ಸಂತರನ್ನು ಬಿಟ್ಟು ಕೊಟ್ಟರೆ ಭಾರತ ನಾಶ

 

ಹೊಸನಗರ : ಭಾರತ ದೇಶ ಆಧ್ಯಾತ್ಮಿಕವಾದ ಪುಣ್ಯ ನೆಲ, ಋಷಿ ಮುನಿಗಳಿಂದ ಹಿಡಿದು ಇಲ್ಲಿಯವರೆಗೂ ಲೋಕ ಚಿಂತನೆಯೇ ಜೀವನ ಎಂದು ಕೊಂಡಿರುವ ಸಂತ ಮಹಾತ್ಮರು ಬದುಕಿರುವ ನಾಡು ಅಂತಹ ನಾಡಿನಲ್ಲಿ ಸಂತರನ್ನು ಬಿಟ್ಟು ಕೊಟ್ಟರೆ ನಾಶವಲ್ಲದೆ ಮತ್ತೇನು ಉಳಿದೀತು, ಖಂಡಿತಾ ಸಂತರನ್ನು ಬಿಟ್ಟರೆ ಭಾರತ ನಾಶ ಎಂದು ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಯ ಅಭಿಪ್ರಾಯಪಟ್ಟರು.

ಹೊಸನಗರ ತಾಲೂಕಿನ ವಿವಿಧ ಸಮಾಜ ಮತ್ತು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಸ್ಪೋಟ್ಸ್ ಅಸೋಷಿಯೇಷನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರ ವಿರುದ್ಧ ನಡೆಸುತ್ತಿರುವ ಷ್ಯಡ್ಯಂತ್ರ ವಿರೋಧಿಸಿ ಸಮಾಜ ಸಮಷ್ಟಿಯ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಸಮಾಜಕ್ಕಾಗಿ ಬದುಕುವುದೇ ಅನುಷ್ಠಾನ ಅಂತಹ ಅನುಷ್ಠಾನದ ಪ್ರಮುಖ ಬಿಂಧು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ. ಹತ್ತಾರು ವರ್ಷಗಳ ಹಿಂದೆಯೇ ಕೇವಲ ಹವ್ಯಕ ಸಮಾಜ ಮಾತ್ರವಲ್ಲದೆ ಎಲ್ಲರನ್ನು ಹತ್ತಿರ ಸೆಳೆದು ವಿಶ್ವಾಸದ ಅನುಗ್ರಹ ನೀಡಿರುವುದು ಇಂದು ಎಲ್ಲ ಸಮಾಜವೂ ಅವರನ್ನು ಅರಿತು ಬೆಂಬಲಕ್ಕೆ ನಿಂತಿರುವುದಕ್ಕೆ ಸಾಕ್ಷಿ ಎಂದ ಅವರು ಸತ್ಯವಿದ್ದಲಿ ಬೆಳಕಿರುತ್ತದೆ ಬೆಳಕಿರುವಲ್ಲಿ ಜನರಿರುತ್ತಾರೆ ಇದರರ್ಥ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರೊಟ್ಟಿಗೆ ಈಗ ಜನ ಸಾಗರವೇ ಹರಿದು ಬರುತ್ತದೆ ಎಂದಾಗ ಅಲ್ಲಿಯೇ ಸತ್ಯವಿದೆ ಎಂದರ್ಥವಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.

ದೂರು ನೀಡಿದ ಮಹಿಳೆ ಸಂತ್ರಸ್ತೆ ಎಂದು ಅನುಕಂಪ ತೋರುವ ಹುಸಿ ಮಹಿಳಾವಾದಿಗಳು, ಮೊದಲು ಸಮಾಜಕ್ಕಾಗಿ ತನ್ನ ಕುಡಿಯನ್ನು ತ್ಯಾಗ ಮಾಡಿ ಪ್ರಸ್ತುತ ಮಿಥ್ಯಾರೋಪಕ್ಕೆ ಸಿಲುಕಿಸಿರುವ ತನ್ನ ಒಡಲ ಕುಡಿಯ ನೋವ ನೆನೆನೆನೆದು ಮರುಗುತ್ತಿರುವ ಆ ಮಹಾ ಸಂತ್ರಸ್ತೆ ತಾಯಿಯ ದು:ಖಕ್ಕೆ ಅನುಕಂಪವ್ಯಕ್ತಪಡಿಸುವುದಿಲ್ಲ ಏಕೆ ಎಂದು ಪ್ರಶ್ನಿಸಿದರು. ನನಗೆ ಒಳಿತಾಗುವ ಯೋಚನೆ ಬಿಟ್ಟು ಸಾರ್ವತ್ರಿಕ ಒಳಿತಾಗುವ ಚಿಂತನೆ ಮಾಡಬೇಕು ಈ ಹಿನ್ನೆಲೆಯಲ್ಲಿ ಬೇರೆ ಹೇಳಿದ ಸತ್ಯವಲ್ಲ ನಮ್ಮ ಆತ್ಮ ಒಪ್ಪಿದ ಸತ್ಯದ ಪರ ನಿಲ್ಲಬೇಕು ಎಂದರು.

ಕಾನೂನಿನ ಕುರಿತು ಗೌರವ ಹೊಂದಿರುವ ಲಕ್ಷಾಂತರ ಜನರ ಭಾವನೆಗೆ ಧಕ್ಕೆ ತಂದಿರುವ ನಿಕಟಪೂರ್ವ ಗೃಹ ಸಚಿವ ಕೆ.ಕೆ. ಜಾರ್ಜ್ ತಜ್ಞರ ಅಭಿಮತವನ್ನು ಧಿಕ್ಕರಿಸಿ ನಕಲಿ ಸಿಡಿ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಿರುವುದು ಹುದ್ದೆಗೆ ಮಾಡಿದ ಅಗೌರವ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಾರಣಗಿರಿ ಸ್ವಯಂ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಗೋಸಂರಕ್ಷಣೆಯ ದೀಕ್ಷೆ ಪಡೆದು ಸಮಾಜದ ಉದ್ಧಾರಕೈಗೊಂಡಿರುವ ರಾಮಚಂದ್ರಾಪುರಮಠದ ಸ್ವಾಮೀಜಿ ಧರ್ಮ ಪಥದಲ್ಲಿದ್ದಾರೆ ಎಂದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸ್ವಾಮೀಜಿಯ ವಿರುದ್ಧ ಅಂಬಾರಗುಡ್ಡ ಗಣಿಗಾರಿಕೆಯ ಹೋರಾಟ ಕೈಗೊಂಡ ಕ್ಷಣದಿಂದಲೂ ಷ್ಯಡ್ಯಂತ್ರ ರೂಪಿಸಲಾಗುತ್ತಿದೆ. ಇದು ಒಂದು ಭಾಗವಾದರೆ ಇದೀಗ ಸರ್ಕಾರದ ನಡೆಯೇ ಅನುಮಾನಕ್ಕೆ ಅಸ್ಪದವಾಗಿದೆ. ರಾಜ್ಯದಲಿರುವ ನ್ಯಾಯಾಂಗ ವ್ಯವಸ್ಥೆಯ ಕುರಿತು ಗೌರವ ಇಲ್ಲದೆ ರೀತಿಯಲ್ಲಿ ಇನ್ನೇನು ನಕಲಿ ಸಿಡಿ ತಯಾರಿಸಿದ ಆರೋಪಿಗಳಿಗೆ ಶಿಕ್ಷೆ ಎನ್ನುವ ಹೊತ್ತಿಗೆ ಪ್ರಕರಣ ಹಿಂಪಡೆಯುವ ಕ್ರಮ ಪ್ರಜಾಪ್ರಭುತ್ವವಲ್ಲ ಎಂದು ಆರೋಪಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಬಿ.ಯುವರಾಜ್, ವರ್ತಕ ಸಂಘದ ಅಧ್ಯಕ್ಷ ಶ್ರೀನಿವಾಸ ಕಾಮತ್, ಮುಸ್ಲಿಂ ಮುಖಂಡ ಕೆ.ಇಲಿಯಾಸ್, ಈಡಿಗ ಸಮಾಜದ ಪ್ರಮುಖರಾದ ಬಿ.ಜಿ. ನಾಗರಾಜ್, ಸುರೇಶ್ ಸ್ವಾಮಿರಾವ್, ಪರಿಶಿಷ್ಟ ಸಮಾಜದ ಚಂದ್ರಪ್ಪ, ಉಮೇಶ್, ಚನ್ನಬಸಪ್ಪ, ಜಿಪಂ ಸದಸ್ಯೆ ಶುಭಾಕೃಷ್ಣಮೂರ್ತಿ ಎನ್.ಆರ್.ದೇವಾನಂದ, ಎಂ.ವಿ. ಜಯರಾಮ್, ಶ್ರೀಪತಿರಾವ್, ಕುಮಾರಜಯನಗರ, ಹೆದ್ಲಿ ಬಾಲು, ವಡ್ಡಿನಬೈಲು ವೆಂಕಟೇಶ್ ಮತ್ತಿತರರು ಇದ್ದರು.

ಇದಕ್ಕೂ ಮುನ್ನು ಪಟ್ಟಣದ ಕೆಈಬಿ ವೃತ್ತದ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದಿಂದ ಭಕ್ತರು ಮೆರವಣಿಗೆ ನಡೆಸಿ ನಕಲಿ ಸಿಡಿ ಪ್ರಕರಣ ಹಿಂಪಡೆದಿರುವ ಸರ್ಕಾರದ ಕ್ರಮದ ವಿರುದ್ಧ ಘೋಷಣೆ ಕೂಗಿದರು.

20151201_121317 1hosp1

1hosp4 IMG-20151201-WA0025

 

Facebook Comments