ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:
ಮಧ್ಯ ರಾಮಾಯಣದಲ್ಲಿ ಸುಳಿದು ಮರೆಯಾಗುವ ಎರಡು ಪಾತ್ರಗಳು : ಜಟಾಯು, ಸಂಪಾತಿ. ಎರಡೂ ಪಾತ್ರಗಳು ಹೆಚ್ಚು ಹೊತ್ತು ಇರೋದಿಲ್ಲ.
ಜಟಾಯು ಅರಣ್ಯಕಾಂಡದ ಮಧ್ಯದಲ್ಲಿ ಬರ್ತಾನೆ, ಅರಣ್ಯಕಾಂಡದ ಮಧ್ಯದಲ್ಲಿಯೇ ಹೋಗ್ತಾನೆ. ಸಂಪಾತಿ ಕಿಷ್ಕಿಂಧಾ ಕಾಂಡದ ಕೊನೆಯಲ್ಲಿ ಬಂದು ಕಿಷ್ಕಿಂಧಾ ಕಾಂಡದ ಕೊನೆಯಲ್ಲೇ ಹೋಗುತ್ತಾನೆ. ಸಂಪಾತಿಯ ಮಗ ಸುಪಾರ್ಶ್ವವನಂತೂ ರಂಗಕ್ಕೇ ಬರೋದಿಲ್ಲ, ಅಪ್ಪನ ಬಾಯಲ್ಲಿಯೇ ಬಂದು ಹೋಗ್ತಾನೆ. ಆದರೆ ಈ ಪಾತ್ರಗಳು ಎಷ್ಟು ಹೊತ್ತು ರಾಮಾಯಣದಲ್ಲಿ ಇದ್ದವು ಅನ್ನುವುದಕ್ಕಿಂತ ಅವು ಎಷ್ಟು ದೊಡ್ಡ ಕೊಡುಗೆಯನ್ನು ಕೊಟ್ಟವು ಎನ್ನುವುದು ನಮಗೆ ಮುಖ್ಯವಾಗ್ತದೆ.
Quantity ಅಲ್ಲ Quality ಯೇ ಮುಖ್ಯ.
ಎಷ್ಟು ಕಾಲ ಬದುಕಿದೆ ಅನ್ನುವುದು ಮುಖ್ಯವಲ್ಲ, ಬದುಕಿದ ಸಮಯವನ್ನು ಹೇಗೆ ಉಪಯೋಗಿಸಿದೆ? ಪ್ರಪಂಚಕ್ಕೆ ಏನು ಕೊಟ್ಟೆ? ನಿನ್ನ ಆತ್ಮಕ್ಕೆ ಕೊಟ್ಟುಕೊಂಡೆಯಾ? ಎನ್ನುವುದು ಮುಖ್ಯವಾಗ್ತದೆ. ಕೇವಲ ವಯಸ್ಸಿನಿಂದ, ಗಾತ್ರದ ಹಿರಿತನದಿಂದ ಶ್ರೇಷ್ಠತೆ ಬರುವುದಿಲ್ಲ. ಮೌಲ್ಯ ಬಹು ದೊಡ್ಡದು. ಈ ಎರಡು ಕೊಂಡಿಗಳಿಲ್ಲದಿದ್ದರೆ ರಾಮಾಯಣ ಮುಂದಕ್ಕೆ ಹೋಗುವುದೇ ಇಲ್ಲ.
ಸೀತೆಯನ್ನು ಕಳೆದುಕೊಂಡ ರಾಮನು ಮರಳಿ ಸೀತೆಯನ್ನು ಪಡೆಯುವಲ್ಲಿ, ರಾಮನನ್ನು ಕಳೆದುಕೊಂಡ ಸೀತೆಯು ಮರಳಿ ರಾಮನನ್ನು ಪಡೆಯುವಲ್ಲಿ, ಸೀತೆ ತನ್ನ ಮಾನವನ್ನು ಕಾಣುವಲ್ಲಿ ರಾಮಾಯಣವು ಜಗತ್ತಿಗೆ ಶಾಶ್ವತವಾಗಿ ಬೆಳಕಾಗಿ ನಿಲ್ಲುವಲ್ಲಿ ಈ ಎರಡು ಪಾತ್ರಗಳು ಮರೆಯಲಾರದ ಪಾತ್ರಗಳು. ಅಣ್ಣ ತಮ್ಮಂದಿರು ಸಂಪಾತಿ ಮತ್ತು ಜಟಾಯು. ಒಬ್ಬ ರಾಮನಿಗಾಗಿ ತನ್ನ ರೆಕ್ಕೆಯನ್ನು ಕಳೆದುಕೊಂಡ. ಇನ್ನೊಬ್ಬ ರಾಮನ ಸೇವೆಯನ್ನು ಮಾಡಿ ತನ್ನ ರೆಕ್ಕೆಯನ್ನು ಪಡೆದುಕೊಂಡ. ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ! ಅಲ್ಲಿ ಕಳೆದುಕೊಂಡ ರೆಕ್ಕೆ ಇಲ್ಲಿ ಬಂತು. ಜಟಾಯುವೇ ಸಂಪಾತಿ, ಸಂಪಾತಿಯೇ ಜಟಾಯು ಅಂತ ಅನ್ನಿಸ್ತದೆ. ಅವನು ನಿಲ್ಲಿಸಿದಲ್ಲಿ ಇವನು ಪ್ರಾರಂಭ ಮಾಡ್ತಾನೆ. ಜಟಾಯುವಿನ ಪ್ರಾಣವೇ ಹೋಯಿತು ರಾವಣನ ವಿವರವನ್ನು ಕೊಡುತ್ತಾ.. ಅಲ್ಲಿವರೆಗೂ ಅವನು ಬಿಡೋದಿಲ್ಲ. ಅದು ಅಲ್ಪವಿರಾಮ, ಯಾಕಂದ್ರೆ ಮುಂದೆ ಅಣ್ಣ ಮುಂದುವರೆಸ್ತಾನೆ. ಇಲ್ಲಿ ಸಂಪಾತಿ ಬಾಕಿ ಇದ್ದ ಇಡೀ ವಿವರವನ್ನು ಕೊಡ್ತಾನೆ. ಜಟಾಯು ಆರಂಭ ನಾಡಿದ್ದು ಸಂಪಾತಿಯಿಂದ ಪೂರ್ಣವಾಗ್ತದೆ.
ಜಟಾಯು ಆಚೆ ಶ್ರೇಯಸ್ಸನ್ನು ಕಂಡ, ಮುಕ್ತಿಯನ್ನು ಪಡೆದುಕೊಂಡ. ಶರೀರದಾಚೆಗಿನ ಸುಖ ಅವನಿಗೆ. ಸಂಪಾತಿ ಕಳೆದುಕೊಂಡದ್ದೆಲ್ಲ ಪುನಃ ಪಡೆದುಕೊಂಡ, ಇಲ್ಲಿಯ ಸೌಖ್ಯ, ಮರಳಿ ಯೌವ್ವನ, ಪರಾಕ್ರಮ, ತೇಜಸ್ಸು ಎಲ್ಲ ಬಂತವನಿಗೆ. ಅಣ್ಣ ತಮ್ಮಂದಿರು ಕೂಡಿದರೆ ಪೂರ್ಣ ಅದು. ಇಹ-ಪರ ಸೌಖ್ಯ.
ಜಟಾಯು ರಾವಣನೊಡನೆ ಯುದ್ಧ ಮಾಡಿದ. ಸಂಪಾತಿ ಯುದ್ಧ ಮಾಡದೇ ಕೊಂದ ರಾವಣನನ್ನು. ಜಟಾಯು ರಾಮನಿಗಾಗಿ ತನ್ನ ರೆಕ್ಕೆಯನ್ನು ತೆತ್ತ. ಸಂಪಾತಿಯು ತನ್ನ ತಮ್ಮ ಜಟಾಯುವಿಗಾಗಿ ರೆಕ್ಕೆಯನ್ನು ತೆತ್ತ. ಇದ್ದರೆ ಅಣ್ಣ ತಮ್ಮಂದಿರು ಜಟಾಯು ಸಂಪಾತಿಯಂತಿರಬೇಕು. ಈ ಸಾಹೋದರ್ಯ ಅದ್ಭುತವಾಗಿದೆ.
ಸಂಪಾತಿ ಬಂದು ಹೋದಕೂಡಲೇ ಎಂಥಾದ್ದೊಂದು ಬದಲಾವಣೆ ರಾಮಾಯಣದಲ್ಲಿ! ಬರುವ ಮುನ್ನ ರಾಮನ ಆಶಾಕಿರಣವೇ ಕಮರುವ ಸ್ಥಿತಿಯಲ್ಲಿತ್ತು!! ದಕ್ಷಿಣಕ್ಕೆ ಪ್ರಸ್ಥಾನಗೈದ ವಾನರರು ಪ್ರಾಣ ಬಿಡಲು ತಯಾರಾಗಿದ್ದರು. ಅವರ ಜೊತೆ ಸೀತಾನ್ವೇಷಣೆಯ ಆಶೆಯೂ ಕಮರಿ ಹೋಗುವುದರಲ್ಲಿತ್ತು. ಆದರೆ ಸಂಪಾತಿ ಬಂದು ಹೋಗಿದ್ದೇ, ಪ್ರೀತಿ ತುಂಬಿದ ಮಾನಸರಾದರು ಕಪಿಗಳು. ಸಾವಿನ ಕಡೆಗೆ ಮುಖ ಮಾಡಿದ್ದವರು ವಿಕ್ರಮ, ಅಭ್ಯುದಯದ ಕಡೆಗೆ ಉನ್ಮುಖರಾಗಿದ್ದಾರೆ ಕಪಿಗಳು. ಬದುಕು ಶ್ರೇಷ್ಠತೆಯನ್ನು ಮತ್ತು ಕನಿಷ್ಠತೆಯನ್ನು ಕೊಡುವಂಥದ್ದು. ಹಾಗಾಗಿ ಈ ಎರಡು ‘ಹದ್ದುಗಳ’ ಬದುಕಿನ ಶ್ರೇಷ್ಠತೆ ಗಮನಿಸಿ! ರಾಮನಿಗೆ ದೊಡ್ಡ ಸೇವೆಯನ್ನು ಈ ಎರಡು ಹದ್ದುಗಳೇ ಮಾಡಿದವು. ಕಪಿಗಳು ಇದ್ದಕ್ಕಿದ್ದಂತೆ ಅಭ್ಯುದಯದಲ್ಲಿ ತಮ್ಮ ಮನಸ್ಸನ್ನು ನೆಟ್ಟು ಸಂತೋಷಗೊಂಡು ಪೌರುಷದಿಂದ ಈಗ ಮತ್ತೆ ಪಥಕ್ಕೆ ಬಂದರು, ಸೀತೆಯನ್ನು ಹುಡುಕುತ್ತೇವೆ ಎಂದು ಪೂರ್ತಿಯಾಗಿ ಅವರ ಸೇವೆಯತ್ತ ಮನಸ್ಸನ್ನು ನೆಟ್ಟಿದ್ದಾರೆ. ಸಂಪಾತಿಯ ಸೇವೆಯಿದು. ನಾವು ಪಥಭ್ರಷ್ಟರಾದಾಗ ಅಮೃತದಂಥಾ ಪಾತ್ರಗಳು ಬಂದು ಜೀವನ “ಪಾವನವಾಗುತ್ತದೆ”.
ಕಪಿಗಳು ಎದ್ದು ರಾವಣ ಸತ್ತ ಎನ್ನುತ್ತಾ ಸಂತೋಷದಿಂದ ಸೀತೆಯ ದರ್ಶನ ಬಯಸಿದವರಾಗಿ ಸಮುದ್ರ ಕಡೆಗೆ ಬಂದರು. ಸಮುದ್ರವನ್ನು ನೋಡ್ತಾರೆ, ಸಮಸ್ತ ಪ್ರಪಂಚದ ಪ್ರತಿಬಿಂಬದಂತೆ ಇದೆ. ಆ ಸಮುದ್ರವನ್ನು ಮೀರಿ ನೆಗೆದು ಕಾರ್ಯಸಾಧನೆ ಮಾಡಬೇಕಾಗಿದೆ. ಬಗೆಬಗೆಯ ದೊಡ್ಡ ಗಾತ್ರದ ವಿಕೃತ ಜಲಚರರಗಳು ಕಾಣ್ತಾ ಇದ್ದಾವೆ ಸಮುದ್ರದಲ್ಲಿ. ಇವರಿಗೆ ಪ್ರಾಣಸಂಕಟ! ಸಮುದ್ರವನ್ನು ಹಾರುವಾಗ ಬಿದ್ದರೆ? ಕಂಡು, ಕಾಣದ ಹಲವು ಆಪತ್ತುಗಳು! ಕಾಣದ ಆಪತ್ತುಗಳು ಹೆಚ್ಚು ಭಯವನ್ನು ಉಂಟು ಮಾಡುತ್ತವೆ. ರೋಮಗಳು ನಿಮಿರಿ ನಿಂತವು. ತೀರವು ದೂರ..ದೂರ.. ಎಷ್ಟು ದೂರವೋ..!
“ಈ ಸಮುದ್ರವನ್ನು ದಾಟುವಾದದರೂ ಹೇಗೆ?” ಎಂಬ ಉದ್ಘಾರ ಅವರ ಬಾಯಿಂದ ತಾನಾಗಿಯೆ ಬಂತು. ಆ ಚಿಂತಾಕ್ರಾಂತವಾದ ತನ್ನ ಸೇನೆಯನ್ನು ಸಂತೈಸಿದನು ಹರಿಶ್ರೇಷ್ಠನಾದ ಅಂಗದ, ” ವಿಷಾದಕ್ಕಿಂತ ದೊಡ್ಡ ಕೇಡು ಬೇರೆ ಇಲ್ಲ. ನಮ್ಮನ್ನು ಕೊಂದುಬಿಡ್ತದೆ ವಿಷಾದ. ಆದ್ದರಿಂದ ವಿಷಾದಕ್ಕೆ ಮನಸ್ಸನ್ನು ಕೊಡಬೇಡಿ. ವಿಷಾದಕ್ಕೆ ಮನಸ್ಸು ಕೊಟ್ಟರೆ ಕಾರ್ಯನಾಶವಾಗುತ್ತದೆ. ಸವಾಲು ಮುಂದಿದ್ದಾಗ ವಿಕ್ರಮ ಬೇಕು ಹೊರತು ವಿಷಾದ ಸಲ್ಲ. ನಮ್ಮ ಏಳು-ಬೀಳುಗಳ ಹಿಂದೆ ಮನಸ್ಸೇ ಇದೆ. ನಾವು ಪರಾಕ್ರಮದಲ್ಲಿ ಹೋರಾಡಿದಾಗ ಸಾವೇ ಬಂದರೂ ಅದು ಸಾವಲ್ಲ. ವಿಷಾದವಲ್ಲ, ಪ್ರಸಾದ/ಪ್ರಸನ್ನತೆ ತುಂಬಾ ಮುಖ್ಯ ಬದುಕಿನಲ್ಲಿ” ಎಂದು ಅಂಗದ ಹೇಳುವಾಗ ಸೂರ್ಯಾಸ್ತವಾಯಿತು. ಸಂಜೆಯಾಯಿತು; ಲಾಭ ಏನು ಅಂದ್ರೆ, ಒಂದು ರಾತ್ರಿಯ ಅವಕಾಶ ಬಂತು. ಆಲೋಚನೆ ಮಾಡಬಹುದು ಮುಂದೇನು ಮಾಡಬಹುದು ಅಂತ.
ಎಷ್ಟೆಷ್ಟು ದೊಡ್ಡ ಜವಾಬ್ದಾರಿ ಇದೆಯೋ ಅಷ್ಟಷ್ಟು ದೊಡ್ಡ ಚಿಂತೆ. ಬೆಳಗಾಯಿತು, ಅಂಗದನು ವಾನರರ ಸಮಾಲೋಚನಾ ಸಭೆಯನ್ನು ಕರೆದ. ಸಾಗರ ತೀರದಲ್ಲಿ ಸಾಗರೋಪಾದಿಯಲ್ಲಿ ನೆರೆದ ಸೈನ್ಯ, ಅಧ್ಯಕ್ಷ ಅಂಗದ. ಹರಿವೃದ್ಧ (ಹಿರಿಯ ಕಪಿಗಳು)ರನ್ನು ಮುಂದಿಟ್ಟುಕೊಂಡು ಅಂಗದನು ಮಂತ್ರಾಲೋಚನೆಯನ್ನು ಮಾಡಿದ. ವಿಚಾರ ವಿನಿಮಯ ಆಗ್ಬೇಕು. ದೇವಾಂಶ ಸಂಭೂತ ಕಪಿಗಳೆಲ್ಲ ಕೂತ್ಕೊಂಡಿದ್ದಾರೆ. ಯಾರೂ ದುರ್ಬಲರಿಲ್ಲ, ಎಲ್ಲರೂ ಶಕ್ತಿಶಾಲಿಗಳು, ಮಾತ್ರವಲ್ಲ ಕಪಿಗಳು. ಬಲವಂತರು ಚಂಚಲರಾದಾಗ ನಿಯಂತ್ರಿಸಲು ಅಂಗದ ಹನುಮಂತರಲ್ಲದೆ ಯಾರಿಂದಲೂ ಸಾಧ್ಯವಿಲ್ಲ. ನಾಯಕನಾದರೂ, ಮೊದಲು ಹಿರಿಯ ಕಪಿಗಳ ಮತ್ತು ವಾನರ ಸೇನೆಯ ಅಪ್ಪಣೆ ಪಡೆದು, ‘ ನಮ್ಮ ನಡುವೆ ಇರುವ ಯಾವ ಮಹಾತೇಜಸ್ವಿಯು ಸಮುದ್ರವನ್ನು ಲಂಘಿಸಬಲ್ಲ? ಹೇಳಿ, ಸುಗ್ರೀವನ (ಸ್ವಾಮಿಯ) ಮಾತುಳಿಸುವವರು ಯಾರು? ನಮ್ಮೆಲ್ಲರ ಪ್ರಾಣಭೀತಿಯನ್ನು ಕಳೆಯುವವರು ಯಾರು? ಯಾರ ಪ್ರಭಾವದಿಂದ ನಾವೆಲ್ಲ ಸಫಲರಾಗಿ, ಸುಖಿಗಳಾಗಿ ಊರಿಗೆ ಮರಳಿಯೇವು? ಯಾರು ಆ ಒಂದು ಉಪಕಾರವನ್ನು ಮಾಡುವವನು? ನೂರು ಯೋಜನವನ್ನು ಲಂಘಿಸುವಂತಹ ಸಾಮರ್ಥ್ಯ ಉಳ್ಳವನು ಯಾರು? ನಿಮ್ಮಲ್ಲಿ ಯಾರು ಮತ್ತೆ ನಾವು ಸಂತೋಷದಿಂದ ರಾಮ ಲಕ್ಷ್ಮಣರನ್ನು, ಸುಗ್ರೀವನನ್ನು ಕಾಣುವವರು? ನಿಮ್ಮಲ್ಲಿ ಯಾರಾದರೂ ಸಾಗರೋಲ್ಲಂಘನದ ಸಮರ್ಥನಿದ್ದರೆ ಅವನು ಮುಂದೆ ಬರಲಿ, ನಮಗೆಲ್ಲ ಅಭಯ ದಕ್ಷಿಣೆಯಲ್ಲಿ ಕೊಡಲಿ’ ಎಂಬುದಾಗಿ ಅಂಗದನು ಆ ಸೇನೆಯಲ್ಲಿ ಕೇಳಿಕೊಂಡನು.
ಏನಾಗಿರಬಹುದು? ಆಗ… ಆ ಸೇನೆಯಲ್ಲಿದ್ದ ಯಾರೊಬ್ಬರೂ ಯಾವ ಮಾತನ್ನೂ ಆಡಲಿಲ್ಲ. ಯಾರೂ ಅಲುಗಾಡಲೂ ಇಲ್ಲ. ಸೇನೆಗೆ ಸೇನೆಯೇ ಸ್ತಬ್ಧವಾಯಿತು. ಒಂದೇ ಒಂದು ಭರವಸೆಯ ಧ್ವನಿಯಿಲ್ಲ, ಘೋರ ಮೌನ, ಗಾಢಾಂಕಾರ! ಆಗ ಮತ್ತೆ ಅಂಗದನು ಕಪಿಗಳಿಗೆ ಹೇಳಿದನಂತೆ , ‘ನೀವೆಲ್ಲ ಬಲಶಾಲಿಗಳಲ್ಲಿ ಶ್ರೇಷ್ಠರು, ದೊಡ್ಡ ದೊಡ್ಡ ಕುಲಗಳಿಗೆ ಸೇರಿದ್ದೀರಿ, ಸಮ್ಮಾನವುಳ್ಳವರಾಗಿದ್ದೀರಿ, ಸಾಮರ್ಥವುಳ್ಳವರು ಆಗಿದ್ದೀರಿ..’ ಮತ್ತೆ ಅಂಗದನು ತನ್ನ ವಾಕ್ಯದಲ್ಲಿ ತಿದ್ದುಪಡಿ ಮಾಡಿ, “ಯಾರು ಎಷ್ಟು ಹಾರ ಬಲ್ಲಿರಿ ಅದಾದರೂ ಹೇಳಿ, ಯಾರದ್ದು ಎಷ್ಟು ಶಕ್ತಿ ಎಂಬುದಾಗಿ ಒಬ್ಬೊಬ್ಬರಾಗಿ ಹೇಳಿಕೊಳ್ಳಿ” ಎಂಬುದಾಗಿ ಹೇಳಿದಾಗ ನಿಜವಾದ ಶಕ್ತಿ ಹೊರಬಂತು.
ತಮ್ಮ ತಮ್ಮ ವ್ಯಾಪ್ತಿಯನ್ನು ಒಬ್ಬೊಬ್ಬ ಕಪಿಯೂ ಹೇಳ್ತಾ ಹೋಗ್ತಾನೆ. 10 ಯೋಜನ ಹಾರಬಲ್ಲೆ, 20 ಯೋಜನ ಹಾರುತ್ತೇನೆ, 30 ಯೋಜನ, 40 ಯೋಜನ, 50 ಯೋಜನ, 60 ರ ಮೇಲೆ ಕ್ರಮಿಸಬಲ್ಲೆ, 70 ಯೋಜನ ದಾಟಿ ಹೋಗಬಲ್ಲೆ, 80 ಯೋಚನ ಹಾರಬಲ್ಲೆ, ಮತ್ತೆ ಮೌನ.. ನಿಶ್ಶಬ್ಧ.. ಯಾರೂ ಮಾತಾಡಲಿಲ್ಲ. ಹನುಮಂತನಂತೂ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಕುಳಿತಿದ್ದ. ಕಾರಣವಿದೆ, ಅವನಿಗೆ ತನ್ನ ಸಾಮರ್ಥ್ಯ ಗೊತ್ತಿರಬೇಕಲ್ಲ!! ಇತ್ತ ಎಲ್ಲರನ್ನು ನೋಡ್ತಾ ಇದ್ದ ಆ ಮುದಿಜೀವ.. ಜಾಂಬವಂತ ಎದ್ದು ನಿಂತು ಉಳಿದ ಕಪಿಗಳಲ್ಲಿ ‘ನಾನು ಮಾತಾಡಲಾ?’ ಅಂತ ಕೇಳ್ತಾನೆ, ಸ್ವಲ್ಪ ಪೀಠಿಕೆ ಹಾಕಿದ.. ಮತ್ತೆ ಮುಂದುವರಿಸ್ತಾನೆ ವಯಸ್ಸಾಗಿದೆ ಈಗ, ಅಡಗಿ ಹೋಗಿದೆ ಆ ಪರಾಕ್ರಮ. ಆದರೆ ನಮ್ಮ ಪ್ರಭು ಸುಗ್ರೀವ, ನಮ್ಮ ದೇವ ರಾಮ ಹೇಳಿದ ಮೇಲೆ ಸುಮ್ಮನಿರಲಿಕ್ಕೆ ಸಾಧ್ಯವೇ? ನನ್ನ ಈಗಿನ ತಾಕತ್ತು : 90 ಯೋಜನ ಹಾರಬಲ್ಲೆ, ಸಂಶಯವಿಲ್ಲ. ಆದರೆ ಇದರಿಂದ ಕಾರ್ಯಸಾಧನೆಗೆ ಪ್ರಯೋಜನವಿಲ್ಲ’ ಎಂದ ಮಾತು ಮುಗಿಸಿದ.
ಕೊನೆಗೆ ಮತ್ತೆಲ್ಲ ಮುಗಿದ ಮೇಲೆ ನಾಯಕ ಅಂಗದ ಜಾಂಬವಂತನ ಅಪ್ಪಣೆಯನ್ನು ಕೇಳ್ತಾನೆ. ‘100 ಯೋಜನವನ್ನು ನಾನು ಹಾರಬಲ್ಲೆ, ಹೋಗಿ ಸೇರಬಲ್ಲೆ ಲಂಕೆಯನ್ನು. ಆದರೆ ಮರಳಿ ಬರಲಿಕ್ಕೆ ಶಕ್ತಿ ಉಳಿದಿರುತ್ತದೋ ಇಲ್ಲವೋ ಗೊತ್ತಿಲ್ಲ.’ ಇದರಿಂದಲೂ ಪ್ರಯೋಜನವಿಲ್ಲ. ಯಾಕೆಂದರೆ ಲಂಕೆಗೆ ಹೋದ ಮೇಲೆಯೇ ತುಂಬ ಶಕ್ತಿಯು ಬೇಕಾಗುವಂಥದ್ದು. ಯಾಕೆಂದರೆ ಘನಘೋರ ಯುದ್ಧವೇ ಸಂಭವಿಸಬಹುದು. ಅಂತಹ ಸನ್ನಿವೇಶ ಮುಂದಕ್ಕಿದೆ. ಕಾರ್ಯಸಿದ್ಧಿ ಇಲ್ಲ ಇದರಿಂದಲೂ, ಹೋದವನನ್ನು ಕಳೆದುಕೊಂಡಂತೆ ಆಯಿತು, ರಾಕ್ಷಸರ ಬಾಯಿಗೆ ಹಾಕಿದಂತೆ ಆಯಿರು.
ಆಗ ಜಾಂಬವಂತ, ನಿನ್ನ ಶಕ್ತಿಯನ್ನು ನಾನು ಬಲ್ಲೆ, ಆದರೆ ನಿನ್ನನ್ನು ಕಳುಹಿಸುವ ಹಾಗಿಲ್ಲ. ನೀನು ನಮ್ಮ ನಾಯಕ, ನಿನ್ನನ್ನು ರಕ್ಷಿಸಿಕೊಳ್ಳಬೇಕು ಸೈನ್ಯ. ದೊರೆಯು ಬೇರು ಇದ್ದಂತೆ ನಮಗೆ’ ಎಂದಾಗ ಅಂಗದ ಹೇಳಿದನಂತೆ, ‘ನಾನು ಹೋಗುವುದಿಲ್ಲ ಅಂತಾದರೆ ಬೇರೆ ಯಾರೂ ಹೋಗುವವರಿಲ್ಲ, ನೀನೇ ನೋಡು ಜಾಂಬವಂತ, ಕಾರ್ಯಸಾಧನೆಯಾಗುವುದು ಹೇಗೆ? ನೀನೇ ಎಲ್ಲವನ್ನು ಬಲ್ಲವನು, ಬದುಕನ್ನು ಬಹಳ ಕಂಡವನು. ನೀನೇ ಯೋಚನೆಯನ್ನು ಮಾಡಬೇಕು, ಉತ್ತರ ಕೊಡಬೇಕು’.
ಜಾಂಬವಂತ ಹೇಳಿದನಂತೆ, ‘ ಹೇ ಅಂಗದ, ಏನೂ ಚಿಂತೆ ಮಾಡಬೇಡ. ಈ ಕಾರ್ಯವು ಕಿಂಚಿತ್ತೂ ತೊಂದರೆಯಿಲ್ಲದೆ ಪೂರ್ಣವಾಗ್ತದೆ. ಯಾರು ಈ ಕಾರ್ಯವನ್ನು ಮಾಡಿ ಪೂರೈಸಬಲ್ಲನೋ, ಅವನನ್ನು ನಾನು ಬಲ್ಲೆ. ಆದರೆ ಅವನು ಅವನನ್ನು ಬಲ್ಲ ಎನ್ನುವಂತಿಲ್ಲ. ಅವನೇ ಅವನನ್ನು ಅರಿಯ. ಆದರೆ ನಾನು ಅವನನ್ನು ಅರಿವೆ. ನಾನು ಪ್ರಚೋದಿಸ್ತೇನೆ ಅವನನ್ನು ಎಂದು ಜಾಂಬವಂತನು ಹೇಳಿದ. ಅಂಗದ ಕುತೂಹಲದಲ್ಲಿ ನೋಡ್ತಾ ಇದ್ದ, ಎಲ್ಲ ಕಪಿಗಳ ದೃಷ್ಟಿ ಜಾಂಬವಂತನಲ್ಲಿ ನೆಟ್ಟಿತು. ಜಾಂಬವಂತ ಯಾರು ಅಂತ ಹೇಳಲಿಲ್ಲ. ಅವನು ಹುಡುಕುತ್ತಾ ಇದ್ದಾನೆ. ಎಲ್ಲಿ ಹೋದ ಅವನು? ಯಾವಾಗಲೂ ಮುಂದಿರುವವನು, ಯಾವಾಗಲೂ ಮಧ್ಯದಲ್ಲಿ ಇರುವವನು, ಕಣ್ಮುಂದೆ ಇರುವವನು, ಮುಂದಾಗಿ ಮಾತನಾಡುವವನು, ಕಣ್ಣಿಗೇ ಕಾಣ್ತಾ ಇಲ್ಲ. ಯಾರೂ ಕಾಣದಿರುವ, ಗಮನಿಸದಿರುವ ಏಕಾಂತವನ್ನು ಸೇರಿ ಸುಮ್ಮನೆ ಕುಳಿತುಕೊಂಡಿದ್ದಾನೆ ಹನುಮ. ದೊಡ್ಡ ವಿಪರ್ಯಾಸ ಇದು. ಎಲ್ಲವನ್ನೂ ಮಾಡಬಲ್ಲ, ಅವನೊಬ್ಬನೇ ಪರಿಹಾರ. ಆದರೆ ಅವನಿಗೇ ಗೊತ್ತಿಲ್ಲ ಎನ್ನುವ ಸ್ಥಿತಿ.
ಕಪಿವೀರನಾದ ಜಾಂಬವಂತ ಮತ್ತೊಬ್ಬ ಮಹಾವೀರನನ್ನು ಪ್ರಚೋದಿಸಿದನು. ಚೆನ್ನಾಗಿ ಗೊತ್ತು ಜಾಂಬವಂತನಿಗೆ, ಅವನೇ ಈ ಕಾರ್ಯವನ್ನು ಮಾಡಬಲ್ಲ. ಆತ್ಮವಿಸ್ಮೃತಿಯ ಶಾಪ ಬಂದಿತ್ತು ಹನುಮನಿಗೆ. ನೀನು ಯಾರು ಅಂತ ನಿನಗೇ ಮರೆತು ಹೋಗಲಿ ಅಂತ. ನೀನೇ ‘ಕಲಿ ಹನುಮ’ ಅಂತ ಯಾರಾದರೂ ಹೇಳುವವರೆಗೆ ಅವನಿಗೆ ಗೊತ್ತಿರುವುದಿಲ್ಲ. ಹಾಗಾಗಿ ತನ್ನ ಕೈಯಲ್ಲಿ ಏನೂ ಆಗುವುದಿಲ್ಲ ಎನ್ನುವ ಭಾವದಿಂದ, ನಾಚಿಕೆಯಿಂದ ಒಡನಾಡಿಗಳನ್ನು ಬಿಟ್ಟು ಹೋಗಿ ಮೂಲೆಯನ್ನು ಸೇರಿದ್ದಾನೆ ಹನುಮ.
ಜಾಂಬವಂತನ ಪ್ರಚೋದನೆ & ಹನುಮಂತನ ಮಹಾಸಾಧನೆಯ ಭಾಗವನ್ನು ಶ್ರೀಸಂಸ್ಥಾದವರ ಮುಂದಿನ ಪ್ರವಚನದಲ್ಲಿ ನೋಡೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:
ಪ್ರವಚನವನ್ನು ನೋಡಲು:
Leave a Reply