ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ದುಃಖದ ಸ್ಪರ್ಶವಿಲ್ಲದ ಜೀವವೆನ್ನುವುದು ಇಲ್ಲ.

ದುಃಖದ ಭಾರವನ್ನು ಇಳಿಸುವ ಸಲುವಾಗಿ ಜೀವವು ಮತ್ತೊಂದು ಜೀವವನ್ನೋ ಅಥವಾ ದೇವರನ್ನೋ ಅಪೇಕ್ಷೆ ಪಡ್ತದೆ. ನಮ್ಮ ದುಃಖವನ್ನು ತೋಡಿಕೊಳ್ಳಲು, ಹೃದಯದ ಭಾರವನ್ನು ಇಳಿಸಿಕೊಳ್ಳಲು ಯಾರಾದರೂ ಬೇಕು. ಅವರು ಪರಿಹಾರ ಮಾಡಿಕೊಟ್ರೆ ಬಹಳ ಒಳ್ಳೆಯದು. ಕೊನೆಯ ಪಕ್ಷ ನಮ್ಮ ದುಃಖವನ್ನು, ಸಂಕಟವನ್ನು ಕೇಳುವ ಕಿವಿಗಳಿದ್ದರೆ ಬದುಕು ಸಹ್ಯ. ಇಲ್ಲದಿದ್ದರೆ ಬದುಕು ಸಹ್ಯವೇ ಅಲ್ಲ.

ಸುಗ್ರೀವನಿಗೆ ಅಂತಹ ಹೃದಯ ಮತ್ತು ಕಿವಿಗಳು ಸಿಕ್ಕಿವೆ. ಸುಗ್ರೀವ ರಾಮನಿಗೆ ಹೇಳ್ತಾನೆ. ನಾನು ಶೋಕಾಕ್ರಾಂತ. ನೀನು ಶೋಕಾರ್ತರಾದವರಿಗೆ ಗತಿ. ಜಗತ್ತಿನಲ್ಲಿ ಯಾರಿಗೆ ಶೋಕವಾದರೂ, ದುಃಖವಾದರೂ ಅವರಿಗೆ ನಿನ್ನ ಸಂಪರ್ಕವೊಂದಾದರೆ ಚಿಂತೆಯಿಲ್ಲ. ಶೋಕಾರ್ತರಾದ ಯಾರಿಗಾದರೂ ನೀನು ಗತಿ. ಆದರೆ ನನಗೆ ನೀನು ಅಗ್ನಿಸಾಕ್ಷಿ ಮಿತ್ರ. ನನಗೆ ಕೈ ನೀಡಿದ ಮಿತ್ರ ನೀನು. ನನ್ನ ಮಿತ್ರ ಎನ್ನುವ ಕಾರಣಕ್ಕಾಗಿ ನಾನು ನನ್ನ ಗೋಳನ್ನು ನಿನ್ನಲ್ಲಿ ತೋಡಿಕೊಳ್ಳುತ್ತಿದ್ದೇನೆ. ನನಗೆ ನೀನು ಪ್ರಾಣಕ್ಕಿಂತ ಮಿಗಿಲು. ಸತ್ಯದ ಮೇಲಾಣೆ. ದುಃಖವು ನಿತ್ಯವೂ ನನ್ನ ಮನಸ್ಸನ್ನ ಪೀಡಿಸ್ತಾ ಇದೆ. ಇದಿಷ್ಟು ಹೇಳುವ ಹೊತ್ತಿಗೆ ಕಣ್ಣೀರು ಬಂದುಬಿಡ್ತು ಸುಗ್ರೀವನಿಗೆ. ಕಣ್ಣೀರು ನನ್ನ ಮಾತನ್ನ ಕಟ್ತಾ ಇದೆ. ಮಾತನಾಡಲಿಕ್ಕೆ ಸಾಧ್ಯವಾಗ್ತಾ ಇಲ್ಲ ಎಂದು ಹೇಳಿ ಕಷ್ಟದಿಂದ ದುಃಖವನ್ನ ಧಾರಣೆ ಮಾಡ್ತಾನೆ ಸುಗ್ರೀವ. ಎದುರಿಗೆ ರಾಮನಿದ್ದ ಸಲುವಾಗಿ ದುಃಖವನ್ನು ಧಾರಣೆ ಮಾಡಲು ಸಾಧ್ಯವಾಯ್ತು ಸುಗ್ರೀವನಿಗೆ.

ವಾಲಿಯು ನನ್ನನ್ನು ನನ್ನ ರಾಜ್ಯದಿಂದ, ಸಿಂಹಾಸನದಿಂದ ಕೆಳಗಿಳಿಸಿದಾನೆ. ಕೆಟ್ಟ ಮಾತುಗಳನ್ನಾಡಿದಾನೆ. ನನ್ನ ಪ್ರಾಣಕ್ಕಿಂತ ಮಿಗಿಲಾದ ಪ್ರಿಯ ಪತ್ನಿ ರುಮೆಯನ್ನು ಅಪಹರಿಸಿದಾನೆ. ನನ್ನವರೆಂದು ಯಾರೆಲ್ಲ ಇದ್ದರೋ ಅವರನ್ನೆಲ್ಲ ಕಾರಾಗಾರಕ್ಕೆ ತಳ್ಳಿದಾನೆ. ಇಷ್ಟು ಸಾಲದು ಎಂಬಂತೆ ಆ ದುಷ್ಟಾತ್ಮನು ನನ್ನ ನಾಶಕ್ಕಾಗಿ ನಿರಂತರ ಯತ್ನಶೀಲನಾಗಿದಾನೆ. ಸುಗ್ರೀವನನ್ನು ಕೊಂದು ಬನ್ನಿ ಅಂತ ಎಷ್ಟೋ ಬಾರಿ ವಾನರರನ್ನ ಇಲ್ಲಿಗೆ ಕಳುಹಿದಾನೆ. ಆದರೆ ನಾನು ಅವರನ್ನ ಕೊಂದಿದೇನೆ. ಏಕೆಂದರೆ ಹಾಗೆ ನಾನೇನು ದುರ್ಬಲನಲ್ಲ. ಹಾಗಾಗಿಯೇ ನನಗೆ ನಿನ್ನನ್ನು ಕಂಡಾಗ ಭಯವಾಯಿತು. ನಾನಾಗಿಯೇ ನಿನ್ನ ಬಳಿಗೆ ಬರಲಿಲ್ಲ. ಇಲ್ಲವಾದರೆ ನಾನೇ ನಿನ್ನ ಬಳಿ ಬರಬೇಕಾಗಿತ್ತು. ಆದರೆ ಈ ಅನುಭವದ ಕಾರಣದಿಂದಾಗಿ ವಾಲಿಯೇ ಕಳುಹಿದ್ದೇನೋ ಎಂದು ಭಯವಾಯಿತು. ನನಗೆ ಹನುಮಂತನೇ ಮೊದಲಾದ ಈ ನಾಲ್ವರೇ ಸಹಾಯಕರು. ಇವರಿರುವುದರಿಂದ ನಾನು ಬದುಕಿರುವುದು. ಇವರು ನನ್ನನ್ನು ರಕ್ಷಣೆ ಮಾಡಿದಾರೆ, ಸಮಾಧಾನ ಮಾಡಿದಾರೆ, ಧೈರ್ಯ ತುಂಬಿದಾರೆ ಮತ್ತು ಕಷ್ಟಗಳು ಬಂದಾಗ ದಾರಿಯನ್ನು ಹೇಳಿದಾರೆ. ಸಲಹೆ ಕೊಟ್ಟಿದಾರೆ. ಇವರು ಹಗಲು ರಾತ್ರಿಯೆನ್ನದೆ ಜಾಗೃತವಾಗಿದ್ದುಕೊಂಡು ಸುತ್ತಲೂ ನನ್ನನ್ನು ರಕ್ಷಿಸ್ತಾರೆ. ನಾನು ಎಲ್ಲಿಯಾದರೂ ಹೋಗಬೇಕೆಂದರೆ ಇವರು ನನ್ನ ಜೊತೆ ಬರ್ತಾರೆ. ನನ್ನ ಆಪದ್ಬಂಧುಗಳು, ನನಗೆ ಸಲಹೆ ನೀಡುವ ಆತ್ಮೀಯರು, ನನ್ನನ್ನು ರಕ್ಷಿಸುವ ಅಂಗರಕ್ಷಕರು ಎಲ್ಲವೂ ಇವರೆ. ಏನು ಬೇಕಾದರೂ ಅವರನ್ನೇ ಆಶ್ರಯಿಸಿದ್ದೇನೆ ನಾನು. ನನ್ನೆಲ್ಲ ಬೇಕು ಬೇಡಗಳನ್ನ ಅವರೇ ಪೂರೈಸ್ತಾರೆ. ಇದು ಸಂಕ್ಷೇಪ.

ನನಗೆ ಶತ್ರು ಅಂತ ಬೇರೆ ಯಾರೂ ಇಲ್ಲ. ಆ ನನ್ನಣ್ಣ, ಪ್ರಖ್ಯಾತ ಪೌರುಷ, ಅವನು ನಾಶವಾದರೆ ಮಾತ್ರ ನನ್ನ ದುಃಖ ನಾಶವಾಗ್ತದೆ. ನನ್ನ ಸುಖವು ಅವನ ಸಾವನ್ನಾಶ್ರಯಿಸಿದೆ. ನನ್ನ ಜೀವನ ಅವನ ಮರಣವನ್ನಾಶ್ರಯಿಸಿದೆ. ಒಂದೋ ವಾಲಿ ಇಲ್ಲದಿದ್ದರೆ ಸುಗ್ರೀವ ಎನ್ನುವ ಮಟ್ಟಿಗೆ ನಮ್ಮಿಬ್ಬರ ಬಾಂಧವ್ಯ ಹೋಗಿ ತಲುಪಿದೆ ಎಂದು ಹೇಳ್ತಾನೆ ಸುಗ್ರೀವ.

ಆಗ ರಾಮ ಕೇಳ್ತಾನೆ. ಎಲ್ಲಾ ಸರಿ ಸುಗ್ರೀವ, ಯಾಕೆ ನಿನಗೂ ಅಣ್ಣನಿಗೂ ಆಗದೇ ಬಂತು? ಏನದು ವೈರ? ಈ ವೈರದ ಕಾರಣ ತಿಳಿದರೆ ಮುಂದೇನು ಮಾಡಬಹುದು ಎಂದು ಯೋಚಿಸಲು ಸುಲಭವಾಗ್ತದೆ ಎಂದಾಗ ಸುಗ್ರೀವನ ಮುಖ ಸ್ವಲ್ಪ ಅಸ್ತವ್ಯಸ್ತವಾಯಿತು. ಅದನ್ನ ನೋಡಿ ರಾಮ ಹೇಳ್ತಾನೆ. ನೋಡು ಸುಗ್ರೀವ, ನಿನ್ನ ನೋವು, ಅವಮಾನ ಅದನ್ನ ನೋಡಿಯೇ ನನಗೆ ತಡೆದುಕೊಳ್ಳೋಕೆ ಆಗ್ತಾಇಲ್ಲ. ನನ್ನ ಸಖನಿಗಾಗಿ ಏನಾದರೂ ಮಾಡಬೇಕು ಎಂಬ ಭಾವ ಮೂಡಿ ಬರ್ತಾಯಿದೆ. ನೀನು ನಿಶ್ಚಿಂತನಾಗಿ ಹೇಳು. ನೀನು ಹೇಳಿ ಮುಗಿಸುತ್ತಿದ್ದಂತೆಯೇ ಇದೋ ಈ ನನ್ನ ಧನುಸ್ಸಿಗೆ ಹೆದೆಯೇರಿಸಿ, ನನ್ನ ಬಾಣವನ್ನು ಸೃಜಿಸಿದೆ ಎಂದಾದರೆ ಮುಗಿಯಿತು ನಿನ್ನ ಶತ್ರುಗಳ ಕತೆ.

ಇದಿಷ್ಟನ್ನು ಕೇಳಿದಮೇಲೆ ಅರಳಿದ ಮುಖದಿಂದ ವೈರದ ಕಾರಣವನ್ನು ನಿರೂಪಿಸಿದನು ಸುಗ್ರೀವ:
ವಾಲಿಯೆಂಬುವನು ನನ್ನಣ್ಣ. ಶತ್ರುಸಂಹಾರಿ. ಈ ನನ್ನ ಅಣ್ಣ ತಂದೆಗೂ ಬಹಳ ಬೇಕಾದವನು. ಋಕ್ಷರಜಸ್ಸು. ವಾನರರ ಮೊದಲ ಮಹಾರಾಜ ಅವನು. ಅವನಿಗೂ ನಮ್ಮಣ್ಣನೆಂದರೆ ಬಹಳ ಒಳ್ಳೆಯ ಸದ್ಭಾವನೆ ಇತ್ತು. ನನಗೂ ಇತ್ತು. ನನಗೂ ಅಣ್ಣನೆಂದರೆ ತುಂಬಾ ಆದರ, ಗೌರವ. ಹಾಗಿತ್ತು ಮೊದಲು. ನಮ್ಮ ತಂದೆಯ ದೇಹ ಶಾಂತವಾದ ಬಳಿಕ ದೊಡ್ಡವನು ಎಂಬ ಕಾರಣಕ್ಕೆ , ಯೋಗ್ಯತೆಯಲ್ಲಿ ನಾನಾಗಲೀ ಅಣ್ಣನಾಗಲೀ ವ್ಯತ್ಯಾಸವಿಲ್ಲ. ಒಟ್ಟಿಗೇ ಇರುತ್ತಿದ್ದೆವು. ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ನನ್ನ ನೆರಳಿನಂತೆ ಅವನು, ಅವನ ನೆರಳಿನಂತೆ ನಾನು ಎನ್ನುವಂತಿದ್ದೆವು. ನಾವಿಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಆದರೆ ಚೂರೇ ಚೂರು ಅವನು ಮೊದಲು ನನಗಿಂತ. ಜ್ಯೇಷ್ಠ ಎನ್ನುವ ಕಾರಣಕ್ಕೆ ಮಂತ್ರಿಗಳು ಅವನನ್ನು ರಾಜನನ್ನಾಗಿ ಮಾಡಿದರು. ಕಪಿಗಳಿಗೆಲ್ಲ ಈಶ್ವರನಾದ ಅವನು. ನನ್ನದೂ ಏನೂ ತಕರಾರಿರಲಿಲ್ಲ. ನಾನೂ ಒಪ್ಪಿದೆ.

ಸರ್ವಸಮ್ಮತವಾಗಿ ಕಪಿರಾಜ್ಯವನ್ನು ಆಳಿದನು ವಾಲಿ. ವಾಲಿಯು ಪೂರ್ವಿಕರಿಂದ ಬಂದ ರಾಜ್ಯವನ್ನು ಆಳುತ್ತಿದ್ದಾಗ ನಾನು ಸೇವಕನಂತೆ ಇದ್ದೆ. ನಾನು ಸದಾ ವಾಲಿಗೆ ತಲೆಬಾಗಿದ್ದೆ. ವಿನಯದಿಂದ ಆಜ್ಞಾಧಾರಕನಾಗಿ ಇದ್ದೆ. ಹೀಗೆ ಕಾಲ ಕಳೀತಾ ಇತ್ತು. ನನಗೆ ರಾಜ್ಯದ ಅಪೇಕ್ಷೆ ಇರಲಿಲ್ಲವಾದ್ದರಿಂದ ಸಮಸ್ಯೆಯೇನೂ ಇರಲಿಲ್ಲ. ವಾಲಿ ನನ್ನನ್ನು ತುಂಬಾ ಪ್ರೀತಿಯಿಂದ ನೋಡ್ತಾ ಇದ್ದ. ನಾನೂ ವಾಲಿಯನ್ನು ಪ್ರೀತಿಯಿಂದ ನೋಡ್ತಾಯಿದ್ದೆ. ಯುವರಾಜನಂತೆ ಅವನಿಗೆ ಬೇಕಾದ್ದೆಲ್ಲವನ್ನೂ ನಾನೇ ಮಾಡ್ತಾಯಿದ್ದೆ. ವಾಲಿಗೆ ಬೇಕಾದವರೆಲ್ಲ ನನ್ನನ್ನು ಪ್ರೀತಿಸಿ, ಗೌರವಿಸುತ್ತಿದ್ದರು. ನನಗೆ ಬೇಕಾದವರು ಅಂತ ಬೇರೇನೂ ಇಲ್ಲ. ಒಂದೇ ಬಳಗವಾಗಿತ್ತು. ಒಂದು ದಿನ ರಾತ್ರಿ ಕಿಷ್ಕಿಂದೆಯ ಪರಿಸರಕ್ಕೆ ಮಾಯಾವಿ ಎಂಬ ರಾಕ್ಷಸನೊಬ್ಬನ ಪ್ರವೇಶವಾಯಿತು. ಅವನಿಗೂ ವಾಲಿಗೂ ಹೆಣ್ಣಿನ ಕುರಿತಾದ ವೈರವಿತ್ತಂತೆ. ದುಂದುಭಿ ಎಂಬ ಮಹಾರಾಕ್ಷಸನ ಮಗನಾದ ಮಾಯಾವಿ ರಾಕ್ಷಸ ಮಹಾವೈರಿ ವಾಲಿಗೆ. ಎಲ್ಲರೂ ಮಲಗಿದ್ದ ಹೊತ್ತಿನಲ್ಲಿ ಬಂದು ಘರ್ಜಿಸಿದನು. ವಾಲಿಯನ್ನು ಯುದ್ಧಕ್ಕೆ ಕರೆದನು. ಮಲಗಿ ನಿದ್ರಿಸುತ್ತಿದ್ದ ವಾಲಿಗೆ ಆ ಭೈರವ ಘರ್ಜನೆ ಕೇಳಿತು. ಯುದ್ಧೋತ್ಸಾಹಿ ವಾಲಿ ಅದನ್ನು ಸಹಿಸಲಿಲ್ಲ. ಅದನ್ನು ಕೇಳಿ ಎದ್ದು ನೇರವಾಗಿ, ವೇಗವಾಗಿ ಯುದ್ದಕ್ಕೆ ಹೊರಟಿದ್ದೇ. ಕ್ರೋಧವೇ ವಾಲಿಯನ್ನು ಕೈಗೆ ತೆಗೆದುಕೊಂಡಿತ್ತು. ಮೈಮರೆತು ವಿವೇಕವನ್ನು ಮರೆತು ಎದ್ದು ಹೋಗುವಾಗ ನಾನು ತಡೆಯಲು ಯತ್ನಿಸಿದೆ. ತಾರೆ ಮೊದಲಾದ ಸ್ತ್ರೀಯರೂ ತಡೆಯಲು ಪ್ರಯತ್ನಿಸಿದರು. ಯಾರನ್ನಾದರೂ ಕಳಿಸಿ, ಒಬ್ಬನೇ ಬಂದಿರುವನೋ? ಸೈನ್ಯ ಬಂದಿದೆಯೋ? ಯಾಕಾಗಿ ಬಂದಿದ್ದಾನೆ ಎಂದು ತಿಳಿದುಕೊಂಡು, ರಾತ್ರಿಯೇ ಯುದ್ಧ ಬೇಕೋ ಏನು ಎಂದು ಯೋಚನೆ ಮಾಡಬಹುದಲ್ಲ ಎಂದರೆ ವಾಲಿ ಉತ್ತರಿಸಲೂ ಇಲ್ಲ. ಎಲ್ಲರನ್ನೂ ತಳ್ಳಿ ನುಗ್ಗಿ ಹೊರಗೆ ಹೋಗಿದ್ದೇ. ಆಗ ನಾನೂ ಕೂಡ ಹೊರಟೆ ಜೊತೆಯಲ್ಲಿ. ಅವನೇನು ಕರೆಯಲಿಲ್ಲ. ಆದರೆ ಅಣ್ಣನಿಗೇನಾದರೂ ತೊಂದರೆಯಾದರೆ ಎಂಬ ಕಳಕಳಿಯಿಂದ. ಅಸುರನಿಗೆ ಭಯವಾಯಿತು. ಅವನ ಯೋಚನೆ ವಾಲಿಯ ಜೊತೆಯಲ್ಲಿ ಯುದ್ಧ ಮಾಡಬೇಕೆಂದು. ನಾವಿಬ್ಬರೂ ಬರುತ್ತಿರುವುದನ್ನು ದೂರದಿಂದಲೇ ಕಂಡು ಭಯಗೊಂಡ ಮಾಯಾವಿಯು ಪಲಾಯನ ಮಾಡಿದ. ಆದರೂ ವಾಲಿ ಅವನನ್ನು ಬೆನ್ನಟ್ಟಿದ. ನಾನೂ ಅಣ್ಣನನ್ನು ಹಿಂಬಾಲಿಸಿದೆ. ರಾತ್ರಿಯಾದರೂ ಚಂದ್ರನ ಬೆಳಕಿದ್ದ ಕಾರಣ ನಮಗೆ ಅಸುರನ ನಡೆ ಗೊತ್ತಾಗುತ್ತಿತ್ತು. ಅವನು ಓಡುತ್ತಿದ್ದ. ನಾವು ಹಿಂಬಾಲಿಸುತ್ತಿದ್ದೆವು. ಆಗ ಆ ಮಾಯಾವಿಯು ದುರ್ಗಮವಾದ, ಭಯಪ್ರದವಾದ ಗುಹೆಯೊಂದನ್ನು ಪ್ರವೇಶಿಸಿದ. ಅವನು ನಾಗಾಲೋಟದಲ್ಲಿ ಒಳಹೊಕ್ಕು ಕಣ್ಮರೆಯಾಗಿಬಿಟ್ಟ. ನಾವು ಕ್ಷಣ ನಿಂತೆವು. ಅವನು ಎಲ್ಲಿ ಹೋದ ಎಂಬುದು ಗೊತ್ತಾಗುತ್ತಿದ್ದಂತೆಯೇ ತಲೆ ಕೆಟ್ಟಂತಾಗಿತ್ತು ವಾಲಿಗೆ. ಅವನು ನನಗೆ ಹೇಳಿದ. ಸುಗ್ರೀವ ನೀನಿಲ್ಲಿಯೇ ಇರು. ನಾನು ಒಳಗೆ ಹೋಗಿ ಅವನನ್ನು ಹುಡುಕಿ ಕೊಂದು ಹಾಕ್ತೇನೆ ಎಂದಾಗ ನಾನು, ಬೇಡ, ನೀನೊಬ್ಬನೇ ಹೋಗುವುದು ಬೇಡ. ನಾನೂ ಬರುತ್ತೇನೆ ಜೊತೆಯಲ್ಲಿ. ಬಂದಿದ್ದನ್ನು ಇಬ್ಬರೂ ಸೇರಿ ಎದುರಿಸೋಣ ಎಂದು ಪರಿಪರಿಯಾಗಿ ನಾನು ಯಾಚಿಸಿದೆ. ವಾಲಿ ಒಪ್ಪಲೇ ಇಲ್ಲ. ಮಾತ್ರವಲ್ಲ, ನಮ್ಮಿಬ್ಬರ ಮಧ್ಯೆ ತೀರ್ಮಾನವಾಗದೇ ಇದ್ದಾಗ ನನ್ನ ಪಾದದ ಮೇಲಾಣೆ, ನೀನು ಬರಕೂಡದು ಎಂಬುದಾಗಿ ಆಣೆ ಹಾಕಿದಾಗ ಬೇರೆ ದಾರಿಯಿಲ್ಲದೇ ನಾನು ಬಿಲದ ದ್ವಾರದಲ್ಲಿ ನಿಂತೆ. ಅವನು ಒಳಗೆ ಪ್ರವೇಶ ಮಾಡಿದ. ವಾಲಿ ಹೊರಗೆ ಬರುವುದನ್ನು ನಾನು ಕಾಯ್ತಾ ಇದ್ದೆ. ಒಂದು ಗಂಟೆಯಾಯ್ತು, ಎರಡು ಗಂಟೆಯಾಯ್ತು, ರಾತ್ರಿ ಕಳೆದು ಬೆಳಗಾಯಿತು, ಒಂದು ದಿನ, ಎರಡು ದಿನ, ಮೂರು ದಿನ, ಒಂದು ವಾರ, ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು, ನಾಲ್ಕು ತಿಂಗಳು, ಆರು ತಿಂಗಳು, ಒಂದು ವರ್ಷವೇ ಆಯಿತು. ವಾಲಿ ಹೊರಗೆ ಬರಲೇ ಇಲ್ಲ. ನನ್ನ ಭಯಕ್ಕೆ ಪಾರವೇ ಇಲ್ಲ. ಒಂದು ವೇಳೆ ಅಸುರನನ್ನು ವಾಲಿ ಸಂಹಾರ ಮಾಡಿದ್ದೆ ಹೌದಾದರೆ ಹೊರಗೆ ಬರಬೇಕಿತ್ತು. ಹೊರಗೆ ಬರಲಿಲ್ಲವೆಂದರೆ ಅಲ್ಲಿಯೇ ಮುಗಿದು ಹೋಗಿರಬಹುದೇ ನಮ್ಮಣ್ಣ ಎಂದೆನಿಸಿತು ನನಗೆ. ಕೇಡನ್ನು ನನ್ನ ಮನಸ್ಸು ಶಂಕಿಸಿತು.

ಪ್ರೀತಿಯಿರುವಲ್ಲಿ ‘ಏನಾದರೂ ಕೇಡು ಸಂಭವಿಸಿದರೆ?’ ಎಂಬ ಆತಂಕವೂ ಇರುತ್ತದೆ.

ಅದಕ್ಕೆ ಸರಿಯಾಗಿ ಅಸುರರು ದೊಡ್ಡದಾಗಿ ಘರ್ಜಿಸುವ ಸದ್ದು ಕೇಳಿಸಿತು. ಯುದ್ಧದಲ್ಲಿ ನಿರಸ್ತನಾದಾಗ ಮಾಡುವಂತೆ ನಮ್ಮಣ್ಣನ ಕ್ಷೀಣ ಸ್ವರವೂ ಕೇಳಿತು. ಸಾಲದ್ದಕ್ಕೆ ಹೊರಗಡೆ ರಕ್ತ ಹರಿದು ಬಂತು. ಇದೇ ಸಮಯಕ್ಕೆ ಗುಹೆಯ ಒಳಗಿನಿಂದ ರಾಕ್ಷಸರ ಅಟ್ಟಹಾಸ ಮತ್ತು ನನ್ನಣ್ಣನ ಕ್ಷೀಣ ಧ್ವನಿ ಕೇಳಿ ಬಂದಾಗ ಅಣ್ಣನನ್ನು ಕೊಲ್ಲಲಾಗಿದೆ ಎಂಬುದು ನನಗೆ ನಿಶ್ಚಯವಾಯಿತು. ಇದರ ಜೊತೆಗೆ ಕಿಷ್ಕಿಂದೆಯ ಚಿಂತೆಯೂ ಆಯಿತು.

ವಾಲಿಯನ್ನೇ ಕೊಂದವನು ಹೊರಗೆ ಬಂದರೆ ಕಿಷ್ಕಿಂಧೆಗೆ ಉಳಿಗಾಲವಿಲ್ಲ. ಎಲ್ಲರಿಗೂ ನಾಶ ಕಟ್ಟಿಟ್ಟ ಬುತ್ತಿ. ಮಾಯಾವಿ ಅಷ್ಟು ಬಲಶಾಲಿಯೇ ಆದರೆ ಕಿಷ್ಕಿಂಧೆಯಲ್ಲಿ ಯಾರೂ ಉಳಿಯುವುದಿಲ್ಲ ಎಂದೆನ್ನಿಸಿದಾಗ ಆ ರಾಕ್ಷಸ ಹೊರಗೆ ಬರಲೇಬಾರದು. ಒಳಗೇ ಸತ್ತುಹೋಗಲಿ ಎಂದು ಬೆಟ್ಟದಷ್ಟು ದೊಡ್ಡದಾದ ಒಂದು ಬಂಡೆಯನ್ನು ಹುಡುಕಿ, ಕಷ್ಟಪಟ್ಟು ಅದನ್ನು ಕಿತ್ತು, ಎತ್ತಿ, ಹೊತ್ತು ತಂದು ಆ ಬಿಲದ ಬಾಗಿಲಿಗೆ ಭದ್ರವಾಗಿ ಜಡಿದೆ. ಇಷ್ಟಾದ ನಂತರ ವಾಲಿಗೆ ತರ್ಪಣ ಕೊಟ್ಟು ಕಿಷ್ಕಿಂಧೆಗೆ ಮರಳಿ ಬಂದವನು ಚಿಂತಾಕ್ರಾಂತನಾಗಿ ಮನೆಯ ಮೂಲೆಗೆ ಸೇರಿದೆ. ಎಲ್ಲರೂ ಕೇಳಲು ಶುರು ಮಾಡಿದರು. ನಾನು ಹೇಳಲಿಲ್ಲ. ನಮ್ಮಣ್ಣನಿಗೆ ಹೀಗಾಯಿತು ಎಂದು ಹೇಗೆ ಹೇಳಲಿ? ಆದರೆ ಮಂತ್ರಿಗಳು ಬಿಡಲಿಲ್ಲ. ಮಂತ್ರಿಗಳು ನನನ್ನು ಸುತ್ತುವರೆದು ಪ್ರಯತ್ನಪೂರ್ವಕವಾಗಿ ಅವನ ಬಾಯಿ ಬಿಡಿಸಿದರು. ಆಗ ಅವರಿಗೆ ವಿಷಯ ಗೊತ್ತಾಯಿತು.

ವಾಲಿಯ ಅವಸಾನವಾಗಿದೆ ಎಂದು ಗೊತ್ತಾದಾಗ ಅವರ ಮುಂದಿನ ಕರ್ತವ್ಯವನ್ನು ಮಾಡ್ತಾರೆ. ಎಲ್ಲರೂ ಸೇರಿ ಸುಗ್ರೀವನನ್ನು ರಾಜನನ್ನಾಗಿ ಅಭಿಷೇಕ ಮಾಡ್ತಾರೆ. ಹೀಗೆ ತನ್ನಿಚ್ಛೆಯಿಂದಲ್ಲ, ಎಲ್ಲರ ಒತ್ತಾಯದಿಂದಾಗಿ ಸುಗ್ರೀವನು ಕಪಿ ರಾಜ್ಯಕ್ಕೆ ದೊರೆಯಾದ.

ಧರ್ಮದಿಂದ ನ್ಯಾಯಬದ್ಧವಾಗಿ ರಾಜ್ಯಭಾರ ಮಾಡ್ತಾ ಇರ್ತಾನೆ ಸುಗ್ರೀವ. ಒಂದು ದಿನ ವಾಲಿ ಮರಳಿ ಬಂದ ಮಾಯಾವಿಯನ್ನು ಕೊಂದು ಬಂದವನು ಸಿಂಹಾಸನದಲ್ಲಿ ಸುಗ್ರೀವನನ್ನು ಕಂಡಾಗ ಕಣ್ಣು ಕೆಂಪಾಯಿತು. ವಾಲಿ ಮೊದಲು ಮಾಡಿದ ಕೆಲಸ ಸುಗ್ರೀವನ ಮಂತ್ರಿಗಳು, ಆಪ್ತರು ಅಂತ ಯಾರ್ಯಾರು ಇದ್ದರೋ ಅವರನ್ನೆಲ್ಲ ಬಂಧನಕ್ಕೊಳಪಡಿಸಿದ. ಸುಗ್ರೀವ ಹೇಳಿಕೊಳ್ತಾನೆ ನನಗೆ ಕೆಟ್ಟ ಮಾತುಗಳನ್ನಾಡಿದ. ಆ ಸಮಯದಲ್ಲಿ ನನಗೊಂದು ಅವಕಾಶ ಇತ್ತು. ದೊರೆಯಾಗಿ ಸಿಂಹಾಸನದಲ್ಲಿ ನಾನಿದ್ದೆ. ನಾನು ಮನಸ್ಸು ಮಾಡಿದರೆ ಅವನನ್ನು ನಿಗ್ರಹ ಮಾಡಬಹುದಾಗಿತ್ತು. ಆದರೆ ಆ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಅಣ್ಣ ಎನ್ನುವ ಗೌರವ, ಪ್ರೀತಿ ಅವನ ಮೇಲೆ ಯಾವ ಕ್ರಮ ಕೈಗೊಳ್ಳಲೂ ಅವಕಾಶ ಕೊಡಲಿಲ್ಲ. ಅವನಿಗೆ ನಾನೇನೂ ಕೆಡುಕನ್ನು ಮಾಡಲಿಲ್ಲ. ನಾನು ಅಣ್ಣನನ್ನು ಗೌರವಿಸಿದೆ ಮತ್ತು ಹಿಂದಿನಂತೆಯೇ ನಾನು ಅಣ್ಣನಿಗೆ ನಮಸ್ಕರಿಸಿದೆ. ಅವನು ಆಶೀರ್ವಾದವನ್ನು ಹೇಳಲಿಲ್ಲ. ಸಂತುಷ್ಟವಾದ ಅಂತರಾತ್ಮದಿಂದ ನನ್ನನ್ನು ಯಾವಾಗಲೂ ಹೇಗೆ ಹರಸುತ್ತಿದ್ದನೋ ಹಾಗೆ ಆಶೀರ್ವಾದದ ಮಾತುಗಳನ್ನು ಅವನು ಹೇಳಲೇ ಇಲ್ಲ. ನಾನು ಒಂದು ಹೆಜ್ಜೆ ಮುಂದೆ ಹೋಗಿ ಕಿರೀಟವನ್ನು ಅವನ ಪಾದದ ಮೇಲಿಟ್ಟೆ. ಕಾಲಿಗೆ ಬಿದ್ದು, ಕೈಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಅವನು ಸಿಟ್ಟನ್ನೇ ಮಾಡಿದ ಹೊರತು ಒಲಿದು ಬರಲಿಲ್ಲ. ಸಮಾಧಾನಗೊಳ್ಳಲಿಲ್ಲ. ಅವನು ಸಿಟ್ಟಲ್ಲಿದ್ದರೂ ಕೂಡ ನಾನು ಬಿಡಲಿಲ್ಲ. ಅವನಿಗೆ ವಿಷಯ ಗೊತ್ತಿಲ್ಲ, ಏನಾಯಿತು ಎನ್ನುವುದನ್ನು ನಾನು ಹೇಳಬೇಕು ಎನ್ನುವ ಕಾರಣದಿಂದ ಅವನನ್ನು ಸಮಾಧಾನಿಸಲು ನಾನು ನಾನಾ ರೀತಿಯಲ್ಲಿ ಪ್ರಯತ್ನಿಸಿದೆ. ಆಗ ನನ್ನ ಹೃದಯದಲ್ಲಿ ನನ್ನಣ್ಣನ ಕುರಿತು ಹಿತಕಾಮನೆ ಬಿಟ್ಟು ಇನ್ನೇನೂ ಇರಲಿಲ್ಲ. ಆ ಹಳೆಯ ಸಂಬಂಧ, ಹಿತ ಪ್ರೀತಿ, ಹಿತಬುದ್ಧಿ, ಇದರ ಹೊರತು ಯಾವ ಕೇಡು ಕೂಡ ನನ್ನ ಹೃದಯದಲ್ಲಿರಲಿಲ್ಲ. ನಾನು ಹೇಳಿದೆ ನನ್ನಣ್ಣನಿಗೆ. ಅಣ್ಣ, ದೇವರು ದೊಡ್ಡವನು, ಭಾಗ್ಯ ದೊಡ್ಡದು, ನೀನು ಕುಶಲನಾಗಿದ್ದೀಯೆ. ನಿನಗೇನೂ ತೊಂದರೆ ಆಗಲಿಲ್ಲ. ರಿಪುವಿನ ನಾಶವಾಗಿದೆ. ನೀನು ಮತ್ತೆ ಮರಳಿ ಬಂದೆ ಕಿಷ್ಕಿಂಧೆಗೆ. ಅನಾಥ ನಾನು. ನನ್ನ ನಾಥ ನೀನು. ನೋಡು ಅಣ್ಣ, ಈ ಶ್ವೇತಚ್ಛತ್ರವನ್ನು ನಿನಗಾಗಿ ನಾನು ಎತ್ತಿ ಹಿಡಿದೆ. ಇದೋ ರಾಜನಿಗೆ ಇರತಕ್ಕಂತಹ ಈ ವ್ಯಜನಗಳನ್ನು ನಾನೇ ನಿನಗೆ ಬೀಸುವುದರ ಮೂಲಕವಾಗಿ ನೀನು ದೊರೆ ಎಂಬುದನ್ನು ಅಂಗೀಕಾರ ಮಾಡ್ತಾ ಇದ್ದೇನೆ. ಮತ್ತೆ ಆಗ ನಡೆದಿದ್ದಿಷ್ಟು; ಆರ್ತನಾಗಿ ಗುಹೆಯ ಬಾಗಿಲಲ್ಲಿ ನಾನು ಕಾಯ್ತಾ ಇದ್ದೆ. ಒಂದು ವರ್ಷಕಾಲ ಹಾಗೆ ಕಾದಿದ್ದೇನೆ ನಾನು. ಆದರೆ ನಾನು ಮುಳ್ಳಿನ ಮೇಲೆ ನಿಂತ ಹಾಗೆ ನಿಂತಿದ್ದರೆ ರಕ್ತಪ್ರವಾಹ ಹೊರಗೆ ಬಂತು ಗುಹೆಯ ಒಳಗಿನಿಂದ. ನಿನಗೆ ತೊಂದರೆಯಾದ ಹಾಗೆ ಲಕ್ಷಣಗಳು ಕಂಡವು. ಅಸುರರಿಗೆ ಗೆಲುವಾದಂತೆ ಅನೇಕ ಚಿಹ್ನೆಗಳು ನನಗೆ ಕಂಡುಬಂದವು. ನನಗೇನು ಸಂತೋಷ ಆಗಲಿಲ್ಲ. ಶೋಕ ಆವರಿಸಿತು.

ಇಂದ್ರಿಯಗಳು ವ್ಯಾಕುಲಗೊಂಡವು. ಕಿಷ್ಕಿಂಧೆಯನ್ನು ಈ ಅಸುರರಿಂದ ರಕ್ಷಿಸಬೇಕೆಂಬ ಒಂದೇ ಒಂದು ಬಯಕೆಯಿಂದ, ಗುಹೆಯ ಬಾಗಿಲನ್ನು ದೊಡ್ಡ ಕಲ್ಲಿನಿಂದ ಮುಚ್ಚಿದ್ದೇನೆ. ನಿನಗೆ ತೊಂದರೆಯಾಗಿದೆ, ರಾಕ್ಷಸರು ಬಂದು ಕಿಷ್ಕಿಂಧೆಗೆ ತೊಂದರೆ ಮಾಡ್ತಾರೆ ಎನ್ನುವ ಭಾವ ಇದ್ದದ್ರಿಂದಾಗಿ, ಹೀಗೆ ಮಾಡಿದ್ದು. ನಂತರ ಕಿಷ್ಕಿಂಧೆಗೆ ಬಂದೆ, ಆಗ ನಾನು ಹೇಗಿದ್ದೆ ಎಂಬುದನ್ನು ಯಾರ ಹತ್ರ ಬೇಕಾದರೂ ಕೇಳಬಹುದು. ನಿನ್ನ ಚಿಂತೆಯಲ್ಲಿ ಮುಳುಗಿದ್ದೆ ನಾನು. ಆದರೆ ಪೌರರು, ಮಂತ್ರಿಗಳು ಒತ್ತಾಯಪೂರ್ವಕವಾಗಿ ನನ್ನನ್ನು ರಾಜನನ್ನಾಗಿ ಮಾಡಿದರು; ನನ್ನಿಚ್ಛೆಯಿಂದಲ್ಲ. ನೀನು ಕ್ಷಮಿಸು, ಉದ್ದೇಶಪೂರ್ವಕವಲ್ಲ. ನೀನೇ ದೊರೆ. ರಾಜಗೌರವಕ್ಕೆ ನೀನೇ ಅರ್ಹ. ನಾನು ಹಿಂದಿನಂತೆ ನಿನ್ನ ಸೇವಕ. ಈ ರಾಜಭಾವವೂ ನೀನಿಲ್ಲದ ಕಾರಣಕ್ಕೋಸ್ಕರವಾಗಿ, ನಿನ್ನ ಅಭಾವದಲ್ಲಿ ನಾನು ಕರ್ತವ್ಯವಾಗಿ ಸ್ವೀಕಾರ ಮಾಡಿದ್ದು ಹೊರತು, ನನ್ನಿಚ್ಛೆಯಿಂದಲ್ಲ, ಬೇರೆ ಯಾರಿಚ್ಛೆಯಿಂದಲೂ ಅಲ್ಲ. ನಿನಗೆ ಇರಬಾರದು, ನಿನಗೆ ಕೊಡಬಾರದು, ನಿನ್ನ ರಾಜ್ಯ ಅಪಹಾರ ಮಾಡಬೇಕು ಎನ್ನುವ ಕಾರಣಕ್ಕೆ ಅಲ್ಲ. ನೀನೇ ದೊರೆ. ಇದೋ ಈ ರಾಜ್ಯವನ್ನು, ಈ ಕಿಷ್ಕಿಂಧಾ ನಗರವನ್ನು ನಿನ್ನ ರಾಜ್ಯವನ್ನು ನಾನು ನಿನಗೆ ಮರಳಿ ಒಪ್ಪಿಸ್ತಿದ್ದೇನೆ. ನೋಡಿಕೊಳ್ಳುವುದಕ್ಕೋಸ್ಕರ ನಾನಿದ್ದೆ ಇಲ್ಲಿಯ ತನಕ ಅಂತ ಭಾವಿಸು ನೀನು. ಮರಳಿ ರಾಜ್ಯವ ನಿನಗೆ ಒಪ್ಪಿಸ್ತಾ ಇದ್ದೇನೆ; ಅಣ್ಣಾ, ರೋಷವನ್ನು ತಾಳಬೇಡ ನನ್ನಲ್ಲಿ. ಇದೋ ತಲೆಬಾಗಿ ಬೇಡುತ್ತೇನೆ, ಕೈಮುಗಿದು ಕೇಳುತ್ತೇನೆ. ಇನ್ನೊಮ್ಮೆ ಹೇಳುತ್ತೇನೆ ಬಲಾತ್ಕಾರವಾಗಿ ನನ್ನನ್ನು ರಾಜನನ್ನಾಗಿ ಮಾಡಿದರು. ರಾಜ್ಯವೂ ಶೂನ್ಯವಾಗಿದ್ದರೆ ಶತ್ರುಗಳ ಆಕ್ರಮಣವಾಗಬಹುದು, ಸಮೃದ್ಧವಾದ ಸಂಪತ್ತಿನ ಲೂಟಿಮಾಡುವ ಸಲುವಾಗಿ ಶತ್ರುಗಳು ಆಕ್ರಮಿಸಿದರೆ ಎನ್ನುವ ಕಾರಣಕ್ಕೆ ನನ್ನನ್ನು ಅವರು ದೊರೆಯನ್ನಾಗಿ ಅಭಿಷೇಕ ಮಾಡಿದರು ಬೇರೇ ಏನು ಇಲ್ಲ ಎಂಬುದಾಗಿ ತುಂಬು ಪ್ರೀತಿಯಿಂದ ನಾನು ಹೇಳ್ತಾ ಇದ್ರೆ ವಾಲಿ ಸ್ವೀಕರಿಸಲಿಲ್ಲ ನನ್ನ ಮಾತುಗಳನ್ನು ಬದಲಿಗೆ ಬೈದು ಭಂಗಿಸಿದ ನನ್ನನ್ನು. ಧಿಕ್ಕಾರ ನಿನಗೆ ಎಂಬುದಾಗಿ ನನಗೆ ಹೇಳಿದ. ಮಾತ್ರವಲ್ಲ; ಇನ್ನೂ ಏನೇನೋ ಹೇಳಿದ. ಅದನ್ನು ಸುಗ್ರೀವ ಬಾಯಿಬಿಟ್ಟು ಹೇಳಲಿಕ್ಕೂ ಇಷ್ಟಪಡುವುದಿಲ್ಲ. ವ್ಯಾಖ್ಯಾಕಾರರು ಏನು ಹೇಳ್ತಾರೆ ಅಂದರೆ ಅಶ್ಲೀಲವಾದ, ಅನುಚಿತವಾದ, ಸಭ್ಯರು ಆಡಬಾರದು, ಕೇಳಬಾರದು ಅಂತಹ ಎಲ್ಲ ಮಾತುಗಳನ್ನಾಡಿದ. ಸಾಲದ್ದಕ್ಕೆ ಎಲ್ಲ ರಾಜ್ಯದ ಪ್ರತಿನಿಧಿಗಳು, ಪ್ರಮುಖರನ್ನು ಕಟ್ಟಿಹಾಕಿ, ಜೈಲುಪಾಲು ಮಾಡಿ ಅವರು ಹೋದ್ರೂ ಬಿಡಿ ಉಳಿದವರನ್ನೆಲ್ಲ ಬರಮಾಡಿ ಸಭೆ ಕೂಡಿಸಿ ಆ ಇಡೀ ಸಭೆಯಲ್ಲಿ ನನ್ನೆಲ್ಲ ಆತ್ಮಿಯರ, ಆಪ್ತಮಿತ್ರರ ಮಧ್ಯದಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನು ಹೇಳಿದಾನೆ.

ಅವನ ಮಾತಿನ ಸಾರಾಂಶ ಇಷ್ಟು ಆ ಸಭೆಗೆ ವಾಲಿಯ ಭಾಷಣ ಏನೆಂದರೆ ನೋಡಿ ನಿಮಗೆಲ್ಲ ಗೊತ್ತು ರಾತ್ರಿ ಆ ಮಾಯಾವಿ ಬಂದು ಇದ್ದಕ್ಕಿದ್ದಂತೆ ಯುದ್ಧಕ್ಕೆ ನನ್ನನ್ನು ಕರೆದ ರಾಕ್ಷಸ. ಆಗ ನಾನು ಯುದ್ಧಕ್ಕೋಸ್ಕರವಾಗಿ ರಾಜಭವನದಿಂದ ಹೊರಗೆ ಬಂದೆ ನಾನು. ಸುದಾರುಣನಾದ ತಮ್ಮನು ನನ್ನನ್ನು ಹಿಂಬಾಲಿಸಿದ ಆ ಸಂದರ್ಭದಲ್ಲಿ . ನಮ್ಮಿಬ್ಬರನ್ನು ಕಂಡು ಭಯಪಟ್ಟ ಮಾಯಾವಿ ಓಡಿ ಬಿಲವನ್ನು ಸೇರಿದ. ಆಗ ನಾನು ಈ ತಮ್ಮನೆಂಬ ಕ್ರೂರಿಗೆ, ವೈರಿಗೆ ಹೇಳಿದ್ದೆ, “ನಾನು ಈ ರಾಕ್ಷಸರನ್ನು ಕೊಂದು ಮರಳಿ ಬರ್ತೇನೆ, ನೀನು ಇಲ್ಲೇ ಇರು, ದ್ವಾರದಲ್ಲಿರು. ಶತ್ರುಸಂಹಾರ ಮಾಡದೇ ಕಿಷ್ಕಿಂಧೆಗೆ ಬರುವ ಶಕ್ತಿ ಇಲ್ಲ. ಸಾಧ್ಯವೇ ಇಲ್ಲ ನನ್ನಿಂದ. ಶತ್ರುಸಂಹಾರ ಮಾಡಿಯೇ ತೆರಳುವಂತದ್ದು ಎಂಬುದಾಗಿ ನನ್ನ ತಮ್ಮನಿಗೆ ಸುಗ್ರೀವನಿಗೆ ಹೇಳಿ ಗುಹೆಯನ್ನು ಪ್ರವೇಶ ಮಾಡಿದೆ. ಒಂದು ವರ್ಷ ಆಯ್ತು ಒಳಗೆ. ಕೊನೆಗೆ ಸಿಕ್ಕಿದ ಮಾಯಾವಿ. ನನಗೇನು ಬೇಸರಬಿಡದೇ ಹುಡುಕುತ್ತಾ ಇದ್ದೆ. ಸಿಕ್ಕಿದ್ದಾಗ ಆ ರಾಕ್ಷಸನನ್ನು ಬಂಧುಬಾಂಧವರ ಸಹಿತವಾಗಿ ಕೊಂದೆ. ಆಗ ಹರಿದ ರಕ್ತ ಪ್ರವಾಹ. ಮಾಯಾವಿ ಬಾಯಿಂದ ಹೊರಬಂದ ರಕ್ತಪ್ರವಾಹ. ಮತ್ತೂ ಅನೇಕರನ್ನು ಕೊಂದಿದ್ದಾನೆ. ರಕ್ತಪ್ರವಾಹದಿಂದ ತುಂಬಿಹೋಯ್ತು ಬಿಲ. ತುಂಬಿದ್ಯಾಕೆ ಅಂದರೆ ಹೊರಗಡೆಯಿಂದ ಕಟ್ಟಿದಾನೆ ಬಿಲದ ಬಾಯಿಯನ್ನು. ಈ ಘಟನೆಯನ್ನು ವಾಲಿಯೇನು ಹೇಳಿದನೋ ಇದಕ್ಕೂ ಸುಗ್ರೀವ ಹೇಳಿದ್ದಕ್ಕು ಯಾವ ವ್ಯತ್ಯಾಸವೂ ಇಲ್ಲ. ಕೂಗು ಕೇಳಿತು ಎಂಬುದಷ್ಟೆ ವ್ಯತ್ಯಾಸ ಮಾತ್ರ. ಮತ್ತೆಲ್ಲ ಒಂದೇ ತರ ಇತ್ತು. ಕೂಗು ಕೇಳುವುದಕ್ಕೆ ಒಬ್ಬನೆ ವಾಲಿ ಅನೇಕ ಅನೇಕ ರಾಕ್ಷಸರು ಕೂಗುವಾಗ ಹೊರಗಡೆ ಬೇರೆ ತರಹ ಕೂಗುವಾಗ ಅದು ಇದ್ದೇ ಇದೆ. ರಾಕ್ಷಸರ ಕೊಂದು ಕೆಲಸವಾಯಿತು ಎಂದು ಹೊರಬರುವ ತಯಾರಿ ಮಾಡಿದೆ. ಮಾಯಾವಿಯನ್ನು ಕೊಂದು ಹೊರಬರಲು ನೋಡಿದರೆ ಬಿಲ ಮುಚ್ಚಿದೆ. ಸುಗ್ರೀವಾ ಸುಗ್ರೀವಾ ಎಂದು ಎಷ್ಟೋ ಸಲ ಕೂಗಿ ಕರೆದೆ. ಉತ್ತರವೇ ಇಲ್ಲ!!!. ನನಗೆ ತುಂಬ ದುಃಖವಾಯಿತು. ಸರಿಸಬೇಕಾದರೆ ಸಾಕು ಸಾಕಾಯಿತು…! ಕಷ್ಟಪಟ್ಟು ಹೊರಬಂದು, ಬಂದ ದಾರಿಯಲ್ಲಿ ಮರಳಿದರೆ…., ಸಿಂಹಾಸನವನ್ನು ಹತ್ತಿ ಕೂತಿದಾನೆ ಸುಗ್ರೀವ, ನನ್ನ ರಾಜ್ಯವನ್ನು ಅಪಹರಿಸಿದಾನೆ.

ಈಗ ಗೊತ್ತಾಗಿದ್ದು, ಇವನು ಇಷ್ಟು ಕಾಲದಿಂದ ಇದಕ್ಕಾಗಿ ಕಾಯುತ್ತಿದ್ದ. ಇವನಿಗೆ ಅಣ್ಣ ಎನ್ನುವ ಭಾವನೆ ಇಲ್ಲ ನೋಡಿ…! ವಾಲಿಯ ಭಾವವೇನೆಂದರೆ ಅಣ್ಣ ಎನ್ನುವ ಭಾವವೇ ಇಲ್ಲ ಇವನಿಗೆ. ಹೀಗೊಂದು ಭಾಷಣವನ್ನು ಮಾಡಿ, ನನ್ನನ್ನು ರಾಜ್ಯದಿಂದ ಹೊರಹಾಕಿದ. ಉಟ್ಟಬಟ್ಟೆಯಲ್ಲಿ ನನ್ನನ್ನು ರಾಜ್ಯದಿಂದ ಹೊರನೂಕಿದ. ಆ ದುಷ್ಟ ನನ್ನನ್ನು ಹೊರನೂಕುವಾಗ ನನ್ನ ಪತ್ನಿಯನ್ನು ಸೆಳೆದ. ಇದರಿಂದ ಇವನ ದುಷ್ಟ ಮನಸ್ಸು ಸ್ಪಷ್ಟ. ನಾನು ಒಂಟಿಯಾಗಿ ಹೊರಬರುವಾಗ ಈ ಮೂರು ನಾಲ್ಕು ಜನ ನನ್ನನ್ನು ಹಿಂಬಾಲಿಸಿದರು. ಈ ಸಂದರ್ಭದಲ್ಲಿ ಮೆಚ್ಚುವಂತದ್ದು. ಹನುಮಂತ, ನಲ, ನೀಲ, ತಾರ ಇವರು ಹಿಂಬಾಲಿಸಿದರು. ನೀಲ ಕಪಿಗಳ ಸೇನಾಪತಿ, ನಲ ಅವನು ಕಪಿಗಳ ವಿಶ್ವಕರ್ಮ. ಬೃಹಸ್ಪತಿಯ ಮಗ ತಾರ ಅವನು ತುಂಬ ಬುದ್ಧಿವಂತ. ಜಾಂಬವಂತನನ್ನು ಆಗ ಜೈಲುಪಾಲು ಮಾಡಿದ್ದರು. ರಾಜ್ಯದಿಂದ ಹೊರಗೆ ಹಾಕಿದ ಮೇಲೂ ಅವನ ವೈರ ಮುಗಿಯಲಿಲ್ಲ. ಅವರಿವರ ಕಳುಹಿಸಿ ಯುದ್ಧ ಮಾಡಿದ. ಕೊನೆಗೆ ತಾನೇ ಬೆನ್ನಟ್ಟುಕೊಂಡು ಬಂದ, ನಾನು ಓಡಿದೆ. ಇಡೀ ಭೂಮಂಡಲವನ್ನು ನಾವು ಸುತ್ತಿದೇವೆ. ಪೂರ್ವ ಪಶ್ಚಿಮ ಉತ್ತರ ದಕ್ಷಿಣದ ಎಲ್ಲ ಕಾಡು ಪರ್ವತ ಎಲ್ಲವನ್ನೂ ನೋಡಿದ್ದೇನೆ. ಕೊನೆಗೆ ಋಷ್ಯಮೂಕವನ್ನು ಪ್ರವೇಶಿಸಿದೆವು. ರಾಜ್ಯ ಅವನದಾದರೂ ತೊಂದರೆಯಿಲ್ಲ, ಪತ್ನಿಯನ್ನು ಸೆಳೆದನಲ್ಲಾ ತುಂಬಾ ದುಃಖವಾಗಿದೆ. ಆದರೆ ವಾಲಿ ಕಾರಣಾಂತರಗಳಿಂದ ಋಷ್ಯಮೂಕ ಪರ್ವತವನ್ನು ಪ್ರವೇಶಿಸುವಂತಿಲ್ಲ. ರಾಮ ಇದು ವೈರಕಥನ. ಎರಕಹೊಯ್ದಂತೆ ಒಂದಾಗಿದ್ದೆವು ಕಟ್ಟವೈರಿಯಾಗಿದ್ದೇವೆ ಈಗ. ಸರಿಯಾಗಿ ನೋಡುವುದಿದ್ದರೆ, ಗುಪ್ತಚರರನ್ನು ಬಿಟ್ಟು ನಾನೇನೆಂಬುದನ್ನು ವಾಲಿ ನೋಡಬೇಕಿತ್ತು. ಸುಗ್ರೀವನ ಮನಸ್ಥಿತಿ ಹೇಗಿತ್ತು ಎಂದು ಗೊತ್ತಾಗ್ತಿತ್ತು. ಪತ್ನಿಯನ್ನು ಅಪಹರಿಸುವಂತದ್ದು ಅವನ ಮನಸ್ಥಿತಿಯನ್ನು ಹೇಳ್ತದೆ. ಇದನೆಲ್ಲ ಹೇಳಿ ಸುಗ್ರೀವ, ವಾಲಿಗ್ರಸ್ಥನಾದ ನನಗೆ ಅಭಯ ಕೊಡು ರಾಮಾ, ಅವನನ್ನು ನಿಗ್ರಹಿಸು, ನನ್ನನ್ನು ಅನುಗ್ರಹಿಸು ಎಂದು ಬೇಡಿಕೊಂಡನು.

ಆಗ ರಾಮನು ನಗುನಗುತ್ತಾ ಅಂದರೆ ಲೀಲಾಜಾಲವಾಗಿ ತುಂಬ ಸುಲಭವಾಗಿ ಹೇಳಿದನು, ಚಾರಿತ್ರ್ಯಹೀನನಾದ ವಾಲಿ ನನ್ನ ಕಣ್ಣಿಗೆ ಬೀಳುವವರೆಗೆ ಬದುಕಿರ್ತಾನೆ, ಮತ್ತೆ ಬದುಕುವುದಿಲ್ಲ. ಸೀತಾಪಹರಣದಲ್ಲಿ ನನಗೆ ನಿನ್ನ ಪರಿಸ್ಥಿತಿಯೇ ಇದೆ. ನಾನು ನಿನ್ನ ಕಷ್ಟವನ್ನು ಅರ್ಥಮಾಡಿಕೊಳ್ಳಬಲ್ಲೆ. ತನ್ನಂತೆ ಪರರನ್ನು ಕಾಣಬೇಕು. ಸುಗ್ರೀವಾ, ನಿನ್ನ ಈ ದುಃಖದಿಂದ ನಿನ್ನನ್ನು ದಾಟಿಸುವ ಭಾರ ನನ್ನದು. ಪತ್ನಿ ಸಿಗುತ್ತಾ ಇರುವಂತೆ, ರಾಜ್ಯವೂ ಸಿಗುತ್ತದೆ ಎಂದಾಗ ಸುಗ್ರೀವನಿಗೆ ತುಂಬ ಸಂತೋಷವಾಯಿತು. ಆದರೆ ಸ್ವಲ್ಪ ಜಿಜ್ಞಾಸೆ ಉಳಿಯಿತು. ರಾಮನ ಮಾತುಗಳನ್ನು ಗೌರವಿಸ್ತಾನೆ ಸುಗ್ರೀವ. ಸಂದರ್ಭ ಬಂದರೆ ಲೋಕಲೋಕಾಂತರಗಳನ್ನು ನಿನ್ನ ಬಾಣಗಳಿಂದ ಸುಡಬಲ್ಲೆ. ಆದರೆ ವಾಲಿಯ ವಿಷಯ ಕೇಳು, ವಾಲಿಯ ಪೌರುಷವನ್ನು ಕೇಳು. ಏನು ವಾಲಿಯ ಶಕ್ತಿ ಎಂದರೆ ಸೂರ್ಯೋದಯಕ್ಕೆ ಮುನ್ನ ಅರ್ಘ್ಯ ಕೊಡಬೇಕೆಂಬ ದೃಷ್ಟಿಯಿಂದ ಪಶ್ಚಿಮ ಸಮುದ್ರದಿಂದ ಪೂರ್ವಸಮುದ್ರಕ್ಕೆ, ಉತ್ತರ ಸಮುದ್ರದಿಂದ ದಕ್ಷಿಣ ಸಮುದ್ರಕ್ಕೆ ಲೀಲಾಯಾಸವಾಗಿ ಆಕಾಶಮಾರ್ಗವಾಗಿ ಪ್ರಯಾಣ ಮಾಡ್ತಾನೆ. ನಾಲ್ಕೂ ಸಮುದ್ರಕ್ಕೆ ಅರ್ಘ್ಯ ಕೊಡ್ತಾನೆ. ಆಯಾಸವಿಲ್ಲ. ಮಹಾಪರ್ವತಗಳನ್ನು ಏರುತ್ತಾನೆ, ಅದನ್ನು ಮುರಿದು ಆಕಾಶಕ್ಕೆಸೆದು ಹಿಡಿತಾನೆ ಚೆಂಡಿನಂತೆ. ಅಂಥಹ ಯೋಗ್ಯತೆಯವನು. ಬಲಿಷ್ಠ ವೃಕ್ಷಗಳನ್ನು ಮುರಿದುಹಾಕಿದಾನೆ ತನ್ನ ಸಾಮರ್ಥ್ಯ ಪ್ರದರ್ಶನಕ್ಕಾಗಿ. ಇನ್ನೊಂದು ಕಥೆ ಹೇಳಿದರೆ ನಿಂಗೆ ಅವನ ಸಾಮರ್ಥ್ಯ ತಿಳಿಯುವುದು ಎಂದು ಕಥೆಯನಾರಂಭಿಸಿದನು ಸುಗ್ರೀವ.

ಯಾರ ಕಥೆ ಎಂದರೆ ಮಾಯಾವಿಯ ಅಪ್ಪ ದುಂದುಭಿಯದು. ಅವನ ಆಕಾರ ಕೋಣದ ಆಕಾರ. ಕೈಲಾಸ ಪರ್ವತದಷ್ಟು ಎತ್ತರ. ಸಾವಿರ ಆನೆ ಬಲ ಅವನಿಗೆ. ಅವನಿಗೆ ಯುದ್ಧದ ತೀಟೆ. ವರದಾನವಿತ್ತು ಅವನಿಗೆ. ಸಮುದ್ರರಾಜನನ್ನು ಯುದ್ಧಕ್ಕೆ ಕರೀತಾನೆ. ಸಮುದ್ರ ಬೆದರಿದನು. ಸಮುದ್ರ ವಿನೀತನಾಗಿ ಹೇಳಿದನು, ನನ್ನ ಹತ್ರ ಯುದ್ಧ ಸಾಧ್ಯವಿಲ್ಲ. ನಿನ್ನ ಜೊತೆ ಯಾರು ಯುದ್ಧ ಮಾಡಬಹುದು ಅಂತ ಹೇಳ್ತೇನೆ. ಅವರಲ್ಲಿ ಬೇಕಾದರೆ ಯುದ್ಧ ಮಾಡು. ಅವನು ಶೈಲರಾಜ, ಮಹಾರಣ್ಯದಲ್ಲಿರುವ ಶಂಕರನ ಮಾವ. ಹಿಮವಂತ, ನಿನಗೆ ಯುದ್ಧದಲ್ಲಿ ಸಮಬಲದ ಯುದ್ಧ ಮಾಡುವಂತಾದರೆ, ಅವನು ಕೊಡಬಲ್ಲ. ಎಂದಾಗ ದುಂದುಭಿಯು ಹೇಡಿ ನೀನು ಎಂದೆಲ್ಲ ಸಮುದ್ರನಿಗೆ ಬೈದು, ತಿರಸ್ಕರಿಸಿ ನೇರವಾಗಿ ಹಿಮಾಲಯವನ್ನು ಸೇರಿದನು ದುಂದುಭಿ. ದೊಡ್ಡ ದೊಡ್ಡ ಹಿಮಬಂಡೆಗಳನ್ನು ಕಿತ್ತು ಕಿತ್ತು ಬಿಸಾಡಿದನು. ಆಗ ಪುರುಷಾಕೃತಿ ತಾಳಿದನು ತಂಪಾದ ಹಿಮಾಲಯ, ಯಾಕೋ ನನ್ನ ಮೇಲೆ ಈ ಪರಿ..! ನನಗೆ ಯುದ್ಧವೆಲ್ಲ ಗೊತ್ತಿಲ್ಲ, ನನಗೆ ತಪಸ್ಸು ಗೊತ್ತಿದೆ. ಆಗ ದುಂದುಭಿ, ನೀನು ಯುದ್ಧದಲ್ಲಿ ಅಸಮರ್ಥ, ಅಲ್ಲವೋ ನೀನು ನನ್ನನ್ನು ನೋಡಿ ಹೆದರ್ತಾ ಇದೀಯೆ. ಬಿಡು, ಯಾರು ನನಗೆ ಯುದ್ಧಸಮಾನರು ಹೇಳು ಎಂದನು ಅಸುರ. ಹಿಮಾಲಯ ಹೇಳಿದನು ವಾಲಿ ಸಮರ್ಥ ನಿನಗೆ. ಎಂದಾಗ ಕಿಷ್ಕಿಂಧೆಗೆ ಬಂದನು ದುಂದುಭಿ. ಬಂದು ಶಬ್ದ ಮಾಡಿದನು. ಭೂಮಿ ನಡುಗುವಂತೆ ಘರ್ಜಿಸಿದನು. ಗೊರಸಿನಿಂದ ಭೂಮಿಯನ್ನು ಬಗೆದನಂತೆ, ಕೊಂಬುಗಳಿಂದ ಕಿಷ್ಕಿಂಧೆಯ ದ್ವಾರವನ್ನು ಬಗೆದನಂತೆ. ಆಗ ವಾಲಿ ಹೊರಬಂದ, ಜೊತೆಯಲ್ಲಿ ಸ್ತ್ರೀಯರು ಬಂದರು. ಆಗ ವಾಲಿ ಯಾಕೋ ನಗರದ್ವಾರವನ್ನು ನಿರೋದಿಸಿ ಬೊಬ್ಬೆ ಹಾಕ್ತಾ ಇದೀಯಾ? ನೀನು ಬಲಶಾಲಿ ಎಂದು ಗೊತ್ತಿದೆ. ಆದರೆ ಪ್ರಾಣವನ್ನು ಉಳಿಸಿಕೊ ಎಂದನು. ಆಗ ದುಂದುಭಿ ಯುದ್ಧಕೊಡು ನೀನೆಂತ ಬಲಶಾಲಿ ಎಂದು ಗೊತ್ತಾಗುವುದು. ಬಂದದ್ದು ರಾತ್ರಿಯಲ್ಲಿ. ಬೆಳಗಾಗಲಿ ಅಲ್ಲಿಯವರೆಗೆ ಕಾಮ ಭೋಗಗಳನ್ನು ಅನುಭವಿಸು. ಉತ್ತರಾಧಿಕಾರಿಯನ್ನೂ ನೇಮಕ ಮಾಡಿಕೊ. ವಾಪಸ್ ಹೋಗುವ ಪ್ರಶ್ನೆಯಿಲ್ಲ. ಯುದ್ಧಕ್ಕೆ ಬಂದಮೇಲೆ ತಿರುಗಿ ಹೋಗಲಾರೆ. ಧರ್ಮಶಾಸ್ತ್ರ ಹೇಳ್ತಾನೆ ದುಂದುಭಿ, ಮತ್ತನಾದವನನ್ನು ಕೊಲ್ಲಬಾರದು. ನಿದ್ರೆ ಅಮಲಿನಲ್ಲಿರುವವನನ್ನು ಕೊಲ್ಲಬಾರದು. ಅದಕ್ಕಾಗಿ ನಾನು ಕಾಯ್ತೇನೆ ಎಂದನು ದುಂದುಭಿ.

ಆಗ ವಾಲಿ ಹೇಳಿದನು, ನನಗೆ ನಿದ್ದೆ ಅಮಲು, ಮಧ್ಯದ ಅಮಲು ಎಂದು ಯುದ್ಧ ಬಿಡೋದು ಬೇಡ. ನಿಜವಾಗಿ ನಿನಗೆ ಸಾಮರ್ಥ್ಯ ಇದ್ದರೆ ಬಾ ಯುದ್ಧಕ್ಕೆ. ಈ ಅಮಲೆಲ್ಲ ಬೇಕು ಯುದ್ಧಕ್ಕೆ. ವೀರಪಾನವದು….! ಬಾ ಯುದ್ಧಕ್ಕೆ ಎಂದು ಹೇಳಿ ಇಂದ್ರ ಕೊಟ್ಟ ಕಾಂಚನ ಮಾಲೆಯನ್ನು ಧರಿಸಿ, ವಾಲಿ ತಾನೇ ಮೊದಲಾದನು ಯುದ್ಧಕ್ಕೆ. ಬೆಟ್ಟದಂಥಹ ಕೋಣದ ಕೋರೆಯನ್ನು ಗರಗರನೆ ತಿರುಗಿಸಿ ನೆಲಕ್ಕೆ ಕುಕ್ಕಿದನು ವಾಲಿ. ಹಾಗೆ ಮಾಡಿ ಸಿಂಹನಾದ ಮಾಡಿದ ವಾಲಿ. ದುಂದುಭಿಯ ಕಿವಿಯಿಂದ ರಕ್ತಬಂತು. ಇಬ್ಬರೂ ಜಯಾಕಾಂಕ್ಷಿಗಳಾಗಿ ಯುದ್ಧ ಮಾಡಿದರು. ವಾಲಿಯ ಯುದ್ಧವೆಂದರೇನು ತಿವಿತಾ ಇದ್ದ, ಕಾಲಿಂದ ಒದಿತಾ ಇದ್ದ. ಮರ ಬಂಡೆಗಳನ್ನು ಕಿತ್ತು ಬಡಿತಾ ಇದ್ದ. ಇದು ವಾಲಿಯುದ್ಧ. ಯುದ್ಧ ನಡೆದಂತೆ ನಡೆದಂತೆ ವಾಲಿಯ ಕೈಮೇಲೇರಿತು. ಪ್ರಾಣಾಂತಕ ಯುದ್ಧವಾಯಿತು. ಮತ್ತೆ ಗರಗರನೆ ತಿರುಗಿಸಿ ವಾಲಿ, ದುಂದುಭಿಯನ್ನು ಕೊಂದನು. ಸತ್ತ ಮೇಲೂ ದುಂದುಭಿಯ ಶವವನ್ನು ಮೇಲಕ್ಕೆತ್ತಿ ವೇಗದಿಂದ ಎಸೆದಾಗ ಒಂದು ಯೋಜನ ದೂರ ಹೋಗಿ ಬಿತ್ತು. ಮತಂಗ ಮುನಿಯ ಆಶ್ರಮದಲ್ಲಿ ಬಿತ್ತು ಕೋಣ. ಆ ರಕ್ತಬಿಂದುಗಳು ಮತಂಗ ಮುನಿಗಳ ಮೇಲೆ ಬಿದ್ದವು. ಮತಂಗರೆಂದರೆ ದಂತಕಥೆ, ಆ ಪರಿಸರಕ್ಕೆ ದೇವರವರು. ಯಾರಿವನು ದುರಾತ್ಮಾಕ? ನನ್ನ ಮೇಲೆ ರಕ್ತ ಚೆಲ್ಲುತಾನಾ ದುಷ್ಟ ಎಂದು ಹೇಳಿ ಹೊರಬಂದಾಗ, ದೊಡ್ಡ ಕೋಣದ ಮುಖವನ್ನು ನೋಡಿದರು. ಕಣ್ಮುಚ್ಚಿ ಎಲ್ಲವನ್ನೂ ನೋಡಿದಾಗ ವಾಲಿ ಎಂದು ಅರಿತರು. ಜೀವಿತಾಂತಕವಾದ ಶಾಪವನ್ನು ನೀಡಿದರು ಮತಂಗಮುನಿಗಳು. ಆ ಶಾಪದ ಕಾರಣದಿಂದಲೇ ರಾಮಾಯಣ ಮುಂದೆ ನಡೆದದ್ದು. ಆ ಶಾಪದ ಪರಿಣಾಮವು ವಾಲಿಯ ಪತನದಲ್ಲಿ ಮುಗಿಯುವದು.

ಆ ಕಥೆಯೇನೆಂಬುದನ್ನು ಮುಂದಿನ ಕಥೆಯಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments