ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಮನು ಮುನಿಗಳಿಗೆ ಅಗೋಚರನಾದ ರಾಮನು ಮಾರೀಚನಿಗೆ ದರ್ಶನ ಕೊಟ್ಟ. ಈ ಕಾಡಿನ ಒಂದೊಂದು ಮರದಲ್ಲಿಯೂ ನಾರುಡೆಯನ್ನು ಉಟ್ಟ, ಕೃಷ್ಣಾಜಿನವನ್ನು ಹೊದ್ದ, ಧನುಷ್ಪಾಣಿಯಾದ ರಾಮ ಕಾಣಿಸುತ್ತಾನೆ. ಆಗ ನನಗೆ ಅಂತಕನ ಸ್ಮರಣೆಯಾಗ್ತದೆ. ಮಾರೀಚನ ಮಾತಿದು. ಎದುರು ಬಂದು ನಿಂತರೂ ನಮಗೆ ರಾಮ ಕಾಣುವುದಿಲ್ಲ. ಮಾರೀಚನಿಗೆ ಒಂದು ಬಗೆಯ ವಿಶ್ವರೂಪ ದರ್ಶನ. ಆಧಾರವಾದ ಭಾವ ಭೀತಿ. ಪ್ರೀತಿಯೂ ಆಧಾರವಾಗಬಹುದು.

ಪ್ರೀತಿಯಲ್ಲಾದರೂ, ಭೀತಿಯಲ್ಲಾದರೂ ರಾಮನ ದರ್ಶನವಾದರೆ ಜೀವಕ್ಕೆ ಮುಕ್ತಿ.

ಮಾರೀಚನಿಗೆ ರಾಮನಲ್ಲಿ ಪ್ರೀತಿಯೊಟ್ಟಿಗೆ ಗೌರವವೂ ಇದೆ. ರಾವಣನೇ ಬಂದು ಎದುರು ನಿಂತಾಗಲೂ ಮಾರೀಚ ರಾಮನ ಪಕ್ಷವನ್ನೇ ಹಿಡಿತಾನೆ. ಮಾರೀಚನಿಗೆ ಭೀತಿ ಹೇಗೆ ಬಂದಿದ್ದು ಎಂದರೆ, ಮೊದಲನೇ ಬಾರಿ ಬಾಣದ ಪೆಟ್ಟು, ಇನ್ನೊಂದು ಬಾರಿ ರಾಮನನ್ನು ಕೆಣಕ ಹೋಗಿ ಸ್ವಲ್ಪದರಲ್ಲಿಯೇ ಪಾರಾಗಿದ್ದ. ಅಲ್ಲಿಂದ ಬದಲಾವಣೆ, ಎಷ್ಟರ ಮಟ್ಟಿಗೆ ಎಂದರೆ ಆಶ್ರಮ ಕಟ್ಟಿಕೊಳ್ಳುವಷ್ಟರ ಮಟ್ಟಿಗೆ, ಮುನಿಜೀವನವನ್ನು ನಡೆಸುವಷ್ಟರ ಮಟ್ಟಿಗೆ, ರಾಮನ ಅವ್ಯಕ್ತ ಆರಾಧಕನಾಗುವ ಮಟ್ಟಿಗೆ ಭಾವವೇ ಬದಲಾವಣೆ ಆಗಿದೆ. ಭಯದ ಭಾವದಿಂದಾಗಿ ಧನುಷ್ಪಾಣಿಯಾದ ರಾಮ ಮಾರೀಚನಿಗೆ ಅಂತಕನಂತೆ ಕಾಣ್ತಾನೆ. ಭಯದ ಉತ್ಕಟಾವಸ್ಥೆಯಲ್ಲಿ ಅವನಿಗೆ ಎಲ್ಲೆಂದರಲ್ಲಿ ರಾಮನೇ ಗೋಚರ. ಬಂದರೆ ಇಂತಹ ಪ್ರೀತಿ ಬರಬೇಕು. ರಾಮನ ಹೊರತು ನನಗೆ ಇನ್ನೇನೂ ಕಾಣುವುದಿಲ್ಲ ಎನ್ನುವಾಗ ಆತ ಮೋಕ್ಷದ ಪಥ ಹಿಡಿದ. ಅವನಿಗೆ ಸಹಜ ಜ್ಞಾನವೇರ್ಪಟ್ಟಿದೆ. ಇನ್ನೆಲ್ಲಿ ಪಾಪ ಉಳಿಯಲು ಸಾಧ್ಯ? ಯಾರಿಲ್ಲದ ಏಕಾಂತದಲ್ಲಿ ಅವನಿಗೆ ರಾಮನೇ ಕಾಣ್ತಾನೆ. ನಿದ್ದೆಯ ಸ್ವಪ್ನದಲ್ಲಿಯೂ ಅವನಿಗೆ ರಾಮ ಗೋಚರಿಸ್ತಾನೆ. ರಾಮನ ಹೆಸರು ಕೇಳಿದರೇ ಭೀತಿ ಅವನಿಗೆ. ‘ರ’ ಎಂಬ ಅಕ್ಷರ ಎಲ್ಲಿ ಬಂದರೂ ಭಯವಾಗ್ತದೆ ಅವನಿಗೆ. ರಾಮನದ್ದೇ ನೆನಪಾಗ್ತದೆ.

ಭಗವಂತನ ಕುರಿತಾದ ಯಾವ ಭಾವವು ತೀವ್ರವಾದರೂ ಅದು ಮುಕ್ತಿಗೆ ದಾರಿ

ರಾಮನ ಪಕ್ಷವಹಿಸಿ ರಾವಣನಲ್ಲಿ ಮಾತಾಡ್ತಾನೆ ಮಾರೀಚ, ಶೂರ್ಪಣಖಿಯ ಕಾರಣದಿಂದಾಗ ಖರನ ವಧೆಯಾಗಿದ್ದು ಹೌದು. ಆದರೆ, ತನ್ನ ಮಿತಿಮೀರಿದ್ದರಿಂದ ಹತನಾದ. ಆಪತ್ತು ಬಂದು ಮುತ್ತಿದಾಗ ಯಾವ ಜೀವವಾದರೂ ಪ್ರತಿಭಟಿಸಬೇಕು. ಕ್ಷತ್ರಿಯ ಹೇಗೆ ಸುಮ್ಮನಿರಲು ಸಾಧ್ಯ? ಹಾಗಾಗಿ ರಾಮ ಯುದ್ಧ ಮಾಡಬೇಕಾಯಿತು. ಯುದ್ಧದಲ್ಲಿ ಖರ ಸತ್ತ. ಇದರಲ್ಲಿ ರಾಮನದ್ದೇನು ತಪ್ಪು? ಎಂದು ಮಾರೀಚ ಪ್ರಶ್ನಿಸುತ್ತಾನೆ. ಒಂದು ಕಾಲದ ರಾಮನ ವೈರಿ ಈಗ ಅವನನ್ನೇ ಹೊಗಳುತ್ತಿದ್ದಾನೆ ಅಷ್ಟೇ ಅಲ್ಲ, ರಾಮನ ಪರಿಚಯವಿರದ ರಾವಣದ ಸೈನ್ಯದ ಕೆಲವರೂ ರಾಮನನ್ನು ಹೊಗಳುತ್ತಿದ್ದಾರೆ. ಕೊನೆಯದಾಗಿ ಮಾರೀಚ ಹೇಳಿದ್ದಿಷ್ಟೆ. ನಾನು ಹೇಳುತ್ತಿರುವುದು ನಿನ್ನ ಹಿತಕ್ಕಾಗಿ. ನಿನ್ನ ಅಹಿತ ಮುಂದಿದೆ. ನೀನು ಹೀಗೆಯೇ ಮುಂದುವರಿದರೆ ನಾಶವಾಗಿ ಹೋಗ್ತೀಯೆ ಅಂತ ಗೊತ್ತು. ಹಾಗಾಗಿ ನಿನ್ನ ಹಿತಾರ್ಥಿಯಾಗಿ ನಾನು ಹೇಳುತ್ತಿರುವುದನ್ನು ಸ್ವೀಕರಿಸದೇ ಇದ್ದರೆ, ರಾಮನ ಬಾಣಗಳಿಂದ ನಿನಗೂ, ನಿನ್ನ ಬಂಧು-ಬಾಂಧವರಿಗೂ ಮರಣ ಕಾದಿದೆ. ಇಷ್ಟೆಲ್ಲ ಹೇಳಿದರೂ ರಾವಣ ಅವನ ಮಾತನ್ನು ಸ್ವೀಕರಿಸಲಿಲ್ಲ. ಸಾಯಹೊರಟವರಿಗೆ ಔಷಧ ರುಚಿಸದಂತೆ ರಾವಣನಿಗೆ ಮಾರೀಚನ ಮಾತು ರುಚಿಸಲಿಲ್ಲ. ಕೇಡು ಕಾದಿತ್ತು, ನಾಶ ಹೊಂಚು ಹಾಕಿ ಕೂತಿತ್ತು ಆದ್ದರಿಂದ ರಾವಣ ಮಾರೀಚನನ್ನು ನಿಂದಿಸಿದ.

ಒಬ್ಬ ಹಿತೈಷಿಗೆ ಕೆಟ್ಟ ಮಾತನ್ನಾಡುವುದೂ ಪಾಪವೇ

ರಾವಣ ಮಾರಿಚನಿಗೆ ಹೇಳಿದ ನೀನು ಇಷ್ಟು ಹೊತ್ತು ಮಾಡಿದ್ದು ಮರುಭೂಮಿಯಲ್ಲಿ ಕೃಷಿ ಮಾಡಿದಂತೆ ಆಗಿದೆ.
ನನ್ನ ಹೃದಯ ಮರುಭೂಮಿ. ನೀನು ನೆಟ್ಟ ಬೀಜವು ಅಲ್ಲಿ ಫಲ ಬರುವುದಿಲ್ಲ. ನನ್ನ ನಿಶ್ಚಯದಿಂದ ಹಿಂದೆ ಸರಿಸಲು ನಿನ್ನ ಈ ಮಾತುಗಳಿಂದ ಸಾಧ್ಯವಿಲ್ಲ ಎಂದು ಹೇಳಿ ರಾಮನನ್ನು ನಿಂದಿಸುತ್ತಾನೆ. ಪಾಪಶೀಲ, ಮೂರ್ಖ, ಮಾನುಷ, ಅವನ ಕುರಿತು ನನ್ನನ್ನು ನೀನು ಭಯಪಡಿಸ್ತೀಯಾ? ರಾಮನ ಪರವಾಗಿ ನೀನು ಉಪಯೋಗಿಸಿದ ಭೇದ ಉಪಾಯ ಫಲಿಸದು. ರಾಮನನ್ನು ಮೂರ್ಖನೆಂದು ಹೇಳಿದ್ದು ಕೇವಲ ಒಬ್ಬ ಹೆಣ್ಣಿನ ಮಾತಿಗಾಗಿ ರಾಜ್ಯವನ್ನೇ ಬಿಟ್ಟು ಬಂದನಲ್ಲ ಅದಕ್ಕಾಗಿ. ಈ ಮಾತು ಈಗೇಕೆ ಬಂತು ಅಂದ್ರೆ ಮೊದಲು ರಾವಣ ಹೇಳಿದಾನೆ ರಾಮನ ತಂದೆ ಅವನನ್ನ ರಾಜ್ಯದಿಂದ ಹೊರನೂಕಿದ್ದಾನೆ ಅಂತ ಆದರೆ ಈಗ ಮಾರೀಚ ಅದು ಹಾಗಲ್ಲ ಕೈಕೇಯಿಯ ಮಾತಿಗಾಗಿ ತಂದೆಯ ವಾಕ್ಯವನ್ನು ಸತ್ಯವನ್ನಾಗಿಸಲು ಕಾಡಿಗೆ ಬಂದಿದ್ದು ಎಂದು ಹೇಳಿದ್ದಕ್ಕಾಗಿ. ಮಾರೀಚನ ಬಳಿಯಲ್ಲಿ ಸುಳ್ಳನ್ನು ಮುಂದುವರೆಸಲು ಸಾಧ್ಯವಿಲ್ಲ ಏಕೆಂದರೆ ಅವನಿಗೆ ಸತ್ಯ ಗೊತ್ತಿದೆ. ಖರನನ್ನು ಕೊಂದ ರಾಮನ ಪ್ರಿಯ ಪತ್ನಿಯನ್ನು ನಾನು ಅಪಹರಿಸಬೇಕು. ನಿನ್ನನ್ನು ಇಟ್ಟುಕೊಂಡೇ ಈ ಕಾರ್ಯ ಆಗಬೇಕು. ನಾನು ನಿಶ್ಚಯಿಸಿಯಾಗಿದೆ. ಈ ನಿರ್ಧಾರವನ್ನು ಇಂದ್ರ ಸಹಿತನಾದ ದೇವತೆಗಳು ಬಂದರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿ ಮಾರೀಚನನ್ನು ಗದರುತ್ತಾನೆ. ಸೀತಾಪಹರಣ ತಪ್ಪೋ ಸರಿಯೋ ಎಂದು ನಾನು ನಿನ್ನನ್ನು ಕೇಳಿದ್ದೇನಾ? ನಾನು ಹೇಳಿದ್ದೇನು? ಸೀತಾಪಹರಣ ಮಾಡ್ತೇನೆ ನೀನು ಮಾಯಾಮೃಗವಾಗಿ ನನಗೆ ಸಹಕರಿಸಬೇಕು. ದೊರೆ ನಿನ್ನಲ್ಲಿ ಸಲಹೆ ಕೇಳಿಲ್ಲ ಎಂದು ಹೇಳಿ ರಾಜನ ಅಗ್ನಿ, ಇಂದ್ರ, ಸೋಮ, ಯಮ, ವರುಣನಂತೆ ಬೇರೆ ಬೇರೆ ರೂಪಗಳನ್ನು ಹೇಳಿ ಉಪದೇಶ ಮಾಡಿದ ರಾವಣ ಮಾರೀಚನಿಗೆ.

ಇದಿಷ್ಟು ಹೇಳಿ ಅವಿವೇಕಿ ನೀನು, ಮನೆಗೆ ಬಂದ ಅತಿಥಿಯನ್ನು ಪೂಜ್ಯ ಭಾವದಿಂದ ಗೌರವದಿಂದ ಕಾಣಬೇಕು. ನಾನು ರಾಜನೂ ಹೌದು, ಮನೆಗೆ ಬಂದ ಅತಿಥಿಯೂ ಹೌದು. ದುರಾತ್ಮ ನೀನು. ನೀನು ನನಗೆ ಸರಿ ತಪ್ಪು ಹೇಳುವುದ ಬೇಡ. ಎಲೈ ಅಮಿತವಿಕ್ರಮನೇ, ಒಂದು ಮಹಾಕೃತ್ಯವನ್ನು ನಾನು ಮಾಡ ಹೊರಟಿದ್ದೇನೆ. ನೀನು ನನಗೆ ಸಹಾಯ ಮಾಡಬೇಕು. ನನ್ನ ಮಾತಿನ ಪ್ರಕಾರ ನೀನು ಮಾಡಬೇಕಾದ ಸಹಾಯ ಇದು ; ನೀನು ಚಿನ್ನದ ಜಿಂಕೆಯಾಗಬೇಕು. ಮೈಯೆಲ್ಲ ಚಿನ್ನ, ಅಲ್ಲಲ್ಲಿ ಬೆಳ್ಳಿಯ ಬಿಂದುಗಳು. ಅಂತಹ ಮೃಗವಾಗಿ ನೀನು ರಾಮಾಶ್ರಮಕ್ಕೆ ತೆರಳಿ ಸೀತೆಯ ಮುಂದೆ ಸುಳಿದಾಡಬೇಕು. ಸೀತೆಗೆ ನಿನ್ನ ಮೇಲೆ ಲೋಭ ಬಂದ ಕೂಡಲೇ ನೀನು ಎಲ್ಲಿ ಬೇಕಾದರೂ ಹೋಗು. ಮಾಯಾಮೃಗವನ್ನು ನೋಡಿದ ಸೀತೆ ಖಂಡಿತವಾಗಿ ರಾಮನಿಗೆ ನನಗೆ ಬೇಕದು ತೆಗೆದುಕೊಂಡು ಬಾ ಎಂದು ಹೇಳಿಯೇ ಹೇಳುತ್ತಾಳೆ. ಆಗ ರಾಮ ನಿನ್ನ ಹಿಂದೆ ಬರಲೇಬೇಕು, ನೀನು ಜೀವಕ್ಕಾಗಿ ಓಡಲೇಬೇಕು. ಆಶ್ರಮದಿಂದ ಸಾಕಷ್ಟು ದೂರ ಹೋದಮೇಲೆ ದೊಡ್ಡ ಸ್ವರದಲ್ಲಿ ಹಾ ಸೀತೆ! ಹಾ ಲಕ್ಷ್ಮಣ! ಎಂಬುದಾಗಿ ರಾಮನ ಶೈಲಿಯನ್ನು ಅನುಕರಿಸಿ ಕೂಗಿಬಿಡು. ಹಾಗೆ ಕೂಗಿಕೊಂಡಾಗ ಲಕ್ಷ್ಮಣ ತಾನೇ ಬಂದಾನು. ಅಣ್ಣನಿಗೇನೋ ಆಗಿದೆ ಎಂದು. ಅವನಾಗಿಯೇ ಬರದಿದ್ದರೆ ಸೀತೆ ಕಳುಹಿಸ್ತಾಳೆ. ರಾಮ ಲಕ್ಷ್ಮಣರಿಬ್ಬರೂ ಇಲ್ಲದ ಸಮಯದಲ್ಲಾ ಸುಖವಾಗಿ ಸೀತೆಯನ್ನು ಅಪಹರಿಸ್ತೇನೆ. ನೀನಿಷ್ಟು ಕೆಲಸ ಮಾಡಿದ್ದೇ ಹೌದಾದರೆ ಅರ್ಧ ರಾಜ್ಯ ನಿನಗೆ.

ಹೊರಡು ನೀನು. ನಿನ್ನ ಹಿಂದೆ ರಥವೇರಿ ನಾನೂ ಬರುತ್ತೇನೆ. ಯುದ್ಧಮಾಡದೆಯೇ ಸೀತೆಯನ್ನು ಮೋಸವಾಗಿ ಪಡೆದುಕೊಂಡು ಕಾರ್ಯವು ಕೈಗೂಡಿದ ಕೂಡಲೇ ಲಂಕೆಗೆ ಹಿಂದಿರುಗಿ ಹೋಗ್ತೇನೆ. ಈ ನನ್ನ ವಾಕ್ಯಕ್ಕೆ ನೀನು ಒಪ್ಪದೇ ಇದ್ದರೆ ಈಗಲೇ ಇಲ್ಲಿಯೇ ನಿನ್ನನ್ನು ಕೊಂದುಹಾಕ್ತೇನೆ. ನೀನು ಒಪ್ಪು, ಬಿಡು ನಿನ್ನಿಂದ ಬಲಾತ್ಕಾರವಾಗಿಯಾದರೂ ಈ ಕಾರ್ಯವನ್ನು ನಾನು ಮಾಡಿಸುತ್ತೇನೆ. ರಾವಣನನ್ನು ಗೊತ್ತಿದ್ದರಿಂದಲೇ ಮಾರೀಚ ಅಷ್ಟೆಲ್ಲಾ ಮಾತುಗಳನ್ನಾಡಿದ್ದು. ಹೀಗೆ ರಾವಣನಿಂದ ಆಜ್ಞಾಪಿತನಾದ ಮಾರೀಚ ನಿಶ್ಶಂಕನಾಗಿ ರಾವಣನಿಗೆ ಮಾತನ್ನು ಮುಂದುವರೆಸ್ತಾನೆ. ಅಮಾತ್ಯರು, ಮಕ್ಕಳು, ರಾಜ್ಯ ಎಲ್ಲ ಸೇರಿ ನಾಶವಾಗುವಂತಹ ಇಂತಹ ಸಲಹೆಯನ್ನು ಯಾವ ಪಾಪಿ ನಿನಗೆ ಕೊಟ್ಟವನು? ಸುಖವಾಗಿ ಬದುಕುವದು ಇಷ್ಟವಿಲ್ಲದ ಪಾಪಿ ಮಾಡುವ ಕೆಲಸವಿದು. ಉಪಾಯವಾಗಿ ನಿನಗೆ ಮೃತ್ಯುದ್ವಾರವನ್ನು ತೆರೆದುಕೊಟ್ಟವನು. ಯಾರವನು? ರಾಮನಂತಹ ಲೋಕೈಕವೀರನೊಟ್ಟಿಗೆ ವೈರವನ್ನೇರ್ಪಡಿಸಿ ನಿನ್ನನ್ನು ಕೊಲ್ಲಿಸುವ ಕೂಟವನ್ನು ಹೂಡಿದ್ದಾರೆ. ನಿನ್ನ ಸಚಿವರಿಗೆ ಮರಣದಂಡನೆ ಕೊಡಬೇಕು. ರಾಜ ದಾರಿ ತಪ್ಪಿದಾಗ ಅವನನ್ನು ನಿಗ್ರಹಿಸಿಯಾದರೂ ಸರಿದಾರಿಗೆ ತರಬೇಕಾದುದು ಸಚಿವರ ಕರ್ತವ್ಯ. ಮಾರೀಚ ಏನು ತಿಳಿದುಕೊಂಡಿದ್ದಾನೆ ಅಂದ್ರೆ ಸಚಿವರಿಗೆ ತಿಳಿಸಿ ಬಂದಿದ್ದಾನೆ ಅಂತ. ಆದ್ರೆ ಇವನು ಸಚಿವರಿಗೂ ತಿಳಿಸದೇ ಬಂದಿದಾನೆ. ಅವಿನೀತನಾಗಿ, ಕ್ರೂರನಾಗಿ ಬಹಳ ಕಾಲ ರಾಜ್ಯವನ್ನು ಪಾಲನೆ ಮಾಡಲು ಸಾಧ್ಯವಿಲ್ಲ. ಇಂತಹ ದುಷ್ಟ ಸಲಹೆ ಕೊಡುವ ಮಂತ್ರಿಗಳು ರಾಜನೊಡನೆ ತಾವೂ ನಾಶವಾಗಿ ಹೋಗ್ತಾರೆ. ರಾಜ್ಯವನ್ನೂ ನಾಶ ಮಾಡ್ತಾರೆ. ನೀನು ಮಾಡಹೊರಟಿರುವ ಈ ಕೆಲಸದಿಂದಾಗಿ ಅವಶ್ಯವಾಗಿ ಎಲ್ಲ ರಾಕ್ಷಸರೂ ನಾಶವಾಗ್ತಾರೆ. ಈ ಘೋರವು ನನ್ನನ್ನು ಬಂದು ಸೇರಿದ್ದು ನನ್ನ ಹಣೆಬರಹ.

ರಾವಣ ಲೋಕಕಂಟಕನಾದರೂ ರಾಮ ತಾನೆ ಹೋಗಿ ರಾವಣನನ್ನು ಕೊಲ್ಲಲಾರ. ಅದಕ್ಕೊಂದು ನೆಪ ಬೇಕು. ಅದು ನಾನು ಎಂಬ ಭಾವ ಕೂಡ ಇದೆ ಮಾರೀಚನಲ್ಲಿ. ನನ್ನ ನಾಶ ಮುಕ್ತಾಯವಲ್ಲ, ನೀನು ಕೂಡ ನಾಶವಾಗ್ತೀಯೆ ನಿನ್ನ ಬಳಗದ ಸಹಿತ ಎಂದು ಹೇಳ್ತಾನೆ ರಾವಣನಿಗೆ. ನನ್ನನ್ನು ಕೊಂದ ರಾಮ ನಿನ್ನನ್ನು ಕೊಲ್ಲಲು ಬಹಳ ಸಮಯವಿಲ್ಲ. ಆದರೆ ನನ್ನೊಂದು ಭಾಗ್ಯವೆಂದರೆ ನಾನು ನಿನ್ನಿಂದಲ್ಲ ಅರಿಯಿಂದ, ಹರಿಯಿಂದ ಸಾಯ್ತೇನೆ ಅದು ನನ್ನ ಅದೃಷ್ಟ. ನೀನು ಸೀತೆಯನ್ನು ಅಪಹರಿಸಿ ತಂದಿದ್ದೇ ಹೌದಾದರೆ ನೀನೂ ಇಲ್ಲ, ನಾನೂ ಇಲ್ಲ, ಲಂಕೆಯೂ ಇಲ್ಲ, ರಾಕ್ಷಸರೂ ಇಲ್ಲ. ಇದು ಫಲ. ಇಷ್ಟು ಪರಿಪರಿಯಾಗಿ ಹೇಳಿದರೂ ಕೇಳದಿದ್ದಾಗ, ಯಾರಿಗೆ ಸಾಯುವ ಇಚ್ಛೆಯಿದೆಯೋ ಅವರು ಒಳ್ಳೆಯ ಮಾತನ್ನು ಕೇಳುವುದಿಲ್ಲ ಎಂದು ಹೇಳಿ ಕೊನೆಯಲ್ಲಿ ಒಪ್ಪಿದ. ಇಷ್ಟೆಲ್ಲ ಹೇಳಿ ಹೋಗುವ ಎನ್ನುವಾಗ ಮಾರೀಚನಲ್ಲಿ ದೈನ್ಯವು ಆವರಿಸಿತು. ನೀನಿಂತಹ ದುರಾತ್ಮನಾಗಿ ಮಾಡುತ್ತಿರುವಾಗ ನಾನಾದರೂ ಏನು ಮಾಡಲಿ ? ಹೊರಟೆ, ನೀನು ಹೇಳಿದ್ದನ್ನು ಮಾಡ್ತೇನೆ ಎಂದು ಹೊರಟ. ರಾವಣನಿಗೆ ಈಗ ಸಂತೋಷವಾಯ್ತು. ಮಾರೀಚನನ್ನು ಗಾಢವಾಗಿ ಆಲಿಂಗಿಸಿಕೊಂಡು ಈಗ ನೀನು ಮಾರೀಚನಾದೆ ಎಂದು ಹೇಳಿದ. ಏಕೆಂದರೆ ರಾವಣ ಬಂದಾಗ ಮಾರೀಚ ಋಷಿಯಾಗಿಬಿಟ್ಟಿದ್ದ. ನನ್ನ ರಥವನ್ನೇರು. ಸೀತೆಯನ್ನು ಲೋಭಗೊಳಿಸಿ ಹೋಗು ಎಂದು ಹೇಳಿ ಹೊರಟು ಬಹುದೂರ ಸಾಗಿ ರಾಮಾಶ್ರಮದ ಬಳಿ ಹೋಗ್ತಾರೆ. ಆಗ ರಾವಣ ರಥದಿಂದಿಳಿದು ಮಾರೀಚನನ್ನು ಹಿಡಿದುಕೊಂಡು ಹೇಳ್ತಾನೆ. ಸಖನೇ ಅದೋ ನೋಡು ರಾಮಾಶ್ರಮ. ನಿನ್ನ ಕೆಲಸ ಆರಂಭಿಸು ಎಂದಾಗ ಮರೀಚ ಅನ್ಯಮಾರ್ಗವಿಲ್ಲದೇ ಸ್ವರ್ಣಮೃಗದ ರೂಪವನ್ನು ಧಾರಣೆ ಮಾಡ್ತಾನೆ. ರಾಮಾಶ್ರಮದ ಮುಂದೆ ಅಡ್ಡಾಡ್ತಾನೆ. ಮಹದದ್ಭುತ ರೂಪವದು. ಇಂದ್ರನೀಲ ಮಣಿಯದ್ದೆ ಎನ್ನುವಂತ ಎರಡು ಕಿವಿಗಳು, ಕೊಂಚ ಕಪ್ಪು ಕೊಂಚ ಬಿಳಿಯ ಬಾಯಿ, ಒಂದು ಪಾರ್ಶ್ವ ಕಮಲದಂತೆ, ಮತ್ತೊಂದು ಪಾರ್ಶ್ವ ಕನ್ನೈದಿಲೆಯಂತೆ, ಇಂದ್ರನೀಲದಂಥ ತುಟಿಗಳು, ಬಿಳಿಯ ಹೊಟ್ಟೆ, ವೈಢೂರ್ಯದಂತ ಗೊರಸುಗಳು, ಕಾಮನಬಿಲ್ಲಿನಂತೆ ಶೋಭಿಸುವ ಬಾಲ. ನಾನಾ ಬಗೆಯ ರತ್ನಗಳು ಮೃಗವನ್ನು ಅಲಂಕರಿಸಿದ್ದವು. ಕ್ಷಣಮಾತ್ರದಲ್ಲಿ ಮಾರೀಚ ಅದ್ಭುತ ಮಾಯಾಮೃಗವಾದ. ಸೀತೆಯನ್ನು ಪ್ರಲೋಭನಗೊಳಿಸುವ ಸಲುವಾಗಿ ಚಂದದ ರೂಪ ತಾಳಿ ರಾಮಾಶ್ರಮದ ಸುತ್ತ ಸಂಚರಿಸುತ್ತಿದ್ದಾನೆ. ಹೀಗೆ ಸಂಚರಿಸುತ್ತಾ ಸ್ವಲ್ಪ ದೂರ ಹೋಗಿ ಮತ್ತೆ ಮರಳಿ ಬಂದ. ಸೀತಾದರ್ಶನಕ್ಕಾಗಿ ಮಂಡಲಕ್ರಮದ ಸಂಚಾರ ಮಾಡಿದ. ಉಳಿದ ಮೃಗಗಳು ಒಮ್ಮೆ ಮೂಸಿ ದಿಕ್ಕುದಿಕ್ಕಿಗೆ ಓಡಿದವು. ಇದೇ ಸಮಯದಲ್ಲಿ ವೈದೇಹಿ ಹೂವನ್ನು ಕೊಯ್ಯುವ ಸಲುವಾಗಿ ಹೂಬಿಟ್ಟ ಮರಗಳ ಸಲುವಾಗಿ ಹೋಗ್ತಾಳೆ. ಹೂವು ಕೊಯ್ಯುತ್ತಾ ಆ ಅದ್ಭುತವಾದ ಮೃಗವನ್ನು ನೋಡಿದಳು. ಪರಮಾಶ್ಚರ್ಯವಾಯಿತಂತೆ. ಪ್ರೀತಿಯಿಂದ ನೋಡಿದಳು. ಅವಳು ನೋಡಿದ್ದು ಮಾರೀಚನಿಗೆ ಗೊತ್ತಾಯಿತು. ಮತ್ತೆ ಚಿತ್ರ ವಿಚಿತ್ರವಾಗಿ ಅವಳನ್ನು ಆಕರ್ಷಿಸುವಂತೆ ಸಂಚರಿಸಿತು ಸೀತೆಯ ಮುಂದೆ. ರಾಮ ಲಕ್ಷ್ಮಣರನ್ನು ಕರೀತಾಳೆ. ಅವಳು ಕರೆದಾಗ ಅವರಿಬ್ಬರೂ ಬರುತ್ತಿದ್ದಂತೆಯೇ ಕಾಂಚನ ಮಾಯಾಮೃಗವನ್ನು ವೀಕ್ಷಿಸಿದರು. ಮುಂದಾಗಬಹುದಾದ್ದನ್ನು ಊಹಿಸಿ ಲಕ್ಷ್ಮಣನು ರಾಮನಿಗೆ ಹೇಳ್ತಾನೆ. ಇದು ಮಾರೀಚ ರಾಕ್ಷಸ. ನಿಶ್ಚಯವಾಗಿ ಹೇಳ್ತಾನೆ. ಈ ಪಾಪಿ ಹೀಗೆಯೇ ಬೇಕಾದ ಬಗೆಯ ರೂಪ ತಾಳಿ ಎಷ್ಟು ಜನರನ್ನು ಕೊಂದ. ಅದೇ ಮಾರೀಚನ ಮಾಯಾಮೃಗ ರೂಪವಿದು. ಈ ಮಾಯಾಮೃಗದ ರೂಪ ಸತ್ಯವಲ್ಲ. ಏಕೆಂದರೆ ಜಗತ್ತಿನಲ್ಲಿ ನಿಜವಾದ ಬಂಗಾರದ, ರತ್ನದ ಜಿಂಕೆ ಇಲ್ಲ. ಜಗತೀನಾಥ ನೀನು ಜಗತ್ತಿನಲ್ಲಿದೆಯಾ? ಮಾಯೆಯಿದು. ನನಗೆ ಯಾವುದೇ ಸಂಶಯವಿಲ್ಲ ಎಂದು ಲಕ್ಷ್ಮಣ ಸ್ಪಷ್ಟೋಕ್ತಿಯಲ್ಲಿ ಉತ್ತರಿಸಿದ. ಮುಂದಿನದನ್ನು ಮುಂದಿನ ಕಥಾಭಾಗದಲ್ಲಿ ನಿರೀಕ್ಷಿಸೋಣ…..
ಪ್ರವಚನವನ್ನು ಇಲ್ಲಿ ಕೇಳಿರಿ:ಪ್ರವಚನವನ್ನು ನೋಡಲು:

Facebook Comments