“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 09: ಅವತಾರ

‘ಅವತಾರ’ ಎಂಬ ಸಂಸ್ಕೃತ ಪದಕ್ಕೆ ‘ಇಳಿದು ಬರುವುದು’ ಎಂಬ ಅರ್ಥವಿದೆ. ಭುವಿಯ ತನ್ನ ಮಕ್ಕಳ ಸಂಕಟಗಳನ್ನು ಪರಿಹರಿಸಲು ದಿವಿಯ ದೇವ ಇಳಿದು ಬರುವುದನ್ನು ‘ಅವತಾರ’ ಎನ್ನುತ್ತಾರೆ. ಶ್ರೀ ರಾಮ, ಶ್ರೀ ಕೃಷ್ಣ, ಶ್ರೀ ಶಂಕರರು ಮೊದಲಾದವರು ಇದಕ್ಕೆ ಉದಾಹರಣೆ.

ಜೀವಿಗಳಾದ ನಾವೂ ದಿವಿಯಿಂದ ಬಂದ ದಿವ್ಯಚೇತನರೇ ಆಗಿದ್ದೇವೆ. ಹಾಗಿರುವಾಗ ನಮಗೂ ಅವರಿಗೂ ಇರುವ ಅಂತರವೇನು? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ನಮ್ಮ ಜನ್ಮಕ್ಕೂ ಅವರ ಜನ್ಮಕ್ಕೂ ಇರುವ ಅಂತರವನ್ನು ಹೇಳುವುದಾದರೆ ಒಂದು ‘ಅವತಾರ’, ಇನ್ನೊಂದು ‘ಪತನ’.
ಕಾಲು ಜಾರಿ ಒಬ್ಬಾತ ಬಾವಿಗೆ ಬೀಳುತ್ತಾನೆ. ಇದು ಪತನ. ನಾವು ಭ್ರಮೆ-ಪ್ರಮಾದಗಳಿಗೆ ಒಳಗಾಗಿ ಸಂಸಾರಕೂಪಕ್ಕೆ ಜಾರಿ ಬಿದ್ದವರು. ಅವತಾರ ಪುರುಷ ಸಂಸಾರಕೂಪದಿಂದ ನಮ್ಮನ್ನು ಮೇಲೆತ್ತಲೋಸುಗ ಇಳಿದು ಬಂದವನು. ಅವತಾರ-ಪತನಗಳ ಪರಿಣಾಮದಲ್ಲಿಯೂ ಅಂತರವಿದೆ. ಬಾವಿಗೆ ಜಾರಿ ಬಿದ್ದವನ ಕೈಕಾಲುಗಳು ಮುರಿಯಬಹುದು. ಸ್ವರೂಪ ಕೆಡಬಹುದು. ಆದರೆ ಇಳಿಯುವವನು ತನಗೇನೂ ಆಘಾತ ತಂದುಕೊಳ್ಳದೇ ಇಳಿದು, ಬಿದ್ದವನನ್ನು ಮೇಲೆತ್ತುತ್ತಾನೆ.

ನಮ್ಮ ನಿಜವಾದ ಸ್ವರೂಪ ಕೇವಲ ಆನಂದಮಯವಾದುದು, ಅಲ್ಲಿ ದುಃಖಕ್ಕೆ ಅವಕಾಶವಿಲ್ಲ. ಕೇವಲ ಜ್ಞಾನಮಯವಾಗಿದೆ, ಅಲ್ಲಿ ಅಜ್ಞಾನಕ್ಕೆ ಅವಕಾಶವಿಲ್ಲ. ಹಾಗೆ ನಿತ್ಯಸತ್ಯಾತ್ಮಕವಾದುದು, ಅಲ್ಲಿ ಸಾವಿಗೆ ಎಡೆಯಿಲ್ಲ. ಆದರೆ ನಮ್ಮ ಈಗಿನ ಸ್ವರೂಪ ಹೀಗಿಲ್ಲ. ಇಲ್ಲಿ ಆನಂದವಿದೆ, ಅದಕ್ಕಿಂತ ಹೆಚ್ಚು ದುಃಖವೂ ಇದೆ. ಇಲ್ಲಿ ತಿಳಿವಿದೆ, ಆದರೆ ಅದನ್ನು ಮೀರಿಸುವಂತಹ ಮರೆವು ಇದೆ. ಇಲ್ಲಿ ಬದುಕಿದೆ, ಪಕ್ಕದಲ್ಲಿಯೇ ದಾರುಣವಾದ ಸಾವು ಇದೆ. ಹೀಗೇಕಾಯಿತು?

ಕಾಲುಜಾರಿ ಬಾವಿಗೆ ಬೀಳುವಾಗ ಅಂಗ ಊನ ಮಾಡಿಕೊಳ್ಳುವಂತೆ ಸಂಸಾರ ಕೂಪಕ್ಕೆ ಬೀಳುವಾಗ ನಾವು ನಮ್ಮ ನಮ್ಮ ನೈಜಸ್ವರೂಪವನ್ನು ಕಳೆದುಕೊಂಡೆವು. ಆದರೆ ಅವತಾರ ಪುರುಷರು ಹಾಗಲ್ಲ. ಜ್ಞಾನ-ವಿಜ್ಞಾನಮಯವಾದ, ಅವಿನಾಶಿಯಾದ, ಆನಂದಮಯವಾದ ತಮ್ಮ ಸ್ವರೂಪವನ್ನು ಕಾಪಿಟ್ಟುಕೊಂಡು ಭುವಿಗೆ ಬಂದವರು. ಬರುವಾಗ ತಮ್ಮ ಕಾರ್ಯಕ್ಕೆ ಬೇಕಾದ ದೈವಿಕ ಸಂಪತ್ತನ್ನು ಒಟ್ಟಿಗೆ ತಂದವರು. ಆದ್ದರಿಂದಲೇ ಒಬ್ಬ ಅವತಾರ ಪುರುಷನಲ್ಲಿ ಭಗವಂತನಲ್ಲಿರುವ ಗುಣಸ್ವಭಾವಗಳು ಸಹಜವಾಗಿಯೇ ಇರುತ್ತವೆ.

ಪರಮಾತ್ಮ ಸನ್ನಿಧಿ ಅವತಾರ ಪುರುಷರಲ್ಲಿ ಹೇಗಿದೆಯೋ, ಸಾಮಾನ್ಯರಲ್ಲಿಯೂ ಹಾಗೆಯೇ ಇದೆ. ಆದರೆ, ಅದು ಮಡಕೆಯಲ್ಲಿಟ್ಟ ದೀಪದ ಪ್ರಭೆಯಂತೆ ಹೊರಸೂಸಲಾರದು. ಅವತಾರ ಪುರುಷರೊಳಗಿನ ಭಗವಂತನ ಚೇತನ ಗಾಜಿನ ಗೋಳಕದೊಳಗಿಟ್ಟ ದೀಪದ ಪ್ರಭೆಯಂತೆ ಹೊರಹೊಮ್ಮಿ ದಶದಿಶಗಳಿಗೂ ವಿಸ್ತರಿಸುವುದು. ಸೂರ್ಯದೇವನಿಂದ ಹೊರಹೊಮ್ಮಿದ ಕಿರಣಗಳು ಜೀವಿಗಳ ಹಿತಕ್ಕಾಗಿ ಭೂಮಿಯನ್ನು ಪ್ರವೇಶಿಸುವಂತೆ –

ನಮ್ಮ ಜೀವನದ ಕತ್ತಲೆಯನ್ನು ಕಳೆಯಲು ಪರಮಾತ್ಮ ಸೂರ್ಯನಿಂದ ಹೊರಹೊಮ್ಮಿ, ನರಲೋಕದಲ್ಲಿ ನರರಂತೆಯೇ ಬಾಳಿ ನರರನ್ನು ನಾರಾಯಣತ್ವಕ್ಕೇರಿಸುವ ಅವತಾರ ಪುರುಷರನ್ನು ಹೃದಯದಲ್ಲಿ ಧರಿಸೋಣ.

~*~

Facebook Comments Box