#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
18-06-2018:

ಶ್ರೀರಾಮನ ದ್ವಾಪರದ ರೂಪ ಕೃಷ್ಣ, ರಾಮಾಯಣದ ದ್ವಾಪರ, ಕಲಿಯ ಅವತಾರವೇ ಭಾಗವತ, ವಾಲ್ಮೀಕಿಗಳ ಪುನರಾವಿರ್ಭಾವವೇ ವ್ಯಾಸ ಶುಕರು, ಎಲ್ಲರಿಗೂ ವಂದನೆಗಳು. ಎಲ್ಲರೂ ಸಮಾಹಿತರಾಗಿ ನಮ್ಮಲ್ಲಿ ಸ್ಫುರಿಸಲಿ.

ನಮಗೆ ಇಷ್ಟವಾದ ವಸ್ತುವನ್ನು ಯಾರಿಗಾದರೂ ಕೈ ಎತ್ತಿ ಕೊಡಬೇಕೆಂದರೇ ಕಷ್ಟ, ಇನ್ನು ತನ್ನ ವಧುವನ್ನು ತಾನೇ ಪರಹಸ್ತ ಮಾಡುವುದು ಹೇಗೆ? ಅದೂ ಅನಿವಾರ್ಯವಾಗಿ ತಾನು ವರಿಸಬೇಕಾದವಳಲ್ಲಿಗೆ ಹೋಗಿ, ನೀನು ಇನ್ನೊಬ್ಬನನ್ನು ವರಿಸು ಎಂದರೆ ಹೇಗೆ? ಇದು ಪ್ರಾಯಶಃ ನಳನ ಮೊದಲ ಪರೀಕ್ಷೆ, ನಳ ಎಲ್ಲ ರೀತಿಯಲ್ಲೂ ಸಮರ್ಥನಾಗಿದ್ದಾನೆ.

ತತ್ತ್ವಭಾಗವತಮ್

ನಳ ಸ್ವಯಂವರಕ್ಕೆ ಹೋದರೆ ದಮಯಂತಿ ನಿಶ್ಚಿತವಾಗಿ ಅವನಿಗೇ ಒಲಿಯುತ್ತಾಳೆ. ಆದರೆ ಅಷ್ಟರಲ್ಲಿ ನಾಲ್ವರು ತೇಜಸ್ವೀ ಪುರುಷರು ನಳನಲ್ಲಿಗೆ ಬರುತ್ತಾರೆ. ಅವರನ್ನು ಕಂಡರೆ ಆತ್ಮೀಯರೆನ್ನುವ, ಪೂಜ್ಯರೆನ್ನುವ, ಗೌರವ ಕೊಡಬೇಕೆನ್ನುವ ಭಾವ. ನಳನಿಗೆ, ಒಂದು ಕೆಲಸ ನಿನ್ನವತಿಯಿಂದ ಆಗಬೇಕು ಎನ್ನುತ್ತಾರೆ. ಇಲ್ಲ ಎನ್ನುವ ವಿಚಾರ ಇಲ್ಲದ ನಳ ಆಗಲಿ ಎನ್ನುತ್ತಾನೆ. ಕೆಲವರು ಬಾಯಲ್ಲಿ ಮಾತ್ರಾ ಹೇಳುತ್ತಾರೆ ಆದರೆ ಇವನು ಹಾಗಲ್ಲ.
ನಳ ಒಪ್ಪಿ ಆಮೇಲೆ ಪರಿಚಯ ಕೇಳಿದ, ಬಂದವರಲ್ಲಿ ಒಬ್ಬ ಪೂರ್ವದಿಕ್ ಪಾಲಕ, ದೇವರಾಜನಾದ ಇಂದ್ರ, ಇನ್ನೊಬ್ಬ ದಕ್ಷಿಣ ದಿಕ್ ಪಾಲಕ ಯಮ, ಮೂರನೆಯವ ಆಗ್ನೇಯ ದಿಕ್ ಪಾಲಕ ಅಗ್ನಿ ಹಾಗೂ ನಾಲ್ಕನೆಯವನು ಪಶ್ಚಿಮ ದಿಕ್ ಪಾಲಕ ವರುಣ. ನಳನಿಗೆ ಆಶ್ಚರ್ಯ ಆಯಿತು ಜೊತೆಗೆ ಸಂತೋಷವೂ ಆಯಿತು. ಹೀಗೆ ಒಪ್ಪಿಗೆ ಕೊಡುವುದೆಂದರೆ ಖಾಲಿ ಸ್ಟಾಂಪ್ ಪೇಪರ್ ನ ಮೇಲೆ ಸಹಿಮಾಡಿದಂತೆ.

ಬಂದವರ ಅಪೇಕ್ಷೆ ಏನೆಂದರೆ ದಮಯಂತಿಯನ್ನು ಭೇಟಿ ಮಾಡಿ ಆ ನಾಲ್ವರಲ್ಲಿ ಒಬ್ಬರನ್ನು ವಿವಾಹವಾಗುವಂತೆ ಮನವೊಲಿಸಬೇಕೆನ್ನುವುದು. ಆಗ ದಿಗ್ಬ್ರಾಂತನಾದ ನಳ, ತಮ್ಮಿಬ್ಬರ ಮನಸ್ಸು ಆಗಲೇ ಒಂದಾಗಿತ್ತು, ಒಮ್ಮೆ ಭೇಟಿಯಾದರೆ ಸಾಕಿತ್ತು ವರಿಸಲು, ಆದರೆ ಲೋಕಪಾಲಕರು ಹೀಗೆ ಮಾಡಿಬಿಟ್ಟರು. ಸಂಯಮಿಯಾದ ನಳ ಹೇಳುತ್ತಾನೆ, ನಾನು ಅವಳನ್ನು ವರಿಸಲು ಹೋಗುತ್ತಿದ್ದೆ, ನಮ್ಮಿಬ್ಬರ ಮನಸ್ಸೂ ಒಂದಾಗಿದೆ ಹಾಗಿರುವಾಗ ನಾನು ಹೇಗೆ ಹೇಳಲಿ ಅಥವಾ ನಾನು ಅದಕ್ಕೆ ಸೂಕ್ತ ಅಲ್ಲವೇನೋ? ಯಾವ ಮನುಷ್ಯ ತಾನೇ ಈ ರೀತಿ ಹೇಳಬಲ್ಲ.

ದೇವತೆಗಳು ಹೇಳುತ್ತಾರೆ ನೀನು ಸತ್ಯವ್ರತ, ಸುಳ್ಳಾಡಬಾರದು ಆಡಿದರೆ ಅದು ಸುಳ್ಳು ಆಗಬಾರದು, ಹೀಗೆಮಾಡಿದರೆ ನಿನ್ನ ವ್ರತ ಭಂಗ ಆಗುತ್ತೆ, ನಮಗೆ ಬೇರೇನೂ ಬೇಕಿಲ್ಲ ನಾವು ಹೇಳಿದ ಕೆಲಸ ಮಾಡಿಕೊಡಬೇಕಷ್ಟೇ ಎಂದು.
ನಾನು ಹೇಗೆ ಹೇಳಲಿ? ಅದರಲ್ಲೂ ಅವಳಲ್ಲಿ ಹೇಗೆ ಹೇಳಲಿ? ಅವಳ ಪ್ರತಿಕ್ರಿಯೆ ಏನಿರಬಹುದು ಇದಕ್ಕೆ, ಒಂದೊಮ್ಮೆ ಅವಳು ಒಪ್ಪಿಬಿಟ್ಟರೆ ಮುಂದೆ ಗತಿ ಏನು? ಅವನ ಮುಂದಿದ್ದದ್ದು ಎರಡೇ ಆಯ್ಕೆ ಒಂದು ಒಲವು ಇನ್ನೊಂದು ಸತ್ಯ. ಸಾಮಾನ್ಯರು ಸಹಜವಾಗಿ ಒಲವನ್ನೇ ಆರಿಸಿಕೊಳ್ಳುತ್ತಾರೆ, ಯಾಕೆಂದರೆ ಒಲವು ಕುರುಡು ಅದರಲ್ಲಿರುವವರಿಗೆ ಬೇರೇನೂ ಕಾಣಿಸುವುದಿಲ್ಲ. ಅಂತಹ ಸಂದರ್ಭದಲ್ಲೂ ನಳ ಸತ್ಯವನ್ನು ಆರಿಸಿಕೊಳ್ಳುತ್ತಾನೆ. ಆಮೇಲೆ ಸರಿ ನಾನು ಹೋಗುತ್ತೇನೆ, ಆದರೆ ಹೇಗೆ ಹೋಗಲಿ ಯಾರ ಕಣ್ಣಿಗೂ ಬೀಳದಂತೆ ಎಂದು ಕೇಳುತ್ತಾನೆ. ದೇವತೆಗಳು ನಿನಗೆ ಅಗೋಚರ ಶಕ್ತಿಯನ್ನು ಕರುಣಿಸುತ್ತೇವೆ ಅದರಿಂದಾಗಿ ಯಾರಕಣ್ಣಿಗೂ ಬೀಳದಂತೆ ನೀನು ಅವಳಲ್ಲಿ ಹೋಗಿ ಬರಬಹುದು ಅಂತ. ಸರಿ ನಿರ್ವಾಹವಿಲ್ಲದೇ ನಳ ಹೊರಟ, ನಿರಾತಂಕವಾಗಿ ಉದ್ಯಾನದಲ್ಲಿದ್ದ ದಮಯಂತಿಯನ್ನು ಕಂಡ, ಸಖಿಯರ ಜೊತೆಗೆ ಇದ್ದ ಅವಳಿಗೆ ಗೋಚರವಾದ, ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷನಾದ ಅಪರಿಚಿತ ಯುವಕನನ್ನು ಕಂಡು ಎಲ್ಲರೂ ವಿಸ್ಮಿತರಾದರು, ಸಹಜವಾಗಿ ಗಲಿಬಿಲಿಯಾಗಬೇಕಿತ್ತು ಆದರೆ ಅವನು ದೇವತೆಯೇನೋ ಎನ್ನುವಂತೆ ಪ್ರಭೆ ಇತ್ತು, ಮೊದಲಿಗೆ ದಮಯಂತಿ ಎಚ್ಚೆತ್ತಳು, ಅವನಲ್ಲಿ ಪ್ರಶ್ನಿಸುತ್ತಾಳೆ ನೀನು ಯಾಕೆ ಬಂದೆ? ನನ್ನಲ್ಲಿ ಏನಾಗಬೇಕು? ಆಗ ನಳ ತನ್ನ ಪರಿಚಯ ಮಾಡಿಕೊಳ್ಳುತ್ತಾನೆ. ತಾನು ದೇವತೆಯಲ್ಲ, ಮನುಷ್ಯನೇ, ರಾಜ, ನಿಷಧದ ಚಕ್ರವರ್ತಿ, ಅದಕ್ಕಿಂತ ಹೆಚ್ಚು ವಿವರ ಬೇಡ ಅವಳಿಗೆ ಗೊತ್ತು, ಈಗ ಅವಳು ಸ್ತಬ್ಧವಾದಳು. ನಳ ಮುಂದುವರೆಸುತ್ತಾನೆ ನಾನು ಈಗ ದೇವತೆಗಳ ದೂತನಾಗಿ ಬಂದಿದ್ದೇನೆ, ನಾಲ್ವರು ಲೋಕಪಾಲಕರ ಪರವಾಗಿ ಅಹವಾಲು ತಂದಿದ್ದೇನೆ, ನೀನು ಅವರಲ್ಲಿ ಒಬ್ಬರನ್ನು ವಿವಾಹವಾಗಬೇಕಂತೆ, ಎಂದು.

ನಳನನ್ನು ಕಂಡ ದಮಯಂತಿ ಅತ್ಯಂತ ಸಂತಸದಲ್ಲಿದ್ದಳು ಆದರೆ ಈ ವಾರ್ತೆ ಕೇಳಿ ಅತ್ಯಂತ ದುಃಖ ಆವರಿಸಿ ಬಂತು. ಅದು ಹಾಗೆಯೇ ಅತಿಯಾದ ಸುಖದಲ್ಲಿರುವಾಗ ಅತಿಯಾದ ಕಷ್ಟ ಎದುರಾದರೆ ಯಾರಿಗಾದರೂ ತಡಕೊಳ್ಳೋದು ಕಷ್ಟ.

ನಳ ನಾಲ್ವರು ದೇವತೆಗಳಲ್ಲಿ ಯರನ್ನಾದರೂ ವರಿಸು ಎಂದಾಗ, ಬೇರೆ ಯಾರಾದರೂ ಆಗಿದ್ದರೆ ಅವರಲ್ಲಿ ಒಬ್ಬನನ್ನು ಖಂಡಿತಾ ಒಪ್ಪಿರುತ್ತಿದ್ದಳು, ಲಾಭ ಹೆಚ್ಚು ಕಾಣುವಾಗ ಪ್ರೀತಿ ಸಹಜವಾಗಿ ಮಾಯವಾಗುತ್ತೆ, ನಿಜವಾದ ಪ್ರೀತಿ ಇರುವಲ್ಲಿ ಹೀಗೆ ಆಗಲ್ಲ ಅಷ್ಟೇ.
ದಮಯಂತಿ ಎಲ್ಲ ಕೇಳಿದ ನಂತರ ಲೋಕಪಾಲಕರಿಗೆಲ್ಲಾ ನಮಸ್ಕರಿಸುತ್ತಾಳೆ, ಇವನಿಗೆ ಗಾಬರಿ, ನಂತರ ಹೇಳುತ್ತಾಳೆ. ಅವರಿಗೆಲ್ಲಾ ನಮಸ್ಕಾರ, ಪೂಜ್ಯರು ಅವರು ಆದರೆ ಪತಿ ಮಾತ್ರಾ ನೀನೇ. ಅಂದು ಹಂಸ ಹೇಳಿದಂದೇ ನಿನ್ನನ್ನು ವರಿಸಿ ಆಗಿದೆ.

ನಳ ಮತ್ತೆ ಹೇಳಿದ ಇನ್ನೊಮ್ಮೆ ಯೋಚಿಸಿ ನೋಡು, ದೇವತೆಗಳ ಒಡನಾಡಿಯಾದರೆ ನೀನು ಅಮರಳಾಗುತ್ತೀಯೆ ಎಂದು, ಇವನೂ ತನ್ನ ನೇರ ಬಿಟ್ಟು ಅವಳ ಚಿಂತೆ ಪ್ರಾರಂಭ ಮಾಡಿದ, ಅವಳ ನೆಮ್ಮದಿಯನ್ನು ಅರಸುತ್ತಿದ್ದಾನೆ, ದಮಯಂತಿ ಮತ್ತೆ ಕೇಳಿದಳು ಸರಿ ಹಾಗಾದರೆ ನಾಲ್ಕರಲ್ಲಿ ಒಂದನ್ನು ಆರಿಸಿಕೊಳ್ಳುತ್ತೇನೆ, ಅಗ್ನಿ, ವಿಷ, ನೀರು ಅಥವಾ ಪಾಶ. ಇವುಗಳ ಪೈಕಿ ಪ್ರಾಣತ್ಯಾಗ ಮಾಡಲು ಯಾವುದು ಆಗಬಹುದು ಅಂತ ನೀನೇ ನಿಶ್ಚಯಿಸು. ನಿನ್ನನ್ನು ಮನಸಾರೆ ಪ್ರೀತಿ ಮಾಡಿದ್ದೇನೆ, ನೀನೇ ಕೈಬಿಟ್ಟರೆ ನಾನೇನು ಮಾಡಲಿ ಈ ನಾಲ್ಕರಲ್ಲಿ ಒಂದೇ ಆಯ್ಕೆ ಉಳಿದಿದೆ. ನಿನಗೆ ಮೀಸಲಾದ ಹೃದಯವನ್ನು ಬೇರೆಯವರಿಗೆ ಕೊಡಲಾರೆ ಎಂದು.
ದೇವತೆಗಳಿಗೆ ಅಪ್ರಿಯ ಮಾಡಬಾರದು, ಅವರು ಮುನಿದರೆ ಏನೂ ಮಾಡಬಲ್ಲರು, ಪ್ರಳಯವೇ ಆಗಬಹುದು, ಅವರು ಮಹಾಬಲಿಷ್ಟರು, ಮೂರೂ ಲೋಕದ ಒಡೆಯರು, ಸಂದರರು ಅವರಲ್ಲಿ ಯಾರನ್ನಾದರೂ ವರಿಸುವುದೇ ಹಿತವಾಗಿ ಕಾಣುತ್ತೆ ಎಂದ. ಆದರೆ ದಮಯಂತಿ ಸೋಲಲ್ಲ. ನನ್ನ ಮನಸ್ಸಿನಲ್ಲಿರುವವನು ನೀನೊಬ್ಬನೇ ನಾನು ನಿನ್ನನ್ನು ಬಿಟ್ಟು ಬೇರೆಯವರನ್ನು ವರಿಸಲಾರೆ ಎಂದು ಹೇಳಿ ಪುನಃ ದೇವತೆಗಳಿಗೆ ನಮಸ್ಕರಿಸುತ್ತಾಳೆ.

ಇಲ್ಲಿಯವರೆಗೆ ದೂತನಾಗಿದ್ದವ ಈಗ ಎಚ್ಚೆತ್ತ, ನಳನಾದ, ಮುಂದೆ ಹೇಗೆ ಮಾಡುವುದು, ಯಾರಿಗೂ ತೊಂದರೆಯಾಗದಂತೆ ನಮ್ಮ ವಿವಾಹ ಹೇಗೆ ಎಂದು ಕೇಳಿದ. ಆಗ ದಮಯಂತಿ ಸಮಯಪ್ರಜ್ಞೆಯಿಂದ ಹೇಳುತ್ತಾಳೆ, ನಿನ್ನ ಕೆಲಸ ಮುಗಿಸಿದ್ದೀಯೆ, ಸ್ವಯಂವರಕ್ಕೆ ನೀನೂ ಬಾ ಅವರೂ ಬರಲಿ, ಉಳಿದದ್ದು ನನಗೆ ಬಿಡು, ನಿನಗೆ ಯಾವ ದೋಷವೂ ತಟ್ಟವುದಿಲ್ಲ, ನಾನು ನಿನ್ನನ್ನೇ ವರಿಸುತ್ತೇನೆ ಎಂದು ಧೈರ್ಯಹೇಳಿದಳು.

ನಳ ಒಪ್ಪಿ ಹೊರಗೆ ಬಂದ, ದೇವತೆಗಳನ್ನು ಭೇಟಿಯಾಗಿ ನಡೆದ ಎಲ್ಲ ಸಂಗತಿಗಳನ್ನೂ ಚಾಚೂ ತಪ್ಪದೇ ಹೇಳಿದ, ನೀನೂ ಅವರ ಜೊತೆಗೆ ಬಾ ನಾನು ವರಿಸೋದು ಮಾತ್ರಾ ನಿನ್ನನ್ನೇ ಅಂತ ಅವಳು ಹೇಳಿದ್ದನ್ನೂ ಮುಚ್ಚುಮರೆಯಿಲ್ಲದೇ ತಿಳಿಸಿದ, ಇದರಿಂದ ಯಾರಿಗೂ ದೋಷವಿಲ್ಲ ಅಂತ ಅವಳು ತಿಳಿಸಿದ್ದಾಳೆ ಎಂದೂ ಹೇಳಿದ ಮುಗ್ಧ ನಳ.
ದೇವತೆಗಳು ಚಿಂತಿಸಿದರು ಅವಳು ನಳನನ್ನು ಬಿಟ್ಟು ಬೇರೆಯವರನ್ನು ವರಿಸೋದಿಲ್ಲ ಹಾಗಾಗಿ ನಾವೂ ಅವನ ರೂಪವನ್ನೇ ಧಾರಣೆ ಮಾಡೋಣ ಎಂದು ಚಿಂತಿಸಿ ಹಾಗೇ ಮಾಡಿ ಅರಮನೆ ತಲುಪಿದರು.

ಸ್ವಯಂವರದಲ್ಲಿ ಎಲ್ಲರೂ ಬಂದಿದ್ದಾರೆ ತಮ್ಮ ಜೊತೆಗೆ ಬಂದ ದಮಯಂತಿಗೆ ಸೇವಕಿಯರು ಒಬ್ಬೊಬ್ಬರನ್ನಾಗಿ ಪರಿಚಯ ಮಾಡಿಸುತ್ತಿದ್ದರೆ ದಮಯಂತಿ ಒಂದೂ ಮಾತಾಡದೇ ಮುಂದುವರೆಯುತ್ತಿದ್ದಾಳೆ, ಕತ್ತಲಲ್ಲಿ ದೀವಟಿಗೆ ಹಿಡಿದುಕೊಂಡು ಓಡಾಡುವಾಗ ದೀವಟಿಗೆ ಮುಂದೆ ಹೋದಂತೆ ಹಿಂದಿನ ಜಾಗ ಕತ್ತಲಾಗುವುದಲ್ಲ ಹಾಗೇ ಇಲ್ಲಿ ರಾಜರ ಮುಖ ಆಗುತ್ತಿತ್ತು ಅಂತ ಕವಿ ಹೇಳುತ್ತಾನೆ. ಅವಳಿಗೆ ಕೊನೆಯಲ್ಲಿ ಬಂದಾಗ ಆಘಾತವಾಯಿತು ನಳನರೂಪದಲ್ಲಿ 5 ಮಂದಿ ಕುಳಿತಿದ್ದಾರೆ! ಇವಳಿಗೆ ಅರ್ಥವಾಯಿತು ಇದು ದೇವತೆಗಳ ಕೈಚಳಕ ಅಂತ, ನಿಜವಾದ ನಳ ಯಾರೆಂಬ ಸಂಶಯ ಬಂತು, ನಳನೆಂಬ ಭ್ರಮೆಯಿಂದಲಾದರೂ ಅವಳು ತಮ್ಮನ್ನು ವರಿಸಬಹುದೆನ್ನುವ ಆಲೋಚನೆ ಅವರದ್ದು,

ಆದರೆ ದಮಯಂತಿ ಪ್ರಾಜ್ಞೆ. ಅವಳು ಯೋಚಿಸಿದಳು, ದೇವತೆಗಳು ಭೂಸ್ಪರ್ಶ ಮಾಡಲ್ಲ, ಕಣ್ಣುರೆಪ್ಪೆ ಮಿಟುಕಿಸುವುದಿಲ್ಲ, ಬೆವರುವುದಿಲ್ಲ ಹಾಗೂ ಧರಿಸಿದ ಮಾಲೆ ಬಾಡದಂತಿರುತ್ತಾರೆ. ಹಾಗಾಗಿ ಕಂಡುಹಿಡಿಯಬಹುದೆನ್ನುವ ಭರವಸೆಯಿಂದ ಅವರೆಡೆ ನೋಡಿದರೆ ಎಲ್ಲರೂ ಭೂಸ್ಪರ್ಶಮಾಡಿದ್ದಾರೆ, ಉಳಿದ ಲಕ್ಷಣಗಳೂ ಒಂದೇ ರೀತಿಯಾಗಿವೆ. ಅಂದಾಜಿನಲ್ಲಿ ವರಿಸಲು ಇದು ಜೀವಮಾನದ ಪ್ರಶ್ನೆ, ಸಂದಿಗ್ಧತೆ ತಲೆದೋರಿತು.

ಉಪಾಯಗಳೆಲ್ಲಾ ಮುಗಿದು ದೇವತೆಗಳಲ್ಲಿ ಶರಣಾದಳು, ತಲೆಬಾಗಿ, ಕರಮುಗಿದು ಕಣ್ಣೀರಿಟ್ಟಳು, ಹಂಸದ ಮಾತಿನಂತೆ ನಳನನ್ನು ಪತಿಯಾಗಿ ವರಿಸಿದೆ, ದೇವತೆಗಳೂ ಅದೇ ನಳನನ್ನು ನನಗೆ ಪತಿಯಾಗಿ ಕೊಡಲಿ, ನನ್ನ ಮನಸ್ಸು ಮಾತುಗಳು ಒಂದೇ ಇರುವಂತಾಗಲಿ, ಅವನೊಂದಿಗೇ ನನ್ನ ಜೀವನ ನಡೆಸಲು ಅವಕಶ ಕೊಡಲಿ, ಇದು ನನ್ನ ವ್ರತ, ಅದು ಭಂಗವಾಗದಿರಲಿ. ಎಂದು ಮನಕರಗಿ ಪ್ರಾರ್ಥಿಸಿದಳು.
ದೇವತೆಗಳು ನೊಂದ ಜೀವದ ಪ್ರಾರ್ಥನೆ, ವಿಕ್ಷಿಪ್ತಸ್ಥಿತಿಯಲ್ಲಿನ ಅವಳ ಕರುಣಾಲಾಪವನ್ನು ಕೇಳಿ, ಅವಳ ನಿಶ್ಚಯವನ್ನು ಗಮನಿಸಿ, ಅವಳಿಗೆ ಅವನಲ್ಲಿರುವ ಅನುರಾಗ ಗಮನಿಸಿ, ಅವಳ ಮನಃಶುದ್ಧಿಯನ್ನು, ಭಕ್ತಿ ರಾಗ ಎಲ್ಲವನ್ನು ಗಮನಿಸಿ ಇನ್ನು ಪರೀಕ್ಷಿಸಲು ಸಾಧ್ಯವಾಗದೆ ಇಳಿದರು. ಆದರೂ ನಳಾಕೃತಿಯನ್ನು ಬಿಡಲಿಲ್ಲ, ತಮ್ಮ ದೇವತ್ವ ಪ್ರಕಟ ಮಾಡಿದರು. ಆಗ ದೇವತೆಗಳ ಸಹಜಸ್ವಭಾವ ಅವಳಿಗೆ ಕಾಣಿಸಿತು, ಅವರುಗಳ ಶೋಭೆ ಹೆಚ್ಚಾಯಿತು, ನಳನೊಬ್ಬನೇ ಆತಂಕದಲ್ಲಿದ್ದ ಅವನನ್ನು ಗುರುತಿಸಿ ಮಾಲೆಯನ್ನು ಅವನಿಗೆ ಹಾಕಿದಳು.

ದೇವತೆಗಳು ಪ್ರಸನ್ನರಾದರು, ಮೆಚ್ಚಿದರು, ಹರಸಿದರು, ಕಣ್ಣೀರು ಒರೆಸಿದರು. ನಳನಲ್ಲಿ ಪೂರ್ಣ ಪ್ರಸನ್ನರಾದರು, ಹೇಳಿದರು ನಿನ್ನಷ್ಟು ನಿಷ್ಟೆ ಯಾರಿಗೂ ಇರಲು ಸಾಧ್ಯವಿಲ್ಲ ಹಾಗಾಗಿ ಪ್ರಸನ್ನರಾಗಿದ್ದೇವೆ. ಇಂದ್ರ ಹೇಳಿದ ನೀನು ಯಜ್ಞಮಾಡಿದಾಗ ನಾನೇ ಸ್ವಯಂ ಆಗಿ ಬಂದು ಹವಿಸ್ಸನ್ನು ಸ್ವೀಕರಿಸುತ್ತೇನೆ, ಈ ಲೋಕದ ಜೀವನ ಮುಗಿದ ಬಳಿಕ ಉತ್ತಮ ಲೋಕಗಳಲ್ಲಿ ನಿನಗಾಗಿ ಶ್ರೇಷ್ಠ ಜೀವನ ಇರುತ್ತದೆ ಎಂದು, ಅಗ್ನಿ ತಾನು ಕರೆದಾಗಲೆಲ್ಲಾ ಬರುವ ಆಶ್ವಾಸನೆ ನೀಡಿದ ಹಾಗೂ ತನ್ನ ತೇಜಸ್ಸನ್ನು ನಳನಿಗೆ ನೀಡಿದ, ಯಮನು ಎಂದೂ ನೀನು ಧರ್ಮವನ್ನು ಬಿಡುವುದಿಲ್ಲ ಹಾಗೂ ಧರ್ಮವೂ ನಿನ್ನನ್ನು ಎಂದಿಗೂ ಕೈ ಬಿಡುವುದಿಲ್ಲ ಎಂಬ ವರನೀಡಿದ, ಜೊತೆಗೇ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆಯನ್ನು ಕೊಟ್ಟ. ವರುಣ ನೀನು ಧರಿಸಿದ ಮಾಲೆ ಬಾಡದಂತೆ, ಸುಗಂಧಭರಿತವಾಗಿರುವಂತೆ ನಿನಗೆ ವರ ನೀಡುತ್ತೇನೆ ಹಾಗೆಯೇ ನೀನು ಕರೆದಕೂಡಲೇ ಬರುತ್ತೇನೆ ಎಂಬ ವರ ಕೊಟ್ಟ.
ಹೀಗೆ ನಳನ ಜೀವನದ ಅಪರೂಪದ ರತ್ನವನ್ನು ಕಿತ್ತುಕೊಳ್ಳಲು ಬಂದವರು, ತಲಾ ಎರಡರಂತೆ 8 ವರಗಳು ಹಾಗೂ ದಮಯಂತಿ ಸೇರಿದಂತೆ ನವರತ್ನಗಳನ್ನು ಕೊಟ್ಟು ಹೋದರು.

ಇದು ಸ್ವಯಂವರದ ಕಥೆ. ಇನ್ನೂ ಇಬ್ಬರು ಬರುವವರಿದ್ದಾರೆ, ಅವರಲ್ಲಿ ಒಬ್ಬ ಕಲಿ, ಆದರೆ ಸ್ವಯಂವರ ಮುಗಿದು ಹೋಗಿದೆ, ಹೀಗಾಗಿದ್ದು ಕಲಿಗೆ ತಿಳಿದರೆ ಕಲಿ ಅವರನ್ನು ಕಾಡುವುದು ನಿಶ್ಚಿತ, ಮುಂದೇನಾಗುತ್ತೆ ನೋಡೋಣ. ನಳದಮಯಂತಿಯರ ಸತ್ಯಮಯವಾದ ಪಾತ್ರಗಳನ್ನು ಹೃದಯದಲ್ಲಿ ಭಾವಿಸೋಣ. ದಮಯಂತಿ ನಳನಿಗೆ ಹೇಗೋ ನಾನು ರಾಮನಿಗೆ ಹಾಗೆ ಎಂದು ಸೀತೆ ಹೇಳುತ್ತಾಳೆ!

ಈ ಕಥೆಯನ್ನು ಯಾರು ಹೃದಯದಲ್ಲಿ ಧರಿಸುತ್ತಾರೋ ಅವರಿಗೆ ಕಲಿಬಾಧೆ ಇರುವುದಿಲ್ಲ, ಹಾಗಾಗಿ ಇದರ ಅನುಸಂಧಾನವನ್ನು ಪೂರ್ಣಮನಸ್ಸಿನಿಂದ ಮಾಡೋಣ.

ಚಿತ್ರ:ಅಂತರ್ಜಾಲದಿಂದ

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments