ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಸೂರ್ಯನು ವಾಯುವಿನ ಮೇಲೇರಿ ಬಂದು ಕಂಡಿದ್ದು ಸೂರ್ಯನನ್ನೇ. ಸೂರ್ಯಕುಲೋದ್ಭವನಾದ, ಸೂರ್ಯಕುಲತಿಲಕನಾದ ರಾಮನು, ವಾಯುಸುತನನ್ನೇರಿ ಬಂದು ಕಂಡಿದ್ದು ಸೂರ್ಯನ ಮಗನಾದ ಸುಗ್ರೀವನನ್ನು. ಮಲಯಗಿರಿಯಲ್ಲಿ ನೆಲೆಸಿದ್ದ ಸುಗ್ರೀವ ಫಲಿತಾಂಶಕ್ಕಾಗಿ ಕಾತರದಿಂದ ಕಾಯ್ತಾಇದ್ದ. ಹನುಮಂತನನ್ನ ಕಳಿಸಿದ್ದಾನೆ. ಮುಂದೇನಾಯಿತು ಅಂತ ಗೊತ್ತಿಲ್ಲ ಅವನಿಗೆ. ಹಾಗಾಗಿ ಬಂದವರು ಯಾರು, ಯಾಕಾಗಿ ಬಂದಿದ್ದಾರೆ ಎಂದು ತಿಳಿದುಕೊಳ್ಳಲು ಕಾಯುತ್ತಿದ್ದ ಸುಗ್ರೀವನ ಬಳಿಗೆ ಬಂದ ಆಂಜನೇಯನು ರಾಮನ ಕುರಿತು ಎಲ್ಲಾ ವಿವರಣೆಯನ್ನು ನೀಡಿದ. ಇನ್ನು ಭೇಟಿಯಾಗಿಲ್ಲ. ಆಂಜನೇಯ ಹಿಂದೆ ರಾಮ ಲಕ್ಷ್ಮಣರನ್ನು ಬಿಟ್ಟು ಮುಂದೆ ಬಂದು ಸುಗ್ರೀವನನ್ನು ಕಂಡು ವಿವರಿಸಿದ್ದಾನೆ. ರಾಮನು ಎಷ್ಟು ದೊಡ್ಡವನು ಮತ್ತು ಅವನಿಗೆ ಎಷ್ಟು ದೊಡ್ಡ ಸಂಕಟ ಬಂದಿದೆ ಎರಡನ್ನೂ ವಿವರಿಸ್ತಾನೆ. ರಾಮನ ಕುಲ, ತಂದೆ ದಶರಥ, ರಾಮನ ಗುಣಗಳು, ಇವುಗಳನ್ನೆಲ್ಲ ವಿವರಿಸಿ, ಕೊನೆಗೆ ಕೈಕೇಯಿಯ ಮಾತಿನ ಕಾರಣದಿಂದಾಗಿ ಕಾಡಿಗೆ ಬಂದಿದ್ದು ಮತ್ತು ಕಾಡಿನಲ್ಲಿ ಸೀತಾಪಹರಣವಾಗಿದ್ದು ಎಲ್ಲವನ್ನೂ ಸುಗ್ರೀವನಿಗೆ ವಿವರಿಸಿ, ಮುಂದಿನ ದಾರಿ ನೀನು ಎಂಬ ಭಾವದಲ್ಲಿ ರಾಮ ಲಕ್ಷ್ಮಣರು ಬಂದಿದ್ದಾರೆ ಹೊರತು ನಿನಗೆ ಶತ್ರುಗಳಾಗಿ ಅಲ್ಲ. ನಿನ್ನನ್ನು ನಾಶಪಡಿಸುವ ಉದ್ದೇಶದಿಂದ ವಾಲಿ ಕಳುಹಿ ಬಂದವರಲ್ಲ. ಅವರಾಗಿ ಅವರೇ ಬಂದವರು. ನಿನ್ನನ್ನು ಹುಡುಕಿಕೊಂಡೇ ಬಂದಿದ್ದು. ಅದರಲ್ಲೇನು ಸಂಶಯವಿಲ್ಲ. ನೀನೇ ಲಕ್ಷ್ಯ, ನೀನೇ ಬೇಕು ಎಂದು ಬಂದಿದ್ದಾರೆ. ಅವರ ಕಾರ್ಯವೊಂದಿದೆ, ಆ ಕಾರ್ಯಸಾಧನೆಗೆ ನೀನು ಮಾರ್ಗ ಎಂಬುದನ್ನು ಅರ್ಥೈಸಿಕೊಂಡು ನಿನ್ನನ್ನು ಕಾಣಲು ಬಂದಿದ್ದಾರೆ. ಹಾಗಾಗಿ ನಿನ್ನೊಡನೆ ಸ್ನೇಹವನ್ನು ಬಯಸಿದ್ದಾರೆ ರಾಮ ಲಕ್ಷ್ಮಣರು. ಸ್ವೀಕರಿಸು. ಪೂಜಿಸು. ಗೌರವಿಸು. ಯಾಕೆಂದರೆ, ಜಗತ್ತಿನಲ್ಲಿ ಪೂಜಾಯೋಗ್ಯರಲ್ಲಿ ಸರ್ವೋತ್ಕೃಷ್ಟರು ಇವರು ಹಾಗಾಗಿ ಪೂಜಿಸು ಎಂದು ಸುಗ್ರೀವನಿಗೆ ಸರಿಯಾದ ಸಲಹೆಯನ್ನೇ ಕೊಟ್ಟಿದಾನೆ ಆಂಜನೇಯ.

ಒಬ್ಬ ವ್ಯಕ್ತಿಯ ಮಹತಿಯನ್ನು, ಶ್ರೇಷ್ಠತೆಯನ್ನು ಅರ್ಥಮಾಡಿಕೊಂಡಾಗ ತಾನಾಗಿ ಬರುವಂತಹ ಭಾವವೇ ಪೂಜೆ.

ಪರಿಣಾಮವೇನಾಯಿತು ಅಂದ್ರೆ ಸುಗ್ರೀವನ ಭಯ ಕಡಿಮೆಯಾಯಿತು. ಬಳಿಕ ರಾಮನ ಭೇಟಿಗೆ ತಯಾರಿ ಮಾಡಿದ.
ಸುಗ್ರೀವನು ಮಾನುಷ ರೂಪವನ್ನು ತಾಳಿ ಬಳಿಕ ಮನುಷ್ಯರ ಪೈಕಿ ಚಂದದಲ್ಲಿ ಚಂದದ ರೂಪ ತಾಳಿ ರಾಮನನ್ನು ಭೇಟಿಯಾಗ್ತಾನೆ. ಬಳಿಕ ತಾನೇ ಮುಂದಾಗಿ ಮಾತನಾಡ್ತಾನೆ. ನೀನು ಧರ್ಮವಿನೀತ, ಪರಮವಿಕ್ರಾಂತ, ಎಲ್ಲರಲ್ಲಿ ಕಾರುಣ್ಯವುಳ್ಳವನು ಎಂದು ನನಗೆ ವಾಯುಪುತ್ರನಿಂದ ಗೊತ್ತಾಗಿದೆ. ನಿನ್ನ ಗುಣಗಳೆಲ್ಲವೂ ಯಥಾವತ್ತಾಗಿ ನನಗೆ ಗೊತ್ತಾಗಿದೆ. ನನ್ನ ಎಷ್ಟೋ ವರ್ಷದ ತಪಸ್ಸಿಗೆ ವರ ಬಂದಂತಾಯಿತು. ಹೇ ಪ್ರಭುವೇ, ನನ್ನ ಬದುಕಿನ ಸರ್ವೋತ್ತಮ ಲಾಭ ನೀನು. ನನ್ನಂತಹ ವಾನರನೊಡನೆ ನೀನು ಸ್ನೇಹ ಬಯಸಿದೀಯ, ಸ್ನೇಹಕ್ಕೆ ಸಮಾನತೆ ಬೇಕು ಅಂತ ಹೇಳ್ತಾರೆ. ಹಾಗಾದರೆ ನನ್ನಂತಹ ವಾನರನನ್ನೂ ನೀನು ಸಮಾನ ಅಂತ ಸ್ವೀಕರಿಸಿದೆಯಾ? ಎಂದು ದೊಡ್ಡ ಭಾವದ ಮಾತನ್ನು ಸುಗ್ರೀವ ಆಡ್ತಾನೆ. ಮಾತ್ರವಲ್ಲ ತನ್ನೆರಡೂ ಕೈಗಳನ್ನು ಮುಂದಕ್ಕೆ ಚಾಚಿ, ಸುಗ್ರೀವ ಹೇಳ್ತಾನೆ. ನಿನಗಿಷ್ಟವಿದ್ದರೆ, ಇದೋ ನನ್ನ ಕೈ ಹಿಡಿದುಕೋ ಮತ್ತು ನಮ್ಮ ಸ್ನೇಹ ಶಾಶ್ವತವಾಗಲಿ ಎಂದು ಹೇಳಿ ಕೈ ನೀಡಿದಾಗ ರಾಮನು ಕೈ ಹಿಡಿದನು. ಅಂಥ ಭಾವದಲ್ಲಿ ಮಾಡಿದರೆ ಅದು ಚೆಂದ. ರಾಮನು ಸುಗ್ರೀವನ ಕೈಯನ್ನು ಪ್ರೀತಿಯಿಂದ ಗಟ್ಟಿಯಾಗಿ ಹಿಡಿದು, ಗಾಢವಾಗಿ ಆಲಿಂಗಿಸಿದ. ಈಗ ಹನುಮಂತ ಭಿಕ್ಷು ರೂಪವನ್ನು ತ್ಯಜಿಸಿ, ಎರಡು ಕಾಷ್ಟಗಳನ್ನು ಸ್ವೀಕಾರ ಮಾಡಿ, ಒಂದಕ್ಕೊಂದು ತೀಡಿ ಅಗ್ನಿಯನ್ನು ಸ್ಥಾಪನೆ ಮಾಡಿ, ಹೂವುಗಳಿಂದ ಪೂಜಿಸಿ, ರಾಮ ಸುಗ್ರೀವರ ಮಧ್ಯೆ ತಂದಿಟ್ಟ. ಆಗ ಹನುಮಂತನ ಮನಸ್ಸಿಗೆ ಪೂರ್ಣ ಸಮಾಧಾನ ಇತ್ತು. ಪ್ರಜ್ವಲಿಸುವ ಅಗ್ನಿಯನ್ನು ರಾಮ ಸುಗ್ರೀವರು ಪ್ರದಕ್ಷಿಣೆ ಮಾಡ್ತಾರೆ. ಮಾಡಿದ ಮೇಲೆ ಇಬ್ಬರೂ ತುಂಬಾ ಸಂತೋಷದಿಂದ ಒಬ್ಬರನ್ನೊಬ್ಬರು ನೋಡ್ತಾ ತುಂಬಾ ಸಮಯ ಹಾಗೇ ನಿಂತುಬಿಟ್ಟರಂತೆ. ಎಷ್ಟು ನೋಡಿದರೂ ಸಮಾಧಾನ ಇಲ್ಲ ಎನ್ನುವಷ್ಟು. ಬಳಿಕ ರಾಮನು ಸುಗ್ರೀವನಿಗೆ ಹೇಳಿದನಂತೆ, ನೀನು ನನ್ನ ಹೃದಯಮಿತ್ರ. ಇನ್ನು ಮುಂದೆ ನಮಗಿಬ್ಬರಿಗೂ ಸುಖದುಃಖಗಳು ಒಂದು. ನಮ್ಮಿಬ್ಬರ ಬದುಕು ಒಂದೇ.

ಸುಗ್ರೀವನಿಗೆ ರಾಮನೊಡನೆ ಕುಳಿತುಕೊಳ್ಳಬೇಕು ಎನಿಸಿತಂತೆ. ಅಲ್ಲಿಯೇ ಹೊರಗೆ ಇದ್ದ ಬೃಹದಾಕಾರದ ಸಾಲವೃಕ್ಷದ ಬಹಳ ಎಲೆಗಳುಳ್ಳ, ಪುಷ್ಪಿತವಾದ ಒಂದು ದೊಡ್ಡ ಟೊಂಗೆಯನ್ನು ಒಂದೇ ಕೈಯಲ್ಲಿ ಮುರಿದು ಹಾಕಿ ರಾಮನನ್ನು ಕರೆದುಕೊಂಡು ಕುಳಿತುಕೊಂಡ. ಆದರೆ ಲಕ್ಷ್ಮಣನಿಗೆ ವ್ಯವಸ್ಥೆಯಿಲ್ಲ. ಆಂಜನೇಯ ಆಕಡೆ ಈಕಡೆ ನೋಡಿ ಪಕ್ಕದಲ್ಲಿದ್ದ ಪರಮಪುಷ್ಪಿತವಾದ ಚಂದನದ ಮರದ ಒಂದು ಟೊಂಗೆಯನ್ನು ಮುರಿದು ಹಾಕಿ ಅದರ ಮೇಲೆ ಲಕ್ಷ್ಮಣನನ್ನು ಕೂರಿಸ್ತಾನೆ.

ರಾಮ ಸುಗ್ರೀವರ ಮಾತುಕತೆ ಆರಂಭವಾಯಿತು. ದುಃಖ ಹೇಳಿಕೊಳ್ತಾನೆ ಸುಗ್ರೀವ. ಆದರೆ ಖುಷಿಯಿಂದ ಹೇಳಿಕೊಂಡ ಯಾಕೆಂದರೆ ಅವನಿಗೆ ಆ ದುಃಖಕ್ಕೆ ಪರಿಹಾರ ಸಿಕ್ಕಿದೆ. ವಿಷಯ ಹೇಳಿದ. ರಾಮ ನನಗೆ ಅನ್ಯಾಯ ಆಗಿದೆ. ಭಯದಲ್ಲಿ ಬದುಕ್ತಾ ಇದ್ದೇನೆ. ನನ್ನ ಪತ್ನಿಯ ಅಪಹರಣವಾಗಿದೆ. ಭಯಪೀಡಿತನಾಗಿ ದುರ್ಗಮವಾದ ಈ ಬೆಟ್ಟವನ್ನೇರಿ ಗುಹೆಯಲ್ಲಿ ಬದುಕ್ತಾ ಇದ್ದೇನೆ. ಅನ್ಯಾಯ ಆಗಿದ್ದು ನನ್ನ ಅಣ್ಣ ವಾಲಿಯಿಂದಲೇ. ಒಂದು ಕಾಲದಲ್ಲಿ ಪರಮಪ್ರಿಯನಾದ ನನ್ನ ಅಣ್ಣನೊಡನೆ ದೊಡ್ಡ ವೈರ ಏರ್ಪಟ್ಟಿದೆ. ನನ್ನನ್ನು ಭಯಮುಕ್ತನನ್ನಾಗಿ ಮಾಡು. ಬೆದರಿ ಬೆದರಿ ಸಾಕಾಗಿ ಹೋಗಿದೆ. ಇನ್ನು ಮುಂದೆಯಾದರೂ ನಾನು ಭಯಮುಕ್ತವಾಗಿ ಬದುಕಬೇಕು ಹಾಗೆ ನನ್ನನ್ನು ನೀನು ರಕ್ಷಿಸು ಎಂಬುದಾಗಿ ಕೇಳಿದಾಗ ; ಧರ್ಮವತ್ಸಲನಾದ ರಾಮನು ನಗುನಗ್ತಾ ಉತ್ತರ ಹೇಳ್ತಾನೆ. ಏಕೆಂದರೆ ಅದು ಎಷ್ಟು ಹೊತ್ತಿನ ಕೆಲಸವೂ ಅಲ್ಲ ಎನ್ನುವ ಭಾವ ರಾಮನಲ್ಲಿದೆ.

ರಾಮನು ಸುಗ್ರೀವನಿಗೆ ಹೇಳಿದ್ದೇನು? ಅಲ್ಲ ಸುಗ್ರೀವ, ವಾಲಿಯೊಟ್ಟಿಗೆ ನಾವು ಏಕೆ ಮೈತ್ರಿ ಮಾಡಿಕೊಳ್ಳಬೇಕು? ಈಗ ನೀನು ನನ್ನೊಡನೆ ಮೈತ್ರಿ ಮಾಡಿಕೊಂಡು ನನ್ನಿಂದ ಜೀವನದಲ್ಲಿ ಏನೂ ಆಗದಿದ್ದರೆ, ನಿನ್ನಲ್ಲಿ ಸಕಾರಾತ್ಮಕ ಬದಲಾವಣೆ ಬರದಿದ್ದರೆ ಮೈತ್ರಿಗೇನು ಫಲವೋ? ನಾನು ಅಂದುಕೊಂಡಿದ್ದು ಹೀಗೆ. ನಾನು ಯಾರೊಡನೆಯಾದರೂ ಮೈತ್ರಿ ಮಾಡಿದ್ರೆ ಅದರಿಂದ ಅವರಿಗೆ ಒಳ್ಳೆಯದಾಗಬೇಕು. ಅವರ ಬದುಕು ಬಂಗಾರ ಆಗಬೇಕು ನನ್ನಿಂದ. ಒಂದೇ ಮಾತು ಹೇಳ್ತಾನೆ. ನಿನ್ನ ಪತ್ನಿಯನ್ನು ಅವನು ಅಪಹರಣ ಮಾಡಿದ್ದು ಹೌದಾದರೆ ಅವನನ್ನು ಈ ರಾಮ ಕೊಂದ ಅಂತ ತಿಳ್ಕೋ ನೀನು. ಒಡಹುಟ್ಟಿದ ತಂಗಿ ಮತ್ತು ತಮ್ಮನ ಮಡದಿ ಇವರಿಬ್ಬರಲ್ಲಿ ಯಾರು ತಪ್ಪಿ ನಡೀತಾನೋ ಅವನಿಗೆ ವಧೆಯೇ ಶಿಕ್ಷೆ. ನನ್ನ ಶರಗಳು ಪ್ರಯೋಗಿಸಿದ ಮೇಲೆ ಅದು ವಿಫಲವಾಗುವುದು ಅಂತ ಇಲ್ಲ. ಹರಿತವಾದ ನನ್ನ ಬಾಣಗಳು ಚಾರಿತ್ರ್ಯ ಬಿಟ್ಟ, ನಡತೆಗೆಟ್ಟ ವಾಲಿಯ ಎದೆಯನ್ನು ಸೀಳ್ತಾವೆ. ಆತ್ಮಹಿತಕರವಾದ ರಾಮನ ಈ ಮಾತುಗಳನ್ನು ಕೇಳಿದಾಗ ಭಾರೀ ಸಂತೋಷವಾಯಿತು ಸುಗ್ರೀವನಿಗೆ. ರಾಮನಿಗೆ ಹೇಳ್ತಾನೆ, ನಿನ್ನ ಕರುಣದಿಂದ ನನಗೆ ನನ್ನ ಮಡದಿ ಸಿಗ್ತಾಳೆ. ನನ್ನ ರಾಜ್ಯ ನನಗೆ ಮರಳಿ ಬರ್ತದೆ. ಎಷ್ಟು ಸಂತೋಷ. ಹಾಗೆ ಮಾಡು ಪ್ರಭು. ಈ ನನ್ನ ಅಣ್ಣನನ್ನು ನನ್ನನ್ನು ಹಿಂಸಿಸದಂತೆ ಮಾಡು. ಕೊಲ್ಲು ಅಂತ ಸುಗ್ರೀವ ಹೇಳೋದಿಲ್ಲ. ಅಣ್ಣ ಎನ್ನುವ ಮಮತೆ ಇತ್ತು ಸುಗ್ರೀವನಿಗೆ.

ಇದೇ ಸಮಯಕ್ಕೆ ಮೂರು ಎಡಗಣ್ಣುಗಳು ಅದುರಿದವು. ಸುಗ್ರೀವ ರಾಮರ ಈ ಸ್ನೇಹ ಪ್ರಸಂಗದಲ್ಲಿ. ಒಳಿತಾಗ್ತದೆ ಅಂತ ಸೀತೆಯ ಎಡಗಣ್ಣು ಅದುರಿತು. ವಾಲಿಗೆ ನಿನ್ನ ನಾಶ ಬಂದಿದೆ ಅಂತ ಎಡಗಣ್ಣು ಅದುರಿತು. ರಾವಣನ ಬೆಂಕಿಯನ್ನು ಉಗುಳುವ ಎಡಭಾಗದ ಹತ್ತೂ ಕಣ್ಣುಗಳು ಅದುರಿದವು.

ಸುಗ್ರೀವ ಮುಂದುವರೆದು ಮಾತಾಡ್ತಾನೆ. ನನ್ನ ಮಂತ್ರಿವರ್ಯನಾದ ಆಂಜನೇಯ ನೀನ್ಯಾಕೆ ಕಾಡಿಗೆ ಬಂದೆ ಅಂತ ಹೇಳಿದಾನೆ. ನೀನು ಮತ್ತು ಲಕ್ಷ್ಮಣ ಇಬ್ಬರೂ ಇಲ್ಲದ ಸಮಯವನ್ನು ಹೊಂಚುಹಾಕಿ ಒಂದು ರಕ್ಷಸ್ಸು( ಅದು ಎನ್ನುವ ಪ್ರಯೋಗದಲ್ಲಿ) ನಿನ್ನ ಪತ್ನಿಯನ್ನು ಕದ್ದುಕೊಂಡು ಹೋಗಿದೆ ಎಂದೂ ಕೂಡ ಹೇಳಿದಾನೆ. ಸೀತಾಪಹರಣದ ಜೊತೆಗೆ ಮಹಾತ್ಮನಾದ ಜಟಾಯುವನ್ನು ಅನ್ಯಾಯದ ಹಾದಿಯಲ್ಲಿ ಕೊಂದು ಈ ಅಕಾರ್ಯವನ್ನು ಆ ರಕ್ಷಸ್ಸು ಮಾಡಿದೆ ಎಂಬುದಾಗಿ ಹೇಳಿ, ಈ ದುಃಖದಿಂದ ನೀನು ಮುಕ್ತನಾಗಲು ಹೆಚ್ಚುಕಾಲವಿಲ್ಲ ಎಂದು ನನಗೆ ಅನ್ನಿಸ್ತಾಯಿದೆ ಮತ್ತು ನಾನು ಈ ಕಾರ್ಯವನ್ನು, ನನ್ನ ಸೇವೆಯನ್ನು ಈ ನಿಟ್ಟಿನಲ್ಲಿ ಪಾಲಿಸ್ತೇನೆ. ನಿನ್ನ ಪತ್ನಿಯನ್ನು ನಾನು ನಿನಗೆ ತಂದೊಪ್ಪಿಸ್ತೇನೆ. ಹಯಗ್ರೀವನೆಂಬ ದೈತ್ಯನು ಹಿಂದೆ ವೇದವಾಣಿಯನ್ನು ಅಪಹರಣ ಮಾಡಿದಾಗ ಮತ್ಸ್ಯಾವತಾರದಲ್ಲಿ ಬಂದ ಆ ಹರಿಯು ವೇದವಾಣಿಯನ್ನು ಮರಳಿ ಸ್ವಸ್ಥಾನದಲ್ಲಿ ಇಟ್ಟಂತೆ, ಸೀತೆಯನ್ನು ನಾನು ಮರಳಿ ತಂದು ನಿನಗೊಪ್ಪಿಸ್ತೇನೆ. ಅವಳು ಪಾತಾಳ, ರಸಾತಳ ಅಥವಾ ಆಕಾಶ ಎಲ್ಲೇ ಇರಲಿ ನಾನು ನಿನ್ನ ಪತ್ನಿಯನ್ನು ಮರಳಿ ನಿನಗೆ ತಂದೊಪ್ಪಿಸುವೆ ಈ ನನ್ನ ಮಾತು ಸತ್ಯ ಎಂದು ಹೇಳಿ, ಸೀತೆ ರಾವಣನಿಗೆ ಸಿಕ್ಕಿರಬಹುದು ಆದರೆ ದಕ್ಕಲಾರಳು. ನಿನ್ನ ಸತಿ ಎಂದೂ ಇನ್ನೊಬ್ಬರ ವಶವಾಗಲಾರಳು. ಈ ನನ್ನ ಮಾತನ್ನು ನೀನು ಸತ್ಯ ಎಂದೇ ಸ್ವೀಕಾರ ಮಾಡಬಹುದು. ವಿಷವನ್ನು ತಿಂದು ನಾವು ಜೀರ್ಣಮಾಡಿಕೊಳ್ಳಲು ಸಾಧ್ಯವಿಲ್ಲ, ವಿಷವೇ ನಮ್ಮನ್ನು ಜೀರ್ಣಮಾಡಿಕೊಳ್ತದೆ. ಹಾಗೆ ಸೀತೆಯೇ ಲಂಕೆಯನ್ನು ಜೀರ್ಣಮಾಡಿಯಾಳು ಹೊರತು, ರಾವಣ ಸೀತೆಯನ್ನು ದಕ್ಕಿಸಿಕೊಳ್ಳಲು ಸಾಧ್ಯ ಇಲ್ಲ ಅಂತ ಹೇಳ್ತಾನೆ ಸುಗ್ರೀವ.

ರಾಮ ಈಗ ನೀನು ಕೊಟ್ಟ ವಿವರಗಳನ್ನೆಲ್ಲ ನಾನು ಊಹೆ ಮಾಡಿದರೆ ನಾನು ಮತ್ತು ನನ್ನ ನಾಲ್ವರು ಸಹಚರರು ಋಷ್ಯಮೂಕ ಪರ್ವತದ ಮೇಲಿದ್ದ ಹೊತ್ತು, ಆಕಾಶ ಮಾರ್ಗದಲ್ಲಿ ಒಂದು ರಕ್ಷಸ್ಸು ಸರ್ವಲಕ್ಷಣಸಂಪನ್ನೆಯಾದ ಒಬ್ಬಳು ಸ್ತ್ರೀಯನ್ನು ಕದ್ದೊಯ್ತಾ ಇತ್ತು. ತುಂಬಾ ಕ್ರೂರಿ ಅವನು. ಈಕೆ ರಾಮ ರಾಮ ಎಂಬುದಾಗಿ ಕೂಗಿ ಕೂಗಿ ಕರೆಯುತ್ತಿದ್ದಳು. ಲಕ್ಷ್ಮಣನನ್ನೂ ಕೂಡ ಕರೆಯುತ್ತಿದ್ದಳು. ರಾವಣನ ಹಿಡಿತದಿಂದ ತಪ್ಪಿಸಿಕೊಳ್ಳಲು ಹೆಣಗಾಡ್ತಾ ಇದ್ದಳು. ನಾನು ಮತ್ತು ನನ್ನ ನಾಲ್ವರು ಸಹಚರರನ್ನು ಕಂಡಾಗ ಅವಳಿಗೆ ಏನನ್ನಿಸಿತೋ ತನ್ನ ಉತ್ತರೀಯದಲ್ಲಿ ಕೆಲವು ಆಭರಣಗಳನ್ನು ಹಾಕಿ ನಮ್ಮೆಡೆಗೆ ಎಸೆದಳು. ನಾವು ಆಕೆ ಎಸೆದ ಉತ್ತರೀಯವನ್ನು, ಅಭರಣವನ್ನು ಸ್ವೀಕರಿಸಿದೆವು. ಈಗಲೂ ಸರಿಯಾಗಿ ಇಟ್ಟುಕೊಂಡಿದ್ದೇವೆ ನಾನದನ್ನ ತಂದು ನಿನಗೆ ತೋರಿಸ್ತೇನೆ. ಅವು ಸೀತೆಯದ್ದೇ ಹೌದೋ ಅಲ್ಲವೋ ನೋಡು ನೀನು ಎಂದಾಗ ರಾಮನಿಗೆ ತುಂಬಾ ಖುಷಿಯಾಗಿ, ಮಿತ್ರನೇ ಯಾಕೆ ತಡ ಮಾಡ್ತಾ ಇದೀಯ ಅಂತ ಕೇಳಿದಾಗ ಸುಗ್ರೀವನು ಶೀಘ್ರಾತಿಶೀಘ್ರವಾಗಿ ಹೋಗಿ ತನ್ನ ಗುಹೆಯನ್ನು ಪ್ರವೇಶಮಾಡಿ ಉತ್ತರೀಯ ಮತ್ತು ಆಭರಣವನ್ನು ತಂದು ಕೊಟ್ಟಾಗ ಅದನ್ನು ನೋಡಿ ಒಂದು ಕ್ಷಣವೂ ಬೇಕಾಗಲಿಲ್ಲ ರಾಮನಿಗೆ ಗುರುತಿಸಲು. ರಾಮಚಂದ್ರನನ್ನು ಕಣ್ಣೀರು ಮುಚ್ಚಿತು. ಸೀತೆಯ ಕುರಿತಾದ ಅಚಲವಾದ ಪ್ರೀತಿಯಿಂದ ಆ ಕಣ್ಣೀರು ಬಂತು. ಹಾ ಸೀತೆ, ಹಾ ಪ್ರಿಯೆ ಎಂಬ ಉದ್ಗಾರ ಬಂತು. ಕುಸಿದನು ರಾಮ. ಧೀರತೆ ಮಾಯವಾಗಿ ದುಃಖವಾವರಿಸಿತು ರಾಮನನ್ನು. ಆ ಆಭರಣಗಳನ್ನು ಹಾಗೆಯೇ ಎದೆಗವಚಿಕೊಂಡು ನಿಟ್ಟುಸಿರಿಟ್ಟ. ತಡೆಯದ ಕಣ್ಣೀರಧಾರೆ.

ಲಕ್ಷ್ಮಣನನ್ನು ಕುರಿತು ರಾಮನು ವಿಲಪಿಸಲು ತೊಡಗ್ತಾನೆ. ಬಹುಷಃ ತುಂಬ ಮೆತ್ತಗಿರುವ ಹುಲ್ಲುಗಾವಲಿನಲ್ಲಿ ಇದನ್ನು ಎಸೆದಿರಬೇಕು ಲಕ್ಷ್ಮಣ. ಏಕೆಂದರೆ ಒಂದೂ ಆಭರಣದಲ್ಲಿ ಒಂದಿಷ್ಟೂ ವ್ಯತ್ಯಾಸವಾಗಿಲ್ಲ ಎಂದಾಗ ಲಕ್ಷ್ಮಣನು ಪ್ರಸಿದ್ಧವಾದ ಆ ಮಾತನ್ನು ಹೇಳ್ತಾನೆ. ಸೀತೆಯ ಕುರಿತಾಗಿ ಅವನ ಭಾವ ಹೇಗಿತ್ತು ಎನ್ನುವುದು ಅವನ ಮಾತಲ್ಲಿ ವ್ಯಕ್ತವಾಗ್ತದೆ. ಸೀತೆಯ ಕೇಯೂರ ಗೊತ್ತಿಲ್ಲ ನನಗೆ, ಅವಳು ಹಾಕುವ ಕಿವಿಯೋಲೆಗಳು ಗೊತ್ತಿಲ್ಲ, ನೂಪುರ ಮಾತ್ರ ಗೊತ್ತು ನನಗೆ. ಯಾಕಂದ್ರೆ ಪ್ರತಿನಿತ್ಯ ನಾನು ಪಾದಾಭಿವಂದನೆ ಮಾಡ್ತಾ ಇದ್ದೆ ಅಲ್ವ ಹಾಗಾಗಿ ನೂಪುರ ಗೊತ್ತು.

ದೀನನಾದ ರಾಮ ಮಾತಾಡ್ತಾನೆ ಸುಗ್ರೀವನಲ್ಲಿ. ಯಾವ ಕಡೆಗೆ ಆ ರೌದ್ರರೂಪಿ ನನ್ನ ಪ್ರಾಣಕ್ಕಿಂತ ಪ್ರಿಯಳಾದ ಸೀತೆಯನ್ನು ಕೊಂಡೊಯ್ದಿದ್ದು? ದೊಡ್ಡ ಸಂಕಟವನ್ನೇ ನನಗೆ ತಂದಿಟ್ಟ ಆ ರಕ್ಷಸ್ಸು ಇರುವುದಾದರೂ ಎಲ್ಲಿ? ಅವನನ್ನು ಮಾತ್ರವಲ್ಲ ಅವನ ಕುಲವನ್ನೇ ನಾಶ ಮಾಡ್ತೇನೆ. ರಾಕ್ಷಸ ಜಾತಿಯನ್ನೇ ನಾಶ ಮಾಡ್ತೇನೆ. ಮೈಥಿಲಿಯನ್ನು ಮೋಸದ ಮೂಲಕ ಬಲಾತ್ಕಾರವಾಗಿ ಕೊಂಡೊಯ್ಯುವ ಮೂಲಕವಾಗಿ ನನ್ನಲ್ಲಿ ಅಪಾರವಾದ ಕ್ರೋಧವನ್ನುಂಟುಮಾಡಿರತಕ್ಕಂಥ ರಕ್ಷಸ್ಸು ಮಾಡಿದ್ದೇನೆಂದರೆ ತನ್ನ ಸರ್ವನಾಶಕ್ಕೆ ಮೃತ್ಯುದ್ವಾರವನ್ನು ತಾನೇ ತೆರೆದುಕೊಂಡಿದ್ದು. ಕಪೀಶ್ವರನೇ ಹೇಳು, ಎಲ್ಲಿದ್ದಾನೆ ಅವನು? ಯಮನೂರನ್ನು ತೋರಿಸ್ತೇನೆ ಅವನಿಗೆ ಅಂದಾಗ ಸುಗ್ರೀವ ಕೈ ಮುಗಿತಾನೆ. ಅವನಿಗೂ ಕಣ್ಣೀರು ಬಂತು. ಗಂಟಲು ಕಟ್ಟಿತು. ಯಾರದು? ಎಲ್ಲಿರ್ತಾನೆ ಅವನು? ಅವನ ವಿವರಗಳೇನು? ಆ ಕೇಡುಕುಲದವನ ಕುಲ ಯಾವುದು? ಸಾಮರ್ಥ್ಯ, ವಿಕ್ರಮಗಳೇನು? ಒಂದೂ ಅರಿಯೆ. ಆದರೆ, ಇಷ್ಟು ಮಾತ್ರ ಹೇಳ್ತೇನೆ ನಿನಗೆ ನಾನು. ಜೀವವನ್ನು ಒತ್ತೆಯಿಟ್ಟಾದರೂ ಸೀತೆಯನ್ನು ಮರಳಿ ತರುವಲ್ಲಿ ನಾನು ಸರ್ವಪ್ರಯತ್ನವನ್ನೂ ಮಾಡ್ತೇನೆ. ಇದು ನನ್ನ ಪ್ರತಿಜ್ಞೆ. ಮುಂದುವರಿದು ಹೇಳ್ತಾನೆ ಸುಗ್ರೀವ. ರಾವಣನನ್ನು ಸಪರಿವಾರ, ಸೇನಾ ಸಮೇತವಾಗಿ ಕೊಲ್ಲುವಲ್ಲಿ ನಾನು ಒದಗುತ್ತೇನೆ. ನಾನೇ ಕೊಲ್ತೇನೆ. ನಾನೇ ಮುಂದೆ ನಿಂತು ಆ ಕಾರ್ಯವನ್ನ ಮಾಡ್ತೇನೆ. ಹಾಗೆ ಮಾಡಿ ನಿನಗೆ ಸಮಾಧಾನವಾಗುವಂತೆ ಮಾಡ್ತೇನೆ. ನೀನು ಮಾತ್ರ ಬೇಸರ ಮಾಡಬಾರದು, ದುಃಖ ಪಡಬಾರದು, ದೈನ್ಯವನ್ನು ತಾಳಬಾರದು. ನಿನ್ನೊಳಗಿರುವ ಧೈರ್ಯವನ್ನು ನೆನಪಿಸಿಕೋ. ನಿನ್ನಂಥವರಿಗೆ ದೈನ್ಯ ಮತ್ತು ಶೋಕ ಹೊಂದುವುದಿಲ್ಲ ಎಂದು ಹೇಳಿ ತನ್ನ ಉದಾಹರಣೆಯನ್ನು ಕೊಡ್ತಾನೆ. ನನಗೂ ಕಷ್ಟ ಬಂದಿದೆ. ನನ್ನ ಪತ್ನಿಯನ್ನೂ ಅಪಹರಣ ಮಾಡಲಾಗಿದೆ. ನಾನು ಅಳ್ತಾ ಇಲ್ಲ. ಧೈರ್ಯ ಬಿಟ್ಟಿಲ್ಲ. ನಾನೇನು? ಕೇವಲ ಮಂಗ. ನಾನೇ ಧೈರ್ಯವಾಗಿದೇನೆ ಅಂದಮೇಲೆ ನೀನು ಹೇಗಿರಬೇಕು? ಸುಶಿಕ್ಷಿತ ನೀನು. ನೀನು ನನ್ನಂತೆ ಧೃತಿಯನ್ನು ತಾಳಬೇಕು ಎಂದು ಸಂತೈಸಿ ಇದೋ ಕೈಮುಗಿದೆ ನಿನಗೆ ಎಂದು ಹೇಳಿ ಕೈಮುಗಿದು, ನೀನು ದುಃಖಿಸಬಾರದು, ನೀನು ನಿನ್ನ ಸಹಜತೆಗೆ ಬರಬೇಕು. ನಾನು ನಿನಗೆ ಬುದ್ಧಿ ಹೇಳುವಷ್ಟೆಲ್ಲ ದೊಡ್ಡವನಲ್ಲ. ಇದು ಪ್ರೀತಿಯಿಂದ ನಾನು ನಿನ್ನನ್ನು ಒಲಿಸುವುದು. ಪೌರುಷವನ್ನು ತಾಳು. ಶೋಕವನ್ನು ಬಿಡು.
ಮಿತ್ರಭಾವದಿಂದ ಹೇಳ್ತಾ ಇದೇನೆ ನೀನು ಮೊದಲಿನಂತಾಗಬೇಕು ಎಂದು ಪ್ರೀತಿಯಿಂದ ಹೇಳಿದಾಗ ರಾಮನಿಗೆ ಸಮಾಧಾನವಾಯ್ತಂತೆ.

ಕಣ್ಣೀರಿನಿಂದ ತೋಯ್ದ ತನ್ನ ಮುಖವನ್ನು ಬಟ್ಟೆಯಿಂದ ಒರೆಸಿಕೊಂಡು ಬಹುಬೇಗ ತನ್ನ ಮೊದಲಿನ ಸ್ಥಿತಿಗೆ ಮರಳಿ ಬಂದ. ಸುಗ್ರೀವನನ್ನು ಗಾಢವಾಗಿ ತಬ್ಬಿಕೊಂಡು ಹೇಳಿದ, ಇದಕ್ಕೇ ತಾನೇ ಮಿತ್ರರು ಬೇಕು ಎಂದು ಹೇಳುವಂಥದ್ದು. ಹೇಗೆ ನೀನು ನನಗೆ ಒದಗಿ ಬಂದೆ. ಹೇಗೆ ನೀನು ನನಗೆ ಸಮಾಧಾನ ಮಾಡಿದೆ. ನಿಜವಾದ ಮಿತ್ರನಾದವನು, ಪ್ರೀತಿಯುಳ್ಳವನು, ಹಿತವನ್ನು ಬಯಸುವವನು ಏನು ಮಾಡ್ಬೇಕು ಅದನ್ನ ಮಾಡ್ತಾ ಇದ್ದೀಯೆ ನೀನು. ಇದೋ, ನಿನ್ನ ಮಾತಿಗೆ ಬೆಲೆಯನ್ನು ಕೊಟ್ಟು ನಾನು ನನ್ನ ಮೊದಲಿನ ಧೀರತೆಯನ್ನು ತಾಳಿದೇನೆ. ಮೊದಲಿನಂತೆ ಸಹಜತೆಗೆ ನಾನು ಬಂದಿದೇನೆ. ಇಂಥಾ ಒಂದು ಕಷ್ಟದ ಕಾಲದಲ್ಲಿ ನಿನ್ನಂತಹ ಬಂಧು ನಿಜವಾಗಿಯೂ ದುರ್ಲಭ ಸುಗ್ರೀವ. ಆದರೆ ಮೈಥಿಲಿಯನ್ನು ಹುಡುಕುವಲ್ಲಿ ಪ್ರಯತ್ನ ಮಾಡ್ಬೇಕು. ಆ ದುರಾತ್ಮ ರಾವಣನ ಅನ್ವೇಷಣೆಯಲ್ಲಿ ನೀನು ನನಗೆ ಒದಗಿ ಬರಬೇಕು ಹಾಗೆಯೇ ನಿನಗೇನಾಗಬೇಕು ಹೇಳು ನಾನು ಮಾಡಿಕೊಡ್ತೇನೆ. ಇದು ಮಳೆಯೆಂದು ಭಾವಿಸಿ ನಿನಗೆ ಬೇಕಾದ ಅಪೇಕ್ಷೆಯ ಬೀಜವನ್ನು ಬಿತ್ತು. ನಿನಗೆ ಬೆಳೆ ಬರ್ತದೆ. ಮತ್ತೆ, ನಾನು ಏನು ಹೇಳಿದೆನೋ ನಿನ್ನ ವಿಷಯದಲ್ಲಿ, ಏನು ಅಭಯ ಕೊಟ್ಟೆನೋ ಅದನ್ನು ನಿಜವೆಂದು ಭಾವಿಸು. ಅದು ಮಾತಿಗೆ ಹೇಳಿದ್ದಲ್ಲ. ಅದು ನಿನ್ನನ್ನು ಸಂತೈಸಲು ಹೇಳಿದ್ದಲ್ಲ. ಸುಗ್ರೀವ ನನ್ನ ಬದುಕಿನಲ್ಲಿ ನಾನು ಈವರೆಗೆ ಸುಳ್ಳಾಡಿಲ್ಲ. ಮುಂದೂ ನಾನು ಸುಳ್ಳಾಡುವವನಲ್ಲ. ನಾನಿರುವವರೆಗೆ ನಾನು ಸುಳ್ಳಾಡೋದಿಲ್ಲ. ಇದೋ ಪ್ರತಿಜ್ಞೆ ಮಾಡ್ತಾ ಇದೇನೆ. ಸತ್ಯದ ಮೇಲಾಣೆ ನಾನು ನಿನಗೆ ಕೊಟ್ಟ ಮಾತನ್ನ ತಪ್ಪೋದಿಲ್ಲ ಅಂದಾಗ ತುಂಬ ಸಂತೋಷವಾಯಿತು ಸುಗ್ರೀವನಿಗೆ. ಅವನ ಸಚಿವರೂ ಬಹಳ ಸಂತೋಷಪಟ್ರು. ಹೀಗೆ ನರ ಮತ್ತು ವಾನರ ಚಕ್ರವರ್ತಿಗಳು ಪರಸ್ಪರ ಕಷ್ಟ ಸುಖಗಳನ್ನು ಮನಸ್ಸು ಬಿಚ್ಚಿ ಮಾಡಾಡಿಕೊಂಡ್ರು.

ಪರಿತುಷ್ಟನಾದ ಸುಗ್ರೀವನು ಲಕ್ಷ್ಮಣ ಕೇಳುತ್ತಿರುವಂತೆಯೇ ರಾಮನಿಗೆ ಹೇಳ್ತಾನೆ. ನನಗೆ ದೈವಾನುಗ್ರಹವಿದೆ. ಸಂಶಯವಿಲ್ಲ. ಏಕೆಂದರೆ ನೀನು ಹೀಗೆ ಬಂದೊದಗುವುದು ಎಂದರೆ ಏನು. ಎಲ್ಲಾ ದೇವರಿಗೂ ನನಗೆ ಒಳಿತು ಮಾಡ್ಬೇಕು ಎನ್ನಿಸಿಬಿಟ್ಟಿದೆ. ಸರ್ವದೇವತೆಗಳ ಆಶೀರ್ವಾದ ನನ್ನ ಮೇಲಾಗಿದೆ. ರಾಮ ನೀನು ನನ್ನ ಜೊತೆಗಿದ್ರೆ ಸ್ವರಾಜ್ಯವೇನು ಸ್ವರ್ಗರಾಜ್ಯವೂ ನನಗೆ ಪ್ರಾಪ್ತವಾಗಬಹುದು ಅದೂ ದುರ್ಲಭವಲ್ಲ. ನೋಡು, ನನ್ನ ಬಂಧು-ಮಿತ್ರರು, ನನ್ನವರು ಅಂತ ಯಾರೆಲ್ಲ ಇದಾರೋ ಅವರೆಲ್ಲರ ಮುಂದೆ ನಾನೀಗ ಗೌರವಕ್ಕೆ ಪಾತ್ರ. ಯಾಕೆಂದರೆ ಸೂರ್ಯವಂಶದ ಒಬ್ಬ ಶ್ರೇಷ್ಠ ಪುರುಷ ನನ್ನ ಮಿತ್ರ. ಇಕ್ಷ್ವಾಕು ವಂಶದ ಮಹೋನ್ನತ ವ್ಯಕ್ತಿತ್ವ ನನ್ನ ಮೈತ್ರಿ ಈಗ ಎಂದರೆ ನನ್ನ ಗೌರವ ನನ್ನವರ ಮಧ್ಯದಲ್ಲಿ ಏನಾಯಿತು ಎಂದು ಹೇಳಿ, ನಾನೂ ನಿನಗೆ ಸರಿಯಾದ ಮಿತ್ರನೇ ಹೌದು. ಅದು ನಿನಗೆ ನಿಧಾನಕ್ಕೆ ಗೊತ್ತಾಗ್ತಾ ಹೋಗ್ತದೆ. ನಾನು ನನ್ನ ಗುಣಗಳನ್ನ ನಾನಾಗಿ ಹೇಳಿಕೊಳ್ಳುವಂತಿಲ್ಲ. ನಿನ್ನಂತಹ ಮಹಾತ್ಮರ ಪ್ರೀತಿ ಮತ್ತು ಧೈರ್ಯ ನಿಶ್ಚಲ ಅಂತ ಹೇಳಿ ಬಂಗಾರವಾಗಲಿ, ವಸ್ತ್ರಗಳಾಗಲಿ, ಉತ್ತಮೋತ್ತಮ ವಸ್ತುಗಳಾಗಲಿ, ಆಭರಣಗಳಾಗಲಿ, ಸ್ನೇಹ ಇದ್ದಾಗ ಭಿನ್ನ-ಭೇಧ ಇಲ್ಲ ಅಂತ ಹೇಳ್ತಾನೆ. ಮತ್ತೆ ಹೇಳ್ತಾನೆ ಆಢ್ಯನಾಗಲಿ-ದರಿದ್ರನಾಗಲಿ, ದುಃಖಿತನಾಗಲಿ-ಸುಖಿತನಾಗಲಿ, ದೋಷವುಳ್ಳವನಾಗಲಿ-ಗುಣವುಳ್ಳವನಾಗಲಿ, ಸ್ನೇಹಿತನಿಗೆ ಸ್ನೇಹಿತನೇ ಗತಿ. ಸ್ನೇಹಕ್ಕಾಗಿ ಧನತ್ಯಾಗ ಮಾಡಬಹುದು, ಸುಖತ್ಯಾಗ ಮಾಡಬಹುದು, ದೇಹತ್ಯಾಗವನ್ನಾದರೂ ಮಾಡಬಹುದು ಇಂತಹ ಸ್ನೇಹವನ್ನು ಕಂಡಮೇಲೆ, ನೀನೆಂತಹ ಪ್ರೀತಿಯನ್ನು ಕೊಡ್ತಾ ಇದೀಯೋ ಅಂತಹ ಪ್ರೀತಿಗಾಗಿ, ಧನ, ಸುಖ, ದೇಹವನ್ನಾದರೂ ತ್ಯಾಗ ಮಾಡಬಹುದು ಎಂದಾಗ ರಾಮ ಸರಿ ಎಂದನಂತೆ. ಲಕ್ಷ್ಮಣ ಕೇಳ್ತಾ ಇದಾನೆ. ಹೀಗೆ ಮಾತಾಡ್ತಾ ಮಾತಾಡ್ತಾ ಮುಂದೆ ಬಂದಿದಾರೆ. ಸುಗ್ರೀವ ಅಲ್ಲೆ ಸುತ್ತಮುತ್ತ ಎಲ್ಲ ನೋಡಿ ತುಂಬಾ ಹೂವಿರುವ ಕಡಿಮೆ ಎಲೆಯಿರುವ ಕೊಂಬೆಯನ್ನು ಮುರಿದು ಹಾಕಿಕೊಂಡನಂತೆ. ರಾಮ ಸುಗ್ರೀವರು ಕುಳಿತುಕೊಂಡರು. ಲಕ್ಷ್ಮಣ ಹಾಗೇ ನಿಂತುಕೊಂಡಿದ್ದಾನೆ. ಹನುಮಂತ ನೋಡಿದನಂತೆ ಲಕ್ಷ್ಮಣನನ್ನು. ಆಗ ಇನ್ನೊಂದು ಸಾಲವೃಕ್ಷದ ಕೊಂಬೆಯನ್ನು ಮುರಿದು ತಂದು ಹಾಕಿ ವಿನೀತನಾಗಿ ಲಕ್ಷ್ಮಣನನ್ನು ಕೂರಿಸಿದನಂತೆ. ಅದನ್ನು ಲಕ್ಷ್ಮಣನನ್ನು ಕಂಡ ರಾಮನು ಶಾಂತಸಾಗರದಂತೆ ಪ್ರಸನ್ನವದನನಾದ. ಮುಂದೇನಾಯಿತು ಎನ್ನುವುದನ್ನು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ…
ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments