ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಯಾರದೋ ಉಪವಾಸ ಇನ್ಯಾರಿಗೋ ಸುಗ್ರಾಸ. ಈ ಹೊಸ ಗಾದೆ ಅನ್ವಯವಾಗುವುದಿದ್ದರೆ ಅದು ತ್ರೇತಾಯುಗದ ಅಂಗದಾದಿ ವಾನರರಿಗೆ ಮತ್ತು ಸಂಪಾತಿಗೆ. ಅಂಗದಾದಿಗಳು ಪ್ರಾಯೋಪವೇಶಕ್ಕೆ ಕುಳಿತಿದ್ದಾರೆ. ಯಾಕೆಂದರೆ ಕಾರ್ಯದಲ್ಲಿ ವಿಫಲವಾಗಿ ಬದುಕಿ ಏನೂ ಪ್ರಯೋಜನವಿಲ್ಲ. ಮಹತ್ಕಾರ್ಯಗಳು ಹಾಗೆಯೇ ಯಾವಾಗಲೂ.

ಸಾಹಸ ಮಾಡದೇ ಸಾಧನೆ ಮಾಡಲು ಆಗುವುದಿಲ್ಲ. ಸಾಧನೆ ಮಾಡ್ಬೇಕಾದ್ರೆ ಸಾಹಸವನ್ನು ಮಾಡ್ಬೇಕು.

ಬದುಕಿಗೊಂದು ಗರಿ ಸಿಗುವಂತಹ ಸಾಧನೆ ಮಾಡುವ ಅವಕಾಶ ವಾನರರಿಗೆ ಒದಗಿತ್ತು ಆದರೆ, ಯಾವಾಗ ಸಾಧನೆಯು ಸಾಧಿತವಾಗಲಿಲ್ಲವೋ ಅಥವಾ ಹಾಗೆ ಅಂದುಕೊಂಡರೋ ಆಗ ಮರಣ ಪರ್ಯಂತ ನಿರಶನಕ್ಕೆ ಕೂರ್ತಾರೆ. ಸಂಪಾತಿ ಯಾವಾಗ ಇವರನ್ನ ನೋಡಿದನೋ, ಮಾತುಗಳನ್ನ ಕೇಳಿಸಿಕೊಂಡನೋ, ನಾವೆಲ್ಲಾ ಉಪವಾಸವಿದ್ದು ಸಾಯೋಣ ಎಂದು ಹೇಳಿದ್ದನ್ನು ಕೇಳಿಸಿಕೊಂಡ. ಸಂಪಾತಿಗೆ ಪರಮಾನಂದವಾಯಿತು. ಯಾಕೆಂದರೆ ಹಸಿದು ಹಾತೊರೆಯುವವನು, ಹೊಟ್ಟೆ ತುಂಬಿಸಿಕೊಳ್ಳಲು ಕೈಕಾಲು ಇಲ್ಲದೇ ಇರುವವನು, ಅವನ ಬಾಯಿಗೇ ಆಹಾರ ಬಂದು ಬೀಳುವುದಾದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ ಹೇಳಿ. ಅವರ ಜನ್ಮವೇ ಅಂಥದ್ದು. ಪಾಪ. ಶವಗಳನ್ನೇ ತಿಂದು ಬದುಕುವಂಥ ಹದ್ದುಗಳು.
ಹಾಗಾಗಿ ವಾನರರ ಮಾತನ್ನು ಕೇಳಿಸಿಕೊಂಡು ಸಂಪಾತಿ ಹೇಳಿದ್ದು ಎಂತಹ ಭಾಗ್ಯ? ಏನು ಅದೃಷ್ಟ? ಎಂದು ವಿಧಿಗೆ ಧನ್ಯವಾದ ಹೇಳಿ, ಯೋಜನೆ ಹಾಕಿದನಂತೆ. ಇವರು ಒಬ್ಬೊಬ್ಬರೇ ಸಾಯಲಿ. ನಾನು ಒಬ್ಬೊಬ್ಬರನ್ನಾಗಿ ತಿನ್ತೇನೆ ಅಂತ.

ಸಂಪಾತಿ ಯಾರೆಂದರೆ ಗರುಡನ ಹಿರಿಯಣ್ಣ ಅರುಣನ ಮಗ, ಜಟಾಯುವಿನ ಸ್ವಂತ ಅಣ್ಣ. ಜಟಾಯು ರಾಮಕಾರ್ಯಕ್ಕಾಗಿ ಪ್ರಾಣ ಕೊಟ್ಟವನು. ಸದ್ಯದಲ್ಲಿ ಸಂಪಾತಿಯ ಸ್ಥಿತಿ ಏನು ಅಂದ್ರೆ ರಾಮ ಕಾರ್ಯಕ್ಕಾಗಿ ಬಂದವರನ್ನು ಭಕ್ಷಿಸುವ ಸನ್ನಿವೇಶ.

ಸಂಪಾತಿಯ ಮಾತು ಅಂಗದನಿಗೆ ಕೇಳಿಸ್ತು. ಇದ್ದಕಿದ್ದಂತೆ ಆಯಾಸವಾಯ್ತಂತೆ ಅವನಿಗೆ. ಹನುಮಂತನಿಗೆ ಹೇಳಿದನಂತೆ ಅಂಗದ. ನೋಡು ಹನುಮಂತ, ಪ್ರೀತಿಯ ನೆಪದಲ್ಲಿ ಸಾಕ್ಷಾತ್ ಸೂರ್ಯನ ಮಗನಾದ ಯಮನೇ ಈ ಸ್ಥಾನಕ್ಕೆ ಬಂದುಬಿಟ್ಟ ನೋಡು. ಎಷ್ಟು ಬೇಸರ. ಇತ್ತ ರಾಮನ ಕಾರ್ಯವನ್ನೂ ನಾವು ಸಫಲಗೊಳಿಸಲಿಲ್ಲ, ಅತ್ತ ರಾಜನ ಮಾತನ್ನೂ ಉಳಿಸಿಕೊಳ್ಳಲಿಲ್ಲ. ಏತನ್ಮಧ್ಯೆ ನಮಗೆ ಅಜ್ಞಾತವಾದ ವಿಪತ್ತು. ಈ ಹದ್ದನ್ನು ನೋಡಿದಾಗ ಅಂಗದನಿಗೆ ಆ ಹದ್ದಿನ ನೆನಪಾಯ್ತು. ಜಟಾಯು. ಎಂತಹ ಪುಣ್ಯಾತ್ಮ. ಸೀತೆಗಾಗಿ ಎಂತಹ ಸಾಹಸವನ್ನು ಮಾಡಿದ. ರಾಮನಿಗಾಗಿ ಪ್ರಾಣಿ ಪಕ್ಷಿಗಳೂ ಪ್ರಾಣವನ್ನ ಕೊಡ್ತಾವೆ. ಎಂಥವನು ರಾಮ! ಮನುಷ್ಯರಿರಲಿ, ಜಟಾಯುವಿನಂಥ ಪಕ್ಷಿಗಳು ಪ್ರಾಣ ಕೊಟ್ಟಿದಾವೆ, ನಮ್ಮಂಥ ಪ್ರಾಣಿಗಳು, ನಾವೂ ಕೂಡ ಪ್ರಾಣ ಕೊಡ್ತಿದೇವೆ. ರಾಮಕಾರ್ಯಕ್ಕಾಗಿ ತನ್ನನ್ನು ತಾನೇ ಸಮರ್ಪಣೆ ಮಾಡಿದ ಜಟಾಯು. ಆತ್ಮಾರ್ಪಣೆ ಮಾಡಿದ. ಧರ್ಮಜ್ಞ, ಮಹಾತ್ಮ ಜಟಾಯು. ನಾವಾದರೂ ಸರಿ, ರಾಮನಿಗಾಗಿ ಪ್ರಾಣ ಬಿಡಲಿಕ್ಕೆ ಸಿದ್ಧವಾಗಿರುವವರು, ಅಡವಿಯಲ್ಲಿ ಅಲೆದಾಡುತ್ತಿದ್ದವರು ರಾಮನಿಗಾಗಿ. ಈಗ ರಾಮ ಕಾರ್ಯವನ್ನು ಸಮಯದಲ್ಲಿ ಮಾಡಿ ಪೂರೈಸಲಿಕ್ಕೆ ಆಗಲಿಲ್ಲ ಎನ್ನುವ ಕಾರಣಕ್ಕಾಗಿಯೇ ಪ್ರಾಣ ಕೊಡ್ತಾ ಇದ್ದೇವೆ ಎಂಬುದಾಗಿ ಹೇಳಿ, ಅಂಗದನಿಗೊಂದು ವಿಚಿತ್ರ ಭಾವ ಬಂದ್ಬಿಡ್ತು. ಜಟಾಯುವೇ ವಾಸಿ, ಅವನೇ ಸುಖಿ. ಯಾಕಂದ್ರೆ ಅವನು ಸತ್ತು ಮುಕ್ತಿಯನ್ನು ಪಡೆದ. ಅವನಿಗೆ ಸುಗ್ರೀವನ ಭಯ ಇಲ್ಲ. ಪರಮಗತಿಯನ್ನು ಹೊಂದಿದನಂತೆ ಜಟಾಯು. ದಶರಥನ ಮರಣ, ರಾಮನ ವನವಾಸ, ವೈದೇಹಿ ಹರಣ, ವಾಲಿಯ ಮರಣ ಇದಕ್ಕೆಲ್ಲ ಕೈಕೇಯಿ ಕಾರಣ ಎಂದು ಅವಳನ್ನು ಜರಿದ.

ತಮ್ಮ ಇಂತಹ ಸ್ಥಿತಿಯಲ್ಲಿಯೂ ಕೂಡ ಅವರು ರಾಮನನ್ನ ಭಾವಿಸ್ತಾರೆ. ಸಂಪಾತಿಗೆ ಅದು ಕೇಳಿತು. ವಿಂಧ್ಯ ಪರ್ವತದಿಂದ ರೆಕ್ಕೆ ಸುಟ್ಟು ಬಿದ್ದಾಗಿನಿಂದ ಸಂಪಾತಿ ಜಟಾಯುವಿನ ಹೆಸರನ್ನು ಕೇಳಿರಲಿಲ್ಲ. ಜಟಾಯುವಿನ ವಧೆಯ ವಿಷಯ ಕೇಳಿದಾಗ ಅಸುಖವಾಯಿತು ಸಂಪಾತಿಗೆ. ಮನಸ್ಸು ಕಲಕಿತು. ದೈನ್ಯದಿಂದ ಮಾತಾಡಿದನಂತೆ ಜಟಾಯು. ಪ್ರಶ್ನಿಸ್ತಾನೆ. ಯಾರಿದು? ನನ್ನ ಹೃದಯವನ್ನು ಕಂಪಿಸುವಂತೆ ನನ್ನ ಪ್ರಾಣಪ್ರಿಯನಾದ ಜಟಾಯುವಿನ ವಧೆಯ ವಿಷಯವನ್ನು ಹೇಳುವವರು. ಹೇ ವಾನರರೇ ಏನದು ಕಥೆ? ಜನಸ್ಥಾನದಲ್ಲಿ ಯುದ್ಧ ನಡೆಯಿತಾ? ರಾಕ್ಷಸನಿಗೂ ಗೃಧ್ರನಿಗೂ. ಬಹುಕಾಲದ ಬಳಿಕ ನನ್ನ ತಮ್ಮನ ಹೆಸರನ್ನು ಹೇಳ್ತಾಯಿದೀರಿ ನೀವು. ಈ ಗಿರಿಯ ಮೇಲಿಂದ ನನ್ನನ್ನು ಕೆಳಗಿಳಿಸ್ತೀರಾ ಅಂತ ಪ್ರಾರ್ಥನೆ ಮಾಡ್ತಾನೆ ಕಪಿಗಳಲ್ಲಿ. ರಾಮನಿಗೆ ಏನು ಬಂತು ಅಂಥಾ ಸಂದರ್ಭಗಳು ಎಂಬುದಾಗಿ ಕೇಳಿ, ನಾನಾಗಿಯೇ ಬರುತ್ತಿದ್ದೆ ಆದರೆ ನನ್ನ ರೆಕ್ಕೆಗಳು ಸುಟ್ಟುಹೋಗಿವೆ, ನನ್ನನ್ನು ನಿಮ್ಮ ಬಳಿಗೆ ಕರೆದುಕೊಳ್ಳಿ ಎನ್ನುವಾಗ ವಾನರರು ಸಂಪಾತಿಯನ್ನು ನಂಬಲಿಲ್ಲ ತಿಂದುಬಿಟ್ಟರೆ ಅಂತ ಯೋಚನೆ ಮಾಡಿ ಆಮೇಲೆ ಹೇಳ್ತಾರೆ, ಹೇಗಿದ್ರೂ ಸಾಯೋದಕ್ಕೆ ಸಿದ್ಧರಾಗಿರುವವರು ನಾವು. ಸತ್ತಮೇಲೆ ತಿಂದ್ರೇನು? ಈಗಲೇ ತಿಂದ್ರೇನು? ದೇಹವು ಪಕ್ಷಿಗೆ ಆಹಾರವಾದರೆ ಸಿದ್ಧಿಯಂತೆ ಎಂದು ಹೇಳಿದಾಗ ಅಂಗದನು ಹೋಗಿ ಸಂಪಾತಿಯನ್ನು ಎತ್ತಿಕೊಂಡು ಬಂದು ಜಟಾಯು ಕೇಳಿದ್ದಕ್ಕಿಂತ ಜಾಸ್ತಿ ಕಥೆಯನ್ನೆ ಹೇಳಿದ ಅಂಗದ. ಋಕ್ಷರಜಸ್ಸು ಎಂಬ ವಾನರೇಂದ್ರನ ಮಕ್ಕಳು ವಾಲಿ-ಸುಗ್ರೀವರು ಎಂದು ಹೇಳಿ, ದಶರಥ ಚಕ್ರವರ್ತಿಯ ಮಗ ಶ್ರೀರಾಮ, ಕೈಕೇಯಿ ವರ ಕೇಳಿದ್ದು, ರಾಮ ಕಾಡಿಗೆ ಬಂದಿದ್ದು, ಸೀತಾಪಹಾರದ ಸಂದರ್ಭ, ಅಲ್ಲಿ ಜಟಾಯುವಿನ ಪ್ರಕರಣವನ್ನು ವಿಸ್ತಾರವಾಗಿ ಹೇಳ್ತಾನೆ. ರಾಮ ಋಷ್ಯಮೂಕಕ್ಕೆ ಬಂದಿದ್ದು, ರಾಮ ಸುಗ್ರೀವರ ಸಖ್ಯ, ವಾಲಿಯ ವಧೆ ಎಲ್ಲವನ್ನೂ ಹೇಳಿ, ಈಗ ಸುಗ್ರೀವ ರಾಜನಾಗಿದಾನೆ, ಒಂದು ತಿಂಗಳ ಅವಧಿಯಲ್ಲಿ ಸೀತೆಯನ್ನು ಹುಡುಕಿಕೊಂಡು ಬರಲು ನಮಗೆ ಅಪ್ಪಣೆ ಮಾಡಿದಾನೆ. ಒಂದು ತಿಂಗಳು ಕಳೆದು ಹೋಗಿದೆ. ಎಲ್ಲಿ ಹುಡುಕಿದರೂ ಸೀತೆ ಸಿಗಲಿಲ್ಲ. ಹಾಗಾಗಿ ಪವಿತ್ರವಾದ ಸಾವನ್ನಾದರೂ ಪಡೆಯುವ ಉದ್ದೇಶದಿಂದ ನಾವೆಲ್ಲರೂ ಪ್ರಾಯೋಪವೇಶ ಮಾಡ್ತಾ ಇದ್ದೇವೆ ಎಂದಾಗ ಸಂಪಾತಿಯ ಜೀವನದ ಆಸೆಯೂ ಕಮರಿತು. ಧಾರಾಕಾರವಾಗಿ ಕಣ್ಣೀರು ಹರಿಯಿತು. ಜಟಾಯು ನನ್ನ ಸ್ವಂತ ತಮ್ಮ ಎಂದಾಗ ನಿನ್ನ ರೆಕ್ಕೆ ಏನಾಯ್ತು ಅಂತ ಕೇಳಿದ ಅಂಗದ. ಸಂಪಾತಿ ಹೇಳ್ತಾನೆ. ಈ ವೃತ್ರಾಸುರನ ವಧೆಯಾದ್ಮೇಲೆ ಜಟಾಯು ಮತ್ತು ಸಂಪಾತಿ ಪಂಥ ಕಟ್ಟಿಕೊಂಡು ಸೂರ್ಯನೆಡೆಗೆ ಹಾರಿದಾರೆ. ಹಾಗೆ ಹಾರಿ ಬಹಳ ಎತ್ತರಕ್ಕೆ ಹೋದಾಗ ಸೂರ್ಯನ ಪ್ರಖರ ಕಿರಣಕ್ಕೆ ರೆಕ್ಕೆ ಸುಟ್ಟಿದೆ. ಇಬ್ಬರದ್ದು ಸುಡುತ್ತಿತ್ತು ಆದರೆ ಬೀಳುವ ಸಮಯದಲ್ಲಿ ಜಟಾಯುವಿನ ಮೇಲೆ ತನ್ನ ರೆಕ್ಕೆ ಕವಿಸಿದ ಸಂಪಾತಿ. ತನ್ನ ರೆಕ್ಕೆಯಿಂದ ಜಟಾಯುವನ್ನು ಮುಚ್ಚಿ ಜಟಾಯುವನ್ನು ರಕ್ಷಿಸ್ತಾನೆ ಸಂಪಾತಿ. ನಡೆದಿದ್ದಿದು. ಆಗ ಅಂಗದ ಕೇಳ್ತಾನೆ ನೀನು ಜಟಾಯುವಿನ ಅಣ್ಣನಾ? ಹಾಗಾದರೆ ನಮ್ಮ ಪೈಕಿಯೇ ನೀನು. ಜಟಾಯು ರಾಮ ಸೇವಕ. ನಾವೂ ರಾಮ ಸೇವಕರೇ. ನೀನು ನಮ್ಮವನೇ. ಸಂಪಾತಿ ನಿನಗೆ ರಾವಣನ ಮನೆ ಗೊತ್ತ? ಎಂದು ಕೇಳಿ, ಆ ರಾಕ್ಷಸಾಧಮ, ಮುಂದೇನಾಗಬಹುದು ಅಂತ ಗೊತ್ತಿಲ್ದೇ ಈ ಕೆಲಸ ಮಾಡಿದಾನೆ. ಹತ್ತಿರದಲ್ಲಿದ್ದರೂ ಅಡ್ಡಿಯಿಲ್ಲ, ದೂರದಲ್ಲಿದ್ದರೂ ಅಡ್ಡಿಯಿಲ್ಲ. ಹೇಳ್ತೀಯಾ ಎಲ್ಲಿದಾನೆ ಅಂತ ಕೇಳಿದಾಗ ಗಂಟಲು ಸರಿಪಡಿಸಿಕೊಂಡು ಅಭಯ ಕೊಟ್ಟನಂತೆ ವಾನನರಿಗೆ. ನೀವೇನು ಹೆದರಬೇಡಿ ಎಂಬುದಾಗಿ ಹೇಳಿ ವಾನರರನ್ನು ಹರ್ಷಗೊಳಿಸ್ತಾ ನಾನೂ ಒಂದು ಸೇವೆ ಮಾಡ್ತೇನೆ ರಾಮನಿಗೆ ಅಂತ ಹೇಳಿ, ನನಗೆ ವಯಸ್ಸಾಗಿದೆ, ರೆಕ್ಕೆ-ಪುಕ್ಕ ಇಲ್ಲ, ಬಾಯಿಯೊಂದಿದೆ ನನಗೆ. ಹಾಗಾಗಿ ಬಾಯಿಮಾತಿನ ಸೇವೆ.

ನಾನು ಏನೂ ಗೊತ್ತಿಲ್ಲದೇ ಇರುವವನಲ್ಲ. ನನಗೆ ವರುಣ ಲೋಕಗಳು ಗೊತ್ತು, ವಿಷ್ಣು ತ್ರಿವಿಕ್ರಮನ ಅವತಾರ ತಾಳಿದ್ದು ನೋಡಿದೇನೆ ನಾನು, ದೇವತೆಗಳು-ರಾಕ್ಷಸರ ಕದನಗಳೆಲ್ಲ ಗೊತ್ತು ನನಗೆ, ಸಮುದ್ರಮಥನಕ್ಕೆ ಸಾಕ್ಷಿ ನಾನು. ಮತ್ತೆ ಈಗಿನ ಪರಿಸ್ಥಿತಿಗೆ ಬಂದು, ರಾಮನ ಕಾರ್ಯ ಯಾವುದಿದೆಯೋ ಅದು ನನಗೆ ಪ್ರಥಮ ಕರ್ತವ್ಯ. ನಾನು ಅದನ್ನ ಮಾಡದೇ ಇರಲು ಸಾಧ್ಯವಿಲ್ಲ. ಆದರೇನು ಮಾಡೋದು ವಯಸ್ಸಾಗಿದೆ. ತೇಜಸ್ಸು ಹೋಗಿದೆ. ಪ್ರಾಣಗಳೆಲ್ಲ ಶಿಥಿಲವಾಗಿದೆ ಎಂದೆಲ್ಲ ಹೇಳಿ ನೇರವಾಗಿ ವಿಷಯ ಹೇಳಿದ. ಅಂದೊಂದು ದಿನ ರೂಪಸಂಪನ್ನಳಾದ ತರುಣಿಯನ್ನು ರಾವಣನು ಕದ್ದೊಯ್ಯುವುದನ್ನು ನೋಡಿದೆ ನಾನು. ರಾಮ ಲಕ್ಷ್ಮಣ ಎಂಬುದಾಗಿ ಕೂಗಿ ಕೂಗಿ ಕರೀತಾ ಇದ್ದಳು. ತಪ್ಪಿಸಿಕೊಳ್ಳಲು ಹೆಣಗಾಡ್ತಾ ಇದ್ದಳು. ಅವಳ ಕೌಶೇಯ ನನಗೆ ಸೂರ್ಯಪ್ರಭೆಯಂತೆ ಕಂಡಿತು. ಅವಳು ಸೀತೆ ಹೌದು. ರಾಮ ರಾಮ ಎಂದು ಕರೆದಿದ್ದಕ್ಕಾಗಿ ಆಕೆ ಸೀತೆಯೇ ಇರಬೇಕು. ಹ್ಞಾ! ರಾವಣನ ಮನೆ ಗೊತ್ತು ನನಗೆ. ಅವನು ವಿಶ್ರವಸರ ಮಗ, ವೈಶ್ರವಣನ ತಮ್ಮ. ಅವನಿರುವುದು ಲಂಕೆಯಲ್ಲಿ ಎಂದು ಹೇಳಿ, ಇಲ್ಲಿಂದಲೇ ನೂರು ಯೋಜನ ದೂರದಲ್ಲಿದೆ ಅದು. ಅಲ್ಲಿ ಸೀತೆ ಇದ್ದಾಳೆ. ಅಂದುಟ್ಟ ಕೌಶೇಯವನ್ನೇ ಉಟ್ಟಿದಾಳೆ. ರಾವಣನ ಅಂತಃಪುರದಲ್ಲಿ ಬಂಧಿಸಲ್ಪಟ್ಟಿದಾಳೆ. ಆಕೆಯನ್ನು ರಾಕ್ಷಸಿಯರು ಸುತ್ತುವರೆದಿದಾರೆ. ಮೈಥಿಲಿಯನ್ನು ನೀವು ಅಲ್ಲಿ ನೋಡಬಹುದು. ಹಾಗಾಗಿ ನೀವು ತ್ವರಿತವಾಗಿ ವಿಕ್ರಮಕ್ಕೆ ಮುಂದಾಗಿ ಎಂದು ಹೇಳಿ ಒಂದು ವಿಶೇಷವಾದ ಮಾತನ್ನಾಡ್ತಾನೆ. ನನ್ನ ಜ್ಞಾನ ನನಗೆ ಹೇಳ್ತಾಯಿದೆ ನೀವು ಗುರಿಮುಟ್ಟಿ ವಾಪಸ್ಸು ಬರ್ತೀರಿ. ನೀನು ಇಲ್ಲಿ ಕುಳಿತುಕೊಂಡು ಅವಳು ಅಲ್ಲಿ ರಾಕ್ಷಸಿಯರ ಮಧ್ಯದಲ್ಲಿ ಅಂತಃಪುರದಲ್ಲಿ ಇದಾಳೆ ಅಂತ ಹೇಗೆ ಹೇಳ್ತೀರಿ ಅಂತ ಕೇಳಿದ್ರು. ವೈನತೇಯನಿಗಿಂತ ಮೇಲೆ ಹಾರಲು ಯಾರಿಗೂ ಸಾಧ್ಯವಿಲ್ಲ ಅಂತಹ ವೈನತೇಯನ ಮಕ್ಕಳು ನಾವು. ಎತ್ತರಕ್ಕೆ ಹೋದಷ್ಟು ನಮ್ಮ ದೃಷ್ಟಿ ದೂರಕ್ಕೆ ಸಾಗುತ್ತದೆ. ಒಂದು ನೂರು ಯೋಜನ ದೂರ ನಾವು ನೋಡಬಲ್ಲೆವು ಎಂದು ಹೇಳಿ ರಾವಣನನ್ನು ಒಂದಷ್ಟು ಬೈದ ಸಂಪಾತಿ.

ಎಂಥಾ ಕೆಟ್ಟ ಕೆಲಸ ಮಾಡಿದಾನೆ ರಾವಣ. ಪ್ರತೀಕಾರ ಮಾಡ್ಬೇಕು ಅವನಿಗೆ. ಈ ಕಾರ್ಯದ ಮೂಲಕವಾಗಿ ನನ್ನ ಪ್ರತೀಕಾರವನ್ನೂ ತೀರಿಸ್ತೇನೆ ನಾನು. ನೀವೇನಾದ್ರೂ ಮಾಡಿ ಸಮುದ್ರವನ್ನು ದಾಟುವ ಯೋಚನೆ ಮಾಡಿ ಎಂದು ಹೇಳಿ ಕಪಿಗಳಿಗೆ ಒಂದು ವಿನಂತಿ ಮಾಡಿಕೊಂಡ್ನಂತೆ. ನನ್ನನ್ನ ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ ಜಟಾಯುವಿಗೆ ತರ್ಪಣ ಕೊಡ್ಬೇಕು ಎಂದಾಗ ಎರಡನೇ ಯೋಚನೆ ಮಾಡದೇ ಕೂಡಲೇ ಅವನನ್ನ ಹೊತ್ತುಕೊಂಡು ಸಮುದ್ರತೀರಕ್ಕೆ ಹೋಗಿ, ಅವನ ಕೈಯಲ್ಲಿ ತರ್ಪಣ ಕೊಡಿಸಿ, ಮತ್ತೆ ವಾಪಸ್ಸು ತಂದು ಅವನನ್ನು ಕೂರಿಸಿ ಅವನ ಸುತ್ತ ಕೂತ್ಕೊಂಡ್ರಂತೆ. ಜಾಂಬವಂತ ಎದ್ದು ನಿಂತು ಸಂಪಾತಿಯನ್ನ ಪ್ರಶ್ನಿಸ್ತಾನೆ. ಎಲ್ಲಿ ಸೀತೆಯನ್ನು ನೋಡಿದ್ದು? ಯಾರು ನೋಡಿದ್ದು? ಯಾರು ಕದ್ದೊಯ್ತಾ ಇದ್ದಿದ್ದು? ಇಡೀ ವಿವರ ಕೊಟ್ಟು ವಾನರರಿಗೆ ಜೀವನಕ್ಕೆ ದಾರಿಯಾಗು. ಸೀತೆಯನ್ನು ಕದ್ದೊಯ್ದಿದ್ದು ಯಾರೇ ಇರಲಿ, ಅವನಿಗೆ ದೆಸೆ ಕೆಟ್ಟಿದೆ. ರಾಮ ಲಕ್ಷ್ಮಣರ ಬಾಣಗಳು ಅಂದ್ರೇನು? ಅವನಿಗಷ್ಟು ಬುದ್ಧಿ ಇಲ್ವಾ? ಎಂದು ಹೇಳಿದಾಗ ಮುಂದಿನ ಮಾತುಗಳನ್ನ ಸಂಪಾತಿ ಹೇಳ್ತಾನೆ. ನಾನಿಲ್ಲಿ ಎಷ್ಟೋ ಕಾಲದಿಂದ ವಾಸವಾಗಿದೇನೆ. ಪ್ರಾಣ ಕ್ಷೀಣವಾಗಿದೆ. ಯಾರು ಸಾಕೋದು ನನ್ನನ್ನ? ನನ್ನ ಮಗ ಸುಪಾರ್ಶ್ವ. ಅವನು ದಿನಾ ಆಹಾರ ಹುಡುಕಿಕೊಂಡು ಬಂದು ನನಗೆ ಕೊಡುವುದು. ಹಾಗೆ ನನ್ನ ಬದುಕು ಸಾಗ್ತಾ ಇರುವಂಥದ್ದು. ಒಂದು ದಿನ ಎಷ್ಟು ಹೊತ್ತಾದರೂ ನನ್ನ ಮಗ ಆಹಾರ ತರಲೇ ಇಲ್ಲ. ಸೂರ್ಯಾಸ್ತವಾದ ಮೇಲೆ ಬಂದ ಮಗ ಆಹಾರ ತರಲಿಲ್ಲ. ಸಿಟ್ಟು ಬಂತು ನನಗೆ. ಬಾಯಿಗೆ ಬಂದಹಾಗೆ ಬೈದೆ ಮಗನಿಗೆ. ಅವನು ಸ್ವಲ್ಪವೂ ಸಹನೆ ಕಳೆದುಕೊಳ್ಳದೆ ಆದರಿಸಿ, ಕ್ಷಮೆಕೋರಿ ಇದ್ದ ವಿಷಯ ಹೇಳಿದ. ಅಪ್ಪ ಎಂದಿನಂತೆ ನಾನು ಆಹಾರಕ್ಕಾಗಿ ಮಹೇಂದ್ರಪರ್ವತಕ್ಕೆ ಹೋದೆ. ಮಹೇಂದ್ರ ಪರ್ವತದ ಮಾರ್ಗವನ್ನು ಆವರಿಸಿದ್ದೆ. ಯಾರೋ ಒಬ್ಬ ಬಂದ. ಒಂದು ಹೆಣ್ಣನ್ನು ಎಳೆದುಕೊಂಡು ತರುತ್ತಿದ್ದ. ಅವನು ಕಾಡಿಗೆ ಕಪ್ಪಂತೆ ಇದ್ದ, ಆಕೆ ಸೂರ್ಯೋದಯದಂತೆ. ಇಬ್ಬರಿಗೂ ಸ್ವಲ್ಪವೂ ಸಂಬಂಧವಿಲ್ಲ. ಅವನು ನನ್ನನ್ನು ಬೇಡಿಕೊಂಡ. ದಯವಿಟ್ಟು ದಾರಿಬಿಡು ಎಂದು ಮಂಡಿಯೂರಿ ಬೇಡಿಕೊಂಡ. ಹೋಗು ಎಂದು ಬಿಟ್ಟೆ. ಆಕಾಶವನ್ನೇ ನುಂಗುವವನಂತೆ ಹೋದ. ಅವನು ಆ ಕಡೆ ಹೋದಮೇಲೆ ಗಗನಸಂಚಾರಿಗಳಾಗಿರುವಂತಹ ಸಿದ್ಧ ಪುರುಷರು ಅಭಿನಂದಿಸಿದರು ನನ್ನನ್ನು. ಸದ್ಯ ಸೀತೆ ಬದುಕಿದಳು ಎಂದು. ಆಮೇಲೆ ಸಿದ್ಧಪುರುಷರು ಹೇಳಿದರು ನನಗೆ. ಅವನು ರಾಕ್ಷಸರ ದೊರೆ ರಾವಣ. ರಾಮನ ಪತ್ನಿ ಸೀತೆಯನ್ನು ಕದ್ದೊಯ್ಯುತ್ತಿರುವಂಥದ್ದು ಎಂದು ಅವರೆಲ್ಲ ಹೇಳಿದರು. ಇದಕ್ಕಾಗಿ ತಡವಾಗಿದ್ದು ಅಪ್ಪ ಎಂದು ಸುಪಾರ್ಶ್ವ ನನಗೆ ಹೇಳಿದ. ಹೀಗೆ ಇದೇ ದಾರಿಯಲ್ಲೇ ಸೀತೆಯನ್ನು ಮುಂದೆ ಕದ್ದೊಯ್ದಿದ್ದು. ಅದನ್ನು ಕೇಳಿಯೂ ರಾವಣನ ಜೊತೆಗೆ ಯುದ್ಧಕ್ಕೆ ಹೋಗಲಿಲ್ಲ ನಾನು. ರೆಕ್ಕೆ ಇಲ್ಲದ ಪಕ್ಷಿ. ಹೇಗೆ ಯುದ್ಧ ಮಾಡಲಿ? ಹಾಗಾಗಿ ತೆಪ್ಪಗೆ ಕುಳಿತೆ ನಾನು. ಆದರೆ ಒಂದು ಅವಕಾಶ ಈಗ ಬಂತು. ಧನ್ಯನಾದೆ. ಬಾಯಿಮಾತಿಂದ ರಾಮನ ಸೇವೆ ಮಾಡಲು ನನಗೊಂದು ಅವಕಾಶ ಒದಗಿ ಬಂತು. ನೀವೇನೂ ಯೋಚನೆ ಮಾಡ್ಬೇಡಿ. ನಿಮಗೆ ಬುದ್ಧಿಯೂ ಇದೆ. ಶಕ್ತಿಯೂ ಇದೆ. ರಾಮ ಲಕ್ಷ್ಮಣರಿದ್ದಾರೆ. ಅವರ ಬಾಣಗಳ ಮುಂದೆ ರಾವಣ ಏನು ದೊಡ್ಡ ವಿಷಯವೇ ಅಲ್ಲ. ಹಾಗಾಗಿ ಚಿಂತೆ ಮಾಡದೇ ಮುಂದುವರೆಯಿರಿ. ಸೀತೆಯ ವಾರ್ತೆಯನ್ನು ತನ್ನಿ. ಕಪಿಗಳೇ ನಿಶ್ಶಬ್ಧವಾಗಿ ಕುಳಿತು ಏಕಾಗ್ರವಾಗಿ ನಾನು ಹೇಳಿದ್ದನ್ನು ಕೇಳಿ ಎಂದು ಗದರಿಸಿ ಮುಂದಿನ ಕಥೆಯನ್ನು ಶುರು ಮಾಡ್ತಾನೆ ಸಂಪಾತಿ.

ಸೂರ್ಯಕಿರಣಗಳಿಂದ ಸುಟ್ಟು ನಾನು ವಿಂಧ್ಯ ಪರ್ವತದ ಮೇಲೆ ಉರುಳಿ ಬಿದ್ದೆ. ನನಗೆ ಎಚ್ಚರವಾಗಲು ಆರು ರಾತ್ರಿಗಳು ಬೇಕಾಯಿತು. ಎಚ್ಚರವಾದಾಗ ಇಡೀ ಮೈ ವೇದನೆ. ಕಷ್ಟದಲ್ಲಿ ಕಣ್ತೆರೆದು ಸುತ್ತ ನೋಡಿದೆ. ಎಲ್ಲಿದೇನೆ? ಯಾವ ಊರಿದು ಏನೂ ಗೊತ್ತಾಗಲಿಲ್ಲ. ಏಕೆಂದರೆ ಬುದ್ಧಿಯೇ ಸತ್ತುಹೋದಂತಹ ಸ್ಥಿತಿಯಿತ್ತು ನನಗೆ. ನಿಧಾನಕ್ಕೆ ಗೊತ್ತಾಯಿತು. ಸಮುದ್ರ, ಶಿಖರಗಳು, ಸರೋವರಗಳು, ಕಾಡು, ಸರಿಯಾಗಿ ಗೊತ್ತಾಗಿ ಹಳೆಯ ನೆನಪುಗಳು ಬರಲು ಶುರುವಾದ ಮೇಲೆ ಇದು ದಕ್ಷಿಣ ಸಮುದ್ರದ ಉತ್ತರ ತೀರ, ವಿಂಧ್ಯ ಪರ್ವತದ ಪರಿಸರ ಎಂಬುದು ನನಗೆ ಗೊತ್ತಾಯಿತು. ನನಗೆ ಗೊತ್ತಿತ್ತು ಅಲ್ಲಿ ಹತ್ತಿರದಲ್ಲಿ ವಿಶಾಕರ ಎಂಬ ಮಹಾಮುನಿಯ ಆಶ್ರಮವಿದೆ. ಹೇಗಾದರೂ ಮಾಡಿ ಹೋಗಿ ಅವರನ್ನ ಕಾಣಬೇಕು ಅಂತ ಅನ್ನಿಸ್ತು ನನಗೆ ಅಂತ ಹೇಳಿ ಮುಂದುವರಿಸ್ತಾನೆ ಸಂಪಾತಿ.

ಸಂಕಟಗಳು ಬಂದಾಗ ಗುರುವೇ ದಾರಿ

ನಾನು ಕಷ್ಟದಲ್ಲಿ ತೆವಳುತ್ತಾ ಸಾಗಿದೆ ವಿಶಾಕರರ ಆಶ್ರಮದ ಕಡೆಗೆ. ನಾನು ಜಟಾಯು ಸೇರಿ ಅವರ ದರ್ಶನಕ್ಕೆ ಎಷ್ಟೋ ಸಾರಿ ಹೋಗಿದೇವೆ ಅಲ್ಲಿಗೆ. ಆಶ್ರಮದಲ್ಲಿ ಯಾವಾಗಲೂ ತಂಪಾದ ಗಾಳಿ ಬೀಸುತಿತ್ತು. ಆ ರಮ್ಯವಾದ ಆಶ್ರಮಕ್ಕೆ ಹೋಗಿ, ಆ ಪಾವನ ಪರಿಸರದಲ್ಲಿ ಒಂದು ಮರದ ಬುಡದಲ್ಲಿ ಕಾಯ್ತಾ ಕುಳಿತೆ. ಎಂದಾದರೂ ದರ್ಶನವಾದೀತೇನೋ ಎಂದು. ಋಷಿಗಳು ದೂರದಿಂದ ಬರ್ತಾ ಇದಾರೆ. ಪ್ರಜ್ವಲಿಸುವ ತೇಜಸ್ಸು.

ಉತ್ತರಕ್ಕೆ ಮುಖಮಾಡಿ ಮರಳಿ ಆಶ್ರಮದ ಕಡೆಗೆ ಬರ್ತಾ ಇದಾರೆ ಅವರು. ಅವರ ಹಿಂದೆ ಪ್ರಾಣಿಗಳ ಸಾಲು. ಋಷಿಗಳು ಆಶ್ರಮಕ್ಕೆ ಸೇರಿದ ಮೇಲೆ ಎಲ್ಲವೂ ಮರಳಿದವು. ಋಷಿಗಳು ಪ್ರೇಮದೃಷ್ಟಿಯಿಂದ ನನ್ನನ್ನು ನೋಡಿದರು. ಆಶ್ರಮದೊಳಗೆ ಪ್ರವೇಶ ಮಾಡಿದರು. ಕೆಲ ಘಳಿಗೆಯ ಬಳಿಕ ನನ್ನ ಬಳಿ ಬಂದು ಏನಾಗಬೇಕು ಸಂಪಾತಿ ಎಂದು ಕೇಳಿದರು. ನನ್ನನ್ನು ನೋಡಿದಾಗ ಅವರಿಗೆ ಕರುಣೆ ಬಂತು. ಏನಾಯ್ತು ನಿನಗೆ? ರೆಕ್ಕೆಗಳೆರಡೂ ಸುಟ್ಟು ಹೋಗಿದಾವೆ. ಸಂಪಾತಿಯಲ್ಲವೇ ನೀನು? ಏನಾಯಿತು ಹೇಳು. ಯಾರು ನಿನಗೆ ಈ ಶಿಕ್ಷೆ ವಿಧಿಸಿದರು? ಅಂತ ಕೇಳ್ದಾಗ ಸಂಪಾತಿ ತಮ್ಮ ಹುಡುಗಾಟಿಕೆನ್ನ ಹೇಳ್ತಾನೆ. ಗಗನಗಮನ ಸಾಮರ್ಥ್ಯದ ದರ್ಪದಿಂದಾಗಿ ಕೈಲಾಸ ಪರ್ವತದಿಂದ ಅಸ್ತಪರ್ವತದವರೆಗೆ ಸೂರ್ಯನನ್ನ ಹಿಂಬಾಲಿಸುವ ಪಂಥ ಕಟ್ಟಿಕೊಂಡು ಮೇಲೇರಿದಾಗ ಬಳಲಿಕೆಯಾಯಿತು, ಕತ್ತಲಾಯಿತು, ಮೂರ್ಛೆ ತಪ್ಪುವಂತಾಗಿ ದಿಕ್ಕೇ ಗೊತ್ತಾಗದ ಸ್ಥಿತಿ ಉಂಟಾಯಿತು. ಆಗ ನಾನು ಬಲು ಕಷ್ಟದಲ್ಲಿ ಕಣ್ತೆರೆದು ಸೂರ್ಯನನ್ನು ನೋಡಿದೆ. ಆಗ ಭೂಮಂಡಲದಷ್ಟೇ ದೊಡ್ಡದಾಗಿ ಕಾಣ್ತಾಯಿತ್ತು ಸೂರ್ಯಮಂಡಲ. ಆಗ ಜಟಾಯು ಉದ್ದೇಶಪೂರ್ವಕವಾಗಿ ಕೆಳಗೆ ಹೋದನೋ ಅಥವಾ ಬಿದ್ದನೋ ಎಂದು ಗೊತ್ತಾಗಲಿಲ್ಲ. ಆಗ ನಾನೂ ಕೆಳಗೆ ಬಂದೆ. ನೋಡುವಾಗ ಜಟಾಯುವಿನ ರೆಕ್ಕೆಗಳು ಸುಟ್ಟು ಹೋಗುತ್ತವೆಯೇನೋ ಎಂದು ನನ್ನ ರೆಕ್ಕೆಗಳಿಂದ ಮುಚ್ಚಿದೆ ಜಟಾಯುವನ್ನು. ನಾನು ಸುಟ್ಟುಹೋದೆ, ಜಟಾಯು ಸುಡಲಿಲ್ಲ. ವಾಯುಪಥದಲ್ಲಿ ನಾನು ಸುಡುತ್ತಾ ಸುಡುತ್ತಾ ಕೆಳಗೆ ಬಿದ್ದೆ. ನಾನು ಬಿದ್ದಿದ್ದು ವಿಂಧ್ಯದಲ್ಲಿ. ಬಹುಶಃ ಜಟಾಯು ಜನಸ್ಥಾನದಲ್ಲಿ ಬಿದ್ದಿರಬಹುದು. ಈಗ ನನ್ನ ಸ್ಥಿತಿ ಏನು ಅಂದ್ರೆ, ರಾಜ್ಯವನ್ನು ಕಳೆದುಕೊಂಡೆ, ತಮ್ಮನನ್ನು ಕಳೆದುಕೊಂಡೆ, ರೆಕ್ಕೆಗಳನ್ನು ಕಳೆದುಕೊಂಡೆ, ಪರಾಕ್ರಮವನ್ನು ಕಳೆದುಕೊಂಡೆ. ಇನ್ನು ನನಗೆ ಸಾವೇ ಗತಿ. ಹೇಗಾದರೂ ಮಾಡಿ ವಿಂಧ್ಯಪರ್ವತವನ್ನು ಹತ್ತಿ ಧುಮುಕಿಬಿಡ್ತೇನೆ ಕೆಳಗೆ ಎಂದು ಹೇಳಿ ಅತ್ತಾಗ ವಿಶಾಕರ ಮುನಿಗಳು ಒಂದು ಘಳಿಗೆ ಏನನ್ನೂ ಹೇಳಲಿಲ್ಲ. ಧ್ಯಾನದಲ್ಲಿ ಮುಳುಗಿದರು. ಆ ಮೇಲೆ ಕಣ್ಣುಬಿಟ್ಟು ಹೇಳಿದ್ದೇನೆಂದರೆ, ಹೇ ಸಂಪಾತಿ ನಿನಗೆ ಮತ್ತೆ ರೆಕ್ಕೆ ಬರ್ತದೆ. ನಿನ್ನ ಪ್ರಾಣ, ನಿನ್ನ ವಿಕ್ರಮ, ನಿನ್ನ ಬಲ ಎಲ್ಲವೂ ಮೊದಲಿನಂತಾಗ್ತದೆ. ಮುಂದೇನೋ ಒಂದು ಮಹತ್ಕಾರ್ಯ ಆಗುವುದಿದೆ. ನಾನೂ ಕೇಳಿದ್ದೇನೆ. ತಪೋಬಲದಿಂದಲೂ ಗೊತ್ತು. ರಾಜಾ ದಶರಥನೆಂಬುವನಿಗೆ ರಾಮನೆಂಬ ಮಗನು ಮುಂದೆ ಹುಟ್ಟಿ ಬರ್ತಾನೆ. ರಾಮನು ವನವಾಸವನ್ನು ಮಾಡ್ತಾನೆ. ಅವನ ಪತ್ನಿಯನ್ನು ರಾವಣನೆಂಬ ರಾಕ್ಷಸನು ಅಪಹರಣ ಮಾಡ್ತಾನೆ. ಸೀತೆಯನ್ನು ಅವನು ನಾನಾ ರೀತಿಯಲ್ಲಿ ಆಮಿಷಕ್ಕೊಳಪಡಿಸಿದರೂ ಕೂಡ ಆಕೆ ಒಳಪಡೋದಿಲ್ಲ ಎಂದೆಲ್ಲ ಹೇಳಿ ವಿಶಾಕರ ಮುನಿಗಳು ಕೊನೆಯಲ್ಲಿ ಹೇಳಿದ್ದು ಒಂದು ದಿನ ಸೀತೆಯನ್ನು ಹುಡುಕಿಕೊಂಡು ರಾಮದೂತರಾದ ಕಪಿಗಳು ನಿನ್ನ ಹತ್ತಿರ ಬರ್ತಾರೆ. ನಿನಗೆ ಗೊತ್ತಿರ್ತದೆ ಸೀತೆ ಎಲ್ಲಿದಾಳೆ ಅಂತ. ನೀನು ಅವರಿಗೆ ಹೇಳ್ಬೇಕು. ಹೇಳಿದರೆ ನಿನಗೆ ಮತ್ತೆ ರೆಕ್ಕೆಗಳು ಬರ್ತದೆ. ಇಂತಹ ಸ್ಥಿತಿಯಲ್ಲಿ ಎಲ್ಲಿಗೆ ಹೋಗ್ತೀಯೆ ನೀನು? ಸುಮ್ಮನಿರು. ಕಾಲಕ್ಕಾಗಿ ಕಾಯಿ. ಈಗಲೇ ನಾನು ನಿನಗೆ ರೆಕ್ಕೆ ಬರುವಂತೆ ಮಾಡಬಹುದು ತಪಃಶಕ್ತಿಯಿಂದ. ಆದರೆ ವಿಧಿಯು ನಿನ್ನನ್ನು ಒಂದು ಕಾರ್ಯಕ್ಕಾಗಿ ಇಟ್ಟಿದೆ. ಆ ಕಾರ್ಯಕ್ಕೆ ನೀನು ಒದಗಬೇಕು. ಆ ಕಾರ್ಯ ರಾಮ-ಲಕ್ಷ್ಮಣರದ್ದು, ದೇವತೆಗಳದ್ದು, ಮುನಿಗಳದ್ದು, ಇಂದ್ರನದ್ದು, ಸಮಸ್ತ ಪ್ರಪಂಚದ್ದು. ವಿಶ್ವಕಲ್ಯಾಣ ಕಾರ್ಯಕ್ಕೆ ನೀನು ಒಂದು ಅಂಗವಾಗಬೇಕು. ನಾನೀಗ ರೆಕ್ಕೆಯನ್ನು ಕೊಟ್ಟು ಉಪಯೋಗವೇನು? ಅದಲ್ಲ, ಅಲ್ಲಿಯವರೆಗೆ ತಪಸ್ಸು ಮಾಡು. ಆ ವಾನರರು ಬಂದಾಗ ಸೀತಾವೃತ್ತಾಂತವನ್ನು ಹೇಳು ಎಂಬುದಾಗಿ ಹೇಳಿ ಕೊನೆಯದಾಗಿ ಹೇಳ್ತಾರೆ ಆ ಮುನಿಗಳು. ನನಗೂ ರಾಮ-ಲಕ್ಷ್ಮಣರನ್ನು ನೋಡುವ ಆಸೆ. ಆದರೆ ಆಯಸ್ಸು ಮುಗಿದಿದೆ. ಮುಗಿದ ಆಯಸ್ಸನ್ನು ಮುಂದುವರೆಸುವ ಮನಸ್ಸು ನನಗಿಲ್ಲ. ನಿಯತಿಯನ್ನು ಮೀರುವ ಇಚ್ಛೆ ನನಗಿಲ್ಲ ಹಾಗಾಗಿ ದೇಹವನ್ನು ಬಿಟ್ಟೆ. ರಾಮಸೇವಕರನ್ನು ನೀನು ನೋಡು. ನಿನ್ನ ಮೂಲಕ ನಾನು ನೋಡ್ತೇನೆ ಎಂಬುದಾಗಿ ಹೇಳಿ ತಮ್ಮ ಆಶ್ರಮವನ್ನು ಪ್ರವೇಶ ಮಾಡಿದರು.

ಅಂದಿನಿಂದ ಕಾಯ್ತಾ ಇದೇನೆ ನಾನು. ಎಷ್ಟೋ ವರುಷಗಳು ಆದವು. ಜೀವನದಲ್ಲಿ ಎಷ್ಟೋ ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದೆ. ಆದರೆ ಮುನಿಗಳ ಮಾತು ನೆನಪಾದಾಗ ಮತ್ತೆ ಬದುಕುವ ಆಸೆ. ಸಮಾಧಾನ. ಅದರಿಂದಾಗಿ ಬದುಕಿದೆ ನಾನು. ಮಗನಿಗೆ ಬೈದೆ ಮತ್ತೆ. ಯಾಕೆ ನೀನು ಸೀತೆಯನ್ನ ಕಾಪಾಡಲಿಲ್ಲ? ದಶರಥ ನನ್ನ ಸ್ನೇಹಿತ. ಯಾಕೆ ಮಾಡಲಿಲ್ಲ ಅಂತ ಗದರಿದೆ ನನ್ನ ಮಗನನ್ನು. ಹೀಗೆಲ್ಲಾ ಹೇಳ್ತಾ ಇದ್ದಂತೆಯೇ ರೆಕ್ಕೆಗಳು ಚಿಗುರಿದವು ಸಂಪಾತಿಗೆ. ರಾಮಸೇವೆಯ ಫಲವಾಗಿ, ಈ ಕಥೆಯನ್ನು ಹೇಳ್ತಾ ಇದ್ದಂತೆಯೇ ರೆಕ್ಕೆಗಳು ಚಿಗುರಿ ಬಂದೇಬಿಟ್ಟವು. ಕಲ್ಪನೆ ಮೀರಿದ ಆನಂದವನ್ನು ಸಂಪಾತಿ ಅನುಭವಿಸಿದನು ಮತ್ತು ವಾನರರಿಗೆ ಹೇಳಿದನು. ಋಷಿಗಳು ಹೇಳಿದಂತೆಯೇ ಆಯಿತು ಅಂತ ಸಂತೋಷದಿಂದ ಕೇಕೆ ಹಾಕಿ ಹೇಳಿ, ಯೌವ್ವನದಲ್ಲಿದ್ದ ಶಕ್ತಿ, ತೇಜಸ್ಸು, ಪರಾಕ್ರಮ ಮರಳಿ ಹಾಗೆಯೇ ಬರ್ತಾಯಿದೆ ಎಂಬುದಾಗಿ ಹೇಳಿ ಕಪಿಗಳಿಗೆ ಒಂದು ಮಾತನ್ನು ಹೇಳ್ತಾನೆ ಸಂಪಾತಿ. ನನ್ನನ್ನು ನೋಡಿ. ನನಗೇನಾಯಿತು ನೋಡಿ. ನಿಮ್ಮ ಕಾರ್ಯ ಸಿದ್ಧಿ ಆಗುತ್ತದೆ ಎನ್ನುವುದಕ್ಕೆ ನನಗೆ ಮರಳಿ ಮೂಡಿಬಂದ ರೆಕ್ಕೆಗಳೇ ಸಾಕ್ಷಿ. ನಿಮಗಿದು ಶುಭಶಕುನ. ಧೈರ್ಯವಾಗಿ ಮುನ್ನಡೆಯಿರಿ ಅಂತ ಹೇಳಿ ಎಷ್ಟು ದೂರಕ್ಕೆ ಹಾರಬಹುದು ಅಂತ ಒಂದು ಸಾರಿ ಆಕಾಶಕ್ಕೆ ಹಾರಿದನಂತೆ ಸಂಪಾತಿ.

ಮುಂದೇನಾಯಿತು ಎನ್ನುವುದನ್ನು ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ
ಪ್ರವಚನವನ್ನು ಇಲ್ಲಿ ಕೇಳಿರಿ:


ಪ್ರವಚನವನ್ನು ನೋಡಲು:

Facebook Comments