#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
23-08-2018:

ಯಾರೂ ಇಲ್ಲದಿದ್ದರೂ ಯಾರು ಇಲ್ಲ ಅಂತ ಆಗುವುದಿಲ್ಲವೋ, ಅಂತಹ ಶ್ರೀಕೃಷ್ಣನಿಗೆ, ಅವನ ಮಹಿಮೆಯ ವರ್ಣಿಸುವ ಭಾಗವತ, ಮಹಾಭಾರತಗಳಿಗೆ, ಇದನ್ನು ಲೋಕಕ್ಕೆ ಕೊಟ್ಟ ವ್ಯಾಸ, ಶುಕರಿಗೆ ಪ್ರಣಾಮಗಳು.

ಕಳೆದ ಪ್ರವಚನ ನಿಂತಿದ್ದೆಲ್ಲಿ ಅಂದರೆ ಮಲಗಿದ್ದಲ್ಲಿ. ಮಧ್ಯ ರಾತ್ರಿ ಘೋರ ಅರಣ್ಯದ ಮಧ್ಯೆ ಕಲ್ಲುಹಾಸಿನ ಮೇಲೆ ಚಕ್ರವರ್ತಿ, ಚಕ್ರವರ್ತಿನಿಯರು ಒರಗಿದ್ದಾರೆ, ದಮಯಂತಿಗೆ ನಿದ್ದೆ ಬಂದಿದೆ, ನಳನಿಗೆ ನಿದ್ದೆ ಇಲ್ಲ, ತನ್ನ ದೌರ್ಭಾಗ್ಯದ ಸ್ಥಿತಿಗೆ ಮರುಗಿ ನಳ ಅವಳನ್ನು ಅಲ್ಲೇ ಬಿಟ್ಟು ಹೊರಟುಹೋಗುತ್ತಾನೆ, ಕೆಟ್ಟ ಯೋಚನೆಯಿಂದಲ್ಲ, ತವರು ಮನೆಗೆ ಹೋಗಿ ಹೇಗಾದರೂ ಸುಖವಾಗಿರಲಿ ಅಂತ.
ದಮಯಂತಿಗೆ ಎಚ್ಚರ ಆಗುತ್ತದೆ ಆದರೆ ಹೊತ್ತು ಮೀರಿರುತ್ತದೆ, ಅಂದರೆ ನಳ ಸಾಕಷ್ಟು ದೂರ ಹೋಗಿ ಆಗಿರುತ್ತದೆ. ಅವಳೇನಾದರೂ ಸ್ವಲ್ಪ ಮೊದಲೇ ಎಚ್ಚೆತ್ತಿದ್ದರೆ ಕಥೆ ಬೇರೆಯದೇ ದಿಕ್ಕಿನಲ್ಲಿ ಸಾಗುತ್ತಿತ್ತು. ಪಕ್ಕಕ್ಕೆ ತಿರುಗಿ ನೋಡುತ್ತಾಳೆ ನಳನಿಲ್ಲ.

ತತ್ತ್ವಭಾಗವತಮ್

ಬದುಕಿನಲ್ಲಿಯ ಅತ್ಯಂತ ಪ್ರೀತಿಪಾತ್ರರು ಇದ್ದಕ್ಕಿದ್ದಂತೆಯೇ ಮರೆಯಾದರೆ, ಇಲ್ಲದಂತೆ ಆದರೆ ಆ ಶೂನ್ಯವನ್ನು ತುಂಬಲು ಸಾಧ್ಯವೇ ಇಲ್ಲ, ಎಷ್ಟೋ ಜನ ಹಿಂತಿರುಗಲಿಕ್ಕೆ ಆಗದೇ ಅಲ್ಲೇ ಕಳೆದು ಹೋಗುತ್ತಾರೆ. ನಳ ದಮಯಂತಿ ಇಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರಿಲ್ಲ, ಅವರಿಬ್ಬರು ಪರಸ್ಪರರಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ, ಎಲ್ಲವನ್ನೂ ಕಳೆದುಕೊಂಡು ಕಾಡುಪಾಲಾಗಿದ್ದಾರೆ, ಮುಂದಿನದರ ಬಗ್ಗೆ ಚಿಂತೆ ಮಾಡುವ ಪರಿಸ್ಥಿತಿಯಲ್ಲಿಯೂ ಇಲ್ಲ, ಮೂರುದಿನಗಳಿಂದ ಹೊಟ್ಟೆಗೂ ಏನೂ ಇಲ್ಲ, ಎಲ್ಲವೂ ಶೂನ್ಯವಾಗಿದೆ ಈಗ ಇದ್ದ ಒಂದೇ ಆಸರೆ ನಳನೂ ಇಲ್ಲ, ಘೋರವಾದ ಅರಣ್ಯ ಬೇರೆ ಅವಳ ಸ್ಥಿತಿ ಹೇಗಿರಬಹುದು ಊಹಿಸಿ.

ಸೀತಾನಿರ್ಯಾಣದ ನಂತರ ರಾಮ ತನ್ನ ಮಕ್ಕಳಿಬ್ಬರನ್ನೂ ಕರೆದುಕೊಂಡು ಅಯೋಧ್ಯೆಗೆ ಹಿಂತಿರುಗಿದಾಗ ಅವನಿಗೆ ಹೀಗೇ ಅನುಭವ ಆಗುತ್ತದೆ. ದೊಡ್ಡಶೂನ್ಯ ಆವರಿಸಿಕೊಂಡಂತೆ, ಪ್ರಪಂಚವೆಲ್ಲ ಅವನ ಪಾಲಿಗೆ ಖಾಲಿಯಾದಂತೆ. ದಮಯಂತಿಗೂ ಹಾಗೆಯೇ ಆಯಿತು, ಹಾಸ್ಯಕ್ಕಾಗಿ ಹಾಗೆ ಮಾಡಿರಬಹುದೆಂದು ಕೆಲಕಾಲ ಹುಡುಕಿದಳು, ಕರೆದಳು, ಕೂಗಿಕೊಂಡಳು ಆದರೆ ಎಲ್ಲಿಯೂ ನಳನಿಲ್ಲ, ಎಷ್ಟು ಹುಡುಕಿದರೂ ನಳ ಸಿಗಲಿಲ್ಲ. ತನ್ನೊಳಗೇ ನಿರಂತರವಾಗಿ ನಳನೊಡನೆ ಮಾತಾಡುವಂತೆ ಮಾತನಾಡುತ್ತಾ ನೀನು ನನ್ನನ್ನು ಬಿಟ್ಟು ಹೋದರೆ ನಾನು ಬದುಕಿರಲಾರೆ, ನನ್ನನ್ನು ದಯಮಾಡಿ ಬಿಟ್ಟುಹೋಗಬೇಡ ಗಹನವಾದ ಕಾಡು, ರಾಕ್ಷಸಾಕಾರವಾಗಿ ಬೆಳೆದ ಮರಗಳು, ಹಿಂಸ್ರ ಪಶುಗಳು, ಭೀಕರವಾದ ಜೀರುಂಡೆಗಳ ಧ್ವನಿ, ಕಿರಾತಕರ ಕಾಟ. ಇಂತಿರುವಲ್ಲಿ ಒಬ್ಬಳು ಹೆಣ್ಣುಮಗಳು ಏಕಾಂಗಿನಿಯಾಗಿ ಇರುವುದೆಂತು.

ರಾಮ ಸೀತೆಗೆ ಹೇಳಿದಂತೆ ಕಾಡೆಂದರೆ ದುಃಖ. ದಮಯಂತಿ ತನ್ನ ಪತಿಯನ್ನು ಹುಡುಕುತ್ತಾ ತಿರುಗಾಡುತ್ತಿದ್ದಾಳೆ, ನದಿತೊರೆ, ಬೆಟ್ಟಗುಡ್ಡ, ಕಾಡುಮೇಡು ಎಲ್ಲ ಕಡೆ ಹುಡುಕ ಹತ್ತಿದಳು. ಆ ಸಮಯದಲ್ಲಿ ಭಯವಾಗಲಿಲ್ಲವೇ ಅವಳಿಗೆ ಅಂತ ಅನ್ನಿಸಬಹುದು ನಮಗೆ. ಅದಕ್ಕೆ ಉತ್ತರವಾಗಿ ಕೃಷ್ಣಾನಂದನೆಂಬ ಕವಿ ಜಿಜ್ಞಾಸೆಯನ್ನು ಮಾಡಿದ್ದಾನೆ. ಸದಾ ಅಂತಃಪುರವಾಸಿ, ವಾಯು, ಆದಿತ್ಯರಿಗೂ ದರ್ಶನಕ್ಕೆ ದುರ್ಲಭಳಾಗಿದ್ದವಳು ಅರಣ್ಯದಲ್ಲಿ ಅಲೆಯುವಾಗ ಅವಳಿಗೆ ಹೆದರಿಕೆ ಅಗಲಿಲ್ಲವೇ ಅವಳು ಅಷ್ಟು ಗಟ್ಟಿಯಾದವಳೇ, ಯುದ್ಧವಿಶಾರದಳೇ ಎಂದರೆ, ಅಲ್ಲ ಅವಳಿಗೆ ಯುದ್ಧದ ಗಂಧ ಗಾಳಿಯೂ ಇರಲಿಲ್ಲ. ಅವಳ ಹೃದಯದಲ್ಲಿ ಕೇವಲ ನಳನ ವಿರಹವೇ ತುಂಬಿತ್ತು, ಬೇರೆ ಭಾವಕ್ಕೆ ಜಾಗವೇ ಇರಲಿಲ್ಲ. ಭಯ ಗೊತ್ತಾಗದಷ್ಟು ಪತಿಯ ಚಿಂತೆ ಅವಳನ್ನು ಆವರಿಸಿಕೊಂಡಿತ್ತು. ವಿಶ್ರಾಂತಿಯೇ ಇಲ್ಲದಂತೆ ಇಡೀಕಾಡನ್ನು ಚಕ್ರದಂತೆ ಸುತ್ತುತ್ತಲೇ ಇದ್ದಾಳೆ, ಕಾಲಿಗೆ ಬಳ್ಳಿ ತಡವಿಕೊಂಡಾಗಲಷ್ಟೇ ಒಮ್ಮೆ ಬಿಡುವು. ಎಡಬಿಡದೇ ಗಂಡನ ಹುಡುಕುತ್ತಿರುವ ದಮಯಂತಿಯಲ್ಲಿ ಅಷ್ಟು ಆಯಾಸ ತುಂಬಿದೆ. ಅದರ ಮೇಲೆ ಹೊಸ ಅಘಾತ, ಬಳ್ಳಿಗಳು ಕಾಲಿಗೆ ತೊಡರಿಕೊಳ್ಳುತ್ತವೆ ಸ್ವಲ್ಪ ವಿಶ್ರಮಿಸು ಎಂಬ ಭಾವದಲ್ಲಿ.

ರಾಮಾಯಣದಲ್ಲೂ ಸೀತಾಪಹಾರವಾಗುವಾಗ, ಸೀತೆ ಸಾಕಿದ ಹರಿಣಗಳು ಕಣ್ಣೀರಿಡುತ್ತವೆ, ಹುಲಿಸಿಂಹಗಳು ರಾವಣ ಸೀತೆಯನ್ನು ಹೊತ್ತೊಯ್ದ ಮಾರ್ಗದಲ್ಲಿ ಕೆಲವು ದೂರ ಬೆನ್ನಟ್ಟುತ್ತವೆ.
ದಮಯಂತಿ ತಿರುತಿರುಗಿ ಬಳಲಿ ಬೆಂಡಾಗಿ ಶಿಲೆಕಲ್ಲ ಮೇಲೆ ಕುಸಿದು ಕುಳಿತುಕೊಳ್ಳುತ್ತಾಳೆ, ನಳನಿಗೆ ಹೇಳುವಂತೆ ಹೇಳುತ್ತಾಳೆ, ನೀನು ಅಶ್ವಮೇಧಯಾಗ ಮಾಡಿದವನು, ವೇದವೇದಾಂತ ಪಾರಗ, ದೇವತೆಗಳನ್ನು ಒಲಿಸಿಕೊಂಡವನು, ಸತ್ಯವ್ರತನೆಂದು ಹೆಸರಾದವನು. ನೀನು ಸುಳ್ಳು ಹೇಳಿದೆಯಾ? ಸ್ವಯಂವರದ ನೆನಪಾಗುತ್ತದೆ ಅವಳಿಗೆ, ದೇವತೆಗಳಿಗೆ ಕೊಟ್ಟ ವಚನ ಭಂಗವಾಗದಿರಲು ಅವರ ದೂತನಾಗಿ ನನ್ನೆಡೆಗೆ ಬಂದಿದ್ದೆ ಅವರ ವರಿಸಲು ಕೇಳಿ. ಅಂತಹಾ ಸತ್ಯವಂತ ನೀನು, ನಿನಗೆ ನನ್ನಂತಹ ಪ್ರಿಯರು ಯಾರೂ ಇಲ್ಲ, ನಿನ್ನನ್ನು ಎಂದಿಗೂ ಬಿಡಲಾರೆ ಎಂದು ಹೇಳಿದ್ದೆಯಲ್ಲ ಈಗೇಕೆ ಹೀಗೆ ಮಾಡಿದೆ ಎಂದು ವಿಲಪಿಸಿದಳು. ಸೀತೆಯನ್ನು ಕಳೆದುಕೊಂಡ ರಾಮ, ಸೀತೆಯನ್ನು ಹುಡುಕಿದಂತೆ, ಕಂಡಕಂಡ ಗಿಡ ಮರ ಬಳ್ಳಿ ನದಿ ಸರೋವರ ಎದುರಿಗೆ ಕಂಡ ಪ್ರಾಣಿ ಪಕ್ಷಿಗಳಲ್ಲಿ ನಳನ ಬಗ್ಗೆ ವಿಚಾರಿಸುತ್ತಾಳೆ, ಹಂಸ ಕಂಡಾಗಲೂ ಕೇಳುತ್ತಾಳೆ ನೀವು ನೋಡಿರುವಿರೇ ಎಂದು.

ಅತ್ಯಂತ ತೀವ್ರವಾದ ನೋವು ಯಾವುದಾದರೂ ಜೀವಕ್ಕೆ ಉಂಟಾದರೆ ಅದಕ್ಕೆ ಕಾರಣರಾದವರನ್ನೂ ಅದು ನೋಯಿಸುತ್ತದೆ.”ಉಂಡವನು ಹರಸುವುದು ಬೇಡ ನೊಂದವನು ಶಪಿಸುವುದು ಬೇಡ” ಎಂಬಂತೆ. ಒಂದು ಜೀವಕ್ಕೆ ನೋವು ಅಂತ ಆದರೆ ಅದಕ್ಕೆ ಸಂಬಂಧಪಟ್ಟವರಿಗೆ ಅದು ತಟ್ಟೇ ತಟ್ಟುತ್ತದೆ. ಹೀಗೆ ದಮಯಂತಿಯ ದುಃಖ ಮೇರೆಮೀರಿದೆ, ನಳನನ್ನು ಕಳೆದುಕೊಂಡ ಮೇಲೆ ಅವಳಿಗೆ ನಿಜವಾಗಿ ನೋವು ಆಯಿತು, ನಿಟ್ಟುಸಿರಿಟ್ಟಳು. ಅದೇ ಶಾಪದ ಪರಿಣಾಮ ಸ್ವನಿಯಂತ್ರಣ ಕಳೆದುಕೊಂಡಳು, ರೋದಿಸುತ್ತಾ ಕಠೋರ ಮಾತುಗಳನ್ನಾಡುತ್ತಾಳೆ: ಯಾರಿಂದಾಗಿ ನಳನಿಗೆ ಈ ಗತಿ ಬಂತು? ಅವನು ನಿರಪರಾಧಿ ಯಾರಿಗೂ ಕೇಡು ಮಾಡಿದವನಲ್ಲ, ಯಾರಿಂದ ಹೀಗಾಯಿತು? ನಿಷ್ಕಳಂಕನಾದ ನನ್ನ ಪತಿಯನ್ನು ಇಂತಹ ಕಷ್ಟಕ್ಕೆ ದೂಡಿದವರು ಯಾರು ಅಂತ ಚಿಂತಿಸಿದಳು. ಅವಳ ಬುದ್ಧಿಗೆ ಉತ್ತರ ಎಟುಕಲಿಲ್ಲ, ಆದರೆ ಅವರು ಭೂತ, ಯಕ್ಷ, ದೇವ, ಗಂಧರ್ವ, ಪ್ರಾಣಿಪಕ್ಷಿ, ಮನುಷ್ಯ ಯಾರೇ ಆಗಿರಲಿ ಇದಕ್ಕಿಂತ ಹೆಚ್ಚು ದುಃಖ ಅನುಭವಿಸಲಿ ಅಂತ ಶಾಪಕೊಟ್ಟುಬಿಟ್ಟಳು. ನಳನೆಂದರೆ ಅಪಾಪ ಮನಸ್ಕ, ಪುಣ್ಯವಂತ. ಯಾವ ಪಾಪ ಈ ಬಗೆಯ ಕ್ಲೇಶಕ್ಕೆ ಗುರಿಪಡಿಸಿತು? ಇದಕ್ಕೆ ಕಾರಣನಾದವನಿಗೆ ಇದಕ್ಕಿಂತ ತೀಕ್ಷ್ಣವಾಗಿ ಆ ನೋವು ತಲುಪಲಿ ಎಂದು ಹೇಳಿದ ಕೂಡಲೇ, ಆ ಶಾಪ ನೇರವಾಗಿ ಕಲಿಗೇ ತಲುಪಿತು, ತಕ್ಷಣವೇ ಪರಿಣಾಮ ಆಯಿತು. ದಾರುಣವಾದ ನರಕಕ್ಕೆ ಮಿಗಿಲಾದ ಪರಿಣಾಮವನ್ನು ಕಲಿಗೆ ಬೀರಿಯೇ ಬಿಟ್ಟಿತು.
ಯಾವುದೇ ಜೀವ ನೊಂದರೂ ಅದಕ್ಕೆ ಕಾರಣರಾದವರು ಅದಕ್ಕಿಂತ ಹೆಚ್ಚು ನೋಯಬೇಕಾಗುತ್ತದೆ, ಇನ್ನು ಇಂತಹ ಪುಣ್ಯಜೀವ ನೊಂದರೆ! ದಮಯಂತಿಯ ತೀವ್ರದುಃಖದ ಪರಿಣಾಮ ಬೇರೆ.

ದಮಯಂತಿಯ ಆ ಸ್ಥಿತಿ ಹೇಗಿತ್ತೆಂದರೆ ಅವಳು ಸಾಕ್ಷಾತ್ ಪರಮಾತ್ಮನನ್ನು ಶಪಿಸಿದರೂ ಫಲ ಬರುತ್ತಿತ್ತು, ಅಷ್ಟು ನೋವಿತ್ತು ಅದರಲ್ಲಿ. ಅದರಿಂದಾಗಿ ಕಲಿಗೆ ಭಯಂಕರ ಪೀಡೆಯೇ ಶುರುವಾಯಿತು ಅದೇನೆಂದು ಮುಂದೆ ನೋಡೋಣ.

ಹಾಗೆಯೇ ದಮಯಂತಿ ನಡೆಯುತ್ತಾ ಮುಂದುವರೆದಳು, ಅಷ್ಟರಲ್ಲಿ ಒಂದು ಅವಘಡ ನಡೆಯಿತು. ಅದು ಕಾಡು, ದೊಡ್ಡದೊಡ್ಡ ಮರಗಳು ಕ್ರೂರ ಮೃಗಗಳು ನಿಬಿಡವಾಗಿತ್ತು, ಮರದ ಆಕೃತಿಯ ದೊಡ್ಡ ಸರ್ಪವೊಂದು ಇದ್ದದ್ದು ಅವಳ ಗಮನಕ್ಕೇ ಬರಲಿಲ್ಲ. ಅವಳ ಕಣ್ಣುಗಳಲ್ಲಿ ನಳ ಮಾತ್ರಾ ಇದ್ದ. ಅವಳು ಅದರ ಹತ್ತಿರಕ್ಕೆ ಹೋಗಿಬಿಟ್ಟಿದ್ದಾಳೆ, ಸಾಮಾನ್ಯವಾಗಿ ಹೆಬ್ಬಾವು ನಿಧಾನವಾಗಿ ಚಲಿಸುತ್ತದೆ ಬೇಟೆ ಹತ್ತಿರವಾದಾಗ ಮಾತ್ರಾ ಮಿಂಚಿನ ವೇಗದಲ್ಲಿ ಚಲಿಸಿ, ಹಿಡಿಯುತ್ತದೆ. ಹಾಗೆ ಕ್ಷಣಾರ್ಧದಲ್ಲಿ ಅದು ದಮಯಂತಿಯನ್ನು ಸುತ್ತುವರೆದಿದೆ, ಆದರೂ ಪ್ರಜ್ಞೆಯಿಲ್ಲ ಅವಳಿಗೆ. ನಳನ ವಿರಹ ಶೋಕ ಅವಳನ್ನು ಈ ಮೊದಲೇ ನುಂಗಿತ್ತು, ಈಗ ಈ ಹಾವೂ ನುಂಗುತ್ತಿದೆ. ಇನ್ನೇನು ನುಂಗಿಯೇ ಬಿಟ್ಟಿತು ಎನ್ನುವ ಅವಸ್ಥೆಯಲ್ಲಿಯೂ ನಳನ ಚಿಂತೆಯೇ ಅವಳಿಗೆ. ಇಂತಹ ಏಕನಿಷ್ಠೆ ಯಾರಿಗಾದರೂ ಎಲ್ಲಿಯಾದರೂ ಬಂದರೆ ಅವನು ಅಕ್ಷಣವೇ ಮುಕ್ತನಾಗುತ್ತಾನೆ ಎನ್ನುತ್ತದೆ ಆಧ್ಯಾತ್ಮ. ಸರ್ಪ ಬಿಗಿದು ಉಸಿರುಗಟ್ಟುವಂತಾದಾಗ ಅವಳಿಗೆ ಎಚ್ಚರವಾಗುತ್ತದೆ. ಆದರೆ ಆಗಲೂ ಅವಳಿಗೆ ನಳನ ಚಿಂತೆಯೇ ಅಯ್ಯೋ ಇನ್ನು ನಳನ ಗತಿಯೇನು ಅವನು ನಾನಿಲ್ಲದೇ ಏನು ಮಾಡುತ್ತಾನೆ ಅಂತ ಸಂಕಟಪಡುತ್ತಾಳೆ. ಈಗ ನೀನು ಬಂದು ಬದುಕಿಸಿಕೊಂಡರೆ ಉಂಟು ಇಲ್ಲದಿದ್ದರೆ ಇಲ್ಲ ಅಂತ ವಿಲಪಿಸುತ್ತಾಳೆ. ನಿನ್ನ ಪ್ರಿಯೆಯನ್ನು ಹಾವು ನುಂಗುತಿದೆ, ಈಗಲಾದರೂ ಬಾ ಅಂತ ಆರ್ತನಾದ ಮಾಡುತ್ತಾಳೆ, ನಳ ಬರುವುದಿಲ್ಲ ಆದರೆ ಅವಳ ಕೂಗನ್ನು ಕೇಳಿಸಿಕೊಂಡ ದೈವ ಬೇರೊಂದು ರೂಪದಲ್ಲಿ ಬರುತ್ತದೆ. ಬೇಡನೊಬ್ಬ ಬರುತ್ತಾನೆ. ಅವಳ ಅವಸ್ಥೆಯನ್ನು ಕಂಡು ತಕ್ಷಣವೇ ತನ್ನ ಓರೆಯಿಂದ ಖಡ್ಗವನ್ನು ಹಿರಿದು ಹಾವನ್ನು ತುಂಡರಿಸುತ್ತಾನೆ. ಆಕೆ ಧರ್ಮಾವೃತೆ “ಮಾನವು ಪರಿಪೂರ್ಣವಾಗಿರುವಾಗ ಆ ಮಾನವೇ ಪ್ರಾಣವನ್ನು ಕಾಪಾಡುತ್ತದೆ” ಎಂಬುದು ನಾಣ್ನುಡಿ.

ಆಕೆ ಆ ಬೇಡನಿಗೆ ವಂದಿಸುತ್ತಾಳೆ ಹಾವಿನ ಬಾಯಿಂದ ನನ್ನನ್ನು ರಕ್ಷಿಸಿದೆ ಅಂತ ಹೇಳಿ ಧನ್ಯವಾದ ಹೇಳುತ್ತಾಳೆ. ಆದರೆ ಆ ಬೇಡನಿಗೆ ಆಶ್ಚರ್ಯ ಅವನು ನೀನು ಯಾರು, ಹೇಗೆ ಇಲ್ಲಿಗೆ ಬಂದೆ ಅಂತ ಕೇಳುತ್ತಾನೆ? ಆಗ ದಮಯಂತಿ ತನ್ನ ಪೂರ್ಣ ಇತಿಹಾಸವನ್ನು ಸವಿವರವಾಗಿ ಹೇಳುತ್ತಾಳೆ. ಹಾಲು ಅಮೃತವೇ ಆದರೂ ಅದನ್ನು ಹಾಕುವ ಪಾತ್ರೆಯನ್ನು ಆಧರಿಸಿ ಅದರ ಗುಣವೂ ಬದಲಾಗುತ್ತದೆ. ಹಾಗೆಯೇ ಈಕೆಯ ಕರುಣಾಜನಕ ವೃತ್ತಾಂತವನ್ನು ಕೇಳಿ ಕರುಣೆಮೂಡಬೇಕಾದಲ್ಲಿ ಆ ಬೇಡನಿಗೆ ಇವಳ ಮೇಲೆ ಬಯಕೆ ಉಂಟಾಯಿತು. ಮೊದಲೇ ದಿಕ್ಕಿಲ್ಲದವಳು ಎಂದು ಕಾಮ, ಕ್ರೋಧಗಳಿಂದ ಅವನ ಮನಸ್ಸು ತುಂಬಿತು. ಅವನ ಭಾವ, ನೋಟ, ಭಾಷೆ ಬದಲಾಯಿತು. ಅದು ದಮಯಂತಿಗೂ ತಿಳಿಯಿತು. ಕೋಪದಿಂದ ಕೆಂಪೆಡರಿದಳು. ಅವನನ್ನು ಕುರಿತು ಹೀಯಾಳಿಸಿದಳು.

ಇಲ್ಲಿ ಮತ್ತೆ ರಾಮಾಯಣದ ನೆನಪಾಗುತ್ತದೆ. ಸೀತೆ ತನ್ನನ್ನು ಬಲವಂತಮಾಡುವ ರಾವಣನನ್ನು ಕುರಿತು ಹೀಗೇ ನಿಂದಿಸುತ್ತಾಳೆ. ಲೋಕನಾಯಕನಾದ ನನ್ನರಸನ ಭುಜವನ್ನು ಒರಗುತ್ತಿದ್ದ ನನ್ನ ಶಿರಸ್ಸು ನಿನ್ನನ್ನು ಒಲಿವುದೇ? ಬದಲಾಗಿ ತಲೆ ಕಡಿದು ಕೊಟ್ಟೇನು, ನಿನಗೂ ರಾಮನಿಗೂ ಎಲ್ಲಿಯ ಹೋಲಿಕೆ? ಸಿಂಹಕ್ಕೂ ಗುಳ್ಳೆನರಿಗೂ ಇರುವ ವ್ಯತ್ಯಾಸವೇ ನಿನಗೂ ರಾಮನಿಗೂ. ನೀನು ಗುಳ್ಳೆನರಿಯಂತೆಯೇ ಎಂದು ಹೀಯಾಳಿಸುತ್ತಾಳೆ. ಕೊಳಚೆ ನೀರಿಗೂ ಸಮುದ್ರಕ್ಕೂ ಹೋಲಿಕೆ ಮಾಡಲಾದೀತೆ, ಚಿನ್ನಕ್ಕೂ ಸೀಸಕ್ಕೂ ಹೋಲಿಕೆಯೇ? ಶ್ರೀಗಂಧಕ್ಕೂ ಕೆಸರಿಗೂ ಹೋಲಿಕೆಯೇ? ಕಾಗೆಗೂ ಗರುಡನಿಗೂ ಹಾಗೆಯೇ ನವಿಲಿಗೂ ನೀರುಕಾಗೆಗೂ ಹೋಲಿಕೆ ಮಾಡಲಾಗುವುದೇ ಹಾಗೇ ನಿನಗೂ ರಾಮನಿಗೂ ಹೋಲಿಕೆ ಸಲ್ಲ ಎನ್ನುತ್ತಾಳೆ. ಮುಂದೆ ಅವಳನ್ನು ಒತ್ತಾಯಿಸುವಾಗಲೂ ಅವಳು ಬುದ್ಧಿಹೇಳುತ್ತಾಳೆ ನೊಣ ವಜ್ರದ ಕಲ್ಲನ್ನು ನುಂಗಿ ಜೀರ್ಣಿಸಿಕೊಳ್ಳಬಲ್ಲುದೇ, ಅದರಿಂದ ವಜ್ರಕ್ಕೆ ಏನೂ ಕುಂದಿಲ್ಲ ಆದರೆ ನೊಣ ಪ್ರಾಣವನ್ನೇ ತ್ಯಾಗ ಮಾಡಬೇಕಾಗುತ್ತದೆ ಅಂತ. ಇದೇ ದಮಯಂತಿಯ ಭಾವವೂ ಕೂಡ, ಅವಳೂ ಬೇಡನನ್ನು ನಿಂದಿಸುತ್ತಾಳೆ. ಆದರೂ ಆ ಬೇಡ ಅವಳ ಒಪ್ಪಿಗೆಯ ಅವಶ್ಯಕತೆ ಏನಿದೆ ಅಂತ ಹೇಳಿ ಹಿಡಿದುಕೊಳ್ಳಲು ಹೋಗುತ್ತಾನೆ. ಅವನು ಅವಳ ಹೊರರೂಪ ಮಾತ್ರಾ ನೋಡಿದ್ದ ಅವಳ ಅಂತಸ್ಸತ್ವವನ್ನು ಗ್ರಹಿಸಿರಲಿಲ್ಲ ಅವಳು ಸಿಟ್ಟಿನಿಂದ ಎರಡು ಹೆಜ್ಜೆ ಹಿಂದಿಡುತ್ತಾಳೆ. ಅವಳ ಬಳಿಯೂ ಮಾನವನ್ನು ಬಿಟ್ಟು ಬೇರೆ ಯಾವುದೇ ಆಯುಧವಿಲ್ಲ, ಆದರೂ ಕೋಪದಿಂದ ಅವನನ್ನು ಶಪಿಸುತ್ತಾಳೆ. “ನಾನು ಒಂದುಕ್ಷಣವಾದರೂ ನಳನನ್ನು ಬಿಟ್ಟು ಬೇರೆಯವರನ್ನು ಚಿಂತಿಸದಿದ್ದದ್ದು ನಿಜವೇ ಆಗಿದ್ದರೆ ಈ ಕ್ಷಣದಲ್ಲಿ ಈ ವ್ಯಾಧ ಮರಣಹೊಂದಲಿ” ಅಂತ. ಮಾತಿನ್ನೂ ಮುಗಿಯುವಷ್ಟರಲ್ಲಿಯೇ ಆತ ಬಿದ್ದು ಗತಪ್ರಾಣನಾದ.
ಅವನದ್ದು ಮೃಗದಂತಹ ಜೀವನವಾಗಿತ್ತು. ಎಲ್ಲಿ ಕರುಣೆಯ ಭಾವ ಬರಬೇಕಿತ್ತೋ ಅಲ್ಲಿ ಮೃಗೀಯ ಭಾವ ಬಂದಿತು. ಹಾಗಾಗಿ ಅವನು ಸತ್ತುಬಿದ್ದ. ಸ್ತ್ರೀಯನ್ನು ಅಬಲೆ ಎನ್ನುತ್ತಾರೆ ಆದರೆ ಅವಳಲ್ಲಿ ಎಂತಹ ಶಕ್ತಿ ನೋಡಿ. ಅವಳ ವೃತ್ತದಲ್ಲಿ ಅವಳು ಬದುಕಿದ್ದರೆ ಸಶಕ್ತಳಾಗಿರುತ್ತಾಳೆ.

ಅನಸೂಯೆಯ ಉದಾಹರಣೆಯೇ ಇದೆ, ಮಹಾನ್ ಪತಿವ್ರತೆ ಆಕೆ ಮನೆಗೆ ಬಂದ ಮೂವರೂ ಅತಿಥಿಗಳಿಗೆ ಉಣಿಸಲು ಅವರು ತನ್ನ ಮಕ್ಕಳೆಂದು ಭಾವಿಸಿದ ಕೂಡಲೇ ಅವರು ಮೂವರೂ ಮಕ್ಕಳಾಗಿ ಅವಳ ಬಳಿಯಲ್ಲಿ ಆಡತೊಡಗಿದರು. ಅದು ಇನ್ನೆಂತಹ ಶಕ್ತಿ ಇರಬೇಕು? ಅದೂ ಸಾಮಾನ್ಯ ಅತಿಥಿಗಳಲ್ಲ ಅವರು, ಇಡೀ ಭೂಮಂಡಲದ ನಿರ್ವಾಹಕರು, ಸೃಷ್ಟಿ, ಸ್ಥಿತಿ, ಲಯಗಳ ಕಾರಣಕರ್ತರು ಅಂತಹವರೂ ಆ ಪತಿವ್ರತೆಯ ಕೇವಲ ಭಾವಕ್ಕೆ ಮಕ್ಕಳಾಗಿಬಿಟ್ಟರು. ನೋಡಿ ಅದರ ಪರಿಣಾಮವನ್ನು. ಸುದತಿಯ ಶಾಪ ಪರಿಣಾಮ ಬಲುತಾಪ.

ಆ ಸತ್ತ ಬೇಡನೂ ಕಲಿಯೇ, ಅವನಂಶವೇ. ಸಂಶಯವೇ ಬೇಡ ಇದರಲ್ಲಿ. ಕಲಿಗೆ ಮೊದಲೇ ದಮಯಂತಿಯ ಮೇಲೆ ಅಪೇಕ್ಷೆ ಇತ್ತಲ್ಲ, ಅದೇ ಬೇಡನಾಗಿ ಬಂದು ಅವಸಾನ ಹೊಂದಿತು. ಸಾಮಾನ್ಯವಾಗಿ ಕಲಿಗೆ ಇತರರನ್ನು ಪೀಡಿಸಿ ಗೊತ್ತು ಅದರೆ ಇವಳು ಕಲಿಗೇ ಪೀಡಿಸಿದಳು. ದಮಯಂತಿ ಒಬ್ಬಳೇ ಇರಬೇಕು ಹೀಗೆ ಪೀಡಿಸಿದವಳು.

ಮತ್ತೆ ಸೀತೆಯ ನೆನಪು. ಅವಳೂ ರಾವಣನನ್ನು ಶಪಿಸುತ್ತಾಳೆ, ಈ ವಿಚಾರ ಅವಳ ಅಪಹರಣದ ಸಂದರ್ಭದಲ್ಲಿ ಬರುತ್ತದೆ. ಅದರೆ ಯಾವ ವ್ಯಾಖ್ಯಾನಕಾರರೂ ಇದರ ಕುರಿತು ವಿಶ್ಲೇಷಿಸಿಲ್ಲ. ರಾವಣನಿಗೆ ನೀನು ಸತ್ತೇಹೋಗು ರಾಮನಿಂದ ಅಂತ ಶಾಪ ಕೊಡುತ್ತಾಳೆ, ಹಾಗಾಗಿ ರಾಮ ಬರುವವರೆಗೂ ಅಂದರೆ ಒಂದುವರ್ಷ ಕಾಲ ಅವನು ಉಳಿಯುತ್ತಾನೆ. ಮುಂದೆ ಸುಂದರಕಾಂಡದಲ್ಲಿಯೂ ಹೀಗೇ, ಅವನ ಪೀಡೆ ತಾಳಲಾರದೆ, ನಿನ್ನನ್ನು ಸುಟ್ಟುಹಾಕಿಬಿಡುತ್ತಿದ್ದೆ ಆದರೆ ರಾಮನ ಸಂದೇಶ ಇಲ್ಲ, ನಾನು ವ್ರತದಲ್ಲಿದ್ದೇನೆ ನಿನ್ನನ್ನು ಏನೂ ಮಾಡುವಂತಿಲ್ಲ, ಶಾಪಕೊಡುವಂತಿಲ್ಲ, ಹಾಗಾಗಿ ರಾಮ ಬರುವವರೆಗೂ ಬದುಕಿರುತ್ತೀಯೆ ಹೋಗು ಎನ್ನುತ್ತಾಳೆ. ಇಲ್ಲಿಯೂ ಕೆಲವೆಡೆ ಸೀತೆಯ ಆ ಭಾವವೇ ಕಾಣುತ್ತದೆ. ನಿಯಮ ಎಂದರೆ ಕೋಪ ಮಾಡುವಂತಿಲ್ಲ ಅದರಲ್ಲೂ ವ್ರತಗಳಲ್ಲಿ. ಕ್ರೋಧ ಬರುವುದು ಎಂದರೆ ಚಂಡಾಲತ್ವ ಬಂದಂತೆ ಅಂದರೆ ಮೈಲಿಗೆ ಆಗುತ್ತೆ. ಹಾಗಾಗಿ ವಿಶ್ವಾಮಿತ್ರರು ತಮ್ಮ ಯಜ್ಞರಕ್ಷಣೆಗಾಗಿ ರಾಮನನ್ನು ಆಶ್ರಯಿಸುತ್ತಾರೆ.

ಯಾರಿಗೂ ಬರಬಾರದಂತಹ ಸ್ಥಿತಿಯಲ್ಲಿದ್ದ ದಮಯಂತಿ ಕೇವಲ ಮಾನವನ್ನು ಮುಂದಿಟ್ಟುಕೊಂಡೇ ಎಲ್ಲದರಿಂದ ಪಾರಾಗುತ್ತಿದ್ದಾಳೆ ಯಾವಾಗ ಇದಕ್ಕೆ ಮುಕ್ತಿಯೋ? ಎಂದಿಗೆ ನಳ ಸಿಗುತ್ತಾನೋ? ಈ ಪ್ರಕ್ರಿಯೆ ಅವಳ ಶಾಪದಿಂದಾಗಿ ಈಗಾಗಲೇ ಪ್ರಾರಂಭವಾಗಿರಬಹುದು. ಇನ್ನು ನಳನ ಸ್ಥಿತಿ ಏನಾಗಿರಬಹುದು? ಕಲ್ಲುಮನಸ್ಸಿನವರಿಗೂ ಕಷ್ಟವಾಗುತ್ತದೆ, ಇನ್ನು ನಳ ಸುಕೋಮಲ. ಅವನಿಗೆ ಆಗಿರುವುದಿಲ್ಲವೇ! ಖಂಡಿತಾ ಆಗಿರುತ್ತದೆ ಅದನ್ನು ಮುಂದೆ ನೋಡೋಣ.

ಚಿತ್ರ:ಅಂತರ್ಜಾಲದಿಂದ

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments