“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 27:ಮೊಸಳೆ ಯಾವುದು?

ಸನ್ಯಾಸದಿಂದ ಸಂಸಾರವನ್ನು ಗೆದ್ದ ಮಹಾಸನ್ಯಾಸಿ ಶಂಕರಾಚಾರ್ಯರ ಬಾಲ್ಯದಲ್ಲಿ ಅವರ ಜೀವನಕ್ಕೇ ತಿರುವು ನೀಡಿದ ಘಟನೆಯೊಂದು ನಡೆಯಿತು. ಶೈಶವದಲ್ಲಿಯೇ ಶಂಕರರ ಮನದಲ್ಲಿ ತಾನೊಬ್ಬ ಸನ್ಯಾಸಿಯಾಗಬೇಕೆಂಬ ಹೆಬ್ಬಯಕೆಯಿತ್ತು. ಆದರೆ ಒಬ್ಬನೇ ಮಗ ಸನ್ಯಾಸ ತೆಗೆದುಕೊಳ್ಳುವುದು ತಾಯಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಧರ್ಮಸಂಹಿತೆಯಂತೆ ತಾಯಿಯ ಒಪ್ಪಿಗೆಯಿಲ್ಲದೇ ಸನ್ಯಾಸ ತೆಗೆದುಕೊಳ್ಳುವಂತಿರಲಿಲ್ಲ.ಹೀಗಾಗಿ ಶಂಕರರ ಸನ್ಯಾಸದ ಮಹದಾಕಾಂಕ್ಷೆ ಈಡೇರುವಂತಿರಲಿಲ್ಲ.

ಒಂದು ದಿನ ಮುಂಜಾವಿನ ಸಮಯ, ಶಂಕರರು ಪೂರ್ಣಾನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಮೊಸಳೆಯೊಂದು ಶಂಕರರ ಕಾಲನ್ನು ಹಿಡಿದುಕೊಂಡಿತು. ಬಾಲ ಶಂಕರರು ತಾಯಿಗೆ ಕೂಗಿ ಹೇಳಿದರು – “ಅಮ್ಮಾ! ನನ್ನನ್ನು ಮೊಸಳೆ ಹಿಡಿದುಕೊಂಡಿದೆ.” ದಡದ ಮೇಲೆ ನಿಂತು ಆ ದಾರುಣ ದೃಶ್ಯವನ್ನು ನೋಡುತ್ತಿದ್ದ ತಾಯಿ ಕಣ್ಣೀರಿಳಿಸಿದಳು. ಮಗನ ಬದುಕಿಗಾಗಿ ಮುಕ್ಕೋಟಿ ದೇವತೆಗಳನ್ನು ಪ್ರಾರ್ಥಿಸಿದಳು. ನದಿಯ ಮಧ್ಯದಲ್ಲಿ ಸಾವಿನೊಡನೆ ಮುಖಾಮುಖಿಯಾಗಿದ್ದ ಶಂಕರರು ತಾಯಿಗೆ ಹೇಳಿದರು – “ಅಮ್ಮಾ, ಧೈರ್ಯಗೆಡಬೇಡ. ಈ ಮೊಸಳೆ ಸನ್ಯಾಸ ತೆಗೆದುಕೊಂಡರೆ ನನ್ನನ್ನು ಬಿಡುತ್ತೇನೆನ್ನುತ್ತಿದೆ. ಬದುಕಲು ಈಗ ಇರುವ ಒಂದೇ ಉಪಾಯವೆಂದರೆ ‘ಸನ್ಯಾಸ’. ನಾನು ಸನ್ಯಾಸಿಯಾಗಲು ನೀನು ಈಗ ಒಪ್ಪಿಗೆ ಕೊಡಬೇಕಮ್ಮ.” ಆ ತಾಯಿಗೆ ಈಗ ಬೇರೆ ಮಾರ್ಗವೇ ಇರಲಿಲ್ಲ. ಸನ್ಯಾಸಿಯಾಗಿಯಾದರೂ ಮಗ ಬದುಕಿರಲೆಂಬ ಮಹದಾಸೆಯಿಂದ, ಆ ತಾಯಿ ಮಗನ ಸನ್ಯಾಸಕ್ಕೆ ಅನುಮತಿ ನೀಡಿದಳು. ಒಡನೆಯೇ ಮೊಸಳೆಯಿಂದ ಮುಕ್ತರಾಗಿ ಶಂಕರರು ಮೇಲಕ್ಕೇರಿ ಬಂದರು. ಹಲವು ವರ್ಷ ಪರಿವ್ರಾಜಕರಾಗಿ ಭಾರತವರ್ಷದಾದ್ಯಂತ ಅರಿವಿನ ಬೆಳಕನ್ನು ಹರಡಿದರು.

ಲೋಕದಲ್ಲಿ ಮೊಸಳೆಯನ್ನು ನೋಡಿದವರುಂಟು. ಆದರೆ ಸನ್ಯಾಸ ತೆಗೆದುಕೊಂಡರೆ ಬಿಟ್ಟುಬಿಡುವ ಮೊಸಳೆಯನ್ನು ಯಾರಾದರೂ ನೋಡಿದವರುಂಟೇ? ಏನಿದರ ಅರ್ಥ? ಯಾವುದು ಮೊಸಳೆ? ಯಾವುದು ಆ ನದಿ? ಸಂಸಾರವೇ ಆ ನದಿ. ಜೀವಿ ಅದರಲ್ಲಿ ನಿರಂತರ ಮುಳುಗೇಳುತ್ತಿರುವಾಗ ಮೃತ್ಯುವೆಂಬ ಮೊಸಳೆ ಅವನನ್ನು ಬಂದು ಹಿಡಿಯುತ್ತದೆ. ಮೃತ್ಯುಸಂಸಾರದಿಂದ ಪಾರಾಗಲು ಇರುವ ಒಂದೇ ಉಪಾಯವೆಂದರೆ ಸನ್ಯಾಸ. ಸನ್ಯಾಸಿ ಮಾತ್ರ ಸಂಸಾರದ ಈ ಮೃತ್ಯುಚಕ್ರದಿಂದ ಪಾರಾಗಬಲ್ಲ. ಸನ್ಯಾಸವೆಂದರೆ ಕೇವಲ ಕಾವಿ ವಸ್ತ್ರವನ್ನು ಧರಿಸುವುದಷ್ಟೇ ಅಲ್ಲ. ಸನ್ಯಾಸವೆಂದರೆ ತ್ಯಾಗ. ಯಾವುದರ ತ್ಯಾಗ? ನಾವು ಭಗವಂತನೊಂದಿಗೆ ಸೇರುವಲ್ಲಿ ಯಾವುದೆಲ್ಲ ಅಡ್ಡಿಯುಂಟು ಮಾಡಬಹುದೋ ಆ ಎಲ್ಲದರ ತ್ಯಾಗವೇ ಸನ್ಯಾಸ. ಲೋಕದಲ್ಲಿ ದೊಡ್ಡವಸ್ತುವಿನ ಲಾಭಕ್ಕಾಗಿ ಸಣ್ಣ ವಸ್ತುಗಳನ್ನು ತ್ಯಾಗ ಮಾಡುವುದುಂಟು. ಭಗವಂತನಿಂದ ದೊಡ್ಡವಸ್ತು ಲೋಕದಲ್ಲಿ ಬೇರೆ ಯಾವುದಿದೆ? ಜಗತ್ತಿನ ಸಕಲ ವಸ್ತುಗಳೂ ಭಗವಂತನಿಂದ ಸಣ್ಣವೇ ಆಗಿವೆ. ಆದ್ದರಿಂದ ಸರ್ವವ್ಯಾಪಕನೂ, ಸರ್ವಾಂತರ್ಯಾಮಿಯೂ,ಸರ್ವಾತ್ಮನೂ ಆದ ಭಗವಂತನನ್ನು ಪಡೆವಾಗ ಸಿಕ್ಕುವ ಸರ್ವೋತ್ಕೃಷ್ಟ ಆನಂದಕ್ಕಾಗಿ ಲೌಕಿಕವಾದ ಚಿಕ್ಕಚಿಕ್ಕ ಸುಖಗಳನ್ನು ತ್ಯಾಗ ಮಾಡುವುದೇ ಸನ್ಯಾಸ. ಒಬ್ಬನ ತ್ಯಾಗ ಹತ್ತು ಜನರ ಭೋಗ. ಒಬ್ಬನ ಭೋಗ ಹತ್ತು ಜನರ ರೋಗ.

ಭೋಗದ ರೋಗದಿಂದ ತ್ಯಾಗದ ಯೋಗಕ್ಕೇರಿ ಮೃತ್ಯುವೆಂಬ ಮೊಸಳೆಯ ಬಾಯಿಂದ ತಪ್ಪಿಸಿಕೊಳ್ಳುವ ಸನ್ಯಾಸ ಯಾರಿಗೆ ತಾನೇ ಹಿತವಲ್ಲ?

~*~

Facebook Comments