#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
19-08-2018:

ಶುಕಮುನಿಯ ಹೃದಯಾಂತರಾಳದಲ್ಲಿ ಅರಳಿದ ಭಾಗವತಪುಷ್ಪದ ಮಕರಂದ, ಆ ಮುಕುಂದ. ಅವನ ದಿವ್ಯಚರಣಗಳಲ್ಲಿ ಪ್ರಣಾಮಗಳು.

ಸಜ್ಜನರ ನಿಜವಾದ ಲಕ್ಷಣವೇನೆಂದರೆ ಅದು ಪ್ರೇಮ, ಅವರು ಎಲ್ಲರನ್ನೂ ಪ್ರೀತಿಸುತ್ತಾರೆ, ತಮ್ಮನ್ನು ಪ್ರೀತಿಸುವವರನ್ನು, ಪ್ರೀತಿಸದವರನ್ನು ಹಾಗೂ ದ್ವೇಷಿಸುವವರನ್ನೂ ಕೂಡಾ. ಎಲ್ಲರಲ್ಲೂ ಅವರಿಗೆ ಮಧುರಭಾವವಿರುತ್ತದೆ. ದುರ್ಜನರು ಇದಕ್ಕೆ ತದ್ವಿರುದ್ಧ, ಅವರು ಎಲ್ಲರನ್ನೂ ದ್ವೇಷಿಸುತ್ತಾರೆ, ಮುಖ್ಯವಾಗಿ ಸಜ್ಜನರನ್ನು, ಅದೂ ಅಕಾರಣವಾಗಿ, ಗೂಬೆ ಬೆಳಕನ್ನು ದ್ವೇಷಿಸುವಂತೆ, ಏನೂ ಕಾರಣವೇ ಇರದೆ ಇದ್ದರೂ ಕೇವಲ ತಮಗೆ ಅವರ ಸ್ವಭಾವ ಸರಿಯಾಗುವುದಿಲ್ಲ ಎನ್ನುವ ಕಾರಣಕ್ಕೇ ವಿರೋಧ ಮಾಡುತ್ತಾರೆ. ಇವರಿಗೆಲ್ಲಾ ಮೂಲಸ್ರೋತ ಕಲಿಪುರುಷ, ಯವುದೇ ಯುಗದಲ್ಲಿಯಾದರೂ ಸರಿ ದುರ್ಜನರಿಗೆ ಅವನೇ ಪ್ರವರ್ತಕ.

ತತ್ತ್ವಭಾಗವತಮ್

ಸ್ವಯಂವರ ಮುಗಿಯಿತು, ನಳ-ದಮಯಂತಿಯರು ದೇವತೆಗಳು ಇಟ್ಟ ಪರೀಕ್ಷೆಯಲ್ಲಿ ಗೆದ್ದು, ದೇವತೆಗಳನ್ನು ಮೆಚ್ಚಿಸಿ ದಮಯಂತಿ ನಳನನ್ನು ವರಿಸಿದ್ದಾಳೆ, ದೇವತೆಗಳು ಮರಳಿ ಹೊರಟಿದ್ದಾರೆ, ದೇವತೆಗಳಿಗೆ ಅಭಿಮುಖವಾಗಿ ಇಬ್ಬರು ಪುರುಷರು ಬಂದರು, ಒಬ್ಬರು ಕಂದುಬಣ್ಣದವರಾದರೆ ಮತ್ತೊಬ್ಬರು ಕಪ್ಪು. ಅವರು ಸಾಧಾರಣದವರಲ್ಲ ಬದಲಿಗೆ ಯುಗಪುರುಷರು, ಇಬ್ಬರೂ ಇಂದ್ರನನ್ನು ಕಂಡು ಪರಿಚಯದ ನಗೆ ಬೀರಿದರು, ಅವರಲ್ಲಿ ಮೊದಲನೆಯವನು ದ್ವಾಪರನಾದರೆ ಎರಡನೆಯವನು ಕಲಿ.

ಪುರಂದರದಾಸರು ವಿಡಂಬನಾತ್ಮಕವಾಗಿ ಕಲಿಪುರುಷನನ್ನು ವರ್ಣಿಸಿದ್ದಾರೆ. ಅವನ ರೂಪ ಹೇಗಿತ್ತೆಂದರೆ, ಕುರುಡು ಜಂಜರು ತಲೆ, ಒರಟಾದ ವಕ್ರವಾದ ತಲೆಗೂದಲು, ಕಿರಿದಾದ ಕಂಡೂ ಕಾಣದಂತ ಕತ್ತು, ಹರಕು ಗಡ್ಡದ ಕೆಂಚ ಮೀಸೆ, ಮಲಿನ ವಸನ ಧರಿಸಿದ್ದನು. ಅವರ ಜೊತೆಗೆ ಎರಡೂ ಬದಿಯಲ್ಲಿ ಕರಾಳವಾದ ವೀರಭಟರಿದ್ದರು. ಅಂದರೆ ವ್ಯವಸ್ಥೆಯನ್ನು ಹಾಳು ಮಾಡುವ ಸೈನ್ಯ, ರಥವೋ ಕಬ್ಬಿಣದ್ದು, ಸ್ವಯಂವರವನ್ನು ತಾನೇ ಗೆಲ್ಲುತ್ತೇನೆಂಬ ಭರವಸೆಯಲ್ಲಿ ನಗುತ್ತಿದ್ದ ಕಲಿ, ಅವನ ಈ ಪರಿ ಓಟವ ಕಂಡು ದೇವೇಂದ್ರ ಆಶ್ಚರ್ಯದಲ್ಲಿ ಕೇಳಿದ, ಎಲ್ಲಿಗೆ ಹೊರಟಿದ್ದೀಯ ಅಂತ, ಕಲಿ ಉತ್ತರಿಸಿದ ದಮಯಂತಿಯ ಸ್ವಯಂವರಕ್ಕೆ ಹೊರಟಿದ್ದೇನೆ, ನಾನು ಅವಳನ್ನೇ ವರಿಸುತ್ತೇನೆ ಎಂದು.

ಮದುವೆ ಗೊತ್ತು ಮಾಡುವಲ್ಲಿ ಮೇಳಾಮೇಳಿಯನ್ನು ನೋಡುವ ಪದ್ಧತಿ ಇದೆ, ಅದು ಯಾಕೆಂದರೆ ಮದುವೆ ಎನ್ನುವುದು ಕೇವಲ ಇಬ್ಬರು ಕುಳಿತು ಮಾಡುವ ನಿರ್ಣಯ ಅಲ್ಲ, ಕುಟುಂಬ, ವಂಶಾವಳಿ ಎಲವನ್ನೂ ಗಮನಿಸಬೇಕಾಗುತ್ತದೆ. ಪ್ರೇಮ ಅನ್ನುವುದಕ್ಕೆ ಇದ್ಯಾವುದೂ ಬೇಕಾಗಲ್ಲ, ತುಂಬಾ ಈ ಬಗೆಯ ಪ್ರೇಮವಿವಾಹಗಳನ್ನು ನೋಡುತ್ತಿರುತ್ತೇವೆ, ಅದು ಮೂರು ದಿನಗಳದ್ದು, ಸಾಮಾನ್ಯವಾಗಿ ಮದುವೆಯಾಗುವಾಗ ಯಾರನ್ನೂ ಕೇಳೋದಿಲ್ಲ, ಆದರೆ ಸ್ವಲ್ಪ ದಿನಕಳೆದ ನಂತರ ಸಮಸ್ಯೆ ಬಂದಾಗ ಎಲ್ಲರೂ ಬೇಕಾಗುತ್ತೆ ಸುಧಾರಿಸಲಿಕ್ಕೆ. ಮದುವೆಯಲ್ಲಿ ಪೂರ್ತಿ ವ್ಯಕ್ತಿತ್ವ ಹೊಂದಾಣಿಕೆ ಆಗಬೇಕು, ಎಲ್ಲಿಯವರೆಗೆ ಅಂದರೆ ಇಬ್ಬರಲ್ಲಿಯೂ ಇರುವ ದೋಷಗಳು ಕೂಡಾ ಹೊಂದಾಣಿಕೆ ಆಗಬೇಕು. ಅದನ್ನು ಪಾಪಸಾಮ್ಯ ಅಂತ ಕರೆದಿದ್ದಾರೆ. ಇಬ್ಬರ ನಡುವಿನ ಗುಣಗಳ ಅನುಪಾತ ಪೂರಕವಾಗಿಲ್ಲದಿದ್ದರೆ ಅವರ ಜೀವನ ಚೆನ್ನಾಗಿರುವುದಿಲ್ಲ. ಇನ್ನು ಜಾತಕ ನೋಡಿ ಆಗಿರುವ ಮದುವೆಗಳು ವಿಫಲವಾಗಿಲ್ಲವಾ ಅಂತ ಕೇಳಿದರೆ ಅದರಲ್ಲಿ ನೋಡಿದವನ ದೋಷ ಇದೆಯೇ ಹೊರತು ಶಾಸ್ತ್ರದ್ದಲ್ಲ. ಅವನು ಸರಿಯಾಗಿ ಗುರುತಿಸಿಲ್ಲ ಅಂತ ತಿಳಿಯಬೇಕು. ಇಲ್ಲಿ ನೋಡಿ ದಮಯಂತಿ ಸಂಪೂರ್ಣ ದೋಷರಹಿತೆ ಹಾಗೂ ಕಲಿ ದೋಷಗಳ ಆಗರ. ಎಂತಹ ಜೋಡಿಯ ಚಿಂತನೆ, ಕೇಳಿದ ಇಂದ್ರ ಗಹಗಹಿಸಿ ನಕ್ಕ, ಎರಡು ಕಾರಣಕ್ಕೆ ಇದು ಸರಿಯಲ್ಲ, ಒಂದು ನಿನ್ನ ಆಸೆ ಬಹು ವಿಚಿತ್ರವಾಗಿದೆ, ಎರಡನೆಯದು ಅವಳ ಸ್ವಯಂವರ ಈಗಾಗಲೇ ಆಗಿಹೋಗಿದೆ. ನಮ್ಮಗಳ ಸಮಕ್ಷಮದಲ್ಲಿಯೇ ನಾವು ನಳನ ರೂಪದಲ್ಲಿಯೇ ಇದ್ದರೂ ನಮ್ಮನ್ನು ಸಂತುಷ್ಟಪಡಿಸಿ ನಳನನ್ನೇ ವರಿಸಿದಳು ಹಾಗೂ ನಮ್ಮಗಳ ಪೂರ್ಣ ಆಶೀರ್ವಾದವನ್ನೂ ಪಡೆದಳು.

ಹೀಗೆ ದೇವತೆಗಳು ಬಂದರೆ ಯಾವುದೂ ಹಾಳುಮಾಡಲ್ಲ, ಏನಾದರೂ ಒಳ್ಳೆಯದೇ ಆಗುತ್ತದೆ ಯಾಕೆಂದರೆ ದೇವತೆಗಳು ಕರುಣಾಮೂರ್ತಿಗಳು, ಅಲ್ಲದೇ, ದೇವರು, ಗುರು ಅಂತ ಆಗಬೇಕಾದರೆ ಅವರಲ್ಲಿ ಕರಗುವ ಹೃದಯ ಬೇಕು.
ಕಲಿಗೆ ಸಿಟ್ಟು ಬಂತು. ನೀವೆಲ್ಲ ಇದ್ದರೂ, ನಿಮ್ಮ ಎದುರಿಗೆ ನಿಮ್ಮನ್ನು ಲೆಕ್ಕಿಸದೇ ಮನುಜನನ್ನು ಮದುವೆಯಾದಳೆಂದರೆ ಅದು ಅಪರಾಧ, ಅದಕ್ಕೆ ತಕ್ಕ ಶಿಕ್ಷೆ ಆಗಬೇಕು, ನಿಮಗಾದ ಅವಮಾನಕ್ಕೆ ನಾನು ತಕ್ಕ ಪ್ರತೀಕಾರ ಮಾಡುತ್ತೇನೆ, ನಳನಿಗೆ ಭೂಮಿಯೂ ಇಲ್ಲ ಹಾಗೂ ದಮಯಂತಿಯೂ ಇಲ್ಲ ಎನ್ನುವ ಹಾಗೆ ಮಾಡುತ್ತೇನೆ, ನನ್ನ ಸಮ ಯಾರಿದ್ದಾರೆ ಎಂದು ನಕ್ಕ. ( ನಿಜ ಹಾಳು ಮಾಡುವುದರಲ್ಲಿ ಕಲಿಯ ಸಮ ಯಾರೂ ಇಲ್ಲ).
ನವಗ್ರಹಗಳ ಪೈಕಿ ಶನಿ ಸ್ವರೂಪ, ಲಕ್ಷಣಗಳಲ್ಲಿ ಕಲಿಯಂತೆಯೇ ಆದರೂ ಅವನು ವೈರಾಗ್ಯಕಾರಕ, ಈ ಕಾಲದಲ್ಲಿ ಶನಿಗೆ ಹೆದರುವಷ್ಟು ಜಗದೀಶ್ವರನಿಗೂ ಹೆದರುವುದಿಲ್ಲ. ಅಲ್ಲಿ ಭಕ್ತಿ ಇಲ್ಲ ಭಯ ಅಷ್ಟೇ, ನಮ್ಮ ತಂಟೆಗೆ ಮಾತ್ರಾ ಬರಬೇಡವೆನ್ನುವ ಭಾವ. ಆದರೆ ಶನಿಯಲ್ಲಿ ಒಳಿತಿನ ಅಂಶ ತುಂಬಾ ಇದೆ, ವೈರಾಗ್ಯವೆಂದರೆ ಜೀವನದಲ್ಲಿ ಒಂದು ಪ್ರಮುಖ ವ್ಯವಸ್ಥೆ, ದುಃಖದಿಂದಾಗಿ ವೈರಾಗ್ಯ ಬರಬೇಕು, ಅದಕ್ಕೆ ಕಾರಣ ಶನಿ, ಬುದ್ಧನಿಗೆ ಅವನು ಕಂಡ ಮೂರು ದುಃಖಗಳಿಂದಾಗಿ ವೈರಾಗ್ಯ ಬರಲಿಲ್ಲವೇ, ಅದರಿಂದಾದ ನಷ್ಟವೇನು? ಶನಿ ಶ್ರೇಯಸ್ಸನ್ನೂ, ಶುಭವನ್ನೂ ಕೊಡುತ್ತಾನೆ. ಆದರೆ ಕಲಿ ಹಾಗಲ್ಲ ಅವನದ್ದು ಬರೀ ಕೇಡು.

ಇಲ್ಲಿ ಕಲಿಯ ವಿಚಾರ ನಳನಿಗೋ, ದಮಯಂತಿಗೋ ಗೊತ್ತಿದೆಯಾ ಎಂದರೆ ಅದೂ ಇಲ್ಲ, ಇಬ್ಬರೂ ಪೂರ್ಣ ಮುಗ್ಧರು, ಅವರಲ್ಲಿ ದ್ವೇಷ ಯಾಕೆ ಎಂದರೆ ಅದು ಮತ್ಸರ ಮೂಲ ದ್ವೇಷ, ತನಗೆ ಸಿಗದ್ದು ಯಾರಿಗೂ ಸಿಗಬಾರದು ಎನ್ನುವಂಥದ್ದು.
ದೇವತೆಗಳು ಕಲಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು, ಅವಳು ನಮ್ಮ ಅನುಮತಿಯಿಂದಲೇ ನಲನನ್ನು ಮದುವೆಯಾದದ್ದು ಅಂತ ಹೇಳಿ, ತಾವು ಹೂಡಿದ ಆಟವನ್ನೆಲ್ಲಾ ಹೇಳಿದರು, ಅವಳು ನಮ್ಮನ್ನು ಪ್ರಾರ್ಥಿಸಿ ಕರಗುವಂತೆ ಮಾಡಿ, ನಮ್ಮ ಅನುಗ್ರಹದಿಂದಲೇ ನಳನನ್ನು ಪಡೆದುಕೊಂಡಳು, ನಮಗೇ ಕರುಣೆ ಬಂದು ನಾವು ಇದಕ್ಕೆ ಪೂರಕರಾದೆವು. ನಮಗೆ ಇಲ್ಲಿ ಅವಮಾನದ ವಿಷಯ ಏನೂ ಇಲ್ಲ ಇದಕ್ಕೆ ನಮ್ಮ ಆಶೀರ್ವಾದ ಪೂರ್ಣವಾಗಿದೆ ಎಂದರು. ಆದರೂ ಕಲಿ ಒಪ್ಪದಿದ್ದಾಗ ಎಚ್ಚರಿಸಿದರು, ನಳನ ತಂಟೆಗೆ ವಿನಾಕಾರಣ ಹೋಗಬೇಡ, ಅವನು ಒಳ್ಳೆಯವನು, ಸದ್ಗುಣಿ, ಎಲ್ಲರೂ ಅವನನ್ನು ಆಶ್ರಯಿಸುತ್ತಾರೆ, ನಾವೂ ಆಶ್ರಯಿಸಬೇಕೇ ಹೊರತು ವಿರೋಧಿಸಬಾರದು. ಅವನು ಧರ್ಮವನ್ನು ಚೆನ್ನಾಗಿ ಬಲ್ಲವನು, ಆಚರಣೆಯನ್ನೂ ಮಾಡುತ್ತಾನೆ, ಒಳ್ಳೆಯ ನಿಯಮಗಳನ್ನು ಹಾಕಿಕೊಂಡು ಅದನ್ನು ಪಾಲನೆ ಮಾಡುವಂತಹ ವ್ಯಕ್ತಿ. ಸತ್ಯ, ಧೃತಿ, ನ್ಯಾಯ, ತಪಸ್ಸು, ಶೌಚ, ಜಪ, ಶಮ, ದಮ ಎಲ್ಲವೂ ಅವನಲ್ಲಿ ಇದೆ. ಅವನು ನಮಗೆ ಸರಿ ಮಿಗಿಲೆನಿಸಿದ ರಾಜ, ಅವನಿಗೆ ತೊಂದರೆ ಕೊಡುವುದು ಸರಿಯಲ್ಲ, ಯಾರು ನಳನನ್ನು ಶಪಿಸುತ್ತಾನೋ ಅವನು ತನಗೆ ತಾನೇ ಶಪಿಸಿಕೊಂಡಂತೆ, ಅವನಿಗೆ ಪೀಡೆಕೊಡಹೊರಟರೆ ಅದು ನಿನಗೇ ಮುಳುವಾದೀತು ಜೋಪಾನ, ಅವನನ್ನು ಶತ್ರುಗಳೂ ಪ್ರೀತಿಸುತ್ತಾರೆ. ಅವನನ್ನು ಪೀಡಿಸಿದರೆ ಅವರಿಗೆ ದಾಟಲಾರದ, ಕ್ರೂರವಾದ, ರೌರವನರಕ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಏನಾದರೂ ಮಾಡಿಕೋ ಎಂದು ಹೊರಟುಹೋದರು. ಆದರೆ ಇದ್ಯಾವುದೂ ಕಲಿಗೆ ತಲೆಗೇ ಹೋಗಲಿಲ್ಲ.

ಯಾರಿಗಾದರೂ ಕೆಟ್ಟದ್ದನ್ನು ಮಾಡುವ ಮನಸ್ಸು ಬಂದು ಬಿಟ್ಟರೆ ಯಾವ ಹಿರಿಯರ ಉಪದೇಶವೂ ತಲೆಗೆ ಹೋಗುವುದಿಲ್ಲ. ಕಲಿಗೆ ಉತ್ಸಾಹ, ಕಲಿ ಯಾರನ್ನೂ ಪ್ರವೇಶಿಸಿದರೂ ಅವನು ಧರ್ಮವನ್ನು ನಾಶಮಾಡುತ್ತಾನೆ. ಕೆಟ್ಟವನಾಗುತ್ತಾನೆ. ಇಲ್ಲದಿದ್ದಲ್ಲಿ ಕನಿಷ್ಠ ಅವನೇ ನಾಶವಾಗುತ್ತಾನೆ. ಪಕ್ಕದಲ್ಲೇ ದ್ವಾಪರ ಇದ್ದಾನೆ, ಈ ಜೋಡಿ ಹಾಳುಮಾಡಲು ಪ್ರಶಸ್ತರು. ಇನ್ನುಳಿದ ಯುಗಪುರುಷರಾದ ಕೃತ ಮತ್ತು ತ್ರೇತ ಇಬ್ಬರೂ ಶುಭಕಾರಕರು. ಕಲಿಗೆ ದ್ವಾಪರನೊಬ್ಬನೇ ಸ್ನೇಹಿತ , ಅವನಲ್ಲಿ ಕೇಳಿದ, ನಳನನ್ನ ನೋಯಿಸಲು ಸಹಾಯ ಕೊಡಲು. ಯಾರಿಂದಲೂ ನಳನನ್ನು ಗೆಲ್ಲಲು ಸಾಧ್ಯವಿಲ್ಲ. ದ್ಯೂತದಲ್ಲಿ ಸೋಲಿಸಬಹುದು. ಅಲ್ಲಿ ಮೋಸ ಇದೆ. ಇದನ್ನು ಬಳಸಿ, ನಳನನ್ನು ಹಾಳುಮಾಡೋಣ ಅದಕ್ಕೆ ಪಗಡೆ ಕಾಯಿಗಳಲ್ಲಿ ನೀನು ಸೇರಿಕೊಳ್ಳಬೇಕು. ನಾನು ದಾಳಗಳಲ್ಲಿ ಸೇರುತ್ತೇನೆ. ಹೀಗೆ ಮಾಡಿ ನಳನ ಸರ್ವನಾಶ ಮಾಡೋಣ ಅಂತ. ನಳ ದಮಯಂತಿಯ ಒಡಗೂಡಿ ತನ್ನ ಮನೆಗೆ ಬಂದ, ಇತ್ತ ಈ ಜೋಡಿಯೂ ಬಂತು.

ನಳದಮಯಂತಿಯರಿಗೆ ಇದ್ಯಾವುದದರ ಅರಿವೂ ಇಲ್ಲ. ತನಗೆ ಹಾರ ಹಾಕಿದ ದಮಯಂತಿಯ ಭುಜಗಳನ್ನು ಹಿಡಿದು ನೀನು ದೇವತೆಗಳನ್ನು ಬಿಟ್ಟು ನನ್ನನ್ನು ಆರಿಸಿದ್ದೀಯಾ, ನಾನು ನಿನ್ನನ್ನು ಎಂದಿಗೂ ಬಿಟ್ಟು ಹೋಗಲ್ಲ, ನಿನಗೇ ನಿಷ್ಠನಾಗಿರುತ್ತೇನೆ. ಎಂತಹ ಕಾಲದಲ್ಲೂ ನಿನಗೆ ಕಷ್ಟ ಬರದಂತೆ ಕಾಯುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಹಾಗೆಯೇ ಏಕಪತ್ನೀವ್ರತಸ್ಥನಾಗುತ್ತಾನೆ. ಆಗಿನ ಕಾಲದಲ್ಲಿ ಹೆಚ್ಚು ಮಂದಿ ಪತ್ನಿಯರಿರುವುದು ಸಹಜ, ರಾಜಾನೋ ಬಹುವಲ್ಲಭಃ ಎನ್ನುವ ಮಾತೇ ಇದೆ. ರಾಮನೂ ಹಾಗೆ, ಅವನಿಗೇ ಯಾವುದೇ ಅನಿವಾರ್ಯತೆ ಇರಲಿಲ್ಲ. ರಾಮನ ತಂದೆ, ದಶರಥನಿಗೆ ೩೫೦ ರಾಣಿಯರು ಇದ್ದರು ಅದರಲ್ಲಿ ಮೂವರು ಪಟ್ಟದರಸಿಯರು. ಆದರೂ ರಾಮನು ಮಾತ್ರ ಏಕಪತ್ನಿವ್ರತಸ್ಥನಾಗಿದ್ದ.

ಅತ್ಯಂತ ಪ್ರೇಮದಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಬದುಕಿದರು. ಕಾಲಕ್ರಮದಲ್ಲಿ ಇಬ್ಬರು ಮಕ್ಕಳು ಜನಿಸಿದರು, ಮಗ ಇಂದ್ರಸೇನ ಹಾಗೂ ಮಗಳು ಇಂದ್ರಸೇನೆರೊಂದಿಗೆ ಸಮೃದ್ಧ ಬದುಕು ನಡೆಸಿದರು. ನೂರಾರು ಬೃಹತ್ ಯಜ್ಞ ಯಾಗಾದಿಗಳನ್ನು ನಡೆಸಿ ಧರ್ಮದಿಂದ ರಾಜ್ಯಭಾರ ನಡೆಸಿದರು. ಕಲಿ ಮೊದಲನೇ ದಿನವೇ ನಳನ ಅರಮನೆಗೆ ಬಂದಿದ್ದರೂ ೧೨ ವರ್ಷಗಳ ಕಳೆದರೂ ನಳನಿಂದ ಒಂದು ಲೋಪವೂ ಆಗಲಿಲ್ಲ. ಹಾಗಾಗಿ ಕಲಿ ಪ್ರವೇಶ ಆಗಲಿಕ್ಕೆ ಸಾಧ್ಯವೇ ಆಗಲಿಲ್ಲ. ಹಾಗಾಗಿ ಅಂತಹ ಸಮಯಕ್ಕೆ ಕಾಯುತ್ತಾ ಕಲಿ ಕುಳಿತುಬಿಟ್ಟಿದ್ದ. ನಿತ್ಯವೂ ನಳ ತಪ್ಪು ಮಾಡುವುದನ್ನೇ ಹುಡುಕುತ್ತಾ ಕುಳಿತನು.

ಎಂತಹ ದುರ್ದೈವ ನಮ್ಮನ್ನು ಕಾಡಿದರೂ ಏನಾದರೂ ನಮ್ಮಲ್ಲಿ ಲೋಪ ಇದ್ದರೆ ಮಾತ್ರಾ ಸಾಧ್ಯ, ಸೀತೆಯಲ್ಲೂ ಹಾಗೆ ಕಾಣುತ್ತೇವೆ, ಅವಳು ಲಕ್ಷ್ಮಣನನ್ನು ಕಟುವಾಕ್ಯದಲ್ಲಿ ಟೀಕಿಸಿದಳು. ಅವನು ಬೇಸರಪಟ್ಟು ಹೊರಟುಹೋದ. ರಾವಣನಿಗೆ ಒಳಗೆ ಬರಲು ಅವಕಾಶವಾಯಿತು. ಹೀಗೆ ಎಲ್ಲಿಯಾದರೂ ವ್ಯವಸ್ಥೆಯಲ್ಲಿ ಒಂದು ರಂಧ್ರ ಬೇಕು, ಅವಕಾಶ ಬೇಕು. ಹೀಗಿರುವಾಗ ಒಂದು ಸಣ್ಣ ಘಟನೆ ನಡೆದು ಹೋಯಿತು. ರಾಜಕಾರಣದಲ್ಲಿ ಅತ್ಯಂತ ತೀವ್ರವಾಗಿ ಮುಳುಗಿದ್ದ ನಳ ಒಂದುದಿನ ಶೌಚಾನಂತರ ಅದರ ವಿಧಿ ಪೂರೈಸದೇ, ಶುದ್ಧಿ ಮಾಡಿಕೊಳ್ಳದೇ ಹೊರಟುಹೋದ. ಆಗ ಕಲಿಯ ೧೨ ವರ್ಷದ ತಪಸ್ಸಿಗೆ ಫಲ ಬಂತು. ಅದು ಒಂದು ಚಿಕ್ಕ ಲೋಪ, ಒಂದೇ ಬಾರಿ ಆಚರಿಸಿದ್ದು ಅಷ್ಟೇ ಆದರೆ ಶುದ್ಧಿಯ ವಿಷಯದಲ್ಲಿನ ಆ ಚಿಕ್ಕ ಲೋಪದಿಂದಾಗಿ ದೊಡ್ಡ ದೋಷವೇ ಬಂತು.

ಇಲ್ಲಿ ರಾಮಾಯಣದ ನೆನಪು ಬರುತ್ತೆ, ಕಪಟ ಭಿಕ್ಷುವಿನ ರೂಪದಲ್ಲಿ ರಾವಣ ಬಂದಾಗ ಸೀತೆ ಅವನನ್ನು ನಂಬಿ ಅವನಿಗೆ ತನ್ನ ಎಲ್ಲ ಕಥೆ ಹೇಳುತ್ತಾಳೆ. ನನ್ನ ಪರಿಚಯ ಏನೆಂದರೆ ನಾನು ರಾಮನ ಪಟ್ಟದಮಹಿಷಿ. ನಾನು ಮದುವೆಯಾಗಿ ೧೨ ವರ್ಷ ಸುಖವಾಗಿದ್ದೆ, ಮಾನುಷ ಸುಖಗಳನ್ನೆಲ್ಲಾ ಅನುಭವಿಸಿದೆ. ಎಲ್ಲ ಅಪೇಕ್ಷೆಗಳೂ ಪೂರ್ಣವಾಗಿತ್ತು. ೧೩ ನೇ ವರ್ಷದಲ್ಲಿ ರಾಜನಿಗೆ ಬಂದ ಅಪೇಕ್ಷೆಯಿಂದಾಗಿ ನಮ್ಮ ಗತಿ ಬದಲಾಯಿತು. ಕಷ್ಟ ಬಂತು. ಈ ಭಾಗದಲ್ಲಿ ನಳ ಹಾಗೂ ರಾಮ ಈ ಇಬ್ಬರ ಕಥೆಯಲ್ಲೂ ಸಾದೃಶ್ಯ ಕಾಣಬಹುದು. ಧರ್ಮಶಾಸ್ತ್ರದ ದೃಷ್ಟಿಯಿಂದ ಕೂಡ ಅದು ದೋಷ (ವಿಧಿ ಹಾಗಿತ್ತು) ಅದಕ್ಕೆ.

ಪುಷ್ಕರ ನಳನ ತಮ್ಮ. ಇವನು ಅಣ್ಣನನ್ನು ವಿನಾಕಾರಣ ದ್ವೇಷ ಮಾಡುತ್ತಿದ್ದ. ನಳನೊಡನೆ ಜಗಳವಾಡಿ ತುಂಬಾ ಬಾರಿ ಸೋತಿದ್ದ. ಕಲಿ ಅವನಲ್ಲಿ ಹೋಗಿ ಅವನ ಮನದಲ್ಲಿ ಆಸೆ ಮೂಡಿಸಿದ. ನಿನಗೆ ರಾಜ್ಯ,ಸೌಖ್ಯ ಕೊಡಿಸುತ್ತೇನೆ. ನೀನು ನಳನನ್ನು
ಜೂಜಿಗೆ ಕರೆ ಅಂದ. ಪುಷ್ಕರನು ಜೂಜಿಗೆ ಕರೆದರೆ ನಳ ಒಪ್ಪಲಿಲ್ಲ. ಯುದ್ಧಕ್ಕೆ ಕರೆದದ್ದಾದರೆ ಅದು ಕ್ಷತ್ರಿಯರಿಗೆ ಅನಿವಾರ್ಯ, ಹೋಗಲೇಬೇಕು.. ಆದರೆ ಜೂಜಿನಲ್ಲಿ ಹಾಗಲ್ಲ ಎಂದು ಹೇಳಿ ತಪ್ಪಿಸಿಕೊಂಡ, ಆದರೆ ಎರಡನೆಯ ಬಾರಿಗೆ ತನ್ನನ್ನು ದಮಯಂತಿಯ ಎದುರು ಕರೆದಾಗ ಬರಲ್ಲ ಅನ್ನಲಾಗಲಿಲ್ಲ, ಸ್ವಾಭಿಮಾನ ಅಡ್ಡಬಂತು. ಹೀಗೆ ಅವನ ದೈವಕ್ಕೆ ದಮಯಂತಿಯೂ ಕಾರಣಳಾದಳು. ನಂತರ ದ್ವಾಪರ, ಕಲಿಗಳ ಆಟ ಪ್ರಾರಂಭವಾಯಿತು.

ದೊಡ್ಡವರಿಗೇ ದೊಡ್ಡ ಪರೀಕ್ಷೆಗಳು ಎದುರಾಗುವುದು, ಅದಕ್ಕೆ ದೊರಕುವ ಪದವಿಯೂ ದೊಡ್ಡದೇ. ಚಿಕ್ಕವರಾಗಿಯೇ ಇರಬೇಕೆಂಬುದು ಸಾಧುವಲ್ಲ. ಮೇಲಿನ ಹಂತಕ್ಕೆ/ ಎತ್ತರಕ್ಕೆ ಹೋಗಬೇಕೆಂದುಕೊಳ್ಳುವವರಿಗೆ ಪರೀಕ್ಷೆಗಳು ಸಹಜ. ಅವರವರ ಮಟ್ಟಕ್ಕೆ ಆಯಾ ಪರೀಕ್ಷೆಗಳು ಇರುತ್ತವೆ, ಜಯಿಸಿದರೆ ಪದೋನ್ನತಿ.
ನಿಮಗೆಲ್ಲ ಆಹ್ವಾನ ಮಾಡುತ್ತೇವೆ, ಈ ಚರಿತೆಯನ್ನು ಯಾರು ಅನುಸಂಧಾನ ಮಾಡುತ್ತಾರೋ, ಅವರನ್ನು ಕಲಿಯು ಮುಟ್ಟುವುದಿಲ್ಲ. ಅಂದರೆ ಯಾವುದೇ ಕೇಡು, ದುಃಖ, ದುರಂತಗಳು ಉಂಟಾಗುವುದಿಲ್ಲ. ಅಧರ್ಮ ಅವರನ್ನು ಮುಟ್ಟುವುದಿಲ್ಲ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments