ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ನಾಯಕನಾದವನು ಗುರಿಯನ್ನು ಮತ್ತು ಗುರಿ ಸೇರುವ ದಾರಿಯನ್ನು ಮೊದಲೇ ತಿಳಿದಿರಬೇಕು. ಮಾತ್ರವಲ್ಲ, ತನ್ನ ಸೇವಕರಿಗೆ, ಹಿಂಬಾಲಕರಿಗೆ ಆ ದಾರಿಯನ್ನು ತೋರವಂಥವನಾಗಿರಬೇಕು. ಸುಗ್ರೀವನು ಆ ನಾಯಕಗುಣಕ್ಕೆ ಉದಾಹರಣೆ ಇಂದು ಪ್ರಸ್ತುತವಾಗಲಿರುವಂಥ ಕಥಾನಕ. ತನ್ನ ಬಳಿ ಇರುವ ವಿಶಾಲ ಸೈನ್ಯವನ್ನು ನಾಲ್ಕು ಭಾಗವಾಗಿ ಅವನು ವಿಂಗಡಿಸುತ್ತಾನೆ. ಒಂದು ಗುಂಪು ಪೂರ್ವಕ್ಕೆ, ಒಂದು ಗುಂಪು ದಕ್ಷಿಣಕ್ಕೆ, ಮತ್ತೊಂದು ಪಶ್ಚಿಮಕ್ಕೆ, ಇನ್ನೊಂದು ಉತ್ತರಕ್ಕೆ ಎನ್ನುವುದಾಗಿ 4 ಗುಂಪುಗಳನ್ನು ಮಾಡಿ ನಾಲ್ಕು ದಿಕ್ಕಿಗೆ ಅವರನ್ನು ಕಳುಹಿಸಿಕೊಡುತ್ತಾನೆ. ಆದರೆ ಅವರು ಹೊರಡುವ ಮುನ್ನವೇ ಅವರ ಇಡೀ ಮಾರ್ಗವನ್ನು, ಅವರು ಯಾವ ಯಾವ ನಗರಗಳನ್ನು, ಗ್ರಾಮಗಳನ್ನು ನೋಡಬೇಕು, ಯಾವ್ಯಾವ ಪರ್ವತಗಳು ಬರುತ್ತವೆ, ಯಾವ ಕಾನನಗಳು, ಮರುಭೂಮಿಗಳು ಬರುತ್ತವೆ ಅಥವಾ ಏನೆಲ್ಲಾ ಬರಬಹುದು, ಕಾಣಬಹುದು ಅವೆಲ್ಲದರ ಪಥದರ್ಶನವನ್ನು ಮೊದಲೇ ಸುಗ್ರೀವ ಮಾಡಿರುತ್ತಾನೆ. ಆ ಸಂದರ್ಭ ಇಂದಿರುವಂಥದ್ದು. ಅವನು ರಾಮ-ಲಕ್ಷ್ಮಣರ ಸಾನಿಧ್ಯದಲ್ಲಿ ವಿನತನೆಂಬ ನಾಯಕನನ್ನು ಕರೆದು ಆದೇಶ ಮಾಡುತ್ತಾನೆ. ಸೂರ್ಯಚಂದ್ರರ ಮಕ್ಕಳೊಡನೆ ನೀನು ಪೂರ್ವದಿಕ್ಕಿಗೆ ಪ್ರಯಾಣವನ್ನು ಮಾಡು. ನಿನ್ನ ಜೊತೆಗೆ 1,00,000 ವಾನರ ವೀರರ ಸೈನ್ಯವಿದೆ. ಅವರೊಡನೆ ಕೂಡಿಕೊಂಡು ನೀನು ಪೂರ್ವದಿಕ್ಕನ್ನು ಅನ್ವೇಷಣೆ ಮಾಡಬೇಕು. ಪೂರ್ವದಿಕ್ಕಿನ ಶೈಲಗಳು, ವನ-ಕಾನನಗಳು, ನಗರಗಳು, ಗ್ರಾಮಗಳು, ಸಮುದ್ರ, ನದಿತೀರಗಳು ಎಲ್ಲವನ್ನೂ ಶೋಧನೆ ಮಾಡಬೇಕು ಎಂಬುದಾಗಿ ಸೂಚನೆ ಕೊಡುತ್ತಾನೆ. ಇಲ್ಲಿ ಎರಡು ವಿಷಯಗಳನ್ನು ನೆನಪಿನಲ್ಲಿಡಬೇಕು ನಾವು. ಮೊದಲನೆಯದು ಎಲ್ಲಿಂದ ಪೂರ್ವ, ಎಲ್ಲಿಂದ ಪಶ್ಚಿಮ, ಉತ್ತರ, ದಕ್ಷಿಣ? ಆ ಬಿಂದು ಯಾವುದು ಎಂದರೆ ಅದು ಕಿಷ್ಕಿಂಧೆಯೂ ಅಲ್ಲ, ಮೇರು ಪರ್ವತವನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿಂದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣವನ್ನು ನಿರೂಪಣೆ ಮಾಡುವುದೂ ಅಲ್ಲ. ತಿಲಕರು ಹೇಳುವ ಹಾಗೆ ಆರ್ಯಾವರ್ತ ಎಂದರೆ ಹಿಮಾಲಯ ಮತ್ತು ವಿಂಧ್ಯದ ನಡುವಿನ ಭೂಖಂಡ.ಅಲ್ಲಿಂದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ. ಗೋವಿಂದರಾಜರು ಹೇಳುವುದು ಆರ್ಯಾವರ್ತದಲ್ಲಿ ಕೂಡಾ ಶರಾವತಿ ಎಂಬ ನದಿ ವಲಯಾಕಾರವಾಗಿ ಹರಿಯುತ್ತಿದೆ. ಅದನ್ನು ಕೇಂದ್ರವಾಗಿಟ್ಟುಕೊಂಡು, ಅಲ್ಲಿಂದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣದ ವ್ಯವಸ್ಥೆ ಎಂಬುದಾಗಿ ಗೋವಿಂದರಾಜರು ಹೇಳಿದ್ದಾರೆ.

ಸುಗ್ರೀವನು ವಿನತನಿಗೆ ಹೇಳಿದ. ಪೂರ್ವದಿಕ್ಕಿನಲ್ಲಿ ನೀನು ಗಂಗೆಯನ್ನು ಕಾಣುವೆ. ಸರಯೂ ನದಿ, ಕೌಶಿಕಿ(ವಿಶ್ವಾಮಿತ್ರರ ಅಕ್ಕ) , ಕಾಳಿಂದೀ ಮಡುವುಳ್ಳ ಯಮುನಾ ನದಿ, ಯಾವನವೆಂಬ ಮಹಾಪರ್ವತವನ್ನು ಕಾಣುವೆ. ಅಲ್ಲೆಲ್ಲಾ ಶೋಧನೆ ಮಾಡಬೇಕು. ಹುಲ್ಲಿನ ರಾಶಿಯಲ್ಲಿ ಸೂಜಿಯನ್ನು ಹುಡುಕಿದಂತೆ ಇಡೀ ಭೂಮಂಡಲದಲ್ಲಿ ಅವರು ಸೀತೆಯನ್ನು ಹುಡುಕುತ್ತಾರೆ. ದಕ್ಷಿಣದ ಲಂಕೆಗೆ ಒತ್ತು ಕೊಟ್ಟು, ಸಮಗ್ರ ಭೂಮಂಡಲವನ್ನೇ ಅನ್ವೇಷಣೆ ಮಾಡುತ್ತಾರೆ. ಹಾಗಾಗಿ ಒಂದೊಂದೇ ಪ್ರದೇಶ, ನದಿ, ಪರ್ವತಗಳ ಉದಾಹರಣೆಯನ್ನು ಕೊಡುತ್ತಿದ್ದಾನೆ. ನದಿಯೆಂದರೆ ನದಿಯ ತೀರದಲ್ಲಿ ಅನ್ವೇಷಣೆ ಮಾಡಿ ಎಂಬುದು ತಾತ್ಪರ್ಯ. ಸರಸ್ವತಿ ನದಿ, ಸಿಂಧು ನದಿ, ಮಣಿಯಂತಹ ಜಲವುಳ್ಳ ಶೋಣವೆಂಬ ನದ (ಪೂರ್ವಕ್ಕೆ ಹರಿಯುವುದು ನದ, ಪಶ್ಚಿಮಕ್ಕೆ ಹರಿದರೆ ನದಿ ) ಇವಲ್ಲವನ್ನೂ ಅನ್ವೇಷಣೆ ಮಾಡಿ. ನಂತರ ದೇಶಗಳು ಬ್ರಹ್ಮಮಾಲಾ, ವಿದೇಹ(ಸೀತೆಯ ತವರುಮನೆ. ಈಗಿನ ನೇಪಾಳ-ಬಿಹಾರದ ಭಾಗ), ಮಾಲವ, ಕಾಶಿ, ಕೋಸಲ, ಮಗಧ(ಈಗಿನ ಬಿಹಾರ), ಪುಂಡ್ರ,ವಂಗ(ಬಂಗಾಲ). ಕೋಶಕಾರವೆಂಬ ವಿಶೇಷ ರಾಜಕುಲದವರು. ಅವರ ರಾಜಧಾನಿ. ಅಲ್ಲಿ ತುಂಬ ಬೆಳ್ಳಿಯ ಖನಿಯಿದೆ. ಅಂತಹ ಪಟ್ಟಣ. ಬಳಿಕ ಪೂರ್ವ ಸಮುದ್ರ. ಸಮುದ್ರದೊಳಗೆ ಕೆಲವು ಪರ್ವತಗಳು, ನಗರಗಳು ಚಾಚಿಕೊಂಡಿವೆ. ಅವೆಲ್ಲವನ್ನೂ ಅನ್ವೇಷಣೆ ಮಾಡಬೇಕು. ಮಂದರ ಪರ್ವತವನ್ನು ಶೋಧನೆ ಮಾಡಿ. ಆ ಪರಿಸರದಲ್ಲಿ ಕ್ರೂರ ಜನಾಂಗಗಳಿದ್ದಾವೆ. ಅವರ ಕಿವಿಯು ಹೊದಿಕೆಯ ಹಾಗೆ ವಿಶಾಲವಾಗಿ, ತುಟಿ ಮತ್ತು ಕಿವಿ ಒಂದಕ್ಕೊಂದು ಸೇರುವ ಹಾಗೆ. ಅವರು ಘೋರ ಸ್ವಭಾವದವರು. ಕಬ್ಬಿಣದ ಮುಖದವರು. ಒಂದೇ ಕಾಲು ಇದ್ದರೂ ಮಿಂಚಿನ ವೇಗ. ನಾಶವನ್ನೇ ಕಾಣದವರು. ಬಲಶಾಲಿಗಳು. ನರಭಕ್ಷಕರು. ಈ ಪ್ರದೇಶಗಳನ್ನು ಹುಡುಕಿ. ಕಿರಾತರು ಹೊಂಬಣ್ಣದವರು, ಕತ್ತಿಯ ಕೂದಲಿನವರು. ನೋಡಲು ಸುಂದರವಾಗಿರುತ್ತಾರೆ. ದ್ವೀಪಗಳಲ್ಲಿ ಅವರು ವಾಸಿಸುತ್ತಾರೆ. ಇವರು ಹಸಿಮೀನು ತಿನ್ನುವವರು. ನೀರಿನಲ್ಲಿ ಸಂಚಾರ ಮಾಡುವ ಇನ್ನೊಂದು ಜನಾಂಗವಿದೆ. ಅವರು ಸೊಂಟದ ಕೆಳಗೆ ಹುಲಿ, ಮೇಲೆ ಮನುಷ್ಯರು. ಅಲ್ಲಿ ಕೂಡ ಹುಡುಕಿ. ಬಳಿಕ ಯವದ್ವೀಪ (ಜಾವ, ಸುಮಾತ್ರ, ಬಾಲಿ ಇರುವ ಪ್ರದೇಶ). ಅಲ್ಲಿ ಪರ್ವತದಿಂದ ಪರ್ವತಕ್ಕೆ ದಾಟಿ ಹೋಗಬೇಕಾಗಬಹುದು. ದ್ವೀಪದಿಂದ ದ್ವೀಪಕ್ಕೆ ಆಕಾಶಮಾರ್ಗವಾಗಿ ಅಥವಾ ದೋಣಿಯ ಮೂಲಕ ಹೋಗಬೇಕಾಗಬಹುದು. ಅಲ್ಲಿ 7 ರಾಜ್ಯಖಂಡಗಳಿವೆ. ಆ ಬಳಿಕ ಸ್ವರ್ಣದ್ವೀಪ ಮತ್ತು ರೂಪ್ಯಕದ್ವೀಪ. ಅಲ್ಲಿ ಚಿನ್ನದ ಗಣಿಗಳಿವೆ. ಇದನ್ನು ದಾಟಿದರೆ ಶಿಶಿರ ಪರ್ವತವಿದೆ. ಶೋಣವೆಂಬ ನದ ಅಗಾಧ ಅದು. ವೇಗವಾಗಿ ಹರಿಯುತ್ತದೆ. ಪರ್ವತದಿಂದ ಹುಟ್ಟಿಬರುವ ಅನೇಕ ನದಿಗಳು, ಅಲ್ಲಿಯ ಉದ್ಯಾನವನಗಳು, ಗುಹೆಗಳನ್ನೆಲ್ಲ ಶೋಧಿಸಿ. ಬಳಿಕ ಸಮುದ್ರ, ದ್ವೀಪಗಳನ್ನು ಹುಡುಕಿ. ಆ ಸಮುದ್ರದಲ್ಲಿ ಘೋರಾಕಾರದ ಅಸುರರು ಇದ್ದಾರೆ. ಅವರಿಗೆ ಬ್ರಹ್ಮನಿಂದ ವರವಿದೆ. ಅವರು ನೆರಳನ್ನು ಹಿಡಿಯುತ್ತಾರೆ. ಅವರಲ್ಲಿ ಎಚ್ಚರಿಕೆ. ನಂತರ ಇಕ್ಷುಸಾಗರವಿದೆ. ಅಲ್ಲಿ ಮಹಾಸರ್ಪಗಳು ವಾಸಮಾಡುತ್ತವೆ. ಅನತಿ ದೂರದಲ್ಲಿ ಕೆಂಪುಸಾಗರವಿದೆ. ಬಳಿಕ ಮಹಾ ಬೂರುಗದ ಮರವಿದೆ. ಮುಂದೆ ವಿಶ್ವಕರ್ಮನೇ ನಿರ್ಮಿಸಿದ ಗರುಡನ ಅರಮನೆ. ಅನತಿ ದೂರದಲ್ಲಿ ಮಂದೇಹರೆಂಬ ರಾಕ್ಷಸರು. ಅವರು ಶೈಲಶೃಂಗಗಳಲ್ಲಿ ನೇತಾಡುತ್ತಿರುತ್ತಾರೆ. ಸೂರ್ಯೋದಯವಾದ ಕೂಡಲೇ ಅವನೊಂದಿಗೆ ಜಗಳವಾಡುತ್ತಾರೆ. ನೀರಿನಲ್ಲಿ ಬಿದ್ದು ಹೋಗುತ್ತಾರೆ. ಒಂದು ಕಡೆ ಸೂರ್ಯನ ತಾಪ, ಇನ್ನೊಂದೆಡೆ ಸಂಧ್ಯಾವಂದನೆಯಲ್ಲಿ ಬ್ರಾಹ್ಮಣರು ನೀಡುವ ಅರ್ಘ್ಯ. ಹಾಗಾಗಿ ಘಾತಗೊಂಡು ನೀರಿನಲ್ಲಿ ಬೀಳುತ್ತಾರೆ. ಮರುದಿನ ಮತ್ತೆ ಸೂರ್ಯನೊಂದಿಗೆ ಜಗಳವಾಡುತ್ತಾರೆ. ಬೆಳಕಿಗೆ ಪೀಡೆಕೊಡುವವರು ಅವರು. ನಂತರ ಕ್ಷೀರಸಮುದ್ರ. ಭೂಮಿಗೆ ಮುತ್ತಿನ ಹಾರದಂತೆ. ಹೊರಗೆ ಎಷ್ಟು ವಿಶಾಲವಾಗಿದೆಯೋ ನಮ್ಮ ದೇಹದೊಳಗೂ ಅಷ್ಟೇ ವಿಶಾಲವಾಗಿದೆ ಎಂದು ಯೋಗಶಾಸ್ತ್ರವು ಹೇಳುತ್ತದೆ. ಬಳಿಕ ವೃಷಭಪರ್ವತ. ಬಿಳಿಯ ಮರಗಳು ಅಲ್ಲಿವೆ. ಅಲ್ಲಿ ಬೆಳ್ಳಿಯ ಕಮಲಗಳು ಇರುವ ಸುದರ್ಶನ ಸರೋವರ. ದಿವ್ಯಶಕ್ತಿಗಳು ಅಲ್ಲಿಗೆ ರಮಿಸಲು ಬರುತ್ತಾರೆ. ಅದಾದ ಬಳಿಕ ಶುದ್ಧ ಜಲದ ಸಮುದ್ರ. ಔರ್ವನೆಂಬ ಬ್ರಹ್ಮರ್ಷಿಯ ಕೋಪದಿಂದ ಹುಟ್ಟಿದ ಅಗ್ನಿ ಆ ಸಮುದ್ರದೊಳಗಿರುತ್ತದೆ. ಪ್ರಳಯಕಾಲದಲ್ಲಿ ಆ ಅಗ್ನಿಯು ಸಮುದ್ರವನ್ನು, ಬ್ರಹ್ಮಾಂಡವನ್ನೂ ಸುಡುತ್ತದೆ. ಶಕ್ತಿಶಾಲಿ ಜಲಚರಗಳೂ ಕೂಡ ಆ ಅಗ್ನಿಯನ್ನು ಕಂಡಾಗ ಬೆದರುತ್ತವೆ. ಮುಂದೆ ಜಾತರೂಪಶಿಲಾಪರ್ವತ. (ಜಾತರೂಪವೆಂದರೆ ಸ್ವರ್ಣವು ಹುಟ್ಟುವಾಗ ಇರುವ ರೂಪ). ಅಲ್ಲಿ ಚಂದ್ರನಂತೆ ಶೋಭಿಸುವ ಅನಂತನ ಸಾನಿಧ್ಯವಿದೆ. ಅನಂತನೆಂದರೆ ಭೂಮಿಯನ್ನು ಹೊತ್ತಿರುವ ಆದಿಶೇಷ. ನಾಗಗಳ ಹಿರಿಯಣ್ಣ. ಕಮಲದಳನಯನ ಅವನು. ಅವನ ದರ್ಶನವನ್ನು ಮಾಡಿ. ಆ ಪರ್ವತದ ನೆತ್ತಿಯಲ್ಲಿ ಅವನು ಆಸೀನನಾಗಿದ್ದಾನೆ. ಎಲ್ಲರ ನಮಸ್ಕಾರಕ್ಕೆ ಯೋಗ್ಯನಾದವನು. ಯೋಗವು ಅವನಿಂದಲೇ ಬಂದಿದ್ದು. ಪತಂಜಲಿಗಳು ಆದಿಶೇಷನ ಅವತಾರವೆಂದು ಹೇಳುತ್ತಾರೆ. ಅವನ ಧ್ವಜವು ತಾಳವೃಕ್ಷ. ಮೂರುಶಿಖರಗಳುಳ್ಳ ಆ ಧ್ವಜವು ಪರ್ವತಾಗ್ರದಲ್ಲಿ ಸ್ಥಾಪಿತವಾಗಿದೆ. ಇದು ಪೂರ್ವದಿಕ್ಕು. ಈ ಧ್ವಜವು ಪೂರ್ವದ ಎಲ್ಲೆಯೆಂದು ದೇವತೆಗಳು ಗುರುತಿಸಿದ್ದಾರೆ. ಅಲ್ಲಿಯೇ ಸೂರ್ಯನ ಪ್ರಥಮೋದಯವಾಗುವ ಉದಯಪರ್ವತ. ಅದೂ ಕೂಡಾ ಸ್ವರ್ಣಮಯವಾಗಿರುವಂಥದ್ದು. ಅದರ ಶಿಖರವು 100 ಯೋಜನ ವಿಸ್ತಾರವಾಗಿರುವಂಥದ್ದು. ಅಲ್ಲಿ ಸ್ವರ್ಣವೇದಿಕೆಗಳಿವೆ. ಅಲ್ಲೆಲ್ಲಾ ಸೀತೆಯನ್ನು ಹುಡುಕಬೇಕು. ಉದಯಪರ್ವತದಲ್ಲಿ ಸೌಮನಸವೆಂಬ ಶಿಖರ. 10 ಯೋಜನದ ಎತ್ತರ ಆ ಶಿಖರಕ್ಕೆ. ಸ್ವರ್ಣಕಾಂತಿಯಿಂದ ಕೂಡಿದೆ ಅದು. ವಾಮನಾವತಾರದಲ್ಲಿ ತ್ರಿವಿಕ್ರಮನು 3 ಹೆಜ್ಜೆಗಳಲ್ಲಿ ಮೊದಲನೆಯ ಹೆಜ್ಜೆ ಇಟ್ಟಿದ್ದು ಈ ಶಿಖರದ ಮೇಲೆ. ಎರಡನೆಯ ಹೆಜ್ಜೆಯನ್ನು ಮೇರುಪರ್ವತದ ಮೇಲಿಟ್ಟ. ಸೂರ್ಯನು ಅಸ್ತವಾದ ನಂತರ ಜಂಬೂದ್ವೀಪದ ಉತ್ತರ ಪ್ರದೇಶವನ್ನು ಬೆಳಗಲು ಅಲ್ಲಿ ಹೋಗುತ್ತಾನೆ. ಸುತ್ತಿ ಮರುದಿನ ಬೆಳಗ್ಗೆ ಮತ್ತೆ ಇಲ್ಲಿಯೇ ಬರುತ್ತಾನೆ. ಇಲ್ಲಿ ಮಹರ್ಷಿಗಳು ತಪಸ್ಸು ಮಾಡುತ್ತಾರೆ. ಅಲ್ಲೇ ಸುದರ್ಶನ ದ್ವೀಪ. ಮೊದಲ ಸೂರ್ಯನ ಕಿರಣ ಇಲ್ಲೇ ಬರುವುದು. ಸರ್ವಪ್ರಾಣಿಗಳಿಗೆ ಕಣ್ಣು ಈ ಬೆಳಕು. ಆ ಕಾಂಚನಶೈಲ ಮತ್ತು ಸೂರ್ಯ, ಇವರಿಬ್ಬರ ಸಮ್ಮಿಲನದಿಂದಾಗಿ ಈ ಕೆಂಪುಬಣ್ಣವು ಬರುವುದು. ಭೂಮಿಗೂ ಬ್ರಹ್ಮಾಂಡಕ್ಕೂ ದ್ವಾರದಂತೆ ಆ ಪರಿಸರ. ಭೂಮಂಡಲದ ಸೃಷ್ಟಿಯು ಅದು ಪೂರ್ವದಿಕ್ಕಿನಿಂದಲೇ ಶುರುವಾಗಿದೆ. ಅಲ್ಲಿಂದ ಮುಂದಕ್ಕೆ ನಮಗೆ ವ್ಯಾಪ್ತಿಯಿಲ್ಲ. ಅಲ್ಲಿಯವರೆಗೆ ಒಂದೊಂದು ಶೈಲ, ಕಂದರ, ವನವನ್ನೂ ಬಿಡದೇ ಹುಡುಕಿ. ಅಲ್ಲಿಂದ ಮುಂದೆ ಸೂರ್ಯನಿಲ್ಲ, ಈ ಲೋಕದ ನಿಯಮವೂ ಅನ್ವಯಿಸುವುದಿಲ್ಲ.
ಇದೆಲ್ಲಾ ಹೇಳೀ ಒಂದು ತಿಂಗಳ ಅವಧಿಯನ್ನು ಕೊಟ್ಟ. ಅಷ್ಟರೊಳಗಾಗಿ ಸೀತೆಯನ್ನು ಹುಡುಕಿ. ಹುಡುಕದೇ ಆ ಸಮಯದ ನಂತರ ಬಂದರೆ ವಧೆ. ಇದು ಸುಗ್ರೀವಾಜ್ಞೆ.

ದಕ್ಷಿಣದ ಬಗ್ಗೆ ವಿಶೇಷ ಚಿಂತನೆಯನ್ನು ಸುಗ್ರೀವನು ಮಾಡಿದ. ಅಲ್ಲಿಗೆ ಕಪಿಗಳನ್ನು ಆಯ್ದು ಆಯ್ದು ಕಳುಹಿಸಿಕೊಟ್ಟ. ಕಪಿಗಳ ಸೇನಾಪತಿ ನೀಲ, ಹನುಮಂತ, ಬ್ರಹ್ಮಪುತ್ರ ಜಾಂಬವಂತ, ಸುಹೋತ್ರ, ಶರಾರಿ, ಗಜ, ಗವಾಕ್ಷ, ಸುಷೇಣ, ವೃಷಭ, ಇನ್ನೂ ಅನೇಕರನ್ನು ಆರಿಸಿ ಇವರ ನಾಯಕನಾಗಿ ಅಂಗದನನ್ನು ಆರಿಸಿ, ದಕ್ಷಿಣದ ವರ್ಣನೆಯನ್ನು ಪ್ರಾರಂಭಿಸಿದನು. ಮೊದಲು ಸಾವಿರ ಶಿಖರಗಳ ವಿಂಧ್ಯಪರ್ವತ, ಮಹಾಸರ್ಪಗಳು ನೆಲೆಸಿರುವ ನರ್ಮದಾ ನದಿ, ಗೋದಾವರಿ, ಕೃಷ್ಣವೇಣಿ, ವರದಾ ಈ ನದಿಗಳು. ನಂತರ ದೇಶಗಳು. ಉತ್ಕಲ, ಅವಂತಿ, ಅಶ್ವವಂತಿ, ವಿದರ್ಭ, ಮಾಹಿಷಕ(ಮೈಸೂರು), ಕಲಿಂಗ, ಕೌಶಿಕ, ದಂಡಕಾರಣ್ಯ ಇವೆಲ್ಲವನ್ನೂ ಅನ್ವೇಷಣೆ ಮಾಡಿ. ಆಂಧ್ರ, ಪುಂಡ್ರ, ಚೋಲ, ಪಾಂಡ್ಯ, ಕೇರಲ. ಮುಂದೆ ಅಯೋಮುಖವೆಂಬ ಪರ್ವತ. ಮುಂದೆ ಕಾವೇರಿ ನದಿ. ಅಲ್ಲಿ ಮಲಯಪರ್ವತ. ಅದರ ನೆತ್ತಿಯಲ್ಲಿ ಸುಖಾಸೀನರಾದ ಅಗಸ್ತ್ಯರು. ಆದಿತ್ಯಸದೃಶರಾದ ಅವರಿಗೆ ವಂದಿಸಿ. ಅನತಿ ದೂರದಲ್ಲಿ ತಾಮ್ರಪರ್ಣೀ ನದಿ. ಆ ನದಿಯ ಪರಿಸರದಲ್ಲಿ ಚಂದನವೃಕ್ಷಗಳು ಇವೆ. ಅವುಗಳಿಂದ ಕೂಡಿದ ನದಿಯು ಸಾಗರವನ್ನು ವೇಗವಾಗಿ ಹೋಗಿ ಸೇರುತ್ತಾಳೆ. ನೋಡಿದರೆ ಪ್ರಿಯೆಯು ಪ್ರಿಯನನ್ನು ಸೇರಲು ಹೋಗುವಾಗ ಚಂದನವನ್ನು ಲೇಪಿಸಿಕೊಂಡಂತೆ. ಅಲ್ಲಿಂದ ಮುಂದೆ ಪಾಂಡ್ಯರ ನಗರದ್ವಾರ. ಅದು ಹೇಮಮಯವಾಗಿತ್ತು. ಮುತ್ತುಗಳಿಂದ ವಿಭೂಷಿತವಾಗಿತ್ತು. ಮುಂದೆ ದಕ್ಷಿಣ ಸಮುದ್ರ. ಅಲ್ಲಿ ಹೋಗಿ ಸಮಾಲೋಚನೆ ಮಾಡಿ ಎಂಬುದಾಗಿ ಸುಗ್ರೀವ ಹೇಳಿದ. ಅಲ್ಲೇ ಮಹೇಂದ್ರಪರ್ವತ. ಹನುಮ ಲಂಕೆಗೆ ಹಾರಿದ್ದು ಅಲ್ಲಿಂದಲೇ. ಈ ಪರ್ವತವನ್ನು ಅಗಸ್ತ್ಯರು ಸಮುದ್ರದ ಪರಿಸರದಲ್ಲಿ ಕೂಡಿಸಿದ್ದಾರೆ. ಪರ್ವತದ ರೆಕ್ಕೆಗಳನ್ನು ಕತ್ತರಿಸಲು ಇಂದ್ರನು ಅಟ್ಟಿಸಿಕೊಂಡು ಬರುವಾಗ ಅಗಸ್ತ್ಯರ ಬಳಿಯಿಂದ ಸಾಗರದ ಬಳಿ ಸ್ಥಾಪಿತವಾಗಿರುವ ಪರ್ವತ. ಆ ಪರ್ವತದ ವರ್ಣನೆಯಿದೆ. ಅದು ದಿವ್ಯಪುರುಷರಿಂದ ಸೇವಿತ. ಇಲ್ಲಿ ಪ್ರತಿಯೊಂದು ಪರ್ವಕಾಲದಲ್ಲಿಯೂ ಕೂಡಾ ಮಹೇಂದ್ರ ಆ ಪರ್ವತಕ್ಕೆ ಬರುತ್ತಾನೆ. ಸಮುದ್ರ ಸ್ನಾನವನ್ನು ಮಾಡುತ್ತಾನೆ. ಅದಕ್ಕಾಗಿಯೇ ಆ ಪರ್ವತಕ್ಕೆ ಮಹೇಂದ್ರಪರ್ವತ ಎಂಬ ಹೆಸರು. ಅವನು ಮಾತ್ರವಲ್ಲ. ಸಿದ್ಧರು, ಚಾರಣರು, ದೇವತೆಗಳು, ಯಕ್ಷರು, ಅಪ್ಸರೆಯರು ಎಲ್ಲರೂ ಆ ಪರ್ವತವನ್ನು ಸೇವಿಸುತ್ತಾರೆ. ಈ ಮಹೇಂದ್ರಪರ್ವತದಿಂದ ನೂರು ಯೋಜನ ಸಮುದ್ರವನ್ನು ದಾಟಿದರೆ ಅಲ್ಲೊಂದು ದ್ವೀಪವಿದೆ. ಆ ದ್ವೀಪಕ್ಕೆ ಮನುಷ್ಯರು ಹೋಗಲು ಸಾಧ್ಯವಿಲ್ಲ. ಆ ದ್ವೀಪವನ್ನು ಚೆನ್ನಾಗಿ ಶೋಧಿಸಿ. ಎಲ್ಲಾ ರೀತಿಯಿಂದ ಹುಡುಕಿ. ವಿಶೇಷವಾಗಿ ಹುಡುಕಿ. ಅದು ಮೃತ್ಯುದಂಡಕ್ಕೆ ಯೋಗ್ಯನಾದ ರಾವಣನ ಊರು. ಅವನನ್ನು ಒಂದು ದಿನ ನಾವು ಕೊಲ್ಲಲೇಬೇಕು. ಈ ಕಾರಣಕ್ಕಾಗಿಯೇ ಹನುಮಂತ ಮೊದಲಾದ ವಾನರರನ್ನು ಆಯ್ಕೆ ಮಾಡಿದ್ದು. ಲಂಕೆ ಆ ದಿಕ್ಕಿನಲ್ಲಿದೆ. ಕದ್ದೊಯ್ದದ್ದು ದಕ್ಷಿಣಕ್ಕೆ. ಬೇರೆಕಡೆಗಳಲ್ಲಿ ಇಟ್ಟಿರಬಹುದು ಎಂದು ಬೇರೆ ಜಾಗಗಳನ್ನೂ ಹುಡುಕಬೇಕು. ಈ ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಒಬ್ಬ ರಾಕ್ಷಸಿಯಿದ್ದಾಳೆ. ಅವಳ ಹೆಸರು ಅಂಗಾರಕಿ. ಮುಂದೆ ಬೇರೆಯ ಹೆಸರಿದೆ. ಅವಳು ನೆರಳನ್ನು ಸೆಳೆದು ಊಟ ಮಾಡುವವಳು. ರಾಹುವಿನ ತಾಯಿ. ಇಷ್ಟು ಹೇಳಿ ಪುನಃ ಶುರು ಮಾಡಿದ. ಸಂಶಯ ತೀರುವವರೆಗೆ ಅಲ್ಲಿ ಹುಡುಕಿ. ಅಮಿತ ತೇಜಸ್ವಿಯಾದ ರಾಮನ ಪತ್ನಿಯು ಇರುವುದು ಅಲ್ಲಿಯೇ ಎಂಬ ಪ್ರಸ್ತಾಪವನ್ನು ಮಾಡಿದ. ಅಲ್ಲಿಂದ ಮುಂದಕ್ಕೆ ಪುಷ್ಪಿತಕವೆಂಬ ಗಿರಿ. ಆ ಪರ್ವತದ ಒಂದು ಶೃಂಗವನ್ನು ಸೂರ್ಯನು ಸೇವಿಸಿದರೆ, ಇನ್ನೊಂದನ್ನು ಚಂದ್ರನು ಸೇವಿಸುತ್ತಾನೆ. ಕ್ರೂರರು, ನಾಸ್ತಿಕರು ಆ ಪರ್ವತವನ್ನು ನೋಡುವುದಿಲ್ಲ. ಆ ಶೈಲವನ್ನು ಶಿರಸಾ ನಮಿಸಿ ಹುಡುಕಬೇಕು. 14 ಯೋಜನ ದಾರಿಯ ಮುಂದೆ ಸೂರ್ಯವಾನ್ ಪರ್ವತ. ಅಲ್ಲಿಂದ ವೈದ್ಯುತ ಪರ್ವತ. ಯಾವ ಕಾಲದಲ್ಲಿ ಹೋದರೂ ಹೂವು-ಹಣ್ಣು ಸಿಗುವ ಪರ್ವತ. ಅಲ್ಲಿ ಹೋದರೆ ರುಚಿಯಾದ ಮೂಲ-ಫಲಗಳೆಲ್ಲಾ ಸಿಗುತ್ತವೆ. ಬೇಕಾದಷ್ಟು ಜೇನಿದೆ, ಕುಡಿಯಿರಿ. ದಣಿವಾರಿಸಿಕೊಳ್ಳಿ. ಮುಂದೆ ಕುಂಜರ ಎಂಬ ಪರ್ವತ. ಅಲ್ಲಿ ವಿಶ್ವಕರ್ಮನು ಅಗಸ್ತ್ಯಭವನವನ್ನು ನಿರ್ಮಾಣ ಮಾಡಿದ್ದಾನೆ. 1 ಯೋಜನ ವಿಸ್ತಾರ, 10 ಯೋಜನ ಎತ್ತರ. ಆ ಪರ್ವತದ ಒಂದು ಪಾರ್ಶ್ವದಲ್ಲಿ ಭೋಗವತಿ ಎಂಬ ಸರ್ಪಗಳ ನಗರಿಯಿದೆ. ಬಲವಾದ ಕಾವಲಿದೆ. ಚೂಪಾದ ಹಲ್ಲುಗಳ ಮಹಾಸರ್ಪಗಳು ಆ ನಗರಿಯನ್ನು ಕಾಯುತ್ತವೆ. ಅಲ್ಲಿ ವಾಸುಕಿ ವಾಸಮಾಡುತ್ತಾನೆ. ಅಲ್ಲಿಯೂ ಕೂಡಾ ಹುಡುಕಿ. ಅದರ ನಂತರ ಕೆಲವು ರಹಸ್ಯ ಸ್ಥಳಗಳಿದ್ದಾವೆ. ಆಮೇಲೆ ವೃಷಭ ಪರ್ವತ. ಅಲ್ಲಿ ದಿವ್ಯವಾದ ಚಂದನವೃಕ್ಷಗಳು ಬೆಳೆಯುತ್ತಾವೆ. ಅವನ್ನು ಮುಟ್ಟಬೇಡಿ. ರೋಹಿತರೆಂಬ ಹೆಸರಿನ ಗಂಧರ್ವರು ಅಲ್ಲಿ ಕಾವಲಿದ್ದಾರೆ. ಐವರು ಗಂಧರ್ವರು ಆ ಚಂದನವೃಕ್ಷಗಳನ್ನು ಕಾಯುತ್ತಿರುತ್ತಾರೆ. ಅದರಾಚೆಗೆ ಪುಣ್ಯಾತ್ಮರ ಆವಾಸಸ್ಥಾನ. ಸೂರ್ಯಶರೀರಿಗಳು, ಚಂದ್ರಶರೀರಿಗಳು, ಅಗ್ನಿಶರೀರಿಗಳು ಅಲ್ಲಿದ್ದಾರೆ. ಇಷ್ಟೇ ನಿಮ್ಮ ವ್ಯಾಪ್ತಿ. ಅದರಾಚೆಗೆ ಯಮಲೋಕ. ಅಲ್ಲಿಂದ ಹಿಂದೆ ಬನ್ನಿ. ಒಂದು ತಿಂಗಳು ಮುಗಿಯುವಾಗ ಮರಳಿ ಬಂದು ಯಾವನು ನಾನು ಸೀತೆಯನ್ನು ಕಂಡೆಯೆಂದು ಹೇಳುತ್ತಾನೋ ಅವನಿಗೆ ನನ್ನದೇ ಸ್ಥಾನ. ನನಗ್ಯಾವ ವೈಭವ, ಭೋಗವಿದೆ ಅದೆಲ್ಲವನ್ನೂ ಅವನಿಗೆ ಕೊಡುತ್ತೇನೆ. ಅವನು ನನ್ನ ಆತ್ಮಬಂಧು. ನೀವು ಮಹಾಕುಲೀನರು, ಪರಾಕ್ರಮಿಗಳು. ಹೇಗಾದರೂ ಸೀತೆಯನ್ನು ಹುಡುಕಿ ಬನ್ನಿ. ನೀವು ಧನ್ಯರಾಗಿ, ನನ್ನನ್ನು ಧನ್ಯನನ್ನಾಗಿ ಮಾಡಿ ಎಂದು ಹೇಳಿ ಪಶ್ಚಿಮದೆಡೆಗೆ ಗಮನ ಕೊಟ್ಟ.

ಸುಷೇಣನೆಂಬ ವಾನರ ನಾಯಕನಿಗೆ ಸೂಚನೆಯನ್ನು ಕೊಟ್ಟ. ಅವನು ತಾರೆಯ ತಂದೆ. ಭೀಮವಿಕ್ರಮ. ಅವನಿಗೆ ಕೈಮುಗಿದು, ತಾವುಗಳು ಪಶ್ಚಿಮ ದಿಕ್ಕಿನ ನೇತೃತ್ವವನ್ನು ವಹಿಸಬೇಕು ಎಂದ. ಅವನಿಗೆ ಸಂಗಾತಿಗಳಾಗಿ ಮರೀಚಿ ಮಹರ್ಷಿಗಳ ಪುತ್ರರನ್ನು ಕೊಟ್ಟ. ಅವರಲ್ಲಿ ಹಿರಿಯ ಮಾರೀಚನೆಂಬ ಮಹಾಕಪಿ. 2,00,000 ಕಪಿಗಳ ಸೈನ್ಯ ಆ ದಿಕ್ಕಿಗೆ. ದಕ್ಷಿಣಕ್ಕೆ ಒಟ್ಟು ಸೈನ್ಯ ಮೂರನೇ ಒಂದು ಭಾಗ. ಅಷ್ಟು ದೊಡ್ಡ ಸೈನ್ಯ. ಪಶ್ಚಿಮದಲ್ಲಿ ಏನನ್ನು ಹುಡುಕಬೇಕು ಎಂಬುದನ್ನು ಸೂಚಿಸಿದ. ಸುರಾಷ್ಟ್ರ, ಭೀಮದೇಶ, ಕುಕ್ಷಿದೇಶ. ಅಲ್ಲಿಯ ವನಗಳಲ್ಲಿ ಹುಡುಕಬೇಕು. ಬಳಿಕ ಪಶ್ಚಿಮವಾಹಿನಿಗಳಾದ ನದಿಗಳು, ತಾಪಸಾಶ್ರಮಗಳು, ಅರಣ್ಯಗಳು, ಪರ್ವತಗಳು, ಮರುಭೂಮಿ ಎಲ್ಲಾ ಕಡೆ ಹುಡುಕಿ. ಅಲ್ಲಿಂದ ಮುಂದೆ ಪಶ್ಚಿಮ ಸಮುದ್ರ. ಆ ಪರಿಸರದಲ್ಲಿ ಕೇದಗೆಯ ಬನ, ಹೊಂಗೆಯ ಬನ, ತೆಂಗಿನ ಕಾಡು ಇವೆ. ಅಲ್ಲಿ ಕಪಿಗಳು ವಿಹಾರ ಮಾಡಲಿ ಎಂದು ಹೇಳಿ ಸಮುದ್ರ ತೀರದ ನಗರಗಳ ಪ್ರಸ್ತಾಪ ಮಾಡುತ್ತಾನೆ. ಮುರುಚೀ ಪಟ್ಟಣ, ಜಟೀಪುರ, ಅವಂತಿ ನಗರಗಳು. ಅಲಕ್ಷಿತ ವನ, ಸಿಂಧು-ಸಾಗರ ಸಂಗಮದಲ್ಲಿ ಹೇಮಗಿರಿ ಎಂಬ ಪರ್ವತವಿದೆ. ಅಲ್ಲಿ ಭೂತಾಕಾರದ, ಸಿಂಹಶರೀರದ ಪಕ್ಷಿಗಳು ಆನೆಗಾತ್ರದ ಮೀನುಗಳನ್ನು ಎತ್ತಿಕೊಂಡು ಗೂಡನ್ನು ಸೇರುತ್ತವೆ. ಬಳಿಕ 1,000 ಯೋಜನದ ಪಾರಿಜಾತದ ಶಿಖರವಿರುವ ಪರ್ವತ. ಅಲ್ಲಿ 24,00,00,000 ಗಂಧರ್ವರು ವಾಸಿಸುತ್ತಾರೆ. ಅವರು ಬೆಂಕಿಯಂತಿದ್ದಾರೆ. ಮಹಾಬಲಶಾಲಿಗಳು. ಅವರ ತಂಟೆಗೆ ಹೋಗಬೇಡಿ. ಆ ಊರಿನ ಹಣ್ಣು-ಹಂಪಲು ತಿನ್ನಬೇಡಿ. ಅವರ ಜೊತೆ ಜಗಳ ಕಟ್ಟಿಕೊಳ್ಳಬೇಡಿ. ಸೀತೆಯನ್ನು ಹುಡುಕಿ. ನೀವು ಮಾಮೂಲಿ ಕಪಿಗಳಂತೆ ಇದ್ದರೆ ನಿಮಗೆ ಅವರಿಂದ ತೊಂದರೆಯಿಲ್ಲ. ಅಲ್ಲಿಂದ ಮುಂದೆ ವಜ್ರಗಿರಿ. 100 ಯೋಜನ ವಿಸ್ತೀರ್ಣವಿದೆ. ಅಲ್ಲಿಯ ಗುಹೆಗಳನ್ನು ಚೆನ್ನಾಗಿ ಶೋಧನೆ ಮಾಡಬೇಕು. ಪಶ್ಚಿಮ ಸಮುದ್ರದಲ್ಲಿ 1/4ನೇ ಭಾಗವನ್ನು ದಾಟಿದರೆ ಚಕ್ರವಾನ್ ಎಂಬ ಪರ್ವತವಿದೆ. ವಿಷ್ಣುವಿಗೆ ಸುದರ್ಶನ ಚಕ್ರ ಅಲ್ಲಿಂದಲೇ ಸಿಕ್ಕಿದ್ದು. ವಿಶ್ವಕರ್ಮನು ಆ ಚಕ್ರವನ್ನು ನಿರ್ಮಾಣಮಾಡಿದ್ದು ಅಲ್ಲೇ. ಮಹಾವಿಷ್ಣು ಇಲ್ಲಿ ಹೋಗಿಯೇ ಪಂಚಜನ ಎಂಬ ರಾಕ್ಷಸನನ್ನು ಕೊಂದು ಅವನ ಅಸ್ಥಿಯಿಂದ ಶಂಖವನ್ನು ನಿರ್ಮಿಸಿಕೊಂಡ. ಪಾಂಚಜನ್ಯ ಅದು. ಶಂಖದ ಒಳಭಾಗ ಪರಮಪವಿತ್ರ. ಆದರೆ ಅದರ ಬೆನ್ನು ಮುಟ್ಟಿದರೆ ಅಸ್ಥಿಯನ್ನು ಮುಟ್ಟಿದಂತೆ. ಹಾಗಾಗಿ ಕವಚವಿರುತ್ತದೆ. ಹಯಗ್ರೀವನೆಂಬ ಮತ್ತೊಬ್ಬ ದಾನವನನ್ನು ಕೊಂದು ಸುದರ್ಶನ ಚಕ್ರವನ್ನು ಪಡೆದುಕೊಂಡ. ಈ ಪರ್ವತದ ನಂತರ ಸ್ವರ್ಣಕಾಂತಿಯ ಶಿಖರಗಳ ವರಾಹ ಪರ್ವತ. ಅದು 60 ಯೋಜನ ದೂರದಲ್ಲಿದೆ. ಅಲ್ಲಿ ಪ್ರಾಗ್ಯೋದಶಪುರ. ಅಲ್ಲಿ ನರಕನೆಂಬ ದುಷ್ಟ ರಾಕ್ಷಸನಿದ್ದಾನೆ ( ಮುಂದೆ ದ್ವಾಪರಯುಗದಲ್ಲಿ ಅವನ ಸಂಹಾರವಾಗುತ್ತದೆ ). ಅಲ್ಲಿಂದ ಮುಂದೆ ಮೇಘವಾನ್ ಪರ್ವತ. ಅಲ್ಲಿನ ಗುಹೆಗಳು ಬಂಗಾರದ ಕಾಂತಿಯದ್ದು. ದೇವೇಂದ್ರನಿಗೆ ಮೂರುಲೋಕಗಳ ಅಧಿಪತಿಯಾಗಿ ಪಟ್ಟಾಭಿಷೇಕವಾಗಿದ್ದು ಇಲ್ಲೇ. ಬಳಿಕ ಮೇರು ಪರ್ವತ. 60,000 ಸ್ವರ್ಣಕಾಂತಿಯ ಶಿಖರಗಳು ಇಲ್ಲಿವೆ. ಅದಕ್ಕೆ ಉತ್ತರ ಪರ್ವತ ಎಂದು ಹೆಸರು. ಆ ಪರ್ವತಕ್ಕೆ ಸೂರ್ಯನ ವರವಿದೆ. ದೇವ-ಗಂಧರ್ವರು ಸ್ವರ್ಣ ಅಥವಾ ಕೆಂಪುಬಣ್ಣದಲ್ಲಿ ಕಂಗೊಳಿಸುತ್ತಾರೆ. ಅಲ್ಲಿ ಎಲ್ಲಾ ವಸುಗಳು, ಮರುತ್ಗಣಗಳು ಬಂದು ಸಂಧ್ಯಾವಂದನೆ ಮಾಡುತ್ತಾರೆ. ಅಲ್ಲಿ ಆದಿತ್ಯನ ಉಪಾಸನೆಯನ್ನು ದೇವತೆಗಳು ಮಾಡುತ್ತಾರೆ. ಅಲ್ಲಿಂದ ಅಸ್ತ ಪರ್ವತಕ್ಕೆ ಸೂರ್ಯನು ಹೋಗುತ್ತಾನೆ. ಅಲ್ಲಿಗೆ ಮೇರುಪರ್ವತದಿಂದ 10,000 ಯೋಜನ. ಸೂರ್ಯನಿಗೆ ಅರ್ಧಮುಹೂರ್ತ(24 ನಿಮಿಷ) ಸಾಕು. ಅಲ್ಲಿಯೇ ವರುಣನ ಭವನವು ನಿರ್ಮಿತವಾಗಿದೆ. ಅಲ್ಲೊಂದು ವಿಶೇಷವಾದ ಸ್ವರ್ಣಮಯ ತಾರಾವೃಕ್ಷವಿದೆ. ಅಲ್ಲಿಯೇ ಮೇರುಸಾವ್ರಣಿ ಎಂಬ ಧರ್ಮಾತ್ಮನಿದ್ದಾನೆ. ಅವನು ಮನ್ವಂತರ ಪುರುಷ. ಮನು ಅವನು. ನಮಗಲ್ಲ. ಬೇರೆ ಕಲ್ಪಕ್ಕೆ ಅವನು ಮನುವಾಗುತ್ತಾನೆ. ಮುಂದೆ ಅಸ್ತಪರ್ವತವಿರುವುದು. ಅಲ್ಲಿಂದ ಮುಂದೆ ನಮ್ಮ ವ್ಯಾಪ್ತಿಯಲ್ಲ. ಅದು ಲೋಕಾತೀತ. ಅಸ್ತ ಪರ್ವತವನ್ನು ಸೇರಿ ಅಲ್ಲಿಂದ ಹಿಂತಿರುಗಿ ಬನ್ನಿ. ಒಂದು ತಿಂಗಳು ಅವಧಿ. ದಾಟಿದರೆ ವಧೆ. ನನ್ನ ಮಾವನಾದ ಸುಷೇಣನು ನಿಮ್ಮ ನೇತೃತ್ವವನ್ನು ವಹಿಸುತ್ತಾನೆ. ಅವನು ಹೇಳಿದಂತೆ ಕೇಳಬೇಕು. ನಮಗೆಲ್ಲ ಗುರು ಅವನು. ನೀವೆಲ್ಲಾ ಪರಾಕ್ರಮಿಗಳು, ಜ್ಞಾನಿಗಳು.ಆದರೆ ಇವನು ನಿಮಗಿಂತಲೂ ಜ್ಞಾನಿ. ಹಾಗಾಗಿ ಅವನು ಹೇಳಿದ್ದನ್ನು ಕೇಳಿ ಎಂದ.

ಮುಂದೆ ಉತ್ತರ ದಿಕ್ಕು. ಅದಕ್ಕೆ ಶತವಲಿಯ ನೇತೃತ್ವ. ಅವನೊಂದಿಗೆ ಅವನಂಥ 1,00,000 ವಾನರರು. ಯಮದೇವನ ಮಕ್ಕಳನ್ನು ನಿನ್ನೊಟ್ಟಿಗೆ ಕರೆದುಕೊಂಡು ಹೋಗು ಎಂದು ಸುಗ್ರೀವ ಸೂಚಿಸಿದ. ಈ ದಿಕ್ಕಿಗೆ ಹಿಮಾಲಯವೇ ಅಲಂಕಾರ. ಅಲ್ಲಿ ರಾಮಪತ್ನಿಯನ್ನು ಅನ್ವೇಷಣೆ ಮಾಡಿ. ಇದೊಂದು ಕಾರ್ಯವಾದರೆ ನಾನು ಋಣಮುಕ್ತನಾಗುತ್ತೇನೆ. ನನ್ನನ್ನು ಋಣಮುಕ್ತನನ್ನಾಗಿ ಮಾಡಿ. ಪ್ರಭು ಶ್ರೀರಾಮನಿಂದ ನನಗೆ ದೊಡ್ಡ ಅನುಗ್ರಹವಾಗಿದೆ. ಚಿಕ್ಕಸೇವಯನ್ನು ಮಾಡಿದರೆ ಜನ್ಮಸಾರ್ಥಕ. ನಮಗೆ ಉಪಕಾರ ಮಾಡದಿದ್ದರೂ ಕೂಡ ಉಪಕಾರವನ್ನು ಮಾಡಬೇಕು. ಅದರಲ್ಲಿಯೂ ಇಂತಹ ಪೂರ್ವೋಪಕಾರಿಗೆ ಸೇವೆಯನ್ನು ಮಾಡಬೇಕು. ಹಾಗಾಗಿ ಏನಾದರೂ ಮಾಡಿ ಸೀತೆಯನ್ನು ಹುಡುಕಿ ಕೊಡಬೇಕು. ಶ್ರೀರಾಮನು ಸರ್ವಜೀವಗಳಿಗೆ ಮಾನ್ಯ. ಇವನು ವಿಶ್ವಮಾನ್ಯ. ಹೇಗೋ ಗೊತ್ತಿಲ್ಲ, ಅವನಿಗೆ ನಮ್ಮ ವಾನರರಲ್ಲಿ ಪ್ರೀತಿ ಬಂದಿದೆ. ಅವನು ಮನಸ್ಸು ಮಾಡಿದರೆ ದೇವ-ಗಂಧರ್ವರು ಅವನ ಸೇವಕರಾಗುವ ಸಾಧ್ಯತೆಯಿದೆ. ಆದರೆ ಅವನಿಗೆ ನಮ್ಮ ಮೇಲೆ ದೃಷ್ಟಿ. ಹಾಗಾಗಿ ನಾವು ಅವನ ಸೇವೆಯನ್ನು ಭಾಗ್ಯವೆಂದು ತಿಳಿಯಬೇಕು ಎಂದು ಹೇಳಿ ಉತ್ತರದ ವರ್ಣನೆಯನ್ನು ಪ್ರಾರಂಭಿಸಿದ. ಶೂರಸೇನ ದೇಶಗಳು, ಭರತ ದೇಶಗಳು, ಕಾಂಭೋಜ, ಯವನ, ಶಕ, ಪೌರವ, ಚೀನಾ ಮತ್ತು ಪರಮಚೀನಾ ಇನ್ನನೇಕ ದೇಶಗಳು. ಪದ್ಮಕ ವನಗಳು, ದೇವದಾರು ವನಗಳು. ಸೋಮಾಶ್ರಮ. ಕಾಲಪರ್ವತ. ಅದರಾಚೆ ಸುದರ್ಶನ, ದೇವಸಖವೆನ್ನುವ ಗಿರಿ. ಅಲ್ಲಿಂದ 100 ಯೋಜನದ ಶೂನ್ಯವಿದೆ. ಅದನ್ನು ದಾಟಿದರೆ ಕೈಲಾಸವನ್ನು ಕಾಣುತ್ತೀರಿ. ನಿಮಗೆ ಸಂತೋಷವಾಗುತ್ತದೆ. ಹತ್ತಿರದಲ್ಲಿ ಕುಬೇರನ ಭವನವಿದೆ. ಅಲಕಾನಗರಿ ಅದು. ಅನತಿ ದೂರದಲ್ಲಿ ವಿಶಾಲವಾದ ಸರೋವರವಿದೆ. ನಾವೀಗ ಅದನ್ನು ಮಾನಸ ಸರೋವರವೆಂದು ಕರೆಯುತ್ತೇವೆ. ಅದನ್ನು ಸುಗ್ರೀವ ವರ್ಣಿಸಿದ್ದಾನೆ. ಹಂಸ-ಕಾರಂಡವಗಳು, ಕಮಲಗಳು. ಅಪ್ಸರೆಯರು ಸ್ನಾನಮಾಡುತ್ತಾರೆ. ಅಲ್ಲಿ ಕುಬೇರ ರಮಿಸುತ್ತಾನೆ. ಮುಂದೆ ಕ್ರೌಂಚಪರ್ವತ. ಸ್ಕಂದನ ಶಕ್ತಿಯಿಂದ ಅಲ್ಲೊಂದು ಕಂದರ ನಿರ್ಮಾಣವಾಗಿದೆ. ಎಚ್ಚರಿಕೆಯಿಂದ ಪ್ರವೇಶ ಮಾಡಿ ಅಲ್ಲಿ. ಅದು ಸುಲಭವಲ್ಲ. ಅದರೊಳಗೆ ಮಹರ್ಷಿಗಳು ವಾಸಮಾಡುತ್ತಾರೆ. ಅಲ್ಲಿಂದ ಕಾಮಶೈಲ. ಆಮೇಲೆ ಮಾನಸವೆಂಬ ಪರ್ವತ. ಅಲ್ಲಿ ದೇವ, ದಾನವರು, ರಾಕ್ಷಸರು ಯಾರೂ ಹೋಗಲು ಸಾಧ್ಯವಿಲ್ಲ. ಅಂತಹ ಪರಿಸರ. ಅಲ್ಲಿ ಎಚ್ಚರಿಕೆಯಿಂದ ಹೋಗಬೇಕು. ಬಳಿಕ ಮೈನಾಕ ಪರ್ವತ. ಮಯನ ಭವನವಿದೆ. ಅಲ್ಲಿ ಕಿನ್ನರಿಯರು ಅಲ್ಲಿ ಕಾಣಲು ಸಿಗುತ್ತಾರೆ. ಬಳಿಕ ಒಂದು ಪುಣ್ಯಾಶ್ರಮ. ಮಹರ್ಷಿಗಳು ತಪಸ್ಸು ಮಾಡುವ ಆಶ್ರಮ. ಅವರಿಗೆ ಗೌರವ ಕೊಟ್ಟು ಸೀತೆಯ ಬಗ್ಗೆ ವಿನಯದಿಂದ ಕೇಳಬೇಕು. ಬಳಿಕ ವೈಖಾನಸ ಸರೋವರ. ಕುಬೇರನ ಆನೆ ಸಾರ್ವಭೌಮ ಆಗಾಗ ಬಂದು ಅಲ್ಲಿ ಸ್ನಾನಮಾಡುತ್ತಿರುತ್ತದೆ. ಜೊತೆಗೆ ಹೆಣ್ಣಾನೆಗಳ ಗುಂಪು. ಅದರಾಚೆಗೆ ಇನ್ನೊಂದು ಮಹಾ ಶೂನ್ಯವಿದೆ. ಅಲ್ಲಿ ಸಿದ್ಧರು, ದಿವ್ಯಪುರುಷರು ಇರುತ್ತಾರೆ. ಅವರ ಪ್ರಭೆಯಿಂದ ಬೆಳಗುವ ಪ್ರದೇಶವದು. ಮುಂದೆ ಶೈಲೋದ ಎಂಬ ನದಿ. ಅಲ್ಲಿ ಈ ಕಡೆಯಿಂದ ಆ ಕಡೆಯವರೆಗೂ ಬೆಳೆದ ಬಿದಿರುಗಳು ಸೇತುವೆಯಂತೆ ಕೆಲಸ ಮಾಡುತ್ತವೆ. ಸಿದ್ಧರು ಅದನ್ನು ದಾಟಿ ಹೋಗುತ್ತಾರೆ. ಆ ಕಡೆ ಹೋದರೆ ಉತ್ತರಕುರು ಎಂಬ ಪ್ರದೇಶ. ಮಹಾಭಾರತದಲ್ಲಿ ಇದರ ಉಲ್ಲೇಖವಿದೆ. ಭೂಮಿಯಲ್ಲಿರುವ ಸ್ವರ್ಗ ಅದು. ಯಾರಿಗೆ ದೊಡ್ಡ ಪುಣ್ಯವಿದೆ ಅಂಥವರು ಹೋಗಿ ವಾಸಮಾಡುವರು. ಅಲ್ಲಿ ಮರ-ಗಿಡ, ಪ್ರಾಣಿ-ಪಕ್ಷಿ ಎಲ್ಲವೂ ದಿವ್ಯವೇ. ಭುವಿಯಲ್ಲಿ ಕಾಣಲಾರದ ವೈಭವವೂ ಅಲ್ಲಿದೆ. ಅಲ್ಲಿ ವೃಕ್ಷಗಳು ಹಣ್ಣನ್ನು ಬಿಡುವುದಿಲ್ಲ. ಜೀವನದಲ್ಲಿ ನಮಗೇನು ಬೇಕೋ ಅದನ್ನು ಬಿಡುತ್ತವೆ. ಕಲ್ಪವೃಕ್ಷಗಳು. ಸುಖವಾಗಿರಲು ಏನೆಲ್ಲಾ ಬೇಕೋ ಅವೆಲ್ಲವನ್ನೂ ಹಣ್ಣುಗಳಂತೆ ಕೊಡುವಂಥ ವೃಕ್ಷಗಳು. ಗಂಧರ್ವರು, ಸಿದ್ಧರು, ಕಿನ್ನರರು ಬಂದು ರಮಿಸುತ್ತಾರೆ ಅಲ್ಲಿ. ಯಾರೂ ಹಾಡದೇ ಸಂಗೀತ ಕೇಳುತ್ತಿರುತ್ತದೆ ಅಲ್ಲಿ. ಅಲ್ಲಿ ಪುಣ್ಯಾತ್ಮರಲ್ಲದವರು ಹೋಗಲೇ ಸಾಧ್ಯವಿಲ್ಲ. ಅಲ್ಲಿ ಸಂತೋಷವಿಲ್ಲದವರು ಯಾರೂ ಇಲ್ಲ. ಎಲ್ಲರಿಗೂ ಒಳಿತೇ ಪ್ರಿಯ. ಅಲ್ಲಿ ಸುಖವು ಹೆಚ್ಚುತ್ತಿರುತ್ತದೆ. ಸ್ವರ್ಗಕ್ಕಿಂತ ಮಿಗಿಲಾದ ಪ್ರದೇಶವದು. ಅದನ್ನು ದಾಟಿದರೆ ಉತ್ತರಸಾಗರವಿದೆ. ಅಲ್ಲಿ ಸೋಮಗಿರಿ. ಇಂದ್ರ, ಬ್ರಹ್ಮಲೋಕದಿಂದ ಮಾತ್ರ ಆ ಗಿರಿಯನ್ನು ಕಾಣಬಹುದು. ಅಲ್ಲಿ ಸೂರ್ಯನ ವ್ಯಾಪ್ತಿಯಿಲ್ಲದಿದ್ದರೂ ತಾನೇ ತಾನಾದ ಬೆಳಗು ಅಲ್ಲಿದೆ. ಆ ಪ್ರದೇಶದಲ್ಲಿ ವಿಶ್ವಾತ್ಮಕನಾದ ವಾಸುದೇವ, ಏಕಾದಶಾತ್ಮಕನಾದ ರುದ್ರ, ಬ್ರಹ್ಮ ಈ ತ್ರಿಮೂರ್ತಿಗಳು ವಾಸಮಾಡುವರು ಅಲ್ಲಿ. ಇಲ್ಲಿಂದ ಮುಂದೆ ಹೋಗಲು ಸಾಧ್ಯವಿಲ್ಲ. ಇಲ್ಲಿಗೆ ಹೋಗುವುದು ಹೇಗೆಂದರೆ ಅವರೆಲ್ಲಾ ದೇವತೆಗಳ ಮಕ್ಕಳು. ದೇವತೆಗಳೇ. ಹಾಗಾಗಿ ಅವರಿಗೆ ಎಲ್ಲಾ ಕಾಣುವುದು. ನಾವೇನಾದರೂ ಸೀತೆಯನ್ನು ಹುಡುಕಿಕೊಡುವಲ್ಲಿ ಯಶಸ್ವಿಯಾದರೆ ರಾಮನಿಗೆ ತುಂಬಾ ಸಂತೋಷವಾಗುತ್ತದೆ. ನನಗೆ ರಾಮನಿಗಿಂತಲೂ ಹೆಚ್ಚು ಸಂತೋಷವಾಗುತ್ತದೆ. ಇದೊಂದು ಕೆಲಸವಾದರೆ ಎಲ್ಲರೂ ಒಟ್ಟಿಗೆ ಸುಖವಾಗಿರೋಣ.

ಹೀಗೆ ನಾಲ್ಕೂ ದಿಕ್ಕುಗಳ ವರ್ಣನೆಯನ್ನು ಮಾಡಿದ್ದಾನೆ ಸುಗ್ರೀವ. ನಾಯಕನು ಹೀಗೆ ವರ್ಣನೆಯನ್ನು ಮಾಡಿದರೆ ಸೇವಕರು ಸರಿಯಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಸುಗ್ರೀವನಿಗೆ ಮೋಸಮಾಡಲು ಸಾಧ್ಯವೇ ಇಲ್ಲ. ಅವನಿಗೆ ಎಲ್ಲವೂ ಪರಿಚಯವಿದೆ. ಅವನು ವಾನರರಿಗೆ ಅಪ್ಪಣೆಯನ್ನು ಕೊಟ್ಟಿದ್ದಾನೆ. ಇಷ್ಟಾದರೂ ಅವನಿಗೆ ಯಾರು ಹುಡುಕುತ್ತಾರೆಂದು ಗೊತ್ತಿದೆ. ಆದರೆ ಸಂಶಯ ಉಳಿಯಬಾರದೆಂದು ಎಲ್ಲಾ ಕಡೆಗೂ ಕಳುಹಿಸಿದ. ಒಂದು ವ್ಯಕ್ತಿಯನ್ನು ಹುಡುಕುವ ಇಂತಹ ಪ್ರಯತ್ನ ಯಾವ ಕಾಲದಲ್ಲಿಯೂ ನಡೆದಿಲ್ಲ. ಅಂತಹ ಅನ್ವೇಷಣೆಯ ಪ್ರಯತ್ನ. ಅವರು ಸೀತೆಯನ್ನು ನೋಡಿಲ್ಲ. ಆದರೂ ಅವಳನ್ನು ಹುಡುಕುತ್ತಾರೆ. ತುಂಬಾ ಜಾಣತನ ಸೇರಿದೆ ಇಲ್ಲಿ. ನಾಲ್ಕೂ ದಿಕ್ಕುಗಳಿಗೆ ವಿಭಾಗ ಮಾಡಿ ಕಳುಹಿಕೊಟ್ಟ ಸುಗ್ರೀವ ಅಷ್ಟಕ್ಕೆ ನಿಲ್ಲಲಿಲ್ಲ. ಅಖಂಡ ಭೂಮಂಡಲದ ಮಧ್ಯದಲ್ಲಿ ಒಂದು ಕಪಿ, ಒಂದು ದಿಕ್ಕು, ಒಂದು ಸ್ಥಳವನ್ನು ನಿರ್ದಿಷ್ಟವಾಗಿ ವಿಶೇಷವಾದ ಆದ್ಯತೆಗೆ ಒಳಪಡಿಸುತ್ತಾನೆ. ಅದು ರಾಮನ ಗಮನವನ್ನು ಕೂಡಾ ಸೆಳೆಯಿತು. ಅದೇನೆಂಬುವುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ
ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments