“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 16: ಕಾಲವೆಂಬ ದಿವ್ಯೌಷಧ

ನವಮಾಸ ತುಂಬಿದ ಮಹಾರಾಣಿಯೋರ್ವಳು ಹೆಣ್ಣುಶಿಶುವಿಗೆ ಜನ್ಮವಿತ್ತಳು. ಮಹಾರಾಜ ಆನಂದತುಂದಿಲನಾದ. ವಿಪರ್ಯಾಸವೆಂದರೆ ಆತ ರಾಜನಾದರೂ ಬಹುದೊಡ್ಡ ಮೂರ್ಖನಾಗಿದ್ದ. ಮಗುವನ್ನು ನೋಡಲು ಪ್ರಸೂತಿಗೃಹಕ್ಕೆ ಧಾವಿಸಿದ ರಾಜನಿಗೆ ಆಘಾತವೇ ಕಾದಿತ್ತು. ಹೆಣ್ಣುಮಗುವೆಂದರೆ ನೀಳ ಕೇಶಪಾಶಗಳ, ದಾಳಿಂಬೆ ಹಲ್ಲುಗಳ ಸುಂದರಾಂಗಿಯೆಂದು ಭಾವಿಸಿದ್ದ ರಾಜನಿಗೆ ಕಂಡಿದ್ದು ಬೋಳುತಲೆಯ, ಬೊಚ್ಚುಬಾಯಿಯ ಹಸುಗೂಸು. ದಿಙ್ಮೂಢನಾದ ರಾಜ ಮಗುವಿಗೆ ಏನೋ ಭಯಂಕರ ರೋಗ ಬಂದಿದೆಯೆಂದು ಭಾವಿಸಿದ. ತಕ್ಷಣವೇ ಆಸ್ಥಾನ ವೈದ್ಯರನ್ನು ಕರೆಸಿ, ತನ್ನ ಮಗುವನ್ನು ವಿರೂಪಗೊಳಿಸಿದ ವಿಚಿತ್ರ ಕಾಯಿಲೆಯನ್ನು ಗುಣಪಡಿಸಲು ಅಪ್ಪಣೆ ಮಾಡಿದ. ಹುಚ್ಚು ರಾಜನ ಅಪ್ಪಣೆಯನ್ನು ಪಾಲಿಸದಿದ್ದರೆ ತನ್ನ ತಲೆಗೆ ಕುತ್ತು ಬರುವುದೆಂಬ ಅರಿವಿದ್ದ ವೈದ್ಯರು ತಲೆಯ ಮೇಲೆ ಕೈ ಹೊತ್ತರು. ಕಾಡಿಗೆ ಹೋಗಿ ಗಿಡಮೂಲಿಕೆ ತರುವ ನೆಪವೊಡ್ಡಿ ವೈದ್ಯರು ತಮ್ಮ ಗುರುವಿನ ಆಶ್ರಮಕ್ಕೆ ತೆರಳಿದರು. ಗುರುಗಳಲ್ಲಿ ತಮಗೊದಗಿದ ಆಪತ್ತನ್ನು ಹೇಳಿಕೊಂಡರು. ಪ್ರಾಜ್ಞರೂ, ಶಿಷ್ಯವತ್ಸಲರೂ ಆಗಿದ್ದ ಗುರುಗಳು ಶಿಷ್ಯನಿಗೆ ಅಭಯವನ್ನಿತ್ತು ಅವನೊಡನೆ ಅರಮನೆಗೆ ತೆರಳಿದರು. ಮಗುವನ್ನು ಪರೀಕ್ಷಿಸಿದ ಗುರುಗಳಿಗೆ ಚಿಕಿತ್ಸೆ ಬೇಕಾಗಿರುವುದು ಮಗುವಿಗಲ್ಲ; ರಾಜನಿಗೆ ಎಂಬುದು ಅರ್ಥವಾಯಿತು. ಏನು ಹೇಳುವರೋ ಎಂಬ ಕಾತರದಲ್ಲಿದ್ದ ರಾಜನಿಗೆ ಗುರುಗಳು ಹೇಳಿದರು. “ರಾಜನ್, ನಿನ್ನ ಮಗಳನ್ನು ಲೋಕೋತ್ತರ ಸುಂದರಿಯನ್ನಾಗಿಸುವ ಹೊಣೆ ನನ್ನದು. ಆದರೆ ನನ್ನದೊಂದು ನಿಬಂಧನೆ. ಈ ರೋಗಕ್ಕೆ ದೀರ್ಘವಾದ ಚಿಕಿತ್ಸೆಯ ಅಗತ್ಯವಿರುವುದರಿಂದ, ನನಗೆ ಬಯಸಿದಷ್ಟು ಕಾಲಾವಕಾಶವನ್ನು ಕೊಡಬೇಕು. ಚಿಕಿತ್ಸೆ ಪೂರ್ಣವಾಗುವವರೆಗೆ ಮಗುವನ್ನು ಯಾರೂ ನೋಡಬಾರದು.” ರಾಜ ಸಮ್ಮತಿಸಿದ. ನಂತರ ಗುರುಗಳು ಮಗುವನ್ನು ಆಶ್ರಮಕ್ಕೆ ಕೊಂಡೊಯ್ದರು.

ಹದಿನಾರು ವರ್ಷಗಳ ಸುದೀರ್ಘ ಕಾಲ ಕಳೆಯಿತು. ಆಶ್ರಮದಲ್ಲಿ ಶುಕ್ಲಪಕ್ಷದ ಚಂದ್ರನಂತೆ ಬೆಳೆದು ಷೋಡಶಿಯಾಗಿ ಕಂಗೊಳಿಸುತ್ತಿದ್ದ ರಾಜಕುಮಾರಿಯೊಡನೆ ಮುನಿ ಅರಮನೆಗೆ ಹಿಂದಿರುಗಿದ. ಸುದೀರ್ಘ ಕೇಶರಾಶಿಯ, ದಾಳಿಂಬೆ ಹಲ್ಲುಗಳ ಸೌಂದರ್ಯರಾಶಿಯಾದ ತನ್ನ ಮಗಳನ್ನು ನೋಡಿದ ರಾಜ, ತನ್ನ ಕಣ್ಣುಗಳನ್ನು ತಾನೇ ನಂಬದಾದ. ಆನಂದದಲ್ಲಿ ತೇಲಾಡುತ್ತಿದ್ದ ರಾಜ,”ಯಾವ ದಿವ್ಯೌಷದದಿಂದ ನನ್ನ ಮಗಳಲ್ಲಿ ಈ ಅದ್ಭುತವಾದ ಪರಿವರ್ತನೆ ಸಾಧ್ಯವಾಯಿತು?” ಎಂದು ಗುರುಗಳನ್ನು ಕೇಳಿದ. ಗುರುಗಳು ಉತ್ತರವಿತ್ತರು. “ರಾಜನೇ, ಬೋಳು ತಲೆಯ, ಬೊಚ್ಚುಬಾಯಿಯ ನಿನ್ನ ಮಗಳನ್ನು ಲೋಕೋತ್ತರ ಸುಂದರಿಯನ್ನಾಗಿಸಿದ ದಿವ್ಯೌಷಧವೇ ‘ಕಾಲ’. ಮಗುವನ್ನು ಯುವತಿಯನ್ನಾಗಿಸುವ ಶಕ್ತಿ ಕಾಲವೊಂದನ್ನು ಹೊರತುಪಡಿಸಿ ಸೃಷ್ಟಿಯ ಬೇರೆ ಯಾವ ಔಷಧದಲ್ಲೂ ಇಲ್ಲ.”

ಮನುಷ್ಯನಿಂದ ಪರಿಹರಿಸಲು ಸಾಧ್ಯವಿಲ್ಲದ ಅನೇಕ ಸಮಸ್ಯೆಗಳನ್ನು ಕಾಲ ಪರಿಹಾರ ಮಾಡಬಲ್ಲದು. ಗೌಪ್ಯವಾಗಿ ಪಾಪಗಳನ್ನು ಮಾಡುವ ಅನೇಕರು ತಮ್ಮನ್ನು ಪತ್ತೆ ಹಚ್ಚಿ ಶಿಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಭಾವಿಸುವುದುಂಟು. ಆದರೆ ಎಲ್ಲೆಡೆಯೂ ಪಸರಿಸಿರುವ ಕಾಲಪುರುಷ ಯಾವ ನ್ಯಾಯಸ್ಥಾನಕ್ಕೂ ಸಿಕ್ಕದ ಅಂಥವರನ್ನು ಶಿಕ್ಷಿಸುತ್ತಾನೆ. ಕಾಲ ಮಗುವನ್ನು ಯುವಕನನ್ನಾಗಿ ಮಾಡಬಲ್ಲದು. ಯುವಕನಿಗೆ ಮುಪ್ಪಡರುವಂತೆಯೂ ಮಾಡಬಲ್ಲದು. ಚಕ್ರವರ್ತಿಯನ್ನು ಭಿಕ್ಷುಕನನ್ನಾಗಿ, ಗರೀಬನನ್ನು ಕುಬೇರನನ್ನಾಗಿ ಮಾಡುವ ಶಕ್ತಿ ಕಾಲಕ್ಕಿದೆ.

ಪರಿಹಾರ ಕಾಣದ ಸಮಸ್ಯೆಗಳಿಂದಾಗಿ ಕಂಗೆಟ್ಟು ಕೂರುವ ಬದಲು ಅವುಗಳನ್ನು ಕಾಲಕ್ಕೇ ಬಿಟ್ಟು ಬಿಡೋಣವೇ?

~*~

Facebook Comments