ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ನಂಬಬೇಕಾದವರನ್ನು ಸಂಶಯಿಸಬಾರದು, ಸಂಶಯಿಸಬೇಕಾದವರನ್ನು ನಂಬಬಾರದು. ಸೀತೆ ಲಕ್ಷ್ಮಣನನ್ನು ಸಂಶಯಿಸಿದಳು, ಮಾಯಾಮೃಗವನ್ನು ನಂಬಿದಳು. ಪರಿಣಾಮ ಏನಾಯಿತು.? ಇದೀಗ ಸುಗ್ರೀವನ ಸರದಿ. ಸುಗ್ರೀವನಿಗೆ ಶಂಕೆಯುಂಟಾಗಿದೆ. ಬೆಟ್ಟದ ಮೇಲಿರುವ ಸುಗ್ರೀವ ಬೆಟ್ಟದ ಕೆಳಗೆ ಸಂಚಾರ ಮಾಡ್ತಾ ಇರುವಂತಹ ಅಥವಾ ಬೆಟ್ಟವನೇರ ಬಯಸತಕ್ಕಂಥಹ ರಾಮಲಕ್ಷ್ಮಣರನ್ನು ಗಮನಿಸಿದ್ದಾನೆ. ಕಬಂಧ ರಾಮಲಕ್ಷ್ಮಣರಿಗೆ ವಿಳಾಸವನ್ನೇ ಕೊಟ್ಟಿದಾನೆ, ಸುಗ್ರೀವ ಎಲ್ಲಿದಾನೆ, ಆ ಗುಹೆ ಅದರ ಮುಂದಿರುವ ನೀರು, ಏನೊಂದೂ ಬಿಟ್ಟಿಲ್ಲ, ಸಂಪೂರ್ಣ ವಿವರವನ್ನೇ ಕೊಟ್ಟಿದಾನೆ. ಮಹಾತ್ಮರು ರಾಮಲಕ್ಷ್ಮಣರು. ಮತ್ತೂ ಅವರಿಬ್ಬರ ಕೈಯಲ್ಲಿ ಉತ್ತಮಾಯುಧಗಳಿದೆ. ಅವರನ್ನು ಕಂಡಾಗ ಶಂಕೆಯುಂಟಾಯಿತು ಸುಗ್ರೀವನಿಗೆ. ಬದುಕಿನಲ್ಲಿ ಆದ ಕಹಿಘಟನೆಗಳು, ಬಂದ ಅನಾಹುತಗಳ ಪರಂಪರೆಯ ಪರಿಣಾಮವಾಗಿ ಸುಗ್ರೀವನು ಬಲು ಬಲಾಢ್ಯನಾದರೂ ವಾಲಿಯ ಪರಿಣಾಮವಾಗಿ ತತ್ತರಿಸಿಹೋಗಿದಾನೆ. ರಾಮಲಕ್ಷ್ಮಣರನ್ನು ಕಂಡಾಗ ಶಂಕೆಯೇ ಉಂಟಾಯಿತು. ಉದ್ವಿಗ್ನನಾದನು ಸುಗ್ರೀವ. ಎಲ್ಲದಿಕ್ಕುಗಳನ್ನು ನೋಡಿದನು ಸುಗ್ರೀವ, ಎಲ್ಲಿ ಓಡಿಹೋಗಲಿ ಎಂದು. ವಾನರ ಪುಂಗವನಾದರೂ ಕೂಡ ಅವನಿಗೆ ನಿಂತಲ್ಲಿ ನಿಲ್ಲಲಿಕ್ಕೆ ಆಗಲಿಲ್ಲ. ಎಲ್ಲೂ ನೆಮ್ಮದಿಯಿಲ್ಲ. ಕಪಿಯು ಪರಮಭೀತನಾಗಿದ್ದಾನೆ. ಸುಗ್ರೀವನ ಚಿತ್ತವು ಕುಸಿಯಿತು.

ಸಾವರಿಸಿಕೊಂಡು ಸುಗ್ರೀವ ಲೆಕ್ಕಹಾಗಿದ, ತನ್ನ ಬಲವೇನು? ಅವರ ಬಲವೇನು? ತಾನೇನು ಮಾಡಬೇಕು, ಇಲ್ಲಿದ್ದು ಪರಿಸ್ಥಿತಿಯನ್ನು ಎದುರಿಸಬೇಕಾ ಅಥವಾ ಪಲಾಯನ ಮಾಡಬೇಕಾ ಎಂದು ವಿಮರ್ಶಿಸುತ್ತಾ ಇದ್ದ. ರಾಜನೀತಿಯಲ್ಲಿ ಬಹಳ ಒಳ್ಳೆಯ ಪರಿಣತ ಸುಗ್ರೀವ. ಅನುಚರರಲ್ಲಿ ಅರ್ಧಜನರ ಜೊತೆ ಸೇರಿ ಚರ್ಚೆ ಮಾಡಿದನು. ಮತ್ತೆ ಹೇಳಿದನು, ಇವರಿಬ್ಬರು ವಾಲಿ ಕಳುಹಿ ಬಂದವರು. ನಾರು ಬಟ್ಟೆಯನ್ನುಟ್ಟಿದ್ದು ಚೀರವಲ್ಕಲಧಾರಣೆ ಮಾಡಿದ್ದು ಸುಮ್ಮನೆ. ಸಂಶಯ ಬರದೇ ಇರಲಿ ಅಂತ. ಖಡ್ಗ ಇಲ್ಲವಾ ಅಲ್ಲಿ, ಧನುಸ್ಸಿಲ್ಲವಾ ಅಲ್ಲಿ. ಅಷ್ಟು ಅರ್ಥವಾಗದೇ..? ಹಾಗಾಗಿ ಅವರು ನನ್ನನ್ನು ಮುಗಿಸಿಬಿಡ್ತಾರೆ ಅಂದುಕೊಂಡ ಸುಗ್ರೀವ. ಸುಗ್ರೀವನಿಗೊಳಿತನ್ನು ಮಾಡಲು ಬಂದಿದಾರೆ ರಾಮಲಕ್ಷ್ಮಣರು. ಆದರೆ ಅದೆಷ್ಟೋ ಬಾರಿ ವಾಲಿಯ ಜೊತೆ ನಡೆದ ಯುದ್ಧದ ಪರಿಣಾಮವಾಗಿ ಸುಗ್ರೀವ ಹೀಗೆಂದುಕೊಂಡ. ಎಲ್ಲ ಸಲವೂ ಯುದ್ಧದ ಪರಿಣಾಮ ಒಂದೇ, ವಾಲಿ ಕೊಟ್ಟಿದ್ದು ಇವನು ತಿಂದಿದ್ದು. ವಾಲಿ ಯುದ್ಧ ಮಾಡುವುದಷ್ಟೇ ಅಲ್ಲದೇ ಸುಗ್ರೀವ ಮತಂಗಾಶ್ರಮವನ್ನು ಸೇರಿಕೊಂಡ ಕೂಡಲೆ ಬಲಾಢ್ಯರಾದ ಬೇರೆ ವಾನರರನ್ನು ಸುಗ್ರೀವಸಂಹಾರಕ್ಕಾಗಿ ಕಳುಹಿಸಿಕೊಡ್ತಿದ್ದ. ಸುಗ್ರೀವನಿಗೆ ವಾಲಿಯನ್ನು ಕಂಡರೆ ಭಯ. ಉಳಿದವರನಲ್ಲ. ವಾಲಿಯಲ್ಲಿ ಕಾಂಚನಮಾಲೆಯಿದೆ, ಆದ್ದರಿಂದ ಸುಗ್ರೀವನಿಗೆ ಅವನನ್ನು ಎದುರಿಸುವುದು ಕಷ್ಟ. ಈಗ ಯಾರೋ ಮನುಷ್ಯರನ್ನು ಕಳುಹಿಸಿದ್ದಾನೆ. ರಾಮಲಕ್ಷ್ಮಣರನ್ನು ನೋಡ್ತಾ ಇದ್ದಂತೆ ಸುಗ್ರೀವನಿಗನಿಸಿತು, ಇದು ತನ್ನ ತುತ್ತಲ್ಲ! ತಾನು ಎದುರಿಸಲಾರೆ ಎಂಬುದು ಸುಗ್ರೀವನ ಮನಸ್ಸಿಗೆ ಬಂದುಬಿಟ್ಟಿದೆ. ಉಳಿದ ಅನುಚರ ಕಪಿಗಳು ಈ ಗುಡ್ಡದಿಂದ ಆ ಗುಡ್ಡಕ್ಕೆ ಹಾರಿದರು. ಆದರೆ ಸುಗ್ರೀವ ಮತಂಗಾಶ್ರಮದ ಪರಿಸರವನ್ನು ಬಿಟ್ಟು ಹೋದರೆ, ವಾಲಿಯದ್ದೇ ತೊಂದರೆಯಿದೆ ಅವನಿಗೆ. ಹಾಗಾಗಿ ಅಲ್ಲೇ ಇದ್ದ. ಈಗ ಎಲ್ಲ ಅನುಚರರು ಸುಗ್ರೀವನ ಬಂದು ತಲುಪಿದರು. ಗಿರಿಯಿಂದ ಗಿರಿಗೆ ಹಾರುವಾಗ ಶಿಖರಗಳನ್ನೇ ಕಂಪಿಸಿದರು ಶಕ್ತಿ ಮತ್ತು ಭಯದಿಂದ. ಅಷ್ಟು ತಾಕತ್ತಿದೆ, ಅಷ್ಟೇ ಭಯವಿದೆ. ಉಳಿದ ಪ್ರಾಣಿಗಳು ಇವರು ಅತ್ತ ಇತ್ತ ಹಾರಿ ಕೂಗುವಾಗ ಅಲ್ಲಿಂದ ಪಲಾಯನ ಮಾಡಿದವು. ಅಂತೂ ಎಲ್ಲ ಕಪಿಗಳು ಬಂದು ಸುಗ್ರೀವನನ್ನು ಸೇರ್ತಾರೆ. ಸುಗ್ರೀವನೂ ಒಬ್ಬನೇ, ಇವರೆಲ್ಲರಿಗೂ ಅವನೊಬ್ಬನೆ, ಬೇರೆ ಗತಿ ಇಲ್ಲ. ಸುಗ್ರೀವನ ಅನುಚರರೆಲ್ಲ ಅವನನ್ನು ಕಾಪಾಡಲು ಸುತ್ತುವರೆದರು.
ಇವನಿಗೇನಾಯಿತು ಎನ್ನುವುದು ಹನುಮಂತನ ಸಮಸ್ಯೆ. ಸುಗ್ರೀವನ ನಾಲ್ವರು ಸಹಚರರ ಪೈಕಿಯಲ್ಲೊಬ್ಬ ಹನುಮಂತ. ನಿಷ್ಠೆ ಹನುಮಂತನದ್ದು. ವಾಲಿ ಸುಗ್ರೀವನನ್ನು ರಾಜ್ಯದಿಂದ ಹೊರಗೆ ನೂಕಿದಾಗ ಜೊತೆಗೇ ಬಂದವನು ಹನುಮಂತ. ಕಿಷ್ಕಿಂಧೆಯಲ್ಲಿ ಅವನು ಏನನ್ನೂ ಬಯಸಲಿಲ್ಲ. ಸುಗ್ರೀವ ಸರಿ ಎನ್ನಿಸಿತು, ಹಾಗಾಗಿ ತನ್ನ ರಾಜ್ಯವನ್ನೇ ಬಿಟ್ಟು, ಬಂಧು ಬಾಂಧವರು, ಮನೆಯನ್ನೂ ಬಿಟ್ಟು ಸುಗ್ರೀವನ ಜೊತೆಯಲ್ಲಿ ಋಷ್ಯಮೂಕ ಪರ್ವತವನ್ನು ಸೇರಿಕೊಂಡಿದ್ದಾನೆ ಹನುಮಂತ. ಏನಾಯಿತು ಸುಗ್ರೀವನಿಗೆ ಎನ್ನುವುದು ಹನುಮಂತನ ಸಮಸ್ಯೆ, ತಾನು ಗಾಬರಿಯಾದದ್ದಲ್ಲದೇ ಉಳಿದವರನ್ನು ಗಾಬರಿಗೊಳಿಸ್ತಾ ಇದಾನೆ…! ಆಗಿದ್ದಾದರೂ ಏನು, ಇರುವುದು ಮತಂಗಾಶ್ರಮದ ಪರಿಸರದಲ್ಲಿ, ಇಲ್ಲಿ ಭಯವೇನು ಇಲ್ಲ! ಹಾಗಾಗಿ ನೇರವಾಗಿ ಸುಗ್ರೀವನನ್ನು ಕೇಳಿದನು ಹನುಮಂತ. ಇದಕ್ಕೂ ಮೊದಲು ಎಲ್ಲರಿಗೂ ಹೇಳ್ತಾನೆ, ಬಿಡಿ ಗಾಬರಿಯನ್ನು, ಯಾರೂ ಭಯಗೊಳ್ಳತಕ್ಕದ್ದಲ್ಲ. ವಾಲಿಭಯವಲ್ವಾ ಬಿಟ್ಟುಬಿಡಿ. ಇದು ಮತಂಗಾಶ್ರಮದ ಪರಿಸರ. ವಾಲಿ ಪ್ರವೇಶ ಮಾಡುವಂತಿಲ್ಲ ಎಂಬುದಾಗಿ ಎಲ್ಲರಿಗೂ ಒಂದು ಮಾತನ್ನು ಹೇಳಿ, ಸುಗ್ರೀವನ ಹತ್ತಿರ ಹೇಳಿದನು, ವಾಲಿ ಎಲ್ಲೂ ಕಾಣ್ತಾ ಇಲ್ಲವಲ್ಲ. ಹನುಮಂತ ರಾಮಲಕ್ಷ್ಮಣರನ್ನು ಇನ್ನು ಗಮನಿಸಿಲ್ಲ. ಯಾರಿಂದ ಭಯ ಎಂದು ಕೇಳಿದನು. ಆ ಪಾಪಕರ್ಮಿ, ಅಣ್ಣನಾಗಿರದವನು ಆ ದುಷ್ಟಾತ್ಮ ಇಲ್ಲೆಲ್ಲೂ ಕಾಣ್ತಾ ಇಲ್ವಲ್ಲ. ವಾಲಿಯ ಕುರಿತ ಹನುಮನ ಭಾವವಿದು. ಬಹಳ ಸರಿಯಾದ ನಿರ್ಧಾರವನ್ನು ಮಾಡುವವನು ಹನುಮಂತ. ಇಷ್ಟು ಹೇಳಿ ಇಂತೆಂದನು, ನೀನು ಮಂಗ ಹೇಳುವುದನ್ನು ಸರಿಯಾಗಿ ತೋರಿಸಿಬಿಟ್ಟೆಯಲ್ಲಾ…!? ಕಪಿತ್ವವು ಸುಸ್ಷಷ್ಟವಾಗಿ ವ್ಯಕ್ತವಾಯಿತು..! ಬುದ್ಧಿವಿಜ್ಞಾನಸಂಪನ್ನ ನೀನು, ಇಂಗಿತಗಳಿಂದ ಗಮನಿಸಬೇಕು, ಗಡಿಬಿಡಿ ಮಾಡುವುದಲ್ಲ. ಹೀಗೆ ಸ್ಪಷ್ಟವಾಗಿ ಹೇಳಿದನು. ಸುಗ್ರೀವನ ಮಟ್ಟಿಗಂತೂ ಹನುಮಂತನು ಸ್ಪಷ್ಟವಾಗಿ ಇದು ಹೀಗಲ್ಲ ಹೀಗೆ ಎಂದು ಹೇಳ್ತಾ ಇದ್ದ. ಸುಗ್ರೀವನೆಂದರೆ ಅವನನುಚರರಿಗೆ ಭಯವೇ. ಆದರೆ ಹನುಮಂತನಿಗೆ ಮಾತ್ರ ಯಾವುದೇ ಭಯವಿಲ್ಲ. ಕಂಡದ್ದನ್ನು ಕಂಡಹಾಗೆ ಸ್ಪಷ್ಟವಾಗಿ ಹೇಳಬಲ್ಲ! ಹಾಗಂತ ತನ್ನ ಬಲದ ನಂಬಿಕೆಯಿಂದಲ್ಲ, ಅವನ ಬಲ ಅವನಿಗೆ ಗೊತ್ತಿಲ್ಲ.

ಆಗ ಸುಗ್ರೀವ ಹನುಮಂತನಿಗೆ ಹೇಳಿದನು, ನೀನು ಹೇಳಿದ್ದೆಲ್ಲ ತಪ್ಪು ಅಂತಲ್ಲ. ವಿಷಯ ಬೇರೆ ಇದೆ. ನೋಡಲ್ಲಿ, ವಾಲಿ ಬಂದಿಲ್ಲ ಸರಿ, ಆದರೆ ಯಾರೋ ಮಹಾಸಮರ್ಥರನ್ನು ಹುಡುಕಿ ತನ್ನ ವಧೆಗಾಗಿ ಕಳಿಸಿಕೊಟ್ಟಂತಿದೆ. ಅವರಿಬ್ಬರ ದೀರ್ಘಬಾಹುಗಳನ್ನು ನೋಡು! ಇಷ್ಟು ದೀರ್ಘಬಾಹುಗಳುಳ್ಳ ಯಾರನ್ನಾದರೂ ನೋಡಿದೀಯಾ? ಆಜಾನುಬಾಹುಗಳು. ಸಾಮಾನ್ಯರಿಗಿರತಕ್ಕಂಥ ಬಾಹುಗಳಲ್ಲ ಅವು. ಆ ವಿಶಾಲ ನೇತ್ರಗಳು, ಜೀವಿತಾಂತಕರವಾದ ಬಾಣಗಳು, ಧನುಸ್ಸುಗಳು, ಆ ಅತಿಪ್ರಮಾಣದ ಖಡ್ಗಗಳು.. ಯಾರಿಗೆ ತಾನೆ ಭಯವಾಗುವುದಿಲ್ಲ ಅವರನ್ನು ನೋಡಿದರೆ.. ಹಾಗಾಗಿ ಸುಗ್ರೀವನಿಗೆ ಪರಿಸ್ಥಿತಿ ಸರಿಇಲ್ಲದಿರುವುದರಿಂದ ಭಯವಾಗ್ತಾ ಇರುವಂಥದ್ದು. ಯಾರಿಗಾದರೂ ಭಯವಾಗಬೇಕು.. ಬರೇ ಮನುಷ್ಯರಿರುವಂತಿಲ್ಲ, ದೇವಪ್ರಭೆ ಇರುವಂತಿದೆ ಇವರಲ್ಲಿ, ಈ ಪುರುಷೋತ್ತಮರು ವಾಲಿಯಿಂದ ಕಳುಹಿಸಲ್ಪಟ್ಟವರೋ ಎನ್ನುವುದು ನನ್ನ ಶಂಕೆ. ಇವರೇನೂ ಮಾಡಿಲ್ಲ, ಆದರೆ ವಾಲಿ ಬಹಳ ಮಾಡಿದಾನೆ. ರಾಜರಿಗೆ ವಾನರಜಾತಿಯನ್ನು ಬಿಟ್ಟು ಮನುಷ್ಯ ಜಾತಿಯಲ್ಲೂ ಸ್ನೇಹವಿರಬಹುದು. ನಂಬಿಕೊಂಡು ಕೂರಬಾರದು! ಸುಗ್ರೀವನಿಗೆ ಜಾಗ್ರತೆ ಬಹಳ. ಬಲ್ಲವನು ಹೇಗಿರ್ತಾನೆ ಎಂದರೆ ಶತ್ರುಗಳನ್ನು ಗಮನಿಸ್ತಾ ಇರ್ತಾನೆ. ರೂಪಾಂತರದಲ್ಲಿ ಶತ್ರುಗಳು ಬರಬಹುದು. ವಾಲಿ ಮೇಧಾವಿ, ಈ ರಾಜಕೃತ್ಯಗಳಲ್ಲಿ ಜಾಣ ಅವನು. ಅವರ ಕಾರ್ಯ ಸಾಧನೆಗೆ ಬಹಳ ಉಪಾಯ ಮಾಡ್ತಾನೆ. ನಾವು ಬಹಳ ಜಾಗ್ರತೆ ವಹಿಸಬೇಕು ಎಂದು ಹೇಳಿದನು ಸುಗ್ರೀವ. ಮತ್ತೆ ಹನುಮಂತನಿಗೆ ಹೇಳಿದನು ನೀನು ಹೋಗು ಅಲ್ಲಿ, ಅವರು ಯಾರೆಂದು ತಿಳಿ. ರಾಮಲಕ್ಷ್ಮಣರನ್ನು ನೋಡದೆಯೇ ಸುಗ್ರೀವ ಶಂಕಿಸುವುದನ್ನು ತಾಳಲಿಲ್ಲ ಹನುಮಂತ…! ನೀನು ವೇಷಾಂತರ ಮಾಡಿ ಹೋಗು. ಸಾಮಾನ್ಯರಲ್ಲಿ ಸಾಮಾನ್ಯರ ತರ ಹೋಗು. ಇವರ್ಯಾರೆಂದು ತಿಳಿ, ಅವರ ರೂಪದಿಂದ ತಿಳಿ. ಬಾಯ್ಬಿಟ್ಟು ಹೇಳದಿದ್ದರೂ ಅವರ ಚರ್ಯೆ ಚಲನವಲನಗಳನ್ನು ಗಮನಿಸಿ, ಮಾತಾಡಿಸು ಅವರನ್ನು. ಅವರ ಮಾತಿನ ಆಳ ಅಗಲ ಅವರ್ಯಾರು ಏನು ಎತ್ತ ಎನ್ನುವುದೆಲ್ಲವನ್ನು ತಿಳಿ. ಎಲ್ಲಕಿಂತ ಮುಖ್ಯವಾಗಿ ಅವರ ಭಾವವನ್ನು ಗಮನಿಸು. ನಮ್ಮನ್ನು ಕುರಿತು ಅವರಿಗಿರುವ ಭಾವವನ್ನು ಗಮನಿಸು. ಒಳ್ಳೆಯವರಾಗಿದ್ರೆ ಸಂತೋಷದಿಂದ ಬಂದವರಾಗಿದ್ರೆ ನೀನು ಹೇಳಿದ ಹಾಗೆ..? ಅವರ ವಿಶ್ವಾಸವನ್ನು ಗಳಿಸು ಒಳ್ಳೆಯ ಮಾತುಗಳನ್ನಾಡಿ. ಆಮೇಲೆ ನೀನು ಮಾತನಾಡುವಾಗ ಅವರ ಬೆನ್ನು ನನ್ನ ಕಡೆ ಬರುವ ಹಾಗೆ, ನಿನ್ನ ಮುಖ ನನಗೆ ಕಾಣುವ ಹಾಗೆ ನಿತ್ಕೊ. ಮಾತನಾಡುವಾಗ ಉಪಾಯವಾಗಿ ನಿನ್ನ ಮುಖ ನನಗೆ ಕಾಣುವಂತೆ ನಿಲ್ಲು. ಏನಾದರೂ ಹೆಚ್ಚು ಕಡಿಮೆ ಇದ್ರೆ ಮೊದಲೆ ಸನ್ನೆ ಮಾಡು ಪಲಾಯನ ಮಾಡ್ತೇನೆ. ಅಲ್ಲಿಂದಿಲ್ಲಿಗೆ ಬರುವಷ್ಟು ಬಿಡುವಿಲ್ಲ, ಜಾಗ್ರತೆ ಮಾಡುವುದೆಂದರೆಷ್ಟು ಸುಗ್ರೀವನು..! ನಿನ್ನ ಮುಖದ ಬಣ್ಣ ಬದಲಾದ ಹಾಗೆ ನಾನು ಇಲ್ಲಿಯೇ ಕುಳಿತು ಅಂದಾಜು ಮಾಡ್ತೇನೆ. ಬೇಕಾದವರ ಬೇಡದವರ ಇಲ್ಲಿಯೇ ಕೂತು ಅಂದಾಜು ಮಾಡ್ತೇನೆ. ನನ್ನೆಡೆಗೆ ಮುಖಮಾಡಿ ನಿಂತು ಅವರನ್ನು ಪ್ರಶ್ನಿಸು. ಧನುರ್ಧಾರಿಗಳಾಗಿ ಈ ವನವನ್ನು ಪ್ರವೇಶಮಾಡುವುದರಿಂದ ಏನು ಪ್ರಯೋಜನ? ಬಿಲ್ಲು ಹಿಡ್ಕೊಂಡು ಈ ಜಾಗಕ್ಕೆ ಯಾಕೆ ಬಂದ್ರು? ಜೋರುಮಾಡಿ ಕೇಳೋದಲ್ಲ, ಉಪಾಯವಾಗಿ ಕೇಳು. ಶುದ್ಧಾತ್ಮರಾಗಿದ್ದರೆ..? ದೋಷವುಂಟೋ ಇಲ್ಲವೋ, ಒಳಿತೋ ಕೆಡುಕೋ ಎಂಬುದನ್ನು ತಿಳಿ ಎಂದು ಕಪಿರಾಜ ಸುಗ್ರೀವನು ಹನುಮಂತನಿಗೆ ಹೇಳಿದನು.

ಆಗ ಹನುಮನ ನಿಶ್ಚಯವು ಅದೇ ಆಯಿತು. ನಾನು ಹೋಗಿ ಮಾತನಾಡಬೇಕು ಎಂಬುದರಲ್ಲಿ ಅವನ ಹೃದಯದಲ್ಲಿ ಒಲವು ಬಂದಿತು. ಹೋಗುವ ನಿಶ್ಚಯ ಮಾಡಿದನು ಹನುಮಂತ. ಋಷ್ಯಮೂಕ ಪರ್ವತದ ಎತ್ತರದಿಂದ ರಾಮಲಕ್ಷ್ಮಣರಿದ್ದಲ್ಲಿಗೆ ನೆಗೆದನು ಹನುಮಂತ. ನೆಗೆದನು ಆದರೆ ನೇರ ಹೋಗಿ ರಾಮಲಕ್ಷ್ಮಣರೆದುರು ನಿಲ್ಲಲಿಲ್ಲ, ಮಧ್ಯದಲ್ಲಿ ಸುಗ್ರೀವನು ಹೇಳಿದ್ದು ನೆನಪಾಗಿರಬೇಕು, ರಾಮಲಕ್ಷ್ಮಣರನ್ನು ಸೇರುವ ಮೊದಲು ತನ್ನ ರೂಪವನ್ನು ಬದಲಿಸಿಕೊಂಡ. ಕಪಿರೂಪವನ್ನು ತ್ಯಜಿಸಿದನು, ಭಿಕ್ಷುರೂಪವನ್ನು ತಾಳಿ ಹೊರಟನು. ಸೀತೆಯನ್ನಪಹರಿಸಲು ರಾವಣಬಂದಿದ್ದೂ ಭಿಕ್ಷುರೂಪದಲ್ಲಿ, ಭಿಕ್ಷುರೂಪದಲ್ಲಿ ಹನುಮಂತ ಬಂದು ಸೀತೆಯನರಸಲು ಸಹಾಯ ಮಾಡಿದ. ವಿವೇಕದಿಂದ ನಂಬಿದರೆ ಅದು ಯೋಗ್ಯ. ವಿನೀತನಾಗಿ ರಾಮಲಕ್ಷ್ಮಣರೆದುರು ಹನುಮಂತ ಬಂದನು. ಬರುವಾಗ ಪರೀಕ್ಷಾರ್ಥವಾಗಿ ಬಂದಿದಾನೆ. ಬಂದ ಕೂಡಲೆ ಅವರಿಗೆ ನಮಸ್ಕಾರ ಮಾಡಿದನು. ಮತ್ತೆ ಮಾತನಾಡಿದನು ಅಷ್ಟೂ ಸುಮನೋಜ್ಞವಾದ ಮಾತುಗಳು! ಸ್ನಿಗ್ಧವಲ್ಲದ ಸೊಗಸಾದ ಮಾತು. ಆ ವೀರರನ್ನು ಪ್ರಶಂಸಿಸಿದನು. ವಿಧಿವತ್ತಾಗಿ ಪೂಜಿಸಿದನು ಹನುಮಂತ ಎಂದು ವಾಲ್ಮೀಕಿಗಳು ಹೇಳ್ತಾರೆ.

ತನಗೇನು ಮಾತಾಡಬೇಕು ಅಂತನಿಸಿತೋ ಹಾಗೆ ಮಾತಾಡ್ತಾ ಇದಾನೆ ಹನುಮಂತ. ಸುಗ್ರೀವನ ಪ್ರಕಾರ ಇಲ್ಲ ಈ ಮಾತುಗಳು. ತನ್ನಾತ್ಮಕ್ಕೆ ಸರಿ ಎನಿಸುವ ಹಾಗಿ ಮಾತನಾಡಿದನು. ಹನುಮಂತನ ಮಾತುಗಳು ಅತಿಶಯವಾಗಿ ಮೃದುವಾಗಿದ್ದವು. ರಾಮಲಕ್ಷ್ಮಣರನ್ನು ಕಂಡಾಗ ಸತ್ಯಪರಾಕ್ರಮರು, ಯಾರ ಬಲವು ಸತ್ಯಕ್ಕಾಗಿ ಮೀಸಲಿದೆಯೋ ಅಂತವರಿವರು ಎನ್ನುವ ಭಾವ ಹನುಮಂತನದು. ಅಸತ್ಯ, ಅಧರ್ಮಕ್ಕಾಗಿ ಅಲ್ಲ. ಹನುಮಂತನ ಮೊದಲ ಪದ ರಾಜರ್ಷಿದೇವಪ್ರತಿಮೌ, ಮೂರು ಒಂದಕ್ಕಿಂತ ಒಂದು ಮೇಲಿನ ಪದಗಳು, ರಾಜ ಋಷಿ ದೇವ…! ರಾಜಾರಾಮನಲ್ಲವೇ ರಾಮ? ಜಗತ್ತಿನ ಸರ್ವೋತ್ತಮ ರಾಜವಂಶಗಳಿಗೆ ಅಧಿಪತಿ ಇಕ್ಷ್ವಾಕು ವಂಶದ ರಾಮ. ದೊರೆತನ ಹನುಮನಿಗೆ ಕಂಡಿದ್ದು. ಅದಕ್ಕಿಂತ ಮುಂದೆ ಹೋಗಿ, ಋಷಿತ್ವ. ಅಂದರೆ ಪಾವನತೆ, ಪರಮಕಾರುಣ್ಯ. ಆ ಕಣ್ಣುಗಳು ಸಾಮಾನ್ಯ ಮನುಷ್ಯರು ಕಾಣದ ಅಂತರ್ಗತವಾದದ್ದನ್ನು ನೋಡ್ತವೆ. ಪಾವನ, ಪರಮಕಾರುಣಿಕನು ಋಷಿ ಎನಿಸಿಕೊಳ್ಳುತ್ತಾನೆ. ಮತ್ತೂ ಮುಂದೆ ಹೋಗಿ ದೇವತ್ವ. “ನೀವು ದೊರೆಗಳೇ, ಋಷಿಗಳೇ, ದೇವರೇ…?” ಇದೇ ಮೊದಲ ಮಾತು ಆಂಜನೇಯನದು. ಸ್ವಲ್ಪ ಕೆಳಗಿಳಿದು ಬಂದು, ನೋಡಿದರೆ ತಪೋವೇಷ. “ಹೇ ಉತ್ತಮೋತ್ತಮರೇ, ಈ ಊರಿಗೆ ಹೇಗೆ ಬಂದಿರಿ? ನಿಮ್ಮಾಗಮನ ಈ ಊರಿಗೆ ಆದುದಾದರೂ ಹೇಗೆ?” ಎಂದನು. ಗಾಂಭೀರ್ಯ ಬಂತು. ವ್ಯಕ್ತಿತ್ವದ ಔನ್ನತ್ಯ ದಿಗಿಲು ಹುಟ್ಟಿಸುತ್ತದೆ, ಅದೇ ಗಾಂಭೀರ್ಯವೆಂದರೆ. “ಸುತ್ತಮುತ್ತಲಿನ ಪ್ರಾಣಿಗಳು ದಿಗಿಲುಗೊಂಡಿದೆ. ಪಂಪಾತೀರದ ಸುತ್ತಮುತ್ತಲಿರುವ ವೃಕ್ಷಗಳನ್ನು ಅವಲೋಕಿಸುತ್ತಾ ಇದ್ದೀರಿ. ವೃಕ್ಷಗಳು ನಿಮ್ಮ ದೃಷ್ಟಿಯಿಂದ ಪುಲಕಿತಗೊಂಡಿದೆ. ಈ ಶುಭಜಲವುಳ್ಳ ನದಿಗೆ ನೀವು ಶೋಭೆ ತಂದಿರಿ. ನೀವು ನಡೆದುಬರುವಾಗ ಈ ನದಿಗೆ ಆಭರಣವಿಟ್ಟಂತಾಯಿತು. ಹಿಮಾಲಯದ ಧೈರ್ಯದವರು, ಯಾರು ನೀವು? ಚಿನ್ನದಂಥವರು…? ಈ ನಾರುಡೆಯೇಕೆ? ನಿಟ್ಟುಸಿರೇಕೆ..? ಚಿಂತೆಯೇನು? ಆ ಭುಜಗಳು ಭೂಮಂಡಲವನ್ನು ಹೊರಲಿಕ್ಕೆ ಸಮರ್ಥವಾದಂಥಹ, ಎಂಥಾ ಭಾರವನ್ನೂ ಹೊರಲಿಕ್ಕೆ ಸಮರ್ಥವಾದ ವರಭುಜಗಳು. ನಿಮ್ಮ ನಿಟ್ಟುಸಿರಿನಿಂದ ಎಲ್ಲ ಜೀವಗಳು ನೋಯ್ತಾ ಇದಾವೆ. ನಿಮ್ಮ ನಿಟ್ಟುಸಿರಿಂದ ಜೀವಗಳು ಬಾಡ್ತವೆ. ಸಿಂಹವನ್ನು ಮೀರಿದ ಪರಾಕ್ರಮ, ಅತಿಬಲರು ನೀವು, ಇಂದ್ರಧನುಸ್ಸಿನಂತಹ ಬಿಲ್ಲು, ಅಂಥಹ ಧನುಸ್ಸನು ಹಿಡಿದ ನೀವು ಶತ್ರುಸಂಹಾರಿಗಳು. ಯಾವ ಆಭರಣಗಳಿಲ್ಲದಿದ್ದರೂ ಶ್ರೀಮಂತರು ನೀವು. ಸಿರಿ ನಿಮ್ಮಲ್ಲಿ ನೆಲೆಸಿದೆ. ಸ್ಫುರದ್ರೂಪ, ಅಪರೂಪದಲ್ಲಪರೂಪ. ಹೆಜ್ಜೆಗಳು.. ಮಹಾನಂದಿ ನಡೆದಂತೆ, ವೃಷಭಶ್ರೇಷ್ಠ ನಡೆದಂತ ಗಾಂಭೀರ್ಯ, ಆನೆಯ ಸೊಂಡಿಲಿನಂತಹ ಭುಜಗಳು, ಬಾಹುಗಳು ಅಪರೂಪ. ನೀವು ಮನುಷ್ಯರಲ್ಲ, ಶ್ರೇಷ್ಠ ಮನುಷ್ಯರು. ನಿಮ್ಮ ಉಪಸ್ಥಿತಿಯಿಂದ ಪರ್ವತೇಂದ್ರನು ಶೋಭಿಸ್ತಾ ಇದಾನೆ. ನೀವು ರಾಜ್ಯವನ್ನಾಳಲು ಅರ್ಹರು, ಆದರೆ ಈ ವೇಷ, ಇಲ್ಲಿ ಉಪಸ್ಥಿತಿ ಹೇಗೆ? ದೇವತೆಗಳ ಕಾಂತಿ! ಬೆವರಿದೆ ಧೂಳಿದೆ, ಆದರೆ ದೇವತೆಗಳ ಕಾಂತಿ ನಿಮ್ಮದು! ಕಮಲದಳ ನಯನರು, ಜಟಾಮಂಡಲಧಾರಿಗಳು, ಒಬ್ಬರ ಹಾಗೇ ಇನ್ನೊಬ್ಬರು, ಒಬ್ಬ ನೀಲಮೇಘಶ್ಯಾಮ ಇನ್ನೊಬ್ಬ ಗೋಧಿಬಣ್ಣದವನು. ದೇವಲೋಕದಿಂದ ಬಂದಿರೇ? ಅಥವಾ ಸೂರ್ಯಚಂದ್ರರಿಗೆ ಅದೇನೋ ಮನಸ್ಸು ಬಂದು ಭೂಮಿಗೆ ಬರುವ ಹಾಗಾಯಿತೇ..? ವಿಶಾಲವಾದ ವಕ್ಷಸ್ಥಳ. ನೋಡಲಿಕ್ಕೆ ಮನುಷ್ಯರು, ಆದರೆ ದೇವತೆಗಳು. ಮನುಷ್ಯರು ಎಂಬುದು ತೋರಿಕೆ, ದೇವರು ಎನ್ನುವುದು ನಿಜ. ಸಿಂಹದ ಹೆಗಲು, ಜೋಡಿ ನಂದಿಗಳು, ಮಹಾನಂದಿಗೆ ಮದಬಂದಂತೆ, ಅಂಥಹ ವ್ಯಕ್ತಿತ್ವ! ಬಾಹುಗಳು ದೀರ್ಘವಾಗಿದೆ ಹಾಗೂ ದುಂಡಾಗಿದೆ. ಪರಿಘಾಯುಧವನ್ನು ಹೋಲುವಂಥಹ ಬಾಹುಗಳು. ಈ ಬಾಹುಗಳಿಗೆ ಎಲ್ಲಾ ಆಭರಣಗಳು ಇರಬೇಕಾಗಿತ್ತು. ಈ ಬಾಹುಗಳು ಕೇಯೂರದಿಂದ, ಅಂಗದದಿಂದ, ಕಂಕಣದಿಂದ, ಉಂಗುರದಿಂದ ಭೂಷಣವಾಗಿರಬೇಕಾಗಿತ್ತು, ಯಾಕೆ ಯಾವುದನ್ನೂ ಹಾಕಿಲ್ಲ ಎನ್ನುವಷ್ಟು ಸೂಕ್ಷ್ಮ ದೃಷ್ಟಿ ಹನುಮಂತನದು. ನನ್ನ ದೃಷ್ಟಿಯಿಂದ ಈ ಭೂಮಂಡಲವನ್ನು ಪಾಲಿಸಲು ನೀವು ಯೋಗ್ಯರು. ಸಮಸ್ತ ಪೃಥ್ವಿಗೆ ದೊರೆಯಾಗಬಲ್ಲವರು ನೀವು. ಚತುಸ್ಸಾಗರದಿಂದ, ಅನೇಕ ಕಾನನಗಳಿಂದ, ವಿಂಧ್ಯಮೇರು ಪರ್ವತಗಳಿಂದ ಕೂಡಿದ, ಸಮಸ್ತ ಭೂಮಂಡಲವನ್ನು ನೀವು ಆಳಬೇಕು ಎಂದನು ಹನುಮಂತ. ರಾಮಲಕ್ಷ್ಮಣರು ಏನೂ ಮಾತಾಡಿಲ್ಲ, ಅದಕ್ಕೂ ಮೊದಲೇ ಹನುಮಂತನು ನಿಶ್ಚಯಿಸಿದನು.

ಮನೋಹರವಾದ ಧನುಸ್ಸುಗಳು. ಇಂದ್ರನ ವಜ್ರಾಯುಧದಂತೆ ಹೊಳೆಯುತ್ತಿವೆ ಈ ಧನುಸ್ಸುಗಳು. ಹಾಗೆ ಬತ್ತಳಿಕೆಗಳು.. ಬಾಣಗಳು ತುಂಬಿದೆ. ಬಾಣಗಳು ಬುಸುಗುಡುವ ಸರ್ಪಗಳು. ಹೊರಬಂದರೆ ಜೀವವನ್ನೇ ಕೊನೆಗೊಳಿಸುವಂತಹದ್ದು. ಖಡ್ಗಗಳೂ ಹಾಗೆ ಸಾಮಾನ್ಯವಾದದ್ದಲ್ಲ. ಮಹಾಪ್ರಮಾಣದ ವಿಸ್ತಾರವಾದ ಖಡ್ಗಗಳು ಭೂಷಿಸುತ್ತಾ ಇದೆ. ಇಷ್ಟೆಲ್ಲ ಹೇಳಿ ಹನುಮಂತ ನಾನಿಷ್ಟು ಮಾತನಾಡಿದರೂ ಯಾಕೆ ನೀವು ಮಾತಾಡ್ತಾ ಇಲ್ಲ…?? ಅವರಿಬ್ಬರೂ ವಿಸ್ಮಿತರಾಗಿ ಹನುಮಂತನನ್ನು ನೋಡ್ತಾ ಇದ್ದಾರೆ. ಅವರೂ ಯಾವುದೋ ಲೋಕದಲ್ಲಿ ತೇಲಿಹೋಗ್ತಾ ಇದಾರೆ. ಆದರೆ ಅವರ ಮಾತನ್ನು ಕೇಳುವ ತವಕ ಹನುಮಂತನಿಗೆ. ಯಾಕೆ ಮಾತಾಡ್ತಾ ಇಲ್ಲ ಅಂತ ಕೇಳಿದಾಗ, ಅವರ ಮುಖವನು ನೋಡಿದ ಹನುಮಂತ. ಪ್ರಸನ್ನತೆ, ಮುಗುಳ್ನಗು, ಸಂತೋಷ, ಮೆಚ್ಚುಗೆ ಎಲ್ಲ ಕಾಣ್ತಾ ಇದೆ, ಇದನ್ನು ಗಮನಿಸಿ, ತನ್ನ ಕಥೆಯನ್ನು ಶುರುಮಾಡಿದ. ಒಳ್ಳೆ ಪ್ರತಿಕ್ರಿಯೆ ಇದೆ, ಸುಪ್ರಭಾವ ಆಗ್ತಾ ಇದೆ ಹನುಮಂತನ ಮಾತುಗಳಿಂದ. ಅದನ್ನು ಕಂಡಾಗ ವಿಷಯಕ್ಕೆ ಬಂದ. ನೋಡಿ ನಿಜವಾಗಿ ಬಂದಿದ್ಯಾಕೆ ಅಂದರೆ ತಾನ್ಯಾರು ಎಂದು ಗುಟ್ಟುಬಿಟ್ಟುಕೊಡದೇ, ಅವರು ಯಾರೆಂದು ತಿಳಿಯಲು. ಸುಗ್ರೀವನೆಂಬ ಹೆಸರಿನ ಧರ್ಮಾತ್ಮನಾದ ವಾನರಯೂತಪತಿಯೊಬ್ಬನಿದಾನೆ. ಬಾಯ್ಬಿಟ್ಟನು. ರಾಮಲಕ್ಷ್ಮಣರನ್ನು ಕಂಡಮೇಲೆ ಇದ್ದದ್ದು ಇದ್ದ ಹಾಗೆ ಹೊರಬರ್ತಿದೆ, ಯಾವುದೂ ಉಳಿಯಲಿಲ್ಲ. ಸುಗ್ರೀವನ ಸೂಚನೆಗಳನ್ನು ಪಾಲಿಸ್ತಾ ಇಲ್ಲ. ಅವನ ಗುಟ್ಟನ್ನೇ ಬಿಡ್ತಾ ಇದ್ದಾನೆ. ಸುಗ್ರೀವನೊಬ್ಬ ವಾನರ ನಾಯಕ, ಅವನಿಗೆ ಅನ್ಯಾಯವಾಗಿದೆ. ವಾಲಿಯು ಸುಗ್ರೀವನ ರಾಜ್ಯವನ್ನು, ಪತ್ನಿಯನ್ನು ಕಿತ್ತುಕೊಂಡಿದಾನೆ. ಅಣ್ಣನಿಂದ ಅನ್ಯಾಯಕ್ಕೊಳಗಾಗಿ ಜಗತ್ತಿನಲ್ಲಿ ಅಲಿತಾ ಇದಾನೆ ದುಃಖಿತನಾಗಿ. ಅವನು ಕಳುಹಿಸಿದ್ದು ನನ್ನನ್ನು. ಅಂತ ಹೇಳಿ, ವಾನರಮುಖ್ಯ. ಅಂದರೆ, ಈ ಪ್ರಪಂಚದ ವಾನರರೆಲ್ಲರಿಗೆ ರಾಜ ಅವನೆಂದರೆ. ಸುಗ್ರೀವ ಕಳುಹಿಸಿದ ನಾನು ಹನುಮಂತನೆಂಬ ವಾನರ. ವೇಷ ಬೇರೆಯಿದೆ.

ಪರಮಸತ್ಯದ ಮುಂದೆ ನಿಂತಾಗ ಸತ್ಯವು ತಾನೇ ತಾನಾಗಿ ಅಭಿವ್ಯಕ್ತವಾಗುತ್ತದೆ. -ಶ್ರೀಸೂಕ್ತಿ.

ಇದಕ್ಕೆ ಹನುಮಂತನಂತವರು ರಾಮಲಕ್ಷ್ಮಣರ ಎದುರು ನಿಂತಾಗ ಮುಚ್ಚುಮರೆಯಿಲ್ಲದಂತೆ, ಸುಮ್ಮನೆ ವೇಷ ಹಾಕಿಕೊಂಡದ್ದು, ಇದ್ದ ಹಾಗೆ ಹೇಳಿದನು. ತನ್ನ ಗುಟ್ಟು ಪೂರ್ತಿ ಬಿಟ್ಟುಕೊಟ್ಟಾಯಿತು ಹನುಮಂತ…! ಸುಗ್ರೀವ ಹೇಳದೇ ಇದ್ದದ್ದನ್ನೂ ಹೇಳಿದನು, ಏನೆಂದರೆ ಸುಗ್ರೀವನು ನಿಮ್ಮೊಡನೆ ಮೈತ್ರಿಯನ್ನು ಮಾಡಿಕೊಳ್ಳಲು ಬಯಸಿದ್ದಾನೆ. ನಾನವನ ಸಚಿವ, ವಾಯುದೇವನ ಪುತ್ರ. ಭಿಕ್ಷು ರೂಪ ಇದು ನಿಜವಲ್ಲ, ಇದು ಹಾಕಿಕೊಂಡದ್ದು. ಬಹುಶಃ ನಾನೇ ನಿಮ್ಮನ್ನು ನೋಡಿದರೆ, ಈ ವೇಷವನ್ನು ಹಾಕಿಕೊಂಡು ಬರುತ್ತಿರಲಿಲ್ಲ. ಸುಗ್ರೀವನ ಸಲುವಾಗಿ ವೇಷ ಬದಲಾವಣೆ. ಋಷ್ಯಮೂಕ ಪರ್ವತದಲ್ಲಿದಾನೆ ಸುಗ್ರೀವ. ಕಾಮರೂಪಿ ಎಂಬ ನಾನು ಹನುಮಂತನೆಂಬ ವಾನರ ಎಂದನು ಹನುಮಂತ. ನಿಜವಾದ ಸತ್ಪುರುಷರು ಭಾವವನ್ನು ಗ್ರಹಿಸಬಲ್ಲರು. ಇಷ್ಟೂ ಹೇಳಿ ಮೌನವನ್ನು ತಾಳಿದನು ಹನುಮಂತ. ಆಗ ರಾಮನು ಲಕ್ಷ್ಮಣನಿಗೆ ಹೇಳ್ತಾನೆ. ರಾಮನ ಮುಖವು ಅರಳಿದೆಯಂತೆ. ಹನುಮಂತನನ್ನು ಕಂಡು, ಅವನ ಮಾತನ್ನು ಕೇಳಿ ಸಂತೋಷವಾಗಿದೆ.

ಕಪಿರಾಜನಾದ ಸುಗ್ರೀವನ ಸಚಿವನಿವನು. ನಾವು ಹುಡುಕಿಕೊಂಡು ಬಂದಿದ್ದು ಇವನನ್ನೇ ಅಲ್ಲವಾ? ಕಬಂಧ ಹೇಳಿದ್ದೂ ಸುಗ್ರೀವನನ್ನು ಕಾಣಬೇಕೆಂದೇ ಅಲ್ಲವಾ..! ಹುಡುಕುವ ಬಳ್ಳಿ ಕಾಲಿಗೆ ಸಿಕ್ಕಂತೆ. ಸಖ್ಯವಾಗಬೇಕೆಂದು ಬೇರೆ ಹೇಳ್ತಾ ಇದ್ದಾನೆ..! ಮಾತನಾಡು ಲಕ್ಷ್ಮಣ… ಈ ಕಪಿಯನ್ನುದ್ದೇಶಿಸಿ ನೀನು ಮಾತಾಡು. ರಾಮ ಮಾತಾಡಲಿಲ್ಲ, ರಾಜನೀತಿಯದು..! ಲಕ್ಷ್ಮಣ ಇವನು ಮಾತಿನಲ್ಲಿ ನಿಲ್ಲುವವನಲ್ಲ ಭಾವದಲ್ಲಿ ನಿಲ್ಲುವವನು. ನೀನು ಮಾತನಾಡುವಾಗ ಮಧುರವಾದ ಪದಗಳನ್ನೇ ಬಳಸಬೇಕು. ಪ್ರೀತಿತುಂಬಿ ಮಾತನಾಡಬೇಕು. ಎಂದು ಹೇಳಿ, ಹನುಮಂತನ ಕುರಿತಾಗಿ ತನ್ನ ಅಭಿಪ್ರಾಯವನ್ನು ಮಂಡನೆ ಮಾಡ್ತಾನೆ ರಾಮ. ರಾಮ ಹೇಳಿದ್ದೇನು..? ಋಗ್ವೇದದ ಶಿಕ್ಷಣವಾಗದವನಿಗೆ, ಯಜುರ್ವೇದ ಧಾರಣೆಮಾಡದವನಿಗೆ, ಸಾಮವೇದವನ್ನು ಅರಿಯದವನಿಗೆ ಹೀಗೆ ಮಾತನಾಡಲಿಕ್ಕೆ ಸಾಧ್ಯವಿಲ್ಲ, ಹೀಗೆ ಮಾತನಾಡಬೇಕು ಅಂದರೆ, ಋಗ್ವೇದದ ಶಿಕ್ಷಣವಾಗಿರಬೇಕು, ಯಜುರ್ವೇದವ ಧರಿಸಿರಬೇಕು, ಸಾಮವೇದವ ಅರಿತಿರಬೇಕು. ರಾಮನ ಮಾತು ಎಷ್ಟು ಚಂದ ಅಂದರೆ, ಸೂಕ್ಷ್ಮಗ್ರಾಹಿ. ಧ್ವನಿ, ಉಚ್ಛರಣೆಯ ಕ್ರಮವನ್ನನುಸರಿಸಿ ತಿಳಿಯುವವನು. ಶಿಕ್ಷಣ, ಧಾರಣ, ಜ್ಞಾನ ಇವು ಒಂದೊಂದು ಹಂತದ್ದು. ಒಂದೊಂದು ವೇದದಿಂದ ಒಂದೊಂದು ಗುಣ. ಋಗ್ವೇದ ಶಿಕ್ಷಣವಾಗಬೇಕಾದರೆ ಮನೋನಿಯಮ ಬೇಕು. ಯಜುರ್ವೇದ ಶಿಕ್ಷಣಕ್ಕೆ ಮೇಧಾಶಕ್ತಿಬೇಕು. ಸಾಮವೇದವನ್ನು ಅರಿಯದೇ ಹಾಡಲಿಕ್ಕೆ ಸಾಧ್ಯವಿಲ್ಲ. ಭಾವವಿಲ್ಲದ ಹಾಡು ಹಾಡಲ್ಲ. ಎಂಥಹ ಪರಿಣತಿ ರಾಮನದ್ದು!! ಹನುಮಂತನ ಮಾತನ್ನು ಅಳೆಯಬೇಕಾದರೆ ರಾಮನೆಂಥವನಿರಬೇಕು…! ವ್ಯಾಕರಣವನ್ನು ಇವನು ಒಂದು ಬಾರಿಯಲ್ಲ, ಅನೇಕ ಬಾರಿ ಅಧ್ಯಯನ ಮಾಡಿರಬೇಕು.

ಸೂರ್ಯನ ವೇಗದಲ್ಲಿ ಸೂರ್ಯನ ಜೊತೆಗೇ ಸಂಚಾರ ಮಾಡ್ತಾ ಅಧ್ಯಯನ ಮಾಡ್ಬೇಕು ಅವನು. ಹಾಗೇ ಮಾಡಿದ ಆಂಜನೇಯ. ಹಾಗಾಗಿ ಒಂದೂ ಅಪಶಬ್ಧ ಇಲ್ಲ ನೋಡು. ಯಾಜ್ಞವಲ್ಕ್ಯರೊಬ್ಬರಿಗೆ ಆ ಯೋಗ ಇತ್ತಂತೆ. ಸೂರ್ಯದೇವನಿಂದ ವ್ಯಾಕರಣ ಅಧ್ಯಯನ ಮಾಡಿದವರಂತೆ ಅವರು. ಒಟ್ಟು 9 ವ್ಯಾಕರಣಗಳು. ಎಲ್ಲಾ ವ್ಯಾಕರಣಗಳನ್ನೂ ಅಧ್ಯಯನ ಮಾಡಿದವನು ಆಂಜನೇಯ. ಅವನ ಹಾವ-ಭಾವಗಳನ್ನ ರಾಮ ಗಮನಿಸ್ತಾನೆ. ಅದನ್ನ ಹೇಳ್ತಾನೆ ಲಕ್ಷ್ಮಣನಿಗೆ. ನೋಡು ಲಕ್ಷ್ಮಣ, ಮುಖದಲ್ಲಾಗಲೀ, ಹಣೆಯಲ್ಲಾಗಲೀ, ಕಣ್ಣುಗಳಲ್ಲಾಗಲೀ, ಅಥವಾ ಬೇರೆ ಯಾವುದೇ ಅವಯವಗಳಲ್ಲಾಗಲೀ ಒಂದು ದೋಷವೂ ಉಂಟಾಗಲಿಲ್ಲ ಮಾತಾಡಬೇಕಾದರೆ. ಎಲ್ಲೂ ಅಗತ್ಯಕ್ಕಿಂತ ಹೆಚ್ಚು ವಿಸ್ತಾರ ಕೂಡ ಇಲ್ಲ. ಹಾಗಂತ ಬಹಳ ಸಂಕ್ಷೇಪವಾಗಿ, ಸಂದಿಗ್ಧವೂ ಕೂಡ ಆಗ್ತಾ ಇಲ್ಲ. ಅನಗತ್ಯ ವಿಳಂಬವೂ ಇಲ್ಲ. ಎಲ್ಲಿಯೂ ಮಾತು ಅಗತ್ಯಕ್ಕಿಂತ ವಿಲಂಬವೂ ಇಲ್ಲ. ಯಾವ ವೇಗ ಬೇಕೋ ಆ ವೇಗ ಇದೆ ಮಾತಿನಲ್ಲಿ. ಮಾತು ಓಡಲೂಬಾರದು, ಎಳೆಯಬಾರದು. ಎದೆಯಿಂದ ಕಂಠಕ್ಕೆ ಬಂದು, ಮಧ್ಯಮ ಸ್ವರದಲ್ಲಿ ಬಾಯಿಯಿಂದ ಹೊರಗೆ ಬರ್ತಾ ಇದೆ. ಅಲ್ಲಿಯವರೆಗೆ ರಾಮನ ಗಮನ. ಆಧುನಿಕ ವಿಜ್ಞಾನದ ವ್ಯಾಪ್ತಿ ಕಂಠದವರೆಗೆ ಮಾತ್ರ. ಆದರೆ ಋಷಿ ವಿಜ್ಞಾನ. ಅದು ಹೇಳ್ತದೆ ಮೂಲಾಧಾರದಲ್ಲಿ ನಾದದ ಉತ್ಪತ್ತಿ, ಅಲ್ಲಿಂದ ನಾಭಿ, ಹೃದಯ, ಕಂಠ. ಪರಾ, ಪಶ್ಯಂತೀ, ಮಧ್ಯಮಾ, ವೈಖರಿ. ವೈಖರಿ ಅಂದ್ರೆ ಕಂಠ. ಕಂಠ ನಾಲ್ಕನೆಯದು.

ಮಾತು ಹೇಗಿರಬೇಕು ಎನ್ನುವುದಕ್ಕೆ ತುಂಬ ವಿವರಣೆಯಿದೆ. ದೂತ ಅಂದರೆ ಹೀಗಿರಬೇಕು. ಯಾರಿಗೆ ಇಂಥಹ ದೂತನು ಸಿಗ್ತಾನೋ, ಅಂತಹ ದೊರೆಯ ಕಾರ್ಯಸಿದ್ಧಿ ನಿಶ್ಚಯ. ಇಂಥಹ ದೂತ ಸಿಕ್ಕಿದರೆ ಅವನೇ ಸಾಕು ಎಲ್ಲ ಕಾರ್ಯಸಾಧನೆಗೆ ಎಂದು ರಾಮ ಹನುಮಂತನನ್ನು ಲಕ್ಷ್ಮಣನಲ್ಲಿ ಹೊಗಳುತ್ತಾ ಇದ್ದಾನೆ. ಆಸೆಯಾಯ್ತು ರಾಮನಿಗೆ, ಇದ್ದರೆ ಇಂಥಹ ದೂತನಿರಬೇಕೆಂದು. ಮಾತು ಹೇಗಿರಬೇಕೆಂಬುದನ್ನು ಮುಂದಿನ ಪ್ರವಚನಲ್ಲಿ ಕೇಳೋಣ.
ಪ್ರವಚನವನ್ನು ಇಲ್ಲಿ ಕೇಳಿರಿ:

ಪ್ರವಚನವನ್ನು ನೋಡಲು:

Facebook Comments Box