“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

 

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 29: ಗುರುವಿಗೂ ಗುರು ಬೇಕು

ಗುರುವೊಬ್ಬ ತನ್ನ ಶಿಷ್ಯನೊಡಗೂಡಿ ಆಧ್ಯಾತ್ಮ ಪ್ರವಚನಕ್ಕಾಗಿ ಸಮೀಪದ ಗ್ರಾಮವೊಂದಕ್ಕೆ ತೆರಳಿದ. ತನ್ನ ಕಾರ್ಯಕ್ಕಾಗಿ ಕೆಲವು ಸಮಯ ಅಲ್ಲಿಯೇ ತಂಗಿದ. ಒಮ್ಮೆ ಅಗತ್ಯ ವಸ್ತುವೊಂದನ್ನು ತರುವ ಸಲುವಾಗಿ ಆಶ್ರಮಕ್ಕೆ ಹೋಗಬೇಕಾದರೆ ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ನದಿಯೊಂದನ್ನು ದಾಟಿಯೇ ಹೋಗಬೇಕಾಗಿತ್ತು. ತುಂಬಿ ಹರಿಯುವ ಪ್ರವಾಹವನ್ನು ದಾಟುವುದು ಹೇಗೆಂಬ ಜಿಜ್ಞಾಸೆ ಶಿಷ್ಯನನ್ನು ಕಾಡಿತು. ಗುರುವಿನಲ್ಲಿ ಶಂಕೆಯನ್ನು ಹೇಳಿಕೊಂಡ. ಆ ಗುರು ಅಂತಹ ಜ್ಞಾನಿಯೇನಾಗಿರದಿದ್ದರೂ ತನಗೆ ತೋಚಿದ ಪರಿಹಾರವೊಂದನ್ನು ಹೇಳಿದ – “ನನ್ನ ಗುರುವಿನ ಶ್ರೀಚರಣವೇ ಶರಣು ಎಂದು ಉದ್ಘೋಷಿಸುತ್ತಾ ಪ್ರವಾಹವನ್ನು ಪ್ರವೇಶಿಸು. ಗುರುಶರಣರನ್ನು ಪ್ರವಾಹ ಏನೂ ಮಾಡದು.” ಗುರುವಾಕ್ಯದಲ್ಲಿ ಪರಿಪೂರ್ಣವಾದ ಶ್ರದ್ಧೆಯಿಟ್ಟು ಶಿಷ್ಯ ಅಲ್ಲಿಂದ ಆಶ್ರಮದ ಕಡೆಗೆ ತೆರಳಿದ.
“ನನ್ನ ಗುರುವಿನ ಚರಣವೇ ಶರಣು” ಎಂದು ಉದ್ಘೋಷಿಸುತ್ತಾ ಉಕ್ಕಿ ಹರಿಯುವ ಪ್ರವಾಹವನ್ನು ಪ್ರವೇಶಿಸಿದ. ಆಗ ಅಲ್ಲಿ ಒಂದು ಅದ್ಭುತವೇ ನಡೆಯಿತು. ಗುರುತ್ವಕ್ಕೆ ಸಂಪೂರ್ಣ ಶರಣಾಗತನಾದ ಆ ಶಿಷ್ಯನನ್ನು ನದಿ ಮುಳುಗಿಸಲಿಲ್ಲ. ಬದಲಾಗಿ ನೆಲದ ಮೇಲೆ ಹೇಗೋ ಹಾಗೆಯೇ ತನ್ನ ಮೇಲೆ ನಡೆದು ಹೋಗಲು ಅವಕಾಶ ಮಾಡಿ ಕೊಟ್ಟಿತು. ಆಶ್ರಮಕ್ಕೆ ಹೋಗಿ ಸುರಕ್ಷಿತವಾಗಿ ಹಿಂದಿರುಗಿ ಬಂದ ಶಿಷ್ಯನನ್ನು ನೋಡಿ ಗುರುವಿಗೆ ಪರಮಾಶ್ಚರ್ಯವಾಯಿತು. ಏಕೆಂದರೆ ಅಲ್ಪಜ್ಞಾನಿಯಾದ ಆ ಗುರು ಏನೋ ತನಗೆ ತೋಚಿದ ಪರಿಹಾರವೊಂದನ್ನು ಹೇಳಿದ್ದ. ಆದರೆ ನಿಜವಾಗಿಯೂ ನದಿ ಶಿಷ್ಯನಿಗೆ ದಾರಿ ಮಾಡಿಕೊಡಬಹುದೆಂದು ಎಣಿಸಿರಲಿಲ್ಲ.

ಹೀಗಿರುವಾಗ ಕೆಲವು ದಿನಗಳ ನಂತರ ಅಗತ್ಯವಾದ ಒಂದು ಕಾರ್ಯಕ್ಕಾಗಿ ಗುರುವೇ ಆಶ್ರಮಕ್ಕೆ ತೆರಳಬೇಕಾಗಿ ಬಂದಿತು. ಆಗಲೂ ನದಿ ಪ್ರವಾಹ ಬಂದು ತುಂಬಿ ಹರಿಯುತ್ತಿತ್ತು. ಶಿಷ್ಯನಿಗೆ ತಾನು ಹೇಳಿದ ಉಪಾಯ ಗುರುವಿನ ಸ್ಮರಣೆಗೆ ಬಂತು. ಶಿಷ್ಯ ನನ್ನ ಗುರುವಿನ ಚರಣವೆಂದು ನಡೆಯುವುದರಿಂದ ಅದು ತನ್ನದೇ ಚರಣವಾಯಿತು, ನನ್ನ ಚರಣವೇ ಶರಣು ಎಂದರೆ ನದಿ ಬಿಟ್ಟುಕೊಡುವುದೆಂದು ಭಾವಿಸಿ, “ನನ್ನ ಶ್ರೀಚರಣವೇ ನನಗೆ ಶರಣು” ಎಂದು ನಡೆಯುತ್ತಾ ಪ್ರವಾಹವನ್ನು ಪ್ರವೇಶಿಸಿದ. ಅದ್ಭುತವೇನೂ ನಡೆಯಲಿಲ್ಲ. ಪ್ರವಾಹ ಹರಿಯುತ್ತಲೇ ಇತ್ತು. ಗುರುವಿನ ಜೀವನ ಪ್ರವಾಹ ಮಾತ್ರ ನಿಂತಿತು.

ಈ ಕತೆಯಲ್ಲಿ ಬರುವ ಗುರು ಮತ್ತು ಶಿಷ್ಯರಿಂದ ಒಂದೊಂದು ಪಾಠ ಕಲಿಯಬಹುದು. ಶಿಷ್ಯ ತನಗೊಬ್ಬ ಗುರುವಿದ್ದಾನೆ, ಅವನ ಚರಣಗಳು ತನ್ನನ್ನು ರಕ್ಷಿಸುತ್ತವೆ ಎಂದು ಧೃಢವಾಗಿ ನಂಬಿದ್ದ. ಅವನ ನಂಬಿಕೆ ಅವನನ್ನು ಉಳಿಸಿತು. ಆದರೆ ಗುರು ತನಗೂ ಒಬ್ಬ ಗುರು ಬೇಕು ಎಂದು ಭಾವಿಸಲಿಲ್ಲ. ತನಗೆ ತಾನೇ ಗುರುವೆಂದುಕೊಂಡ. ಆದ್ದರಿಂದ ಮುಳುಗಿದ. ಸಾಕ್ಷಾತ್ ಭಗವಂತನನ್ನು ಹೊರತುಪಡಿಸಿ ಎಲ್ಲರಿಗೂ ಗುರು ಬೇಕು. ಗುರುವಿಗೂ ಗುರು ಬೇಕು. ಆದಿ ಗುರುವೆನಿಸಿದ ಶಂಕರರಿಗೂ ಗುರುಗಳಿದ್ದರು. ಜಗದ್ಗುರುವೆನಿಸಿದ ಗೀತಾಚಾರ್ಯ ಶ್ರೀಕೃಷ್ಣನೂ, ಮರ್ಯಾದಾ ಪುರುಷೋತ್ತಮನೆನಿಸಿದ ಶ್ರೀರಾಮನೂ ಅಂತೇವಾಸಿಗಳಾಗಿ ಅಧ್ಯಯನ ಮಾಡಿದ್ದರು.

ಶರಣಾಗತಿಯ ಅದ್ಭುತ ಶಕ್ತಿಯನ್ನು ಶಿಷ್ಯನ ವೃತ್ತಾಂತದಿಂದ ಅರಿಯಬಹುದು. ಸಂಪೂರ್ಣವಾಗಿ ಗುರುವಿನಲ್ಲಿ ಶರಣಾಗತಿಯನ್ನು ಮಾಡಿದ ಶಿಷ್ಯನಿಗೆ ಪ್ರಕೃತಿಯೇ ವಶವಾಯಿತು. ಜಲ ನೆಲದಂತೆ ವರ್ತಿಸಿತು. ನಂಬಿಕೆಗಿರುವ ಅದ್ಭುತ ಶಕ್ತಿ ಅದು. ಗುರು ಅದನ್ನು ತಪ್ಪಾಗಿ ತನ್ನ ಮಹಿಮೆಯೆಂದು ಭಾವಿಸಿದ, ಮುಳುಗಿದ. ಸಂಸಾರದ ಪ್ರವಾಹದಲ್ಲಿ ಮುಳುಗಬಾರದೆಂದಿದ್ದರೆ ಗುರುವಿನಲ್ಲಿ ಶರಣಾಗತಿ ಮಾಡಬೇಕು. ಹಾಗಲ್ಲದೆ

“ನನಗೆ ಗುರು ಬೇಡ, ನನಗೆ ನಾನೇ ಗುರು” ಎಂದು ಇಲ್ಲದ ಮಹಿಮೆಯನ್ನು ಆರೋಪಿಸಿಕೊಂಡವನು, ಈ ಕಥೆಯಲ್ಲಿ ಬರುವ ಗುರುವಿನಂತೆ ಸಂಸಾರದ ಪ್ರವಾಹದಲ್ಲಿ ಮುಳುಗುತ್ತಾನೆ.

~*~

Facebook Comments