#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
21-08-2018:

ಅರ್ಧವಸನದ ಸ್ಮರಣಿಕೆ

ದ್ವಾಪರವೆಂದರೆ ತ್ರೇತೆಯ ಮುಂದುವರೆದ ಭಾಗ, ರಾಮನ ಮುಂದಿನ ಅವತಾರ ಕೃಷ್ಣನದ್ದು, ಭಾಗವತ ರಾಮಾಯಣದ ಮುಂದುವರಿಕೆ, ವ್ಯಾಸ, ಶುಕರು ಮತ್ತೆ ಉದಯಗೊಂಡ ವಾಲ್ಮೀಕಿಗಳು. ಈ ಅದ್ವೈತಕ್ಕೆ ಪ್ರಣಾಮಗಳು.

ಏಕವಸನದ ಅದ್ವೈತ, ಅರ್ಧವಸನದ ಸ್ಮರಣಿಕೆ ಇದು ಇಂದಿನ ಪ್ರವಚನದ ಅಂತರಾರ್ಥ. ಶಿವಧನುಸ್ಸು ಒಂದು ಎರಡಾಗಿದ್ದು ರಾಮಾಯಣಕ್ಕೆ ಅರ್ಥತುಂಬಿತು, ಹಾಗೇ ಇದೂ ಒಂದಾಗಿ ಒಂದರ್ಥ, ಎರಡಾಗಿ ಒಂದರ್ಥ.

ತತ್ತ್ವಭಾಗವತಮ್

ಕಾಲವೆಂದರೇ ಪರಿವರ್ತನೆ, ಕಾಲ ಮುಂದುವರೆದರೆ ಬದಲಾವಣೆ ಆದಂತೆಯೇ. ಆ ಕಾಲ ನೋಡಿ ಹಂಸಪಕ್ಷಿಗಳ ಗುಂಪು ನಳನ ಬಳಿ ಬಂತು ಅದನ್ನು ಹಿಡಿಯಲು ಹೋಗಿ ಸಿಕ್ಕಿದ್ದು ದಮಯಂತಿ. ಈ ಕಾಲದಲ್ಲಿ ಸ್ವರ್ಣಪಕ್ಷಿ ಬಂತು, ಅನಿವಾರ್ಯವಾಗಿ ಹಸಿವೆ ತೀರಿಸಲು ಅವುಗಳನ್ನು ಹಿಡಿಯಲು ಹೋದ, ಪರಿಣಾಮ ಉಟ್ಟ ಬಟ್ಟೆಯೂ ಹೋಯಿತು. ಈಗ ದಮಯಂತಿ ಏನಾಗುತ್ತಾಳೋ? ಕಾಲ ತಿರುಗಿ ಬರುವಾಗ ಏನಾಗಿ ಬರುತ್ತದೋ ಗೊತ್ತಿಲ್ಲ, ಆದರೆ ಬದಲಾವಣೆಯನ್ನು ತಂದೇ ತರುತ್ತದೆ. ಯಾವುದೂ ಇದ್ದ ಹಾಗೆ ಇರಲ್ಲ. ಹಾಗೇ ಇರುವವನು ಭಗವಂತ ಒಬ್ಬನೇ, “ಸದೇಕರೂಪರೂಪಾಯ” ಎಂಬಂತೆ.

ಈಗ ನಳನ ಪರಿಸ್ಥಿತಿ ನೋಡಿ, ತಿನ್ನಲಿಕ್ಕೆ ಏನೂ ಇಲ್ಲ, ಉಡಲು ಬಟ್ಟೆ ಇಲ್ಲ, ಉಳಿಯಲು ವಸತಿಯೂ ಇಲ್ಲ ನಿಜಾರ್ಥದಲ್ಲಿ ನಿರ್ಗತಿಕನಾಗಿದ್ದಾನೆ. ಆದರೆ ಉಳಿದ ರಾಜರು ನಳನ ಮನೆಯ ಬಾಗಿಲಿನ ಮುಂದೆ ನಿಂತುಕೊಳ್ಳುವುದೂ ಕೂಡಾ ಪುಣ್ಯಕರವಾದ ಕೆಲಸ ಅಂತ ಭಾವಿಸಿದ್ದರು.

ಅಲ್ಲಿ ಬೇರಾರೂ ಇರಲಿಲ್ಲ, ಹೆಂಡತಿ ಮಾತ್ರಾ, ಅವರಿಬ್ಬರ ನಡುವೆ ಏನೂ ಮುಚ್ಚುಮರೆ ಇರಲಿಲ್ಲ, ಸರಿ ದಾರಿಯಲ್ಲಿ ಮುಂದೆ ಸಾಗಿದರು, ಹೆಂಡತಿಗೆ ನೋಡು ಇದು ವಿದರ್ಭದ ದಾರಿ ಎಂದು ತೋರಿಸಿದ, ಮಾತಿನಲ್ಲಿ ಹೋಗು ಎನ್ನಲಿಲ್ಲ, ತಾನು ದೌರ್ಭಾಗ್ಯವಂತ ನನ್ನ ಕಷ್ಟ ನನಗೇ ಇರಲಿ ಅವಳು ತಂದೆ ಮನೆಗೆ ಹೋಗಲಿ ಎಂಬ ಭಾವ ಇತ್ತು. ಸಹಜವಾಗಿ ದಾರಿಯಲ್ಲಿ ಹೋಗುತ್ತಾ ವಿವರಿಸಿದ ಇದು ವಿಂಧ್ಯಪರ್ವತ, ಪಕ್ಕದಲ್ಲಿ ಹರಿಯುತ್ತಿರುವುದು ಪೂರ್ಣಾ ನದಿ, ಪಯೋಷ್ಣಿ ಎಂತಲೂ ಕರೆಯುತ್ತಾರೆ. ಇದು ಸಮುದ್ರವನ್ನು ಸೇರಲು ಹೋಗುವ ದಾರಿ, ಈ ದಾರಿಯಲ್ಲಿ ಅನೇಕ ಮಹರ್ಷಿಗಳ ಆಶ್ರಮ ಇದೆ, ಅಲ್ಲಿಯೇ ವಿದರ್ಭ ದೇಶವೂ ಸಿಗುತ್ತದೆ ಅಂತ ಪದೇ ಪದೇ ಹೇಳುತ್ತಿದ್ದ. ಅದರಲ್ಲಿ ಬೇರೆ ದಾರಿಗಳು ನಿನಗೆ ಸಂಬಂಧಿಸಿದ್ದಲ್ಲ ಎನ್ನುವ ಭಾವ ಇದೆ ಜೊತೆಗೆ ತನ್ನಂತಹ ಪಾಪಿ ಈ ಲೋಕದಲ್ಲಿ ಯಾರಿದ್ದಾರೆ, ಧರೆಯ ಭೋಗ ಅಷ್ಟಸಂಪದಗಳನ್ನೆಲ್ಲಾ ತೊರೆದು, ಪುತ್ರಮಿತ್ರರನ್ನು ತೊರೆದು, ನಂಬಿದ ಹೆಂಡತಿಯನ್ನು ಕಾಡುಪಾಲು ಮಾಡಿದೆ. ಹೀಗಿರುವ ಪಾಪಿ ನನ್ನಂತಹವರು ಇನ್ಯಾರಿದ್ದಾರೆ? ಎಂದು ಬೇಸರಿಸಿದ. ದಮಯಂತಿ ಸೂಕ್ಷ್ಮಗ್ರಾಹಿ, ಮಾರ್ಗದಲ್ಲಿಯೇ ಅರ್ಥಮಾಡಿಕೊಂಡು ಕಣ್ಣೀರಿಡುತ್ತಾ ನಳನನ್ನು ಕೇಳುತ್ತಾಳೆ, ನನ್ನ ಹೃದಯ ನಡುಗುತ್ತಿದೆ, ಮೈ ಬಿಸಿಯಾಗಿದೆ, ಹೇಳು ಏನಿದೆ ನಿನ್ನ ಮನಸ್ಸಿನಲ್ಲಿ, ನಿನ್ನ ಮಾತಿನ ಅರ್ಥ ಹಿಡಿದು ಯೋಚಿಸಿದರೆ ಹೆದರಿಕೆ ಆಗುತ್ತದೆ. ಈ ಸ್ಥಿತಿಯಲ್ಲಿ ನಿನ್ನನ್ನು ಬಿಟ್ಟು ಹೋಗೋದು ಹೇಗೆ ಸಾಧ್ಯ, ಎಲ್ಲವನ್ನೂ ಕಳೆದುಕೊಂಡು ಉಟ್ಟ ಬಟ್ಟೆಯೂ ಇಲ್ಲದೇ ಕಾಡುಪಾಲಾಗಿರುವ ನಿನ್ನನ್ನು ಬಿಟ್ಟು ಹೋಗಲು ಹೇಗೆ ನನಗೆ ಸಾಧ್ಯ, ನಾನು ಹೃದಯಹೀನಳೆಂದು ತಿಳಿದಿದ್ದೀಯಾ? ಯೋಚಿಸು ಅಂತ ಹೇಳಿದಳು.
ನಿಜ ಕಡುಕಷ್ಟ ಬಂದಾಗ ಸತಿಯಂತಹ ಔಷಧ ಬೇರೊಂದಿಲ್ಲ, ಹಾಗಾಗಿ ಮುಂದಿನ ಮಾತು ಬೇಡ, ಅಂದಳು.

ನಳ ಮತ್ತೆ ಹೇಳಿದ, ನನ್ನಾತ್ಮವನ್ನೇ ಬಿಟ್ಟೇನು ನಿನ್ನನ್ನು ಹೇಗೆ ಬಿಡಲಿ ಎಂದೆಲ್ಲಾ ಬಾಯಿಯಲ್ಲಿ ಹೇಳಿದನಾದರೂ ಮನಸ್ಸು ಬೇರೆಯದೇ ಹೇಳುತ್ತಿತ್ತು. ದಮಯಂತಿ ಅವನಿಗೆ ಮತ್ತೆ ಹೇಳುತ್ತಾಳೆ, ನನಗೆ ದಿಗಿಲಾಗುತ್ತಿದೆ ನೀನು ಈಗಾಗಲೇ ವ್ಯಸನದಿಂದ ಕಂಗೆಟ್ಟಿದ್ದೀಯೆ ಹೀಗಿರುವಾಗ ಏನು ಕೆಟ್ಟ ನಿರ್ಣಯಗಳನ್ನು ತೆಗೆದುಕೊಳ್ಳುತ್ತೀಯೋ ಎಂದು. ಪುಣ್ಯ ಎಂದರೆ ಬುದ್ಧಿ ಕೆಟ್ಟಾಗಲೂ ಪತ್ನಿಯನ್ನು ಪಣಕ್ಕಿಡಲಿಲ್ಲ.

ರಾಮ ಕಾಡಿಗೆ ಹೊರಟವನು, ಸೀತೆಯನ್ನು ಕಾಡಿಗೆ ಬರದಂತೆ ಪರಿಪರಿಯಲ್ಲಿ ಸಂತೈಸುತ್ತಾನೆ. ನೀನು ಕಾಡಿಗೆ ಬರಬೇಡ ತವರಿನಲ್ಲಿ ಸುಖವಾಗಿ ಬೆಳೆದವಳು, ಕಾಡಿನ ಕಷ್ಟ ನಿನಗೆ ಸಹ್ಯವಲ್ಲ ಎಂದು, ಆದರೆ ಸೀತೆ ಹಠ ಮಾಡುತ್ತಾಳೆ ಕಡೆಯಲ್ಲಿ ಸೀತೆ ನೀನು ಪುರುಷವೇಷಧಾರಿಯಾಗಿ ನಮ್ಮಲ್ಲಿಗೆ ಬಂದೆ ಹಾಗಾಗಿ ನಿನ್ನನ್ನು ಪುರುಷನೆಂದು ತಿಳಿದು ನಮ್ಮಪ್ಪ ನನ್ನನ್ನು ನಿನಗೆ ಮದುವೆ ಮಾಡಿಕೊಟ್ಟ, ನೀನು ಹೆಣ್ಣು ಅಂತ ತಿಳಿದಿದ್ದರೆ ಕೊಡುತ್ತಲೇ ಇರಲಿಲ್ಲ ಎಂದು ಚುಚ್ಚಿದಳು, ಆಗ ತಡೆಯಲಾರದೇ ಅನಿವಾರ್ಯವಾಗಿ ಸರಿ ಹೊರಡು ಹಾಗಾದರೆ ಎಂದ.

ಸತ್ಪುರುಷರು ಹಾಗಿರುತ್ತಾರೆ, ನನ್ನ ಕಷ್ಟ ನಿನಗೇಕೆ ಅಂತ, ತಮ್ಮ ಕಷ್ಟವನ್ನು ಯಾರಲ್ಲೂ ಹಂಚುವುದಿಲ್ಲ ಸುಖವನ್ನು ಮಾತ್ರಾ ಹಂಚುತ್ತಾರೆ.
ನೀನೂ ವಿದರ್ಭಕ್ಕೆ ಬರುವುದಾದರೆ ಮಾತ್ರಾ ನಾನು ಹೋಗುತ್ತೇನೆ ಎಂದು ದಮಯಂತಿ ಹೇಳುತ್ತಾಳೆ, ನಳ ಒಪ್ಪುವುದಿಲ್ಲ ಚಕ್ರವರ್ತಿಯಾಗಿ ಹೋಗುವುದಾದರೆ ಮಾತ್ರಾ ಅಲ್ಲಿಗೆ ಬರಬಲ್ಲೆ, ಆದರೆ ಹೀಗೆ ಬರಲಾರೆ ಅಂತ ಹೇಳುತ್ತಾನೆ, ಕಡೆಗೆ ಅವಳನ್ನು ಸಮಧಾನ ಮಾಡುವ ಸಲುವಾಗಿ ಅವಳ ವಸ್ತ್ರದಲ್ಲಿನ ಒಂದು ಭಾಗವನ್ನು ತಾನೂ ಸುತ್ತಿಕೊಳ್ಳುತ್ತಾನೆ.

ಏಕವಸನದ ಅದ್ವೈತ ಎಂದರೆ ಅದು, ಈ ರೀತಿಯ ಸಂದರ್ಭ ಯಾವ ದಂಪತಿಗೂ ಬಂದಿರಲಿಕ್ಕಿಲ್ಲ, ಒಂದೇ ಬಟ್ಟೆಯಲ್ಲಿ ಇರುವುದು ಅಂದರೆ ಅದರರ್ಥ ಒಂದೇ ಜೀವನವನ್ನು ಹಂಚಿಕೊಂಡಂತೆ, ಅನುಭವಿಸಿದಂತೆ. ಹೀಗೇ ಇಬ್ಬರೂ ಮಾತನಾಡುತ್ತಾ ಕತ್ತಲಾಯಿತು. ಮೂರು ದಿನಗಳಿಂದ ಊಟವಿರಲಿಲ್ಲ, ಮಲಗಲೂ ವ್ಯವಸ್ಥೆ ಇಲ್ಲ ಕಡೆಗೆ ದಾರಿಯಲ್ಲಿ ಬಿದ್ದಿದ್ದ ಕಲ್ಲುಹಾಸಿನ ಮೇಲೆ ಇಬ್ಬರೂ ಮಲಗಿದರು. ಆ ಸಮಯಕ್ಕೆ ಅವರಿಗೆ ಅದೇ ಅರಮನೆ, ಸುಸ್ತಾಗಿದ್ದ ದಮಯಂತಿಗೆ ಮಲಗಿದ ಕೂಡಲೇ ನಿದ್ದೆ ಬಂತು. ಆದರೆ ನಳನಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ದಮಯಂತಿ ನಳನಿಗಾಗಿ ಏನನ್ನಾದರೂ ಕಳೆದುಕೊಳ್ಳಲು ಸಿದ್ಧಳಿದ್ದಳು ಆದರೆ ನಳನನ್ನಲ್ಲ. ನಳನನ್ನು ಅಪರಾಧಿತನ ಕಾಡುತ್ತಿತ್ತು, ಇದು ಪ್ರಾಯಶಃ ನಳನ ದುಃಖದ ಪರಾಕಾಷ್ಠೆ. ಹೀಗೆ ಒಂದೇ ವಸನದಲ್ಲಿ ಒಂದೇ ಶಿಲಾತಲ್ಪದ ಮೇಲೆ ಮಲಗಿ ಚಕ್ರವರ್ತಿ, ಚಕ್ರವರ್ತಿನಿಯರು ವಿರಮಿಸಲು ಯತ್ನಿಸಿದರು. ಅಲ್ಲಿ ಅರ್ಧಭಾಗ ನಿದ್ರೆ, ಅರ್ಧಭಾಗ ಎಚ್ಚರ.

ರಾತ್ರಿಯಿಡೀ ನಿದ್ದೆಬಾರದ ನಳನಿಗೆ ಕಣ್ಮುಚ್ಚಿದ ಕೂಡಲೇ ನಡೆದ ಘಟನೆಗಳೆಲ್ಲವೂ ಬಂತು, ದ್ಯೂತ ನಡೆದಿದ್ದು, ಎಲ್ಲವನ್ನೂ ತಾನು ಕಳೆದುಕೊಂಡಿದ್ದು, ಉಟ್ಟಬಟ್ಟೆಯಲ್ಲಿ ನಿರ್ಗತಿಕನಾಗಿ ಹೊರನಡೆದಿದ್ದು, ಮತ್ಯಾರೂ ಅನ್ನಾಹಾರ ನೀಡದಂತೆ ಕಟ್ಟಪ್ಪಣೆ ಪುಷ್ಕರನಿಂದ ಎಲ್ಲವೂ ಕಾಣಿಸಿತು. ಕಣ್ತೆರೆದ ಕೂಡಲೇ ರಾಣಿಯಾಗಿ ಅಂತಃಪುರದ ಹಂಸತೂಲಿಕಾತಲ್ಪದಲ್ಲಿ ಮಲಗಿರಬೇಕಾದವಳು ಕಲ್ಲಿನ ಮೇಲೆ ಮಲಗಿದ್ದು ಕಾಣಿಸಿತು, ಸ್ವಯಂವರ ನೆನಪಾಯಿತು ರಾಜಾಧಿರಾಜರನ್ನೆಲ್ಲಾ ಕಡೆಗಣಿಸಿ ದೇವತೆಗಳನ್ನೂ ಬಿಟ್ಟು ತನ್ನನ್ನು ವರಿಸಿದ ಪತ್ನಿಗೆ ಏನು ಸುಖ ಸಿಕ್ಕಿತು ತನ್ನಿಂದ? ಬೇರೆಯವರನ್ನು ವರಿಸಿದ್ದರೆ ಸುಖವಾಗಿರುತ್ತಿದ್ದಳು, ತನ್ನಿಂದಾಗಿ ಅವಳಿಗೆ ಈ ದೌರ್ಭಾಗ್ಯ ಬಂದಿದೆ, ಮುಂದೆ ಇನ್ನೂ ಏನೇನು ಕಾದಿದೆಯೋ ಅದನ್ನು ಇವಳು ಯಾಕೆ ಅನುಭವಿಸಬೇಕು, ನೋವು ನನ್ನದು ಮಾತ್ರಾ ಎಂದು ಯೋಚಿಸಿದ. ತನ್ನ ಜೊತೆಗೆ ಇರುವವರೆಗೂ ಇವಳಿಗೆ ತೊಂದರೆ, ತನ್ನ ಬಿಟ್ಟು ತವರಿಗೆ ಹೋದರೆ ಸುಖವಾಗಿರುತ್ತಾಳೆ, ತಾನಿಲ್ಲದ ಚಿಂತೆ ಇದ್ದರೂ ತಂದೆಯ ಆಸರೆಯಲ್ಲಿ ನೆಮ್ಮದಿಯಾಗಿ ಇರುತ್ತಾಳೆ ಹಾಗಾಗಿ ತಾನು ಇಲ್ಲಿಂದ ಹೊರಟುಬಿಡಬೇಕು, ಅವಳು ನಿದ್ದೆಯಲ್ಲಿರುವಾಗಲೇ ತಾನು ಹೊರಟು ಬಿಡುವುದು ಎಂದು ಯೋಚಿಸಿ ಸ್ವಲ್ಪದೂರ ನಡೆದ. ಮರುಕ್ಷಣವೇ ತಾನು ಹೊರಟುಹೋದರೆ ಅವಳು ಅನುಭವಿಸಬಹುದಾದ ದುಃಖ, ಅವಳಿಗೆ ಒದಗಬಹುದಾದ ತೊಂದರೆ, ಕಾಡು ಬೇರೆ, ವನ್ಯಜೀವಿಗಳು, ಕುಜನರು ಯಾರಿಂದಲಾದರೂ ಅವಳಿಗೆ ನೋವಾದರೆ ಅಂತ ಮನಸ್ಸಿಗೆ ಬಂತು ತಿರುಗಿ ಬಂದ. ಹೀಗೆ ಹಲವಾರು ಬಾರಿ ಆಯಿತು. ಕೊನೆಗೆ ಒಂದು ನಿಶ್ಚಯಕ್ಕೆ ಬಂದ ತಾನು ಅವಳನ್ನು ಬಿಟ್ಟು ಹೋಗುವುದೇ ಸರಿ ಅದರಿಂದಲೇ ಅವಳು ಸುಖವಾಗಿರಲು ಸಾಧ್ಯ ಅಂತ. ಅಲ್ಲದೇ ಅವಳ ತೇಜಸ್ಸು, ತಪಸ್ಸು, ಪಾತಿವ್ರತ್ಯ ಅವಳನ್ನು ಕಾಪಾಡುತ್ತೆ ಎನ್ನು ದೈರ್ಯದಿಂದ ಬಿಟ್ಟುಹೋಗುವ ನಿಶ್ಚಯ ಮಾಡಿದ.

ವಾಸ್ತವದಲ್ಲಿ ಅವನ ಈ ನಿರ್ಧಾರದಿಂದ ದಮಯಂತಿಗಿಂತ ಹೆಚ್ಚು ತೊಂದರೆ ನಳನಿಗೇ, ಅವನೇ ಅವಳಿಲ್ಲದೇ ಹೆಚ್ಚು ದುಃಖ ಅನುಭವಿಸುವವನು.
ರಾಮನ ವಿಚಾರದಲ್ಲೂ ಹೀಗೇ ಆಗಿದೆ ಸೀತಾಪರಿತ್ಯಾಗದ ನಂತರ ಯಾರು ಹೆಚ್ಚು ದುಃಖಪಟ್ಟವರು ಎನ್ನುವ ಪ್ರಶ್ನೆ ಎದುರಾದಾಗಲೆಲ್ಲ ಸಂಶಯ ಕಾಡುತ್ತೆ. ಸೀತೆಗೆ ತನ್ನ ಪತಿ ತನ್ನನ್ನು ತೊರೆದನೆನ್ನುವ ದುಃಖವಿದ್ದರೆ, ರಾಮನಿಗೆ ಅವಳಿಲ್ಲದ ದುಃಖದ ಜೊತೆಗೆ ಇದಕ್ಕೆ ತಾನೇ ಕಾರಣನೆನ್ನುವ ವೇದನೆಯೂ ಸೇರಿದೆ.
ಸರಿ ನಳ ಹೊರಡುವ ನಿಶ್ಚಯ ಮಾಡಿದ ಆದರೆ ಬಟ್ಟೆಯಿಲ್ಲದೇ ಹೋಗುವುದು ಹೇಗೆ? ಹುಡುಕಿದಾಗ ಹತ್ತಿರದಲ್ಲಿ ಒಂದು ಕತ್ತಿ ಕಾಣಿಸಿತಂತೆ ಆ ಕಾಡಿನಲ್ಲಿ ಆ ಸಮಯದಲ್ಲಿ ಕತ್ತಿ ಯಾರಿಟ್ಟರು? ಅದು ಕಲಿಯ ಪ್ರಭಾವ, ಪತಿಪತ್ನಿಯರನ್ನು ಹೇಗಾದರೂ ಬೇರೆ ಮಾಡಿಯೇ ಸಿದ್ಧನೆನ್ನುವ ಅವನ ಚಿಂತನೆ. ಸರಿ ಬಟ್ಟೆಯನ್ನು ಅಷ್ಟಕ್ಕೆ ಕತ್ತರಿಸಿಕೊಂಡು ಹೊರಟ, ಅಷ್ಟುದೂರ ಹೋದಮೇಲೆ ಮನಸ್ಸಾಗದೇ ತಿರುಗಿ ಬಂದ, ಹೀಗೆ ಹತ್ತಾರುಬಾರಿ ಪುನರಾವರ್ತನೆ ಅದ ನಂತರ ಗಟ್ಟಿ ಮನಸ್ಸು ಮಾಡಿ ದೇವತೆಗಳನ್ನು ಪ್ರಾರ್ಥಿಸುತ್ತಾನೆ, ಅಶ್ವಿನೀ ದೇವತೆಗಳು, ಆದಿತ್ಯರು, ವಸುಗಳು, ರುದ್ರರು, ಮರುದ್ಗಣಗಳು ಹೀಗೆ ಎಲ್ಲರನ್ನೂ ಪ್ರಾರ್ಥಿಸಿ ಅವಳನ್ನು ರಕ್ಷಿಸಿ ಅಂತ ಕೇಳಿಕೊಳ್ಳುತ್ತಾನೆ. ನಂತರ ದಮಯಂತಿಗೆ ಹೇಳಿದಂತೆ ಚಿಂತಿಸಬೇಡ ಧರ್ಮದ ಕವಚ ನಿನ್ನನ್ನು ರಕ್ಷಿಸಿಕೊಳ್ಳುತ್ತದೆ ಎಂದು ತನ್ನಲ್ಲೇ ಹೇಳಿಕೊಂಡು ಹೊರಟು ಹೋಗುತ್ತಾನೆ. ಸ್ಮರಣಿಕೆಯಾಗಿ ಅವನಲ್ಲಿ ಉಳಿದದ್ದು ಆ ಅರ್ಧವಸ್ತ್ರ ಮಾತ್ರ, ವಿಯೋಗಕಾಲದಲ್ಲಿ ಅವನ ಬಳಿ ಉಳಿದಿದ್ದು ಅವಳುಟ್ಟಿದ್ದ ವಸ್ತ್ರದ ಒಂದು ತುಂಡು ಮಾತ್ರ.

ಸಜ್ಜನರು ತಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗಲು ಬಿಡುವುದಿಲ್ಲ, ಅಂತಹ ಸನ್ನಿವೇಶಗಳಲ್ಲಿ ಕಠೋರವಾದ, ವಿಚಿತ್ರವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ನೀವೇ ಯೋಚಿಸಿ ಎಂತಹ ವಿಚಿತ್ರ ನಿರ್ಣಯಗಳು, ನಳನೂ ಇಂತಹ ನಿರ್ಧಾರ ಮಾಡಿ ಹೊರಟು ಹೋದ ಬಳಿಕ ದಮಯಂತಿ ಆ ಪರಿಸ್ಥಿತಿಯನ್ನು ಹೇಗೆ ಎದುರಿಸಿರಬೇಕು? ಎಂದು.
ಎಂತಹ ವಿಕಟ ವಿಚಿತ್ರ ಸಂದರ್ಭಗಳು ಅವರ ಜೀವನದಲ್ಲಿ ಬಂತು ಅಂದರೆ ಕಳೆದುಕೊಳ್ಳಲು ಇನ್ನೇನೂ ಉಳಿದಿಲ್ಲ ನಳನಲ್ಲಿ ಆದರೆ ಇನ್ನೂ ಕಳೆದುಕೊಳ್ಳುತ್ತಾನೆ ಅವನು, ನಾವು ಯೋಚಿಸಿದ್ದಕ್ಕಿಂತ ಹೆಚ್ಚಿನದ್ದು ಮುಂದಿದೆ, ಅದರ ಮುಂದೆ ಅವನು ಪಡೆದುಕೊಳ್ಳುವುದೂ ಇದೆ, ಅದನ್ನು ಮುಂದೆ ಅನುಸಂಧಾನ ಮಾಡೋಣ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments