“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 17: “ಧರ್ಮದ ಸೇತುವೆ”

ಭೂಯೋ ಭೂಯೋ ಭಾವಿನೋ ಭೂಮಿಪಾಲಾಃ
ನತ್ವಾ ನತ್ವಾ ಯಾಚತೇ ರಾಮಚಂದ್ರಃ |
ಸಾಮಾನ್ಯೋsಯಂ ಧರ್ಮಸೇತುರ್ನರಾಣಾಂ
ಕಾಲೇ ಕಾಲೇ ಪಾಲನೀಯೋ ಭವದ್ಭಿಃ ||

ಸನಾತನ ಧರ್ಮದ ಪ್ರತಿಷ್ಠೆಗಾಗಿ ದಿವಿಯಿಂದ ಭೂಮಿಗಿಳಿದು ಬಂದ ಧರ್ಮಮೂರ್ತಿ ಶ್ರೀರಾಮ, ತನ್ನ ಅವತಾರದ ಕೊನೆಯಲ್ಲಿ ಮುಂದೆ ಬರಲಿರುವ ಚಕ್ರವರ್ತಿಗಳಿಗೆ ಒಂದು ಸಂದೇಶ ನೀಡುತ್ತಾನೆ.
ಮುಂದೆ ಜನಿಸಿ ಬಂದು ಭೂಮಿಯನ್ನಾಳಲಿರುವ ಚಕ್ರವರ್ತಿಗಳೇ! ಪ್ರಜಾಕೋಟಿಗಳ ಹಿತಕ್ಕೆ ಕಾರಣವಾದ ಧರ್ಮದ ಸೇತುವೆಯನ್ನು ಬಹು ಕಷ್ಟದಿಂದ ನಿರ್ಮಾಣ ಮಾಡಿದ್ದೇನೆ. ಮುಂಬರುವ ಕಾಲಘಟ್ಟದಲ್ಲಿ ಆ ಸೇತುವೆ ಮುರಿದು ಬೀಳದಂತೆ ರಕ್ಷಿಸಿ.” ಮರ್ಯಾದಾಪುರುಷೋತ್ತಮನ ಭವ್ಯ ಜೀವನದ ಅಪೇಕ್ಷೆ ಇದು.

ಧರ್ಮವೆಂಬುದು ಒಂದು ಸೇತುವೆ ಇದ್ದಂತೆ. ಸೇತುವೆಯೆಂದರೆ ನದೀಪ್ರವಾಹದಿಂದ ಬೇರ್ಪಡಿಸಲ್ಪಟ್ಟ ಎರಡು ಸ್ಥಳಗಳನ್ನು ಸೇರಿಸುವ ಸಾಧನ. ಧರ್ಮ ಮಾಡುವುದೂ ಅದೇ ಕೆಲಸವನ್ನೇ. ನಾವಿರುವುದು ಭೂಲೋಕದಲ್ಲಿ, ನಾವು ಕೊನೆಗೆ ತೆರಳಲಿರುವುದು ‘ಭಾ’ ಲೋಕಕ್ಕೆ. ಭೂಲೋಕದಲ್ಲಿ ಬೆಳಕಿದೆ, ಆದರೆ ಕತ್ತಲೆಯೂ ಇದೆ. ಸುಖವಿದೆ, ಪಕ್ಕದಲ್ಲೇ ದುಃಖವೂ ಇದೆ. ಬದುಕಿದೆ, ಆದರೆ ಮೃತ್ಯುವೂ ಇದೆ. ಭೂಲೋಕದಲ್ಲಿ ನಾವು ಇದ್ದೇವೆ, ಆದರೆ ನಾವು ಇರುವ ಸ್ಥಳವೊಂದಾದರೆ ಇಲ್ಲದಿರುವ ಸ್ಥಳ ಅನಂತ. ಇಂಥ ಭೂಲೋಕದಲ್ಲಿರುವ ನಾವು ‘ಭಾ’ ಲೋಕಕ್ಕೆ ಹೋಗಬೇಕಾಗಿದೆ. ‘ಭಾ’ ಎಂದರೆ ಬೆಳಕು ಎಂದರ್ಥ. ಅಲ್ಲಿ ಕತ್ತಲಿಲ್ಲದ ಬೆಳಕಿದೆ. ದುಃಖರಹಿತವಾದ ಆನಂದವಿದೆ. ಸಾವಿಲ್ಲದ ಶಾಶ್ವತ ಅಸ್ತಿತ್ವವಿದೆ. ನಮ್ಮ ಸೀಮಿತತೆಯನ್ನು ಕಳೆದುಕೊಂಡು, ಜಗದ್ವ್ಯಾಪಿಯಾದ ಸ್ವರೂಪವನ್ನು ನಾವು ಇಲ್ಲಿ ಪಡೆದುಕೊಳ್ಳುತ್ತೇವೆ.

ದುಃಖಮಯವಾದ ಭೂಲೋಕದಿಂದ ಆನಂದಮಯವಾದ ‘ಭಾ’ಲೋಕಕ್ಕೆ ದೈವನಿರ್ಮಿತ ಸೇತುವೆಯೇ ‘ಧರ್ಮ’. ಧರ್ಮದ ಸೇತುವೆಯನ್ನು ಪ್ರವೇಶಿಸಿದವನು ಮಾತ್ರ ‘ಭಾ’ ಲೋಕಕ್ಕೆ ಹೋಗುತ್ತಾನೆ. ಧರ್ಮ, ಜೀವ ದೇವರನ್ನು ಬೆಸೆಯುವ ಸೇತುವೆ. ಧರ್ಮ, ಜೀವಗಳನ್ನು ಸೃಷ್ಠಿಯೊಡನೆ ಬೆಸೆಯುವ ಸೇತುವೆ. ಧರ್ಮ, ಜೀವ-ಜೀವಗಳನ್ನು ಪರಸ್ಪರ ಬೆಸೆಯುವ ಸೇತುವೆ. ಶ್ರೀರಾಮ ಧರ್ಮದ ಮೂರ್ತಸ್ವರೂಪವಾಗಿದ್ದ. ಆದುದರಿಂದಲೇ ಶ್ರೀರಾಮನಿಗೆ ಸೃಷ್ಟಿಯ ಎಲ್ಲ ಜೀವರಾಶಿಗಳೊಡನೆ ಪ್ರೇಮಪೂರ್ವಕವಾಗಿ ಬೆಸೆದುಕೊಳ್ಳಲು ಸಾಧ್ಯವಾಯಿತು.

ಚರಾಚರ ಜಗತ್ತಿನ ಸಮಸ್ತ ಜೀವರಾಶಿಗಳಲ್ಲಿ ಅಡಗಿರುವ ದೇವದೇವನೊಡನೆ ಧರ್ಮದ ಸೇತುವೆಯನ್ನು ಬೆಸೆದುಕೊಳ್ಳೋಣವೇ?

~*~

Facebook Comments