ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಮಾತನ್ನು ಆಡಿದ್ದು ಯಾರು ಎನ್ನುವುದನ್ನು ನೋಡಬೇಡ. ಮಾತು ಒಳ್ಳೆಯದಾಗಿದ್ದರೆ ಸ್ವೀಕರಿಸು. ಸಾಮಾನ್ಯವಾಗಿ ದೊಡ್ಡವರು ಚಿಕ್ಕವರಿಗೆ ಹಿತೋಪದೇಶ ಮಾಡುವುದು ರೂಢಿ. ಆದರೆ ಕೆಲವೊಮ್ಮೆ ಚಿಕ್ಕವರೂ ದೊಡ್ಡವರಿಗೆ ಕೆಲವು ಮಾತುಗಳನ್ನು ಹೇಳಬೇಕಾದ ರೀತಿಯಲ್ಲಿ ಗೌರವಪೂರ್ವಕವಾಗಿ ಹೇಳುವ ಪರಿಸ್ಥಿತಿ ಬರುತ್ತದೆ. ದೊಡ್ಡವರೂ ಅದನ್ನು ಸ್ವೀಕಾರ ಮಾಡಬೇಕಾಗಿ ಬರುತ್ತದೆ.

ಹಿತೋಪದೇಶವನ್ನು ಯಾರೇ ಹೇಳಿದರೂ ಸ್ವೀಕರಿಸಬೇಕು.

ಇಲ್ಲಿ ರಾಮನಿಗೆ ಲಕ್ಷ್ಮಣ ತಿಳಿಸಿ ಹೇಳ್ತಾ ಇದಾನೆ. ಭೂಮಿಗೆ ಕಂಪನ ಇಲ್ಲವೇ? ಸೂರ್ಯಚಂದ್ರರಿಗೆ ಗ್ರಹಣ ಇಲ್ಲವೇ? ಇಂದ್ರಾದಿ ದೇವತೆಗಳಿಗೂ ಸಂಕಷ್ಟ ಬರುವುದಿಲ್ಲವೇ? ಹಾಗೇ ನಮಗೂ ಬಂದಿದೆ. ಕಷ್ಟ ಸುಖಗಳು ಗಾಳಿಯ ಹಾಗೆ. ಬರುತ್ತದೆ, ಹೋಗುತ್ತದೆ. ಯಾವುದೂ ಹೀಗೆ ಇರದು. ಬದಲಾವಣೆಯಾಗಲೇಬೇಕು. ಅಣ್ಣ ವ್ಯಥೆಪಡದಿರು. ಯಾರು ಸೀತೆಯನ್ನು ಅಪಹರಿಸಿದರೋ ಆ ದುರುಳನನ್ನು ಹುಡುಕಿ ತಕ್ಕ ಪ್ರಾಯಶ್ಚಿತ್ತವನ್ನ ಅವನಿಗೆ ಮಾಡೋಣ. ಪ್ರಪಂಚವನ್ನೇ ಸಂಹರಿಸಲು ಹೋಗಬೇಡ. ನೀನೇ ಕೋಪಿಸಿಕೊಂಡರೆ ಯಾರು ಗತಿ ಪ್ರಪಂಚಕ್ಕೆ?

ಹೀಗೆ ಹೇಳಿ ಕೊನೆಯಲ್ಲಿ ಹೇಳ್ತಾನೆ ಲಕ್ಷ್ಮಣ. ಇದ್ಯಾವ ಶಬ್ಧವೂ ನನ್ನದಲ್ಲ, ಎಲ್ಲವೂ ನಿನ್ನದೆ. ನಿನಗೆ ನಾನು ಬುದ್ಧಿ ಹೇಳ್ತೇನೆ, ಅನುಶಾಸನ ಮಾಡ್ತೇನೆ ಹೇಳೋದಿಕ್ಕೆ ಏನಿದೆ ನನ್ನಲ್ಲಿ? ನಿನಗೆ ತಿಳಿಸಿ ಹೇಳಬೇಕಾದವನು ಈ ಜಗತ್ತಿನಲ್ಲಿ ಯಾರೂ ಇಲ್ಲ. ದೇವಗುರುವಾದ ಬೃಹಸ್ಪತಿಯಾದರೂ ಕೂಡ ನಿನಗೆ ತಿಳಿಸಿ ಹೇಳುವ ಯೋಗ್ಯತೆ ಅವನಿಗೆಲ್ಲಿದೆ? ಗುರುವಿಗೂ ಗುರು ನೀನು ಎಂಬುದಾಗಿ ಹೇಳಿ ನಿನ್ನೊಳಗಿನ ಮಹಾಜ್ಞಾನ ಶೋಕದಿಂದ ಮುಚ್ಚಿಹೋಗಿದೆ ಅದನ್ನು ಎಚ್ಚರಿಸುವ ಕೆಲಸ ಮಾಡ್ತಾ ಇದ್ದೇನೆ. ಇಲ್ಲದಿದ್ದರೆ ನಿನಗೆ ಹೇಳಲು ನಾನ್ಯಾರು? ಎಂದು ಹೇಳಿ ರಾಮನ ದಿವ್ಯತ್ವವನ್ನು ಪ್ರಚೋದಿಸ್ತಾನೆ. ನಿನ್ನೊಳಗೆ ಮಾನುಷ ಭಾವವೂ ಇದೆ, ದಿವ್ಯವೂ ಇದೆ. ವಿಕ್ರಮ ನೀನು. ಮನುಷ್ಯ ಮಾತ್ರನಲ್ಲ, ಮನುಷ್ಯೋತ್ತಮ ನೀನು. ದಿವ್ಯ ಭಾವ ನಿನಗೇ ಗೊತ್ತು. ಈ ಬ್ರಹ್ಮಾಂಡದ ಆತ್ಮವೇ ನಿನ್ನಾತ್ಮ. ಹಾಗಾಗಿ ನೀನು ದಿವ್ಯ ಮತ್ತು ಮಾನುಷ ಪರಾಕ್ರಮಗಳನ್ನ ಅವಲೋಕನ ಮಾಡಿ ಏಳು ನೀನು. ಶತ್ರುಗಳ ಸಂಹಾರ ಮಾಡೋಣ ಎಂದು ಲಕ್ಷ್ಮಣ ಹೇಳಿದಾಗ ರಾಮನು ಅವನ ಮಾತಿನ ಸಾರವನ್ನು ಸ್ವೀಕರಿಸಿದನು.

ಯಾವುದು ಲಕ್ಷ್ಮಣನ ಮಾತಿನ ಮಹಾಸಾರ? ಯಾರು ನಾನು? ಯಾಕಾಗಿ ಇಲ್ಲಿಗೆ ಬಂದೆ? ನನ್ನೊಳಗಿನ ಮಹಾಸತ್ವವು ಯಾವುದು? ಎಂಬುದನ್ನು ರಾಮ ಗಮನಿಸ್ತಾನೆ. ಆಗ ಲೋಕನಾಶಕವಾದ ತನ್ನ ಮಹಾಕ್ರೋಧವನ್ನು ರಾಮ ಉಪಸಂಹರಿಸಿದ. ಯಾಕೆಂದರೆ ಸರ್ವ ಜಗತ್ತಿನ ಪರಿಪಾಲಕ ಶಕ್ತಿ ಕೊಲ್ಲಲು ಮುಂದಾಗುವುದಾದರೂ ಹೇಗೆ? ಹಾಗಾಗಿ ಮಿತಿಮೀರಿದ ತನ್ನ ರೋಷವನ್ನು ನಿಗ್ರಹಿಸಿದ. ತನ್ನ ಧನುಸ್ಸನ್ನು ಭೂಮಿಗೆ ಊರಿ ನಿಂತ ಲಕ್ಷ್ಮಣನನ್ನು ಏನು ಮಾಡೋಣ ಎಂಬುದಾಗಿ ಸೌಮ್ಯ ಧ್ವನಿಯಲ್ಲಿ ಕೇಳಿದ. ವತ್ಸ ಎಲ್ಲಿ ಹೋಗೋಣ? ಸೀತೆಯನ್ನು ಯಾವ ಉಪಾಯದಲ್ಲಿ ಕಾಣೋಣ? ಚಿಂತಿಸು ಎಂದಾಗ ಸೀತಾ ವಿಯೋಗದಿಂದ ಬಳಲಿದ ರಾಮನನ್ನು ಕುರಿತು ಲಕ್ಷ್ಮಣ ಹೇಳ್ತಾನೆ ಅಣ್ಣ ಇದೇ ಪಂಚವಟಿಯನ್ನು ಅನ್ವೇಷಣೆ ಮಾಡೋಣ. ನಿನ್ನಂತಹ ಮಹಾಶ್ರೇಷ್ಟರು ಆಪತ್ತಿನಲ್ಲಿ ಕಂಪಿಸುವುದಿಲ್ಲ ಎಂದಾಗ ಅದನ್ನು ಒಪ್ಪಿ ರಾಮನು ಪಂಚವಟಿಯ ಪುನರನ್ವೇಷಣೆಗೆ ತೊಡಗಿದ.

ಧನುಸ್ಸಿಗೆ ಬಾಣವನ್ನು ಹೂಡಿಯೇ ಸಂಚರಿಸ್ತಿರುವಾಗ ಆ ಮಹದ್ರೂಪವನ್ನು ಕಂಡ. ಪರ್ವತ ಶಿಖರದಷ್ಟು ಆಕಾರ ಅವನದು. ಅವನು ದುಷ್ಟನಲ್ಲ. ಪಕ್ಷಿ ಶ್ರೇಷ್ಠ. ಆದರೆ ಏಳಲಾರದ ಸ್ಥಿತಿಯಲ್ಲಿ, ದೊಡ್ಡ ಸ್ವರವೆತ್ತಲಾರದ ಸ್ಥಿತಿಯಲ್ಲಿ, ಭೂಮಿಗೆ ಬಿದ್ದುಬಿಟ್ಟಿದ್ದಾನೆ. ತನ್ನದೇ ರಕ್ತದಿಂದ ನೆನೆದಿದ್ದಾನೆ ಜಟಾಯು. ವಿಪರ್ಯಾಸವೆಂದರೆ ರಾಮ ಲಕ್ಷ್ಮಣರಿಗೆ ಜಟಾಯುವಿನ ಗುರುತೇ ಸಿಗಲಿಲ್ಲ. ದಶರಥನ ಸ್ನೇಹಿತ, ರಾಮನಿಗೆ ಪರಮಪ್ರಿಯ ನಿತ್ಯ ನೋಡುವ ರೂಪ ಅದು. ಆದರೆ ಗುರುತೇ ಸಿಗಲಿಲ್ಲ. ಯಾಕೆಂದರೆ ಗುರುತು ಸಿಗದಷ್ಟು ಅವನನ್ನ ಕೊಚ್ಚಲಾಗಿತ್ತು. ರೆಕ್ಕೆಗಳು, ಎರಡೂ ಪಾರ್ಶ್ವಗಳು, ಪಾದಗಳನ್ನು ಕತ್ತರಿಸಲಾಗಿತ್ತು. ಉಳಿದಿರುವುದು ತಲೆಯಿರುವ ಮಾಂಸದ ಮುದ್ದೆ. ಆದರೆ ಆ ರೂಪು ರೇಷೆಯ ಮೇಲೆ ಗೃಧ್ರಾಕಾರ ಅಂತ ಅನ್ನಿಸ್ತು ರಾಮನಿಗೆ. ಇದು ಯಾವುದೋ ಗೃಧ್ರ ರೂಪದ ರಾಕ್ಷಸ. ಸೀತೆಯನ್ನು ಕೊಂದು ತಿಂದು ಮಲಗಿದೆ ಇಲ್ಲಿ ಎಂದು ಧಾವಿಸಿ, ಬಾಣಗಳಿಂದ ಇವನನ್ನು ಸಂಹರಿಸುವೆ ಎಂದು ಉದ್ಘರಿಸಿ, ಧನುಸ್ಸಿನಲ್ಲಿ ಹೂಡಿದ ಬಾಣವನ್ನು ಬಿಗಿಗೊಳಿಸಿ, ಜಟಾಯುವಾನ ಕಡೆಗೆ ಧಾವಿಸಿದಾಗ ಜಟಾಯುವಿಗೆ ಗೊತ್ತಾಯ್ತು. ಬಾಣಪ್ರಯೋಗವಾಗುವ ಮೊದಲು ವಿಷಯ ತಿಳಿಸಬೇಕು ಎಂದು ಬಾಯ್ತೆರೆದಾಗ ರಕ್ತ ಬಂತು ಬಾಯಿಯಿಂದ. ಮತ್ತೆ ಮಾತು ಬಂತು. ದೀನ ಸ್ವರದಲ್ಲಿ ಹೇಳ್ತಾನೆ, ಆಯುಷ್ಮನ್ ಎಂದು ಸಂಬೋಧಿಸಿ ಔಷಧಿ ಲತೆಯನ್ನು ಹುಡುಕಿದಂತೆ ಯಾವ ಸೀತೆಯನ್ನು ನೀನು ಹುಡುಕ್ತಾ ಇದೀಯೋ ಆ ನಿನ್ನ ಪ್ರಾಣಸಮಾನಳಾದ ಸೀತೆ ಮತ್ತು ನನ್ನ ಪ್ರಾಣ ಎರಡನ್ನೂ ರಾವಣ ಕದ್ದೊಯ್ದ. ರಾಮ, ನಿನ್ನಿಂದ ವಿರಹಿತಳಾದ, ಜೊತೆಯಲ್ಲಿ ನೀನು ಮತ್ತು ಲಕ್ಷ್ಮಣ ಇಲ್ಲದ ಸೀತೆಯನ್ನು ನಾನು ಕಂಡೆ. ಆಕೆಯನ್ನು ರಾವಣ ಸೆಳೆದೊಯ್ಯುತಿದ್ದ. ನಾನು ಸೀತೆಯ ರಕ್ಷೆಗೆ ಒದಗಿದೆ, ಸೀತೆಯನ್ನು ರಕ್ಷಿಸುವ ಸಲುವಾಗಿ ಹೋಗಿ ರಾವಣನೆದುರು ನಿಂತೆ, ಹೇಳುವಷ್ಟು ಹೇಳಿದೆ. ನಾನು ಹೇಳಿದ ಯಾವ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಅವನಿರಲಿಲ್ಲ. ಪರಿಣಾಮವಾಗಿ ನನಗೂ ರಾವಣನಿಗೂ ಘೋರ ಯುದ್ಧವೇರ್ಪಟ್ಟಿತು. ನಾನು ಅವನ ರಥವನ್ನು, ಛತ್ರವನ್ನು ಧ್ವಂಸ ಮಾಡಿದೆ. ರಾವಣನನ್ನು ನೆಲಕ್ಕೊರಗಿಸಿದೆ. ಒಂದು ಘಳಿಗೆ ಸೀತೆಯನ್ನು ಬಿಡಿಸಿದೆ ಕೂಡ. ಪಕ್ಕದಲ್ಲಿ ಮುರಿದುಬಿದ್ದ ಧನುಸ್ಸು ಅದೇ ರಾವಣನದ್ದು. ನೂರು ಚೂರಾದ ಸಂಗ್ರಾಮ ರಥ, ನಾನೆ ಅದನ್ನು ಚೂರು ಮಾಡಿದ್ದು. ಆಚೆ ಸತ್ತಿರುವವನು ರಾವಣನ ಸಾರಥಿಯೇ ಹೌದು. ಇಷ್ಟು ಹೊತ್ತಿನಲ್ಲಿ ಮುಪ್ಪು ಮತ್ತು ಆಯಾಸದಿಂದ ನನಗೆ ಬಹಳ ಶ್ರಮವಾಗಿತ್ತು. ಏನಾಯಿತು ತಿಳಿಯಲಿಲ್ಲ. ಯಾವುದೋ ಮಾಯೆಯಲ್ಲಿ ನನ್ನ ರೆಕ್ಕೆಗಳನ್ನು ಕತ್ತರಿಸಿ ನನ್ನನ್ನು ಈ ಸ್ಥಿತಿಗೆ ತಂದು, ರಾವಣ ಸೀತೆಯನ್ನು ಸೆಳೆದು ಆಕಾಶಕ್ಕೆ ನೆಗೆದ. ಮೊದಲೇ ರಾವಣನಿಂದ ಕೊಲ್ಲಲ್ಪಟ್ಟ ನನ್ನನ್ನು ಕೊಲ್ಲಬೇಡ. ಈ ಸ್ಥಿತಿಯಲ್ಲಿ ನನ್ನ ಮೇಲೆ ಬಾಣ ಪ್ರಯೋಗವನ್ನು ಮಾಡಬೇಡ ಎಂದಾಗ ರಾಮನಿಗೆ ಅದು ಜಟಾಯು ಅಂತ ಗೊತ್ತಾಯ್ತು. ಕೂಡಲೇ ರಾಮನ ಪರಿತಾಪವು ದ್ವಿಗುಣವಾಯಿತು. ಮೊದಲು ಸೀತಾಪಹರಣದ ದುಃಖ ಮಾತ್ರ, ಈಗ ಜಟಾಯು ವಧೆಯ ದುಃಖ. ಕಣ್ಣೀರು ಧಾರೆ ಧಾರೆಯಾಗಿ ರಾಮನ ಕೆನ್ನೆಯ ಮೇಲೆ ಇಳಿಯಿತು. ರಾಮನಿಗೆ ಅತ್ಯವಶ್ಯಕವಾದ ಸೀತೆ ಏನಾದಳು ಎಂಬ ಮಾಹಿತಿ ಕೇಳಿದಾಗ ಜಟಾಯುವಿನ ತ್ಯಾಗ ಹಾಗೂ ಮನದ ಪೂರ್ಣ ಪರಿಚಯವೇ ಆಯಿತು. ಮಹಾಧನುಸ್ಸು ರಾಮನ ಕೈಯಿಂದ ಜಾರಿತು. ಜಟಾಯುವನ್ನು ತಬ್ಬಿ ನೆಲಕ್ಕೆ ಕುಸಿದನು ರಾಮ. ಸಶಬ್ಧ ರೋಧನ ರಾಮನಿಂದ ಹೊರಬಂತು.

ಪಕ್ಷಿರಾಜ ಜಟಾಯು ಆದರೆ ಹೇಳಿಕೇಳುವರಿಲ್ಲದೇ ದುರ್ಗಮ ಮಾರ್ಗದಲ್ಲಿ ಅನಾಥನಂತೆ ಒಬ್ಬನೇ ಬಿದ್ದಿದಾನೆ. ಹೇಗೋ ಉಸಿರನ್ನು ಹಿಡಿದುಕೊಂಡಿದಾನೆ. ಅವನನ್ನು ಕಂಡ ರಾಮನಿಗೆ ಸೀತಾವಿಯೋಗದಲ್ಲಿ ಯಾವ ದುಃಖವಾಗಿತ್ತೋ ಅದಕ್ಕಿಂತ ಮಿಗಿಲಾದ ದುಃಖದಲ್ಲಿ ಲಕ್ಷ್ಮಣನಿಗೆ ಹೇಳ್ತಾನೆ. ರಾಜ್ಯವನ್ನು ಕಳೆದುಕೊಂಡೆ, ವನವಾಸವಾಯಿತು, ಇಷ್ಟಮಿತ್ರರೆಲ್ಲರೂ ದೂರವಾದರು, ಸೀತಾವಿಯೋಗವಾಯಿತು, ಇದೆಲ್ಲಕ್ಕಿಂತ ಮಿಗಿಲಾಗಿ ನನ್ನ ಪರಮಪ್ರಿಯನಾದ ಪಕ್ಷಿರಾಜನು ಹತನಾದ ಮೇಲೆ, ನನ್ನಂತವರು ಇನ್ನಾರು ಇರಲು ಸಾಧ್ಯ ಪ್ರಪಂಚದಲ್ಲಿ? ನನಗೆ ಬಂದ ಕಷ್ಟ ಎಂಥದ್ದು ಅಂದ್ರೆ ಬೆಂಕಿಯನ್ನು ಸುಡುವಂಥದ್ದು. ಬಹುಷಃ ನಾನು ಸಮುದ್ರದಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಲು ಹೋದರೆ ಸಮುದ್ರವೇ ಒಣಗಿ ಹೋಗಬಹುದು. ನನ್ನಂತಹ ದೌರ್ಭಾಗ್ಯ ಯಾರಿಗಿದೆ ಪ್ರಪಂಚದಲ್ಲಿ? ಭೂಮಿಯೇನು, ಚರಾಚರ ಪ್ರಪಂಚದಲ್ಲಿ ನನಗಿಂತ ದೌರ್ಭಾಗ್ಯವಂತರಿಲ್ಲ. ನೂರಾರು ಸಂಕಟಗಳು ಬಂದು ಸೇರಿ ನನ್ನ ಬದುಕನ್ನು ಮುಚ್ಚಿದೆ. ನನ್ನ ತಂದೆಯ ಪರಮಮಿತ್ರ, ಗೃಧ್ರರಾಜ, ವಯೋವೃದ್ಧ, ಅವನ ದುರ್ದೆಸೆಯಲ್ಲ, ನನ್ನ ದೌರ್ಭಾಗ್ಯ ಜಟಾಯುವಿಗೆ ಬಡಿಯಿತು ನೋಡು. ನನ್ನ ಬಂಧುತ್ವವನ್ನು ಬೆಳೆಸಿಕೊಂಡು, ನನ್ನ ಮಡದಿಯನ್ನ ಕಾಪಾಡಬೇಕೆಂದು ಹೋಗಿ ಈ ಅವಸ್ಥೆ ಅವನಿಗೆ ಬಂತು. ಹೀಗೆಲ್ಲ ವಿಲಪಿಸ್ತಾ, ಪರಿತಪಿಸ್ತಾ ಜಟಾಯುವನ್ನು ಸ್ಪರ್ಶಿಸಿದನು. ಆ ಸ್ಪರ್ಶ ಜಟಾಯುವಿಗೆ ಪರಮಾಶೀರ್ವಾದ. ಆ ಹೊತ್ತಿನಲ್ಲಿ ಜಟಾಯು ದಶರಥನಂತೆ ಕಂಡ ರಾಮನಿಗೆ. ಜಟಾಯುವನ್ನು ತಬ್ಬಿ ನೀನು ಹೇಳಿದಂತೆ ನನ್ನ ಪ್ರಾಣಪ್ರಿಯಳಾದ ಸೀತೆ ಎಲ್ಲಿ ಎಂದು ಕೇಳಿ ಮಾತು ಮೌನವಾಗಿ ಮತ್ತೆ ಕುಸಿದನು ರಾಮ. ಆ ದುರುಳನಿಂದ ಪ್ರಾಣೋತ್ಕ್ರಮಣದ ಸ್ಥಿತಿಯಲ್ಲಿ ಪೀಡಿಸಲ್ಪಟ್ಟ ಗೃಧ್ರನನ್ನು ಕಂಡು ಬಳಿಕ ಲಕ್ಷ್ಮಣನಿಗೆ ರಾಮನು ಹೇಳ್ತಾನೆ : ನನಗಾಗಿ ಹೋರಾಡ್ತಾ ಹೋರಾಡ್ತಾ ರಾವಣನ ಕೈಯಿಂದ ಹತನಾದ ಜಟಾಯು. ಇರುವ ಪ್ರಾಣವಲ್ಲ ಅದು. ಈ ಶರೀರದಲ್ಲಿ ಬಹು ಕಷ್ಟದಲ್ಲಿ ಪ್ರಾಣವು ಇದೆ. ಅತ್ಯಂತ ಕ್ಷೀಣಾವಸ್ಥೆಯಲ್ಲಿ ಈ ಪ್ರಾಣವು ಉಳಿದುಕೊಂಡಿದೆ. ನೋಡು ಲಕ್ಷ್ಮಣಾ, ಸ್ವರ ಬರ್ತಾ ಇಲ್ಲ, ಕಷ್ಟದಲ್ಲಿ ನನ್ನೆಡೆಗೆ ನೋಡ್ತಾ ಇದಾನೆ. ನೋಡಲಿಕ್ಕೂ ಕಷ್ಟವಾಗ್ತಾ ಇದೆ. ಜಟಾಯುವನ್ನು ಸಂಬೋಧಿಸಿ ಹೇಳ್ತಾನೆ, ಜಟಾಯು ನಿನಗಿನ್ನೂ ಮಾತನಾಡಲಿಕ್ಕೆ ಸಾಧ್ಯವಿದ್ದರೆ, ಹೇಳು ಜಟಾಯು, ಸೀತೆಗೇನಾಯಿತು? ನಿನಗೇನಾಯಿತು? ನಿನ್ನ ವಧವನ್ನು, ಸೀತೆಯ ಅಪಹರಣವನ್ನು ಕುರಿತು ಹೇಳು ಜಟಾಯು, ಯಾಕೆ ರಾವಣನು ಸೀತೆಯನ್ನು ಅಪಹರಿಸಿದ? ನಾನೇನು ಅಪರಾಧ ಮಾಡಿದ್ದೆ? ಸೀತೆಯನ್ನು ಕದ್ದೊಯ್ಯುವಂಥ ತಪ್ಪನ್ನು ನಾನೇನು ಮಾಡಿದ್ದೆ? ಆ ಸಮಯದಲ್ಲಿ ಸೀತೆಯ ಚಂದ್ರವದನವು ಹೇಗಿತ್ತು? ಸೀತೆ ಆ ಸಮಯದಲ್ಲಿ ಏನೆಂದಳು ಜಟಾಯು? ಯಾರವನು ರಾವಣನೆಂದರೆ? ಏನವನ ಪರಾಕ್ರಮ? ಏನವನ ರೂಪ? ನೋಡಲು ಹೇಗಿದ್ದಾನೆ? ಅವನ ಇತಿಹಾಸ, ಚರಿತ್ರೆ ಏನು? ಎಲ್ಲಿ ಅವನ ಮನೆ? ಯಾವುದವನ ಊರು? ಹೇಳ್ತೀಯಾ ಜಟಾಯು? ಹೇಳಲು ಸಾಧ್ಯವೇ ನಿನಗೆ? ಎಂದು ಕೇಳಿದನು ರಾಮ.

ಅನಾಥನಂತೆ ವಿಲಪಿಸುವ ರಾಮನನ್ನು ಕುರಿತು ಆ ಧರ್ಮಾತ್ಮನಾದ ಜಟಾಯು ಕಷ್ಟದಿಂದ ರಾಮನೆಡೆಗೆ ದೃಷ್ಟಿಯನ್ನು ಬೀರಿ ಕುಗ್ಗಿದ ಸ್ವರದಲ್ಲಿ ಈ ಮಾತುಗಳನ್ನು ಹೇಳಿದನು. ಅವಳನ್ನು ಅಪಹರಿಸಿದ್ದು ದುರಾತ್ಮನಾದ ರಾವಣ. ಅವಳನ್ನು ಅಪಹರಿಸಿದ್ದಾಗಲೀ, ನನ್ನನ್ನು ಕೊಂದಿದ್ದಾಗಲೀ ಮಾಯೆಯಿಂದ. ಮಹಾರಾಕ್ಷಸರು ಮಾತ್ರ ಮಾಡಬಹುದಾದಂತಹ ಮಾಯೆಯನ್ನು ಪ್ರದರ್ಶಿಸಿದನು. ಆಗ ಮೋಡ ಕವಿಯಿತು, ಕತ್ತಲಾಯಿತು, ಏನಾಯಿತೆಂಬುದೇ ಗೊತ್ತಾಗಲಿಲ್ಲ. ಗೊತ್ತಾಗುವಾಗ ನನಗೆ ರೆಕ್ಕೆ ಇರಲಿಲ್ಲ. ಕಾಲುಗಳೂ ಇರಲಿಲ್ಲ, ಪಾರ್ಶ್ವಗಳೂ ಛಿನ್ನವಾಗಿದ್ದವು. ಬಳಲಿದ್ದ ನನ್ನ ರೆಕ್ಕೆಗಳನ್ನು ಕತ್ತರಿಸಿ, ಸೀತೆಯನ್ನು ಅವನು ಕದ್ದೊಯ್ದಿದ್ದು ದಕ್ಷಿಣ ದಿಕ್ಕಿಗೆ ಎಂದು ಮುಖ್ಯವಾದ ಸುಳಿವನ್ನು ಜಟಾಯು ಕೊಡ್ತಾನೆ. ರಾಮಾ ನನ್ನ ಪ್ರಾಣಗಳು ನಿಂತು ಹೋಗ್ತಾ ಇದ್ದಾವೆ, ದೃಷ್ಠಿಯು ಭ್ರಮಿಸ್ತಾ ಇದೆ, ಚಿನ್ನದ ವೃಕ್ಷಗಳು ಕಾಣ್ತಾ ಇವೆ ಅಂತ ಹೇಳ್ತಾನೆ. ಅದು ಮರಣದ ಸ್ಥಿತಿ. ತನಗೆ ಮೃತ್ಯು ಬಂತು ಎಂದು ರಾಮನಿಗೆ ಜಟಾಯು ಹೇಳಿದ ಬಗೆ ಇದು. ಏತನ್ಮಧ್ಯೆ ಜ್ಯೌತಿಷದ ಒಂದು ಸಂಗತಿಯನ್ನ ಹೇಳ್ತಾನೆ. ರಾಮಾ ನೀನೇನೂ ಆಲೋಚನೆ ಮಾಡ್ಬೇಡ, ಏಕೆಂದರೆ ಸೀತೆಯನ್ನು ರಾವಣನು ಕದ್ದೊಯ್ದ ಮುಹೂರ್ತಕ್ಕೆ ವಿಂದ ಎಂದು ಹೆಸರು. ಆ ಮುಹೂರ್ತದಲ್ಲಿ ಯಾವ ಕಳ್ಳನು ಏನು ಕದ್ದರೂ ಆ ಸಂಪತ್ತು ಯಾರದ್ದೋ ಅದು ಅವರಿಗೇ ಹಿಂದಿರುಗಿ ಬರುತ್ತದೆ. ರಾವಣನಿಗದು ಗೊತ್ತೇ ಆಗಲಿಲ್ಲ. ಆ ಪ್ರಾಣೋತ್ಕ್ರಮಣದ ಸ್ಥಿತಿಯಲ್ಲೂ ರಾಮನನ್ನು ಸಂತೈಸ್ತಾನೆ ಜಟಾಯು. ನಿನ್ನ ಪ್ರಿಯಪತ್ನಿಯಾದ ಸೀತೆಯನ್ನು ಅಪಹರಿಸಿದ ರಾವಣನು ಸಾಯ್ತಾನೆ. ಅದು ಆ ಮುಹೂರ್ತದ ಫಲ. ಸೀತೆಯು ರಾವಣನಿಗೆ ಸಾವಿನ ಮಾಧ್ಯಮ. ಜಾನಕಿಯನ್ನು ಕುರಿತು ನೀನು ವ್ಯಥೆ ಪಡಬೇಡ. ಬಹುಬೇಗ ಆ ರಾವಣನನ್ನು ಯುದ್ಧದಲ್ಲಿ ಕೊಂದು ನೀನು ಸೀತೆಯನ್ನು ಮರಳಿ ಪಡೆಯುವೆ. ರಾವಣನಲ್ಲಿಯೂ ಅದನ್ನೇ ಬಾರಿ ಬಾರಿ ಹೇಳಿದ್ದ ಜಟಾಯು. ಚೀರ ವಲ್ಕಲ ಧಾರಿಯಾದ, ಜಟಾಧಾರಿಯಾದ ರಾಮನು ನಿನ್ನನ್ನು ಕೊಲ್ತಾನೆ, ನೀನು ಸರ್ವನಾಶವಾಗಿ ಹೋಗ್ತೀಯೆ. ಇಂಥ ಸ್ಥಿತಿಯಲ್ಲಿಯೂ ಹೇಳಬೇಕಾದ ವಿಷಯವನ್ನು ತಪ್ಪದೇ ಹೇಳ್ತಿದಾನೆ. ಅವನ ಬುದ್ಧಿ ಈಗಲೂ ಸ್ಥಿರವಾಗಿದೆ.

ಆದರೆ ಈ ಬಾರಿ ಈ ವಿಷಯಗಳನ್ನು ಹೇಳುತ್ತಿದ್ದಂತೆಯೇ ಮಾಂಸಸಹಿತವಾಗಿ ರಕ್ತ ಬಂತು ಜಟಾಯುವಿನ ಬಾಯಿಯಿಂದ. ಆ ಮಾಂಸವಾಂತಿಯಾಗುತ್ತಿದ್ದಂತೆಯೇ ಇನ್ನೊಂದು ವಿವರವನ್ನು ಕೊಡ್ತಾನೆ ಜಟಾಯು. ಅವನು ವಿಶ್ರವಸನ ಮಗ, ವೈಶ್ರವಣನ ಸೋದರ ಎನ್ನುವಾಗಲೇ ಪ್ರಾಣ ಹೋಯ್ತು. ವಾಕ್ಯಾರ್ಧದಲ್ಲಿ ಪ್ರಾಣ ಹೋಯ್ತು. ಇದರರ್ಥ ಏನು ಅಂದ್ರೆ ಕೊನೆ ಕ್ಷಣದವರೆಗೆ ಅವನು ಮಾತಾಡ್ತಾ ಇದ್ದ. ಸಾಧ್ಯವಾದಷ್ಟು ವಿವರಗಳನ್ನು ರಾಮನಿಗೆ ಕೊಡಬೇಕು ಎನ್ನುವ ಜಟಾಯುವಿನ ಆ ಸಂಕಲ್ಪ ನೋಡಿ. ವಿಶ್ರವಸರು ಬ್ರಹ್ಮನ ಮಗ ಪುಲಸ್ತ್ಯರ ಮಗ. ರಾವಣನ ತಂದೆ. ವೈಶ್ರವಣ ವಿಶ್ರವಸರ ದೊಡ್ಡ ಮಗ. ಈ ಪಾಪಿಯ ದೊಡ್ಡಣ್ಣ. ಅವರಿಬ್ಬರೂ ಒಳ್ಳೆಯವರು. ಇವನು ಮಾತ್ರ ದುಷ್ಟ. ಹಾಗಾಗಿ ಕೊನೆಗೆ ಅವರಿಬ್ಬರ ಸ್ಮರಣೆ ಬರ್ತದೆ ಜಟಾಯುವಿಗೆ. ತಂದೆಯ ಕಡೆಯಿಂದ ಪೂರ್ತಿ ಶಕ್ತಿ ಪಡೆದುಕೊಂಡ, ದುರ್ಬುದ್ಧಿ ಪೂರ ತಾಯಿಯ ಕಡೆಯಿಂದ ಬಂತು. ಪತಗೇಶ್ವರನ್ನು ಈ ಮಾತುಗಳನ್ನು ಹೇಳಿ ಪ್ರಾಣ ತ್ಯಾಗ ಮಾಡಿದನು. ಜಟಾಯುವಿನಂಥ ಬದುಕು ದುರ್ಲಭ. ರಾಮನು ಇನ್ನೂ ಹೇಳು ಹೇಳು ಎಂದು ಹೇಳುತ್ತಿರುವಂತೆಯೇ ಜಟಾಯುವಿನ ಪ್ರಾಣ ಹೋಯಿತು. ರಾಮನು ಎತ್ತಿಕೊಂಡಿರುವಂತಹ ಅವನ ತಲೆಯನ್ನು ಭೂಮಿಯಲ್ಲಿಟ್ಟು, ಧರೆಗೊರಗಿದನು ಜಟಾಯು.

ಪ್ರಾಣೋತ್ಕ್ರಮಣದ ಕ್ಷಣವೂ ಪರಮಾತ್ಮನ ಸೇವೆಗೊದಗಿದರೆ ಅದೇ ಮೋಕ್ಷ

ಜಟಾಯುವಿನ ಪತನವನ್ನು ಕಂಡು ನೂರಾರು ದುಃಖಗಳು ಒಮ್ಮೆಲೇ ಆವರಿಸಿದವು ರಾಮನನ್ನು. ಸೌಮಿತ್ರಿಗೆ ರಾಮನು ಹೀಗೆ ಹೇಳ್ತಾನೆ ‘ಎಷ್ಟು ಸಾವಿರ ವರ್ಷಗಳಿಂದ ಇದ್ದನೋ ಪಂಚವಟಿಯಲ್ಲಿ, ಸಾವಿರಾರು ರಾಕ್ಷಸರು ವಾಸ ಮಾಡಿದ ಸ್ಥಳ, ಎಷ್ಟು ಯುದ್ಧಗಳು ಸಂಭವಿಸಿರಬಹುದೋ ಅವರೊಟ್ಟಿಗೆ ರಾವಣನಿಗಿಂತ ಮೊದಲು. ಆದರೆ ಅವನಿಗೇನೂ ಆಗಲಿಲ್ಲ, ಏಕೆಂದರೆ ಅವರೆಲ್ಲರ ಯೋಗ್ಯತೆಯನ್ನು ಮೀರಿದವನು ಜಟಾಯು. ಈಗ ಪ್ರಾಣತ್ಯಾಗ ಮಾಡಿದ. ಏಕೆಂದರೆ ಅಂತಹ ರಾಕ್ಷಸಲೋಕದ ಚಕ್ರವರ್ತಿಯನ್ನು ಎದುರಿಸಿದ್ದಾನೆ. ಅವನಲ್ಲಿ ಮೋಸದ್ದು, ನೇರವಾಗಿದ್ದು ಎರಡೂ ರೀತಿಯ ಬಹಳ ಉಪಾಯಗಳಿವೆ. ಜಟಾಯುವಿನ ಅಂತ್ಯ ಈಗ ಆಯಿತು. ಯಾವ ಕಾಲವೆಂದು ಊಹೆ ಮಾಡಲೂ ಸಾಧ್ಯವಿಲ್ಲದಷ್ಟು ಹಳೆಯವನು ಜಟಾಯು. ಸತ್ತು ಮಲಗಿದ್ದಾನೆ. ಕಾಲಕ್ಕಿಂತ ದೊಡ್ಡದು ಯಾವುದೂ ಇಲ್ಲ. ಇಷ್ಟು ಕಾಲ ಬಾಳಿ ಬದುಕಿದವನಿಗೆ ಮರಣ ಹೇಗಾದರೂ ಬರಬಹುದಿತ್ತೇನೋ ಆದರೆ ಶಸ್ತ್ರಗಳಿಂದ ಮರಣ. ವೀರರಿಗೆ ಶಸ್ತ್ರಗಳಿಂದ ಮರಣ ಬಂದರೆ ಅದು ಶ್ರೇಷ್ಟ.

ಗೃಧ್ರರಾಜನೇ ನನ್ನಿಂದ ಸಂಸ್ಕರಿಸಲ್ಪಟ್ಟ ನೀನು ಪರಮಪದವನ್ನೇರು ಎಂದು ಪರಮಾನುಗ್ರಹ ಮಾಡಿದ ರಾಮನು ಸ್ವಯಂ ತಾನೇ ಜಟಾಯುವಿನ ದೇಹವನ್ನು ಚಿತೆಗೇರಿಸ್ತಾನೆ. ಸ್ವಂತ ಬಂಧುವನ್ನು, ಆತ್ಮಬಂಧುವನ್ನು ಹೇಗೋ ಹಾಗೇ ದಹನ ಮಾಡ್ತಾನೆ. ರಮಣೀಯವಾದ ದರ್ಭೆಯ ಹಾಸಿನಲ್ಲಿ ಪಿಂಡವನ್ನು ಕೊಡ್ತಾನೆ ರಾಮ. ಪಕ್ಷಿಗೆ ಇಂತಹ ಸಂಸ್ಕಾರವೇ ಎಂದರೆ ಜಟಾಯುವಿನ ಯೋಗ್ಯತೆ ಅದು. ರಾಮ ತಾನೇ ಪಿಂಡವನ್ನು ಇಡ್ತಾನೆ ಮಾತ್ರವಲ್ಲ, ಗತಿಸಿದವರಿಗೆ ಉತ್ತಮ ಗತಿಗಾಗಿ ಯಾವ ಯಾವ ಮಂತ್ರ ಹೇಳುವ ಪದ್ಧತಿ ಇದೆಯೋ ಆ ಎಲ್ಲಾ ಮಂತ್ರಗಳನ್ನ ತಾನೇ ಪಠಿಸ್ತಾನೆ. ಬಳಿಕ ಇಬ್ಬರೂ ಗೋದಾವರಿಗೆ ಹೋಗಿ ಸ್ನಾನ ಮಾಡಿ, ಜಟಾಯುವಿಗೆ ತರ್ಪಣ ಕೊಡ್ತಾರೆ. ಜಟಾಯು ಕಳೆದುಕೊಂಡಿದ್ದು ಹದ್ದಿನ ದೇಹವನ್ನು ಪಡೆದುಕೊಂಡಿದ್ದು ವೈಕುಂಠವನ್ನು, ಮೋಕ್ಷವನ್ನು ಮತ್ತು ರಾಮನ ಹೃದಯದಲ್ಲಿ ಶಾಶ್ವತ ಸ್ಥಾನವನ್ನು.

ನೆನಪಾದರೆ ಜಟಾಯುವಿನ ಹಾಗೆ ನೆನಪಾಗಬೇಕು. ರಾಮನ ಕಾಲದಲ್ಲಿ ನಾವಿದ್ದಾಗ ಹೇಗಿರಬೇಕೋ ಹಾಗಿದ್ದರೆ ಜಟಾಯುವಿನ ಹಾಗೆ ಆಗ್ತದೆ. ಅವನ ಚರಿತ್ರೆಯ ಶಾಶ್ವತ ಭಾಗವಾಗಿ ನಾವು ಪರಿಣಮಿಸ್ತೇವೆ. ಹಾಗಾಗಿ ಜಟಾಯುವಿನಂಥ ಜನ್ಮ ಬೇಕು. ಅದಿಲ್ಲದಿದ್ದರೆ ಅಗ್ನಿಹೋತ್ರಿಗಳಿಗೆ ಒದಗುವ ಗತಿ ನಿನಗೆ ಒದಗಲಿ ಎಂಬುದಾಗಿ ಹೇಳಿ, ಅಗ್ನಿಹೋತ್ರಿಗಳಿಗೆ ಮಾಡುವ ಸಂಸ್ಕಾರಗಳನ್ನ ಮಾಡ್ತಾನಲ ರಾಮ. ಹೇಗೆ? ಅದಕ್ಕೆ ತ್ಯಾಗ ಬೇಕು. ದೇವರನ್ನು, ದೇವತೆಗಳನ್ನು ಉದ್ದೇಶಿಸಿ ನಾವು ಮಾಡುವ ದ್ರವ್ಯ ತ್ಯಾಗವೇ ತ್ಯಾಗವಂತೆ. ಇದು ಇನ್ನೂ ಉತ್ಕೃಷ್ಟವಾಗಿರುವಂಥದ್ದು. ರಾಮನಿಗಾಗಿ, ಸೀತೆಗಾಗಿ, ತನ್ನ ಬದುಕನ್ನೇ ತ್ಯಾಗ ಮಾಡುವಂಥದ್ದು. ಜಟಾಯು ಎಲ್ಲಾ ಸತ್ಪುರುಷರಿಗೆ ಶಾಶ್ವತ ಪರಮಾದರ್ಶ. ಬದುಕಿದರೆ ಜಟಾಯುವಿನಂತೆ ಬದುಕಬೇಕು. ಗತಿಸಿ ಹೋದರೆ ಜಟಾಯುವಿನಂತೆ ಗತಿಸಿಹೋಗಬೇಕು. ಆ ಸಾವು ಸಾವಲ್ಲ. ಮುಕ್ತಿ ಅದು. ಮೋಕ್ಷ ಅದು. ಅವರಿಗೆ ಪುನರ್ಜನ್ಮವೇ ಇಲ್ಲ.

“ರಾಮನನ್ನು ಹೃದಯದಲ್ಲಿ ಧಾರಣೆ ಮಾಡಲಿಕ್ಕೆ ಸಾಧ್ಯವಾಗದೇ ಇದ್ದರೆ, ಜಟಾಯುವನ್ನು ಹೃದಯದಲ್ಲಿ ಧಾರಣೆ ಮಾಡಿ. ಜಟಾಯುವಿನ ಸ್ಮರಣೆ ಮಾಡಿ. ಜಟಾಯುವಿಗಾಗಿ ಒಂದು ತೊಟ್ಟು ಕಣ್ಣೀರಿಡಿ. ರಾಮನು ಸುಪ್ರೀತನಾಗ್ತಾನೆ. ರಾಮನ ಪೂರ್ಣಾನುಗ್ರಹ ಪ್ರಾಪ್ತವಾಗ್ತದೆ.”

ಶಾಸ್ತ್ರೀಯವಾದ ವಿಧಿಯಿಂದ ಜಟಾಯುವಿಗೆ ತರ್ಪಣವನ್ನು ಕೊಟ್ಟಿದಾರೆ ರಾಮ-ಲಕ್ಷ್ಮಣರು. ಸಾಮಾನ್ಯ ಜೀವಗಳು ಊಹೆ ಮಾಡಲಿಕ್ಕೂ ಸಾಧ್ಯವಾಗದಂತಹ ಅದ್ಭುತ ಕರ್ಮವನ್ನು ಮಾಡಿ, ರಾವಣನ ಮೋಸದ ಮಾಯೆಯಿಂದ ಯುದ್ಧದಲ್ಲಿ ಹತನಾದ ಜಟಾಯು. ರಾಮ ಲಕ್ಷ್ಮಣರಿಂದ ಸಂಸ್ಕಾರಕ್ಕೊಳಪಟ್ಟ ಜಟಾಯು ಪರಮಶುಭವಾದ ಪರಮಾತ್ಮಗತಿಯನ್ನು ಹೊಂದಿದನು. ಜಟಾಯು ಎಲ್ಲಾ ಹೋಗಿ ತಲುಪಿದನೋ ಅಲ್ಲಿಂದ ಮತ್ತೆಲ್ಲಿಯೂ ಪ್ರಯಾಣ ಇಲ್ಲವಂತೆ. ಆ ಪರಮಾದ್ವೈತವನ್ನು ಜಟಾಯು ಹೊಂದಿದನು ಎಂಬಲ್ಲಿಗೆ ಇಂದಿನ ಪ್ರವಚನ ಮುಕ್ತಾಯ.
ಮುಂದಿನ ಕಥೆಯನ್ನು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ….

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments