ದಶರಥನ ಪುತ್ರ ಕಾಮೇಷ್ಠಿಯಲ್ಲಿ ಹವಿರ್ಭಾವಕ್ಕಾಗಿ ನೆರೆದರು ದೇವತೆಗಳು

ದೇವತೆಗಳೆಂದರೆ ದೇವರ ತುಣುಕುಗಳು, ದೇವರಷ್ಟೇ ವ್ಯಾಪ್ತಿ ಇರುವ ದೇವರ ತುಣುಕುಗಳು, ದೇವರೇ ತುಣುಕು ತುಣುಕುಗಳಾಗಿ ತನನ್ನು ದೇವತೆಗಳಾಗಿ ವಿಂಗಡಿಸಿಕೊಂಡು ಲೋಕವನ್ನು ಪಾಲನೆ ಮಾಡ್ತಿದ್ದಾನೆ.
ದೇವತೆಗಳು ಎಂದರೆ ಬೆಳಕು, ದೇವತೆಗಳು ಹೋದಲ್ಲಿ ಕತ್ತಲ‌ ನಿವಾರಣೆ;
ದೇವತೆಗಳೆಂದರೆ ಒಳಿತುಗಳು, ಕೆಡುಕುಗಳ ಕಾಟದಿಂದ ಜೀವಗಳ ರಕ್ಷಣೆ ಅವರದೇ;
ದೇವತೆಗಳೆಂದರೆ ಚೈತನ್ಯ…

ಚೈತನ್ಯ ಇರುವಲ್ಲಿ ದೇವತೆಗಳು ಇರುತ್ತಾರೆ, ಎಲ್ಲ ಅಂಗ – ಇಂದ್ರಿಯಗಳ ಹಿಂದೆ ದೇವತೆಗಳಿವೆ. ದೇವತೆಗಳು ಇರುವವರೆಗೆ ಚೈತನ್ಯ ಇರುತ್ತವೆ.

ದೇವತೆಗಳು ಎಂದರೆ ಶಕ್ತರೂಪ, ದೇವತೆಗಳು ಇರುವವರೆಗೆ ನಾವು ಶಕ್ತರು, ಇಲ್ಲ ಅಂದ್ರೆ ನಾವು ಅಶಕ್ತರು

ದೇವತೆಗಳು ಅಂದ್ರೆ ವ್ಯವಸ್ಥೆ, ಸೃಷ್ಟಿ ಯಂತ್ರ – ದೇಹ ಯಂತ್ರಗಳನ್ನು ನಡೆಸುವವರು ದೇವತೆಗಳು

ಗುರು ಎಂದರೆ ದೇವತೆಗಳ ಗುಚ್ಛ, ರಾಮ ಎಂದರೆ ಸಕಲ ದೇವತೆಗಳ ಗುಚ್ಛ

ಸೃಷ್ಟಿಯ ಕಣಕಣವೂ ದೇವತೆಗಳ ರೂಪ, ದೇವತೆಗಳಿಲ್ಲದಿರೆ ಸೃಷ್ಟಿ ಅಲ್ಲ – ಸೃಷ್ಟಿ ಇಲ್ಲ!

ಸೃಷ್ಟಿಗೆ ಕೇಡಾಗುವಾಗ, ವ್ಯವಸ್ಥೆಗಳು ಅವ್ಯವಸ್ಥೆ ಆಗುವಾಗ ದೇವತೆಗಳಿಗೆ ಚಿಂತೆ ಆಗುತ್ತದೆ. ದೇವತೆಗಳು ಸೃಷ್ಟಿಗೆ ಹಿತ; ದಾನವರು ಸೃಷ್ಟಿಗೆ ಅಹಿತ! ಹಾಗಾಗಿ ದೇವತೆಗಳು-ದಾನವರ ಮಧ್ಯೆ ನಿರಂತರ ಕಾದಾಟ!

ಸೃಷ್ಟಿ ಆಪತ್ತಿನಲ್ಲಿರುವ ಕಾರಣಕ್ಕೆ ದೇವತೆಗಳಿಗೀಗ ಹವಿಸ್ಸುಗಳನ್ನು ಸ್ವೀಕರಿಸಲಾಗುತ್ತಿಲ್ಲ.

ನಿನ್ನ ಅನುಗ್ರಹದಿಂದ ಸೃಷ್ಟಿಗೆಲ್ಲ ತೊಂದರೆ ಆಗಿದೆ ಎಂದು ನ್ಯಾಯಯುತವಾದ ಮಾತುಗಳನ್ನು ದೇವತೆಗಳು ಬ್ರಹ್ಮದೇವನಿಗೆ ಹೇಳಿದರು.

ನೀನು ರಾವಣನಿಗೆ ಮಾಡಿದ ಅನುಗ್ರಹದಿಂದ ಅವನು ಶಕ್ತಿವಂತನಾಗಿ ಸೃಷ್ಟಿಗೆಲ್ಲ ತೊಂದರೆಯಾಗಿದೆ; ನಮ್ಮೆಲ್ಲರನ್ನೂ ಆತ ಪೀಡಿಸುತ್ತಿದ್ದಾನೆ.

ರಾವಣ ಯಮಲೋಕವನ್ನು ಆಕ್ರಮಿಸಿದಾಗ, ಯಮರಾಜ ಕಾಲದಂಡವನ್ನು ಎತ್ತಿದ…ಆಗ ಅಶರೀರವಾಣಿಯಾಯಿತು, “ಇಳಿಸು ಕಾಲದಂಡವನ್ನು, ಬ್ರಹ್ಮನ ವರವನ್ನು ಹುಸಿಗೊಳಿಸಬೇಡ, ರಾವಣಾವಸಾನಕ್ಕಿನ್ನೂ ಕಾಲ ಬಂದಿಲ್ಲ” ಹಾಗಾಗಿ ಕಾಲದಂಡವನ್ನು ಕೆಳಗಿಳಿಸಿದ! ಇದು – ಹಿಂದೆ ರಾವಣನು ತಪಸ್ಸು ಮಾಡಿ ಬ್ರಹ್ಮದೇವರನ್ನು ಒಲಿಸಿ ಗಳಿಸಿದ ವರದ ಫಲ!

ದೇವತೆಗಳಿಂದ ನಿನಗೆ ಸಾವಾಗದಿರಲಿ ಎಂದು ನೀನು ವರ ಕೊಟ್ಟಿದ್ದೆ ರಾವಣನಿಗೆ, ಹಾಗಾಗಿ ನಾವು ಸುಮ್ಮನಿದ್ದೆವು, ಆದರೆ ದಿನಕಳೆದಂತೆ ರಾವಣನ ಬಾಧೆ ವಿಶ್ವವ್ಯಾಪಿ ಆಗುತ್ತಿದೆ, ತಡೆಯಲಾಗುತ್ತಿಲ್ಲ. ಮೂರೂ ಲೋಕವನ್ನು ಪೀಡಿಸುತ್ತಿದ್ದಾನೆ. ಒಳಿತನ್ನು ಸಾಧನೆ ಮಾಡಿದವರನ್ನು, ಸುಖವಾಗಿರುವವರನ್ನು ಕಂಡರೆ ಅವನಿಗೆ ಅಕಾರಣ ದ್ವೇಷ! ಅಂತಹ ಮಾತ್ಸರ್ಯವೇ ರಾವಣ!

*ಒಳಿತಿನ ದ್ವೇಷವೇ ರಾಕ್ಷಸತ್ವ – ಶ್ರೀಸೂಕ್ತಿ*

ನಿನ್ನ ವರದಾನದ ಅಮಲಿನಲ್ಲಿ ಇದ್ದಾನೆ, ಅವನಿರುವಲ್ಲಿ ಸೂರ್ಯ ತನ್ನ ಕಿರಣಗಳನ್ನು ಬೇಕಾದಷ್ಟು ಹರಿಸುವಂತಿಲ್ಲ, ಗಾಳಿ ತನಗೆ ಬೇಕಾದ ಹಾಗೆ ಬೀಸುವಂತಿಲ್ಲ. ಆ ರಾಕ್ಷಸನಿಂದಾಗಿ ಎಲ್ಲರೂ ಮಹತ್ತಾದ ಭಯದಿಂದ‌ ಭೀತರಾಗಿದ್ದೇವೆ. ಅವನ ಮದಕ್ಕೆ ಪರಿಹಾರವನ್ನು ಮಾಡಬೇಕು. ನೀನು ಸೃಷ್ಟಿಕರ್ತ,ಈ ರಾವಣನನ್ನು ವಧೆ ಮಾಡಿ ನಮಗೆಲ್ಲ ಅನುಗ್ರಹಿಸು.

ಬ್ರಹ್ಮ ಚಿಂತಿತನಾದ, ವರ ಕೊಟ್ಟಿದ್ದು ಇಷ್ಟು ಕಷ್ಟ ಆಗ್ತಿದೆಯಲ್ಲಾ… ಆದರೆ ಆತ ಮಾಡಿದ ತಪಸ್ಸಿಗೆ ಸೃಷ್ಟಿ ನಿಯಮದಂತೆ ವರ ಕೊಟ್ಟಿದ್ದೆ ಎಂದು ಹೇಳಿದ ಬ್ರಹ್ಮ.. ವಧೋಪಾಯ ನಾನು ಕೊಟ್ಟ ವರದಲ್ಲೇ ಇದೆ ಎಂದು ಹೇಳಿದ- “ರಾವಣ ಕೇಳಿದ್ದು ವರವನ್ನಲ್ಲ, ವಧೆಯನ್ನು! ಮನುಷ್ಯರು ಮತ್ತು ಮರ್ಕಟವನ್ನು ಬಿಟ್ಟು ಬೇರಾರಿಂದಲೂ ತನಗೆ ಸಾವು ಬರಬಾರದು ಎಂದು ಕೇಳಿದ್ದ ರಾವಣ. ಅದರ ತಾತ್ಪರ್ಯ ಏನು ಅಂದರೆ, ಅವನು ಕೇಳಿದ್ದು ಸಾವನ್ನೆ.. ಹೇಗೆ ಅಂದರೆ ಮನುಷ್ಯರು ಮತ್ತು ಮಂಗಗಳಿಂದಲೇ ತನಗೆ ಸಾವು ಬರಬೇಕು ಎಂದು… ಮನುಷ್ಯರ-ಮರ್ಕಟಗಳ ಬಗೆಗಿನ ರಾವಣನ ತಿರಸ್ಕಾರವೇ ಅವನ ಅವಸಾನಕ್ಕೆ ಕಾರಣವಾಗುತ್ತದೆ”

ಇದನ್ನು ಕೇಳಿ ದೇವತೆಗಳಿಗೆ ಸಮಾಧಾನವಾಯಿತು. ಅದೇ ಸಮಯದಲ್ಲಿ ಅಲ್ಲಿ ಒಂದು ಶಕ್ತಿ ಪ್ರವೇಶ ಮಾಡಿತು. ಅದು – ಪಾಲಕ ಶಕ್ತಿಯಾದ ಶ್ರೀ ಮಹಾವಿಷ್ಣು, ಅವನು ಸ್ಥಿತಿಕರ್ತ. ಭಗವಾನ್ ಮಹಾವಿಷ್ಣುವಿನ ಪ್ರವೇಶ ಆಗ್ತದೆ. ಬಂದವನೇ ಬ್ರಹ್ಮನೊಡನೆ ಸೇರಿ ನೆಲೆಗೊಂಡನು. ಕರೆಯದೇ ಬಂದ ದೇವ ವಿಷ್ಣುದೇವ‌. ಎಲ್ಲರೂ ವಿಷ್ಣುವಿಗೆ ನಮಸ್ಕರಿಸಿ ಸ್ತುತಿಸಿದರು. “ಭಗವಂತಾ, ಈ ರಾವಣನ ವಧೆ ನಿನ್ನಿಂದಲೇ ಆಗುವಂಥದ್ದು, ನಾವೆಲ್ಲರೂ ಸೇರಿ ನಿನ್ನನ್ನು ನಿಯೋಜಿಸುವೆವು, ಲೋಕರಕ್ಷಣೆಗಾಗಿ ನೀನು ದಶರಥನ ಮೂವರು ಪತ್ನಿಯರಲ್ಲಿ ನಾಲ್ಕು ಭಾಗವಾಗಿ ನಾಲ್ಕು ರೂಪದಲ್ಲಿ ಜನಿಸಿ ಬರಬೇಕು. ಮನುಷ್ಯನಾಗಿ ಜನಿಸು, ಲೋಕಕಂಟಕನಾದ ರಾವಣನನ್ನು ಯುದ್ಧದಲ್ಲಿ ಸೋಲಿಸು. ನಿನ್ನ ಮುಂದೆ ಶರಣಾಗಿರುವ ಈ ಸಮೂಹದಲ್ಲಿ ಮುನಿ,ದೇವತೆ,ಗಂಧರ್ವ,ಅಪ್ಸರೆ,ಯಕ್ಷರಿದ್ದಾರೆ; ಸೃಷ್ಟಿಯ ಒಳ್ಳೆಯವರೆಲ್ಲರೂ ನಿನ್ನಲ್ಲಿ ಕೇಳುತ್ತಿದ್ದೇವೆ, ನೀನಿಲ್ಲದೇ ಗತಿಯಿಲ್ಲ…” ಎಂದು ಕೇಳಿಕೊಂಡರು.

ದೇವತೆಗಳು ಮೊರೆಯಿಟ್ಟಾಗ ಮಹಾವಿಷ್ಣುವು ನುಡಿದ, “ಭಯವನ್ನು ಬಿಡಿ, ನಿಮಗೆ ಮಂಗಲವಾಗಲಿ, ದೇವದೇವತೆಗಳಿಗೆ, ಋಷಿಗಳಿಗೆ ಕಂಟಕನಾದ ಕ್ರೂರಿ ರಾವಣನನ್ನು ಮಾತ್ರ ಅಲ್ಲ ಅವನ ಮಕ್ಕಳು, ಮೊಮ್ಮಕ್ಕಳು, ಸಚಿವರು, ಮಿತ್ರರು, ಬಾಂಧವರನ್ನೆಲ್ಲರನ್ನು ಸೇರಿ ವಧಿಸುವೆ ಯುದ್ಧದಲ್ಲಿ. ಹತ್ತುಸಾವಿರ ವರ್ಷಗಳ ಕಾಲ ಮತ್ತು ಹತ್ತುನೂರು ವರ್ಷಗಳ ಕಾಲ ಒಟ್ಟೂ ಹನ್ನೊಂದುಸಾವಿರ ವರ್ಷಗಳ ಕಾಲ ಮನುಷ್ಯನಾಗಿ ಇಹದಲ್ಲಿ ನೆಲೆಸುತ್ತೇನೆ; ಬ್ರಹ್ಮಾಂಡಪಾಲಕನಾದ ನಾನು ಕೆಲಕಾಲ ಪೃಥ್ವೀಪಾಲಕನಾಗುತ್ತೇನೆ”

ಬ್ರಹ್ಮ ರಾವಣನಿಗೆ ವರ ಕೊಟ್ಟರೆ, ವಿಷ್ಣುದೇವ ದೇವತೆಗಳಿಗೆ ವರ ಕೊಟ್ಟ‌ನು.

ಮನುಷ್ಯಲೋಕದಲ್ಲಿ ಮನಸ್ಸನ್ನಿಟ್ಟ; ಎಲ್ಲಿ ಅವತಾರವೆತ್ತಲಿ ಎಂದು ನೋಡಿದ; ದಶರಥನನ್ನು ಇಷ್ಟಪಟ್ಟ, ದಶರಥನನ್ನು ಆರಿಸಿದ, ದಶರಥನನ್ನು ತಂದೆಯಾಗಿ ಸ್ವೀಕರಿಸಿದ.

ತಪಸ್ವಿಗಳಿಗೆ ಕಂಟಕನಾದ, ಲೋಕವನ್ನು ಆಕ್ರಮಿಸಿದಂತಿರುವ ರಾವಣನನ್ನು ಉದ್ಧರಿಸು, ಅದರ ಬಳಿಕ ದಿವಿಯನ್ನೇರು ಎಂದು ದೇವತೆಗಳು ವಿಷ್ಣುವಿನಲ್ಲಿ ಪ್ರಾರ್ಥಿಸಿದರು;

ವಿಷ್ಣು ಗೊತ್ತಿದ್ದರೂ ಗೊತ್ತಿಲ್ಲದವರಂತೆ, ದೇವತೆಗಳನ್ನು ಕೇಳಿದನಂತೆ, ಹೇಗೆ ರಾವಣನನ್ನು ವಧಿಸಬೇಕು ಹೇಳಿ ಎಂದು… ದೇವತೆಗಳು ತಮಗೆ ಗೊತ್ತಿರುವುದನ್ನು ಹೇಳಿದರು, “ಮನುಷ್ಯ ಶರೀರವನ್ನು ನೀನು ಸೇರಿ ರಾವಣನನ್ನು ಸಂಹಾರ ಮಾಡಬೇಕು.” ಅಂತರಂಗದಲ್ಲೇ ಮೊದಲೇ ನಿಶ್ಚಯಿಸಿದ್ದ “ದಶರಥ ಕೌಸಲ್ಯೆಯರ ಮಗನಾಗಿ ಹುಟ್ಟುತ್ತೇನೆ” ಎಂದು ಘೋಷಿಸಿದ. ಇಷ್ಟು ನಡೆಯುವಾಗ ಅಲ್ಲಿ ಪುತ್ರಕಾಮೇಷ್ಠಿ ನಡೆಯುತ್ತಿದೆ. ಬ್ರಹ್ಮನ ಕಡೆಗೆ ಸಂಜ್ಞೆ ಮಾಡಿ ಅಂತರ್ಧಾನನಾದ‌. ಹೋಗಿ ಸೇರಿದ್ದು ದೇವತೆಗಳು ನಿರ್ಮಿಸಿದ ಪಾಯಸದಲ್ಲಿ‌ – ಅಲ್ಲಿ ವಿಲೀನನಾದ. ಯಜ್ಞ ನೇರವೇರುತ್ತಿದೆ‌, ಋಷ್ಯಶೃಂಗರು ಆಹುತಿ ನೀಡುತ್ತಿದ್ದಾರೆ. ಆಹುತಿ ಬಿದ್ದ ಜಾಗದಿಂದ ಒಂದು ಮಹಾಶಕ್ತಿ ಎದ್ದು ಬಂತು, ಅಗ್ನಿಗಿಂತ ಪ್ರಖರವಾಗಿತ್ತಂತೆ ಅದರ ಶಕ್ತಿ,ತೇಜಸ್ಸು,ಬಲ.

ಕಪ್ಪು ಬಣ್ಣ, ಕೆಂಪು ಬಟ್ಟೆ, ಕೆಂಪು ತುಟಿ, ಸಿಂಹದ ಕೇಸರಗಳನ್ನು ಹೋಲುವಂತಹ ಗಡ್ಡ,ಮೀಸೆ, ಉದ್ದವಾದ ಕೂದಲುಗಳು. ಬೆಟ್ಟದ ಶಿಖರದಷ್ಟು ಎತ್ತರ.ಸೂರ್ಯ-ಅಗ್ನಿಯಂತೆ ಶೋಭಾಯಮಾನವಾಗಿದೆ‌. ಬೆಳ್ಳಿಯ ಮುಚ್ಚಲದ ಬಂಗಾರದ ಪಾತ್ರೆಯನ್ನು ಆಲಂಗಿಸಿಕೊಂಡಿತ್ತು. ಅದರೊಳಗೆ ಚಿನ್ನಬೆಳ್ಳಿಗಿಂತ ಬೆಲೆ ಬಾಳುವ ದಿವಿಯ ಪಾಯಸ ಇತ್ತು. ಆ ಪಾತ್ರವು ಮಾಯಾಮಯವಾಗಿತ್ತು.. ಆ ದಿವ್ಯ ಪುರುಷ ದಶರಥನನ್ನು ಸಂಬೋಧಿಸಿ ಮಾತನಾಡಿದ, “ನಾನು ಪ್ರಜಾಪತಿ, ನಿನ್ನಲ್ಲಿ ಕಾರ್ಯವಿದ್ದು ಬಂದವನು..”
ಆಗ ದಶರಥ, “ಭಗವನ್ ನಿನಗೆ ಸುಸ್ವಾಗತ, ತಮಗೆ ನನ್ನಿಂದ ಏನಾಗಬೇಕು” ಎಂದು ಕೇಳಿದ.

*ನನಗೇನಾಗಬೇಕು ಅನ್ನುವುದಕ್ಕಿಂತ ನನ್ನಿಂದ ಏನಾಗಬೇಕು ಎಂಬ ಮನೋಭಾವ ಇರಬೇಕು – ಶ್ರೀಸೂಕ್ತಿ*

ದೇವ ನಿರ್ಮಿತ ಪಾಯಸ ಇದು, ಇದಕ್ಕೆ ನಿನಗೆ ಸಂತಾನ ಕೊಡುವ ಶಕ್ತಿ ಇದೆ, ನಿನ್ನನ್ನು ಸಂಪನ್ನನಾಗಿ ಮಾಡುತ್ತದೆ, ಆರೋಗ್ಯವನ್ನು ಕೊಡುತ್ತದೆ. ನಿನ್ನ ಪತ್ನಿಯರಿಗೆ ಇದನ್ನು ಕೊಡು, ನೀನು ಯಾವುದಕ್ಕಾಗಿ ಯಜ್ಞ ಮಾಡಿದೆಯೋ ಅದು ಫಲಿಸುತ್ತದೆ‌. ದಶರಥನು ಪರಮಾನಂದದಿಂದ ಯಜ್ಞಕುಂಡಕ್ಕೂ, ದೇವತಾಪುರುಷನಿಗೂ ಪ್ರದಕ್ಷಿಣೆ ಹಾಕಿದ..

ಆ ಬ್ರಹ್ಮದೂತ ತನ್ನ ಕಾರ್ಯವನ್ನು ಮಾಡಿ ಮಾಯವಾದನು.

ಲಗುಬಗೆಯಲ್ಲಿ ಅಂತಃಪುರವನ್ನು ಪ್ರವೇಶಿಸಿ, ಮೊದಲಿಗೆ ಕೌಸಲ್ಯಾಭವನವನ್ನು ಪ್ರವೇಶಿಸಿ, ಸ್ವೀಕರಿಸು ಈ ಪಾಯಸವನ್ನು ಎಂದು ಹೇಳಿ ಅರ್ಧದಷ್ಟು ಪಾಯಸವನ್ನು ಕೊಟ್ಟನು. ದಶರಥನ ಹೃದಯದ ಪ್ರೀತಿ ಪ್ರಕಟವಾಗಿತ್ತು. ಆಮೇಲೆ ಸುಮಿತ್ರೆಯ ಬಳಿ ಹೋಗಿ ಇನ್ನುಳಿದ ಪಾಯಸದಲ್ಲಿ ಅರ್ಧಭಾಗವನ್ನು ಸುಮಿತ್ರೆಗೆ ಕೊಟ್ಟನು. ಕೊನೆಯಲ್ಲಿ ತೆಗೆದುಕೊಂಡು ಕೈಕೇಯಿಯ ಬಳಿ ಹೋಗಿ ಉಳಿದ ಪಾಯಸದಲ್ಲಿ ಅರ್ಧಭಾಗವನ್ನು (ಎಂಟನೇ ಒಂದಂಶ) ಕೊಟ್ಟ.
ಉಳಿದ ಎಂಟನೇ ಒಂದಂಶವನ್ನು ಪುನಃ ಸುಮಿತ್ರೆಗೆ ಕೊಟ್ಟನು.

ಎಲ್ಲ ರಾಣಿಯರು ತಮಗೆ ಕೊಟ್ಟ ಪಾಯಸವನ್ನು ಸಮ್ಮಾನ ಎಂಬಂತೆ ಸ್ವೀಕರಿಸಿದರು. ಉತ್ಕೃಷ್ಟವಾದ ಆನಂದವನ್ನು ಹೊಂದಿದವರಂತಾಗಿ, ಪಾಯಸವನ್ನು ಪ್ರಾಶನ ಮಾಡಿದರು. ಮರುಕ್ಷಣದಲ್ಲಿ ಅಗ್ನಿಪ್ರಭೆ ಅವರನ್ನು ಆವರಿಸಿತು‌, ಅದು ಅವರದ್ದಲ್ಲ, ಒಳಗೆ ಪ್ರವೇಶಿಸಿದ ಪರಂಜೋತಿಯದ್ದು… ಅವರೆಲ್ಲರೂ ಗರ್ಭವತಿಯರಾದರು. ಎಂದೋ ಕಳೆದುಹೋಗಿದ್ದ ದಶರಥನ ಮನಸ್ಸು ಮರಳಿ ಬಂದಿತ್ತು. ದಶರಥನ ಆನಂದವು ಆಗ ಶ್ರೀಮನ್ ಮಹಾವಿಷ್ಣುವಿನ ಮನಸ್ಥಿತಿಯನ್ನು ಹೋಲುತ್ತಿತ್ತು.

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments