ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 23: ತಪ್ಪು ಮಾಡಿದವರಾರು?
ಯಮಧರ್ಮರಾಯನ ಆಸ್ಥಾನದಲ್ಲಿ ಗೋಹತ್ಯೆ ಮಾಡಿ ಸತ್ತ ಬ್ರಾಹ್ಮಣನೊಬ್ಬನ ವಿಚಾರಣೆ ನಡೆಯುತ್ತಿತ್ತು. ಯಮಧರ್ಮ ಬ್ರಾಹ್ಮಣನನ್ನು ಪ್ರಶ್ನಿಸಿದ – ” ರೌರವನರಕದಲ್ಲಿ ದಾರುಣ ಹಿಂಸೆಯನ್ನು ಅನುಭವಿಸಲು ಕಾರಣವಾಗುವಂತಹ ಗೋಹತ್ಯೆಯ ಪಾತಕವನ್ನೇಕೆ ಎಸಗಿದೆ?” ಬ್ರಾಹ್ಮಣ ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸತ್ತಾ ಉತ್ತರಿಸಿದ- ” ನಾನು ಆ ಗೋವನ್ನು ಕೊಲ್ಲಲೇ ಇಲ್ಲೆ. ‘ತೇನ ವಿನಾ ತೃಣಮಪಿ ನ ಚಲತಿ’ ದೇವರಿಲ್ಲದೇ ಒಂದು ಹುಲ್ಲುಕಡ್ಡಿಯೂ ಚಲಿಸುವುದಿಲ್ಲ. ಎಲ್ಲವನ್ನೂ ಮಾಡುವವನು, ಮಾಡಿಸುವವನೂ ದೇವರೇ ಆಗಿದ್ದಾನೆ. ಮನುಷ್ಯ ನಿಮಿತ್ತ ಮಾತ್ರ ಎಂದು ಶಾಸ್ತ್ರಗಳು ಹೇಳುತ್ತವೆ. ಆದ್ದರಿಂದ ಈ ಗೋಹತ್ಯೆಯೂ ದೇವರಿಂದ ಆಗಿದ್ದೇ ಹೊರತೂ ನನ್ನಿಂದಲ್ಲ.” ತನ್ನ ತಪ್ಪನ್ನು ಮುಚ್ಚಲು ಶಾಸ್ತ್ರಗಳನ್ನು ಉಪಯೋಗಿಸುವ ಆತನ ದುರ್ಬುದ್ಧಿವಂತಿಕೆಗೆ ಮನದಲ್ಲಿಯೇ ಅಚ್ಚರಿಗೊಂಡ ಯಮಧರ್ಮ ಅವನಿಗೊಂದು ಪಾಠ ಕಲಿಸಬೇಕೆಂದುಕೊಂಡ.
ಭೂಲೋಕಕ್ಕೆ ಬ್ರಾಹ್ಮಣನನ್ನು ಕರೆದುಕೊಂಡು ಬಂದು ಅವನ ಮನೆಯನ್ನು ತೋರಿಸಿ ಕೇಳಿದ – “ಅಯ್ಯಾ ಬ್ರಾಹ್ಮಣನೇ, ಇಂದ್ರನ ಅರಮನೆಯನ್ನೂ ಮೀರುವಂತಿರುವ ಈ ಭವ್ಯವಾದ ಮನೆಯನ್ನು ಯಾರು ಕಟ್ಟಿಸಿದರು?” ಬ್ರಾಹ್ಮಣ ಉತ್ತರಿಸಿದ-” ಅದು ನಾನು ಕಟ್ಟಿಸಿದ ಮನೆ.” ಯಮಧರ್ಮ ಇನ್ನಷ್ಟು ಮುಂದುವರೆದು ಕೇಳಿದ – ” ಫಲಪುಷ್ಪ ಸಮೃದ್ಧವಾದ ಈ ತೋಟವನ್ನು ನೀನು ನಿರ್ಮಿಸಿದೆಯೇ?” ಹೆಮ್ಮೆಯಲ್ಲಿ ಮೈಮರೆತು ಬ್ರಾಹ್ಮಣ ಹೇಳಿದ – “ಹೌದು ಅದು ನಾನೇ ಮಾಡಿದ ತೋಟ.” ಸ್ವಲ್ಪ ಮುಂದೆ ಸತ್ತುಬಿದ್ದಿದ್ದ ಗೋವನ್ನು ತೋರಿಸುತ್ತಾ ಯಮಧರ್ಮ ಕಠೋರಸ್ವರದಲ್ಲಿ ಪ್ರಶ್ನಿಸಿದ -” ಹಾಗಿದ್ದರೆ ಈಗ ಹೇಳು, ನಿಜವಾಗಿಯೂ ಈ ಗೋವನ್ನು ಕೊಂಡವರು ಯಾರು?” ಬ್ರಾಹ್ಮಣನ ಬಾಯಿ ಕಟ್ಟಿತು. ಮುಖ ಕಪ್ಪಿಟ್ಟಿತು. ಮುಂದುವರೆದ ಯಮಧರ್ಮ ಹೇಳಿದ -” ಒಮ್ಮೆ ದೇವರಿಗೆ ಶಿಕ್ಷೆ ಕೊಡುವುದಾದರೂ ತಪ್ಪು ನಡೆದದ್ದು ನಿನ್ನ ಮೂಲಕವದ್ದರಿಂದ ಶಿಕ್ಷೆಯನ್ನು ನಿನ್ನ ಮೂಲಕವೇ ಕೊಡಬೇಕಲ್ಲವೇ?” ಯಮಧರ್ಮಕೊಡುವ ಶಿಕ್ಷೆಯನ್ನು ಅನುಭವಿಸದೇ ಅವನಿಗೆ ಈಗ ಅನ್ಯಮಾರ್ಗವೇ ಇರಲಿಲ್ಲ.

ಒಳ್ಳೆಯ ಕಾರ್ಯಗಳು ಜೀವನದಲ್ಲಿ ನಡೆದಾಗ ಸಾಮಾನ್ಯವಾಗಿ ಅದು ನನ್ನಿಂದಾದದ್ದೆಂದು ಹೆಮ್ಮೆಪಟ್ಟುಕೊಳ್ಳುತ್ತೇವೆ. ತಪ್ಪುಗಳು ನಡೆದಾಗ ಅದಕ್ಕೆ ದೇವರನ್ನು ಹೊಣೆಮಾಡುತ್ತೇವೆ. ಆಗ ನಮ್ಮ ಬುದ್ಧಿ ವಕೀಲನಾಗಿ ತಮ್ಮ ತಪ್ಪನ್ನು ಬೇರೆ ಯಾರ ಮೇಲೆ ಆದರೂ ಹಾಕಲು ಇನ್ನಿಲ್ಲದ ಪ್ರಯತ್ನ ನಡೆಸುತ್ತದೆ. ಒಳಿತಾಗಲೀ, ಕೆಡುಕಾಗಲೀ ಇಂದು ನಾವು ಅನುಭವಿಸುತ್ತಿದ್ದರೆ ಅದಕ್ಕೆ ಇಂದೋ, ಹಿಂದೋ, ಎಂದೋ ನಾವು ಮಾಡಿದ ಶುಭಾಶುಭ ಕರ್ಮಗಳೇ ಕಾರಣವಾಗಿರುತ್ತವೆಯೆಂಬುದು ಭಾರತೀಯ ಕರ್ಮಸಿದ್ಧಾಂತದ ಸಾರ. ನಾವು ಮಾಡಿದ ತಪ್ಪು ಒಂದಾದರೆ, ಅದನ್ನು ಇನ್ನೊಬ್ಬರ ಮೇಲೆ ಆರೋಪಿಸಲೆತ್ನಿಸುವುದು ಇನ್ನೊಂದು ತಪ್ಪು. ಹೀಗೆ ತಪ್ಪಿಗೆ ತಪ್ಪು ಸೇರಿ ನಾವು ಅನುಭವಿಸಬೇಕಾದ ರೌರವನರಕವನ್ನು ಮಹಾರೌರವವನ್ನಾಗಿ ಬೆಳೆಸುತ್ತದೆ.

ನೀ ಮಾಡಿದಡುಗೆಯನು ನೀನುಣ್ಣಬೇಕು
ನೀ ನೆಟ್ಟ ಗಿಡದ ಫಲ ನೀ ಸವಿಯಬೇಕು
ನೀ ನೆಟ್ಟ ಮುಳ್ಳುಗಿಡ ನಿನ್ನ ಕಾಲಡಿಗೇ
ಕೂಡಿಟ್ಟ ಪಾಪಗಳು ನಿನ್ನ ಸಂತತಿಗೇ.

~*~

Facebook Comments Box