೂರು ಬಾಣಗಳನ್ನು ಪ್ರಯೋಗಿಸಿದ ರಾಮ. ಎರಡು ಬಾಣಗಳು ಇಬ್ಬರು ಮಿತ್ರರನ್ನು ಕೊಂದವು. ಮೂರನೇ ಬಾಣ ನನ್ನನ್ನು ಕೊಲ್ಲಲಿಲ್ಲ‌. ನಾನು ನೆಗೆದೆ, ಓಡಿದೆ, ತಪ್ಪಿಸಿಕೊಂಡೆ.
ಆದರೆ ರಾಮನಿಗೆ ಅಸಾಧ್ಯವಾದುದೇನಿಲ್ಲ. ರಾಮ ಮನಸ್ಸು ಮಾಡಿ ಬಾಣ ಪ್ರಯೋಗ ಮಾಡಿದರೆ ಮತ್ತೆ ಸಾವಿಲ್ಲ ಅನ್ನುವ ಪ್ರಶ್ನೆಯೆ ಇಲ್ಲ. ಆದರೆ ನಾನು ಬದುಕಿದೆ ಆಗಲೂ ಕೂಡ‌. ಅವತ್ತಿನಿಂದ ನಾನು ಬದಲಾದೆ‌. ಹೇಗೋ ಬದುಕಿದವನು ತಪಸ್ವಿಯಾದೆ‌. ಈಗ ನನಗೆ ಎಲ್ಲಿ ನೋಡಿದರೂ ರಾಮನೇ ಕಾಣ್ತಾನೆ. ಆ ಭಯ, ಒಂದೊಂದು ಮರದಲ್ಲಿಯೂ ಕಾಣಿಸ್ತಾನೆ ನಾರುಡಿಯನ್ನು ಉಟ್ಟ, ಕೃಷ್ಣಾಜಿನ ಹೊದ್ದ ರಾಮ‌. ಭಯ ಹೆಚ್ಚಾದಾಗ ಸಾವಿರ ಸಾವಿರ ರಾಮರನ್ನು ಒಟ್ಟಿಗೇ ಕಾಣ್ತೇನೆ. ‘ರ..’ ಅನ್ನುವ ಶಬ್ದ ಕೇಳಿದರೆ ಸಾಕು.. ಭಯವಾಗುತ್ತದೆ ನನಗೆ.

ಹಾಗಾಗಿ, ನನಗೆ ಗೊತ್ತು ಅವನ್ಯಾರು ಅಂತ. ನಿನಗೆ ಅವನೊಡನೆ ಯುದ್ಧ ಸರಿಯಲ್ಲ. ನೀನೇನು ಮಹಾಬಲಿಗೆ ಸಮನಾ? ನಹುಚಿಗೆ ಸಮನಾ? ನಿನಗಿಂತ ಎಷ್ಟೋ ಬಲಶಾಲಿಗಳು ಅವರು. ಅವರನ್ನೇ ಕೊಂದಾನು ರಾಮ.. ಎಂದೆಲ್ಲಾ ಬುದ್ಧಿ ಹೇಳಿದ ಮಾರೀಚ. ಆದರೆ ರಾವಣನ ಸೊಟ್ಟ ಮುಖ ನೆಟ್ಟಗಾಗಲೇ ಇಲ್ಲ. ಬಹಳ‌ ಪ್ರಯತ್ನ ಮಾಡ್ತಾ ಇದ್ದಾನೆ ಮನವರಿಕೆ ಮಾಡಲಿಕ್ಕೆ. ಆದರೆ ಸಮಯ ಕಳೆದಂತೆ ಉಗ್ರನಾಗ್ತಾ ಇದ್ದಾನೆ ರಾವಣ. ಕೊನೆಗೆ ಮಾರೀಚ ಹೇಳಿದ, ನೀನು ರಾಮನ ಜೊತೆಗೆ ಯುದ್ಧ ಬೇಕಾದರೂ ಮಾಡು, ಶಾಂತಿ ಬೇಕಾದರೂ ಮಾಡು. ಆದರೆ ನನ್ನ ಬಳಿ ರಾಮನ ಸುದ್ದಿ ತೆಗೆಯಬೇಡ ಎಂಬುದಾಗಿ‌..

ಮುಂದೇನಾಗುತ್ತದೆ, ನೋಡಬೇಕು!
ಮಾರೀಚ ಹೇಳಿದ್ದನ್ನು ರಾವಣ ಕೇಳಿದನಾ?
ರಾವಣ ಹೇಳಿದ್ದನ್ನು ಮಾರೀಚ ಕೇಳಿದನಾ?
ಯಾರು ಹೇಳಿದ್ದನ್ನು ಯಾರು ಕೇಳ್ತಾರೆ? ಕೊನೆಗೆ ನಿಜವಾಗಿ ಗೆದ್ದವರು ಯಾರು?
ಎನ್ನುವುದನ್ನು ಮುಂದಿನ ಪ್ರವಚನದಲ್ಲಿ ಅವಲೋಕಿಸೋಣ

ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments