ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 22: ನರಿಮರಿಯ ಸಂಯಮ

ಆಹಾರದ ಹುಡುಕಾಟದಲ್ಲಿ ಹೊರಹೊರಟ ನರಿಮರಿಯನ್ನು ತಾಯಿ ನರಿ ಎಚ್ಚರಿಸಿತು. ” ಮಗೂ, ಕಕ್ಕೇಕಾಯಿಗಳ ಬಗ್ಗೆ ಎಚ್ಚರದಿಂದಿರು. ತಿನ್ನಲು ಬಹು ರುಚಿಯೆನಿಸುವ ಕಕ್ಕೇಕಾಯಿಗಳು ಮಿತಿ ಮೀರಿ ತಿಂದಾಗ ಹೊಟ್ಟೆನೋವು ಬರಿಸುತ್ತವೆ.” ತಲೆಯಾಡಿಸಿದ ಮರಿ ದಟ್ಟ ಕಾಡಿನೆಡೆಗೆ ತೆರಳಿತು. ಕಾಡಿನ ಮಧ್ಯದಲ್ಲಿ ಫಲಭರಿತವಾದ ಕಕ್ಕೇಕಾಯಿಯ ಮರವೊಂದು ಅದರ ಕಣ್ಣಿಗೆ ಬಿತ್ತು. ನರಿಮರಿಯ ಬಾಯಲ್ಲಿ ನೀರೂರಿತು. ಇನ್ನೇನು ಸುತ್ತಲೂ ಬಿದ್ದಿದ್ದ ಕಕ್ಕೇಕಾಯಿಗಳನ್ನು ತಿನ್ನಬೇಕೆನ್ನುವಷ್ಟರಲ್ಲಿ ತಾಯಿಯ ಎಚ್ಚರಿಕೆಯ ಮಾತು ನೆನಪಾಯಿತು. ನಾಲಿಗೆ ಚಪಲ ಮತ್ತು ವಿವೇಕದ ನಡುವೆ ಕ್ಷಣಕಾಲ ಹೊಯ್ದಾಟ ನಡೆಯಿತಾದರೂ ಕೊನೆಗೂ ಅದು ನಾಲಿಗೆಯ ಚಪಲಕ್ಕೇ ಶರಣಾಯಿತು. ಕಕ್ಕೇಕಾಯಿಯ ರುಚಿಯಲ್ಲಿ ಜಗತ್ತನ್ನೇ ಮರೆತು ಗಬಗಬನೆ ತಿನ್ನತೊಡಗಿದ ನರಿಮರಿಗೆ ಎಚ್ಚರವಾದದ್ದು ಹೊಟ್ಟೆನೋವು ಬಂದಾಗಲೇ. ಹೊಟ್ಟೆನೋವನ್ನು ತಾಳಲಾರದೇ ಉರುಳಾಡತೊಡಗಿದ ನರಿಮರಿ ತಿಳಿದೂ ತಾಯಿಯ ಮಾತನ್ನು ಮೀರಿದ ತನ್ನ ಅವಿವೇಕಕ್ಕಾಗಿ ಪಶ್ಚಾತ್ತಾಪಗೊಂಡಿತು. ತಾಯಿಯ ಮುಂದೆ” ಇನ್ನೆಂದೂ ಕಕ್ಕೇಕಾಯಿ ಮರವಿರುವ ಕಾಡಿನ ಕಡೆಗೆ ತಿರುಗಿಯೂ ನೋಡೆನು” ಎಂದು ಪ್ರತಿಜ್ಞೆ ಮಡಿತು.

ಮರುದಿನ ಎಂದಿನಂತೆ ಆಹಾರವನ್ನು ಹುಡುಕುತ್ತಾ ಹೊರಟ ನರಿಮರಿಗೆ ಕಕ್ಕೇಕಾಯಿ ಮರವಿರುವ ಕಾಡಿನ ನೆನಪಾಯಿತು. ಮನಸ್ಸಿಗೆ ಎಷ್ಟು ಬುದ್ಧಿ ಹೇಳಿಕೊಂಡರೂ ಕಾಲುಗಳು ಆ ಕಡೆಗೆ ಸೆಳೆದವು. ಕಾಡಿಗೆ ಹೋದರೇನು ತಪ್ಪು? ಕಾಯಿಗಳನ್ನು ತಿನ್ನದಿದ್ದರಾಯಿತು ಎಂದುಕೊಂಡು ಆ ಕಾಡಿಗೆ ನಡೆಯಿತು. ಎಷ್ಟು ಬೇಡವೆಂದರೂ ನರಿಮರಿಯ ದೃಷ್ಟಿ ಕಕ್ಕೇಕಾಯಿ ಮರದ ಕಡೆಗೇ ಹೊರಳಿತು. ಅದರ ಸಂಯಮ ಸಡಿಲವಾಯಿತು. ಹೆಚ್ಚು ತಿಂದರೆ ತಾನೇ ಹೊಟ್ಟೆನೋವು ಬರುವುದು? ಒಂದೆರಡು ಕಾಯಿಗಳನ್ನು ಮಾತ್ರ ತಿಂದರೇನಾಗದು ಎಂದು ತನ್ನ ಮನಸ್ಸಿಗೆ ತಾನೇ ಸಮಾಧಾನ ಮಾಡಿಕೊಂಡು ಕಕ್ಕೇಕಾಯಿ ತಿನ್ನ ಹೊರಟ ಮರಿಗೆ ಹೊಟ್ಟೆನೋವಿನ ದಾರುಣ ಪರಿಣಾಮದ ನೆನಪಾಗಲಿಲ್ಲ. ನೆನಪಾದದ್ದು ಪುನಃ ಭಯಂಕರ ಹೊಟ್ಟೆನೋವು ಬಂದಾಗಲೇ.

ಈ ಕಥೆ ನರಿಯದಾದರೂ ಇದರ ನೀತಿ ಹೆಚ್ಚು ಅನ್ವಯಿಸುವುದು ನರನಿಗೇ ಆಗಿದೆ. ನಮ್ಮ ಜೀವನದಲ್ಲಿ ಕೆಟ್ಟ ಸಂಗತಿಗಳಿರುತ್ತವೆ. ಜೀವಕ್ಕೆ ಹಿತಕರವಲ್ಲದ ಅನೇಕ ದುರಭ್ಯಾಸಗಳಿರುತ್ತವೆ. ಅವುಗಳನ್ನು ವರ್ಜಿಸಬೇಕೆಂದು ಹಿರಿಯರು ಅನುಭವಿಗಳು ನಮಗೆ ಸಾರುತ್ತಿರುತ್ತಾರೆ. ಅದು ಹೌದೆನಿಸಿದರೂ ಕ್ಷಣಿಕ ಆಕರ್ಷಣೆ ವಿವೇಕವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಚಪಲಗಳು ಕಕ್ಕೇಕಾಯಿಯಂತೆ ಅನುಭವಿಸುವಾಗ ಮಧುರವಾಗಿದ್ದರೂ ಪರಿಣಾಮದಲ್ಲಿ ಹೊಟ್ಟೆನೋವಿನಂತೆ ದಾರುಣವಾಗಿರುತ್ತದೆ. ಒಮ್ಮೆ ವಶಪಡಿಸಿಕೊಂಡ ನಂತರ ಚಪಲಗಳು ಮನಸ್ಸಿನ ಸಂಯಮವನ್ನು ಕಳೆದುಬಿಡುತ್ತವೆ. ಮನುಷ್ಯನ ಎಲ್ಲಾ ಮಿತಿಗಳನ್ನೂ ಮರೆಯುವಂತೆ ಮಾಡುತ್ತದೆ. ಈ ರೀತಿಯ ಒಂದೊಂದು ಆಕರ್ಷಣೆಗಳು ಜೀವನದ ಎಲ್ಲಾ ಸುಖ-ನೆಮ್ಮದಿಗಳನ್ನು ನಾಶ ಮಾಡುತ್ತವೆ. ಅದನ್ನು ಎದುರಿಸಲು ಧೀರತನ ಬೇಕು.

ಮಹಾಕವಿ ಕಾಳೀದಾಸ ಹೇಳುತ್ತಾನೆ –
“ನಮ್ಮೆದುರು ವಿಕಾರಕ್ಕೆ ಕಾರಣವಾಗುವ ವಸ್ತು ಇದ್ದಾಗಲೂ ಯಾರ ಮನಸ್ಸು ವಿಕಾರವಾಗುವುದಿಲ್ಲವೋ ಅವರೇ ನಿಜವಾದ ಧೀರರು.”
ಇಂತಹ ಧೀರತನ ನಮಗೆ ಎಂದಿಗಾದರೂ ಬಂದೀತೇ?

~*~

Facebook Comments