ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಕಿಷ್ಕಿಂಧೆಯ ಮಳೆಗಾಲದಲ್ಲಿ ಸೂರ್ಯ ಹೇಗೂ ಮರೆಯಾಗಿದ್ದ. ಮೋಡಗಳ ಹಿಂದೆ, ಎಲ್ಲಾ ಊರಿನ ಮಳೆಗಾಲದಲ್ಲಿ ಆಗುವಂತೆ ಕಿಷ್ಕಿಂಧೆಯಲ್ಲಿ ಸೂರ್ಯ ಮರೆಯಾಗಿದ್ದ. ಸೂರ್ಯಪುತ್ರ ಸುಗ್ರೀವನೂ ಮರೆಯಾಗಿದ್ದ. ಅಂತಃಪುರದಲ್ಲಿ ಆತ ಭೋಗ-ವಿಲಾಸಗಳ ನಡುವಿನಲ್ಲಿ ಕಳೆದೇ ಹೋಗಿದ್ದ. ಮಳೆಗಾಲ ಮುಗಿದಿದೆ. ದೀಪಾವಳಿ – ಕಾರ್ತಿಕ ಮಾಸ ಬಂದಿದೆ. ಚಳಿಗಾಲ, ಶರದೃತು ಪ್ರಾರಂಭವಾಗಿದೆ. ಸೂರ್ಯೋದಯವಾಯಿತು. ಆದರೆ ಸೂರ್ಯಪುತ್ರ ಮಾತ್ರ ಹೊರಗೆ ಬರಲೇ ಇಲ್ಲ.

ಅಂದು ಮಳೆಗಾಲದ ಆರಂಭದಲ್ಲಿ ಬಂದು ಪಟ್ಟಾಭಿಷೇಕವಾಯಿತು ಎಂದು ಗುಹೆ ಒಳಗೆ ಹೋದ ಸುಗ್ರೀವ ಮರಳಿ ರಾಮನನ್ನು ನೋಡಲಿಕ್ಕೂ ಬರಲಿಲ್ಲ. ಈ ಮಧ್ಯೆ ಅವನೇ ಬರಬೇಕಿತ್ತು; ಅವನ ಸರಿಯಾದ ಪ್ರತಿನಿಧಿಗಳಾದರೂ ಆಗಾಗ ಬರ್ತಾ ಇರಬೇಕಾಗಿತ್ತು. ಆದರೆ ಯಾವುದಕ್ಕೂ ಸುಗ್ರೀವನಿಗೆ ಮೈಮೇಲೆ ಎಚ್ಚರವೇ ಇರಲಿಲ್ಲ. ಮಳೆಗಾಲವಿಡೀ ಸುಗ್ರೀವ ಬರಲಿಲ್ಲ ಅಂತ ಬೇಸರ ಮಾಡ್ಕೊಳ್ಳಲಿಲ್ಲ ರಾಮ ಲಕ್ಷ್ಮಣರು. ಇರಲಿ ಪಾಪ, ಸುಖ ಅನುಭವಿಸಲಿ ಅವನು ಎನ್ನುವ ಭಾವದಲ್ಲಿಯೇ ಇದ್ದರು. ಈಗ ಮಳೆಗಾಲ ಮುಗಿದಿದೆ, ಸುಗ್ರೀವ ಸುಖವಾಗಿದ್ದ ಅಂತ ರಾಮನೇನೂ ಸುಖವಾಗಿರಲಿಲ್ಲ, ಮುಖ್ಯವಾದ ಕಾರ್ಯವೇ ಸುರುವಾಗಿಲ್ಲ. ಇನ್ನೂ, ಸೀತಾನ್ವೇಷಣೆ ಆಗಬೇಕು, ಸೀತೆಯಿರುವಲ್ಲಿಗೆ ಪ್ರಯಾಣ, ಸೇನಾಸಮೇತನಾಗಿ ರಾಮ ಹೋಗಬೇಕು, ಅಲ್ಲಿ ಘೋರಯುದ್ಧ ನಡೀಬೇಕು, ಮರಳಿ ಸೀತೆಯನ್ನು ಗೆದ್ದುಕೊಂಡು ಬರಬೇಕು. ಶುರುವೇ ಆಗಿಲ್ಲ ಇನ್ನೂ. ಹಾಗಾಗಿ ಶೋಕಾಭಿಪೀಡಿತನಾದ ರಾಮನು ಮಳೆಗಾಲ ಕಳೆದು ಒಂದು ದಿನ ಗಗನವನ್ನು ಅವಲೋಕಿಸ್ತಾನೆ.

ಗಗನ ಬಿಳುಪಾಗಿದೆ, ನಿರ್ಮಲವಾದ ಚಂದ್ರಮಂಡಲದ ಉದಯವಾಗ್ತಾ ಇದೆ. ಶರತ್ಕಾಲದ ರಾತ್ರಿಗಳು ಬೆಳದಿಂಗಳಿನಿಂದ ಕೂಡಿದೆ. ಇದೆಲ್ಲ ನೋಡಿದಾಗ ರಾಮನು ನೊಂದನು. ಯಾಕಂದ್ರೆ, ಸೀತೆಯೂ ಕಳೆದಿದ್ದಾಳೆ, ಕಾಲವೂ ಕಳೀತಾ ಇದೆ. ಸೀತೆ ಕಳೆದಿದ್ದಾದರೂ ಕೈಯಲ್ಲಿಲ್ಲ. ಆದರೆ ಕೈಯ್ಯಲ್ಲಿರುವ ಕಾಲವೂ ಕಳೆದು ಹೋಗ್ತಾ ಇದೆ. ಈಗ ನಾಲ್ಕು ತಿಂಗಳು ಕಳೆದಿದ್ದು ಕೂಡಾ ಸಣ್ಣ ವಿಷಯವಾ? ಎಷ್ಟು ದುಃಖದಲ್ಲಿ, ಎಂಥಾ ಉತ್ಕಟತೆಯಲ್ಲಿ ರಾಮನು ಕಳೆದಿರಬಹುದು! ನಾಲ್ಕು ತಿಂಗಳಲ್ಲಿ ಏನೂ ಆಗಬಹುದಲ್ಲ? ಇಂತಹ ಪರಿಸ್ಥಿತಿಯಲ್ಲಿ ಆ ನಾಲ್ಕು ತಿಂಗಳು ಹೇಗೆ ಜೀವವನ್ನು ಬಾಯಲ್ಲಿಟ್ಟುಕೊಂಡು ಕಳೆದ ಎಂಬುದೇ ದೊಡ್ಡ ಪ್ರಶ್ನೆ ಅದು. ಹೀಗೆ ಇಷ್ಟು ಗಂಭೀರ ಪರಿಸ್ಥಿತಿ ಇರುವಾಗ ಸುಗ್ರೀವ ಕಾಮವೃತ್ತನಾಗಿದ್ದಾನೆ. ಮನಬಂದಂತೆ ನಡತೆ. ಅತ್ಯಂತ ವ್ಯಥಿತನಾದನು ರಾಮ. ಮನಸ್ಸಿಗೆ ಮತ್ತೆ ಮತ್ತೆ ಸೀತೆಯದೂ, ಕಳೆದು ಹೋದ ನಾಲ್ಕು ತಿಂಗಳದೇ ಚಿಂತೆ.

ಚಾತಕ ಪಕ್ಷಿಯಂತೆ ಸೀತೆಗಾಗಿ ವಿಲಪಿಸುತ್ತಾ ಕಾಯುತ್ತಿರುವ ಅಣ್ಣನ ತಡೆಯಲಾರದ ದುಃಖವನ್ನು ಕಂಡ ತಮ್ಮ ಲಕ್ಷ್ಮಣನಿಗೂ ದುಃಖವಾಯಿತು. ಆದರೆ ಎಂದಿನಂತೆ ಸಂತೈಸುತ್ತಾ ಹೇಳ್ತಾನೆ, ‘ಹೇ ಅನುವಂಶನಾಥನೇ, ನಿನ್ನೊಡತಿ ಸೀತೆಯನ್ನು ಇನ್ನಾರೂ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಸೀತೆಯನ್ನು ಕದ್ದೊಯ್ದವನು ಸೀತೆಯೆಂಬ ಅಗ್ನಿಜ್ವಾಲೆಯನ್ನು ನುಂಗಿದ ಮಾತ್ರಕ್ಕೆ ಅದು ಅವನನ್ನು ಸುಟ್ಟೀತು ಹೊರತು ಸೀತೆ ಅವನಿಗೆ ದಕ್ಕಲಾರಳು’ ಎಂದು. ಹೀಗೆ ಸಮಾಧಾನ ಮಾಡುವಾಗ ರಾಮನು ಲಕ್ಷ್ಮಣನಿಗೆ, ‘ಅದೆಲ್ಲ ಸರಿ ಲಕ್ಷ್ಮಣ, ಆದರೆ ಕಾರ್ಯವಾಗಬೇಕು ತಾನೇ? ನೋಡು, ನಾವಿನ್ನೂ ಕೆಲಸಾರಂಭ ಮಾಡಿಲ್ಲ. ಇಂದ್ರ ಮಳೆ ಸುರಿಸಿ, ವಸುಂಧರೆಯನ್ನು ತಂಪಾಗಿಸಿ, ಸಸ್ಯಗಳಲ್ಲಿ ಹಸಿರೇರಿಸಿ ತನ್ನ ಕರ್ತವ್ಯವನ್ನು ಪೂರ್ತಿಗೊಳಿಸಿ ಸ್ವಸ್ಥನಾಗಿ ಕುಳಿತಿದ್ದಾನೆ. ಮೋಡಗಳು ಮಳೆ‌ ಸುರಿಸಿ, ಜಗತ್ತನ್ನೇ ಶ್ಯಾಮಲಗೊಳಿಸಿ, ಬಳಲಿ ಮದವಿಳಿದ ಆನೆಗಳಂತೆ ತಮ್ಮ ವೇಗವನ್ನು ಕಳೆದುಕೊಂಡು ಶಾಂತವಾಗಿ ಕುಳಿತಿದ್ದಾವೆ. ಮಹಾವೇಗದ, ಗಿರಿ ಮಲ್ಲಿಗೆಯ ಪರಿಮಳದ ಮಳೆಗಾಳಿಗಳು, ಆನೆಗಳು, ನವಿಲುಗಳು, ಝರಿಗಳ ಸದ್ದಡಗಿದೆ. ಬೆಳದಿಂಗಳ ಲೇಪನ ಮಾಡಿದಂತೆ ಬೆಟ್ಟಗಳು ಶೋಭಿಸ್ತಾ ಇದ್ದಾವೆ. ಶರತ್ಕಾಲವು ಪ್ರಾರಂಭವಾಗಿದೆ.

ಏಳೆಲೆ ಬಾಳೆಗಳಲ್ಲಿ, ನಕ್ಷತ್ರ-ಸೂರ್ಯ-ಚಂದ್ರರ ಕಾಂತಿಗಳಲ್ಲಿ, ಮದವೇರಿದ ಆನೆಗಳಲ್ಲಿ ಶರತ್ಕಾಲವು ತನ್ನ ಇರುವನ್ನು ತೋರಿಸಿದೆ. ಆಕಾಶಕ್ಕೆ ಕತ್ತಿಯ ಅಲುಗಿನ ಬಣ್ಣ, ಮೋಡಗಳಿಲ್ಲ ಗಗನದಲ್ಲಿ, ನದಿಗಳು ಕೃಶವಾಗಿದ್ದಾವೆ‌. ಮತ್ತೆ ತಣ್ಣನೆಯ ಗಾಳಿ ಬೀಸಲಿಕ್ಕೆ ಪ್ರಾರಂಭವಾಗಿದೆ. ಎಲ್ಲಿಯೂ ಹಗಲಿನಲ್ಲಿ ಕತ್ತಲೆಯ ಸುಳಿವಿಲ್ಲ. ಬಂತು ಶರತ್ಕಾಲ. ಇನ್ನು ಸೂರ್ಯನ ಬಿಸಿಲು ಬಿದ್ದು, ಕೆಸರಡಗಿ, ಬಹುದಿನಗಳ‌ ಬಳಿಕ ಧೂಳೆದ್ದಿದೆ. ಇನ್ನೀಗ ರಾಜರುಗಳು ಸೇನಾನಿಗಳ ಜತೆಗೆ ಅನ್ಯಾನ್ಯ ವೈರಿಗಳ ಮೇಲೆ ದಂಡಯಾತ್ರೆಗೆ ಹೋಗಲು ಆರಂಭಿಸುವ ಕಾಲವಿದು. ನಾನೂ ಹೋಗಬೇಕಿತ್ತು. ನಾನೇನು ಮಾಡ್ತಾ ಇದ್ದೇನೆ? ಶರತ್ಕಾಲದ ರಾತ್ರಿಯ ವರ್ಣನೆ ಮಾಡ್ತಾನೆ ರಾಮ. ಭೂಮಿ-ಆಕಾಶದಲ್ಲಿರುವ ಎಲ್ಲವೂ ಶರತ್ಕಾಲವನ್ನು ನೆನಪಿಸ್ತಾ ಇದ್ದಾವೆ. ಆದರೆ ಸುಗ್ರೀವನಿಗೆ ಇದು ಯಾವುದೂ ಗೊತ್ತೇ ಆಗಲಿಲ್ಲ.

ರಾಮ ಹೇಳ್ತಾನೆ, ‘ಎಲ್ಲಪ್ಪಾ ಸುಗ್ರೀವ? ಕಾಣ್ತಾ ಇಲ್ವಲ್ಲ.. ಹೋಗಲಿ, ಅವನು ಕಾಣದಿದ್ದರೂ ಚಿಂತೆಯಿಲ್ಲ. ಅವನ ಕಾರ್ಯವಾದರೂ ಕಾಣಬೇಕಲ್ಲ! ಸೀತಾ ವಿರಹದ ಶೋಕದಿಂದ ಅಭಿಭೂತನಾಗಿ ನಾಲ್ಕು ತಿಂಗಳುಗಳನ್ನು ಶತವರ್ಷದಂತೆ ಎಷ್ಟು ಕಷ್ಟದಲ್ಲಿ ಕಳೆದೆ? ಒಂದು ಅನುಕಂಪವಾದರೂ ಬರಬೇಕಲ್ಲ? ಓಹೋ, ಸುಗ್ರೀವ ಏಕೆ ನನ್ನನ್ನು ಉಪೇಕ್ಷಿಸಿದ? ಒಂದು : ನಾನು ಅನಾಥ, ಅನಾಥನ ವಿಷಯದಲ್ಲಿ ಏನು ಮಾಡಿದರೂ ನಡೆಯುತ್ತದೆ ಅಂತ. ರಾಜ್ಯ ಕೈಯಲ್ಲಿಲ್ಲ – ಎರಡನೇ ಕಾರಣ. ಘೋರಶತ್ರು ರಾವಣನ ಆಕ್ರಮಣಕ್ಕೆ ಒಳಗಾಗಿದ್ದೇನೆ ನಾನು. ದೈನ್ಯದಲ್ಲಿದ್ದೇನೆ, ಧೀರನಾಗಿಲ್ಲ. ಮನೆಯೂ ಕೂಡ ದೂರದಲ್ಲಿದೆ. ಪ್ರೇಮಭಾವದಿಂದ ಪರವಶನಾಗಿ ಜಗತ್ತನ್ನು ಮರೆತಿದ್ದೇನೆ ನಾನು. ಇದೆಲ್ಲ ಕಾರಣಗಳು ಮತ್ತು ನನ್ನನ್ನೇ ಆಶ್ರಯಿಸಿದ್ದಾನೆ ಎಂಬ ಕಾರಣದಿಂದ ದುರಾತ್ಮ ಸುಗ್ರೀವ ನನ್ನನ್ನು ಉಪೇಕ್ಷಿಸಿದ, ಅವಮಾನ ಪಡಿಸಿದ’. ಕೋಪ ಬರ್ತಾ ಇದೆ ರಾಮನಿಗೆ.

ನನ್ನ ಮತ್ತು ಸುಗ್ರೀವನ ಮಧ್ಯೆ ಕಾಲದ ಲೆಕ್ಕ ಆಗಿತ್ತು ತಾನೇ? ನಾನು ಕಿಷ್ಕಿಂಧೆಯ ಗುಹೆಯ ಬಾಗಿಲನ್ನು ಬಿಟ್ಟು ಬರುವಾಗ ನಾಲ್ಕು ತಿಂಗಳ ಕಾಲ ವಿಶ್ರಾಂತಿ, ಕಳೆಯುತ್ತಿದ್ದಂತೆಯೇ ಸುಗ್ರೀವ ಕಾರ್ಯತತ್ಪರನಾಗಬೇಕು ಎಂದು ಒಪ್ಪಂದವನ್ನು ನನ್ನೊಡನೆ ಮಾಡಿಕೊಂಡು ತನ್ನ ಕಾರ್ಯ ಸಾಧನೆಯಾದ ಮೇಲೆ ಆ ದುರ್ಮತಿಯು ಸಮಯ ಕಳೆದಿದ್ದನ್ನು ಅರ್ಥ ಮಾಡಿಕೊಳ್ತಾ ಇಲ್ಲ. ಹೋಗು ಲಕ್ಷ್ಮಣ, ಕಿಷ್ಕಿಂಧೆಗೆ ಹೋಗು, ಆ ವಾನರ ನಾಯಕನಿಗೆ ಹೇಳು, ಮೂರ್ಖನಾಗಿದ್ದಾನೆ ಅವನು. ಬುದ್ಧಿ ಇದ್ದರೆ ಯಾರೂ ಈ ತರಹ ಮಾಡುವುದಿಲ್ಲ. ಚಿಲ್ಲರೆ ಸುಖದಲ್ಲಿ ಮುಳುಗಿದ್ದಾನೆ. ಯಾರೋ ನಮಗೆ ಒಳ್ಳೆಯದು ಮಾಡಿದರೆ ಅವರಿಗೆ ನಾವು ಮಾಡಲು ಸಾಧ್ಯ ಇರುವ ಒಳ್ಳೆಯ ಪ್ರತ್ಯುಪಕಾರವನ್ನು ಮಾಡಿದಾಗ ಬರುವ ತೃಪ್ತಿಯೇ ಜೀವನದ ಸುಖ. ಇಂತಹ ಒಳ್ಳೊಳ್ಳೆ ಕಾರ್ಯಗಳನ್ನು ಮಾಡಿದಾಗ ಬರುವ ತೃಪ್ತಿಯ ಮುಂದೆ ಯಾವುದಿದೆ? ಕಾಮ್ಯ ಸುಖದಲ್ಲಿ ಸಕ್ತನಾದ ಸುಗ್ರೀವನಿಗೆ ಈ ನನ್ನ ಮಾತುಗಳನ್ನು ಹೇಳು: ” ಯಾರಾದರೂ ಬಂದು ನಮ್ಮ ಮುಂದೆ ನಿಂತು ‘ಈ ಕೆಲಸ ಆಗಬೇಕು’ ಅಂತ ಕೇಳಿದರೆ, ಅದು ಧರ್ಮಕಾರ್ಯವೇ ಹೌದಾದರೆ, ನಾವು ಮಾಡಿಕೊಡಬೇಕು. ಅದರಲ್ಲಿಯೂ ನಮಗೆ ಅವರಿಂದ ಮೊದಲು ಉಪಕಾರವಾಗಿದೆ ಅಂತಾದರೆ ಮಾಡಿಕೊಡಲೇಬೇಕು. ಮಾಡಿಕೊಡದಿದ್ದರೆ ಅವನು ಪುರುಷಾಧಮ” ಇದೊಂದು ಮಾತು‌.

ಇನ್ನೊಂದು, “ಒಳಿತಾಗಲಿ, ಕೆಡುಕಾಗಲಿ, ಒಂದು ಮಾತನ್ನು ಕೊಟ್ಟ ಮೇಲೆ ಮಾತಿಗೆ ನಿಲ್ಲಬೇಕು. ಈಗ ನಮಗೆ ಒಬ್ಬನಿಂದ ಉಪಕಾರವಾಗಿ ನಾವು ಉಪಕಾರ ಮಾಡದಿದ್ದರೆ, ಅಂಥವರು ಸತ್ತ ಮೇಲೆ ಅವರ ಮಾಂಸವನ್ನು ನಾಯಿ ನರಿಗಳು ಕೂಡ ತಿನ್ನುವುದಿಲ್ಲ, ಹೇಸಿಗೆ ಪಡ್ತವೆ”. ಅವನಿಗೆ ರಾಮನ ದರ್ಶನ ಬೇಡ ಬಹುಶಃ. ರಾಮನ ಧನುರ್ದರ್ಶನವಾಗಬೇಕಿದೆ. ಅದಕ್ಕಾಗಿ ಈ ಥರ ಮಾಡ್ತಾ ಇದ್ದಾನೆ. ಹೋಗಲಿ ಬಿಡು, ಅವನೇನಾದರೂ ಮಾಡಲಿ, ನೀನೊಬ್ಬನಿದ್ದೀಯಲ್ಲ, ಸಾಕು. ನಾನು-ನೀನು ಮಾಡೋಣ ಎಂಬುದಾಗಿ ಹೇಳಿ ಮತ್ತೆ ಸುಗ್ರೀವನ ಬಗ್ಗೆ ಬೇಸರ ಪಟ್ಟುಕೊಳ್ತಾನೆ. ಯಾತಕ್ಕೆ ಇದೆಲ್ಲ ಎನ್ನುವುದನ್ನೂ ಅವನು ಯೋಚನೆ ಮಾಡಲಿಲ್ಲವಲ್ಲ! ಎಲ್ಲಿ ಮದ ಪ್ರಾರಂಭವಾಯಿತು? ಯಾತಕ್ಕೆ ನಾನವನನ್ನು ಭೇಟಿಯಾದೆ? ಆ ಮೂಲ ಒಪ್ಪಂದವೇನು? ಎನ್ನುವುದನ್ನೇ ಮರೆತನಾ ಸುಗ್ರೀವ? ಕೆಲ ಮಂತ್ರಿಗಳೊಡಗೂಡಿ ಹಗಲೆನ್ನದೆ ರಾತ್ರಿಯೆನ್ನದೆ ಪಾನವನ್ನೇ ಮಾಡ್ತಾ ಇರೋದಾ? ಕನಿಕರವನ್ನೂ ತೋರಿಸುವುದಿಲ್ಲವಾ? ಹೇಳು ಹೋಗಿ, ರೋಷಗೊಂಡ ರಾಮನ ರೂಪ ಯಾವುದೆಂದು ಎಚ್ಚರಿಸು ಸುಗ್ರೀವನಿಗೆ: ಸುಗ್ರೀವ, ವಾಲಿ ಹೋದ ದಾರಿಯು ಮುಚ್ಚಿಲ್ಲ, ಒಪ್ಪಂದಕ್ಕೆ ನಿಲ್ಲು. ವಾಲಿ ಹೋದದ್ದು ಒಬ್ಬನೇ, ನೀನು ಒಬ್ಬನೇ ಅಲ್ಲ. ನಿನ್ನ ಪಾನಮತ್ತ ಸಹಚರರ ಜೊತೆಗೆ ಕಳುಹಿಸಿಕೊಡ್ತೇನೆ ಹೇಳಿಸಿ ಕೊಳ್ಳಬಾರದಿತ್ತು ಇಷ್ಟು. ತಪ್ಪು ಮಾಡಿದ್ದಾನೆ. ಹಾಗಾಗಿ ಇಷ್ಟೆಲ್ಲ ಆಗ್ತಾ ಇದೆ.

ಆಗ ಲಕ್ಷ್ಮಣನಿಗೆ ಸಿಟ್ಟು ಬಂತು. ಸಿಡಿದೆದ್ದ ಲಕ್ಷ್ಮಣನಿಗೆ ಸುಗ್ರೀವನ ಮೇಲೆ ತಡೆಯಲಾರದ ಕೋಪ ಬಂತು. ಅವನು ಧನುಸ್ಸನ್ನು ಹಿಡಿದು ಮೇಲೆದ್ದ. ಅಣ್ಣಾ, ಸಾಕಿದು. ಎಷ್ಟು ಅಂತ ನೋಡುವುದು ನಾವಿನ್ನು? ಈ ವಾನರ ಸಾಧು ಮಾರ್ಗದಲ್ಲಿ ಹೋಗುತ್ತಿಲ್ಲ. ಇವನಲ್ಲಿ ರಾಜ್ಯಲಕ್ಷ್ಮಿ ಇರುವುದು ಕಷ್ಟ. ಚಿಲ್ಲರೆ ಸುಖಕ್ಕೋಸ್ಕರ ನಿನ್ನ ಆಶೀರ್ವಾದಕ್ಕೆ ಬೇಕಾಗಿ ಮಾಡಬೇಕಾಗಿರುವುದನ್ನು ಮಾಡುವುದಿಲ್ಲವಲ್ಲ, ಇವನು ಸತ್ತು ವಾಲಿಯನ್ನು ಸೇರುವುದೇ ಸರಿ. ರಾಜ್ಯಕ್ಕೆ ಇಂತಹವರು ಅರ್ಹರಲ್ಲ ಅಣ್ಣಾ, ಕೋಪವನ್ನು ತಡೆಯಲಾರೆ‌. ಇಂದೇ ಸುಗ್ರೀವನೆಂಬ ಸುಳ್ಳನ್ನು ಕೊಲ್ಲುವೆ. ಸೀತಾನ್ವೇಷಣೆಯನ್ನು ಅಂಗದನು ಉಳಿದ ವಾನರ ನಾಯಕರನ್ನು ಒಡಗೂಡಿ ಮಾಡಲು ಎಂಬುದಾಗಿ ಹೇಳಿ ಅಣ್ಣನ ಉತ್ತರಕ್ಕೂ ಕಾಯದೆ ಧನುಸ್ಸು ತೆಗೆದುಕೊಂಡು ಹೊರಟ.

ಆಗ, ಲಕ್ಷ್ಮಣನನ್ನು ಹಿಡಿದು ಕೂಡಿಸಿದ ರಾಮ. ಇದು ವಿಕೋಪಕ್ಕೆ ಹೋಗಿಬಿಟ್ಟಿದೆ. ಸಮಾಧಾನ ಮಾಡ್ತಾನೆ ರಾಮ, ನಿನ್ನಂತಹ ಸತ್ಪುರುಷರು ಇಂತಹ ಪಾಪದ ಕೆಲಸ ಮಾಡಬಾರದು. ಯಾರು ಉಕ್ಕುವ ಕೋಪವನ್ನು ನಿಗ್ರಹಿಸುತ್ತಾನೋ, ಅವನೇ ಆರ್ಯ. ಮಿತ್ರಹತ್ಯೆ ಆಗಿಬಿಡುತ್ತದೆ ಇಲ್ಲದಿದ್ದರೆ‌. ಅದನ್ನೆಲ್ಲ ಮಾಡಬೇಡ. ಮೊದಲಿನ ಪ್ರೀತಿಯನ್ನೇ ಮುಂದುವರೆಸು ಎನ್ನುತ್ತಾನೆ. ಇದು ರಾಮನ ವಿವೇಚನೆ! ನೀನು ಕೆಟ್ಟ ಮಾತಾಡಬೇಡ. ಸಮಾಧಾನದ ಮಾತುಗಳನ್ನೇ ಆಡು. ದುಡುಕಬೇಡ ಅಂತ ಹೇಳಿ ಅವನನ್ನು ತಣ್ಣನೆ ಮಾಡಿ, ಕಳುಹಿಸಿಕೊಟ್ಟ ರಾಮ.

ಹೊರಟ ಲಕ್ಷ್ಮಣ. ಆತ ಶುಭಮತಿ, ಪ್ರಾಜ್ಞ. ಆದರೆ ಅಣ್ಣನ ಮೇಲೆ ಇನ್ನಿಲ್ಲದ ಪ್ರೀತಿಯಾದ್ದರಿಂದ ಅಣ್ಣನಿಗೆ ಚೂರು ಹೆಚ್ಚು ಕಮ್ಮಿಯಾದರೂ ಇದ್ದಕ್ಕಿದ್ದಂತೆ ಕೋಪ ಉಕ್ಕುವುದು ಅವನಿಗೆ. ಹೋಗ್ತಾ ಹೋಗ್ತಾ ದಾರಿಯಲ್ಲಿ ಸಿಟ್ಟು ಏರಲು ಶುರುವಾಯಿತು. ಆದಷ್ಟು ಅಣ್ಣ ಹೇಳಿದಂತೆಯೇ ಮಾಡ್ತೇನೆಂದು ಆಲೋಚಿಸ್ತಾನೆ. ಆದರೆ ಅಣ್ಣನಿಗಾದ ಬೇಸರ, ಬಂದ ಸಿಟ್ಟು, ಎಲ್ಲ ಎಣಿಸಿದಾಗ ಲಕ್ಷ್ಮಣ ಬಿರುಗಾಳಿಯಾಗಿ ಹೋದ. ಕಿಷ್ಕಿಂಧೆಯಲ್ಲಿ ವಾನರ ಸೈನಿಕರು ಹೊರಗಿನಿಂದಲೇ ಗೋಚರವಾಗ್ತಾ ಇದ್ದಾರೆ. ಅವರನ್ನು ನೋಡಿದ ಲಕ್ಷ್ಮಣನಿಗೆ ರೋಷದಿಂದ ತುಟಿ ಅದುರಿತು. ಮುಂದುವರೆದ, ಭೀಕರ ಆಕಾರದ ವಾನರರು ಕಿಷ್ಕಿಂಧೆಯ ಹೊರಗೊಳಗೆ ಅಡ್ಡಾಡ್ತಾ ಇದ್ದರು. ಯಾವಾಗ ಲಕ್ಷ್ಮಣನನ್ನು ಕಂಡರೋ, ಬುದ್ಧಿಯಿಲ್ಲದ ವಾನರರು ಬಂದವರು ಯಾರೆಂದೂ ಗಮನಿಸದೆ ಆಯುಧಗಳನ್ನು ತೆಗೆದುಕೊಂಡರು. ಆಗ ಇಮ್ಮಡಿ‌ ಕ್ರೋಧ ಬಂತು ಲಕ್ಷ್ಮಣನಿಗೆ. ಕಪಿಗಳು ಬೆದರಿದರು, ಲಕ್ಷ್ಮಣ ಎಂದು ಗೊತ್ತಾಗಿ ಹೆದರಿ ದಿಕ್ಕಾಪಾಲಾಗಿ ಓಡಿಬಿಟ್ಟರು. ಲಕ್ಷ್ಮಣನು ಮೃತ್ಯುವಿನಂತೆ ಕಂಡ ಅವರಿಗೆ.

ಏತನ್ಮಧ್ಯೆ, ಕೆಲ ವಾನರ ನಾಯಕರು ನೇರವಾಗಿ ಸುಗ್ರೀವನ ಬಳಿ ಹೋಗಿ ಲಕ್ಷ್ಮಣ ಬಂದಿದ್ದನ್ನು ಹೇಳ್ತಾರೆ. ಈ ಸುಗ್ರೀವ ಸಂಪೂರ್ಣ ಭೋಗಲಂಪಟನಾಗಿ ಈ ಕಡೆಯ ಪ್ರಜ್ಞೆಯೇ ಇಲ್ಲದೆ ಮೈಮರೆರಿದ್ದಾನೆ. ಅವನು ಕೇಳಿಸಿಕೊಳ್ಳುತ್ತಲೇ ಇಲ್ಲ. ಬಾಗಿಲಿಗೆ ಮಹದಾಪತ್ತು ಬಂದಿದೆ. ಸರ್ವನಾಶವೇ ಆದೀತು. ಇಂಥಾ ಸ್ಥಿತಿಯಲ್ಲಿ ವಾನರ ನಾಯಕರು ಎಚ್ಚರಿಸ್ತಾ ಇದ್ದಾರೆ. ಗೊತ್ತೂ ಆಗಲಿಲ್ಲ ಸುಗ್ರೀವನಿಗೆ. ಆಗ ಯಾರೋ ಬುದ್ಧಿ ಇಲ್ಲದ ಸಚಿವರು ಬಂದ ಆಪತ್ತನ್ನು ತಡೆಯುವ ಸಲುವಾಗಿ ಒಂದಷ್ಟು ವಾನರ ವೀರ ಯೋಧರನ್ನು ಕಳಿಸಿಕೊಟ್ಟರಂತೆ. ಅವರೆಲ್ಲಾ ಹೊರಗೆ ಬರ್ತಾ ಇದ್ದಾರೆ. ಲಕ್ಷ್ಮಣ ನೋಡ್ತಾನೆ, ಕೆಲವೇ ಕ್ಷಣದಲ್ಲಿ ಕಿಷ್ಕಿಂಧೆಯ ಹೊರದ್ವಾರ ವಾನರಯೋಧರಿಂದ ವ್ಯಾಪ್ತವಾಗಿ ಹೋಯಿತು. ಇದರ ಅಗತ್ಯವಿರಲಿಲ್ಲ.

ಕಿಷ್ಕಿಂಧೆಯನ್ನು ಮುಚ್ಚಿಬಿಟ್ಟಿದ್ದಾರೆ ವಾನರರು. ಅಲ್ಲಿಗೆ ನಿಲ್ಲಲಿಲ್ಲ. ಕೋಟೆಯನ್ನು ದಾಟಿ, ಮುಂದೆ ಒಂದು ಕಂದಕವಿತ್ತು. ಆ ಕಂದಕವನ್ನು ದಾಟಿ ಹೊರಗೆ ಬಂದು ನಿಂತೂ ಆಯಿತು. ಲಕ್ಷ್ಮಣನಿಗೆ ಕಾಣುವಂತೆ ವಾನರರೆಲ್ಲರೂ ಬಂದು ನಿಂತಿದ್ದರು. ಲಕ್ಷ್ಮಣನು ಸುಗ್ರೀವನ ಪ್ರಮಾದ, ಅಣ್ಣನಿಗಾದ ಬೇಸರ, ಅಣ್ಣನ ಕಾರ್ಯವೂ ಕೈಗೂಡದೆ ಇರುವಂತದ್ದು ಎಲ್ಲವನ್ನು ನೆನಪುಮಾಡಿಕೊಂಡನು. ಆಗ ಲಕ್ಷ್ಮಣನಿಗೆ ಸಿಟ್ಟು ಹೆಚ್ಚಾಗಿ ದೀರ್ಘವಾದ ಬಿಸಿ ಬಿಸಿ ಉಸಿರು ಹೊರಗೆ ಬರುತ್ತಿತ್ತು. ಕಣ್ಣು ಕೋಪದಿಂದ ಹೊಗೆಯುಗುಳುವ ಬೆಂಕಿಯಂತೆ ಮತ್ತಷ್ಟು ಕೆಂಪಾಯಿತು. ಸರ್ಪಾವತಾರವಾದ ಲಕ್ಷ್ಮಣನು ಸರ್ಪದಂತೆ ಕಾಣಿಸಿಕೊಳ್ಳುತ್ತಾನೆ. ಲಕ್ಷ್ಮಣನ ಧನಸ್ಸೇ ಸರ್ಪಗಳ ಶರೀರ, ಬಾಣಗಳ ಅಲಗು ಸರ್ಪಗಳ ನಾಲಿಗೆ, ಲಕ್ಷ್ಮಣನ ತೇಜಸ್ಸೇ ವಿಷ, ಐದು ಬೆರಳು ಐದು ಹೆಡೆಯ ಸರ್ಪದಂತೆ ಗೋಚರಿಸಿದನು. ಆ ಸಮಯದಲ್ಲಿ ಅಂಗದನು ಅಲ್ಲಿಗೆ ಬಂದನು. ಅಂಗದನಿಗೆ ಲಕ್ಷ್ಮಣನು ಪ್ರಳಯಕಾಲದ ಅಗ್ನಿಯಂತೆ ಕಾಣುತ್ತಾನೆ. ಅಂಗದನಿಗೆ ಲಕ್ಷ್ಮಣನನ್ನು ನೋಡಿದಾಗ ಭಯ ಮತ್ತು ನೋವಾಯಿತು. ಎಷ್ಟು ಪ್ರೀತಿಯಿತ್ತು, ಎಂತಹ ಮಧುರ ಬಾಂಧವ್ಯವಿತ್ತು ಆದರೆ ಈಗ ಮಾತ್ರ ಲಕ್ಷ್ಮಣನು ಈ ರೂಪದಲ್ಲಿ ಪ್ರತ್ಯಕ್ಷ ಎಂದು ಅಂಗದನು ವಿಷಾದಿಸಿದನು. ಬೆದರಿ ಲಕ್ಷ್ಮಣನನ್ನು ನೋಡಿದ ಅಂಗದ ಏನು ಮಾತಾಡಲಿಲ್ಲ. ಕಣ್ಣು ಕೆಂಪಾಗೆ ಇದ್ದರೂ ಲಕ್ಷ್ಮಣನಿಗೆ ಅಂಗದನ ಮೇಲೆ ಸಿಟ್ಟು ಇರಲಿಲ್ಲ. ಲಕ್ಷ್ಮಣನಿಗೆ ಸುಗ್ರೀವನ ಮೇಲೆ ಸಿಟ್ಟು ಇತ್ತು.”ಮಗುವೇ” ಎಂದು ಅಂಗದನಿಗೆ ಸಂಬೋದಿಸಿದ ಲಕ್ಷ್ಮಣನು “ಬಾಗಿಲಿನಲ್ಲಿ ರಾಮಾನುಜ ನಿಂತಿದ್ದಾನೆ, ಸಂತಪ್ತನಾಗಿ ದ್ವಾರದಲ್ಲಿ ನಿಂತಿದ್ದಾನೆ, ನಮ್ಮ ಮೇಲೆ ಪ್ರೀತಿ ಇದ್ದರೆ ಮುಂದೆ ಏನು ಮಾಡಬೇಕೋ ಅದನ್ನು ಮಾಡಲಿ” ಇದನ್ನು ಸುಗ್ರೀವನಿಗೆ ಹೇಳಲು ಹೇಳುತ್ತಾನೆ. ಆಗ ಅಂಗದನನ್ನು ಶೋಕವು ಆವರಿಸಿತು. ತಂದೆಯ ಹಾಗೆ ಇದ್ದ ಸುಗ್ರೀವನೆಡೆಗೆ ಅಂಗದನು ಧಾವಿಸಿದನು. ಲಕ್ಷ್ಮಣನು ಬಾರೀ ಕೋಪದಲ್ಲಿ ಬಂದಿದ್ದಾನೆ ಎನ್ನುವುದನ್ನು ಸುಗ್ರೀವನಲ್ಲಿ ನಿವೇದಿಸಿದನು. ಪದ್ಧತಿಯಂತೆ ತಂದೆಗೆ, ತಾಯಿಗೆಲ್ಲ ಅಂಗದನು ನಮಸ್ಕರಿಸಿ ವಿಷಯವನ್ನು ಸರಿಯಾಗಿ ವಿವರಿಸಿದನು. ಆದರೆ ಸುಗ್ರೀವನಿಗೆ ಒಂದಾಕ್ಷರವೂ ಅರ್ಥವಾಗಲಿಲ್ಲ. ಸುಗ್ರೀವನನ್ನು ನಿದ್ರೆ ಮತ್ತು ಅಮಲು ಆವರಿಸಿತ್ತು. ಅತ್ತ ದ್ವಾರದಲ್ಲಿ (ಕಿಷ್ಕಿಂಧೆಯ ಬಾಗಿಲು) ಲಕ್ಷ್ಮಣ ಮತ್ತು ವಾನರರಿಂದ ಬಿಸಿ ಹೆಚ್ಚಾಗುತ್ತಲೇ ಇತ್ತು. ದ್ವಾರದಲ್ಲಿ ನಿಂತಿದ್ದ ಕೆಲವು ವಾನರರು ಲಕ್ಷ್ಮಣನನ್ನು ಒಲಿಸಲು ಪ್ರಯತ್ನಿಸಿದರು. ಭಯದಿಂದ ಎಲ್ಲ ವಾನರರು ಲಕ್ಷ್ಮಣನ ಮುಂದೆ ಕಿಲ-ಕಿಲ ಶಬ್ದ ಮಾಡಿ ಸಮಾಧಾನ ಮಾಡಲು ಮುಂದಾದರು. ಲಕ್ಷ್ಮಣನಿಗೆ ವಾನರರು ಮಾಡುತ್ತಿದ್ದ ಕಿಲ-ಕಿಲ ಶಬ್ದ ಕಿರಿ ಕಿರಿಯಾಯಿತು. ಆಗ ಲಕ್ಷ್ಮಣನು ಕೋಪಗೊಂಡು ಭಯಂಕರವಾದ ಸಿಂಹನಾದವನ್ನು ಮಾಡಿದನು. ಲಕ್ಷ್ಮಣನನ್ನು ಅನುಕರಣೆ ಮಾಡಿದ ವಾನರರು ಸಹ ಸಿಂಹನಾದವನ್ನು ಮಾಡಿದರು. ಬಾಗಿಲಿನಲ್ಲಿ ಲಕ್ಷ್ಮಣನ ಸಿಂಹನಾದ ಮತ್ತು ವಾನರರ ಭಯಂಕರ ಕೂಗಿನಿಂದ ದೊಡ್ಡ ಶಬ್ದವಾಯಿತು. ಆ ಶಬ್ದವನ್ನು ಕೇಳಿದ ಸುಗ್ರೀವನಿಗೆ ಎಚ್ಚರವಾಯಿತು. ಎಚ್ಚರವಾದ ಮೇಲೂ ಸುಗ್ರೀವನ ಕೆಂಪಾದ ಕಣ್ಣುಗಳು ಅಮಲಿನಿಂದ ತೇಲುತ್ತಿದ್ದವು. ಧರಿಸಿದ ಮಾಲೆ, ಅಭರಣಗಳೆಲ್ಲವೂ ಅಸ್ತವ್ಯಸ್ತವಾಗಿದ್ದವು. ಅರ್ಥ ಮತ್ತು ಧರ್ಮ ಸಚಿವರಾದ ಪ್ರಕ್ಷ ಮತ್ತು ಪ್ರಭಾವ ಅಲ್ಲಿಗೆ ಬಂದರು. ಸಚೀವರು ಅಂಗದನಿಂದ ವಿಷಯವನ್ನು ತಿಳಿದುಕೊಂಡಿದ್ದರು. ಸಚಿವರು ಸುಗ್ರೀವನಿಗೆ ಯಾವುದು ಸರಿ?.. ಯಾವುದು ಸತ್ಯ ?… ಎಂದು ತಿಳಿಹೇಳಲು ಮಾನಸಿಕವಾಗಿ ಸಿದ್ಧರಾಗಿ ಬಂದಿದ್ದರು.

ಸುಗ್ರೀವನು ಮೊದಲಿನ ಸ್ಥಿತಿಗೆ ಬಂದಾಗ ಸಚಿವರು ತಮ್ಮ ಮಾತನ್ನು ಆರಂಭಿಸಿದರು. ಸತ್ಯಸಂದರಾದ ಸಹೋದರರಾದ ರಾಮ–ಲಕ್ಷ್ಮಣರು ನಿನ್ನ ಮಿತ್ರರು, ನಿನಗೂ ಅವರಿಗೂ ಅಗ್ನಿಸಾಕ್ಷಿಯ ಸಖ್ಯವಿದೆ, ಅವರೀರ್ವರು ಅಖಂಡ ಸಾಮ್ರಾಜ್ಯಕ್ಕೆ ಅರ್ಹರಾದರೂ ನಿನಗೆ ರಾಜ್ಯವನ್ನು ಕೊಟ್ಟವರು, ಆ ಇರ್ವರಲ್ಲಿ ಲಕ್ಷ್ಮಣನು ಧನುರ್ಧಾರಿಯಾಗಿ ಬಾಗಿಲಿನಲ್ಲಿ ನಿಂತಿದ್ದಾನೆ, ನಿನಗೆ ಈಗ ಕೇಳಿದ ಗಲಾಟೆಯು ವಾನರರು ಭಯದಿಂದ ಮಾಡಿದ ಘರ್ಜನೆ ಎಂದು ಹೇಳಿದರು. ತಮ್ಮ ಮಾತನ್ನು ಮುಂದುವರೆಸಿದ ಸಚಿವರು ರಾಮನ ವಾಕ್ಯಸಾರಥಿಯಾಗಿ ಲಕ್ಷ್ಮಣನು ಇಲ್ಲಿಗೆ ಬಂದಿದ್ದಾನೆ. ತಾರೆಗು, ನಿನಗೂ, ರುಮೆಗೂ ಅತ್ಯಂತ ಪ್ರಿಯನಾಗಿರುವ ಅಂಗದ ಲಕ್ಷ್ಮಣನ ರೂಪವಾಗಿ ಒಳಗೆ ಬಂದಿರುವಂತದ್ದು, ಅಂಗದನ ಮೂಲಕ ಲಕ್ಷ್ಮಣನು ನಿನಗೆ ಕೆಲವು ಮಾತುಗಳನ್ನು ಹೇಳಿ ಕಳುಹಿದ್ದಾನೆ ಎಂದು ಸುಗ್ರೀವನಿಗೆ ಹೇಳಿದರು. ವಾನರರನ್ನು ಸುಡುವಂತೆ ಕೆಂಗಣ್ಣಿನಿಂದ ಲಕ್ಷ್ಮಣನು ಬಾಗಿಲಿನಲ್ಲಿ ನಿಂತಿದ್ದಾನೆ. ನೀನು ಪರಿವಾರ ಸಹಿತನಾಗಿ ಹೋಗಿ ನೆತ್ತಿಯನ್ನು ಲಕ್ಷ್ಮಣನ ಪಾದದಲ್ಲಿಡು ಎಂದು ಸಚಿವರು ಸುಗ್ರೀವನಿಗೆ ಹೇಳಿದರು. ಸಚಿವರಿಗೆ ಹೇಗಾದರೂ ಮಾಡಿ ಲಕ್ಷ್ಮಣನ ರೋಷವನ್ನು ತಣಿಸಬೇಕಾಗಿತ್ತು. ಪ್ರಕ್ಷ ಮತ್ತು ಪ್ರಭಾವರು ಸುಗ್ರೀವನಿಗೆ ದೊರೆಯೇ ಮಿಥ್ಯಾಪ್ರತಿಜ್ಞನಾಗಬೇಡ, ಸತ್ಯಪ್ರತಿಜ್ಞಾನಾಗು ಕೊಟ್ಟ ಮಾತನ್ನು ನಡೆಸು ಎಂದು ಹೇಳಿದರು. ಮಂತ್ರಿಗಳಾದವರು ರಾಜನಿಗೆ ಸತ್ಯವನ್ನೇ ಹೇಳಬೇಕು. ರಾಜ್ಯಕ್ಕೆ ಹಿತವಾದದ್ದನ್ನು ರಾಜನಿಗೆ ಮಂತ್ರಿಗಳಾದವರು ಹೇಳಬೇಕು.

ಸುಗ್ರೀವನು ಅಂಗದನ ಹತ್ತಿರ ಮತ್ತೊಮ್ಮೆ ವಿವರಿಸಲು ಕೇಳುತ್ತಾನೆ. ಅಂಗದನು ಸಚಿವರು ಹೇಳಿದ್ದೆಲ್ಲವನ್ನು ವಿವರಿಸಿದನು. ಆಗ ಸುಗ್ರೀವನು ತನ್ನ ಆಸನವನ್ನು ಬಿಟ್ಟು ಎದ್ದನು. ಬಹಳ ದಿನಗಳ ನಂತರ ಸುಗ್ರೀವನಿಗೆ ಸಂಯಮವು ಮನಸ್ಸಿಗೆ ಬಂತು. ಸುಗ್ರೀವನು ಮನಸ್ಸಿಲ್ಲಿನಲ್ಲಿಯೇ ಮತ್ತೆ ಆಲೋಚನೆಯನ್ನು ಮಾಡುತ್ತಾನೆ. ನಂತರ ಸುಗ್ರೀವನು ಎಲ್ಲರನ್ನು ಕರಿತು ಭಾಷಣ ಮಾಡಿದನು. ರಾಮ-ಲಕ್ಷ್ಮಣರ ಬಗ್ಗೆ ಕೆಟ್ಟ ಮಾತನ್ನು ಆಡಿಲ್ಲ. ನಾನು ಏನು ಕೆಟ್ಟದ್ದನ್ನು ಮಾಡಿಲ್ಲ. ಲಕ್ಷ್ಮಣನಿಗೆ ನನ್ನ ಮೇಲೆ ಯಾಕೆ ಸಿಟ್ಟು ಬಂತು ..? ಎಂದು ಸುಗ್ರೀವನು ಕೇಳುತ್ತಾನೆ. ತನ್ನ ಮಾತನ್ನು ಮುಂದುವರೆಸಿದ ಸುಗ್ರೀವನು ತನಗೆ ಆಗದವರು, ಶತ್ರುಗಳು ಯಾರೋ ಛಾಡಿ ಹೇಳಿರಬೇಕು ಎಂದು ಹೇಳುತ್ತಾನೆ. ನಾವೆಲ್ಲ ನ್ಯಾಯಯುತವಾದ ಚಿಂತನೆ ಮಾಡಿ ಲಕ್ಷ್ಮಣನ ಮನಸ್ಸಲ್ಲಿ ಏನಿದೆ ಎಂದು ತಿಳಿಯೋಣ, ಯಾಕೆ ಹೀಗಾಗಿದೆ ಎಂದು ತಿಳಿದುಕೊಳ್ಳಬೇಕು ಎಂದು ಸುಗ್ರೀವನು ಹೇಳುತ್ತಾನೆ. ಮಾತನಾಡುವಾಗ ಸುಗ್ರೀವನ ಮುಖದಲ್ಲಿ ಭಯವಿತ್ತು. ನನಗೆ ರಾಮ-ಲಕ್ಷ್ಮಣರಿಂದ ಭಯವಿಲ್ಲ. ಆದರೂ ಗಾಬರಿಯಾಗುತ್ತಿದೆ, ಮಿತ್ರನಿಗೆ ಕೋಪಗೊಂಡರೆ ಗಾಬರಿಯಾಗಲೇಬೇಕಲ್ಲ, ಮಿತ್ರರ ಸಂಪಾದನೆ ಬಹಳ ಸುಲಭ ಆದರೆ ಉಳಿಸಿಕೊಳ್ಳುವುದು ಭಾರಿ ಕಷ್ಟ ಎಂದು ಸುಗ್ರೀವನು ಹೇಳಿದನು. ರಾಮನು ತನಗೆ ಋಣವನ್ನು ತೀರಿಸಲಾಗದ ದೊಡ್ಡ ಉಪಕಾರವನ್ನು ಮಾಡಿದ್ದಾನೆ. ನಾನೇನು ಮಾಡಿಲ್ಲ ಎನ್ನುವುದು ಮನಸ್ಸಿನಲ್ಲಿದೆ ಎಂದು ಸುಗ್ರೀವನು ಮಂತ್ರಿಗಳ ಸಮ್ಮುಖದಲ್ಲಿ ಹೇಳಿದನು.

ಆಗ ಹನುಮಂತನು ಎದ್ದು ನಿಂತು ನೇರವಾದ ಮಾತಗಳನ್ನು ಸುಗ್ರೀವನಿಗೆ ಆಡಿದ. ಹನುಮಂತನಿಗೆ ಅವನದ್ದೇ ಆದ ನಿಶ್ಚಯಗಳಿದ್ದವು. ಯಾವುದು ಸರಿ, ಯಾವುದು ತಪ್ಪು, ಹೇಗೆ ಪ್ರಸ್ತುತಪಡಿಸಬೇಕು ಎಂಬುದರ ಬಗ್ಗೆ ಹನುಮಂತನಿಗೆ ಸ್ಪಷ್ಟತೆಯಿತ್ತು. ಸುಗ್ರೀವನಿಗೆ ಪೂರ್ತಿ ಗೊಂದಲವೇ ಇತ್ತು. ಸ್ಪಷ್ಟತೆ ಇರಲಿಲ್ಲ. ವಾನರ ಮಂತ್ರಿಗಳ ಮಧ್ಯದಲ್ಲಿ ತನ್ನ ಯುಕ್ತಿಯನ್ನು ಹನುಮಂತನು ಮಂಡಿಸಿದನು.
ರಾಮನ ಉಪಕಾರ ಸ್ಮರಣೆ ನಿನಗೆ ಇದ್ದಿದ್ದು ಆಶ್ಚರ್ಯವಾಗಲಿಲ್ಲ. ಅದು ನಿನಗೆ ಇರಬೇಕಾಗಿದ್ದು ಮತ್ತು ನೀನು ಮಾಡಬೇಕಾಗಿದ್ದು ಎಂದು ಹನುಮಂತನು ಸುಗ್ರೀವನಿಗೆ ಹೇಳಿದನು. ರಾಮನು ನಿನಗೆ ಉಪಕಾರ ಮಾಡುವಾಗ ಯಾವ ಭಾವಕ್ಕೂ ಎಡೆ ಕೊಡಲಿಲ್ಲ. ನಿನ್ನಿಂದ ಕಥೆಯನ್ನು ಕೇಳುವ ಮೊದಲೇ ಅಭಯ ಕೊಟ್ಟು, ಕಥೆ ಕೇಳಿದ ಮೇಲೆ ಕಾರ್ಯವನ್ನು ಸಾಧನೆ ಮಾಡಿ ಕೊಟ್ಟಿದ್ದಾನೆ, ಪರಾಕ್ರಮಿಯಾದ ವಾಲಿಯನ್ನು ಸಂಹರಿಸಲು ಬೇರೆ ಯಾರಿಂದಲೂ ಸಾಧ್ಯ ಇರಲಿಲ್ಲ. ರಾಮನಿಗೆ ಈಗ ಕೋಪ ಬಂದಿರಬೇಕು. ನಾವು ಈಗ ಮೈಮರೆಯುವಂತೆ ಇಲ್ಲ , ಹಾಗಂತ ದೃತಿಗೆಡಬೇಕಾಗಿಲ್ಲ. ರಾಮನಿಗೆ ಕೋಪ ಬಂದರೂ ಒಳಗೆ ಪ್ರೀತಿಯಿರುತ್ತದೆ. ನಮ್ಮನ್ನು ರಾಮನು ತಿದ್ದಬಹುದು ಹೊರತು ನಾಶ ಮಾಡುವುದಿಲ್ಲ ಎಂಬುದಾಗಿ ರಾಮನ ಸ್ವಭಾವವನ್ನು ಹನುಮಂತನು ನಿರೂಪಿಸಿದನು. ರಾಮ – ಲಕ್ಷ್ಮಣರಿಗೆ ಕೋಪ ಬಂದರೆ ಅದು ಅವರ ತಪ್ಪಲ್ಲ. ನೀನು ಪ್ರಮಾದಕ್ಕೆ ಎಡೆಕೊಟ್ಟಿದ್ದಿಯೇ, ನಿನಗೆ ಈಗ ಕಾಲದ ಪರಿವೆ ಇಲ್ಲ. ಶರತ್ ಕಾಲ ಬಂದಿದೆ, ಗಗನದಲ್ಲಿ ಮೊಡಗಳಿಲ್ಲ, ನಕ್ಷತ್ರಗಳು ನಿರ್ಮಲವಾಗಿ ಶೋಭಿಸುತ್ತಿವೆ, ದಿಕ್ಕುಗಳೆಲ್ಲ ಪ್ರಸನ್ನವಾಗಿವೆ. ನದಿ- ಸರೋವರಗಳು ತಿಳಿಯಾಗಿವೆ. ಹೇ ವಾನರ ನಾಯಕನೇ ನಮಗೆ ಕಾರ್ಯ ಕಾಲ ಪ್ರಾಪ್ತವಾಗಿದೆ. ನಿನಗೆ ಅರಿವೇ ಇಲ್ಲ, ನಿನ್ನ ಪ್ರಮಾದವನ್ನು ಕಂಡ ಲಕ್ಷ್ಮಣನು ನಿನ್ನನ್ನು ಎಚ್ಚರಿಸಲು ಬಂದಿರಬೇಕು ಎಂದು ಹನುಮಂತನು ಸುಗ್ರೀವನಿಗೆ ಹೇಳಿದನು. ರಾಮನು ತನ್ನ ಪತ್ನಿಯ ಅಪಹರಣವಾದರೂ ನಿನ್ನ ಕಾರ್ಯವನ್ನು ನೆರವೇರಿಸಿದ್ದಾನೆ. ನಾವು ರಾಮನನ್ನು ಮಾತಾಡಿಸಬೇಕಿತ್ತು ಆದರೆ ನಾವು ಮಾಡಲಿಲ್ಲ. ರಾಮನು ಕೆಡುನುಡಿಗಳನ್ನು ಆಡಿದರೂ ಈಗ ಸಹಿಸಿಕೊಳ್ಳಬೇಕು. ನಿನ್ನ ಕೈಯಿಂದ ಅಪರಾಧವಾಗಿದೆ. ನನ್ನ ಪ್ರಕಾರ ನಿನಗೆ ಅನ್ಯಮಾರ್ಗವಿಲ್ಲ, ಕೈಮುಗಿದು ಲಕ್ಷಣನನ್ನು ಸಮಾಧಾನ ಮಾಡುವುದೊಂದೆ ದಾರಿ ಎಂದು ಆಂಜನೆಯನು ಸುಗ್ರೀವನಿಗೆ ಹೇಳಿದನು. ಸಾಮಾನ್ಯವಾಗಿ ಮಂತ್ರಿಯು ರಾಜನಿಗೆ ಹೀಗೆಲ್ಲ ಮಾತನಾಡುವುದಿಲ್ಲ. ಆದರೆ ನನಗೆ ಇದು ಕರ್ತವ್ಯ ಎನಿಸಿದ್ದರಿಂದ ಮಾತಾಡುತ್ತಿದ್ದೇನೆ ಎಂದು ಹನುಮಂತನು ಹೇಳಿದನು. ದೊರೆಗೆ ಅಪರಾಧ ಮಾಡಿದ ಎಂದು ದಂಡನೆ ವಿಧಿಸಿದರೂ ನನ್ನ ನಿಶ್ಚಯವನ್ನು ನಾನು ಹೇಳುವವನೇ, ಕ್ರೂರ ವಾಕ್ಯಗಳು, ಸುಡುನುಡಿಗಳು ಬರಬಹುದು, ತಪ್ಪಾಗಿದ್ದರಿಂದ ಅದನ್ನೆಲ್ಲ ಸಹಿಸಿಕೊ ಎಂದು ಹನುಮಂತನು ಸುಗ್ರೀವನಿಗೆ ಹೇಳಿದನು. ದೇವತೆಗಳು, ಗಂಧರ್ವರು ಸಮಸ್ತ ಜಗತ್ತನ್ನು ಕಾಲಡಿಗೆ ತರುವಷ್ಟು ಸಮರ್ಥ ರಾಮ. ಅವನನ್ನು ನಾವು ಕೋಪಗೊಳಿಸಬಾರದು, ಅವನಿಗೆ ಮತ್ತೂ ಕೋಪ ಬಂದರೆ ಸಮಾಧಾನ ಮಾಡುವವರು ಯಾರು ? ರಾಮನಿಲ್ಲದಿದ್ದರೆ ನಿನಗೆ ಎಲ್ಲಿ ರಾಜ್ಯ ಸಿಗುತ್ತಿತ್ತು..? ಅದಕ್ಕಾಗಿ ಸಚಿವರು ಹೇಳಿದ ಹಾಗೆ ನೆತ್ತಿಯನ್ನು ಪಾದದಲ್ಲಿಡು ಎಂದು ಹನುಮಂತನು ಸುಗ್ರೀವನಿಗೆ ಸೂಚಿಸುತ್ತಾನೆ. ಹೇ ಕಪೀಂದ್ರನೇ , ರಾಮ ಮತ್ತು ರಾಮಾನುಜರ ಶಾಸನವನ್ನು ಮನಸ್ಸಿನಿಂದಲೂ ಅಲ್ಲಗಳೆಯುವುದು ಸರಿಯಲ್ಲ, ದೇವತೆಗಳ ತೇಜಸ್ಸಿರುವ ರಾಮನ ಮಾನುಷ್ಯಬಲವನ್ನು ಕಣ್ಣಾರೆ ಕಂಡ ನೀನು ಇನ್ನು ತಪ್ಪು ಮಾಡುವುದು ಸರಿಯಲ್ಲ, ಹೋಗಿ ಕಾಲಿಗೆ ಬಿದ್ದು ಸೇವೆಯ ಅವಕಾಶವನ್ನು ಕೇಳು ಎಂದು ಹನುಮಂತನು ಹೇಳಬೇಕಾದ್ದನ್ನು ಹೇಳಿದನು.

ಮುಂದೇನಾಯಿತು ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments