“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 30: ಸಂತ ತಾನೂ ನೀರು ಕುಡಿದ
ಒಂದು ಊರಿನಲ್ಲಿ ಒಬ್ಬ ಸಂತನಿದ್ದ. ಆತ ಸದಾ ಊರಿನ ಎಲ್ಲರ ಯೋಗಕ್ಷೇಮವನ್ನೇ ಹಾರೈಸುತ್ತಿದ್ದ. ಒಮ್ಮೆ ಗ್ರಾಮದ ಕ್ಷೇಮವನ್ನು ಬಯಸಿ ಅವನು ಧ್ಯಾನಮಗ್ನನಾಗಿದ್ದಾಗ ಊರಿನಲ್ಲಿ ಸಂಭವಿಸಲಿರುವ ಒಂದು ವಿಚಿತ್ರ ಅನಾಹುತದ ಮುನ್ಸೂಚನೆ ಸಿಕ್ಕಿತು. ಸಂತನ ಮುಂದೆ ಭಗವಂತ ಮೈದೋರಿ ಬಂದ. “ಇಂದಿಗೆ ಸರಿಯಾಗಿ ಏಳು ದಿನಗಳ ನಂತರ ಊರಿನಲ್ಲಿ ಧಾರಾಕಾರವಾಗಿ ಮಳೆ ಸುರಿದು, ಊರಿನ ಕೆರೆ- ಕಟ್ಟೆ – ಬಾವಿಗಳನ್ನೆಲ್ಲಾ ತುಂಬಿಸುತ್ತದೆ. ಅನಂತರ ಆ ನೀರನ್ನು ಯಾರು ಕುಡಿಯುವರೋ ಅವರೆಲ್ಲಾ ಹುಚ್ಚರಾಗುತ್ತಾರೆ” ಎಂದು ತಿಳಿಸಿ ಅಂತರ್ಧಾನನಾದ. ಅಪಾಯದ ಸೂಚನೆ ಸಿಕ್ಕಿದ ಒಡನೆಯೇ ಸಂತ ಜಾಗೃತನಾದ. ಮನೆ ಮನೆಗೆ ತೆರಳಿ, ” ಏಳು ದಿನಗಳ ನಂತರ ಊರಿನಲ್ಲಿ ಮಳೆ ಬರಲಿದೆ. ಆಮೇಲೆ ಊರಿನಲ್ಲಿ ನೀರು ಕುಡಿದವರೆಲ್ಲ ಹುಚ್ಚರಾಗುತ್ತಾರೆ” ಎಂದು ಎಲ್ಲರನ್ನೂ ಎಚ್ಚರಿಸಿದ. ಆದರೆ ಸಂತನ ಎಚ್ಚರಿಕೆಗೆ ಊರಿನಲ್ಲಿ ಯಾರೂ ಕಿವಿಗೊಡಲಿಲ್ಲ. ತಲೆಮಾರುಗಳಿಂದ ಬಾಳಿ ಬದುಕಿದ ಊರನ್ನು ಬಿಟ್ಟು ಹೋಗಲು ಯಾರೂ ಸಿದ್ಧರಾಗಿರಲಿಲ್ಲ. ಒಂದೊಂದೇ ದಿನಗಳು ಉರುಳತೊಡಗಿದವು. ಕೊನೆಗೆ ಮಳೆ ಸುರಿಯಲು ಒಂದೇ ದಿನವಿರುವಾಗ ನಿಶ್ಚಿತವಾದ ಅಪಾಯದಿಂದ ತನ್ನನ್ನಾದರೂ ರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಂತ, ಊರ ಹೊರಗಿನ ಬೆಟ್ಟದ ಗುಹೆಯೊಂದಕ್ಕೆ ತೆರಳಿದ. ಮರುದಿನ ದೇವರ ಸೂಚನೆಯಂತೆ ಮಳೆ ಬಂದೇ ಬಂತು. ಊರಿನ ಎಲ್ಲ ಕೆರೆ – ಕಟ್ಟೆ – ಬಾವಿಗಳು ಪೂರ್ತಿ ತುಂಬಿದವು. ಈ ನೀರು ಕುಡಿದು ಊರವರೆಲ್ಲ ಹುಚ್ಚರಾದರು.
ಇತ್ತ ಕಡೆ ಸಂತ ಗುಹೆಯಲ್ಲಿ ಕ್ಷೇಮವಾಗಿದ್ದರೂ, ಊರಿನ ನೆನಪು ಅವನನ್ನು ಕಾಡುತ್ತಲೇ ಇತ್ತು. ಏಕಾಂಗಿತನದಿಂದ ಬೇಸತ್ತ ಸಂತ ಊರಿಗಿಳಿದು ಬಂದ. ಎಲ್ಲೆಂದರಲ್ಲಿ ಹುಚ್ಚರೇ ತುಂಬಿದ್ದ ಊರನ್ನು ನೋಡಿ ಮಮ್ಮಲ ಮರುಗಿದ. ವಿಪರ್ಯಾಸವೆಂದರೆ ಆ ಹುಚ್ಚರ ದೃಷ್ಟಿಗೆ ಸಂತನೇ ಹುಚ್ಚನಾಗಿ ಕಂಡ. ಊರವರೆಲ್ಲಾ ಸೇರಿ “ಹುಚ್ಚ! ಹುಚ್ಚ!” ಎಂದು ಸಂತನನ್ನು ಕಲ್ಲುಗಳಿಂದ ಹೊಡೆಯತೊಡಗಿದರು. ಸಂತ ಪುನಃ ತನ್ನ ಗುಹೆಗೆ ಓಡಿದ. ಕೆಲವು ಸಮಯ ಕಳೆಯಿತು. ಏಕಾಂಗಿತನ ಮತ್ತೆ ಸಂತನನ್ನು ಕಾಡತೊಡಗಿತು. ಪುನಃ ಕೆಳಗಿಳಿದು ಬಂದ. ಊರಿನಲ್ಲಿ ಮತ್ತದೇ ಘಟನೆಯ ಪುನರಾವರ್ತನೆಯಾಯಿತು. ಗುಹೆಯ ಏಕಾಂಗಿತನ ಮತ್ತು ಊರಿನ ನೆನಪು ಸಂತನನ್ನು ಮತ್ತೆ ಮತ್ತೆ ಊರಿಗೆ ಕರೆದೊಯ್ಯುತ್ತಿತ್ತು. ಆದರೆ ಊರಿನವರ ಕಣ್ಣಿಗೆ ಸಂತನೇ ಹುಚ್ಚನಾಗಿದ್ದರಿಂದ ಮತ್ತದೇ ಘಟನೆಯ ಪುನರಾವರ್ತನೆಯಾಗುತ್ತಿತ್ತು. ಇದರಿಂದ ಬೇಸತ್ತ ಸಂತ ಕೊನೆಗೊಮ್ಮೆ ಊರಿಗಿಳಿದು ಬಂದು ತಾನೂ ಆ ನೀರನ್ನೇ ಕುಡಿದ.

ಸತ್ಯದ ಹಾದಿ ಯಾವಾಗಲೂ ದುರ್ಗಮವೇ. ಏಕೆಂದರೆ ಅದು ನಿರಂತರ ಏಕಾಂಗಿತನದಿಂದ ಕೂಡಿದೆ. ಕಾಣುವ ಪ್ರಪಂಚದ ಭೋಗಗಳನ್ನು ಬಿಟ್ಟು, ಕಾಣದ ಭಗವಂತನ ಹಿಂದೆ ಓಡುವ ಸಂತರ ಜೀವನ ವಿಲಕ್ಷಣವಾದುದರಿಂದ ಜನರ ಕಣ್ಣಿಗೆ ಅವರು ಹುಚ್ಚರಂತೆ ಕಾಣುತ್ತಾರೆ. ಎಲ್ಲಾ ಸುಖಗಳ ತಾಯಿಯೆನಿಸಿದ, ತಮ್ಮಲ್ಲೇ ಹುದುಗಿದ ಪರಮಾತ್ಮ ಸುಖವನ್ನು ಬಿಟ್ಟು ಹೊರಗಿನ ವಿಷಯ ಸುಖಗಳಿಗೆ ಹಾತೊರೆಯುವ ಜಗತ್ತು ಜ್ಞಾನಿಗಳ ಕಣ್ಣಿಗೆ ಹುಚ್ಚಾಗಿ ತೋರುತ್ತದೆ.

ಆ ಏಕಾಂಗಿತನವನ್ನು ತಾಳಿಕೊಳ್ಳುವ ಸಾಮರ್ಥ್ಯವಿಲ್ಲದವನು ಹುಚ್ಚರ ಸಂತೆಯೆನಿಸಿದ ಈ ಜಗತ್ತಿನಲ್ಲಿ ತಾನೂ ಒಬ್ಬ ಹುಚ್ಚನೇ ಆಗಿ ಸೇರಿ ಹೋಗುತ್ತಾನೆ.

~*~

Facebook Comments