ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸುಗ್ರೀವನಿಗಿದು ಮೂರನೆಯ ಜನ್ಮ. ವಾಲಿಯೊಟ್ಟಿಗೆ ಹುಟ್ಟಿದ್ದು ಮೊದಲನೆಯ ಜನ್ಮ. ಬಳಿಕ ವಾಲಿಯ ಆಗ್ರಹಕ್ಕೆ ತುತ್ತಾಗಿ, ಕಿಷ್ಕಿಂಧೆಯಲ್ಲಿ ಸತ್ತಂತೆ ಬದುಕಿದ್ದು, ಅಂತಹವನಿಗೆ ವಾಲಿಯನ್ನು ಸಂಹಾರ ಮಾಡಿ, ರಾಮ ನೀಡಿದ್ದು ಎರಡನೇ ಜನ್ಮ. ಇದೀಗ ಮೂರನೆಯದು. ಮರಣ ಯಾವುದು ಅಂದ್ರೆ, ಮಕಾರಗಳ ಮಧ್ಯೆ ಇದ್ದದ್ದು. ಒಂದು ಬಗೆಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದ. ಯಾವಾಗ ಲಕ್ಷ್ಮಣನ ಧನುಷ್ಠೇಂಕಾರ ಆಯಿತೋ, ಸತ್ತೆ ಅಂತಲೇ ಅಂದುಕೊಂಡಿದ್ದ. ತಾರೆ ಬಂದು ಲಕ್ಷ್ಮಣನನ್ನು ಸಮಾಧಾನಿಸಿದ ಮೇಲೆ ಸುಗ್ರೀವನಿಗೆ ಮತ್ತೆ ಜೀವ ಬಂತು. ಮೂರನೆಯ ಬಾರಿ ಜನ್ಮ ಬಂತು. ಈ ಜನ್ಮ ಬಂದ ಮೇಲೆ ಸುಗ್ರೀವ ಒಂದು ಕ್ಷಣವನ್ನೂ ಕೂಡ ವ್ಯರ್ಥಮಾಡಲಿಕ್ಕೆ ಸಿದ್ಧನಿಲ್ಲ. ರಾಮಸೇವೆಗೇ ಸಾರ್ಥಕವಾಗುತ್ತದೆ.

ಮರುಕ್ಷಣದಲ್ಲಿಯೇ ಕಾರ್ಯವನ್ನಾರಂಭಿಸಿದ. ಸಚಿವರಲ್ಲೊಬ್ಬನಾದ ಹನೂಮಂತನನ್ನು ಕರೆದು, ಈಗಲೇ ಕಾರ್ಯಪ್ರವೃತ್ತನಾಗು. ಈಗಾಗಲೇ ಹಲವರು ಬಂದಿದ್ದಾರೆ, ಯಾಕೆಂದರೆ ಈಗಾಗಲೇ 15ದಿನದ ಗಡುವನ್ನು ಕೊಟ್ಟಿದ್ದ ಸುಗ್ರೀವ. ಯಾರು 15ದಿನದೊಳಗೆ ಬರಲಿಲ್ಲವೋ ಅವರಿಗೆ ವಿಚಾರಣೆಯಿಲ್ಲದೆ ಮರಣದಂಡನೆ. ಇನ್ನೂ ಬರುವವರಿದ್ದಾರೆ ಎನ್ನುವುದು ಗೊತ್ತಿದೆ ಸುಗ್ರೀವನಿಗೆ. ಯಾರಿನ್ನೂ ಬಂದಿಲ್ಲವೋ ಅವರೆಲ್ಲರನ್ನು ಬರಮಾಡಲಿಕ್ಕೆ ಅಪ್ಪಣೆಯನ್ನು ಕೊಡ್ತಾನೆ ಹನುಮಂತನಿಗೆ. ಪಂಚಶೈಲಗಳಾದ ಮಹೇಂದ್ರ, ಹಿಮಾಲಯ, ವಿಂಧ್ಯ, ಮಂದರ, ಕೈಲಾಸಪರ್ವತಗಳಲ್ಲಿರುವ ಕಪಿಗಳನ್ನು ಬರಮಾಡು. ಪಶ್ಚಿಮ ಸಮುದ್ರದ ಪರಿಸರದಲ್ಲಿ ಇರುವ ಕಪಿಗಳನ್ನು ಬರಮಾಡು. ಅಸ್ತಪರ್ವತವು ಆದಿತ್ಯಭವನ, ಅಲ್ಲಿರುವ ಕಪಿಗಳನ್ನು ಬರಮಾಡು. ಕೆಲವರು ಅಂಜನ ಪರ್ವತದಲ್ಲಿರುವರು. ಅವರು ಕಾಡಿಗೆಯ ಕಪ್ಪಿನ ಬಣ್ಣದವರು. ಹನುಮಂತನ ಊರಾದ ಮೇರುಪರ್ವತದ ಪರಿಸರದಲ್ಲಿರುವಂತಹ ವಾನರರು ಬಂಗಾರದ ಬಣ್ಣದವರು, ಅಲ್ಲಿರುವ ಎಲ್ಲರನ್ನೂ ಬರಮಾಡು. ಧೂಮ್ರ ಪರ್ವತ ಹಾಗೂ ಮಹಾಋಣಪರ್ವತದಲ್ಲಿರುವ ( ಕೆಂಪು ಬಣ್ಣದ ಕಪಿಗಳು ) ಎಲ್ಲರನ್ನೂ ಬರಮಾಡು. ಅನೇಕ ರಮಣೀಯವಾದ ವನಗಳಲ್ಲಿ ಸಂಚರಿಸುವ ಎಲ್ಲ ವಾನರರನ್ನು ಕರೆತಾ. ಇಡೀ ಭೂಮಂಡಲದಲ್ಲಿ ಇರುವ ಎಲ್ಲ ಕಪಿಗಳನ್ನು ರಾಮಸೇವೆಗೆ ಬರಮಾಡು. ಇದು ನನ್ನ ಶಾಸನ. ಈಗಾಗಲೇ ಸುಗ್ರೀವನ ದೂತರೆಲ್ಲ ಕಪಿಗಳನ್ನು ಕರೆದುಕೊಂಡು ಬರಲಿಕ್ಕೆ ಹೋದವರನ್ನು ತ್ವರೆಮಾಡಿ ಕರೆದುಕೊಂಡು ಬರಲಿಕ್ಕೆ ಇನ್ನಷ್ಟು ವಾನರದೂತರನ್ನು ಕಳುಹಿಸು. ಅದಕ್ಕೋಸ್ಕರವಾಗಿ ಮಹಾವೇಗಶಾಲಿ ಕಪಿಗಳನ್ನು ಕಳುಹಿಸು. ಕೆಲವು ಕಪಿಗಳು ಕಾಮದಲ್ಲಿ, ದೀರ್ಘಸೂತ್ರ ಅಂದರೆ ಆಮೇಲೆ ಮಾಡಿದರಾಯಿತು ಅಂತ ಆಲೋಚನೆ ಮಾಡಿದವರು ಇರಬಹುದು. ಇಂದಿನಿಂದ ಹತ್ತು ಹಗಲುಗಳಲ್ಲಿ ಕಿಷ್ಕಿಂಧೆಯಲ್ಲಿರಬೇಕು, ಇದು ವಾನರ ನಾಯಕನ ಶಾಸನ. ಸುಗ್ರೀವಾಜ್ಞೆಯಿದು. ತಪ್ಪಿದರೆ, ಮರಣಶಾಸನ ಮೃತ್ಯುದಂಡ. ಕೋಟ್ಯಂತರ ಕಪಿಗಳು ಮೋಡದಂತವರು, ಪರ್ವತದಂತವರು ಎಲ್ಲರೂ ಬರಲಿ. ವಾನರ ರಾಜನ ಮಾತನ್ನು ಕೇಳಿದ ವಾಯುಸುತನು ವಿಕ್ರಾಂತರಾದ, ಬಹುವೇಗದ ವಾನರರನ್ನು ಕಳುಹಿಸಿಕೊಟ್ಟನು. ಆಕಾಶ ಮಾರ್ಗವನ್ನು ಹಿಡಿದು ಹೊರಟರು ವಿಮಾನಗಳಂತೆ. ಸಮುದ್ರಗಳಲ್ಲಿ, ಪರ್ವತಗಳಲ್ಲಿ, ಕಾನನಗಳಲ್ಲಿ, ಸರೋವರದ ಪರಿಸರದಲ್ಲಿ ಇರುವ ವಾನರರನ್ನೆಲ್ಲ ಹುಡುಕಿದರು. ಎಲ್ಲೆಡೆಯಿಂದ ವಾನರರನ್ನು ತ್ವರೆಗೊಳಿಸಿ ಹೊರಡಿಸಿದರು ಈ ಶೀಘ್ರ ವಾನರರು.

ವಿಶ್ವದಾದ್ಯಂತ ಇರುವ ಕಪಿಗಳೆಲ್ಲ ಹೊರಟರು, ಸುಗ್ರೀವನ ಭಯಕ್ಕೊಳಗಾಗಿ. ನೋಡುನೋಡುತ್ತಿದ್ದಂತೆ ಕಪಿಗಳು ಸೇರಲಾರಂಭಿಸಿದವು. ಅಂಜನಪರ್ವತದಿಂದ ಬಂದ ಕಪಿಗಳು ಮೂರು ಕೋಟಿ!! ಅಸ್ತ ಪರ್ವತದಿಂದ 10ಕೋಟಿ! ಕೈಲಾಸಪರ್ವತದಿಂದ ಹೊರಟ ಕಪಿಗಳ ಸಂಖ್ಯೆ ಲೆಕ್ಕ ಹಾಕಲು ಸಾಧ್ಯವಿಲ್ಲ. ಹಿಮಾಲಯ ಪರಿಸರದ ಕಪಿಗಳು ಅಸಂಖ್ಯ….! ವಿಂಧ್ಯಪರ್ವತದ ಕೆಂಬಣ್ಣದ, ಭಾರೀ ಘರ್ಜನೆಯ ಕಪಿಗಳು ಕೂಡ ಅಸಂಖ್ಯ ಕೋಟಿಗಳು. ತೆಂಗಿನಕಾಯಿ ತಿಂದು ಬದುಕುವ ಕಪಿಗಳ ಸಂಖ್ಯೆ ಉಳಿದೆಲ್ಲಕ್ಕಿಂತ ಹೆಚ್ಚು. ವನಗಳಿಂದ, ಗುಹೆಗಳಿಂದ, ಸರೋವರ ತೀರದಿಂದ ಬಂದರು ಕಪಿಕೋಟಿಗಳು. ಹಿಮಾಲಯ ಪರ್ವತದ ಮಾಹೇಶ್ವರ ಯಜ್ಞದ ಅನ್ನಪ್ರವಾಹದಿಂದ ಸಂಭವಿಸಿದ ಅಮೂಲ್ಯವಾದ ಹೂ ಹಣ್ಣುಗಳನ್ನು ತಂದು ಸುಗ್ರೀವನಿಗೆ ಸಮರ್ಪಣೆ ಮಾಡಿ, ಈ ಕಾರ್ಯಕ್ಕೆ ಬಳಕೆಯಾಗಲಿ ಎಂದರು ಕೆಲ ಕಪಿಗಳು. ಎಲ್ಲೆಡೆಯಿಂದ ವಾನರರು ಬರ್ತಾ ಇದಾರೆ ಎಂದು ಕೇಳಿದಾಗ ಸುಗ್ರೀವನಿಗೆ ತುಂಬ ಸಂತಸವಾಯಿತು!

ಇದೆಲ್ಲ ಕೇಳಿ ತೃಪ್ತಿಯಾಯಿತು ಸುಗ್ರೀವನಿಗೆ, ಇದೆಲ್ಲವನ್ನೂ ಲಕ್ಷ್ಮಣನೂ ಅವಲೋಕಿಸುತ್ತಾ ಇದಾನೆ. ಒಂದು ಹಂತದ ಕೆಲಸವಾಯಿತು ಎಂದೆನಿಸುವಾಗ ಸುಗ್ರೀವನಿಗೆ ವಿನಯದಿಂದ ಲಕ್ಷ್ಮಣ ಹೀಗೆ ಹೇಳಿದನು, “ನಿನಗೆ ಸರಿ ಎನಿಸಿದರೆ, ಕಿಷ್ಕಿಂಧೆಯಿಂದ ರಾಮನಿರುವಲ್ಲಿಗೆ ಹೊರಡೋಣ.” ಸುಗ್ರಿವನು “ಹೊರಡೋಣ, ನಿನ್ನಪ್ಪಣೆಯನ್ನು ಮೀರುವ ಪ್ರಶ್ನೆಯೇ ಇಲ್ಲ” ಎಂದನು, ಹೊರಟಾಯಿತು. ಇನ್ನೇನಿದ್ದರೂ ರಾಮಕಾರ್ಯ ಎಂದು ಸುಗ್ರೀವನು ತನ್ನ ಸತಿಯರೆಲ್ಲರನ್ನೂ ವಿಸರ್ಜಿಸಿದನು. ಸತಿಯರೆಲ್ಲರೂ ಬಂದು ನಿಂತರು. ಸುಗ್ರೀವನಿಗೆ ಚಿನ್ನದ ಪಲ್ಲಕ್ಕಿಯು ಸಿದ್ಧವಾಯಿತು. ಲಕ್ಷ್ಮಣನನ್ನು ಮೊದಲು ಕೂರಿಸಿದನು ಸುಗ್ರೀವ. ನಂತರ ಸುಗ್ರೀವನು ಕುಳಿತನು, ಕಿಷ್ಕಿಂಧೆಯಿಂದ ಹೊರಟಿತು ಮೆರವಣಿಗೆ. ಅನುಪಮವಾದ ರಾಜ್ಯಲಕ್ಷ್ಮಿಯಿಂದ ಕೂಡಿರತಕ್ಕಂಥ ಸುಗ್ರೀವನು ರಾಮನೆಡೆಗೆ ಹೊರಟನು. ಬಹಳ ಮಂದಿ ವಾನರರು ಸುತ್ತುವರಿದಿದ್ದಾರೆ.

ರಾಮನಿರುವಲ್ಲಿಗೆ ತಲುಪಿದರು. ಸುಗ್ರೀವ ಪಲ್ಲಕ್ಕಿಯನ್ನು ಇಳಿದ, ರಾಮನ ಕಂಡ ಸುಗ್ರೀವನು ತಲೆಬಾಗಿ ಕೈಮುಗಿದನು. ಮೊಟ್ಟಮೊದಲು ಸುಗ್ರೀವ ಮಾಡಿದ್ದೇನೆಂದರೆ ರಾಮನಿಗೆ ಕೈಮುಗಿದು ತಲೆಬಾಗಿದನು. ಸುಗ್ರೀವ ಮಾಡುತ್ತಿದ್ದದ್ದನ್ನು ನೋಡುತ್ತಿದಂತೆ ಅಲ್ಲಿ ಬಂದಿರುವ ಕಪಿಗಳು ಕೂಡ ಹಾಗೇ ಮಾಡಿದರು. ಇವನೇನು ಮಾಡಿದನೋ ಅವರೆಲ್ಲರೂ ಹಾಗೇ ಮಾಡಿದರು. ರಾಮ ಹೀಗೇ ಅವಲೋಕನ ಮಾಡ್ತಾನೆ. ಪರ್ವತದ ತುದಿಯಲ್ಲಿ ರಾಮ ಕುಳಿತಿದ್ದಾನೆ. ಪಾದದ ಬಳಿ ಸುಗ್ರೀವನಿದ್ದಾನೆ. ಪರ್ವತದ ಸುತ್ತಮುತ್ತ ಅಸಂಖ್ಯ ಕಪಿಗಳು! ಹೀಗೆ ನೋಡಿದರೆ ಜೇನು ಸರೋವರದಂತೆ. ಅವರು ಮುಗಿದ ಕೈಗಳು ಕಮಲದ ಮೊಗ್ಗಿನಂತೆ. ವಾನರರ ಅಸಂಖ್ಯ ಸಂಖ್ಯೆಯನ್ನು ಕಂಡಾಗ ರಾಮನಿಗೆ ಸುಗ್ರೀವನಲ್ಲಿ ಅತಿಶಯವಾದ ಪ್ರೀತಿ ಬಂತು. ಯಾಕೆ ಸುಗ್ರೀವ ಕೂಡಲೇ ಹೊರಡಲಿಲ್ಲ ಅಂದ್ರೆ ಸೇನಾಸಹಿತನಾಗಿ ಹೋದರೆ ರಾಮನಿಗೆ ಖುಷಿಯಾಗಬದೆಂಬ ಸುಗ್ರೀವನ ನಂಬಿಕೆಯಿತ್ತು, ಅದು ಸತ್ಯವಾಯಿತು. ಕೈಮುಗಿದು ನಿಂತ ವಾನರಕೋಟಿಯನ್ನು ಕಂಡ ರಾಮನಿಗೆ ಸಮಾಧಾನವಾಯಿತು, ಪ್ರೀತಿ ಉಕ್ಕಿಬಂತು. ಸುಗ್ರೀವನು ರಾಮನ ಪಾದಕ್ಕೆರಗಿದ. ಆತನನ್ನು ಮೇಲಕ್ಕೆತ್ತಿ ರಾಮ ಪ್ರೀತಿಯಿಂದ ಆಲಿಂಗನವನ್ನು ಕೊಟ್ಟನು. ಅಭಿಮಾನವಿತ್ತು, ಕುಳಿತುಕೋ ಎಂದನು ರಾಮ. ಆಗ ಮಣ್ಣಿನಲ್ಲಿ, ನೆಲದಲ್ಲಿ ಕುಳಿತನು ಸುಗ್ರೀವ. ಆಗ ರಾಮ ಹಿತವಚನವೊಂದನ್ನು ಹೇಳಿದನು, “ದೊರೆಯಾದವನು ಅಥವಾ ಯಾರಾದರೂ ಸರಿ, ಬದುಕಿನಲ್ಲಿ ಸಮತೋಲನವನ್ನು ಹೊಂದಿರಬೇಕು. ಧರ್ಮ ಅರ್ಥ ಕಾಮ ಮೂರಕ್ಕೂ ಕೂಡ ಅದರದರ ಕಾಲವನ್ನು ಕೊಡಬೇಕು. ಯಾರು ಅದರದರ ಕಾಲದಲ್ಲಿ ಧರ್ಮನ್ನಾಗಲಿ, ಅರ್ಥವನ್ನಾಗಲಿ, ಕಾಮವನ್ನಾಗಲಿ ಸೇವಿಸ್ತಾನೋ, ಸರಿಯಾಗಿ ವಿಭಜನೆ ಮಾಡಿಕೊಂಡು ಅನುಸರಿಸುತ್ತಾರೋ ಅದು ತುಂಬ ಒಳ್ಳೆಯದು. ಪ್ರಮಾಣಬದ್ಧವಾಗಿ ಸಮತೋಲನವಾಗಿರಬೇಕು. ಯಾರು ಧರ್ಮವನ್ನು, ಅರ್ಥವನ್ನೂ ತ್ಯಜಿಸಿ ಅಪೇಕ್ಷೆಯ, ಕಾಮದ ಹಿಂದೆ ಓಡ್ತಾನೋ, ಅವನಿಗೆ ಒಂದು ದಿನ ಎಚ್ಚರಾಗ್ತದೆ, ಆದರೆ ಕಾಲ ಮುಂದುವರಿದಿರುತ್ತದೆ. ಅಂತವನು ಬಿದ್ದ ಮೇಲೆ ಎಚ್ಚರವಾಗ್ತಾನೆ. ಎರಡನೆ ರಾಜನೀತಿ- ರಾಜನಾದವನು ಶತ್ರುಗಳ ಸಂಹಾರ, ಮಿತ್ರರ ಸಂಗ್ರಹ ಮಾಡಬೇಕು. ಇದೆರಡನ್ನು ಪಾಲಿಸಿದರೆ ಧರ್ಮಬರುತ್ತದೆ. ಇದು ಕರ್ತವ್ಯಕಾಲ ಬಂದಿದೆ, ನಿನ್ನ ಮಂತ್ರಿಗಳೊಡಗೂಡಿ ಮುಂದಿನ ಕಾರ್ಯ ಮಾಡು” ಎಂದನು ರಾಮ.

ಆಗ ಸುಗ್ರೀವ, “ಪ್ರಭು, ಕಳೆದುಕೊಂಡ ಸಂಪತ್ತು ಮತ್ತೆ ಸಿಕ್ಕಿದೆ. ಶಾಶ್ವತವಾಗಿ ಕಳೆದುಕೊಂಡ ಕಪಿರಾಜ್ಯ ನಿನ್ನ ದಯೆಯಿಂದ ನನಗೆ ಮರಳಿ ಸಿಕ್ಕಿದೆ. ನನಗೆ ನಿನ್ನ ಮತ್ತು ಲಕ್ಷ್ಮಣನ ಪ್ರೀತಿ ಬೇಕು. ಉಪಕಾರ ಮಾಡಿದವನಿಗೆ ಪ್ರತ್ಯುಪಕಾರವನ್ನು ಮಾಡಲಿಕ್ಕೆ ಯಾರು ಮುಂದಾಗುವುದಿಲ್ಲವೋ, ಅಂಥವನು ಪುರುಷಾಧಮ. ಆ ಸಾಲಲ್ಲಿ ಸೇರುವುದಕ್ಕೆ ನನಗಿಷ್ಟವಿಲ್ಲ ಪ್ರಭು. ನಿನ್ನಿಷ್ಟದಂತೆ ನಿನ್ನ ದಾರಿಯಲ್ಲಿ ನಾನು ಸೇವೆ ಮಾಡ್ತೇನೆ ಪ್ರಭು, ಇದು ಬರೀ ಬಾಯಿ ಮಾತಲ್ಲ. ಎಲ್ಲ ವಾನರರು ಬಂದಿದಾರೆ. ಭೂಮಂಡಲವ್ಯಾಪ್ತಿ ವಾನರರು, ಕರಡಿಗಳೂ ಬಂದಿದಾರೆ. ಮತ್ತೆ ಗೋಪುಚ್ಛರು ಅಂದರೆ, ಗೋವಿನ ಬಾಲವಿರುವ ಕಪಿಗಳು. ಇವರಿಗೆ ಎಲ್ಲ ಕಾಡುಗಳೂ ಗೊತ್ತು. ಸೀತಾನ್ವೇಷಣೆಗೆ ಒದಗಿ ಬರುವರು. ಸುಮ್ಮನೆ ಮರ್ಕಟ ಜಾತಿಯವರಲ್ಲ. ಇವರೆಲ್ಲ ಗಂಧರ್ವಪುತ್ರರು, ಅಪ್ಸರೆಯ ಪುತ್ರರು, ಯಕ್ಷಪುತ್ರರೆಲ್ಲ ಇದ್ದಾರೆ, ದಿವ್ಯಶಕ್ತಿಗಳಿಂದ ಹುಟ್ಟಿ ಬಂದವರು ಇವರೆಲ್ಲ. ಇದು ಸ್ವಲ್ಪ ಅಷ್ಟೇ, ಇನ್ನೂ ಕೋಟ್ಯಂತರ ಕಪಿಗಳು ಬರ್ತಾ ಇದಾರೆ.

ಭಾರತೀಯರ ಸಂಖ್ಯಾಗಣನೆ ನೋಡಿ ಎಲ್ಲಿಯವರೆಗೆ ಇದೆ ಎಂದು. ಹತ್ತು ಸಾವಿರಕ್ಕೆ ಅಯುತ ಅಂತ ಹೆಸರು. ಹತ್ತು ಅಯುತಕ್ಕೆ ಒಂದು ಲಕ್ಷ. ಹತ್ತು ಲಕ್ಷಕ್ಕೆ ಒಂದು ಪ್ರಯುತ. ಹತ್ತು ಪ್ರಯುತಕ್ಕೆ ಒಂದು ಕೋಟಿ. ಹತ್ತು ಕೋಟಿಗೆ ಒಂದು ಅರ್ಬುದ, ಹತ್ತು ಅರ್ಬುದಕ್ಕೆ ಒಂದು ಅಬ್ಜ. ಹತ್ತು ಅಬ್ಜಕ್ಕೆ ಖರ್ವ, ಹತ್ತು ಖರ್ವಕ್ಕೆ ಒಂದು ನಿಖರ್ವ, ಹತ್ತು ನಿಖರ್ವಕ್ಕೆ ಒಂದು ಮಹಾಪದ್ಮ. ಹತ್ತು ಮಹಾಪದ್ಮಕ್ಕೆ ಒಂದು ಶಂಖ, ಹತ್ತು ಶಂಖಕ್ಕೆ ಒಂದು ಜರದಿ, ಹತ್ತು ಜರದಿಗೆ ಒಂದು ಅಂತ್ಯ, ಹತ್ತು ಅಂತ್ಯಕ್ಕೆ ಒಂದು ಮಧ್ಯ. ಹತ್ತು ಮಧ್ಯಕ್ಕೆ ಒಂದು ಪದಾರ್ತ ಎಂಬುದಾಗಿ. ಈ ಸಂಖ್ಯೆಗೆ ಒಂದರ ಮುಂದೆ ಹದಿನೇಳು ಸೊನ್ನೆಯಿದೆ.

ಕಲ್ಪನಾತೀತ ಸಂಖ್ಯೆಯಲ್ಲಿ ಕಪಿಗಳು ಬಂದರು, ಬರ್ತಾ ಇದಾರೆ. ಅಸಂಖ್ಯ ಕಪಿಗಳು ಸೀತಾನ್ವೇಷಣೆಯಲ್ಲಿ ರಾಮಕಾರ್ಯವನ್ನು ಮಾಡ್ತಾರೆ. ರಾಮನ ಮುಖ ಅರಳಿತು, ಸುಮ್ಮನೆ ಕುಳಿತಿಲ್ಲ ಸುಗ್ರೀವ. ಕಾರ್ಯಶೀಲನಾಗಿದ್ದಾನೆ ಎಂದಾಗ ತುಂಬ ಸಂತೋಷವಾಯಿತು ರಾಮನಿಗೆ. ಬಳಿಕ ಸುಗ್ರೀವನನ್ನು ಇನ್ನೊಮ್ಮೆ ಆಲಿಂಗಿಸಿ ಹೇಳಿದನು ರಾಮ, ” ಏನೋ ಆಶ್ಚರ್ಯ ಸುಗ್ರೀವ. ನಿನಗಿದು ಸಹಜ. ಸೂರ್ಯನು ಬೆಳಕ ಕೊಟ್ಟರೆ ಸಹಜ, ಚಂದ್ರನು ಬೆಳದಿಂಗಳ ಪ್ರಭೆಯ ಕೊಡುವುದು ಸಹಜ. ನೀನು ಮಿತ್ರನಾದ ನನಗೆ ಸಹಾಯ ಮಾಡುವುದು ಅಷ್ಟೇ ಸಹಜ. ನಿನ್ನಂಥಹ ಸತ್ಪುರುಷರು ಬೇಕು. ನಾ ಬಲ್ಲೆ ನೀನೇನು ಎನ್ನುವುದನ್ನು. ನಿನ್ನನ್ನು ಮುಂದಿಟ್ಟುಕೊಂಡು ನಾನು ಗೆಲ್ತೇನೆ ಶತ್ರುಗಳನ್ನು. ಬಾ ಒದಗು ಈ ಕಾರ್ಯಕ್ಕೆ ” ಎಂದನು ರಾಮ. ರಾವಣನ ಕುರಿತು, “ಸಾಯುವ ಸಲುವಾಗಿ ಸೀತೆಯನ್ನು ಕದ್ದೊಯ್ದನು ರಾವಣ, ಅವನನ್ನು ಸುಮ್ಮನೆ ಬಿಡ್ತೇನಾ ನಾನು..!? ರಾವಣನು ವಂಚನೆಯಿಂದ ಸೀತೆಯನ್ನು ಕದ್ದೊಯ್ದ. ಹೀಗೆನ್ನುವಾಗ ಧೂಳೆದ್ದಿತು. ಇದ್ದಕ್ಕಿದ್ದಂತೆ ಕತ್ತಲಾದಂತೆ ಧೂಳೆದ್ದಿತು. ತಣ್ಣಗೆ ಭೂಮಿಯು ಒಮ್ಮೆ ಕಂಪಿಸಿತು. ಅದೇನೆಂದರೆ ಕಲ್ಪನಾತೀತವಾಗಿ ಕಪಿಗಳು ಬರ್ತಾ ಇದಾರೆ ಬರ್ತಾ ಇದಾರೆ ಬರ್ತಾಇದಾರೆ……. ಎಲ್ಲಾ ದಿಕ್ಕುಗಳಿಂದ ಕಪಿಗಳು ಬಂದು ಮುತ್ತುತ್ತಾ ಇದ್ದಾರೆ ಪ್ರಸ್ರವಣ ಪರ್ವತವನ್ನು. ತೀಕ್ಷ್ಣ ಹಲ್ಲುಗಳುಳ್ಳ, ಅಸದೃಶವಾದ ಕಪಿಗಳು ಸಂಖ್ಯೆಯನ್ನು ಮೀರಿ ಬಂದು ಸೇರಿದರು, ಭೂಮಿಯೇ ಕಾಣದಷ್ಟು ಕಪಿಗಳು… ಕೋಟ್ಯಂತರ ಕಪಿಗಳು.. ಕಾಮರೂಪಿಗಳು. ಬಂದವರೆಲ್ಲ ನಾಯಕರು, ಸೇವಕರಿನ್ನೂ ಬರುವವರಿದ್ದಾರೆ. ಕೆಲವರು ನಾದೇಯರು ಅಂದರೆ ನದಿವಾಸಿಗಳು, ಕೆಲವರು ಪರ್ವತೇಯರು ಅಂದರೆ ಗಿರಿವಾಸಿಗಳು, ಇನ್ನು ಕೆಲವರು ಸಾಮುದ್ರರು ಅಂದರೆ ಸಮುದ್ರವಾಸಿಗಳು. ಬಂದಿದಾರೆ ಎಲ್ಲರೂ ಕೂಡ.

ಮೇರು ಪರ್ವತದಿಂದ ಬಂದವರು ಬಾಲಸೂರ್ಯನ ಬಣ್ಣ, ಪದ್ಮಕೇಸರ ಬಣ್ಣ, ಶಶಿಗೌರ ಬಣ್ಣ, ಪಕ್ಕಾ ಬಣ್ಣ. ಶತಗುಲಿ ಎಂಬ ವಾನರನು ಕಲ್ಪನಾತೀತ ಸಂಖ್ಯೆಯಲ್ಲಿ ಕಪಿಗಳನ್ನು ಕರೆತಂದಿದಾನೆ. ಬಳಿಕ ಸುಷೇಣನು, ರುಮೆಯ ತಂದೆ, ಹನುಮನ ತಂದೆ ಅವರೂ ಕೋಟ್ಯಾನುಕೋಟಿ ಕಪಿಗಳನ್ನು ಕರೆತಂದರು. ಮೈಯೆಲ್ಲ ಶುದ್ಧ ಚಿನ್ನ, ಮುಖ ಕೇಸರ ಹನುಮಂತದ್ದು ಹಾಗೂ ಆತನ ತಂದೆಯೂ ಹಾಗೆ. ಗೋಪುಚ್ಛರ ದೊರೆ ಗವಾಕ್ಷನು, ಕರಡಿಗಳ ದೊರೆಯಾದ, ಜಾಂಬವಂತನ ಅಣ್ಣನಾದ ದೂಮ್ರನು ಅಸಂಖ್ಯ ಕಪಿಗಳನ್ನು ಕರೆದುಕೊಂಡು ಬಂದನು. ಶತ್ರುಘಾಸಿ ದೂಮ್ರನು ಕೋಟ್ಯಾನುಕೋಟಿ ಕರಡಿಗಳನ್ನು ಕರೆತಂದನು. ಫಲಸನು ಜೊತೆಯಲ್ಲಿ ಮೂರುಕೋಟಿ ಕಪಿಗಳನ್ನು ಕರೆತಂದ, ನೀಲನು ಕಪಿಸೇನಾಪತಿಯೂ ಬಂದ. ಇವನ ಸ್ವಂತ ಗುಂಪು ಹತ್ತುಕೋಟಿ ಕಪಿಗಳು. ಗವಯನು ಐದು ಕೋಟಿ ಕಪಿಗಳನ್ನು ಕರೆತಂದನು. ದರೀಮುಖ ಬಂದನು. ಅಶ್ವಿನೀ ದೇವತೆಗಳ ಮಕ್ಕಳಾದ ಮೈಂದ ಮತ್ತು ದಿವಿದರು, ಗಜನೆಂಬ ವಾನರ ಬಂದನು. ಆಮೇಲೆ ಜಾಂಬವಂತ ಬಂದನು. ಹತ್ತುಕೋಟಿ ಸ್ವಂತದ ಗುಂಪನ್ನು ಕರೆತಂದನು. ಗಂಧಮಾದನ ಬಂದನು. ಆಮೇಲೆ ಅಂಗದ ಬಂದನು. ಅಷ್ಟೂ ಸಂಖ್ಯೆಯ ವಾನರರು! ತಂದೆಗೆ ಸಮನಾದ ಪರಾಕ್ರಮವುಳ್ಳವರು. ಐದುಕೋಟಿ ಕಪಿಗಳ ಜೊತೆ ದೂರದಲ್ಲಿ ಕಂಡನು ತಾರನೆಂಬ ಕಪಿ. ಇಂದ್ರಜಾನ ಹನ್ನೊಂದು ಕೋಟಿ ಕಪಿನಾಯಕ. ನಂತರ ರಂಭ, ಕೆಂಬಣ್ಣದವನು. ದುರ್ಮುಖ ಇವನದು ಎರಡು ಕೋಟಿ. ಆಮೇಲೆ ಹನುಮಂತ. ಒಬ್ಬೊಬ್ಬನು ಕೈಲಾಸಪರ್ವತರೂಪ. ಅಸಂಖ್ಯ ಕಪಿಗಳನ್ನ ಕರೆತಂದ. ನಂತರ ನಲ. ಕಪಿಗಳ ವಿಶ್ವಕರ್ಮ. ಹತ್ತುಕೋಟಿ ವಾನರರೊಂದಿಗೆ ದಧಿಮುಖ ಬಂದ. ಶರಭ, ಕುಮುದ, ವಹ್ನಿ, ರಮ್ಹಾ ಎನ್ನುವ ವಾನರ. ಹೀಗೆ ಎಲ್ಲರೂ ಭುವಿಯನ್ನು ಮುಚ್ಚಿದರು. ಅಸಂಖ್ಯ ಸಂಖ್ಯೆ..! ಸೂರ್ಯನನ್ನು ಮೋಡ ಸುತ್ತುವ ಹಾಗೆ ಸುಗ್ರೀವನನ್ನು ಸುತ್ತಿದರು. ಕೂಗಿದರು, ತಾವಿದ್ದಲ್ಲಿಂದ ತಮ್ಮ ಹಾಜರಿಯನ್ನಿತ್ತರು ಮಹಾನಾಯಕರು.

ಸುಗ್ರೀವನು ಎಲ್ಲ ವಾನರರನ್ನು ರಾಮನಿಗೆ ಸಮರ್ಪಿಸಿದನು. ಸುಗ್ರೀವ ಸೇನೆಯ ಅಧಿಪತಿಗಳಿಗೆ ಹೇಳಿದನು, ನಿಮ್ಮ ನಿಮ್ಮ ಗಣದ ಕಪಿಗಳನ್ನು ಲೆಕ್ಕಹಾಕಿ, ನೆಲೆನಿಲ್ಲಿರಿ ಎಂದನು. ರಾಮನಿಗೆ ಇಂತೆಂದನು, ನನ್ನವರೆಲ್ಲ ಬಂದರು. ದೈತ್ಯದಾನವರಿಗೆ ಏನೇನು ಕಡಿಮೆಯಿಲ್ಲ. ಕಾರ್ಯಸಮರ್ಥ ಬಲಾಢ್ಯ ವಾನರರು, ಭೂಮಿ, ಆಕಾಶ ನೀರಿನಲ್ಲಿ ಸಂಚರಿಸುವವರು, ಆಜ್ಞಾಪಾಲಕರು. ಹೇ ಪ್ರಭುವೇ, ನಿನ್ನಿಚ್ಛೆಯ ನೆರವೇರಿಸಲು ಇವರು ಸಮರ್ಥರು. ನಾವೆಲ್ಲ ನಿನ್ನ ಸೇವಕರು. ಮುಂದೇನು ಎನ್ನುವುದನ್ನು ನಿನ್ನ ಬಾಯಲ್ಲಿ ಕೇಳುವೆ, ಎಂದಾಗ ರಾಮನು ಮತ್ತೆ ಆಲಂಗಿಸಿದನು. ಸೀತೆ ಬದುಕಿರುವಳೇ ತಿಳಿಯಿರಿ, ರಾವಣನ ನೆಲೆಯನ್ನು ತಿಳಿಯಿರಿ ಎಂದನು ರಾಮ. ಇದು ನಿನ್ನ ಕಾರ್ಯ, ನೀನೇ ಆಜ್ಞೆ ಮಾಡು ಎಂದನು ರಾಮ. ಆಗ ಸುಗ್ರೀವ ವಿನತನನ್ನು ಕರೆದು, ನೋಡು ಪೂರ್ವದಿಕ್ಕು ನಿನ್ನದು ಎಂದನು. ಚಂದ್ರಸೂರ್ಯರ ಮಕ್ಕಳು ನಿನ್ನೊಡನೆ. ಇಡೀ ಪೂರ್ವದಿಕ್ಕಿನ ಪರಿಚಯವನ್ನು ಕೊಟ್ಟನು. ಊರು, ಪರ್ವತ, ನದಿ, ಸರೋವರಗಳ ಕುರಿತು ಹೇಳಿದನು ಸುಗ್ರೀವ.

ಮುಂದೇನಾಯಿತು ಎನ್ನುವುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments